ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 12)”: ಎಂ.ಜವರಾಜ್

-೧೨-
ಕರೋನಾ ನಂತರ ಆಫೀಸಲ್ಲಿ ಕೆಲಸವೂ ಹೆಚ್ಚಾಗಿತ್ತು. ಸರ್ಕಾರದ ನಿಯಮಾವಳಿ ಬದಲಾಗಿತ್ತು. ಕರೋನಾ ಭೀತಿಯಲ್ಲೆ ಮನೆಯಲ್ಲಿ ಅದು ಇದು ಕೆಲಸ ಮುಗಿಸಿ ಬೆಳಗ್ಗೆ ಆರೇಳು ಗಂಟೆಗೆ ಮನೆ ಬಿಟ್ಟರೆ ಆಫೀಸ್ ಕೆಲಸ ಮುಗಿಸಿ ಎರಡೆರಡು ಬಸ್ ಹತ್ತಿ ಮನೆ ಸೇರುತ್ತಿದ್ದುದು ರಾತ್ರಿ ಒಂಭತ್ತು ಹತ್ತು ಗಂಟೆಯಾಗುತ್ತಿತ್ತು.

ಈ ಒತ್ತಡದಲ್ಲಿ ಗಂಗಣ್ಣ ಸಿಕ್ಕಿದ್ದು ಮರೆತು ಹೋಗಿತ್ತು. ಆದರೆ ಮೊಬೈಲ್ ಓಪನ್ ಮಾಡಿ ಅದು ಇದು ನೋಡುವಾಗ ಗಂಗಣ್ಣನ ಫೋಟೋ ಕಣ್ಣಿಗೆ ಬಿದ್ದು ನೆನಪಾಗ್ತಿತ್ತು. ಅದು ಬಿಟ್ಟರೆ ಪೋಸ್ಟ್ ಆಫೀಸಲ್ಲಿ ಪೋಸ್ಟ್ ಮಾಡೊದು ಏನಾದರು ಇದ್ದರೆ ಯಾವಾಗಲೊ ಒಂದೊಂದು ಸಲ ಹೋಗುತ್ತಿದ್ದೆ. ಆಗಾಗ ಬದಲಾಗುತ್ತಿದ್ದ ಹೊಸ ಮುಖದ ಪೋಸ್ಟ್ ಮೇಷ್ಟ್ರು ಪೋಸ್ಟ್ ಮ್ಯಾನ್ಗೆ ಒಂದು ಸಣ್ಣ ಸ್ಮೈಲ್. ಅವರೇ ಪೋಸ್ಟ್ ಮೇಷ್ಟ್ರು ಅವರೇ ಪೋಸ್ಟ್ ಮ್ಯಾನ್. ಎರಡೆರೆಡು ಕೆಲಸ ಒಬ್ಬರೇ. ಅವರಿಗೆ ನನ್ನ ಪರಿಚಯಿಸಿಕೊಂಡು ಲೆಟರ್ ಬಂದರೆ ತಲುಪಿಸಿ ಅಂತ ರಿಕ್ವೆಸ್ಟ್ ಮಾಡಿಕೊಳ್ಳುತ್ತಿದ್ದೆ. ಪೋಸ್ಟ್ ಮೇಷ್ಟ್ರು ನನ್ನ ಬಗ್ಗೆ ಒಂದಷ್ಟು ಹೆಚ್ಚೇ ಕೇಳುತ್ತಿದ್ದರು. ನಿಮಗೆ ಹೇಗೆ ಗೊತ್ತು ಅಂದರೆ ಷಣ್ಮುಖಸ್ವಾಮಿಯವ್ರು ಹೇಳ್ತಿದ್ದರು. ನಿಮ್ಮ ಹೆಸರು ಕೇಳಿದ ಮೇಲೆ ನೀವೆ ಅಂತ ಗೊತ್ತಾಯ್ತು ಕೂತ್ಕೊಳಿ ಸರ್ ಅನ್ನೋರು. ಇದರೊಂದಿಗೆ ಗಂಗಣ್ಣನ ಒಡನಾಟ, ಅವನ ಕೆಲಸದ ರೀತಿ, ಫಜೀತಿ ಬಗ್ಗೆ. ಇದನ್ನೆಲ್ಲ ಷಣ್ಮುಖಸ್ವಾಮಿ ಯಥಾವತ್ ಹೇಳಿದ್ದರು ಅನ್ಸುತ್ತೆ. ಇದನ್ನು ಪಕ್ಕದಲ್ಲೆ ಇದ್ದ ನಮ್ಮೂರಿನ ವಯಸ್ಸಾದ ಒಂದಿಬ್ಬರು ಕೇಳಿಸಿಕೊಂಡು ನಗೋರು. ಅವರೊಂದಿಗೆ ಪೋಸ್ಟ್ ಮ್ಯಾನಾಗಿ ಬಂದಿದ್ದ ಪೋಸ್ಟ್ ಮೇಷ್ಟ್ರೂ ನಗೋರು. ಹಾಗೆ ನಗುತ್ತ ಇನ್ನಷ್ಟು ಪ್ರಶ್ನೆ ಹಾಕುತ್ತಿದ್ದರು. ಆಮೇಲೆ ನಮ್ಮೂರಿನ ಅವರೇ ಇನ್ನೊಮ್ಮೆ ಸಿಕ್ಕಿ ‘ಕುಸೊ ಆ ಗಂಗ ಅದೆಲ್ಲಿದ್ದನು? ಅವತ್ತು ಪೋಸ್ಟಾಫೀಸಲ್ಲಿ ನೀವು ಮಾತಾಡ್ತ ನಗಾಡ್ತಿದ್ರೆಲ್ಲ.. ಮದ್ವ ಮಕ್ಳು ಆಗಿದ್ದವ.. ಇನ್ನೂ ಕೆಲ್ಸ ಮಾಡ್ತಿದ್ದನ? ಇಲ್ಲ ಅನ್ಸುತ್ತ ಅಲ್ವ..? ರಿಟೈರ್ಡ್ ಆಗಿರ‌್ಬೇಕು. ಎಪ್ಪತ್ತು ಎಂಭತ್ತು ಆಗಿರುತ್ತ.. ನಮ್ ಸಣ್ಮುಕ್ಸಾಮಿಗೆ ರಿಟೈರ್ಡ್ ಆಯ್ತು ಅವ್ನಿಗೂ ಆಗ್ದೆ ಇದ್ದುದ. ಇಬ್ರು ಒಂದೆ ಸಲ ಅಲ್ವ ಕೆಲ್ಸುಕ್ ಸೇರಿದ್ದು?” ಅಂತ ಇನ್ನಷ್ಟು ವಿಚಾರ ಕೆದಕಿ ಕೆದಕಿ ಕೇಳುತ್ತಿದ್ದರು.

ರಿಟೈರ್ ಆಗಿ ಸಾಹಿತ್ಯ ಸಂಗೀತ ಅದು ಇದು ಅಂತ ಕುಂತಲ್ಲಿ ಕೂರದೆ ನಿಂತಲ್ಲಿ ನಿಲ್ಲದೆ ಜೊತೆಗಿದ್ದ ಸೈಕಲ್ ತಳ್ಳಿಕೊಂಡು ಸರ್ಕಲ್ಲು ಬಸ್ಟ್ಯಾಂಡು ಲೈಬ್ರರಿ ಪೆಟ್ಟಿಗೆ ಅಂಗಡಿಗಳತ್ರ ದಿನಾ, ಸಮಯ, ದೂಡುತ್ತಿದ್ದ ಷಣ್ಮುಖಸ್ವಾಮಿ ಸಿಗ್ತಾರ ಎಂದುಕೊಂಡಿದ್ದಿದೆ. ಅವರು ಸಿಗಲೇ ಇಲ್ಲ. ಕಾಲ್ ಮಾಡಿದರೆ ಸಿಗಬಹುದೇನೊ ಅಂತ ಮೊಬೈಲ್ ಒತ್ತಿದರೆ ಅಲ್ಲಿದ್ದೇನೆ, ಇಲ್ಲಿದ್ದೇನೆ, ಸಂಜೆ ಸಿಕ್ತಿನಿ, ಬೆಳಗ್ಗೆ ಸಿಕ್ತಿನಿ ಭಾನುವಾರ ನೋಡೋಣ ಸಿಗಿ ಮಾತಾಡೋಣ ಅಂತಲೆ “ಏನಂದ್ರೆ ನಾನೀಗ ‘ಸರಳ ಜನಪ್ರಿಯ ವಾಲ್ಮೀಕಿ ರಾಮಾಯಣ’ ಬರಿತಾ ಇದಿನಿ. ಇನ್ನು ಮೂರು ಅಧ್ಯಾಯ ಬರೆದ್ರೆ ಮುಗಿಯುತ್ತೆ” ಅಂತ ಹೇಳೋದನ್ನ ಮರೆಯುತ್ತಿರಲಿಲ್ಲ. ನಾನು “ಅಲ್ಲ ಸಾರ್ ಅದೇನೊ ‘ವ್ಯಾಸ ಸಂಕ್ಷಿಪ್ತ ಮಹಾಭಾರತ’ ಬರಿತಿದ್ದಿನಿ ಅಂದಿದ್ರಿ” ಅಂದೆ. ಅದಕ್ಕೆ ಅವರು “ಹೌದು ಹೌದು ಒಂದು ನಾಟ್ಕ ‘ಶುನಶ್ಚೇಪ’ ಅಂತ ಅದು ಸ್ವಲ್ಪ ತಡ್ದು ಅದನ್ನೆಲ್ಲ ಮುಂದೂಡ್ತು’ ಅಂದರು. ನಾನು ‘ಈ ಸಬ್ಜೆಕ್ಟ್ ಇನ್ಫ್ಲುಯೆನ್ಸ್ ಎಲ್ಲಿಂದ ಸರ್’ ಅಂದೆ. ಅವರು ‘ಅದೂ ಅದೂ.. ಬನ್ನಿ ಸಿಕ್ಕಿ ಹೇಳ್ತಿನಿ. ನೀವೊಂದು ಸಲ ಓದಿ ಕೊಡ್ತಿನಿ.. ಏನ್ಮಾಡೋದು ಪುರುಸೊತ್ತಿಲ್ಲ.. ನನ್ನ ಮಗನದು ಬೇರೆ ಗೊತ್ತಲ್ವ ನಿಮ್ಗೆ. ಅವ್ಳು ಗೊತ್ತಲ್ವ ನನ್ ಸೊಸೆ.. ಹೊಡ್ದ ಬಡ್ದ ಅಂತ ವರದಕ್ಷಿಣೆ ಕೇಸು ಅಂತ ಹಾಕಿದಾಳೆ ನಮ್ಮೇಲೆ. ನನ್ ಮಗನೊ ಪೆದ್ರಾಮ ನಮ್ಮಣೆ ಬರ ಥತ್ ? ಕೋರ್ಟು, ಕೇಸು, ಸೊಸೆಯಾದವಳು ಮನೆಗೆ ಬಂದ್ಲಲ್ಲ ಅವಳ ಎಂಟ್ರಿಯಿಂದ ಮನೆ ನೆಮ್ದಿನೆ ಹಾಳಾಯ್ತು. ಆಮೇಲೆ ಆ ಗಂಗ ಇದ್ನಲ್ಲ ಅವ್ನಿದ್ದಾಗ ಅದು ಇದು ಕ್ವಾಟ್ಲ ಏನೊ ಇತ್ತು. ಕೊನಕೊನ್ಗ ನನ್ನೆ ಬೋಳಿ ಮಗ ನನ್ಗೇನ್ ಹೇಳೋದು ಅಂತ ತಿರುಗ್ ಬಿದ್ದ. ನನಗೆ ಬೇಸರ ಆಯ್ತು. ಅದನ್ನೆಲ್ಲ ತಡ್ಕೊಂಡೆ.. ಎಲ್ಕಿಗಂಟ ತಡ್ಕಳದು? ಅದ್ಕೆ ನನ್ನ ಫ್ರೆಂಡಾಗಿದ್ನಲ್ಲ ಸುಬ್ರಾಯಶೆಟ್ರಿಗೆ ಹೇಳಿ ವರ್ಗ ಮಾಡಿಸಿದ್ದು. ಆದ್ರ ಅವ್ನು ಹೋದ್ಮೇಲ ಬಂದವ್ರು ಎಲ್ಲ ಪೋಸ್ಟ್ ಮ್ಯಾನ್ಗಳು ನನ್ ಜೀವ ತಿಂದ್ರು. ಎಲ್ಲ ನಾನೇ ಮಾಡತರ ಆಯ್ತು. ಅಡ್ರಸ್ ಗೊತ್ತಾಗ್ನಿಲ್ಲ ಸಾರ್ ಅಂತ ಎಲ್ಲ ಟಪಾಲ್ನೂ ತಂದು ಇಟ್ಬುಟ್ಟು ಹೋಗ್ತಿದ್ರು. ಇದ್ರಿಂದ ನಂಗೇ ಭಾರ ಆಯ್ತು. ನನ್ ಡ್ಯೂಟಿ ಮುಗುದ್ರು ರಾತ್ರಿ ಎಷ್ಟೊತ್ತಾದ್ರು ಟಪಾಲ್ ಹಂಚಿ ಮನೆಗೋಗ ತನಕ ಸಾಕಾಗ್ತಿತ್ತು. ಮನೆಗೋದ್ರ ಮಗ ಸೊಸೆ ಗೋಳು. ಅವ ಮೋಸ ಮಾಡಿ ಮದ್ವ ಮಾಡಿದರಿ ಅನ್ನವ. ಅದಾಗಿ ಡೈವರ್ಸು ಅದು ಇದು ಆಗಿ ಅವ್ಳ ಡಿಮ್ಯಾಂಡ್ ಒಪ್ಗಂಡ್ರ ನಾವ್ ಬೀದಿಗ್ ಬತ್ತಿಂವಿ. ನೋಡಿ ಅದಿನ್ನೂ ಮುಗ್ದಿಲ್ಲ. ಹಿಯರಿಂಗ್ ಹಿಯರಿಂಗ್ ಅಂತ ಅಲೆಯೊ ತರ ಆಗಿದೆ. ಎಲ್ಲ ಆಯ್ತು ಆಮೇಲೆ ಶ್ರೀಪತಿ ಅಂತ ಬಂದ. ಆ ಶೀಪತಿನೊ ತಲೆ ನೋವು ತಂದಿಟ್ಟ. ಅಷ್ಟೊತ್ಗ ಹೆಂಗೊ ನನ್ ಅವ್ದಿ ಮುಗಿತು. ಈಗ ನಿಮ್ಮೂರೊರೆಲ್ಲ ‘ನೀವೂ, ಆ ಗಂಗಣ್ಣ ಇದ್ದಾಗ ಚೆನ್ನಾಗಿತ್ತು ಅಳಿ. ಅಂವ ಅದ್ಯಾವನೊ ಬಂದನಲ್ಲ ಶ್ರೀಪತಿನೊ ಗೀಪತಿನೊ ಮೊಕ ಕಂಡ್ರ ಸಾಕು ಸಿಡಿಸಿಡಿ ಸಿಡಿತನ. ಪೋಸ್ಟಾಫೀಸ್ಗ ವೋಗಿ ದುಡ್ಡು ಬಂದಿದ್ದ ಗಂಗಣ್ಣ ಅಂದ್ರ ರೇಗ್ತನ. ‘ಯಾರಮ್ಮ ಗಂಗಣ್ಣ..? ಆ ಗಂಗುತ್ತವೆ ಕೇಳೋಗ್’ ಅಂತ ಮೇಲೇ ಬೀಳ್ತನ ಅಂತ ಒಪ್ಪುಸ್ತರ.. ಸರಿ ಸಿಕ್ತಿನಿ ಫೋನ್ ಮಾಡಿ” ಅಂತಂತಲೇ ತಿಂಗ್ಳು, ಆರ‌್ತಿಂಗ್ಳು, ವರ್ಷ, ಎರಡು ವರ್ಷಗಳೇ ಕಳೆದು ಹೋದವು.

ಇದರ ನಡುವೆ ಊರಲ್ಲಿ ಪೋಸ್ಟ್ ಮ್ಯಾನ್ ಗಂಗಣ್ಣನಿಂದ ವಿಡೊ ಪೆನ್ಸನ್ ಓಲ್ಡೇಜ್ ಪೆನ್ಸನ್ ತಗೊತಿದ್ದ ಸರಿ ಸುಮಾರು ಎಲ್ಲರು ಸತ್ತು ಹೋಗಿದ್ದರು. ಇವರಲ್ಲದೆ ಯಾವಾಗಲೂ ಶಿಸ್ತಾಗಿ ರೂಢಿಯಂತೆ ಮನೆ ಮುಂದೆ ಐದಾರು ಚೇರು ಇಟ್ಟುಕೊಂಡು ಅದರ ಮೇಲೆ ಎರಡು ಮೂರು ಪತ್ರಿಕೆ ಹರಡಿಕೊಂಡು ಊರ ಒಂದಷ್ಟು ಮಂದಿ ಕೂರಿಸಿಕೊಂಡು ಪೇಪರ್ ಓದುತ್ತ ಹರಟುತ್ತ ಸುಮ್ಮನೆ ಸಲುಗೆಯಿಂದ ಬಾಯ್ಮಾತಿಗೆ ಮದುವೆ ಸುದ್ದಿ ಎತ್ತಿದರೆ “ನಂಗೆ ಈ ಸಮಾಜ ಸೇವೆನೆ ಸಾಕು ಮದ್ವೆ ಮಾಡ್ಕೊಂಡು ಏನ್ಮಾಡ್ತಿರಿ..? ಕೆಲ್ಸ ಇಲ್ಲ ನಿಮ್ಗೆ. ಆ ಗಂಗ ಗೊತ್ತಲ್ಲ.. ಪೋಸ್ಟ್ ಮ್ಯಾನು.. ಅಂವ ಮದ್ವ ಆಗಿದ್ನಾ? ನಾನು ಅವುನ್ನ ಮದ್ವಗಿದ್ವ ಮಾಡ್ಕಂಡು ಮಜ ಮಾಡ್ಕ ಇರದ್ಬುಟ್ಟು ಅಂತ ರೇಗುಸ್ತಿನಿ.. ಅಂವ ‘ಅಯ್ಯೋ ಮದ್ವ ಮಾಡ್ಕಂಡು ಏನ್ ಸಾದ್ನೆ ಮಾಡ್ಲಿ ಸಿದ್ದಪ್ಪೋರೆ’ ಅಂತ ನಂಗೇ ಪ್ರಶ್ನೆ ಹಾಕ್ತ ಹೊಯ್ತನ” ಅಂತ ಮಾಮೂಲಿಯಾಗಿ ಮಾತಾಡುತ್ತಿದ್ದ ಕುಂಟ ಸಿದ್ದಪ್ಪ, ಎಲೆಕ್ಷನ್ನಲ್ಲಿ ಗೆದ್ದು ಊರಿಗೆ ಜನರಿಗೆ ಅದು ಇದು ಮಾಡಿಕೊಡ್ತಿವಿ ಅಂತಂದು ಯಾವಾಗಲೂ ತಾಲೊಕಾಫೀಸಲ್ಲಿ, ಪಿಡಬ್ಲ್ಯೂಡಿ ಆಫೀಸಲ್ಲಿ, ಐಬಿಯಲ್ಲಿ, ರಾಜಕೀಯ ಸಮಾವೇಶದಲ್ಲಿ ಕಾಲ ಕಳೀತಿದ್ದ ಮೆಂಬರುಗಳ ಬದಲು ತಾನೇ ಊರು ಬಳಸಿ ಅವರಿವರನ್ನು ಮಾತಾಡಿಸುತ್ತ ಸಮಸ್ಯೆ ಕೇಳುತ್ತಿದ್ದ. ರಸ್ತೆ, ಮೋರಿ, ದೇವಸ್ಥಾನ, ಶಿಶುವಾರದ ರಿಪೇರಿ ಬಗ್ಗೆ ಪಂಚಾಯ್ತಿಯ ಮೂಲಕ ಸರ್ಕಾರದ ಗಮನಕ್ಕೆ ತರುತ್ತ ಎಲೆಕ್ಷನಲ್ಲಿ ಗೆದ್ದ ಮೆಂಬರ್ ಜೊತೆ ತಗಾದೆ ತೆಗೆದು ನಿಷ್ಠೂರ ಮಾಡಿಕೊಂಡು ಜನರೊಂದಿಗೆ ನಗುನಗುತ್ತಾ ಬೆರೆತಂತೆ ಶಿಶುವಾರದ ಮೇಡಂ ಜೊತೆಯೂ ಬೆರೆತಿದ್ದ ಸುದ್ದಿ ಊರಲ್ಲಿ ಇತ್ತು.

ಕಾರ್ತಿಕ ಮಾಸದ ಹೊತ್ತಲ್ಲಿ ಇಬ್ಬರೂ ಊರಿನ ಕೆಲವರ ಜೊತೆ ಹೋಗಿ ಮಲೈ ಮಹದೇಶ್ವರ ಬೆಟ್ಟದಲ್ಲಿ ಮದುವೆ ಮಾಡಿಕೊಂಡು ಬಂದು ಒಂದ್ಹತ್ತು ವರ್ಷ ಸಂಸಾರನು ಮಾಡಿ ಚೆನ್ನಾಗೆ ಓಡಾಡಿಕೊಂಡಿದ್ದ. ಒಂದಿನ ಸುಸ್ತು ಸಂಕ್ಟ ಅಂತ ಬಂತು. ಅದು ನಿಲ್ಲದೆ ಆಗಾಗ ದೊಡ್ಡಾಸ್ಪತ್ರೆಗೆ ಹೋಗಿ ಬಂದು ತೋರಿಸಿದ್ದ. ಕೆಮ್ಮು ವಾಂತಿ ಬೇಧಿ ಜಾಸ್ತಿ ಆಗಿ ಅಡ್ಮಿಟ್ ಆಗಿ ಅಲ್ಲೇ ಸತ್ತು ಹೋದ. ಅವನ ಯೋಚನೆಯಲ್ಲೆ ಒಂದೆರಡು ವರ್ಷ ಕಳೆಯೋದರೊಳಗೆ ಶಿಶುವಾರದ ಮೇಡಂ ಆಗಿ ರಿಟೈರ್ ಆಗಿದ್ದ ಅವನ ಹೆಂಡತಿಯೂ ಸತ್ತು ಹೋದಳು.

ಊರ ಕೆಲವರಿಗೆ ಗಂಗಣ್ಣನ ಬಗ್ಗೆ ಗೊತ್ತಿತ್ತೊ ಏನೋ ‘ಗೊತ್ತು.. ಗಂಗ ತಾನೆ. ಗೊತ್ತು ಬುಡು’ ಅಂತಾನೊ “ಎಲ್ಲೊ ಹೆಸ್ರು ಕೇಳ್ದಂಗದಲ್ಲ ಮೊಖನೆ ಮರ‌್ತೊಗದ. ನೋಡುದ್ರ ಗೊತ್ತಾದ್ದೇನೊ” ಅಂತಾನೂ ಹೇಳ್ತಿದ್ದರು. ಗಂಗಣ್ಣನ ತಿಕದ ಕುಂಡಿಗೆ ಕಲ್ಲು ಹಾಕಿ ‘ಗಂಗ ಪೋಸ್ಟ್ ಗಂಗ ಪೋಸ್ಟ್’ ಅಂತ ಕೇಕೆ ಹಾಕಿ ಕುಣೀತಿದ್ದ ಐಕಳು ದೊಡ್ಡವರಾಗಿ ಆ ಕೆಲಸ ಈ ಕೆಲಸ ಅಂತ ಮಾಡ್ತಿದ್ದವರು ಮದುವೆ ಒಸಗೆ ಮಾಡಿಕೊಂಡು ಮಕ್ಳು ಮರಿ ಜೊತೆ ಕಾಲ ತಳ್ಳುತ್ತ ಪೋಸ್ಟ್ ಆಫೀಸಲ್ಲಿ ತಮ್ಮ ಹೆಸರಲ್ಲೊ ಮಕ್ಕಳ ಹೆಸರಲ್ಲೊ ಎಫ್ಡಿ ಅಕೌಂಟ್ ಮಾಡಿಸಲು ಹೋದಾಗ ಗಂಗಣ್ಣ ಷಣ್ಮುಖಸ್ವಾಮಿ ನಂತರದ ಪೋಸ್ಟ್ ಮ್ಯಾನು ಪೋಸ್ಟ್ ಮೇಷ್ಟ್ರು ಸರಿಯಾಗಿ ಏನೂ ಹೇಳದೆ ಬಾಗಿಲಲ್ಲೇ ನಿಲ್ಲಿಸಿ ಕಾಯಿಸೋದು. ಅವರು “ಸಾರ್ ಮಾಡ್ಕೊಡಿ ಸಾ. ಹಿಂದ ಸಣ್ಮುಕಸಾಮಿಯವ್ರು ಅಂತ ಒಬ್ರು ಇದ್ರು ಅವ್ರು ನಿಮ್ಮಂಗ ಮಾಡ್ತಿರ‌್ನಿಲ್ಲ” ಅಂದರೆ “ಹು.. ಅವ್ರೊಂದ್ಗ ಗಂಗಣ್ಣ ಅಂತಿದ್ನಂತಲ್ಲ.. ಅಂವ ಹೆಂಗ್ ಮಾಡ್ತಿದ್ನ..? ಯಾರ‌್ಯಾರ್ ಕಾಗ್ದನ ಇನ್ಯಾರ‌್ಗೊ ಕೊಡ್ತಿದ್ನಂತ ಆಗ ತೊಂದ್ರಿ ಆಗಿಲ್ವ.. ನಾವು ಹಂಗೇನಾರ ಮಾಡಿಂವ.. ನಮ್ಗೂ ಆಫೀಸ್ ಕೆಲ್ಸ ಇರುತ್ತ ಮುಗ್ಸಿ ಮಾಡ್ಕೊಡ್ತಿವಿ ತಡ್ಕೊಳಿ.. ಇಲ್ಲ ಅಂದ್ರ ನಾಳ ಬರೋಗಿ ಅಂತ ಹೇಳ್ತಿದ್ದ.
*

ಈ ನಡುವೆ ನಾನು ಡ್ಯೂಟಿ ಮುಗಿಸಿ ಹೊಸ ತಿರುಮಕೂಡಲು ಸರ್ಕಲ್ ಬಳಿ ಬಸ್ಸು ಇಳಿದಾಗ ರಾತ್ರಿ ಹತ್ತಾಗಿತ್ತು. ಮೈಸೂರು ಸಬರ್ಬನ್ ಬಸ್ಟಾಪಲ್ಲಿ ಬಸ್ ಹತ್ತುವಾಗಲೇ ಮಳೆ ಬಂದು ನಿಂತು ಮೈಸೂರಿನ ರಸ್ತೆ ರಸ್ತೆಯಲ್ಲೂ ಮಳೆ ನೀರು ಹೊಳೆಯಂತೆ ಹರಿಯುತ್ತಿತ್ತು. ಮಳೆ ನಿಂತ ಸಮಾಧಾನದಲ್ಲೆ ಬಸ್ಸಿಗಾಗಿ ಕಾಯವಾಗ ಮಳೆ ಮತ್ತೆ ಶುರುವಾಗಿತ್ತು. ಆ ಮಳೆಯ ಕಾರಣ ಬಸ್ಸು ರಸ್ಸೊ ರಸ್ಸು. ಹೇಗೋ ಆ ರಸ್ಸಲ್ಲೆ ತೂರಿಕೊಂಡು ನಿಂತೆ. ಬರ‌್ತಾ ಬರ‌್ತಾ ಆ ಮಳೆ ಇನ್ನು ಜೋರಾಗಿತ್ತು. ಎಂಥ ಮಳೆ! ಬೋರಿಡುವ ಮಳೆ. ಆ ಬಸ್ಸೊ ಊರೂರಲ್ಲು ನಿಂತು ಜನರನ್ನು ಇಳಿಸಿ, ಹೇಗೋ ಬಂತು. ನಾನೂ ಇಳಿದೆ.

ಗಾಳಿ ಇನ್ನೂ ವಿಪರೀತ ಬೀಸುತ್ತಿತ್ತು. ಮಿಂಚು ಗುಡುಗು ಎಗ್ಗಿಲ್ಲದೆ ಕಣ್ಣು ಕಿವಿಗೆ ಬಡಿಯುತ್ತಿತ್ತು. ಮಳೆ ಗಾಡಿ ಹೊಡೆತಕ್ಕೆ ‘ಇಸ್ಸಿಸ್ಸಿಸ್ಸಿ’ ಅನ್ನಿಸಿ ನಡುಗುತ್ತ ಅಲ್ಲೇ ಇದ್ದ ನಾಯಕರ ಗಡ್ಡಬೋರನ ಹೋಟೆಲ್ ಹತ್ರ ನಿಂತೆ. ಅಲ್ಲಿ ನಿಲ್ಲಲೂ ಜಾಗವಿಲ್ಲ. ಮಕ್ಕಳಿಗೆ ಏನಾದರು ತಿಂಡಿ ತೆಗೆದುಕೊಳ್ಳುವ ಅಂತ ಸುತ್ತ ನೋಡಿದೆ ಈ ಮಳೆ ಗಾಳಿಗೆ ಅದಾಗಲೇ ಎಲ್ಲ ಅಂಗಡಿಗಳೂ ಬಾಗಿಲು ಹಾಕಿದ್ದವು. ಆಟೋದವರು ಬಾಡಿಗೆಗಾಗಿ ತಮ್ಮ ಆಟೋವನ್ನು ಹಾಗೇ ಆನ್ ಮಾಡಿ ಯಾರಾದರು ಬರುವವರಿದ್ದರೆ ಬಾಡಿಗೆ ಆಗುತ್ತದೆ ಅಂತ ನಿಲ್ಲಿಸಿಕೊಂಡು ನಿಂತಿದ್ದರು.

ಆ ಜನರ ಗಲಾಟೆ ಮಳೆ ಗಾಳಿ ಸೌಂಡಿನಲ್ಲೆ ಷಣ್ಮುಖಸ್ವಾಮಿಯ ವಾಯ್ಸ್ ಕೇಳಿದ ಹಾಗಾಯ್ತು. ತಿರುಗಿದೆ. ಅವರೂ ಮಳೆಗೆ ಸಿಕ್ಕಿಕೊಂಡು ನೆನೆದು ಮುಖದಲ್ಲಿ ತೊಟ್ಟಿಕ್ಕುತ್ತಿದ್ದ ನೀರನ್ನು ಕೈ ಬೆರಳಿಂದ ಎಳೆದು ಕರ್ಚೀಫಿನಲ್ಲಿ ಒರೆಸಿಕೊಳ್ಳುತ್ತಿದ್ದರು. ಆಗ ‘ನಮಸ್ತೆ ಸಾರ್’ ಅಂದೆ. ಅವರು ‘ಓ ಬನ್ನಿ. ಏನ್ ಮಳೆ..’ ಅಂತ ಬೆನ್ನು ತಡವಿ “ಇದೇನ್ ಇಷ್ಟೊತ್ತು” ಅಂದರು. “ಹೌದು ಸರ್ ಟೂ ಹವರ್ ಆಗುತ್ತೆ. ಎರಡು ಬಸ್ಸು ಹತ್ತಿ ಬರಬೇಕಲ್ಲ.. ಇದ್ಯಾಕೆ ಇಲ್ಲಿಳಿದ್ರಿ ಬಸ್ಟ್ಯಾಂಡಲ್ಲೆ ಇಳಿಬಾರ‌್ದ ಹತ್ರ ಆಗ್ತಿತ್ತು.. ” ಅಂದೆ. “ಅಯ್ಯೋ ಅರ್ಜೆಂಟ್ ಬುಕ್ ಪ್ರಿಂಟ್ಗೆ ಕೊಡ್ಬೇಕಿತ್ತು. ಪ್ರಿಂಟಿಂಗ್ ಪ್ರೆಸ್ನಂವ ಬಂದ್ಬುಡಿ ಫೈನಲ್ ನೋಡ್ಬುಡಿ ಪ್ರಿಂಟ್ಗೆ ಹಾಕ್ತಿವಿ ಇಲ್ಲಾಂದ್ರೆ ನಿಮ್ ಬುಕ್ ತಿಂಗ್ಳಾದ್ರು ಆಯ್ತು. ಯಾವ್ದೊ ಎರಡು ಮೂರು ಬುಕ್ ಪ್ರಿಂಟ್ಗೆ ಬಂದು ಬಿಟ್ಟಿವೆ. ಅವು ಮುಗಿಯೋ ತನಕ ನಿಮ್ಮದು ಲೇಟಾಗುತ್ತೆ. ಅದ್ಕೆ ಈಗ ಬಂದ್ರೆ ನಿಮ್ಮದು ಮುಗಿಸ್ತಿವಿ ಅಂದ್ರು. ಈ ಪ್ರಿಂಟಿಂಗ್ ಪ್ರೆಸ್ನವರ ನಂಬೊಕಾಗಲ್ಲ ಅದ್ಕೆ ಸೈಕಲ್ನ ಇಲ್ಲೆ ಮಠದಲ್ಲೆ ನಿಲ್ಸಿ ಬಸ್ಸ್ ಹತ್ತಿದೆ. ಅಲ್ಲಿ ಹೋಗಿ ಎಲ್ಲ ಆಯ್ತು.. ಅಷ್ಟೊತ್ಗೆ ಮಳೆ ಮಳೆ.. ಏನ್ ಮಳೆ. ಒಂದು ಗಂಟೆಯಾದ್ರು ಬಿಡ್ಲೇ ಇಲ್ಲ. ಹೇಗೊ ಸ್ವಲ್ಪ ನಿಂತಾಗ ಆಟೋ ಮಾಡ್ಕೊಂಡು ಬಸ್ಸತ್ತಿ ಅದೂ ರಸ್ಸು. ಬಂದು ಇಳ್ದೆ ಇಲ್ಲೂ ಶುರುವಾಯ್ತು” ಅಂತ ಲೊಚಗುಟ್ಟಿದರು.

ಮಿಂಚು ಫಳಾರ್ ಅಂತು. ಅದರೊಂದಿಗೆ ಗುಡುಗೂ ನಿಧಾನಕೆ ಗುಡುಗುಡು ಗುಡುಗುತ್ತಲೇ ಇತ್ತು.

“ಸರ್ ಇದು ನಿಲ್ಲೊ ಮಟ್ಟಿಗೆ ಕಾಣ್ತ ಇಲ್ಲ. ಸೈಕಲ್ ಇಲ್ಲಿರ‌್ಲಿ ಮಠದಲ್ಲೇನಾದ್ರು ಛತ್ರಿಗಿತ್ರಿ ಇದ್ರೆ ಈಸ್ಕೊಂಡು ಮನೆ ತಲುಪ್ಕೊಳಿ” ಅಂದೆ. ಅವರು “ನೀವೇಳದು ಸರಿ ಹಾಗೆ ಮಾಡ್ತಿನಿ. ಆಮೇಲೆ ಶುನಶ್ಯೇಪ ನಾಟ್ಕ ಓದುದ್ರಾ” ಅಂದರು. ನಾನು “ಹು ಸರ್. ಅದೆ ನೀವು ಫಸ್ಟ್ ರೀಡಿಂಗೆ ಅಂತ ಪ್ರಿಂಟ್ ತೆಗೆಸಿದ್ರಲ್ಲ ಆಗ್ಲೆ ಓದಿದ್ನಲ್ಲ” ಅಂದೆ. “ಅಯ್ಯೊ ಅದು ಬರೀವಾಗ ವಸೀ ಏಗಿದಿನಾ..? ಪೋಸ್ಟಾಫೀಸಲ್ಲೆ ಬರ‌್ದಿದ್ದು. ಇವ್ಕಿಂತ ಅದೆ ಫಸ್ಟು. ಹತ್ತೊರ್ಸನೆ ಆಗಿದೆ. ಆದ್ರ ಬುಕ್ ಮಾಡ ಯೋಗ ಬಂದಿದ್ದು ಈಚೆಗೆ. ಅತ್ತಗ ನನ್ ಸುಪುತ್ರನ ಕ್ವಾಟ್ಲ ಇತ್ತಗ ಗಂಗನ ಕ್ವಾಟ್ಲ. ಇನ್ನೊಂದು ಏನ್ ಗೊತ್ತಾ ಆ ಶುನಶ್ಯೇಪ ಬರಿಬೇಕಾದ್ರ ಆ ಗಂಗನೇ ಕಾರಣ. ಬಲಿಪಶು ಅಂತಾರಲ್ಲ.. ಹರಿಶ್ಚಂದ್ರನ ಕತೆನಲ್ಲಿ ಈ ಶುನಶ್ಯೇಪ ಅಂತ ಒಂದು ಕ್ಯಾರೆಕ್ಟರ್ ಬರುತ್ತೆ. ಆತರ ನಮ್ ಗಂಗ ಪಾಪ್ಮುಂಡ ಮಗ. ಅವನ ಬಗ್ಗೆ ಅವನ ಕೆಲಸದ ಬಗ್ಗೆ ಯೋಚ್ನ ಮಾಡ್ತ ಮಾಡ್ತ ಶುನಶ್ಯೇಪ ಮೂಡ್ದ. ಕೆಲ್ಸ ಮಾಡ್ತ ಮಾಡ್ತ ಮೂಡ್ ಬಂದಾಗೆಲ್ಲ ಒಂದೊಂದೆ ಸೀನ್ ಬರ‌್ದೆ. ಆದ್ರ ಎಷ್ಟ್ ಪತ್ರಿಕೆಗೆ ಕಳಿಸ್ದೆ ಗೊತ್ತಾ..? ಯಾರೂ.. ಒಂದು ಸಾಲೂ ಬರಿಲಿಲ್ಲ… ” ಅಂದರು.

ನಾನು ತಕ್ಷಣ “ನಿಮ್ಗೆ ಹೇಳಿದಿನಾ ಇಲ್ವ ಗೊತ್ತಿಲ್ಲ. ನಂಗೊಂದ್ಸಲ ಆ ಗಂಗ ಸಿಕ್ಕಿದ್ದ ಸರ್. ಹತ್ತತ್ರ ಎರಡು ಮೂರು ವರ್ಷನೆ ಆಯ್ತು. ಲಾಕ್ಡೌನ್ ಮುಗಿತಲ್ಲ ಆಗ. ನಿಮ್ಗೆ ಒಂದೆರಡು ಸಲ ಕಾಲ್ ಕೂಡ ಮಾಡಿದ್ದೆ. ಆಗ್ಲೂ ಹೇಳುದ್ನೊ ಏನೊ.. ನಿಮ್ಗೂ ಆಗ ಏನೋ ರಗಳೆ ಅಂತಂದಿದ್ರಿ. ಅದೆ ಮಗುಂದು ಸೊಸೆದು ಏನೊ ರಗಳೆ ಕೇಸು ಅಂತ ಅಂದ್ರಿ..” ಅಂದೆ. “ಹೌದು ಹೌದು.. ಅದಿನ್ನು ಹಾಗೆ ಇದೆ ಏನ್ಮಾಡದು..? ಇರ‌್ಲಿ, ಅದ್ಸರಿ ಅಂವ ನಿಮ್ಗೆಂಗ್ ಸಿಗ್ದ?” ಅಂದರು. “ಬಸ್ಟ್ಯಾಂಡ್ ಹತ್ರ ಸರ್.. ನನ್ಗೂ ಲೇಟಾಗಿತ್ತು ಒಂದ್ ಸೆಲ್ಫಿ ತಗಳಾಣ ಅಂತ ಹೋದೆ. ಗಾಬ್ರಿ ಬಿದ್ದು ಇದೆಲ್ಲ ನಂಗೆ ಇಷ್ಟ ಇಲ್ಲ ಬಿಡಿ ಅಂತ ತಳ್ಳಿ ಹೋದ.. ನೋಡಿ ಅರ್ಧ ಫೋಟೋ ಕ್ಲಿಕ್ಕಾಯ್ತು ” ಅಂತ ಅವತ್ತಿನ ಎಲ್ಲ ವಿಚಾರ ಹೇಳಿ ಫೋಟೋ ತೋರಿಸ್ದೆ.

ಅವರು ತೊಟ್ಟಿಕ್ಕುತ್ತಿದ್ದ ಮಳೆ ನೀರು ಒರೆಸಿಕೊಳ್ಳುತ್ತಲೆ ನನ್ ಸೈಡಿಗೆ ಬಂದು “ಓ ಬಾಳ ಸಾಹಸ ಮಾಡಿದಿರಾ..” ಅಂತ ಆ ಫೋಟೋಲಿರ ಅವನ ಸ್ಟೈಲ್ ಫೋಸ್ ನೋಡ್ತಾ ನಗ್ತಾ “ನಿಮಗೊತ್ತಾ.. ಇದಿಂಗೆ ಅವರೂರಲ್ಲುವ. ಇವ್ನಿರ ಸ್ಟೈಲ್ಗ.. ಮಾತುಕತೆಗ.. ಊರಿನ್ ಜನ ಗೋಳುಯ್ಕತಿದ್ರು. ಒಂದ್ಸಲ ಬೆಳಕವಾಡಿಲಿ ಹಬ್ಬ. ಹಬ್ಬಕ್ಕೆ ಅಂತ ನಾಟಕ ಕಲಿತಿದ್ರು. ಒಂದು ಪಾತ್ರ ಇತ್ತು. ಕೊನೆಗ ಯಾರೂ ಸಿಕ್ದೆ ಇವ್ನತ್ರ ಅದನ್ನ ಮಾಡ್ಸುದ್ರು.. ಒಂದೇನ್ ಗೊತ್ತಾ.. ಅದರಲ್ಲು ಅವನಿಗೆ ಪೋಸ್ಟ್ ಮ್ಯಾನ್ ಪಾತ್ರನೆ..! ಆದ್ರ ಅವ್ನಿರ ಸ್ಟೈಲ್ಗ ಆ ನಾಟ್ಕದಿಂದ ಆ ಊರಲ್ಲಿ ಫೇಮಸ್ ಆಗ್ಬುಟ್ಟ” ಅಂತ ಮತ್ತಷ್ಟು ನಕ್ಕರು. ಆಮೇಲೆ ಸೀರಿಯಸ್ ಆದವರಂತೆ “ಅವ್ರಪ್ಪ, ಆ ಊರ್ ಜನ ಆಡಿಕೊಳ್ಳೋದ್ ನೋಡ್ತ ಇದೆಲ್ಲ ಸರಿ ಹೋಗಲ್ಲ ಅಂತ ಕೊನ್ಗ ಊರಿಂದ ಮನೆ ಶಿಫ್ಟ್ ಮಾಡಿ ಜೊತ್ಗೆ ಇವ್ನಿಗ ಒಂದು ನೆಲೆ ಕಲ್ಪಿಸಿಕೊಡೋಕೆ ಬಾಳ ಪ್ರಯತ್ನ ಪಟ್ರು. ಆದ್ರು ನಿಮ್ಗೆ ಅವತ್ತೆ ಹೇಳಿದ್ನಲ್ಲ ಅವ್ರ್ ಜೀವ ಇರೊ ತನಕ ಆಗ್ಲೇ ಇಲ್ಲ.. ನೋಡಿ ಕರ್ಮ ಏನೆಲ್ಲ ಮಾಡ್ಸುತ್ತೆ..” ಅಂತ ಆಕಾಶದತ್ತ ಮುಖ ಮಾಡಿ ‘ಓ ಮಳೆ ನಿಲ್ತು ಅನ್ಸುತ್ತೆ’ ಅಂತ ರೋಡ್ ಕಡೆ ನೋಡಿ ಅಂಗಡಿ ಜಗುಲಿಯಿಂದ ಆಚೆಗೆ ಕೈ ನೀಡಿದರು. ಅವರೊಂದಿಗೆ ನಾನೂ ಕೈ ನೀಡಿ ಟೆಸ್ಟ್ ಮಾಡುತ್ತಲೇ “ಈಗ ಎಲ್ಲಿದಾನೆ ಸರ್..? ಅವ್ನ ಒಂದ್ಸಲ ನಮ್ಮೂರಿಗೆ ಕರೆಸಿ ಸುಮ್ನೆ ಇವತ್ತಿನವರಿಗೆ ತೋರಿಸಿ ಜೊತ್ಗ ನೀವು ಪೋಸ್ಟಾಫೀಸ್ ತಂದ ಬಗೆನೂ ಹೇಳತರ ಒಂದ್ ಸಿಟ್ಟಿಂಗ್ ಪ್ರೊಗ್ರಾಂ ಮಾಡೊ ಮನ್ಸು ಸರ್.. ಏನೊ ಒಂಥರ ನೆನುಪ್ಗೆ ಅಷ್ಟೆ” ಅಂದೆ. ಅವರು “ಅಯ್ಯೋ ನಿಮುಗ್ ಗೊತ್ತಿಲ್ವ..? ಅವ್ನು ತೀರ‌್ಕೊಂಡ್ನಲ್ಲ ಆಗ್ಲೆ” ಅಂತ ಲೊಚಗುಟ್ಟಿದರು.

ಒಂದು ಕ್ಷಣ ಮಾತಾಡದೆ ಸುಮ್ಮನೆ ನಿಂತೆ. ಜನ ಒಬ್ಬೊಬ್ಬರಾಗಿ ಖಾಲಿಯಾಗುತ್ತಿದ್ದರು. ಮಳೆ ಬೀಳುತ್ತಲೆ ಇತ್ತು. ಗುಡುಗು ಗುಡುಗುತ್ತಲೇ ಇತ್ತು. ಈ ನಡುವೆ ಕರೆಂಟು ಹೋಗಿದ್ದು ಗೊತ್ತೇ ಆಗಿಲ್ಲ.

ನಾನು “ಸರ್ ಯಾವಾಗ..’ ಅಂದೆ. ‘ಹತ್ತತ್ರ ಒಂದೂ ಒಂದೂರೆ ವರ್ಷನೇ ಆಯ್ರು ಅನ್ಸುತ್ತೆ. ನೋಡಿ ಅವ್ನು ಯಾರ‌್ನೂ ನಂಬ್ತಿರಲಿಲ್ಲ.. ಒಂದ್ ಬ್ಯಾಂಕ್ ಅಕೌಂಟ್ ಕೂಡ ಉಳಿಸ್ಗಳ್ದೆ ಮೂರು ಲಕ್ಷ ದುಡ್ಡಾ ಒಂದು ಬ್ಯಾಗೊಳಕ ಹಾಕೊಂಡು ಕಂಕ್ಳುಗ ಎರಿಕಂಡೇ ಕೊನಗಂಟು ತಿರುಗ್ತಿದ್ದ. ಆ ದುಡ್ಡು ಏನಾಯ್ತೊ ಏನೊ..” ಅಂತ ಸೀರಿಯಸ್ ಆಗಿ ಹೇಳ್ತಾನೆ ಅದೇನಾಯ್ತೊ ಏನೊ ಪಕ್ಕನೆ ನಗ್ತಾ “ಅದ್ಕು ಒಂದು ಕಾರಣ ಇದೆ. ಅವ್ನತ್ರ ಬ್ಯಾಂಕ್ ಅಕೌಂಟು ಎಲ್ಲ ಇತ್ತು. ಒಂದ್ಸಲ ನಿಮ್ ಕುಂಟು ಸಿದ್ದಪ್ಪ ಇದ್ರಲ್ಲ ಅವ್ರು ಇವುನ್ನ ರೇಗ್ಸಕೆ ಅಂತ ‘ಎಸ್ಟ್ ದುಡ್ಡಿಟ್ಟಿದ್ದಿಯ ಗಂಗಣ್ಣ’ ಅಂದವ್ರೆ. ಅದ್ಕೆ ಗಂಗ ‘ಅಯ್ಯೋ ಇದೆ ಸಿದ್ದಪ್ಪೋರೆ ಬ್ಯಾಂಕಲ್ಲಿ ಲಕ್ಷದ ಮೇಲೆ ಕಷ್ಟಕ್ಕೆ ಬೇಕಲ್ಲ.. ನೀವು ಕೇಳುದ್ರೆ ಕೊಡ್ತಿರಾ..? ಅದ್ಕೆ ಇಟ್ಕಂಡಿದಿನಿ’ ಅಂದವ್ನೆ. ಆಗ ರಾಜ್ ಕುಮಾರ್ ಬರಗಾಲ ನಿಧಿಗೆ ಅಂತ ಎಲ್ಲ ಜಿಲ್ಲಾ ಕೇಂದ್ರದಲ್ಲಿ ಹಣ ಸಂಗ್ರಹಕ್ಕೆ ಪ್ರೊಗ್ರಾಂ ಮಾಡ್ತಾ ಇದ್ರು. ಅದನ್ನ ಹೇಳ್ತಾ ‘ಗಂಗಣ್ಣ ಈಗ ಬರಗಾಲ ಬಂದುದಾ. ಸರ್ಕಾರದಲ್ಲಿ ದುಡ್ಡಿಲ್ಲ. ಸರ್ಕಾರದವ್ರು ಬ್ಯಾಂಕಲಿರ ದುಡ್ನೆಲ್ಲ ಬಡವರಿಗೆ ಹಂಚೋಕೆ ಅಂತ ಎತ್ಕೊತಾ ಇದಾರೆ. ಬ್ಯಾಂಕ್ ಅಕೌಂಟೆಲ್ಲ ಲಾಕ್ ಆಯ್ತವೆ. ಅದ್ಕೆ ಸರ್ಕಾರದವ್ರು ರಾಜ್ಕುಮಾರುನ್ನ ಬೀದಿಗ್ ಬುಟ್ಟರ. ನೀನೇನಾರ ನಿನ್ ದುಡ್ನ ಅಲ್ಲೆ ಬುಟ್ರ ನಿಂಗ ರಾಜ್ಕುಮಾರ್ ಚೆಂಬೇ ಗತಿ’ ಅಂದವ್ರೆ. ಇವ್ನು ಕುಂಟು ಸಿದ್ದಪ್ಪ ಅಂದದ್ದೆ ತಡ ಬ್ಯಾಂಕ್ ಅಕೌಂಟ್ ಕ್ಲೋಸ್ ಮಾಡ್ಸಿ ಎಲ್ಲ ದುಡ್ನು ಎತ್ಕ ಬಂದವ್ನ‌. ಇದನ್ನ ಒಂದ್ಸಲ ನಾನು ಬ್ಯಾಂಕಿಗೆ ಹೋಗಿದ್ದಾಗ ಆ ಬ್ಯಾಂಕ್ ಮ್ಯಾನೇಜರು “ಏನ್ ಸಾರ್ ನಿಮ್ ಪೋಸ್ಟ್ ಮ್ಯಾನು ಗಂಗಶೆಟ್ಟಿಗೆ ಮದ್ವೆ ಅಂತೆ. ಅದ್ಕೆ ದುಡ್ಡಿಲ್ಲ ಅಂತ ಅಕೌಂಟ್ ಕ್ಲೋಸ್ ಮಾಡಿಸ್ಕಂಡು ಹೋದ ನಾನು ಕ್ಲೋಸ್ ಮಾಡ್ಬೇಡಕಣಪ್ಪ ಅದಿರ‌್ಲಿ ನಿಂಗೆ ದುಡ್ಡು ಎಷ್ಟು ಬೇಕೊ ಅಷ್ಡು ತಗೊ ಅಂತ ಹೇಳ್ದೆ ಕೇಳ್ನಿಲ್ಲ ” ಅಂದ್ರು.

ಒಂದಿನ ಪೋಸ್ಟಾಫೀಸಲ್ಲಿ ಏನೂ ಕೆಲಸ ಇಲ್ಲದಾಗ ನಿಧಾನಕೆ ಉಪಾಯವಾಗಿ ನಾನು ಇದನ್ನೆಲ್ಲ ಕೇಳ್ದೆ. ಎಲ್ಲನು ಬಾಯಿ ಬಿಟ್ಟ. ಇದು ಗೊತ್ತಾಗಿ ಕುಂಟು ಸಿದ್ದಪ್ಪ ನಕ್ಕಿ ನಕ್ಕಿ ಸಾಕಾಗಿ ಅವನ್ನ ಹೋಗಾ ಬರ ಮದ್ವ ವಿಚಾರ ಎತ್ತಿ ಎತ್ತಿ ರೇಗ್ಸಿ ಮಜ ತಕ್ಕತಿದ್ದ’ ಅಂತ ಹೇಳ್ತ ಹೇಳ್ತ ಮತ್ತೆ ವಾಪಸ್ ಬಂದರು.

“ಅಂವ ಸತ್ತಿದ್ದು ನನ್ಗೂ ಗೊತ್ತಾಗಿಲ್ಲ. ಅದಾದ ಆರ‌್ತಿಂಗ್ಳಿಗೆ ನಂಜನಗೂಡು ಡಿವಿಜನ್ ಆಫೀಸಲ್ಲಿ ಒಬ್ರು ಲಿಂಗ್ರಾಜು ಅಂತಿದಾರೆ.. ಅವ್ರು ಹಿಂಗೆ ಮೈಸೂರಿಂದ ಬರುವಾಗ ಬಸ್ಸಲ್ಲಿ ಸಿಕ್ಕಿ ಮಾತಾಡ್ತ ಹಂಗೆ ಗಂಗಶೆಟ್ಟಿ ಬಗ್ಗೆನು ಮಾತು ಬಂತು. ಮಾತಾಡ್ತ ಮಾತಾಡ್ತ ಅವ್ರೆ ಅಂವ ಸತ್ತ ಸುದ್ದಿ ಹೇಳಿದ್ದು” ಅಂದರು.

ಆಗ ನನ್ನ ಮೊಬೈಲಲ್ಲಿದ್ದ ಅವನ ಫೋಟೋ ಮೇಲೆ ಸಣ್ಣ ಸಣ್ಣ ಸೀಪರು ಮಳೆ ಉದುರಿತ್ತು. ನಾನು ಕರ್ಚೀಫಲ್ಲಿ ಆ ಸೀಪರು ಹನಿ ಒರೆಸಿ “ನೋಡಿ ಸರ್ ಫೋಟೋನಾ.. ಇದನ್ನ ನೋಡ್ತಿದ್ರೆ ಅವ್ನು ನೆನ್ನೆ ಮೊನ್ನೆ ಸಿಕ್ಕಿದ್ನೇನೊ ಅನ್ನಿಸ್ತಿದೆ ” ಅಂತ ರೋಡ್ ಕಡೆ ನೋಡಿದೆ. ಮಳೆ ನಿಂತಂತೆ ಕಂಡರು ಸಣ್ಣದಾಗಿ ಗುಡುಗು ಗುಡುಗುತ್ತ ಸಿಡಿಲೊಂದು ಸಿರ್ ಸಿರ್ ಅಂತ ಸಿರ‌್ಗುಟ್ಟುತ್ತ ಅದರೊಟ್ಟಿಗೆ ಒಂದೇ ಸಮ ಮಿಂಚು ಫಳಾರ್ ಫಳಾರ್ ಅಂತ ಕಣ್ಣು ಕುಕ್ಜುವ ಹಾಗೆ ಮಿಂಚುತ್ತಿತ್ತು.

ಅದೇ ಸವುಳಲ್ಲಿ ಷಣ್ಮುಖಸ್ವಾಮಿ ಸೈಕಲ್ ಎತ್ತಿಕೊಳಲು ಮಠದ ಕಡೆ ನಡೆದರು. ಗವ್ಗತ್ತಲು. ಮೊಬೈಲ್ ಟಾರ್ಚ್ ಆನ್ ಮಾಡಿ ಹರಿಯುತ್ತಿದ್ದ ಆ ಮಳೆಯ ನೀರೊಳಕ್ಕೆ ಮೆಲ್ಲಗೆ ಕಾಲಿರಿಸಿ ನಿಧಾನಕೆ ಕಾಲೆಳೆಯುತ್ತ ರೋಡು ದಾಟಿ ಮನೆ ಕಡೆ ನಡೆವಾಗ ಮಿಂಚಿನ ಬೆಳಕು ಮುಖಕ್ಕೆ ರಾಚಿ ಕಣ್ಕುತ್ತಿತ್ತು.

-ಎಂ.ಜವರಾಜ್
(ಮುಂದುವರಿಯುವುದು)


[ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. “ಕತ್ತಲ ಹೂವು” (ನೀಳ್ಗತೆ) ಪ್ರಕಟಣೆಗೆ ಸಿದ್ದಗೊಳ್ಖುತ್ತಿದೆ. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿಂದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಪ್ರಸ್ತುತ “ಪೋಸ್ಟ್ ಮ್ಯಾನ್ ಗಂಗಣ್ಣ” ಎಂಬ ನೀಳ್ಗತೆ ಮುಗ್ಧ ಪೋಸ್ಟ್ ಮ್ಯಾನ್ ಒಬ್ಬನ ಜೀವನ ಚಿತ್ರವನ್ನು ಹೇಳುವ ಒಂದು ಕುತೂಹಲಕಾರಿ ಕಥೆಯಾಗಿದೆ]


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x