ಮಿಡಲ್ ಕ್ಲಾಸ್ ಕುಟುಂಬದ ಹುಡುಗರು ಅಥವಾ ಹುಡುಗಿಯರ ಬದುಕು ಹೊಂದಾಣಿಕೆಯೊಂದಿಗೆಯೇ ಸರಿದೂಗಿಸುವ ಪರಿಸ್ಥಿತಿಗೆ ಬಂದು ನಿಂತಿದೆ. ಅದೂ ಸಂಸಾರ, ಜೀವನವೆಂಬ ಪಾಠದಲ್ಲಲ್ಲ ಕೆಲಸ ಎನ್ನುವ ದುಡಿಮೆಯಲ್ಲಿ. ಈ ಮಿಡಲ್ ಕ್ಲಾಸ್ ಕುಟುಂಬದ ತಂದೆ ತಾಯಿಯ ಆಲೋಚನೆಗಳು ಎಲ್ಲಿಗೆ ಸೀಮಿತವಾಗಿರುತ್ತವೆ ಎಂದರೆ, ನನ್ನ ಮಕ್ಕಳಿಗೆ ಒಂದೊಳ್ಳೆ ಶಿಕ್ಷಣ ಕೊಡಿಸಿದ್ದೇನೆ ಯಾವುದೋ ಖಾಸಗಿ ಕಂಪನಿಯಲ್ಲಿ ಕೆಲಸ ಸಿಕ್ಕರೆ ಸಾಕು ತಿಂಗಳಿಗೆ ಮನೆಗೆ ಹಾಗೂ ಸಾಲಕ್ಕೆ ತೀರಿಸುವ ಮೊತ್ತ ಕಳುಹಿಸಿದರೆ ಸಾಕು ಜೀವನವೆಂಬದುನ್ನು ಸಾಯುವವರೆಗೂ ಸರಿದೂಗಿಸಕೊಂಡು ಹೋಗಬಹುದು ಎಂಬ ನಂಬಿಕೆ. ಅದು ಈ ಕಾಲದಲ್ಲಿ ಎಷ್ಟು ಸತ್ಯವೋ ಗೊತ್ತಿಲ್ಲ ಆದರೆ ಪ್ರತಿ ತಂದೆ ತಾಯಿಯರ ಮಾತಿನಲ್ಲಿ ಇದನ್ನು ಗಮನಿಸಬಹುದು. ಪುಟ್ಟ ಹಳ್ಳಿಯನ್ನು ಬಿಟ್ಟು ಕೆಲಸಕ್ಕೆ ಎಂದು ಸಿಟಿ ಸೇರುವ ಯುವ ಸಮಾಜ ದೊಡ್ಡದಿದೆ. ಇದನ್ನೇ ಬಂಡವಾಳವಾಗಿ ಇಟ್ಟುಕೊಂಡು ಖಾಸಗಿ ಕಂಪನಿಗಳು ಉದ್ಭವವಾಗುತ್ತಿವೆ.
ಕಂಪನಿಗಳು ಬಾಂಡ್ ಎಂಬ ಹಾಳೆಯನ್ನು ಹೊಸದಾಗಿ ಸೇರುವ ಯುವ ಹುಡುಗ ಅಥವಾ ಹುಡುಗಿಯರ ಕಡೆಯಿಂದ ಬರೆಸಿಕೊಂಡು ಕಂಪನಿ ಬೆಳವಣಿಗೆಗೆ ಈಗಿನ ಯುವ ಜನತೆಯಿಂದ ದನಗಳು ದುಡಿಯುವುದಕ್ಕಿಂತ ಹೆಚ್ಚಾಗಿ ಕೆಲಸಗಳನ್ನು ಮಾಡಿಸುತ್ತಿರುವುದು ವಿಷಾದಕರ. ಇತ್ತೀಚೆಗೆ ಬಿಎಂಟಿಸಿ ಯಲ್ಲಿ ಪ್ರಯಾಣಿಸುವಾಗ ನನ್ನ ಪಕ್ಕ ಒಬ್ಬ ಹುಡಗ ಬಂದು ಕುಳಿತ. ನಾನು ನನ್ನ ಪಾಡಿಗೆ ಓಟಿಟಿಯಲ್ಲಿ ಸಿನಿಮಾ ನೋಡುತ್ತಾ ಕುಳಿತಿದ್ದೆ. ಅಚಾನಕ್ ಆಗಿ ಅವನ ಮುಖವನ್ನು ನೋಡಿದ ನನಗೆ ಕಸಿವಿಸಿ ಆಯಿತು. ಮುಖಭಾವವಂತು ಅಂಜುತ್ತಾ ಒತ್ತದಡಲ್ಲಿ ಇದ್ದಂತೆ ಎದ್ದು ಕಾಣುತ್ತಿತ್ತು. ನಾನು ಮಾತನಾಡಿಸಲಾ? ಬೇಡ್ವಾ? ಎನ್ನುವ ಗೊಂದಲದಲ್ಲಿಯೇ ಮಾತನಾಡಿಸಿದೆ. ಇಂಜಿನಿಯರಿಂಗ್ ಮುಗಿದು ಯಾವುದೋ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿ ಕಣ್ಣಲ್ಲಿ ನೀರು ತುಂಬಿಕೊಂಡು ಮೆಲ್ಲನೆ ತಲೆ ತಗ್ಗಿಸಿಕೊಂಡು ಅಳುತ್ತಾ ಕುಳಿತ. ಅವನನ್ನು ನೋಡಿ ನನಗೆ ಭಯ ಶುರುವಾಯಿತು. ಯಾಕೆಂದು ಕೇಳಿದರೆ ಅವನು ಅಳುತ್ತಲೇ ನಡೆದ ಘಟನೆ ಹೇಳಿದ. ಅದೂ ಹೀಗಿತ್ತು ಅವನು ಓದಿದ್ದು ಇಂಜಿನಿಯರಿಂಗ್ ಪದವಿ ಬೆಂಗಳೂರಿನ ಪ್ರಸಿದ್ಧ ಕಾಲೇಜ್ನಲ್ಲಿ. ಅವನ ಕೊನೆಯ ವರ್ಷಕ್ಕೆ ಪ್ರಸಿದ್ಧ ಕಂಪನಿಗಳ ಪಟ್ಟಿಯಲ್ಲಿ ಸಣ್ಣದೊಂದು ಕಂಪನಿಗೆ ಆ ಹುಡುಗ ಸೆಲೆಕ್ಟ್ ಆಗಿದ್ದಾನೆ. ಕೆಲಸ ಸಿಕ್ಕ ಖುಷಿಯಲ್ಲಿ ಹಿಂದು ಮುಂದು ನೋಡದೆ ಕಂಪನಿಯ ಅದರದ್ದೇ ಆದ ರೀತಿ ರಿವಾಜುಗಳನ್ನು ನೋಡದೆ ಆ ಹುಡುಗನಿಂದ ಓರಿಜಿನಲ್ ಮಾರ್ಕ್ಸ್ ಕಾರ್ಡ, ಚೆಕ್ ಬುಕ್ ಹಾಗೆಯೇ ಮೂರು ವರ್ಷದ ಬಾಂಡ್ ಬರೆಸಿಕೊಂಡಿದ್ದಾರೆ. ಮೊದಲ ಎರಡು ತಿಂಗಳು ಟ್ರೈನಿಂಗ್ ಎಂದು ಜಾಸ್ತಿ ಒತ್ತಡ ಕೊಡಲಾರದೆ ಕೆಲಸದ ಬಗ್ಗೆ ಹೇಳಿದ್ದಾರೆ. ಅವನಿಗೆ ಕಂಪನಿಯ ಮೇಲೆ ಮತ್ತಷ್ಟು ಅಭಿಮಾನ ಹುಟ್ಟಿ ಖುಷಿಯಿಂದ ಕೆಲಸ ಮಾಡುತ್ತಾ ಬಂದಿದ್ದಾನೆ. ಟ್ರೈನಿಂಗ್ ಮುಗಿದ ತಿಂಗಳಿಂದ ಅವನನ್ನು ಬೆಂಡು ಎತ್ತಿದ್ದಾರೆ. ಈ ಭೂಮಿ ಮೇಲೆ ಇರಲೇಬಾರದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುವ ಮಟ್ಟಿಗೆ. ನಾನು ಮರುಗುತ್ತಾ ಅಷ್ಟಕ್ಕೇ ಯಾಕೆ ಅಂತ ಕೆಟ್ಟ ಆಲೋಚನೆ ಮಾಡುತ್ತಿದ್ದೀಯ ಬಿಟ್ಟು ಇನ್ನೊಂದು ಕಡೆ ಸೇರು. ಹಾಗೆಯೇ ಈಗಿನ ಕಾಲದಲ್ಲಿ ಎಲ್ಲೂ ಹೋದರು ಅದೇ ಪರಿಸ್ಥಿತಯೆಂದು ನನ್ನದೇ ಅನಿಸಿಕೆಯನ್ನು ಮುಂದಿಟ್ಟು ಸಮಾಧಾನಗೊಳಿಸಿದೆ. ಆದರೆ ಹಾಗೆಯೇ ಮಾಡೋಣವೆಂದು ಪ್ರಯತ್ನಿಸಿದ್ದಾನೆ ಕಂಪನಿಗೆ ಕೊಟ್ಟಿರುವ ಎಲ್ಲಾ ಒರಿಜಿನಲ್ ಮಾರ್ಕ್ಸ್ ಕಾರ್ಡ್ ಬಾಂಡ್ ತೋರಿಸಿ ನೀನು ಬಿಡಬೇಕೆಂದರೆ ಮೂರು ತಿಂಗಳಿನ ಸಂಬಳದ ಮೊತ್ತ ಕೊಡು ಇಲ್ಲವೆಂದರೆ ನಿನ್ನನ್ನು ಜೈಲಿಗೆ ನೂಕುತ್ತೇವೆ ಎಂದು ಭಯ ಬೀಳಿಸಿದ್ದಾರೆ. ಅದಕ್ಕೆ ಈ ಪಡಿಪಾಟಲು ಎಂದು ಅಳುತ್ತಾ ಅವನ ನೋವನ್ನು ತೋಡಿಕೊಂಡ. ಏನೂ ಅರಿಯದ ಮುಗ್ಧ ಹುಡುಗ ಹುಡುಗಿಯರ ಪಾಡಿದು. ಕನ್ನಡ ಬರದ ಟೀಮ್ ಲೀಡ್ ಗಳು ಬೆಂಗಳೂರಿಗೆ ಬಂದು ಎಂಟು-ಹತ್ತು ವರ್ಷಗಳಾದರೂ ಕನ್ನಡ ಬಾರದ ಮ್ಯಾನೇಜರ್ ಗಳು. ಈಗಿನ ಕಂಪನಿಯಲ್ಲಿ ಸಣ್ಣ ಮಕ್ಕಳಿಗೆ ಶಾಲೆಯಲ್ಲಿ ಹೇಳುವ ಹಾಗೆ ‘you should talk in english’ ಎನ್ನುವ ಮಾತು ಕನ್ನಡ ಮಾತನಾಡುವ ವ್ಯಕ್ತಿಗಳಿಗೆ ಪ್ರತಿ ಕಂಪನಿಯ ಶ್ಲೋಕ ಆಗೋಗಿದೆ. ಇದು ಖಾಸಗಿ ಕಂಪನಿಗಳ ಗೋಳು. ಇದು ಎಲ್ಲಾ ಕಂಪನಿಗಳ ಪರಿಸ್ಥಿತಿ ಎಂದು ಹೇಳುತ್ತಿಲ್ಲ. ಕೆಲವು ಕಂಪನಿಗಳು ಮಾತ್ರ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕೇಳಿದ ವಿಷಯ ದಕ್ಷಿಣ ಕೋರಿಯದಲ್ಲಿ ಕೆಲಸದ ಒತ್ತಡಕ್ಕೆ ರೋಬೊಟ್ ಆತ್ಮಹತ್ಯೆ ಮಾಡಿಕೊಂಡಿದೆಯಂತೆ. ಮನುಷ್ಯನೇ ಕೃತಕವಾಗಿ ನಿರ್ಮಿಸಿದ ರೋಬೊಟ್ ಪರಿಸ್ಥಿತಿ ಹೀಗಿದೆಯೆಂದರೆ ಇನ್ನು ನಾವು ಮನುಷ್ಯರು ಎಲ್ಲಾ ರೀತಿಯ ನೋವು, ನಲಿವು, ಸುಖ ದುಃಖ, ಆಸೆಗಳು ಕನಸುಗಳು ಹೀಗೆ ಎಲ್ಲ ಮಿಶ್ರಿತ ಭಾವನೆಗಳನ್ನು ಹೊತ್ತುಕೊಂಡು ಬದುಕುವವರು.
ಹಾಗಾಗಿ ಕೆಲಸ ಸಿಕ್ಕಿತು ಎಂದು ಸೇರುವ ಮುಂಚೆ ಕಂಪನಿಯ ರೀತಿ ರಿವಾಜುಗಳನ್ನ ಪರಿಶೀಲಿಸಿ ಅಲ್ಲಿ ಏಗುವುದು ನಿಮ್ಮಿಂದ ಸಾಧ್ಯವಾ? ಒಂದಲ್ಲ ಹತ್ತು ಬಾರಿ ಆಲೋಚಿಸಿ. ಹಾಗೂ ಆದಷ್ಟು ಯಾರಿಗೂ ತಿಳಿಯದೆ ಸಿಕ್ಕಿರುವ ಕಂಪನಿಗೆ ಹೋಗಿ ಅಲ್ಲಿ ಕೆಲಸ ಮಾಡುತ್ತಿರುವವರನ್ನು ಖುದ್ದಾಗಿ ಕೇಳಿ ಆಗ ನಿಮಗೆ ಕಂಪನಿ ಹಿಡಿಸಿದರೆ ಮಾತ್ರ ಸೇರಿ. ಇಲ್ಲ ನನಗೆ ಕೆಲಸ ಬೇಕೆ ಬೇಕು ಎನ್ನುವ ಪರಿಸ್ಥಿತಿಯಲ್ಲಿದ್ದರೆ ಮೇಲೆ ಆ ಹುಡುಗ ಪಟ್ಟ ಕಷ್ಟಕ್ಕೆ ಸಿದ್ಧರಾಗಿ ಸೇರಿಬಿಡಿ.
–ಮಂಜುನಾಥ್. ಚಿನಕುಂಟಿ
ನೈಜತೆ ಅರ್ಥ ಪೂರ್ಣವಾಗಿದೇ.
ಸೂಪರ್, ಇದು ಸತ್ಯ ಮತ್ತು ಈಗಿನ ಪರಿಸ್ಥಿತಿ ಕೆಲಸದ ಒತ್ತಡ ಆಗೆ ಇದೆ, ಯುವ ಪೀಳಿಗೆ ಕೆಲಸಕ್ಕೆ ಸೇರುವ ಮುನ್ನ ಆಲೋಚಿಸಿ ಮುನ್ನೆಡೆಯಬೇಕಾಗಿದೆ