ಅಂಕಲ್ ಗಣಪತಿ ಇಡ್ತೀವಿ…….: ನಾಗಸಿಂಹ ಜಿ ರಾವ್

ಪ್ರತಿವರ್ಷ ಆಗಸ್ಟ್ ಸೆಪ್ಟೆಂಬರ್ ಬಂತು ಅಂದ್ರೆ ಕೆಲವು ಮಕ್ಕಳ ಗುಂಪು ಗಣಪತಿ ಇಡೋಕೆ ಪ್ಲಾನ್ ಮಾಡುತ್ತಾರೆ, ನಾವು ಅಷ್ಟೇ 1979 ರಲ್ಲಿ ಏಳನೇ ಕ್ಲಾಸ್ ನಲ್ಲಿ ಓದುತ್ತಿದ್ದಾಗ ನಾನು, ಅಶೋಕ, ಗಣೇಶ, ಮಿಲಟರಿ ಮಂಜ, ನನ್ನ ತಮ್ಮ ಪ್ರಸಾದಿ ಗಣಪತಿ ಇಡೋಕೆ ನಿರ್ಧಾರ ಮಾಡಿ ಬಿಟ್ಟೆವು. ಡಬ್ಬಗಳ ಮುಚ್ಚಳದ ಮೇಲೆ ಅಡ್ಡ ವಾಗಿ ಸಂದಿ ಮಾಡಿ ಹಣ ಸಂಗ್ರಹ ಮಾಡೋಕೆ ಶುರು, ಯಾವುದೇ ಪ್ಲಾನಿಂಗ್ ಇಲ್ಲ, ಎಷ್ಟು ಬಜೆಟ್ ಬೇಕು ಅನ್ನೋ ಅಂದಾಜಿಲ್ಲ, ಎದುರಾಗಬಹುದಾದ ಅಪಾಯಗಳ ಅರಿವಿಲ್ಲದೆ ಕೆಲಸ ಶುರು ಮಾಡಿಬಿಟ್ಟೆವು, ನಮ್ಮೆಲ್ಲರ ಗುರಿ ಒಂದೇ ಪೆಂಡಾಲ್ ಹಾಕಿ ಮೂರೂ ದಿನ ಗಣಪತಿ ಇಡಬೇಕು ಅಷ್ಟೇ !! ಶಾಲೆ ಮುಗಿದ ಮೇಲೆ, ಶನಿವಾರ ಮದ್ಯಾನ, ಭಾನುವಾರ ಹಾಸನದ ಬೀದಿ ಬೀದಿ ಅಲೆಯೋದು… ಅಂಕಲ್ ಗಣಪತಿ ಇಡ್ತೀವಿ……. ಅಂಕಲ್ ಗಣಪತಿ ಇಡ್ತೀವಿ……. ಅಂತ ಗೋಲಕ ಅಲ್ಲಾಡಿಸೊದು ಕೆಲವರು ಹತ್ತು ಪೈಸೆ ಕೊಡೋರು, ಕೆಲವರು ಒಂದು ರೂಪಾಯಿ. ಜಾಸ್ತಿ ಜನ ಬೈದು ಕಳಿಸೋರು ಜೊತೆಗೆ ಓದ್ರೋ ಇಂತಾವಿಕೆಲ್ಲ ಬರಬೇಡಿ ಅನ್ನೋ ಬುದ್ದಿ ಹೇಳ್ತಿದ್ರು.. ನಮ್ಮ ಬೀದಿಗೆ ಬರಬೇಡಿ ಅಂತ ಬೇರೆ ಗುಂಪಿನ ಮಕ್ಕಳ ಜೊತೆ ಜಗಳ, ಹೊಡೆದಾಟ.. ಸಂಜೆ ಒಂದು ಜಾಗದಲ್ಲಿ ಕುಳಿತು ಹಣ ಎಣಿಸಿದಾಗ ನಾಲ್ಕು ಗೋಲಕಗಳಿಂದ ಕೇವಲ ಐದು ಅಥವಾ ಹತ್ತು ರೂಪಾಯಿ ಆಗಿರೋದು, , ಸಂಗ್ರಹವಾದ ಹಣವನ್ನ ಮಂಜನ ಅಣ್ಣನ ಹತ್ರ ಕೊಡ್ತಿದ್ವಿ. ಹಣ ಕೆಳಕೋ ಹೋದಾಗ ಎಲ್ಲಿ ಗಣಪತಿ ಇಡ್ತೀರಾ ? ಅನ್ನೋ ಪ್ರಶ್ನೆ ಎದುರಾಗೋದು.. ಎಲ್ಲರೂ ಕೂತು ಚರ್ಚೆ ಮಾಡಿ ರಾಮಕೃಷ್ಣ ನರ್ಸರಿ ಶಾಲೆಯ ಬಯಲಲ್ಲಿ ಗಣಪತಿ ಇಡೋದು ಅಂತ ನಿರ್ಧಾರ ಮಾಡಿದ್ವಿ. ಆದ್ರೆ ಜಾಗಕ್ಕೆ ಅನುಮತಿ ಬೇಕಲ್ಲ ?

ನಾವು ಓದುತ್ತಿದ್ದದು ಸರ್ಕಾರೀ ಶಾಲೆ, ರಾಮಕೃಷ್ಣ ನರ್ಸರಿ ಶಾಲೆ ಸರಕಾರೇತರ ಶಾಲೆ ಅನುಮತಿ ಕೊಡ್ತಾರಾ ? ಈ ಅನುಮಾನದಲ್ಲೀಯೇ ನಾನು ಅಶೋಕ ರಾಮಕೃಷ್ಣ ನರ್ಸರಿ ಶಾಲೆ ಪ್ರಿನ್ಸಿಪಾಲರನ್ನ ಭೇಟಿ ಮಾಡಿದ್ವಿ. ಏನೂ ನಮ್ಮ ಶಾಲೆ ಪಕ್ಕ ಗಣಪತಿ ಪೆಂಡಾಲ್ ಹಾಕ್ತಿರಾ ? ನಿಮಗೇನು ತಲೆ ಇದೆಯಾ ? ಮೈಕ್ ಹಾಕಿಬಿಟ್ರೆ ನಾವು ಶಾಲೆ ಹೇಗೆ ನಡೆಸೋದು ? ಅಲ್ಲಿ ನಾವು ಮೊದಲು ರಾಜಿ ಆದ್ವಿ, ” ಇಲ್ಲಾ ಸಾರ್ ಮೈಕ್ ಹಾಕಲ್ಲ, ಶಾಲೆಗೆ ತೊಂದರೆ ಮಾಡಲ್ಲ, ಗುಂಪು ಸೇರಿಸಿ ಗಲಾಟೆ ಮಾಡಲ್ಲ, ಮಂಗಳಾರತಿ ಸಂಜೆ ಮಾಡ್ತೀವಿ ಸಾರ್ ” ಆ ಪ್ರಿನ್ಸಿಪಾಲರಿಗೆ ನಮ್ಮ ಮೇಲೆ ಏನು ಪ್ರೀತಿ ಬಂತೋ ಆಗಲಿ ಅಂತ ಜಾಗಕ್ಕೆ ಒಪ್ಪಿಗೆ ಕೊಟ್ಟರು ಅದೂ ಅಲ್ಲದೆ ”ನೀವು ಹಣ ಎಲ್ಲಾ ಸಂಗ್ರಹ ಮಾಡಿದ ಮೇಲೆ ನನ್ನ ಹಣ ಕೇಳಿ ನಾನು ಸ್ವಲ್ಪ ಕೊಡ್ತೀನಿ ಅಂತ ನಮ್ಮ ಬೆಂಬಲಕ್ಕೆ ನಿಂತರು. ಜಾಗ ಸಿಕ್ತು, ಮತ್ತೇನು ಬೇಕು ? ಪೆಂಡಾಲ್ ಹಾಕೋಕೆ ಬೊಂಬುಗಳು ಬೇಕು, ರಾಮಕೃಷ್ಣ ಶಾಲೆಯ ಹಿಂಭಾಗದಲ್ಲಿ ನಾಯ್ಡು ಅಂಕಲ್ ಮನೆ ಕಟ್ಟಿಸ್ತಾ ಇದ್ರು, ಎಲ್ಲರೂ ನಾಯ್ಡು ಅಂಕಲ್ ಹತ್ರ ಹೋಗಿ ಬೇಡಿ.. ಬೇಡಿ ಕೊಂಡು ಎಂಟು ಬೊಂಬುಗಳನ್ನ ಒಂದು ವಾರಕ್ಕೆ ಪಡೆದು ಕೊಂಡ್ವಿ, ಟಾರ್ಪಲ್ ಕೊಡ್ತೀನಿ ಅಂತ ಗೆಳಯ ಡಿಂಗ್ರಿ ಮುಂದೆ ಬಂದ ನಮಗೆಲ್ಲಾ ಅದ್ಬುತ ಆನಂದ. ಗಣಪತಿ ಹಬ್ಬಕ್ಕೆ ಇನ್ನು ಮೂರುದಿನ ಇತ್ತು ಮೂವತ್ತಎಂಟು ರೂಪಾಯಿ ಸಂಗ್ರಹ ಆಗಿತ್ತು, ಗೆಳಯ ಗಣೇಶ ಬೆಳಗ್ಗೆ ಬೆಳಗ್ಗೆ ಬಂದೋನು ಕೆಟ್ಟ ವಿಷಯ ತಂದಿದ್ದ ” ಮಂಜನ ಅಣ್ಣ ಅವರೇ ಗಣಪತಿ ಇಡ್ತಾರಂತೆ ಅವರ ಮನೆ ಹತ್ರ, ನಮ್ಮ ಹಣ ಕೊಡಲ್ವಂತೆ ” ನನಗೆ ಅಶೋಕನಿಗೆ ಆಕಾಶನೇ ತಲೆ ಮೇಲೆ ಬಿದ್ದ ಹಾಗಾಯಿತು. ಮಂಜನ ಮನೆಗೆ ಹೋದ್ರೆ ಅವನಣ್ಣ ” ಇಲ್ಲೀಯೇ ನಮ್ಮನೇ ಹತ್ರ ಗಣಪತಿ ಇಟ್ಟರೆ ಹಣ ಕೊಡ್ತೀನಿ, ಇಲ್ಲದಿದ್ರೆ ಕೊಡಲ್ಲ ” ಅಂದೇ ಬಿಟ್ರು ನಾವೆಲ್ಲಾ ಕಷ್ಟಪಟ್ಟು ಬೀದಿ ಬೀದಿ ಅಳೆದು ಬೈಸಿಕೊಂಡು ಸಂಗ್ರಹ ಮಾಡಿದ್ದ ಹಣ !!!

ಮತ್ತೆ ಅವರಮನೆ ಕಡೆ ಹೋಗೋದು ಬೇಡ ಅಂತ ತೀರ್ಮಾನ ಮಾಡಿ ಹಣ ಸಂಗ್ರಹಕ್ಕೆ ಬೇರೆ ಪ್ಲಾನ್ ಮಾಡಿದ್ವಿ, ಬಸ್ ಸ್ಟಾಂಡ್, ರೈಲ್ ವೆ ಸ್ಟೇಷನ್ ಪ್ರಯಾಣಿಕರ ಹತ್ರ ಹಣ ಸಂಗ್ರಹ, ಮಂಗಳವಾರ ಸಂತೆ ಹಾಸನದಲ್ಲಿ ಸಂತೆಯಲ್ಲಿ ಹಣ ಸಂಗ್ರಹ, ಶಾಲೆಗೆ ಏನೂ ನೆಪಹೇಳಿ ನಾಲ್ಕುದಿನ ಹಣ ಸಂಗ್ರಹ, ಸಂಜೆ ಎಣಿಕೆ ಮಾಡಿದಾಗ ನಲವತ್ತು ರೂಪಾಯಿ ಆಗಿತ್ತು. ಈ ಸಾರಿ ಅಶೋಕನ ತಂದೆ ಹತ್ರ ಹಣ ಕೊಟ್ಟೆವು. ಹದಿನೈದು ರೂಪಾಯಿ ಗಣಪತಿ, , ಮಿಕ್ಕ ಹಣಕ್ಕೆ ಹೂವು, ಐದು ರೂಪಾಯಿ ಪುರಿ ಇಷ್ಟೇ ನಮ್ಮ ಪ್ಲಾನ್, ರಾಮಕೃಷ್ಣ ನರ್ಸರಿ ಶಾಲೆ ಪಕ್ಕದ ಮನೆ ಮಂಜು ಅಂಕಲ್ ನಮಗೆ ಪೆಂಡಾಲ್ಗೆ ಗುಂಡಿ ತೆಗೆಯೋಕೆ ಸಹಕಾರ ಕೊಟ್ರು, , , ಬೊಂಬು ನಿಲ್ಲಿಸಿ ನಾಲ್ಕು ಕಡೆ ಕಟ್ಟಿ ಟಾರ್ಪಲ್ ಹಾಕಿದ ಮೇಲೆ ರಾಮಕೃಷ್ಣ ನರ್ಸರಿ ಶಾಲೆ ಪ್ರಿನ್ಸಿಪಾಲ್ ಬಂದು ಗುಡ್ ಅಂದು ”ಐದು ರೂಪಾಯಿ ” ಕೊಟ್ರು. ಅದೇ ದೊಡ್ಡ ಮೊತ್ತ.

ಗಣಪತಿ ಹಬ್ಬ ಬಂತು, ಮಕ್ಕಳೇ ಗಣಪತಿ ಇಟ್ಟಿದ್ದಾರೆ ಅಂತ ಅನೇಕ ಹಿರಿಯರು ನೋಡೋಕೆ ಬಂದ್ರು, ತೆಂಗಿನಕಾಯಿ ತಂದ್ರು, ಬಾಳೆ ಹಣ್ಣು, ಸೇಬಿನ ಹಣ್ಣು ಸಂಗ್ರಹ ಆಯಿತು, ನಾನು ಗಣೇಶ ಪೂಜೆ ಮಾಡಿದ್ರೆ ಬಂದ ಜನರನ್ನ ಅಶೋಕ, ಪ್ರಸಾದಿ ಮಾತಾಡಿಸಿ ಕಳಿಸ್ತಿದ್ರು. ನಮ್ಮ ಮನೆಯವರು, ಅಶೋಕನ ಮನೆಯವರು ಬಂದು ಹೊಗಳಿ ಹೋದ್ರು, ಮಿಲಟರಿ ಮಂಜನೂ ಅಣ್ಣ ನೊಂದಿಗೆ ಜಗಳ ಅಡಿ ನಮ್ಮನ್ನ ಸೇರಿಕೊಂಡ, ನಾವು ಬರಬೇಡ ಅಂತ ಹೇಳಲಿಲ್ಲ. ಮೂರುದಿನ ಪೆಂಡಾಲ್ ನಲ್ಲೀಯೇ ನಿದ್ದೆ. ಮೂರನೇ ದಿನ ಸಂಜೆ ಗಣಪತಿಯನ್ನು ಕೆರೆಗೆ ಬಿಟ್ಟವು. ಮನೆಗೆ ಹೋದೆವು, ಗುರಿ ಮುಟ್ಟಿದ ಸಂತೋಷ, ವಿದ್ಯಾಗಣಪತಿಗೆ ಜೈ ಹೇಳಿ ಕುಣಿದ ಮರೆಯದ ಗಳಿಗೆ.

ಮರುದಿನ ಪೆಂಡಾಲ್ ಹತ್ರ ಹೋದ್ರೆ ಟಾರ್ಪಲ್ ಇಲ್ಲ, ನಾಲಕ್ಕು ಬೊಂಬು ನಾಪತ್ತೆ.. ಗಣಪತಿ ಕೂರಿಸೋಕೆ ಮಂಜು ಅಂಕಲ್ ಕೊಟ್ಟಿದ್ದ ಸ್ಟಿಲ್ ತಟ್ಟೆ ನಾಪತ್ತೆ.. ಸರಿಯಾದ ಪ್ಲಾನ್ ಇಲ್ಲದೆ ಅಂತ್ಯ ಸರಿ ಹೋಗಲಿಲ್ಲ. ಸುಮಾರು ಮೂರೂ ತಿಂಗಳು ಆ ರಸ್ತೆನಲ್ಲಿ ಓಡಾಡಲಿಲ್ಲ.

ಇದು ನಾನು ಹನ್ನೆರಡು ವರುಷದವನಾಗಿದ್ದಾಗಿನ ಘಟನೆ, ಈಗ ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡ್ತಿರೋ ನನಗೆ ಮಕ್ಕಳು ಗಣಪತಿ ಇಡುವ ಒಂದು ಕಾರ್ಯ ಅವರ ಭಾಗವಹಿಸುವ ಹಕ್ಕುಗಳನ್ನ ಎತ್ತಿ ಹಿಡಿಯುತ್ತೆ ಅನ್ನಿಸುತ್ತೆ. ಮೇಲಿನ ಘಟನೆಯನ್ನು ಗಮನಿಸಿ ಮಕ್ಕಳಾದ ನಾವು ಮಾಡಿದ್ದು ಒಂದು ”ಇವೆಂಟ್ ಮ್ಯಾನೇಜ್ಮೆಂಟ್ ” ಮುಖ ಪರಿಚಯ ಇಲ್ಲದ ಜನರಿಂದ ಹಣ ಸಂಗ್ರಹ ಮಾಡಿದ್ದು ”ಕ್ರೌಡ್ ಫಂಡ್ ”, ಹಣ ಕಳೆದು ಹೋದಾಗ ಪ್ಲಾನ್ ಬದಲಿಸಿದ್ದು ”ಕ್ರೈಸಿಸ್ ಮ್ಯಾನೇಜ್ಮೆಂಟ್ ” ಇನ್ನೂ ಜೀವನ ಕೌಶಲ್ಯ ಗಮನಿಸಿದರೆ, ಅಪರಿಚಿತ ಹಿರಿಯರೊಂದಿಗೆ ಉತ್ತಮ ಸಂವಹನ, ನಿರ್ಧಾರ ತೆಗೆದು ಕೊಳ್ಳುವ ಗುಣ, ನಾಯಕತ್ವದ ಗುಣ, ಮಕ್ಕಳ ಗುರಿ ಅಸೆ ಆಕಾಂಕ್ಷೆಗಳನ್ನ ಅಭಿವ್ಯಕ್ತಿಸುವ ವೇದಿಕೆಯಾಗಿ ಗಣಪತಿ ಕಾರ್ಯನಿರ್ವಹಿಸುತ್ತದೆ. ನಮಗೆ ಮಾರ್ಗದರ್ಶನ ಮಾಡಲು ಸಿಕ್ಕ ರಾಮಕೃಷ್ಣ ನರ್ಸರಿ ಶಾಲೆ ಪ್ರಿನ್ಸಿಪಾಲ್ ಹಾಗೂ ಮಂಜು ಅಂಕಲ್ ತರ ಮಕ್ಕಳ ಸ್ನೇಹಿ ಹಿರಿಯರು ಸಿಕ್ಕರೆ ಮಕ್ಕಳು ತಮ್ಮ ಜೀವನಕ್ಕೆ ಒಂದು ದೊಡ್ಡ ಅನುಭವದ ಪಾಠ ಕಲಿಯುತ್ತಾರೆ.

ಮಕ್ಕಳ ಹಕ್ಕುಗಳ ಒಡಂಬಡಿಕೆಯ ಹಿನ್ನಲೆಯಲ್ಲಿ ಮಕ್ಕಳು ಗಣಪತಿ ಇಡುವುದನ್ನು ವಿಶ್ಲೇಷಣೆ ಮಾಡಿದಾಗ

1 ಭಾಗವಹಿಸುವ ಹಕ್ಕು (ಪರಿಛೇದ 12): ಮಕ್ಕಳು ಹಣವನ್ನು ಸಂಗ್ರಹಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ, ಸ್ಥಳವನ್ನು ಆಯ್ಕೆ ಮಾಡುತ್ತಾರೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಅವರ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ ಭಾಗವಹಿಸುವ ಹಕ್ಕನ್ನು ಬಳಸಿಕೊಳ್ಳುತ್ತಾರೆ.

  1. ಸಂಘಟನೆಯ ಹಕ್ಕು (ಪರಿಛೇದ 15): ಮಕ್ಕಳು ಪರಸ್ಪರ ಗೆಳೆತನ ಮಾಡಲು, ಸಹಕಾರ ನೀಡಲು ಮತ್ತು ಹಬ್ಬವನ್ನು ಆಚರಿಸಲು ಹಣ ಸಂಗ್ರಹಿಸಲು ಗುಂಪುಗಳನ್ನು ರಚಿಸಲು ಹಕ್ಕುಗಳನ್ನು ಹೊಂದಿದ್ದಾರೆ.

3.ಮಾಹಿತಿ ಹಕ್ಕು (ಪರಿಛೇದ 17): ಮಕ್ಕಳು ಹಬ್ಬ, ಅದರ ಪ್ರಾಮುಖ್ಯತೆ ಮತ್ತು ಅದನ್ನು ಹೇಗೆ ಆಚರಿಸಬೇಕು ಎಂಬುದರ ಕುರಿತು ಮಾಹಿತಿಯನ್ನು ಹುಡುಕುತ್ತಿರಬಹುದು, ಮಾಹಿತಿಯನ್ನು ಪಡೆಯಲು ಮಾಹಿತಿ ಹಕ್ಕನ್ನು ಚಲಾಯಿಸಬಹುದು.

ಮಕ್ಕಳು ಎದುರಿಸ ಬಹುದಾದ ಕೆಲವು ಅಪಾಯಗಳು

1.ಆರ್ಥಿಕ ಶೋಷಣೆಯಿಂದ ರಕ್ಷಣೆ ಪಡೆಯುವ ಹಕ್ಕು (ಪರಿಛೇದ 32): ಮಕ್ಕಳು ಸಂಗ್ರಹಿಸುವ ಹಣವನ್ನು ಅಪರಿಚಿತರು ಅಥವಾ ವಯಸ್ಕರು ಕಿತ್ತು ಕೊಳ್ಳಬಹುದು, ಶೋಷಣೆಮಾಡಬಹುದು ಅಥವಾ ನಿಂದನೆ ಮಾಡಬಹುದು.

2 ದುರುಪಯೋಗದಿಂದ ರಕ್ಷಣೆಯ ಹಕ್ಕು (ಪರಿಛೇದ 19): ಅಪರಿಚಿತರೊಂದಿಗೆ ಸಂವಹನ ನಡೆಸುವುದು ಅಥವಾ ಸರಿಯಾದ ಮಾರ್ಗದರ್ಶನವಿಲ್ಲದೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಮಕ್ಕಳು ಹಾನಿ ಅಥವಾ ಅಪಾಯಕ್ಕೆ ಗುರಿಯಾಗಬಹುದು.

3 ಹಿರಿಯರ ಮಾರ್ಗದರ್ಶನದ ಹಕ್ಕು (ಪರಿಛೇದ 14): ಮಕ್ಕಳು ಹಣ ಸಂಗ್ರಹಿಸುವಾಗ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅವರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ವಯಸ್ಕರ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನದ ಅಗತ್ಯವಿರಬಹುದು.

ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿಯಲಾಗಿದೆ ಮತ್ತು ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು:ಹಿರಿಯರಾಗಿ ನಾವು ಮಾಡಬೇಕಿರುವ ಕೆಲಸಗಳು

  1. ಯಾವುದೇ ಪೂರ್ವಗ್ರಹ ಇಲ್ಲದೆ ಹಿರಿಯರು ಮೇಲ್ವಿಚಾರಣೆ ಮತ್ತು ಮಾರ್ಗದರ್ಶನವನ್ನು ಮಾಡಬೇಕು.

.2. ಸುರಕ್ಷತೆ, ಮಿತಿಗಳು ಮತ್ತು ಶೋಷಣೆಯ ಅಪಾಯಗಳ ಬಗ್ಗೆ ಮಕ್ಕಳಿಗೆ ಅರಿವು ನೀಡಬೇಕು.

  1. ಹಣ ಸಂಗ್ರಹಿಸಲು ಅಥವಾ ಹಬ್ಬವನ್ನು ಆಚರಿಸಲು ಪರ್ಯಾಯ, ಸುರಕ್ಷಿತ ವಿಧಾನಗಳನ್ನು ಹುಡುಕ ಬೇಕು

ಈಗಲೂ ಮಕ್ಕಳು ರಸ್ತೆಗಳಲ್ಲಿ ಬಂದು ಗಣಪತಿ ಇಡಲು ಹಣಕೇಳುತ್ತಾರೆ, ಆ ಮಕ್ಕಳ ಹಿನ್ನಲೆ, ಅವರ ಬೆಂಬಲಕ್ಕೆ ಯಾರಿದ್ದಾರೆ, ಉದ್ದೇಶ ಸರಿಯಿದೆಯೇ ಎಂಬುದನ್ನು ಅರಿತು ನಾವು ಸಹಾಯ ಮಾಡಿದರೆ ಮಕ್ಕಳ ಭಾಗವಹಿಸುವ ಹಕ್ಕಿಗೆ ಒಂದು ವೇದಿಕೆ ಸಿಕ್ಕ ಹಾಗಾಗುತ್ತದೆ, ಯಾರಾದರೂ ಮಕ್ಕಳು ಅಂಕಲ್ ಗಣಪತಿ ಇಡ್ತೀವಿ……. ಅಂದ್ರೆ ಬೈಯಬೇಡಿ ಸ್ವಲ್ಪ ಯೋಚಿಸಿ….

ಮರೆಯ ಬೇಡಿ ಇಂದಿನ ಮಕ್ಕಳು ಇಂದಿನದೇ ಪ್ರಜೆಗಳು

ನಾಗಸಿಂಹ ಜಿ ರಾವ್
ನಿರ್ದೇಶಕ
ಚೈಲ್ಡ್ ರೈಟ್ಸ್ ಟ್ರಸ್ಟ್


ಕನ್ನಡದ ಬರಹಗಳನ್ನು ಹಂಚಿ ಹರಡಿ
5 1 vote
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
MANJURAJ H N
MANJURAJ H N
5 days ago

ಸಮಯೋಚಿತವಾಗಿದೆ. ನಿನ್ನೆಯ ದಿನ ನಾನು ಬರೆದ ಲೇಖನದಲ್ಲೂ ಇದನ್ನು ಪ್ರಸ್ತಾಪ ಮಾಡಿದ್ದೇನೆ. ಎಂಥ ಕೋ ಇನ್ಸಿಡೆನ್ಸು….ಧನ್ಯವಾದಗಳು

Koushik
Koushik
5 days ago

Wow such a wonderful inspiring story! Wow Good sir

Nagendra Prasad Kn
Nagendra Prasad Kn
5 days ago

ನೀರೂಪಣ ಶೈಲಿ ಉಪಮೇಯ ಉಪಮಾಲಂಕಾರ, ಕ್ರಿಯಾಶೀಲತೆಯನ್ನು ಕಾನೂನುಗಳಿಗೆ Link ಮಾಡಿ ಹೇಳುವ ಅನುಭವ …….
ನಿವಲ್ಲದೆ ಮತ್ಯಾರು ಪಪ್ಪಾ ……”ಅಂಕಲ್ ಗಣಪತಿ ಇಡುತ್ತೀವಿ”

Suchitra
Suchitra
4 days ago

Written very sensitively, giving a perspective many people do not see or understand! Encouraging children to participate, enjoy their space and entertainment as a group is important but they should not be misused or abused by adults! Let’s always support their participation and freedom to enjoyment whole heartedly, the right way.

4
0
Would love your thoughts, please comment.x
()
x