ಅಷ್ಟೊತ್ತಿಗೆ ಹತ್ತಾರು ಜನರು ಸೇರಿ ಬಿಟ್ಟಿದ್ದರು. ಮಲಕಾಜಪ್ಪ ದೋತರ ಚುಂಗನ್ನು ಹಿಡಿದುಕೊಂಡು ಬೆವರುತ್ತಿದ್ದ ಅಂಗೈಯನ್ನು ಅಲ್ಲೇ ಒರೆಸಿಕೊಳ್ಳುತ್ತಾ, “ನೋಡ್ರಪ್ಪಾ ಸಾಲ ವಾಪಸ್ ಕೊಡ್ರಿ ಅಂದ್ರ ಈ ಹೆಣ್ಮಗಳು ಹಿಂಗ ಮಾಡೀದ್ಲು” ಎಂದನು. ಕೆಲವರು ಆತನ ಪರವಾಗಿ ಮಾತಾಡಿದರು. ತಿಮ್ಮಣ್ಣಜ್ಜ ಮತ್ತು ಉಳಿದ ಮೂರ್ನಾಲ್ಕು ಜನರು ಅನುಶ್ರೀ ಪರವಾಗಿ ಮಾತಾಡಿದರು. ಅನುಶ್ರೀ ಹೇಳಿದಳು, “ನೋಡ್ರಪಾ ನಾವು ಹೊಲ ಮರ್ಬೇಕಂತ ನಿರ್ಧಾರ ಮಾಡೀವಿ. ಚಾಲ್ತೀ ರೇಟಿಗೆ ಯಾವುದೂ ಕಿರಿಕಿರಿ ಮಾಡ್ದ ಕೊಂಡುಕೊಳ್ಳಾರಿದ್ರ ಮುಂದ ಬರ್ಬೋದು”. “ಹೌದೇನ್ಬೆ ತಂಗಿ” ಸೇರಿದ ಜನರಲ್ಲಿ ವೃದ್ಧ ತಿಮ್ಮಣ್ಣ ಪ್ರಶ್ನಿಸಿದರು. “ಹೌದ್ರಿ ಅಜ್ಜಾರ, ನಮ್ಮಪ್ಪ ಚಂಜಿಕಿ ಬರ್ತಾನ, ಮಾತಾಡೂನು” ಎಂದು ಆಕೆ ಒಳಗೆ ನಡೆದಳು. ಅಲ್ಲಿ ಸೇರಿದ ಹತ್ತಾರು ಜನರು ಹಲಬಗೆಯಾಗಿ ಮಾತಾಡಿಕೊಂಡರು. “ಇಷ್ಟು ದಿನ ಬೇಕಾಗಿದ್ದ ಈಗ ಬ್ಯಾಡಾಗ್ಯಾನ ಸುಬ್ಬಿಗೆ…” ಎಂದು ಸಿದ್ಲಿಂಗಪ್ಪ ಮೆಲ್ಲಕ ನಕ್ಕಾಗ ಆತನಿಗೆ ಬೇಕಾದವರೂ ಹಲ್ಲು ಕಿರಿದರು. ಅದನ್ನೆಲ್ಲ ಗಮನಿಸಿದ ತಿಮ್ಮಣ್ಣಜ್ಜನಿಗೆ ಖೇದವಾಯಿತು.
ಶಿವಪ್ಪ ಮೊದಲೇ ಯೋಚಿಸಿದಂತೆ ಸಾಯಂಕಾಲ ಮನೆಗೆ ಬಂದ. ಬಾಗಿಲು ಹಾಕಿದ್ದು ಕಂಡು ಗಾಬರಿಯಾದ. “ಅನ್ನವ್ವ ಬೇ ಯವ್ವ” ಅಚ್ಚೆಯಿಂದ ಮಗಳನ್ನು ಕೂಗಿದ. ಅನು ಕಿಟಕಿಯಲ್ಲಿ ಇಣುಕಿ ತಂದೆ ಎಂದು ಖಚಿತಪಡಿಸಿಕೊಂಡು ಕದ ತೆಗೆದಳು. ತಂದೆ ಒಳಬರುತ್ತಲೇ ಆತನ ಹೆಗಲಿಗೆ ಜೋತು ಬಿದ್ದು ಬೋರಾಡಿ ಅತ್ತು ಬಿಟ್ಟಳು. ಶಿವಪ್ಪ ಮಗಳ ವರ್ತನೆ, ಅಳು ಕಂಡು ಹೆದರಿಯೇ ಬಿಟ್ಟ. “ಯಾಕವ್ವಾ ಏನಾತು, ಯಾರಾರ ಏನಾರ ಅಂದ್ರುನು? ನಿಮ್ಮವ್ವನ ನೆನಪಾತನು?” ತಲೆ ನೇವರಿಸಿ ಕೇಳಿದನು.
ಅನುಶ್ರೀ ನಿರುತ್ತರಳಾಗಿ ಅಳುತ್ತಲೇ ಇದ್ದಳು. ಶಿವಪ್ಪನಿಗೆ ದೊಡ್ಡ ಸಮಸ್ಯೆ ಎದುರಾದಂತೆನಿಸಿತು. ಹದಿನೇಳರ ಅನುಶ್ರೀ ಎಂಟನೇ ತರಗತಿವರೆಗೆ ಓದಿಕೊಂಡಿದ್ದಳು. ಆಕೆಯ ತಾಯಿಯ ಕಾಯಿಲೆ ಉಲ್ಬಣವಾದಾಗ ಒಂಬತ್ತನೇ ತರಗತಿಯ ಓದು ನಿಂತು ಹೋಯಿತು. ತಾಯಿಯೂ ತೀರಿ ಹೋದಳು. ವಯಸ್ಸಿಗೂ ಮೀರಿದ ಎತ್ತರ ಮತ್ತು ಚೆಲವಾಗಿ ಬೆಳೆದು ನಿಂತಿದ್ದ ಮಗಳಿಗೆ ಒಂದು ನೆಲೆಯನ್ನು ಒದಗಿಸುವುದು ಶಿವಪ್ಪನ ಕರ್ತವ್ಯವಾಗಿತ್ತು. ಸೂಕ್ತ ವರನಿಗಾಗಿ ಸ್ವಲ್ಪ ಹುಡುಕಾಟವನ್ನು ನಡೆಸಿದ್ದ, ಆದರೆ ಯಾಕೋ ಮಗಳು ಈ ಪರಿ ಮಾತೇ ಆಡದೇ ಅಳುತ್ತಿದ್ದರೆ ಶಿವಪ್ಪ ಹತ್ತೆಂಟು ಪ್ರಶ್ನೆಗಳ ಹಿಡಿತಕ್ಕೆ ಸಿಲುಕಿಕೊಂಡಂತೆ ಚಡಪಡಿಸಿದ. ಅನುಶ್ರೀಯ ಅಳು ಕ್ರಮೇಣ ಶಾಂತವಾಯಿತು. ಶಿವಪ್ಪ ಮಗಳ ತಲೆ ನೇವರಿಸುತ್ತಾ, “ಯಾಕಳಾಕ್ಹತ್ತೀಯವ್ವ, ನಂಗೇನೂ ಅರ್ಥಾಗ್ವಲ್ದು. ಯಾರಾರ ಏನಾರ ಅಂದ್ರನುವ್ವಾ” ಎಂದು ಮತ್ತೆ ಕೇಳಿದನು. “ಯಪ್ಪಾ ನೀನು ಊರಿಗೆ ಹೋದ ಮ್ಯಾಲೆ ಮಧ್ಯಾಹ್ನ ಆ ಕೆಟ್ಟ ಮುದುಕ ಮಲಕಾಜಪ್ಪ ಬಂದಿದ್ದ…” ಎಂದು ಸಾಧ್ಯಂತವಾಗಿ ನಡೆದ ಘಟನೆಯನ್ನು ವಿವರಿಸಿದಳು. ಶಿವಪ್ಪ ಮಗಳನ್ನು ದಿಟ್ಟಿಸಿದ. ಆಕೆಗೆ ನಿಜವಾಗಿಯೂ ಜೀವನದ ಮೇಲೆ, ಈ ಜನರ ಮೇಲೆ ಜಿಗುಪ್ಸೆ ಹುಟ್ಟಿದಂತೆ ಅನ್ನಿಸಿತು. ಮಗಳ ದಿಟ್ಟತನ ಕಂಡು ಹೆಮ್ಮೆ ಎನ್ನಿಸಿತು. ಒಬ್ಬಂಟಿ ಹೆಣ್ಣು ಮಗಳು ಸಿಕ್ಕಳೆಂದು ಹೇಗೆ ಬೇಕೊ ಹಾಗೆ ವರ್ತಿಸಲು ಯೋಚಿಸಿದ್ದ ಆ ದುರುಳನಿಗೆ ಶಾಸ್ತಿ ಮಾಡಿದ್ದು ತಪ್ಪೆನ್ನಿಸಲಿಲ್ಲ.
“ಹಂಗಾದ್ರ ಅವನ ಸಾವಾಸ ಚೊಲೊ ಅಲ್ಲವ್ವಾ. ಹೆಂಗಾರ ಮಾಡಿ ಇವನ ಸಾಲ ತೀರಿಸಿ ರಿಣಮುಕ್ತ ಆಕ್ಕೀನವ್ವ. ನೀ ಏನೂ ಚಿಂತಿ ಮಾಡಬ್ಯಾಡ. ನಿನಗೊಂದು ದಾರಿ ಹುಡುಕಿ ನಿನ್ನ ಜೀವನಕ್ಕ ಆಸ್ರ ಮಾಡ್ತೀನಿ” ಅಂದ ಶಿವಪ್ಪ. ಆತನ ಹಣೆ ಚಿಂತೆಯಿಂದ ನೆರಿಗೆಗಟ್ಟಿತ್ತು. “ಹೆಂಗಪ್ಪಾ, ಹೊಲ ಮಾರಿ ಬಿಡೂನಾ” “ಹೌದು ಅನ್ನವ್ವ, ಹೊಲ ಮಾರದಾ ಬ್ಯಾರೆ ದಾರೀನ ಇಲ್ಲ.” “ನಾನು ಜಗಳ ನಡೆದಾಗ ಹೊಲ ಮಾರಾಟದ ವಿಷ್ಯ ಹೇಳೀನಪ್ಪಾ, ತಿಮ್ಮಣ್ಣಜ್ಜ, ರುದ್ರಮ್ಮ ಸತ್ತೆಪ್ಪಜ್ಜ, ಸೋಮಣ್ಣ ದೊಡ್ಡಪ್ಪ, ಒಂದ್ಹದಿನೈದಿಪ್ಪತ್ತು ಜನ ಸೇರಿದ್ರು. ಅರ್ಯಾರರ ನಿನ್ನ ಬೆಟ್ಟಿ ಮಾಡಾಕ ಬರ್ತಾರೇನಂತ ಅನ್ಸುತ್ತ” .
“ಬರ್ಲಿಬಿಡು ಅನ್ನವ್ವ ಮಾತಾಡೂನು” ತಂದೆ. “ನೀನು ಯಾರನ್ನೂ ಅತೀ ನಂಬ್ಯಾಡಪ್ಪ, ನನಗ ಹೆದರಿಕ್ಯಾಗುತ್ತ, ನೀನು ಹೊರಗೆಲ್ಯಾರ ಹೋದಾಗ ನಾನು ಒಬ್ಬಾಕೆ ಇರೂದು ಕಷ್ಟ. ಜನರು ಕೆಟ್ಟ ಯೋಚ್ನೆ ಮಾಡ್ತಿರ್ತಾರಂತ ಮಲಕಾಜಪ್ಪ ಮಾಡಿದ್ದನ್ನ ನೋಡೀದ್ರ ತಿಳಿಯುತ್ತ”
“ಹೌದವ್ವಾ, ಆ ಹಡಬಿಟ್ಟಿಸೊಳೆ ಮಗ ಸಾಲ ವಾಪಸ್ ಕೊಡುದೇನೂ ಅವಸರ ಮಾಡೂದು ಬ್ಯಾಡ ಅಂದನಲ್ಲ, ಅವತ್ತ ನನಗ ಅವನ ನಡತಿ ಇದ್ದಕ್ಕಿದ್ದಂಗ ಯಾಕಷ್ಟು ಬದಲಾತು ಅನ್ನಿಸ್ತು” “ನಂಗೂ ಹಂಗಾ ಅನ್ನಿಸ್ತಪ್ಪಾ, ಆದ್ರ ನಾವು ಸಾಲ ಮಾಡೀವಲ್ಲ, ಏನೂ ಮಾತಾಡಾಕ ದಾರಿ ಇದ್ದಿಲ್ಲ. ಅದೂ ಅಲ್ದಾ ಮನಿಗೆ ಬರೂ ಮಂದಿ ಕೂಟ ಸುಮ್ ಸುಮ್ಕ ಹೆಂಗ ಒರಟು ಮಾತಾಡಾಕ ಬರತ್ಹೇಳು”
“ಅದೂ ಸರಿ ಬಿಡವ್ವ, ಇವತ್ತಂತೂ ತಾನಾ ಅಂಗೈ ತೋರಿಸಿ ಅವಲಕ್ಷ÷್ಣ ಹೇಳಿಸಿಕೊಂಡನಲ್ಲ, ನಮ್ಮದೇನ್ ತಪ್ಪಿಲ್ಲ” . “ಆತ ಪಂಚೇತಿ ಕೂಡ್ಸೀದ್ರ ಹೆಂಗಪ್ಪಾ?”, “ಕೂಡುಸ್ಲಿ ಬಿಡುಬೆ, ಅಪ್ಪ ಇಲ್ಲ, ಆಮ್ಯಾಲೆ ರ್ರಿ ಅಂದ್ರ, ಬಾಯಿಗೆ ಬಂದ್ಹಂಗ ಮಾತಾಡೀದ. ಅದ್ಕಾ ನಾನು ಬೈಯ್ದಿದ್ದು ಕೈ ಎತ್ತಿದ್ದು ಖರೆ, ತಪ್ಪಾತು ಅಂತಷ್ಟಾ ಅನ್ನು, ಉಳಿದಿದ್ದು ನಾನು ಮಾತಾಡ್ತೀನಿ ಏನವ್ವ”. “ಸರಿ ಬಿಡಪ್ಪ ಎದ್ದೇಳು ಉಂಡುಬಿಡು, ಆಗ್ಲೆ ಒಂಬತ್ತಾತು” ಎಂದು ಅನು ಅಡಿಗೆ ಮನೆಗೆ ನಡೆದಳು. ಆಕೆ ಐದಾರು ವರ್ಷದವಳಿದ್ದಾಗಲೆ ತಾಯಿ ಶಾಂತವ್ವ ಜಡ್ಡಿಗೆ ಬಿದ್ದಳು. ಆಗಿನಿಂದಲೂ ಅನು ತಾಯಿಗೆ ಸಣ್ಣ ಪುಟ್ಟ ಸಹಾಯ ಮಾಡುತ್ತಲೇ ಅಡುಗೆ ಮಾಡುವುದನ್ನು ಕಲಿತುಕೊಂಡಿದ್ದಳು. ತಾಯಿಯ ಆರೋಗ್ಯ ಹದಗೆಡುತ್ತಾ ಹೋದಂತೆಲ್ಲಾ ಮನೆಯ ಜವಾಬ್ದಾರಿ ಅನುಶ್ರೀಯ ಮೇಲೆ ಬಿದ್ದಿತ್ತು. ಬರುಬರುತ್ತಾ ಅನು ಎಲ್ಲಾ ಕೆಲಸ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ಮಾಡತೊಡಗಿದಳು. ಆಡುತ್ತಾ ಶಾಲೆ ಓದು ಅಂತ ಇರಬೇಕಾದ ವಯಸ್ಸಿನಲ್ಲಿ ಅನುಶ್ರೀಗೆ ಮನೆಗೆಲಸ ಜೊತೆಗೆ ತಾಯಿಯ ಆರೈಕೆಯ ಹೊರೆ ಹೆಚ್ಚಾಗುತ್ತಾ ಹೋಯಿತು. ಬಿಡುವಿಲ್ಲದ ದಿನಚರಿಯಿಂದಾಗಿ ಬಹಳ ಬೇಸರಕ್ಕೆ ಈಡಾದ ಹುಡುಗಿ ಶಾಲೆ ತಪ್ಪಿಸತೊಡಗಿದಳು. ಮೊದ ಮೊದಲು, “ಸಾಲೀಗಿ ಹೋಗವ್ವ, ದಿನಾಲು ತಪ್ಪಿಸಬ್ಯಾಡ” ಅನ್ನುತ್ತಿದ್ದ ತಂದೆ ಕ್ರಮೇಣ ಸುಮ್ಮನಾಗಿಬಿಟ್ಟನು,. ತಾಯಿ ಅಂತೂ ಮನಸ್ಸಿನಲ್ಲೇ “ಮಗಳು ತನ್ನ ಕಣ್ಣುಮುಂದೇನೇ ಇರಲಿ, ಎಲ್ಲೂ ಅಗಲಿ ಹೋಗೂದು ಬ್ಯಾಡ” ಅಂತ ಹಲುಬುತ್ತಿದ್ದಳು. “ಅನೂ ಬಾ, ಇಲ್ಲೆ ಕುಂತ್ಕೊ, ಅನೂ ಬಾ ಎಲ್ಲೀ ಹೋಗಬ್ಯಾಡ” ಅಂತ ತನ್ನ ಕನವರಿಕೆಯನ್ನು ಹೊರಹಾಕುತ್ತಿದ್ದಳು. ಹಾಗಾಗಿ ಅನುಶ್ರೀ ಎಂಟನೇ ತರಗತಿಯ ಪರೀಕ್ಷೆ ಬರೆದಿದ್ದೇ ಕೊನೆ ಮತ್ತೆ ಶಾಲೆಯ ಮುಖವನ್ನೇ ನೋಡಲಿಲ್ಲ. ಆ ದಿನಗಳಲ್ಲಿಯೇ ಆಕೆ ತಾಯಿಯ ಎದುರಿಗೆ ಕುಳಿತು ಅಷ್ಟಿಷ್ಟು ಕಸೂತಿ, ಹೆಣಿಕೆ ಅಂತ ತಲೆ ಖರ್ಚು ಮಾಡಿ ಕಲಿತುಕೊಂಡಿದ್ದಳು.
ಶಿವಪ್ಪ ತಾಟಿನ ಮುಂದೆ ಕುಳಿತ. ಮಗಳ ಪುಟ್ಟ ಕೈಗಳು ತಟ್ಟಿದ ಬಟ್ಟನೆಯ ರೊಟ್ಟಿ ಕಂಟು ಆತನ ಕರುಳು ಚುರುಕ್ ಎಂದಿತು. “ಒಂದು ದಿನಾನೂ ಕೂಸು ಚೆಂದಗೆ ತಾಯಿಯ ಆರೀಕು ಕಾಣಲಿಲ್ಲ. ತಾನಾ ತಾಯಿಯಂತೆ ನಿಂತು ರೋಗಿಷ್ಟ ತಾಯಿಗೆ ಆರೀಕು ಮಾಡಿದ ಮಹಾತಾಯಿ ಈಕಿ. ಎಂಥಾ ಮನಿ ಸೊಸೆಯಾಗಿ ಹೋಗೂದೈತೊ ಈಕಿ ಹಣೆಬರದಾಗ, ಅನುಶ್ರೀಯ ಜೀವನಕ್ಕ ಒಳ್ಳೆ ಹುಡುಗನ್ನ ಹುಡುಕೂದು ನನಗ ಸಾಧ್ಯಾಗೂದಾರ ಹೆಂಗ? ಹೊಲ ಮಾರಿದ ಮ್ಯಾಲೆ ಕೂಲಿ ಮಾಡೇ ಹೊಟ್ಟಿ ಹೊರಿಬೇಕು” ಎಂದು ಮುಂದಿನ ಜೀವನವನ್ನು ನೆನೆಯುತ್ತ ಶಿವಪ್ಪ ರೊಟ್ಟಿ ಮುರಿದು ಬಾಯಿಗಿಟ್ಟುಕೊಳ್ಳದೇ ಮೈಮರೆತು ಯೋಚಿಸುತ್ತಿದ್ದ.
“ಯಪ್ಪಯೋ, ಉಣ್ಣು ಯಾಕ ಸುಮ್ಕುಂತಿ” ಮಗಳ ಧ್ವನಿ ಕೇಳಿ ಶಿವಪ್ಪ ವಾಸ್ತವಕ್ಕೆ ಬಂದ. “ಏನೂ ಇಲ್ಲವ್ವಾ” ಅಂತ ತುತ್ತು ಕೈಗೆತ್ತಿಕೊಂಡ. ತಂದೆ ಏನೂ ಹೇಳದಿದ್ದರೂ ಆತನ ಚಿಂತೆ ಏನೆಂದು ಅನುಶ್ರೀಗೆ ತಿಳಿದ ಸಂಗತಿಯಾಗಿತ್ತು.
ಇದ್ದ ಒಂದೂವರೆ ಎಕರೆ ಎರೆ ಭೂಮಿಯನ್ನು ಮಾರಿದಾಗ ಸಿಕ್ಕ ದುಡ್ಡು ಮೂವತ್ತೊಂಭತ್ತು ಸಾವಿರ. ಮತ್ತೆ ಬೇರೆ ದಾರಿ ಕಾಣದೆ ಶಿವಪ್ಪ ಮಗಳಿಗೆ ಕೇಳಿದ, “ಮನೀನೂ ಮಾರಿ ಬಿಡೂನಾ ತಾಯಿ”. ಒಂದು ಕ್ಷಣ ಅನುಶ್ರೀಗೆ ಬದುಕು ಬೀದಿಗೆ ಬಿದ್ದಂತೆ ಕಲ್ಪನೆ ಬಂತು. ಮಲಕಾಜಪ್ಪನಿಗೆ ಅನುಶ್ರೀ ಚಪ್ಪಲಿಯಿಂದ ಹೊಡೆದಾದ ನಂತರ ಪಂಚಾಯತಿ ನಡೆದು ನಾಲ್ಕೇ ದಿನಗಳಲ್ಲಿ ಜೀವನ ಮತ್ತಷ್ಟು ಡೋಲಾಯಮಾನವಾಗಿತ್ತು. ತಂತಿಯ ಮೇಲೆ ನಡೆಯುವ ದೊಮ್ಮರಾಟದ ಹುಡುಗಿಯರಿಗಿಂತಲೂ ತನ್ನ ಬದುಕು ಅಪಾಯದಂಚಿಗೆ ತಲುಪಿದೆ ಎಂದು ಅನುಶ್ರೀ ಹಗಲಿರುಳು ಚಿಂತೆಗೆ ಬಿದ್ದಳು.
ಆದರೆ ಪಂಚಾಯತಿಯಲ್ಲಿ ಇತ್ಯರ್ಥವಾದ ಪ್ರಕಾರ ಒಂದು ವಾರದಲ್ಲಿ ಮಲಕಾಜಪ್ಪನ ಸಾಲವನ್ನು ತೀರಿಸಲೇಬೇಕಾಗಿತ್ತು. ಶಿವಪ್ಪನ ಪರವಹಿಸಿ ಮಾತಾಡಬಹುದಿದ್ದ ಒಬ್ಬನೇ ಒಬ್ಬ ವ್ಯಕ್ತಿ ಅಂದರೆ ತಿಮ್ಮಣ್ಣಜ್ಜ. ಆದರೆ ಆ ದಿನ ಪಂಚಾಯತಿ ನಡೆದಾಗ ತಿಮ್ಮಣ್ಣಜ್ಜ ಊರಿನಲ್ಲಿರಲಿಲ್ಲ. ಆತ ಒಂದು ವಾರ ದಿನಗಳ ಪ್ರವಾಸ ಹಮ್ಮಿಕೊಂಡು ಹೋಗಿದ್ದ. ಆತನಿಲ್ಲದ ಸಮಯದಲ್ಲಿಯೇ ಈ ಎಲ್ಲಾ ಘಟನೆಗಳು ನಡೆದುಹೋಗಿದ್ದವು. ಪಂಚಾಯತಿಯ ಎಲ್ಲ ಹಿರಿಯರೂ ಮಲಕಾಜಪ್ಪನ ಕಡೆಗೆ ನಿಂತಿದ್ದರಿಂದ ಶಿವಪ್ಪನ ಧೈರ್ಯ ಎಲ್ಲಾ ಕುಸಿದು ಹೋಗಿತ್ತು. ತಮಗೆ ಇನ್ನೂ ಏನೇನು ಕಾದಿದೆಯೋ ಏನೋ ಅಂತ ಯೋಚಿಸುತ್ತಲೇ, “ಆಯ್ತಪ್ಪ ಮಾರಿಬಿಡು ಮೊದ್ಲು ಸಾಲ ತೀರಿಸಿ ಬಿಡು” ಎಂದಳು ಅನುಶ್ರೀ.
ಊರಿನ ಹಿರಿಯರ ಸಮ್ಮುಖದಲ್ಲಿ ಮಲಕಾಜಪ್ಪನಿಗೆ ಐವತ್ತುನಾಲ್ಕು ಸಾವಿರ ರೂಪಾಯಿಯನ್ನು ಎಣಿಸಿಕೊಟ್ಟ ಶಿವಪ್ಪ. ಸಾಲ ತೀರಿಸಿ ಋಣಮುಕ್ತನಾದ ಆತನಿಗೆ ಹೊಸದೊಂದು ದೊಡ್ಡ ಸವಾಲು ಎದ್ದು ಕುಳಿತಿತ್ತು. ಮುಂದಿನ ಜೀವನ ಹೇಗೆ ಎಂಬ ಆತಂಕ! ಹೊಲ ಮನೆ ಮಲಕಾಜಪ್ಪನ ಕಡೆಯ ಬಾಲಾಜಿಗೆ ಖರೀದಿಯಾಗಿದ್ದವು. ಬೇರೆ ಕಡೆ ಮನೆ ನೋಡಿಕೊಳ್ಳುವ ತನಕ ಮನೆಯಲ್ಲೇ ಇರಲು ಅವಕಾಶ ಕೊಟ್ಟಿದ್ದು ಪಂಚಾಯತಿ ಹಿರಿಯರ ದೊಡ್ಡಗುಣವಾಗಿತ್ತು, ಅವರ ಕೃಪೆಗೆ ಮೌನವಾಗಿ ತಲೆ ಆಡಿಸಿದ್ದ ಶಿವಪ್ಪ.
ತಂದೆ ಮಗಳಿಗೆ ಆ ಹಳ್ಳಿಯೇ ಬೇಸರವಾಯಿತು. ಬೇರಿನಂತಿದ್ದ ಹೊಲ ಮನೆಯೂ ಹೋದ ಮೇಲೆ ಅಲ್ಲಿರುವುದು ಬಹುಹೀನ ಸ್ಥಿತಿ ಅನ್ನಿಸಿತು. ‘ಇಸಾನಾದ್ರೂ ಕುಡುದು ಸತ್ತು ಬಿಟ್ರ ಹೆಂಗ..?’ ಅಂತ ಯೋಚನೆ ಬಂದಾಗ ಶಿವಪ್ಪನ ತಲೆ ದಿಮ್ ಅನ್ನತೊಡಗಿತ್ತು. “ನೀನು ಒಂದು ದಿನ ಊರು ಬಿಟ್ಟು ಅಗಲಿದಾಗನಾ ಮಲಕಾಜಪ್ಪ ಆ ಥರ ಮಾಡೀದ. ಇನ್ನಾ ನೀನು ಸತ್ತಾ ಹೋದ್ರ ಆಮ್ಯಾಲೆ ನಿನ್ನ ಮಗಳು ಗಿಡುಗ ಹದ್ದುಗೋಳ ಪಾಲಾಕ್ಕಾಳ, ಬೀದಿ ಸೂಳಿ ಆಕ್ಕಾಳ ಇಲ್ಲಾಂದ್ರ ಏನಾರ ಮಾಡ್ಕೊಂಡು ಸತ್ತು ಹೊಕ್ಕಾಳ. ಮಗಳನ್ನ ಮದುವಿ ಮಾಡಿ ಕಳಿಸ್ತೀನಿ ಅಂತ ನಿನ್ನ ಹೆಂತಿಗೆ ಮಾತು ಕೊಟ್ಟಿದ್ದು ರ್ತು ಹೋತೇನು…” ಅಂತ ಆತನ ಅಂತರಾಳ ತಿವಿಯಿತು. ಅಡುಗೆ ಮನೆಯಲ್ಲಿ ಅನುಶ್ರೀ ಅತ್ತು ಅತ್ತು ಸೋತು ಹೋಗಿದ್ದಳು. ಜಂತಿಯನ್ನೇ ದಿಟ್ಟಿಸುತ್ತಾ ಮಲಗಿದವಳಿಗೆ ಅಡುಗೆ ಮನೆಯಲ್ಲಿ ಜಂತಿಗೆ ಜೋಡಿಸಿದ್ದ ಕಬ್ಬಿಣದ ಕೊಕ್ಕೆ ಕಾಣಿಸಿತು. ಸಣ್ಣವಳಿದ್ದಾಗ ಇದೇ ಕೊಕ್ಕೆಗೆ ಜೋಕಾಲಿ ಕಟ್ಟಿಕೊಡುತ್ತಿದ್ದ ಅಪ್ಪ. ಸ್ವಲ್ಪ ದೊಡ್ಡವಳಾದ ನಂತರ ದೊಡ್ಡ ಜೋಕಾಲಿ ಬೇಕು ಅಂತ ಅತ್ತಾಗ ಪಡಸಾಲೆಯ ಜಂತಿಗೂ ಕೊಕ್ಕೆ ಹಾಕಿಸಿ ಜೋಕಾಲಿ ಆಡಲು ಅನುಕೂಲ ಮಾಡಿಸಿದ್ದಳು ತಾಯಿ. “ಸುಮ್ಮಕ ಇದಾ ಕೊಕ್ಕೆಗೆ ಅವ್ವನದೇ ಒಂದು ಸೀರಿ ತಗೊಂಡು ಉರುಲು ಹಾಕಿಕೊಂಡು ಬಿಟ್ರ ತಣ್ಣಗಾಗಿ ಹೋಗುತ್ತ ಜೀವ…” ಅಂತ ಅಂದುಕೊಂಡಳು. ತಕ್ಷಣವೇ, “ನಿನ್ನ ಜೀವ ತಣ್ಣಗಾಗಿ ಹೋಗುತ್ತ. ಆದ್ರ ನಿನ್ನ ತಂದಿಗೆ ಹುಚ್ಚು ಹಿಡಿಯುತ್ತ, ಇಲ್ಲಾಂದ್ರ ಭಿಕ್ಷುಕಾಗಿ ಒಂದು ತುತ್ತಿಗೆ ಕಂಡಾರ ಕಾಲಿಗೆ ಬಿದ್ದು ಕೈಯೊಡ್ಡಿ ತಿರುಪೆ ಎತ್ತುವಂಗ ಆಗುತ್ತ. ಹೇಳು ನಿಮ್ಮಪ್ಪ ತಿರುಕಾಗಿ ಹುಚ್ಚನಾಗಬೇಕೇನು?..” ಅಂತ ಆಕೆಯ ಒಳಮನಸ್ಸು ಎಚ್ಚರಿಸಿತು. ಶಾಂತವ್ವನ ಸಾವಿನಿಂದ ಅನಾಥವಾಗಿದ್ದ ಅವರ ಬದುಕು ಹೊಲ ಮನೆ ಮಾರಿದ ನಂತರ ಆ ಊರಿನ ಸಂಬಂಧ ಕಡಿದು ಹೋಯಿತು. ಹೊಲಮನೆಯನ್ನು ಮಾರಿದ ಶಿವಪ್ಪನಿಗೆ ತನ್ನ ಕರುಳನ್ನು ತಾನೇ ಕತ್ತರಿಸಿಕೊಂಡಂತಹ ನೋವಾಗಿತ್ತು. ಮಲಕಾಜಪ್ಪನ ಅನುಚಿತ ವರ್ತನೆಯಿಂದ, ಪಂಚಾಯತಿ ತೀರ್ಪಿನ ಕರ್ಕಶತೆಯಿಂದ ಅನುಶ್ರೀ ಜನರಲ್ಲಿ ನಂಬಿಕೆ ಕಳೆದುಕೊಂಡಿದ್ದಳು.
ಹತ್ತು ಗಂಟೆಯಾದರೂ ತಂದೆ ಪಡಸಾಲೆಯಲ್ಲಿ ಮಲಗಿದಾತ ಎದ್ದು ಬಂದಿಲ್ಲ. ಹೆಣಿಕೆ ಸಾಮಗ್ರಿಗಳನ್ನು ಎತ್ತಿಟ್ಟಳು ಅನುಶ್ರೀ. ತಂದೆಗೆ ಬಹುಶಃ ನಿದ್ರೆ ಹತ್ತಿರಲಿಕ್ಕಿಲ್ಲ. ಕೈಯನ್ನು ಹಣೆಯ ಮೇಲೆ ಅಡ್ಡವಿರಿಸಿಕೊಂಡು ಮಲಗಿದ್ದಾನೆ. ಆಕೆ ತಂದೆಯ ಭುಜ ಅಲುಗಿಸಿ, “ಎಪ್ಪಾ ಉಂಡು ಮಕ್ಕೊ, ನಿದ್ದಿ ಹತ್ತಿದ ಮ್ಯಾಲೆ ನೀನು ಏಳೂದಿಲ್ಲ” ಎಂದಳು. ಆತ ಎಚ್ಚರವಾಗಿಯೇ ಇದ್ದ. ಆತನ ಕಣ್ಣಿಂದ ಕಂಬನಿ ತೊಟ್ಟಿಕ್ಕಿತ್ತು. “ಊಟ ನಿದ್ದಿ ಯಾವ್ದೂ ಬ್ಯಾಡಬೇ ಯವ್ವ, ನಿಮ್ಮವ್ವ ಹೋದ್ಲು, ಹೊಲ ಹೋತು, ಮನಿ ಹೋತು. ಇನ್ನೂ ಮಲಕಾಜಪ್ಪನಂಥರ್ನ ಎಷ್ಟು ಮಂದೀನ ಎದುರಿಸಬೇಕಾಗುತ್ತೇನಾ, ಹೆಂಗ ಬದುಕೂದು? ಎಂದು ಶಿವಪ್ಪ ಗಳಗಳನೆ ಅತ್ತುಬಿಟ್ಟ. ಆತ ಕೂಲಿ ನಾಲಿ ಮಾಡಿ ಬದುಕು ಸಾಗಿಸಬೇಕಾಗಿತ್ತು. ಜೊತೆಗೆ ಮಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಳ್ಳಬೇಕಿತ್ತು. ಆಕೆಗೆ ಹೊಲದ ಕೆಲಸ ಬರುವುದಿಲ್ಲ. ಈ ಹಳ್ಳಿಯಲ್ಲಿ ಅವಳಂಥ ರೂಪರಾಶಿಯನ್ನು ಮನೆಯಲ್ಲಿಟ್ಟು ಹೊರಗೆ ಹೋಗುವುದು ಬಹಳ ಅಪಾಯಕಾರಿ ಅಂತ ಕೆಲವು ಘಟನೆಗಳಿಂದ ಶಿವಪ್ಪನಿಗೆ ಮನವರಿಕೆಯಾಗಿತ್ತು. ಬೇಗನೆ ಮದುವೆ ಮಾಡಬೇಕೆಂದರೂ ಅನುರೂಪ ವರ ಸಿಗುತ್ತಿಲ್ಲ. ಇಂತಹ ಸಮಯದಲ್ಲಿ ಒಂದು ವೇಳೆ ಒಳ್ಳೆಯ ಮನೆತನದವರು ಬಂದರೂ ಮದುವೆ ಖರ್ಚಿಗೆ ತನ್ನಲ್ಲಿ ಬಿಡಿಗಾಸೂ ಇಲ್ಲ… ಈ ರೀತಿ ಶಿವಪ್ಪ ನೊಂದುಕೊಳ್ಳತೊಡಗಿದ್ದನು. “ನನಗೂ ಸಂಕಟ ಆಕ್ಕೆöÊತಪ್ಪಾ, ಆದ್ರ ಏನು ಮಾಡೂದು, ಜನರು ನಮ್ಮನ್ನ ಹರ್ದು ಮುಕ್ಕಬೇಕಂತಾರ, ಇಲ್ಲಿರೂದು ಬ್ಯಾಡಪ್ಪ, ನಾವು ದೂರ ಎಲ್ಲಾದ್ರೂ ಹೋಗ್ಬಿಡೂನು” ಅನುವಿನ ಹಣೆ ನೆರಿಗೆಗಟ್ಟಿತ್ತು. “ಎಲ್ಲಿ ಅಂತ ಹೋಗೂನವ್ವ” ತಂದೆಗೆ ದಿಕ್ಕು ತೋಚದಾಗಿತ್ತು. “ಬೆಂಗ್ಳರ್ಗೆ ಹೋಗ್ಬಿಡೂನು. ಆದದ್ದು ಆಗ್ಲಿ” ಅನುಶ್ರೀ ತಲೆಯಲ್ಲಿದ್ದ ವಿಚಾರ ಹೊರ ಹಾಕಿದಳು. ಶಿವಪ್ಪ ಸ್ವಲ್ಪ ಹೊತ್ತು ಯೋಚಿಸಿದನು. ಆತನಿಗೆ ಮಗಳ ಮಾತು ಸರಿ ಅನ್ನಿಸಿತು. ಸರೀಕದವರ ಎದುರಿನಲ್ಲಿ ಭಿಕಾರಿಯಂತೆ ಬಾಳುವುದಕ್ಕಿಂತ ಯಾರೂ ಪರಿಚಯದವರೇ ಇಲ್ಲದ ಆ ದೂರದ ಬೆಂಗಳೂರು ಭೇಷ್ ಅನ್ನಿಸಿತ್ತು.
ತಿಮ್ಮಣಜ್ಜ ಪ್ರವಾಸದಿಂದ ಬಂದಾಗ ಮನೆ ತಲುಪವಷ್ಟರಲ್ಲಿ ರಾತ್ರಿ ಹನ್ನೊಂದು ದಾಟಿತ್ತು. ಅಷ್ಟು ಹೊತ್ತಿನಲ್ಲಿಯೇ ಯಥಾಪ್ರಕಾರ ಸಿದ್ದಪ್ಪ ಯಜಮಾನನ ಅನುಪಸ್ಥಿತಿಯಲ್ಲಿ ನಡೆದ ಊರಿನ ವಿದ್ಯಮಾನಗಳನ್ನೆಲ್ಲಾ ಹೇಳಿದ. “ನಾನು ಊರಾಗಿಲ್ದಾಗ್ಲೇ ಇಂಥಾ ಸೆಗಣಿ ತಿನ್ನೂ ಕೆಲಸ ನಡಿಸಿಬಿಟ್ಟಾರಲ್ಲ ಅಡ್ನಾಡಿಸೂಳೆ ಮಕ್ಳು. ಅವರಿಗೆ ದುಡ್ಡಿನ ಮದ ತಲಿಗೇರಿ ಹಿಂಗೆಲ್ಲಾ ಮಾಡಾಕ್ಹತ್ಯಾರ, ಈಗೇನು ಮಾಡೂದು?” ಎಂದು ತಿಮ್ಮಣ್ಣಜ್ಜ ಚಿಂತೆಗೆ ಬಿದ್ದನು. ಶಿವಪ್ಪನಿಗೆ ತನ್ನ ಹೊಲ ಮನೆಯಲ್ಲಿಯೇ ದುಡಿಯಲು ಅವಕಾಶ ಕೊಡಬೇಕು. ಆತನ ಮಗಳಿಗೆ ಒಂದು ನೆಲೆ ಒದಗಿಸಬೇಕು. ಈ ಹಿಂದೆ ಅನೂಶ್ರೀಯ ವಿಚಾರವಾಗಿ ಅಳಗವಾಡಿಯ ಗೆಳೆಯ ಸಂಗಪ್ಪನಿಗೆ ಪತ್ರ ಬರೆದು ಆತನ ಸಣ್ಣ ಮಗ ಪ್ರಕಾಶನಿಗೆ ಅನುಶ್ರೀ ತಕ್ಕ ಜೋಡಿ ಆಗುವಳೆಂದೂ, ತಾಯಿ ಇಲ್ಲದ ಮಗಳಿಗೆ ತಾಳಿ ಭಾಗ್ಯ ನೀಡಿ, ಸೊಸೆಯಾಗಿ ಸ್ವೀಕರಿಸಬೇಕೆಂದೂ ತಿಮ್ಮಣ್ಣಜ್ಜ ವಿನಂತಿಸಿದ್ದನು. ಅದನ್ನೆಲ್ಲಾ ಯೋಚಿಸುತ್ತಾ ಕುಳಿತನು. ಬೆಳಿಗ್ಗೆ ಎದ್ದು ಶಿವಪ್ಪನನ್ನು ಮನೆಗೆ ಕರೆಸಬೇಕು ಎಂದುಕೊಂಡು ಹೊರಸಿನ ಮೇಲೆ ಅಡ್ಡಾದನು. ನಿದ್ರೆ ಹತ್ತಿರವೂ ಸುಳಿಯಲಿಲ್ಲ.
ತಿಮ್ಮಣ್ಣನ ಹೆಂಡತಿ ಸುಶೀಲವ್ವನಿಗೆ ಮಕ್ಕಳಾಗಿರಲಿಲ್ಲ. ಆಕೆ ಅದೇ ಚಿಂತೆಯಿಂದ ಕೊರಗಿ ಕೊರಗಿ ಹಾಸಿಗೆ ಹಿಡಿದು ಮಧ್ಯವಯಸ್ಸಿನಲ್ಲೇ ತೀರಿಹೋಗಿದ್ದಳು. ತಿಮ್ಮಣ್ಣ ತನ್ನ ಅಣ್ಣ ಮತ್ತು ಅತ್ತಿಗೆಯ ಆರೈಕೆಯಲ್ಲೇ ಮುಂದಿನ ಜೀವನ ಕಳೆದ. ಅಣ್ಣ ಅತ್ತಿಗೆ ಎಷ್ಟೇ ಹೇಳಿದರೂ ಮರುಮದುವೆಗೆ ಒಪ್ಪಲಿಲ್ಲ. ಮುಂದೆ ಅಣ್ಣ ಅತ್ತಿಗೆ ಇಹಲೋಕ ತ್ಯಜಿಸಿದ ನಂತರ ಇಡೀ ಸಂಸಾರದ ಜವಾಬ್ದಾರಿ ತಿಮ್ಮಣ್ಣನಿಗೆ ಬಿತ್ತು. ಆ ಹೊತ್ತಿಗೆ ಅಣ್ಣನ ಮಗ ರಮೇಶ ಪುಣೆಯ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿ ಕೈತುಂಬ ಸಂಪಾದಿಸತೊಡಗಿದ್ದ. ಆತ ವರ್ಷಕ್ಕೊಮ್ಮೆ ಬಂದು ಹೆಂಡತಿ ಮಕ್ಕಳೊಂದಿಗೆ ನಾಲ್ಕಾರು ದಿನ ಇಲ್ಲಿ ಕಳೆದು ಹೋಗುವ ಪರಿಪಾಠದವನು. ಆತ ಒಂದು ಸಲವೂ ತನ್ನ ಕಾಕನಿಗೆ ಲೆಕ್ಕ ಕೇಳಿದವನಲ್ಲ. ಇರುವಷ್ಟು ದಿನ ಆನಂದದಿಂದ ಕಾಕಾನ ಜೊತೆ ಉಂಡು, ಮಾತಾಡಿ ಖುಷಿಯಾಗಿದ್ದು ಹೊರಟು ಹೋಗುತ್ತಾನೆ. ಆತನ ಹೆಂಡತಿ ಸುಸಂಸ್ಕöÈತೆ. ಮಕ್ಕಳು ಈಗಾಗಲೇ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ರಮೇಶನಿಗೆ ಕೈ ಎತ್ತಿ ಬೇರೆಯವರಿಗೆ ಕೊಡುವಷ್ಟು ಸಂಪಾದನೆ ಇದೆ. ಹಾಗಾಗಿ ಆತ ತನ್ನ ಹೊಲ ಮನೆ ಅಂತ ವ್ಯಾಮೋಹ ತಾಳಿದ್ದು ಇದೂವರೆಗೆ ಕಂಡು ಬಂದಿಲ್ಲ. ಹದಿನೈದು ಕೂರಿಗೆ ಜಮೀನಿನ ಒಡೆಯನಾಗಿರುವ ತಾನು ಹೊಲ ಮನೆಯನ್ನು ಕಳೆದುಕೊಂಡಿರುವ ಶಿವಪ್ಪನಿಗೆ ಆಶ್ರಯ ನೀಡುವುದು ದೊಡ್ಡಸ್ತಿಕೆಯೂ ಅಲ್ಲ, ಅಸಾಧ್ಯವೂ ಅಲ್ಲ. ಶಿವಪ್ಪ ಇನ್ನು ಮುಂದೆ ತನ್ನ ಹೊಲ ಮನೆಯನ್ನು ನೋಡಿಕೊಂಡು ಮಗನಂತೆ ಇರಲಿ. ಇದೇ ವಿಚಾರವನ್ನು ಬೆಳಿಗ್ಗೆ ಶಿವಪ್ಪನ ಮನೆಗೆ ಹೋಗಿ ಆತನಿಗೆ ಹೇಳಬೇಕು ಎಂದುಕೊಂಡ ಅಜ್ಜನಿಗೆ ಸಣ್ಣಗೆ ನಿದ್ರೆ ಆವರಿಸಿತು.
ಮುಂದುವರೆಯುವುದು…
-ಹಟ್ಟಿ ಸಾವಿತ್ರಿ ಪ್ರಭಾಕರಗೌಡ
ನಿಮ್ಮ “ದಿಕ್ಕುಗಳು” ಭಾಗ‑2 ಓದುದು ತುಂಬಾ ಮನಸೆಳೆಯುವ ಅನುಭವವಾಯಿತು. ಜೀವನದಲ್ಲಿ ದಿಕ್ಕು ತೋರುವ ಆಳವಾದ ವಿಚಾರಗಳು, ಸಾಹಿತ್ಯಮಯ ಪ್ರಸ್ತುತೀಕರಣ, ಅನುಭವಗಳ ವಿಶೇಷತೆ ಅದೆಂದೇ ಮನರಂಜಕರವಾಗಿದೆ. ವಂದನೆ ನಿಮ್ಮ ವಿಮರ್ಶಾತ್ಮಕ ದೃಷ್ಟಿಗೆ, ಸರಳ ಹಾಗೂ ಸ್ಪಷ್ಟ ವ್ಯಾಖ್ಯಾನಕ್ಕೆ. ಮುಂದಿನ ಭಾಗಗಳು ಬಹುಮೌಲ್ಯ, ಉತ್ಸಾಹಭರಿತವಾಗಿರಲಿ—ಧನ್ಯವಾದಗಳು!