
ಸುಮಾ ತವರಿಗೆ ಬಂದು ಒಂದು ವಾರವಾಗಿತ್ತು. ಆವತ್ತು ಬೆಳಗ್ಗೆಯಿಂದ ಇಳಿ ಹೊತ್ತಿನವರೆಗೆ ಹೊಲಕ್ಕೆ ಸಜ್ಜೆ ಕೊಯ್ಯಲು ಹೋಗಿ ಆಗಷ್ಟೇ ಮನೆಗೆ ಬಂದು ಒಂದಿಷ್ಟು ಚಹ ಕುಡಿದಳು. ಬೆಳಗ್ಗೆಯಿಂದ ಕೆಲಸ ಮಾಡಿದ್ದಕ್ಕೆ ಮೈಕೈ ನೋವು ಕಾಣಿಸಿಕೊಂಡಿತ್ತು. ತುಂಬಾ ದಣಿದಿದ್ದಳು. ಬೆಳಗ್ಗೆಯಿಂದ ಊರಾಡಿದ ಸೂರ್ಯನೂ ದಣಿದಿದ್ದ. ಪಡುವಣದಲ್ಲಿ ಮರೆಯಾಗಲು ಹವಣಿಸುತ್ತಿದ್ದ. ಪಡುವಣದಂಗನೆಗೆ ಮುತ್ತಿಟ್ಟು ಪಡುವಣವನ್ನು ಕೆಂಪುಕೆಂಪಾಗಿಸುವ ತವಕದಲ್ಲಿದ್ದ. ಮೈ, ಕೈ ನೋವಿನ ಜೊತೆಗೆ ಸುಮಾಳಿಗೆ ಆಗ ತಿಂಗಳ ಮುಟ್ಟು ಬರಬೇಕೆ? ಅತ್ತಿಗೆಯರಿಬ್ಬರೂ ಅಲ್ಲೇ ಓಡಾಡುತ್ತಿದ್ದರು. ಯಾರೂ ಅವಳ ಕಳೆಗುಂದಿದ ಮುಖದ ಕಡೆಗೆ ದೃಷ್ಟಿ ಹರಿಸಲೇ ಇಲ್ಲ. ಸಣ್ಣತ್ತಿಗೆಗೆ ತಾನು ಮುಟ್ಟಾಗಿರುವುದನ್ನು ಬಾಯಿಬಿಟ್ಟು ಹೇಳಿದಾಗಲೂ ಆಕೆ ಅವಳ ಮಾತನ್ನು ಕಿವಿಯಲ್ಲಿ ಹಾಕಿಕೊಳ್ಳಲಿಲ್ಲ. ತಾನೇ ನೀರು ಕಾಯಿಸಿಕೊಂಡು ಸ್ನಾನಮಾಡಲು ಬಚ್ಚಲಿಗೆ ಇಳಿದಳು. ತಲೆಗೆ, ಮೈಗೆ ಬಿಸಿಬಿಸಿ ನೀರು ಹಾಕಿಕೊಂಡಾಗ ಒಂದಿಷ್ಟು ಹಾಯೆನಿಸಿತು. ತೆಳ್ಳನೆಯ ಟವೆಲ್‌ನ್ನು ಕೂದಲಿಗೆ ಸುತ್ತಿಕೊಂಡು ಒಲೆಯ ಮುಂದೆ ಕುಳಿತುಕೊಂಡು ತುಸು ಹೊತ್ತು ಉರಿ ಕಾಸಿಕೊಂಡಳು. ಒಂದಿಷ್ಟು ಮೈ ಹಗುರ ಎನಿಸಿತು. ದಣಿದಿದ್ದ ದೇಹಕ್ಕೆ ವಿಶ್ರಾಂತಿ ಬೇಕೆನಿಸಿತು. ಕಣ್ಣಿಗೆ ನಿದ್ದೆಯ ಮಂಪರು ಆವರಿಸತೊಡಗಿತು. ಆಕಳಿಕೆಗಳು ಒತ್ತರಿಸಿಕೊಂಡು ಬರತೊಡಗಿದವು. ಪಡಶಾಲೆಯ ಒಂದು ಮೂಲೆಯಲ್ಲಿ ಅಡ್ಡಾಗಿ ಆಯಾಸವನ್ನು ಪರಿಹರಿಸಿಕೊಳ್ಳಬೇಕೆಂದು ಮನಸ್ಸಿಗೆ ಅನಿಸತೊಡಗಿತು. ಈ ಇಳಿ ಹೊತ್ತಿನಲ್ಲಿ ಮಲಗಿದರೆ, `ಇವಳೇನು ಸಂಜೀಮುAದ ಹೀಂಗ ಮಲಗತಾಳ? ಅನಿಷ್ಟ ಮುಂಡೆದು...' ಅಂತ ಅತ್ತಿಗೆಯರು ಅಂತಾರಂತ ಅಂದುಕೊಂಡಳಾದರೂ ನಿದ್ರಾದೇವಿ ಅವಳನ್ನು ಬಿಗಿದಪ್ಪಿಕೊಳ್ಳತೊಡಗಿದಳು. `ತುಸು ಹೊತ್ತು ರೆಪ್ಪೆಗೆ ರೆಪ್ಪೆ ಹಚ್ಚಿದ್ರೆ ಮೈ, ಮನಸ್ಸುಗಳು ಹಗುರಾದಾವು? ಯಾರು ಏನೇ ಅನ್ಲಿ, ನನ್ನಿಂದ ತಡ್ಕೊಳ್ಳಾಕಾಗವೊಲ್ತು. ಮಲಗಿಬಿಡುವೆ' ಎಂದೆನ್ನುತ್ತಾ ಸುಮಾ ಜಮಖಾನ ಹಾಸಿಕೊಂಡು ಮಲಗೇಬಿಟ್ಟಳು. ಗಡದ್ದಾಗಿ ನಿದ್ದೆಗೆ ಜಾರಿಯೂಬಿಟ್ಟಳು. ಸಂಜೆ ಆರು ಗಂಟೆಗೆ ಮಲಗಿದ ಸುಮಾಳಿಗೆ ಎಚ್ಚರವಾದದ್ದು ಎಂಟು ಗಂಟೆಗೇ. ಇನ್ನೂ ನಿದ್ದೆಯ ಮಂಪರಿತ್ತು. ಯಾರೋ ಮೆಲ್ಲಗೇ ಪಿಸುಗುಡುತ್ತಾ ಮಾತಾಡುವ ಧ್ವನಿ ಕೇಳಿಸಿತು. ಒಂದರೆಕ್ಷಣ ಕಣ್ಣು ಬಿಟ್ಟು ನೋಡಿದಾಗ ಅವಳ ಅತ್ತಿಗೆ ದ್ವಯರು ಮೆತ್ತಗೇ ಸಣ್ಣ ಧ್ವನಿಯಲ್ಲಿ ಮಾತಾಡುತ್ತಿದ್ದರು. ಅವರ ಮಾತುಗಳು ಸುಮಾಳ ಬಗ್ಗೆಯೇ ಇದ್ದವು. ಎದ್ದು ಕುಳಿತರೆ ಇವರ ಮಾತುಗಳಿಗೆ ಕಡಿವಾಣ ಬೀಳಬಹುದು. ಇವರೇನು ಮಾತಾಡಿಕೊಳ್ಳುತ್ತಾರೋ ಎಂಬ ಕುತೂಹಲ, ತವಕ ಸುಮಾಳ ಎದೆಯೊಳಗೆ. ಕೇಳಿಸಿಕೊಂಡು ಬಿಡೋಣ ಎಂದೆನಿಸಿತು ಸುಮಾಳಿಗೆ. ಹಾಗೇ ಕಣ್ಮುಚ್ಚಿಕೊಂಡು ಇನ್ನೂ ನಿದ್ದೆಮಾಡುವ ತರಹ ನಟಿಸುತ್ತಾ ಮಲಗಿಬಿಟ್ಟಳು.
****
"ಎಕ್ಕಾ, ಇದೇನು ಈ ಸುಮ್ಮೀ ನಮ್ ಮನ್ಯಾಗೇ ತಳ ಊರುವಂಗ ಕಾಣ್ಲಿಕತ್ತೇದಲ್ಲ...? ನಮಗೇ ಮೂಲಾಗ್ತಾಳೇನೋ? ಇವಳ ಇಬ್ರೂ ಅಣ್ಣ-ತಮ್ಮಂದಿರು ಈಕಿ ಗಂಡಗ ಹೊಡ್ದು, ಬಡ್ದು ಈಕೀನ ರ‍್ಕೊಂಡು ಬಂದಾರ." ಸುಮಾಳ ಚಿಕ್ಕ ಅತ್ತಿಗಿ ಶಿವಲೀಲಾಳ ಮಾತುಗಳು.
"ಏಯ್ ಶಿವೂ, ಈ ಗೊಡ್ಡೆಮ್ಮೆ ಸುಮ್ಮೀ ಇಲ್ಲಿಗೆ ಬಂದಿದ್ದು ನಮ್ಗೇ ಉಪಯೋಗ. ಹೆಂಗೂ ನಾವು ನಮ್ ಮನೀ ಮಂದೀಗೆ ಅಡುಗೆ ಮಾಡ್ತೀವಿ. ಅದ್ರಾಗ ಇವ್ಳೂ ರ‍್ಡೊಪ್ಪತ್ತು ಉಣ್ತಾಳಬಿಡು. ಇನ್ಮಾö್ಯಲೆ ಅದೇನಿದ್ರೂ ಇವ್ಳು ನಮ್ ಹೊಲ, ಮನಿ ಕೆಲ್ಸ ಮಾಡ್ಕೊಂಡು ಬಿದ್ದರ‍್ತಾಳ. ನಮ್ ಮಕ್ಳ ಹೇಲು-ಉಚ್ಚಿ ಬಳಿತಾಳ. ನಮ್ಗೆ ಮನಿ ಕಸ-ಮುಸುರಿ ಕೆಲ್ಸಾನೂ ಹಗುರ ಆಗ್ತದೆ. ನೀ ಅದಕ್ಯಾಕ ಅಷ್ಟು ಚಿಂತೀ ಮಾಡಾಕತ್ತೀದಿ...?" ಸುಮಾಳ ದೊಡ್ಡತ್ತಿಗಿ ಲಕ್ಮಿಯ ಮಾತುಗಳು.
"ಅಲ್ಲಬೇ ಎಕ್ಕಾ, ಸುಮ್ಮೀ ಮದುವ್ಯಾಗಿ ಆಗ್ಲೇ ಆರು ವರ್ಷ ಆದಂಗಾದ್ವು. ಇನ್ನೂ ಯಾಕ್ ಮಕ್ಳಾಗಿಲ್ಲೋ ಏನೋ...?"
"ಅದೇನೋ ಗೊತ್ತಿಲ್ಲ. ದೊಡ್ ಡಾಕ್ಟçತಾಕ ಹೋಗಿ ತೋರ‍್ಸಕೊಂಡು ಬಂದಾರಂತ. ಡಾಕ್ಟç ಪರೀಕ್ಷಾö್ಯದ ಈಕಿ ಗಂಡ ಪಾಸ್ ಆಗಾನಂತ. ಇವ್ಳು ಫೇಲ್ ಅಂತೆ. ಈಕಿಗೆ ಮಕ್ಳಾಗಂಗಿಲ್ಲ ಅಂತ ಹೇಳ್ಯಾರಂತ. ಈಕಿ ಗಂಡಗ ಗಂಡಸ್ತನ ಐತೆಂತ, ಇವ್ಳತಾಕ ಹೆಣ್ತನ ಇಲ್ಲಂತ. ನೋಡಾಕ ಸುಮ್ಮೀ ಮೈಕೈ ತುಂಬ್ಕೊಂಡು ಒಳ್ಳೇ ದುಂಡು ಮಲ್ಲಿಗಿ ಇದ್ದಾಂಗ ಅದಾಳ. ಇವ್ಳ ಕಡೆದ ಗೊಂಬಿ ಅಂತ ಮೈ, ಮುಖ, ಉಬ್ಬು, ತಗ್ಗುಗಳು ನನ್ಗಿಲ್ಲಲ್ಲ ಅಂತ ಹೊಟ್ಟೆ ಉರಿ. ಇವ್ಳ ರೂಪ ನೋಡಿ ನನ್ನೆದಿಯಾಗ ಖಾರ ಕಲ್ಸಿದಂಗಾಗತದ. ನೆದರು ಆಗಂಗ ಅದಾಳ. ಹರ‍್ಗಿಂದ ನೋಡಾಕಂತೂ ಬಾಳ ಅಂದ್ರೆ ಬಾಳಾನೇ ಚೆಲುವಿ. ಆದ್ರೆ ಒಳ್ಗ ಮೈಯಾಗ ಹುಳುಕು-ಗಿಳುಕು ಹತ್ಯಾದಂತ ಕಾಣ್ತದ. ಅದ್ಕೇ ಇವ್ಳ ಹೊಟ್ಯಾಗ ಕೂಸು-ಕುನ್ನಿ ಹುಟ್ಟಾಂಗಿಲ್ವೋ ಏನೋ? ನಮ್ಗರ ಏನ್ ಗೊತ್ತಾಗತದ? ರ‍್ಲಿಬಿಡು, ಇವ್ಳ ಪುರಾಣ ತೊಗೊಂಡು ನಾವರ ಏನ್ ಮಾಡೋದೈತಿ...? ನಮ್ಗಂತೂ ದೇವ್ರು ಮಕ್ಳು-ಮರಿ ಕೊಟ್ಟಾನ. ಶಿವೂ, ಇವ್ಳು ಗೊಡ್ಡೆಮ್ಮಿ ಅಂತ ಹಣೆಪಟ್ಟಿ ಕಟ್ಕೊಂಡು ಇಲ್ಲಿಗಿ ಬಂದಾಳ. ನಮ್ ಮನ್ಯಾಗ ದುಡ್ಸಿಕೊಂಡ್ರಾತು ಅಷ್ಟೇ. ಹೊಟ್ಟಿ-ಬಟ್ಟೆಗೆ ನಮ್ಗಂತೂ ಬರ ಇಲ್ಲಲ್ಲ...?"
"ಎಕ್ಕಾ, ಇವ್ಳ ಅಂದ, ಚೆಂದ ನನ್ಗಿಲ್ಲಲ್ಲ ಅಂತ ನನ್ಗೂ ಹೊಟ್ಟೆ ಕಿಚ್ಚು. ಇವ್ಳ ಅಂದ-ಚೆAದ ಕಟ್ಕೊಂಡು ನಮ್ಗೇನಾಗಬೇಕೈತಿ? ಬರೀ ಚೆಂದ ಇದ್ರ ಆತೇನು? ಒಂದು ಕೂಸೀನ್ನ ಹುಟ್ಸೋ ತಾಕತ್ತು ಇಲ್ಲ ಅಂದ್ಮಾö್ಯಲೆ ಅಂದ-ಚೆAದ ತೊಗೊಂಡು ಮಾಡೋದೇನೈತಿ? ಅಂದ-ಚೆAದಾನ ನೆಕ್ಕೊಂಡು ಕುಡ್ಯಾಕ ಆಗ್ತಾದೇನು? ಅದೇನೇ ರ‍್ಲಿಬಿಡು, ನಮ್ಗಂತೂ ಒಂದು ಫ್ರೀ ಹೆಣ್ಣಾಳು ಸಿಕ್ಕಂಗಾತು. `ಉಂಡೂಟ, ಆನೆಗೊಂದಿ ಸಂಬ್ಳ' ಅಂತ ಅದೇನೋ ಹೇಳ್ತಾರಲ್ಲ, ಹಂಗ. ಹೌದು, ಈ ಅರೆ ಹೊತ್ತಿನ್ಯಾಗ ಇವ್ಳು ಮಲ್ಗಿಬಿಟ್ಟಾಳಲ್ಲ, ಎಬ್ಬಿಸ್ಲೇನು...?"
"ಇಷ್ಟೊತ್ತಿನ್ಯಾಗ ಮಲ್ಗಿ ನಮ್ ಮನೀಗೆ ದರಿದ್ರ ಹಚ್ಬೇಕಂತ ಅದಾಳೋ ಏನೋ ಈ ಭೋಸುಡಿ...?. ಎಬ್ಬಿಸಿಬಿಡು, ಆಗ್ಲೇ ಉಣ್ಣಾ ಹೊತ್ತಾಗೇದ. ಇವ್ಳು ಆಗ್ಲೇ ನಿನ್ಗೆ ಮುಟ್ಟಾಗೀನಿ ಅಂತ ಏನೋ ಹೇಳ್ದಂಗಾತು...? ಸಜ್ಜಿ ಕೊಯ್ಯಾಕ ಹೋಗಿದ್ಳಲ್ಲ, ಒಂದೀಟು ದಣಿವು ಆಗರ‍್ಬೇಕು. ಎದ್ದು ಉಂಡು ಮಲಗಲಿ." ದೊಡ್ಡತ್ತಿಗಿ ಲಕ್ಷಿö್ಮ ಶಿವಲೀಲಾಳಿಗೆ ಆದೇಶ ನೀಡಿದಳು.
"ಹೌದಕ್ಕಾ, ಆಗ್ಲೇ ಈಕಿ ಮುಟ್ಟಾಗೀನಿ ಅಂತ ಹೇಳಿದ್ಳು. ಸರಿ ಸರಿ, ಎಬ್ಬಸ್ತೀನಿ" ಎಂದೆನ್ನುತ್ತಾ ಶಿವಲೀಲಾ ಸುಮಾಳ ಕಡೆಗೆ ಹೆಜ್ಜೆಹಾಕಿದಳು.
`ಅಂದ್ರೆ ಅಣ್ಣೋರು ನನ್ನ ಇಲ್ಲಿಗೆ ರ‍್ಕೊಂಡು ಬಂದಿರೋದು ನನ್ನ ಹಗ್ಲೂ-ರಾತ್ರಿ ದುಡಿಸಿಗ್ಯಾನಕ ಅಂತ ಕಾಣತಾದ. ಇವ್ರ ಮನಿ ಸಂಬ್ಳದಾಳು ಇದ್ದಂಗ ನಾ ರ‍್ಬೇಕು ಅಂತ ಅನಸ್ತದ. ಅಂದ್ರೆ ಇವ್ರ ಲೆಕ್ಕದಾಗ ನಾ ಪುಗಸಟ್ಟೆ ಸಿಕ್ಕಿರೋ ಸಂಬ್ಳದಾಳು ಅಷ್ಟೇ. ಇವ್ರು ಹಾಕಿದ ಕೂಳು ತಿಂದ್ಕೊಂಡು ಇವ್ರ ಮನ್ಯಾಗ ಜೀತದಾಳು ದುಡಿದಂಗ ದುಡೀತರ‍್ಬೇಕು. ಕುಂಡಿಗೊಂದು, ಬಂಡಿಗೊAದು ಅಂತ ಸೀರೆ ತಂದ್ಕೊಡ್ತಾರ ಅಂತ ಅನಸ್ತದ. ಈಗ ಇವ್ರು ಎಬ್ಸೋದ್ಕಿಂತ ಮುಂಚೆ ನಾನೇ ಎದ್ಬಿಡೋದು ಒಳ್ಳೇದು' ಅಂತ ಅಂದ್ಕೊಂಡು ಸುಮಾ ಮೈ ಮುರಿಯುತ್ತಾ ಎದ್ದೇ ಬಿಟ್ಟಳು.
"ಶಿವೂ ಅತ್ತಿಗಿ, ನಾ ಬಾಳ ಹೊತ್ತು ಮಲ್ಗಿಬಿಟ್ಟೆ ಅಂತ ಅನಸ್ತದ ಅಲ್ಲೇನು? ತಲಿಮ್ಯಾಲೆ ನೀರು ಹಾಕ್ಕೊಂಡ್ಮಾö್ಯಲೆ ಯಾಕೋ ನಿದ್ದಿ ಮಂಪರು ಬಂದ್ಬಿಡ್ತು. ಹಂಗೇ ಮಲ್ಗಿಬಿಟ್ಟೆ. ಕತ್ಲಾಗೋದ್ಕಿಂತ ಮುಂಚೆ ನೀನಾರ ಎಬ್ಸಿಸಬರ‍್ದಿತ್ತಾ...?" ಎಂದು ತನ್ನೆಡೆಗೆ ಬರುತ್ತಿದ್ದ ಶಿವಲೀಲಾಳಿಗೆ ಹೇಳಿದಳು ಸುಮಾ.
"ರ‍್ಲಿಬಿಡು. ಹೊಲ್ದಾಗ ಕೆಲ್ಸಮಾಡಿ ದಣ್ಕೊಂಡಿದ್ದಿ ಅನಸ್ತದ. ಅದೂ ಅಲ್ದೇ ತಲಿಮ್ಯಾಲೆ ನೀರೂ ಹಾಕ್ಕೊಂಡಿ. ಅದ್ಕೇ ನಿನ್ಗೆ ನಿದ್ದಿ ಬಂದರ‍್ಬೇಕು. ಈಗರ ಎದ್ದೆಲ್ಲ...? ಕೈಕಾಲು ಮುಖ ತೊಳ್ಕೊಂಡ್ಬಿಡು. ಹೊರಗಡೆ ಹೋಗಿರೋ ನಿನ್ನಣ್ಣಾರು, ನಿನ್ನಪ್ಪ ಬರೋ ಹೊತ್ತಾತು. ಇನ್ನೇನು ಬಂದಾರು. ನೀ ಅವ್ರ ಜೊತಿಗೇ ಕೂತು ಊಟಮಾಡ್ಬಿಡು. ಅತ್ತಿ ಇದ್ದಿದ್ರೆ ನಿನ್ಗೆ ಒಂದೀಟು ಅನುಕೂಲ ಆಗ್ತಿತ್ತು. ಆಕಿ ಬ್ಯಾರೆ ನಿನ್ ದೊಡ್ಡಕ್ಕನ ಊರಿಗೆ ಹೋಗ್ಯಾಳಲ್ಲ..." ಶಿವಲೀಲಾ ಮೆತ್ತಗೇ ಹೇಳಿದಳು.
ಸುಮಾಳ ಮನಸ್ಸು ತೊಳಲಾಟದಲ್ಲಿ ಬಿದ್ದಿತ್ತು. ಎದೆ ತಳಮಳಿಸುತ್ತಿತ್ತು, ನೋವಿನ ಕಿಚ್ಚು ಧಗಧಗಿಸುತ್ತಿತ್ತು. ವೇದನೆ, ಸಂಕಟ ವರ್ಣಿಸಲಸದಳವಾಗಿತ್ತು. ನೆಮ್ಮದಿ ಎಂಬುದು ಗಗನ ಕುಸುಮವಾಗಿತ್ತು. ಕುಂತಾಗ, ನಿಂತಾಗ ಎದೆಯೊಳಗೆ ಅದೇ ವಿಷಯ ಅನುರಣಿಸುತ್ತಿತ್ತು, ಟಕಟಕಿಸುತ್ತಿತ್ತು, ಕುಟುಕುತ್ತಿತ್ತು. `ನನ್ ಬದುಕಿನ ದಾರಿ ಇನ್ನೂ ಬಾಳ ಇದ್ರೂ ಮುಂದಿನ ದಾರೀನೇ ಕಾಣ್ಲರ‍್ದಂಗಾಗೈತೆ. ಕಾಣದ ದರ‍್ಯಾಗ ಹೆಂಗ ನಡೀಲಿ? ದಾರೀಗೆ ಜಿಡ್ಡಿ ಮುಳ್ಳು ಬಡ್ದುಬಿಟ್ಟಾರ. ಒಂದೂ ಅರ್ಥ ಆಗ್ಲರ‍್ದಂಗಾಗೈತಿ. ನಮ್ಮಣ್ಣಾರು ನನ್ನ ತವ್ರಿಗೆ ಎಳ್ಕೊಂಡು ಬಂದ್ಬಿಟ್ಟಾರ. ಮತ್ತೀಗ ನಾನೇನ್ ಮಾಡ್ಲಿ...? ಬೀರಪ್ಪ ದೇವ್ರೇ ನೀನ ನನ್ಗೆ ದಾರಿ ತರ‍್ಸಬೇಕು. ನಿನ್ಬಿಟ್ರೆ ನನ್ಗೆ ಯಾರಿದ್ದಾರೆ?' ಸುಮಾಳ ಮನಸ್ಸು ಯೋಚೆಗಳ ತಾಕಲಾಟದಲ್ಲಿ ಮುಳುಗಿತ್ತು.
****
ಸುಮಾ ಹೆತ್ತವರಿಗೆ ಎರಡನೇ ಹೆಣ್ಣು ಕೂಸು. ಸುಮಾಳ ಅಪ್ಪ ಗೊಲ್ಗೇರೆಪ್ಪ, ತಾಯಿ ಕಲ್ಲವ್ವ ದಂಪತಿಗಳಿಗೆ ಐದು ಜನ ಮಕ್ಕಳು. ಇಬ್ಬರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು. ಚೊಚ್ಚಲ ಮಗ ರಮೇಶ್. ಗೌರಮ್ಮ ಎರಡನೇ ಕೂಸು. ಮೂರನೆಯವ ಸುರೇಶ್. ನಾಲ್ಕನೆಯವಳು ಸುಮಾ. ಐದನೆಯವಳು ಕುಸುಮಾ. ಸುಮಾ ಹುಟ್ಟಿದ ಆರು ವರ್ಷಗಳ ನಂತರ ಕುಸುಮಾ ಹುಟ್ಟಿದ್ದು. ಕುಸುಮಾಳ ನಂತರ ಗೊಲ್ಗೇರೆಪ್ಪ, ಕಲ್ಲವ್ವ ದಂಪತಿಗಳಿಗೆ ಮುಂದೆ ಮಕ್ಕಳಾಗಲಿಲ್ಲ. ಗೊಲ್ಗೇರೆಪ್ಪನಿಗೆ ಎಂಟೆಕರೆ ಜಮೀನು, ನೂರೈವತ್ತು ಕುರಿ, ಎರಡು ಆಕಳು ಇವೆ. ಸುಮಾಳ ಅಣ್ಣಂದಿರು, ಅಕ್ಕನಿಗೆ ಮದುವೆ ಆಗಿದೆ. ಇನ್ನೂ ಮದುವಿ ಆಗದವಳೆಂದರೆ ಕುಸುಮಾ ಒಬ್ಬಳೇ.
ಸುಮಾಳಿಗೆ ಮದುವೆಯಾದಾಗ ಆಗಷ್ಟೇ ಹದಿನೇಳು ತುಂಬಿದ್ದವು. ಕಲ್ಲವ್ವ ತನ್ನಿಚ್ಛೆಯಂತೆ ತನ್ನ ದೊಡ್ಡಣ್ಣನ ಮಗ ವೆಂಕಟೇಶನಿಗೇ ಸುಮಾಳನ್ನು ಕೊಟ್ಟು ಮದುವೆಮಾಡಿದ್ದಳು. ಇದು ರಮೇಶ್ ಮತ್ತು ಸುರೇಶ್ ಅವರಿಗೆ ಅಷ್ಟಾಗಿ ಇಷ್ಟ ಇರಲಿಲ್ಲ. ಇವರ ಹೆಂಡAದಿರಾದ ಲಕ್ಷಿö್ಮ ಮತ್ತು ಶಿವಲೀಲಾರಿಗೆ ತಮ್ಮ ತವರಿನ ಕಡೆಯ ಸಂಬAಧಿಕರಿಗೆ ಸುಮಾಳನ್ನು ಕೊಡಬೇಕೆಂಬ ಮನಸ್ಸಿತ್ತು. ಆದರೆ ಅವರಾಸೆಗೆ ಕಲ್ಲವ್ವ ಕಲ್ಲು ಹಾಕಿದ್ದರಿಂದ ರಮೇಶ್ ಮತ್ತು ಸುರೇಶ್ ಅವರಿಗೆ ವೆಂಕಟೇಶ್ ಅಂದರೆ ಅಷ್ಟಕಷ್ಟೇ. ಹೀಗಾಗಿ ಸುಮಾಳ ಗಂಡನ ಮನೆಯವರೆಂದರೆ ಒಂದು ರೀತಿಯ ತಾತ್ಸಾರವೇ. ಗೊಲ್ಗೇರೆಪ್ಪ ಮಾತ್ರ ಒಂದು ರೀತಿ ತಟಸ್ಥನಾಗಿದ್ದ. ಇತ್ತ ಹೆಂಡತಿಗೂ ಹೇಳಲಾರದವನಾಗಿದ್ದ, ಅತ್ತ ಮಕ್ಕಳಿಗೂ ಹೇಳಲಾರದವನಾಗಿದ್ದ. ಶಿವನಿಚ್ಛೆ ಇದ್ದಂಗಾಗಲಿ ಎನ್ನುವ ಧೋರಣೆ ಆತನದು. ಸುಮಾಳ ಗಂಡ, ಅವನ ಹೆತ್ತವರಾದ ಪರಶುರಾಮಪ್ಪ, ಮಲ್ಲಮ್ಮ ದಂಪತಿಗಳು ಒಳ್ಳೆಯವರೇ. ಅವರಿಗೂ ಹೊಲ, ಮನೆಗಳಿದ್ದವು. ಗೊಲ್ಲರ ಸಂಪ್ರದಾಯದಂತೆ ಒಂದಿಷ್ಟು ಕುರಿಗಳೂ ಇದ್ದವು. ಇದ್ದುದು ನಾಲ್ಕು ಜನ ಮಕ್ಕಳು. ಮೂವರು ಹೆಣ್ಣು ಮಕ್ಕಳು, ವೆಂಕಟೇಶ್ ಒಬ್ಬನೇ ಗಂಡು ಮಗ. ವೆಂಕಟೇಶ್ ಒಳ್ಳೆಯ ಹುಡುಗನೇ. ಆತನ ವಾರಿಗೆಯ ಹುಡುಗರೆಲ್ಲರಿಗೂ ಕುಡಿಯುವುದು, ಹೊರಗಡೆ ತಿನ್ನುವುದು, ಗುಟ್ಕಾ ಹಾಕೋದು ಎಲ್ಲಾ ಚಟಗಳಿದ್ದರೂ ವೆಂಕಟೇಶನಿಗೆ ಯಾವ ಚಟಗಳೂ ಇರಲಿಲ್ಲ. ಹೀಗಾಗಿ ಸುಮಾಳಿಗೆ ವೆಂಕಟೇಶನೆAದರೆ ಬಲು ಪ್ರೀತಿ. ಹಾಗೇ ವೆಂಕಟೇಶನಿಗೆ ಸುಮಾಳೆಂದರೆ ಪಂಚಪ್ರಾಣ. `ನನ್ನ ಸುಮಾ ಚೆಲುವಿಯರಲ್ಲಿ ಚೆಲುವಿ' ಎಂದು ಮೀಸೆ ತಿರುವುತ್ತಾ ಬೀಗುತ್ತಿದ್ದ ವೆಂಕಟೇಶ್. ಅವರಿಬ್ಬರದು ಹಾಲು-ಜೇನಿನಂಥ ಸಂಸಾರ. ಮದುವೆಯಾದ ಹೊಸ ಹುರುಪಿನಲ್ಲಿ ದಿನಗಳು, ತಿಂಗಳುಗಳು, ವರ್ಷಗಳು ಕಳೆದಿದ್ದೇ ಗೊತ್ತಾಗಲಿಲ್ಲ. `ಸತಿ-ಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ' ಎಂಬಂತಿದ್ದರು. ಮದುವೆಯಾಗಿ ಎರಡು ವರ್ಷಗಳು ಸರಿದಾಗಲೂ ಸುಮಾ ಒಮ್ಮೆನೂ ಗರ್ಭಧರಿಸಲಿಲ್ಲ. ಮೂರನೇ ವರ್ಷ ಒಂದು ತಿಂಗಳು ಮುಟ್ಟು ನಿಂತಿತು. ನಿಂತಿದ್ದ ಮುಟ್ಟು ಬಹಳ ದಿನಗಳವರೆಗೆ ಉಳಿಯಲಿಲ್ಲ. ಆ ತಿಂಗಳ ಕೊನೆಗೆ ಸುಮಾ ಮತ್ತೆ ಮುಟ್ಟಾಗಿ ಅವಳ ಉದರದಲ್ಲಿ ಮೊಳಕೆಯೊಡೆದಿದ್ದ ಬೀಜ ನೆಲಕ್ಕುದುರಿಬಿಟ್ಟಿತು. ಸುಮಾ, ವೆಂಕಟೇಶ್ ಮತ್ತು ಅವನ ಹೆತ್ತವರಿಗೆ ನಿರಾಶೆಯಾಗಿತ್ತು.
ಆದಷ್ಟು ಬೇಗ ವಂಶದ ಕುಡಿಯನ್ನು ನೋಡುವ ತವಕ ಸುಮಾಳೆದೆಯಲ್ಲಿ ಅನುರಣಿಸುತ್ತಿತ್ತು. ಸುಮಾ ಗರ್ಭಿಣಿಯಾಗದಿದ್ದುದಕ್ಕೆ ಮಲ್ಲಮ್ಮನಿಗೆ ಚಿಂತೆಗಿಟ್ಟುಕೊAಡಿತು. `ಹುಡುಗಿ ನೋಡಾಕ ವೈನಾಗೇ ಇದ್ದಾಳ. ಮೈಲೆ, ಕೈಲೆ ಒಳ್ಳೇ ಲಕ್ಷಿö್ಮದೇವಿಯಂಗ ಅದಾಳ. ಗಂಡ, ಹೆಂಡ್ತೀನೂ ಬಾಳ ಚೆಂದಾಗೇ ಅದಾರ. ಆದ್ರೆ ಮಕ್ಳಾö್ಯಕ ಆಗವೊಲ್ವೋ ಏನೋ? ನಾನು ಮದುವಿಯಾದ ರ‍್ಡನೇ ತಿಂಗ್ಳಾನೇ ಹೊಟ್ಟೀಲಿ ಆಗ್ಬಿಟ್ಟಿದ್ದೆ. ನಮಗೋ ನಮ್ ಮೊಮ್ಮಕ್ಳನ್ನು ನೋಡುವ ಆಸೆ' ಎಂಬ ವಿಚಾರಗಳು ಮಲ್ಲಮ್ಮನ ಮನದಲ್ಲಿ ಓಡಾಡತೊಡಗಿದವು. ಕುಲದ ಸ್ವಾಮಿಗಳ ಹತ್ತಿರ ಸುಮಾಳನ್ನು ಕರೆದುಕೊಂಡು ಹೋಗಿ ತೋರಿಸಿದಳು. `ಮಲ್ಲಮ್ಮ, ನಿನ್ನ ಮನೀಗೆ ಮೊಮ್ಮಗ ರ‍್ತಾನ. ಯಾಕ ಅಷ್ಟು ಅವ್ಸರ ಮಾಡಾಕತ್ತೀದಿ? ಈಗಿನ ಹುಡುಗರು ನಿಮ್ಮ ಕಾಲದವರಂಗ ಅಲ್ಲ. ಅವ್ರಿಗೂ ನೂರೆಂಟು ಆಸೆ-ಆಕಾಂಕ್ಷೆಗಳು ರ‍್ತಾವ. ಈಗರ ಏನ್ ವಯಸ್ಸಾಗ್ಯಾದ ಇವ್ರಿಗೆ? ಸುಮ್‌ಸುಮ್ನೇ ಚಿಂತಿ ಮಾಡ್ಬಾö್ಯಡ. ಮಕ್ಳಾಗ್ತಾವ' ಎಂದು ಸಮಾಧಾನದ ನುಡಿಗಳನ್ನು ಹೇಳಿ ಕಳುಹಿಸಿದ್ದರು ಸ್ವಾಮಿಗಳು. ಮತ್ತೆ ಒಂದಿಷ್ಟು ತಿಂಗಳುಗಳು ಹಾಗೇ ಸರಿದು ಹೋದವು. ಸುಮಾ ನಿಜವಾಗಿಯೂ ಸಪ್ಪಗಾಗತೊಡಗಿದಳು. ಮುಖದಲ್ಲಿ ಚಿಂತೆಯ ಎಳೆಗಳು ಮೂಡತೊಡಗಿದವು. ಜೀವದ ಗೆಳತಿಯಂತಿದ್ದ ಹೆಂಡತಿ ಸಪ್ಪಗಾಗಿದ್ದನ್ನು ಗುರುತಿಸಿದ ವೆಂಕಟೇಶ್, `ಏಯ್ ಸುಮ್ಮೀ, ನೀ ಹಿಂಗ್ಯಾಕ ಆಗೀದಿ...? ಈಗಷ್ಟೇ ನಿನ್ಗೆ ಇಪ್ಪತ್ತು ತುಂಬ್ಯಾವ. ನಿನ್ ವಯಸಿನ ಬಾಳಷ್ಟು ಹುಡುಗ್ಯಾರಿಗೆ ಮದುವೇನೇ ಆಗಿರಂಗಿಲ್ಲ. ಸಿಟ್ಯಾಗಂತೂ ಮೂವತ್ತಾದ್ರೂ ಹುಡುಗೇರಿಗೆ ಕಂಕಣ ಬಲ ಕೂಡಿ ಬಂದಿರAಗಿಲ್ಲ. ನಮ್ ಜಾತ್ಯಾಗ ಇನ್ನೂ ಓದು-ಬರಹ ಕಡಿಮೆ. ಅದ್ಕೇ ಲಗೂನ ಮದುವೀನೂ ಆಗ್ಬಿಡ್ತದೆ. ನೀ ಇದನ್ನ ಮನ್ಸಿಗೆ ಹಚ್ಕೊಂಡು ಚಿಂತಿ ಮಾಡ್ಬಾö್ಯಡ. ನಾನದೀನಿ ನಿನ್ಜೊತಿಗೇ' ಎಂದು ಸಮಾಧಾನ ಮಾಡಿದ್ರೂ ಸುಮಾಳ ಮನಸ್ಸು, ಎದೆ ಹಗುರಗೊಳ್ಳಲಿಲ್ಲ. `ನಿನ್ನವ್ವ, ನಿನ್ನಪ್ಪನಿಗೆ ನಮ್ ಮಕ್ಳನ್ನು ಲಗೂನ ನೋಡ್ಬೇಕು, ಎತ್ಕೊಂಡು ಆಡ್ಸಬೇಕು ಅನ್ನೋ ಅಭಿಲಾಷೆ. ಅವ್ರಾಸೇನ ನನ್ಕೆöÊಲಿ ಜಲ್ದಿ ಈಡರ‍್ಸಾಕ ಆಗವೊಲ್ತಲ್ಲ ಅನ್ನೋ ನೋವು ನನ್ನೆದಿಯಾಗ ಕುದ್ಯಾಕತ್ಯಾದ.' `ಅದ್ಯಾವ್ದೂ ನಮ್ ಕೈಯಾಗ ಇಲ್ಲಲ್ಲ? ದೇವ್ರು ಕಣ್ಬಿಟ್ರೆ ಕಣ್ಮುಚ್ಚಿ ಕಣ್ಣು ತೆರೆದ್ರೊಳ್ಗೆ ಸಲೀಸಾಗಿ ಆಗ್ಬಿಡ್ತೆ. ಕೆಲವೊಬ್ರಿಗೆ ಲಗೂನ ಮಕ್ಳಾಗಂಗಿಲ್ಲ. ರ‍್ಲಿ ಬಿಡು, ಆದಾಗ ಆಗ್ಲಿ. ನಾವು ಮಾಡೋ ಪ್ರಯತ್ನ ಮಾಡಾನ.' ವೆಂಕಟೇಶ್ ಸುಮಾಳನ್ನು ಬಿಗಿದಪ್ಪಿಕೊಂಡು ಸಮಾಧಾನ ಮಾಡ್ತಿದ್ದ.
ಒಂದಿಷ್ಟು ಹೇಳಿಕೆ-ಕೇಳಿಕೆಗಳಾದವು; ಗುಡಿ-ಗುಂಡಾರ ಸುತ್ತೋದು ಆತು; ಗಿಡ-ಮರ ಪ್ರದಕ್ಷಿಣೆ ಹಾಕೋದು ಆತು; ಮನೆ ದೇವರಿಗೆ ದೀಡು ನಮಸ್ಕಾರ ಹಾಕಿದ್ದೂ ಆತು; ಗುರುವಾರ ಶಾಮೀದಲಿ ದರಗಾಕ್ಕ ಸಕ್ಕರೆ ಓದಿಸಿಕೊಂಡು ಬರೋದು ಆತು; ಹನ್ನೊಂದು ಸೋಮವಾರ ವೈಜನಾಥನ ಗುಡಿಗೆ ಹೋಗಿ ಬಂದದ್ದೂ ಆತು; ಇನ್ನು ಏನೇನೋ ಆದವು. ಅಷ್ಟರಲ್ಲಿ ಮತ್ತೊಂದು ವರ್ಷ ಸರಿಯಿತು. ಸುಮಾ-ವೆಂಕಟೇಶರ ದಾಂಪತ್ಯಕ್ಕೆ ನಾಲ್ಕು ವರ್ಷಗಳು ತುಂಬಿದವು. ಸೊಸೆಯ ಬಗ್ಗೆ ಮಲ್ಲಮ್ಮನ ಎದೆಯೊಳಗೆ ಅಪಸ್ವರ ಮೂಡತೊಡಗಿತು. `ಇವಳಲ್ಲಿ ಏನೋ ಐಬು ರ‍್ಬೇಕು; ಅದ್ಕೇ ಇವ್ಳ ಒಡಲು ತುಂಬಾಕತ್ತಿಲ್ಲ' ಎಂಬ ಒಡಕು ಧ್ವನಿ ಮನದಲ್ಲಿ ಪ್ರತಿಧ್ವನಿಸತೊಡಗಿತು. ಮದುವೆ, ಮುಂತಾದ ಶುಭಕಾರ್ಯಗಳಲ್ಲಿ ಸರೀಕರಾಡುವ ಚುಚ್ಚು ಮಾತುಗಳು ಮಲ್ಲಮ್ಮನ ಎದೆ ಇರಿಯತೊಡಗಿದವು. ಸುಮಾಳ ಮೇಲೆ ಅವಳೆದೆಯಲ್ಲಿ ಸಿಟ್ಟು ಮಡುವುಗಟ್ಟತೊಡಗಿತು. ಸುಮ್ಮಸುಮ್ಮನೇ ಅವಳ ಮೇಲೆ ರೇಗಾಡುವುದು, ಅವಳು ಮಾಡಿದ ಕೆಲಸಗಳಲ್ಲಿ ತಪ್ಪು ಹುಡುಕುವುದು, ನಡೆ-ನುಡಿಗಳನ್ನು ಅನುಮಾನಿಸುವುದು, ಕೊಂಕು ಮಾತಾಡುವುದು ಶುರುವಾಯಿತು. ಇದರಿಂದ ಸುಮಾಳ ನೊಂದ ಮನಸ್ಸಿನಲ್ಲಿ ಅಸಹಾಯಕತೆಯ ಕಿಚ್ಚು ಭುಗಿಲೇಳತೊಡಗಿತು. ಅತ್ತೆ-ಸೊಸೆಯರ ನಡುವಿನ ಮಧುರ ಬಾಂಧವ್ಯ ಹಳಸತೊಡಗಿತು.
ವೆಂಕಟೇಶ್ ಮತ್ತು ಸುಮಾ ಇಬ್ಬರೂ ಹುಬ್ಬಳ್ಳಿಗೆ ಹೋಗಿ ಪರಿಣಿತ ಡಾಕ್ಟರರ ಹತ್ತಿರ ತೋರಿಸಿಕೊಂಡು ಬಂದರು. ಏನೇನೋ ತಪಾಸಣೆ ಮಾಡಿದ ಡಾಕ್ಟರ್ ಕೊನೆಗೆ ವರದಿಗಳನ್ನು ವೆಂಕಟೇಶನ ಕೈಗಿಡುತ್ತಾ, `ವೆಂಕಟೇಶ್, ನೀನು ಫಲವತ್ತಾಗಿರುವಿ. ಆದರೆ ಸುಮಾಳ ಗರ್ಭಕೋಶದ ರಚನೆ ಸರಿಯಾಗಿಲ್ಲ. ಗರ್ಭ ಧರಿಸುವ ಸಾಧ್ಯತೆ ಇಲ್ಲವೇ ಇಲ್ಲ. ಆದರೂ ನಿಮ್ಮಿಬ್ಬರ ಸಂಸಾರಕ್ಕೆ ತೊಂದರೆ ಏನಿಲ್ಲ' ಎಂದು ಹೇಳಿದಾಗ ಸುಮಾ ಧರೆಗಿಳಿದು ಹೋದಳು. ವೆಂಕಟೇಶನೇ ಸುಮಾಳನ್ನು ಸಮಾಧಾನ ಮಾಡಿ ಊರಿಗೆ ಕರೆದುಕೊಂಡು ಬಂದ. ವಿಷಯ ತಿಳಿಯುತ್ತಲೇ ಮನೆಯಲ್ಲಿ ದೊಡ್ಡ ರಾದ್ಧಾಂತವೇ ಆಯಿತು.
"ವೆಂಕಟೇಶಾ, ಇಂಥಹ ಗೊಡ್ಡೆಮ್ಮೆ ಕಟ್ಕೊಂಡು ಹೈನ ಮಾಡಾಕ ಆಗಂಗಿಲ್ಲ. ಇವ್ಳು ನೋಡಾಕಷ್ಟೇ ಚೆಂದ. ಆದ್ರೆ ಒಳ್ಗೆ ಹುಳ ಹತ್ತಿದ ಬೀಜ. ಇವ್ಳ ಜೊತಿಗೇ ನೀ ಸಂಸಾರ ಮಾಡಿದ್ರೆ ನಮ್ ವಂಶ ಉದ್ಧಾರ ಆಗಂಗಿಲ್ಲ. ಇವ್ಳನ್ನು ಬಿಟ್ಬಿಟ್ಟು ನೀ ಬ್ಯಾರೆ ಹುಡುಗೀನ ಮದುವೆಯಾದ್ರೆ ಮಾತ್ರ ನಮ್ ವಂಶ ಬೆಳೀಲಿಕ್ಕೆ ಸಾಧ್ಯ. ಇವ್ಳನ್ನು ತವ್ರಿಗೆ ಅಟ್ಟಿಬಿಡು. ಆದಷ್ಟು ಲಗೂನ ಬ್ಯಾರೆ ಹುಡುಗಿ ಜೊತಿಗೆ ನಿನ್ ಮದುವಿ ಮಾಡ್ಬಿಡಾನ. ಇವ್ಳ ತಂಗಿ ಕುಸುಮಾ ಅದಾಳಲ್ಲ, ಅವ್ಳನ್ನು ನಿನ್ಗೆ ಕೊಡ್ತಾರೇನು ಅಂತ ಕೇಳಾಕ ನಿಮ್ಮಪ್ಪನಿಗೆ ಹೇಳ್ತೀನಿ. ಈ ಬಂಜಿ ಸಹವಾಸ ಸಾಕ್ಮಾಡು' ಅಂತ ಒರ‍್ಯಾಡಿದಳು, ಸುಮಾಳನ್ನು ಹಿಗ್ಗಾ-ಮಗ್ಗಾ ಬಯ್ದಳು ಅತ್ತೆ ಮಲ್ಲಮ್ಮ. ಸುಮಾಳಿಗೆ ಜೀವ ಕೈಗೆ ಬಂದAತೆ ಆಯಿತು. `ಇದೇ ಅತ್ತೆ ನನ್ನ ಹಾಡಿ ಹೊಗಳ್ತಿದ್ಳು. ನಾ ಬಂಜೆ ಅಂತ ಅಂದ್ಕೂಡ್ಲೇ ಎಲ್ಲಾ ಉಲ್ಟಾ-ಪಲ್ಟಾ. ನಾ ಬ್ಯಾಡಾಗ್ಬಿಟ್ಟೆ.' ಸುಮಾಳ ಗೋಳಾಟಕ್ಕೆ ಕೊನೆ ಇಲ್ಲದಂತಾಯಿತು. ವೆಂಕಟೇಶ್ ತಾಯಿಯ ಮುಂದೆ ಏನೂ ಮಾತಾಡಲಿಲ್ಲ. ಪರಶುರಾಮಪ್ಪನ ಮನೆ ಮಾತಿಲ್ಲದೇ ಮೂಕವಾಯಿತು.
****
ಸುಮಾಳ ಎದೆಯೊಳಗೆ ಅತ್ತೆಯ ಮಾತುಗಳೇ ಗಿರಕಿ ಹೊಡೆಯತೊಡಗಿದ್ದವು. `ಮುಂದೇನು...?' ಎಂಬುದು ಕಾಣದಾಗಿತ್ತು. ಆಗಷ್ಟೇ ಅವಳಿಗೆ ಇಪ್ಪತ್ಮೂರು ತುಂಬಿದ್ದವು. `ಗೊಡ್ಡೆಮ್ಮೆ ಎಂಬ ಹಣೆಪಟ್ಟೀನ ಕಟ್ಕೊಂಡು ಸಾಯೋಮಟ ಟುಕು ಟುಕು ಅಂತ ಉಸಿರಾಡೋದು ನರಕವೇ. ಮತ್ತೇನು ಮಾಡ್ಲಿ? ರ‍್ಲು-ಗರ‍್ಲು ಹಾಕ್ಕೊಂಡು ಸತ್ತೋಗಿ ಬಿಡ್ಲೇನು?' `ಏಯ್ ಹುಚ್ಚದಾ, ಮಕ್ಳಾಗ್ಲಿಲ್ಲ ಅಂದ್ಕೂಡ್ಲೇ ಸಾಯಾ ಯೋಚ್ನೆ ಯಾಕೆ...? ನಿನ್ನಂಗ ಮಕ್ಳಾಗ್ಲರ‍್ದವ್ರೆಲ್ಲ ಆತ್ಮಹತ್ಯೆ ಮಾಡ್ಕೊಂಡು ಸತ್ತು ಹೋಗ್ತಾರೇನು? ಮಕ್ಳಿಲ್ದಾನೂ ಜೀವನ ಮಾಡೋರು ಬೇಕಾದಷ್ಟು ಜನ ಅದಾರ. ನಿನ್ ಗಂಡಗ ಬ್ಯಾಡಾದಾಗ ನೀ ಬ್ಯಾರೆ ಯೋಚ್ನೆ ಮಾಡ್ಬೋದು. ಅವನ ಮನಸಿನ್ಯಾಗ ಏನೈತಿ ಅಂತ ತಿಳ್ಕೊಂಡು ಮುಂದೆ ನಿರ್ಧಾರ ತೊಗೋ. ಜೀವ ಇರೋದು ಜೀವ್ನ ಮಾಡೋಕೆ, ಸುಮ್‌ಸುಮ್ನೇ ಸಾಯಾಕಲ್ಲ...?' ಹೀಗೆ ಏನೇನೋ ಯೋಚನೆಗಳು ಸುಮಾಳ ಮನಸ್ಸನ್ನು ಮತ್ತಿಕ್ಕಿ ಕಾಡತೊಡಗಿದವು.
ಆ ರಾತ್ರಿ ಮನೆಯಲ್ಲಿ ಯಾರೂ ಸರಿಯಾಗಿ ಊಟಮಾಡಲಿಲ್ಲ. ಸುಮಾಳಂತೂ ಊಟಮಾಡಲೇ ಇಲ್ಲ. ವೆಂಕಟೇಶ್ ಕಣ್ಸನ್ನೆಯಲ್ಲೇ ಊಟಮಾಡಲು ಹೇಳಿದರೂ ಅವಳಿಗೆ ಊಟಮಾಡುವ ಮನಸ್ಸಾಗಲಿಲ್ಲ. ಒಡಲೊಳಗೆ ಉರಿ ಧಗಧಗಿಸುತ್ತಿರುವಾಗ ಊಟ ಸೇರೀತೇ...? ಮಾವನೂ ಊಟಮಾಡಲು ಒತ್ತಾಯಿಸಿದರೆ ಅತ್ತೆ ಮಾತ್ರ ಮುಖ ಊದಿಸಿಕೊಂಡು ಕುಳಿತಿದ್ದಳು. ಕಸ-ಮುಸುರೆ ಕೆಲಸ ಮುಗಿಸಿದಾಗಲೂ ವೆಂಕಟೇಶ ಹೆತ್ತವರ ಜೊತೆಗೆ ಗುಸುಗುಸು ಮಾತಿನಲ್ಲಿ ಮಗ್ನನಾಗಿದ್ದನ್ನು ಗಮನಿಸಿದ ಸುಮಾ ತಾನೊಬ್ಬಳೇ ಮಲಗುವ ಕೋಣೆ ಸೇರಿಕೊಂಡಳು. ಹಾಸಿಗೆಯಲ್ಲಿ ಮಲಗುವುದಕ್ಕೆ ಯಾಕೋ ಮನಸ್ಸಾಗಲಿಲ್ಲ. ಸುಮ್ಮನೇ ಕಿಟಕಿಯ ಹತ್ತಿರ ನಿಂತುಕೊAಡಳು. ಹೊರಗಡೆ ಹಾಲಿನಂತೆ ಬೆಳದಿಂಗಳಿತ್ತು. ಶುಭ್ರ ನೀಲಾಕಾಶದಲ್ಲಿ ಚಂದಿರ ಬೆಳದಿಂಗಳು ಚೆಲ್ಲುತ್ತಾ ಪಯಣಿಸತೊಡಗಿದ್ದ. ಚಂದ್ರನ ಸೊಬಗನ್ನು ನೋಡೇ ನೋಡಿದಳು. `ಚಂದ್ರ ತನಗಾಗಿ ಬೆಳಕನ್ನು ಬೀರುತ್ತಿಲ್ಲ. ನಿಷ್ಕಾಮಕರ್ಮಿ ಚಂದ್ರನAತೆ ನಾನೂ ಈ ಮನೆ ಬೆಳಗಬೇಕು. ಹೊಂದಾಣಿಕೆಯೇ ಜೀವನ' ಎಂದು ಮನದಲ್ಲೇ ಅಂದುಕೊAಡಳು ಯಾವುದೋ ನಿರ್ಧಾರ ತೆಗೆದುಕೊಂಡವಳAತೆ.
ಹೆತ್ತವರೊಂದಿಗೆ ಮಾತುಮುಗಿಸಿ ಮಲಗುವ ಕೋಣೆಗೆ ಬಂದ ವೆಂಕಟೇಶ್ ಕಿಟಕಿಯಲ್ಲಿ ನಭದಿಂದ ಭೂಮಾತೆಗೆ ಹಾಲ್ನೊರೆಯಂಥ ಬೆಳೆದಿಂಗಳನ್ನು ಚೆಲ್ಲುತ್ತಿದ್ದ ಚಂದ್ರಾಮನನ್ನು ನೋಡುವುದರಲ್ಲಿ ತಲ್ಲೀನಳಾಗಿದ್ದ ಸುಮಾಳನ್ನು ಕಂಡ. ಕಳ್ಳಬೆಕ್ಕಿನಂತೆ ಶಬ್ದ ಮಾಡದೇ ಹಿಂದಿನಿಂದ ನಿತಂಬಿನಿ ಸುಮಾಳನ್ನು ಒತ್ತಿಕೊಂಡು ನಿಂತು ಬಲಗೈಯಿಂದ ಕೊರಳನ್ನು ಬಳಸಿ ಅವಳ ಕುತ್ತಿಗೆ ಕೆಳಗಿನ ಮಾಟವಾದ ಬೆನ್ನಿಗೆ ತನ್ನ ತುಟಿಗಳನ್ನು ಒತ್ತಿದ. ಪ್ರಕ್ಷÄಬ್ಧಗೊಂಡಿದ್ದ ಸುಮಾಳ ಮನಸ್ಸಿಗೆ ವೆಂಕಟೇಶನ ತುಂಟಾಟ ತಂಪೆರೆಯತೊಡಗಿತು.
"ಅರೇ ವೆಂಕೂ, ನೀನ್ಯಾಗ ಬಂದಿ...?" ಹಿತವಾದ ಸಂವೇದನೆಗಳನ್ನು ಸೃಷ್ಟಿಸುತ್ತಿದ್ದ ಅವನ ತುಂಟಾಟಕ್ಕೆ ಹಿತವಾಗಿ ಮುಲುಗುತ್ತಾ ಸುಮಾ ಪ್ರಶ್ನಿಸತೊಡಗಿದಾಗ ವೆಂಕಟೇಶನ ಕೈಗಳು ನಿಧಾನವಾಗಿ ಕೆಳಗಿಳಿದು ಅವಳ ಸುಪುಷ್ಠವಾದ, ಸುಕೋಮಲ ಎದೆಶಿಖರಗಳಲ್ಲಿ ನೆಲೆನಿಂತವು. ಅವನ ಹಿಡಿತ, ಸ್ಪರ್ಶ ಅಪ್ಯಾಯವೆನಿಸಿತು. ಸುಮಾಳೆದೆಯಲ್ಲಿ ಪುಳಕ.
"ಸುಮ್ಮೀ, ನೀ ಆ ಚಂದಿರನ ಹಾಲ್ಬೆಳೆದಿಂಗಳು ನೋಡೋದ್ರಾಗ ಕಳೆದು ಹೋಗಿದ್ದೆಲ್ಲ, ಆಗ ಬಂದೆ. ಆ ಚಂದಿರನ ಮೇಲಿನ ದೃಷ್ಟಿ ಕದಲಿಸಿ ಈ ನಿನ್ನ ಜೀವಸಖ ಚಂದಿರನತ್ತ ಹರಿಸು" ಎಂದೆನ್ನುತ್ತಾ ವೆಂಕಟೇಶ್ ಸುಮಾಳನ್ನು ತನ್ನೆಡೆಗೆ ತಿರುಗಿಸಿಕೊಂಡ.
"ಇನ್ನೆಲ್ಲಿಯ ಜೀವಸಖ...? ಬೇರೊಬ್ಬ ಜೀವಸಖಿಯನ್ನರಸುತ್ತಾ ಹೊಂಟಿರುವ ಈ ಜೀವಸಖನ ಸಖ್ಯ ನನಗೆ ಗಗನ ಕುಸುಮಾನೇ..."
"ಪುಟ್ಟಾ, ಹೀಂಗ್ಯಾಕ ಮಾತಾಡಕತ್ತೀದಿ...? ನಾ ಯಾವತ್ತೂ ನಿನ್ನವನೇ ಕಣೇ. ನನ್ಜೀವ, ನಿನ್ಜೀವ ಒಂದಾಗರ‍್ವಾಗ ನಿನ್ನ ಬಿಟ್ಟು ನಾ ರ‍್ಲಿಕ್ಕಾಗ್ತದೇನು? ಮಕ್ಳು-ಮರಿ ಇಲ್ದೇ ನಾವಿಬ್ರೂ ಹೀಂಗೇ ಪ್ರಣಯ ಪಕ್ಷಿಗಳಂತೆ ಹಾರಾಡ್ತಾ ಇದ್ಬಿಡಾನ."
"ಅಯ್ಯೋ ಹಂಗAದ್ರೆ ನಮ್ಮ ವಂಶ ಬೆಳೆಯೋದು ಹೆಂಗೆ?"
"ಮುಂಡಾಮೋಚ್ತು...! ವಂಶಾಭಿವೃದ್ಧಿಗಾಗಿ ಪ್ರೀತೀನ ಕಳ್ಕೊಳ್ಳಾಕ ಆಗ್ತದೇನು?"
"ವೆಂಕೂ, ಹಂಗ್ ಅನ್ಬಾö್ಯಡ. ನೀ ಇನ್ನೊಬ್ಬಾಕೀನ ಮದುವ್ಯಾಗ್ಬೇಕು...!"
"ಯರ‍್ದಾದ್ರೂ ಕೂಸನ್ನು ದತ್ತಕ ತೊಗೊಂಡ್ರಾತು."
"ಅದು ನಮ್ ವಂಶದ ಕುಡಿ ಹೆಂಗಾಗ್ತದ? ನೀ ಬೀಜ ಬಿತ್ತಿದಾಗ್ಲೇ ನಮ್ ವಂಶದ ಕುಡಿಯ ಮೊಳಕೆ ಒಡೆಯೋದು."
ತುಸು ಹೊತ್ತು ಮೌನ ಆವರಿಸಿತು. ವೆಂಕಟೇಶ್ ಸುಮಾಳನ್ನೇ ದುರುಗುಟ್ಟಿಕೊಂಡು ನೋಡತೊಡಗಿದ.
"ಸುಮ್ನೇ ಹಂಗೆಲ್ಲ ನೋಡ್ಬಾö್ಯಡ. ನನ್ನತ್ತಿ ಮಾತು ನಡ್ಸಿಕೊಡು."
"ಮತ್ತೆ ನಿನ್ ಜೀವನ...? ನಿನ್ಗೆ ಅನ್ಯಾಯ ಆಗ್ತದಲ್ಲ?"
"ಮುಂಡಾಮೋಚ್ತು...! ನ್ಯಾಯ, ಅನ್ಯಾಯದ ಪ್ರಶ್ನೆ ಇಲ್ಲ ಇಲ್ಲಿ. ನಮ್ ವಂಶ ಬೆಳೀಬೇಕು ಅಷ್ಟೇ."
"ನೀ ಹೀಂಗಂತೀಯಾ...?"
"ಹೂಂ."
"ಆದ್ರೆ ಒಂದ್ ಕಂಡೀಶನ್..."
"ಏನು...?"
"ನೀ ನನ್ಜೊತಿಗೇ ರ‍್ಬೇಕು. ನೀನೇ ನನ್ಗೆ ಪಟ್ಟದ ರಾಣಿ. ಬರೋಳು ಬರೀ ಮಕ್ಕಳಿಗಾಗಿ. ನಮ್ ಪ್ರೀತಿ ಹರಿವ ನೀರಿನಂತೆ ನಿರಂತರವಾಗಿ ನಿನಾದ ಮಾಡ್ತಾ ರ‍್ಬೇಕು."
"ಬರೋಳು ಇದ್ಕೆ ಒಪ್ಬೇಕಲ್ಲ...?"
"ನನ್ ಕಂಡೀಶನ್‌ಗೆ ಅವ್ಳು ಒಪ್ಪೋದಾದ್ರೆ ರ‍್ಲಿ. ಇಲ್ಲಾಂದ್ರೆ ಬ್ಯಾಡ ಅಷ್ಟೇ ಸಿಂಪಲ್. ಅವ್ಳಿಗೆ ಖುಲ್ಲಂ ಖುಲ್ಲಾ ಎಲ್ಲಾ ತಿಳಸತೀನಿ."
"ಅಂದ್ರೆ ಇಬ್ರು ಹೆಂಡಂದ್ರಿಗೆ ನೀ ಮುದ್ದಿನ ಗಂಡನಾಗಿ ರ‍್ಬೇಕು ಅಂತೀದಿ ಅಲ್ಲೇನು...?"
"ಹೂಂ."
"ಮತ್ತೆ ನಿನ್ನವ್ವ ಇದ್ಕೆ ಒಪ್ತಾಳೇನು?"
"ನಾ ಅವ್ವನ್ನ ಒಪ್ಸತೀನಿ. ನಿನ್ತಂಗಿ ಕುಸುಮಾ ನನ್ ಕೈಹಿಡಿಬೋದೇನು...?"
"ಹೇಳ್ಲಿಕ್ಕಾಗಂಗಿಲ್ಲ. ಅಪ್ಪ-ಅವ್ವ, ಅಣ್ಣೋರು ಒಪ್ಬೇಕು ತಾನೇ...? ಪ್ರಯತ್ನಿಸಿ ನೋಡು. ಅವ್ಳಿಲ್ಲಾಂದ್ರೆ ಇನ್ನೊಬ್ಳು..."
"ಸರಿ, ಇನ್ನಾದ್ರೂ ಹಾಯಾಗಿ ಮಲಗೋಣ ಬಾ ನನ್ನರಗಿಣಿಯೇ..." ಎಂದೆನ್ನುತ್ತಾ ವೆಂಕಟೇಶ್ ಸುಮಾಳ ಮೊಗವನ್ನು ಬೊಗಸೆಯಲ್ಲಿ ಹಿಡಿದುಕೊಂಡು ಮನಸಾರೆ ಮುದ್ದಿಸುತ್ತಾ ಮಂಚಕ್ಕೆ ಕರೆದುಕೊಂಡು ಬಂದು, `ನಾವಿಬ್ರೂ ಯಾವಾಗ್ಲೂ ಹೀಗೇ ಒಂದಾಗಿರೋಣ' ಎಂದೆನ್ನುತ್ತಾ ಅವಳನ್ನು ಆವರಿಸಿದ.
****
ಸುಮಾಳ ತವರಿಗೆ ಸುದ್ದಿ ಮುಟ್ಟಿದಾಗ ಪರಶುರಾಮಪ್ಪನ ಮನೆಯವರ ಮೇಲೆ ಮೊದಲೇ ಕಿಡಿಕಾರುತ್ತಿದ್ದ ಅವಳ ಅಣ್ಣಂದಿರಿಬ್ಬರ ಮೈ ಉರಿದು ಹೋಯಿತು. `ಒಂದೇ ಹೆಣ್ಣನ್ನು ತೃಪ್ತಿಪಡಿಸಲಾರದ ವೆಂಕಟೇಶನಿಗೆ ನಮ್ಮ ಇನ್ನೊಬ್ಬ ತಂಗೀನೂ ಬೇಕಾ...? ಥೂ ನೀಚ...! ನಾಚಿಕೆಗೆಟ್ಟವನೇ...' ಅವುಡುಗಚ್ಚಿ ಒರ‍್ಯಾಡಿದರು. ಸುರೇಶ್, ರಮೇಶ್ ಇಬ್ಬರೂ ಸುಮಾಳ ಊರಿಗೆ ದೌಡಾಯಿಸಿ ವೆಂಕಟೇಶನಿಗೆ ಚೆನ್ನಾಗಿ ಥಳಿಸಿ ಸುಮಾಳನ್ನು ಎತ್ತಾಕಿಕೊಂಡು ಬಂದರು.
ಅಣ್ಣ, ಅತ್ತಿಗೆಯರ ಮಸಲತ್ತು ಅರ್ಥವಾದಾಗ ಸುಮಾ ಆ ರಾತ್ರಿ ವೆಂಕಟೇಶನೊAದಿಗೆ ಫೋನಲ್ಲಿ ಮಾತಾಡಿದಳು. ಮರು ದಿನ ಬೆಳ್ಳಂಬೆಳಗ್ಗೆ ವೆಂಕಟೇಶ್ ಬೈಕೇರಿ ಸುಮಾಳ ಮನೆಗೆ ಬಂದ. ವೆಂಕಟೇಶನಿಗೆ, ಸುಮಾಳ ಅಣ್ಣಂದಿರಿಗೆ ವಾಗ್ವಾದವಾಯಿತು. ಸುಮಾ, `ನನ್ನ ಗಂಡನಿಗೆ ತಂಗಿ ಕುಸುಮಾಳನ್ನು ಕೊಡಾಕ ಮನಸ್ಸಿಲ್ಲಾಂದ್ರೆ ಬ್ಯಾಡಬಿಡಿ. ಆದ್ರೆ ನಾನಿಲ್ಲಿ ಇರಂಗಿಲ್ಲ. ನನ್ಗೆ ನನ್ಗಂಡ ಬೇಕು' ಎಂದೆನ್ನುತ್ತಾ ಹೆತ್ತವರಿಗೆ ನಮಸ್ಕರಿಸಿ ವೆಂಕಟೇಶನ ಬೈಕೇರಿದಳು. ಬೈಕ್ ನಾಗಾಲೋಟದಲ್ಲಿ ಓಡತೊಡಗಿತು. ಸುಮಾಳ ಹೆತ್ತವರು, ಅಣ್ಣಂದಿರು, ಅತ್ತಿಗೆಯರು, ಕುಸುಮಾ ಎಲ್ಲರೂ ಬಿಟ್ಟ ಕಣ್ಣುಗಳಿಂದ ಅವರನ್ನೇ ನೋಡುತ್ತಾ ನಿಂತರು.
ಪಕ್ಕದ ಊರಿನ ಸಿದ್ರಾಮಪ್ಪನ ಮಗಳು ಲಲಿತಾ ವೆಂಕಟೇಶನ ಕಂಡೀಶನ್‌ಗೆ ಒಪ್ಪಿ ಗುರು-ಹಿರಿಯರ ಸಮಕ್ಷಮದಲ್ಲಿ ಅವನ ಕೈಹಿಡಿದು ವೆಂಕಟೇಶನ ಮೈಮನಗಳನ್ನು ತುಂಬುವುದರ ಜೊತೆಗೆ ಸುಮಾಳ ಮನಸ್ಸನ್ನೂ ತುಂಬಿದಳು. ಸುಮಾ, ಲಲಿತಾ ಇಬ್ಬರೂ ವೆಂಕಟೇಶನಿಗೆ ಮುದ್ದಿನ ಹೆಂಡAದಿರಾದರು. ವರ್ಷ ತುಂಬುವುದರೊಳಗೆ ಲಲಿತಾ ಗಂಡು ಮಗುವಿಗೆ ತಾಯಾಗಿ ಮನೆಯವರೆಲ್ಲರ ಮೊಗಗಳಲ್ಲಿ ನಗೆ ಅರಳಿಸಿದಾಗ ಸಂಭ್ರಮವೋ ಸಂಭ್ರಮ. ತಳಮಳಿಸುತ್ತಿದ್ದ ಸುಮಾಳ ಎದೆಯೊಳಗೆ ತಂಪಿನ ಸಿಂಚನ.
-ಶೇಖರಗೌಡ ವೀ ಸರನಾಡಗೌಡರ್,
ಕನ್ನಡದ ಬರಹಗಳನ್ನು ಹಂಚಿ ಹರಡಿ
ಧನ್ಯವಾದಗಳು