
ಸೂಂಕತ್ತಿ ಹೂವುಗಳು
ಕೆಂಪಗೆ ಮೈಯರಳಿ ನಿಂತವು ರಸ್ತೆಯ ಬದಿಗೆ
ನನಗಿಂತ ಸುಂದರಿ ಯಾರೆಂದವು ಸುಮ್ಮಗೆ
ಚೆಲುವೆಲ್ಲ ನಂದೆ ಎಂದವು ನಾಚಿ ನೀರಾದಂತೆ
ಲಜ್ಜೆಯ ಬಿಂಕ ದಿಬ್ಬಣವೇರಿ ಕುಣಿದಂತೆ
ಮಳೆಯ ಕಾಸರದ ಮುಂಗಾರಿನ ಆಗಮನಕೆ
ಚಿತ್ತಾಕರ್ಷಕ ಹಸಿರು ಭೂರಮೆಯ ಸಿಂಗಾರಕೆ
ಗುಲ್ ಮೊಹರೆಯೊತ್ತಿ ಅಗಸದ ಡಿಂಬಿಗೆ ಅರಳಿ
ಕೊನಕೊನರಿ ಪುತ್ಕರಿಸಿ ಕೆಂಪು ಗೋಣು ಚೆಲ್ಲಿ
ಕ್ರಾಂತಿಯೊ ಶಾಂತಿಯೊ ನಾನಿರುವುದೆ ಹೀಗೆ ಕೆಂಪಗೆ
ಹಸಿರು ಮರದೊಳಗೆ ಕಾಯಿ ಹೂವಾಗಿ ಅರಳಿದೆ
ಕೆಂಪಗೆ
ಕಾಡ ಹಾದಿಯ ಹೂವಾದರೂ ನಾನು ಸೊಗಸೆ ಸೊಗಸು
ಸೊಗಯಿಸುವ ಹೂವೆ ಆದರೂ ಎಲ್ಲರ ಕಾಂಬ ಕಣ್ಣು
ಎಲ್ಲರೆದೆಯ ರಂಜಿಸುವ ದೇಸಿ ಇಂಪಿನ ಕೆಂಪು ಗುಂಪು
ನನ್ನೊಳಗೂ ಅರಳುವ ಮಕರಂದಕೆ ಭೇದಭಾವವಿಲ್ಲ
ದುಂಬಿಗಳು ದಾಂಗುಡಿ ಇಟ್ಟು ಹಿರಿದ ರಸೋತ್ಕರ್ಷ ಪೆಂಪು ಓನಪು
ನವನವೋಲ್ಲಾಸದ ಇಳೆಯ ಮೇಲಣ ಹರ್ಷೋದ್ಗಾರದ ಇಂಚರ
ಪಚ್ಚೆಮಲೆಯ ದಿಬ್ಬದಲಿ ವರುಷಕೊಮ್ಮೆ ಅರಳಿದ ಸುಂದರಿ
ನವನವ ಉದ್ಯಾನ ರಮ್ಯ ತಾಣಗಳಲಿ ಪವಡಿಸುವ
ದಿವ್ಯ ವನ ಮಯೂರಿ
ನಗರಗಳ ಅಲಂಕಾರ ರಸ್ತೆಗಳಲಿ ಶೋಭಿಸುವ
ಹಸಿರು ಉಸಿರಿನ ವೈಯಾರಿ
ನಿಮ್ಮ ಮನೆ ಮನಗಳ ದೀಪದಲಿ ಶೋಭಿಸುವ
ಸೂಂಕತ್ತಿ ಹೂಗಳ ರೂವಾರಿ
ತರುಣ ತರುಣೆಯರ ಆಕರ್ಷಿಸುವ ಕಡುಕೆಂಪು ಮನ್ಮಥನ ಆಯ್ಕೆ
ಜವಾರಿ ಮೈ ಮನಸ್ಸುಗಳ ದಟ್ಟ ಶೃಂಗಾರ ವಾಂಛೆಯ ಕಾಣ್ಕೆ
ನೀರವ ಮೌನ ಪಿಸುಗಡುವ ಆಲಾಪ ಬಣ್ಣವೆ ಮಾತಾಡುವುದು
ತನ್ನ ಬಣ್ಣೆಸುವ ಕವಿ ಯಾರವನೆಂದು ತನ್ನ ಪ್ರಶಂಸಿಸುವ ವಿಮರ್ಶಕ ಯಾರವನೆಂದು
ಗ್ರಾಮದೇವತೆಗಳು ಶಿಷ್ಟದೇವತೆಗಳು ಯಾವ ದೇವರಾದರೇನು
ಆರತಿ ಅಲಂಕಾರದ ದೀಪಗಳಿಗೆ ನಾನೆ ಶ್ರೇಷ್ಠವೆಂದವು ಸೂಂಕತ್ತಿ ಹೂಗಳು
ಬಾನ ಸೊಡರಿಗೆ ಮುಖಮಾಡಿ ನಗು ಅರಳಿ
ಇರುಳ ಚಂದಿರಗೆ ತುಸು ಇಬ್ಬನಿಯ ತಂಪು ಕೆರಳಿ
ಆನಂದ ಆಹ್ಲಾದ ಹಾಯ್ ಎನ್ನುವ ಬಿಂಕ
ಏನದ್ಭುತ ! ಸಂತೋಷ ಕಾವ್ಯಮೀಮಾಂಸೆ.
–ಸಂತೋಷ್ ಟಿ
ಗಜಲ್
ಮಾತುಗಳೆಲ್ಲ ಮರೆತು ಹೋದ ಮೇಲೆ ನೆನಪುಗಳ ಮೆರವಣಿಗೆ ನಡೆಯಲಿ ಬಿಡು.
ಮನಸುಗಳೆಲ್ಲ ಸೋತು ಹೋದ ಮೇಲೆ ನಾಳೆಗಳು ಕರಗಿ ನೀರಾಗಲಿ ಬಿಡು.
ಅಮಲಿನ ನಶೆ ಇಳಿದ ಮೇಲೆ ಸುಳ್ಳಿನ ಕಂಬಳಿ ಸತ್ಯದ ಬಾಯಿ ಮುಚ್ಚಿ ಬಿಟ್ಟಿದೆ
ಕಾಲದ ಬೊಂಬೆ ಆಟ ಮುಗಿಯದಿದ್ದ ಮೇಲೆ
ನಾಟಕ ನಡಿಯಲಿ ಬಿಡು.
ಮೌನದ ಚಿಪ್ಪು ಒಡೆಯದೆ ಮಾತು ಕನವರಿಕೆಯ ಕೂಸಾಗಿ ಹೋಯಿತಲ್ಲ
ಜೋಗುಳದ ಹಾಡು ನಿಂತ ಮೇಲೆ ಬೆಳದಿಂಗಳು ಚದುರಿ ಹಾಳಾಗಲಿ ಬಿಡು.
ನೂರು ಪ್ರಶ್ನೆಗಳಿಗೂ ಎದೆ ಬಗೆದ ಉತ್ತರ ನೀಡಲಾಗದು ಸಾಕಿ
ಕಣ್ಣೀರಿಗೆ ಕಂದೀಲು ಹಿಡಿಯದೆ ಹೋದ ಮೇಲೆ
ಕತ್ತಲ ಜಾತ್ರೆ ನಡೆಯಲಿ ಬಿಡು.
ಕದ ಮುಚ್ಚಿ ಕುಂತವರ ಹೃದಯದಲ್ಲಿ ವಾಣಿಗೇನಿದೆ ಕೆಲಸ ಕಪನ್ ಎಳೆದು ಬಿಡುವೆ
ಮನದ ದಾರಿಗೆ ಬೇಲಿ ಜಡಿದ ಮೇಲೆ ಏಕತಾರಿ ಡಮರುಗ ನುಡಿಸಲಿ ಬಿಡು.
–ವಾಣಿ ಭಂಡಾರಿ
ಲಿಪ್ಸ್ಟಿಕ್ ಸುಂದರಿ
ಆಸ್ಪತ್ರೆಯ ವಿಶಾಲ ಅವರಣದಲ್ಲಿ
ಸೋತು ಹೋದ ಮನದ ಭಾವನೆಗಳಲ್ಲಿ
ಸಣ್ಣ ಬೆಳಕ ಕಿರಣ ಮೂಡಲು ಕಾರಣ
ಗೊಂಬೆಯಂತೆ ನಡೆದು ಹೋದ ಲಿಪ್ಸ್ಟಿಕ್ ಸುಂದರಿ!
ದೊಡ್ಡ ಫೈಲು ಕೈಯಲ್ಲಿ, ದುಡ್ಡ ಪಾವತಿ ಜೊತೆಯಲ್ಲಿ
ಸುಮ್ಮನೆ ಕುಳಿತ ಕುರ್ಚಿಯಲ್ಲಿ
ಸಣ್ಣಗೆ ಅಳುತ್ತಿರುವ ಮನಕೆ
ರಾಕ್ಷಸ ಸಮಾನ ಯಂತ್ರಗಳ ಮೆರವಣಿಗೆ ಮಧ್ಯ
ಯಮಲೋಕವೇ ಇದು!
ಎಂದು ಅಚ್ಚರಿಭರಿತ ಶಂಕಿತ ಮನಕೆ
ಅಲ್ಲ ಅಲ್ಲ…ಇದು ಯಮಲೋಕವಲ್ಲ!
ಇದು ಅಲ್ಲಿಗೆ ಹೋಗುವ ಸ್ವಾಗತ ಕಮಾನು ಮಾತ್ರ
ಎಂದು ನೆನಪಿಸುವಂತೆ ಮತ್ತೆ ಹಾದು ಹೋದಳು
ಅದೇ ಲಿಪ್ಸ್ಟಿಕ್ ಸುಂದರಿ!
ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿನಂತೆ
ಒಳಗಡೆ ಇರುವ ನಾರಾಯಣನ ಕಾಣುವ ತವಕ
ರಿಪೋರ್ಟು ಕೈ ಕೊಡುವವೋ ಎಂಬ ಆತಂಕ
ಯಂತ್ರದಂತೆ ಪರೀಕ್ಷಿಸುವ ನಾರಾಯಣನ
ಮುಖದಲ್ಲಿ ನಗುವಿಲ್ಲ!
ಬಂದೆಯಾ ಭಕ್ತ , ಬಾ ಎನ್ನುವ ಮಾತಿಲ್ಲ!
ಹರಕೆಯ ಕುರಿಗೆ ಹಾರ ಹಾಕುವ ರೀತಿಯಲ್ಲಿ
ದಡಬಡನೆ ರಿಪೋರ್ಟ್ ತಿರುವಿ
ಕಾಗದದ ಮೇಲೆ ಔಷಧಿ ಗೀಚಿ ಕೊಟ್ಟಾಗ
ಕೃತಕ ನಗೆ ಬೀರಿ ಫೈಲ್ ಕೈಗಿತ್ತಳು
ಆ ಲಿಪ್ಸ್ಟಿಕ್ ಸುಂದರಿ!
ಹೊಸ ಮಾತ್ರೆ,ಹೊಸ ಪಥ್ಯ
ಅವರಾಡುವ ನಾಟಕ ಮಿಥ್ಯ!
ಇದರ ಅರಿವಿದ್ದರೂ
ಉಣಬೇಕು ವಿಷದ ಸಮಾನ ಊಟ
ತುಂಬಿದ ಹೊಟ್ಟೆಯಲ್ಲಿ ಮತ್ತಷ್ಟು ಜಾಗ ಮಾಡಿ
ಮತ್ತೆ ನುಂಗ ಬೇಕಿದೆ ವಿಷದ ಮಾತ್ರೆ !
ಕಹಿಯಾದ ನಾಲಗೆ ಕೃಶವಾದ ದೇಹ
ಮಂಕಾದ ದೃಷ್ಟಿ ನಿದ್ರಾಹೀನ ನಯನಗಳಲ್ಲಿ
ಸ್ವಲ್ಪ ಹಿತ ಕೊಡಲು ಮತ್ತೆ
ಚಿತ್ರವಾಗಿ ಹಾದು ಹೋಗುವಳು…
ಅದೇ ಲಿಪ್ಸ್ಟಿಕ್ ಸುಂದರಿ!
–ವಿದ್ಯಾ ಗಾಯತ್ರಿ ಜೋಶಿ
ಹೆಜ್ಜೆ
ಯಾರು ಬಲ್ಲರು,
ಹರಿವ ಮುಂದಿನ ಗುರಿಯ?
ಕೆಲವೊಮ್ಮೆ ಸರಾಗ,
ಇನ್ನೊಮ್ಮೆ ಧುಮ್ಮಿಕ್ಕುವ ವೇಗ;
ಮಾರ್ಗಕ್ಕೆ ಅನುಗುಣವಾಗಿ
ನೀತಿಯಲಿ ಅದಲು – ಬದಲು.
ನಿರ್ಮಲ ಹರಿವು
ಧುಮ್ಮಿಕ್ಕಿ ಘರ್ಜಿಸಲು
ಹೇಗೆ ಸಾಧ್ಯ?
ಎದುರಿನ ಕಂದಕ
ಒಂದೇ ದಾರಿಯಾದಾಗ…
ಈ ವಿಸ್ಮಯದ ಅನುಭೂತಿ
ನೀಡುತಿದೆ ಗತಿ…
–ನಿರಂಜನ ಕೆ ನಾಯಕ
ರೈತನ ಅಳಲು
ಇಳೆ ನೇಗಿಲೊಳು ರೈತನ ಬಾಳು
ಯಾರು ಕೇಳುವವರಿಲ್ಲ ಅನ್ನದಾತನ ಗೋಳು
ಜೀವನದಲ್ಲಿ ಬರಿ ಏಳು ಬೀಳು
ಅನ್ನದಾತನ ಬಾಳಲ್ಲಿ ತುಂಬಿರುವುದು ಬರಿ ಧೂಳು
ಬೇಸಾಯ ಮಾಡಿ ಸುಕ್ಕುಗಟ್ಟಿರುವ ಚರ್ಮ
ಯಾರು ಅರಿವರಿಲ್ಲ ಕಷ್ಟದ ಒಳ ಮರ್ಮ
ಬೇಸಾಯ ಮಾಡುವುದೇ ಇವರ ಕರ್ಮ
ಕಷ್ಟದಲ್ಲಿ ದುಡಿದು ಅನ್ನ ನೀಡುವುದೇ ರೈತನ ಧರ್ಮ
ಮಾಂಸ ಖಂಡಗಳು ಇಲ್ಲದ ಎಲುಬುಗಳು
ಬಾಚಣಿಗೆ ಮುಖ ನೋಡದ ಕೂದಲು
ವರ್ಷಧಾರೆಯ ನಿರೀಕ್ಷೆಯಲ್ಲಿರುವ ಕಣ್ಣುಗಳು
ನಿರೀಕ್ಷಿತ ಬೆಳೆ ಕಾಣದೆ ಬಾಳು ಬುಡಮೇಲು
ಧರೆಗೆ ದೊರೆಯಾಗಲು
ಹಂಬಲಿಸುತ್ತಿರಲು
ಮಳೆ ಇಲ್ಲದೆ ರೈತನ ಅಳಲು
ತೆರೆಯುವುದು ಯಾವಾಗ ಉತ್ತಮ ಬೆಳೆಯ ಬಾಗಿಲು
ದಕ್ಕುತ್ತಿಲ್ಲ ಸರ್ಕಾರದ ಎರವಲು
ಕೇಳುವವರಿಲ್ಲ ರೈತನ ಅಳಲು
ಮಾನ ಮುಚ್ಚಲು ಚೂರು ಗೀರು ಬಟ್ಟೆ ಹಾಕಿರಲು
ಮಳೆಗಾಗಿ ತಲೆಯೆತ್ತಿ ನೋಡುತ್ತಿರುವನು ಮುಗಿಲು
–ಚಿನ್ನಸ್ವಾಮಿ ಎಸ್