ಮನುಷ್ಯನನ್ನು ಗೆಲ್ಲುವ ಪರಿ ಹಲವು. ಅದರಲ್ಲಿ ಪ್ರಮುಖವೂ ಸುಲಭವೂ ಆದ ಪರಿಯು ಅವನ ಉದರ. ಎಲ್ಲಾರು ಮಾಡುವುದು ಹೊಟ್ಟೆಗಾಗಿ ಎಂದು ದಾಸರು ಹೇಳಿರುವುದು ಸುಮ್ಮನೇಯೆ? ಹೊಟ್ಟೆಯ ಮೇಲೆ ಹೊಡೆಯುವುದು, ತಟ್ಟೆಗೆ ಮಣ್ಣು ಹಾಕುವುದು, ಉಪ್ಪು ತಿಂದ ಮನೆಗೆ ಎರಡು ಬಗೆಯುವುದು, ಎಷ್ಟೆಲ್ಲಾ ಗಾದೆಗಳೂ, ಗುಣಗಳೂ ಕೇವಲ ಊಟ, ನಾಲಗೆ ಇವುಗಳ ಸುತ್ತವೇ ತಿರುಗುತ್ತಿದೆ! ಹಾಗಾಗಿಯೇ ಮನುಷ್ಯನು ಹುಟ್ಟಿದ್ದು ಮೋಕ್ಷ ಸಾಧನೆಗಾಗಿ ಆದರೆ, ಅವನು ಬದುಕುತ್ತಿರುವುದು ಮಾತ್ರ ಊಟದ ಕೃಪೆಯಿಂದಾಗಿ.
ಅಮ್ಮನ ಅಡುಗೆಯನ್ನು ತಿಂದು ಅದನ್ನು ಹೊಗಳುವುದೂ, ವಿಮರ್ಶಿಸುವುದೂ ನನಗೆ ಅತ್ಯಂತ ಸುಲಭವಾದ ಕೆಲಸ. ಆದರೆ ನಾನೇ ಅಡುಗೆ ಮಾಡಬೇಕಾಗುವ ಪರಿಸ್ಥಿತಿ ಎದುರಾದಾಗ ನಾನು ಅದನ್ನು ಹೊಗಳಿ ತಿನ್ನುವೆನೋ ಎಂಬುದು ಪ್ರಶ್ನೆ. ಇಡ್ಲಿ ಹಿಟ್ಟನ್ನೇ ಕಾವಲಿಯ ಮೇಲೆ ಹುಯ್ದರೆ ದೋಸೆ ಎನ್ನುವ ಭ್ರಮೆಯನ್ನೇ ಸತ್ಯವೆಂದು ನಂಬಿ ಕಾಲ ಕಳೆಯುವ ನನಗೆ ಸಾರಿನಲ್ಲಿ ಕೇವಲ ಸಾರಿನ ಪುಡಿ ಅಲ್ಲ, ಬೇರೆ ಪದಾರ್ಥಗಳೂ ಇರುತ್ತವೆ ಎಂದು ಹೇಗೆ ತಿಳಿದಿರಬಹುದು? ಸಾರಿಗೆ ತರಕಾರಿ ಸೇರಿಸಿಬಿಟ್ಟರೆ, ಇಗೋ ಸಾಂಬಾರವು ಬಂದಿತು ಎನ್ನುವುದು ನನ್ನ ದೃಢ ನಂಬಿಕೆಯಾಗಿತ್ತು. ಅಡುಗೆಯ ವಿಷಯದಲ್ಲಿ ಇನ್ನೂ ಶಿಶುವಿಹಾರದ ಸ್ಥಿತಿಯಲ್ಲಿರುವ ನನಗೆ ಅಡುಗೆ ಮಾಡುವ ಸಂದರ್ಭ ಬಂದರೆ ಹೇಗಿದ್ದೀತು?
ಪರ ಊರಿನಲ್ಲಿ ಹಮ್ಮಿಕೊಂಡಿದ್ದ ಒಂದು ಕಾರ್ಯಕ್ರಮದ ನಿಮಿತ್ತ ನನ್ನ ತೀರ್ಥರೂಪರೂ, ಮಾತೆಯೂ ನನ್ನೊಬ್ಬನನ್ನೇ ಮನೆಯಲ್ಲಿ ಬಿಟ್ಟು ಹೊರಟಿದ್ದರು. ನನಗೆ ಕೇವಲ ದಿನಚರಿ, ನಡವಳಿಕೆಗಳಲ್ಲಿ ಅಲ್ಲದೆ, ಅಡುಗೆಯಲ್ಲೂ ಅಂದು ಸ್ವಾತಂತ್ರ್ಯ ದಕ್ಕಿತ್ತು. ಸಾಮೀಪ್ಯ, ಆರ್ಥಿಕತೆಯ ಕುರಿತಾಗಿ ಯೋಚಿಸಿ, ಉಪಹಾರ ಮಂದಿರಕ್ಕೆ ಹೋಗಿ ತಿನ್ನುವ ಆಯ್ಕೆಯನ್ನು ನಾನು ತಳ್ಳಿ ಹಾಕಿದ್ದೆ. ಕೆಲ ಸಮಯ ಕಳೆದ ನಂತರ ನನ್ನ ಹೊಟ್ಟೆಯು ವಿವಿಧ ಸದ್ದುಗಳ ಮೂಲಕ ಹಸಿವನ್ನು ಜ್ಞಾಪಿಸತೊಡಗಿತು. ಆಗ್ಗೆ ನನಗೆ ತಿಳಿದಿದ್ದ ಅಡುಗೆಗಳು ಎಂದರೆ (ಅವುಗಳು ಅಡುಗೆ ಎನ್ನುವ ವರ್ಗಕ್ಕೆ ಸೇರುವುದೋ? ಗೊತ್ತಿಲ್ಲ) ಅನ್ನ, ಮೊಸರನ್ನ, ಹಾಗು ಚಟ್ನಿಪುಡಿಯೊಂದಿಗೆ ಕಲಸಿದನ್ನ. ಆದರೆ ಒಬ್ಬನೇ ಇದ್ದ ಕಾರಣ, ಅಡುಗೆಮನೆಯನ್ನು ಅನ್ವೇಷಿಸೋಣ ಎಂಬ ಹಂಬಲವುಂಟಾಗಿ ನಾನು ಅಡುಗೆ ಮಾಡಲು ಸಿದ್ಧನಾದೆ.
ಅಂತರ್ಜಾಲದ ಅಮೂಲ್ಯ ಸಹಾಯವನ್ನು ಪಡೆದು ಸಸ್ಯಾಹಾರಿಯಾದವನು ಮನೆಯಲ್ಲಿಯೇ ತಯಾರಿಸಬಹುದಾದ ಖಾದ್ಯಗಳಾವುವು ಎಂದು ಹುಡುಕತೊಡಗಿದೆ. ಸಮಸ್ಯೆಯೇನೆಂದರೆ ಅಂತರ್ಜಾಲದಲ್ಲಿ ನೋಡಿದ ಅಡುಗೆಗಳೆಲ್ಲವೂ ಸುಲಭವೂ ರುಚಿಕರವಾಗಿಯೇ ಕಾಣುವುದು; ಮಾಡುವವರು ಬೇಕಲ್ಲವೇ? ಎಲ್ಲವನ್ನೂ ನೋಡಿ, ನನ್ನ ಸಾಮರ್ಥ್ಯ, ಅಡುಗೆಯ ಅನುಭವಕ್ಕೆ ತಕ್ಕುದಾಗಿ ಯಾವುದನ್ನು ಆರಿಸಿಕೊಳ್ಳಬಹುದೆಂದು ಯೋಚಿಸಿ, ನಾನು ತವಾ ಪುಲಾವ್ ಮಾಡೋಣವೆಂಬ ನಿರ್ಣಯಕ್ಕೆ ಬಂದೆ. ಅದಕ್ಕೆ ಬೇಕಾಗುವ ಎಲ್ಲಾ ಸಾಂಬಾರ ಪದಾರ್ಥಗಳೂ, ತರಕಾರಿಗಳೂ ಮನೆಯಲ್ಲಿದ್ದವು. ಅಡುಗೆ ಮೆನಯ ಒಳಕ್ಕೆ ಸಂದರ್ಶನವೊಂದಕ್ಕೆ ಸಿದ್ಧನಾದ ನಿರುದ್ಯೋಗಿಯಂತೆ ನಾನು ಧಾವಿಸಿದೆ. ನನ್ನ ಮುಂದೆಯೇ ಬುಟ್ಟಿಯಲ್ಲಿ ಮಲಗಿರುವಂತೆ ಭಾಸವಾಗಿತ್ತಿದ್ದ ಎಲೆಕೋಸನ್ನು ಕೈಗೆತ್ತಿಕೊಂಡೆ. ನಾಲ್ಕೈದು ಪದರಗಳನ್ನು ಕಿತ್ತಿ, ಅಮ್ಮ ತೊಳೆದಿಟ್ಟಿದ್ದ ಚಾಕುವಿನ ಸಹಾಯದಿಂದ ಅದನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿಕೊಂಡೆ. ಆ ತುಂಡುಗಳ ಸಮಾನತೆಯ ಬಗ್ಗೆ ನೀವು ಕೇಳಬೇಡಿ. ನವಯುಗದ ಚಿತ್ರಕಲೆಯಂತೆಯೇ ಅವೂ ʼಅಮೂರ್ತʼವಾಗಿತ್ತು. ಬಹುಶಃ ಭೂಮಿಯಲ್ಲಿ ಎಲ್ಲಿಯೂ ಇರದ ದೇಶದ ನಕ್ಷೆಗಳಿಗೂ ಅದನ್ನು ಹೋಲಿಸಬಹುದಿತ್ತೇನೋ. ಎಲೆಕೋಸಿನ ಬೆಳವಣಿಗೆಗೆ ಬಳಸುವ ರಸಗೊಬ್ಬರದ ಪ್ರಮಾಣವನ್ನು ನೆನೆದು, ಭಯವುಂಟಾಗಿ, ಅದರ ತುಂಡುಗಳನ್ನು ಚೆನ್ನಾಗಿ ತೊಳೆದಿಟ್ಟೆ. ನಂತರ ಅಡುಗೆಮನೆಯಲ್ಲಿದ್ದ ನೂರಾರು ಡಬ್ಬಿಗಳಲ್ಲಿ ಎಲ್ಲೋ ಅಡಗಿದ್ದ ಬಾಸ್ಮತಿ ಅಕ್ಕಿಯನ್ನು ಹೆಕ್ಕಿ ತೆಗೆದು, ಕಾಲು ಪಾವಷ್ಟು ನೆನೆಸಿಟ್ಟೆ. ಅದರ ಘಮವೇ ಘಮವು; ಹಾಗಾಗಿಯೇ ಅದರ ಬೆಲೆಯೇ ಬೆಲೆಯು.
ಅತ್ತ ಅಕ್ಕಿ ನೆನಯಲಿ ಎಂದು ಇತ್ತ, ಪಾತ್ರೆಗಳ ರಾಶಿಯಲ್ಲಿ ಬುಡಮೇಲಾಗಿ ಮಲಗಿದ್ದ ಬಾಣಲೆಯನ್ನು ಕೈಗೆತ್ತಿಕೊಂಡೆ. ಖಾದ್ಯವನ್ನು ಮಾಡಲು ಬೇಕಾದ ಉಪ್ಪು, ಮೆಣಸಿನ ಪುಡಿ, ಕೊತ್ತಂಬರಿ, ಪಾವ್ ಭಾಜಿ ಮಸಾಲಾ, ಅರಿಶಿಣ: ಇವುಗಳನ್ನು ಒಂದು ಕಡೆ ಇಟ್ಟುಕೊಂಡೆ. ಎಲ್ಲಕ್ಕಿಂತ ಅತ್ಯವಶ್ಯಕವಾದ ಕಡಲೆಕಾಯ ಎಣ್ಣೆಯನ್ನು ಒಂಡು ಪುಟ್ಟ ಬಟ್ಟಲಲ್ಲಿ ತುಂಬಿಸಿಟ್ಟುಕೊಂಡೆ. ಎಲ್ಲೋ ಅಂತರಂಗದಲ್ಲಿ ನಮ್ಮಮ್ಮನ ಧ್ವನಿ ಕೇಳಿಸಿತು: ಎಲ್ಲಾ ಪೇರಿಸಿಕೊಳ್ಳುವುದಲ್ಲ! ಆಮೇಲೆ ಎಲ್ಲಾ ತೊಳೆದಿಡಬೇಕು ಮಗನೇ! ನಾನಂತೂ ತೊಳೆಯೋದಿಲ್ಲ!
ಏನಾದರದಾಗಲಿ, ಸದ್ಯಕ್ಕೆ ನಾನು ಹೊಟ್ಟೆಯ ಕೂಗಿಗೆ ಓಗೊಟ್ಟರೆ ಸಾಕೆಂದು ಮುಂದುವರೆದೆ. ಕೇವಲ ಎಣ್ಣೆಯಲ್ಲಿಯೇ ಕೆಲಸ ನಡೆಯುತ್ತದೆಂಬ ವಿಶ್ವಾಸದಲ್ಲಿ ನಾನು ಅಗ್ನಿಗೆ ಬಾಣಲೆಯ ಬುಡವನ್ನು ಸ್ಪರ್ಶಿಸಿಟ್ಟಿದ್ದೆ. ಆಗ ನನಗೆ ಅರಿವಾದದ್ದು ಬೆಣ್ಣೆಯ ಅವಶ್ಯಕತೆ. ಅಯ್ಯೋ! ಎಂದು ನನ್ನ ಮರೆವನ್ನು ಶಪಿಸುತ್ತ ಶೀತಲಡಬ್ಬ(ಫ್ರಿಡ್ಜ್)ದಲ್ಲಿ ಬೆಣ್ಣೆಗಾಗಿ ಹುಡುಕಾಡಿದೆ. ಇದೊಂದು ವಿಸ್ಮಯ ನೋಡಿ: ಆಯಾ ಮನೆಯ ಅಡುಗೆಮನೆ ತಾಯಂದರಿಗಷ್ಟೇ ಚಿರಪರಿಚಿತ. ದಷ್ಟಪುಷ್ಟ ಪುತ್ರರಾದ ನಮಗೇನಿದ್ದರು ಅಲ್ಲಿ ದೊರಕಬಹುದಾದ ಕುರಕಲು ತಿಂಡಿಯ ಸ್ಥಳಗಳು ನಿಖರವಾಗಿ ತಿಳಿದಿರುತ್ತದೆ. ಅಂತೆಯೇ ವಿವಿಧತೆಯಲ್ಲಿ ಏಕತೆಯನ್ನೇ ಬಣ್ಣಿಸುವಂತಿದ್ದ ಈ ಶೀತಲಡಬ್ಬದ ಅಸಂಖ್ಯಾತ ಗೂಡುಗಳಲ್ಲಿ ಆ ಮಕರಂದವು ಅದೆಲ್ಲಿದೆಯೋ? ಆದರೆ ನನಗೆ ದೊರಕಿದ್ದು ದಿನವೂ ಹಾಲಿನಿಂದ ತೆಗೆದಿಡುತ್ತಿದ್ದ ಕೆನೆಯ ಶೇಖರಣೆ. ಅದನ್ನು ಅಮ್ಮ ಬೆಣ್ಣೆಯಾಗಿ ಪರಿವರ್ತಿಸುವುದನ್ನು ನಾನು ನೋಡಿದ್ದೆ. ಆದರೆ ಈ ಆಪತ್ಕಾಲದಲ್ಲಿ ಅದರ ನೆನಪಾಗಬೇಕಲ್ಲ!? ಆದರೆ ಅದರಲ್ಲಿ ಮಿಕ್ಸಿಯ ಪಾತ್ರವಂತೂ ಇದ್ದೇ ಇದೆಯೆಂದು ನನಗೆ ನಿಶ್ಚಿತವಾಗಿ ಗೊತ್ತಿತ್ತು. ಹಾಗಾಗಿ ಒಂದಷ್ಟು ಕೆನಯೆನ್ನು ತೆಗೆದು ಚಿಕ್ಕ ಮಿಕ್ಸಿಯ ಬಟ್ಟಲಿನಲ್ಲಿ ಹಾಕಿ ಜರ್ರ್ ಎನ್ನಿಸಿದೆ. ತೆಗೆದು ನೋಡಿದರೆ, ಅದಾವುದೋ ಬಿಳೀ ಚಟ್ನಿಯಂತಾಗಿತ್ತು. ಒಂದಿಷ್ಟು ನೀರು ಹಾಕಿ ಮತ್ತೆ ಅದನ್ನೇ ಮಾಡಿದಾಗ, ಬೆಣ್ಣೆ ತೇಲ ತೊಡಗಿತು! ತಕ್ಷಣವೇ ಒಂದಿಷ್ಟು ಬೆಣ್ಣೆಯನ್ನು ಹದವಾಗಿ ಬಿಸಿಯಾಗಿದ್ದ ಬಾಣಲೆಗೆ ಹಾಕಿದೆ.
ಅಂತರ್ಜಾಲದಲ್ಲಿನ ಸೂಚನೆಯ ಹಾಗೆಯೇ ಆ ಬೆಣ್ಣೆ ಕರಗಿದ ತಕ್ಷಣ ಅದರೊಳಕ್ಕೆ ನಾನು ವಿಕಾರವಾಗಿ ಕತ್ತರಿಸಿದ್ದ ಎಲೆಕೋಸನ್ನು ಹಾಕಿದೆ. ಬೆಣ್ಣೆಯು ಕರಗಿದ ನಂತರ ಬರುವ ಒಂದು ನಿರ್ದಿಷ್ಟ ವಾಸನೆಯೊಂದಿಗೆ ಎಲೆಕೋಸಿನ ಹಸೀ ವಾಸನೆಯೂ ಸೇರಿಕೊಂಡಿತು. ಈ ಜಿಡ್ಡು ಏಕೋ ಸಾಲಲ್ಲವಲ್ಲ ಎಂದು ನಾನು ಯೋಚಿಸಿ ಒಂದು ಚಮಚ ಎಣ್ಣೆಯನ್ನೂ ಸೇರಿಸಿಬಿಟ್ಟೆ. ಹೊಟ್ಟೆ ಕೆಟ್ಟರೆ ಕೆಡಲಿ, ಜಿಹ್ವಾಗ್ರಕ್ಕೆ ಹಿತವಾದರೆ ಸಾಕು. ಇದೇಕೋ ಬಹಳ ಸಪ್ಪೆಯಾಯಿತಲ್ಲ ಎಂದು, ಅಲ್ಲೇ ಅಡಗಿದ್ದ ಗಾಜಿನ ಡಬ್ಬದಲ್ಲಿದ್ದ ಒಣಶುಂಠಿ ಪುಡಿಯನ್ನೂ ಸೇರಿಸಿಬಿಟ್ಟೆ. ಅಂತರ್ಜಾಲದಲ್ಲಿ ಒನಪು ಒಯ್ಯಾರಗಳಿಂದ ಅಡುಗೆ ಮಾಡುವ ಹುಡುಗಿಯು ನಂತರ ಒಂದು ಬಟ್ಟಲಿನಲ್ಲಿ ಪಾವ್ ಭಾಜಿ ಮಸಾಲೆಯೊಂದಿಗೆ ಖಾರದ ಪುಡಿಯನ್ನ ಸೇರಿಸಿ ಒಂದಿಷ್ಟು ನೀರು ಹಾಕಿ ಸ್ಫೋಟಕ ದ್ರವ್ಯವನ್ನು ತಯಾರಿಸಿದಳು. ಬಾಣಲೆಯಲ್ಲಿ ಎಣ್ಣೆ-ಬೆಣ್ಣೆಗಳ ನಡುವೆ ಬೆಂದು ಮೆತ್ತಗಾಗುತ್ತಿದ್ದ ಎಲೆಕೋಸಿಗೆ ಈ ದ್ರವ್ಯವನ್ನು ಹಾಕಿದೆ. ಠಸ್ ಎಂದು ಸದ್ದು ಮಾಡುತ್ತಾ ಆ ಮಸಾಲಾ-ಖಾರಾ ಪುಡಿಗಳ ಮಿಶ್ರಣವನ್ನು ನಾನು ಕೋಸಿನೊಂದಿಗೆ ಬೆರೆಸತೊಡಗಿದೆ. ಅದು ಗಾಢ ಕೆಂಪು ಬಣ್ಣಕ್ಕೆ ತಿರುಗಲಾರಂಭವಾಯಿತು.
ಅಷ್ಟರಲ್ಲೇ ನೀರಲ್ಲಿ ನೆನೆದಿದ್ದ ಬಾಸ್ಮತಿ ಅಕ್ಕಿಯನ್ನು ಅನ್ನವಾಗಲೆಂದು ಒಲೆಯ ಮೇಲಿಟ್ಟೆ. ಇತ್ತ, ಬಾಣಲೆಯಲ್ಲಿ ಕೋಸಿನ ಮಿಶ್ರಣವನ್ನು ಹುರಿಯುತ್ತ, ಹಾಗೆಯೇ ಅದರ ಘಮವನ್ನು ಆಘ್ರಾಣಿಸುತ್ತಾ ನಿಂತೆ. ಅನ್ನವಾದ ಮೇಲೆ ಅದನ್ನು ಬಾಣಲೆಗೆ ಹಾಕಿ, ಉಪ್ಪನ್ನು ಅದರ ಮೇಲೆ ಉದುರಿಸಿ, ಎರಡನ್ನೂ ಕಲಸಲಾರಂಭಿಸಿದೆ. ಬಾಸ್ಮತಿ ಅಕ್ಕಿಯ ವೈಶಿಷ್ಟ್ಯವೇ ಅದರ ಗಾತ್ರ. ಅದೆಷ್ಟು ತೆಳ್ಳಗೆ, ಉದ್ದಕಿರುತ್ತದದು! ಆದರೆ ನನ್ನ ವಡ್ಡ ಕೈಗಳ ಕಲಸುವಾಟದಿಂದ ಅವೆಲ್ಲವೂ ಮುರಿದು ಪುಟ್ಟ ಪುಟ್ಟದಾಗಿ ಹೋಯಿತು! ಅಷ್ಟೇ ಅಲ್ಲದೆ, ಬಾಸ್ಮತಿ ಅಕ್ಕಿಯು ಅನ್ನವಾಗುವ ಪ್ರಕ್ರಿಯೆಯಲ್ಲಿ ಶೇಷವಾಗಿ ಉಳಿದಿದ್ದ ನೀರೂ ಸೇರಿಕೊಂಡು, ಅತ್ತ ಬಿಸಿ ಬೇಳೆ ಬಾತಿನಂತೆಯೂ ಅಲ್ಲದೆ, ಇತ್ತ ಪುಲಾವ್ ರೀತಿಯೂ ಅಲ್ಲದೆ, ಸಾರನ್ನದಂತೆಯೂ ಅಲ್ಲದೆ ತಯಾರಾಗಿತ್ತು ನಾನು ಮಾಡಿದ ತವಾ ಪುಲಾವ್.
ಹೋಗಲಿ ಎಂದು ಮೇಲೆ ನಿಂಬೆ ರಸವನ್ನು ಹಿಂಡಿ, ತಟ್ಟೆಗೆ ಹಾಕಿಕೊಂಡು ತಿನ್ನಲಾರಂಭಿಸಿದೆ.
ನಾಲಗೆಗೆ ಮುಟ್ಟುತ್ತಿದ್ದಂತೆಯೇ ಮೊದಲು ಅನುಭವವಾಗಿದ್ದು ಹಸೀ ನಿಂಬೆ ರಸದ ಹುಳಿ. ಅದರೊಂದಿಗೆ ಸಿಕ್ಕ ಬಿಸಿಯೂ, ಅರೆಬೆಂದ, ನೀರಿನಲ್ಲಿ ನೆನೆಸಿದಂತಿದ್ದ ಬಾಸ್ಮತಿ ಅಕ್ಕಿ-ಅಥವಾ ಅನ್ನವೋ. ನಂತರ ಅದರೊಂದಿಗೆ ಅರೆ-ಬರೆ ಬೆರೆತಿದ್ದ ಮಸಾಲೆಗಳು. ಅಲ್ಲಲ್ಲಿ ಗಡ್ಡೆ ಕಟ್ಟಿದ್ದ ಉಪ್ಪು; ಒಂದಿಷ್ಟು ಬೆಂದ, ಒಂದಿಷ್ಟು ಹಸಿ ಉಳಿದ ಎಲೆ ಕೋಸು.
ಇವೆಲ್ಲವನ್ನೂ ಆಹಾ ಎಂದು ಅನುಭವಿಸಿ ತಿಂದುಬಿಡುವವ ನಿಜವಾಗಲೂ ಬರಗೆಟ್ಟಿದ್ದಾನೆಂದೇ ಅರ್ಥ. ನಾನು ಅಂದು ಇದ್ದ ಸ್ಥಿತಿಯು ಅದೇ ಆದ್ದರಿಂದ ಚಪ್ಪರಿಸಿ ತಿಂದುಬಿಟ್ಟೆ.
ಇದನ್ನು ನಳಪಾಕವೆಂದುಬಿಟ್ಟರೆ ದಮಯಂತಿಯೊಂದಿಗೆ ಸ್ವರ್ಗದಲ್ಲಿ ವಿಹರಿಸುತ್ತಿರುವ ನಳನಿಗೆ ನೋವಾಗಿ ಬಂದು ನನ್ನನ್ನು ಥಳಿಸಿಯಾನು! ಆದರೂ ಅಡುಗೆಯೆನ್ನುವ ಒಂದು ವಿಜ್ಞಾನವನ್ನು ನಾವುಗಳು ಅಭ್ಯಸಿಸಿಕೊಳ್ಳಬೇಕೆಂಬ ಬಹುಮುಖ್ಯಪಾಠವೊಂದು ನನಗಾಯಿತು!
ಆದರೂ ಒಂದು ಪ್ರಶ್ನೆ ನನ್ನನ್ನು ಇಂದಿಗೂ ಕಾಡುತ್ತಿದೆ: ತವಾ ಪುಲಾವ್ ಆದ ಈ ಖಾದ್ಯವನ್ನು ನಾನು ಬಾಣಲೆಯಲ್ಲಿ ಮಾಡಿದ್ದೇಕೆ?
–ತೇಜಸ್ ಎಚ್ ಬಾಡಾಲ