ನಾಲ್ಕು ವರ್ಷದ ವಿಭಾ ಶಾಲೆಯಿಂದ ಬರುವಾಗ ಸಪ್ಪಗಿದ್ದಳು. ಅವಳ ತಾಯಿ ರಮ್ಯ’ ಏನಾಯ್ತು ಪುಟ್ಟ?’
ಅಂತ ಕೇಳಿದರೆ ಉತ್ತರಿಸಲಿಲ್ಲ. ಮರುದಿನ ‘ಅಮ್ಮ, ನಾನು ಶಾಲೆಗೆ ಹೋಗಲ್ಲ ‘ಅಂತ ಅಳತೊಡಗಿದಳು . ಏನಾಯ್ತು ಅಂದರೆ ಸುಮ್ಮನೆ ಅಳತೊಡಗಿದಳು.
ಆದರೂ ಅವಳನ್ನು ಸ್ನಾನಕ್ಕೆ ಕರಕೊಂಡು ಹೋದಾಗ ತಾಯಿಗೆ ದಿಗಿಲಾಯಿತು. ಅವಳನ್ನು ತಕ್ಷಣ ಡಾಕ್ಟರರಲ್ಲಿ ಕರಕೊಂಡು ಹೋದಳು.ಆಗ ವಿಭಾಳ ಮೇಲೆ ನಡೆದ ಅತ್ಯಾಚಾರ ನಡೆದಿದೆ ಎಂದು ತಿಳಿಯಿತು. ರಮ್ಯಾಳ ರಕ್ತ ಕುದಿಯಿತು. ವಿದ್ಯಾ ದೇಗುಲದಲ್ಲಿ ನೀಚ ಕೃತ್ಯ!
ಒಂದಲ್ಲಾ ಒಂದು ಶಾಲೆಯಲ್ಲಿ ಈ ರೀತಿ ನಡೆಯುತ್ತಿದೆ.
ಶೀಜ ಉದ್ಯೋಗಸ್ಥೆ. ಅವಳೂ ಅವಳ ಪತಿಯೂ ಕೆಲಸದಿಂದ ಹಿಂದಿರುಗುವಾಗ ತಡವಾಗುತ್ತಿತ್ತು.
ಮನೆಯಲ್ಲಿ ಅವಳ ಅತ್ತೆ ಇದ್ದುದರಿಂದ ಅವಳ ಎಂಟು ವರ್ಷದ ಮಗಳು ಸಹನಾ ಶಾಲೆಯಿಂದ ಬರುವಾಗ ಆಕೆ ಒಬ್ಬಂಟಿಯಾಗುತ್ತಿರಲಿಲ್ಲ.
ಅದೊಂದು ದಿನ ಅಜ್ಜಿ ಊರಿಗೆ ಹೋದುದರಿಂದ ಶೀಜ ಪಕ್ಕದ ಮನೆಯವರಲ್ಲಿ ಸಹನಳನ್ನು ತಾನು ಬರುವ ತನಕ ನೋಡಿ ಕೊಳ್ಳಲು ಹೇಳಿದಳು. ಆಕೆ ಒಪ್ಪಿದರೂ ಅವಳಿಗೆ ಎಲ್ಲೋ ಹೋಗಬೇಕಾದುದರಿಂದ ಊರಿಂದ ಬಂದ ಅವಳ ತಮ್ಮನೊಂದಿಗೆ ಬಿಟ್ಟು ಹೋದಳು.
ಆತ ಸಹನಳೊಂದಿಗೆ ತಮಾಷೆ ಮಾಡುತ್ತಾ ಇನ್ನೊಂದು ಆಟ ಕಲಿಸುತ್ತೇನೆಂದು ಆಕೆಯ ಮೇಲೆ ಅತ್ಯಾಚಾರ ಮಾಡಿ ಅಮ್ಮನಲ್ಲಿ ಹೇಳಬೇಡ ಅಂತ ಚಾಕೋಲೇಟ್ ಕೊಟ್ಟನು. ಆದರೆ ಅವನ ಕುಕೃತ್ಯ ತಾಯಿಗೆ ಗೊತ್ತಾಗಿ ಗಲಾಟೆ ಆಯಿತು. ಆ ಪಾಪಿ ಸೆರೆಯಾದನು. ಹೀಗಾದರೆ ಯಾರನ್ನು ನಂಬುವುದು?
ಚಂದನ ಹೆಸರಿಗೆ ತಕ್ಕಂತೆ ಸುಂದರಿ . ಆಕೆಯಲ್ಲಿ ಪ್ರೇಮ ನಿವೇದನೆ ಮಾಡಿದವರು ಅನೇಕ ಹುಡುಗರು. ಆಕೆ ತಿರಸ್ಕರಿಸಿದಾಗ ಆಕೆಯ ಮೇಲೆ ಆಸಿಡ್ ಸುರಿದ ಒಬ್ಬ ಕಿರಾತಕ. ಸ್ತ್ರೀಯರಿಗೆ ಸೌಂದರ್ಯವೂ ಶಾಪವೇ!
ಅನಾದಿ ಕಾಲದಿಂದಲೂ ಭಾರತದಲ್ಲಿ ಸ್ತ್ರೀ ಯರಿಗೆ ಪೂಜನೀಯ ಸ್ಥಾನವಿದೆ. ಆಕೆಯನ್ನು ಮನೆಯ ಲಕ್ಷ್ಮಿ ಅಂತ ಹೇಳುತ್ತಾರೆ.ಆಕೆಗೆ ಗೌರವವಿತ್ತು.ಆಕೆಯಿಂದಲೇ ಮನೆ ಬೆಳಗುವುದು ಎಂಬ ಅಭಿಪ್ರಾಯವಿತ್ತು.
ಮೈತ್ರೇಯಿ ,ಗಾರ್ಗಿಯಂತಹ ಸ್ತ್ರೀಯರು ಪುರುಷ ಸಮಾನವಾಗಿ ಹೋಮ ಹವನ ,ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು. ಅಂದರೆ ಆಗ ಸ್ತ್ರೀ ಯರಿಗೆ ಸ್ವಾತಂತ್ರ್ಯ ಇತ್ತು ಅಂತ ಸಾಬೀತಾಗುತ್ತದೆ.
ಆದರೆ ಯುಧಿಷ್ಠಿರನು ದ್ರೌಪದಿಯನ್ನೇ ಪಣವಾಗಿಟ್ಟನಲ್ಲವೇ? ಅಂದರೆ ಆಕೆಗೆ ಪ್ರತಿಭಟಿಸುವ ಸ್ವಾತಂತ್ರ್ಯ ಇಲ್ಲ ಅಂತಾಯ್ತು.
ಅದರೊಂದಿಗೇ ಆಕೆಯನ್ನು ಅಬಲೆ ಅಂತಲೂ ಕರೆದಿದ್ದರು.”ನ ಸ್ತ್ರೀ ಸ್ವಾತಂತ್ರ್ಯ ಅರ್ಹತಿ :” ಅಂತ ಹಿಂದಿನವರು ಹೇಳಿದ್ದಾರೆ. ಅಲ್ಲದೆ ಸ್ತ್ರೀ ಬುದ್ಧಿ ಮೊಣಕಾಲ ಕೆಳಗೆ , ಸ್ತ್ರೀ ಬುದ್ಧಿ ಪ್ರಳಯಾಂತಕ ಎಂಬ ಗಾದೆಯನ್ನೂ ಹುಟ್ಟು ಹಾಕಿದ್ದಾರೆ.ಎಂತಹ ವಿಪರ್ಯಾಸ!
ಕೆಲವು ದಶಕಗಳ ಹಿಂದಿನ ಸಮಾಜವನ್ನು ಸಿನೆಮಾ ,ಕಥೆ ಕಾದಂಬರಿಗಳ ಮೂಲಕ ತಿಳಿಯುವಾಗ ಸ್ತ್ರೀಯರು ಅದೆಂಥ ಕಷ್ಟ ಪಡುತ್ತಿದ್ದರು ಅಂತ ಅರ್ಥವಾಗುತ್ತದೆ. ಅದಕ್ಕೇ ಹೇಳಿರಬೇಕು ಸ್ತ್ರೀಯಾಗಿ ಹುಟ್ಟುವುದು ಶಾಪ ಅಂತ. ವೈಧವ್ಯ, ಸತಿ ಸಹಗಮನ ಮುಂತಾದ ಅನಿಷ್ಟ ಪದ್ಧತಿಗಳು, ಸಮಾಜದ ಹುಳುಕುಗಳು ಸ್ತ್ರೀಯರಿಗೆ ಶಾಪವಾಗಿದ್ದವು.
ಭಾರತದಲ್ಲಿ ಲಿಂಗ ತಾರತಮ್ಯ ಇದೆ.ಹುಡುಗ ಹುಡುಗಿಯರ ನಡುವೆ ಆಹಾರ ,ಕೆಲಸ , ಶಿಕ್ಷಣದಲ್ಲಿ ಲಿಂಗಭೇದ ಮನೆಯಿಂದಲೇ ಪ್ರಾರಂಭವಾಗುತ್ತದೆ. ಹೆಣ್ಣು ಶಿಶು ಮನೆಗೆ ಭಾರ ಎಂಬ ಅಭಿಪ್ರಾಯವಿದೆ.ಹಾಗಾಗಿ ಗರ್ಭದಲ್ಲಿರುವಾಗಲೇ ಲಿಂಗ ಪತ್ತೆ ಮಾಡಿ ಹೆಣ್ಣು ಶಿಶುವಾದರೆ ಗರ್ಭವನ್ನೇ ಹೊಸಕಿ ಹಾಕುತ್ತಾರೆ.ಅಕಸ್ಮಾತ್ ಹುಟ್ಟಿದರೆ ಶಿಶುವನ್ನೇ ಕೊಲ್ಲುತ್ತಾರೆ. ಸ್ತ್ರೀಯನ್ನು ಪೂಜಿಸುವ ದೇಶದಲ್ಲಿ ಇಂತಹ ದುರವಸ್ಥೆ. ಅದಕ್ಕೆ ಕಾರಣ ಗಂಡು ಮಕ್ಕಳಿಂದ ಕುಟುಂಬದ ಅಭಿವೃದ್ಧಿ ಆಗುವುದು ಎಂಬ ಅಭಿಪ್ರಾಯ.ಸತ್ತಾಗ ಮಾಡುವ ಕ್ರಿಯೆಗಳು ಗಂಡು ಮಕ್ಕಳಿಂದ ಆಗಬೇಕು ಎಂಬುದು ಸಂಪ್ರದಾಯ.ಅಲ್ಲದೆ ವರದಕ್ಷಿಣೆಯ ಪಿಡುಗು. ಈ ವರದಕ್ಷಿಣೆಯ ಪಿಡುಗು ಶಿಕ್ಷಿತ ಹುಡುಗಿಯರನ್ನೂ ಬಿಟ್ಟಿಲ್ಲ.ಒಬ್ಬ ಸರ್ಜನ್ ಒಬ್ಬ ಡಾಕ್ಟರನ್ನು ಮದುವೆಯಾಗಲು ಕೇಳಿದ ವರದಕ್ಷಿಣೆ ಐವತ್ತು ಕೋಟಿ!ಸ್ತ್ರೀ ಎಂದರೆ ಅಷ್ಟು ತಾತ್ಸಾರವೋ..ಅಲ್ಲ ಗಂಡಸಿನ ಅಹಂಕಾರವೋ?
ನಮ್ಮ ಸಮಾಜ ಸಂಕೀರ್ಣವಾದುದು. ಸಂಪ್ರದಾಯಗಳು ಆಯಾ ಜಾತಿ , ಧರ್ಮಕ್ಕೆ ಅನುಗುಣವಾಗಿ ಬದಲಾಗುತ್ತವೆ.ಕೆಲವು ಸಮಾಜದಲ್ಲಿ ಸ್ತ್ರೀಯರಿಗೆ ಏನೇನೂ ಸ್ವಾತಂತ್ರ್ಯ ಇಲ್ಲ. ಇನ್ನು ತೀರಾ ಕೆಳವರ್ಗದಲ್ಲಿ ಬಡತನವಿರುವಲ್ಲಿ ಗಂಡ ಹೆಂಡತಿಯರ ನಡುವೆ ಜಗಳ ಜಾಸ್ತಿ. ಕಾರಣ ಹೆಚ್ಚಿನ ಶ್ರಮಜೀವಿ ಗಂಡಸರು ಕುಡಿತಕ್ಕೆ ಬಿದ್ದು ದುಡಿದ ಹಣವನ್ನೆಲ್ಲಾ ಶರಾಬಿಗೆ ಹಾಕುತ್ತಾರೆ. ಅಲ್ಲದೆ ಹೆಚ್ಚಿನ ಹಣಕ್ಕೆ ಹೆಂಡತಿಯರನ್ನು ಪೀಡಿಸುತ್ತಾರೆ. ಆ ಸ್ತ್ರೀಯರಿಗೆ ಮದುವೆಯೇ ನರಕ. ತಾವು ದುಡಿದ ಹಣವೂ ಕೈ ಸೇರುವುದಿಲ್ಲ.
ವಿದ್ಯಾವಂತೆಯಾದರೂ ಮನೆಯಲ್ಲಿ ಶೋಷಣೆ ತಪ್ಪಿದ್ದಲ್ಲ. ಕೆಲವು ಉದ್ಯೋಗಸ್ಥ ಮಹಿಳೆಯರ ಸಂಬಳ ಸೇರುವುದು ಗಂಡ ಮತ್ತು ಆಕೆಯ ಜೋಂಯ್ಟ್ ಅಕೌಂಟಿಗೆ. ಬ್ಯಾಂಕ್ ಪಾಸ್ ಬುಕ್ ಗಂಡನ ಕೈಯಲ್ಲಿ. ಹಣ ಬೇಕಾದರೂ ಗಂಡನನ್ನು ಕೇಳಬೇಕು. ಇದು ಇನ್ನೊಂದು ರೀತಿಯ ಶೋಷಣೆ.
ಸ್ತ್ರೀಯಾಗಿ ಹುಟ್ಟುವುದು ಶಾಪವಲ್ಲವೇ?
ಸ್ತ್ರೀ ಶೋಷಣೆ ಎಲ್ಲಾ ಕ್ಷೇತ್ರಗಳಲ್ಲೂ ನಡೆದಿದೆ. ವಿದ್ಯಾ ದೇಗುಲಗಳಲ್ಲಿ, ಆಫೀಸುಗಳಲ್ಲಿ ವಿದ್ಯೆ ಕಲಿಸುವ ಶಿಕ್ಷಕರಿಂದ , ಅಧಿಕಾರಿಗಳಿಂದ ಚಪರಾಸಿಗಳ ತನಕ ಎಲ್ಲರೂ ನಾಲ್ಕು ವರ್ಷದ ಮಗುವಿನಿಂದ ಐವತ್ತು ವರ್ಷ ವಯಸ್ಸಿನ ಹೆಂಗಸರ ಮೇಲೂ ಲೈಂಗಿಕ ದೌರ್ಜನ್ಯ ನಡೆಸುತ್ತಾರೆ.ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಒಂಟಿಯಾಗಿ ಓಡಾಡುವುದೇ ಕಷ್ಟವಾಗಿದೆ. ಜನಸಂದಣಿಯಲ್ಲಿ ,ಬಸ್ಸುಗಳಲ್ಲಿ ,ಆಟೋಗಳಲ್ಲಿ…ಎಲ್ಲಿದೆ ಸ್ತ್ರೀಯರಿಗೆ ಸುರಕ್ಷತೆ?
ದಿನವೂ ಸ್ತ್ರೀಯರ , ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ವರದಿಯಾಗುತ್ತಲೇ ಇದೆ. ಯಾಕೆ ಹೀಗೆ? ಅತ್ಯಾಚಾರಿಗಳಿಗೆ ಅಕ್ಕ ತಂಗಿಯರಿಲ್ಲವೇ ಅಂತ ಕೇಳುತ್ತಾರೆ. ಆದರೆ ಅಕ್ಕ ತಂಗಿಯರ ಮೇಲೆ , ಮಗಳ ಮೇಲೆ ಅತ್ಯಾಚಾರ ಮಾಡುವ ಕೀಚಕರು ಸಮಾಜದಲ್ಲಿದ್ದಾರೆ.
ಈಗಂತೂ ಅಂತರ್ಜಾಲವಿದೆ. ಅದರ ಮುಖಾಂತರವೂ ದೌರ್ಜನ್ಯ ನಡೆಯುತ್ತಿದೆ. ಉದಾಹರಣೆಗೆ ಯಾವುದೋ ಹುಡುಗಿ ದಾರಿ ತಪ್ಪಿದರೆ ಅಥವಾ ಮೈ ತೋರಿಸುವ ಉಡುಗೆ ತೊಟ್ಟರೆ ಅದೆಂಥ ಕೆಟ್ಟ , ಅಸಹ್ಯ ಪದಗಳನ್ನು ಬಳಸುತ್ತಾರೆ! ನನಗೆ ಆಶ್ಚರ್ಯ ವೆಂದರೆ ಹಾಗೆ ಕಮೆಂಟಿಸುವವರಲ್ಲಿ ಮಧ್ಯವಯಸ್ಸಿನವರೂ ಇದ್ದಾರೆ
ಎಂಬುದು.ಫೇಸ್ಬುಕ್ ,ಇನ್ಷ್ಟಾಗ್ರಾಂ ಗಳಲ್ಲಿ ಅವರ ಸಂಸ್ಕಾರದ ಅನಾವರಣ ಆಗುತ್ತದೆ.
ಇದಕ್ಕೆಲ್ಲಾ ಪರಿಹಾರ ಏನು?
ಹುಡುಗರಿಗೆ ಬಾಲ್ಯದಲ್ಲಿಯೇ ಸಂಸ್ಕಾರ ಕಲಿಸಬೇಕು ಈಗಿನ ಕಾಲದಲ್ಲಿ ಮಕ್ಕಳ ಮೇಲೆ ಹೊರಗಿನ ಪ್ರಭಾವವೇ ಹೆಚ್ಚು.ಹಾಗಾಗಿ ಹೆತ್ತವರು ಗಂಡು ಮಕ್ಕಳ ಮೇಲೂ ಕಣ್ಣಿಟ್ಟಿರಬೇಕು. ಶೇಕಡಾ ಅರುವತ್ತರಷ್ಟು ಅತ್ಯಾಚಾರ ಮನೆಯವರಿಂದಲೇ ಅಥವಾ ಸಂಬಂಧಿಕರಿಂದಲೇ ನಡೆಯುವುದಂತೆ. ಹಾಗಾದರೆ ಸ್ತ್ರೀಯರಿಗೆ ರಕ್ಷಣೆ ಎಲ್ಲಿದೆ?
ಇಂದಿನ ಕಾಲದಲ್ಲಿ ಹುಡುಗಿಯರಿಗೆ ಅತ್ಯಾಚಾರದಿಂದ ತಪ್ಪಿಸಿಕೊಳ್ಳುವುದೇ ಸವಾಲು.ಹೆತ್ತವರಿಗಂತೂ ಹೊರಗೆ ಹೋದ ಮಗಳು ಸುರಕ್ಷಿತವಾಗಿ ಹಿಂದಿರುಗುವ ತನಕವೂ ಆತಂಕ.
ಅತ್ಯಾಚಾರಗಳನ್ನು ತಡೆಗಟ್ಟುವುದು ಹೇಗೆ? ಅದು ಸಾಧ್ಯವೇ? ಕಠಿಣ ಕಾನೂನಿನಿಂದ ಅತ್ಯಾಚಾರಗಳನ್ನು ತಪ್ಪಿಸಬಹುದೇ?
ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾದುದು ಅಪರೂಪ. ಯಾಕೆಂದರೆ ಅದಕ್ಕೆ ಗಲ್ಲು ಶಿಕ್ಷೆಯನ್ನು ವಿರೋಧಿಸುವ ಮಾನವ ಹಕ್ಕಿನ ರಕ್ಷಕರ ಆಕ್ಷೇಪವಿದೆ. ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಮಾಡಿ ಸುಟ್ಟು ಹಾಕಿದವರಿಗೂ ಸರಿಯಾದ ಶಿಕ್ಷೆ ಇಲ್ಲ. ನಿರ್ಭಯಾ ಕೇಸಿನ ಒಬ್ಬ ಅತ್ಯಾಚಾರಿ ಸ್ವತಂತ್ರನಾಗಿದ್ದಾನೆ. ಆತ ಅಪ್ರಾಪ್ತನಂತೆ.
ಹಾಗೆಂದು ಅತ್ಯಾಚಾರಿಗಳನ್ನು ಎನ್ಕೌಂಟರ್ ಮಾಡಿದರೆ ಅದನ್ನು ಮಾಡಿದ ಪೋಲೀಸರ ಮೇಲೆಯೇ ಕೇಸಾಗುತ್ತದೆ. ಇದೆಂಥ ವಿಪರ್ಯಾಸ! ಇಂತಿದೆ ನಮ್ಮ ಕಾನೂನು.
ಸಾಮೂಹಿಕ ಅತ್ಯಾಚಾರಗಳು, ಅತ್ಯಾಚಾರ ಮಾಡಿ ಕೊಲೆ ಮಾಡುವುದು ನಡೆಯುತ್ತಲೇ ಇದೆ. ಇತ್ತೀಚೆಗೆ ನಡೆದ ವೈದ್ಯೆಯೊಬ್ಬಳ ಮೇಲಿನ ಅತ್ಯಾಚಾರ, ಕೊಲೆ ಕೇಸಿನಲ್ಲಿ ಇನ್ನೂ ಆಕೆಯ ಮನೆಯವರಿಗೆ ನ್ಯಾಯ ಸಿಕ್ಕಿಲ್ಲ. ಸ್ತ್ರೀಯರಿಗೆಲ್ಲಿದೆ ರಕ್ಷಣೆ? ಕಾನೂನು ಮಾಡಿ ಅತ್ಯಾಚಾರ ತಡೆಯಬಹುದೇ? ಎನ್ಕೌಂಟರ್ ಅಲ್ಲದೆ ಬೇರೆ ಯಾವ ಉಪಾಯವಿದೆ? ಈ ವಿಷಯದಲ್ಲಿ ಹತಾಶೆಯಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಸ್ತ್ರೀ ಯಾಗಿ ಹುಟ್ಟುವುದು ಶಾಪ ಅಂತ ಅನಿಸುವುದಿಲ್ಲವೇ?
–ಪರಮೇಶ್ವರಿ ಭಟ್