ನನ್ನ ಪ್ರಿಯತಮೆ ಚಿ. ಸೌ. ಕಣ್ಮಣಿ
ನನ್ನ ಹಿಂದೆ ಮುಂದೆ ಹೆಜ್ಜೆ ಹಾಕಿ ಹೋದವರು ಹಲವರು, ಆದರೆ ನನ್ನ ಎದೆಯಲ್ಲಿ ಛಾಪು ಮೂಡಿಸಿದ್ದು ಮಾತ್ರ ನಿನ್ನ ಹೆಜ್ಜೆಯ ಗುರುತುಗಳೇ. ಆ ಗುರುತಿನ ಪಡಿತರ ಚೀಟಿಯನ್ನು ಹಿಡಿದು, ಪ್ರೀತಿ ನ್ಯಾಯ ಬೆಲೆ ಅಂಗಡಿಯ ಮುಂದೆ ಕ್ಯೂ ನಿಂತಿರುವೆ. ನಿನ್ನ ಒಲವು ರಿಯಾಯಿತಿ ದರದಲ್ಲಿ ಸಿಗುವ ಭರವಸೆಯೊಂದಿಗೆ.
ನಿನ್ನ ಒಲವನು ತೂಗಿ ಕೊಡು ಗೆಳತಿ! ನನಗೇನು ಬೇಸರವಿಲ್ಲ ನೀ ಕೊಟ್ಟ ಅಷ್ಟೂ, ಇಷ್ಟು ಒಲವ ಕೆಲುವು ದಿನಗಳಿಗೆ ಮಾತ್ರ ಉಳಿಸಿಕೊಳ್ಳದೆ ; ಅದು ತಂಗಳಾದರೂ ಸರಿಯೇ ಉಣ್ಣುವ ಉಪವಾಸಿ ನಾನು .
ಈ ನಿನ್ನ ಅಂಗಡಿಯಲ್ಲಿ ಕೊಡುವ ಸ್ವಾಭಿಮಾನದ ಸೀಮೆಎಣ್ಣೆ ಮಾತ್ರ ಬೇಡ ಗೆಳತಿ ಕಾರಣವದು ದೀಪ ಬೆಳಗಿದುದಕ್ಕಿಂತ ಒಲೆ ಹತ್ತಿಸಿ ಉರಿಸಿದ್ದೆ ಹೆಚ್ಚು.
ನನ್ನ ಪ್ರೀತಿಯ ಗುಡಿಸಲಿಗೆ ಸಣ್ಣ ಕಿಡಿ ಸೋಕಿದರೂ ಅದನ್ನ ಆರಿಸುವಷ್ಟು ಕಣ್ಣೀರು ನನ್ನಲಿಲ್ಲ. ನೀ ಕೇಳು ಗೆಳತಿ ನಿನ್ನ ಒಲವ ಕೊಳ್ಳಲು ಬಂದ ನಾನು ಇಷ್ಟೇ ಇಷ್ಟು ಪದಗಳ ದರವನ್ನು ತೆತ್ತಿರುವೇ; ದರ ಕಡಿಮೆ ಇದೆ ಅಂತಲೋ, ಅಥವಾ ನಮ್ಮಿಬ್ಬರ ಮಧ್ಯೆ ತುಂಬಾ ದೂರ ಇದೆ ಅಂತಲೋ ನಿನ್ನೆದೆಯ ಒಲವಿನ ಅಂಗಡಿ ಬಾಗಿಲ ಮುಚ್ಚ ಬೇಡಾ ಗೆಳತಿ!
ಇದೇನಿದು ಏನಾಗಿದೆ ನಿಮಗೆ ಒಲವಿನ ಅಂಗಡಿ, ಹಾಗೆ ಹೀಗೆ ಎಂದು ಏನೇನೋ ಹುಚ್ಚುಚ್ಚು ಮಾತನಾಡುತ್ತಿರುವಿರಲ್ಲ ? ಎಂದು ಹುಸಿ ಮುನಿಸನ್ನು ತೋರುತ್ತಾ ಯಾವ ಕುಸುಮಾಸ್ತ್ರವನ್ನು ನನ್ನ ಮೇಲೆ ಪ್ರಯೋಗಿಸುತ್ತಿಯಾ ಎಂದು ಅಧನ್ನೋಡಿಯೇ ಅನುಭವಿಸಬೇಕು ಗೆಳತಿ.
ಇದನ್ನು ಓದಿದ ನೀನು ನನ್ನನ್ನು ಪ್ರಶ್ನಿಸಿಯೇ ಪ್ರಶ್ನಿಸುತ್ತಿಯಾ ಎಂದು ಉದ್ಭವಿಸಿದ ಕಪೋಲಕಲ್ಪಿತ ಉತ್ತರ ಹೇಳುವೆ ಕೇಳು ಕಿಶೋರಿ ..
ನಿನ್ನನು ಚಿಕ್ಕವಳಿದ್ದಾಗ ನಿಂದಲೂ ನೋಡಿಕೊಂಡು ಬಂದ ನನಗೆ ಈ ಪತ್ರದ ಮುಖೇನ ಮನದೋಕುಳಿಯನ್ನು ಸುರೆ ಮಾಡುವ ಅಗತ್ಯವಿರಲಿಲ್ಲ ಆದರೆ ಈಗ ನನ್ನಲ್ಲಿ ಅದುಮಿಟ್ಟ ಬಣ್ಣಗಳು, ಭಾವಗಳಾಗಿ ಬರಹದ ರೂಪದಲ್ಲಿ ಹೊರಹೊಮ್ಮಿದೆ.
ಹೌದು ಕಾಲ ನಿಯಮದಂತೆ
ನನ್ನೀ ಶರೀರಕ್ಕೆ ಈಗ 28 ರ ವಯೋಮಾನದ ಗಡಿ ಹತ್ತಿರವಿದೆ, ಪ್ರೌಢ ಮನದ ಚಿಂತನೆಯು,
ವಾತ್ಸಲ್ಯದ ಕರೆ, ಆಸರೆಗಾಗಿ ತಳಮಳಿಸುತಿದೆ.
ಘಾಸಿಗೊಂಡ ನನ್ನ ಮನಕೆ ವಾಸಿಮಾಡಲು ಒಂದು ಔಷಧಿಯ ಗಿಡಮೂಲಿಕೆ ಬೇಕಾಗಿದೆ;
ಅದು ನಿನ್ನ ಮನದ ಹೂದೋಟದಲ್ಲಿದೆ.
ಆ ತೋಟದ ಹೆಸರು ಕೇಳಿದರೆ ಒಮ್ಮೆ ಸೌಂದರ್ಯ ಎಂದು ಮರುಕ್ಷಣವೇ ವಿಶಾಲು ಎಂದು ತುಂಟತನ ತೊರಿದ ನಿನ್ನ, ನಾನು ಭಾವಿಸಿದ್ದು ಮಾತ್ರ ವಿಶಾಲ ಸೌಂದರ್ಯ ಅಡಗಿದ ಹೂದೋಟವೆಂದೂ.
ಹೂವಿಗೆ ಹೋಲಿಸಿದಾಕ್ಷಣ ಒಂದೇ ದಿನಕ್ಕೆ
ಬಾಡಿದ ಕಥೆ ನೆನಪಾಯಿತೇನು ನಿನಗೆ! ಆ ಭಯ ಬೇಡ.
ಅದ್ಯಾವಯುಗದ ರಂಬೆ, ಊರ್ವಶಿ ಯರು ಇಂದಿಗೂ ಜೀವಂತವಾಗಿರುವುದು ಕವಿಯ ಬರಹದಲ್ಲಿ ಹೊರತು ಇನ್ಯಾವುದೋ ಲೋಕದಲ್ಲಲ್ಲಾ!
ವ್ಯಾಸಂಗದಲ್ಲಿ ನನಗಿಂತ ಹೆಚ್ಚು ಪ್ರೌಢತೆ ಹೊಂದಿದ ನೀನು ಇದನ್ನೆಲ್ಲಾ ಬರೆದಿದ್ದು ನೀನಾ! ಎಂದು ಪರಿಹಾಸ್ಯಿಸ ಬೇಡ? ಮಾತು ಬೆಳ್ಳಿ ಮೌನ ಬಂಗಾರ ಎನ್ನುವ ಅರ್ಧಂಬರ್ಧ ಆದರ್ಶ ವಾದಿಯಾದ ನನಗೆ ಬೆಳ್ಳಿಯ ಬೆಲೆಯನ್ನು ತಿಳಿಸಿಕೊಟ್ಟವಳು ನೀನು.
ಟಿವಿ ಜಾಹೀರಾತಿನಲ್ಲಿ ನೋಡಿಲ್ಲವೇ ನಲ್ಲೆಯ ಖುಷಿಗಾಗಿ ನಲ್ಲನು ಕಾಪಿ ಮಾಡಿ ತಂದುಕೊಟ್ಟ ಹಾಗೆಯೇ ,
ಓದುವ ನಿನ್ನ ಮನಕೆ ಮುದ ನೀಡಲೆಂದು ಕೆಲವು ಪದಗಳನ್ನು ಅಲ್ಲೋ ಇಲ್ಲೋ ಹೆಕ್ಕಿ ತಂದಿರುವೆ. ಏನೇ ಆದರೂ ಇದಕ್ಕಿಂತ ಉನ್ನತ ಕಲ್ಪನೆಯ ಮನದ ನಿವೇದನೆಯನ್ನು ನಿನ್ನೆದುರು ತೆರೆದಿಡಲಾರೆ.
ಇದನ್ನೊದಿ ಕಲ್ಲು ಸಕ್ಕರೆಯಂತ ನಿನ್ನ ಎದೆಯು ಕರಗಿದರೆ ಅದರ ಸವಿಯನ್ನು ಅಕ್ಷರ ರೂಪದಲ್ಲಿ ಸಾಲು ಸಾಲು ಮುತ್ತುಗಳನ್ನು ಇತ್ತು ತಿಳಿಸು.
ನನಗೆ ನೀ ಹೇಗೆಯೇ ಪ್ರತಿಕ್ರಿಯಿಸಿದರು ಇಂದಲ್ಲ ನಾಳೆ, ನಾಡಿದ್ದೊ ಅರ್ಥಮಾಡಿಕೊಳ್ಳುವೆ. ಆದರೆ ನಿನ್ನ ಮೌನವ ನಲ್ಲ ಗೆಳತಿ ನೆನಪಿರಲಿ..
ಓ! ಕಾಲನ ಕರ್ಣಿಕನೆ ನನ್ನ ಪ್ರಿಯತಮೆಯ ಪ್ರತಿಕ್ರಿಯೆಯನ್ನು ಹೋತ್ತುತರುವ ದಿನಗಳನ್ನು ಬೇಗುರುಳಿಸು . ಇಲ್ಲಿ ಅವಳ ಭರವಸೆಯ ಮಾತಿನ ನಿರೀಕ್ಷೆಗಳು, ನನ್ನ ರಾತ್ರಿಯ ನಿದ್ದೆ ಗಳನ್ನು ಕೊಂದು ಹಾಕುತ್ತಿವೆ….
ಇಂತಿ ನಿನ್ನ ಪ್ರೀತಿಯ
ಪಾಪಿ ಮಾಂತೂ..