ಪೋಸ್ಟ್ ಮ್ಯಾನ್ ಗಂಗಣ್ಣ (ಕೊನೆಯ ಭಾಗ)”: ಎಂ.ಜವರಾಜ್

-13-

ಆ ಗುಡುಗು ಸಿಡಿಲು ಮಿಂಚು ಬೀಸುತ್ತಿದ್ದ ಗಾಳಿಯೊಳಗೆ ಉದರುತ್ತಿದ್ದ ಸೀಪರು ಸೀಪರು ಮಳೆಯ ಗವ್ಗತ್ತಲೊಳಗೆ ಮನೆ ಸೇರಿದಾಗ ಎಲ್ಲರೂ ನಿದ್ರೆಗೆ ಜಾರಿದ್ದರು. ಚಿಲಕ ಹಾಕದೆ ಟೇಬಲ್ ಒತ್ತರಿಸಿ ಹಾಗೇ ಮುಚ್ಚಿದ್ದ ಬಾಗಿಲು ತಳ್ಳಿ ಒಳ ಹೋಗಿ ಮೊಂಬತ್ತಿ ಹಚ್ಚಿದೆ. ಕರೆಂಟ್ ಬಂದಾಗ ಮೊಬೈಲ್ ಚಾರ್ಜ್ ಆಗಲೆಂದು ಪಿನ್ ಹಾಕಿ ಒದ್ದೆಯಾದ ಬಟ್ಟೆ ಬಿಚ್ಚಿ ಬದಲಿಸಿ ಕೈಕಾಲು ಮುಖ ತೊಳೆದು ಉಂಡು ಮಲಗಿದವನಿಗೆ ರಾತ್ರಿ ಪೂರಾ ಬಸ್ಟಾಪಿನಲ್ಲಿ ಷಣ್ಮುಖಸ್ವಾಮಿ ಗಂಗಣ್ಣನ ಬಗ್ಗೆ ಆಡಿದ ಮಾತಿನ ಗುಂಗು. ಆ ಮಾತಿನ ಗುಂಗಿನೊಳಗೆ ಗಂಗಣ್ಣ ಸತ್ತದ್ದು ಮತ್ತು ಅವನ ಕಂಕುಳಲ್ಲಿದ್ದ ಚೀಲದ ಗಂಟಿನ ಬಗ್ಗೆ ಯೋಚಿಸುತ್ತ ಯೋಚಿಸುತ್ತ ಅದ್ಯಾವಾಗ ನಿದ್ರೆ ಬಂತೊ ಗೊತ್ತಿಲ್ಲ. ಮೊಬೈಲ್ ರಿಂಗ್ ಸೌಂಡು ನನ್ನ ಕಿವಿಗೆ ತಾಕಿ ಕಣ್ಬಿಟ್ಟಾಗ ಬೆಳಗ್ಗೆ ಏಳರ ಹೊತ್ತು. ಅದು ಷಣ್ಮುಖಸ್ವಾಮಿ ಕಾಲ್. ಇದೇನು ಇಷ್ಟೊತ್ತಿಗೆ ಕಾಲ್ ಮಾಡಿದ್ದಾರೆ ಆಂತ ಎದ್ದು ‘ಹಲೊ ಸರ್” ಅಂದೆ. ಅವರು ಆಗಲೇ ಸ್ನಾನ ಮಾಡಿ ರೆಡಿಯಾಗಿ ಮೂರು ನಾಮದವನ ದೇವಸ್ಥಾನದ ಪಡಸಾಲೆಯ ಚೇರಿನಲ್ಲಿ ಕುಳಿತು ಪೇಪರ್ ಓದುತ್ತ ಓದುತ್ತಾ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ ಹೆಡ್ಡಿಂಗ್ ಓದಿ ಹಾಗೇ ನನಗೆ ಕಾಲ್ ಮಾಡಿದ್ದರು.

ಪ್ರತಿ ದಿನ ಬೆಳಗ್ಗೆ ಸೂರ್ಯ ಮೂಡುವ ಮುನ್ನ ಶಿಸ್ತಾಗಿ ರೆಡಿಯಾಗಿ ಮೂರು ನಾಮದವನ ದೇವಸ್ಥಾನಕ್ಕೆ ಹೋಗಿ ದೇವರ ನಾಮ ಗುನುಗುವುದು ಅವರ ಪ್ರತಿದಿನದ ಪರ್ಮನೆಂಟ್ ಹವ್ಯಾಸವಾಗಿತ್ತು. ಅಲ್ಲಿಗೆ ಹೋಗುವ ಮುನ್ನವೇ ಆವತ್ತಿನ ಯಾವುದೊ ಒಂದು ಪೇಪರ್ ಹಿಡಿದು ಹೋಗಿರುತ್ತಿದ್ದರು. ದೇವರ ದರ್ಶನ ಆದ ಮೇಲೆ ಪ್ರಸಾದ ತಿಂದು ಪೇಪರ್ ಹಿಡಿದು ಓದುತ್ತ ಪ್ರತಿದಿನ ಬರುವ ಪರಿಚಯದವರೊಂದಿಗೆ ಮಾತಾಡುವುದು ರೂಡಿ.

ನಾನು “ನಮಸ್ತೆ ಸರ್” ಅಂದೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಗ್ಗೆ ಒಂದೆರಡು ಮಾತಾಡಿ ರಾತ್ರಿ ಹೇಳಿದ್ದನ್ನೇ ಮತ್ತೆ ಹೇಳಿ “ನಮ್ ಗಂಗಶೆಟ್ಟಿ ಬಗ್ಗೆ ಬರೆದರೆ ದೊಡ್ಡ ಚೆರಿತ್ರೆನೆ ಆಗುತ್ತೆ. ಬನ್ನಿ ಒಂದ್ಸಲ ಹೇಳ್ತಿನಿ, ಮುಂಡೆ ಮಗ ಯಾರಿಗೂ ಏನೂ ಹೇಳ್ದೆ ಕೇಳ್ದೆ ಅನಾಥವಾಗಿ ಸತ್ತು ಹೋದ. ಅವನ ಕಂಕುಳಲ್ಲಿದ್ದ ದುಡ್ಡಿನ ಗಂಟು ಏನಾಯ್ತೊ ಏನೋ.. ನಾನೀಗ ನನ್ನ ಆತ್ಮಕತೆ ಎರಡನೆ ಭಾಗ ಬರಿಯೋಕೆ ಶುರು ಮಾಡ್ತಿನಲ್ಲ ಅದರಲ್ಲಿ ಇದೆಲ್ಲ ಸೇರಿಸಬೇಕು ಅಂದುಕೊಂಡಿದ್ದಿನಿ. ನೋಡಿ ಇಷ್ಟೆಲ್ಲ ಬರಿಬೇಕು ಓದಬೇಕು ಅಂತ ಆಸೆ ಇದ್ದರು ನನ್ನ ಕಣ್ಣು ಸಹಕರಿಸ್ತಿಲ್ಲ. ಪೆನ್ನು ಹಿಡಿದರೆ ಕೈ ಬೆರಳು ನಡುಗೋಕೆ ಶುರು ಮಾಡ್ತವೆ ಏನ್ಮಾಡೋದು..? ಜೊತೆಗೆ ನನ್ನ ಫ್ರೆಂಡ್ ತರ ಇರೊ ಶುಗರ್ ಕಂಟ್ರೋಲ್ ಆಗ್ತಿಲ್ಲ. ಎಡ ಬಿಡದ ಕೆಮ್ಮು ಬೇರೆ. ಈಚೀಚೆಗೆ ಹೊಟ್ಟೆ ನೋವು ಬೇರೆ. ಅದೋ, ಹೋಗಿ ಬಂದು ಮಾಡ್ತಿದೆ. ಇದು ಹಳೇ ನೋವು ಬಿಡಿ. ಅದಕ್ಕೆ ಇಂಜೆಕ್ಷನ್ನು, ಮಾತ್ರೆ ತಗೊಂಡು ತಗೊಂಡು ಬರೀ ಖರ್ಚೇ ವಿನಾ ಖಾಯಿಲೆ ಅಂತು ಗುಣ ಆಗ್ಲಿಲ್ಲ. ಸರಿ ಬನ್ನಿ ಸಿಗೊಣ ನಿಮಗೆ ಕೆಲಸಕ್ಕೆ ಲೇಟಾಗಬಹುದು” ಅಂತ ಕಾಲ್ ಕಟ್ ಮಾಡಿದರು.

ಇದಾದ ಮೇಲೆ ಅವರು ಒಂದೆರಡು ತಿಂಗಳು ಸಿಗಲೇ ಇಲ್ಲ. ಇದರ ನಡುವೆ ನನ್ನ ಕಪಾಟಿನಲ್ಲಿ ಜೋಡಿಸಿದ್ದ ಪುಸ್ತಕಗಳ ಕಡೆ ಕಣ್ಣಾಡಿಸಿದಾಗ ಅವರ ಒಂದೆರಡು ಪುಸ್ತಕಗಳು ಕಣ್ಣಿಗೆ ಬಿದ್ದು ನೆನಪಾದರು. ಇದೇನಿದು ಇವರು ಹೊರಗೆ ಎಲ್ಲೂ ಸಿಗ್ತಿಲ್ಲ. ಫೋನಿಗೂ ಸಿಗ್ತಿಲ್ಲ. ಯಾರನ್ನು ಕೇಳಿದರು ಅವರ ಬಗ್ಗೆ ಮಾಹಿತಿ ಇಲ್ಲ. ಫೋನ್ ಮಾಡಿದರೆ ಸ್ವಿಚ್ಡ್ ಆಫ್, ಬೀಫ್ ಸೌಂಡ್, ಇಲ್ಲಾಂದ್ರೆ ನಾಟ್ ರೀಚಬಲ್ ಬರೋದು. ಇವರು ಎಲ್ಲಿ ಹೋದರು ಅಂತ ಒಂದ್ಸಲ ನಾನೇ ಬಿಡುವು ಮಾಡಿಕೊಂಡು ಭಾನುವಾರದ ಒಂದು ಸಂಜೆ ಮೊಕ್ಕತ್ತಲ ಬೆನ್ನಿಗೆ ತ್ರಿವೇಣಿ ನಗರದಲ್ಲಿದ್ದ ಅವರ ಮನೆಗೇ ಹೋದೆ. ಆಗ ತಾನೇ ಪೂಜೆ ಮಾಡಿದವರಂತೆ ಹಣೆ ತುಂಬ ವಿಭೂತಿ ಧರಿಸಿ ಬಂದ ಅವರ ಹೆಂಡತಿ ಬಾಗಿಲು ತೆಗೆದು ಇಣುಕಿ ಯಾವತ್ತಿಗೂ ಒಳಗೆ ಬನ್ನಿ ಅನ್ನದವರು ಅವತ್ಯಾಕೋ “ಬನ್ನಿ ಒಳಗೆ. ಇದಾರೆ” ಅಂತ ಅಂದರು. ಒಳಗೆ ಹೋಗಿ ನೋಡಿದೆ. ಬಿಳಿಯ ಒಂದು ಹಳೇ ಸ್ಟ್ಯಾಂಡ್ ಬನಿಯನ್ ತೊಟ್ಟು ರಗ್ಗು ಎಳೆದುಕೊಂಡು ಹಾಸಿಗೆ ಹಿಡಿದು ಮಲಗಿದ್ದ ಷಣ್ಮುಖಸ್ವಾಮಿ ಊಟ ಬಿಟ್ಟು ಕೆಲ ದಿನಗಳೇ ಆಗಿತ್ತು. ಸದ್ಯ ಲಿಕ್ವಿಡ್ ಪದಾರ್ಥವಷ್ಟೇ. ನನ್ನ ನೋಡಿ ಕಷ್ಟಪಟ್ಟು ಎದ್ದು ಕುಂತರು. ಅವರ ಹೆಂಡತಿ ಅಳುತ್ತಾ ಮಾತಾಡಿದರು.

ಕಳೆದ ಹದಿನೈದು ದಿನದ ಹಿಂದೆ ಚಿಲ್ಲರೆ ಅಂಗಡಿಗಳಿಗೆ ಹೋಲ್ ಸೇಲ್ ಐಟಂ ಹಾಕುವ ವ್ಯಾಪಾರ ಮಾಡುತ್ತಿದ್ದ ಷಣ್ಮುಖಸ್ವಾಮಿಯ ಸೋದರ ಸ್ಕೂಟರ್ ಆಕ್ಸಿಡೆಂಟಲ್ಲಿ ತೀರಿಕೊಂಡಿದ್ದರು. ಅವರಿಬ್ಬರನ್ನು ಅವರ ಆತ್ಮೀಯರು ರಾಜ್ ಕುಮಾರ್ – ವರದಪ್ಪನವರಿಗೆ ಹೋಲಿಸಿ ಮಾತಾಡುತ್ತಿದ್ದುದು ಸೋದರರ ನಡುವಿದ್ದ ಆತ್ಮೀಯತೆಗೆ ಸಾಕ್ಷಿಯಾಗಿ ಸತ್ತು ಹೋದ ಸೋದರನನ್ನು ನೆನೆದು ಕುಗ್ಗಿದ್ದರು. ಇದಕ್ಕು ಮುನ್ನ ತಿಂಗಳ ಹಿಂದೆಯಷ್ಟೆ ಸೊಸೆಯೂ ಸತ್ತಿದ್ದಳು.

ಷಣ್ಮುಖಸ್ವಾಮಿಗೆ ಒಬ್ಬ ಪೆದ್ದ ಮಗನಿದ್ದ. ಅವನೂ ಒಂಥರಾ ಗಂಗಣ್ಣನೇ. ಅವನ ನಡಾವಳಿಯಿಂದ ಅವನನ್ನು ಯಾವಾಗಲು ಪೆದ್ದರಾಮ ಪೆದ್ದರಾಮ ಅನ್ನುತ್ತಿದ್ದುದು ರೂಢಿಯಾಗಿತ್ತು. ಆ ಪೆದ್ದರಾಮನಿಗೆ ಒಂದು ದಾರಿ ಮಾಡಬೇಕಲ್ಲ ಅಂತ ಕೆವು ಸಲ ಎಲ್ಲೇ ಹೋದರು ಜೊತೆಗೆ ಕರೆದುಕೊಂಡು ಹೋಗುವುದು ಕೆಲಸ ಮಾಡಿಸುತ್ತಿದ್ದುದುಂಟು. ಅದೆ ತರ ಪೋಸ್ಟಾಫಿಸಿನಲ್ಲಿ ಗಂಗಣ್ಣನ ಜೊತೆ ಕೂರಿಸಿ ಲೆಟರ್ ಡಿವೈಡ್ ಮಾಡಿಸುವುದು, ಬರೆಸುವುದು, ಓದಿಸುವುದು ಮಾಡುತ್ತಿದ್ದರು. ಈತರ ಮಾಡುವಾಗ ಗಂಗಣ್ಣನಿಗೂ ಪೆದ್ದರಾಮನಿಗೂ ಜಟಾಪಟಿ ಆಯ್ತು. ಲೆಟರ್ ಎಲ್ಲಾ ಚೆಲ್ಲಾಪಿಲ್ಲಿಯಾಗಿ ಗಂಗಣ್ಣ ಷಣ್ಮುಖಸ್ವಾಮಿಗೆ ಪೋಸ್ಟ್ ಮೃಷ್ಟ್ರು ಅನ್ನುವುದನ್ನೂ ಲೆಕ್ಕಿಸದೆ ಬಾಯಿಗೆ ಬಂದ ಹಾಗೆ ಬೈದಿದ್ದ. ಈ ಎಡವಟ್ಟಿನಿಂದ ಇದರ ಸಹವಾಸವೇ ಬೇಡ ಅಂತ ನಿಲ್ಲಿಸಿದ್ದು ಆಯ್ತು. ಮದುವೆ ಮಾಡಿದರೆ ದಾರಿಯಾಗಬಹುದು ಅಂತ ಗೊತ್ತಿರುವ ಕಡೆ ಹೆಣ್ಣು ನೋಡಿ ಮದುವೆ ಮಾಡಿದ್ದು ಆಯ್ತು. ಇದು ಗೊತ್ತಿಲ್ಲದೆ ಏನು. ಅದಾದ ಮೇಲೆ ಸಂಸಾರದ ತಕರಾರು. ಇದೂ ಗೊತ್ತಿತ್ತು. ಇದನ್ನೆಲ್ಲ ಪೋಸ್ಟಾಫಿಸಿನ ಕೆಲಸದ ನಡುವೆ ಆಗಾಗ ಹೇಳುತ್ತಿದ್ದರು. ಸೊಸೆ, ವರದಕ್ಷಿಣೆ ಕಿರುಕುಳದ ಕಂಪ್ಲೆಂಟ್ ಕೊಟ್ಟಿದ್ದು, ಡೈವೋರ್ಸು ಅದು ಇದು ಅಂತ ಹಾಕಿ ನಾಲ್ಕು ವರ್ಷ ಮನೆಯಿಂದ ಆಚೆ ಇದ್ದವಳ ಕಂಕುಳಲ್ಲಿ ಮೂರು ವರ್ಷದ ಮಗುವೊಂದಿತ್ತು. ಮಗು ಕಟ್ಟಿಕೊಂಡು ಬಂದ ಆ ಸೊಸೆ ಡೈವೋರ್ಸು ಅರ್ಜಿ ಕ್ಯಾನ್ಸಲ್ ಮಾಡಿ ಆ ಪೆದ್ದರಾಮನೊಂದಿಗೇ ಬಾಳುತ್ತೇನೆ ಅಂತ ಮನೆ ಬಾಗಿಲಲ್ಲಿ ನಿಂತಾಗ ಷಣ್ಮುಖಸ್ವಾಮಿ ಮತ್ತು ಅವರ ಹೆಂಡತಿ ಬಿಲ್ ಕುಲ್ ಒಪ್ಪದೆ “ಯಾರ‌್ಯಾರನ್ನೊ ಮಡಿಕಂಡು ಮಗು ಮಾಡ್ಕೊಂಡು ಬಂದು ಈಗ ಬಾಳ್ತಿನಿ ಅಂತ ಯಾವ ಮುಖ ಇಟ್ಟುಕೊಂಡು ಮನೆ ಮುಂದೆ ಬಂದಿದ್ದಿಯಾ” ಅಂತ ಕ್ಯಾಕರಿಸಿ ಉಗಿದು ಕಳಿಸಿದ್ದು, ಅದಾದ ಮೇಲೆ ಅವರ ಸೊಸೆ ಇವರ ಮೇಲೆ “ನಾನು ನನ್ನ ಗಂಡನೊಂದಿಗೆ ಬಾಳ್ತಿನಿ ಅಂದರೂ ಅತ್ತೆ ಮಾವ ಬಿಡ್ತಿಲ್ಲ” ಅಂತ ಇನ್ನೊಂದು ಕಂಪ್ಲೆಂಟ್ ಕೊಟ್ಟು ಒಂದಷ್ಟು ದಿನ ಅಲೆದಿದ್ದು ಆಯ್ತು. ಕೊನೆಗೆ ಸೊಸೆ ಮೂರು ವರ್ಷದ ಕೂಸು ಎತ್ತಿಕೊಂಡು ತವರು ಮನೆ, ಅಲ್ಲಿ ಇಲ್ಲಿ ತಿರುಗುತ್ತ ಅವರಿವರಿಗೆ ತನ್ನ ಕಷ್ಟ ಒಪ್ಪಿಸುತ್ತ ಅತ್ತು ಕರೆದಿದ್ದು ಹೇಗೋ ಷಣ್ಮುಖಸ್ವಾಮಿಗೆ ತಲುಪಿ ಅದನ್ನು ಹೆಂಡತಿ ಜೊತೆ ಹೇಳುತ್ತ , ಅದು ಅವರಿಬ್ಬರೊಳಗೂ ದಿನಾ ರಾತ್ರಿ ಸಂವಾದವಾಗುತ್ತಿತ್ತು

ಅತ್ತ , ಷಣ್ಮುಖಸ್ವಾಮಿಯ ಸೊಸೆ ಯಾರೋ ಹಿರಿಯರು ಹೇಳಿದ ಮಾತು ಕೇಳಿ ಈಗಲಾದರು ತಾನು ತನ್ನ ಸಂಸಾರ ಸರಿಯಾಗಲೆಂದು ಮಲೈ ಮಾದೇಶ್ವರನಿಗೆ ಚಿನ್ನದ ತೇರು ಎಳೆಸುವ ಹರಕೆ ಹೊತ್ತು ಅವರ ಅವ್ವ ಅಪ್ಪನೊಂದಿಗೆ ಮಹದೇಶ್ವರ ಬೆಟ್ಟಕ್ಕೆ ಹೋಗಿ ಹರಕೆ ತೀರಿಸಿ ಮಾದಪ್ಪನ ದರ್ಶನ ಪಡೆದು ಹೊರಗೆ ಬಂದು ತಿಂಡಿ ತೀರ್ಥ ತೆಗೆದುಕೊಳ್ಳುವಾಗ ಹಠತ್ತಾಗಿ ನುಗ್ಗಿದ ಆನೆಗಳ ಹಿಂಡಿನ ಕಾಲ್ತುಳಿತಕ್ಕೆ ಸಿಕ್ಕಿ ಧಾರುಣವಾಗಿ ಸತ್ತ ಸೊಸೆಯ ಬಗ್ಗೆ ಗಂಡ ಹೆಂಡತಿ ಇಬ್ಬರೂ “ಅವಳು ನನ್ನ ಮಗನಿಗೆ ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ. ಅದಕ್ಕೆ ಆ ಮಾದೇಶ್ವರನೇ ಅವನ ಸನ್ನಿಧಿನಲ್ಲೆ ಶಿಕ್ಷೆ ಕೊಟ್ಟಿದ್ದಾನೆ. ಹೆಂಗ್ ಸತ್ತ ನೋಡಿ ಪಾಪದವಳು” ಅಂತ ಒಕ್ಕೊರಲಲ್ಲಿ ಹೇಳಿದಾಗಲೇ ನನಗೆ ಇಷ್ಟೆಲ್ಲ ಆಗಿರುವುದು ಗೊತ್ತಾಗಿದ್ದು.

ಇದನ್ನೆಲ್ಲ ಹೇಳ್ತ ಹೇಳ್ತಾನೆ ಕೆಮ್ಮುತ್ತ ಏದುಸಿರು ಬಿಡುತ್ತಿದ್ದ ಷಣ್ಮುಖಸ್ವಾಮಿ ಇನ್ನೂ ಏನೇನೋ ಹೇಳುತ್ತ ದೇವರ ಫೋಟೋ ಕಡೆ ನೋಡುತ್ತ ಹಣೆ ಮೇಲೆ ಕೈ ಬೆರಳಿಟ್ಟು ನಿಧಾನಕೆ ಬಲಕ್ಕೆ ಎಳೆಯುತ್ತ ಲೊಚಗುಟ್ಟಿದರು. ಆಗ ಅವರ ಹೆಂಡತಿ ಏನಕ್ಕೊ ಎದ್ದು ಒಳ ಹೋದರು. ನಾನು “ಆಗಿದ್ದು ಆಗೋಯ್ತು. ಕೆಟ್ಟ ಗಳಿಗೆ ಎಲ್ಲೊ ಒಂದು ಕಡೆ ತಪ್ಪಾಗಿರಬಹುದು, ಅದೀಗ ಅರಿವಾಗಿ ಅಡ್ಜಸ್ಟ್ ಮಾಡಿಕೊಂಡು ಬಾಳ್ತಿನಿ ಅಂತ ಮನೆ ಮುಂದೆ ಬಂದವಳನ್ನ ಸೇರಿಸಿಕೊಂಡಿದ್ದರೆ ಕಡೆಗಾಲದಲ್ಲಿ ನಿಮಗೆ ನಿಮ್ಮ ಮಗನಿಗೆ ಆಸರೆ ಅಂತ ಆಯ್ತಿತಲ್ವ ಸರ್” ಅಂದೆ. ನನ್ನ ಮಾತು ಅವರ ಒಳಗಿಳಿಯಿತೊ ಇಲ್ಲವೊ ಒಂದೂ ಗೊತ್ತಿಲ್ಲ. ಆದರೆ ಅಷ್ಟೂ ಹೊತ್ತು ತಮ್ಮ ಒಳಗಿದ್ದನ್ನು ಹೇಳಿದ್ದ ಅವರು ಮತ್ತೆ ಮತ್ತೆ ನನಗೆ ಮನವರಿಕೆ ಮಾಡಿಕೊಡಲೊ ಇಲ್ಲ , ಅವರ ತೃಪ್ತಿಗೊ ಹೇಳಿದ್ದನ್ನೇ ಹೇಳುತ್ತ ಹಗುರಾದವರಂತೆ ಟೇಬಲ್ ಮೇಲಿದ್ದ ಮೂಸಂಬಿ ಹಣ್ಣು ಬಿಡಿಸಿ ತಿನ್ನುತ್ತ ನನಗೂ ಕೊಡಲು ಬಂದರು. ನಾನು ತಡೆದು “ನೀವ್ ತಗೊಳಿ ಮೊದಲಿನ ಹಾಗೆ ಓಡಾಡೊ ತರ ಆಗಿ ಆಮೇಲೆ ಎಲ್ಲ ಮಾತಾಡುವ” ಅಂದೆ. ಅವರ ಮುಖದಲ್ಲಿ ಗೆಲುವಿನ ನಗೆಯೊಂದು ಚಿಮ್ಮಿದಂತಾಗಿ “ಅವತ್ತು ನಿಮಗೆ ಒಂದು ಮಾತು ಹೇಳಿದ್ದೆ – ನನ್ನ ಎರಡನೇ ಭಾಗದ ಆತ್ಮಕತೆ ಬರಿತಿನಿ ಅಂತ. ಈಗ ಅದನ್ನ ಬರೆದರೆ ಒಂದು ಸಮಾಪ್ತಿ ನೋಡಪ್ಪ. ಏನ್ ಮಾಡದಪ್ಪ ಹುಮ್ಮಸ್ಸಿದೆ ಬರೆಯೋಕಾಗ್ತಿಲ್ಲ. ನೋಡಿ ನನ್ ಪರಿಸ್ಥಿತಿ ಹಿಂಗಿದೆ. ವಿಧಿ ನನ್ನ ಬಾಳಲ್ಲಿ ಆಡಬಾರದ ಆಟ ಆಡ್ತು. ಇನ್ನೊಂದು ಗೊತ್ತಾ ನಿಮಗೆ.. ನನ್ನ ಪೆದ್ದರಾಮನಿಗೆ ಮದುವೆ ಮಾಡದೆ ಹೋಗಿದಿದ್ದರೆ ನಾನು ಇವತ್ತು ಹಾಸಿಗೆ ಹಿಡಿಯೋ ಸ್ಥಿತಿನೇ ಬರುತ್ತಿರಲಿಲ್ಲ. ನನ್ನ ಮಗನ ಬಾಳೂ ಹಾಳಾಗುತ್ತಿರಲಿಲ್ಲ. ಈ ವಿಚಾರದಲ್ಲಿ ನಾನು ಎಡವಿದೆ. ಇದಕ್ಕೆ ಕಾರಣ ಯಾರು ಗೊತ್ತಾ..?” ಅಂತ ಸ್ವಲ್ಪ ಹೊತ್ತು ಮೌನವಾಗಿ ನನ್ನನ್ನೇ ನೋಡುತ್ತ ಮೂಸಂಬಿ ಹಣ್ಣಿನ ತೊಳೆ ಬಿಡಿಸಿ ಬಾಯಿಗಿಟ್ಟು “ಆ ಗಂಗಶೆಟ್ಟಿ.. ಆ ಗಂಗಶೆಟ್ಟಿ ನನ್ನ ಬಾಳಲಿ ಪ್ರವೇಶ ಆಗದೆ ಹೋಗಿದ್ರೆ ಈ ಸ್ಥಿತಿ ಬರುತ್ತಿರಲಿಲ್ಲ” ಅಂದರು. ನನಗೆ ಆಶ್ಚರ್ಯವಾಗಿ ಒಂದೆರಡು ನಿಮಿಷ ಸುಮ್ಮನೆ ಕುಂತು ನಂತರ “ಗಂಗಣ್ಣನಾ..? ಏನ್ ಸರ್ ಹೇಳ್ತಿದ್ದೀರಿ..? ಗಂಗಣ್ಣನಿಗೂ ನಿಮ್ಮ ಮಗನ ಮದುವೆಗು ಅವನ ಬಾಳು ಹಾಳಾಗಿದ್ದಕ್ಕು ನೀವು ಈತರ ಆಗೋಕು ಏನ್ ಸಾರ್ ಸಂಬಂಧ..?” ಅಂದೆ.

ಅವರ ಕೆಮ್ಮು ಕಮ್ಮಿಯಾದಂತಿರಲಿಲ್ಲ. ಕೆಮ್ತ ಕೆಮ್ತಲೇ ಗಂಗಶೆಟ್ಟಿ, ಅವನ ಅಪ್ಪ , ಅವನ ಪಡಿಪಾಟಲು, ಅವನ ಅಪ್ಪನ ಪಡಿಪಾಟಲು ಹೇಳುತ್ತಾ “ಗೊತ್ತಲ್ಲ ನಿಮಗೆ ಇದೆಲ್ಲ” ಅಂತ “ನೋಡಿ ಅವತ್ತು ಗಂಗಶೆಟ್ಟಿ ಪೆದ್ದ ಪೆದ್ದನಾಗಿ ಕೈಯಲ್ಲೊಂದು ಕೆಲಸ ಇದ್ದೂ ಮದುವೆನು ಆಗದೆ ಇದ್ದ. ಈಗೇನೊ ಸರಿ ಆಮೇಲೆ..? ಅಂತನ್ನಿಸಿತು. ಇವನ ಆಸರೆಗೆ ಯಾರು ಬರ‌್ತಾರೆ..? ಅಂತ ಗಂಗಶೆಟ್ಟಿ ಚಿಂತೇಲೆ ನನ್ನ ಮಗ ಪೆದ್ದರಾಮನ ನೆನಪಾಯ್ತು. ಕೇಳಿ ಹೇಳ್ತಿನಿ , ನಾನು ತಿಂಗ್ಳ ತಿಂಗ್ಳ ಕಾಸು ಕೂಡಿಸಿ ಒಂದು ಟೇಪ್ ರೆಕಾರ್ಡ್ ತಂದಿದ್ದೆ. ಚೆನ್ನಾಗೆ ಇತ್ತು. ಮನೇಲಿ ಎಲ್ಲ ಖುಷಿ ಪಟ್ರು. ಬೇಕಾದಾಗ ಭಾವಗೀತೆ ಜಾನಪದ ಗೀತೆ ಕೇಳೋದು ಏನೊ ಒಂಥರ ಮಜ ಅನ್ನುಸ್ತು. ಒಂದ್ಸಲ ನಾವು ಎಲ್ಲೊ ಹೊರಗೆ ಹೋಗಿದ್ವಿ. ಆಗ ನಮ್ ಪೆದ್ದರಾಮ ಕ್ಯಾಸೆಟ್ ಹಾಕೋಕೆ ಹೋಗವ್ನೆ ಟೇಪೆಲ್ಲ ಅಳಿದೋಗಿ ಅದನ್ನ ಬಿಡಿಸೋಕೆ ಸ್ಕ್ರೂಡ್ರೈವರ್ ತಗೊಂಡು ಬಿಚ್ಚಿ ಒದರಿದ್ದ. ಚೆನ್ನಾಗಿ ಬೈದೆ. ಬೈಸ್ಕೊಂಡ. ಇನ್ನೊಂದ್ಸಲ ಒಂದು ಡಬಲ್ ಮಡಿಕೆದು ಪಿಲ್ಲಪಂಚೆ ತಂದಿದ್ದೆ ಗೌರಿಹಬ್ಬಕ್ಕೆ. ಅವನು ನಾನೂ ಉಟ್ಕೊಬೇಕು ಅಂತ ಹಠ ಮಾಡಿದ್ದ. ನೀನು ಚಿಕ್ಕವನು ಅಂತ ಅದು ಇದು ಹೇಳಿ ಹೇಗೊ ಸಂಭಾಳಿಸಿ ಮಲಗಿಸಿದ್ವಿ. ಹಬ್ಬದ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ ಪಿಲ್ಲಪಂಚೆ ಉಟ್ಟುಕೊಳ್ಳೊಕೆ ಅಂತ ತೆಗೆದು ನೋಡಿದ್ರೆ ಪಂಚೆ ಡಬಲ್ ಮಡಿಕೆ ಇದ್ದದ್ದು ಸಿಂಗಲ್ ಆಗಿದೆ. ಅಯ್ಯೊ ಇದೇನು ಅರ್ಧ ಕತ್ತರಿಸಿದ ಹಾಗಿದೆಯಲ್ಲ ಅಂತ ರೇಗುತ್ತ ಕೂಗಾಡಿದೆ. ನಮ್ಮ ಪೆದ್ದರಾಮ ರಾತ್ರಿ ನಾವೆಲ್ಲ ಮಲಗಿದ್ದಾಗ ಮೆಲ್ಲಗೆ ತಾನರ್ಧ ಕತ್ತರಿಸಿಕೊಂಡು ಮಡಚಿ ತಾನು ಮಲಗಿದ್ದ ದಿಂಬಿನ ಕೆಳಗಿಟ್ಟುಕೊಂಡು ಅಂಜುತ್ತ ತಂದುಕೊಟ್ಟ. ಈತರ ಎಷ್ಟೋ ಆಗಿದೆ ಪೆದ್ದರಾಮನಿಂದ. ಇದೆಲ್ಲ ನೆನಕೊಂಡು ನಾನು ಚೆನ್ನಾಗಿರುವಾಗಲೆ ಗಂಗಶೆಟ್ಟಿಯ ಸ್ಥಿತಿ ನನ್ನ ಮಗನಿಗಾಗದೆ ಇರಲಿ ಅಂತ ಅವನಿಗೆ ಒಂದು ದಾರಿ ಮಾಡಬೇಕಲ್ಲ ಅಂತ ಸರ್ಕಸ್ ಮಾಡಿ ಮಾಡಿ ನನ್ನ ಮನೆಯವಳ ಜೊತೆ ಮಾತಾಡಿ ಗಂಗಶೆಟ್ಟಿ ಬಗ್ಗೆ , ಅವನ ಒಂಟಿತನ, ಪೆದ್ದುತನ, ಕಡೆಗಾಲದ ಆಸರೆ ಬಗ್ಗೆ ಮಾತಾಡಿದೆ.

ಆಗ ನನ್ನ ಜೊತೆ ನನ್ನ ಮನೆಯವಳೂ ಯೋಚನೆಗೆ ಬಿದ್ದು ಅದುವರೆಗೂ ಮಗನಿಗೆ ಮದುವೆ ಮಾಡುವ ಅಂತ ಅಂದುಕೊಂಡು ಅವರಿವರಿಗೆ ಹೇಳ್ತಾ ಕಾಲ ಕಳಿತಿದ್ದ ನಾವು ಗಂಗಶೆಟ್ಟಿಯ ಲೈಫ್ ಕಂಡು ಅವತ್ತಿಂದ ಸೀರಿಯಸ್ಸಾಗಿ ನನ್ನ ಪೆದ್ದರಾಮನಿಗೆ ಹೆಣ್ಣು ನೋಡೋಕೆ ಶುರು ಮಾಡಿದ್ವಿ. ಒಂದು ಲೆಕ್ಕದಲ್ಲಿ ನನ್ನ ಪೆದ್ದರಾಮ ಮದುವೆ ಆಗೋಕೆ ಗಂಗಶೆಟ್ಟಿನೆ ಕಾರಣ. ಅವನ ಬಾಳು ನೋಡಿ ಇವನ ಬಾಳೂ ಅವನ ಹಾಗೆ ಆಗುತ್ತೆ ಅಂತ ಹೆಣ್ಣೇ ಸಿಗದೆ ಯೋಚಿಸುತ್ತಿದ್ದ ನಮಗೆ ಯಾವುದೋ ಮದುವೆಗೆ ಹೋಗಿದ್ದಾಗ ಪರಿಚಯದವರ ದೂರದ ಸಂಬಂಧಿಯೊಬ್ಬರ ಒಂದು ಹೆಣ್ಣು ಕಣ್ಣಿಗೆ ಬಿದ್ದು ಆಗಲೇ ಒಪ್ಪಿ ಮದುವೆ ಮಾಡಿದ್ದಾಯ್ತು. ಮದುವೆ ಆದ ಮೇಲೆ ಮೊದಲ ಶಾಸ್ತ್ರದ ದಿನ ಶುರುವಾದ ತಕರಾರು ಅವಳ ಸಾವಲ್ಲಿ ಸಮಾಪ್ತಿಯಾಯ್ತು” ಅಂತ ಲೊಚಗುಟ್ಟಿ “ಇನ್ನು ಇದೆ ಹೇಳೋದು ಅದನ್ನೆಲ್ಲ ಬಾಯಲ್ಲಿ ಹೇಳೋಕಾಗಲ್ಲ ಎಲ್ಲನು. ನನ್ನ ಆತ್ಮಕತೆ ಎರಡನೇ ಭಾಗದಲ್ಲಿ ದಾಖಲಿಸ್ತಿನಿ ಓದಿ” ಅಂತ ಅಲ್ಲೆ ಟಿವಿ ನೋಡುತ್ತಾ ನಗಾಡುತ್ತಾ ಖಾಕಿ ಚೆಡ್ಡಿ, ಮೇಲೊಂದು ಟೀಶರ್ಟ್ ತೊಟ್ಟು ಗೋಡೆ ಒರಗಿ ಅಸ್ತವ್ಯಸ್ತವಾಗಿ ಕುಂತಿದ್ದ ಮಗ ಪೆದ್ದರಾಮನ ಕಡೆ ಕೈ ತೋರಿ ಹುಸಿನಗೆ ಬೀರಿ ಸುಸ್ತಾದವರಂತೆ ಹಾಗೇ ಹಾಸಿಗೆಗೆ ಒರಗಿ “ಬಿಲಿಗೆರೆಹುಂಡಿ ರಾಚಪ್ಪಾಜಿಯವರ ಅಪ್ಪ ಸಿಕ್ಕುದ್ರೆ ಕರೆದುಕೊಂಡು ಬನ್ನಿ ಅವರಿಗೆ ನನ್ನ ಲೈಫ್ ಸ್ಟೋರಿ ಪುಸ್ತಕ ಕೊಡ್ಬೇಕು. ಅವರು ಯಾವಾಗ್ಲು ‘ಜೀವನ ಚೆರಿತ್ರೆ ಬರುದ್ರಾ’ ಅಂತಿದ್ರು. ನಾನು ಎಲ್ರಿಗೂ ನನ್ನ ಆತ್ಮಕಥೆ ಕೊಡೋಕೆ ಫೋನ್ ಮಾಡ್ದೆ. ಮೂಗೂರು , ಬನ್ನೂರು ಹೋಬಳಿ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಹೀಗೆ. ನಾನು ಚೆನ್ನಾಗಿದ್ದಾಗ ಸಾಹಿತ್ಯ ಪರಿಷತ್ ಫಂಕ್ಷನ್ ಮಾಡ್ದಾಗ ಇವರಿಗೆಲ್ಲ ವೇದಿಕೆ ಕಲ್ಪಿಸಿಕೊಟ್ಟಿದ್ದೆ. ಈಗ ಒಬ್ರೂ ಈ ಕಡೆ ಬರೊಲ್ರು” ಅಂತ ಬೇಸರಿಸಿಕೊಂಡವರಂತೆ ಕಂಡರು.

ಹಾಗೆ ಬಾಯಿ ಮೇಲೆ ಕೈಯಿಟ್ಟು ಏನೋ ಜ್ಞಾಪಿಸಿಕೊಂಡವರಂತೆ ಸಣ್ಣಗೆ ನಗ್ತಾ ನಗ್ತಾ “ಇನ್ನೊಂದು ವಿಚಾರ ಗೊತ್ತಾ ನಿಮಗೆ? ಅದು ಗಂಗಶೆಟ್ಟಿದು. ಪೋಸ್ಟಾಫಿಸಲ್ಲಿ ಗಂಗಶೆಟ್ಟಿಗೂ ಬಿಲಿಗೆರೆಹುಂಡಿ ರಾಚಪ್ಪಾಜಿಯವರ ಅಪ್ಪನಿಗೂ ಜಗಳ ಆಗಿತ್ತು. ನಾನು ಕಾಫಿಗೆ ಅಂತ ಹೋಗಿದ್ದೆ. ಅವರು ಆಗಾಗ ಅವರ ಮಗನ ಕುಡ್ತ , ಸೊಸೆ ಜಗಳ ಒಪ್ಪಿಸಿ ಸಜೇಷನ್ ಕೇಳೋಕೆ ಬರ‌್ತಿದ್ರು. ಅದೆ ತಾನೆ ಬಂದು ಮೊದಲೇ ಪರಿಚಯದವರಾದ್ದರಿಂದ ಗಂಗಣ್ಣನ್ನ ಮಾತಾಡಿಸಿನೆ ಆಫೀಸೊಳಕ್ಕೆ ಸಲೀಸಾಗಿ ಹೋಗಿ ಟೇಬಲ್ ಮೇಲೆ ಕುಂತಿದ್ದಾರೆ. ಈ ಗಂಗಶೆಟ್ಟಿ ‘ಮೇಷ್ಟ್ರು ಇಲ್ದೆ ಇರ ಹೊತ್ಲಿ ಯಾಕ್ ಒಳಕ್ಕೋದ್ರಿ..? ಅಲ್ಲಿ ಆಫೀಸ್ ಫೈಲುಗಳು ದುಡ್ಡು ಎಲ್ಲ ಇದೆ ಏನಾದ್ರು ಹೆಚ್ಚು ಕಮ್ಮಿ ಆದ್ರ ನನಗೆ ತೊಂದ್ರೆ. ನನ್ ಕೆಲ್ಸ ಹೋದ್ರೆ ನೀವು ಬರ‌್ತಿರಾ?” ಅಂತ ರಂಪ ರಾದ್ಧಾಂತ ಮಾಡಿದ್ದ. ಅವರು ತಮ್ಮ ಪರಿಚಯ ಹೇಳಿಕೊಳ್ಳೋದಿರಲಿ ಗಂಗಶೆಟ್ಟಿಗೆ ಅವರು ಯಾರು ಅಂತ ಮೊದಲೇ ಗೊತ್ತು. ಎಷ್ಟೊ ಸಲ ಅವರಿಂದ ಸುಮಾರು ಎಂ.ಓ ಕಾಪಿಗಳಿಗೆ ಎಲ್ಟಿಎಮ್ ಹಾಕ್ಸಿದ್ದ. ಅದೆಲ್ಲನು ಮರೆತು ಜಗಳ ಆಡಿ ಅವರನ್ನ ಆಚೆ ನಿಲ್ಲಿಸಿ ಅದಕ್ಕೆ ಸಮಜಾಯಿಸಿನೂ ನೀಡಿದ್ದ. ಅದಕ್ಕೆ ನಾನು ಗಂಗಶೆಟ್ಟಿನ ಬಿಟ್ಟು ಎಲ್ಲೆ ಹೋದ್ರು ಎಷ್ಟೇ ಹೊತ್ತಾದ್ರು ನನಗೆ ಆಫೀಸ್ ಕಡೆಗೆ ಒಂದು ಧೈರ್ಯ ಅನ್ನೋದಿತ್ತು” ಅಂತ ಗಂಗಶೆಟ್ಟಿಯ ಗುಣಗಾನ ಮಾಡಿ “ಇನ್ನೊಂದೇನು ಗೊತ್ತಾ.. ಸುಮಾರು ಜನ ‘ಏನ್ ಸಾರ್ ನೀವು ಇಲ್ಲ ಅಂದ್ರೆ ಗಂಗಣ್ಣ ಪೋಸ್ಟ್ ಆಫೀಸ್ ಮೆಟ್ಟಿಲನ್ನೇ ಹತ್ತೋಕೆ ಬಿಡಲ್ಲ’ ಅಂದವರೂ ಇದ್ದಾರೆ” ಅಂತ ಮಲಗಿದ್ದಲ್ಲೇ ದೇಹ ಅಲುಗಾಡುವ ಮಟ್ಟಿಗೆ ಜೋರಾಗಿ ನಕ್ಕರು. ಅವರು ನಕ್ಕ ಸ್ಪೀಡಿಗೆ ಕಣ್ಣಲ್ಲಿ ನೀರು ತುಂಬಿಕೊಂಡು ಆ ಕಣ್ಣೀರನ್ನು ಬಟ್ಟೆಯಲ್ಲಿ ಒರೆಸಿಕೊಳ್ಳುತ್ತ ಇನ್ನೂ ನಗುತ್ತಲೇ ಇದ್ದರು. ನಾನು “ಇದೇ ತರ ಖುಷಿಯಿಂದ ಇರಿ. ಈತರದ ಖುಷಿ ಕ್ಷಣಗಳನ್ನು ನೆನೆಸಿಕೊಳ್ಳಿ ಆರಾಮ ಸಿಗುತ್ತೆ. ನೀವು ಎಷ್ಟೇ ಲಿಕ್ವಿಡ್ ಪದಾರ್ಥ ತಗೊಂಡ್ರು ಶಕ್ತಿ ಬರಲ್ಲ. ಶಕ್ತಿ ಬರಬೇಕು ಅಂದ್ರೆ ಚೆನ್ನಾಗಿ ಊಟ ತಿಂಡಿ ಮಾಡ್ಕೊಂಡು ನಡೆದಾಡೋ ತರ ಬೇಗ ಹುಷಾರಾಗಿ ರೆಸ್ಟ್ ಮಾಡಿ ಸರ್. ಬರ‌್ತಿನಿ ಮತ್ತೆ ಸಿಕ್ತಿನಿ ” ಅಂತ ಹೇಳಿ ಹೊರ ಬಂದಾಗ ಕತ್ತಲಿಡಿತ್ತು

                                   *

ಇದಾಗಿ ತಿಂಗಳಾಯ್ತು. ವಿಪರೀತ ಬಿಸಿಲು. ಸೆಕೆ ಅಂದರೆ ಸೆಕೆ. ಕುಂತಲ್ಲಿ ಕೂರಲಾಗದೆ ನಿಂತಲ್ಲಿ ನಿಲ್ಲಲಾರದ ಧಗೆ. ದೇಶದಾದ್ಯಂತ ಎಲೆಕ್ಷನ್ ಕಾವು. ಬಿಡುವಿಲ್ಲದ ಕೆಲಸದ ಒತ್ತಡ. ಬೆಳಗ್ಗೆ ಏಳು ಎಂಟಕ್ಕೆ ಮನೆ ಬಿಟ್ಟರೆ ತಿರುಗಿ ಬರುವುದು ರಾತ್ರಿ ಎಂಟೊಂಭತ್ತು ಗಂಟೆ. ಇದರೊಳಗೆ ಸಮಯ ಮಾಡಿಕೊಂಡು ಉಳಿಕೆ ಕೆಲಸದ ಬಗ್ಗೆ ಗಮನಹರಿಸುತ್ತಿದ್ದೆ.

ಒಂದು ದಿನ ಮಂಗಳವಾರ ರಾತ್ರಿ ಎಂಟಾದರು ಕೆಲಸ ಮುಗಿದಿರಲಿಲ್ಲ. ಏನಪ್ಪ ಮಾಡೋದು ಲೇಟಾದರೆ ಇಲ್ಲಿಂದ ಸಿಟಿ ತಲುಪುದು ಹೇಗೆ? ಅಲ್ಲಿಂದ ಊರಿಗೆ ಹೋಗಲು ಬಸ್ ಮಿಸ್ಸಾದರೆ.. ಎಂಬ ಚಿಂತೆಯಲ್ಲೆ ಕೆಲಸ ಮಾಡುತ್ತಿದ್ದೆ. ಆ ಹೊತ್ತಲ್ಲೆ ಷಣ್ಮುಖಸ್ವಾಮಿಯವರ ಕಾಲ್ ಬಂತು. ನನಗೆ ಕೆಲಸ ಮುಗಿದಿರದ ಟೆನ್ಸನ್. ಈ ಟೆನ್ಸನಲ್ಲಿ ಕಾಲ್ ರಿಸೀವ್ ಮಾಡದೆ ಸುಮ್ಮನಾದೆ. ಮತ್ತೆರಡು ಸಲ ಕಾಲ್ ಬಂತು. ಬೇಸರದಿಂದಲೇ ಕಾಲ್ ರಿಸೀವ್ ಮಾಡಿ ಕಿವಿಗಿಟ್ಟುಕೊಂಡೆ. ಗೊಗ್ಗರು ಧ್ವನಿಯಲ್ಲಿ “ಸ್ವಲ್ಪ ಮನೆಗ್ ಬರೋಕಾಗುತ್ತಾ..” ಅಂತ ಇನ್ನು ಏನೋ ಮಾತು ಮುಂದುವರಿಸಿದ್ದರು. ನಾನು ಕೆಲಸ ಮಾಡುತ್ತಿದ್ದ ಗೋಡನ್ ತುಂಬ ಗೌಜು ಗದ್ದಲ. ಗೋಡೋನ್ ತುಂಬೆಲ್ಲ ಹಮಾಲಿಗಳು ಓಡಾಡಿಕೊಂಡು ಕೆಲಸ ಮಾಡುತ್ತಿದ್ದರು. ಅವರು ಬೆಳಗ್ಗೆಯಿಂದ ಗೇದು ಗೇದು ಧಣಿದಿದ್ದರು. ಆ ಧಣಿವನ್ನು ಮರೆ ಮಾಚಲೋ ಇಲ್ಲ , ಕೆಲಸ ಬೇಗ ಸಾಗಲೋ, ಧಣಿದ ದೇಹ ಹಗುರ ಮಾಡಿಕೊಳ್ಳಲೊ ಏನೊ, ಕೊನೆ ಕೊನೆಗೆ ಕೂಗುತ್ತ ಅರಚುತ್ತ ಸರಸ ಸಲ್ಲಾಪ ತಮಾಷೆ ಮಾಡುತ್ತ ಕೆಲಸ ಮಾಡುವುದು ಪ್ರತಿದಿನದ ರೂಢಿ. ಈ ಗಜಿಬಿಜಿ ವಾತಾವರಣದಲ್ಲಿ ಅವರು ಏನು ಮಾತಾಡುತ್ತಿದ್ದಾರೆ ಎಂಬುದೇ ಕೇಳದೆ “ಸರ್ ನಾನು ವರ್ಕಲ್ಲಿ ಇದಿನಿ. ಅದೇನೊ ಕೇಳುಸ್ತಿಲ್ಲ ಆಮೇಲೆ ನಾನೇ ಮಾಡ್ತಿನಿ” ಅಂದೆ. ಅವರಿಗೆ ನನ್ನ ಮಾತು ರೀಚಾಯ್ತೋ ಏನೋ ಕಾಲ್ ಕಟ್ಟಾಯ್ತು.

ನನಗಾಗಲೇ ತಡವಾಗಿತ್ತು. ಮುಂದಿನೆರಡು ದಿನಗಳೂ ವಿಪರೀತ ಕೆಲಸದ ನಿಮಿತ್ತ ಅವರಿಗೆ ಕಾಲ್ ಮಾಡುವುದು ಮರೆತೇ ಹೋಯ್ತು. ಮದ್ಯಾಹ್ನ ಊಟದ ಹೊತ್ತು. ಪೋಸ್ಟಾಫಿಸಿನಿಂದ “ಸರ್ ಒಂದು ರಿಜಿಸ್ಟರ್ಡ್ ಪೋಸ್ಟ್ ಇದೆ. ಎಲ್ಲಿದ್ದೀರಾ ಬರೋಕಾಗುತ್ತ” ಅಂತ ಆಗಾಗ ಬದಲಾಗುತ್ತಿದ್ದ ಹೊಸ ಪೋಸ್ಟ್ ಮೇಷ್ಟ್ರು ಕಂ ಪೋಸ್ಟ್ ಮ್ಯಾನ್ ಕಾಲ್ ಮಾಡಿದರು. ಅವರಿಗೆ “ಓಕೆ ಸರ್ ಬಂದು ಕಲೆಕ್ಟ್ ಮಾಡ್ಕೊತಿನಿ” ಅಂತ ಹೇಳುವಾಗ ಮೊನ್ನೆ ಷಣ್ಮುಖಸ್ವಾಮಿ ಕಾಲ್ ಮಾಡಿದ್ದು ನೆನಪಾಗಿ “ಅಯ್ಯೋ ಮರೆತೇ ಹೋಗಿತಲ್ಲ” ಅಂತ ಕಾಲ್ ಮಾಡಿದೆ. ನಾಟ್ ರೀಚಬಲ್ ಬಂತು. ಇನ್ನೂ ಒಂದೆರಡು ಸಲ ಹತ್ತತ್ತು ನಿಮಿಷ ಬಿಟ್ಟು ಮಾಡಿದೆ. ಹಾಗೇ ನಾಟ್ ರೀಚಬಲ್. ಸರಿ, ಹೇಗೂ ನಾಳೆ ಬಸವ ಜಯಂತಿ ರಜೆ ಇರೋದರಿಂದ ಸಂಜೆ ಹೋಗಿ ಮಾತಾಡಿ ಬಂದರಾಯ್ತು ಅಂತ ಸುಮ್ಮನಾದೆ.

                     *

ಮದ್ಯಾಹ್ನದ ಸುಡು ಬಿಸಿಲು. ತರಕಾರಿ ಕೊಳ್ಳಲು ಟೌನ್ ಕಡೆಗೆ ಗಾಡಿ ಏರಿದೆ. ನನ್ನ ಗಾಡಿ ಪ್ರೈವೇಟ್ ಬಸ್ಟ್ಯಾಂಡ್ ಮೂಲಕ ಲಿಂಕ್ ರೋಡಲ್ಲಿ ಹೋಗ್ತಾ ವಿಜೈ ಭಗವಾನ್ ಟಾಕೀಸ್ ರಸ್ತೆಯ ಡೌನಿಗೆ ಇಳಿಯಿತು. ಮುರುಗನ್ ಟಾಕೀಸ್ ಸಮೀಪ ಗೀತಾ ಏಜೆನ್ಸೀಸ್ ಮುಂಭಾಗದಲ್ಲಿ ಸಾಹಿತ್ಯ ಪರಿಷತ್ತಿನ ಒಂದಷ್ಟು ಜನ ಹೂವು ಹಿಡಿದು ಏನೋ ಯೋಚಿಸುತ್ತ ಮಾತಾಡುತ್ತ ನಿಂತಿದ್ದರು. ಅವರು ನನ್ನನ್ನು ಗಮನಿಸಿದರೊ ನಾನು ಅವರನ್ನು ನೋಡಿದೆನೊ ಅದೊಂದೂ ಗೊತ್ತಾಗದೆ ನಾನು ಅವರಿಗೆ ಕೈಯೆತ್ತಿ ವಿಶ್ ಮಾಡುವುದಕ್ಕು ಅವರು ನನ್ನನ್ನು ಕೂಗಿ ಕರೆಯುವುದಕ್ಕು ಸರಿಯಾಗಿತ್ತು. ಆಗ ಗಾಡಿಯನ್ನು ಅವರತ್ತಲೇ ತಿರುಗಿಸಿ “ಏನ್ ಸಾರ್ ಎಲ್ಲ ಒಟ್ಟೊಟ್ಟಿಗೆ ಸೇರಿದ್ದೀರಿ ಬಸವ ಜಯಂತಿ ಜೋರು ಅನ್ಸುತ್ತೆ.. ” ಅಂದೆ. ಅವರು “ಅಯ್ಯೋ ಗೊತ್ತಿಲ್ವೆ..? ಷಣ್ಮುಖಸ್ವಾಮಿಯವರು ತೀರಿಕೊಂಡರಂತೆ. ನಮಗೂ ಈಗ ತಾನೇ ಗೊತ್ತಾಯ್ತು. ಬೆಳಗ್ಗೆ ಒಂಭತ್ತಕ್ಕೆ ಹೋಗಿದಾರೆ ಪಾಪ. ಯಾರೂ ಹೇಳಿಲ್ಲ” ಅಂದರು. ನನಗೆ ಮಾತೇ ಹೊರಡಲಿಲ್ಲ.

                           *

ಹೊಗೆಯಾಡುತ್ತಿದ್ದ ಅವರ ಮನೆಯ ಮುಂದೆ ಹತ್ತಾರು ಜನ ನಿಂತಿದ್ದರು. ನಾನು ಈಗಾಗಲೇ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಮಿಟಿಯ ಕೆಲವರಿಗೆ ಕಾಲ್ ಮಾಡಿ ಹೇಳಿದ್ದೆ. ಹಾಗೆ ಹದಿನೆಂಟು ವರ್ಷ ತಾಲ್ಲೋಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರ ಬಗ್ಗೆ ವಿವರವಾಗಿ ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟಿಸಿ ಗೌರವ ಸಲ್ಲಿಸಿದ್ದು ಸುತ್ತಮುತ್ತಲ ಅನೇಕರಿಗೆ ತಿಳಿದು ನನ್ನ ಪೋಸ್ಟ್ ನೋಡಿದ್ದ ಕೆಲವರು ಸಾವಿನ ಮನೆಯ ಮುಂದೆ ಹಾಜರಿದ್ದದ್ದು ಕಂಡು ಬಂತು. ಹತ್ತಿರ ಹೋದೆ. ಪೋಸ್ಟ್ ಮೇಷ್ಟ್ರು ಷಣ್ಮುಖಸ್ವಾಮಿ ಈಗ ತಾನೇ ದಿಂಬಿಗೆ ತಲೆ ಕೊಟ್ಟು ಮಲಗಿರುವರೇನೊ ಅನ್ನಿಸಿತು. ಅವರ ಹೆಂಡತಿ ಹಣೆ ತುಂಬ ವಿಭೂತಿ ಹಚ್ಚಿಕೊಂಡು ದುಕ್ಕಳಿಸುತ್ತ ಪಕ್ಕದಲ್ಲೆ ಕುಂತಿದ್ದರು. ಆಗ ಅದೇ ಖಾಕಿ ಚಡ್ಡಿ ಅದೇ ಟೀಶರ್ಟ್ ತೊಟ್ಟಿದ್ದ ಅವರ ಮಗ ಪೆದ್ದರಾಮ ಮನೆಯ ಒಳ ಬಾಗಿಲಿಡಿದು ದಿಕ್ಕೆಟ್ಟವನಂತೆ ಬೆರಗಿನಿಂದ ನಿಂತಿದ್ದವನು ಅದೇಕೊ ಏನೊ ಬಾಗಿಲ ಬಳಿ ಕುಂತಿದ್ದ ಹೆಂಗಸರ ಸಂದಿಯಿಂದ ಜಾಗ ಮಾಡಿಕೊಂಡು ನಿಧಾನಕೆ ಬಂದು ಮಾಮೂಲಿಯಂತೆ ಕೈಕಟ್ಟಿ ನನ್ನ ಪಕ್ಕ ನಿಂತು ಸತ್ತು ಮಲಗಿದ್ದ ಅವರ ಅಪ್ಪನನ್ನೆ ನೋಡತೊಡಗಿದ. ನಾನು ಸುಮ್ಮನೆ ಅವನ ಹೆಗಲ ಮೇಲೆ ಕೈಯಿಟ್ಟು ಸಮಾಧಾನ ಮಾಡುವವನಂತೆ ಅವನ ಮುಖವನ್ನೇ ನೋಡಿದೆ. ಪೆದ್ದರಾಮನ ಕಣ್ಣು ಮುಖದಲ್ಲಿ ಪೋಸ್ಟ್ ಮ್ಯಾನ್ ಗಂಗಣ್ಣನ ದಾರಿಯ ಗೆರೆಗಳೇ ಕಾಣತೊಡಗಿದವು.

-ಎಂ.ಜವರಾಜ್


(ಮುಗಿಯಿತು)


[ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. “ಕತ್ತಲ ಹೂವು” (ಕಾದಂಬರಿ) ಪ್ರಕಟಣೆಗೆ ಸಿದ್ದಗೊಳ್ಖುತ್ತಿದೆ. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿಂದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಪ್ರಸ್ತುತ “ಪೋಸ್ಟ್ ಮ್ಯಾನ್ ಗಂಗಣ್ಣ” ಎಂಬ ನೀಳ್ಗತೆ ಮುಗ್ಧ ಪೋಸ್ಟ್ ಮ್ಯಾನ್ ಒಬ್ಬನ ಜೀವನ ಚಿತ್ರವನ್ನು ಹೇಳುವ ಒಂದು ಕುತೂಹಲಕಾರಿ ಕಥೆಯಾಗಿದೆ]


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x