ಯುವ ಪುರಸ್ಕಾರ ಪ್ರಶಸ್ತಿಗೆ ಭಾಜನರಾಗಿರುವ ಶ್ರೀ ದಿಲೀಪ್ ಕುಮಾರ್ ಆರ್ ಅವರ ವಿಶೇಷ ಸಂದರ್ಶನ

ದಿಲೀಪ್ ಕುಮಾರ್ ಅವರೆ, ನಿಮ್ಮ “ಪಚ್ಚೆಯ ಜಗುಲಿ” ವಿಮರ್ಶಾ ಸಂಕಲನ ೨೦೨೫ ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ಪಂಜುವಿನ ಓದುಗ ಹಾಗು ಬರಹಗಾರರ ಪರವಾಗಿ ಅನೇಕ ಅಭಿನಂದನೆಗಳು.

೧. ಮೊದಲಿಗೆ ತಮ್ಮ ಕಿರು ಪರಿಚಯ ತಿಳಿಸಿ

ನನ್ನೂರು ಚಾಮರಾಜನಗರ, ಹುಟ್ಟಿದ್ದು 1991 ರ ಮಾರ್ಚಿ 16 ಮೈಸೂರಿನಲ್ಲಿ. ತಂದೆ ದಿವಂಗತ ಎ. ಎಸ್. ರಾಮರಾವ್, ತಾಯಿ ಕೆ. ರಂಗಮ್ಮ ಮತ್ತು ತಮ್ಮ ಆರ್. ಪವನ್. ನನ್ನ ತಂದೆ ಆಟೋ ಚಾಲಕರಾಗಿದ್ದರು, ಅಮ್ಮ ಕೆಲವು ಕಾಲ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದವರು, ತಮ್ಮ ಅಟೋಮೊಬೈಲ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾನೆ. ನನ್ನ ಬಾಲ್ಯದ ವಿದ್ಯಾಭ್ಯಾಸ ಮೈಸೂರಿನ ಅಗ್ರಹಾರದ ಅಕ್ಕನ ಬಳಗ ಶಾಲೆಯಲ್ಲಿ, ಅನಂತರ ಚಾಮರಾಜನಗರದ 105 ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಪೇಟೆ ಹಿರಿಯ ಪ್ರಾಥಮಿಕ ಶಾಲೆ, ಜೆಎಸ್ಎಸ್ ಬಾಲಕರ ಪ್ರೌಢಶಾಲೆ, ಸರಕಾರಿ ಪದವಿ ಪೂರ್ವ ಬಾಲಕರ ಕಾಲೇಜು, ಸರಕಾರಿ ಪದವಿ ಕಾಲೇಜು, ಕನ್ನಡ ಸ್ನಾತಕೋತ್ತರ ಕೇಂದ್ರ ಜೆಎಸ್ಎಸ್ ಮಹಿಳಾ ಕಾಲೇಜು, ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯಗಳಲ್ಲಿ ಓದಿ ಪದವಿಗಳನ್ನು ಪಡೆದಿದ್ದೇನೆ.

ಇದುವರೆವಿಗೂ ಮೂರು ಕೃತಿಗಳು ಪ್ರಕಟವಾಗಿವೆ. ಕನ್ನಡ ಪುಸ್ತಕ ಪ್ರಾಧಿಕಾರವು ಚೊಚ್ಚಲ ಕೃತಿಗೆ ಧನಸಹಾಯ ಯೋಜನೆಯ ಅಡಿಯಲ್ಲಿ ಕೊಡಮಾಡುವ ಹಣದಿಂದ ‘ಹಾರುವ ಹಂಸೆ’ ಕವನ ಸಂಕಲನ ಗೋಮಿನಿ ಪ್ರಕಾಶನದಿಂದ 2019 ರಲ್ಲಿ, ಆದಿಮಹಾಕವಿ ಪಂಪನ ಎರಡು ಮಹಾಕಾವ್ಯಗಳ ಕುರಿತ ವಿಮರ್ಶೆಗಳ ಸಂಕಲನವಾದ ‘ಪಚ್ಚೆಯ ಜಗುಲಿ’ ಕಾಚಕ್ಕಿ ಪ್ರಕಾಶನದಿಂದ 2021 ರಲ್ಲಿ ಮತ್ತು ವಚನ ಸಾಹಿತ್ಯ ಕುರಿತು ಬರೆದ ವಿಮರ್ಶೆಗಳ ಸಂಕಲನವಾದ ‘ಶಬ್ದ ಸೋಪಾನ’ ಎಂಬ ಕೃತಿಯು ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆಯಿಂದ 2024 ರಲ್ಲಿ ಪ್ರಕಟವಾಗಿದೆ.

ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡನೆ ಮಾಡಿದ್ದೇನೆ. ಬಹಳಷ್ಟು ಸಂಶೋಧನಾ ಪ್ರಬಂಧಗಳು ವಿದ್ವಾಂಸರಿಂದ ಮೆಚ್ಚಿಗೆ ಪಡೆದಿವೆ, ಅಂತಾರಾಷ್ಟೀಯ ಮಟ್ಟದಲ್ಲಿ ಮಂಡನೆಗೊಂಡ ಸಂಶೋಧನಾ ಪತ್ರಿಕೆಗೆ ನಗದು ಬಹುಮಾನವೂ ಬಂದಿದೆ. ಆರು ಸಂಶೋಧನಾ ಪ್ರಬಂಧಗಳು ಈವರೆಗೆ ಪ್ರಕಟವಾಗಿವೆ. ಕೆಂಡಸಂಪಿಗೆ ಮತ್ತು ಸಾಹಿತ್ಯ ಸಂಗಾತಿ ಪತ್ರಿಕೆಗಳಲ್ಲಿ ಅಂಕಣ ಬರಹಗಳನ್ನು ಬರೆದಿದ್ದೇನೆ.

೨. ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾಗಿ, ಅಧ್ಯಾಪಕರಾಗಿ ಹಳಗನ್ನಡ ಸಾಹಿತ್ಯದ ಕುರಿತು ನಿಮಗೆ ವಿಶೇಷ ಒಲವು ಮೂಡಲು ಕಾರಣಗಳೇನು?

ಕುಟುಂಬದ ಹಿನ್ನೆಲೆ ಬಹಳ ಮುಖ್ಯವಾದದ್ದೆಂದು ಅನಿಸಿದೆ. ಮನೆಯಲ್ಲಿ ಅಪ್ಪ ದಿನವೊಂದಕ್ಕೆ ಆರು ಬೇರೆ ಬೇರೆ ದಿನಪತ್ರಿಕೆಗಳನ್ನು ಕೊಂಡು ಓದುತ್ತಿದ್ದುದು ನೆನಪಿದೆ, ಹಲವಾರು ಬಾರಿ ಸಂಪಾದಕೀಯ ಓದೆಂದು ಹೇಳುತ್ತಿದ್ದರು, ಅಮ್ಮ ಪದವಿಯನ್ನು ವ್ಯಾಸಂಗ ಮಾಡಿರುವವರು. ಸಂಗೀತ, ಸಾಹಿತ್ಯಗಳಲ್ಲಿ ಅಪಾರವಾದ ಅಭಿರುಚಿ ಇರುವವರು. ಮಾವನವರಾದ ಕೆ. ವೆಂಕಟರಾಜು ಸಾಹಿತ್ಯ, ನಾಟಕ, ಅನುವಾದ ಹೀಗೆ ಭಿನ್ನ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿರುವವರು. ಕುವೆಂಪು ಅವರ ಮಹಾಕಾವ್ಯ ‘ಶ್ರೀ ರಾಮಾಯಣ ದರ್ಶನಂ’ ನ ಸರಸ್ವತಿ ಸ್ತುತಿಯನ್ನು ಮಾವ, ಮನೆಯೆಲ್ಲ ತುಂಬುವಂತೆ ಓದುತ್ತಿದ್ದ ರೀತಿ, “ಕಾವ್ಯಕ್ಕೆ ಲಯ ಮುಖ್ಯ ಕಣಯ್ಯ, ಲಯ ಗೊತ್ತಾಗೋದು ಜೋರಾಗಿ ಓದಿದಾಗ” ಎಂದು ‘ಬಾಳು ವೀಣಾಪಾಣಿ, ಬಾಳು ಬ್ರಹ್ಮನರಾಣಿ …….’ ಭಾಗವನ್ನು ಓದುತ್ತಿದ್ದ ರೀತಿ ಇಂದಿಗೂ ನನ್ನ ನೆನಪಿನಲ್ಲಿದೆ. ದೊಡ್ಡಮ್ಮ ಕೆ. ರಾಧಾ ನರಸಿಂಹನ್ ಸ್ನಾತಕೋತ್ತರ ಪದವಿಯನ್ನು ಆಚಾರ್ಯ ತೀ. ನಂ. ಶ್ರೀಕಂಠಯ್ಯನವರ ಹೆಸರಿನಲ್ಲಿ ಕೊಡಮಾಡುವ ಚಿನ್ನದ ಪದಕದೊಂದಿಗೆ ತೇರ್ಗಡೆಯಾದವರು. ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ನಿವೃತ್ತರಾದವರು. ನನ್ನ ಬಾಲ್ಯದಲ್ಲಿ ಮನೆಯ ವಾತಾವರಣದ ಜೊತೆಗೆ ಹೊರಗಡೆ ಗಮಕ, ಸಂಗೀತಗಳು ನಮ್ಮೂರಿನಲ್ಲಿ ಇರುತ್ತಿತ್ತು. ಮಲೆ ಮಾದಪ್ಪನ ಕತೆ, ಮಂಟೇಸ್ವಾಮಿ ಕತೆ, ಬೆಳ್ಳಿಬೆಟ್ಟದ ರಂಗಪ್ಪನ ಕತೆಗಳನ್ನು ಊರಲ್ಲಿ ಹೇಳುತ್ತಿದ್ದವರನ್ನು, ಗೊರವರ ಕುಣಿತವನ್ನು, ಮಾರಿಕುಣಿತವನ್ನು ಕಂಡು, ಮನಸಾರೆ ಸಂತಸ ಪಟ್ಟವನು ನಾನು. ಬಾಲ್ಯದ ಹೆಚ್ಚಿನ ಸಮಯಗಳೆಲ್ಲವೂ ಹೀಗೆಯೇ ಇದ್ದಿದ್ದು. ಈ ಎಲ್ಲವೂ ಸಾಹಿತ್ಯದ ಬಗೆಗೆ ಒಲವು ಮೂಡಲು ಕಾರಣವಾಗಿರಬಹುದು.

ದಿಲೀಪ್‌ ಕುಮಾರ್‌ ಆರ್..‌ ಚಿತ್ರ ಕೃಪೆ: ಡಾ. ಲೀಲಾ ಅಪ್ಪಾಜಿ

ಎಂ.ಎ., ವಿದ್ಯಾಭ್ಯಾಸದ ಸಮಯದಲ್ಲಿ ಡಾ. ಎನ್. ಮಹೇಶ್ವರಿ ಅವರ ತರಗತಿಗಳು ಗಾಬರಿ ಹುಟ್ಟಿಸಿದ್ದಿದೆ. ಅವರು ತೆಗೆದುಕೊಳ್ಳುತ್ತಿದ್ದ ಸಾಹಿತ್ಯ ಚರಿತ್ರೆಯ ಹಿನ್ನೆಲೆ, ಕಾವ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ ತರಗತಿಗಳು ಇಂದಿಗೂ ನನ್ನ ನೆನಪಿನಲ್ಲಿ ಇದೆ. ಇದೇ ಸಮಯದಲ್ಲಿ ಪ್ರೊ. ಪಂಡಿತಾರಾಧ್ಯರ ಮಾತುಗಳನ್ನು ತರಗತಿಯಲ್ಲಿ ಕೇಳಿದ್ದು. ಅವರು ವಿಕ್ರಮಾರ್ಜುನ ವಿಜಯದ ಮೊದಲನೆಯ ಪದ್ಯವನ್ನು ಕುರಿತು ಸುದೀರ್ಘ ಒಂದುವರೆ ಗಂಟೆಗೂ ಹೆಚ್ಚಿನ ಮಾತುಗಳು ಗಾಬರಿ ತರಿಸಿತ್ತು. ಇಂದಿಗೂ ಆಗಾಗ ನೆನಪಾಗುವ ತರಗತಿಗಳಿವು. ಪ್ರೊ. ಎನ್. ಎಸ್. ತಾರಾನಾಥರು, ‘ಮಾದಾರ ಚೆನ್ನಯ್ಯಗಳ ಮಹಾತ್ಮೈ’ ರಗಳೆಯನ್ನು ಪಾಠಮಾಡಿದ ರೀತಿ, ಒಟ್ಟಾರೆ ಸಾಹಿತ್ಯವನ್ನು ಗಮನಿಸಬೇಕಾದ ಸೂಕ್ಷ್ಮತೆಗಳನ್ನು ಕಲಿಸಿದವು. ನಾನು ಯಾರ ಜೊತೆಯಾದರೂ ಸಾಹಿತ್ಯವನ್ನು ಕುರಿತು ಸರಾಗವಾಗಿ ಮಾತನಾಡುವೆ, ಆದರೆ ಗುರುಗಳಾದ ತಾರಾನಾಥರ ಎದುರು ನಿಲ್ಲುವುದಕ್ಕೆ, ಸಾಹಿತ್ಯ ಕುರಿತು ಮಾತನಾಡುವುದಕ್ಕೆ ಇಂದಿಗೂ ಭಯವಿದೆ. ನಿಖರತೆ, ಸ್ಪಷ್ಟತೆ, ಹಲವು ಶಾಸ್ತ್ರಗಳ ತಲಸ್ಪರ್ಶಿಯಾದ ವಿವೇಚನೆಗಳು ಯಾರಿಗೆ ತಾನೆ ಭಯತರಿಸದು ? ಆ ಭಯವೇ ನನ್ನನ್ನು ಎಚ್ಚರವಾಗಿಟ್ಟಿದೆ ಅನಿಸಿದೆ.

ಪ್ರೊ. ಜಿ. ಎಚ್. ನಾಯಕರ ಭೇಟಿ ನನ್ನ ಬದುಕಿನ ಅವಿಸ್ಮರಣೀಯ ಘಟನೆಗಳಲ್ಲಿ ಬಹುಮುಖ್ಯವಾದುದು. ಗುರುಗಳು ಹೇಗೆ ಬದುಕಿದವರೋ ಹಾಗೆಯೇ ಬರೆದರು. ಒಂದು ಪುಸ್ತಕವನ್ನೇ ಬರೆಯಬಹುದು ಅಷ್ಟು ನೆನಪುಗಳಿವೆ. ‘ಪಂಪನ ಅಭಿವ್ಯಕ್ತಿ’, ‘ಪಂಪನ ಪದ್ಯವೊಂದರ ಪುನರ್ವಿಮರ್ಶೆ’ ಇಂದಿಗೂ ಕಾಡುತ್ತಿರುವ ಲೇಖನಗಳು. ಪ್ರೊ. ಟಿ. ವಿ. ವೆಂಕಟಾಚಲ ಶಾಸ್ತ್ರೀ ಅವರೊಂದಿಗಿನ ಮಾತುಗಳು ನನ್ನನ್ನು ಬೇರೆಯದೇ ದಿಕ್ಕಿನಲ್ಲಿ ಆಲೋಚಿಸುವಂತೆ ಮಾಡಿದವು. ಭಾಷೆ, ನಿರುಕ್ತ, ಛಂದಸ್ಸು, ನಿಘಂಟು, ಗ್ರಂಥಸಂಪಾದನೆ ಇವುಗಳ ಬಗೆಗೆ ಗಾಬರಿ ಅನಿಸಿದ್ದೇ ಶಾಸ್ತ್ರಿಗಳನ್ನು ಕಂಡಾಗ. ಒಂದು ಘಟನೆ ಹೇಳಬೇಕು, ಗ್ರಂಥಸಂಪಾದನೆಯನ್ನು ನಾನು ತರಗತಿಗಳಲ್ಲಿ ಕಲಿತವನಲ್ಲ, ನಾನು ಓದುವಾಗ ಅದನ್ನು ಪಠ್ಯದಿಂದಲೇ ತೆಗೆದುಬಿಟ್ಟಿದ್ದರು. ಕರೋನ ಸಮಯದಲ್ಲಿ ಪ್ರೊ. ಟಿ. ವಿ. ವಿ ಅವರು ತಮ್ಮ ಅನಾರೋಗ್ಯವನ್ನೂ ಲೆಕ್ಕಿಸದೆ ಸತತ ಒಂದುವರೆ ಗಂಟೆಯಷ್ಟು ಕಾಲ ಮೊಬೈಲ್ ನಲ್ಲಿ ಮಾತನಾಡುತ್ತಲೇ ಗ್ರಂಥಸಂಪಾದನೆಯನ್ನು ಪಾಠಮಾಡಿಕೊಟ್ಟರು. ನಾಯಕರು ಸಾಹಿತ್ಯ ವಿಮರ್ಶೆಯಲ್ಲಿ ತಮ್ಮದೇ ಜ್ಞಾನಶಾಖೆಯ ಹಾಗೆ ನಿಂತಿರುವವರು, ಪ್ರೊ. ಟಿ. ವಿ. ವೆಂಕಟಾಚಲ ಶಾಸ್ತ್ರೀಗಳು ಯಾವ ಮಾರ್ಗವನ್ನಾದರೂ ಥಟ್ಟನೆ ಎದುರು ನಿಂತು ಮಂಡಿಸಬೇಕಾದ ವಿದ್ವತ್ತಿನ ಮತ್ತೊಂದು ಮಜಲನ್ನು ಕಾಣಿಸಿದವರು. ಶಾಸ್ತ್ರೀಗಳ ‘ಕುವಲಯಾಮಲ ಖಡ್ಗನೀಲಃ’ ನನ್ನ ನೆಚ್ಚಿನ ಲೇಖನ. ಅದೆಷ್ಟು ಬಾರಿ ಓದಿದ್ದೇನೋ ಲೆಕ್ಕವೇ ಇಲ್ಗ. ಪ್ರೊ. ಓ. ಎಲ್. ನಾಗಭೂಷಣ ಸ್ವಾಮಿ ಅವರ ಭೇಟಿ ನನ್ನ ಬದುಕಿನ ಮತ್ತೊಂದು ಅಮೃತಘಳಿಗೆ ಅನಿಸಿದೆ. ಅವರ ‘ವಿಮರ್ಶೆಯ ಪರಿಭಾಷೆ’ ಸಾಹಿತ್ಯದ ವಿದ್ಯಾರ್ಥಿಗಳಿಗೆ ಆಚಾರ್ಯಕೃತಿ. ಭಾರತೀಯ, ಮತ್ತು ಪಾಶ್ಚಾತ್ಯ ಸಾಹಿತ್ಯಗಳ ಸಂರಚನೆಗಳಲ್ಲಿನ ಸೂಕ್ಷ್ಮತೆಗಳನ್ನು ಬಲ್ಲವರು. ಮಧ್ಯಕಾಲೀನ ಕನ್ನಡ ವಚನ ಸಾಹಿತ್ಯದ ಬಗೆಗೆ ಅವರಷ್ಟು ನಿಖರವಾಗಿ ಮಾತನಾಡುವವರನ್ನು, ಅತೀಸೂಕ್ಷ್ಮವಾದ ಪ್ರಶ್ನೆಗಳನ್ನು ಎತ್ತುವವರನ್ನು ನಾನಂತೂ ಕಂಡಿಲ್ಲ. ಓ. ಎಲ್. ಎನ್ ರ ‘ಬಯಲು ಮತ್ತು ಆವರಣ’ ಮತ್ತು ‘ಧರ್ಮವೆಂಬ ಮರ’ ಲೇಖನಗಳು ನನ್ನೊಳಗೆ ಓದುವ ಹುಚ್ಚನ್ನೇ ಬದಲಾಯಿಸಿತು. ನಾಯಕರ ಕಾಲಾನಂತರ ಆರಂಭವಾದ ಖಾಲಿಜಾಗವೊಂದು ನನ್ನಲ್ಲಿ ಉಳಿದು, ಯಾವುದನ್ನು ಮಾಡದಂತೆ ಕೆಲವು ಕಾಲ ನಿಲ್ಲಿಸಿತ್ತು. ಆ ಸಮಯದಲ್ಲಿ ಪ್ರೊ.ಓ. ಎಲ್. ಎನ್ ರು ಆಡಿರುವ ಮಾತುಗಳು ನನ್ನನ್ನು ಇಂದಿಗೂ ಕಾಪಾಡುತ್ತಿದೆ. ಓ. ಎಲ್. ಎನ್ ಅವರು ಹೇಳುವ ಮತ್ತೊಂದು ಮಾತು ಅದ್ಭುತವಾದದ್ದು ‘ಕುದುರೆ ಹತ್ತಬಾರದು ಮತ್ತು ಕುದುರೆಯ ನೆರಳನ್ನೂ ಹತ್ತಬಾರದು’ ಇದೊಂದು ಎಚ್ಚರಿಕೆಯನ್ನು ಆಗಾಗ ಮಾಡುತ್ತಲೇ ಇರುತ್ತಾರೆ.

ಮತ್ತೊಬ್ಬ ವಿದ್ವಾಂಸರು ಮಂಜುನಾಥ ಕೊಳ್ಳೇಗಾಲರು, ನನ್ನೂರಿನವರು, ಅಣ್ಣನ ಸಮಾನರು. ವಿದ್ವತ್ತು ಪಾಂಡಿತ್ಯಗಳು ನನ್ನ ಕಾಲದಲ್ಲಿಯೂ ಉಳಿಸಿಕೊಳ್ಳಬಹುದೆನ್ನುವುದನ್ನು, ಅದೇ ಕಾಯುವುದೆಂದು ಹದತಪ್ಪದ ಹಾಗೆ ಬದುಕು-ಬರಹ ಮಾಡಬಹುದೆನ್ನುವುದನ್ನು ಎಚ್ಚರಿಸುವವರು. ಸಂಶೋಧನೆ ಬರವಣಿಗೆಗೆ ತೊಡಗಿದರೆ ರಾಕ್ಷಸರ ಹಾಗೆ ಅದೊಂದೇ ವಿಷಯದಲ್ಲಿ ತಿಂಗಳುಗಳ ಕಾಲ ನಿಲ್ಲಬಲ್ಲ ಅವಧಾನವನ್ನು ಸಾಧಿಸಿರುವವರು. ನನಗೆ ಪಂಪನನ್ನು ಕಂಡರೆ ಎಷ್ಟು ಮೆಚ್ಚುಹುಚ್ಚುಗಳಿವೆಯೋ, ಕೊಳ್ಳೇಗಾಲರಿಗೆ ಕುಮಾರವ್ಯಾಸನ ಬಗೆಗೆ ಹಾಗೆಯೇ ಇದೆ. ಕುಮಾರವ್ಯಾಸನ ಬಗೆಗೆ ಅವರು ಬರೆದರೆ ನಮ್ಮ ಕಾಲದಲ್ಲಿ ದೊಡ್ಡದೊಂದು ಕೃತಿಯೇ ಆಗಬಹುದು, ಬರೆಯುವರು ಎಂದು ನಂಬಿದ್ದೇನೆ. ಮೇಲೆ ಹೆಸರಿಸಿರುವ ಆರು ಜನರ ಪ್ರೀತಿ ಎಷ್ಟು ಅನುಭವಿಸಿದ್ದೇನೋ, ತಪ್ಪು ಬರೆದಾಗ, ಆಡಿದಾಗ ಉದ್ಭವಿಸಿದ ಸಿಟ್ಟಿನ ಅಷ್ಟೇ ತೀವ್ರತೆಯ ಕಾವನ್ನೂ ಅನುಭವಿಸಿದ್ದೇನೆ. ಇವರೆಲ್ಲರೂ ಪ್ರಾಚೀನ ಸಾಹಿತ್ಯವನ್ನು ಒಪ್ಪಿ, ವಿರೋಧಿಸಿ ಮತ್ತಷ್ಟೇ ಪ್ರಮಾಣದಲ್ಲಿ ಸೂಕ್ಷ್ಮಮಟ್ಟದ ಹಸ್ತಾಂತರಕ್ಕೆ ನಿಂತಿರುವವರು. ಇವರೆಲ್ಲರ ಸಾಂಗತ್ಯ ನನ್ನಲ್ಲಿ ಹಳಗನ್ನಡ ಬಗೆಗೆ ಅಪಾರವಾದ ಕತೂಹಲವನ್ನು ಇಂದಿಗೂ ಉಳಿಸಿದೆ. ಇದೆಲ್ಲ ಎಲ್ಲರ ಬದುಕಿನಲ್ಲಿಯೂ ದೊರೆಯುವಂತಹದ್ದಲ್ಲ. ನನ್ನ ಕಾಲ ನನಗಾಗಿ ಕೊಟ್ಟ ಬಹುದೊಡ್ಡ ಉಡುಗೊರೆ ಇದು.

೩. ಯುವ ಪುರಸ್ಕಾರ ಪ್ರಶಸ್ತಿ ಪುರಸ್ಕೃತ ನಿಮ್ಮ ಕೃತಿ “ಪಚ್ಚೆಯ ಜಗುಲಿ” ಮುಖ್ಯ ತಿರುಳು ಏನು?

ಪಚ್ಚೆಯ ಜಗುಲಿ ಕೃತಿಯು ಆದಿಮಹಾಕವಿ ಪಂಪನ (ಕ್ರಿ. ಶ. 902) ಎರಡು ಕಾವ್ಯಗಳಾದ ‘ಆದಿಪುರಾಣಂ’ ಮತ್ತು ‘ವಿಕ್ರಮಾರ್ಜುನ ವಿಜಯಂ’ ಕಾವ್ಯಗಳಲ್ಲಿ ಶೃಂಗಾರ ಸಂದರ್ಭಗಳ ಕುರಿತ ಹೊಸ ನೋಟದ ಕ್ರಮವಾಗಿದೆ. ವಿದ್ವಾಂಸರು ಇದುವರೆವಿಗೂ ಪಂಪನ ಕಾವ್ಯಗಳಿಂದ ಹೆಕ್ಕಿ, ತೆಗೆದು ಕಾಣಿಸಿರುವ ಸಂದರ್ಭಗಳ ಜೊತೆಗೆ ಉಳಿದವುಗಳನ್ನೂ ಚರ್ಚೆಗೆ ತೆಗೆದುಕೊಂಡಿದ್ದೇನೆ. ಇವು ಪಂಪನನ್ನು, ಅವನು ಕಂಡ ದರ್ಶನವನ್ನು, ಕಾಣುವ ಮತ್ತೊಂದು ಪರಿ ಅನಿಸಿದೆ.

೪. ವಚನ ಸಾಹಿತ್ಯವನ್ನು ಜನರಿಗೆ ತಲುಪಿಸುವ ಕಾರ್ಯಗಳು ನಡೆಯುತ್ತಿವೆ. ಆ ರೀತಿ ಹಳಗನ್ನಡ ಸಾಹಿತ್ಯವನ್ನು ಕ್ಲಾಸ್ ರೂಮ್ ನ ಆಚೆಗೆ ಹೇಗೆ ತಲುಪಿಸಬಹುದು?

ಮೊದಲನೆಯದಾಗಿ, ವಚನ ಸಾಹಿತ್ಯದ ಬಗೆಗೆ ಪ್ರಸ್ತಾಪ ಮಾಡಿದಿರಿ, ವಚನ ಸಾಹಿತ್ಯದಷ್ಟು ಸಂಕೀರ್ಣವಾದ, ಸೂಕ್ಷ್ಮವಾದ ಸಂ-ರಚನೆಗಳು ಭಾರತೀಯ ಭಾಷೆಗಳಲ್ಲಿಯೇ ತೀರಾತೀರಾ ವಿರಳ. ಆ ಸಮಯದಲ್ಲಿ ನಡೆದ ಏನೋ ಘಟನೆ ನಮಗೆ ಕಾಣಿಸದೆ ಮಿಸ್ ಆಗಿದೆ, ಎಲ್ಲಿ ಆಗಿದೆ ಎಂದು ತಿಳಿಯದಷ್ಟು ನಿಗೂಢ ಮಟ್ಟದಲ್ಲಿದೆ. ವಚನಕಾರರ ಕಾಲ-ಪರಿಸರಗಳ ಬಗೆಗೆ ನಮ್ಮ ಕೈಲಿ ಕೆಲವು ಮಾಹಿತಿಗಳಿವೆ. ಇರುವ ಎಷ್ಟೋ ಮಾಹಿತಿಗಳು ಕೆಲವೆಡೆ ತಾಳೆಯೇ ಆಗುತ್ತಿಲ್ಲ. ವಚನಕಾರರು ಇದ್ದರೆಂದು ನಂಬಿರುವ ಕಾಲಕ್ಕೂ, ಅವರ ಪ್ರಸ್ತಾಪ ಮೊದಲು ಬರುವ ಶಾಸನ, ಕಾವ್ಯಕೃತಿಗಳ ನಡುವಿನ ಅಂತರವನ್ನು ಕಂಡರೆ ಗಾಬರಿ ಅನಿಸುತ್ತದೆ. ಆ ಖಾಲಿ ಜಾಗ ನಾವೆಲ್ಲರೂ ಆಡುತ್ತಿರುವ ಮಾತುಗಳನ್ನು ಅಣಕಿಸುವಂತೆ ಭಾಸವಾಗುತ್ತಿದೆ, ಆ ಖಾಲಿ ಇರುವ ಜಾಗದ ಕಾರಣದಿಂದಲೇ ಅಧಿಕೃತವಾಗಿ ಮಾತನಾಡುವುದಕ್ಕೆ ಭಯವಾಗುತ್ತದೆ, ಸೃಜನಶೀಲ ಕೃತಿಗಳು ತಮ್ಮದೇ ಕಾಣ್ಕೆಗಳ ಮೂಲಕ ರಚನೆಯಾಗುತ್ತಿವೆ. ‘ವಚನಕಾರರು ಸರಳವಾಗಿ ಹೇಳಿದ್ದಾರೆ’, ‘ಸರಳವಾಗಿ ಬದುಕಿದರು’ ಎಂದು ಸಾರ್ವತ್ರಿಕವಾಗಿ ಘೋಷಿಸಿ, ಅವರ ಬಗೆಗೆ ಯಾವ ಶೋಧಕ್ಕೂ ನಿಲ್ಲದೆ, ಪ್ರಶ್ನೆಗಳನ್ನೇ ಕೇಳಿಕೊಳ್ಳದೆ ವಚನಕಾರರಿಗೆ ದೊಡ್ಡ ಲೋಪವನ್ನು ಮಾಡುತ್ತಿದ್ದೇವೇನೋ ಅನಿಸಿದ್ದಿದೆ. ನಾವು ಸಂಭ್ರಮಿಸುತ್ತಿದ್ದೇವೆ ನಿಜ, ಆದರೆ ಸತ್ಯಶೋಧನೆಯಲ್ಲಿ ಎಲ್ಲಿದ್ದೇವೆ ಎಂಬುದನ್ನು ಪುನರ್ ಪರಿಶೀಲಿಸಿಕೊಳ್ಳಬೇಕಿದೆ. ಜಪಾನಿನ ‘ಕೋನ್’ ಎಂಬ ಪ್ರಕಾರ, ಬಾಷೋ ನಂತಹ ದ್ರಷ್ಟಾರನ ‘ಹಯ್ಕು’ಗಳು, ನಮ್ಮಲ್ಲಿನ ವಚನಗಳು ಒಂದೇ ಸಮನಾಗಿ ನಿಲ್ಲಬಲ್ಲಂಥವು. ನಾವು ಜನರೇಟಿವ್ ಟೆಕ್ಸ್ಟ್ ಆಗಿ ಆಯ್ದ ವಚನಗಳನ್ನಷ್ಟೇ ಬಳಕೆ ಮಾಡಿ ಸಿದ್ಧಮಾದರಿಯನ್ನು ಇಟ್ಟುಕೊಂಡಿದ್ದೇವೆ. ಉಳಿದ ವಚನಗಳನ್ನು ಬಳಸದೆ ಡೆಡ್ ಟೆಕ್ಸ್ಟ್ ಆಗುವಂತೆ ಮಾಡಿದ್ದೇವೆ ಅನಿಸುವುದಿಲ್ಲವೇ ? ಇದನ್ನು ಹೇಗೆ ಬದಲಾಯಿಸುವುದು ? ಪಲ್ಲಟಗೊಳಿಸುವುದು ? ಯೋಚಿಸಬೇಕಿದೆ. ನೀವು ಕೇಳಿದ್ದರಿಂದ ನನ್ನಲ್ಲಿ ವಚನ ಸಾಹಿತ್ಯ ಕುರಿತು ಇರುವ ಅನಿಸಿಕೆಯನ್ನು ಹೇಳಿದೆ ಅಷ್ಟೆ.

ಪ್ರಾಚೀನ ಹಳಗನ್ನಡ ಸಾಹಿತ್ಯ ಕೃತಿಗಳು ಇಂದು ಕ್ಲಾಸ್ ರೂಮ್ ನಿಂದಲೇ ಕಣ್ಮರೆ ಆಗುತ್ತಿರುವ ಸಂದರ್ಭದಲ್ಲಿದ್ದೇವೆ ಅನಿಸುವುದಿಲ್ಲವೇ ! ನೀವು ಓದುತ್ತಿದ್ದ ಕಾಲದ ಪಠ್ಯ ಪುಸ್ತಕದಲ್ಲಿದ್ದ ಪ್ರಾಚೀನ ಪಠ್ಯಗಳ ಸಂಖ್ಯೆಯನ್ನು ಇಂದಿಗೆ ಇರುವ ಸಂಖ್ಯೆಗೆ ಹೋಲಿಸಿದರೆ ಗಾಬರಿ ಅನಿಸುತ್ತದೆ. ಇದು ಹೇಗಾದರೂ ಹೊಸಕ್ರಮದಲ್ಲಿ ಬದಲಾಗಬೇಕಿದೆ. ಸದ್ಯದ ನಮ್ಮ ಭವ-ಭಾವಗಳಲ್ಲಿನ ಸಂಕೀರ್ಣತೆಯನ್ನು, ಸದಾ ಜಾಗೃತವಾಗಿರುವ ಸಂಘರ್ಷವನ್ನು ಪ್ರಾಚೀನ ಸಾಹಿತ್ಯದ ಸ್ಪರ್ಶವಿಲ್ಲದೆ ಹೇಗೆ ಗಮನಿಸುವಿರಿ ? ಸಂಕೀರ್ಣಕ್ಕೂ, ಸಂಘರ್ಷಕ್ಕೂ ಒಂದು ಇತಿಹಾಸವಿದೆ ಅನ್ನುವುದಾದರೆ ಹಿಂದೆ ಹೇಗಿತ್ತೆನ್ನುವುದನ್ನು ಅರಿಯಬೇಕು. ಅಲ್ಲಮ ಹೇಳುವ ‘ಹಿಂದಣ ಹೆಜ್ಜೆ’ ಮತ್ತು ‘ನಿಂದ ಹೆಜ್ಜೆ’ ಗಳ ಅರಿಯದೆ ಇದ್ದರೆ ಬದುಕಿನ ತಾಳವೇ ತಪ್ಪುತ್ತದೆ.

ಯಾವುದೇ ಭಾಷೆಯಲ್ಲಿ ಗಟ್ಟಿಯಾಗಿ ನೆಲೆನಿಂತ ಆ ನೆಲದ ಜಿಜ್ಞಾಸುವನ್ನೋ, ಸಿದ್ಧಾಂತಿಯನ್ನೋ, ತತ್ವದರ್ಶನಗಳ ಕಟ್ಟಿಕೊಟ್ಟ ದ್ರಷ್ಟಾರನನ್ನೋ, ಸಾಹಿತ್ಯ ವಿಮರ್ಶಕ-ಸಂಶೋಧಕರನ್ನೋ, ಅವರ ಯಾವುದೇ ಬರಹಗಳನ್ನು ಗಮನಿಸಿ – ಒಂದಿಲ್ಲೊಂದು ಬಾರಿ ತಮ್ಮ ನೆಲದ, ಭಾಷೆಯ ಪ್ರಾಚೀನ ಸಾಹಿತ್ಯವನ್ನು ಮುಟ್ಟಿಯೇ ಮುಟ್ಟಿರುತ್ತಾನೆ. ಕೊನೆಗೆ ಪ್ರಾಚೀನ ಸಾಹಿತ್ಯದಲ್ಲಿ “ಏನೂ ಇಲ್ಲವೇ ಇಲ್ಲ” ಎನ್ನುವುದಕ್ಕಾದರೂ ಅದನ್ನೇ ಮುಟ್ಟಿ ಮಾತಡಬೇಕಲ್ಲವೇ ? ಪಠ‍್ಯಸಾಕ್ಷಿಯನ್ನು ಇಡದೆ ಮಾತನಾಡುವುದು ಕಾಲಹರಣ ಅನಿಸುವುದಿಲ್ಲವೇ ? ಇದೊಂದು ಲಿಂಕ್ ಮಿಸ್ಸಾದ ಹಾಗೆ ಬಹಳಷ್ಟು ಬಾರಿ ಅನಿಸಿದೆ. ಅದೊಂದನ್ನು ಸರಿಪಡಿಸುವ ಮಾರ್ಗವನ್ನು ಪಠ್ಯವಸ್ತು, ಪಠ‍್ಯಕ್ರಮಗಳನ್ನು ಕಾಲಧರ್ಮಕ್ಕೆ ತಕ್ಕಂತೆ ನಿರ್ಧರಿಸಿ ನಿರ್ಮಿಸುವ ಶೈಕ್ಷಣಿಕವೇತ್ತರರು ಗಂಭೀರವಾಗಿ ಗಮನಿಸಬೇಕಿದೆ.

೫. ಕ್ಲಾಸಿಕ್ ಗಳನ್ನು ಓದಬೇಕು ಎಂದು ಒಮ್ಮೆ ಹೇಳಿದ್ದಿರಿ. ಕ್ಲಾಸಿಕ್ ಗಳಾಚೆ ನಿಮ್ಮ ಓದಿನ ವಿಸ್ತಾರ ಹೇಗಿದೆ? ಹೊಸ ಕೃತಿಗಳ ವಿಮರ್ಶೆಯಲ್ಲಿ ನಿಮಗೆ‌ ಆಸಕ್ತಿ ಇದೆಯಾ?

‘ಕ್ಲಾಸಿಕ್’ ಎನ್ನುವುದನ್ನು ‘ಶಾಸ್ತ್ರೀಯ’, ‘ಮಾರ್ಗ’ ಎಂಬ ಅರ್ಥಗಳಲ್ಲಿ ಕರೆದು ಗುರುತಿಸುತ್ತಿರುವಂತೆಯೇ, ಆ ಪದಕ್ಕೆ ‘ಅತ್ಯುತ್ಕೃಷ್ಟ’ ಎಂಬ ಅರ್ಥ ಇರುವುದನ್ನು ಮರೆಯುತ್ತಿದ್ದೇವೆ. ಯಾವುದು ಮನುಷ್ಯನ ಬದುಕಿನ ಸಂವೇದನೆಯ ಹತ್ತಿರಕ್ಕೆ ಬಂದು ನಿಲ್ಲುತ್ತದೊ ಅದೆಲ್ಲವೂ ಕ್ಲಾಸಿಕ್ ಗಳೆ. ಕರೋನ ಸಮಯದಲ್ಲಿ ಹತ್ತಿರದವರ, ಬಂಧು ಬಾಂಧವರ ಹೆಣಗಳನ್ನು ಸಾಲು ಸಾಲು ಕಂಡವರಿಗೆ ಪಂಪ, ರನ್ನರ ಕಾವ್ಯಗಳಲ್ಲಿನ ದುರ್ಯೋಧನ ಕಂಡ ಆತ್ಮೀಯರ ಹೆಣಗಳ ರಾಶಿಯಂತೆ ಅನಿಸುತ್ತದೆ. ಆದರೆ ಅದಕ್ಕೆ ಕಾರಣವಾದ ಲಾಲಸೆ ಕೇವಲ ಒಬ್ಬರದಲ್ಲ ಎಂಬುದು ಅರಿವಿಗೆ ಬಂದೊಡನೆ ನಮ್ಮನ್ನು ಆಳುತ್ತಿರುವುದು ಯಾವುದು ? ಏಕೆ ಮನುಷ್ಯ ಸಹಜವಾಗಿ ಬದುಕಲಾರ ? ಎಂಬ ಪ್ರಶ್ನೆಗಳು ಕಾಡುತ್ತವೆ. ಇದಕ್ಕೆ ಕ್ರಿ. ಶ. 902 ರಿಂದ ಇಂದು ರಚನೆಯಲ್ಲಿ ತೊಡಗಿರುವ ಬಹುಮಹತ್ವದ ಕವಯಿತ್ರಿಯಾದ ಸವಿತಾ ನಾಗಭೂಷಣರಂತಹ ಕವಿಗಳು ಶೋಧಿಸುತ್ತಲೇ ಇದ್ದಾರೆ, ಕೆಲವೊಮ್ಮೆ ತಟ್ಟನೆ ಕಾರಣವನ್ನೂ ಕಾಣಿಸಿಬಿಡುತ್ತಾರೆ ಅನಿಸಿದೆ.

ಹೊಸ ಕೃತಿಗಳನ್ನು ಓದುತ್ತಲೇ ಇರುತ್ತೇನೆ. ಅವುಗಳ ಬಗೆಗೆ ಮಾತನಾಡುವ ಸಮಯ, ಸಂದರ್ಭಗಳು ಬಂದಿಲ್ಲ ಅಷ್ಟೆ. ಕೆಲವೊಮ್ಮೆ ಮಾತನಾಡಬೇಕಾಗಿ ಬಂದ ಅವಕಾಶವನ್ನೂ ನನ್ನ ಓದು, ಬರವಣಿಗೆಗಳ ಕಾರಣದಿಂದ ಪಕ್ಕಕ್ಕಿಟ್ಟು ದೂರ ಉಳಿಯಬೇಕಾಗಿದೆ.

೬. ಇಂದಿನ ಯುವಕರು ಓದುವ ಅಭ್ಯಾಸ ಹೊಂದಿದ್ದಾರೆ ಎಂದು ನೀವು ಭಾವಿಸುತ್ತೀರಾ? ಅವರ ಓದು ಮತ್ತು ಬರವಣಿಗೆಯ ಉತ್ಸಾಹ ಹೆಚ್ಚಿಸಲು ಏನು ಮಾಡಬೇಕು?

ಓದು, ಬರಹಗಳನ್ನು ಬಲವಂತದಿಂದ ಮಾಡಲಾಗುವುದಿಲ್ಲ. ಅದಕ್ಕೊಂದು ಬಲವಾದ ತುರ್ತು, ವೈಯಕ್ತಿಕ ಆಘಾತ-ವಿಪತ್ತುಗಳು ಘಟಿಸಬೇಕು. ಆ ವಿಪತ್ತಿಗೆ, ಆಘಾತಕ್ಕೆ ಕಾರಣ ಮತ್ತು ಪರಿಣಾಮಗಳನ್ನು ಶೋಧಿಸಿ, ಅನುಭವಿಸೋಣ ಸರಿ, ಆದರೆ ಇಂತಹದ್ದನ್ನು ನಾನೊಬ್ಬನೇ ಎದುರಿಸಿಲ್ಲ ಎಂಬ ಅರಿವು ಯುವಕರಲ್ಲಿ ಮೂಡುವಂತೆ ಮಾಡುವ ಪಠ್ಯಗಳು, ಸಶಕ್ತವಾಗಿ ಅದನ್ನು ಹಸ್ತಾಂತರಿಸುವ ಶಿಕ್ಷಕರು, ಉಪನ್ಯಾಸಕರು ಬೇಕಿದ್ದಾರೆ. ಓದಿಗೆ ನೂರಾರು ಬಗೆಗಳಿವೆ, ಕಾರಣಗಳಿವೆ ಆದರೆ ‘ಮನುಜಕುಲದಲ್ಲಿ ಯಾರ ಬದುಕಿನಲ್ಲಿಯೂ ನಡೆಯದ್ದು, ಘಟಿಸದ್ದು ನನಗೆ ಮಾತ್ರ ಆಗಿಲ್ಲ, ಆಗುವುದಿಲ್ಲ.’ ಎಂಬ ಅರಿವು ಮೂಡಿದಾಗ ಆರಂಭವಾಗುವ ಓದು ಸ್ವಮೌಲ್ಯಮಾಪನಕ್ಕೆ ಹಾದಿಮಾಡಿಕೊಡುತ್ತದೆ. ಇಂತಹ ಓದಿನ ಅಗತ್ಯ ಇಂದಿಗಿದೆ ಅನಿಸಿದ್ದಿದೆ. ಪ್ರತಿಯೊಂದು ಓದು, ಬರಹಗಳು ನಮ್ಮದು, ಅದು ನಮ್ಮದಷ್ಟೆ – ಎಂಬುದನ್ನು ಮೊದಲು ಭದ್ರಗೊಳಿಸಿಕೊಂಡರೆ ಉಳಿದೆಲ್ಲ ತನ್ನಿಂದ ತಾನೆ ಸರಾಗವಾಗಿ ಆಗುತ್ತದೆ. ಅಂತಹ ಓದಿನ ಸಮಯವಿದು, ಹಲವು ಯುವಕರು ಮಾಡುತ್ತಿದ್ದಾರೆ, ನಾನು ಗಮನಿಸಿದ್ದೇನೆ.

೭. ಡಿಜಿಟಲ್ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಇಂದಿನ ಬರವಣಿಗೆಯ ಮೇಲೆ ಹೇಗೆ ಪ್ರಭಾವ ಬೀರುತ್ತಿವೆ?

ನಾನು ಅತಿಯಾಗಿ ಬಳಕೆ ಮಾಡುವುದು ಡಿಜಿಟಲ್ ಗ್ರಂಥಾಲಯವನ್ನು. ಒಂದು ಕಾಲದಲ್ಲಿ (2013 ರ ಆಸುಪಾಸು ಇರಬೇಕೆಂದು ಎಂದು ನೆನಪು) ಒಂದು ಪುಸ್ತಕಕ್ಕಾಗಿ ಒಬ್ಬರ ಮನೆಯ ಮುಂದೆ ಬೆಳಗ್ಗೆಯಿಂದ ಸಂಜೆಯವರೆಗು ನಿಂತು, ಕೊನೆಗೆ ಆ ಪುಸ್ತಕವನ್ನೇ ಕೊಡದೆ ತಟ್ಟನೆ ಹೊರಟು ಹೋದರು, ಆ ಘಟನೆಯಿಂದಾದ ನೋವನ್ನು ಬಹಳಕಾಲ ಅನುಭವಿಸಿದೇನೆ. ಇಂದು ಆ ಪರಿಸ್ಥಿತಿ ಯಾರಿಗೂ ಇಲ್ಲ, ನನಗೂ. ಆದರೆ ಜಗತ್ತಿನಲ್ಲಿನ ಎಲ್ಲ ವಿಷಯಗಳ ಬಗೆಗೆ ದೊರೆಯುವ ಡಾಟಾಗಳು ಹೆಚ್ಚಾಗುತ್ತಾ ಹೋದ ಹಾಗೆ, ನಾವು ಏಕೆ ಬಳಕೆ ಮಾಡುತ್ತೇವೆ ? ಮಾಡುತ್ತಿದ್ದೇವೆ ? ಯಾಕೆ ಮುಖ್ಯವದು ? ಕೇವಲ ಡಾಟಾವನ್ನು ಕೊಡುವುದೇ ಮುಖ್ಯ ಕೆಲಸವಾ ? ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳದೆ ಹೋದರೆ ಸಮಸ್ಯೆ ಆಗುತ್ತದೆ. ಒಂದು ಕಾಲದಲ್ಲಿ ಮಾಹಿತಿಯೇ ಮುಖ್ಯವಾಗಿತ್ತು, ಅ ನಂತರದ ಕಾಲದಲ್ಲಿ ಸಂಗ್ರಹಿಸಿದ ಆ ಮಾಹಿತಿಗಳನ್ನು ಬಳಸಿಕೊಂಡು ನಿರ್ಮಿಸುವ ‘ನಿರೂಪಣೆ’ ಮತ್ತು ಅದನ್ನು ಒಡೆಯುವ ‘ಪ್ರತಿ-ನಿರೂಪಣೆ’ ಗಳು ಮುಖ್ಯವಾಗಿತ್ತು, ಇಂದು ಹಲವಾರು ವಿಭಿನ್ನ ರೀತಿಯ ‘ನಿರೂಪಣೆ’ಗಳನ್ನು ಕಾಣುತ್ತಿದ್ದೇವೆ. ಅವುಗಳನ್ನು ಬಳಕೆ ಮಾಡಿಕೊಂಡು ಹೊಸದೊಂದು ಹಾದಿಯನ್ನು ಅವುಗಳೊಡಲಿನಿಂದಲೇ ಕಾಣಿಸುವುದು ಹೇಗೆ ? ಎನ್ನುವುದನ್ನು ಗಂಭೀರವಾಗಿ ಯೋಚಿಸಬೇಕಿದೆ. ಇದಕ್ಕೆ ಡಿಜಿಟಲ್ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿದರೆ ಸಾಕಾಗಿದೆ. ಉಳಿದಂತೆ ಅಂತರ ಕಾಯ್ದುಕೊಳ್ಳಬೇಕಿದೆ ಅನಿಸಿದೆ, ಬೇರಾರಿಗನಿಸದೆ ಇದ್ದರೂ ಇತ್ತೀಚಿನ ಐದಾರು ತಿಂಗಳುಗಳಿಂದ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುವುದು ಒಳ್ಳೆಯದು ಎಂದು ನನಗೇ ಅನಿಸಿದೆ.

೮. ಸಮಾಜದಲ್ಲಿ ಬದಲಾವಣೆ ತರಲು ಸಾಹಿತ್ಯ ಯಾವ ರೀತಿಯಲ್ಲಿ ಸಹಾಯಕವಾಗಬಹುದು?

ಸಾಹಿತ್ಯ ಎನ್ನುವುದು ಒಬ್ಬ ವ್ಯಕ್ತಿಯಿಂದ ರಚನೆಯಾದರೂ, ಹಾಗೆ ರಚಿಸಿದವನ ಹಿಂದೆ ಮನೆ, ಕುಟುಂಬ, ಸಮಾಜ, ಸಮುದಾಯ ಬಳುವಳಿಯಾಗಿ ಕೊಟ್ಟ ಅಥವಾ ವಿಧಿಸಿದ ಭಾಷೆ, ಸಂಸ್ಕೃತಿಗಳು ಒಳತಳದಲ್ಲಿದ್ದು ಬದುಕು-ಬರಹಗಳನ್ನು ಲೀಡ್ ಮಾಡುತ್ತವೆ. ಈ ಒಬ್ಬ ಮನುಷ್ಯನಿಂದ ಉದ್ಭವಿಸಿದ ಲೀಡಿಂಗ್ ಸ್ಪಾರ್ಕ್ ಮತ್ತೊಬ್ಬ ಮನುಷ್ಯನಿಗೆ ತಾಕಿ ಬೆಳಕೋ, ಬೆಂಕಿಯೋ, ಜ್ವಾಲೆಯೋ ಏನೋ ಒಂದು ಆಗಬೇಕಿದೆ. ಆದರೆ ಇಂದು ಅಂತಹವರು ಇದ್ದಾರಾ ? ಇಲ್ಲವೆಂದರೆ ಏಕಿಲ್ಲ ? ಎಂಬ ಪ್ರಶ್ನೆಗಳು ಮುಖ್ಯವಾಗುತ್ತವೆ. ಪ್ರಾಚೀನ ಕಾವ್ಯೋದ್ಭವ ಸಂದರ್ಭದಿಂದ ಇಂದಿನ ಸಾಹಿತ್ಯೋದ್ಭವ ಸಂದರ್ಭದವರೆವಿಗೂ ಗಮನಿಸಿ, ಒಂದು ದೊಡ್ಡ ವಿಪತ್ತಿತ್ತು, ಅದು ಯಾವುದೆಂಬ ಸ್ಪಷ್ಟತೆ ಮತ್ತು ನಾವು ಯಾವ ಕಡೆ ಇದ್ದೇವೆಂಬ ಚಳವಳಿಯೊಡಲಿನಿಂದ ಉದ್ಭವಿಸಿದ ಸ್ಪಷ್ಟತೆ, ನಿಖರತೆ ಇತ್ತು. ಇಂದು ಅದಾವುದೂ ಇಲ್ಲದ ಕಾರಣದಿಂದಲೇ ಸಾಹಿತ್ಯದ ಶಕ್ತಿಯನ್ನು ಕುರಿತು ಮಾತನಾಡುವುದು ಕಷ್ಟವಾಗಿದೆಯೇನೋ ಅನಿಸಿದೆ. ಅಥವಾ 1991 ರ ಹೊಸ ಆರ್ಥಿಕ ನೀತಿಯ ನಂತರದಲ್ಲಿ ಸಮಾಜ, ಮನುಷ್ಯನ ಮನಃಸ್ಥಿತಿಗಳು ಬದಲಾಗಿವೆ. ಮನುಜಕುಲದ ಸಂಬಂಧಗಳಲ್ಲಿ ಆಗಿರುವ ಘಾತಪಲ್ಲಟವನ್ನು ಗಮನಿಸಬೇಕಿದೆ. ಪ್ರತಿಯೊಬ್ಬರೂ ವಿಭಿನ್ನ, ವಿಶಿಷ್ಟ ಮತ್ತು ವಿಚಿತ್ರವಾಗಿದ್ದೇವೆ – ಆದರೆ ನಮ್ಮನ್ನೆಲ್ಲ ಬಂಧಿಸಿದೆ ಎನ್ನುವ ಯಾವುದೋ ಒಂದು ಎಳೆಯ ಗುರುತು ಮಿಸ್ಸಾಗಿದೆ.

ಆ ಎಳೆ ಕಂಡೊಡನೆ ಬದಲಾವಣೆ ತನ್ನಿಂದ ತಾನೆ ಆಗುತ್ತದೆ. ಒಬ್ಬನನ್ನು ಮುಂದಾಳುವನ್ನಾಗಿ ಗುರುತಿಸಿಕೊಂಡು ನಂಬುವುದೂ ಕಷ್ಟವಾಗುತ್ತಿದೆ – ಅಳಿವು ಉಳಿವುಗಳ ಜೀವನ್ಮರಣದ ಪ್ರಶ್ನೆಯಾಗಿ ‘ಅಧಿನಾಯಕತ್ವ’ ದ ವಿಷಯ ಬಂದಾಗ ಯಾರೂ ನಮ್ಮವರಲ್ಲ ಎನಿಸಿಬಿಡುತ್ತದೆ. ಮಹಾಕವಿ ಕುವೆಂಪು ಹೇಳುತ್ತಾರಲ್ಲ – “ಕತ್ತಿ ಪರದೇಸಿಯಾದರೆ ಮಾತ್ರ ನೋವೆ ?/ ನಮ್ಮವರೆ ಹದಹಾಕಿ ತಿವಿದರದು ಹೂವೆ ?” ಎಂಬುದು ಇಂದು ಹೆಜ್ಜೆ ಹೆಜ್ಜೆಗೂ ಅರಿವಿಗೆ ಬರುತ್ತಿರುವ ಕಾಲ ಎಂಬುದನ್ನು ಮುಂದಿಟ್ಟುಕೊಂಡು – ಸಾಹಿತ್ಯ, ಸಮಾಜ, ವ್ಯಕ್ತಿ-ಶಕ್ತಿ, ಶಕ್ತಿಸಂಚಯ, ಶಕ್ತಿಪಾತ ಇವೆಲ್ಲವುಗಳನ್ನು ಮಾತನಾಡಬೇಕಿದೆ. ಇದು ಸ್ವಲ್ಪ ಮಟ್ಟದಲ್ಲಿ ಸಮಾಜ-ಮನುಷ್ಯ ಸಂಬಂಧಗಳನ್ನು ಗಮನಿಸುವಂತೆ ಮಾಡುತ್ತದೆ, ಇದಕ್ಕೆ ಅಪಾರವಾದ ಸಮಯ ಮತ್ತು ಶ್ರಮಗಳ ಅವಶ್ಯಕತೆಯಿದೆ. ಅವಕಾಶವಾದವೇ ಮುಖ್ಯವಾದ ಕಾಲಮಾನದಲ್ಲಿ ಉಳಿದ ಯಾವುದು ನಮ್ಮನ್ನು ಲೀಡ್ ಮಾಡುತ್ತಿದೆ ? ಏಕೆ ? ಎಂಬುದನ್ನು ಮುನ್ನೆಲೆಗೆ ತರಬೇಕಿದೆ. ಈ ಮೂಲಕವಾಗಿ ತತ್ವ, ತಾತ್ತ್ವಿಕ ಭಿನ್ನತೆ ಇವುಗಳನ್ನು ಗಮನಿಸಬೇಕಿದೆ. ಅತಿಯಾದ ಮೌನ, ಅತಿಯಾದ ಮಾತು ಹೇಗೆ ಅಪಾಯಕಾರಿಯೋ, ಹಾಗೆಯೇ ಮೌನ-ಮಾತುಗಳನ್ನು ಚಾಣಾಕ್ಷ್ಯತೆಯಿಂದ ಬಳಕೆ ಮಾಡುವುದೂ ಅಪಾಯಕಾರಿಯಾದದ್ದು. ಸಾಹಿತ್ಯ ವಿಮರ್ಶೆ ಇದನ್ನು ಗಮನಿಸುತ್ತಲೇ ಬರುತ್ತಿದೆ. ಜಾಣತನಗಳು ಎಲ್ಲ ಕಾಲಕ್ಕೂ ನಿಲ್ಲುವುದಿಲ್ಲವೆಂದು ಅರಿವಾದ ದಿನ ಮನುಷ್ಯ ಸಂಬಂಧ, ಸಾಹಿತ್ಯ, ಲಲಿತ ಕಲೆಗಳು ಮುನ್ನೆಲೆಗೆ ಬರುತ್ತವೆ ಅನಿಸಿಬಿಟ್ಟಿದೆ.

೯. ಭಾರತದ ಭವಿಷ್ಯದ ಸಾಹಿತ್ಯ ರೂಪಿಸುವಲ್ಲಿ ಯುವ ಲೇಖಕರ ಪಾತ್ರವೇನು?

ಸಾಧ್ಯವಾದಷ್ಟು ನಮಗೆ ನಾವು ಪ್ರಾಮಾಣಿಕವಾಗಿ ಬದುಕಿದರೆ ಸಾಕು ಅದಕ್ಕಿಂತ ದೊಡ್ಡ ಸಾಹಿತ್ಯವನ್ನು ಇಂದು ಸೃಷ್ಟಿಸಬೇಕಿಲ್ಲ ಅನಿಸಿದೆ. ಸಾಹಿತ್ಯವನ್ನು ರೂಪಿಸುವುದು ಬದುಕಿನ ಆಧಾರದ ಮೇಲೆ, ಬದುಕನ್ನು ಹೇಗೆ ತೆಗೆದುಕೊಂಡಿದ್ದೇವೆಂಬುದರ ಆಧಾರದ ಮೇಲೆಯೇ ಮುಖ್ಯವಾಗಿ ಇರುವುದರಿಂದ, ನಾವು ಎಲ್ಲಿ ? ಏಕೆ ? ಹೇಗೆ ? ಯಾವ ಪಟ್ಟಿಯಲ್ಲಿ ಸೇರುತ್ತೇವೆಂಬ ಸ್ಪಷ್ಟತೆ ಇದ್ದಾಗ ಬದುಕು, ಸಾಹಿತ್ಯ ಎಲ್ಲಕ್ಕೂ ಒಂದು ಬೆಲೆ ಬರುತ್ತದೆ ಅನಿಸಿದೆ. ಹಾಗಿದ್ದಾಗ ನಿಜವಾಗಿ ಏನಾದರೊಂದು ಮಾಡುತ್ತಾರೆ, ಮಾಡಬಹುದು ಅನಿಸಿದೆ. ಭಾರತದ ಸದ್ಯದ ಸಂದರ್ಭದಲ್ಲಿನ ರಾಜಕೀಯ ಅಭದ್ರತೆ, ಸಾಮಾಜಿಕ ವಿಚ್ಚಿದ್ರತೆಗಳು, ಸ್ವ-ಕೇಂದ್ರೀಕರಣ, ಅಧಿನಾಯಕತ್ವದ ಹೆಸರಲ್ಲಿ ಪ್ರಜೆಗಳನ್ನು ಒಡೆಯುವುದು, ಭಾಷೆ, ನೆಲ, ಜಲಗಳ ಹೆಸರಿನಲ್ಲಿ ನಾಗರೀಕರ ನೆಮ್ಮದಿಯನ್ನು ನಾಶಪಡಿಸಿ ಸಂಭ್ರಮದ ಭ್ರಮೆಯನ್ನು ತರುವುದು, ಇದರ ಮೂಲಕ ಹುಟ್ಟುತ್ತಿರುವ ಭ್ರಮೆಯನ್ನು ನರೆಟಿವ್ ಎಂದೆಲ್ಲ ಗಮನಿಸುವ ಸಂದರ್ಭ ವಿಚಿತ್ರವಾಗಿದೆ, ಬಡ, ಬಡಮಧ್ಯಮ ವರ್ಗಗಳ ಮುಂದಿನ ಬದುಕಿನ ಬಗೆಗೇ ಭಯತರಿಸುತ್ತಿದೆ. ಶ್ರೀಮಂತರು, ಚಾಣಾಕ್ಷ್ಯರು ಯಾವ ಕಾಲದಲ್ಲೂ ಅಪಾಯ ಕಂಡಿದ್ದಿಲ್ಲ, ಅವರು ಬದುಕಿ ಬಿಡುತ್ತಾರೆ. ಉಳಿದವರ ಪಾಡೇನು ? ಬದುಕಿ ಸಾಯಬೇಕು ಇಲ್ಲವೆಂದರೆ ಸತ್ತು ಬದುಕಬೇಕು. ಸಾಹಿತ್ಯವನ್ನು ನಂಬಿದ ಬಡ, ಬಡಮಧ್ಯಮ ವರ್ಗಗಳಲ್ಲಿ ನಂಬಿಕೆ ಸತ್ತು ಬದುಕುವುದರಲ್ಲಿದೆ ಅನಿಸಿದಾಗ ಸೃಜನಶೀಲ ಸಾಹಿತ್ಯ ಅದನ್ನು ಹೇಗೆ ಹಿಡಿದಿಡುತ್ತದೆ ಎಂಬುದನ್ನು ನೋಡಬೇಕಿದೆ.

೧೦. ಈ ಪ್ರಶಸ್ತಿ ನಿಮ್ಮ ಜೀವನದ ಮೇಲೆ ಅಥವಾ ಬರವಣಿಗೆಯ ಮೇಲೆ ಯಾವ ರೀತಿಯಲ್ಲಿ ಪ್ರಭಾವ ಬೀರಿದೆ?

ನನಗೆ ಬಂದಿರುವ ಈ ಪ್ರಶಸ್ತಿಯು ಆಶ್ಚರ್ಯ, ಸಂತೋಷ ಮತ್ತು ದಿಗ್ಭ್ರಮೆಗಳನ್ನು ಉಂಟುಮಾಡಿವೆ. ನನ್ನ ವಿದ್ಯಾಗುರುವೃಂದ, ಕುಟುಂಬದವರು, ಆತ್ಮೀಯರು, ಸ್ನೇಹಿತರು ಸಂತಸವನ್ನು ಪಟ್ಟಿದ್ದಾರೆ, ಅವರ ಸಂತಸವನ್ನು ಕಂಡು ನನಗೂ ಸಂತಸವಾಗಿದೆ. ನನ್ನ ತಂದೆಯವರು ಮತ್ತು ಗುರುಗಳಾದ ಜಿ. ಎಚ್. ನಾಯಕರು ಇಂದು ನನ್ನೊಡನೆ ಇಲ್ಲವೆಂಬ ನೋವಿದೆ.

ಈಗ ಮಾಡುತ್ತಿರುವಂತೆ ನನ್ನನ್ನು ಕಾಡಿರುವ, ಕಾಡುತ್ತಿರುವ ಕೃತಿಗಳನ್ನು ಕುರಿತು ಬರೆಯಬೇಕಿದೆ. ಹಾಗೆ ಕಾಡಿರುವ ಕೃತಿಗಳ ಒಂದು ಪಟ್ಟಿಯೇ ನನ್ನಲ್ಲಿದೆ. ನನಗೆ ಅನಿಸಿದ್ದನ್ನು ಇದುವರೆವಿಗೂ ಹೇಗೆ ಬರೆದೆನೋ ಮುಂದೆಯೂ ಹಾಗೆ ಬರೆಯುತ್ತೇನೆ. ಪ್ರಶಸ್ತಿ ಬಂದ ನಂತರ ಬರವಣಿಗೆಯನ್ನು ಮತ್ತೂ ಚೆನ್ನಾಗಿ ಮಾಡುತ್ತೇನೆನ್ನುವುದು ತಪ್ಪೆನಿಸುತ್ತದೆ. ಪ್ರಶಸ್ತಿ ಘೋಷಣೆಯಾದೊಡನೆಯೇ ನನ್ನ ವೈಯಕ್ತಿಕತೆಯೇ ನಾಶವಾದ ಅನುಭವವಾಗಿದೆ. ಇದನ್ನು ಎಂದೂ ಅನುಭವಿಸಿರಲಿಲ್ಲ, ಇದೊಂದು ದೊಡ್ಡ ಆಘಾತ. ಕುಟುಂಬ, ಸ್ನೇಹಿತರು, ಆತ್ಮೀಯರು ಎಂಬ ಪುಟ್ಟ ಸರ್ಕಲ್ ಲಿ ಬದುಕುತ್ತಿರುವ ನನಗೆ, ಆ ಎಲ್ಲರಿಗಾಗಿ ಬಳಕೆಯಾಗುತ್ತಿದ್ದ ನನ್ನ ಸಮಯವೇ ಇಂದು ಇಲ್ಲವೇನೋ ಅನಿಸಿದೆ. ಬಹಳಷ್ಟು ಜನರ ಪ್ರೀತಿ, ಗೌರವ, ಅಭಿಮಾನಗಳ ಪೂರಕವಾದ ಮಾತುಗಳ ಧಾರಾಕಾರ ವರ್ಷ ನಿಂತ ಮೇಲೆ ಮೂಲಸ್ಥಿತಿಗೆ ಸಾಧ್ಯವಾದಷ್ಟು ಬೇಗ ಮರಳಬೇಕಿದೆ.

೧೧. ನೀವು ಪ್ರಸ್ತುತ ಯಾವ ಯೋಜನೆ ಅಥವಾ ಪುಸ್ತಕದ ಮೇಲೆ ಕೆಲಸ ಮಾಡುತ್ತಿದ್ದೀರಿ?

ಸದ್ಯದಲ್ಲಿ ಎರಡು ಕೃತಿಗಳಿಗಾಗಿ ಓದು, ಬರಹಗಳ ಕೆಲಸ ನಡೆಸುತ್ತಿದ್ದೆ, ಒಂದು ಪಂಪನ ಕೃತಿಯೊಂದನ್ನು ಕುರಿತದ್ದು, ಬಹಳ ವರ್ಷಗಳಿಂದ ಮಾಡಬೇಕೆಂದುಕೊಂಡಿದ್ದ ಕೆಲಸವದು. ಮತ್ತೊಂದು ಜನ್ನನ ಕಾವ್ಯವನ್ನು ಕುರಿತದ್ದು. ಈ ದಿಗ್ಭ್ರಮೆಯಲ್ಲಿ ನನ್ನಂತೆ ಅವೂ ನಿಂತಲ್ಲೆ ನಿಂತಿವೆ. ಅದಲ್ಲದೆ ಮಹಾದೇವಿಯಕ್ಕಳ ವಚನಗಳ ಕುರಿತ ನಾಲಕ್ಕು ಲೇಖನಗಳು ಅರ್ಧಕ್ಕೆ ನಿಂತಿವೆ, ಸಾಧ್ಯವಾದಷ್ಟು ಬೇಗ ಇವುಗಳನ್ನು ಪೂರ್ಣಮಾಡಬೇಕಿದೆ.

೧೨. ಯುವ ಬರಹಗಾರರಿಗೆ, ವಿಶೇಷವಾಗಿ ಪ್ರಾದೇಶಿಕ ಭಾಷೆಯಲ್ಲಿ ಬರೆಯುವವರಿಗೆ ನೀವು ಏನು ಸಲಹೆ ನೀಡುತ್ತೀರಿ?

ಪ್ರಾದೇಶಿಕ ಭಾಷೆಯನ್ನು ಬಳಸಿಕೊಂಡು ಕೃತಿರಚಿಸಿ ವಿಶ್ವಾತ್ಮಕವಾಗುವುದು ಅದರೊಳಗಿನ ಸಂವೇದನೆ ಮತ್ತು ಕಲಾತ್ಮಕತೆಗಳ ಕಡೆಯಿಂದ ಮಾತ್ರ. ನಮಗೆ ಗೊತ್ತೆಂದು, ಬದುಕಿ ಬಲ್ಲೆವೆಂದು ಪ್ರಾದೇಶಿಕ ಭಾಷೆಯನ್ನು ಬಳಕೆ ಮಾಡಿ ಕೃತಿ ರಚಿಸಿದರೆ, ಪ್ರಾದೇಶಿಕವಾಗಿ ದೂರ ಇರುವವರ ಪಾಡು ಏನಾಗಬಹುದೆಂದು ಯೋಚಿಸುವುದು ಮುಖ್ಯ. ಬರಹಗಾರನ ಭಾಷೆ ಮತ್ತು ಓದುಗರ ಭಾಷೆ ಇವೆರಡರ ನಡುವೆ ಸುವರ್ಣಮಧ್ಯಮಮಾರ್ಗವಾಗಿ ಒಂದು ಭಾಷೆಯನ್ನು ಹುಟ್ಟಿಸಿಕೊಳ್ಳುವುದು ಮುಖ್ಯವೆನಿಸುತ್ತದೆ. ಉತ್ತರ ಕರ್ನಾಟಕದಲ್ಲಿದ್ದ ವಚನಕಾರರು ಕರ್ನಾಟಕದ ಎಲ್ಲ ಭಾಗಗಳಲ್ಲಿಯೂ ಮಾನ್ಯರು, ಮುಖ್ಯರು, ಪ್ರಾತಃಸ್ಮರಣೀಯರು ಆಗಿರುವುದು ತಮ್ಮ ಅನುಭವಗಳ ಸಶಕ್ತ ಹಸ್ತಾಂತರಕ್ಕೆ ತಾವೇ ಹುಟ್ಟಿಸಿಕೊಂಡು ಬಳಕೆ ಮಾಡಿದ ಸುವರ್ಣಮಧ್ಯಮಮಾರ್ಗದ ಭಾಷೆಯಿಂದ ತಾನೆ ? ಅಂತಹದ್ದೊಂದು ಸುವರ್ಣಮಧ್ಯಮಮಾರ್ಗ ಹುಡುಕಾಟ ಅಗತ್ಯವಿದೆ ಅನಿಸುತ್ತದೆ. ಹಾಗೆ ನೋಡಿದರೆ ನಮ್ಮ ಈ ಕಾಲದ ರಾಜಕೀಯ, ಧರ್ಮ ಮತ್ತು ಸಮಾಜಕ್ಕೆ ಸುವರ್ಣಮಧ್ಯಮಮಾರ್ಗದ ಭಾಷೆಯ ಅಗತ್ಯವಿದೆ ಅನಿಸಿದೆ. ಸಂಪೂರ್ಣವಾಗಿ ವಾಚ್ಯವೂ ಆಗದ, ಸಂಪೂರ್ಣ ರೂಪಕಾನ್ವಿತವಾದ ಧ್ವನಿಪೂರ್ಣವೂ ಆಗದ ಮಧ್ಯದ ಬಿಂದುವನ್ನು ಮುಟ್ಟಬೇಕಿದೆ ಅನಿಸುತ್ತಿದೆ. ವಾಚ್ಯವಾದಷ್ಟು ಸಡಿಲವಾಗಿ ಸ್ಥಗಿತವಾಗುವ, ಧ್ವನಿಪೂರ್ಣವಾದರೆ ಸಂವಹನವೇ ಸಾಧ್ಯವಾಗದ ಮಟ್ಟದಲ್ಲಿ ಇಂದು ನಮ್ಮ ಸೂಕ್ಷ್ಮತೆಯಿದೆ. ಭಾಷೆ, ಸುವರ್ಣಮಧ್ಯಮಮಾರ್ಗ, ಸಂವಹನ, ಪ್ರಾದೇಶಿಕತೆ, ವಿಶ್ವಾತ್ಮಕತೆ, ಕಲಾತ್ಮಕತೆ ಈ ವಿಷಯಗಳ ಬಗೆಗೆ ಮಾತನಾಡುವುದು ಬರೆಯುವುದು ಬಹಳ ಸುಲಭ, ಆದರೆ ಸೃಜನಶೀಲ ಬರಹಗಾರರು ಇದಕ್ಕಾಗಿ ಎದುರಿಸ ಬೇಕಿರುವ ಒತ್ತಡವನ್ನು ಕಲ್ಪಿಸಿಕೊಳ್ಳುವುದಕ್ಕೂ ನನಗೆ ಭಯವಾಗುತ್ತದೆ.

೧೩. ಕೊನೆಗೆ, ನಿಮ್ಮ ಓದುಗರಿಗೆ ನೀವು ಯಾವ ಸಂದೇಶವನ್ನು ನೀಡಲು ಇಚ್ಛಿಸುತ್ತೀರಿ?

ಸಂದೇಶ ಕೊಡುವುದಕ್ಕೆ ನನ್ನಲ್ಲೇನಿದೆ. ಎಲ್ಲರ ಹಾಗೆ ನಾನೂ ಒಬ್ಬ ಓದುಗ, ಉಳಿದವರಂತೆ ನಾನೂ ಓದು-ಬರಹಗಳನ್ನು ಮಾಡುತ್ತಿದ್ದೇನೆ. ವಿಮರ್ಶೆ ಎಂದೂ ಪ್ರವಾದಿತ್ವವನ್ನು ಮುಟ್ಟುವುದಿಲ್ಲ. ಹಾಗೆ ವಿಮರ್ಶೆ ಪ್ರವಾದಿತ್ವವನ್ನು ಮುಟ್ಟಿದೊಡನೆ ವಿಮರ್ಶಕ ಜಡವಾಗುತ್ತಾನೆ, ವಿಮರ್ಶೆ ನಿಸ್ತೇಜವಾಗಿ ಬಿಡುತ್ತದೆ. ಈ ಎಚ್ಚರ ನನ್ನನ್ನು ಕಾಡುತ್ತಲೇ ಇರುತ್ತದೆ. “ಅವರವರ ಹಾದಿಯನ್ನು ಅವರವರೇ ಹುಡುಕಿ ಹೊರಟು ಬಿಡಬೇಕು” ಎಂದ ಬುದ್ಧ ಗುರುವಿನ ಮಾತೊಂದು ಸಾಕು, ಒಂದರ್ಥದಲ್ಲಿ ಸ್ವೋಪಜ್ಞತೆ, ವ್ಯಕ್ತಿಪ್ರತಿಭೆಗಳನ್ನು ಗಳಿಸಿಕೊಳ್ಳಲು, ಕಾಯ್ದುಕೊಳ್ಳಲು ಇದಕ್ಕಿಂತ ದೊಡ್ಡ ಸಂದೇಶ ಮತ್ತೊಂದಿಲ್ಲ ಅನಿಸಿದೆ.

ಈ ಸಮಯದಲ್ಲಿ ಕಾದು, ಯಾವುದೇ ಬೇಸರವನ್ನು ಪಟ್ಟುಕೊಳ್ಳದೆ, ನನ್ನ ಸಂದರ್ಶನವನ್ನು ನಡೆಸಿದ, ಪಂಜು ಪತ್ರಿಕೆಯ ಸಂಪಾದಕರು ಹಿರಿಯ ಮಿತ್ರರೂ ಆದ ಪ್ರಿಯ ಡಾ. ನಟರಾಜು ಅವರಿಗೆ ನಮಸ್ಕಾರಗಳು


ಪಂಜು ಬಳಗದ ಟಿಪ್ಪಣಿ:
೨೦೨೫ ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪ್ರಶಸ್ತಿಗೆ ಭಾಜನರಾಗಿರುವ ಶ್ರೀ ದಿಲೀಪ್ ಕುಮಾರ್ ಆರ್ ಅವರು ತಮ್ಮ ಒತ್ತಡದ ಕೆಲಸಗಳ ನಡುವೆಯೂ ಒಂದು ಸುದೀರ್ಘವಾದ ಸಂದರ್ಶನವನ್ನು ಪಂಜುವಿಗಾಗಿಯೇ ನೀಡಿದ್ದಾರೆ. ಆ ಕಾರಣಕ್ಕೆ ಅವರಿಗೆ ಅನಂತ ವಂದನೆಗಳು. ದಿಲೀಪ್ ಕುಮಾರ್ ಅವರಿಂದ ಕನ್ನಡ ಸಾರಸ್ವತ ಲೋಕಕ್ಕೆ ಇನ್ನೂ‌ ಹೆಚ್ಚಿನ ಕೃತಿಗಳು ಸಿಗಲಿ ಎಂದು ಹಾರೈಸುತ್ತಾ ಪಂಜು ಬಳಗದ ಪರವಾಗಿ ಅವರಿಗೆ ಮತ್ತೊಮ್ಮೆ ಅಭಿನಂದನೆಗಳು….


ಕನ್ನಡದ ಬರಹಗಳನ್ನು ಹಂಚಿ ಹರಡಿ
5 3 votes
Article Rating
Subscribe
Notify of
guest

7 Comments
Oldest
Newest Most Voted
Inline Feedbacks
View all comments
ಎಂ.ಜವರಾಜ್
ಎಂ.ಜವರಾಜ್
21 days ago

ಸಂಪಾದಕರ ಪ್ರಶ್ನೆಗಳು ಮತ್ತು ಅವಕ್ಕೆ ನೀಡಿರುವ ಉತ್ತರ ಮಾರ್ಮಿಕ.

ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
21 days ago

ಉತ್ತಮ ಹಾಗೂ‌ ಸ್ಪೂರ್ತಿ ನೀಡುವ ಸಂದರ್ಶನ

ವಿದ್ಯಾ ಭರತನಹಳ್ಳಿ
ವಿದ್ಯಾ ಭರತನಹಳ್ಳಿ
21 days ago

ಅತ್ಯುತ್ತಮ ಸಂದರ್ಶನ. ಈ ಕಾಲದ ಅತ್ಯಂತ ಗಟ್ಟಿ ವಿಮರ್ಶಕರು ದಿಲೀಪ್. ಇಷ್ಟು ಸಣ್ಣ ವಯಸ್ಸಿಗೇ ಅವರ ಓದು, ಪಾಂಡಿತ್ಯ, ಪ್ರತಿಪಾದಿಸುವ ರೀತಿ ಬೆರಗು ಮೂಡಿಸುವಂಥದ್ದು. ಅಭಿನಂದನೆಗಳು

Lingaraju K
Lingaraju K
21 days ago

Nice one

ಕೊಟ್ರೇಶ್ T A M
ಕೊಟ್ರೇಶ್ T A M
19 days ago

ಬಹಳ ಒಳ್ಳೆಯ ಸಂದರ್ಶನ

MANJURAJ H N
MANJURAJ H N
19 days ago

ಪ್ರಶಸ್ತಿ ಪುರಸ್ಕೃತ ದಿಲೀಪ್‌ ಕುಮಾರ್‌ ಅವರ ಮೊದಲ ಸಂದರ್ಶನ ಸೊಗಸಾಗಿ ಮೂಡಿ ಬಂದಿದೆ. ಅವರ ಬಗ್ಗೆ ಇದ್ದ ಕುತೂಹಲ, ಅವರ ಓದಿನ ಕ್ರಮ, ಸಾಹಿತ್ಯವನ್ನೂ ಜಗತ್ತನ್ನೂ ಅವರು ನೋಡುತ್ತಿರುವ ರೀತಿ ಗೊತ್ತಾದವು. ಸಂಪಾದಕರಿಗೆ ಮತ್ತು ಪಂಜುವಿಗೆ ಧನ್ಯವಾದಗಳು.

ಯಾಕೋ ಪದೇ ಪದೇ ಮಿಸ್‌ ಆಗಿದೆ, ಆಗುತ್ತಿದೆ ಎಂಬ ನೋವು ಅವರನ್ನು ಕಾಡುತ್ತಿದೆ; ಇದೇ ಅಲ್ಲವೇ ಹುಡುಕಾಟ; ಶೋಧನೆ, ಸಂಶೋಧನೆ, ವಿಮರ್ಶಾ ಬರೆಹ! (ನನ್ನ ಅನಿಸಿಕೆ: ದಿಲೀಪರು ನಾಯಕರ ಪ್ರಭಾವದಿಂದ ಸ್ವಲ್ಪ ಈಚೆ ಬರುವುದು ಒಳ್ಳೆಯದು.)

Laxmibai Patil
Laxmibai Patil
17 days ago

ಸಂದರ್ಶನ ಮುಕ್ತವಾಗಿದೆ.,

7
0
Would love your thoughts, please comment.x
()
x