ಗಣಪ್ಪನ ಪೂಜೀ ಅರ್ಭಾಟಾಗಿ ಮಾಡೋದೇ…….: ಡಾ.ವೃಂದಾ ಸಂಗಮ್‌

 “ನಿನ್ನೀಯಿಂದ ಹೇಳಲಿಕ್ಕತ್ತೇನಿ. ಗಣಪ್ಪನ ಹಬ್ಬಾ ಭಾಳ ಮಡೀಯಿಂದ, ಶೃದ್ಧಾ ಭಕ್ತಿಯಿಂದ ಮಾಡಬೇಕು ಅಂತ. ನೋಡು ನಮ್ಮವ್ವಾ-ಅಪ್ಪಾ ಅಷ್ಟೆಲ್ಲಾ ಪೂಜಾ ಮಾಡಿದರೂ ಅಂತ, ನಮಗೆಲ್ಲಾ ಇಷ್ಟರೇ ವಿದ್ಯಾ ಬುದ್ಧಿ ಬಂದು, ಒಂದು ಗೌರ್ಮೆಂಟ್‌ ನೌಕರೀ ಅಂತ ಸಿಕ್ಕೇದ. ಅವನ ದಯಾದಿಂದನೇ ದಿನಾ ಒಂತುತ್ತು ಅನ್ನಾ ಕಾಣತೇವಿ, ನಾಳೆ ನಮ್ಮ ಮಕ್ಕಳಿಗೆ ನಿಶ್ಚಿಂತಿಂದ ಅಮೇರಿಕಾದ ಓದು, ನೌಕರಿ ಸಿಗಬೇಕಂದರ ಅವನ ದಯಾ ಬೇಕು ನೋಡು. ಮತ್ತ, ಯಾವ ಆಚಾರಗಳನ ಕರದರೂ, ಬಂದು ನಿವಾಂತಾಗಿ ಪೂಜೀ ಮಾಡಸೋದಿಲ್ಲ, ನೂರಾ ಎಂಟ ಮನೀ ಪೂಜಾ ಹಿಡದಿರತಾರ, ಇವತ್ತ ಅವರಿಗೆ ದೊಡ್ಡ ದುಡಮೀ, ದಕ್ಷಣಿ, ಅದಕ್ಕ ನಾನಂತೂ, ನಾನ ಪುಸ್ತಕಾ ಹೊಡಕೊಂಡು ಪೂಜಾ ಮಾಡತೇನಿ.”

“ಹೂಂ, ಛೊಲೋ ಆಗೋದದಲಾ, ಅದೇ ಎಲ್ಲಾರ ಆಶಾನೂ ಆಗಿರತದ, ಮಕ್ಕಳು ಛೊಲೋತಾಂಗ ಓದಿ, ಅಮೇರಿಕಾದಾಗ ಕೆಲಸ ಮಾಡೋದು ನನಗೇನು ಬ್ಯಾಡನಸತದನು”

“ಅಲ್ಲ, ಹೋದ ವರಷ, ಸುಬ್ಬಣ್ನಾ ಗಣಪತಿ ನೋಡಲಿಕ್ಕಂತ ಬಂದಾಂವ, ಹೆಂಗ ಹೇಳಿದಾ, ನೋಡಿದಿಲ್ಲೋ, ಒಂದು ಖುಷಿ ಖಬರ ಅದನಪಾ, ನಮ್ಮ ರಾಹುಲಗ ಅಮೇರಿಕಾದ ಓದಲಿಕ್ಕೆ ಸೀಟು ಸಿಕ್ಕೇದ. ಮುಂದಿನ ವರಷ ಗಣಪತಿ ಹಬ್ಬದಾಗ ಅವಾ ಅಲ್ಲಿರತಾನ ನೋಡು, ಅಂತ, ತಾನೇ ಅಮೇರಿಕಾಕ್ಕ ಹೋದಂಗ ಹೇಳತಾನ. ನಾನೂ ಅವತ್ತೇ ನಿರ್ಧಾರ ಮಾಡೇನಿ, ರಶ್ಮಿನ್ನ ಡಾಕ್ಟರ್‌ ಮಾಡಬೇಕು, ರಂಜುನ್ನ ಇಂಜಿನೀಯರ್‌ ಮಾಡಬೇಕು ಅಂತ.” ಅವಾಗ, ರಾಘಣ್ಣ ಏನ ಅಂದಾ ನೆನಪದನೋ ಇಲ್ಲೋ ನಿನಗ. ಪಾಪ, ವಸಂತಗ ಎರಡೂ ಹೆಣ್ಣಮಕ್ಕಳು, ಅವಕ್ಕ ಲಗ್ನಾ ಮಾಡೋದ ಕಷ್ಟಾಗತದ, ಮ್ಯಾಲ ಓದಸೋದು ಅಂದರ ಇನ್ನೂ ಕಷ್ಟ ಪಾಪ, ಅಂತಾನ, ಅವನ ಮಾರಿ ಮುಂದ ನನ್ನ ಮಕ್ಕಳಿಬ್ಬರೂ ಡಾಕ್ಟರ್‌ ಮತ್ತ ಇಂಜಿನೀಯರ್‌ ಮಾಡಿ ತೋರಿಸೋತನಾ ನನಗ ಸಮಾಧಾನ ಆಗತದನು.”
“ಹೂಂ ದೇವರ ಕಣ್ಣು ತಗದರ, ಎಷ್ಟೊತ್ತು, ಎಲ್ಲಾ ಆಗತದ, ಈಗಿಂದನ ಯಾಕ ಚಿಂತಿ ಮಾಡತೀರಿ,”

“ಅದೂ ಖರೇ ಅದ, ಮತ್ತ ಗಣಪ್ಪಗ ಪಂಚಾಮೃತ ಅಭಿಷೇಕ ಮಾಡೋವಾಗ, ಕ್ಷೀರಾಭಿಷೇಕ, ಮಧು ಅಭಿಷೇಕ, ಹಿಂಗ ಒಂದೊಂದು ಆದ ಮ್ಯಾಲೂ ಶುದ್ಧೋದಕ ಅಭಿಷೇಕ ಮಾಡಬೇಕೇನು.”
“ಅಲ್ಲೆ ಪಂಚಾಮೃತನಾ ಮಾಡಿಟ್ಟೇನಲಾ, ಅದನ್ನು ಒಂದ ಸಲಾ ಮಾಡರೀ ಸಾಕು.”
“ಹಂಗಂತೀಯಾ, ಬಾಜೂ ಮನೀ ರಂಗಣ್ಣ ಮೂರು ತಾಸು ಪೂಜಿ ಮಾಡತಾನಂತ. ಅಂತಾದೇನ ಮಾಡತಾನೋ. ಹೆಂಗ ಮಾಡಿದರೂ ತಾಸ, ದೀಡ ತಾಸನ್ಯಾಗ ಮುಗೀತದ. ಮತ್ತ, ನೀ ಇಲ್ಲೇ ಬಾ, ನೀನ ಈ ಪುಸ್ತಕ ಹಿಡಕೊಂಡು ಓದಿಬಿಡು, ನಾನು ಹಂಗ. ಸಮರ್ಪಯಾಮಿ, ಪೂಜಯಾಮಿ ಅಂದ ಬಿಡತೇನಿ. ನನಗ ನಾಲಿಗಿ ತೊಡರತದಲಾ, ಅವೇನು, ಪುಸ್ತಕದಾಗ ಹೇಳಿದಂಗ ಎಲ್ಲಾ ಹೂವು ಹಣ್ಣು ನಾವು ಎಲ್ಲಾ ತಂದು ಏರಸಲಿಕ್ಕಾಗತದೇನು. ಕರವೀರ, ಪುನ್ನಾಗ ಇವೆಲ್ಲಾ ಹೆಸರರೆ ಎಲ್ಲಿ ಕೇಳೇನಿ, ನೋಡಿಲ್ಲ ಸತೇಕ. ಈ ಕ್ಯಾದಿಗಿ ಮುಂದ ಏರಸಲೇನು, ಹಂಗ ಸೊಂಡಿ ಮ್ಯಾಲ ಕಾಣೋ ಹಂಗ ಬರಲ್ಯೋ. ಶಂಕರಣ್ಣ ಬಂದವನ, ಹೋದ ವರ್ಷ ಗಣಪತಿ ಹಬ್ಬದ ದಿನಾ ತುಳಸೀ ಏರಸ ಬಾರದೋ ತಮ್ಮಾ ಅಂದ ಬಿಟ್ಟಿದ್ದ, ನೆನಪದನೋ ಇಲ್ಲೋ, ಹೂಂ, ಈಗ ಆವಾಹನಂ ಅಂತಾತಲಾ. ಒಂಚೂರು ರೆಸ್ಟ ಕೊಡು ನನಗ.”

“ಗಣಪ್ಪನ ಮಂಟಪದಾಗ ಕೂಡಸೀ, ಆವಾಹಯಾಮಿ ಅನರೀʼ
“ಗಣಪ್ಪ ತಡಕೊಂಡರೂ, ನಿನಗ ತಾಳ್ಮೆ ಇಲ್ಲ ನೋಡು, ಸಮಾ ಕೂತಾನೇನು ಗಣಪ್ಪ ಮಂಟಪದಾಗ. ಈ ಸಲಾ ಸಣ್ಣ ಗಣಪ್ಪನ ತಂದಿದ್ದಕ್ಕ ಕೆಳಗ ಎರಡು ಮಣೀ ಹಾಕಿದರ ಛಂದಾಗತದ ನೋಡು. ಗಣಪ್ಪಾ ಭಾಳ ತುಟ್ಟ್ಯಾಗ್ಯಾವ, ಪ್ಯಾಟ್ಯಾಗ, ನಾವು ಸಣ್ಣವರಿದ್ದಾಗ. ಬಡಿಗೇರ ಮನ್ಯಾಗ ಗಣಪ್ಪಗ ಗುರುತು ಮಾಡಿ ಬರತಿದ್ದವಿ. ಬಡಿಗೇರ ಮಾನಪ್ಪಗ ನಮ್ಮ ಮನೀ ಮಂಟಪದ ಅಳತೀನೂ ಗೊತ್ತಿತ್ತು. ಅಪ್ಪಾರ, ಇದು ನಿಮ್ಮನಿ ಅಳತೀನ ನೋಡರೀ ಅಂತ ತಾನ ಹೇಳತಿದ್ದ. ಹೂಂ ದೂರ್ವಾಂ ಸಮರ್ಪಯಾಮಿ ಅಂತ ಹೇಳು, ಇಲ್ಲೆ, ಹಿತ್ತಲದಾಗಿನ ಕರಕೀ ತಂದೇನಿ, ಅವನ್ನ ಬಿಡಿಸಿದರ, ಇಪ್ಪತ್ತೊಂದು ಆಗತಾವ. ಇಕಾ ಗಣಪ್ಪಗ ಗುಲಾಬಿ ಸಿಕ್ಕೇದ. ಈ ವರ್ಷ ನಮಗೇನೋ ಶುಭಾ ಆಗತದ ನೋಡು. ಹಿಂದಿನ ಮನಿ ಶ್ಯಾಮಣ್ಣನ ಹಿತ್ತಲದಾಗಿತ್ತು, ಹವೂರಗ ಹರಕೊಂಡು ಬಿಟ್ಟೆ. ಮತ್ತ ನಮ್ಮನೀ ಕಾಕಡಾ ಅವಲಾ ಅದಕ್ಕ ನಡುನಡುವ ಪತ್ರಿ ಹಾಕಿ ಮಾಲೀ ಮಾಡಿಬಿಡು. ಘುಂಭಾಗಿ ಕಾಣತದ. ಯಾರರೆ ನೋಡಿದರೂ ಗಣಪ್ಪಾ ಅರ್ಭಾಟಾಗ್ಯಾನ ಅಂದಿರ ಬೇಕು. ಹಂಗ ಮಾಡು. ಮತ್ತ, ಏ ಮುಗದೇ ಹೋತೇನು ಈ ಸಮರ್ಪಯಾಮಿ, ನಾನಿನ್ನೂ ಅನಕೋತನೇ ಕೂತೇನಿ. ನನಗ ಭಾಳ ಭಕ್ತಿ ಗಣಪ್ಪಂದರ. ಏನು ಅಲಂಕಾರ ಮಾಡಿದರೇನು, ಭಕ್ತಿ ಭಾಳ ಮುಖ್ಯ. ನಮ್ಮನೀ ಕಡಬೂಂತನೇ ಕಾದು ಕೊಂಡು ಕೂತಾನೇನು ಈ ಗಣಪ್ಪ. ಎಲ್ಲಾರ ಮನೀ ಕುಚ್ಚಿದ ಕಡಬು ತಿಂದ ತಿಂದ ಅವನ ಹೊಟ್ಟಿ ಒಡದಿದ್ದು. ನೀನು ನೈವೇದ್ಯಾ ತೊಗೊಂಡು ಬಾ.”

“ಹೂಂ ರೀ, ಇಕಾ ಇಲ್ಲೇ ಮಂಡಲಾ ಮಾಡಿ ಇಟ್ಟೇನಿ, ಎಲ್ಲಾ ಬಡಸೇನಿ, ಇಲ್ಲೇ ಹಾಲು ಮಸರು, ತುಪ್ಪಾ, ನೀರು ಇಟ್ಟೇನಿ, ಗಣಪ್ಪಗ ನೈವೇದ್ಯಾ ಮಾಡರೀ.”
“ಭಪ್ಪರೇ, ಇಷ್ಟರಾಗ, ನೀನೂ ನಮ್ಮವ್ವನಂಗ ಎಲ್ಲಾ ಅಡಗೀ ಮಾಡಿ ಬಡಿಸೇ ಬಿಟ್ಟೀ ನೋಡು, ರಶ್ಮೀ ರಂಜಿತಾ ಬರ್ರೆವ್ವಾ, ಗಣಪ್ಪಗ ಕೈ ಮುಗೀರಿ. ನಾಳೆ ಚಂದಂಗ ಅಮೇರಿಕಾಕ್ಕ ಕಳಸಪ್ಪಾ ಅಂತ ಬೇಡಿಕೋರಿ. ಭಕ್ತಿ ಭಾಳ ಮುಖ್ಯ ಗಣಪ್ಪಗ, ಏನ, ಪೂಜಾ ಆತಲ್ಲ, ಆರತೀ ಮಾಡಿ ಬಿಡಲ್ಯಾ, ಆಮ್ಯಾಲ, ಮತ್ತ ಸಂಜೀಗೇ ಮಡೀ ಉಟಗೋ ಅನಬ್ಯಾಡ, ಈಗ ಪುನರಾಗಮನಾಯಚ ಅಂದ ಬಿಡತೇನಿ.”

“ಸಂಜೀಗೆ, ಶ್ಯಮಂತಕ ಮಣಿ ಕಥೀ ಹೇಳಬೇಕಲ್ಲಾ”
“ಅದೆಲ್ಲಾ ನಿಮ್ಮ ಹೆಂಗಸರದು ಕೆಲಸ. ನಾನು, ಸಂಜೀಗೆ ರಂಗಣ್ಣನ ಮನೀಗೆ ಹೋಗಬೇಕು, ಅಲ್ಲೆ ಗೆಳ್ಯಾರು ಎಲ್ಲಾರೂ ಕೂಡೋದು ಅಂತ ಮಾತಾಡಕೊಂಡೇವಿ. ಮತ್ತ ನನ್ನನ್ನ ಹಿಡದ ಹಾಕಬ್ಯಾಡ ನೀನು. ಇಡೀ ದಿವಸ ಮನೀ ಹಿಡಕೊಂಡು ಕೂಡಲಿಕ್ಕೆ ಆಗೂದಿಲ್ಲ ನನಗ.”
“ಆತು ಬಿಡರೀ, ನಾನ ಸಂಜೀಗೂ ಶ್ಯಮಂತಕ ಮಣಿ ಕಥೀ ಓದಿ, ದೀಪಾ ಹಚ್ಚತೇನಿ. ನೀವೀಗ ಸಂಜೀ ಮಂಗಳಾರತೀ ಮಾಡಿ, ದೇವರನ ಭುಜಂಗಿಸಿ ಬಿಡರೀ.”
“ಹೂಂ, ಹಂಗ ಆಗಲೀ, ಒಂಚೂರು ಕುಚ್ಚಿದ ಕಡಬು ಬಿಸೀ ಬಿಸೀ ಇರಲಿ. ಹಂಗ ಇತ್ಲಾಗ ಸಾರೂ ಬಿಸೀಗಿಡು. ಮತ್ತ ನೀ ಏನರ ಅನ್ನೂ ಹಬ್ಬದ ದಿವಸ ಸಾರು ಭಾಳ ರುಚಿ ಆಗಿರತದ ನೋಡು. ಬಿಸಿ ಬಿಸಿ ಸಾರು ಮ್ಯಾಲೊಂಚೂರು ತುಪ್ಪಾ, ಏನ ಕೇಳತೀ. ಮತ್ತ, ಕೂತು ಕೂತು ಕಾಲು ಜುಂ ಅಂತಾವ ನೋಡು. ಈ ರಂದೀನೂ ನೀನೇ ತಗೀ. ಪೂಜಾ ಮಾಡೋದರಾಗ ಸಾಕಾಗೀ ಹೋತು. ಎಲ್ಲಾ ನಾನ, ಪಾಂಙಿತವಾಗಿ ಪೂಜಾ ಮಾಡೇನಿ. ಸಮಾಧಾನ ಆಗೇದ. ಇಕಾ ಈ ದೇವರನ ಭುಜಂಗಿಸಿದೆ. ಈ ದೇವರ ಪೆಟಿಗೀ ಎಲ್ಲಿಡಲೀ.”
“ಅಲ್ಲೇ ದೇವರ ಚೌಕಿ ಒಳಗ ಇಟ್ಟೀರೆಲಾ, ಮತ್ತೇನು ಕೇಳತೀರಿ.”
“ಅಲ್ಲ, ಚೌಕೀ ಒಳಗಿರೋದು ದೇವರ ಪೆಟಿಗಿ ಆದರ, ನಾನು, ದೇವರ ಪೂಜಾ ಮಾಡಿ, ಈಗ ಭುಜಂಗಿಸಿದ ಪೆಟಿಗಿ ಯಾವುದು. ಹಂಗಾರ ನೋಡು ಒಂಚೂರು.”
“ಅಯ್ಯ ನಮ್ಮವ್ವಾ, ದೇವರ ಪೆಟಗೀ ಬಿಚ್ಚದ, ನನ್ನ ಗೌರಿ ಪೆಟಗೀ ಬಿಚ್ಚಿ ಪೂಜಾ ಮಾಡೀರೆಲರೀ,”
-ಡಾ.ವೃಂದಾ ಸಂಗಮ್‌


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x