ಏಳು ವರ್ಷವಾಯ್ತು. ಅದೊಂದು ದಿನ ಕಛೇರಿ ಕೆಲಸದ ಮೇಲೆ ಬಳ್ಳಾರಿಗೆ ಹೋಗಿದ್ದೆ. ಅದರ ಹಿಂದಿನ ದಿನ ಸಮಸ್ಯೆಯಾಗಿ ಕೊಪ್ಪಳದ ವೈದ್ಯರ ಬಳಿ ಹೋಗಿದ್ದೆ. “ಯಾವುದಕ್ಕೂ ಕಾರ್ಡಿಯೋ ಎಕೊ ಟೆಸ್ಟ್ ಮಾಡಿಸಿ” ಅಂದಿದ್ದರು. ಅದಕ್ಕೆಂದೇ ವೈದ್ಯರೊಬ್ಬರಲ್ಲಿ ಹೋಗಿದ್ದೆ. ಕಾರಣ ಹೇಳಿದೆ. ಅಲ್ಲಿಗೆ ತಜ್ಞ ವೈದ್ಯರೊಬ್ಬರು ಬಂದು ಬಿಪಿ ಚೆಕ್ ಮಾಡಿದರು. “ಏನ್ರಿ ನೀವು, ಇಷ್ಟು ನೆಗ್ಲೆಕ್ಟ್ ಮಾಡಿದಿರಿ, ನೋಡಿ ಬಿಪಿ ಹೈ ಆಗಿ ನಿಮಗೆ ಮೇಜರ್ ಹಾರ್ಟ್ ಆಟ್ಯಾಕ್ ಆಗಿದೆ “ ಅಂದುಬಿಟ್ಟ… ರೀ ಸ್ವಾಮಿ ಬಿಪಿ ತೀರ ಆ ಪರಿ ಜಾಸ್ತಿ ಆಗಿದ್ರೆ ನನಗದು ಫೀಲ್ ಆಗಬೇಕಿತ್ತಲ್ಲವಾ? ಮೇಜರ್ ಹಾರ್ಟ್ ಆಟ್ಯಾಕ್ ಆಗಿದ್ದರೂ ಕೂಡ ನನ್ನಲ್ಲಿ ಸ್ವಲ್ಪವಾದರೂ ವ್ಯತ್ಯಾಸ ಕಾಣಬೇಕಿತ್ತಲ್ವಾ? ಹಿಂದಿನ ದಿನವೇ ಬಿಪಿ ಚೆಕ್ ಮಾಡಿಸಿದ್ದು ಚೀಟಿ ತೋರಿಸಿದೆ, ನಾರ್ಮಲ್ಲೇ ಇದೆ. ನಾನು ಬಂದಿರೋದು ಎಕೊ ಟೆಸ್ಟ್ ಮಾಡಿಸಿಕೊಳ್ಳಲು, ಅಷ್ಟನ್ನು ಮೊದಲು ಮಾಡಿ ಅಂದರೆ “ಏನಾದ್ರೂ ಜೀವಕ್ಕೆ ಅಪಾಯ ಆದರೆ ನಿಮ್ಮಿಷ್ಟ… ಆದಷ್ಟು ಬೇಗ “ …….“ ಇಂಥ ಆಸ್ಪತ್ರೆಗೆ ದಾಖಲಾಗಿ ಅಂದರು… ಜೊತೆಗೆ ಹೆಂಡತಿ ಇದ್ದ ಕಾರಣಕ್ಕೋ ಏನೋ ಯಾಕಿದ್ದೀತು ಚೆಕಪ್ ಮಾಡಿಸಿದರಾಯ್ತು ಅಂದು ಹೋದೆ.
ಆ ಆಸ್ಪತ್ರೆಯದೊಂದು ಕತೆ. ಹೋಗ್ತಿದ್ದಂತೆಯೇ ದಡಾಬಡಾ ತಗೊಂಡು ಹೋಗಿ ಐ.ಸಿ.ಯೂ ನಲ್ಲಿ ಕೆಡವಿದ್ದೇ ಬಂತು. ಒಂದು ಬ್ಲಡ್ ಸ್ಯಾಂಪಲ್ ತೆಗೆದುಕೊಂಡಿದ್ದು ಬಿಟ್ಟರೆ ಒಂದು ಇ.ಸಿ.ಜಿ ಇಲ್ಲ, ಮತ್ತೊಂದೂ ಇಲ್ಲ. ನೋಡಿದರೆ ಕರೆದುಕೊಂಡು ಬಂದು ಅಡ್ಮಿಟ್ ಮಾಡಿಸಿದ ವೈದ್ಯ ಅಲ್ಲಿಂದ ನಾಪತ್ತೆ. ಮತ್ತೊಬ್ಬ ವೈದ್ಯ ಬಂದದ್ದೂ ಇಲ್ಲ. ನಾಲ್ಕು ಗಂಟೆಗೆ ಹೋದವನು ರಾತ್ರಿ ಒಂಭತ್ತುವರೆವರೆಗೆ ಒಬ್ಬೆ ಒಬ್ಬ ವೈದ್ಯ ಬರಲಿಲ್ಲ. ಅದರೊಳಗೆ ಹೊಟ್ಟೆ ಹಸಿವಿಗೆ ಅಳಿಯನಿಂದ ಇಡ್ಲಿ ತರಿಸಿಕೊಂಡು ತಿಂದೆ. ನರ್ಸ್ ನ ಕೇಳಿದರೆ ವೈದ್ಯರ ನಂಬರ್ ಕೊಡಲಿಲ್ಲ. ಯಾವಾಗ ಬರುತ್ತಾರೆಂದೂ ಹೇಳಲಿಲ್ಲ. ಅಷ್ಟರಲ್ಲೇ ಯಾವನೋ ಒಬ್ಬ ಆಕ್ಷಿಜನ್ ಸಿಲಿಂಡರ್ ತಂದು ಬೆಡ್ ಪಕ್ಕಕ್ಕೆ ಆನಿಸತೊಡಗಿದ. ಕೇಳಿದರೆ “ವೈದ್ಯರು ಹೇಳಿದ್ದಾರೆ, ನಿಮಗೆ ಉಸಿರಾಟದ ಸಮಸ್ಯೆ ಇದೆಯಂತೆ, ಹಾಕಲು ಹೇಳಿದ್ದಾರೆಂದ…ಶಬ್ಬಾಸ್…..
ಕೊನೆಗೆ ಬೇಸತ್ತು ಪರಿಚಿತ ಗೆಳೆಯ ವಕೀಲನಿಗೆ ಕರೆ ಮಾಡಿ “ ಬರ್ತಾ ವಕಾಲತ್ತು ಫಾರ್ಮ್ ತಗಂಬಾ ದೋಸ್ತಾ, ಒಂದು ಮೆಡಿಕಲ್ ನೆಗ್ಲಿಜೆನ್ಸ್ ಕೇಸ್ ಹಾಕಬೇಕಿದೆ” ಅಂತ ಜೋರಾಗಿಯೇ ಹೇಳಿದೆ.. ಆಗ ಡ್ಯೂಟಿ ಮೇಲಿದ್ದ ಡಾಕ್ಟರ್ ಓಡೋಡಿ ಬಂದು “ ಮೆಲ್ಲಗೆ ಮಾತಾಡಿ ಸಾ…. ಅಕ್ಕಪಕ್ಕದ ಪೇಷೆಂಟ್ ಗಳಿಗೆ ಡಿಸ್ಟರ್ಬ್ ಆಗುತ್ತೆ” ಅಂದ… ಅದು ಡಿಸ್ಟರ್ಬ್ ಆಗುತ್ತದೆಂದಲ್ಲ, ಪಕ್ಕದ ಪೇಷೆಂಟ್ ಗಳಿಗೆ ನಾನು ಮೆಡಿಕಲ್ ನೆಗ್ಲಿಜನ್ಸ್ ಕೇಸ್ ಹಾಕಬೇಕಿದೆ ಅಂದೆನಲ್ಲ? ಅದನ್ನು ಕೇಳಿಸಿಕೊಂಡಾರು ಎಂಬಂತಿತ್ತು ಆ ವೈದ್ಯರ ಬೇಡಿಕೆ..
ಹತ್ತು ಗಂಟೆ ಆಗುತ್ತಾ ಬಂದರೂ ಒಬ್ಬ ವೈದ್ಯರು ಬಾರದೇ ಇದ್ದ ಕಾರಣಕ್ಕೆ ಕೈಗೆ ಹಾಕಿದ್ದ ಐ.ವಿ. ಕಿತ್ತೆಸೆದು ಐ.ಸಿ.ಯೂ ನಿಂದ ಎದ್ದು ಬಂದೆ. ಅಲ್ಲಿವರೆಗೂ ವೈದ್ಯರೊಂದಿಗೆ ಮಾತಾಡಿಸಿ, ಅಥವಾ ಅವರ ನಂಬರ್ ಕೊಡಿ ಅಂದರೆ ಕೊಡದಿದ್ದ ನರ್ಸ್ ಈಗ ಕರೆದುಕೊಂಡು ಬಂದ ವೈದ್ಯನಿಗೆ ಕರೆ ಮಾಡಿ ತನ್ನ ಮೊಬೈಲ್ ಕೊಟ್ಟಳು. ಆ ವೈದ್ಯನದು ಅದೇ ಭಯಬೀಳಿಸುವ ರೋದನೆ “ ನೋಡಿ ಸಾ… ಆಸ್ಪತ್ರೆ ಮೆಟ್ಟಿಲು ಇಳಿಯುವುದರಲ್ಲೇ ಪ್ರಾಣ ಹೋದ ಉದಾಹರಣೆಗಳಿವೆ….” ಅಂತ….. ಆ ವೈದ್ಯನಿಗೆ “ನಾ ವಾಪಾಸ್ ಬದುಕಿ ಬಂದು ಕಾಣ್ತೀನಿ” ಅಂದು ಬಂದಿದ್ದೆ. ಆಗ ಮಾಮ, ಅಕ್ಕ, ಅಳಿಯ, ಹೆಂಡತಿ ಎಲ್ಲಾ ಇದ್ದರು. ಅಲ್ಲಿದ್ದರೆ ಇನ್ನು ಏನೇನು ಕಾರಣ ಹೇಳಿ ಸುಲಿಗೆಯಾಗುತ್ತಿತ್ತೋ ಗೊತ್ತಿಲ್ಲ. ಬೇರೆ ಕಡೆ ಚೆಕಪ್ ಮಾಡಿಸಿ ಕೇವಲ ಔಷಧಿಗಳೊಂದಿಗೆ ವಾಪಾಸ್ ಬಂದೆ…
ಮೊನ್ನೆ ಅಕ್ಕನ ಮಗಳ ಸೀಮಂತ ಕಾರ್ಯಕ್ಕೆ ಹೋಗಿದ್ದೆ… ಆ ಹುಡುಗಿ ಇನ್ನೇನು ಒಂದು ತಿಂಗಳೊಳಗೆ ಮಗುವಿನ ತಾಯಿಯಾಗುತ್ತಾಳೆ. ಆಕೆಯನ್ನು ಆಕೆಯ ಅಮ್ಮನನ್ನು ದಿಟ್ಟಿಸಿ ನೋಡಿದೆ. ಅದಾಗಿ ಮಾರನೇ ದಿನ ಫೋಟೋ ನೋಡುತ್ತಿದ್ದೆ ಹಾಗೆ ಇಪ್ಪತ್ತಾರು ವರ್ಷಗಳ ಹಿಂದೆ ತಲೆ ತಿರುಗಿತು…. ಅಕ್ಕನಿಗೆ ಮೂರು ತಿಂಗಳಾಗಿತ್ತೇನೋ ವೈದ್ಯರಲ್ಲಿ ಚೆಕಪ್ ಗೆಂದು ಹೋಗಿದ್ದಾರೆ. ವೈದ್ಯ ದಂಪತಿ ಅವರು.. “ಈ ಮಗು ಬೆಳವಣಿಗೆ ಆಗಿಲ್ಲ… ಮುಂದೆ ನಿಮಗೆ ಅಪಾಯವಾಗಬಹುದು ಅಥವಾ ಅನಾರೋಗ್ಯ ಮಗು ಜನಿಸಬಹುದು.. ಅಬಾರ್ಷನ್ ಮಾಡಿಸಿಬಿಡಿ” ಅಂದಿದ್ದಾರೆ. ಕೇವಲ ಚೆಕಪ್ ಮಾಡಿಸಿಕೊಳ್ಳಲು ಹೋದ ಅಕ್ಕ ಮಾಮ ದಿಗಿಲು ಬಿದ್ದಿದ್ದಾರೆ. ಎಲ್ಲಿವರೆಗೆಂದರೆ ತಾಯಿಗೆ ಏನಾದ್ರೂ ತೊಂದರೆ ಆದೀತೆಂದು ಆ ಮಗುವನ್ನು ತೆಗೆಸಿದರಾಯಿತೆನ್ನುವ ಹಂತಕ್ಕೆ ಯೋಚಿಸಿದ್ದಾರೆ. ನಾನಿನ್ನು ಆಗತಾನೆ ಸರ್ಕಾರಿ ನೌಕರಿಗೆ ಸೇರಿದ್ದೆ. ಶನಿವಾರ ಹೋದವನಿಗೆ ಮನೆಯಲ್ಲಿ ಈ ವಿಷಯ. ತಡ ಮಾಡಲಿಲ್ಲ. ಮಾಮನಿಗೆ ತಿಳಿಸಿ ದಾವಣಗೆರೆ ವೈದ್ಯರೊಬ್ಬರಲ್ಲಿ ತಪಾಸಣೆಗೆ ಅಕ್ಕನನ್ನು ಕರೆದುಕೊಂಡು ಹೋಗಿ ಬಂದೆ. ಅಲ್ಲಿಗೆ ಆ ವೈದ್ಯರು “ ಮಗು ಬೆಳವಣಿಗೆ ಚೆನ್ನಾಗಿದೆ, ಏನೂ ತೊಂದರೆ ಇಲ್ಲ., ಯಾರಾದ್ರೂ ಗರ್ಭಿಣಿಯರಿಗೆ ಈ ಥರಾ ಸುಳ್ಳು ಹೇಳಿ ಹೆದರಿಸುತ್ತಾರಾ? ಅಂದರು. ಅದಾಗಿ ಪ್ರತಿ ತಿಂಗಳು ಚೆಕಪ್ಪೂ ಆಯ್ತು. ನಾರ್ಮಲ್ ಡೆಲಿವರಿಯೂ ಆಯ್ತು.. ಬಹುಶ: ಆ ವೈದ್ಯ ಮಹಾಶಯ ನಾಮಕರಣಕ್ಕೆ ಬಂದಿದ್ದರು ಅನ್ಸುತ್ತೆ. ಹಾಗೆ ಹುಟ್ಟಿದ ಹುಡುಗಿಯೇ ಈಗ ಮದುವೆಯಾಗಿ ಎಂಟು ತಿಂಗಳ ತುಂಬಿ ಸೀಮಂತ ಕಾರ್ಯ ಮಾಡಿಸಿಕೊಳ್ಳುತ್ತಿರುವುದು.
ಒಂದು ವೇಳೆ ನಾವು ಅಂತಲ್ಲ, ಯಾರೇ ಆಗಲಿ ದುಡುಕಿ ವೈದ್ಯ ಹೇಳಿದ್ದೇ ಸತ್ಯವೆಂದು ನಂಬಿ ಗರ್ಭಪಾತ ಮಾಡಿಸಿದ್ದರೆ ಇಷ್ಟು ಎತ್ತರ ಬೆಳೆವ ಮಗಳನ್ನು ಅಥವಾ ಗಂಡಾಗಿದ್ದಲ್ಲಿ ಮಗನನ್ನು ಹುಟ್ಟುವ ಮೊದಲೇ ಸಾಯಿಸಿದಂತಾಗುತ್ತಿತ್ತಲ್ಲವೇ? ಎಲ್ಲಾ ವೈದ್ಯರು ಹೀಗಲ್ಲ. ಆದರೆ ಕೆಲವೇ ಕೆಲವು ಮನಿ ಮೈಡೆಡ್ ಆಗಿ ಮತ್ತು ರಾಂಗ್ ಡೈಯಾಗ್ನೈಜ್ ಮಾಡುವುದರಿಂದ ಅಂಥವರನ್ನೇ ನಂಬಿ ಹೋಗುವ ಪೋಷಕರ ಗತಿ ಏನು?..
ಈಗ ಆ ವೈದ್ಯನಿಗೆ ಇಷ್ಟುದ್ದ ಬೆಳದ ಮಗಳನ್ನು ತೋರಿಸಬೇಕು. ವರ್ಷಗಳು ಉರುಳಿದ ನಂತರ ಯಾವ ಪೇಷಂಟು, ಯಾರಂತ ಆ ವೈದ್ಯರಿಗೆ ನೆನಪಿರುತ್ತೋ ಇಲ್ಲವೋ ಆ ಮಾತು ಬೇರೆ. ಆದರೆ ಪರಿಚಿತ ಊರಲ್ಲಿ ಗೊತ್ತಿರುವ ಮುಖ ಮತ್ತು ವ್ಯಕ್ತಿಗಳಾಗಿದ್ದಲ್ಲಿ ವೈದ್ಯರಾದವರಿಗೆ ಖಂಡಿತವಾಗಿ ಅವರೊಳಗೆ ಒಂದು ಗಿಲ್ಟ್ ಕಾಡಿದರೆ ಸಾಕು. ಕಳೆದ ವರ್ಷ ಹೊಸಪೇಟೆ ನಿವಾಸಿ ಗರ್ಭಿಣಿಯೊಬ್ಬರು ಅಲ್ಲಿನ ಪ್ರಸಿದ್ಧ ವೈದ್ಯರ ನಿರ್ಲಕ್ಷ್ಯಕ್ಕೊಳಗಾಗಿ ಜೀವ ಕಳೆದುಕೊಂಡ ಕೇಸು ನಮ್ಮಲ್ಲಿ ಫೈಸಲ್ಲಾಗಿ ಆರು ಲಕ್ಷ್ಯ ಪರಿಹಾರ ಕೊಡಿಸಿದ್ದನ್ನು ಅಧಿಕೃತವಾಗಿ ಕಳಿಸಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟಗೊಂಡಿದ್ದಕ್ಕೆ ವೈದ್ಯರು ಕರೆ ಮಾಡಿ “ ಏನ್ಸಾರ್ ಪೇಪರ್ ನಲ್ಲಿ ಸುದ್ದಿ ಮಾಡಿದಾರೆ…” ಅಂತ ಯಾಕೆ ಸುದ್ದಿ ಕಳಿಸಿದಿರಿ ಅನ್ನುವ ಅರ್ಥದಲ್ಲಿ ಕೇಳಿದ್ದರು. ಮಾಡಬಾರದಾ? . ವೈದ್ಯೋ ನಾರಾಯಣ ಹರಿ ಅನ್ನುತ್ತಾರೆ. ಆದರೆ “ನಾರಾಯಣ” ಕೇವಲ “ಲಕ್ಷ್ಮಿ” ಜಪ ಮಾಡಿದರೆ ಮಾತ್ರ ಹೀಗೆ ನಿರ್ಲಕ್ಷ್ಯತನಕ್ಕೆ ದಾರಿಯಾಗುವುದು.
ಆ ಹುಡುಗಿ ಹುಟ್ಟಿದಾಗಿನಿಂದ ಇಲ್ಲಿವರೆಗೆ ನೋಡಿದ ನನಗೆ ಬಾಲ್ಯದ ಒಂದಿಷ್ಟು ನೆನಪುಗಳು ಹಾಗೆ ಹಾದು ಹೋದವು. ವೈದ್ಯರ ವೃತ್ತಿ ನಿರ್ಲಕ್ಷ್ಯವನ್ನು ಹೇಳಬೇಕೋ ಬೇಡವೋ ಪ್ರಶ್ನೆ ಅದಲ್ಲ. ಆದರೆ, ಘಟನೆಗಳನ್ನು ಹೇಳಿದಾಗ ಯಾರಾದರೂ “ ನಮಗೇನ್ ಗೊತ್ತಿಲ್ಲದ್ದಲ್ಲ . ಅದೆಲ್ಲಾ ಈಗ್ಯಾಕೆ…. ಸರಿ ಅದನ್ಯಾಕೆ ನೀನ್ ಹೇಳೋದು” ಅನ್ನೋ ಥರ ಮಾತು ಬಂದರೆ ಮಾತ್ರ ಅದಕ್ಕೆ ಉತ್ತರವಿರುವುದಿಲ್ಲ. ಇಂಥವೇ ಬೇರೆ ಬೇರೆ ಸಮಯದಲ್ಲಿ ಬೇರೆ ವಿಷಯಕ್ಕೆ ನನಗೆ ಬೇರೆಯವರಿಂದ ಆದ ಅಪಸವ್ಯಗಳನ್ನೂ ಸಹಿಸದೇ ಹೇಳಿದ್ದಕ್ಕೂ ನಾನು ಸಾಕಷ್ಟು ಟೀಕೆಗೆ ಗುರಿಯಾಗಿದ್ದೇನೆ. ನನಗನ್ನಿಸಿದ್ದನ್ನು ಹೇಳಿಬಿಡುತ್ತೇನೆ. ಆಮೇಲೆ ಅದನ್ನು ಹೇಳದಿದ್ದರೂ ಆಗಿರುತ್ತದೆ. ಅಷ್ಟೊತ್ತಿಗೆ ಹೇಳಿಯಾಗಿರುತ್ತದೆ. ಇದರಿಂದ ಮುಖ ತಿರುಗಿಸಿಕೊಂಡವರಿದ್ದಾರೆ. ಮಾತು ಬಿಟ್ಟವರಿದ್ದಾರೆ. ಬೇಜಾರಿಲ್ಲ.
ಒಳ್ಳೆಯ ಹೆಸರು ಬಂದರೆ ಖುಷಿ ಪಡಲು ಹೇಳುವವರಿರುವಂತೆ ಅಚಾತುರ್ಯವಾದಾಗ ತಿಳಿಸಿ ಹೇಳುವವರೂ ಇದ್ದಾಗಲೇ ಪರಿಸ್ಥಿತಿ ಅರ್ಥವಾಗೋದು. ಇದರ ಹೊರತಾಗಿ ಊದೋ ಶಂಖ ಬಾರಿಸೋ ಜಾಗಟೆ ಅನ್ನೋ ಥರಾ ಕೆಲಸಕ್ಕೆ ಬಾರದ ಮತ್ತು ವಾಸ್ತವದಲ್ಲಿರದ ಅಥವಾ ಕಾಣದ ವಿಷಯಗಳನ್ನು ಹಲವರ ಬಗ್ಗೆಹರಡುತ್ತಾ ಕಾಲ ಕಳೆಯುವವರ ಸಂಖ್ಯೆ ನಮ್ಮ ಸುತ್ತ ದೊಡ್ಡದೇ ಇದೆ. ಅದಕ್ಕೆ ತೂಕ ಕಡಿಮೆ. ಇದೇ ಕಾರಣಕ್ಕೆ ಕೆಲವೊಂದನ್ನು ಕಂಡೂ ಕಾಣದಂತೆ ತಿಳಿದೂ ತಿಳಿಯದಂತೆ ಸುಮ್ಮನಿರುವುದು ವಾಸಿ ಅನ್ನಿಸಿದ್ದಿದೆ. ಹಾಗಿದ್ದೂ ನೋಡಿದ್ದಾಯಿತು. ಅದರಿಂದ ಒಳಗೊಳಗೆ ಆತಂಕ ತುಂಬಿ ಏನೂ ಮಾತನಾಡದ ಹಾಗೆ ಪ್ರತಿಕ್ರಿಯೆ ನೀಡಲಾರದ ಸ್ಥಿತಿಗೆ ಬಂದಿದ್ದೂ ಆಗಿದೆ. ಶಂಖ ಜಾಗಟೆ ಆಗೋದು ಬೇಡ ಅಂತ ಇದ್ದದ್ದನ್ನೂ ಹೇಳುವಾಗಲೂ ಹೆಚ್ಚು ಮಾತಾಡುವುದನ್ನು ಇನ್ನು ಬಿಡಬೇಕಷ್ಟೇ….
-ಪಿ.ಎಸ್. ಅಮರದೀಪ್
Real face of medical world
Great sir