ಪ್ರಕಾಶ್ ಪುಟ್ಟಪ್ಪ “ಅವ್ವ ದುಡಿದು ಬಂದು ರಾತ್ರಿ ರಾಗಿ ಬೀಸುವಾಗ ತನ್ನ ಮಡಿಲಲ್ಲಿ ಮಲಗಿಸಿಕೊಂಡು ಹೇಳುತ್ತಿದ್ದ ಕಾಲ್ಪನಿಕ ಕಥೆಗಳು, ಗೌರಜ್ಜಿ ರಾತ್ರಿ ಹೊತ್ತು ಬೀದಿಯಲ್ಲಿ ವಠಾರದ ಮಕ್ಕಳನ್ನೆಲ್ಲ ಮಲಗಿಸಿಕೊಂಡು ಹೇಳುತ್ತಿದ್ದ ಕಥೆಗಳು ನಮ್ಮ ಬಾಲ್ಯವನ್ನು ಸಮೃದ್ಧವಾಗಿಸಿದ್ದವು” ಎಂದು ಹೇಳುವುದರಲ್ಲಿ ಅವರ ಕಥೆಗಳ ರಚನೆಯ ಹಿನ್ನೆಲೆ ಇದೆ. ಹಾಗೆ “ಬರಹ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತದೊ ಇಲ್ಲವೊ ಗೊತ್ತಿಲ್ಲ ಆದರೆ ನನ್ನನ್ನು ಸೆಳೆದುಕೊಂಡದ್ದು ಮಾತ್ರ ಒಂದು ಸೋಜಿಗ” ಎಂದು ಬರಹಗಾರನಾಗಿ ತೊಡಗಿಸಿಕೊಂಡ ‘ಆಕಸ್ಮಿಕ’ ಅಂಶದ ಬಗ್ಗೆ ತಮ್ಮ ಬರಹಗಳ ಓದುಗನಿಗೆ ಒಂದು ಸಣ್ಣ ಕ್ಲೂ ಕೊಡುತ್ತಾರೆ.
“ಗಾಂಧಿ ಜೋಡಿನ ಮಳಿಗೆ” ಕಥೆಗಳು ಕನ್ನಡ ಸಾಹಿತ್ಯ ಲೋಕ ಮುಲಾಜಿಲ್ಲದೆ ಸ್ವೀಕರಿಸುವ ಪ್ರಕಾಶ್ ಪುಟ್ಟಪ್ಪನವರ ಅಪರೂಪದ ಕಾಣ್ಕೆ. ಪೊನ್ನಾಚಿ ಮತ್ತು ಆ ಊರಿನ ಸುತ್ತಮುತ್ತಲ ಕಾಡುಮೇಡಿನ ಮಡಿಲಲ್ಲಿ ಈಗಾಗಲೇ ಒಬ್ಬ ಯಶಸ್ವಿ ಕಥೆಗಾರನಿದ್ದೂ ಆ ಕಥೆಗಾರನ ಚೂರು ನೆರಳೂ ತಾಕದಂತೆ ತನ್ನ ರಚನೆಗೆ ಆಯ್ದಕೊಂಡ ವಸ್ತು, ವಿಷಯದ ಆಯ್ಕೆಯಿಂದ ನೇಯ್ದಂಥ ಭಿನ್ನ ಬಗೆಯ ಸೃಜನಶೀಲ ಕಥೆಗಳಿವು.
ಗಾಂಧೀಜಿ ಹೋರಾಟದ ಪ್ರಭಾವಕ್ಕೆ ಒಳಗಾದ ಮುನಿಯ ಬ್ರಿಟೀಷರ ವಿರುದ್ಧ ನಿಲ್ಲುವ ಹಾಗು ಗಾಂಧಿಗಾಗಿಯೇ ವಿಶೇಷವಾಗಿ ಒಂದು ಜೊತೆ ಜೋಡು ಸಿದ್ದಪಡಿಸಿಕೊಂಡು ಆ ಮಹಾತ್ಮನ ಪಾದಕ್ಕೆ ಮೆಟ್ಟಿಸುವ ಆಸೆಯಿಂದ ‘ಗಾಂಧಿಯಲ್ಲಿಗೆ’ ಹೋಗುವ “ಗಾಂಧಿ ಜೋಡಿನ ಮಳಿಗೆ” ಕಥೆ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದ ಆರಂಭಿಕ ಕಾಲಘಟ್ಟದ ಚಿತ್ರಣವನ್ನು ಸ್ಥೂಲವಾಗಿ ಬಿತ್ತರಿಸುತ್ತದೆ. ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದ ಬಗ್ಗೆ “ಭಾರತವನ್ನು ಬ್ರಿಟೀಷ್ ಶೃಂಖಲೆಯ ಬಿಡುಗಡೆಗಿಂತ ಭಾರತದೊಳಗಿನ ದಲಿತರಿಗೆ ಇಲ್ಲಿನ ಮೇಲುವರ್ಗದ ಶೃಂಖಲೆಯಿಂದ ಬಿಡುಗಡೆಗೊಳಿಸುವುದು ತುರ್ತಿನ ಕೆಲಸ” ಎಂದು ಶೋಷಿತ ಜನಗಳ ಪರವಾದ ಅಂಬೇಡ್ಕರ್ ನಿಲುವಿನ ನಡುವೆಯೇ ಸ್ವಾತಂತ್ರ್ಯಹೋರಾಟದಲ್ಲಿ ಗಾಂಧೀಜಿ ಹೆಜ್ಜೆಗೆ ಹೆಜ್ಜೆ ಹಾಕಿ ಬೆಂಬಲಿಸಿದ ದಲಿತರ ಪ್ರವೇಶಿಸಿಕೆಯ ಅಂಶವನ್ನು ಬಹುಮುಖ್ಯ ನೆಲೆಯಲ್ಲಿ ಕಾಣುತ್ತದೆ “ಗಾಂಧೀ ಜೋಡಿನ ಮಳಿಗೆ”. ಇದು ಸೃಜನಶೀಲ ಕಥೆಗಾರನಿಗಿರುವ ಸೂಕ್ಷ್ಮತೆ, ಒಂದು ವಿಷಯದ ಪ್ರವೇಶಿಕೆಯ ಸೂಚ್ಯದ ಅವಶ್ಯಕತೆ ಎಂಥದ್ದು ಎಂಬುದನ್ನು ಸೂಚಿಸುತ್ತದೆ.
ಪ್ರಕಾಶ್ ಪುಟ್ಟಪ್ಪನವರ ಕಥಾ ರಚನೆಯಲ್ಲಿ ಕಾಣ ಬರುವ ಜಾನಪದ ಬೇರು/ ಸೊಗಡು ಅನ್ನಿ. ಆ ಬೇರಿನ ಆಳದ ಪ್ರಮಾಣವನ್ನು ಇಲ್ಲಿನ ಕೆಲವು ಕಥೆಗಳಲ್ಲಿ ಬಹಳ ಎಚ್ಚರಿಕೆಯಿಂದ ತಂದಿರುವುದು. ಅದು ‘ಗಾಂಧೀ ಜೋಡಿನ ಮಳಿಗೆ’ ‘ಕಂಡಾಯದೊಡೆಯ ಉಘೇ ಉಘೇ’ ‘ಪರಿಧಿ’ ‘ನಿಗಿನಿಗಿ ಕೆಂಡ’ ದಲ್ಲಿ ಪೂರಕವಾಗಿ ಬಳಸಿರುವುದು.
ಇಂಥ ಸಾಲುಗಳ ಬಳಕೆ ಕಥೆಗಳಿಗೆ ನ್ಯಾಯದ ರೂಪ ಒದಗಿ ಕಥೆಯ ಚೆಲುವನ್ನು ಹೆಚ್ಚಿಸಿದೆ. “ಗಾಂಧಿ ಜೋಡಿನ ಮಳಿಗೆ” ಕಥೆಯ “ಚಕ್ಕಳ ಸುಲಿದಿವ್ನಿ ದಾರಾವ ಹೆಣೆದಿವ್ನಿ/ ಮಹಾತ್ಮ ಹೊಲಿದ ಜೋಡ ನೀ ಮೆಟ್ಟಯ್ಯ” ಎಂಬ ಆರಂಭಿಕ ಸಾಲುಗಳು – ಕಥೆಗಾರನು – ಊರು ಕೇರಿ ಶ್ರೇಷ್ಠ ಕನಿಷ್ಠ ಅನ್ನೊ ಭಾವ ಒತ್ತಟ್ಟಿಗಿಟ್ಟು ತಾನು ನಿಂತು ಹೇಳುತ್ತಿರುವ ನೆಲದ ಸೊಗಡಿದೆಯಲ್ಲ.. ಅದು ಕಥೆಗಾರನ ಜಾತ್ಯಾತೀತ ಮನಸ್ಸಿನ ಹಂಬಲಿಕೆ ಮತ್ತು ಮಾನವೀಯ ತುಡಿತದ ಭಾವವನ್ನು ಪರಿಚಯಿಸುತ್ತದೆ.
“ಸಾಲುಗಟ್ಟಿದ ಪಂಕ್ತಿಯಲ್ಲಿ ಚಕ್ಕಂಬಟ್ಟೆ ಹಾಕಿ ಬಾಳೆ ಎಲೆಯಲ್ಲಿ ಬಡಿಸಿದ್ದ ಮಾಂಸದ ತುಂಡುಗಳನ್ನು ಮಾದೇಶ ಒಂದೊಂದಾಗಿ ಬಾಯಿಗಿರಿಸುತ್ತಿದ್ದ” ಎನ್ನುವಲ್ಲಿಗೆ ಧರೆಗೆ ದೊಡ್ಡೋರ ‘ಅಯ್ಯ ಸಿದ್ದಪಡಿಸಿದ ರಸವೋ/ ಅದು ನಾಗರಾಜನ ವಿಷವೊ/ ಸಿದ್ದಯ್ಯ ಸ್ವಾಮಿ ಬನ್ಯೋ/ ಮಂಟೇದ ನಿಂಗಯ್ಯ ನೀವೇ ಬನ್ಯೋ’ ಪದದ ಮೂಲಕ ಕೊನೆಯಾಗುವ “ಕಂಡಾಯದೊಡೆಯ ಉಘೇ ಉಘೇ” ಕಥೆ ಪೂರ್ವಿಕರು ನಂಬಿ, ಕಟ್ಟಿ, ಉಳಿಸಿ ಬೆಳೆಸಿ ಜೋಪಾನ ಮಾಡಿಕೊಂಡು ಬಂದಿದ್ದ ಸಂಪ್ರದಾಯದ ಎಲ್ಲೆಯನ್ನು ಮೀರಿ ಅಥವಾ ದಾಟಿ ಬದುಕು ಕಟ್ಟಿಕೊಳ್ಳುವ ಈ ತಲೆಮಾರಿನ ಮಾದೇಶನ ನಿಲುವಿಗೆ ಮನೆಯವರ ಪ್ರತಿರೋಧವಿದೆ. ಪೂರ್ವಿಕರ ಆಚಾರ ವಿಚಾರ ಮುಂದುವರಿಸಿಕೊಂಡು ಹೋಗೆನ್ನುವ ಅವರ ಎಲ್ಲ ಪ್ರಯತ್ನವನ್ನು ಹೊಸ ಪ್ರಪಂಚ ನೋಡುತ್ತ ಬಂದ ಮಾದೇಶ ವಿಫಲಗೊಳಿಸುತ್ತಾನೆ. ಇದು ಬದಲಾದ ಕಾಲಘಟ್ಟದಲ್ಲಿ ಹೊಸ ತಲೆಮಾರಿನ ಭಿನ್ನ ಅಥವಾ ಸುಧಾರಿತ ಆಲೋಚನೆಯ ಮಟ್ಟವನ್ನು ಪ್ರತಿಬಿಂಬಿಸುತ್ತದೆ.
ದಲಿತರಿಗೆ ದೇಗುಲ ಒಳ ಪ್ರವೇಶ ನಿಷಿದ್ಧ ಎಂಬುದು ಭಾರತ ನೆಲದ ಮೇಲ್ವರ್ಗಗಳು ತಾವೇ ಏಕತ್ರಗೊಳಿಸಿ ಉಳಿಸಿಕೊಂಡು ಆಚರಿಸಿಕೊಂಡು ಬಂದ ಪುರಾತನ ಸಂಪ್ರದಾಯ. ಇದು ಈಗಲೂ ಇರುವ ಒಂದು ಕೆಟ್ಟ ವ್ಯವಸ್ಥೆ. ಗಾಂಧೀಜಿ ಮತ್ತು ಅಂಬೇಡ್ಕರ್, ದಲಿತರಿಗೆ ದೇಗುಲ ಪ್ರವೇಶ ನಿಷಿದ್ಧದ ಬಗ್ಗೆ ದೊಡ್ಡ ಹೋರಾಟವನ್ನೆ ಮಾಡಿ ದಲಿತರಿಗೆ, ಹಿಂದುಳಿದವರಿಗೆ, ಸ್ತ್ರೀಯರಿಗೆ ಧೈರ್ಯ ತುಂಬಿದವರು. ಗಾಂಧಿ ಮತ್ತು ಅಂಬೇಡ್ಕರ್ ಅವರ ಪ್ರೇರಣೆಗೆ ಒಳಗಾಗಿ ದೇಗುಲ ಪ್ರವೇಶಗಳು ಸಾಕಷ್ಟು ನಡೆದು ಸಂಪ್ರದಾಯ ಮುರಿದ ಉದಾಹರಣೆ ಜೊತೆಗೆ ಅವುಗಳಿಂದ ಹಲವು ಕಲ್ಲೋಲಗಳಾಗಿರುವುದು ಮತ್ತು ಆಗುತ್ತಿರುವುದನ್ನು ಇವತ್ತಿಗೂ ಕಾಣುತ್ತಿದ್ದೇವೆ. ಇಲ್ಲಿನ “ಹುಲಿಮಾರಿ” ಈತರದ್ದೊಂದು ವಿಷಯದ ಮೇಲೆ ದಲಿತರ ನೋವುಗಳನ್ನು ಸವಾಲುಗಳನ್ನು ಜಾತಿಯ ನಿಕೃಷ್ಠತೆಯನ್ನು ಹೇಳುವ ಬಲಿಷ್ಠ ಕಥೆ. ಊರು ಕೇರಿಗಳಲ್ಲಿ, ಸಾವು ನೋವು ಸಂಟಕ ಮತ್ತು ಹಬ್ಬಹರಿದಿನಗಳ ಸಂಭ್ರಮದ ಕುಣಿತ ಮೆರೆತಕ್ಕೆ ಬೆಟ್ಟಣ್ಣನ ಮದ್ದಳೆ ಸದ್ದಿಲ್ಲದೆ ಜರುಗದು. ಆದರೆ ಊರಿನಲ್ಲಿರುವ ಗುಡಿ ದೇವಿಯ ದರ್ಶನ ಬೆಟ್ಟಣ್ಣ ಮತ್ತವರ ವರ್ಗಕ್ಕೆ ಕಾಲದಿಂದಲೂ ನಿಷಿದ್ಧ. ವರ್ಷಕ್ಕೊಮ್ಮೆಯಾದರು ಊರಿನ ಗುಡಿಯಲ್ಲಿ ಅಲಂಕೃತಗೊಂಡು ಪೂಜಿಸಿಕೊಳ್ಳುವ ದೇವಿಯನ್ನು ನೋಡುವುದಿರಲಿ ಗುಡಿಯ ಹತ್ತಿರವೂ ಸುಳಿಯುವ ಹಾಗಿಲ್ಲ. ಕಂಡಕ್ಟರ್ ಭೀಮನ ಒಂದು ಹಿಯಾಳಿಕೆ ಬೆಟ್ಟಣ್ಣನನ್ನು ಚಿಂತೆಗೀಡು ಮಾಡುತ್ತದೆ. ಇದು ಬೆಟ್ಟಣ್ಣನ ಮನಸ್ಸುನ್ನು ಕೆಣಕಿ ಒಂದು ದೊಡ್ಡ ಯುದ್ದಕ್ಕೆ ಸಿದ್ದಪಡಿಸುತ್ತದೆ. ಈ ಮೂಲಕ ಸಿಟಿಯಲ್ಲಿರುವ ಮಗ ಗೋವಿಂದನನ್ನು ಕರೆಸಿ ಗುಡಿಯ ಪ್ರವೇಶ ಮಾಡಿಸಿ ಅದುವರೆಗೂ ಇದ್ದ ದಲಿತರಿಗೆ ದೇಗುಲ ಪ್ರವೇಶದ ನಿಷೇಧಕ್ಕೆ ಸೆಡ್ಡು ಹೊಡೆದು ಉಲ್ಲಂಘಿಸುವ ಮೂಲಕ ದಲಿತರಿಗೂ ಗುಡಿ ಪ್ರವೇಶಿಸುವ ಪೂಜಿಸುವ ಹಕ್ಕಿದೆ ಅದನ್ನು ಯಾರಿಂದಲೂ ಹತ್ತಿಕ್ಕಲಾಗದು ಎಂಬುದನ್ನು ಕಥೆ ಧ್ವನಿಸುತ್ತದೆ. ಇದರಿಂದ ಕೇರಿಯ ಮಂದಿಗೆ ಒಂದು ಹುರುಪು ಬರುತ್ತದೆ. ಆದರೆ ಆಳದಲ್ಲಿ ಕುದಿವ ‘ಮೇಲ್ಮನಸ್ಥಿತಿಗಳು’ ಗೋವಿಂದನ ದೇಗುಲ ಪ್ರವೇಶದ ಘಟನೆಯನ್ನು ಮೇಲೆತ್ತಿ ಆಡಲೂ ಆಗದೆ ಸುಮ್ಮನಿರಲೂ ಆಗದೆ ವ್ಯವಸ್ಥಿತ ಒಳ ಸಂಚಿನ ಮೂಲಕ ದಮನಿಸಿ ಎಚ್ಚರಿಸಿ ತನ್ನ ಪಾರುಪತ್ಯ ಮೆರೆವ ದುರಂತ ಮತ್ತು ಆ ದುರಂತಕ್ಕೆ ಹಳ್ಳಿಗಾಡಿನ ‘ಕೇರಿಯ’ ಮುಗ್ಧ ಮನಸ್ಸುಗಳನ್ನು ಭಾವನಾತ್ಮಕವಾಗಿ ಮೌಢ್ಯದ ಶೃಂಖಲೆಗೆ ಸಿಲುಕಿಸಿ ನ್ಯಾಯದ ದಾರಿಯನ್ನೆ ಬಾಯ್ಕಟ್ ಮಾಡುವ ಒಂದು ಸ್ಥಿತಿ ಇವತ್ತಿಗೂ ಜೀವಂತವಿರುವ ಒಳ ಘೋರವನ್ನು ಬಿಚ್ಚಿಟ್ಟರೆ “ನಿಗಿ ನಿಗಿ ಕೆಂಡ” ಚೌಡಿಯ ಬದುಕಿನ ಚಿತ್ರದೊಳಗೆ ಜಾತಿಜಾಡ್ಯ ಮತ್ತು ವ್ಯಾವವಹಾರಿಕ ಪ್ರಪಂಚದ ಹಿಕ್ಮತ್ತುಗಳನ್ನು ತೆರೆದಿಡುವ ಕಥೆಯಾಗಿದೆ. ಇದು ಸ್ವಾಮಿ ಪೊನ್ನಾಚಿ ಅವರ ‘ಧೂಪದ ಮಕ್ಕಳು’ ಕಥೆಯ ಒಳ ಹೂರಣವೇನೊ ಅನಿಸಿ ಬಿಡುವಷ್ಟು ಸಂಕೀರ್ಣ ನಿರೂಪಣಾ ಶೈಲಿಯ ರಚನೆ. ಏಕೆಂದರೆ “ಧೂಪದ ಮಕ್ಕಳು” ಕಥೆ ಧೂಪ ಮಾರುವ ಮಕ್ಕಳ ಸುತ್ತ ಸುತ್ತುತ್ತ ಹಲವು ವಿಚಾರಗಳನ್ನು ಕೆದಕಿ ಹೇಳುವಂತೆ “ನಿಗಿ ನಿಗಿ ಕೆಂಡ” ವ್ಯಾವಹಾರಿಕ ಪ್ರಪಂಚದೊಳಕ್ಕೆ ಕಾಲಿಟ್ಟು ಸ್ವಯಂ ಬದುಕನ್ನು ಕಟ್ಟಿಕೊಳ್ಳ ಬಯಸಿ ಯಶಸ್ಸಿನ ತುತ್ತತುದಿಯ ಕೇರಿಯ ಜೀವಗಳ ಜೀವನವನ್ನೇ ಕೆಂಡಕ್ಕಿಟ್ಟು ಸುಟ್ಟು ಕರಕಲಾಗಿಸುವ ವ್ಯಾವಹಾರಿಕ ಜಗತ್ತಿನ ಕ್ರೌರ್ಯ ಹಾಗು ಇಷ್ಟೆಲ್ಲದರ ಹಿಂದಿನ ಮರ್ಮ ಉಳುವವನೇ ಭೂಮಿ ಒಡೆಯ ಕಾಲಘಟ್ಟದ ಒಂದು ವಿಸ್ತೃತ ಕಥಾ ಹಂದರವನ್ನು ಹೊಂದಿದೆ. ಆದರೆ ಇಲ್ಲಿ ಭೂಮಿ ಸಿಕ್ಕರು ಸುಲಭದ ಧೂಪದ ವ್ಯಾಪಾರಕ್ಕೆ ತಮ್ಮನ್ನು ತಾವು ಅರ್ಪಿಸಿಕೊಳ್ಳುವ ಕೇರಿಯ ಜನಗಳ ವ್ಯವಹಾರವು ಕೇರಿ ಮನಸ್ಥಿತಿಯನ್ನು ದಾಟಿ ಕೇರಿಯೇತರರ ಕಣ್ಣು ಕೆಂಪಗಾಗಿಸುವಷ್ಟು ಚೌಡಿ ಹಾಕಿದ ಬೇಸ್ ಒಂದು ದೊಡ್ಡ ಕಿಚ್ಚಿಗೂ ಕಾರಣವಾಗುತ್ತದೆ. ಕೆಲಸವಿಲ್ಲದೆ ಬದುಕಿಲ್ಲದೆ ಹೊಟ್ಟೆಬಟ್ಟೆಗಿಲ್ಲದೆ ಇದ್ದ ಚೌಡಿಗೆ ಮೇಲ್ವರ್ಗಗಳ ಹೋಟೆಲಲ್ಲಿ ಪಾತ್ರೆ ತೊಳೆಯುವಂಥ ಒಂದು ಸಣ್ಣ ಕೆಲಸವನ್ನೂ ಕೊಡದೆ ಜಾತಿತನ ತೋರಿ ಅಪಮಾನಿಸಿದ ಮಂದಿಗೀಗ ಹೋಟೆಲ್ ವ್ಯವಹಾರಕ್ಕಿಂತ ಚೌಡಿಯ ಧೂಪದ ವ್ಯವಹಾರದ ಮೇಲೆ ಆಸಕ್ತಿ. ಇದು ತಳವರ್ಗದವರು ತಮ್ಮದೇ ಯುಕ್ತಿಯಿಂದ ಸ್ಥಳೀಯ ಮಟ್ಟದಲ್ಲಿ ಆರ್ಥಿಕವಾಗಿ ಸಾಮಾಜಿಕವಾಗಿ ಮೇಲೇರುವುದನ್ನು ಸಹಿಸದೆ ಜಮೀನಿನ ಕೂಲಿಗೆ ಆಳುಗಳಿಲ್ಲದೆ ಒದ್ದಾಡುವ ಗೌಡರ ಕುನ್ನಪ್ಪನ ‘ಮೇಲ್ಮನಸ್ಥಿತಿ’ ಕೇರಿಯವರ ಮೇಲೆ “ಕಾನೂನು ಬಾಹಿರ ಧೂಪದ ಪಿತೂರಿ ಹೂಡಿ” ಚೌಡಿ ಮಗ ಸಿದ್ರಾಮನನ್ನು ಧೂಪದ ಮರಗಳ ಕೊಳ್ಳೆ ಮತ್ತು ಕಾಡುಗಳ್ಳತನದ ಆಪಾದನೆ ಹೊರಿಸಿ ಜೈಲಿಗಟ್ಟಿ ಚೌಡಿ ಮತ್ತವರ ಕೇರಿಯ ಜನಗಳನ್ನು ದಮನಿಸುವ ಧಾರುಣ ಸ್ಥಿತಿಯ ಚಿತ್ರವನ್ನು ಕಟ್ಟಿ ಕೊಡುತ್ತದೆ.
ಹಾಗೆ ಇಲ್ಲೊಂದು ‘ಪರಿಧಿ’ ಇದೆ. ಅದರ ವ್ಯಾಸ ದೊಡ್ಡದು. ತ್ರಿಜ್ಯದ ಸುತ್ತ ಪ್ರೇಮದ ಗಸ್ತಿದೆ. ಆ ಗಸ್ತು ಉಳಿದ ವ್ಯಾಪ್ತಿಯನ್ನು ವಿಸ್ತರಿಸುತ್ತ ತಿರುಗುತ್ತದೆ. ತನ್ನ ಜಾತಿಗೆ ಸೇರಿಲ್ಲದ ಅನ್ಯಜಾತಿ ಮತ್ತು ಈಗಾಗಲೇ ಮದುವೆಯಾಗಿ ದೂರಾಗಿ ಗಂಡನಿಂದ ದೂರಾದ ಹೆಣ್ಣನ್ನು ಪ್ರೇಮಿಸಿ ವರಿಸಿದ ಮಗನ ನಡೆ ಒಂದು ವಿಕ್ಷಿಪ್ತ ಸನ್ನಿವೇಶವನ್ನು ತಂದೊಡ್ಡುತ್ತದೆ. ಈ ವಿಕ್ಷಿಪ್ತತತೆ ಪೂರ್ವಿಕರ ಸಾಂಪ್ರದಾಯಿಕವಾದ ಗುಡಿ ಪೂಜಾರಿಕೆಯಿಂದ ಗೌರವ ಪಡೆಯುತ್ತ ದೊಡ್ಡಸ್ತಿಕೆ ಮೆರೆಯುತ್ತಿದ್ದ ಕುಟುಂಬಕ್ಕೀಗ ಊರಿನಲ್ಲಿ ಬಹಿಷ್ಕಾರ. ಜಾತಿಗೀತಿ ಲೆಕ್ಕಕ್ಕಿಡದ ತಂದೆಯೊಬ್ಬ ಅದುವರೆಗೂ ಕುಟುಂಬದ ಆಣತಿಯಂತೆ ಸಂಭಾವಿತನಂತೆ ಇದ್ದ ಮಗನ ಸ್ವತಂತ್ರ ನಿರ್ಧಾರ ಒಪ್ಪತಕ್ಕದ್ದಲ್ಲ ಹಾಗೂ ಅದುವರೆಗೂ ಉಳಿಸಿಕೊಂಡು ಬಂದಿದ್ದ ದೊಡ್ಡಸ್ತಿಕೆಗೆ ಬಿದ್ದ ಪೆಟ್ಟು ಎಂಬಂಥ ಮನಸ್ಥಿತಿ ಜಾತಿ ಬೇರಿನ ಆಳವನ್ನು ಅಳೆದು ತೂಗುತ್ತದೆ. ಸಂಪ್ರದಾಯದ ಅಡಿಯೊಳಗೆ ಮೇಲ್ನೋಟಕೆ ಜಾತಿತನ ತೋರಗೊಡದ ಬದುಕಿನ ಒಟ್ಟು ಪ್ರಗತಿಪರತೆ ಮುಖವಾಡವನ್ನು ಬಯಲುಗೊಳಿಸುತ್ತ ಜಾತಿವ್ಯಾಸದ ತ್ರಿಜ್ಯದೊಳಗೆ ಪರಿಪೂರ್ಣವಾದ ತನ್ನ ಪರಿಧಿಯಲ್ಲಿ ಕೊನೆ ಮೊದಲಿಲ್ಲದೆ ಸುತ್ತುವ ದುರಂತ ಚಿತ್ರಣವಿದೆ.
ಖಾಸಗೀಕರಣ ಜಾಗತೀಕರಣವನ್ನು ಅಪ್ಪಿದ ಭಾರತ ಇತರ ರಾಷ್ಟ್ರಗಳಂತೆ ಇಲ್ಲೂ ಬದಲಾವಣೆಯ ಗಾಳಿ ಬೀಸತೊಡಗಿತು. ಬದಲಾದ ಕಾಲಘಟ್ಟಕ್ಕೆ ಮನುಷ್ಯ ಸಹಜ ಬದುಕೂ ಒಗ್ಗಿ ಹೋಯ್ತು. ಇಲ್ಲಿ ಅದರದೇ ಆದ “ಮಾರುತಿ ಟೆಂಟು” ಒಂದು ತೆರನಾದ ಆಯಾಮವಾದರೆ “ವಿಲೇಜ್ ಪೋಸ್ಟ್ ಆಫೀಸ್” ಮತ್ತೊಂದು ಆಯಾಮದ ಮಗ್ಗುಲಲ್ಲಿ ಹಲವು ಸೂಕ್ಷ್ಮ ವಿವರಗಳತ್ತ ಮುಖ ಮಾಡುವ ಕಥೆಗಳು.
ಮಾರುತಿ ಟೆಂಟಿನ ಸೋಮನಿಗೆ ತನ್ನ ಮೂಲ ಜಾತಿ ಮತ್ತು ಜಾತಿವೃತ್ತಿಯನ್ನು ಹೇಳಿಕೊಳಲಾರದಂಥ ಸಾಮಾಜಿಕ ಹಿಂಜರಿಕೆ. ಅಪ್ಪನ ಕಟಿಂಗ್ ಶಾಪ್ ವೃತ್ತಿ ಒಪ್ಪದೆ ಬದುಕು ರೂಪಿಸಿಕೊಳುವ ಅವನ ಒಳಗಿನ ಆಲೋಚನೆಯಲ್ಲಿ ಜನರಲ್ ಆದ, ಎಲ್ಲ ಜನವರ್ಗ ಗೌರವಿಸುವ ಅಪ್ಪುವ ಒಪ್ಪುವ ಕೆಲಸ ಹುಡುಕುವ ಹಕೀಕತ್ತಿನಲ್ಲಿ ಕೊನೆಗೆ ಸಿಕ್ಕಿದ್ದು ಕಲರ್ ಫುಲ್ ರಂಜನೆಯ ಸಿನಿಮಾ ಟೆಂಟಿನಲ್ಲಿ. ಸೋಮನ ಈ ಮನಸ್ಥಿತಿಯು ಇವತ್ತು ಜಾತಿ ವ್ಯವಸ್ಥೆಯ ಕಬಂಧಬಾಹು ಸಾಮಾಜಿಕವಾಗಿ ಉಸಿರುಗಟ್ಟಿಸುತ್ತ ಜೀವ ಪಡೆಯುತ್ತ ವಿವಿಧ ರೂಪದಲ್ಲಿ ಕಾಡುತ್ತಿರುವ ನಿಕೃಷ್ಟತೆಯನ್ನು ಒತ್ತಿ ಹೇಳುತ್ತದೆ.
ಹಾಗೆ ಅವನ ಅಪ್ಪನ ಅದುವರೆಗಿನ ಹಳೇಕಾಲದ ಕಟಿಂಗ್ ಶಾಪ್ ಒಪ್ಪದ ಆಧುನಿಕ ಎನಿಸುವ ಮನಸುಗಳು ಕಲರ್ ಫುಲ್ ಆದ ಮಾಡ್ರನ್ ಕಟಿಂಗ್ ಶಾಪ್ ಗಳತ್ತ ಮುಖ ಮಾಡುವ, ಅದರಿಂದಾಗುವ ಬದುಕಿನ ಏರುಪೇರು. ಇತ್ತ ಸೋಮ, ಹಾಗೂ ಹೀಗೂ ಕಾಲದ ಆವಿಷ್ಕಾರಗಳ ಹೊಡೆತಕ್ಕೆ ಸಿಲುಕಿ ಟೆಂಟನ್ನು ಉಳಿಸಿಕೊಳ್ಳುವ ಅವನ ಪ್ರಾಮಾಣಿಕ ಆಸೆ. ಅವನು ಆರಿಸಿಕೊಂಡ ವೃತ್ತಿ ಬದುಕಿನ ಅಸಲೀತನ. ಕೊನೆಗೆ ಅವನ ಕರುಳ ಕುಡಿಯ ಕಣ್ಣಿಗೆ ಅವನ ಅಪ್ಪನು ಮನೆ ನಡೆಸಲು ಅವನು ಕಂಡುಕೊಂಡ ಮಾರ್ಗದ ಘೋರ ಸತ್ಯ
ಆ ಘೋರ ಸತ್ಯವನ್ನು ಹೆತ್ತವಳ ಮುಂದೆ ಹೇಳಿಕೊಳ್ಳಲಾಗದ ಆ ಕುಡಿಯ ಸಂಕಟವೊಂದು ಮಡುಗಟ್ಟಿ ನಲುಗುತ್ತಿದ್ದರೆ ಇತ್ತ ಬದಲಾದ ಕಾಲದ ಸುಳಿಗೆ ಸಿಲುಕಿ ನಲುಗುವ ಪೋಸ್ಟ್ ಆಫೀಸಿನ ಅಳಿವು ಉಳಿವಿನ ಪ್ರಶ್ನೆ ಪೋಸ್ಟ್ ಮೇಷ್ಟ್ರು ಶಿವಣ್ಣನ ಮುಂದಿದೆ. ಸುಬ್ಬಯ್ಯನ ಬದುಕೂ ಇದೆ. ಶಾಸಕರೊಬ್ಬರ ಔದಾರ್ಯದ ಕಾರಣ, ದಟ್ಟ ಕಾಡಿನ ವಾಸಿಗಳಿಗೆ ಅಂಚೆ ಸೌಲಭ್ಯದಿಂದ ಆಗುವ ಅನುಕೂಲ, ಕಂಟ್ರಾಕ್ಟರ್ ಒಬ್ಬರ ಔದಾರ್ಯ ಕಾರಣ ಬಸ್ ವ್ಯವಸ್ಥೆ. ಇದರೊಂದಿಗೆ ಗಣಿಗಾರಿಕೆ. ಪರಿಣಾಮ, ಕಾಡು ನಾಶ. ಮತ್ತೆ ವೀರಪ್ಪನ್ ಉಪಟಳ, ಎಫ್.ಟಿ.ಎಸ್ ವಾಸ್ತವ್ಯ, ಇಷ್ಟೆಲ್ಲದರ ನಡುವೆ ಎದ್ದು ಬಿದ್ದು ನಲುಗುವ ಪೋಸ್ಟ್ ಆಫೀಸಿನ ಅಂಚಿನ ದಿನಗಳ ಆತಂಕದಲ್ಲೇ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ಅಂಚಿಗೆ ದೂಡಿಕೊಳ್ಳುವ ಸುಬ್ಬಯ್ಯನ ಬದುಕಿನ ದುರಂತವು ಕಠಿಣ ವಾಸ್ತವ ದಿಕ್ಕುಗಳನ್ನು ಓದುಗನಿಗೆ ತೋರಿಸುತ್ತದೆ. ಹಾಗು ಒಂದು ಸರ್ಕಾರ ಜನರಿಗಾಗಿ ತೆರೆಯುವ ಸೇವಾ ಕೇಂದ್ರಗಳ ಸಿಬ್ಬಂದಿಗಳ ಕೆಲಸದ ವೈಖರಿ ಹೇಗಿರಬೇಕೆಂಬುದನ್ನು ಶಿವಣ್ಣನೆಂಬ ಪೋಸ್ಟ್ ಮೇಷ್ಟ್ರು ಕೆಲಸದ ವೈಖರಿ, ಶ್ರಮ, ನಿಷ್ಠೆ, ಸುಬ್ಬಯ್ಯನ ಬದುಕಿಗೂ ನೆರವಾಗಲೆಂದು ಮಾಡುವ ಪ್ರಾಮಾಣಿಕ ಪ್ರಯತ್ನವು ಒಂದು ಮಾದರಿ ಸಮಾಜದ ನಾಗರಿಕನ ಒಟ್ಟು ಕರ್ತವ್ಯ ಮತ್ತು ತ್ಯಾಗವನ್ನು ಹೇಳುತ್ತದೆ. ಈ ಕಥೆಯ ಪ್ರತಿ ಪಾತ್ರ, ಸನ್ನಿವೇಶಗಳ ಆಳದ ಬದುಕು ಸುಲಭದ್ದಲ್ಲ. ಅದು ಉಸಿರು ಕಟ್ಟಿಕೊಳ್ಳುವ ವಾತಾವರಣದಲ್ಲು ಬದುಕು ಕಟ್ಟಿಕೊಳ್ಳ ಬಯಸುವ ಜೀವಗಳ ಸಂಘರ್ಷದ ತಲ್ಲಣ.
“ವಿಲೇಜ್ ಪೋಸ್ಟ್ ಆಫೀಸ್” ಕಥೆಯಲ್ಲಿ ಒಂದು ಪೋಸ್ಟ್ ಆಫೀಸ್ ಉಳಿಸಿಕೊಳ್ಳುವ ಮತ್ತು ಅದರಲ್ಲಿ ದುಡಿವ ಇಬ್ಬರು ನೌಕರರು ತಮ್ಮ ಬದುಕು ಕಟ್ಟಿಕೊಳ್ಳುವಾಗ ಗಣಿಗಾರಿಕೆ ಇರುತ್ತದೆ. ಆಗ ಒಂದು ಪೋಸ್ಟ್ ಆಫೀಸ್ ನ ವ್ಯಾವಹಾರಿಕ ವಹಿವಾಟು ನಂತರ ಗಣಿಗಾರಿಕೆ ಸ್ಥಗಿತವಾಗುವ/ ಸ್ಥಗಿತವಾದಾಗ ಅದರ ವಹಿವಾಟಿನ ಲೆಕ್ಕಾಚಾರವಿದೆ. ಆದರೆ “ಐರನ್ ಆನೆಗಳು” ಇದಕ್ಕೆ ತದ್ವಿರುದ್ದ ಧ್ವನಿಯಾಗಿದೆ.
ಅಭಿವೃದ್ಧಿ, ಉದ್ಯೊಗ ಸೃಷ್ಟಿಯ ನೆಪದಲ್ಲಿ ಬಂಡವಾಳಶಾಹಿಗಳು, ಖಾಸಗಿ ಏಜೆನ್ಸಿಗಳು ಆಳುವ ಸರ್ಕಾರಗಳನ್ನೇ ಖರೀದಿಸಿ ಜನ ಸಾಮಾನ್ಯರ ಹಸಿವು ಬಡತನ ನಿರುದ್ಯೋಗವನ್ನೇ ಬಂಡವಾಳ ಮಾಡಿಕೊಂಡು ಅವರನ್ನು ಬಲವಂತವಾಗಿ ಆಮಿಷಕ್ಕೆ ಒಳಗಾಗಿಸಿ ಅವರು ಬದುಕಲು ಇಟ್ಟುಕೊಂಡಿದ್ದ ಚೂರು ಪಾರು ಹೊಲ ಗದ್ದೆಗಳನ್ನು ಆಕ್ರಮಿಸಿಕೊಂಡು ಒಕ್ಕಲೆಬ್ಬಿಸಿ ಲಾಭ ಮಾಡಿಕೊಳ್ಳುವ ದಂಧೆ, ಕಾಲಾನುಕಾಲದಿಂದ ನಡೆದೇ ಇದೆ. ಆ ಲಾಭಕೋರರಿಗೆ ನೆರವಾಗುವ ಸ್ಥಳೀಯ ದುಡ್ಡಿನಾಸೆಯ ಗುಂಪುಗಳ ಸಹಕಾರವೂ ಇರುತ್ತದೆ. “ಸ್ಥಳೀಯ ಗಣ್ಯರ” ಇರುವಿಕೆ ಸಾಮಾನ್ಯ ವಾಸಿಗರಿಗೆ ಭರವಸೆ ಮೂಡಿ ಹಳ್ಳಕ್ಕೆ ಬಿದ್ದು ವಾಸ್ತವ ಸ್ಥಿತಿ ಅರಿವಾಗುವಷ್ಟರಲ್ಲಿ ಎಲ್ಲವೂ ಜಾರಿರುತ್ತದೆ. ಇಂಥ ವಸ್ತುಸ್ಥಿತಿಯ ‘ಐರನ್ ಆನೆಗಳು’ ಕಥೆಯ ಜಾಡು ಗಣಿಗಾರಿಕೆಯ ಒಂದು ಸ್ಥೂಲ ಚಿತ್ರಣದ ಜೊತೆಗೆ ಜನರ ಒಡಪಾಡು, ಸಂಘರ್ಷ, ಹೋರಾಟ, ಜನಾಂದೋಲನ, ಪ್ರಕೃತಿಯ ವೈಪರೀತ್ಯ, ಸಂಚು, ಆಮಿಷಗಳ ಎಲ್ಲೆಯ ವ್ಯಾಪ್ತಿಯನ್ನು ವಿಶದೀಕರಿಸಿ ಚರ್ಚಿಸುತ್ತದೆ.
ವಿಲೇಜ್ ಪೋಸ್ಟ್ ಆಫೀಸ್’ ನಲ್ಲಿ ಕಾಣಿಸುವ ಕಾಡಿನ ದಟ್ಟತೆ, ಪಾತ್ರಗಳ ಅನುಭವ, ಅಲ್ಲಿ ವಾಸಿಸುವ ಜನರ ಜೀವನದ ಸ್ಥಿತಿಗತಿಗಳು ‘ಗೂಳೀ ಮದ್ದು’ ಕಥೆಯಲ್ಲು ಕೂಡ ಅದರ ಪುನರವಲೋಕನ ಆಗಿಸುತ್ತಿದೆಯೇನೊ ಅನಿಸಿ ಬಿಡುವಷ್ಟು ಗಾಢವಾಗಿದೆ.
ನಮ್ಮೂರಿನಲ್ಲಿ ವಾಯಿಮಾದಮ್ಮ ಅನ್ನೊ ಸೋಬಾನೆ ಪದ ಹೇಳುವ ಹಳೇ ಕಾಲದ ಒಬ್ಬ ಅಜ್ಜಿ ಇದ್ದಳು. ಅವಳು ಊರಿನ ಯಾರದೇ ಮದುವೆ ಆದರು ಅವಳ ಟೀಮು ಸೋಬಾನೆ ಪದ ಹಾಡುವುದು ವಾಡಿಕೆ. ನಕಲಿ (ತಮಾಷೆ) ಸ್ವಭಾವದವಳಾದ ಅವಳ ಕೊಂಕಿಗೆ ತಪ್ಪಿಸಿಕೊಳ್ಳುವ ಮಾತೇ ಇಲ್ಲ. ಮದುವೆ ಆಗಿ ವರ್ಷ ತುಂಬಿದರು ಏನೂ (ಪ್ರಗ್ನೆಂಟ್) ಕಾಣದಿದ್ದಾಗ “ಏ ಅವ್ನ ದೊಡ್ ಸಂಪ್ಗಗ ಕರ‌್ಕ ನಡೀರಎಮ್ಮಿ ‘ದೊಡ್ಮದ್’ ಕೊಡುಸ್ಕ ಬರಂವ್.. ನೋಡ್ತಿನಿ ಸಟ್ಗ ಅದೆಂಗ್ ಬಸ್ರಾಗಲ್ಲ ಅನ್ತ. ಆ ದೊಡ್ಮದ್ದ ತಗಂಡ್ರ.. ತಗಂಡಂವ ಗೂಳಿ ತರ ಗುದ್ತನ. ಆದ್ರ.. ಒಂದ್ಮಾತದ.. ಅಂವ ಗುದ್ದುದ್ಮೇಲ ಅವ್ಳೊಟ್ಟಲುಟ್ ಕೂಸು ಗಂಡಾದ್ರಗಂಡ್ಸಾಗಿರ‌್ತನ ಅನ್ತ ಯೇಳಕಾಗಲ್ಲ.. ಯೆಣ್ಣಾದ್ರ ಯೆಣ್ಣಾಗಿರ‌್ತಳ ಅನ್ತ ಯೇಳಕಾಗಲ್ಲ ಗಂಡ್ಬೀರಿ ಆಯ್ತಳ…” ಅಂತ ಗೇಲಿ ಆಡುವುದು ಇತ್ತು.
ಈ ವಾಯಿಮಾದಮ್ಮನ ದೊಡ್ಡ ಸಂಪಿಗೆ ದೊಡ್ಮದ್ದಿನ ಬೆನ್ನಿಡಿದು ಪ್ರಕಾಶ್ ಪುಟ್ಟಪ್ಪನವರ “ಗೂಳಿ ಮದ್ದು” ಕಥೆ ನೋಡಿದರೆ ಇದು ಗಿರಿಮಾದನ ಕಾಲದ್ದು. ಆ ಕಾಲದ ಗಿರಿಮಾದ ಎಂಬ ಹಿರೀಕ ಪ್ರಸಾದನ ಅಪ್ಪನ ಕಾಲವಾಸಿ. ಗಿರಿಮಾದನ ಮಗ ಕುರುಜ ಪ್ರಸಾದನ ಕಾಲದ ವಾಸಿ. ಇವರಿಬ್ಬರಿಗೂ ಕೊಂಡಿಯಾಗಿ ಬೆಸೆವ ತಿಪ್ಪಯ್ಯನ ಅನುಭವ, ಕಾಡಿನ ಪರಿಚಯ, ಕ್ರೂರ ಪ್ರಾಣಿಗಳ ಹೆಜ್ಜೆ ಗುರುತುಗಳ ಜೊತೆಗೇ ಬದುಕು ಕಟ್ಟಿಕೊಂಡ ರೀತಿಯ ಅವನ ಜೀವನೋತ್ಸಾಹ ಪ್ರಸಾದನಿಗೆ ಬೆರಗು ಹುಟ್ಟಿಸುವ ಸಂಗತಿ.
ಇಲ್ಲಿನ ಕಥಾ ರಚನೆ ತಿಪ್ಪಯ್ಯನ ಮೂಲಕ ಸಾಗಿ ಪ್ರಸಾದನ ದೈಹಿಕ ದೌರ್ಬಲ್ಯವನ್ನು ಕೆಣಕಿ ಹೊರಗೆಳೆವ ಚಾಣಾಕ್ಷತನವಿದೆ. ಗೂಳೀ ಮದ್ದಿನ ಪ್ರಯೋಗ ಆಗಿನಿಂದಲೂ ಅವ್ಯಾಹತವಾಗಿ ನಡೆದಿದೆ. ಇದು ನಮ್ಮೂರಿನ ವಾಯಿಮಾದಮ್ಮ ಹೇಳೊ ದೊಡ್ಮದ್ದಾ..? ಅಥವಾ ಬೇರೆಯದಾ ಅನ್ನೊ ಜಿಜ್ಞಾಸೆ ನನಗೆ. ಇರಲಿ, ದೊಡ್ಮದ್ದಿನ ಜೊತೆಗೇ ಚರ್ಚಿಸುವುದಾದರೆ ಅದನ್ನು ನೆಚ್ಚಿ ತನ್ನ ಗಂಡಸ್ತನ ವೃದ್ಧಿಪಡಿಸಿಕೊಳ್ಳುವ ಗುಪ್ತ ಆಸೆ ಹೊತ್ತು ಬಂದವ ಈ ಪ್ರಸಾದ. ಈ ಗೂಳೀ ಮದ್ದಿನದು ಇಲ್ಲಿನ ಕಥೆಯಾಚೆಗೂ ವಾಯಿಮಾದಮ್ಮನ ಮಾತನ್ನು ಉದ್ಧರಿಸಿ ಸಂಕ್ಷಿಪ್ತಗೊಳಿಸಿ ಹೇಳುವುದಾದರೆ ಅದು, ಭೋಗಿಸಲು ತೆಗೆದುಕೊಳ್ಳುವ ಈ ಶಕ್ತಿಕಾರಕ ‘ಗೂಳೀ ಮದ್ದು’ (ತೊಂಭತ್ತರ ದಶಕದಲ್ಲಿ ಬಂದ ಅಮೆರಿಕದ ವಯಾಗ್ರ ಮಾತ್ರೆಯಂತೆ) ಓರ್ವ “ನಪುಂಸಕ ಪುರುಷ” ಅಪರಿಮಿತ ಪುರುಷತ್ವ ಹೊಂದುವುದು. ಫುರುಷತ್ವ ಪಡೆದ ಪುರುಷ ತನ್ನ ಪ್ರೇಯಸಿ ಅಥವಾ ಬಯಸಿದ ಹೆಣ್ಣು ಈತನಿಂದ ಭೋಗಿಸಲ್ಪಟ್ಟು ಇದರಿಂದ ಬಸಿರಾದವಳಿಂದ ಹುಟ್ಟುವ ಮಗು/ ಮುಂದಿನ ಸಂತಾನ ‘ನಪುಂಸಕ’ನಾಗಿರುತ್ತದೆ. ಇವತ್ತಿನ ಹೈಬ್ರೀಡ್ ತಳಿ ತರ ಆರಂಭಿಕ ಫಸಲು ಚೆನ್ನಾಗಿ ನೀಡಿ ಹೈಬ್ರೀಡ್ ಬೀಜದ ಮೊರೆ ಹೋಗುವ ಸಾಮಾನ್ಯ ಕ್ರಿಯೆಯಂತೆ ಅದರ ಮುಂದುವರಿದ ಭಾಗವೇ ಈ ಪ್ರಸಾದನ ನಪುಂಸಕ/ ನರದೌರ್ಬಲ್ಯತನ. ಈ ಹಿಂದೆ ಈತನ ಅಪ್ಪನು ಕುರುಜನ ಅಪ್ಪ ಗಿರಿಮಾದನಿಂದ ಈ ಗೂಳೀ ಮದ್ದನ್ನು ಸೇವಿಸಿರಬಹುದು ಎಂಬುದಕ್ಕೆ ತಿಪ್ಪಯ್ಯನ ಮಾತುಗಳು ಓದುಗನಿಗೆ ಹಿನ್ನೋಟವಾಗಿ ದೊರಕುತ್ತದೆ. ಇದರ ಅಪರಿಮಿತ ಸೇವನೆ ಜೀವಕ್ಕು (ಸೈಡ್ ಎಫೆಕ್ಟ್) ಎರವಾಗಬಹುದು. ಇದರ ಅರಿವಿದ್ದೊ ಇಲ್ಲದೆಯೋ ಗೂಳೀ ಮದ್ದು ಅರಸಿ ಬರುವ ಪ್ರಸಾದನಿಗೆ ಕುರುಜನ ದುರಂತ ಸಾವು ಆತನ ಆಸೆಗೆ ತಣ್ಣೀರೆರಚಿ ಆತಂಕಕ್ಕೀಡು ಮಾಡುತ್ತದೆ. ಹಾಗೆ ಕಾಡಿನ ಈ ಉತ್ಪತ್ತಿ ಮದ್ದು ಕಾನೂನು ಬಾಹಿರವಾಗಿ ಅಪರಿಮಿತ ಲೈಂಗಿಕ ಆಸೆಹೊತ್ತ ಜನರ ಜೀವಗಳಿಗೆ ಸೈಡ್ ಎಫೆಕ್ಟ್ ತರುವ ಈ ಮದ್ದಿನ ದಂಧೆಯ ಪರಿಚಯ ಮಾಡಿಕೊಡುವ ‘ಗೂಳೀ ಮದ್ದು’ ದಟ್ಟಕಾಡಿನ ವಿವರದೊಂದಿಗೆ ರೋಚಕವಾಗಿದೆ. ಕಥೆಗಾರ ಪ್ರಕಾಶ್ ಪುಟ್ಟಪ್ಪನವರ ಕಾಡುವಾಸಿಗಳ ಜೀವನಾನುಭವದ ವಿವರವನ್ನು ನಿರೂಪಿಸಿರುವ ರೀತಿ ಓದುಗನಲ್ಲಿ ಅಚ್ಚರಿ ಮತ್ತು ರೋಮಾಂಚಕಾರಿ ಅನುಭವ ಮತ್ತು ಕೌತುಕ ತರಿಸುತ್ತದೆ.
ಹೆಣ್ಣು ಗಂಡುಗಳ ನಡುವಿನ ಒಪ್ಪಿತ ಅನೈತಿಕ ಸಂಬಂಧ, ಅನಿವಾರ್ಯವೊ ಅಚಾತುರ್ಯವೊ ವ್ಯವಸ್ಥೆಯ ದಬ್ಬಾಳಿಕೆಯ ಶೃಂಖಲೆಗೊ ಸಿಲುಕಿಕೊಳ್ಳುವ ಹೆಣ್ಣಿನ ವೇಶ್ಯೆವೃತ್ತಿ ಅಥವಾ ‘ವೇಶ್ಯೆವೃತ್ತಿ’ ಅನ್ನುವುದಕ್ಕಿಂತಲು ದೈಹಿಕ ತೆವಲು ಅಥವಾ ಅದನ್ನೂ ಮೀರಿದ ವಿಕೃತ ಮನಸ್ಸಿನಿಂದ ಏನು ಬೇಕಾದರು ಘಟಿಸಬಹುದು. ಈ ಅನೈತಿಕತೆಯು ಹೆಂಡತಿಯಿಂದ ಗಂಡ, ಗಂಡನಿಂದ ಹೆಂಡತಿ, ಮಗನಿಂದ ತಾಯಿ, ತಾಯಿಯಿಂದ ಮಗ, ಹೀಗೆ ಅನ್ಯ ಅಥವಾ ವಿಕ್ಷಿಪ್ತತೆ ತನ್ನ ಎಲ್ಲೆ ದಾಟಬಹುದು ಅಥವಾ ಅದರ ಪಾಡಿಗೆ ಅದನ್ನು ಬಿಟ್ಟು ಒಳಗೇ ಬೆಂದು ಬದುಕುವುದು. ಕಥೆಗಾರ ಇಲ್ಲಿ ಕಟ್ಟಿಕೊಡುವ ಬಾಲ್ಯದ ನೆನಪುಗಳ ಭಿತ್ತಿಯ ರೂಪದಲ್ಲಿ “ಕಾಗದದ ದೋಣಿ” ಯು ತೇಲುತ್ತದೆ.
ಬಾಲ್ಯದ ನೆನಪುಗಳ ಬುತ್ತಿಯ ಜುಳುಜುಳು ತಿಳಿನೀರಲ್ಲಿ ತೇಲುತ್ತ ಆನಂದ ಉಕ್ಕಿಸುವ ಈ ‘ಕಾಗದದ ದೋಣಿ’ ಗೆ ತನ್ನ ಸಂಗಡದ ತಿಳಿನೀರ ಮರೆತು ಸಿಕ್ಕಸಿಕ್ಕ ಕಡೆ ಮೈಮರೆತು ಆನಂದದಲ್ಲಿ ತೇಲುವಾಗ ಪ್ರವಾಹದ ಅರಿವಿಲ್ಲ. ಕೊನೆಗೆ ತನ್ನ ಹೆತ್ತವಳ ಪಾವಿತ್ರ್ಯದ ಬಗೆಗಿನ ಸಂಶಯ, ತಂದೆಯ ಸಾವಿನ ಕಾರಣದ ಸಂಶಯ, ಅಮಲಿನಲ್ಲಿ ಕ್ಷಣ ಮೈಮರೆತಿದ್ದರು ಮಂದ ಬೆಳಕಿನ ಕೋಣೆಯಲ್ಲಿ ತಾಯಿಯೇ ತನಗೆ ದೃಹಿಕ ತೃಷೆಗೆ ಆಹುತಿಯಾಗುವ ಒಂದು ವಿಲಕ್ಷಣ ಆಲೋಚನೆ ಮತ್ತು ಬಾಲ್ಯದ ‘ತೀಟೆ ಜಗಳ’ದ ಪ್ರತಿಬಿಂಬದ ‘ನಿಮ್ಮಪ್ಪ ಹೆಂಗ್ ಸತ್ತ ಅಂತ ನಂಗ್ ಗೊತ್ತು. ನಿಮ್ಮಮನೆ ಹಿಡ ಇಚುಕಿ ಸಾಯುಸ್ಬುಟ್ಲಂತೆ’ ಹಾಗೂ ಆಗಾಗ ಎಡತಾಕುವ ‘ಹೋಗಲೇ ಸೂಳೆಮಗ್ನೆ’ ಅನ್ನುವ ಎದೆ ತಾಕುವ ಕೊಂಕು. ಈ ಎಲ್ಲದರ ಸತ್ಯ ದರ್ಶನ ಕೊಡುವ “ಕಾಗದದ ದೋಣಿ’ ಒಂಟಿತನದಲ್ಲಿ ಬೇಯುತ್ತದೆ.
ಇದು “ಯಾವುದೊ ಅಜ್ಞಾತ ಭಾವನೆಗಳಿಗೆ ಕದ್ದು ಬಸುರುಗೊಂಡ ಮನಸು ಹೇಳಲೂ ಆಗದೆ ತಾಳಲೂ ಆಗದೆ ಗುಟ್ಟಾಗಿ ಪ್ರಸವಿಸಿಕೊಂಡದ್ದು” ಎಂದು ಲೇಖಕ ಪ್ರಕಾಶ್ ಪುಟ್ಟಪ್ಪ ತಮ್ಮ”ಮಣ್ಣಿಗೆ ಬಿದ್ದ ಮಳೆ” ಕೃತಿಯಲ್ಲಿ ದಾಖಲಿಸಿದ ಗೂಢಾರ್ಥದಂತೆ “ಕಾಗದದ ದೋಣಿ”ಯ ವಿನಯನ ಅಂತರಂಗದಲ್ಲಾಗುವ ಹೊಯ್ದಾಟ ತೊಳಲಾಟವನ್ನು ಬಿಡಿಸಿ ಹೇಳಲಾಗದ ಆಳದ ಒಂದು ಸಂಕೀರ್ಣ ಸ್ಥಿತಿ ಇದೆ.
ಇವತ್ತಿನ ಜನರೇಷನ್ ನ ಅತಿಯಾದ ‘ಲಿವಿಂಗ್ ಟು ಗೆದರ್’ ತೆವಲು, ಅದರಲ್ಲಿ ತೇಲುವ ಕಲರ್ ಫುಲ್ ಲೈಫ್ ನ ಝಲಕ್ ಮತ್ತು ‘ಆಪ್ತ ನಂಬಿಕೆ’ ಮಾಡಿಡುವ ಕೆಡುಕು – ‘ಬಾರ್ಬಿ’.
ಇಲ್ಲಿ ಒಂದು ಪುಟ್ಟ ಕುಟಂಬ. ದೊಡ್ಡ ಕನಸು. ನಿಧಿ, ಆದಿಮಾ, ವಯಸ್ಸಾದ ತಾಯಿ. ನಂಬಿಕಸ್ಥ ಸ್ನೇಹಿತ. ಪುಟ್ಟ ಕಂದನ ಖಾಯಿಲೆ. ಸೂಕ್ಷ್ಮ ಮನಸ್ಸಿನ ಮೇಷ್ಟ್ರ ಎದೆಯಲ್ಲಿ ಆತಂಕ. ಒಂದು ಮೆಸೇಜು. ಬಾರ್ಬಿಯ ರೇಪು ಮತ್ತು ಕೊಲೆ. ಮೇಷ್ಟ್ರು ಅರೆಸ್ಟ್. ಈ ವ್ಯೂಹದ ಸುತ್ತ ಆಪ್ತನ ದಟ್ಟ ನೆರಳು ಹರಡಿದೆ. ಬಾರ್ಬಿ ಕಥೆಯ ಕೊನೇ ನೋಟದ ಒಂದು ದೃಶ್ಯ – ನಿಶ್ಯಬ್ಧದ ಲಯದಲ್ಲಿ ಮೇಷ್ಟ್ರ ಎದೆಗೆ ಕುಕ್ಕಿ ಅಸ್ಸಹಾಯಕ ಛಾಯೆಯೊಂದನ್ನು ನಿರ್ಮಿಸಿ ಬಿಡುತ್ತದೆ.
ಇಲ್ಲಿ ಮನುಷ್ಯನ ಸಣ್ಣತನ, ವಂಚಕ ಪ್ರವೃತ್ತಿ, ನಂಬಿಕೆ ದ್ರೋಹದ ಪರಿಣಾಮ ಸಮಾಜದಲ್ಲಿ ಆದರ್ಶವಾಗಿ ಬದುಕುವ ಮನಸ್ಸುಗಳನ್ನು ಅಪರಾಧಿಯಾಗಿಸುವ ನೀಚತನವನ್ನು ಬಾರ್ಬಿ ಪ್ರಸ್ತುತಪಡಿಸುತ್ತದೆ. ಇದು ಎಲ್ಲ ಕಾಲದಲ್ಲು ಇರುವ ಪುನರಾವರ್ತಿತ ಕೆಡುಕಿನ ನೈಜ ಚಿತ್ರಣವೇ ಆಗಿದೆ.
ಹಾಗೆ “ಮ್ಯಾಚ್ ದ ಫಾಲೋಯಿಂಗ್” ತಾಯಿಯಿಲ್ಲದ ಸಯಾಮಿ ಜೀವಗಳ ತದ್ವಿರುದ್ದ ಭಾವನೆಗಳ ಸುತ್ತ ಜರುಗುವ, ಆ ಎರಡು ಮನಸ್ಸುಗಳನ್ನು ಜೋಪಾನ ಮಾಡುವ ತಂದೆಯ ಕಾತರ, ತಾಯ್ತನ, ಮಾನವೀಯ ಮನಸ್ಸು, ವಿರೋಧಭಾಸದ ಎರಡು ದೇಹಗಳನ್ನು ಬೇರ್ಪಡಿಸಲು ಹೆತ್ತ ಕರುಳಿಗಾಗುವ ಸಂಕಟ, ಪ್ರಕೃತಿಯ ವೈಪರೀತ್ಯಗಳ ಸಿಟ್ಟಿಗೆ ಎರವಾಗಿ ಎರಡು ದೇಹಗಳು ಬೇರ್ಪಟ್ಟು “ಮಣ್ಣಲ್ಲಿ ಮಣ್ಣಾಗುವ ವಿರೋಧಭಾಸದ ಭಾವಗಳು” ಮನಸಿನಲ್ಲಿ ಉಳಿಯುತ್ತದೆ.
ಹೆಣ್ಣು ಕೇಂದ್ರಿತ ಮತ್ತು ಹೆಣ್ಣನ್ನು ಭೋಗದ ವಸ್ತುವಾಗಿ ಬಳಸುವ ಗಂಡಿನ ಕಾಮಪ್ರೇರಿತ ಮನಸ್ಸಿನ ಕಥೆಗಳಿವೆ. ಕನ್ನಡದ ಮಹತ್ವದ ಸೃಜನಶೀಲ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಈತರದ ವಿಷಯದ ಮೇಲೆನೇ ಅತಿ ಹೆಚ್ಚು ಸಿನಿಮಾ ಮಾಡಿದವರು. ಆ ಮೂಲಕ ಹೆಣ್ಣಿನ ಅಂತರಂಗದ ನೋವು ಹಿಂಸೆ ಘರ್ಷಣೆಯನ್ನು ಸಮಾಜದ ಮುಂದೆ ತೆರೆದಿಟ್ಟವರು. ಪ್ರಕಾಶ್ ಪುಟ್ಡಪ್ಪನವರ “ಬಣ್ಣದ ಬುಗುರಿ” ಕಥೆಯ ಸಲೀನಾ ಮತ್ತು ಜೋಸೇಫ್ ಪಾತ್ರಗಳು ಪುಟ್ಟಣ್ಣನವರ ‘ಮಸಣದ ಹೂವು’ ಚಿತ್ರದ ಪಾರ್ವತಿ ಮತ್ತು ಸಿಂಗಾರು ಪಾತ್ರಗಳ ನೋವು ಹಿಂಸೆ ತಾಕಲಾಟವನ್ನು ಧ್ವನಿಸುತ್ತವೆ. ಪುಟ್ಟ ಮನಸ್ಸಿನ ಪಾರ್ವತಿ ‘ಇಲ್ಲಿರಬಾರದು’ ಎಂಬ ಮಮಕಾರ ವ್ಯಕ್ತಪಡಿಸುವ ಸಿಂಗಾರು ಮದುವೆಯಾಗಿ ಬಾಳು ಕೊಡುವ ಮಾತಾಡಿದಾಗ ಪಾರ್ವತಿ ವ್ಯಂಗ್ಯವಾಗಿ ನಿನ್ನ ಕೆಲಸ ‘ಗಿರಾಕಿ ಹುಡುಕುವುದು’ ಅಷ್ಟು ಮಾಡುವಂತೆ ಗಹಗಹಿಸಿ ನಗುತ್ತ ಒಳ ಹೋಗುವಾಗ ಸಿಂಗಾರು ಕಣ್ಣು ಮತ್ತು ಎದೆಯಾಳದಲ್ಲಿ ದುಃಖ ತುಂಬಿ ಗದ್ಗದಿತವಾಗುವ ಹಾಗೆ ಇಲ್ಲಿನ ಸಲೀನಾಗೂ ಜೋಸೆಫ್ ಮದುವೆ ಮಣ್ಣು ಮಸಿ ಅಂತೆಲ್ಲ ಹೇಳಿದಾಗ ‘ಪ್ರೀತಿ ಪ್ರೇಮ ಮದುವೆ ಇವೆಲ್ಲಾ ನನ್ನ ಅಧ್ಯಾಯದಲ್ಲಿ ಮುಗಿದುಹೋದ ಪುಟಗಳು. ನೀನು ಗಿರಾಕಿಯಾಗಿ ಬಂದಿದೀಯ ಗಿರಾಕಿಯಾಗೇ ಹೋಗು. ನಿನ್ನ ಕಾಮದ ದಾಹ ದಣಿಸೋಕೆ ನೀನು ನನ್ನನ್ನು ಹೇಗಾದರು ಬಳಸಿಕೊ..’ ಎಂದು ಉಪೇಕ್ಷಿಸುವಾಗ ಜೋಸೇಫನ ಕಣ್ಣು ಮತ್ತು ಎದೆಯಾಳದಲ್ಲಿ ದುಃಖ ತುಂಬಿ ಗದ್ಗದಿತವಾಗುವ ಸನ್ನಿವೇಶ ಮನುಷ್ಯ ಸಂಬಂಧಗಳು ಹೇಗೆ ಹದಗೆಡುತ್ತಿವೆ.. ಮಾನವೀಯತೆಯ ಮೌಲ್ಯ ನಶಿಸುತ್ತಿದೆ, ಉತ್ತಮವಾದ ಬಾಂಧವ್ಯದ ನೆಲೆ ಕಳೆದುಕೊಂಡು ಬದುಕು ವ್ಯಾವಹಾರಿಕವಾಗಿ ರೂಪುಗೊಂಡಿರುವ ದ್ಯೂತಕದಂತೆ ಮನದಟ್ಟು ಮಾಡಿಸುತ್ತದೆ.
ದಲಿತ ಮತ್ತು ಸ್ತ್ರೀ – ಈ ಎರಡೂ ವರ್ಗ ಕಾಲದಿಂದ ಕಾಲಕ್ಕೆ ಶೋಷಣೆಗೆ ಒಳಗಾಗುತ್ತಲೇ ಬರುತ್ತಿದೆ. ಇಲ್ಲಿ ಕಾಲ ಯಾವುದು ಅನ್ನುವುದಕ್ಕಿಂತ ಆಯಾ ಕಾಲದ “ಮೇಲ್ತರದ ಮನಸ್ಥಿತಿ” ಅನುಸರಿಸಿ ನಡೆಸಿರುವಂಥ ಘೋರ ಕ್ರಿಯೆ. ದಲಿತರು ಮೇಲ್ ಸ್ತರದವರ ಮಗ್ಗುಲಲ್ಲಿ ತಿರುಗಾಡುವಂತಿಲ್ಲ. ಅಕ್ಷರ ಕಲಿಯುವುದಿರಲಿ ಶಾಲೆ ಹತ್ತಿರ ಸುಳಿಯುವ ಅವಕಾಶವನ್ನೆ ಇಲ್ಲವಾಗಿಸುವ ಕಾಲವೊಂದಿತ್ತು. ಇನ್ನು ಅವರಲ್ಲಿರುವ ಕಲೆಯನ್ನು ವ್ಯಕ್ತಪಡಿಸುವುದಾದರು ಹೇಗೆ? ಕಪ್ಪುಜನ ಏನನ್ನು ಮಾಡುವಂತಿಲ್ಲ. ಹಾಗೆ ಸ್ತ್ರಿ. ಸ್ತ್ರೀಗೆ ಜಾತಿ ಧರ್ಮದ ಎಲ್ಲೆ ಇಲ್ಲ ಯಾವ ಜಾತಿಯಾದರೇನು ಯಾವ ಧರ್ಮವಾದರೇನು ಇಡೀ ಸ್ತ್ರೀ ಕುಲಕ್ಕೆ ಎಲ್ಲವೂ ನಿಷಿದ್ಧ. ಇಂಥ ಸಂಕೀರ್ಣತೆಯನ್ನು ವಿಶದಪಡಿಸುವ ‘ಶ್ಯಾಮಲೆ’ ಸುತ್ತ ಅಪರಿಮಿತ ‘ಸಂಪತ್ತಿದೆ’. ಈ ಸಂಪತ್ತು ತಂದಿಡುವ ಆಪತ್ತು ಒಂದು ನೆಪವಷ್ಟೆ. ಅದಕ್ಕೆ ಮಲತಾಯಿಯ ಆಸೆ ಬುರುಕುತನದ ನಂಟು. ಇದೆಲ್ಲವನ್ನು ಮೀರಿದ ಒಂದು ಆಲೋಚನೆ ಪ್ರಜ್ಞಾಪೂರ್ವಕವಾಗಿ ಪುರುಷ ಕೇಂದ್ರಿತ ಸಾಂಪ್ರದಾಯಿಕ ಹೇರುವಿಕೆ/ ತನ್ನ ಅಂಕೆಯಲ್ಲಿ ಇರಿಸಿಕೊಳ್ಳುವ ಗಂಡಿನ ‘ಮೇಲ್ಮನಸ್ಥಿತಿಯನ್ನು’ ದಿಕ್ಕರಿಸಿ ದಿಟ್ಟವಾಗಿ ನಿಲ್ಲುವ ‘ಶ್ಯಾಮಲೆ” ಒಂದು ಅಪರೂಪದ ಕಥೆ. ಈ ಕಥೆಯ ಶ್ಯಾಮಲೆಯ ನಿರ್ಧಾರ ಶಿವರಾಮ ಕಾರಂತರ “ಮೈಮನಗಳ ಸುಳಿಯಲ್ಲಿ” ಬರುವ ಮಂಜುಳೆಯ ನಂತರದ ಮೂರನೇ ತಲೆಮಾರಿನ ಚಂದ್ರಿ ತನ್ನ ಪೂರ್ವಿಕರು ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರುತ್ತಿದ್ದ ವೇಶ್ಯೆ ವೃತ್ತಿ ಪರಂಪರೆಯನ್ನು ದಿಕ್ಕರಿಸಿ ಮುಖ್ಯವಾಹಿನಿಯಲ್ಲಿ ದಿಟ್ಟವಾಗಿ ಬದುಕು ಕಟ್ಟಿಕೊಳ್ಳುವ ಮನಸ್ಥಿತಿಗೆ ಪೂರಕ ನಿರ್ಧಾರದಂತೆ “ಶ್ಯಾಮಲೆ”ಯಲ್ಲಿ ಚಿತ್ರಿತವಾಗಿರುವುದನ್ನು ಗ್ರಹಿಸಬಹುದು.
ಕವಿಯಾಗಿ ಪರಿಚಿತರಾಗಿದ್ದ ಪ್ರಕಾಶ್ ಪುಟ್ಟಪ್ಪ ‘ಗಾಂಧಿ ಜೋಡಿನ ಮಳಿಗೆ’ ಎಂಬ ಕಥಾ ಪ್ರಯೋಗದ ಮೂಲಕ ಕಥೆಗಾರರಾಗಿ ದಕ್ಕಿದ್ದಾರೆ. ಇಲ್ಲಿ ‘ಪರಿಚಯಕ್ಕು’ ಮತ್ತು ‘ದಕ್ಕಿರುವುದಕ್ಕು’ ವ್ಯತ್ಯಾಸವಿದೆ. ಹಾಗಾಗಿ ಪ್ರಕಾಶ್ ಪುಟ್ಟಪ್ಪ ಕಥಾ ಪ್ರಕಾರದಲ್ಲಿ ಯಶಸ್ಸು ಕಂಡಿದ್ದಾರೆ ಎಂಬುದು ತಾತ್ಪರ್ಯ. ಯಾಕೆಂದರೆ ಸಣ್ಣ ಕಥಾ ರಚನೆ ಕಾದಂಬರಿಗಿಂತ ಕಾವ್ಯದ ನಂತರ ಅತ್ಯಂತ ಸಂಕೀರ್ಣ ರಚನೆ. ಪ್ರಕಾಶ್ ಅವರ ಈ ಕಥೆಗಳಲ್ಲಿ ಯಾವುದೇ ಕ್ಲಿಷ್ಟತೆ ಇಲ್ಲದೆ ಸರಾಗವಾಗಿ ಓದಿಸಿಕೊಂಡು ಹೋಗುವ ಬಹುಮುಖ್ಯ ಗುಣವಿದೆ. ಕಾರಣ, ಸಂಕಲನದ ಅಷ್ಟೂ ಕಥೆಗಳಲ್ಲಿ ಯಾವುದೇ ತರದ ರೂಪಕವಾಗಲಿ ಉಪಮೆಯಾಗಲಿ ಪ್ರತಿಮೆಯಾಗಲಿ ಇಲ್ಲದೆ ನೇರವಾಗಿ ಕಥೆ ಕಟ್ಟಿರುವ ಬಗೆ ಅನನ್ಯತೆ ಜೊತೆಗೆ ಗಾಂಧೀ ಅಂಬೇಡ್ಕರ್ ಹೋರಾಟ ಚಿಂತನೆಗಳನ್ನು ಮುಖಾಮುಖಿಯಾಗಿಸಿ ಸಾಂಸ್ಕೃತಿಕ ಆಯಾಮದ ರೂಪ ಕೊಟ್ಟಿರುವ
ಇಲ್ಲಿನ ಯಾವ ಕಥೆಯೂ ಇತರ ಲೇಖಕರ ಕಥೆಗಳ/ ಬರಹಗಳ ಪ್ರಭಾವಕ್ಕೆ ಒಳಗಾಗದೆ ತನ್ನಷ್ಟಕ್ಕೆ ತಾನೇ ಕಟ್ಟಿಕೊಂಡ ಸ್ವತಂತ್ರ ರಚನೆಯಾಗಿರುವುದು. ಹೀಗೆ ಅನ್ಯ ಬರಹಕ್ಕೆ ಸಿಲುಕದೆ ಹೊಸ ಬಗೆಯಲ್ಲಿ ಹೇಳುವ ಸ್ವತಂತ್ರ ರಚನೆಯೇ ಪ್ರಕಾಶ್ ಪುಟ್ಟಪ್ಪನವರ ಬರಹದ ಲಕ್ಷಣ. ಜಾತಿ ಧರ್ಮ ವರ್ಗ ಮತ ಬೇಧಗಳನ್ನು ಮೀರಿದ ಪ್ರಗತಿಪರವಾದ ಜಾತ್ಯಾತೀತವಾದ ತಾತ್ವಿಕ ನೆಲೆಗಟ್ಟಿನಲ್ಲಿ ಇಲ್ಲಿನ ಕಥೆಗಳು ಜೀವ ಪಡೆದಿವೆ.
ಹಾಗೆ ಈ ಕೃತಿಯಲ್ಲಿ ಬಳಸಿರುವ ಭಾಷೆ ಹದವಾಗಿದೆ. ಸಾಹಿತ್ಯದ ಓದುಗನನ್ನು ತಬ್ಬಿಡಿದು ಓದಿಸಿಕೊಳ್ಳುವ ಲಯವಿದೆ. ಅಂತೆಯೇ ಇಲ್ಲಿನ ಕಥೆಗಳ ಪಾತ್ರಗಳ ಆಡುನುಡಿಯಲ್ಲಿ ಗ್ರಾಮ್ಯದ ಸೊಗಡಿದೆ. ಅದರಲ್ಲು ಕೊಳ್ಳೇಗಾಲ, ಚಾಮರಾಜನಗರ ಕೇಂದ್ರಿತ ಮಲೈ ಮಹದೇಶ್ವರ ತಪ್ಪಲು, ಬಿಳಿಗಿರಿರಂಗ ತಪ್ಪಲು, ದೊಡ್ಡ ಸಂಪಿಗೆಯ ತಪ್ಪಲು, ವೀರಪ್ಪನ್ ಅಡಗುತಾಣದ ದಟ್ಟಾರಣ್ಯದ ಕಾಡುವಾಸಿಗಳ ಜನಪದೀಯವಾದ ಲಯಬದ್ಧ ಭಾಷಾ ನುಡಿಗಟ್ಟಿದೆ. ಇದಲ್ಲದೆ ಅವರ ಆಹಾರ ಉಡುಗೆ, ತೊಡುಗೆ, ಹಬ್ಬ, ಆಚಾರ, ವಿಚಾರ ತುಂಬಿದ ಒಟ್ಟು ಸಾಂಸ್ಕೃತಿಕ ಆಯಾಮ ಇರುವ ಈ ಸಂಕಲನದ ಕಥೆಗಳಲ್ಲಿ ಅವಗುಣ/ದೋಷ ಇಲ್ಲವೆಂದಲ್ಲ. ಎಲ್ಲ ಯಶಸ್ವಿ ಲೇಖಕರ ಕೃತಿಗಳ ರಚನಾ ಶೈಲಿ, ಕಥನತಂತ್ರ, ದೃಶ್ಯ ವೈಭವ, ಸನ್ನಿವೇಶಗಳ ಚಿತ್ರಣ, ಅದರ ಚೌಕಟ್ಟು, ಬಳಸಿರುವ ಭಾಷೆ – ಇವೆಲ್ಲವನ್ನು ವಿಭಾಗಿಸಿ ಹೇಳಲಾಗದಷ್ಟು ತೀರಾ ಸಂಕೀರ್ಣ ಅನಿಸುವ ಎಲ್ಲ ಗುಣಾವಗುಣವಿರುವಂತೆ ಇಲ್ಲಿಯೂ ಅಲ್ಲಲ್ಲಿ ಇರುವುದು ಸಾಮಾನ್ಯ. ಆದರೆ ನಾನಿಲ್ಲಿ ಒಬ್ಬ ಸಾಮಾನ್ಯ ಓದುಗನಾಗಿ ಇಲ್ಲಿರುವ ಒಳ್ಳೆ ಅಂಶಗಳನ್ನಷ್ಟೆ ಹೆಕ್ಕಿ ಕೃತಿಗೆ ಕೃತಿಕಾರನಿಗೆ ಸಾಧ್ಯವಾದಷ್ಟು ನ್ಯಾಯ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಈ ಬರಹ.
-ಎಂ.ಜವರಾಜ್
ಕೃತಿ: ಗಾಂಧೀ ಜೋಡಿನ ಮಳಿಗೆ
ಪ್ರಕಾರ: ಕಥಾಸಂಕಲನ
ಪ್ರಕಾಶನ: ಅಮೂಲ್ಯ ಪುಸ್ತಕ
ಬೆಲೆ: ರೂ.175/-
ಪ್ರತಿಗಳಿಗಾಗಿ ಸಂಪರ್ಕಿಸಿ: 96207 96770
ತುಂಬಾ ಅತ್ಯುತ್ತಮವಾದ ಸಂಕಲನ.
ಅಭಿನಂದನೆಗಳು ಪ್ರಕಾಶ್..
ಜವರಾಜ್ ಅವರ ಸೂಕ್ಷ್ಮ ಓದಿನ ಸುದೀರ್ಘವಾದ ರಿವ್ಯೂ ಪ್ರಕಾಶ್ ಪುಟ್ಟಪ್ಪನವರ ಕಥಾಸಂಕಲನಕ್ಕೆ ಬರೆದ ಮುನ್ನುಡಿಯಂತಿದ್ದು, ಓದುಗರು ಪುಸ್ತಕವನ್ನು ಕೊಂಡು ಓದುವಂತೆ ಮಾಡುತ್ತದೆ.