ಕಥಾ ಪ್ರಪಂಚದಲ್ಲಿ ಪಂಜೆ ಮಂಗೇಶರಾಯರು ಕನ್ನಡಕ್ಕೆ ನೀಡಿದ ಕಾಣ್ಕೆ ಅತ್ಯಮೂಲ್ಯವಾದದು. ತದನಂತರದ ಕಾಲದಲ್ಲಿ ಸಣ್ಣಕಥೆಗಳ ಜನಕರೆಂದೇ ಹೆಸರಾದ ಮಾಸ್ತಿ ಅವರು ಸಣ್ಣಕಥೆಯನ್ನು ತಮ್ಮ ಬರವಣಿಗೆಯ ಮುಖ್ಯ ಮಾಧ್ಯಮವನ್ನಾಗಿ ಬಳಸಿದರು ಮಾತ್ರವಲ್ಲ ಬೆಳೆಸಿದರು.
ಚಾಮರಾಜನಗರ ಪರಿಸರವು ಕಥಾ ಜಗತ್ತಿಗೆ ತೆರೆದುಕೊಳ್ಳಲು ಹವಣಿಸುತ್ತಿರುವ ಈ ಕಾಲದಲ್ಲಿ ಕೊಳ್ಳೇಗಾಲದ ಸೂಕ್ಷ್ಮ ಸಂವೇದನಾಶೀಲ ಬರಹಗಾರರಾದ ದಿಲೀಪ್ ಎನ್ಕೆ ಅವರ ನಾಲ್ಕನೇ ಪುಸ್ತಕ ತಿತ್ತಿಬ್ವಾಸನ ಟೈಟಾನ್ ವಾಚು ಹೊರ ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಒಂಬತ್ತು ಕಥೆಗಳಲ್ಲಿ ಹರಡಿಕೊಂಡಿರುವ ಈ ಸಂಕಲನವು ಭಾಷೆ, ವಸ್ತು, ತಂತ್ರ ಮತ್ತು ಶೈಲಿಗಳಲ್ಲಿ ತನ್ನದೇ ಆದ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ. ಕಥೆಗಾರರ ಅನುಭವವು ಪಚ್ಚಿ, ಸುಹಾಸ, ಪ್ರದೀಪ್, ವೀರು – ಈ ಪಾತ್ರಗಳಲ್ಲಿ ಮಡುಗಟ್ಟಿದೆ. ಸರಳ ಭಾಷೆಯ ಮೂಲಕ ತನ್ನ ಭಾವನೆಗಳನ್ನು ಪ್ರಸ್ತುತಪಡಿಸುವ ಕಥೆಗಾರ ಎಲ್ಲೂ ಓದುಗರನ್ನು ಗೊಂದಲಕ್ಕೆ ಎಡೆ ಮಾಡಿಕೊಡುವುದಿಲ್ಲ. ಎಲ್ಲಾ ಕಥೆಗಳನ್ನು ಒಂದೇ ಓದಿಗೆ ಓದಿದರೂ ಮತ್ತೊಮ್ಮೆ ಓದಬೇಕೆಂಬ ಕುತೂಹಲ ಹುಟ್ಟಿಸುವುದು ಇಲ್ಲಿನ ಕಥೆಗಳ ಹೆಗ್ಗಳಿಕೆ. ಒಂದು ಕಥೆಗೂ ಮತ್ತೊಂದು ಕಥೆಗೂ ವಸ್ತು ಮತ್ತು ತಂತ್ರಗಳಲ್ಲಿ ವೈವಿಧ್ಯತೆಯನ್ನು ಕಾಯ್ದುಕೊಳ್ಳಲಾಗಿದೆ. ಒಂಬತ್ತು ಕಥೆಗಳು ಕೂಡ ವಿವಿಧ ಸಾಮಾಜಿಕ, ಧಾರ‍್ಮಿಕ, ಕೌಟುಂಬಿಕ ಪರಿಸರದ ಒಳಗೆ ಎಡತಾಕುತ್ತಲೂ ತನ್ನ ಇರುವಿಕೆಯನ್ನು ಗಟ್ಟಿಗೊಳಿಸಿಕೊಳ್ಳುವ ಹಂಬಲವನ್ನು ವ್ಯಕ್ತಪಡಿಸುತ್ತದೆ. ಕಥೆಗಾರರು ಪ್ರತಿಯೊಂದು ಕಥೆಯ ಮುಕ್ತಾಯದ ಹಂತದಲ್ಲಿ ಬಳಸಿರುವ ತಂತ್ರಗಾರಿಕೆಯನ್ನು ಮೆಚ್ಚಲೇಬೇಕು. ಇದರಿಂದಲೇ ಕಥೆಯ ಆಶಯಗಳು ಯಶಸ್ವಿಯಾಗಿವೆ ಎನ್ನಬಹುದು. “ಏನೇ ಒಂದು ಹೊಸ ಬಗೆಯ ಬದಲಾವಣೆಗಾಗಿ ಹಂಬಲಿಸುವ ಹೃದಯ ತನ್ನ ಸುತ್ತಲಿನ ಸಾಮಾಜಿಕ ವ್ಯವಸ್ಥೆಯನ್ನು ಒಳಗಣ್ಣಿನಿಂದ ನೋಡಿ ಅಭಿವ್ಯಕ್ತಿಸಿರುವ ಕಥಾನಕ – ಇದೇ ತಿತ್ತಿಬ್ವಾಸನ ಟೈಟಾನ್ ವಾಚು”ನ ವಿಶೇಷತೆಯಾಗಿದೆ.
ತಿತ್ತಿಬ್ವಾಸ ಸ್ನೇಹ ಜೀವಿ ಮಾತ್ರವಲ್ಲ ತಾಯಿ ಪ್ರೀತಿ ಕಾಣದಿದ್ದರೂ ಅದರ ಅಂತರಾಳವನ್ನು ತಿಳಿದವನು. ಕೊಕ್ಕರಕ್ಕಿಯಂತಹ ಸ್ನೇಹಿತ ತನಗೆ ಸಿಕ್ಕಿರುವುದು ಪುಣ್ಯವೆಂದೇ ಭಾವಿಸಿದ್ದಾನೆ. ಆತನಿಗೆ ಏನೇ ಆದರೂ ಧರ‍್ಯ ತುಂಬುತ್ತಾನೆ. ತನ್ನ ತಾಯಿಯ ಬಯಕೆಯಂತೆ ಜೀಪಿನಲ್ಲಿ ಬರಬೇಕೆಂಬ ಆಸೆ ಮತ್ತು ಆ ಕನಸಿನಿಂದ ಆತ ಚೆನ್ನಾಗಿ ಓದಬೇಕೆಂಬ ಹಂಬಲವುಳ್ಳವನಾಗಿದ್ದಾನೆ. ಅದಕ್ಕಾಗಿ ಹಾಸ್ಟೆಲ್‌ಗೆ ರಜೆ ನೀಡಿದ್ದರೂ ಕೂಡ ಊರಿಗೆ ಹೋದರೆ ಓದಲಾಗುವುದಿಲ್ಲವೆಂದು ಹಾಸ್ಟೆಲ್‌ನಲ್ಲಿಯೇ ಉಳಿದುಕೊಳ್ಳುತ್ತಾನೆ. ಒಟ್ಟಿನಲ್ಲಿ ಭಾವಜೀವಿ, ಸ್ನೇಹಜೀವಿ ಮತ್ತು ತಾಯಿಯ ಮಾತನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ‍್ಯಪ್ರವೃತ್ತನಾದ ಕ್ರಿಯಾಶೀಲ ವ್ಯಕ್ತಿತ್ವ ಆತನದು. ಹಸಿವಿನ ಭೀಕರತೆ, ತಂದೆಯ ಸಾವು, ಅವನ ಮೇಲಿನ ಆರೋಪ ಇಂತಹ ಭೀಕರತೆ, ರಣ ರೋಚಕತೆಯ ವಸ್ತು ತಿತ್ತಿಬ್ವಾಸನ ಟೈಟಾನ್ ವಾಚು ಕಥೆಯಲ್ಲಿ ಒಡಮೂಡಿದ್ದು, ಹೊಸ ಬಗೆಯ ಚಂಪೂ ಮಾದರಿಯಲ್ಲಿ ಬೆಸೆದುಕೊಂಡಿದೆ.
ಹಿಂದ್ಕ ನನ್ಕೂಸು ನಾಕಕ್ಸರ ಕಲ್ತ್ಕಳ್ಳಿ ಅಂತ ಪಳ್ಳಿಗ ಕಳ್ಸೋರು… ಅದು ಈಗ ಹೈಟೆಕ್ ಆಗಿರುವ ಶಾಲೆಗೇ ಸೇರಿಸಬೇಕೆಂಬ ಬಲೆಗೆ ಜೋತುಬಿದ್ದು ಲಕ್ಷಾಂತರ ರೂಪಾಯಿಗಳನ್ನು ಶಾಲಾ ಪೂರ‍್ವ ಹಂತಕ್ಕೆ ಖರ‍್ಚು ಮಾಡುತ್ತಿದ್ದಾರೆ ಅಂದರೆ ಶಿಕ್ಷಣದ ಬೆಲೆಯನ್ನು ಇದಕ್ಕಿಂತ ಬೇರೆ ಉದಾಹರಣೆಯಿಂದ ವಿವರಿಸಬೇಕಾಗಿಲ್ಲ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಪಾಲಕರ ಆಶೆ ಒಂದೆಡೆಯಾದರೆ ಇದನ್ನೆ ಬಂಡವಾಳ ಮಾಡಿಕೊಂಡಿರುವ ಶಾಲೋಧ್ಯ ಮಗಳು ತಲೆಯೆತ್ತಲೂ ಇದೇ ಕಾರಣವಾಗಿದೆ. ಹಿರಿಯರು ಹೇಳಿದ ನಾಕಕ್ಸರದ ಹಿಂದೆ ಬಹುದೊಡ್ಡ ಗೆಲುವಿದೆ ಎಂಬುದನ್ನು ಕಥೆಗಾರರು ಸುಟ್ಟಿರದೆ ಮೂರ್ ದ್ವಾಸ ಕಥೆಯಲ್ಲಿ ಸಿದ್ದನ ಪಾತ್ರದ ಮೂಲಕ ಸಹಜವಾಗಿಯೇ ಅಭಿವ್ಯಕ್ತಿಸುವ ಪ್ರಯತ್ನ ಮಾಡಿದ್ದಾರೆ.
ಸಮಾಜದಲ್ಲಿ ನಡೆಯುತ್ತಿರುವ ಹಲವಾರು ಕೊಲೆ, ಸುಲಿಗೆ, ದೌರ‍್ಜನ್ಯ, ಅತ್ಯಾಚಾರ, ಅನೈತಿಕ ಸಂಬಂಧ ಇನ್ನಿತರ ಸಮಾಜಘಾತುಕ ಚಟುವಟಿಕೆಗಳು ಕೌಟುಂಬಿಕ ವಿರಹಕ್ಕೆ ಕಾರಣವಾಗುತ್ತಿವೆ ಎಂಬುದನ್ನು ದೊಡ್ಡ ಸಂಪಿಗೆ ತಿರುವು ಕಥೆಯಲ್ಲಿ ಕಾಣಬಹುದಾಗಿದೆ. ಹುಚ್ಚಾಲಿ ಮತ್ತು ತಂಗವೇಲು ನಿಷ್ಕಲ್ಮಶ ಪ್ರೀತಿಯಿಂದ ಸಂಸಾರಿಕ ಜೀವನ ನಡೆಸುತ್ತಿದ್ದರು. ಹುಚ್ಚಾಲಿ ತನ್ನ ಗಂಡನನ್ನು ಅದೆಷ್ಟು ಪ್ರೀತಿಸುತ್ತಿರುವಳು ಅದಕ್ಕಿಂತ ಅಪ್ಪನಾಗಿ ಅವನು ಇವಳನ್ನು ಪ್ರೀತಿಸುತ್ತಲಿದ್ದ ಎಂಬ ಅತ್ತೆಯ ಮಾತು ಇಬ್ಬರ ನಡುವಿನ ಅನ್ಯೋನ್ಯತೆಯನ್ನು ಬಿಚ್ಚಿಡುತ್ತದೆ. ಇವೆಲ್ಲದರ ನಡುವೆ ಹುಚ್ಚಾಲಿಯ ಜೀವನ ಪ್ರೀತಿ, ಪ್ರಾಣಿ-ಪಕ್ಷಿಗಳ ಇರುವಿಕೆ ಬಗೆಗಿನ ಕಾಳಜಿ, ಪರಿಸರಕ್ಕೆ ಅಂಟಿದ ಅವಳ ಹೃದಯ, ಗಂಡನ ಇರುವಿಕೆಯ ಸತ್ಯವನ್ನು ನಿಜವಾಗಿಸಿರುವ ಮಾತುಗಳು ಕಥೆಯ ಮೆರುಗನ್ನು ಹೆಚ್ಚಿಸಿವೆ. ಈ ಗುಣಗಳು ಆಕೆಗೆ ತಂದೆ ಮರಳು ಮಂಟ್ಯಾನಿಂದಲೇ ಬಂದಿದೆ ಎಂಬುದು ಗಮನಾರ‍್ಹ ಸಂಗತಿಯಾಗಿದೆ.
ಕಾಕ್ಟೇಲ್ ಒಂದು ರೀತಿಯಲ್ಲಿ ಸಮ್ಮಿಶ್ರಿತ ಕಾವ್ಯ ಪರಂಪರೆಗೆ ಸೇರಿದ ಕಥೆಯಾಗಿದೆ. ಪ್ರದೀಪನ ಸಾವು ವೀರೂಗೆ ಮಾತ್ರ ತಿಳಿದಿದೆ. ಆದರೆ ವೀರೂನ ಅಕ್ಕ, ಅಕ್ಕನ ಮಗಳು ಪ್ರದೀಪನ ಪತ್ರವನ್ನು (ಡೆತ್ನೋಟ್) ನೋಡಿ ಅದು ವೀರೂದೆಂದೇ ಭಾವಿಸಿ, ಅವರು ಪಡುವ ಆತಂಕ, ಭಯ, ಗೊಂದಲಗಳೇ ಕಾಕ್ಟೇಲ್ ಆಗಿ ಮಾರ‍್ಪಾಡಾಗಿದೆ.
ಕುಂಟು ಸೇತುವೆ ಕಥೆಯು ಪ್ರೀತಿಯಲ್ಲಿ ಸೋತ ಮಧುರ ಪ್ರೇಮಿಗಳಿಬ್ಬರ ಕಥೆಯಾಗಿದೆ. ವಯಸ್ಸಿನ ಹುರುಪು, ಕುಡಿ ಮೀಸೆಯ ಹೊನಪು, ಅಂಗಸೌಷ್ಠವದ ಹೊಳಪು ಸೆಕೆಂಡ್ ಹ್ಯಾಂಡ್ ಸೈಕಲನ್ನು ರಿಪೇರಿ ಮಾಡಿಸಿಕೊಂಡು ಬೆಲ್ ಹೊಡೆಯುತ್ತಾ ತನ್ನತ್ತ ತಿರುಗಿ ನೋಡುವಂತೆ ಮಾಡುವ ಕಲೆಗಾರಿಕೆ – ಇವೆಲ್ಲವೂ ಪ್ರೀತಿಯಲ್ಲಿ ಬೀಳುವವರ, ಬಿದ್ದವರ ಐಡೆಂಟಿಟಿಯಾಗಿರುತ್ತದೆ ಎಂಬುದನ್ನು ಕಥೆಗಾರರು ನಿರೂಪಿಸಿದ್ದಾರೆ.
ಇಂದು ನಮ್ಮೆಲ್ಲರಲ್ಲಿ ತೀರ ಅಪರೂಪವಾಗಿರುವ ಸೌಜನ್ಯ, ವಿನಯತೆ, ವಿಧೇಯತೆ, ಪ್ರಾಮಾಣಿಕತೆ ಇತ್ಯಾದಿ ಮೌಲ್ಯಗಳ ಬಗ್ಗೆ ಬೆಳಕು ಚೆಲ್ಲುವ ಅಪರೂಪದ ಕಥಾನಕ ಅಂಬಾಸಿಡರ್ ಕಾರು. ಕಾರು ಕಂಡಾಗಲೇ ಹಾರರ್ ಸಿನಿಮಾ ನೋಡಿದಂತೆ ಬೆಚ್ಚಿ ಬೆರಗಾಗುವ ಪುಟ್ಟಿಯ ಚಿತ್ರಣವು ಕೂಡ ಹೊಸ ಮೆರುಗು ನೀಡಿದೆ. ಬಹಳ ಮುಖ್ಯವಾಗಿ ಸುಹಾಸನ ಪಾತ್ರ ಮುಗ್ಧತೆಯ ಸಂಕೇತವಾಗಿದೆ.
ಅಭಿ ಮತ್ತು ವಂದನಾಳ ಬಾಲ್ಯದ ಗೆಳೆತನ ಪರಿಪಾಕಗೊಂಡು ಹುಚ್ಚು ಪ್ರೀತಿಯಾಗಿ ಮಾರ‍್ಪಾಡಾಗುವುದೇ ಭೈರೂಪ ಕಥೆಯ ವಸ್ತುವಾಗಿದೆ. ಅತಿಯಾದ ಖಿನ್ನತೆಗೆ ಒಳಗಾಗಿ, ಚಟಗಳಿಗೆ ದಾಸರಾಗುವುದು ಸರ‍್ವೆ ಸಾಮಾನ್ಯ. ಅಂತೆಯೇ ಭೈರೂಪವು ಕೂಡ ಸಲಿಂಗಿಗಳ ಹುಚ್ಚು ಪ್ರೇಮವನ್ನು ಸಮಾಜಕ್ಕೆ ಅರ್ಥೈಸುವ ಹೊಸ ಪ್ರಯತ್ನವಾಗಿದೆ ಎನ್ನಬಹುದು.
ಕ್ವಲ್ಲನಂಜಿ ತುಂಬು ಜೀವನ ನಡೆಸಿ ಗಂಡ ಬದುಕಿರುವಾಗಲೇ ಜೀವಕಳೆದು ಕೊಂಡ ಮುತ್ತೈದೆಯ ಕಥೆ. ಇಲ್ಲಿ ನಂಜಿಯ ಸಾವು ಮಾತ್ರ ಮುಖ್ಯವಲ್ಲ. ಸಾವಿನ ನಂತರ ನಡೆಯುವ ಕ್ರಿಯಾದಿ ಕರ‍್ಮಗಳು ಎರಡು ಧರ‍್ಮಗಳ ಸಮ್ಮಿಲನವನ್ನು ಒಳಗೊಂಡಿರುವುದು ಗಮನಿಸಬೇಕಾದ ಅಂಶ. ಇದನ್ನು ಕಥೆಗಾರರು ಧಾರ‍್ಮಿಕ ಚೌಕಟ್ಟಿನಲ್ಲಿ ನೋಡದೆ ಒಂದು ಸಂಪ್ರದಾಯದಂತೆ ಬೆಳೆಸಿಕೊಂಡಿದ್ದಾರೆ ಎನ್ನುವುದು ಗಮನಾರ‍್ಹ. ಸಮಾಧಿಯಲ್ಲಿನ ಶಿಲುಬೆಗಳ ವರ‍್ಣನೆ, ಹಾಲುತುಪ್ಪದ ವರ‍್ಣನೆಗಳು ಆಚರಣೆಗಳ ವೈವಿಧ್ಯತೆಯನ್ನು ಸಾರುತ್ತವೆಯೇ ವಿನಹ ಧರ‍್ಮಕ್ಕೆ ಅಂಟಿಕೊಂಡಿರುವ ಜಾಳುತನವಾಗಿರುವುದಿಲ್ಲ ಎನ್ನುವ ಪ್ರಾಮಾಣೀಕೃತ ಸನ್ನಿವೇಶವನ್ನು ಕಥೆಗಾರರು ದಾಖಲಿಸಿದ್ದಾರೆ.
ವಿಕಾರಿಯು ತನಗೆ ಒದಗಿದ ವಂಶ ಪಾರಂಪರಿಕ ಉದ್ಯೋಗದ ಜವಾಬ್ದಾರಿಯನ್ನು ಪ್ರಶ್ನಿಸುತ್ತದೆ. ಪೌರಕಾರ‍್ಮಿಕ ಹುದ್ದೆಗಳಿಗೆ ಇಂದು ಎಷ್ಟೊಂದು ಕಾಂಪಿಟೇಶನ್ ಇದೆ? ಆ ಸಮಾಜದ ಅಥವಾ ತಂದೆಯಿಂದ ಮಗನಿಗೆ ಆ ಕೆಲಸವು ವರ‍್ಗಾವಣೆಯಾಗುತ್ತಿರುವುದು ಸಾಮಾನ್ಯ ವಿಚಾರ. ಇಲ್ಲಿ ಮಗ ಇಂತಹ ಅವೈಜ್ಞಾನಿಕ ನೀತಿ ನಮ್ಮ ಒಬ್ಬರಿಗೆ ಯಾಕವ್ವ? ಎಂದು ಪ್ರಶ್ನಿಸುವುದು ಹೊಸ ಆಲೋಚನೆಯ ಹಾದಿಯಲ್ಲಿ ಸಾಗುತ್ತಿರುವ ವಿದ್ಯಾವಂತ ಹುಡುಗನ ಚಿಂತನೆಯೆಂದು ಭಾವಿಸಬಹುದು. ಗೌರವವಿರುವ ಕೆಲಸಗಳಿಗೆ ಸೇರಬಯಸುವ ಯೋಚನೆ ಬಂದಿರುವುದೇ ಒಂದು ದೊಡ್ಡ ಬೆಳೆವಣಿಗೆ. ಇದನ್ನು ಕಥೆಗಾರರು ಬೆಳೆಸಿಕೊಂಡು ಹೋಗಿದ್ದಾರೆ.
ಒಟ್ಟಿನಲ್ಲಿ ಕಥೆಗಾರರು ತಮ್ಮ ಸಂವೇಧನಾಶೀಲ ಬರೆಹ ಹಾಗೂ ಕಥೆಯಿಂದ ಕಥೆಗೆ ಅಳವಡಿಸಿಕೊಂಡಿರುವ ಭಿನ್ನ ಭಿನ್ನ ವಸ್ತು ಮತ್ತು ತಂತ್ರಗಳಿಂದ ಓದುಗರಿಗೆ ಹತ್ತಿರವಾಗುತ್ತಾರೆ. ಇಂತಹ ಬೆಳೆವಣಿಗೆ ಆರೋಗ್ಯಕರ. ದಿಲೀಪ್ ಎನ್ಕೆ ಅವರಿಂದ ಅತಿ ಹೆಚ್ಚು ಸಂಕಲನಗಳು ಹೊರಬರಲಿ, ಅವುಗಳನ್ನು ಓದುಗ ವರ‍್ಗ ಅಪ್ಪಿಕೊಳ್ಳುವಂತಾಗಲಿ.
–ಶಿವಕುಮಾರ ಸರಗೂರು