ಕೆಲವು ದಿನಗಳ ಹಿಂದೆ ಬೆಂಗಳೂರಿನ ಸಂಪಿಗಿರಾಮ ನಗರದ SCM ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ್ದೆ. ಈ ಕೇಂದ್ರವು ಸ್ವಯಂ ಸೇವಾ ಸಂಸ್ಥೆಗಳಿಗೆ ಚಿರಪರಿಚಿತವಾದ ಸ್ಥಳವಾಗಿದ್ದು, ಇಲ್ಲಿ ತರಬೇತಿಗಳು, ಸಮಾಲೋಚನೆಗಳು, ಮತ್ತು ಸಮ್ಮೇಳನಗಳು ನಿರಂತರವಾಗಿ ನಡೆಯುತ್ತವೆ. ಆ ದಿನ ನಾನು ಒಂದು ಸ್ವಯಂ ಸೇವಾ ಸಂಸ್ಥೆಯ ಸದಸ್ಯರಿಗೆ ಮಕ್ಕಳ ರಕ್ಷಣಾ ನೀತಿಯ ಬಗ್ಗೆ ಮಾಹಿತಿ ನೀಡಲು ತೆರಳಿದ್ದೆ. ಅದೇ ವೇಳೆ ಅಲ್ಲಿ ಮತ್ತೊಂದು ಕಾರ್ಯಕ್ರಮವೂ ನಡೆಯುತ್ತಿತ್ತು—ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಕ್ರಿಶ್ಚಿಯನ್ ಫಾದರ್‌ಗಳ ಸಮಾಲೋಚನೆ. ಊಟದ ಸಮಯದಲ್ಲಿ SCMನ ಗೆಳೆಯರೊಬ್ಬರು, “ನಾಗಸಿಂಹ ಸರ್, ಫಾದರ್ ಪೀಟರ್ ಬಂದಿದ್ದಾರೆ, ಅವರೊಡನೆ ಮಾತನಾಡಿ. ಅವರು ತಮ್ಮ ಪ್ರವಚನಗಳಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಆಗಾಗ ಹೇಳುತ್ತಾರೆ,” ಎಂದರು. ಈ ಮಾತು ಕೇಳಿ ನನಗೆ ಆಶ್ಚರ್ಯವಾಯಿತು. “ವಾವ್, ಹೌದಾ? ಈಗ ಎಲ್ಲಿದ್ದಾರೆ?” ಎಂದು ಕೇಳಿದಾಗ, “ಲೈಬ್ರರಿಯಲ್ಲಿದ್ದಾರೆ, ಹೋಗಿ ಭೇಟಿಯಾಗಿ,” ಎಂದರು. ಸಮಯವೂ ಇದ್ದ ಕಾರಣ, ಲೈಬ್ರರಿಗೆ ತೆರಳಿದೆ.
ಅಲ್ಲಿ ಬಿಳಿಯ ನಿಲುವಂಗಿ ಧರಿಸಿದ ಫಾದರ್ ಪೀಟರ್ ಕುಳಿತಿದ್ದರು. ಸುಮಾರು 50 ವರ್ಷ ವಯಸ್ಸಿನ ಅವರು ಯಾವುದೋ ಪುಸ್ತಕ ಓದುತ್ತಿದ್ದರು. “ನಮಸ್ಕಾರ, ಫಾದರ್,” ಎಂದು ಶುಭಾಶಯಿಸಿದೆ. ನನ್ನ ಕಡೆಗೆ ತಿರುಗಿ ನೋಡಿದ ಅವರು ಒಮ್ಮೆಗೆ ಎದ್ದು ನಿಂತು, “ಅರೆ, ನಾಗಸಿಂಹ ಸಾರ್! ಏನು, ನೀವಿಲ್ಲಿ?” ಎಂದರು. ನನಗೆ ಒಂದು ಕ್ಷಣ ಗೊಂದಲವಾಯಿತು. ಅವರಿಗೆ ನನ್ನನ್ನು ಹೇಗೆ ತಿಳಿದಿದೆ? ಪತ್ರಿಕೆಯಲ್ಲಿ ಓದಿರಬಹುದೇ? ಟಿವಿಯಲ್ಲಿ ನೋಡಿರಬಹುದೇ? ಈ ಯೋಚನೆಯಲ್ಲಿರುವಾಗಲೇ ಅವರೇ ವಿವರಿಸಿದರು: “ಮರೆತರಾ ಸಾರ್, ಗುಂಡ್ಲುಪೇಟೆ, 2008? ಧಾರ್ಮಿಕ ಗುರುಗಳಿಗೆ ಮಕ್ಕಳ ಹಕ್ಕುಗಳ ಬಗ್ಗೆ ಮೂರು ದಿನದ ತರಬೇತಿ? ನಾನೂ ಅದರಲ್ಲಿ ಭಾಗವಹಿಸಿದ್ದೆ. ನಿಮ್ಮ ತರಬೇತಿಯ ನಂತರ ನಾನು ನನ್ನ ಪ್ರವಚನಗಳಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಹೇಳಲು ಪ್ರಾರಂಭಿಸಿದೆ. ಸಮುದಾಯಗಳಿಂದ ಅದ್ಭುತ ಸ್ಪಂದನೆ ಸಿಗುತ್ತಿದೆ.” ಈ ಮಾತು ಕೇಳಿ ನನಗೆ ಅಪಾರ ಸಂತೋಷವಾಯಿತು. ಜೊತೆಗೆ, 2008ರಲ್ಲಿ ಗುಂಡ್ಲುಪೇಟೆಯಲ್ಲಿ ನಡೆದ ಆ ತರಬೇತಿಯ ನೆನಪು ತಾಜಾವಾಯಿತು.
ಗುಂಡ್ಲುಪೇಟೆಯ ವರ್ಲ್ಡ್ ವಿಷನ್ ಸಂಸ್ಥೆಯವರು 2008ರಲ್ಲಿ ಧಾರ್ಮಿಕ ನಾಯಕರಿಗೆ ಮಕ್ಕಳ ಹಕ್ಕುಗಳ ಕುರಿತು ಮೂರು ದಿನದ ತರಬೇತಿಯನ್ನು ಆಯೋಜಿಸಿದ್ದರು. ನಾನು ಸಂಪನ್ಮೂಲ ವ್ಯಕ್ತಿಯಾಗಿದ್ದೆ. ಈ ತರಬೇತಿಗೆ ಇಸ್ಲಾಂ ಮೌಲ್ವಿಗಳು, ಕ್ರಿಶ್ಚಿಯನ್ ಫಾದರ್‌ಗಳು, ಮತ್ತು ಹಿಂದೂ ಸ್ವಾಮಿಗಳು ಆಹ್ವಾನಿತರಾಗಿದ್ದರು. ಇದು ನನಗೆ ಒಂದು ದೊಡ್ಡ ಸವಾಲಾಗಿತ್ತು. ವಿವಿಧ ಧಾರ್ಮಿಕ ಹಿನ್ನೆಲೆಯ ಗುರುಗಳಿಗೆ ಮಕ್ಕಳ ಹಕ್ಕುಗಳ ಕುರಿತು ಒಂದೇ ವೇದಿಕೆಯಲ್ಲಿ ತಿಳಿವಳಿಕೆ ನೀಡುವುದು ಸುಲಭವಾಗಿರಲಿಲ್ಲ. ಆದ್ದರಿಂದ, ಒಂದು ತಿಂಗಳ ಮುಂಚೆಯೇ ಕುರಾನ್, ಬೈಬಲ್, ಮತ್ತು ಭಗವದ್ಗೀತೆಯನ್ನು ಓದಿ, ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ಗುರುತಿಸಿ, ಪಟ್ಟಿಮಾಡಿಕೊಂಡಿದ್ದೆ.ಯಾವುದೇ ಧಾರ್ಮಿಕ ಭಾವನೆಗಳಿಗೆ ದಕ್ಕೆಯಾಗದಂತೆ , ಎಲ್ಲರಲ್ಲೂ ಸಾಮರಸ್ಯ ಮೂಡುವಂತೆ ಮೂರು ದಿನ ತರಬೇತಿ ಮಾಡಬೇಕಿತ್ತು .
ತರಬೇತಿಯ ಮೊದಲ ದಿನ ಕೇವಲ ಒಂಬತ್ತು ಜನ ಭಾಗವಹಿಸಿದ್ದರು—ಒಬ್ಬ ಮೌಲ್ವಿ, ಮೂವರು ಫಾದರ್‌ಗಳು, ಇಬ್ಬರು ಮಠದ ಸ್ವಾಮಿಗಳು, ಮತ್ತು ಮೂವರು ದೇವಾಲಯದ ಪೂಜಾರಿಗಳು.ನಿಜಕ್ಕೂ ಅಷ್ಟು ಜನ ಬಂದಿದ್ದು ಒಂದು ದೊಡ್ಡ ವಿಷಯ . ಸ್ವಾಗತದ ನಂತರ ತರಬೇತಿಯನ್ನು ಆರಂಭಿಸಿದೆ. ಆದರೆ ಯಾರೂ ಮಾತನಾಡುತ್ತಿರಲಿಲ್ಲ. ಎಲ್ಲರೂ ಗಂಭೀರವಾಗಿ ಕುಳಿತಿದ್ದರು. ವಾತಾವರಣ ಭಾರವಾಗಿತ್ತು.
ಈ ಮೌನವನ್ನು ಒಡೆಯಲು , ನಾನು ಕತೆಗಳ ಮೂಲಕ ತರಬೇತಿಯನ್ನು ಮುಂದುವರೆಸಿದೆ. ಏಕಲವ್ಯನ ಕಥೆ, ಕರ್ಣನ ಕಥೆ, ಕುಂತಿಯ ಕಥೆ, ಕೃಷ್ಣನ ಮೇಲೆ ರಾಕ್ಷಸರು ಮಾಡಿದ ದಾಳಿ, ಬಾಲ್ಯದಲ್ಲೇ ಜವಾಬ್ದಾರಿ ಹೊತ್ತ ರಾಮ-ಲಕ್ಷ್ಮಣ, ತಂದೆಯ ಭಯದಿಂದ ಮನೆಯಲ್ಲೇ ಬಂಧಿಯಾಗಿದ್ದ ಬುದ್ಧ, ಪ್ರವಾದಿ ಮೊಹಮ್ಮದರ ಬಾಲ್ಯದಲ್ಲಿ ಅವರ ಮೇಲಾದ ದಾಳಿ, ಮತ್ತು ಏಸುಕ್ರಿಸ್ತನ ಜನನದ ಸಂದರ್ಭದಲ್ಲಿ ಸತ್ತ ಮಕ್ಕಳ ಕಥೆಗಳನ್ನು ಹೇಳಿದೆ.
ಈ ಎಲ್ಲ ಕಥೆಗಳು ಮಕ್ಕಳ ಹಕ್ಕುಗಳ ಪರಿಸ್ಥಿತಿಯ ಉದಾಹರಣೆಗಳಾಗಿವೆ ಎಂದು ವಿವರಿಸಿದೆ. ಈ ಕತೆಗಳು ಭಾಗವಹಿಸಿದವರಲ್ಲಿ ಚರ್ಚೆಗೆ ಕಾರಣವಾಯಿತು. ಅವರಿಗೆ ತಿಳಿದ ಕಥೆಗಳನ್ನು ಅವರೇ ಹೇಳತೊಡಗಿದರು. ನಾನು ಆ ಕಥೆಗಳನ್ನು ಮಕ್ಕಳ ಹಕ್ಕುಗಳ ಕಡೆಗೆ ತಿರುಗಿಸಿ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯನ್ನು ವಿವರಿಸ ತೊಡಗಿದೆ .
ಮಕ್ಕಳ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಮತ್ತು ಅಭಿವೃದ್ಧಿಯ ಹಕ್ಕುಗಳನ್ನು ವಿವರಿಸಿದಾಗ, ಭಾಗವಹಿಸಿದವರು ಶಾಂತವಾಗಿ ಕೇಳಿಸಿಕೊಂಡರು. ಆದರೆ, ಮಕ್ಕಳ ಭಾಗವಹಿಸುವ ಹಕ್ಕಿನ ಬಗ್ಗೆ ಮಾತನಾಡಿದಾಗ—ಮಕ್ಕಳ ಮಾತಿಗೆ ಬೆಲೆ ನೀಡಬೇಕು, ಅವರ ಅಭಿಪ್ರಾಯಕ್ಕೆ ಮಾನ್ಯತೆ ಕೊಡಬೇಕು ಎಂದಾಗ—ವಿರೋಧ ವ್ಯಕ್ತವಾಯಿತು. “ಧರ್ಮವೇ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತದೆ,” ಎಂದು ಕೆಲವರು ವಾದಿಸಿದರು. “ಇಂತಹದ್ದನ್ನು ಹೇಳಿದರೆ ತರಬೇತಿಯಲ್ಲಿ ಕೂರುವುದಿಲ್ಲ,” ಎಂದು ಒಬ್ಬರು ಎಚ್ಚರಿಕೆ ನೀಡಿದರು. ಆಗ, ಮಕ್ಕಳಲ್ಲಿ ಜೀವನ ಕೌಶಲ್ಯಗಳನ್ನು ಬೆಳೆಸಲು ಅವರಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ವಿವರಿಸಿದೆ. ಇದರಿಂದ ನಾಯಕತ್ವದ ಗುಣ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಮತ್ತು ಉತ್ತಮ ಸಂವಹನ ಕೌಶಲ್ಯಗಳು ಬೆಳೆಯುತ್ತವೆ ಎಂದು ತಿಳಿಸಿದೆ. ಕೊನೆಗೆ, ಒಲ್ಲದ ಮನಸ್ಸಿನಿಂದಲೇ ಆದರೂ ಅವರು ಒಪ್ಪಿಕೊಂಡರು. ಮೊದಲ ದಿನದ ಅಂತ್ಯದ ವೇಳೆಗೆ, “ನಾಳೆ ಯಾರೂ ಬರೋದಿಲ್ಲವೇನೋ,” ಎಂಬ ನನ್ನ ಆತಂಕ ಸುಳ್ಳಾಯಿತು. ಎರಡನೇ ದಿನ ಸುಮಾರು 20 ಜನ ಭಾಗವಹಿಸಿದ್ದರು.
ಎರಡನೇ ದಿನ ತರಬೇತಿಗೆ ಬಂದವರಲ್ಲಿ ಒಂದು ಬದಲಾವಣೆ ನಾನು ಗಮನಿಸಿದೆ . ಮೊದಲ ದಿನ ರೀ .. ಸರ್ .. ಸ್ವಾಮಿ ಅಂತ ನನ್ನ ಕರೆಯುತ್ತಿದ್ದವರು ಎರಡನೇ ದಿನ ಗುರುಗಳೇ ಎಂದು ಕರೆಯಲು ಪ್ರಾರಂಭಿಸಿದ್ದರು , ‘ನಾಗಸಿಂಹ ಗುರುಗಳೇ ಮಕ್ಕಳ ಹಕ್ಕುಗಳಲ್ಲಿ ಧರ್ಮದ ವಿಚಾರ ಏನಾದರೂ ಇದೆಯೇ ? ” ಈ ಪ್ರಶ್ನೆಗೆ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ 14ರ ಬಗ್ಗೆ ಚರ್ಚಿಸುವ ಸವಾಲು ನನ್ನ ಮುಂದಿತ್ತು. ಈ ಪರಿಚ್ಛೇದದ ಪ್ರಕಾರ, ಮಕ್ಕಳಿಗೆ ಧಾರ್ಮಿಕ ಸ್ವಾತಂತ್ರ್ಯವಿದೆ ಮತ್ತು ಅವರು ತಮಗೆ ಇಷ್ಟವಾದ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಹೊಂದಿದ್ದಾರೆ. ಈ ವಿಷಯಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. “ಮಕ್ಕಳಿಗೆ ಏನೂ ತಿಳಿಯುವುದಿಲ್ಲ, ಹಿರಿಯರು ಧರ್ಮವನ್ನು ಕಲಿಸಬೇಕು,” ಎಂದು ಅವರು ವಾದಿಸಿದರು. ಆಗ, ಪ್ರತಿ ಧರ್ಮದಲ್ಲಿರುವ ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ, ದೇವದಾಸಿ ಪದ್ಧತಿ, ಮತ್ತು ಮಕ್ಕಳ ದುರುಪಯೋಗದಂತಹ ಸಮಸ್ಯೆಗಳನ್ನು ಎತ್ತಿ ತೋರಿಸಿದೆ. ಮಕ್ಕಳ ಸಾವು ಮತ್ತು ಮಾತೆಯರ ಸಾವಿನಂತಹ ವಿಷಯಗಳನ್ನು ಚರ್ಚೆಗೆ ತಂದಾಗ, ಗಂಭೀರ ಸಂವಾದಗಳು ನಡೆದವು. ಎರಡನೇ ದಿನದ ಅಂತ್ಯಕ್ಕೆ, ಮಕ್ಕಳಿಗೆ ಹಕ್ಕುಗಳು ಅವಶ್ಯಕ ಎಂಬುದರ ಬಗ್ಗೆ ಒಮ್ಮತ ಸೃಷ್ಟಿಯಾಯಿತು. ನಮ್ಮ ಸಂವಿಧಾನ ಮತ್ತು ಮಕ್ಕಳ ಹಕ್ಕುಗಳನ್ನು ಪ್ರಚಾರ ಮಾಡಬೇಕು ಎಂಬ ಒಕ್ಕೊರಲ ಅಭಿಪ್ರಾಯ ರೂಪುಗೊಂಡಿತು.
ಮೂರನೇ ದಿನ, ತರಬೇತಿಗೆ ಬಂದವರ ಸಂಖ್ಯೆ 42ಕ್ಕೆ ಏರಿತು. ಹಲವಾರು ಶಿಷ್ಯರೂ ಭಾಗವಹಿಸಿದ್ದರು. ದಿನದ ಅಂತ್ಯಕ್ಕೆ, ಪ್ರತಿಯೊಬ್ಬ ಧಾರ್ಮಿಕ ಗುರುವೂ ತಮ್ಮ ಪ್ರವಚನಗಳಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸುವ ಭರವಸೆ ನೀಡಿದರು. ವಿವಿಧ ಧರ್ಮಗಳ ವಿಷಯಗಳನ್ನು ಒಂದೇ ವೇದಿಕೆಯಲ್ಲಿ ಸಮರ್ಪಕವಾಗಿ ಮಂಡಿಸಿದ್ದಕ್ಕಾಗಿ ಅವರು ನನ್ನನ್ನು ಶ್ಲಾಘಿಸಿದರು.ಇದೇ ರೀತಿಯ ತರಬೇತಿಯನ್ನು ನಮ್ಮ ಮದರಸ ಉಸ್ತಾದ್ ಗಳಿಗೆ ಕೊಡಿ , ನಮ್ಮ ಚರ್ಚ್ ಗೆ ಬಂದು ಪ್ರವಚನ ನೀಡಿ , ನಮ್ಮ ಮಠಕ್ಕೆ ಬರಲೇ ಬೇಕು ಎಂಬ ಆಹ್ವಾನಗಳು ಬಂದವು
ಈ ತರಬೇತಿಯ ಸವಾಲುಗಳು ಅನೇಕವಿದ್ದವು. ಮೊದಲನೆಯದಾಗಿ, ವಿಭಿನ್ನ ಧಾರ್ಮಿಕ ಹಿನ್ನೆಲೆಯ ಗುರುಗಳನ್ನು ಒಂದೇ ವಿಷಯದಡಿ ಒಗ್ಗೂಡಿಸುವುದು ಕಷ್ಟಕರವಾಗಿತ್ತು. ಅವರ ನಂಬಿಕೆಗಳು, ಆಚಾರ-ವಿಚಾರಗಳು, ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಅವರ ದೃಷ್ಟಿಕೋನಗಳು ವಿಭಿನ್ನವಾಗಿದ್ದವು. ಎರಡನೆಯದಾಗಿ, ಮಕ್ಕಳ ಭಾಗವಹಿಸುವ ಹಕ್ಕು ಮತ್ತು ಧಾರ್ಮಿಕ ಸ್ವಾತಂತ್ರ್ಯದಂತಹ ಸೂಕ್ಷ್ಮ ವಿಷಯಗಳನ್ನು ಚರ್ಚಿಸುವಾಗ, ಅವರ ವಿರೋಧವನ್ನು ಎದುರಿಸಬೇಕಾಯಿತು. ಈ ವಿರೋಧವನ್ನು ತಾಕ್ಷಣಿಕವಾಗಿ ತಿರಸ್ಕರಿಸದೆ, ತಮ್ಮದೇ ಧಾರ್ಮಿಕ ಗ್ರಂಥಗಳಿಂದ ಉದಾಹರಣೆಗಳನ್ನು ಎತ್ತಿತೋರಿಸಿ, ಸಂವಾದದ ಮೂಲಕ ಅವರ ಮನವೊಲಿಸಬೇಕಾಯಿತು. ಮೂರನೆಯದಾಗಿ, ತರಬೇತಿಯ ಮೊದಲ ದಿನದ ಮೌನದ ವಾತಾವರಣವನ್ನು ಕತೆಗಳ ಮೂಲಕ ಒಡದು, ಎಲ್ಲರನ್ನೂ ಚರ್ಚೆಗೆ ತೊಡಗಿಸಿಕೊಳ್ಳುವಂತೆ ಮಾಡುವುದು ಸವಾಲಾಗಿತ್ತು.ನಾನು ಧರ್ಮಾತೀತನಾಗಿರಬೇಕಿತ್ತು .
ಆದರೆ, ಈ ಸವಾಲುಗಳನ್ನು ಎದುರಿಸಿದ್ದರಿಂದಲೇ ತರಬೇತಿಯ ಯಶಸ್ಸು. ಮೊದಲ ದಿನ ಕೇವಲ ಒಂಬತ್ತು ಜನರಿಂದ ಆರಂಭವಾದ ತರಬೇತಿಯು ಮೂರನೇ ದಿನಕ್ಕೆ 42 ಜನರನ್ನು ಒಳಗೊಂಡಿತು. ಧಾರ್ಮಿಕ ಗುರುಗಳು ಮಕ್ಕಳ ಹಕ್ಕುಗಳನ್ನು ತಮ್ಮ ಪ್ರವಚನಗಳಲ್ಲಿ ಸೇರಿಸಿಕೊಳ್ಳುವ ಭರವಸೆ ನೀಡಿದ್ದು ಒಂದು ದೊಡ್ಡ ಸಾಧನೆಯಾಗಿತ್ತು. ಫಾದರ್ ಪೀಟರ್‌ರಂತಹವರು ತಮ್ಮ ಸಮುದಾಯಗಳಲ್ಲಿ ಈ ವಿಷಯವನ್ನು ಪ್ರಚಾರ ಮಾಡಿ, ಸಕಾರಾತ್ಮಕ ಸ್ಪಂದನೆ ಪಡೆದಿರುವುದು ಈ ತರಬೇತಿಯ ದೀರ್ಘಕಾಲೀನ ಪರಿಣಾಮವನ್ನು ತೋರಿಸುತ್ತದೆ.
ಈ ತರಬೇತಿಯ ಅನುಭವವು ಮಕ್ಕಳ ಹಕ್ಕುಗಳ ಕುರಿತಾದ ಸಂವಾದವನ್ನು ಧಾರ್ಮಿಕ ವೇದಿಕೆಗಳಿಗೆ ಕೊಂಡೊಯ್ಯುವುದರ ಮಹತ್ವವನ್ನು ಒತ್ತಿಹೇಳಿತು. ಧಾರ್ಮಿಕ ನಾಯಕರೊಂದಿಗಿನ ಈ ಸಂವಾದವು ಕೇವಲ ತರಬೇತಿಯೊಂದಕ್ಕೆ ಸೀಮಿತವಾಗದೆ, ಸಮಾಜದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ವ್ಯಾಪಕ ಜಾಗೃತಿಯನ್ನು ಮೂಡಿಸುವ ಸಾಮರ್ಥ್ಯವನ್ನು ಹೊಂದಿದೆ.
–ನಾಗಸಿಂಹ ಜಿ ರಾವ್

ಅಪರೂಪದ ಬರೆಹ, ಪ್ರಕಟವಾಗಿದ್ದರೂ ಓದಲು ಆಗಿರಲಿಲ್ಲ, ಆದರೆ ನೆನಪಿನಲ್ಲಿತ್ತು.
ಗುರುಗಳೂ ಕಳಿಸಿದ್ದರು.
ಅರಿವು ವಿಸ್ತರಣ ಬರೀ ತರಬೇತಿಯಲ್ಲಿ ಪಾಲುದಾರರಾದವರದಲ್ಲ; ಓದಿದ ನಮ್ಮದೂ!
ಈ ಎರಡನೆಯ ಪರಿಣಾಮವೇ ಹೆಚ್ಚು; ಏಕೆಂದರೆ ಬರೆಹಕ್ಕೆ ಶಾಶ್ವತತೆಯ ಗುಣವಿದೆ.
ಅದಕಾಗಿಯೇ ಬರೆಹವು ಬೇಕು ಎನ್ನುವುದು. ಮಕ್ಕಳ ಹಕ್ಕು, ರಕ್ಷಣೆ ಮತ್ತು ಜಾಗೃತಿಗೆ
ಜೀವ ಜೀವನವನ್ನೇ ಮೀಸಲಿಟ್ಟ ನಾಗಸಿಂಹರು ಎಲ್ಲರ ಗುರುವೂ ಆದರು.
ಈ ದಿಸೆಯಲ್ಲಿ ನಾವು ಅವರಿಗೆ ಏಕಲವ್ಯರೇ. ಎದುರೇ ಕುಳಿತು ಬೋಧಿಸಬೇಕಿಲ್ಲ;
ದಾಖಲಿಸಿದರೂ ಸಾಕು. ಧರ್ಮವು ಅತ್ಯಂತ ಶಕ್ತಿಶಾಲಿಯಾದ ಸಾಂಸ್ಕೃತಿಕ ವಾಹಕ.
ನಿರಾಕರಿಸಬೇಕಿಲ್ಲ; ವಿಪರೀತ ಪುರಸ್ಕರಿಸಬೇಕಿಲ್ಲ. ಇಂಥ ಕಾರ್ಯಾಗಾರ, ತರಬೇತಿ
ಗಳಲ್ಲಿ ಹೀಗೆ ತಿಳಿ ಹೇಳಿದರೆ, ಅಂಥ ಧಾರ್ಮಿಕ ಪ್ರವಾಹಕರು ತಂತಮ್ಮ ಸಮುದಾಯದಲ್ಲಿ
ಪ್ರವಚನಗಳ ಮುಖೇನ ಜನಸಾಮಾನ್ಯರನ್ನು ತಲಪುವರು; ಮಕ್ಕಳು ಸಹ ಹಾಗೆಯೇ
ಎಲ್ಲರಿಗೂ “ಸರಿಯಾಗಿ” ತಲಪುವರು. ನನಗಿಷ್ಟವಾಯಿತು. ಯಾವತ್ತೂ ಅಷ್ಟೇ: ವೇದನೆಗಿಂತ
ಸಂವೇದನೆ ಮೇಲು; ಆಚಾರಕ್ಕಿಂತ ವಿಚಾರ ಮೇಲು.
ಈ ಬರೆಹದಲ್ಲಿ ಗುರುಗಳು ಒಂದಷ್ಟು ಅಪರೂಪದ ಪದಪುಂಜಗಳನ್ನು ಟಂಕಿಸಿದ್ದಾರೆ. ತಾಕ್ಷಣಿಕ, ತಾಜಾವಾಯಿತು, ಶುಭಾಶಯಿಸಿದೆ, ಇತ್ಯಾದಿ. ಭಾಷೆಯನ್ನು ಬೆಳೆಸುವುದೇ ಹೀಗೆ. ಏಕೆಂದರೆ ಭಾಷಾ ಬಳಕೆಯಲ್ಲಿ ಸರಿತಪ್ಪುಗಳಿರುವುದಿಲ್ಲ; ಎಲ್ಲವೂ ಸರಿ. ಬಳಕೆಯೇ ಭಾಷೆಯ ಮೊದಲ ಮತ್ತು ಕೊನೆಯ ಲಕ್ಷಣ; ಸಲ್ಲಕ್ಷಣ, ನಲ್ಲಕ್ಷಣ!
ಹೆಚ್ಚು ಬರೆಯಿರಿ ಸರ್; ಇಂಥವನ್ನು ಹೆಚ್ಚು ಪ್ರಕಟಿಸಿ ಸಂಪಾದಕರೇ, ಇಬ್ಬರಿಗೂ ನನ್ನ ಹೃದಯದ ಒಲುಮೆ ಮತ್ತು ನಲುಮೆ. (ಧಾರ್ಮಿಕರಾಗೋಣ ಅಂದರೆ ಹೆಚ್ಚು ಹೆಚ್ಚು ಸರಿಧರ್ಮವನ್ನು ಪಾಲಿಸೋಣ!!) ವಂದನೆ.
ಮಂಜುರಾಜ್, ಮೈಸೂರು (ಸದ್ಯಕ್ಕೆ ಹೊಳೆನರಸೀಪುರ)