ಪ್ರಿಯ ಗೆಳತಿ,
ನನ್ನ ಅರವತ್ತನೆಯ ವಯಸ್ಸಿನಲ್ಲಿ, ಅರೆ, ನಾನು ಇಷ್ಟು ಬೇಗ ಮುದುಕಿ ಎಂಬ ಕೆಟಗರಿಗೆ ಸೇರಿಬಿಟ್ಟೆನೇ?, ನಾನು ಮೊಮ್ಮಗಳೊಂದರ ಅಜ್ಜಿಯಾದೆ. ಮೊದಲು ಯಾವುದಾದರೊಂದು ಮಗು ‘ಅಜ್ಜಿ’ ಎಂದು ಸಂಬೋಧಿಸಿದರೆ ರೇಗುತ್ತಿದ್ದವಳು ಈಗ ಈ ಪುಟ್ಟಿ, ತನ್ನ ತೊದಲು ನುಡಿಯಲ್ಲಿ ಎಂದು ‘ಅಜ್ಜಿ’ ಎಂದು ಕರೆಯುತ್ತದೆಯೋ ಎಂದು ಕಾಯುವಂತಾಗಿದೆ. ತೊಡೆಯ ಮೇಲೆ ಮಲಗಿಸಿಕೊಂಡು, ಅದರ ಕಣ್ಣಲ್ಲೇ ಕಣ್ಣು ನೆಟ್ಟು, ‘ಪುಟ್ಟ, ನಾನು ನಿನ್ನ ಅಜ್ಜಿ, ಅವಳು ನಿನ್ನ ಅಮ್ಮ, ಅವರು ನಿನ್ನ ಅಜ್ಜ, ಮಗೂ, ಅಜ್ಜಿ ಅನ್ನು,’ ಎನ್ನುತ್ತಾ ಅದರ ಬಾಯಿಯಿಂದ ಹೊರಬರುವ ಧ್ವನಿಗಳಿಗೆ ನಮ್ಮದೇ ಆದ ಅರ್ಥ ಕೊಡುತ್ತಾ ಎಂದಾದರೊಂದು ದಿನ ಅದು ನಮ್ಮ ಸಂಬಂಧಗಳನ್ನು ಗಟ್ಟಿಗೊಳಿಸಬಹುದು ಎಂದು ಆಶಿಸುತ್ತೇನೆ. ಅದನ್ನೇ ಅಲ್ಲವೇನೇ ರಕ್ತ ಸಂಬಂಧ ಎಂದು ಕರೆಯುವುದು?
‘ಏನೇ ನಿನ್ನ ಮಗಳು, ಅದೇನೇ ಅವಳ ಹೆಸರು? ಏನೋ ಒಂದು ಇರಲಿ ಬಿಡು. ಷೇಕ್ಸ್ಪಿಯರೇ ಹೇಳಿಲ್ಲವೇ, ರೋಜನ್ನು ರೋಜೆಂದು ಕರೆದರೂ ಒಂದೇ, ಏನೇ ಕರೆದರೂ ಒಂದೇ, ಅವಳು, ಇನ್ನೂ ಮದುವೆಯಾಗಿಲ್ಲವೇ? ಎಷ್ಟೊಂದು ಒಳ್ಳೆಯ ಪ್ರೊಪೋಸಲ್ ಕಳುಹಿಸಿದ್ದೆ,’ ಎಂದು ನೀನು ಹಲವಾರು ಬಾರಿ ಹೇಳಿದ್ದು ನನಗೆ ನೆನಪಿದೆ. ಮೊನ್ನೆ ಮೊನ್ನೆ ಹೇಳಿದ ಹಾಗಿತ್ತಲ್ಲ! ಅದ್ಯಾಕೋ ಗೊತ್ತಿಲ್ಲ, ಇಂದಿನ ಹೆಣ್ಣು ಮಕ್ಕಳಿಗೆ ವಿವಾಹವೆಂದರೆ ಅಲರ್ಜಿ. ಇಂದಿನ ಟಿವಿಗಳು, ಕತೆಗಳು ಮತ್ತು ಸೋಶಿಯಲ್ ಮೀಡಿಯಾಗಳು ಸಂಸಾರದ ಬಗ್ಗೆ ಅವರಲ್ಲಿ ನೆಗೆಟಿವ್ ಭಾವನೆ ಮೂಡಿಸುತ್ತವೆಯೋ ಏನೋ. ಲಗ್ನವಾದರೂ ಮಕ್ಕಳು-ಮರಿ, ಚಿಳ್ಳೆ-ಪಿಳ್ಳೆಗಳು ಬೇಡ, ಅವುಗಳನ್ನು ಸಾಕುವುದು ರಗಳೆಯೆಸ್ಟ್ ರಗಳೆ, ಎಂದೆನ್ನುವುದು ಈ ಜನರೇಶನ್ನಿನ ವಾದ. ನಾನಂತೂ ಗಿಳಿಗೆ ಹೇಳಿದ ಹಾಗೆ ಬುದ್ಧಿವಾದ ಹೇಳಿ, ಹೇಳಿ, ಸುಸ್ತಾಗಿ, ಏನಾದರೂ ಮಾಡಿಕೊಳ್ಳಲಿ, ಎಂದು ಸುಮ್ಮನಾಗಿಬಿಟ್ಟಿದ್ದೆ. ಯಾವ ಯಾವ ವಯಸ್ಸಿನಲ್ಲಿ ಏನೇನಾಗಬೇಕೋ ಅದು ಆದರೇ ಚೆನ್ನ. ನಾನು ನನ್ನ ಇಪ್ಪತ್ತನೆಯದರಲ್ಲಿಯೇ ಅವರ ಕೈ ಹಿಡಿದಿದ್ದು. ನನ್ನ ಅಮ್ಮ ನಾನು ಚಿಕ್ಕವಳಾಗಿದ್ದಾಗಲೇ ನನ್ನ ಮುಂದಿನ ಕರ್ತವ್ಯವೇನು, ಹೇಗೆ ಸಂಸಾರ ನಿಭಾಯಿಸಬೇಕು, ಗಂಡನೊಂದಿಗೆ, ಅವರ ಮನೆಯವರೊಂದಿಗೆ ಹೇಗಿರಬೇಕು ಎಂದು ಸದಾ ತಿಳಿಹೇಳಿ, ಮಾನಸಿಕವಾಗಿ ನನ್ನನ್ನು ಹೆಂಡತಿಯಾಗಲು ಸಿದ್ಧ ಮಾಡಿಬಿಟ್ಟಿದ್ದರು. ಹಾಗೆಯೇ ಸಂಸಾರ ನಡೆಸಲು ಬೇಕಾಗುವ ಅಡುಗೆ, ರಂಗೋಲಿ, ಹಾಡು-ಹಸೆ, ಮನೆ ಕೆಲಸಗಳ ನಿಭಾವಣೆ, ಇವನ್ನೆಲ್ಲಾ ಕಲಿಸಿಬಿಟ್ಟಿದ್ದರು. ಈಗ ನಾವು ಮಾರ್ಕುಗಳ ಹಿಂದೆ ಓಡುತ್ತೇವೆ, ರ್ಯಾಂಕುಗಳೇ ಜೀವನ ಎಂದುಕೊಂಡಿದ್ದೇವೆ. ಕಾಲ ಬದಲಾಗಿದೆ, ಬದಲಾಗುವುದೇ ಅದರ ನಿಯಮ!
ಅಂತೂ ಇಂತೂ ನನ್ನ ಮಗಳಿಗೆ ಬುದ್ಧಿ ಬಂತು. ತನ್ನ ನಲವತ್ತನೆಯ ವಯಸ್ಸಿನಲ್ಲಿ ಅವಳು, ಅದೇನೋ ದೊಡ್ಡ ಮನಸ್ಸು ಮಾಡಿ, ತಾಳಿಗೆ ಕೊರಳು ಕೊಡಲೊಪ್ಪಿದಳು, ಸದ್ಯ! ಅಂತೂ ಆದಳಲ್ಲ, ಅಂತ ಖುಷಿಪಟ್ಟೆ. ಅಲ್ಲ, ಹಸಿವಾದಾಗ ಉಂಡರೇ ಆಹಾರದ ರುಚಿ ಗೊತ್ತಾಗೋದು, ಹಸಿವು ಇಂಗಿದ ಮೇಲಲ್ಲ. ಸುಮ್ಮನೆ ನಾವೆಂದರೆ ಏನು ಬಂತು? ಪ್ರತಿಯೊಬ್ಬನಲ್ಲಿಯೂ ಅಂತರಂಗ ಎಂಬುದು ಒಂದು ಇದೆಯಲ್ಲ. ಅದು ಹೀಗೆ ಮಾಡು, ಹೀಗೆ ಮಾಡಬೇಡ, ಎಂದು ಎಚ್ಚರಿಸುತ್ತೆ. ತೀರ್ಮಾನ ನಾವು ತೆಗೆದುಕೊಳ್ಳಬೇಕಷ್ಟೇ. ಎಲ್ಲಾ ಪ್ರಾಣಿಗಳಿಗೂ ಹಸಿವು, ಭಯ, ನಿದ್ರೆ ಮತ್ತು ಮೈಥುನಗಳು ಸಾಮಾನ್ಯವಂತೆ, ಆದರೆ ಮನುಷ್ಯನಿಗೆ ಮಾತ್ರ ವಿವೇಚನೆ ಎಂಬುದೊಂದು ವಿಶೇಷತೆಯಂತೆ!
ಮದುವೆಯೇನೋ ಆಯಿತೂನ್ನು. ಆದರೆ ಈ ಮಧ್ಯ ವಯಸ್ಸಿನಲ್ಲಿ ಗರ್ಭ ಧರಿಸೋದು ಸುಲಭವಲ್ಲ, ಸಹಜ ಹೆರಿಗೆ ಕಷ್ಟವೇ, ಎಂದು ಆತಂಕಪಟ್ಟಿದ್ದೆ. ಇದೆಯಲ್ಲ, ಹೊಟ್ಟೆ ಕತ್ತರಿಸುವ ವಿಧಾನ, ಸಿಸೇರಿಯನ್ನು. ಏನಾದರಾಗಲಿ, ಮುದ್ದಾದ ಮಗುವೊಂದು ಪ್ಯಾಂ ಎನ್ನುತ್ತಾ, ಈ ಭೂಮಿಗೆ ಬಂತು. ಆಪರೇಶನ್ ಥಿಯೇಟರಿನ ಹೊರಗೆ ಆತಂಕ-ಕುತೂಹಲಗಳಿಂದ ಕಾಯುತ್ತಿದ್ದ ಹಲವಾರು ಜನರೆದುರು ಆ ನರ್ಸ್ ಮುದ್ದಾದ ಕೂಸೊಂದನ್ನು ತಂದು ತೋರಿಸಿ, ‘ಹೆಣ್ಣು’ ಎಂದಾಗ ನನ್ನ ಹ್ಲದಯ ಉಕ್ಕುಕ್ಕಿ ಬಂತು. ನನ್ನ ಮಗಳು ಜನಿಸಿದಾಗಲೂ ನಾನು ಅಷ್ಟೊಂದು ಉದ್ವೇಗ ಪಟ್ಟಿರಲಿಲ್ಲವೆನಿಸುತ್ತೆ. ಆದರೂ ನನ್ನ ಏನೂ ಶ್ರಮವಿಲ್ಲದೇ ನಾನು ಅಜ್ಜಿಯಾದೆ. ಸಂಪ್ರದಾಯದಂತೆ ತಾಯಿಯ ಮನೆಯವರೇ ಬಾಣಂತಿತನ ಮಾಡಬೇಕು. ನಾನು ಇಲ್ಲಿ ಹೇಳುತ್ತಿರುವುದು ನಂತರದ ದಿನಗಳ ಬಗ್ಗೆ.
ಇನ್ನು ಒಂದೆರಡು ಗಂಟೆಗಳ ಕಾಲ ವಿರಾಮ ಸಿಕ್ಕೀತು ಎಂದುಕೊಂಡು ನಾನು ಲೇಖನಿ ಹಿಡಿದಿದ್ದು. ಬಾಣಂತಿತನ ಶುರುಮಾಡಿದ ಮೇಲೆ ಪೇಪರ್ ಓದೋದಿರಲಿ, ಟಿವಿಯನ್ನು ಕೂಡಾ ನೋಡಲಾಗುತ್ತಿಲ್ಲ. ಈತನಕ ಬಹಳ ಪ್ರೀತಿಯಿಂದ ನೋಡುತ್ತಿದ್ದ ಧಾರಾವಾಹಿಗಳ ಮುಂದಿನ ಕತೆ ಏನೇನಾಯ್ತೋ ಗೊತ್ತಿಲ್ಲ. ಅಂದ ಮೇಲೆ ಇಲ್ಲಿಯ ವರೆಗೆ ನೋಡಿದ್ದೆಲ್ಲಾ ವೇಸ್ಟ್! ಅತ್ತೆ ಸೊಸೆಯರ ಜಗಳ, ನಾದಿನಿ ಅತ್ತಿಗೆಯರ ವೈಷಮ್ಯ, ವಿವಾಹೇತರ ಸಂಬಂಧಗಳು ತರುವ ತೊಂದರೆಗಳು, ಇವಿಷ್ಟು ಮೂಲ ಕತೆಗಳು. ಜೊತೆಗೆ ಸುಂದರವಾದ ಆದರೆ ಪೆದ್ದಾದ ನಾಯಕಿ. ಇಷ್ಟೇ ಇಷ್ಟುಕೊಂಡು ನೂರಾರು ಕತೆಗಳನ್ನು ಬರೆದಿದ್ದಾರೆ, ಧಾರಾವಾಹಿಗಳನ್ನು ಮಾಡಿದ್ದಾರೆ. ಜಗಳವಿಲ್ಲದ, ಪ್ರೀತಿಸುವ, ಆತ್ಮೀಯತೆ ಇರುವ ಸಮಾಜ ಇಲ್ಲವೇ ಇಲ್ಲ ಎಂಬಂತೆ ತೋರಿಸುತ್ತಾರೆ. ಎಲ್ಲರೂ ಯುದ್ಧಾಪೇಕ್ಷಿ ಶ್ರೀಮಂತರೇ, ಬಡವರೇ ಇಲ್ಲ. ಈ ಸೀರಿಯಲ್ಗಳನ್ನು ನೋಡುತ್ತಿದ್ದರೆ ನಮ್ಮ ದೇಶದಲ್ಲಿ ಬಡತನವೇ ಇಲ್ಲ ಎನಿಸಿಬಿಡುತ್ತದೆ. ಆದರೇನು ಮಾಡುವುದು, ಅವನ್ನೇ ನೋಡಬೇಕು. ನನಗೆ ಪರವಾಗಿಲ್ಲ ಬಿಡು, ಮಗನಿಲ್ಲ, ಆದ್ದರಿಂದ ಸೊಸೆಯೂ ಇಲ್ಲ. ಒಬ್ಬಳೇ ಮಗಳು, ಇತ್ತೀಚೆಗಷ್ಟೇ ನಮ್ಮ ಕುಟುಂಬಕ್ಕೆ ಬಂದ ಮುದ್ದಿನ ಮೊಮ್ಮಗಳು.
ಹೆಣ್ಣು ಮಗು ಎಂದಾಕ್ಷಣ ಎಂತೆಂತಹ ಕೊಂಕು ನುಡಿಗಳು ಬಂದವು ಗೊತ್ತಾ? ಇನ್ನು ಲಕ್ಷ ಲಕ್ಷ ರೂಪಾಯಿ ಉಳಿಸಲು ಶುರುಮಾಡಿ, ಅವಳನ್ನು ಓದಿಸಲಿಕ್ಕೆ, ಮದುವೆಗೆ, ಬಾಣಂತಿತನಕ್ಕೆ, ಅದಕ್ಕೆ, ಇದಕ್ಕೆ ಅಂತ. ಮದುವೆಯಾದ ಮೇಲೆ ಅವಳು ಗಂಡನ ಸ್ವತ್ತು, ಅವರ ಆಸ್ತಿ. ಮಗು ಗಂಡಾಗಿದ್ದರೆ ನಿಮ್ಮ ಮುದಿಗಾಲದಲ್ಲಿ ಆಸರೆಯಾಗಿರ್ತಿದ್ದ, ಎಂದು ಹೆದರಿಸಿದವರೇ ಜಾಸ್ತಿ. ಹೀಗೆಂದುಕೊಂಡೇ ಈಗ ದೇಶದಲ್ಲಿ ಹೆಣ್ಣುಗಳು ಕಡಿಮೆಯಾಗುತ್ತಿವೆ. ಮುಂದೊಂದು ಕಾಲದಲ್ಲಿ ಗಂಡು ಮಕ್ಕಳ ಹೆತ್ತವರು ಬಾಲ್ಯದಲ್ಲಿಯೇ ತಮ್ಮ ಮಗನ ಮದುವೆಗೆ ಮುಂಗಡ ಹಣ ಕೊಟ್ಟು ಹೆಣ್ಣನ್ನು ಬುಕ್ ಮಾಡುವ ಕಾಲ ಬರಬಹುದು. ಬುಕ್ ಮಾಡಲಾಗದವರು ಹೆಣ್ಣುಗಳನ್ನು ಕಿಡ್ನ್ಯಾಪ್ ಮಾಡಬಹುದು, ಎಳೆದುಕೊಂಡೇ ಹೋಗಿ ಬಲವಂತದಿಂದ ಮದುವೆ ಮಾಡಿಕೊಳ್ಳಬಹುದು. ಅದೂ ಅಲ್ಲದೇ ಗಂಡು ಮಕ್ಕಳು ಮಾತ್ರ ತಂದೆ-ತಾಯಿಯರನ್ನು ಸಾಕುತ್ತಾರೆ ಎಂಬು ನಂಬಿಕೆಗೆ ಎಷ್ಟು ಪುಷ್ಟಿ ಸಿಕ್ಕಿದೆ?
ಹೊಂಬಣ್ಣದ ಮೈಗೆ ನವಿರಾಗಿ ಬೇಬಿ ತೈಲ ಹಚ್ಚಿ, ಮೃದುವಾಗಿ ಮಸಾಜು ಮಾಡಿ, ಪುಟ್ಟ, ನಿನ್ನನ್ನ ಸ್ನಾನಮಾಡಿಸಿ, ಚಂದ ಮಾಡಿ, ದೇವಲೋಕದ ರಾಜಕುಮಾರಿ ಥರ ಕಾಣಿಸೋ ಹಾಗೆ ಮಾಡ್ತೀನಿ, ಅಳಬೇಡ, ಎಂದು ಅಳುತ್ತಿದ್ದರೂ ಪುಸಲಾಯಿಸುತ್ತಾ ಬಿಸಿ ನೀರಿನಿಂದ ಸ್ನಾನ ಮಾಡಿಸಿ, ಮೈ ಎಲ್ಲಾ ಒರೆಸಿ, ಪೌಡರ್ ಬಳಿದು, ದೃಷ್ಟಿ ಬೊಟ್ಟು ಇಟ್ಟು, ‘ತಾಯಿ ಕಣ್ಣು, ನಾಯಿ ಕಣು’್ಣ ಎಂಬ ಗಾದೆಯನ್ನು ನೆನಪಿಸಿಕೊಳ್ಳುತ್ತಾ, ಮುಖ ನೀವಾಳಿಸಿ, ಚಿಟಿಕೆ ಮುರಿದು, ದೇವರೆದುರಿಗೆ ಎತ್ತಿಕೊಂಡು ಹೋಗಿ, ನಾವೇ ಅದರ ಕೈಗಳನ್ನು ಒಂದಕ್ಕೊಂದು ಜೋಡಿಸಿ, ಅದರ ಪರವಾಗಿಯೇ ‘ಮಾಮಿ ಜೋತ’ ಎಂದು ಹೇಳಿ, ದೇವರೇ, ಈ ಮಗುವಿಗೆ ಒಳ್ಳೆಯ ಬುದ್ಧಿ, ಒಳ್ಳೆಯ ಗುಣ, ಉತ್ತಮ ಜೀವನ ಕೊಡಪ್ಪ, ಎಂದು ಬೇಡಿಕೊಂಡು, ಶುದ್ಧ ಬಟ್ಟೆಯಲ್ಲಿ ಮೈ ಸುತ್ತಿ, ತೊಟ್ಟಿಲಲ್ಲಿ ಮಲಗಿಸಿ, ಮೈ ತುಂಬಾ ಬಟ್ಟೆ ಹೊದಿಸಿ ತೂಗಿದರೆ ಮಗು ಗಾಢ ನಿದ್ರೆಗೆ ಹೋಗುತ್ತದೆ. ಮಲಗಲಿ ಪಾಪ. ಅದು ನಿದ್ರಿಸಿದರೆ ಮಾತ್ರ ನಮಗೆ ವಿಶ್ರಾಂತಿ. ನಮ್ಮ ಎಂದಿನ ಬದುಕನ್ನು ಬದಲಾಯಿಸಿದ್ದು ಈ ಪುಟ್ಟ ಕಂದ.
ಮಕ್ಕಳಿಗೆ ಎಣ್ಣೆ ಹಚ್ಚಿ ಸ್ನಾನ ಮಾಡುವ್ಯದೆಂದರೆ ಅಲರ್ಜಿ, ಊರೆಲ್ಲಾ ಕೇಳುವ ಹಾಗೆ ಕಿರಿಚುತ್ತವೆ. ಮಿಂದು ಶುಭ್ರವಾದ ಮೇಲೆ ಗಂಡ ಮಗುವಿನೆದರು ಪ್ರತ್ಯಕ್ಷರಾಗಿ, ತಾನೊಬ್ಬನೇ ಮಗುವಿನ ಸರ್ವ ರಕ್ಷಕ, ಕಷ್ಟ ಕಾರ್ಪಣ್ಯಗಳ ಪರಿಹಾರಕ ಎಂಬಂತೆ ಪೋಸ್ ಕೊಡುತ್ತಾ ಕೇಳುತ್ತಾರೆ, ‘ಏಕೆಈ ರೋದನೆ ಕುಮಾರಿ? ಕ್ಷÄಧಾಭಾಧೆಯಲ್ಲಿರುವ ನಿನಗೆ ನೀಡುವ ಕ್ಷೀರಾಗಮನದಲ್ಲಿ ವಿಳಂಬವಾಯಿತೇ? ಸ್ನಾನ ಕ್ರಿಯೆಯಲ್ಲಿ ಜಲದ ಉಷ್ಣತೆ ಹೆಚ್ಚಾಯಿತೇ? ನಿನ್ನ ಮಾತೆ ಮತ್ತು ಮಾತೆಯ ಮಾತೆ ನಿನ್ನನ್ನು ವೃಥಾ ದೂಷಿಸಿದರೇ? ಬೆಸಗೊಂಬಂಥವಳಾಗು, ಅವರಿಗೆ ತಕ್ಕ ಶಿಕ್ಷೆಯನ್ನು ಕೊಡಮಾಡುತ್ತೇನೆ,’ ಎಂದೆಲ್ಲಾ ಹುಡಿ ಉಪಚಾರ ಮಾಡುತ್ತಾರೆ. ನಾನು ಅದರ ಉಚ್ಚೆ ಬಳಿದು, ಉಚ್ಚಿಷ್ಟ ತೆಗೆದು, ಕಕ್ಕಿದ್ದನ್ನು ಶುಚಿಗೊಳಿಸಿ, ಬಟ್ಟೆ ಬದಲಿಸಿ, ಶುಭ್ರಗೊಳಿಸಿ, ದಿನವೆಲ್ಲಾ ಪರಿಶ್ರಮಿಸಿದ್ದು ಲೆಕ್ಕಕ್ಕೇ ಬರುವುದಿಲ್ಲ.
ಇಷ್ಟು ಹೊತ್ತಿನಲ್ಲಿ ನಾನು ಅದರೆದುರು ಎಷ್ಟೊಂದು ಸುಳ್ಳು ಹೇಳಿರುತ್ತೇವೆ ಗೊತ್ತಾ? ನನ್ನ ಗಂಡ ಅದನ್ನೆಲ್ಲಾ ರೆಕಾರ್ಡ್ ಮಾಡಿಕೊಂಡು ತೋರಿಸಿದ್ದಾರೆ. ‘ನಾನು ನಿನ್ನ ಅಜ್ಜಿ, ನನಗೆ ಅರವತ್ತು ವರ್ಷ ವಯಸ್ಸು. ಹೇಗೆ ಸ್ನಾನ ಮಾಡಿಸಬೇಕು, ಹೇಗೆ ನಿನ್ನ ಮೂಗು ಸ್ವಚ್ಛಗೊಳಿಸಬೇಕು, ಹೇಗೆ ಕಿವಿಯಲ್ಲಿ ಸೇರಿರೋ ನೀರು ತೆಗೆಯಬೇಕು, ಹೇಗೆ ಗಂಟಲಿನ ಕಫ ಹೊರಗೆ ಬರುವಂತೆ ಮಾಡಬೇಕು ಎಂಬುದು ನನಗೆ ಗೊತ್ತು. ನಿನ್ನ ಕೊಂಯ್ಯ, ಕೊಸರಾಟ ಎಲ್ಲಾ ನನ್ನ ಹತ್ತಿರ ನಡೆಯೋಲ್ಲ ಬಜಾರಿ, ಗಾಂಧಿ ಬಜಾರಿ, ನೆಹರು ಬಜಾರಿ. ಆಯ್ತು, ಆಗೇ ಹೋಯ್ತು, ಎರಡೇ ಎರಡು ಮಗ್ ನೀರು, (ಅರ್ಧ ಬಕೆಟ್ ಇದೆ, ಆದರೂ ಸುಳ್ಳು ಹೇಳುತ್ತೇನೆ) ಇದೆ, ಇತ್ಯಾದಿ.’ ಅದು ಬಲಿಪೀಠದಲ್ಲಿ ಇರುವ ಕುರಿಯಂತೆ ವರ್ತಿಸುತ್ತಾ ಸುತ್ತ ಇರುವ ನಾವು ಮೂವರನ್ನೂ ನೋಡುತ್ತಾ, ‘ದಯವಿಟ್ಟು ನನ್ನ ಪ್ರಾಣ ಉಳಿಸಿ, ನನಗೆ ಈ ಮೀಯುವುದು ಬೇಕಿಲ್ಲ,’ ಎಂದು ಆರ್ದ್ರವಾಗಿ ಕೂಗಿದಂತೆ ನನಗೆ ಅನಿಸುತ್ತದೆ. ಹಾಗಂತ ಸುಮ್ಮನಿರಲಾಗುತ್ತದೆಯೇ? ಸ್ನಾನದ ನಂತರ ಅದು ‘ಸದ್ಯ ಬದುಕಿದೆ,’ ಎಂದು ಉದ್ಗರಿಸುವಂತೆ ಭಾಸವಾಗುತ್ತದೆ.
ನಾನು ಹಗಲು ರಾತ್ರಿ ಎನ್ನದೇ, ನಿದ್ರೆ-ಗಿದ್ರೆ ಬಿಟ್ಟು, ಅದರ ಸೇವೆ ಮಾಡೋದು. ಈ ಅಜ್ಜ ಅನಿಸಿಕೊಂಡೋನು ಅದೇನೋ ಮಹಾ ಸಾಧನೆ ಮಾಡಿದೆ ಎನ್ನುವ ಹಾಗೆ ಮಗೂಗೆ ಪೂಸಿ ಹೊಡೆದು ಹೀರೋ ಅನಿಸಿಕೊಳ್ಳೋದು. ಕೊನೆಗೂ ಒಳ್ಳೆಯವರಾಗಿರೋದು ಅಜ್ಜ, ವಿಲನ್ ಅಜ್ಜಿ. ಜಗತ್ತೇ ಹೀಗೆ ಕಣೇ, ಕೆಲಸ ಮಾಡೋರಿಗೆ ಎಂದಿಗೂ ಒಳ್ಳೆಯ ಹೆಸರಿಲ್ಲ, ಮಾಡದಿರೋರು ಎಂದಿಗೂ ಬೆಸ್ಟ್!
ನಾವು ಇಷ್ಟೆಲ್ಲಾ ಶುದ್ಧ ಮಾಡಿ ಮಲಗಿಸುವ ಹೊತ್ತಿಗೆ ಅದಾರೋ ಮಗುವನ್ನು ನೋಡಲು ಬಂದುಬಿಡುತ್ತಾರೆ. ಮಗುವಿನ ಕಣ್ಣು ಸಣ್ಣದಾಗುತ್ತಾ, ಆಗುತ್ತಾ ಇರುತ್ತಿದ್ದರೂ ಈಗ ಬೇಡ, ಇನ್ನೊಮ್ಮೆ ಬನ್ನಿ ಎನ್ನಲಾಗದು. ಅದೂ ಅಲ್ಲದೇ ಹೇಗೆ ಬಂದರೋ, ಹಾಗೆಯೇ ಮಗುವನ್ನು ಎತ್ತಿಕೊಳ್ಳುತ್ತಾರೆ. ಹೊತ್ತಲ್ಲದ ಹೊತ್ತಿನಲ್ಲಿ ಬಂದವರು ಮಗುವನ್ನು ಬಲವಂತವಾಗಿ ಎತ್ತಿಕೊಂಡು, ಮೇಲಕ್ಕೆ-ಕೆಳಕ್ಕೆ ಎತ್ತಿ, ಇಳಿಸಿ, ಹಾರಿಸಿ, ಆಚೀಚೆಗೆ ತೂಗಿ, ಎಗರಿಸಿ, ಹಿಸುಕಿ, ಕೆನ್ನೆಗೆ ಮುತ್ತಿಟ್ಟು, ಕೆನ್ನೆ ಚಿವುಟಿ, ಲೊಳಲಾಯಿ, ಕಿಟಿ ಕಿಟಿ, ಮಿಲಿ ಮಿಲಿ, ಪುಟ್ಟಿ ಪುಟ್ಟಿ, ಎಂದೆಲ್ಲಾ ಮೂತಿ ಸೊಟ್ಟ ಮಾಡಿ ಹೇಳುತ್ತಾ ಹುಲಿ ಮುದ್ದು ಮಾಡುವಾಗ ಕಂದ ‘ಲಬೋ ಲಬೋ’ ಎಂದು ಒರಲುತ್ತೆ. ಬೆಕ್ಕಿಗೆ ಆಟ, ಇಲಿಗೆ ಪ್ರಾಣ ಸಂಕಟ ಎನ್ನೋಲ್ಲವೇ, ಹಾಗೆ. ಅದು ಇನ್ನೂ ಮಾಂಸದ ಮುದ್ದೆ ಕಣೇ, ನೋವಾಗೋಲ್ಲವಾ? ಅದಕ್ಕೆ ಬಾಯಿ ಬಂದಿದ್ದರೆ ಬಿಡ್ರೀ ನನ್ನನ್ನ. ಸುಮ್ಮನೆ ಜೀವ ಹಿಂಡಬೇಡಿ, ಎಂದು ಉಗೀತಿತ್ತೋ ಏನೋ. ಬಂದ ಈ ಪಶುಗಳಿಗೆ ಹೇಗೆ ಬುದ್ಧಿವಾದ ಹೇಳೋದು? ಅವರು ತಾವುಗಳು ಮಗುವಿನ ವಿಷಯದಲ್ಲಿ ಜ್ಞಾನಬಂಢಾರ ಎಂದುಕೊಂಡಿರುತ್ತಾರೆ. ಅದರ ಜೊತೆಗೆ ತಮ್ಮ ಏರು ಸ್ವರದಲ್ಲಿ ಕಮೆಂಟುಗಳು ಬೇರೆ, ‘ನಮ್ಮ ಇವರು, ಅಂದರೆ ನಮ್ಮ ದೊಡ್ಡಮ್ಮನ ಎರಡನೆಯ ಮಗಳ ಮೂರನೆಯ ಸೊಸೆಯ ಮಗಳು,
ಈಗೇ (ರಾಗ ಎಳೆದು) ಮುದ್ದು ಮುದ್ದಾಗಿ ಇದ್ದಳು. ಅದೊಂದು ದಿನ ಅದೇನೋ ಜ್ವರ ಅಂತ ಬಂತು. ಜ್ವರ ಅಲ್ಲವೇ, ಅಂತ ಮನೆಯವರು ಕಷಾಯ ಮಾಡಿ ಕುಡಿಸಿದರು. ಆದರೆ ಮರುದಿನವೇ ಮಗು ಗೊಟಕ್. ಪಾಪ, ಅದಕ್ಕೆ ಬದುಕುವ ಋಣ ಅಷ್ಟೇ ಇತ್ತೋ ಏನೋ. ಅಲ್ಲ, ಮಗುವಿನ ಬಗ್ಗೆ ಅಷ್ಟೊಂದು ನಿರ್ಲಕ್ಷವೇ, ಈ ಪಾಟಿ ಅಸಡ್ಡೆಯೇ? ಕೆಲವರಿದ್ದಾರೆ, ಅವರಿಗೆ ತಮಗಾಗಿ ತಿಳಿಯೋಲ್ಲ, ಬೇರೆಯವರು ಹೇಳಿದ್ದು ಅರ್ಥವಾಗೋಲ್ಲ,’ ಎಂದ ಮೇಲೆ ಮತ್ತೆ ಪುಕ್ಸಟೆ ಉಪದೇಶ. ‘ನೀನು, ಮಗುವಿಗೆ ಏನಾದರೂ ಸಣ್ಣದೇ ತೊಂದರೆ ಆದರೂ ಸರಿಯಾಗುತ್ತೆ ಎಂದು ಬಿಡಬೇಡ. ಈಗಿನ ಕಾಲದಲ್ಲಿ ಏನೇನೋ ಒಸ ಒಸ ಕಾಯಿಲೆಗಳು. ನಮ್ಮ ಕಾಲದಲ್ಲಿ ಈಗಿರಲಿಲ್ಲವಪ್ಪ, ನನ್ನಮ್ಮ ಒಂದೇ ಒಂದು ಮಾತ್ರೆನೂ ತಿಂದಿರಲಿಲ್ಲ. ಮನೆಲೇ ಮಾಡುವ ಲೇಯ್ಯ, ಮದ್ದಿನ ಪುಡಿ, ಕಷಾಯ, ಬಜೆ, ಇವನ್ನೆಲ್ಲಾ ತಿಂದು ಗಟ್ಟಿಯಾಗಿದ್ದರು, ಮಗುವನ್ನು ಕೂಡಾ ನೋಡಿಕೊಳ್ಳುತ್ತಿದ್ದರು. ಸೂತಕ ಕಳೆದ ಕೂಡಲೇ ಗದ್ದೆ ಕೆಲಸಕ್ಕೆ ರೆಡಿ.’ ಹೀಗೆಲ್ಲಾ ಹೇಳಿ ಮತ್ತೆ ನಮ್ಮನ್ನೆಲ್ಲಾ ಎದರಿಸುತ್ತಿದ್ದರು, ಅಲ್ಲಲ್ಲ, ಹೆದರಿಸುತ್ತಿದ್ದರು. ದೇವರು ಮನುಷ್ಯನಿಗೆ ಚರ್ಮದ ಬಾಯಿ ಕೊಟ್ಟಿದ್ದಾನೆ, ಮರದ್ದೋ, ಮಣ್ಣಿನದ್ದೋ ಆಗಿದ್ದರೆ ಯಾವತ್ತೋ ಚೂರುಚೂರಾಗಿರೋದು.
ಆಗ ಏನು ಮಾಡುತ್ತೇನೆ ಗೊತ್ತಾ? ಮಗುವಿಗೆ ಇದು ಹಾಲು ಕುಡಿಸುವ ಹೊತ್ತು, ನಿದ್ರೆ ಮಾಡಿಸುವ ಹೊತ್ತು, ಮದ್ದು ಕುಡಿಸುವ ಹೊತ್ತು ಎಂದು ಮಗುವನ್ನು ಅವರ ಕೈಯಿಂದ, ಆಲ್ಮೋಷ್ಟ್ ಕಿತ್ತುಕೊಂಡು, ಮಗುವಿನ ಬಾಯಿಗೆ ಅದು ಕೇಳದಿದ್ದರೂ ಹಾಲಿನ ಬಾಟಲಿ ತುರುಕುತ್ತೇನೆ. ದೀಪ ಇದ್ದರೆ ಅದು ಮಲಗೋಲ್ಲ ಎಂದು ದೀಪ ಆರಿಸಲು ಹೋಗುತ್ತಾ, ನೀವಿನ್ನು ಹೊರಡಿ ಎಂದು ಇಂಡೈರಕ್ಟಾಗಿ ಸೂಚಿಸುತ್ತೇನೆ. ತಮಗೆ ಜ್ವರವೋ, ಚರ್ಮರೋಗವೋ, ನೆಗಡಿಯೋ ಇದ್ದರೆ ಅದು ಮಕ್ಕಳಿಗೆ ಬಲು ಬೇಗ ಹರಡುತ್ತೆ ಎಂಬ ಸಣ್ಣ ಅರಿವೂ ಅವರಿಗೆ ಇರೋಲ್ಲ. ಊರೆಲ್ಲಾ ಸುತ್ತಿಕೊಂಡು ಬಂದು ಕೈ-ಕಾಲು ಕೂಡಾ ತೊಳೆಯದೇ ಮಗುವನ್ನು ತೊಟ್ಟಿಲಿನಿಂದ ಬಲವಂತವಾಗಿ ಎತ್ತಿಕೊಳ್ಳಬಾರದು ಎಂದು ಅವರಿಗೆ ಹೇಳಿದರೆ ದೊಡ್ಡ ರಾದ್ಧಾಂತವೇ ಅಗುತ್ತದೆ. ಕೈಗೆ ಸ್ಯಾನಿಟೈಸರ್ ಹಚ್ಚಿಕೊಳ್ಳಿ, ಎಂದು ನಾವೇ ಬಾಟಲಿ ಕೊಟ್ಟಿದ್ದಕ್ಕೆ ಒಬ್ಬರಂತೂ, ‘ಓ, ಯಾರಿಗೂ ಮಕ್ಕಳೇ ಆಗಲಿಲ್ಲವೋ ಏನೋ, ಇದೇನು ಸ್ವರ್ಗಲೋಕದ ಕೂಸಾ? ಎಲ್ಲರೂ ಹೀಗೆಯೇ ಮಾಡುತ್ತಾರಾ? ನಮಗಷ್ಟೂ ಗೊತ್ತಾಗೋಲ್ಲವಾ?’ ಎಂದೆಲ್ಲಾ ರೇಗಿ ಹಾಗೆಯೇ ಎದ್ದು ಹೋಗಿದ್ದರು. ಬಿಸಿ ತುಪ್ಪ, ನುಂಗುವಂತೆಯೂ ಇಲ್ಲ, ಉಗುಳುವಂತೆಯೋ ಇಲ್ಲ. ನಿಭಾಯಿಸೋದು ಬಲು ಕಷ್ಟ.
ಇಷ್ಟು ಮಾತ್ರವೇ? ಇಲ್ಲವೇ ಇಲ್ಲ. ಮಗುವಿನ ಕೈಗೆ ಹತ್ತೋ, ಇಪ್ಪತ್ತೋ ರೂಪಾಯಿ ನೋಟನ್ನು ತಾವು ಮಗುವಿನ ಉದ್ಧಾರ ಮಾಡುವವರು ಎಂಬಂತೆ ಕೊಡುತ್ತಾರೆ. ಮಗು ಮುಷ್ಟಿಯಲ್ಲಿ ನೋಟನ್ನು ಹಿಡಿದುಕೊಂಡರೆ ಒಂದು ರೀತಿಯ ಕಮೆಂಟು. ‘ಓ, ನಿನ್ನ ಮೊಮ್ಮಗಳು ಜುಗ್ಗಳು ಕಣೇ, ಖರ್ಚು ಮಾಡೋಕೆ ಕೈ ಚೊಟ್ಟ ಮಾಡಿಕೊಂಡು ಕೂಡಿಹಾಕುತ್ತಾಳೆ,’ ಎಂದು ಪ್ರತಿಕ್ರಿಯೆ ಬಂದರೆ, ಮಗು ನೋಟನ್ನು ಕೆಳಗೆ ಬೀಳಿಸಿದರೆ ‘ಬೆಳೆಯೋ ಗುಣ ಮೊಳಕೆಯಲ್ಲಿಯೇ ಎಂತಾರಲ್ಲ, ಹಾಗೆ, ನಿನ್ನ ಮೊಮ್ಮಗಳು ಧಾರಾಳವಾಗಿ ಖರ್ಚು ಮಾಡುವವಳು. ಕೊನೆಗೆ ತನ್ನ ಗಂಡನನ್ನೇ ಮಾರಿ ತಿಂದರೂ ತಿಂದಳೇ,’ ಎಂದು ಹೇಳುತ್ತಾಳೆ. ಇದು ಕರ್ಣ ಕಠೋರವಾದರೂ ಸಹಿಸಿಕೊಳ್ಳಬೇಕು, ಯಾಕೆಂದರೆ ಸಂಬಂಧ ಎನ್ನುವುದು ದೊಡ್ಡದು ಕಣಾ.
ನನಗೆ ಇವತ್ತೂ ಅರ್ಥವಾಗದಿರೋದೊಂದಿದೆ. ನನ್ನಂತಹ ಬಡವರ ಮನೆಯ ಮಗುವಿನ ಕೈಗೆ ಹತ್ತೋ ಇಪ್ಪತ್ತೋ ರೂಪಾಯಿಗಳನ್ನು ಕೊಟ್ಟರೆ ಸಾಕು, ಆದರೆ ಧನಿಕರ ಮಗುವಿಗೆ ಸಾವಿರಾರು ಕೊಡಬೇಕು. ಬಡವರ ಮನೆಯ ಮದುವೆಗೆ ಹೋದರೆ ಸಣ್ಣ ಮೊತ್ತದ ಮುಯ್ಯಿ, ಶ್ರೀಮಂತರ ವೈಭವೋಪೇತ ಕಲ್ಯಾಣಕ್ಕೆ ಹೋದರೆ ಅಲ್ಲಿಗೆ ದೊಡ್ಡ ಮೊತ್ತದ ಮುಯ್ಯಿ. ಉಳ್ಳವರಿಗೆ ಉಡುಗೊರೆ ಯಾಕೆ ಕೊಡಬೇಕು? ಬಡವರಿಗೆ ಸಹಾಯದ ಅವಶ್ಯಕತೆ ಇದೆ. ಹಾಗಾಗಿ ಬಡವರಿಗೆ ಹೆಚ್ಚು ಮೌಲ್ಯದ ಪ್ರಸೆಂಟೇಶನ್ ಕೊಡಬೇಕು, ಕಾಸಿದ್ದವರಿಗೆ ಯಾಕೆ ಕೊಡಬೇಕು,’ ಎಂಬುದು ನನ್ನ ವಾದ. ಇಂತಹ ವಿಷಯಗಳಿಗೆ ಜನರ ಕಿವಿ ಕಿವುಡೇ.
ಒಮ್ಮೆ ಹೀಗಾಯಿತು. ಎಂದಿನಂತೆ ಮಗುವಿಗೆ ರಾಗಿ ಗಂಜಿ ಕುಡಿಸುವ ಸರ್ಕಸ್ ಮಾಡಿದೆ. ಅದರ ಮುಖ-ಮೈ, ತೊಟ್ಟ ಬಟ್ಟೆ, ತಲೆ, ಹೀಗೆ ಎಲ್ಲಾ ಕಡೆ ರಾಗಿ ಗಂಜಿ. ಆ ಗಂಜಿ ಬರೀ ಗಂಜಿಯಲ್ಲ, ಅದಕ್ಕೆ ತುಪ್ಪ, ಬೆಲ್ಲ ಹಾಕಿ ನಾಲಿಗೆಗೆ ಹಿತವಾಗುವಂತೆ ಮಾಡಿದರೂ ಮಗುವಿಗೆ ಆಟ, ಆಟ. ಬಾಯಿ ತೆರೆದಾಗ ತುಂಬಿಸಿಕೊಂಡರೂ ಮತ್ತೆ ಅದನ್ನು ನುಂಗದೇ ಬಾಯಿಯಿಂದ ಹೊರ ಉಗುಳುತ್ತಿತ್ತು. ಚಮಚದಿಂದ ಅದನ್ನು ಮತ್ತೆ ಸಂಗ್ರಹಿಸಿ, ಮತ್ತೊಮ್ಮೆ ಬಾಯಿಗೆ ಹಾಕುತ್ತಿದ್ದೆ. ಅದರ ಹುಲಿವೇಷಕ್ಕೆ ಮತ್ತೆ ತಮಾಷೆ ಮಾಡುತ್ತಿದ್ದೆವು, ಲೇವಡಿ ಮಾಡುತ್ತಿದ್ದೆವು. ತಿನಿಸಿದ ನಂತರ ಅದರ ಬಟ್ಟೆ ಬಿಚ್ಚಿ, ಬೇರೆ ತೊಡಿಸಿ, ದೇಹವನ್ನು ಒರೆಸಿ, ಪೌಡರ್ ಬಳಿದು, ಫ್ರೆಷ್ ಮಾಡಿದ ಮೇಲೆ ಇಲ್ಲಿಯ ತನಕ ಮಗುವಿಗೂ ತನಗೂ ಸಂಬಂಧವಿಲ್ಲ ಎಂದುಕೊಂಡು ಸುಮ್ಮನೆ ಕುಳಿತಿದ್ದ ನನ್ನ ಗಂಡ ಅದನ್ನು ಎತ್ತಿಕೊಳ್ಳಲು ರೆಡಿ. ಅದು ಅವರ ಮುಖ ನೋಡಿ ನಕ್ಕಾಗ ಅವರೇನೆಂದರು ಗೊತ್ತಾ? ‘ಏನು ನನ್ನ ಮುಖ ನೋಡಿ ನಗ್ತೀ, ಅಲ್ಲೇನು ಬೊಂಬೆ ಕುಣಿಯುತ್ತಾ,’ ಅಂತ. ಧ್ವನಿ ತುಸು ಏರೇ ಇತ್ತು. ಮಗು ಮುಖ ಸೊಟ್ಟ ಮಾಡಿ, ಅಳಲು ತೊಡಗಿತು. ಕಂದ ಅಳುವಾಗ ಅದರ ಮುಖ ಕೆಂಪಗಾಗುತ್ತದೆ, ಕಣ್ಣಲ್ಲಿ ನೀರು ಬರುತ್ತದೆ. ನಾನು ಗಂಡನಿಗೆ ಬೈದೆ, ‘ಅದೇನು ಮಾತೂಂತ ಆಡ್ತೀರಿ, ನಿಧಾನವಾಗಿ ಅನ್ನಬಾರದೇ?’ ಅಂತ. ನನ್ನ ಗಂಡ ಸಣ್ಣದೇ ಧ್ವನಿಯಲ್ಲಿ, ‘ಅದೇನೂಂತ ನನ್ನ ಮುಖ ನೋಡಿ ನಗುತ್ತೀ ರಾಣಿ, ಅಲ್ಲೇನಾದರೂ ಬೊಂಬೆ ಕುಣಿಯುತ್ತಾ ಇದೆಯೇ,’ ಎಂದು. ಮಗುವಿನ ವದನ ಪ್ರಸನ್ನವಾಯಿತು. ನಾನು ಈ ಸಮಸ್ಯೆಗೆ ಸುಲಭ ಪರಿಹಾರ ಸೂಚಿಸಿದೆ, ‘ಅದು ನಿಮ್ಮ ಮುಖ ನೋಡಿ ನಕ್ಕರೆ, ನಗುವ ಹಾಗೆಯೇ ಇದೆ ಬಿಡಿ, ನೀವೂ ಅದರ ಮುಖ ನೋಡಿ ನಕ್ಕುಬಿಡಿ. ಟಿಟ್ ಫಾರ್ ಟ್ಯಾಟ್,’ ಎಂದೆ. ಒಳ್ಳೆಯ ಹಾಸ್ಯ ಅಲ್ಲವೇನೇ?
ಒಮ್ಮೆ ಅದಾರೋ ಒಬ್ಬರು ತನ್ನ ಗಂಡನೊಡನೆ ಬಂದರು. ಅದೇನೋ ದೊಡ್ಡ ದಾನ ಎಂಬಂತೆ ಪೋಸ್ ಕೊಡುತ್ತಾ ಒಂದು ಲಂಗ ತಂದಿದ್ದರು. ಅವರು ಖರೀದಿಸರಲಿಕ್ಕಿಲ್ಲ ಎಂಬುದು ನನ್ನ ನಂಬಿಕೆ, ಕೊಡುತ್ತಾ ಎಂದರು, ‘ಈ ಲಂಗ ಈ ಕೋತಿಗೆ (ದೊಡ್ಡ ಮನುಷ್ಯರು, ಬೇರೆಯವರೆಂದರೆ ಅಷ್ಟಕ್ಕಷ್ಟೇ. ಅವರು ಬೈದರೂ ಅದು ಹೊಗಳಿಕೆಯೇ) ಹಾಕು, ಹೇಗೆ ಸರಿಯಾಗುತ್ತೆ ಎಂದು ನೋಡುತ್ತೇನೆ, ಫೋಟೋ ತೆಗೆದುಕೊಂಡು ಹೋಗುತ್ತೇನೆ,’ ಎಂದರು. ಇನ್ನೆನು ಮಾಡೋಕೆ ಆಗುತ್ತೆ ಎಂದುಕೊಂಡು ಹಾಗೇ ಮಾಡಲು ಹೋದರೆ ಲಂಗ ಚಿಕ್ಕದಾಗಿಬಿಟ್ಟಿತ್ತು. ನಾನು ಹೇಳುವ ಮೊದಲೇ ಅವರಿಗೆ ಅರ್ಥವಾಗಿಬಿಟ್ಟಿತ್ತು. ‘ಇಟ್ಟುಕೊಂಡಿರೇ, ನಂತರ ಹುಟ್ಟೋ ಮಗಳಿಗೆ ಆಗುತ್ತೆ,’ ಎಂದು ಸಲಹಿಸಿದರು.
ಮುಂದುವರೆಯುವುದು…
-ಸೂರಿ ಹಾರ್ದಳ್ಳಿ
