ಗುಟಖಾ . . ಗುಟಖಾ . . ಗುಟಖಾ . . ಎಲ್ಲೆಲ್ಲೂ ನೀನೆ ಎಲ್ಲೆಲ್ಲೂ ನೀನೆ ಅನ್ನುವಂಗ ಈ ಗುಟಖಾದ ಅವಾಂತರದಿಂದ ಸಾಕಾಗಿಹೋಗೇತಿ ನೋಡರಿ. ಗುಟಖಾ ಬಗ್ಗೆ ಹೆಂಗ ಪ್ರಾರಂಭಿಸಬೇಕು ಅನ್ನೋ ಮಾತೇ ಇಲ್ಲ, ಯಾಕಂದ್ರ ಗುಟಖಾ ಬೆಳಿಗ್ಗೆ ಎದ್ದು ಅಂಗಳ ಕಸ ಹೊಡೆಯುವಾಗ, ವಿಧ ವಿಧದ ವರ್ಣದ ಗುಟಖಾ ಚೀಟಗಳು ಮನೆ ಮುಂದಿನ ರಸ್ತೆಯಲ್ಲಿ ಬಿದ್ದಿರುತ್ತವೆ. ಕೆಲ ಪ್ಯಾಕೆಟುಗಳು ಕಡ್ಡಿಬಾರಿಗೆಲೆ ಎಷ್ಟು ಅಂದ್ರು ಹೋಗಲಾರದೆ ಕಿರಿಕಿರಿಮಾಡಿದಾಗ, ಕೊನೆಗೆ ಕೈಯಿಂದ ಗುಡಿಸಿ ರಸ್ತೆಯ ಒಂದು ಬದಿಯ ಮೂಲೆಯಲ್ಲಿ ಕಡ್ಡಿಗೀರಿ ಬೆಂಕಿಹಚ್ಚೋದು ಸರ್ವೇ ಸಾಮಾನ್ಯದ ಸಂಗತಿಯಾಗಿ ಬಿಟ್ಟಿದೆ.
ಇಷ್ಟಕ್ಕೆ ಗುಟಖಾ ಅವಾಂತರ ಮುಗಿಯುವ ಮಾತೇ ಅಲ್ಲ. ಒಳಗ ಬಂದು ಮನ್ಯಾಗ ಸಂಗೀತದ ಇಂಪಿರಲಿ ಅಂತ ಮ್ಯೂಸಿಕ್ ಚಾನಲ್ ಹಚ್ಚಿದ್ರ ಅದರಾಗೂ ಕಣ ಕಣದಲ್ಲಿ ಅಂತ ಬಾಲಿವುಡ್ ಮಂದಿ ಜಾಹೀರಾತು. ಇಷ್ಟಾಗದರೊಳಗ, ಹೊರಗಿಂದ ಒಂದು ಧ್ವನಿ ಅಕ್ಕಾರ ಕೋತಂಬ್ರಿ,ಮೆಂತೆ, ಕಿರಿಕಸಾಲಿ ಅಂತ ಕೂಗಿದ್ರ, ಮತ್ತೊಬ್ಬ ಮಂಡಾಳ ಬೇಕೇನ್ರಿ ಅಂತಾ ಮನಿ ಮುಂದ ಬಂದ, ಅಗದಿ ಚೊಲೋತ್ನೆಂಗ ಕಸ ಗುಡಸಿ ಅಂಗಳಕ ನೀರ ಹೊಡದಿದ್ದರ ಮ್ಯಾಲೆ ಪಚಕ್ ಅಂತ ಉಗುಳೋದಾ. ನಮಗೂ ಈ ಪಾಟಿ ಸಿಟ್ಟಬಂತು ಅಂದರ, ನಿನ್ನ ಸೊಪ್ಪು ಬ್ಯಾಡ, ನಿನ್ನ ಮಂಡಾಳ ಬ್ಯಾಡ ನಡರೀ ಅಂದಿದ್ದಷ್ಟೇ. ಒಳಗಡೆಯಿಂದ ರೀ ಕೋತಂಬ್ರಿ ಬೇಕ ತಗೋತೀನಿ ಅಂತ ಹೇಳ್ರಿ ಅನ್ನಬೇಕಾ ಸಂಸಾರವೆಂಬ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ನಾವೇ ಆದರೂ ಗೃಹಮಂತ್ರಿ ಎದರು ಹಾಕೊಂಡ್ರೆ ಕಷ್ಟ ಮೈತ್ರಿ ಸೂಸೂತ್ರವಾಗಿ ಇರಲ್ಲ ಅಂತ ನಿಲ್ಲರೀ ರ‍್ತಾರ ಅಂತ ಒಳಗ ಬರೋದಷ್ಟೇ ನಮ್ಮ ಕೆಲಸ.
ಬೆಳಗಿನ ನಿತ್ಯ ಕರ್ಮ ಮುಗಿಸಿ ಆಫೀಸಗೆ ಹೋಗೊ ಮುನ್ನ, ಉಪಹಾರ ಅಂತ ನಿನ್ನೆಯ ಅನ್ನಕ್ಕೆ ಒಗ್ಗರಣೆ ಸ್ಪರ್ಶ ನೀಡಿದ ಚಿತ್ರಾನ್ನ ರುಚಿ ಸವಿಯುತ್ತ ಕುಳಿತಿರುವಾಗ, ರೀಲ್ಸ್ ನಲ್ಲಿ ಅವನ್ಯಾರೋ ಆಡತೀನಿ ಮಟಕಾ, ತಿಂತೀನಿ ಗುಟಖಾ ಉಗಳತೀನಿ ಪಚಕ ಪಚಕ ಅಂತ ಹಾಡು ಕೇಳಬೇಕೆ. ಅದು ಗಲಾಟೆ ಅಳಿಯಂದಿರು ಚಲಚಿತ್ರದ ಸಾಗರಿಯೇ ಹಾಡಿನ ದಾಟಿಯಲ್ಲಿ ಹಾಡುತ್ತಾನೆ.
ಆ ಹಾಡಿನ ಸಂಗೀತ ನಿರ್ದೇಶಕನೇನಾದರೂ ಈ ಹಾಡು ಕೇಳಿದರೆ ಮುಗೀತು ಕಥೆ. ಇತ್ತಲಾಗ ಅಳೋಕ ಆಗದೆ, ನಗೋಕೆ ಆಗದೆ ಒದ್ದಾಡಿಬಿಡ್ತಾನೆ. ಆ ಹಾಡಿನಲ್ಲಿ ಬರುವವನ ಅವನ ಕನ್ನಡಕ, ಬಾಯಲ್ಲಿ ಗುಟಖಾ, ಇವುಗಳನ್ನು ನೋಡಿ ಆನಂದಿಸುವ ಮಟ್ಟಕ್ಕೆ ಇಳಿದಿದ್ದಾರೆ ಎನ್ನುವುದು ವಿಚಿತ್ರ ಆದರೂ ಸತ್ಯ. ಹೀಗೆ ಅದೊಮ್ಮೆ ಕಾರ್ಯನಿಮಿತ್ಯ ಹುಬ್ಬಳ್ಳಿ ಶಹರಕ್ಕ ಸಂತಿಗೆ ಹೋದಾಗ, ಅಂಗಡಿಗೆ ಪೂರಾ ಈ ಗುಟಖಾ ಗಳಿಂದಲೇ ಅಲಂಕಾರ ಮಾಡಿದ್ದರು. ನಕ್ಷತ್ರಾಕಾರ, ವೃತ್ತಾಕಾರ, ಹೀಗೆ ಜೋತು ಬಿಡುವ ವಿಭಿನ್ನ ಶೈಲಿಯಲ್ಲಿಯೆ ಗುಟಖಾ ಅಂಗಡಿ ಕಾಣಿಸಿತ್ತು.
ಇತ್ತೀಚೆಗೆ ಪಾನಶಾಪ್ ಅಂತ ಬೋರ್ಡ ಹಾಕಿರುತ್ತಾರೆ. ಕೇಳಿದರೆ ಪಾನ ಇರುವುದಿಲ್ಲ ಅದಕ್ಕೆ ನಾನು ಇವರೆಲ್ಲಾ ಪಾನಶಾಪ್ ಅನ್ನೋ ಹೆಸರು ತೆಗೆದು, ಗುಟಖಾ ಶಾಪ್ ಅಂತ ಇಟ್ಟರೆ ಸರಿಯಾಗುತ್ತೆ. ಅಂದಂಗ ಪಾನಶಾಪ್ ಎನ್ನುವ ಆಂಗ್ಲ ಹೆಸರಿನ ಅಂಗಡಿಯ ವ್ಯಾಮೋಹದ ಮುಂದೆ, ಕನ್ನಡ ಕಾಣ ಸಿಗುವುದೇ ಅಪರೂಪ ಇಂತಹ ಅಪರೂಪದಲ್ಲಿ ಕೊಪ್ಪಳದ ಜವಾಹರ ರಸ್ತೆಯಲ್ಲಿನ ತಾಂಬೂಲ ಗೃಹವೂ ಒಂದು. ಬಹಳ ವರ್ಷಗಳಿಂದ ಇದ್ದು, ಕನ್ನಡದ ತಾಂಬೂಲ ಗೃಹ ಹೆಸರಿನೊಂದಿಗೆ ಜನಪ್ರಿಯವಾಗಿದೆ.
ಗುಟಖಾ ಬಿಡುವಂತೆ ಹೇಳು ಅಂತ ಅದೆಷ್ಟೊ ಗೆಳೆಯರ ಪಾಲಕರು ನಿಮಗೆ ಹೇಳಿದ ಮಾತು ನೆನಪಿಗೆ ಬರಬಹುದು. ಗುಟಖಾ ದಾಸರಾಗಿ ಆರೋಗ್ಯ ಕ್ಷೀಣಿಸಿ ಬದುಕಿನಲ್ಲಿ ಪಶ್ಚಾತಾಪ ಪಟ್ಟ ಕುಟುಂಬಗಳು ಸಾಕಷ್ಟು ನಮ್ಮ ನಿಮ್ಮೆಲ್ಲರ ಕಣ್ಮುಂದೆ ಇವೆ. ಹೀಗೆ ಗುಟಖಾ ಇನ್ನಿಲ್ಲದಂತೆ ಎಲ್ಲೆಲ್ಲೂ ನಾನೇ ಅನ್ನುವಂತೆ ಬೆಳೆಯುತ್ತಿರುವ ಈ ಕಸವನ್ನು ಕಡಿದು ತುಂಡರಿಸಬೇಕಿದೆ. ಯಾಕಂದ್ರ ಈ ಗುಟಖಾ ಬಗ್ಗೆ ಇಷ್ಟೆಲ್ಲಾ ವಿಚಾರಗಳು ತೆಲೆಯಲ್ಲಿ ತಿರುಗುತ್ತಿರುವಾಗ. ದಿನಪತ್ರಿಕೆಯಲ್ಲಿ ಕೈಯಲ್ಲಿ ಹಿಡಿದು ಓದಿದರೆ ಗ್ರಾಮದಲ್ಲಿ ಗುಟಖಾ ತಂದು ಕೊಡಲಿಲ್ಲ ಅಂತ ಹುಡುಗಿಯನ್ನು ಕೊಂದ ಘಟನೆ ನೆಡದಿರುವುದು, ಅಂತ ಸುದ್ದಿ ಒಂದು ಕ್ಷಣ ನಂಬಲಾರದೇ ಅದೇ ಸುದ್ದಿಯನ್ನು ಮತ್ತೇ ಓದಿದೆ. ಮನುಜ ಕುಲವೆಲ್ಲ ತೆಲೆ ಬಾಗಿಸುವಂತೆ ಕೆಲಸ.
ಆ ಕಂದಮ್ಮ ತಾನು ಮಾಡದ ತಪ್ಪಿಗಾಗಿ ಮರಳಿ ಬಾರದ ಲೋಕವನ್ನೆ ತಲುಪಿದಳಲ್ಲಾ ಅಂತ ಬೇಸರವಾಯಿತು. ಅದಾಗಲೇ ಕಿಟಕಿ ಆಚೆಯ ಗುಟಖಾ ಚೀಟಿಯೊಂದು ಕಾಣುತ್ತಿತ್ತು. ತದೇಕ ದೃಷ್ಠಿಯಿಂದ ಕುಳಿತಿರುವಾಗ “ಬಾಯಿ ತೆರೆಯಿರಿ ಗುಟಖಾಗಾಗಿ ಅಲ್ಲ, ನಿಮ್ಮ ಹಕ್ಕುಗಳಿಗಾಗಿ” ಅನ್ನುವ ಬರಹ ಕಾಣಿಸಿತು. ಗುಟಖಾ ದುಶ್ಚಟವಾಗಿ ಕನಸು ಕಾಣುತ್ತಿದ್ದ ಕಂದಮ್ಮನ ಕನಸುಗಳೆಲ್ಲಾ ನುಚ್ಚು ನೂರಾಗುವಂತಹ, ಮನುಷ್ಯತ್ವವನ್ನೇ ಮರೆಸುವ ಗುಟಖಾಕ್ಕಿರಲಿ ಧಿಕ್ಕಾರ, ಗುಟಖಾವನ್ನು ಈಗಲಾದರೂ ನಿಷೇಧಿಸಲಿ. . .
–ನಾಗರಾಜನಾಯಕ ಡಿ ಡೊಳ್ಳಿನ