ನುಡಿ ಸಿರಿ
ಕನ್ನಡವೇ ಶಕ್ತಿ ಕನ್ನಡವೇ ಯುಕ್ತಿ
ಕನ್ನಡವೇ ದೇವರಿಲ್ಲಿ ಕನ್ನಡವೇ ಭಕ್ತಿ..!
ಚಂದದಾ ಚಂದನವು
ಕನ್ನಡಿಗರ ಮನಸು
‘ಛಂದ’ದಾ ಹಂದರವು
ಕನ್ನಡದಲೆ ರಮಿಸು..!
ಸಕ್ಕರೆಗು ಸಿಹಿ ನೀಡೋ
ನುಡಿಯಂತೆ ನಾಡು
ಅಕ್ಕರೆಗು ಮುದ ನೀಡೋ
ಅಚ್ಚರಿಯ ನೀನಾಡು..!
ಸ್ವರ್ಗದಾ ಸಾಂಗತ್ಯ ,
ಖುಷಿಯಿಂದ ಕುಣಿದಾಡು
ಬೇರೇನಿಲ್ಲ ಕನ್ನಡವನೆ
ತೆರಿಗೆಯಾಗಿ ನೀಡು..!
ತುಟಿತೆರೆದರೆ ಉಲಿದಂತೆ
ಬಂಗಾರದ ವೀಣೆ
ಗರಿಬಿಚ್ಚಿದ ನವಿಲಂತೆ
ಅಕ್ಷರದ ಜೋಡಣೆ..!
ಇಲ್ಲಿ ಜನಿಸಿದ್ದೆ ಪುಣ್ಯವು
ನನ್ನವ್ವ ನಿನ್ನಾಣೆ
ನೆಮ್ಮದಿಗೆ, ನಿನ್ನಂತ ಉಪಮೆಯ
ಬೇರೆಲ್ಲೂ ನಾ ಕಾಣೆ..!
–ಮನು ಪುರ.
ಬಾಲ್ಯ..
ಆ ದಿನಗಳೆಷ್ಟು ಚಂದ
ನಾನಾಗಿನ್ನೂ ಮುಗ್ಧ ಕಂದ
ನಿತ್ಯ ತುಂಬಿ ತುಳುಕುವ ಆನಂದ
ಮರೆಯಾದ ನೆನಪು ಗಾಯದಗುರುತಿನಿಂದ..
ಜೇನಿನಂತಹ ಮಧುರ ಬಾಲ್ಯ
ಉಕ್ಕಿ ಹರಿವ ಎಲ್ಲರ ವಾತ್ಸಲ್ಯ
ಬೆಳಕಿನ ವೇಗದಂತಿಹ ಚೈತನ್ಯ
ಆ ಉತ್ಸಾಹ ಅದಮ್ಯ..
ಸಿಹಿ ಕಹಿ ನೆನಪುಗಳ
ನೋವುನಲಿವಿನ ಪರಿವೆಯೇ ಇರದ
ನಿನ್ನೆಯ ಕಳವಳ ನಾಳೆಯ ಕಾತುರವಿರದ
ಅಳಿಸಲಾಗದ ಅನುಭವ..
ಕ್ಯಾಮೆರಾದೊಳು ಸೆರೆಹಿಡಿಯದ
ಸಾಮಾಜಿಕ ಮಾಧ್ಯಮದಿ ಹಂಚಿಕೊಳ್ಳದ
ಒಡನಾಡಿಗಳೊಂದಿಗೆ ಹಂಚಿಕೊಳ್ಳುವ
ನೆನೆದರು ಸವೆಯದ ಪಯಣ..
–ನಿವೇದಿತ ಅನಂದ್
ಕನ್ನಡವೆಂದರೆ….
ಕನ್ನಡವೆಂದರೆ
ಹೆದ್ದಾರಿಯಲ್ಲ
ರಹದಾರಿಯೂ ಅಲ್ಲ
ಅದು ತೋಟದ ಹಾದಿ
ತುಳಿದಷ್ಟು
ಅಂಗಾಂಗ ಪುಳಕ
ರಸ ಕವಳದ ಜಳಕ
ಕನ್ನಡವೆಂದರೆ
ಮೃಗಾಲಯವಲ್ಲ
ಪಕ್ಷಿಗಳ ಪಂಜರವಲ್ಲ
ಅದು ನಿಸರ್ಗಧಾಮ
ಆಸ್ವಾದಿಸಿದಷ್ಟು.
ಕೋಗಿಲೆಗಳ ಇಂಪಿದೆ
ನವಿಲುಗಳ ನಾಟ್ಯವಿದೆ.
ಕನ್ನಡವೆಂದರೆ
ಖಾನಾವಳಿಯಲ್ಲ
ಅಂಗಡಿ ಮುಂಗಟ್ಟಲ್ಲ
ಅಮ್ಮನ ಅಡಿಗೆಮನೆ
ಇಲ್ಲಿ ಪ್ರತಿದಿನವೂ
ಪರಮಾನ್ನ ಬೇಯುತಿದೆ
ವಾತ್ಸಲ್ಯದ ಒಲೆಯಲಿ.
ಕನ್ನಡವೆಂದರೆ
ಬರಿ ಭಾಷೆಯಲ್ಲ
ಬರೆದಿಟ್ಟ ಅಕ್ಷರವಲ್ಲ
ಕನ್ನಡಿಗರುಸಿರು.
ಉಚ್ವ್ಛಾಸ ನಿಚ್ಛ್ಛಾಸದಲಿ
ದೇಹದ ಅಣು ಅಣುವಿನಲಿ
ಕನ್ನಡತನವಿರಲಿ.
ಕನ್ನಡಿಗರ ಉಸಿರೇ ಕನ್ನಡ
ಕರ್ನಾಟಕದ ಹೆಸರೇ ಕನ್ನಡ
ಎ.ಎಂ.ಪಿ ವೀರೇಶಸ್ವಾಮಿ
“ಎಮ್ಮ ಚೆಲುವ ಕನ್ನಡ ನಾಡು”
ಎದೆಯ ಸೀಳಿದರು ತುಂಬಿರಲಿ
ಜೀವ ತೆತ್ತರು ಗರ್ವದಿ ಉರಿಯಲಿ
ಎದೆ ತಟ್ಟುತ ಕನ್ನಡ ಕಹಳೆ ಮೊಳಗಲಿ
ನೆತ್ತರ ಕಣಕಣದಲೂ ಕನ್ನಡಪ್ರೇಮ ಹರಿಯಲಿ..!!
ಸಾವಿರ ಭಾಷೆಗಳೆ ಇರಲಿ
ಕರುನಾಡಲಿ ಕನ್ನಡವು ರಾಜನಂತೆ ರಾರಾಜಿಸುತಿರಲಿ
ಕನ್ನಡದ ಕಂಪು ಎಲ್ಲೆಡೆ ಹರಡಲಿ
ನದಿಸಾಗರಗಳಂತೆ ಉಕ್ಕಿ ಹರಿಯುತಿರಲಿ..!!
ಸಾಹಿತ್ಯ ಸಂಪನ್ನರ ಊರು
ಕುವೆಂಪು ರನ್ನ ಷಡಕ್ಷರಿ ಪಂಪರ ತವರೂರು
ಒಡೆಯರು ಆಳಿದ ನಾಡು
ಸರ್ವ ಜನಾಂಗದ ಶಾಂತಿಯ ತೋಟದ ಗೂಡು..!!
ಕರುಣೆ ಪ್ರೇಮ ಕಾಳಜಿವುಳ್ಳವರ ನಾಡು
ಅರಮನೆ ಶಿಲ್ಪಕಲೆಗಳ ಶ್ರೀಗಂಧದ ಬೀಡು
ಸಂಸ್ಕೃತಿ ಸಂಸ್ಕಾರ ನೆಲೆಸಿರುವ ಕರುನಾಡು
ವಿವಿಧತೆಯಲಿ ಏಕತೆಯಿರುವ ನಾಡು..!!
ಪವಿತ್ರ ನದಿಗಳು ಜನಿಸಿ ಹರಿಯುತ್ತಿರುವ ನಾಡು
ಬಗೆಬಗೆಯ ವೃಕ್ಷಗಳಿಂದ ತುಂಬಿದ ಕಾಡು
ಸ್ವಚ್ಛಂದವಾದ ಮನಸುಗಳಿರುವ ಹೆಮ್ಮೆಯ ನಾಡು
ನಮ್ಮ ಚೆಲುವಿನ ಕನ್ನಡನಾಡು..!!
ಭವ್ಯ ಸ್ಮಾರಕ ತಾಣಗಳ ನಾಡು ಎಮ್ಮದು
ಶಕ್ತಿದೇವರುಗಳು ನೆಲೆಸಿರುವ ನಾಡಿದು
ಜ್ಙಾನಪೀಠ ಪದ್ಮಶ್ರೀ ಭಾರತರತ್ನ ಪುರಸ್ಕೃತರ ಬೀಡು
ಪ್ರವಾಸಿ ರಸಿಕರ ಕಣ್ಮನ ಸೆಳೆವ ಕನ್ನಡನಾಡು..!!
ಸರ್ವಜ್ಞ ಜ್ಞಾನ ಪಾಂಡಿತ್ಯರು ನೆಲೆಸಿದಂತಹ ಊರು
ನಡೆದಾಡುವ ದೇವರುಗಳ ತವರೂರು
ಕೈಬೀಸುತ ಕರೆವ ಉದ್ಯಾನವನಗಳು
ಧುಮುಕುತ ಭೋರ್ಗರೆವ ಜಲಪಾತಗಳು..!!
ಸಹ್ಯಾದ್ರಿ ಪರ್ವತ ಕರಾವಳಿ ಸಮುದ್ರವಿದೆ
ವೈವಿಧ್ಯಮಯ ಪ್ರಾಣಿ ಸಂಕುಲಗಳಿವೆ
ಚಿಲಿಪಿಲಿ ಸದ್ದುಗದ್ದಲಿಸುವ ಬಾನಾಡಿಗಳಿವೆ
ಭಾವುಟದ ಪ್ರತೀಕವಾಗಿ ಅರಿಶಿಣ ಕುಂಕುಮ ಇಡುವರು ಹಣೆಗೆ..!!
ವನಿತೆಯರನು ಪೂಜಿಸಿ ಗೌರವಿಸುವ
ಹರಸಿ ಬಂದವರನು ಆಶ್ರಯಿಸಿ ಉಪಚರಿಸುವ
ಕೂಡಿ ಹಂಚಿ ತಿನ್ನುವ ಸ್ನೇಹ ಗುಣದ ಕನ್ನಡಿಗರಿರುವ
ಶಾಂತಿಯ ಬೀಡು ಎಮ್ಮಯ ಕನ್ನಡನಾಡು..!!
ಹೆಮ್ಮೆಯಿಂದ ನುಡಿವೆ ನಾ ಕನ್ನಡಿಗನೆಂದು
ಗರ್ವದಿ ಸಾರುವೆ ನಾ ಕರುನಾಡಿಗನೆಂದು
ಸಾರ್ಥಕವಾಯಿತೆಮ್ಮ ಜನ್ಮ ಈ ಪುಣ್ಯಧರೆಯಲ್ಲಿ
ಈ ನಾಡಲಿ ಹುಟ್ಟಿ ಬೆಳೆದು ಮಡಿವ ನಾವೆ ಭಾಗ್ಯವಂತರಿಲ್ಲಿ..!!
ಚಲುವೇಗೌಡ ಡಿ ಎಸ್
ಕಾವ್ಯ ವಂದನೆ
ಏನ ಬೇಡಲಿ ನಿನ್ನಲಿ ತಾಯೆ
ನೀ ಸವಿ ಹೊನ್ನುಡಿಯ ಮಾಯೆ
ರಸ ಋಷಿಯ ಹರಸಿದ ತಾಯೆ
ಪದಗಳ ಕರುಣಿಸೆನ್ನ ಕಾಯೆ.
ಪಾವನ ನದಿಯು ನಿನ್ನ ನುಡಿಯು
ಸೇರಿಸು ದಡವ ದುಡುಕದ ಮುನ್ನಡೆಯು
ಪದಗಳೆಲ್ಲ ಪಾದುಕೆಗೆ ಅರ್ಪಣೆಯು
ಕಾವ್ಯ ಕುಸುಮದ ಆಸ್ವಾದನೆಯು.
ಸೊಬಗ ಹೊತ್ತ ನಿನ್ನ ಸೌಂದರ್ಯ
ಪುಳಕಿತ ಕವಿಯ ಆಂತರ್ಯ
ಅಂತರಂಗದಿ ಮೊಳಗಿ ಮಾಧುರ್ಯ
ಮಂಗಳವು ನೀ ಹರಸಿದ ಕಾರ್ಯ.
ಲೇಖನಿ ಬರೆಯಲಿ ಮಧುರ ಪದಗಳ
ನೀ ಬಯಸಿದಂತೆ ಚೆಲುವಾಗಲಿ ಅಂಗಳ
ಹರಸು ನೀ ಎಳೆಯ ಈ ಕರಗಳ
ಕನ್ನಡಾಂಬೆ ಅರ್ಪಿಸುವೆ ಕುಸುಮಗಳ.
–ನಿರಂಜನ ಕೇಶವ ನಾಯಕ
ನಮ್ಮ ಕರುನಾಡು
ನಾವಾಡುವ ನಲಿದಾಡುವ ತಾಣವಿದು
ತೆಂಗು ಕಂಗು ಮಾಮರಗಳ ಬೀದಿಯಲ್ಲಿ
ಭತ್ತ ರಾಗಿ ಜೋಳ ಹಲವು ಬೆಳೆಗಳಾವರಣದಲ್ಲಿ
ಹಚ್ಚ ಹಸಿರಾಗಿದೆ ನಾಡು,
ನೀಲ ಗಗನದಂಚಿನಲ್ಲಿ
ಗಿರಿ ಶಿಖರಗಳ ನಡುವಲ್ಲಿ
ನದಿ ಸರೋವರಗಳ ತಟದಲ್ಲಿ
ಜಲಪಾತಗಳ ಮಡಿಲಲ್ಲಿ
ಅನಂತ ತಾರಾಗಣದಂತೆ ಕಣ್ಮನಸೆಳೆಯುತ್ತಿದೆ
ಸಮೃದ್ಧಿಯ ಕರುನಾಡು,
ಗುಹ್ಯ ಗುಹಾಲಯಗಳು
ದೇವಾಲಯಗಳು
ಐತಿಹಾಸಿಕ ಪೌರಾಣಿಕ ಸಂದೇಶವ ಸಾರುತ್ತಿವೆ.
ನಾಡು ನುಡಿಗಾಗಿ ಹೋರಾಡಿದ
ಮಹನೀಯರ ಸ್ಮರಿಸುತ್ತಿರಲಿ ನಮ್ಮ ಬೀಡು
ಪರ ಊರಿಗರಿಗೆ, ವಲಸಿಗರಿಗೆ
ಹೆಮ್ಮಯಿಂದ ಸ್ವಾಗತ
ಉಂಡ ಮನೆಗೆ ಕನ್ನ ಹಾಕದಿರೆನ್ನುತಾ!
ದ್ವೇಷಭಾವವ ತೊರೆಯಲಿ…
ಪ್ರೇಮಭಾವವು ಉಳಿಯಲಿ.
–ರೋಹಿಣಿ ಕೊಣಾಲ್
ಹೊನ್ನನುಡಿಯು ಕನ್ನಡ
ಮೊಳಗಲಿ ಬೆಳೆಯಲಿ
ಮಾರ್ದನಿಸುತ ಕನ್ನಡ
ಕಳೆಯಲೀ ತೊಲಗಲಿ
ಮುತ್ತಿರುವ ಜಂಜಡ.
ಪರಭಾಷೆಯ ಪಂಜರದಲಿ
ಪರಿತಪಿಸುತಿದೆ ತಾಯ್ನುಡಿಯು.
ಮುಕ್ತಿ ಹೊಂದಿ ಮೊಳಗಲಿ
ಮನಮನದಲಿ ಚೆನ್ನುಡಿಯು.
ತುಂಗಭದ್ರೆ ಕಲರವದಲು
ತಾಯಭಾಷೆ ಜುಳುಜುಳಿಸಲಿ.
ಗುಡಿಯ ಘಂಟೆಯ ಡಣಡಣದಲು
ಶುಭವಾಗಿ ರಿಂಗಣಿಸಲಿ.
ಸಹ್ಯಾದ್ರಿಯ ಗಿರಿವನದಲಿ
ತಾಯಹಾಡು ಕೇಳಿ ಬರಲಿ.
ಆ ಹಾಡಿನ ದನಿ ದನಿಗೆ
ಚುಕ್ಕಿ ತಾರೆ ನಲಿಯಲಿ.
ಹೊನ್ನ ನುಡಿಯು ಕನ್ನಡವು
ಜೇನಿಗಿಂತ ಸವಿಯು
ಮುನ್ನ ನುಡಿಯಲು ಮಧುರವಾಗಿ
ಮಂಗಳವು ದಿನದಿನವು.
–ಸರೋಜ ಪ್ರಶಾಂತಸ್ವಾಮಿ ಬಿ.ಎಂ.
ಸಂಭ್ರಮದ ನಾಡಹಬ್ಬ
ನಾಡಹಬ್ಬವು ಕರ್ನಾಟಕದಲಿ
ನೋಡಬನ್ನಿರಿ ಸಂಭ್ರಮದಿ
ಹಾಡು ನೃತ್ಯವು ಯಕ್ಷಗಾನವು
ಮೋಡಿ ಮಾಡಿವೆ ಬಲು ಮುದದಿ
ಹಳದಿ ಕೆಂಪಿನ ಧ್ವಜವು ಹಾರಲು
ಕಳೆಯದೆಲ್ಲೆಡೆ ಹೆಚ್ಚುವುದು
ಮಳೆಯ ಸಿಂಚನವಾಗೆ ತನುಮನ
ಪುಳಕಗೊಳ್ಳುತ ನಲಿಯುವುದು
ನುಡಿಯೆ ಕನ್ನಡ ಮಾತೆ ಸರಸತಿ
ಮುಡಿಗೆ ಹೊನ್ನಿನ ಮುಕುಟಸರ
ಅಡಿಯನಿಟ್ಟರೆ ಬಿಡದ ಸೆಳೆತವು
ನಡೆಯೆ ಸೋಜಿಗವಿದು ಮಧುರ
ಕರುನಾಡಿದು ಸಂಸ್ಕೃತಿಯ ನೆಲೆ ಭೋ
ರ್ಗರೆವ ಕಡಲಿನ ನಾದಮಯ
ಸುರಿವ ವರ್ಷದ ಧಾರೆಯಂದವು
ಧರಣಿಯೊಡಲೇ ಗಾನಮಯ
ಎನಿತು ಬಣ್ಣಿಸಲರಿಯೆ ನಿಜದಲಿ
ಮನದ ಭಾವವು ಸೋತಂತೆ
ಜನರ ಮೆಚ್ಚಿನ ಭಾಷೆ ಕನ್ನಡ
ದಿನಪ ಸೂಸುವ ಬೆಳಕಂತೆ
–ಲತಾ ಧನು ಆಚಾರ್ಯ
ಜೀವನವಿದು ಅಳಿವು ಉಳಿವಿನ ತೂಗುಯ್ಯಾಲೆ
ಈ ಜಗದೊಳು ಮನುಜನಾಗಿ ಜನಿಸಿರುವೆ
ಎಲ್ಲ ಬಲ್ಲ ಜೀವಿ ನೀನೆಂದುಕೊಂಡಿರುವೆ
ನಿನಗಾಗಿ ಕಲಿಯುವೆ ಬದುಕಿ ಬಾಳುವೆ
ಆದರೂ ನನ್ನಿಂದಲೇ ಜಗವೆಲ್ಲ ಎಂದು ಬೀಗುವೆ
ಬಂದಾಗ ಕತ್ತಲೆ ಹೋಗುವಾಗ ಬೆತ್ತಲೆ
ನಡುವಿನ ಬದುಕಲಿ ಅಹಂಕಾರದ ಅಮಲೆ
ಮದ ಮೋಹ ಮತ್ಸರದ ಶರೀರವಿದು ನಶ್ವರವೆನ್ನಲೆ
ಜೀವನವಿದು ಉಳಿವು ಅಳಿವಿನ ತೂಗುಯ್ಯಾಲೆ
ಗಳಿಸಿದ್ದು ಉಳಿಸಿದ್ದು ಎಲ್ಲವೂ ಇಲ್ಲಿಯೇ
ನನ್ನವರು ನಮ್ಮವರು ಇರುವರೆಮ್ಮ ಮನದಲ್ಲಿಯೇ
ಬಂದದ್ದು ಹೋಗುವುದೆಲ್ಲ ಬರೀ ಶೂನ್ಯದಲ್ಲಿಯೇ
ಏಳುಬೀಳುತಿರಬೇಕು ಈ ಭವಸಾಗರದಲ್ಲಿಯೇ
ಜಂಜಾಟದ ನಡುವೆ ಬದುಕನೊಂದಿಷ್ಟು ಉದ್ದರಿಸು
ಬೇಡಿಬಂದವರ ಬಿಡದಲೇ ಆಲೈಸು
ಬದುಕು ಕೊಟ್ಟವರ ಮರೆಯದೇ ಸತ್ಕರಿಸು
ನಂಬಿದವರ ಕೈಬಿಡದೆ ಮುನ್ನಡೆಸು
ಬದುಕು ಇಷ್ಟೇ ಮೂರುದಿನದ ಸಂತೆ
ಎಲ್ಲರೂಳಗೊಬ್ಬರಾದರೂ ಶ್ರೇಷ್ಠರಾಗಿರಬೇಕಂತೆ
ಚಿಂತೆ ಚಿತೆಗಳ ನಡುವೆ ವ್ಯತ್ಯಾಸ ಶೂನ್ಯವಂತೆ
ಶೂನ್ಯದೊಳಗೆ ಏನನ್ನಾದರೂ ಸಾಧಿಸುವ ಮರೆತೆಲ್ಲ ಚಿಂತೆ
–ವಿಜಯಲಕ್ಷ್ಮಿ ನಾಡಿಗ್