ಚಿಕ್ಕ ಸ್ವಾಮ್ಯಾರು ರಾಯಪ್ಪ ಅವರು ಜ್ವರ ಹಿಡಿದು ಮಲಗಿದ್ದರು.
`ನಿನ್ನೆ ರಾತ್ರಿಯವರೆಗೂ ಚೆನ್ನಾಗಿಯೇ ಇದ್ದ ಚಿಕ್ಕ ಸ್ವಾಮ್ಯಾರು ರಾಯಪ್ಪರಿಗೆ ಇಂದು ಬೆಳಿಗ್ಗೆ ಆಗುವಷ್ಟರಲ್ಲಿ ಏನಾಯಿತು?’ ಅಡುಗೆ ಆಳು ಸಿಲ್ವಿಯಾ ಚಿಂತಿಸತೊಡಗಿದ್ದಳು.
ಗಂಡ ಉಪದೇಶಿ ಆರೋಗ್ಯಪ್ಪ ಗುಡಿಯಲ್ಲಿ ಪೂಜೆಗೆ ಸಿದ್ಧತೆ ಮಾಡಲು ಹೋದಾಗ, ಅವನ ಹೆಂಡತಿ ಅಡುಗೆ ಆಳು ಸಿಲ್ವಿಯಾ ಕೊಟ್ಟಿಗೆಯನ್ನು ಸ್ವಚ್ಛ ಮಾಡಿ ದನಕರುಗಳಿಗೆ ಹುಲ್ಲು ಹಾಕಿ ಗುರುಗಳ ಮನೆಗೆ ಬಂದಿದ್ದಳು.
ಹೊಸದಾಗಿ ತಾಯಿ ಸಂತ ಥೆರೇಸಮ್ಮರ ಗುಡಿ ಮತ್ತು ಪಕ್ಕದಲ್ಲಿ ಗುರುಗಳ ಮನೆಯನ್ನು ಕಟ್ಟಿದಾಗ, ಹಿಂದೆ ಆ ಜಾಗಲ್ಲಿದ್ದ ಮನೆಯನ್ನು ಉಳಿಸಿಕೊಳ್ಳಲಾಗಿತ್ತು. ಆ ಮನೆಯಲ್ಲಿ ಉಪದೇಶಿ ಆರೋಗ್ಯಪ್ಪ ಮತ್ತು ಅವನ ಹೆಂಡತಿ ಸಿಲ್ವಿಯಾ ನೆಲೆಸಿದ್ದರು. ಆ ಹಳೆಯ ಮನೆಯಲ್ಲಿ ಸಿದ್ಧ ಕೊಟ್ಟಿಗೆಯು ಇದ್ದುದರಿಂದ ಅವರು ದನಕರುಗಳನ್ನು ಸಹ ಸಾಕಿಕೊಂಡಿದ್ದರು. ಗುಡಿಯ ಹಿಂದೆಯೇ ಪುಟಾಣಿ ತೋಟವಿದ್ದು ಅದರಲ್ಲಿ ತೆಂಗಿನ ಮರಗಳಿದ್ದವು. ಅವರ ಮನೆಯನ್ನು ಉಳಿಸಿಕೊಂಡಂತೆ ಹೊಸ ಗುಡಿಯ ಮುಂದೆ ಅಡ್ಡವಾಗಿ ಕಾಣುತ್ತಿದ್ದರೂ ಅಲ್ಲಿದ್ದ ಆಲದ ಮತ್ತು ಬೇವಿನ ಮರಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿತ್ತು.
ಧರ್ಮಕೇಂದ್ರದ ಗುರುಗಳಾದ ದೊಡ್ಡ ಸ್ವಾಮ್ಯಾರು ಫಾದರ್ ಅಮೃತಪ್ಪ ಅವರು ಧರ್ಮಕೇಂದ್ರವನ್ನು ಬಿಟ್ಟು ಆಗಲೇ ಎರಡು ತಿಂಗಳು ಕಳೆದಿತ್ತು. ಈ ಚಿಕ್ಕ ಸ್ವಾಮ್ಯಾರು ಇನ್ನೂ ಹುಡುಗು ಬುದ್ಧಿ. ಪ್ರಗತಿಪರ ಚಿಂತನೆಯುಳ್ಳವರು. ತುಂಬಾ ಓದಿಕೊಂಡಿದ್ದರು. ಆದರೆ ಕೆಲವೊಮ್ಮ ಏನೇನೋ ಕೆಲಸಕ್ಕೆ ಬಾರದ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಾರೆ. ಆ ಎಡವಟ್ಟುಗಳ ಪರಿಣಾಮದಿಂದ ನೊಂದು ಪಶ್ಚಾತ್ತಾಪ ಪಡುವುದು ಅವರ ಜಾಯಮಾನವೇ ಆಗಿತ್ತು. ಏಕೆಂದರೆ, ಒಮ್ಮೊಮ್ಮೆ ಅವರು ಆಡುವ ಮಾತುಗಳು ಅತಿ ಎನ್ನಿಸುವುದೂ ಉಂಟು.
ಹುಡುಗು ಬುದ್ಧಿಯ ಚಿಕ್ಕ ಸ್ವಾಮ್ಯಾರು, ದೊಡ್ಡ ಸ್ವಾಮ್ಯಾರು ಅಮೃತಪ್ಪ ಅವರು ಇದ್ದಾಗಲೇ ಒಮ್ಮೆ ಪ್ರಸಂಗ ಮಾಡುವಾಗ ಹೆಣ್ಣುಮಕ್ಕಳು ಪೋಕ್ತವಾದ ಡ್ರೆಸ್ ಹಾಕಿಕೊಂಡು ಗುಡಿಗೆ ಬರಬೇಕು ಎಂದು ಹೇಳಿದ್ದು ಸ್ವಲ್ಪ ವಿವಾದಕ್ಕೆ ಕಾರಣವಾಗಿತ್ತು. ಪುಣೆಯಿಂದ ಬಂದಿದ್ದ ಊರಲ್ಲಿನ ನೆಂಟರ ಹೆಣ್ಣುಮಕ್ಕಳಿಬ್ಬರು, ಮೈ ಮುಚ್ಚುವ ಬಟ್ಟೆ ತೊಟ್ಟಿದ್ದರೂ ಮೈ ಮಾಟ ಎದ್ದು ಕಾಣುವಂಥ ಬಟ್ಟೆ ತೊಟ್ಟುಕೊಂಡು ಗುಡಿಗೆ ಬಂದಿದ್ದಾಗ ಚಿಕ್ಕ ಸ್ವಾಮ್ಯಾರು ಅದನ್ನು ಪ್ರಸಂಗದಲ್ಲಿ ಪ್ರಸ್ತಾಪ ಮಾಡಿದ್ದರು. ಅದನ್ನು ಕೇಳಿದ ಆ ಹುಡುಗಿಯರು ಪೂಜೆ ಮುಗಿದ ತಕ್ಷಣ, ಪ್ರಸಂಗದಲ್ಲಿ ಚಿಕ್ಕ ಸ್ವಾಮ್ಯಾರು ಆಡಿದ ಮಾತುಗಳಿಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದರು. `ನಮ್ಮ ವೈಯಕ್ತಿಕ ವಿಷಯಗಳಲ್ಲಿ ಕೈ ಹಾಕುವುದು ನಿಮಗೆ ಬೇಡದ ಕೆಲಸ. ಯಾವುದೇ ಇರಲಿ, ಒಳಿತು ಕೆಟ್ಟದು ಎನ್ನುವುದು ಅದನ್ನು ಪರಿಭಾವಿಸುವವರ ಮನಸ್ಸಿನಲ್ಲಿರುತ್ತದೆ, ಅದೂ ಅವರವರ ಭಾವಕ್ಕೆ ತಕ್ಕಂತೆ’ ಎಂದ ಮೂದಲಿಸಿದ್ದರು.
`ಶಾಂತಿ ಸಮಾಧಾನ ಅರಸಿಕೊಂಡು ಗುಡಿಗೆ ಬರುವ ವಿಶ್ವಾಸಿಕರ ಲಕ್ಷ್ಯ ಬಂದವರ ತೊಟ್ಟ ಬಟ್ಟೆಯ ಮೇಲೆ ಇರುವುದಿಲ್ಲ. ತಿಳ್ಕೊಳ್ಳಿ’ ಎಂದು ವಾದ ಮಂಡಿಸಿ, ಸುಲಭದಲ್ಲಿ ಸಕಲರಿಗೂ ಗೋಚರವಾಗದಂತೆ ಚಿಕ್ಕ ಸ್ವಾಮ್ಯಾರ ಮಾನ ತೆಗೆದಿದ್ದರು. ಧರ್ಮಕೇಂದ್ರದ ದೊಡ್ಡ ಸ್ವಾಮ್ಯಾರು ಅಮೃತಪ್ಪ ಅವರು, ಇಬ್ಬರನ್ನೂ ಕೂರಿಸಿ ಮಾತುಕತೆ ನಡೆಸಿ ಸಂಧಾನ ಮಾಡಿದ್ದರು.
ಏನೇ ಆದರೂ ಯುವಕರು ಈ ಚಿಕ್ಕ ಸ್ವಾಮ್ಯಾರನ್ನು ತುಂಬಾ ಹಚ್ಚಿಕೊಂಡಿದ್ದರು.
ದೊಡ್ಡ ಸ್ವಾಮ್ಯಾರು ಅಮೃತಪ್ಪ ಅವರು, ಬಿಷಪ್ಪರು ಕರೆದರು ಎಂದು ಪಟ್ಟಣದಲ್ಲಿನ ಬಿಷಪ್ ರ ಮನೆಗೆ ಹೋಗಿದ್ದರು. ಪಟ್ಟಣಕ್ಕೆ ಹೋಗಿದ್ದಾಗ ಸ್ಕೂಟರ್ ನಿಂದ ಬಿದ್ದು ಗಾಯ ಮಾಡಿಕೊಂಡಿದ್ದ ಅಮೃತಪ್ಪ ಸ್ವಾಮ್ಯಾರ ಎಡಗಾಲು ಮಂಡಿ ಕೆಳಗಿನ ಮೂಳೆ ಮುರಿದಿತ್ತು, ಅವರು ಅಲ್ಲಿಯೇ ದೊಡ್ಡ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದರು.
ಅಮೃತಪ್ಪ ಸ್ವಾಮ್ಯಾರಿಗೆ ಟಿಬಿಯ ಶಾಫ್ಟ್ ಮುರಿತದ ಕಾರಣ, ಕಟ್ಟು ಕಟ್ಟಿದ ವೈದ್ಯರು ಮೂರು ತಿಂಗಳು ಹಾಸಿಗೆಯೇ ಮೇಲೆಯೇ ಇರಬೇಕು ಎಂದು ಸಲಹೆ ನೀಡಿದ್ದರು.
ಹೀಗಾಗಿ ಈಗ ಧರ್ಮಕೇಂದ್ರದ ಎಲ್ಲದಕ್ಕೂ ಚಿಕ್ಕ ಸ್ವಾಮ್ಯಾರು ರಾಯಪ್ಪ ಅವರೇ ದಿಕ್ಕಾಗಿದ್ದರು.
ಈ ಸಂತ ತಾಯಿ ಥೆರೇಸಮ್ಮನವರ ಗುಡಿಯನ್ನು ಕಟ್ಟಿ ಇನ್ನೂ ಹತ್ತು ವರ್ಷಗಳೂ ಕಳೆದಿರಲಿಲ್ಲ.
ಅಳ್ನಾವರದಿಂದ ತುಸು ದೂರದಲ್ಲಿರುವ ಹಳ್ಳಿ ಅದು. ಆದರೆ ಆ ಹಳ್ಳಿ ರಾಜ್ಯ ಹೆದ್ದಾರಿಗೆ ಅಂಟಿಕೊAಡೆ ಇತ್ತು. ಆ ಹೆದಾರಿಯು ಊರಲ್ಲಿನ ಜನ ಕೃಷಿ ಮತ್ತು ಹೈನುಗಾರಿಕೆ ಚಟುವಟಿಕೆಗಳ ಜೊತೆಗೆ ಬೇರೆ ಬದುಕಿನ ದಾರಿಗಳನ್ನು ತೆರೆದಿಟ್ಡಿತ್ತು.
ಬೆಳಗಿನ ಜಾವದಲ್ಲಿ ಹೆದ್ದಾರಿಯಲ್ಲಿ ಸಾಗುವ ವಾಹನಗಳ ಚಾಲಕರಿಗೆ ಮಲ್ಲಿಗೆ ಹೂವಿನ ಹಾರಗಳನ್ನು ಮಾರುವುದು ಕೆಲವು ಬಾಲಕರಿಗೆ ದುಡ್ಡು ಗಳಿಸುವ ಮಾರ್ಗವಾಗಿತ್ತು. ಶಾಲೆಗೆ ಹೋಗುವ ಮೊದಲು ಹತ್ತಾರು ಹೂವಿನ ಮಾಲೆಗಳನ್ನು ಮಾರಿದರೆ ಬರುವ ಅಷ್ಟಿಷ್ಟು ಕಾಸು ಮನೆಯ ನಿರ್ವಹಣೆಗೆ ಸಹಕಾರಿಯಾಗುತ್ತಿತ್ತು.
ಅದುವರೆಗೂ ಉಂಡಾಡಿ ಗುಂಡರAತೆ ಹಳ್ಳಿಯಲ್ಲಿ ಮೈಗಳ್ಳರಾಗಿ ಓಡಾಡಿಕೊಂಡಿದ್ದ ಯುವಕರು ಎಳ ನೀರಿನ ಕಾಯಿಗಳನ್ನು ಮಾರುವ ಕಾಯಕಕ್ಕೆ ಇಳಿದಿದ್ದರು. ಮತ್ತೊಂದಿಷ್ಟು ಸಿರಿವಂತರು ರಸ್ತೆಯ ಮಗ್ಗಲಲ್ಲಿದ್ದ ತಮ್ಮ ಹೊಲ ಗದ್ದೆಗಳನ್ನು ಹೊಟೇಲು, ಗ್ಯಾರೇಜು ನಡೆಸುವವರಿಗೆ ತಿಂಗಳು, ವರ್ಷಗಳ ಕಾಲ ಗುತ್ತಿಗೆಗೆ ಕೊಟ್ಟು ಕಾಸು ಎಣೆಸುತ್ತಿದ್ದರು. ಗಟ್ಟಿಗಿತ್ತಿ ಹೆಂಗಸರು ಹೊಟೇಲುಗಳ ಪಕ್ಕದಲ್ಲಿ ಗೂಡಂಗಡಿ ಇಟ್ಟುಕೊಂಡು ಮನೆಯಲ್ಲಿ ಸಿದ್ಧಪಡಿಸಿದ್ದ ಹಪ್ಪಳ ಶೆಂಡಿಗೆ, ಕುರುಕುಲು ತಿಂಡಿಗಳ ಮಾರಾಟಗಿತ್ತಿಯರಾಗಿದ್ದರು.
ಹಳ್ಳಿಯ ಮುಖ್ಯ ಬೀದಿ ಅರಳಿಕಟ್ಟೆಯ ಅಂಚಿನಲ್ಲಿ ಇನ್ನಾಸಪ್ಪರ ಗುಡಿ ಇತ್ತು. ಅದು ಹೆಚ್ಚುತ್ತಿರುವ ವಿಶ್ವಾಸಿಕರ ಸಂಖ್ಯೆಗೆ ಸಾಲದೇ ಹೋದಾಗ, ಹಳ್ಳಿಗೆ ಹತ್ತಿರದಲ್ಲೇ ಇದ್ದ ದಿಣ್ಣೆಯ ಜಾಗವನ್ನು ಹುಡುಕಿ ಇನ್ನೊಂದು ಹೊಸ ಗುಡಿ ಕಟ್ಟಿಸಿದರಾಯಿತು ಎಂದು ಪಾಲನಾ ಸಭೆಯಲ್ಲಿ ಸದಸ್ಯರು ಒತ್ತಾಯ ಮಾಡಿದಾಗ, ಅಂದಿನ ಧರ್ಮಕೇಂದ್ರದ ಗುರುಗಳು ಅದಕ್ಕೆ ಅಸ್ತು ಎಂದಿದ್ದರು. ವಿಶ್ವಾಸಿಗಳ ಬಯಕೆಯಂತೆಯೇ ಮೇತ್ರಾಣಿಗಳು ಅದಕ್ಕೆ ಅಧಿಕೃತ ಮುದ್ರೆ ಹಾಕಿದ್ದರು. ಮೊದಲು ಒಂದು ಬಾಡಿಗೆ ಮನೆಯನ್ನು ಬಾಡಿಗೆ ಹಿಡಿದು ಅದನ್ನು ಸಂತ ಇನ್ನಾಸಪ್ಪರ ಗುಡಿಯ ಉಪಕೇಂದ್ರವನ್ನಾಗಿ ಮಾಡಿದರು. ನಂತರ ಸುತ್ತಲ ವಿಶ್ವಾಸಿಗಳಿಗೆ ಅನುಕೂಲವಾಗುವಂತೆ ಆ ಕಿರಿ ಗುಡಿಯಲ್ಲಿ ವಾರಕ್ಕೊಮ್ಮೆ ಪೂಜೆ ಹೇಳುವ ಕ್ರಮ ಆರಂಭವಾಗಿತ್ತು.
ಬೆಳ್ಳಂಬೆಳಿಗ್ಗೆಯೇ ವಯೋವೃದ್ಧರೂ, ಊರಲ್ಲಿನ ಹಿರಿಯರು ಮತ್ತು ತಾಯಿ ಸಂತ ಥೆರೇಸಮ್ಮರ ಧರ್ಮಕೇಂದ್ರದ ಪಾಲನಾ ಸಮತಿ ಸದಸ್ಯರಾಗಿದ್ದ ಚೆಲುವಪ್ಪ ಬಾವಿಕಟ್ಟಿ ಮಾಸ್ತರರು ಗುಡಿಗೆ ಓಡಿ ಬಂದಿದ್ದರು. ಅವರ ಮೊಮ್ಮಗ ಸುನೀಲ್ ಅವರನ್ನು ಸ್ಕೂಟರಿನಲ್ಲಿ ಕರೆದುಕೊಂಡು ಬಂದಿದ್ದ. ಗುಡಿಯ ಹತ್ತಿರ ಬರುತ್ತಿದ್ದಂತೆಯೇ ಏನೋ ವ್ಯತ್ಯಾಸವಾಗಿದ್ದು ಚೆಲುವಪ್ಪ ಮಾಸ್ತರರಿಗೆ ಕಸಿವಿಸಿಯನ್ನು ಉಂಟು ಮಾಡಿತ್ತು.
ನಿನ್ನೆ ಸಂಜೆಯಿAದಲೇ ಅವರಿಗೆ ಹೊಟ್ಟೆಯಲ್ಲಿ ಸಂಕಟ ಶುರುವಾಗಿತ್ತು. ಏನೋ ಚಡಪಡಿಕೆ. ಆಪ್ತವಾದದ್ದು ಏನೋ ಕಳಕೊಂಡವರAತೆ ಒದ್ದಾಡುತ್ತಿದ್ದರು. ಇಡೀ ರಾತ್ರಿ ಕಣ್ಣು ರೆಪ್ಪೆಗಳು ಮುಚ್ಚಲಿಲ್ಲ. ನಸುಕಿನ ಐದು ಗಂಟೆಯ ಸುಮಾರು ಬೆಂಗಳೂರಿನ ಕರುಣಾಮಯಿ ವೃದ್ಧಾಶ್ರಮದಿಂದ ಕರೆ ಬಂದಿತ್ತು. ವಿಘ್ನೇಶಪ್ಪ ಪುಣೇಕರ್ ಮಾಸ್ತರರು ರಾತ್ರಿ ಹನ್ನೆರಡೂವರೆ ಗಂಟೆಗೆ ಹೃದಯಾಘಾತದಿಂದ ತೀರಿಕೊಂಡಿದ್ದಾರೆ ಎಂದು ವೃದ್ಧಾಶ್ರಮದ ಸಿಬ್ಬಂದಿ ಫೋನ್ ಮಾಡಿ ಸುದ್ದಿ ಮುಟ್ಟಿಸಿದ್ದರು. ಅದಾದ ಕೆಲವೇ ನಿಮಿಷಗಳಲ್ಲಿ ಅವರ ಅಳಿಯ ಸುನೀಲ್‌ನೂ ಫೋನ್ ಮಾಡಿ ಮಾವ ತೀರಿಕೊಂಡ ಸಮಾಚಾರವನ್ನು ತಿಳಿಸಿದ್ದ.
ಕಳೆದ ತಿಂಗಳು ಅದೇನೋ ಕೆಲಸಕ್ಕೆ ಬೆಂಗಳೂರಿಗೆ ಹೋದಾಗ ಚೆಲುವಪ್ಪ ಬಾವಿಕಟ್ಟಿ ಮಾಸ್ತರರು, ಗೆಳೆಯ ವಿಘ್ನೇಶಪ್ಪ ಪುಣೇಕರ್ ಮಾಸ್ತರರನ್ನು ಭೇಟಿ ಮಾಡಿ ಬಂದಿದ್ದರು. ಲವಲವಿಕೆಯಿಂದ ಓಡಾಡಿಕೊಂಡು ಆರೋಗ್ಯವಂತರಾಗಿದ್ದ ವಿಘ್ನೇಶಪ್ಪ ಅವರು, `ನನಗೆ ಮೊಣಕಾಲ ನೋವು ಬಿಟ್ಟರೆ ಬೇರೆ ಯಾವ ಘನವಾದ ಕಾಯಿಲೇ ಇಲ್ಲ’ ಎಂದು ಹೇಳಿಕೊಂಡಿದ್ದರು.
`ಇದೇನು ಹೀಗಾಯಿತಲ್ಲ’ ಎಂಬ ಚಿಂತೆ ಚೆಲುವಪ್ಪ ಮಾಸ್ತರರಿಗೆ ಯಕ್ಷ ಪ್ರಶ್ನೆಯಾಗಿ ಕಾಡತೊಡಗಿತ್ತು. ದಶಕಗಳ ಕಾಲ ಸಹೊದ್ಯೋಗಿಯಾಗಿದ್ದ ವಿಘ್ನೇಶಪ್ಪಾರ ಸಾವು ಅವರನ್ನು ತೀವ್ರವಾಗಿ ಘಾಸಿಗೊಳಿಸಿತ್ತು. ಮೃತರ ಆತ್ಮಕ್ಕೆ ಶಾಂತಿಕೋರಿ ಗುಡಿಯಲ್ಲಿ ಪೂಜೆ ಇಡಿಸೋಣ. ದೇವರಿಗೆ ಕೃತಜ್ಞತಾ ಸ್ತೊçÃತ್ರಗಳನ್ನು ಹೇಳಿ ಮನಸ್ಸಿಗೆ ಸಮಾಧಾನ ತಂದುಕೊಳ್ಳೋಣ ಎಂದು ಕೊಂಡ ಬಂದಿದ್ದ ಚೆಲುವಪ್ಪ ಮಾಸ್ತರರಿಗೆ ದೊಡ್ಡ ಆಘಾತ ಕಾದಿತ್ತು.
ಗುಡಿಗೆ ಬಂದವರಿಗೆ ಕೈ ಬೀಸಿ ಕರೆಯುತ್ತಿದ್ದ, ನೂರಾರು ಪಕ್ಷಿಗಳಿಗೆ ಆಶ್ರಯವಾಗಿದ್ದ ಗುಡಿಯ ಮುಂದಿನ ಆಲದ ಮರ ಅದರೊಂದಿಗಿದ್ದ ಬೇವಿನ ಮರ ಕಾಣೆಯಾಗಿದ್ದವು. ಹೆದ್ದಾರಿಯಿಂದ ತುಸುವೆ ದೂರದಲ್ಲಿದ್ದ ಗುಡಿಯ ಮುಂದಿನ ಆಲದ ಮತ್ತು ಬೇವಿನ ಮರಗಳು ಗುಡಿಯನ್ನು ಮರೆ ಮಾಡುತ್ತಿದ್ದವು. ಆದರೆ, ಇಂದು ಅವುಗಳ ಸುಳಿವೇ ಇಲ್ಲ. ಗುಡಿಯು ಹೆದ್ದಾರಿಯಿಂದ ಸ್ಪಷ್ಟವಾಗಿ ಗೋಚರಿಸತೊಡಗಿದೆ. ಅದಾವ ಮಾಯದಲ್ಲಿ ಗುಡಿಯನ್ನು ಮರೆಮಾಡಿದ್ದ ಮರಗಳು ಮಾಯವಾದವೋ? ತಕ್ಷಣವೇ ಅವರಿಗೆ ವಿಘ್ನೇಶಪ್ಪಾರ ಮಗಳು ಲತಾ ನೆನಪಾಗಿ ಅವರ ಕಣ್ಣಲ್ಲಿ ನೀರಾಡತೊಡಗಿತ್ತು. ಗುರುಗಳ ಗಮನಕ್ಕೆ ಬಾರದೇ ಈ ಕೆಲಸ ನಡೆಯುವಂಥದ್ದಲ್ಲ. ನಂತರ ವಿಚಾರಿಸಿದರಾಯಿತು ಎಂದುಕೊಳ್ಳುತ್ತಾ ಗುಡಿಯತ್ತ ಹೆಜ್ಜೆ ಇಟ್ಟಿದ್ದರು.
ಗಟ್ಟಿ ಮನಸ್ಸು ಮಾಡಿಕೊಂಡ ಚೆಲುವಪ್ಪ ಮಾಸ್ತರರು ಗುಡಿಯ ಒಳಗೆ ಹೋಗಿ ಮೊಣಕಾಲುರಿ ಪ್ರಾರ್ಥನೆ ಸಲ್ಲಿಸಲು ಮುಂದಾದರೆ, ಮೊಮ್ಮಗ ಸಿರಿಲ್, ಗುಡಿಯ ಮುಂದೆ ನಿಂತು ಶಿಲುಬೆ ಗುರುತು ಹಾಕಿ, ತನ್ನ ನೆಚ್ಚಿನ ಗುರುಗಳಾದ ರಾಯಪ್ಪ ಸ್ವಾಮ್ಯಾರನ್ನು ಕಾಣಲು ಗುರುಮನೆಯತ್ತ ಹೆಜ್ಜೆ ಹಾಕಿದ್ದ.
ಚೆಲುವಪ್ಪ ಮಾಸ್ತರರು ಆಗಲಿದ ಆತ್ಮೀಯ ಗೆಳೆಯನನ್ನು ಸ್ಮರಿಸಿಕೊಂಡು, ಅವನೊಂದಿಗೆ ಕಳೆದಿದ್ದ ದಿನಗಳನ್ನು ನೆನೆಸಿಕೊಳ್ಳುತ್ತಾ, ಮೃತರ ಆತ್ಮಕ್ಕೆ ಶಾಂತಿ ಸಮಧಾನ ಕೋರಿಕೊಂಡು ಪ್ರಾರ್ಥನೆ ಸಲ್ಲಿಸತೊಡಗಿದ್ದರು.
ಇತ್ತ ಗುರುಮನೆಯಲ್ಲಿ ಕಾಲಿಟ್ಟ ಸುನೀಲ್‌ನಿಗೆ ಅಚ್ಚರಿ ಕಾದಿತ್ತು. ನಿನ್ನೆ ಸಂಜೆಯವರೆಗೆ ಗುರುಗಳು ಲವಲವಿಕೆಯಿಂದ ಇದ್ದರು. ನಿನ್ನೆ ತಡರಾತ್ರಿ, ಗುಡಿಯ ನೋಟಕ್ಕೆ ಅಡಚಣೆ ಉಂಟು ಮಾಡುತ್ತಿದ್ದ ಆಲದ ಮತ್ತು ಬೇವಿನ ಮರಗಳನ್ನು ಕಡಿದು ಸಾಗಿಸಿ, ನೆಲವನ್ನು ಸಮತಟ್ಟು ಮಾಡುವವರೆಗೂ ತಮ್ಮೊಂದಿಗೆ ಆರಾಮವಾಗಿದ್ದ ಗುರುಗಳಿಗೆ ಇದ್ದಕ್ಕಿದ್ದಂತೆಯೇ ಏನಾಯಿತು? ರಾತ್ರಿ ಸೌಖ್ಯದಿಂದ ಇದ್ದವರು ಬೆಳಗಾಗುವಷ್ಟರಲ್ಲಿ ಹಾಸಿಗೆ ಹಿಡಿದು ಮಲಗಿದ್ದಾರೆ.
ಅದಾಗಲೇ ಸುನೀಲ್ ವಾರಿಗೆಯ ಒಂದಿಬ್ಬರು ಹುಡುಗರು ಮತ್ತು ಒಬ್ಬಳು ಹುಡುಗಿ ಗುರುಗಳ ಆರೋಗ್ಯ ವಿಚಾರಿಸಲು ಬಂದಿದ್ದರು. ಅವರಲ್ಲೊಬ್ಬ ಮೆಡಿಕಲ್ ಶಾಪ್ ನಿಂದ ಪ್ಯಾರಾಸಿಟಮಾಲ್ ಗುಳಿಗೆ ತರಲು ಊರಿಗೆ ಹೋಗಿದ್ದ.
ಗುರುಮನೆಯ ತಮ್ಮ ಕೋಣೆಯಲ್ಲಿ ನಿಧಾನವಾಗಿ ಎದ್ದು ಹಾಸಿಗೆಯಲ್ಲಿ ಕುಳಿತಿದ್ದ ರಾಯಪ್ಪ ಸ್ವಾಮ್ಯಾರು, ಅಡುಗೆ ಆಳು ಸಿಲ್ವಿಯಾಳನ್ನು ಕರೆದು ಎಲ್ಲರಿಗೂ ಸಿರಾ ಮತ್ತು ಉಪ್ಪಿಟ್ಟಿನ ನಾಷ್ಟಾ ಸಿದ್ಧಪಡಿಸಲು ತಿಳಿಸಿದರು. “ಮಕ್ಕಳೇ, ನೀವೆಲ್ರೂ ನನ್ನೊಂದಿಗೆ ಇಲ್ಲಿಯೇ ನಾಷ್ಟಾ ಮಾಡಿಕೊಂಡು ಹೋಗಬೇಕು’’ ಎಂದು ಆಗ್ರಹಿಸಿ ಬಚ್ಚಲು ಮನೆಗೆ ಹೋದರು.
ಗುರುಗಳು ಬಚ್ಚಲು ಮನೆಯಿಂದ ಹೊರಗೆ ಬರುವಷ್ಟರಲ್ಲಿ, ಊರಿಗೆ ಹೋಗಿದ್ದ ಹುಡುಗ, ಔಷಧಿ ಅಂಗಡಿಗಳು ಅಷ್ಟು ಮುಂಜಾನೆ ತೆರೆಯದ ಕಾರಣ, ತನ್ನ ಮನೆಯಲ್ಲೇ ಹುಡುಕಾಡಿ ಪ್ಯಾರಾಸಿಟಮಾಲ್ ಮಾತ್ರೆಗಳನ್ನು ತಂದಿದ್ದ. ಅಷ್ಟರಲ್ಲಿ ಅಡುಗೆಯಾಳು ಸಿಲ್ವಿಯಾ ಬಿಸಿ ಬಿಸಿ ಸಿರಾ ಮತ್ತು ಉಪ್ಪಿಟ್ಟಿನ ತಟ್ಟೆಗಳನ್ನು ಜೊತೆಗೆ ಹಬೆಯಾಡುತ್ತಿದ್ದ ಚಹಾದ ಬಟ್ಟಲುಗಳನ್ನು ಊಟದ ಮೇಜಿನ ಮೇಲೆ ಇರಿಸಿದ್ದಳು.
ಎಲ್ಲರೂ ನಾಷ್ಟಾ ತಿಂದು ಚಹಾ ಕುಡಿದಾದ ಮೇಲೆ, ಗುಳಿಗೆ ನುಂಗಿ ತಮ್ಮ ಕೋಣೆಗೆ ಸೇರಿದ ತಾಯಿ ಸಂತ ಥೆರೇಸಮ್ಮರ ಗುಡಿಯ ಚಿಕ್ಕ ಸ್ವಾಮ್ಯಾರು ರಾಯಪ್ಪ ಅವರು ಅಲ್ಲಿಯೇ ಕುರ್ಚಿ ಹಾಕಿಸಿಕೊಂಡು ಮಕ್ಕಳ ಜೊತೆಗೆ ಕುಳಿತರು.
“ಸ್ವಾಮ್ಯಾರ ಏನಾಯಿತು? ನಿನ್ನೆ ರಾತ್ರಿ ಎಲ್ಲವೂ ಮುಗಿಯುವವರೆಗೆ ಚೆನ್ನಾಗಿಯೇ ಇದ್ದೀರಲ್ಲಾ. ಬೆಳಗಾಗುವಷ್ಟರಲ್ಲಿ ಏನಾಯಿತು?’’
“ಏನಾದರೂ ಕೆಟ್ಟ ಕನಸು ಬಿದ್ದು ಹೆದರಿಕೊಂಡ್ರಾ?’’
“ನಿಮಗೆ ಇದುವರೆಗೂ ಏನೂ ಅನ್ನಿಸದ ಪಕ್ಕದ ಸ್ಮಶಾನದ ದೆವ್ವದ ಕತೆ ಏನಾದರೂ ಮತ್ತೆ ನೆನಪಾಗಿತ್ತೆ?’’
ಮಕ್ಕಳು ವಿಚಾರಿಸತೊಡಗಿದ್ದರು.
“ನಸುಕಿನ ಎರಡು ಗಂಟೆಯ ಸುಮಾರು ಎಚ್ಚರವಾದಾಗ ದೆವ್ವ ಕಂಡ ಅನುಭವವಾಯಿತು. ಅದಕ್ಕೂ ಮೊದಲು ಹನ್ನೆರಡು ಗಂಟೆಯವರೆಗೆ ಮರ ಕಡಿದು ಸಾಗಿಸುವುದರಲ್ಲೇ ತೊಡಗಿಕೊಂಡಿದ್ದವು. ಇದು ಭ್ರಮೆಯೋ ಭೂತವೋ ಒಂದೂ ಗೊತ್ತಾಗುತ್ತಿಲ್ಲ. ಆ ಭಯದಲ್ಲಿ ಸ್ವಲ್ಪ ಜ್ವರ ಬಂದAತಾಗಿರಬೇಕು.’’
ಇಷ್ಟು ಹೇಳಿದ ರಾಯಪ್ಪ ಸ್ವಾಮ್ಯಾರು ಸುಮ್ಮನಾದರು.
ಅದೇ ಸಮಯಕ್ಕೆ ಗುರುಗಳನ್ನು ಕಾಣಲು ಗುರುಮನೆಯ ಬಾಗಿಲ ಫಡಕನ್ನು ತಟ್ಟಲು ಮುಂದಾಗಿದ್ದ ಚೆಲುವಪ್ಪ ಅವರಿಗೆ ಚಿಕ್ಕ ಸ್ವಾಮ್ಯಾರು ರಾಯಪ್ಪ ಅವರು ಆಡಿದ ಎಲ್ಲಾ ಮಾತುಗಳು ಕೇಳಿಸಿದ್ದವು. `ಅಯ್ಯೋ ಘಾತವಾಯಿತಲ್ಲಾ’ ಎಂದು ನೊಂದಕೊAಡ ಅವರು ಚಿಕ್ಕ ಗುರುಗಳನ್ನು ಮಾತನಾಡಿಸುವ ಗೋಜಿಗೆ ಹೋಗಲೇ ಇಲ್ಲ. ಎಲ್ಲ ವಿಷಯವನ್ನು ಕೂಲಂಕುಶವಾಗಿ ತಿಳಿದಿದ್ದ ದೊಡ್ಡ ಗುರು ಅಮೃತಪ್ಪ ಸ್ವಾಮ್ಯಾರು ಇದ್ದಿದ್ದರೆ, ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ಚಿಂತಿಸಿದ ಅವರು, ಹಾಗೆಯೇ ಹೊರ ನಡೆದರು. ಗುರುಮನೆಯ ಬಾಗಿಲಲ್ಲಿ ನಿಂತಿದ್ದ ಉಪದೇಶಿ ಚಿನ್ನಪ್ಪನನ್ನು ಮಾತನಾಡಿಸುತ್ತಾ, “ಒಳಗೆ ನನ್ನ ಮೊಮ್ಮಗ ಸಿರಿಲ್ ಇದ್ದರೆ ಕರಿಯಪ್ಪ ಮನೆಗೆ ಹೋಗಬೇಕು’’ ಎಂದರು.
ನಿನ್ನೆ ಹುಡುಗರೊಂದಿಗೆ ಅರೆಮನಸ್ಸಿನಿಂದ ಮರಗಳ ಟೊಂಗೆಗಳನ್ನು ಮರ ಕೊಯ್ಯವ ಯಂತ್ರದಿAದ ಸವರುತ್ತಾ ಇದ್ದ ಉಪದೇಶಿ ಆರೋಗ್ಯಪ್ಪ, ಅಲ್ಲಿಯೇ ಸ್ವಲ್ಪ ದೂರದಲ್ಲಿನ ಊರವರ ಸ್ಮಶಾನದಲ್ಲಿ ನಡೆದಿದ್ದ ಹಳೆಯ ಕತೆಯನ್ನು ಬಣ್ಣಿಸಿ ಹೇಳುತ್ತಿದ್ದ. ಎಲ್ಲರ ಕಿವಿಗಳು ಅವನತ್ತಲೇ ಇದ್ದವು.
ಒಕ್ಕಲುತನ ಮನೆತನದಿಂದ ಬಂದಿದ್ದ ಆರೋಗ್ಯಪ್ಪನಿಗೆ ಗುಡಿಯ ಮುಂದಿನ ಮರಗಳನ್ನು ಕಡಿಯುವುದು ಬೇಡವಾಗಿತ್ತು. ಅದನ್ನು ಸ್ಪಷ್ಟವಾಗಿ ಚಿಕ್ಕ ಸ್ವಾಮ್ಯಾರಿಗೆ ಹೇಳಲು ಧೈರ್ಯವಿರಲಿಲ್ಲ. ಆದರೂ ಏನಾದರೂ ಮಾಡಬೇಕೆಂಬ ತುಡಿತ ಅವನಲ್ಲಿತ್ತು. ದೆವ್ವದ ಕತೆ ಹೇಳಿದರೆ ಕೊಡಲಿ ಹಿಡಿದುಕೊಂಡು ನಿಂತಿರುವ ಹುಡುಗರು ಹಿಂದೆ ಸರಿದಾರು ಎಂದು ಕೊಂಡು, ಹಿಂದೆ ಊರ ಸ್ಮಶಾನದಲ್ಲಿ ನಡೆದಿದ್ದ ಕತೆಯನ್ನು ನೆನಪಿಸಿಕೊಂಡು ಅದನ್ನು ಮಕ್ಕಳಿಗೆ ಹೇಳತೊಡಗಿದ್ದ.
“ಸ್ಮಶಾನದಲ್ಲಿ ಒಂದು ದೊಡ್ಡ ಹುಣಿಸೇಮರವಿತ್ತು. ಸಿಹಿ ಮತ್ತು ಹುಳಿಯ ಸ್ವಾದದ ಹುಣಸೆ ಹಣ್ಣಿನ ಮರವನ್ನು ಹಿಂದುಸ್ತಾನದ ಖಜ್ಜೂರ ಎಂದು ಗುರುತಿಸುವ ಅರಬರು ಅದಕ್ಕೆ ತಾಮ್ರಹಿಂಡಿ ಎಂದು ಕರೆಯುತ್ತಾರೆ. ಹೀಗಾಗಿ ಇಂಗ್ಲಿಷ್ ನಲ್ಲಿ ಹುಣಸೆಹಣ್ಣು ಟ್ಯಾಮರಿಂಡ್ ಆಗಿದೆಯಂತೆ.’’
“ಆ ಹುಣಸೆ ಹಣ್ಣಿನ ಮರವನ್ನು ಏನಂತ ತಿಳಿದಿದ್ದೀರಿ? ಶಿವ ಮತ್ತು ಭಸ್ಮಾಸುರರ ನಡುವೆ ಯುದ್ಧ ನಡೆಯುವಾಗ, ಭಸ್ಮಾಸುರ ಹುಣಸೆಮರದ ಹಿಂದೆ ಬಚ್ಚಿಕೊಳ್ಳುತ್ತಾನೆ. ಆ ಸಮಯದಲ್ಲಿ ಹುಣಸೆಹಣ್ಣಿನ ಮರದ ಎಲೆಗಳು ಅಗಲವಾಗಿದ್ದವು. ಭಸ್ಮಾಸುರನನ್ನು ಸಾಯಿಸಲು ಶಿವ ಮೂರನೆ ಕಣ್ಣನ್ನು ಬಿಟ್ಟಾಗ, ಅದರ ಶಾಖಕ್ಕೆ ಅಗಲ ಎಲೆಗಳು ಹರಿದು ಚಿಕ್ಕ ಚಿಕ್ಕದಾದ ಎಲೆಗಳಾದವು, ಹೀಗಾಗಿ ಅಂದಿನಿAದ ಅದರ ಎಲೆಗಳು ಚಿಕ್ಕಚಿಕ್ಕದಾಗಿಯೇ ಇವೆ ಎಂದು ಊರಲ್ಲಿನ ಹಿರಿಯ ತಲೆ ಸಾಲಿಮಠದ ಶಿವಪ್ಪ ಮಾಸ್ತರರು ಹೇಳುತ್ತಿದ್ದರು.’’
“ .. ! ‘’
`ಅಷ್ಟೇ ಅಲ್ಲ ರಾಮಾಯಣದಲ್ಲೂ ಇಂಥದೇ ಒಂದು ಕತೆಯಿದೆಯಂತೆ. ರಾಮ ವನವಾಸಕ್ಕೆ ಹೋದಾಗ, ಲಕ್ಷö್ಮಣ ಅಣ್ಣನಿಗಾಗಿ ಹುಣಸೆಮರದ ಕೆಳಗೊಂದು ಗುಡಿಸಲು ನಿರ್ಮಿಸುತ್ತಾನೆ. ಅಗಲ ಎಲೆಯ ಹುಣಸೆಮರದ ನೆರಳು ಅಹ್ಲಾದಕರವಾಗಿರುತ್ತದೆ.
ವನವಾಸಕ್ಕೆ ಬಂದವರು ಅಡವಿಯಲ್ಲಿ ತೊಂದರೆ, ಕಷ್ಟಗಳನ್ನು ಅನುಭವಿಸಬೇಕು. ಇಂಥ ಅಲ್ಹಾದಕರ ವಾತಾವರಣವು ತಂದೆಯ ಆಸೆ ಈಡೇರಿಸಲು ಅಡ್ಡ ಬರುತ್ತದೆ’ ಎಂದು ರಾಮ ಬಗೆದಾಗ, ಲಕ್ಷö್ಮಣ ಬಿಲ್ಲಿಗೆ ಬಾಣಗಳನ್ನು ಹೂಡಿ ಗಿಡದ ಎಲೆಗಳಿಗೆ ಹೊಡೆದ. ಅಗಲವಾಗಿದ್ದ ಎಲೆಗಳು ಬಿಡಿಬಿಡಿಯಾಗಿ ಚಿಕ್ಕ ಗಾತ್ರವನ್ನು ಪಡೆದವಂತೆ!’’
ಉಪದೇಶಿ ಹುಣಸೆಹಣ್ಣಿನ ಮರವನ್ನು ಪ್ರಸ್ತಾಪಿಸುತ್ತಿದ್ದಂತೆಯೇ, ಪ್ರಾಥಮಿಕ ಶಾಲೆಯಲ್ಲಿದ್ದಾಗ ಹುಣಸೆಕಾಯಿಯನ್ನು ಉಪ್ಪಿನೊಂದಿಗೆ ಕುಟ್ಟಿ ತಿನ್ನುತ್ತಿದ್ದುದು, ಹುಣಸೆಹಣ್ಣನ್ನು ಬೆಲ್ಲದೊಂದಿಗೆ ಕುಟ್ಟಿ, ಉಂಡೆ ಮಾಡಿ ಬಿದಿರು ಕಡ್ಡಿಗೆ ಸಿಕ್ಕಿಸಿಕೊಂಡು ಐಸ್ಕಿçÃಂ ಕ್ಯಾಂಡಿ ಚೀಪುವಂತೆ ಚೀಪುತ್ತಿದ್ದುದು ನೆನಪಾಗಿ ಹುಡುಗರ ಬಾಯಲ್ಲಿ ಜೊಲ್ಲು ಸುರಿಯತೊಡಗಿತ್ತು.
“ಅಲ್ಲ ಮಾರಾಯ, ಈ ಕತ್ತಲಲ್ಲಿ ಅದಾವುದೋ ದೆವ್ವದ ಕತೆ ಅಂತ ಹೇಳತಾ ಹುಣಿಸೆಹಣ್ಣು ತಿನ್ನಿಸ್ತಾ ಇದಿಯಲ್ಲಾ? ಏನು ಕತೆ?’’ ಹುಡುಗ ಸಿಮೋನಪ್ಪ ಕೇಳಿದ.
“ನೀವು ಎಲ್ಲವನ್ನು ಕೇಳಿಸಿಕೊಂಡರಷ್ಟೆ ನಾನು ಹೇಳುವುದು. ದೆವ್ವದ ಕತೆಗೆ ಬರ್ತಾ ಇದ್ದೆ. ಇದು ನನ್ನ ಕತೆಗೆ ಪೀಠಿಕೆ ಅಂದಕೊಳ್ಳಿ.’’
“ಆಯಿತು, ಅದೇನು ಹೇಳಪ್ಪಾ.‘’ ಹುಡುಗರು ಉಪದೇಶಿ ಆರೋಗ್ಯಪ್ಪನ್ನ ಕೇಳಿಕೊಂಡರು.
“ನಿಮಗೆಲ್ಲಾ ಗೊತ್ತಲ್ಲಾ, ಅದೋ ಅಲ್ಲಿ ಕೆಳಗೆ ಎಡಕ್ಕೆ ಮಿಣುಕು ದೀಪ. ಪಕ್ಕದಲ್ಲಿ ಉರಿಯು ಕಾಣುತ್ತಿದೆಯಲ್ಲ ಅದೇ ಊರ ಸ್ಮಶಾನ. ಆ ಸ್ಮಶಾನದಲ್ಲಿ ಒಂದು ನೂರು ವರ್ಷದ ಹುಣಸೆ ಹಣ್ಣಿನ ಮರವಿದೆ. ಸಿಕಂದರ್ ಬೇವಿನಗಿಡದ ಅವರು, ಅದನ್ನು ಪ್ರತಿವರ್ಷವೂ ಹರಾಜಿನಲ್ಲಿ ಗ್ರಾಮ ಪಂಚಾಯಿತಿಯಿAದ ಗುತ್ತಿಗೆ ಪಡೆದು ಹಣ್ಣು ಇಳಿಸಿಕೊಂಡು ಅಡತಿಗೆ ಹೋಗಿ ಮಾರಿಕೊಂಡು ಬರುತ್ತಾರೆ. ಅವರೇ ಒಮ್ಮೆ ಈ ಕತೆಯನ್ನು ನನಗೆ ಹೇಳಿದ್ದರು. ಅದನ್ನೇ ನಾನು ನಿಮಗೆ ಹೇಳಲು ಹೊರಟಿರುವೆ.’’
“ಅದೇನು ಮಾತು ನಿಮ್ಮದು. ಲಗು ಲಗು ಕೆಲಸ ಮುಗಿಸಿ. ಸರಿ ಹೊತ್ತಾಯಿತು.’’ ಚಿಕ್ಕ ಗುರುಗಳಾದ ರಾಯಪ್ಪ ಸ್ವಾಮ್ಯಾರು ಕೆಲಸವನ್ನು ಶೀಘ್ರವಾಗಿ ಮುಗಿಸಲು ಒತ್ತಡ ಹಾಕುತ್ತಿದ್ದರು.
“ಸ್ವಾಮ್ಯಾರ, ನಮ್ಮ ಉಪದೇಶಿ ಆರೋಗ್ಯಪ್ಪ ಈ ಸರಿ ಹೊತ್ತಿನಲ್ಲಿ ದೆವ್ವದ ಕತೆ ಹೇಳ್ತಿದ್ದಾನೆ. ನೀವು ಕೇಳಿಸಿಕೊಳ್ಳಬಹುದು.’’
“ಏನೋ ಆರೋಗ್ಯಪ್ಪ, ಅದೇನು ಕತೆ? ಹೇಳಪ್ಪಾ.’’
“ಅದೇ ಸ್ವಾಮಿ, ಅದೋ ದೂರದಲ್ಲಿ ಮಿಣಿ ಮಿಣಿ ದೀಪ ಕಾಣುತ್ತಲ್ಲಾ. ಅದು ಊರ ಸ್ಮಶಾನ ಅದು ಊರಿಗೆ ಹತ್ತಿಕೊಂಡೇ ಇದೆ. ಅಲ್ಲಿ ನಡೆದಿದ್ದ ಕತೆ ಹೇಳಿತ್ತಿದ್ದೆ ಸ್ವಾಮಿ.’’
“ಹೂಂ ಅದೇನು ಹೇಳಪ್ಪ. ಇಲ್ಲಿ ಸಮಾಧಿಗಳು ಊರಿಗೆ ಹತ್ತಿಕೊಂಡೆ ಇದ್ದರೆ, ಕೇರಳದಲ್ಲಿ ನಮ್ಮ ಗುಡಿಗಳ ಪಕ್ಕದಲ್ಲಿಯೇ ಸಮಾಧಿಗಳಿರ್ತಾವೆ. ನೀನು ನಿನ್ನ ಕತೆ ಮುಂದುವರೆಸಪ್ಪ.’’ ರಾಯಪ್ಪ ಗುರುಗಳು ಅಪ್ಪಣೆ ಕೊಡಿಸಿದರು.
`ಐವತ್ತು ವರ್ಷಗಳ ಹಿಂದೆ, ಊರಲ್ಲಿನ ಹುಡುಗರು ಶಹರಕ್ಕೆ ಹೈಸ್ಕೂಲಿಗೆ ಓದಲು ಹೋಗಿದ್ದರು. ಅದರಲ್ಲಿನ ನಾಲ್ಕು ಹುಡುಗರು ತುಂಬಾ ಜಾಣರು ಜೊತೆಗೆ ಕಿಡಿಗೇಡಿಗಳೂ ಆಗಿದ್ದರು. ಒಂದು ಬಾರಿ ನಮ್ಮಲ್ಲಿ ಎಲ್ಲರಿಗಿಂತಲೂ ಯಾರೂ ಧೈರ್ಯಸ್ಥ ಎಂಬುದನ್ನು ಕಂಡಕೊಳ್ಳಬೇಕು ಎಂಬ ಹುಕಿ ಹುಟ್ಟಿಕೊಂಡಿತು. ಯಾವುದಾದರೂ ಪಂಥ ಒಡ್ಡಿ ಅದರಲ್ಲಿ ಗೆದ್ದವರನ್ನು ಧೈರ್ಯಸ್ಥ ಎಂದು ಗುರುತಿಸಬಹುದು ಎಂದುಕೊAಡರು. ಏನು ಪಂಥ? ಯಾವ ಪಂಥ? ವಿಚಾರ ಮಾಡುತ್ತಾ,
ಇಂದು ಅಮಾವಾಸ್ಯೆ. ಈ ರಾತ್ರಿಯೇ ಎಲ್ಲರದೂ ಊಟವಾದ ಮೇಲೆ ನಮ್ಮಲ್ಲಿನ ಗಟ್ಟಿಗ ಸ್ಮಶಾನದಲ್ಲಿನ ಹುಣಸೆ ಮರದ ಕಾಂಡಕ್ಕೆ ಮೊಳೆ ಹೊಡೆದು ಬರಬೇಕು. ಅದಾವನು ಮೊಳೆ ಹೊಡೆದು ಬರ್ತಾನೋ ಅವನೇ ನಮ್ಮೊಳಗಿನ ಧೈರ್ಯಸ್ಥ’ ಎಂದು ತೀರ್ಮಾನಿಸುವುದು ಎಂದು ಮಾತಾಡಿಕೊಂಡರು.
ಅದರಂತೆ ಆ ರಾತ್ರಿ ನಾಲ್ವರೂ ಊಟ ಮಾಡಿಕೊಂಡು ಬಂದು ಊರ ಅಗಸಿಯ ಮುಂದೆ ಸೇರಿಕೊಂಡರು. ಗಾಣಿಗರ ಮಲ್ಲಪ್ಪ, ಜಮಾದಾರ ಸಿಕಂದರ, ಮಂಟೂರು ಬಸವಣ್ಣ, ಬನ್ನಿ ಗಿಡದ ಬರ್ನಾಬಸ್ ಎಲ್ಲರೂ ನಿಧಾನವಾಗಿ ನಡೆದುಕೊಂಡು ಸ್ಮಶಾನದ ಕಡೆ ಹೆಜ್ಜೆ ಇಡಲಾರಂಭಿಸಿದರು. ಬನ್ನಿಗಿಡದ ಬರ್ನಾಬಸ್ ಇದೆಲ್ಲಾ ಬೇಡ. ನಾವು ನಮ್ಮ ನಮ್ಮ ಮನೆಗಳಿಗೆ ಹಿಂದಿರುಗೋಣ’ ಎಂದರೆ, ಮಂಟೂರು ಬಸವಣ್ಣ
ಹುಣಸೆ ಮರದಲ್ಲಿ ದೆವ್ವಗಳು ಬೇರೆ ಇರ್ತಾವಂತೆ ಎಂದು ಕೇಳಿದ್ದೀನಿ.’ ಎಂದು ಭಯಪಟ್ಟ. `ದೆವ್ವಗಳ ಪಾದಗಳು ಹಿಂದುಮುAದೆ ಇರ್ತಾವಂತೆ. ಅವು ಉಲ್ಟಾಪಲ್ಟಾ ನಡೆಯುತ್ತವಂತೆ, ಕೊಳ್ಳಿ ದೆವ್ವ ಬೆಂಕಿ ಹಿಡಿದುಕೊಂಡು ಅಡ್ಡಾಡುವುದಂತೆ, ಮೋಹಿನಿ ದೆವ್ವ ಬಿಳಿ ಸೀರೆ ಉಟ್ಟುಕೊಂಡು ಬರ್ತದಂತೆ, ಅದು ಗೆಜ್ಜೆ ಸಪ್ಪಳ ಕೇಳಿಸುವುದಂತೆ’ ಎಂದೆಲ್ಲಾ ಅವರು ಕೇಳಿಸಿಕೊಂಡಿದ್ದರು.
ಅದೇನೂ ಇಲ್ರೋ. ನಾನು ಮೊಳೆ ಹೊಡೆದು ಬರ್ತೀನಿ’ ಎನ್ನುತ್ತಾ, ಗಾಣಿಗರ ಮಲ್ಲಪ್ಪನ ಕೈಯಲ್ಲಿದ್ದ ಮೊಳೆ ಮತ್ತು ಹತೋಡಿಯನ್ನು ಕಸಿದುಕೊಂಡ, ಉದ್ದನೆಯ ನೆಹರೂ ಷರ್ಟ್ ತೊಟ್ಟಿದ್ದ ಜಮಾದಾರ ಸಿಕಂದರ, ಉಳಿದವರು ತಡೆಯಲು ಮುಂದಾಗುವ ಮೊದಲೇ ಸ್ಮಶಾನದತ್ತ ಓಡಿ ಬಿಟ್ಟಿದ್ದ. ಏದುಸಿರು ಬಿಡುತ್ತಾ
ಬೇಡವೋ’ ನಮ್ಮ ಮಾತು ಕೇಳು’
ನೀನೇ ಧೈರ್ಯಸ್ಥ ಹಿಂದುರುಗಿ ಬಾರೋ’ ಎನ್ನುತ್ತಾ ಉಳಿದ ಮೂವರು ಅವನನ್ನು ಹಿಂಬಾಲಿಸಿದರು. ಸಿಕಂದರ ಸ್ಮಶಾನದ ಆ ತುದಿಯಲ್ಲಿರುವ ಹುಣಸೆಮರದತ್ತ ಓಡಿದ್ದ. ಅದರ ಹತ್ತಿರ ನಿಂತಿದ್ದು ಉಳಿದವರಿಗೆ ಕಾಣಿಸತೊಡಗಿತ್ತು. ಆತ ಎಡಗೈಯಲ್ಲಿ ಮೊಳೆ ಹಿಡಿದು ಬಲಗೈಯಲ್ಲಿನ ಹತೋಡಿಯಿಂದ ಮೊಳೆಯ ತಲೆಗೆ ಏಟು ಕೊಡುತ್ತಿದ್ದ. ಮೊಳೆ ಹೊಡೆದ ನಂತರ ಹಿಂದೆ ದೂರದಲ್ಲಿ ನಿಂತಿದ್ದ ಉಳಿದವರತ್ತ ನೋಡಿ ಕೇಕೆ ಹಾಕಿದ. ಉಳಿದವರು `ಮೆಚ್ಚಿದೆವು ನಿನ್ನ ಧೈರ್ಯ’ ಎಂಬ ಮುಖಬಾವದಲ್ಲಿ ನಿಂತಿದ್ದರು. ಹುಣಸೆಮರದ ಬುಡದಿಂದ ಹಿಂದುರುಗಿ ನಡೆಯಲು ಮುಂದಾದ ಸಿಕಂದರ ಮುಗ್ಗರಿಸಿಕೊಂಡು ಬಿದ್ದ. ಅವನು ಅಲ್ಲಿ ಬೀಳುವುದೇ ತಡ ಉಳಿದವರು ತಮ್ಮ ತಮ್ಮ ಮನೆಗಳಿಗೆ ಓಡಿದರು.’’
“ಮುಂದಿನ ಕತೆ ಗೊತ್ತಾಯ್ತು ಬಿಡು ಆರೋಗ್ಯಪ್ಪ. ನಮ್ಮ ಹುಡುಗರನ್ನ ಹೆದರಿಸೋಕೆ ನೋಡಬೇಡ. ದೆವ್ವನೂ ಇಲ್ಲ ಪಿಶಾಚಿನೂ ಇಲ್ಲ. ಅವನು, ಅವನ ಅಂಗಿಗೆ ಮೊಳೆ ಹೊಡೆದುಕೊಂಡಿರ್ತಾನೆ. ಹಿಂದುರುಗಿದಾಗ ಅಂಗಿ ಎಳೆದಂತಾಗಿ ಮುಗ್ಗರಿಸಿರ್ತಾನೆ. ಕ್ಷಣದಲ್ಲಿ ಭಯ ಹುಟ್ಟಿಕೊಂಡು ಎದೆಯೊಡೆದುಕೊಂಡು ಆ ಹುಡುಗ ಸತ್ತಿರ್ತಾನೆ.’’
“ಏನ್ ಸ್ವಾಮ್ಯಾರ, ಹಿಂಗ ಹೇಳ್ತೀರಿ? ಪಿಶಾಚಿನೂ ಇಲ್ಲ, ದೆವ್ವಗಳೂ ಇಲ್ಲ ಅಂತೀರಿ? ಯೇಸುಸ್ವಾಮಿಗೆ ಪಿಶಾಚಿ ಕಾಟ ಕೊಟ್ಟಿದ್ದು ಸುಳ್ಳಾ? ಯೇಸುಸ್ವಾಮಿ ಪಿಶಾಚಿಗಳನ್ನು ಓಡಿಸಿದ್ದು ಎಲ್ಲಾ ಬೊಗಳೇನಾ?’’
ಇದುವರೆಗೂ ತಮಾಷೆಯ ಮೂಡಿನಲ್ಲಿದ್ದ ಚಿಕ್ಕ ಗುರು ರಾಯಪ್ಪ ಸ್ವಾಮ್ಯಾರು ಗಂಭೀರ ವದನರಾಗಿ ನುಡಿದರು.
` ಮಹಾಭಾರತದಲ್ಲಿ ನರಕಾಸುರನ ವಶದಲ್ಲಿದ್ದ ೧೬೦೦೦ ಗೋಪಿಕಾ ಸ್ತಿçÃಯರನ್ನು ಬಿಡಿಸಿಕೊಂಡು ಬಂದಾಗ, ಅವರ ಕರಿತು ಜನ ಆಡಬಾರದ್ದನ್ನು ಆಡುವುದನ್ನು ಕಂಡ ಕೃಷ್ಣ ಅವರನ್ನು ಮದುವೆಯಾದ ಎಂದು ಹೇಳುತ್ತಾರೆ. ಅದು ಹಾಗಲ್ಲ. ಕೊಳಲು ಉದುತ್ತಿದ್ದ ಕೃಷ್ಣ ಸಂಗೀತ ಪ್ರೇಮಿ. ಅವನನ್ನು ಆದರಿಸಲು ೧೬೦೦೦ ರಾಗಗಳನ್ನು ಬಳಸುತ್ತಾರೆ ಎಂಬುದರ ಸೂಚಕ ಆ ಕತೆ.ಯೇಸುಸ್ವಾಮಿ, ಕೆಡಕಿನ ಮನಸ್ಸಿನವರನ್ನು ಸುಧಾರಿಸಿದ್ದು. ಸಮಾಜ ಒಪ್ಪಿಕೊಂಡ ಜೀವನ ತತ್ವಗಳನ್ನು ಪಾಲಿಸದ, ಸಮಾಜದ ನೆಮ್ಮದಿಗೆ ಕಂಟಕಪ್ರಾಯರಾಗಿದ್ದ ಮಾನಸಿಕ ಅಸ್ವಸ್ಥರನ್ನು ಗುಣಪಡಿಸಿದ್ದು.
ಈ ದೇವಾಲಯವನ್ನು ಕೆಡವಿ ಬಿಡಿ ಮೂರು ದಿನಗಳಲ್ಲಿ ಅದನ್ನು ಪುನಃ ಎಬ್ಬಿಸುವೆನು’ ಎಂದ ನುಡಿದಿದ್ದ ಸ್ವಾಮಿಯು ಮೂರು ದಿನದಲ್ಲಿ ಮೃತರ ಮಧ್ಯದಿಂದ ಎದ್ದು ಬಂದಿದ್ದ. ಸ್ವಾಮಿಯ ಪ್ರತಿಯೊಂದು ನುಡಿಯಲ್ಲೂ ಕ್ರಿಯೆಯಲ್ಲೂ ಗೂಡಾರ್ಥವಿದ್ದೆ ಇರುತ್ತದೆ. ಅದನ್ನು ಕಾಣುವ ಪ್ರಯತ್ನ ನಮ್ಮದಾಗಿರಬೇಕು.’’
ವಾತಾವರಣ ಯಾಕೋ ಒಂದೇ ಬಾರಿ ಬಿಸಿ ಏರಿದಂತಾಯಿತು. “ಬನ್ರಪ್ಪಾ, ಕೆಲಸ ಬೇಗ ಮುಗಿಯಲಿ’’ ಎಂದು ಆರೋಗ್ಯಪ್ಪ ಹುಡುಗರನ್ನು ಅವಸರಪಡಿಸಿದ. ಯಾವಾಗಲಾದರೊಮ್ಮೆ ಕಾಡಿನಂಚಿನಲ್ಲಿ ಗಸ್ತು ತಿರುಗುತ್ತಿದ್ದ ಫಾರೆಸ್ಟ್ ಗಾರ್ಡ್ ಶಿವಪುತ್ರಪ್ಪನು ಇತ್ತ ಕಣ್ಣು ಹಾಯಿಸುವ ಮೊದಲೆ ಚಿಕ್ಕ ಗುರುಗಳು ಅಂದುಕೊಂಡಂತೆ ಎಲ್ಲವೂ ಮುಗಿಯಬೇಕಾಗಿತ್ತು. ಎಲ್ಲೆ ಮರ ಕಡಿದರೂ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಆದರೆ ಇಲ್ಲಿ ಅದನ್ನೆಲ್ಲಾ ಗಾಳಿಗೆ ತೂರಿ ಮರ ಕಡಿಯುವ ಕರ‍್ಯಾಚರಣೆ ಜರುಗುತ್ತಿತ್ತು. ಕೆಲವು ಹುಡುಗರು ಲಗುಬಗೆಯಿಂದ ಕಡಿದ ಎರಡೂ ಮರದ ತುಂಡುಗಳನ್ನೆಲ್ಲಾ ಒಂಟೆತ್ತಿನ ಗಾಡಿಗೆ ತುಂಬಿಸಿ ದೂರ ಸಾಗಿಸಿದ್ದರು. ಉಳಿದವರು ಬೊಡ್ಡೆಗಳನ್ನು ಬುಡ ಸಮೇತ ಕಿತ್ತು ಹಾಕಿ, ಅದರ ಮೇಲೆ ಮಣ್ಣು ಹರಡಿ, ಎಲೆಗಳನ್ನು ಮುಚ್ಚಿಹಾಕಿ ಅಲ್ಲಿ ಮರಗಳಿದ್ದವು ಎಂಬುದು ಅನುಮಾನ ಎನ್ನುವಂತೆ ಪರಿಸರವನ್ನು ಸಜ್ಜುಗೊಳಿಸಲಾಗಿತ್ತು.
ಹುಡುಗರೆಲ್ಲಾ ಉಪದೇಶಿ ಆರೋಗ್ಯಪ್ಪನ ಜೊತೆ ಸೇರಿಕೊಂಡು ಮರ ಕಡಿದು ನೆಲವನ್ನು ಸರಿ ಮಾಡಿ ಹೋಗುವಷ್ಟರಲ್ಲಿ ಹನ್ನೆರಡು ಗಂಟೆ ಹೊಡೆದಿತ್ತು. ಕೋಣೆಗೆ ತೆರಳಿದ ಚಿಕ್ಕ ಗುರು ರಾಯಪ್ಪ ಅವರು ದಣಿದಿದ್ದರು. ಹಾಸಿಗೆಯ ಮೇಲೆ ಉರುಳಿ, ಶಿಲುಬೆ ಗುರುತು ಹಾಕಿ ದಿನದ ಕೊಡುಗೆಗಳಿಗಾಗಿ ದೇವರಿಗೆ ಕೃತಜ್ಞತಾ ಪ್ರಾರ್ಥನೆ ಸಲ್ಲಿಸುತ್ತಿದ್ದಂತೆಯೇ ನಿದ್ರೆ ಆವರಸಿಕೊಂಡು ಬಿಟ್ಟಿತ್ತು. ಎರಡು ಗಂಟೆಯ ಸುಮಾರು ಎಚ್ಚರವಾಯಿತು. ನೀರಡಿಕೆಯಾದಂತೆ ಅನ್ನಿಸಿ ನೀರು ಕುಡಿಯಲು ಡೈನಿಂಗ ಟೇಬಲ್ ಇದ್ದ ಹಾಲಿನಲ್ಲಿ ಕಾಲಿರಿಸಿದ್ದ ಚಿಕ್ಕ ಗುರು ರಾಯಪ್ಪ ಅವರು ಸುಮ್ಮನೇ ಒಂದು ಬಾರಿ ಹೆಬ್ಬಾವಿನಂತೆ ಮಲಗಿದ್ದ ಹೆದ್ದಾರಿಯತ್ತ ಕಣ್ಣು ಹಾಯಿಸಿದರು. ಅಲ್ಲಿನ ನೋಟದಿಂದ ಅವರ ಝಂಗಾಬಲವೇ ಉಡುಗಿದಂತಾಯಿತು.
ಎದೆ ಡವಡವ ಹೊಡೆದುಕೊಳ್ಳಲು ತೊಡಗಿತ್ತು. ಝಣ ಝಣ ಗೆಜ್ಜೆಯ ಶಬ್ದ ಕಿವಿಗೆ ಅಪ್ಪಳಿಸಿದಂತಾಗುತ್ತಿತ್ತು. ಗುಡಿಯನ್ನು ರಸ್ತೆಯಿಂದ ಮರೆ ಮಾಡುತ್ತಿದ್ದ ಮರಗಳೆರಡೂ ಇಲ್ಲ. ಹೀಗಾಗಿ ಮರಗಳನ್ನು ಕಡಿದ ನಂತರ ರಾತ್ರಿಯಲ್ಲಿ ಹೆದ್ದಾರಿಯು ಹೆಬ್ಬಾವಿನಂತೆ ಕಂಡಿತ್ತು. ಗುಡಿಯ ಗೇಟಿನ ಮುಂದೆ ಹೆದ್ದಾರಿಯಲ್ಲಿ ಗುಡಿಯಷ್ಟೇ ಎತ್ತರದ ಹೆಂಗಸೊಬ್ಬಳು ಬಿಳಿ ಸೀರೆ ಉಟ್ಟುಕೊಂಡು ನಿಂತಿದ್ದಳು. ಅದೇ ತಲೆಗೆ ನೀರು ಹಾಕಿಕೊಂಡವರAತೆ ಅವಳ ಕೂದಲುಗಳು, ಇಳಿಬಿಟ್ಟ ಸೆರಗಿನೊಂದಿಗೆ ಗಾಳಿಯಲ್ಲಿ ಹಾರಾಡುತ್ತಿದ್ದವು. ರಾಯಪ್ಪ ಗುರುಗಳು ನೀರಿನ ಬಾಟಲಿಯನ್ನು ಡೈನಿಂಗ್ ಟೇಬಲ್ ಮೇಲೆಯೇ ಬಿಟ್ಟು ತಮ್ಮ ಕೋಣೆಗೆ ಓಡಿಹೋಗಿ ಧಡಾರೆಂದು ಬಾಗಿಲು ಮುಚ್ಚಿಕೊಂಡು ಹಾಸಿಗೆ ಸೇರಿದರು. ಗಡಗಡ ನಡುಗುತ್ತಿದ್ದ ಅವರು ನಡಗುವ ಕೈಯಿಂದಲೇ ಶಿಲುಬೆ ಗುರುತು ಹಾಕಿ ಜಪ ಹೇಳುತ್ತಾ ಮಲಗಿದರು. ಕಣ್ಣು ಮುಚ್ಚಿದರೆ, ಬಟ್ಟೆ ಬೆಂತರ ಅದೇ ದಾರಿ ದೆವ್ವ ಅಜಾನುಬಾಹು ಮಹಿಳೆ ಕಣ್ಣೆದುರು ಮೂಡಿದಂತಾಗುತ್ತಿತ್ತು. ಭಯದಲ್ಲಿ ಕಣ್ಣು ಮುಚ್ಚಲು ಆಗದೇ, ಕಣ್ಣು ತೆರೆದುಕೊಂಡು ಕೂಡಲೂ ಆಗದೆ ಬೆಳಗಿನ ಜಾವದವರೆಗೆ ಹೇಗೋ ಕಾಲ ಕಳೆದಿದ್ದರು. ಇದೆಲ್ಲಾ ಉಪದೇಶಿ ಚಿನ್ನಪ್ಪನ ಕತೆಯ ಪ್ರತಾಪವೇ ಎಂಬ ಭಾವವೂ ಒಮ್ಮೆ ಸುಳಿದು ಹೋಯಿತು. ಐದು ಗಂಟೆಯ ಸುಮಾರು ಎಚ್ಚರವಾಯಿತು. ಎಂದಿನ ಬೆಳಗಿನ ಪೂಜೆ ಎತ್ತೋ ಏನೋ ಅಂದುಕೊAಡು ಹಾಸಿಗೆಯಲ್ಲಿ ಎದ್ದು ಕುಳಿತ ಅವರಿಗೆ ಮೈ ಸುಡುತ್ತಿದ್ದ ಅನುಭವ ಆಗತೊಡಗಿತ್ತು. ದಿನದ ರೂಢಿಯಂತೆ ಉಪದೇಶಿ ಬಂದು ಪೂಜೆಗೆ ರೆಡಿ ಎಂಬ ಸನ್ನೆ ಮಾಡುತ್ತಿದ್ದಂತೆ ಹೇಗೋ ನಿಧಾನವಾಗಿ ನಡೆದು, ಪೂಜೆಕೊಟ್ಟ ಚಿಕ್ಕ ಗುರು ರಾಯಪ್ಪ ಅವರು ಮತ್ತೆ ತಮ್ಮ ಕೋಣೆಗೆ ಸೇರಿ `ಬಿಸಿ ಬಿಸಿ ಕಾಫಿ ಮಾಡಿಕೊಂಡು ಬರುವಂತೆ ಅಡುಗೆಯಾಳು ಸಿಲ್ವಿಯಾಳಿಗೆ ಕೂಗಿ ಹೇಳಿದರು.
ಗುಡಿಯಲ್ಲಿ ಪೂಜೆ ಮಾಡುವಾಗ, ಯಾಕೋ ಗುರುಗಳು ಎಂದಿನAತಿಲ್ಲ ಎಂದು ತಲೆ ಕೆಡಿಸಿಕೊಂಡಿದ್ದ ಉಪದೇಶಿ, ಗುರುಮನೆಯ ಅಡುಗೆ ಮನೆಯಲ್ಲಿದ್ದ ಹೆಂಡತಿ ಸಿಲ್ವಿಯಾಳನ್ನು ಮಾತನಾಡಿಸಲು ಬಂದಾಗ, ಗುರುಗಳು ಕಾಫಿ ಕೇಳುತ್ತಿದ್ದುದು ಕೇಳಿಸಿತು. ಸಿಲ್ವಿಯಾಳನ್ನು ಮಾತನಾಡಿಸುವುದನ್ನು ಬಿಟ್ಟು, ಗುರುಗಳ ಕೋಣೆಗೆ ತೆರಳಿದ ಉಪದೇಶಿ ಆರೋಗ್ಯಪ್ಪ, ಹಾಸಿಗೆಯಲ್ಲಿ ಉರುಳಿಕೊಂಡಿದ್ದ ಗುರುಗಳನ್ನು ಕಂಡು ಗಾಬರಿಯಾದ. ಅದೇ ಸಮಯಕ್ಕೆ ಎಂದಿನAತೆ ಬೆಳಗಿನ ಪೂಜೆಗೆ ಬಂದಿದ್ದ ಮೂವರು ಹುಡುಗರು ಗುರುಗಳನ್ನು ಕಾಣಲು ಬಂದಿದ್ದರು.
ಹೊಸ ಗುಡಿಗಾಗಿ ಸೂಕ್ತ ಜಾಗದ ಹುಡುಕಾಟದಲ್ಲಿದ್ದವರಿಗೆ ಧಾರವಾಡದಲ್ಲಿದ್ದ ಪ್ರಾಥಮಿಕ ಶಾಲಾ ಶಿಕ್ಷಕ ವಿಘ್ನೇಶಪ್ಪರ ಜಮೀನು ಕಣ್ಣಿಗೆ ಬಿದ್ದಿತ್ತು. ಈಗ ಅವರು ಬೆಂಗಳೂರಿಗೆ ಸೇರಿದ್ದರು. ಅವರಿಗೆ ಸೇರಿದ್ದ ಜಾಗ ಎಂದರೆ ಅದೊಂದು ದಿಣ್ಣೆ ಎನಿಸುವಂಥ ಗುಡ್ಡದ ಪ್ರದೇಶ. ಅವರಿಗೆ ಸೇರಿದ್ದ ಆ ಜಾಗದಲ್ಲಿ ಒಂದಿಷ್ಟು ಅಡಿಕೆ ಮತ್ತು ತೆಂಗಿನ ಮರಗಳಿದ್ದವು. ಅಲ್ಲಿಯೇ ಒಂದು ನೀರಿನ ಕುಂಟೆ ಇತ್ತು. ಜೊತೆಗೆ ಮುಖ್ಯವಾಗಿ ಎದ್ದು ಕಾಣುವ ಒಂದು ಹಳೆಯ ಹೆಂಚಿನ ಮನೆ ಇತ್ತು. ನೂರು ವರ್ಷ ಹಳೆಯದಾದ ಮರಮಟ್ಟಿನ ಮನೆಯಾಗಿದ್ದರೂ, ಅದೂ ಇನ್ನೂ ಗಟ್ಟಿಮುಟ್ಟಾಗಿತ್ತು. ಆ ಮನೆಯ ತುಸು ದೂರದಲ್ಲಿ ರಸ್ತೆಯ ದಿಕ್ಕಿನಲ್ಲಿ ಆಲದ ಮತ್ತು ಬೇವಿನ ಮರಗಳು ಬೆಳೆದು ನಿಂತಿದ್ದವು.
ವಿಘ್ನೇಶಪ್ಪ ಅವರು ಧಾರವಾಡದಲ್ಲಿ ನೆಲೆಸಿದ ಮೇಲೆ ಅವರು ಇಲ್ಲಿಗೆ ಬಂದು ಹೋಗುವುದು ನಿಧಾನವಾಗಿ ಕಡಿಮೆಯಾಗುತ್ತಾ ನಡೆದಿತ್ತು. ವಿಘ್ನೇಶಪ್ಪಾರು, ಅವರಪ್ಪ ಅಡವಿ ಗೋಪಾಲಪ್ಪ, ಅವ್ವ ಗೌರವ್ವರಿಗೆ ಒಬ್ಬನೇ ಮಗನಾಗಿದ್ದ. ತುಂಬಾ ದಿನಗಳ ನಂತರ ಊರಲ್ಲಿನ ಇಗ್ನೇಸಪ್ಪರ ಗುಡಿಯಲ್ಲಿ ಮೇಣದ ಬತ್ತಿ ಹಚ್ಚಿದ ನಂತರ ಗೌರವ್ವಳಿಗೆ ಹೊಟ್ಟೆ ನಿಂತಿತ್ತು. ಹುಟ್ಟಿದ ಮಗನಿಗೆ ಇಗ್ನೇಸಪ್ಪ ಹೆಸರಿಗೆ ಹತ್ತಿರವಾದ ಗಣಪ್ಪನ ಹೆಸರಾದ ವಿಘ್ನೇಶಪ್ಪ ಎಂಬ ಹೆಸರನ್ನೇ ಇಟ್ಟಿದ್ದರು. ಊರ ಕರಣಿಕ ಕುಲಕರ್ಣಿಯ ಹಿಂಬಾಲು ಬಿದ್ದು ಗೋಪಾಲಪ್ಪನ ಅಪ್ಪ ಭುಜಂಗಪ್ಪ ಅಂಕೋಲೆಯಿAದ ಬಂದವರು ಸರ್ಕಾರಿ ಖರಾಬ ಜಮೀನು ಮಂಜೂರು ಮಾಡಿಸಿಕೊಂಡು ಕೃಷಿಗೆ ಕೈ ಹಾಕಿದ್ದರು. ಅಡವಿಯಲ್ಲಿ ಜಮೀನು ಹೊಂದಿದ್ದರಿAದ, ಅವರ ಅಂಕೋಲೆಕರ ಹೆಸರು ಹಿಂದೆ ಸರಿದು, ಅಡವಿ ಅಡ್ಡಹೆಸರು ಅಂಟಿಕೊAಡಿತ್ತು. ವಿಘ್ನೇಶಪ್ಪಾರ ತಂದೆ ಗೋಪಾಲಪ್ಪ ತಾಯಿ ಗೌರವ್ವ ಶ್ರಮ ಜೀವಿಗಳು. `ಕೈ ಕೆಸರಾದರೆ ಬಾಯಿ ಮೊಸರು’ ಎಂಬ ನಾಣ್ಣುಡಿಯಂತೆಯೇ, ಭೂಮಿಯನ್ನು ಪ್ರೀತಿಸಿ, ತಮ್ಮ ಪಾಲಿಗೆ ಅಪ್ಪ ಬಿಟ್ಟುಹೋದ ಜಾಗವನ್ನು ನಂದನವನದAತೆ ಅಭಿವೃದ್ಧಿಪಡಿಸಿದ್ದರು. ಮಟ್ಟಸವಾದ ಭೂಮಿಯಲ್ಲಿ ಮನೆಗೆ ಬೇಕಾದಷ್ಟು ಅಕ್ಕಿ ಬೆಳೆಯುತ್ತಿದ್ದರು. ಇರಲಿ ಎಂದು ಅಡಿಕೆ ಮತ್ತು ತೆಂಗಿನ ಸಸಿಗಳನ್ನು ನೆಟ್ಟಿದ್ದರು. ಮನೆಯಲ್ಲಿ ದನಕರುಗಳಿದ್ದವು. ಇರುವ ಒಬ್ಬ ಮಗ ತಮ್ಮಂತೆ ಮುಂಗಾರಿನ ಮಳೆಯ ಜೊತೆಗೆ ಜೂಜಾಟದ ಕೃಷಿಯ ಜೊತೆಗೆ ಜಂಜಾಟವಾಡದೇ ಓದಿಕೊಂಡು ಸರ್ಕಾರಿ ನೌಕರಿ ಹಿಡಿಯಲಿ ಎಂದು ಗೋಪಾಲಪ್ಪ ಆಶಿಸಿದ್ದರು. ಅವರ ಆಶೆಯಂತೆಯೇ ಓದಿದ ವಿಘ್ನೇಶಪ್ಪಾರನ್ನು, ಪ್ರಾಥಮಿಕ ಶಾಲೆಯ ಶಿಕ್ಷಕ ಹುದ್ದೆ ಹುಡುಕಿಕೊಂಡು ಬಂದಿತ್ತು.
ಶಾಲೆಯಲ್ಲಿ ಮಕ್ಕಳಿಗೆ ಪುಲಿಗೆರೆ ಸೋಮನಾಥನ ಸೋಮೇಶ್ವರ ಶತಕದ ವಚನ ಹೇಳಿಕೊಡುತ್ತಿದ್ದ ವಿಘ್ನೇಷಪ್ಪ ಮಾಸ್ತರರಿಗೆ `ಉಡುರಾಜಂ ಕಳೆಗುಂದಿ ಪೆರ್ಚದಿಹನೇ ನೃಗ್ರೋಧಬೀಜಂ ಕೆಲಂ| ಸಿಡುದುಂ ಪೆರ್ಮರನಾಗದೇ ಎಳಗರು ಎತ್ತಶಗದೇ ಲೋಕದೋಳ್|| ಮಿಡಿಪಣ್ಣಾಗದೇ ದೈವನೊಲ್ಮೆಯಿರಾಲಾ ಕಾಲಾನುಕಾಲಕ್ಕೆ ತಾಂ| ಬಡವಂ ಬಲ್ಲಿದನಾಗನೇ ಹರಹರಾ ಶ್ರೀಚೆನ್ನಸೋಮೇಶ್ವರಾ||’ ವಚನ ಸದಾ ಕಾಡುತ್ತಿತ್ತು.
ಬೆಳೆದು ನಿಂತ ಮಗ ವಿಘ್ನೇಶಪ್ಪಾರಿಗೆ ಯುಕ್ತ ಸಮಯಕ್ಕೆ ಹೆಣ್ಣು ನೋಡಿ ಮದುವೆ ಮಾಡಲಾಯಿತು. ಮೊದಲು ಕಳೆಗುಂದಿದರೂ ನಂತರ ಹೆಚ್ಚೆಚ್ಚು ಬೆಳಕನ್ನು ನೀಡುತ್ತಾ ಬೆಳದಿಂಗಳನ್ನು ಬೀರುವ ಚಂದ್ರನಂತೆ, ಅಪ್ಪ ಅಮ್ಮಂದಿರ ಬಾಳಿಗೆ ವಿಘ್ನೇಶಪ್ಪಾರು ಬೆಳಕಾಗಿದ್ದರು. ಅಪ್ಪನ ಬಡತನ ನೀಗಿತ್ತು. ಬಡವಂ ಬಲ್ಲಿದನಾಗನೇ ಎಂಬ ಮಾತು ಅಕ್ಷರಶಃ ನಿಜವಾಗಿತ್ತು. ವಿಘ್ನೇಶಪ್ಪಾರಿಗೆ ಮದುವೆಯಾದ ಮೇಲೆ ಇಬ್ಬರು ಮಕ್ಕಳಾದರು. ಮೊದಲ ಮಗು ಹೆಣ್ಣಾದರೆ ಎರಡನೇ ಮಗು ಗಂಡು ಮಗುವಾಗಿತ್ತು. ಇಬ್ಬರೂ ಒಳ್ಳೆಯ ರೀತಿಯಿಂದ ಓದಿ, ಮುಂದೆ ಕೈತುಂಬಾ ಸಂಬಳ ಬರುವ ಒಳ್ಳೆಯ ಉದ್ಯೋಗಗಳನ್ನೇ ಹಿಡಿದಿದ್ದರು. ಮಕ್ಕಳಿಬ್ಬರೂ ಜೀವನದಲ್ಲಿ ಒಂದು ಹಂತ ಮುಟ್ಟುವಷ್ಟರಲ್ಲಿ ಪತ್ನಿ ಅರ್ಬುದ ರೋಗ ಬಂದು ಅಸುನೀಗಿದ್ದಳು. ಗಂಡು ಮಗ ಅಮೇರಿಕ ಸೇರಿಕೊಂಡಿದ್ದರೆ, ಮಗಳು ಬೆಂಗಳೂರನ್ನು ಸೇರಿಕೊಂಡಿದ್ದಳು. ಅಜ್ಜ, ಅಜ್ಜಿಯರಿಗೆ ಗಂಡು ಮಗುವಿಗಿಂತ ಹೆಣ್ಣು ಮಗುವಿನ ಮೇಲೆಯೇ ಹೆಚ್ಚು ಪ್ರೀತಿ ಇತ್ತು. ಮಗಳು ಅಜ್ಜ ಅಜ್ಜಿಯರೊಂದಿಗೆ ತೋಟದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಳು.
ವಿಘ್ನೇಶಪ್ಪಾರ ತಂದೆ ತಾಯಿಗಳು ತೀರಿಕೊಂಡಾಗ, ಮೊಮ್ಮಗ ಅಜ್ಜ ಅಜ್ಜಿಯರ ಅಂತಿಮ ದರ್ಶನಕ್ಕೆ ಅಮೇರಿಕದಿಂದ ಬರಲೇ ಇಲ್ಲ. ತಂದೆ ತಾಯಿ, ಅಜ್ಜ ಅಜ್ಜಿಯರೊಂದಿಗೆ ಆತ್ಮೀಯ ಒಡನಾಟವಿಲ್ಲದ ಮಗ ದೇಶವನ್ನೇ ತೊರೆದು ದೂರ ಪರದೇಶದಲ್ಲಿ ನೆಲೆಸಿದ್ದ. ಮಗಳನ್ನು ಕಂಡಾಗಲೆಲ್ಲಾ ವಿಘ್ನೇಶಪ್ಪಾರು ತಮ್ಮ ಅಪ್ಪ ಅಮ್ಮಂದಿರನ್ನು ನೆನೆಸಿಕೊಳ್ಳುತ್ತಿದ್ದರು. ಆದರೆ ಮುಂದೆ ಮಗಳು ಅಕಾಲ ಮರಣಕ್ಕೆ ತುತ್ತಾಗಿದ್ದಳು. ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಅವಳು ತೀರಿಕೊಂಡಿದ್ದಳು. ಅಳಿಯ ಬೆಂಗಳೂರಿನವನು. ಅವನೊಂದಿಗಿನ ಸಂಬಂಧ ಕೇವಲ ವ್ಯವಹಾರಿಕವಾಗಿತ್ತು. ಅದನ್ನು ಅರಿತಿದ್ದ ಮಗಳು, ತಂದೆಯನ್ನು ಮನೆಯಲ್ಲಿ ಇರಿಸಿಕೊಳ್ಳದೇ, ಇಡಿಗಂಟನ್ನು ಇರಿಸಿ, ಅದರಿಂದ ಬರುವ ಬಡ್ಡಿ ಹಣದಲ್ಲಿ ಖರ್ಚುವೆಚ್ಚನ್ನು ತೂಗಿಸುವ ವೃದ್ಧಾಶ್ರಮಕ್ಕೆ ಸೇರಿಸಿದ್ದಳು. ಊರಲ್ಲಿನ ತೋಟ ಗದ್ದೆಯನ್ನು ಅವರ ದೂರದ ಸಂಬಂಧಿಯ ಮಕ್ಕಳು ನೋಡಿಕೊಳ್ಳುತ್ತಿದ್ದರು.
ಇದ್ದೊಬ್ಬ ಮಗ ಅಮೇರಿಕದ ಪಾಲಾಗಿದ್ದ, ಮಗಳು ಅಕಾಲದಲ್ಲಿ ಮರಣಿಸಿದ್ದಳು. ಇನ್ನು ಊರಿನ ನಂಟು ಕಳಚಿಕೊಳ್ಳುತ್ತಾ ಸಾಗಿತ್ತು. ಆದರೆ, ಚಿಕ್ಕಮಗುವಿದ್ದಾಗ ಅಜ್ಜನ ಮನೆಗೆ ಮಗಳು ಹೋಗಿದ್ದಾಗ, ಮನೆಯಲ್ಲಿ ಗಂಗೆ ಹೆಸರಿನ ಈದಿದ್ದ ಆಕಳು ಮತ್ತು ಅದರ ಕರು ಇದ್ದವು. ಕರುವನ್ನು ಕಟ್ಟಲು ಗೂಟವನ್ನು ನೆಡಲು ಮಗಳು ಅಜ್ಜನಿಗೆ ಸಹಕರಿಸಿದ್ದಳು. ಆ ಗೂಟವು ಆಲದ ಮರದ ತುಂಡಾಗಿತ್ತು. ಮನೆಯ ಬಚ್ಚಲ ನೀರು ಬಿದ್ದು ಬಿದ್ದು ಆ ಆಲದ ಮರದ ಕಾಂಡವಾಗಿದ್ದ ಗೂಟವು ಚಿಗಿತು ಗಿಡವಾಗಿತ್ತು. ಮಗಳು ಬೆಳೆದಂತೆ ಆ ಗಿಡವು ನಿಧಾನವಾಗಿ ಬೆಳೆದು ಮರದ ರೂಪ ತಳೆದಿತ್ತು. ಮಗಳಿಗೂ ಅದರೊಂದಿಗೆ ಬಾಂಧವ್ಯ ಬೆಳೆದಿತ್ತು.
ಆಲದ ಮರದ ಪಕ್ಕದಲ್ಲಿಯೇ ಪಕ್ಷಿಯೊಂದು ತಂದು ಹಾಕಿದ ಬೇವಿನ ಬೀಜವು ಮೊಳೆತು ಅದು ಅದರೊಂದಿಗೆ ಸೇರಿ ಬೆಳೆಯತೊಡಗಿತ್ತು. ಆಲದ ಮರ ಆಮ್ಲಜನಕ ಹೊರಸೂಸಿದರೆ, ಬೇವು ಸಮೃದ್ಧ ರೋಗ ನಿರೋಧಕ ಶಕ್ತಿಯುಳ್ಳ ಗಿಡ ಎನ್ನುತ್ತಾರೆ.
ತಾನು ಬದುಕಿರುವಷ್ಟು ಕಾಲ ಮಗಳ ನೆನಪು ತರುವ ಆಲದ ಮತ್ತು ಬೇವಿನ ಮರಗಳಿಗೆ ತೊಂದರೆ ಆಗಬಾರದೆಂಬುದು ವಿಘ್ನೇಶಪ್ಪಾರ ಆಶಯವಾಗಿತ್ತು. ಊರಲ್ಲಿನ ಜಮೀನು ಮಾರಬಾರದೆಂದು ವಿಘ್ನೇಶಪ್ಪ ಅವರು ನಿರ್ಧರಿಸಿದ್ದರೂ, ಅವರ ತಂದೆ ಗೋಪಾಲಪ್ಪ ಸಂತ ಇನ್ನಾಸಪ್ಪರ ಮೇಲಿಟ್ಟಿದ್ದ ಭಕ್ತಿಯನ್ನು ಅವರ ನೆನಪಿಗೆ ತಂದು, ಅವರ ಮನವೊಲಿಸಿ ಆ ಜಮೀನನ್ನು ಗುಡಿಯ ಕಟ್ಟೋಣಕ್ಕೆ ಬೇಕೆಂದು ಕೋರಿಕೊಂಡು ಕೊಳ್ಳಲಾಗಿತ್ತು.
ಊರಲ್ಲಿನ ಬೆಳವಣಿಗೆಗಳು ದೊಡ್ಡ ಗುರು ಅಮೃತಪ್ಪ ಸ್ವಾಮ್ಯಾರ ಕಿವಿಗೆ ಬಿದ್ದಿದ್ದವು. ಇನ್ನೂ ಇಲ್ಲಿಯೇ ಉಳಿದರೆ ಚಿಕ್ಕ ಗುರು ರಾಯಪ್ಪ ಅವರು ಮತ್ತೇನನ್ನು ಮಾಡುತ್ತಾರೋ ಎಂಬ ಆತಂಕ ಅವರನ್ನು ಕಾಡತೊಡಗಿತ್ತು. ತಮಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನು ಮಾತನಾಡಿಸಿ, `ಊರಿಗೆ ಹೋಗುವೆ ಅಲ್ಲಿಯೇ ವಿಶ್ರಾಂತಿ ಪಡೆಯುವೆ’ ಎಂದು ತಿಳಿಸಿದಾಗ, ಅವರು ಅದಕ್ಕೆ ಸಮ್ಮತಿ ನೀಡಿದ್ದರು.
ಅನಿರೀಕ್ಷಿತವಾಗಿ ಗುಡಿಯ ದೊಡ್ಡ ಗುರು ಅಮೃತಪ್ಪ ಸ್ವಾಮ್ಯಾರು ಗಾಲಿ ಕರ್ಚಿಯಲ್ಲಿ ಗುರುಮನೆಗೆ ಬಂದಾಗ, ಚಿಕ್ಕ ಗುರು ರಾಯಪ್ಪ ಅವರಿಗೆ ಅಚ್ಚರಿಯಾಯಿತು. `ಇನ್ನೂ ಹದಿನೈದು ದಿನಗಳನ್ನು ಕಳೆದು ಬರಬೇಕಾಗಿದ್ದ ದೊಡ್ಡ ಗುರುಗಳು, ಇಷ್ಟು ಮುಂಚೆಯೇ ಏಕೆ ಬಂದರು?’ ಎಂಬ ಪ್ರಶ್ನೆ ಅವರ ಮುಖದಲ್ಲಿ ಮೂಡಿತ್ತು.
ದೊಡ್ಡ ಗುರು ಅಮೃತಪ್ಪ ಸ್ವಾಮ್ಯಾರು ಮನೆಗೆ ಬಂದ ಒಂದೆರಡು ದಿನಗಳಲ್ಲಿಯೇ ಒಂದು ದಿನ ಮುಂಜಾನೆ ಗುಡಿಯ ಹತ್ತಿರ ಫಾರೆಸ್ಟ್ ಗಾರ್ಡ್ ಶಿವಪುತ್ರಪ್ಪನ ಸವಾರಿ ಬಂದಿತ್ತು. ಸಂತ ಥೆರೇಸಮ್ಮಳ ಹೊಸ ಗುಡಿಯ ಮುಂದಿನ ಎರಡು ದೊಡ್ಡ ಮರಗಳನ್ನು ಕಡಿದು ಹಾಕಿದ್ದ ಘಟನೆಯನ್ನು ಉಪ್ಪು ಖಾರ ಹಚ್ಚಿ ಯಾರೋ ಒಬ್ಬರು ಅವನ ಕಿವಿ ಊದಿದ್ದರು.
ಶಿವಪುತ್ರಪ್ಪ ತನ್ನ ಫಟಫಟಿ ನಿಲ್ಲಿಸುತ್ತಿದ್ದಂತೆಯ ಓಡಿ ಹೋದ ಉಪದೇಶಿ ಆರೋಗ್ಯಪ್ಪ, ಅವನನ್ನು ಗುರುಮನೆಗೆ ಕರೆದುಕೊಂಡು ಬಂದರು. ಅಲ್ಲಿ ಚಿಕ್ಕ ಗುರು ರಾಯಪ್ಪ ಮತ್ತು ಧರ್ಮಕೇಂದ್ರದ ಗುರು ಅಮೃತಪ್ಪ ಅವರು ನಾಷ್ಟಾ ಮಾಡುತ್ತಾ ಕುಳಿತಿದ್ದರು. ಮುಖ ಕಿವಿಚಿಕೊಂಡು ಕುಳಿತುಕೊಂಡ ಚಿಕ್ಕ ಗುರು ರಾಯಪ್ಪರಿಗೆ ಇಂದು ಏನೋ ಅಹಿತಕರವಾದದ್ದು ನಡೆಯಲಿದೆ ಎನ್ನಿಸಿತು.
“ಏನು ಶಿವಪುತ್ರಪ್ಪ, ಇಂದು ಬೆಳ್ಳಂಬೆಳಿಗ್ಗೆ ಇಲ್ಲಿಗೆ ನಿನ್ನ ಸವಾರಿ ಬಂದಿದೆ?’’
ಊರಲ್ಲಿನ ಎಲ್ಲಾ ಸರ್ಕಾರಿ ಅಧಿಕಾರಿಗಳ ಒಡನಾಟ ಹೊಂದಿದ್ದ ಗುರು ಅಮೃತಪ್ಪ ಅವರು, ಎಂದಿನ ಆಪ್ತತೆಯಿಂದ ಶಿವಪುತ್ರನನ್ನು ಮಾತನಾಡಿಸಿದರು. ಅದರ ಹಿಂದೆಯೇ “ಬಾಪ್ಪಾ ಸರಿಯಾದ ಸಮಯಕ್ಕೆ ಬಂದಿದೀಯ. ಕೂಡು ನಮ್ಮೊಂದಿಗೆ ನೀನೂ ನಾಷ್ಟಾ ಮಾಡ ಬಾರಪ್ಪ’’ ಎಂದು ಕರೆದರು. ಶಿವಪುತ್ರಪ್ಪ ಎದುರಿಗಿನ ಕುರ್ಚಿಯಲ್ಲಿ ಕುಳಿತುಕೊಂಡ.
“ಸ್ವಾಮ್ಯಾರ ಬಾಳಷ್ಟ ಮಂದಿ ಆಗರಿ. ನಂದು ಮನ್ಯಾಗ ನಾಷ್ಟಾ ಆಗೇದರಿ. ಮಧ್ಯಾನ್ನದ ಊಟ ಏನ ಕತಿಯೋ ಏನೋ ಅಂತ ನಮ್ಮ ಮನಿಯಾಕಿ ಮುಂಜಾನೆದ್ದ ಬಕ್ಕಳ ನಾಷ್ಟಾ ಕೊಟ್ಟ ಕಳಸ್ತಾಳರಿ.’’
“ಅದು ಖರೇನ ಬಿಡಪಾ. ನಿಂದ ಹಗಲಲ್ಲ ರಾತ್ರಿ ಅಲ್ಲ ಸುತ್ತಾಡೂದ ನಿನ್ನ ಕೆಲಸ. ಅಂದಂಗ ಏನ ಈ ಕಡೆ ಬಂದದ್ದು?’’
“ಅದ ಸ್ವಾಮ್ಯಾರ, ಒಂದ ಮೂಗರ್ಜಿ ಬಂದದರಿ. ನಿಮ್ಮ ಗುಡಿ ಮುಂದಿನ ಎರಡ ದೊಡ್ಡ ಮರಾ ಕಡದೀರಿ ಅಂತ. ಅದಕ್ಕ ಬರೂದಾತರಿ.’’
“ಹೌದ ಹೌದ, ನಾ ಊರಾಗ ಇರಲಿಲ್ಲ, ಏನೋ ಆಗಬಾರದ್ದ ಆಗೇದ. ಈಗ ಏನ್ ಮಾಡೂದಂತಿ? ಕಡಿದ ಮರಗಳನ್ನು ಹೊಳ್ಳಿ ತಂದ ನಿಲ್ಲಸೂದು ಆಗದ ಮಾತು. ಉಳದದ್ದು ಜುಲ್ಮಾನಿ ಕಟ್ಟೂದು. ಆಯಿತು ಜುಲ್ಮಾನೆ ಕಟ್ಟತೀವಿ. ನೀ ನಿನ್ನ ಕೆಲಸ ಮಾಡಪಾ.’’
ಆಗ ಚಿಕ್ಕ ಗುರು ರಾಯಪ್ಪ ಸ್ವಾಮ್ಯಾರ ಮುಖ ಇಂಗು ತಿಂದ ಮಂಗನAತಾಗಿತ್ತು.
ಶಿವಪುತ್ರಪ್ಪ ಅತ್ತ ಹೋಗುತ್ತಿದ್ದಂತೆಯೇ, ದೊಡ್ಡ ಗುರು ಅಮೃತಪ್ಪ ಅವರು ಚಿಕ್ಕ ಗುರು ರಾಯಪ್ಪರ ಕಡೆಗೆ ನೋಡಿದರು.
ಚಿಕ್ಕ ಗುರು ರಾಯಪ್ಪ ಅವರು, ತಲೆ ತಗ್ಗಿಸಿಕೊಂಡು ಅವನತಮುಖರಾಗಿ ಕುಳಿತಿದ್ದರು.
“ನನಗೆ, ಇಲ್ಲಿನ ಎಲ್ಲಾ ವಿದ್ಯಮಾನಗಳು ಗೊತ್ತಾಗಿವೆ, ನೀವು ಆ ಎರಡೂ ಮರಗಳನ್ನು ನೆಲಸಮ ಮಾಡಿದ ಸಂದರ್ಭದಲ್ಲಿ, ಅವುಗಳಲ್ಲಿ ತನ್ನ ಮಗಳನ್ನು ಕಾಣುತ್ತಿದ್ದ ಈ ಜಾಗದ ಮೊದಲಿನ ಯಜಮಾನ ವಿಘ್ನೇಶಪ್ಪಾರು ಅಸುನೀಗಿದ್ದು ಕಾಕತಾಳೀಯ ಇದ್ದಿರಬಹುದು’’ ಎಂದು ಮಾತು ಆರಂಭಿಸಿದ ದೊಡ್ಡ ಗುರು ಅಮೃತಪ್ಪ ಅವರು, ಗುರು ರಾಯಪ್ಪ ಅವರಿಗೆ ಪಾಠ ಹೇಳಿಕೊಡತೊಡಗಿದರು.
“ದಿನವೆಲ್ಲಾ ಆಮ್ಲಜನಕವನ್ನು ಹೊರಸೂಸುವ ಅಶ್ವಥ್ ಮರವು ತ್ರಿಮೂರ್ತಿಗಳ ಆವಾಸಸ್ಥಾನ. ಅಶ್ವಥ ಮರದ ಎಲೆಗಳಲ್ಲಿ ಶಿವ, ಬೇರಿನಲ್ಲಿ ಬ್ರಹ್ಮ ಮತ್ತು ಕಾಂಡದಲ್ಲಿ ಮಹಾವಿಷ್ಣು ನಲೆಸಿದ್ದಾರೆ ಎಂದು ನಮ್ಮ ನಾಡಿನ ಜನಪದರು ನಂಬುತ್ತಾರೆ. ಏಕೆಂದರೆ, ಸಕಲ ಚರಾಚರಗಳಲ್ಲೂ ನಿರ್ಜೀವ ವಸ್ತುಗಳಲ್ಲು ದೇವರನ್ನು ಕಾಣುವವರು ಈ ಜನಪದರು. ಮತ್ತೆ, ಬೇವು ಕೀಟನಾಶಕವಾದರೆ ಆಲದ ಮರ ಆಮ್ಲಜನಕದ ಗುಡಾಣ. ಅದನ್ನೆಲ್ಲಾ ಅರಿತು ಜನಪದರು ಅವುಗಳಿಗೆ ಆದರದ ಸ್ಥಾನ ನೀಡಿದ್ದಾರೆ. ಸುಶಿಕ್ಷಿತರು, ನಾಗರಿಕರು ಎಂದುಕೊಳ್ಳುವ ನಾವು ಅದನ್ನು ಮರೆತು, ದೇವರು ಸರ್ವೇಶ್ವರರು ದಯಪಾಲಿಸಿದ ದೊರೆತನದ ಹಮ್ಮಿನಲ್ಲಿ ಬೀಗುತ್ತಿದ್ದೇವೆ.’’
“ಆದಿಕಾಂಡಲ್ಲಿನ ದೇವರು ಸೂಚಿಸಿದ, ಯೇಸು ಸ್ವಾಮಿ ಹೇಳಿದ ದೊರೆತನ ಏನು ಅನ್ನುವುದು ನಿಮಗೆ ಅರ್ಥವಾಗಿದೆಯೇ? ಸಕಲ ಪ್ರಾಣಿಪಕ್ಷಿಗಳನ್ನು ಸಲಹು ಎಂಬುದು ದೇವರ ಸೂಚನೆ. ಯೇಸುಸ್ವಾಮಿ ಮಾಡಿದ್ದೇನು? ನಮ್ಮಗಳ ರಕ್ಷಣೆಗಾಗಿ ತಮ್ಮನ್ನೇ ತಾವು ಬಲಿಯಾಗಿ ನಮ್ಮ ಮೇಲೆ ದೊರೆತನ ಸಾಧಿಸಿದರು. ದೇವರ ವಚನಗಳ ವಾಚ್ಯಾರ್ಥವಲ್ಲ ಅದರ ಗೂಡಾರ್ಥವನ್ನು ತಿಳಿದುಕೊಳ್ಳಬೇಕು. ಹಾಗಾದಾಗ ನಮ್ಮ ಬದುಕು ಸಾರ್ಥಕವಾಗುತ್ತದೆ.’’
“ಖಲೀಲ್ ಗಿಬ್ರಾನನ ಹೊತ್ತಿಗೆಗಳನ್ನು ಓದಿದ್ದೀರಿ ಎಂದುಕೊAಡಿರುವೆ. ಅವನಿಗೆ ಹಸಿವಾದಾಗ ಎದುರಿಗಿದ್ದ ಕಿತ್ತಳೆ ಹಣ್ಣನ್ನು ತಿನ್ನಲೊ ಬೇಡವೋ ಎಂಬ ಜಿಜ್ಞಾಸೆ ಅವನಲ್ಲಿ ಹುಟ್ಟುತ್ತದೆ. ತಿಂದರೆ ಅದು ಅದರ ಅಸ್ತಿತ್ವ ಕಳೆದುಕೊಳ್ಳುತ್ತದೆ. ತಿನ್ನದೇ ಇದ್ದರೆ ಅದು ಒಣಗಿ ಹೋಗುತ್ತದೆ. ನಾನು ತಿನ್ನುವುದೇ ಸರಿ. ಅದು ನನ್ನೊಳಗೆ ಒಂದಾಗಿ, ಜೀವರಸ ರಕ್ತವಾಗಿ ನನಗೂ ಜೀವನ ಕೊಡುತ್ತದೆ ಎಂದು ಅವನು ಕಿತ್ತಳೆ ಹಣ್ಣನ್ನು ತಿನ್ನುತ್ತಾನೆ. ಆದರೆ ಇಲ್ಲಿ ನೀವು ಮಾಡಿದ್ದೇನು? ನೆರಳು ನೀಡುತ್ತಿದ್ದ ಪರಿಸರವನ್ನು ಸ್ವಚ್ಚವಾಗಿಡುತ್ತಿದ್ದ ಆಹ್ಲಾದಕರ ವಾತವರಣವನ್ನು ರೂಪಿಸುತ್ತಿದ್ದ ಮರಗಳನ್ನು ಉರುಳಿಸಿಬಿಟ್ಟಿದ್ದೀರಿ? ನಿಮಗೆ ನಿಮ್ಮ ಗುಡಿ ಎಲ್ಲರ ಕಣ್ಣಿಗೆ ಬೀಳಬೇಕಾಗಿತ್ತು. ಗುಡಿಗೆ ಬರಬೇಕು ಎಂದು ಅಂದು ಕೊಂಡವರು ಹೇಗಾದರೂ ಮಾಡಿ ಗುಡಿಯನ್ನು ಹುಡುಕಿಕೊಂಡು ಬಂದೇ ಬರುತ್ತಾರೆ.’’
“.. … ..’’
“ಜೀವಶಾಸ್ತçದ ಮೊದಲ ಪಾಠ ಏನು ಅಂದ್ರೆ, ಪ್ರಾಣಿಗಳು ಆಮ್ಮಜನಕವನ್ನು ಸೇವಿಸಿ ಇಂಗಾಲವನ್ನು ಹೊರಗೆ ಬಿಟ್ಟರೆ, ಸಸ್ಯಗಳು ಹಗಲಲ್ಲಿ ಇಂಗಲವನ್ನು ಪಡೆದು ಆಮ್ಲಜನಕವನ್ನು ಹೊರಗೆ ಬಿಡುತ್ತವೆ. ಅದಕ್ಕೆ ಇರಬೇಕು, ಮರ ಎನ್ನುವುದು ನಮ್ಮ ದೈವ ಶಾಸ್ತçದಲ್ಲಿ, ಸಂಸ್ಸೃತಿಯಲ್ಲಿ ಎಷ್ಟೊಂದು ಘನವಾದ ತತ್ವಜ್ಞಾನದ ಸೂಚಕವಾಗಿರುವುದನ್ನು ನೀವು ಮರೆತಿರಬೇಕು.’’
“.. .. ..’’
“ಆದಿಯಲ್ಲಿ ದೇವರು ವಿಶ್ವದ ಸೃಷ್ಟಿಯ ಸಮಯದಲ್ಲಿ ಆರನೇ ದಿನ ಸಕಲ ಜೀವಿಗಳನ್ನು ಸೃಷ್ಟಿಸಿದ. ನಂತರ, ತನ್ನ ರೂಪದಲ್ಲಿಯೇ ಮೊದಲ ದಂಪತಿ, ಆದಿ ತಂದೆ ತಾಯಿ ಆದಾಮ ಮತ್ತು ಹವ್ವಳನ್ನು ಸೃಷ್ಟಿಸಿದ. ಅವರನ್ನು ಇತರ ಎಲ್ಲಾ ಜೀವಿಗಳ ಮೇಲೆ ದೊರೆತನ ಮಾಡು ಎಂದು ಆಶೀರ್ವದಿಸಿದ. ತನ್ನ ನೆಲೆಯಾದ ಸ್ವರ್ಗದ ತೋಟದ ಮಾಲಿ ಕೆಲಸವನ್ನು ಒಪ್ಪಿಸಿದ ದೇವರು, ಅಲ್ಲಿದ್ದ ಒಳಿತು ಕೆಡುಕುಗಳ ಅರಿವು ಮೂಡಿಸುವ ಜ್ಞಾನದ ಮರದ ಹಣ್ಣನ್ನು ತಿನ್ನಬಾರದೆಂದು ಆಜ್ಞಾಪಿಸಿದ್ದು, ಅವರು ಆ ಆಜ್ಞೆಯನ್ನು ಮೀರಿ ಹಣ್ಣು ತಿಂದು ಮೊದಲ ಪಾಪ ಎಸಗಿದ್ದು, ಶಿಕ್ಷೆಯಾಗಿ ಶ್ರಮದ ಜೀವನವನ್ನು ಪಡೆದದ್ದು ಮುಂತಾದವನ್ನು ಆದಿಕಾಂಡದಲ್ಲಿ ಪ್ರಸ್ತಾಪಿಸಲಾಗಿದೆ.’’
“ಮುಂದೆ ಅರಸ ದಾವಿದನ ತಂದೆ ಬೆತ್ಲೆಹೇಮಿನ ಜೆಸ್ಸಿಯನಿಂದ ಆರಂಭವಾದ ದೇವಸುತ ಯೇಸುಸ್ವಾಮಿಯ ವಂಶಾವಳಿಯನ್ನು ಜೆಸ್ಸಿಯ ಮರ ಎಂದು ಬೈಬಲ್ಲು ಗುರುತಿಸಿದೆ. ಜೆಸ್ಸಿಯ ಮರದ ಕೊನೆಯ ಚಿಗುರು ಯೇಸುಸ್ವಾಮಿ. ಯೇಸುಸ್ವಾಮಿಯನ್ನು ಶಿಲುಬೆಗೆ ಏರಿಸಿದ್ದು ಮರದ ಶಿಲುಬೆಯ ಮೇಲೆ. ಯೇಸುಸ್ವಾಮಿಯ ಹುಟ್ಟಿನ ದಿನ ಕ್ರಿಸ್ಮಸ್ ಸಂದರ್ಭದಲ್ಲಿ ಕ್ರಿಸ್ಮಸ್ ಮರಗಳು, ಜಾಗರದ ಹುಲ್ಲು ಕ್ರೆöÊಸ್ತರ ಮನೆಗಳಿಗೆ ಬರುತ್ತವೆ. ಸಸ್ಯಗಳಲ್ಲಿನ ನಾರಿನಂಶ ಮನುಷ್ಯನ ಬದುಕಿಗೆ ಅನಿವಾರ್ಯ. ಎಲ್ಲೆಲ್ಲೂ ಮರಗಳ ಸಸ್ಯಗಳ ಇರುವಿಕೆಯನ್ನು ಸಂಭ್ರಮಿಸುವ ನಾವು, ನಮ್ಮ ಗುಡಿಯ ಮುಂದೆ ಗಿಡಮರಗಳು ಇರಬಾರದು ಎನ್ನುವುದು ಯಾವ ನ್ಯಾಯ?’’
“ಸ್ವಾಮ್ಯಾರ, ನನ್ನದು ದೊಡ್ಡ ತಪ್ಪಾಯಿತು. ನನ್ನ ಕ್ಷಮಿಸಿ. ಮುಂದ ಇಂಥ ತಪ್ಪ ಮಾಡುವುದಿಲ.್ಲ’’
ತಮ್ಮ ತಪ್ಪಿನ ನಡೆಯನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡ ಚಿಕ್ಕ ಗುರು ರಾಯಪ್ಪ ಅವರು, ಮತ್ತೆ ಅಂಥ ತಪ್ಪು ಮರುಕಳಿಸದ ಭರವಸೆಯ ಮಾತುಗಳನ್ನು ಆಡಿದ್ದರು.
“ತಪ್ಪಾಯಿತು, ಕ್ಷಮಿಸಿ ಎಂದರೆ ಆಗದು. ಅದಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಂಡು ತಪ್ಪು ಕಾಣಿಕೆ ಒಪ್ಪಿಸಬೇಕು.’’
ಇದಾಗಿ ಎರಡು ಮೂರು ದಶಕಗಳ ಕಳೆದಿವೆ. ರಾಜ್ಯದ ಹೆದ್ದಾರಿಗಳ ಎಡಬಲಗಳಲ್ಲಿ ಸಾಲು ಸಾಲಾಗಿ ಗಿಡಮರಗಳನ್ನು ನೆಟ್ಟು ಪೋಷಿಸಿದ ಮಹಿಳೆಯು, ಸಾಲುಮರದ ತಿಮ್ಮಕ್ಕ’ ಎಂದು ಹೆಸರುವಾಸಿಯಾದ ಮಾದರಿಯಲ್ಲಿ, ಗುರು ರಾಯಪ್ಪ ಸ್ವಾಮ್ಯಾರಿಗೆ,
ಸಾಲುಮರದ ರಾಯಪ್ಪ’ `ಸ್ವಾಮಿ ಆಲದ ಮರದಪ್ಪ’ ಎಂಬ ಅಡ್ಡ ಹೆಸರುಗಳು ಪ್ರಾಪ್ತವಾಗಿದೆ.
ಕ್ರೆöÊಸ್ತರ ವಿಶ್ವಗುರು ಪೋಪ್ ಫ್ರಾನ್ಸಿಸ್ ಅವರು ಕಳೆದ ೨೦೧೫ರಲ್ಲಿ ಹೊರಡಿಸಿದ ಲೌದತೊ ಸಿ ಅಂದರೆ ಸ್ತೋತ್ರವಿರಲಿ ಪ್ರಭು ನಿಮಗೆ ಹೆಸರಿನ ತಮ್ಮ ಪ್ರೇಷಿತ ಪತ್ರದಲ್ಲಿ ವಾತಾವರಣದಲ್ಲಿ ಆಗುತ್ತಿರುವ ವೈಪರಿತ್ಯಗಳು, ತರುತ್ತಿರುವ ಹವಾಮಾನ ಬದಲಾವಣೆ ಮತ್ತು ಬಡವ ಬಲ್ಲಿದರ ನಡುವೆ ಹೆಚ್ಚುತ್ತಿರುವ ಅಸಮಾನತೆಯ ಬಗ್ಗೆ ಚರ್ಚಿಸಿದ್ದರು. ವಿನಾಶಕಾರಿ ನೈಸರ್ಗಿಕ ಅವಗಢಗಳನ್ನು ಭೂಮಿಯ ಪ್ರತಿಭಟನೆಯ ಕೂಗು ಎಂಬ ಅವರ ವಿವರಣೆಯು, ವಿಶ್ವದ ಪರಿಸರಾಸಕ್ತರ ಗಮನ ಸೆಳೆದಿತ್ತು. ಈ ವಿಶ್ವಪರಿಪತ್ರದಲ್ಲಿ ಪಾಪುಸ್ವಾಮಿಗಳ ಪರಿಸರದ ಮತ್ತು ಜನರ ಬಗೆಗಿನ ಕಾಳಜಿ ವ್ಯಕ್ತವಾಗಿತ್ತು. ದೇವರು, ಜನರು ಮತ್ತು ಭೂಮಿಯ ನಡುವಿನ ಸಂಬAಧಗಳ ಬಗೆಗೆ ಚರ್ಚಿಸುತ್ತಾ, ನಮ್ಮ ಎಲ್ಲರ ಆವಾಸ ಸ್ಥಾನವಾಗಿರುವ ನಮ್ಮ ಮನೆಯನ್ನು ಅಂದರೆ ಭೂಮಿಯನ್ನು ಕಾಪಾಡುವ ಅಗತ್ಯವನ್ನು ಅವರು ಪ್ರತಿಪಾದಿಸಿದ್ದರು.
ಈ ಲೌದಾತೊ ಸಿ ಪ್ರೇಷಿತ ಪತ್ರದ ಹಿನ್ನೆಲೆಯಲ್ಲಿ, ನಮ್ಮ ನಾಡಿನ ನೂರಾರು ಗುಡಿಗಳು ಪರಿಸರ ಸಂರಕ್ಷಣೆಗೆ ಆಸಕ್ತಿ ತಳೆದಿರುವುದನ್ನು, ಗಿಡಮರಗಳ ಸಸಿಗಳನ್ನು ನೆಡುವ ವನಮಹೋತ್ಸಗಳನ್ನು ಆಚರಿಸುತ್ತಿರುವುದನ್ನು, ಹಲವಾರು ಸಮಾಜ ಸುಧಾರಣಾ ಕಾರ‍್ಯಗಳಲ್ಲಿ ಹೊಸ ನೋಟದೊಂದಿಗೆ ತೊಡಗಿರುವುದನ್ನು ಕಾಣಬಹುದು.
ಆದರೆ, ಈ ಲೌದಾತೊಸಿಯು ಹೊರ ಬರುವುದಕ್ಕೆ ಮುಂಚೆಯೇ, ದಶಕಗಳ ಹಿಂದೆ ಗುರು ಅಮೃತಪ್ಪ ಸ್ವಾಮ್ಯಾರ ಪಾಠದ ನಂತರ, ಗುರು ರಾಯಪ್ಪ ಅವರು, ತಮ್ಮ ಹೊಸ ಮುದ್ದಿನ ಮರದಪ್ಪ ಸ್ವಾಮಿ’ ಹೆಸರಿಗೆ ತಕ್ಕಂತೆ, ತಾವು ಹೋದ ಕಡೆಗಳಲ್ಲೆಲ್ಲಾ ತಪ್ಪದೇ ಗಿಡಮರಗಳನ್ನು ನೆಟ್ಟು ಪೋಷಿಸುತ್ತಾ ನಡೆದಿದ್ದಾರೆ. ಅದರಲ್ಲೂ ಮುಖ್ಯವಾಗಿ ಆಲದ ಮರಗಳನ್ನು ನೆಡುತ್ತಾ ಬಂದಿದ್ದಾರೆ. ಹೀಗಾಗಿ ಗುರು ರಾಯಪ್ಪ ಅವರು,
ಸ್ವಾಮಿ ಆಲದ ಮರದಪ್ಪ’ ಆಗಿದ್ದಾರೆ.
–ಎಫ್. ಎಂ. ನಂದಗಾವ