ಹೀಗೇ ಬಿದ್ದುಕೊಂಡು ಎಷ್ಟು ದಿನಗಳದವು ಎಂದು ನೆನಪಿಲ್ಲ. ಯಾರನ್ನಾದರೂ ದಿನ ಇಲ್ಲವೇ ತಾರೀಕು ಕೇಳಿದರೆ, “ನಿಮಗೆ ಯಾವ ತಾರೀಕಾದರೇನು, ಯಾವ ದಿನವಾದರೂ ಏನು?” ಅನ್ನುವ ಉಡಾಫೆಯ ಉತ್ತರಗಳು. ಎಷ್ಟೋ ಸಲ ಹಗಲು ಯಾವುದು, ರಾತ್ರಿ ಯಾವುದು ಎಂದು ಗೊತ್ತಾಗುತ್ತಿಲ್ಲ. ಕಿಟಕಿ ಬಾಗಿಲುಗಳನ್ನು ಮುಚ್ಚಿದ್ದಾರೆ – ನನ್ನ ನರಳಾಟ ಬೇರೆಯವರಿಗೆ ಕೇಳುವುದು ಬೇಡ ಎಂದು.
ಯಾರೋ ನನ್ನನ್ನು ಮೇಲಕ್ಕೆ ಎಳೆಯುತ್ತಿದ್ದಾರೆ. ಸುತ್ತಲೂ ನೀಲ ಆಕಾಶ. ಯಾರೂ ಕಾಣುತ್ತಿಲ್ಲ. ಒಂದು ರೀತಿಯ ಶಾಂತ ಪರಿಸ್ಥಿತಿ. ನಾನು ಸತ್ತಿದ್ದೇನೆಯೇ?
ಒಮ್ಮೆಲೇ ಕತ್ತಲು. ಎತ್ತ ಹೋಗುತ್ತಿದ್ದೇನೆ ಎಂದು ಗೊತ್ತಾಗುತ್ತಿಲ್ಲ. ಮೊದಲಿನಂತೆ ತೇಲುತ್ತಿದ್ದೇನೆ ಅ಼ಷ್ಟೇ ಗೊತ್ತಾಗುತ್ತಿರುವುದು.
ಬೆಳಕು. ಒಂದು ದೊಡ್ಡ ಕೋಣೆಯಲ್ಲಿ ನನ್ನನ್ನು ನಿಲ್ಲಿಸಿದ್ದಾರೆ. ಮುಂದೆ ಎತ್ತರದಲ್ಲಿ ಯಾರೋ ಕುಳಿತ್ತಿದ್ದಾರೆ. ಯಮಧರ್ಮರಾಯನಿರಬಹುದು. ಸ್ವಲ್ಪ ಮುಂದೆ ಹೋಗಿ ಮೇಲೆ ನೋಡುತ್ತೇನೆ. ಒಂದು ದೊಡ್ಡ ಹಲ್ಲಿ ಕುಳಿತಿದೆ. ಅದರ ತಲೆಯ ಮೇಲೆ ಫಳ ಫಳನೆ ಹೊಳೆಯುವ ಕಿರೀಟ. ಅದರ ಪಕ್ಕದಲ್ಲಿ ,ಸ್ವಲ್ಪ ಕೆಳಗೆ ದೊಡ್ಡ ಪುಸ್ತಕ ಹಿಡಿದುಕೊಂಡು ಬೆಕ್ಕು.
ಆಶ್ಚರ್ಯ. ಅಲ್ಲಿ ಯಾರೂ ಮನುಷ್ಯರು ಕಾಣುತ್ತಿಲ್ಲ. ಒಂದಷ್ಟು ಪ್ರಾಣಿಗಳು ನನ್ನನ್ನು ದುರುಗುಟ್ಟಿ ನೋಡುತ್ತಿವೆ. ನನ್ನ ಅದೃಷ್ಟಕ್ಕೆ ಅಲ್ಲಿ ಯಾವುದೇ ಹುಲಿ ಸಿಂಹಗಳಂತಹ ಕಾಡು ಪ್ರಾಣಿಗಳಿರಲಿಲ್ಲ.
ಹಲ್ಲಿ, “ಮಾನವಾ, ನೀನು ನಿನ್ನ ಬಗ್ಗೆ ಏನು ಹೇಳಬಯಸುತ್ತಿ? ನೀನು ಯಾವ ಒಳ್ಳೆಯ ಕೆಲಸ ಮಾಡಿದ್ದಿ ಎಂದು ತಿಳಿಸು. ಬೇಕಿದ್ದರೆ ಯೋಚಿಸಲು ಸಮಯ ಕೊಡುವೆ.”
“ಸ್ವಾಮೀ…, “ ಒಮ್ಮೆಲೇ ತಡವರಿಸುತ್ತೇನೆ. ಒಂದು ಹಲ್ಲಿಗೆ ನಾನು ʼಸ್ವಾಮೀʼ ಅನ್ನುವುದೇ?
ನನ್ನ ಮನಸ್ಸನ್ನು ಓದಿದವರಂತೆ ಹಲ್ಲಿ, “ಭೂಮಿ ಬಿಟ್ಟು ಬಂದರೂ ನಿನ್ನ ಅಹಂ ಹೋಗಿಲ್ಲ! ಹೇಳು, ನೀನು ಯಾವ ಒಳ್ಳೆಯ ಕೆಲಸ ಮಾಡಿದ್ದಿ ಎಂದು ನಿನ್ನನ್ನು ಸ್ವರ್ಗಕ್ಕೆ ಕಳುಹಿಸಲಿ?”
“ ನಾನು ಯಾವುದೇ ಒಳ್ಳೆಯ ಕೆಲಸ ಮಾಡಲಿಲ್ಲ ಅನಿಸುತ್ತದೆ.”
“ಅನಿಸುವುದಲ್ಲ, ನೀನು ಯಾವುದೇ ಒಳ್ಳೆಯ ಕೆಲಸ ಮಾಡಿಲ್ಲ” ತಲೆ ಎತ್ತದೇ ಪುಸ್ತಕ ನೊಡುತ್ತಾ ಬೆಕ್ಕು ಹೇಳಿತು.
“ಹಾಗಿದ್ದರೆ, ಇವನನ್ನು ನರಕಕ್ಕೆ ಕಳುಹಿಸುವ.”
“ಸ್ವಾಮೀ,” ನರಕಕ್ಕೆ ಹೋಗುವ ಭಯ, ಪುನಃ ʼಸ್ವಾಮೀʼ ಅನ್ನುವಂತೆ ಮಾಡಿತು. “ಜೀವಮಾನವಿಡೀ ನಾನು ಯಂತ್ರದಂತೆ ಕೆಲಸ ಮಾಡಿದೆ. ಮೊದಲು ಶಾಲೆಗೆ ಹೋಗುವಾಗ, ನಂತರ ದುಡಿಯುವಾಗ ಹೀಗೇ.
“ತಂದೆ ತಾಯಿಯರಿಗಾಗಿ, ನಂತರ ನನ್ನ ಹಿರಿಯ ಅಧಿಕಾರಿಗಳಿಗಾಗಿ, ಮದುವೆ ಆದ ಮೇಲೆ ಹೆಂಡತಿ ಮಕ್ಕಳಿಗಾಗಿ ನಾನು ಯಂತ್ರದಂತೆ ದುಡಿದೆ.
“ಸ್ವಾಮೀ, ನಾನು ನನ್ನ ಜೀವನದಲ್ಲಿ ಯಾವ ತಪ್ಪೂ ಮಾಡಿಲ್ಲ, ಯಾರಿಗೂ ಕೆಡುಕು ಮಾಡಿಲ್ಲ. ಹಾಗಾಗಿ ನನ್ನನ್ನು ಸ್ವರ್ಗಕ್ಕೆ ಕಳುಹಿಸಿ.”
“ಶೇಮ್…, ಶೇಮ್…” ಎಂದು ಎಲ್ಲಾ ಪ್ರಾಣಿಗಳು ಕೂಗಿದವು.
ಮೇಜು ಕುಟ್ಟುತ್ತಾ ಹಲ್ಲಿ, “ಆರ್ಡರ್…, ಅರ್ಡರ್…. ಮಧ್ಯದಲ್ಲಿ ಯಾರೂ ಮಾತನಾಡಬೇಡಿ. ನಿಮಗೆಲ್ಲರಿಗೂ ಮಾತನಾಡಲು ಆಮೇಲೆ ಅವಕಾಶ ಕೊಡುತ್ತೇನೆ..
“ನೋಡಪ್ಪಾ ಮಾನವಾ, ನನಗೆ, ನನ್ನ ಜನಾಂಗದವರಿಗೆ ನೀನು ಎಷ್ಟು ಅನ್ಯಾಯ ಮಾಡಿದ್ದಿ ಎಂದು ತಿಳಿಸುತ್ತೇನೆ. ನಾವು ನಿನಗೆ ಯಾವ ಅನ್ಯಾಯ ಮಾಡಿದ್ದೆವು ಎಂದು ನೀನು ನಮ್ಮನ್ನು ಮನೆಯಿಂದ ಓಡಿಸುತ್ತಿದ್ದೆ? ನಾವು, ನಿನ್ನ ಮನೆಯಲ್ಲಿರುವ ಹುಳ ಮತ್ತತರ ಕ್ರಿಮಿ ಕೀಟ ತಿಂದು ನಿನಗೆ ಸಹಾಯ ಮಾಡುತ್ತಿದ್ದೆವು. ಕ್ರಿಮಿ ಕೀಟಗಳಿಗಿಂತ ಹೆಚ್ಚು ನೀನು ನಮ್ಮನ್ನು ನೋಡಿ ಹೆದರಿ ನಮ್ಮನ್ನು ಓಡಿಸುತ್ತಿದ್ದೆ. ಕೆಲವೊಮ್ಮೆ ಕೊಲ್ಲುತ್ತಿದ್ದೆ. ಏನೇನೋ ವಿಷ ಇಡುತ್ತಿದ್ದೆ. ನಾವು ನಿನಗೆ ಉಪಕಾರ ಮಾಡುತ್ತಿದ್ದರೂ ನೀನು ನಮಗೆ ಯಾಕೆ ಅಪಕಾರ ಮಾಡಿದೆ?”
“ನೀನೊಂದು ವಿಷಜಂತು ಅನ್ನುತ್ತಿದ್ದರು. ಆ ಭಯದಿಂದ ನಾವು ನಿನ್ನನ್ನು ದೂರ ಮಾಡುತ್ತಿದ್ದೆವು.”
“ಯಾರು ಹೇಳಿದ್ದು ನಾವು ವಿಷ ಜಂತುಗಳೆಂದು? ವೈದ್ಯರು, ಶಾಲೆ ಕಾಲೇಜಿನ ಮಾಸ್ತರುಗಳು ಹೇಳಿಲ್ಲವೇ ನಾವು ವಿಷಕಾರಿ ಅಲ್ಲವೆಂದು. ಸರಿ ನಿನ್ನ ಅಜ್ಞಾನ ಅನ್ನೋಣ. ಆ ಕಾರಣಕ್ಕೆ ನಾನು ನಮ್ಮ ಜಾನಾಂಗದ ಪರವಾಗಿ ನಿನ್ನನ್ನು ಕ್ಷಮಿಸುವೆ. ಉಳಿದವರು ಏನು ಹೇಳುತ್ತಾರೆಂದು ನೋಡೋಣ.”
ಒಂದು ಹಸು ಮುಂದೆ ಬಂತು. ನಾನು ಅದಕ್ಕೆ ಕೈ ಮುಗಿದೆ. “ಹೀಗೇ ಕೈ ಮುಗಿದು ನಮ್ಮ ಶೋಷಣೆ ಮಾಡಿದಿರಿ. ಬೆಳಿಗ್ಗೆ ಎದ್ದು ಕೈ ಮುಗಿಯುವುದು, ದೀಪಾವಳಿಗೋ ಇಲ್ಲ ಬೇರೆ ಹಬ್ಬಕ್ಕೋ ನಮಗೆ ಶೃಂಗಾರ ಮಾಡಿ ಪೂಜೆ ಮಾಡುತ್ತೀರಿ, ಆ ದಿನ ಮಾತ್ರ ಒಳ್ಳೆಯ ತಿಂಡಿ ತಿನಿಸುತ್ತೀರಿ. ಉಳಿದ ದಿನ?
“ಹೊಟ್ಟೆಗೆ ಸ್ವಲ್ಪವೇ ಹಾಕಿ, ಬೀದಿಯಲ್ಲಿ ಬಿಟ್ಟು ಬಿಡುತ್ತೀರಿ. ನಾವು ಇವತ್ತಿಗೂ ಅಲ್ಲಿನ ಕಸ ಕಡ್ಡಿ ತಿಂದು ಬದುಕುತ್ತಿದ್ದೇವೆ. ಅಲ್ಲಿ ಓಡಾಡುವ ಜನರೋ ಇಲ್ಲ ಪೋಲೀಸರೋ ನಮಗೆ ಹೊಡೆಯುತ್ತಾ ಇರುತ್ತಾರೆ. ರಸ್ತೆಯಲ್ಲಿ ಓಡಾಡುವ ವಾಹನಗಳು ನಮಗೆ ಡಿಕ್ಕಿ ಹೊಡೆದೋ ಗಾಯ ಮಾಡಿ, ಕೆಲವೊಮ್ಮೆ ಕೊಂದು ಬಿಡುತ್ತವೆ. ಹಾಗೆನಾದರೂ ನಾವು ಸತ್ತರೆ, ವಾಹನದ ಮಾಲೀಕರಿಂದ ಹಣ ಸುಲಿಗೆ ಮಾಡುತ್ತೀರಿ.
“ಸಾಯಂಕಾಲ ಮನೆಗೆ ಬಂದರೆ, ಹೆಸರಿಗೆ ಮಾತ್ರ ನಮ್ಮ ಕರುವಿಗೆ ಹಾಲುಣಿಸಿ ನಮ್ಮ ಹಾಲು ಹಿಂಡುತ್ತೀರಿ. ನಮ್ಮ ಮಗು ಹಸಿವಿನಿಂದ ಅಳುತ್ತಿದ್ದರೂ ನಿಮಗೆ ಏನೂ ಅನಿಸುವುದಿಲ್ಲ.”
ನಾನು, “ನಾನು ಹಸು ಸಾಕಿಯೇ ಇಲ್ಲ. ನನ್ನ ಮೇಲೆ ಅಂತಹ ಅಪವಾದ ಯಾಕೆ ಮಾಡುತ್ತಿ?”
“ನೀನಲ್ಲದಿದ್ದರೆ, ನಿನ್ನಂತಹ ಹೃದಯಹೀನ ಮಾನವರು.”
ಹಲ್ಲಿ, “ಈ ಮನುಷ್ಯನಿಂದ ನಿನಗೆ ಏನೂ ಹಾನಿ ಆಗಿಲ್ಲ. ಹಾಗಾಗಿ, ನಿನ್ನ ಅಪವಾದವನ್ನು ತಳ್ಳಿ ಹಾಕುತ್ತೇನೆ. ಯಾರಿಗಾದರೂ ಇವನಿಂದ ನಿಮಗೆ ತೊಂದರೆ ಆಗಿದ್ದರೆ ಮಾತ್ರ ತಿಳಿಸಿ.”
ನಾಯಿ, “ಪಟ್ಟಣದಲ್ಲಿ ಇರುವ ಇವ, ನಮಗೆ ಅನ್ನ ಹಾಕುವುದಿಲ್ಲ. ಅನ್ನ ಕೊಳೆತು, ಕಸದ ಡಬ್ಬಿಗೆ ಹಾಕುತ್ತಾನೆ, ಆದರೆ ನಮಗೆ ಕೊಡುವುದಿಲ್ಲ. ಬೀದಿ ನಾಯಿಗಳು ಎಂದು ನಮ್ಮನ್ನು ಓಡಿಸುತ್ತಾನೆ.”
ಇಲಿ, “ಇವನಿಗೆ ನಾವು ಯಾವುದೇ ತೊಂದರೆ ಕೊಡುವುದಿಲ್ಲ. ನಮ್ಮ ಹೊಟ್ಟೆಪಾಡಿಗಾಗಿ, ಇವನ ಮನೆಗೆ ಹೋಗಿ, ಅಲ್ಲಲ್ಲಿ ಬಿದ್ದ ಅನ್ನ, ತಿಂಡಿ ತಿನ್ನುತ್ತೇವೆ. ಇವನ ಮನೆ ಸ್ವಚ್ಛ ಇರಲು ನಾವು ಸಹಾಯ ಮಾಡುತ್ತೇವೆ. ಆದರೂ ಈತ ನಮಗೆ ವಿಷ ಕೊಟ್ಟು ಕೊಲ್ಲುತ್ತಾನೆ.”
ಕೋಳಿ, “ಇವನು ನಮ್ಮನ್ನು ಸಾಕುತ್ತಾನೆ, ನಮಗೆ ಆಹಾರ ಕೊಡುತ್ತಾನೆ. ನಿಜ, ಆದರೆ ಅದರ ಹಿಂದೆ ಇವನ ಸ್ವಾರ್ಥ ಇದೆ. ನಮ್ಮನ್ನು ಕೊಂದು ತಿನ್ನುತ್ತಾನೆ.”
ಹಲ್ಲಿ, “ಇವನು ತನ್ನ ಮನೆಯಲ್ಲಿ ಕೋಳಿ ಸಾಕಿದ್ದನೇ?”
“ಇಲ್ಲ, ಆದರೆ ಇವನಂತಹ ಮನುಷ್ಯರು ಕಟುಕರು. ಎಲ್ಲಾ ಮನುಷ್ಯರನ್ನು ನರಕಕ್ಕೆ ಕಳುಹಿಸಬೇಕು.”
“ಯಾರನ್ನು ಸ್ವರ್ಗಕ್ಕೆ ಕಳುಹಿಸಬೇಕು, ಯಾರನ್ನು ನರಕಕ್ಕೆ ಕಳುಹಿಸಬೇಕೆಂದು ತೀರ್ಮಾನಿಸುವವನು ನಾನು. ನಿಮಗೆ, ಈ ಮಾನವನಿಂದ, ಏನಾದರೂ ತೊಂದರೆ ಆಗಿದ್ದರೆ ತಿಳಿಸಿ.”
ನುಸಿ, “ನಾನೊಂದು ಚಿಕ್ಕ ಪ್ರಾಣಿ. ಹಸಿವಾದಾಗ, ಬದುಕಲು ಅವನ ದೇಹದಿಂದ ಸ್ವಲ್ಪ ರಕ್ತ ಹೀರುತ್ತೇನೆ. ಇಷ್ಟು ದೊಡ್ಡ ದೇಹದಲ್ಲಿ ಹನಿ ರಕ್ತ ಹೀರಿದರೆ, ಇವನು ನಮ್ಮನ್ನು ಕೊಲ್ಲುತ್ತಾನೆ. ವಿಷ ಗಾಳಿ ಹಾಕುತ್ತಾನೆ. ನಮ್ಮ ವಂಶವನ್ನೇ ನಿರ್ನಾಮ ಮಾಡಲು ನೋಡುತ್ತಿದ್ದಾನೆ.”
ಬೆಕ್ಕು ಏನನ್ನೋ ಹೇಳಲು ಬಾಯಿ ತೆರೆಯಿತು. ಹಲ್ಲಿ, “ಇವನ ಬಗ್ಗೆ ನೀನು ನನಗೆ ತುಂಬಾ ಸಲ ಹೇಳಿದ್ದಿ. ಪುನಹ ಅದೇ ರಾಗ ಬೇಡ.”
ಗದ್ದಲ.
“ಸಮಯ ಮೀರುತ್ತಾ ಬಂದಿದೆ. ನಾನು ನನ್ನ ತೀರ್ಪು ಹೇಳುತ್ತೇನೆ. ಮಾನವನಿಂದ ಅನೇಕ ತಪ್ಪುಗಳಾಗುತ್ತಾ ಇವೆ. ಅನೇಕ ಪ್ರಾಣಿಗಳ ಸಂಕುಲವೇ ನಿರ್ನಾಮ ಅಗಿದೆ. ಇವರ ಆಸೆಗಳಿಗೆ ಮಿತಿಯೇ ಇಲ್ಲ. ತನ್ನ ಸ್ವಾರ್ಥಕ್ಕಾಗಿ ಆತ ತನ್ನವರನ್ನೂ ಕೊಲ್ಲಬಲ್ಲ. ಬೇರೆಯವರ ಆಸ್ತಿಪಾಸ್ತಿಗಳಿಗಾಗಿ ಏನನ್ನೂ ಮಾಡಬಲ್ಲ.
ಆದರೆ, ಇಲ್ಲಿ ಪ್ರತಿಯೊಂದಕ್ಕೂ ಇವನೇ ಕಾರಣನಲ್ಲ. ಇವನೊಬ್ಬ ಸಾಧುಪ್ರಾಣಿ. ಇವನ ರೆಕಾರ್ಡ್ ನೋಡುವಾಗ, ಈತ ಒಳ್ಳೆಯ ಯಾವುದೇ ಕೆಲಸ ಮಾಡಿಲ್ಲ. ಆದರೆ, ಈತ ಯಾವ ತಪ್ಪನ್ನೂ ಮಾಡಿಲ್ಲ. ನಿಮಗೆ ಕೆಲವು ತೊಂದರೆಗಳಾಗಿವೆ. ನಿಜ, ಅದು ಅನಿವಾರ್ಯ.
“ಈತ ಸ್ವರ್ಗಕ್ಕೆ ಹೋಗಲು ಅರ್ಹನಲ್ಲ.”
ಎಲ್ಲಾ ಪ್ರಾಣಿಗಳು ಚಪ್ಪಾಳೆ ತಟ್ಟುತ್ತಾ, “ನರಕ…ನರಕ…” ಎಂದು ಕೂಗತೊಡಗಿದವು.
ಹಲ್ಲಿ, “ಆರ್ಡರ್, ಆರ್ಡರ್. ಈತ ನರಕಕ್ಕೆ ಹೋಗುವಂತಹ ತಪ್ಪೂ ಮಾಡಿಲ್ಲ. ಹಾಗಾಗಿ ಈತನನ್ನು ನರಕಕ್ಕೆ ಕಳುಹಿಸುವುದೂ ತಪ್ಪು. ಹಾಗಾಗಿ ಈತನನ್ನು ಪುನಃ ಭೂಲೋಕಕ್ಕೆ ಮನುಷ್ಯನನ್ನಾಗಿಯೇ ಕಳುಹಿಸುವೆ. ನನ್ನ ಈ ತೀರ್ಮಾನ ತಪ್ಪು ಎಂದು ಯಾರಿಗಾದರೂ ಅನಿಸಿದರೆ, ಅವರು ಮೇಲ್ಮನೆಗೆ ಯಮಧರ್ಮರಾಯನಿಗೆ ಅರ್ಜಿ ಹಾಕಬಹುದು.
“ಹೇ ಮಾನವಾ, ನಿನ್ನನ್ನು ಪುನಃ ಹಿಂದೆ ಕಳುಹಿಸುವ ತೀರ್ಮಾನ ನಾನು ಕೈಗೊಂಡಿದ್ದೇನೆ. ಮುಂದಿನ ಜನ್ಮದಲ್ಲಾದರೂ ನೀನು ಒಳ್ಳೆಯ ಕೆಲಸ ಮಾಡು. ಜನರಿಗೆ ಉಪಕಾರ ಮಾಡು. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ತೊಂದರೆ ಇದ್ದೇ ಇರುತ್ತದೆ. ಅದನ್ನೂ ಮೀರಿ ನೀನು ಮುಂದೆ ಸಾಗು. ನಿನಗೆ ಸಮಾಜದ ಋಣ ಇದೆ. ಆ ಋಣವನ್ನು ತೀರಿಸುವುದು ನಿನ್ನ ಕರ್ತವ್ಯ.”
*
“ಏನ್ರೀ ಇವತ್ತು ಕೆಲಸಕ್ಕೆ ಹೋಗುವುದಿಲ್ಲವೇ? ಇನ್ನೂ ಕುಂಭಕರ್ಣನ ಹಾಗೆ ಗೊರಕೆ ಹೊಡೆಯುತ್ತಿದ್ದೀರಿ.” ನನ್ನ ಅಪ್ಸರೆಯ ದನಿ.
“ಇವತ್ತು ನವೆಂಬರ್ ಒಂದು. ಕನ್ನಡ ರಾಜ್ಯೋತ್ಸವ. ರಜಾ ಕಣೇ.”
–ರಾಜೇಂದ್ರ ಬಿ. ಶೆಟ್ಟಿ