” ಬರೀ ಬರವಣಿಗೆಯಿಂದ ಬದುಕು ಕಟ್ಟಿಕೊಳ್ಳೊಕೆ ಸಾಧ್ಯವಿಲ್ಲ ” ಎಂದಿದ್ದ ಸಾಹಿತಿ ಏನಾದರೂ ಇವತ್ತು ಬದ್ಕಿದ್ರೆ ಮೂಗಿನ ಮೇಲೆ ಬೆರಳಿಟ್ಟುಕೊಂಡು ” ಹೌದೇನ್ರಿ. ಒಂದು ಕತೆಗೆ ಐವತ್ತು ಸಾವ್ರ ಬಹುಮಾನ ಕೊಡ್ತಾರಾ.. ಏನು ಲಕ್ಷ ರೂಪಾಯಿಯ ಸ್ಪರ್ಧೆ..! ಅದೂ ಬರೀ ಕಥಾ ಸ್ಪರ್ಧೆನಾ.. ಕಾಲ ಬದಲಾಗಿ ಬಿಡ್ತುಬಿಡಿ.. ನಮ್ ಕಾಲದಲ್ಲಿ ವರ್ಷಾನುಗಟ್ಟಲೆ ಅಧ್ಯಯನ ಮಾಡಿ, ಹಗಲು ರಾತ್ರಿ ಕೂತ್ಕೊಂಡು ಒಂದು ರಾಶಿ ಹಾಳೆ ತುಂಬಾ ಗೀಚಿ ಕೊನೆಗೆ ಅದ್ನ ಹಿಡ್ಕೊಂಡು ನೂರಾರು ಪ್ರಕಾಶನ ಅಲೆದು ಕೊನೆಗೂ ಯಾರೊ ಒಬ್ಬ ಪುಣ್ಯಾತ್ಮ ಮನಸ್ಸು ಮಾಡಿದ್ರೆ ನಾವ್ ಬರ್ದಿದ್ದು ಪುಸ್ತಕ ಆಗೊದು.. ಮತ್ತೆ ಆ ಪುಸ್ತಕದ ಪ್ರತಿ ಎಲ್ಲಾ ಖಾಲಿಯಾಗೊ ಅಷ್ಟರಲ್ಲಿ ಜೀವ್ನದಲ್ಲೇ ಮತ್ತೆ ಬರೀಬಾರ್ದು ಅನ್ಸಿಬಿಡೊಡು.. ಅಷ್ಟು ಮಾಡಿದ್ರೂ ಒಂದು ಲಕ್ಷ ದುಡ್ಡು ಸಾಯ್ಲಿ.. ಒಂದು ಶಾಲು, ಒಂದು ಪ್ರಶಸ್ತಿ ಪಲಕ ಕೊಟ್ಟ ಇವ್ರು ದೊಡ್ಡ ಸಾಹಿತಿ ಸಾರ್ ಅಂತ ಸ್ಟೇಜ್ ಮೇಲೆ ಒಂದೆರಡು ಪೋಟೋ ತಗ್ಕೊಂಡ್ರೆ ಅಲ್ಲಿಗೆ ಮುಗೀತು.. ನಾವು ನಾಡು – ನುಡಿ, ಕನ್ನಡಮ್ಮನ ಸೇವೆ ಅಂತ ಜೀವ್ನ ಪೂರ್ತಿ ಬರ್ಕೊಂಡು ಬಂದೆ.. ನಮ್ಮ ಕಾಲದ ಎಷ್ಟೋ ಜನ ಸಾಹಿತಿಗಳು ಹೊರಗಡೆ ಯಾವ್ದಾದ್ರೂ ಕಾರ್ಯಕ್ರಮಕ್ಕೆ ಹೋಗ್ಬೇಕಾದ್ರೆ ಕರಿ ಕೋಟು ಹಾಕ್ಕೊಂಡೆ ಹೋಗೊರು.. ಯಾಕಂದ್ರೆ ಒಳಗಿರೊ ಬಿಳಿ ಅಂಗಿ ಹೊಲ್ಗೆ ಹಾಕಿ ಹಾಕಿ ತೇಪೆ ಕಿತ್ತು ಹೋಗಿರೊದು.. ಎಂದು ತಮ್ಮ ಕಾಲದ ಸಾಹಿತಿಗಳ ಕತೆ ಹೇಳ್ತಿದ್ರೆ..
ಆ ಹಿರಿಯ ಸಾಹಿತಿಯ ಬಳಿ ಕತೆ ಕೇಳ್ಕೊಂಡು ಕೂತಿದ್ದ ಕಿರಿಯ, ಸಾರ್ ನಿಮಗಿನ್ನು ಗೊತ್ತಿಲ್ಲ ಅನ್ಸುತ್ತೆ.. ನಿಮ್ಮಂತವರು ಈಗಿನ ಕಾಲದಲ್ಲಿ ಕತೆ, ಕವನ ಬರ್ಕೊಂಡೆ ಲಕ್ಷಗಟ್ಟಲೆ ಸಂಪಾದನೆ ಮಾಡಬಹುದು ಸರ್..! ಯುಗಾದಿ, ಸಂಕ್ರಾಂತಿ, ದಸರಾ, ದೀಪಾವಳಿ ಇನ್ನೂ ಇರೊ ಬರೊ ಹಬ್ಬದ ಎಲ್ಲಾ ಕಥಾ ಸ್ಪರ್ಧೆ ಶುರು ಮಾಡಿದಾರೆ, ಅದೂ ಸಾಲ್ದು ಅಂತ ವಾರ್ಷಿಕೋತ್ಸವ.. ದೊಡ್ಡ ದೊಡ್ಡ ಸಾಹಿತಿಗಳ ಹುಟ್ಟಿದ ದಿನ, ಸತ್ತ ದಿನಕ್ಕೂ ಅವರ ಸ್ಮರಣಾರ್ಥ ಸ್ಪರ್ಧೆ ಮಾಡ್ತಾರೆ. ಸಾವಿರಾರು ರೂಪಾಯಿ ಬಹುಮಾನ ಕೊಡ್ತಾರೆ ಸಾರ್..
ಹಿರಿಯ ಸಾಹಿತಿ ಮೂಗಿನ ಮೇಲೆಯೊ.. ಬಾಯಿಯ ಮೇಲೊ ಕೈ ಇಟ್ಟುಕೊಂಡು ಆ ಯುವ ಸಾಹಿತಿಯ ಪ್ರಲಾಪ ಕೇಳುತ್ತಿದ್ದ.. ಸಿಕ್ಕಿದ್ದೇ ಚಾನ್ಸು ಎಂಬಂತೆ ಆ ಕಿರಿ ಸಾಹಿತಿ ತನ್ನ ಕತೆಗಳ ಕತೆಯನ್ನು ಮುಂದುವರಿಸಿದ..
ಸಾರ್.. ಮೊದಲು ಎಲ್ಲಾ ನಾವು ಚಿಕ್ಕವರಿದ್ದಾಗ ವರ್ಷಕ್ಕೆ ಒಂದೊ ಎರಡೊ ಪ್ರತಿಕೆಗಳು ಯುಗಾದಿ ವಿಷೇಶಾಂಕ, ದೀಪಾವಳಿ ವಿಶೇಷಾಂಕ ಅಂತ ಕಥಾ ಸ್ಪರ್ಧೆ ಮಾಡೊರು.. ಬಹುಮಾನ ಅಂತ ಶಾಲು ಹಾಕಿ ನಮ್ಮ ಕತೆನಾ ಅವ್ರು ಪಬ್ಲೀಶ್ ಮಾಡಿದ್ರೆ ಅದೇ ನಮ್ಮ ಪುಣ್ಯ.. ಆ ಮೇಲೆ ನಾವು ಬರಿಯೊಕೆ ಶುರು ಮಾಡಿದ ಮೇಲೂ ಐನೂರು ಸಾವ್ರನೊ ಕೊಡ್ತಿದ್ರು ಅಷ್ಟೇ. ಆಗಿನ ಕಾಲ್ದಾಗ ಅದೇ ದೊಡ್ಡ ಮೊತ್ತ.. ನಮ್ಮ ಕಾಲದಲ್ಲಿ ಈಗಿನ ಕಾಲಕ್ಕಿಂತ ಜಾಸ್ತಿ ಜನ ಕಥೆಗಾರರು ಇದ್ರು, ನಮ್ಮ ನಮ್ಮ ನಡುವೆನೇ ತುಂಬಾ ಸ್ಪರ್ಧೆ ಇರೊದು.. ಯುಗಾದಿ, ದೀಪಾವಳಿಗೆ ಇನ್ನೂ ಮೂರು ತಿಂಗ್ಳು ಇದೆ ಅನ್ನೊವಾಗಲ್ಲೇ ನಮ್ಮ ಅನುಭವ, ಕಲ್ಪನೆ, ನಾವು ಕಂಡ ವಾಸ್ತವ ಎಲ್ಲಾ ಸೇರಿ ಹಾಳೆಗಳ ಮೇಲೆ ಗೀಚಿ ಗೀಚಿ, ಒಂದಿಪತ್ತು ಹಾಳೆಗಳನ್ನು ಕಸದ ಬುಟ್ಟಿಗೆ ಹಾಕಿ ಕೊನೆಗೂ
ಕಥೆ ಬರೆದು , ಇನ್ನೂ ತಿಂಗ್ಳು ಎರಡು ತಿಂಗ್ಳು ಇರೊವಾಗ್ಲೇ ಕಥೆನಾ ಪೋಸ್ಟ್ ಮಾಡ್ತಿದ್ವಿ.. ಹಬ್ಬದ ವಿಶೇಶಾಂಕ ಬಂದಾಗ ಅದ್ರಲ್ಲಿ ಯಾರು ಕಥಾ ಸ್ಪರ್ಧೆಯಲ್ಲಿ ಗೆದ್ದಿದಾರೆ ಅನ್ನೊದು ಗೊತ್ತಾಗ್ತಿತ್ತು.. ಕೆಲವೊಮ್ಮೆ ಮಾತ್ರ ಕೆಲವು ಪತ್ರಿಕೆಯ ಸಂಪಾದಕರು ಮೊದಲೇ ಪೋಸ್ಟ್‌ನಲ್ಲಿ ಗೆದ್ದವರಿಗೆ ಶುಭಾಶಯ ಕಳ್ಸೊರು.. ಎಂದಾಗ ಯುವ ಸಾಹಿತಿಗೆ ಏನೊ ನೆನಪಾಗಿ, ಸಾರ್… ನಿಮ್ಮ ಕಾಲಕ್ಕಿಂತ ಈಗಿನ ಕಾಲದಲ್ಲಿ ಇನ್ನೂ ಹೆಚ್ಚಿನ ಕಥೆಗಾರರು ಇದಾರೆ ಸಾರ್..! ಹಿರಿಯ ಸಾಹಿತಿಗೆ ಆಶ್ಚರ್ಯವಾಯ್ತು..” ಏನಯ್ಯಾ ಹೇಳ್ತಿದಿಯಾ.. ಈಗಿನ ಕಾಲದ ಜನರು ಕನ್ನಡದಲ್ಲಿ ಕಥೆ ಬರಿತಾರೇನ್ರಿ…?! ಸರಿಯಾಗಿ ಕನ್ನಡ ಓದೊಕೇ ಬರಲ್ಲ.. ಅಂತಾದ್ರಲ್ಲಿ ಏನ್ರೀ ಬರೀತಾರೆ, ಅದ್ರಲ್ಲೂ ಕತೆ ಬರಿಯೊದು ಅಂದ್ರೆ ಹುಡುಗಾಟ ಏನ್ರೀ..,!!
ಹೊಸ ಜನರೇಷನ್‌ನ ಅಷ್ಟು ಹಗುರ ಹೇಳ್ಬೇಡಿ ಸಾರ್.. ನಿಮ್ ಕಾಲದಲ್ಲಿ ಬರಿತಿದ್ದದ್ದಕ್ಕಿಂತ ಜಾಸ್ತಿನೇ ಈಗ ಬರೀತಾರೆ.. ನಿಮ್ಗೊತ್ತಾ ಇತ್ತೀಚೆಗೆ ಒಂದು ಕಥಾ ಸ್ಪರ್ಧೆಗೆ ಸಾವಿರ ಕಥೆ ಬಂದಿದ್ವು..! ಏನಪ್ಪಾ ಸಾವ್ರ ಕತೆನಾ..? ಹೌದು ಸಾರ್, ಬಹುಮಾನ ಎಷ್ಟಿತ್ತು ನಿಮಗೆ ಗೊತ್ತಾ.. ಇಲ್ಲ ಎನ್ನುವಂತೆ ತಲೆ ಆಡಿಸಿದರು ಹಿರಿಯ ಕತೆಗಾರ.. ಲಕ್ಷ ರೂಪಾಯಿ ಸ್ಪರ್ಧೆ ಸಾರ್.. ಏನು ಕತೆ ಸ್ಪರ್ಧೆಗೆ ಲಕ್ಷನಾ.. ಹೌದು ಸಾರ್, ಒಂದು ಕತೆಗೆ ಬಹುಮಾನ ಬಂದ್ರೆ ಐವತ್ತು ಸಾವ್ರ. ಏನ್ರೀ ಹೇಳ್ತಿದೀರಾ... ನಾನು ಜೀವ್ನ ಪೂರ್ತಿ ಕತೆ ಬರದ್ರೂ ಎಲ್ಲಾ ಕತೆಗು ಸೇರಿ ಅಷ್ಟು ದುಡಿಲಿಲ್ಲ ಅಲ್ರೀ. ಕನ್ನಡದಲ್ಲಿ ಒಮ್ಮೆಲೆ ಅಷ್ಟೊಂದು ಕತೆಗಾರರು ಅದೆಂಗೆ ಹುಟ್ಗೊಂಡ್ರ ರೀ..
ಇದು ‘ಕತೆಗಾಲ’ ಸರ್ ಎಂದ ಕಿರಿಯ ಸಾಹಿತಿ..
–ಸಂಜಯ್ ಚಿತ್ರದುರ್ಗ