ಓದ್ರೋ ಮಕ್ಕಳ.. ಓದ್ರೋ… ಅಂತ ಮಕ್ಕಳಿಗೆ ಹೇಳ್ತಿರೋದು ಪಠ್ಯ ಪುಸ್ತಕ ಓದಿ ಅಂತಲ್ಲ, ಕಥೆ, ಕಾದಂಬರಿ, ಜೀವನಚರಿತ್ರೆಗಳನ್ನ ಓದಿ ಅಂತ ಹೇಳ್ತಿರೋದು, ಪಠ್ಯಪುಸ್ತಕ ಬಿಟ್ಟು ಬೇರೆ ಪುಸ್ತಕ ಓದುವ ಅಭ್ಯಾಸ ಮಕ್ಕಳಿಂದ ದೂರ ಆಗ್ತಿದೆ, ಪುಸ್ತಕಗಳು ಮಾನವನ ಗೆಳೆಯರು, ಕಲ್ಪನೆಯ ಬಾಗಿಲು ಹಾಗೆ ಹೀಗೆ ಅಂತ ಹೇಳ್ತಾ ಇದ್ವಿ, ಈಗ ಈ ವಾಕ್ಯಗಳಿಗೆ ಅರ್ಥವೇ ಇಲ್ಲ ಅನ್ನಿಸೋ ತರ ಆಗಿಹೋಗಿದೆ. ಸದಾ ಮೊಬೈಲು, ರೀಲ್ಸ್ ಇದರಲ್ಲಿಯೇ ಮುಳುಗಿಹೋಗ್ತಿದಾರೆ ನಮ್ಮ ಮಕ್ಕಳು. ಮಕ್ಕಳಲ್ಲಿ ಪದ ಸಂಪತ್ತು ಕಡಿಮೆಯಾಗ್ತಿದೆ.. ಎರಡು ನಿಮಿಷ ದೀರ್ಘವಾಗಿ ಯಾವುದಾದರೂ ವಿಷಯದ ಬಗ್ಗೆ ಮಾತಾಡಲು ಮಕ್ಕಳು ಹಿಂದೆ ಮುಂದೆ ನೋಡುತ್ತಾರೆ.. ನಾನು ಮಕ್ಕಳನ್ನು ದೂರುತ್ತಿಲ್ಲ ಮಕ್ಕಳನ್ನು ಈ ಪರಿಸ್ಥಿಗೆ ದೂಡಲು ನಾವೂ ಕಾರಣ!!!
ಮಗುವಿಗೊಂದು ಪುಸ್ತಕ, ಮನೆಗೊಂದು ಗ್ರಂಥಾಲಯ ಎಂಬ ಘೋಷಣೆಯೇನೋ ಇದೆ, ಮನೆಗಳಲ್ಲೂ ಗ್ರಂಥಾಲಯ ಇರಬಹುದು ಆದರೆ ಮಕ್ಕಳಿಗೆ ಓದಲು ಆಸಕ್ತಿ ಇದೆಯೇ? ಓದಲು ಮಕ್ಕಳಲ್ಲಿ ಆಸಕ್ತಿ ಬೆಳೆದುಬಿಟ್ಟರೆ ಅದು ಹೆಮ್ಮರವಾಗಿಯೇ ಆಗುತ್ತದೆ.
ನಮ್ಮ ಬಾಲ್ಯವನ್ನು ನೆನಪಿಸಿಕೊಂಡರೆ ೭೦, ೮೦ ಹಾಗೂ ೯೦ರ ದಶಕ ಒಂದು ರೀತಿಯಲ್ಲಿ ಸುವರ್ಣಯುಗ ಎನ್ನಬಹುದು. ನಮ್ಮನ್ನು ಸಾಹಿತ್ಯ ಲೋಕಕ್ಕೆ ಅಂಟಿಕೊಳ್ಳುವಂತೆ ಮಾಡಿದ್ದು ಪತ್ತೇದಾರಿ ಕಾದಂಬರಿಗಳು. ನಮಗೆ ನಾಲ್ಕನೇ ತರಗತಿಯಿಂದಲೇ ಪತ್ತೇದಾರ ಪುರುಷೋತ್ತಮ ಹುಚ್ಚು ಹಿಡಿಸಿದ್ದ, ಗೆಳೆಯನಾಗಿ ಬಿಟ್ಟಿದ್ದ, ಆ ಕಾಲದಲ್ಲಿ ಮಕ್ಕಳು ಕಾದಂಬರಿ ಓದುತ್ತಾರೆ ಎಂದರೆ ಹಾಳಾಗಿ ಹೋಗಿದಾರೆ ಅಂತ ಪೋಷಕರು ಅಂದುಕೊಳ್ತಾ ಇದ್ರೂ, ನೀವು ಶಾಲೆ ಪುಸ್ತಕ ಓದಿ, ಕಾದಂಬರಿ ಓದಿ ಹಾಳಾಗಬೇಡಿ ಅನ್ನೋದು ನಮಗೆ ಅಭ್ಯಾಸವಾಗಿ ಹೋಗಿತ್ತು. ನಾವು ಓದಿದ ಪುಸ್ತಕದಲ್ಲಿನ ರಹಸ್ಯ, ಸಾಹಸ ಶಾಲೆಯಲ್ಲಿ ಗೆಳೆಯರೊಂದಿಗೆ ಚರ್ಚೆ ಆಗುತಿತ್ತು, ಆ ಕಾದಂಬರಿ ಓದದವರು ಅದನ್ನು ಓದಲು ಹಂಬಲಿಸುತ್ತಿದ್ದರು. ನಮಗೆ ಪುಸ್ತಕಗಳನ್ನು ಒದಗಿಸುವ ಸಂಪನ್ಮೂಲ ಕೇಂದ್ರಗಳು “ಸರ್ಕ್ಯುಲೇಟಿಂಗ್ ಲೈಬ್ರರಿಗಳು” ಒಂದು ಪುಸ್ತಕಕ್ಕೆ ಒಂದು ದಿನಕ್ಕೆ ಹತ್ತು ಪೈಸೆ. ಆಗ ಪುಸ್ತಕ ಓದಲೆಂದೇ ಹಣ ಸಂಗ್ರಹ ಮಾಡುತ್ತಿದ್ದೆವು. ದಿನ ಕಳೆದಂತೆ ಪತ್ತೇದಾರಿ ಕಾದಂಬರಿ ಲೇಖಕರು ಸಹ ಹೆಚ್ಚಾದರು. ಎನ್. ನರಸಿಂಹಯ್ಯ, ಮಾ.ಭೀ.ಶೇ., ಕಾಕೋಳು ರಾಮಯ್ಯ, ಪ್ರದೀಪ್, ವಿಜಯ ಸಾಸನೂರು, ಟಿ.ಕೆ. ರಾಮರಾವ್, ಬಿ.ಎಲ್. ವೇಣು ಈ ಎಲ್ಲರೂ ನಮ್ಮನ್ನು ಸಾಹಿತ್ಯ ಲೋಕಕ್ಕೆ ಸೆಳೆದವರು, ನಮ್ಮ ಬಾಲ್ಯವನ್ನು ಕಲ್ಪನೆ, ಸಾಹಸ, ಕನಸುಗಳಿಂದ ತುಂಬಿದವರು. ನಾನು ಹತ್ತನೇ ತರಗತಿಯಲ್ಲಿ ಇದ್ದಾಗ ಎಸ್. ಎಲ್. ಬೈರಪ್ಪನವರ ‘ಪರ್ವ’ ಓದುತಿದ್ದೆ, ನನ್ನ ಚಿಕ್ಕಪ್ಪ ಅಯ್ಯೋ ನನ್ನ ಮಗನೆ.. ನೀನು ಓದೋ ಪುಸ್ತಕ ಅಲ್ಲ ಅಂತ ಕಿತ್ತುಕೊಂಡಿದ್ದು ನೆನೆಪಿದೆ, ಆಗ ಕಾದಂಬರಿಗಳಿಗೆ ವಿರೋಧವಿತ್ತು ಇಂದು ಮೊಬೈಲ್ಗೆ ವಿರೋಧ ಇದೆ. ಇದು ವಿಕಾಸವೋ ಅಥವಾ .. ?
ನನ್ನ ಅನಿಸಿಕೆಯ ಪ್ರಕಾರ ಇಂದಿನ ದಿನಗಳಲ್ಲಿ ಮಕ್ಕಳನ್ನು ಆಕರ್ಷಿಸುವ ಸಾಹಿತ್ಯ ಸೃಷ್ಟಿಯೇ ಆಗುತ್ತಿಲ್ಲ, ಸೃಷ್ಟಿ ಆಗಿದ್ದರೂ ಸೂಕ್ತ ಪ್ರಚಾರ ಸಿಕ್ಕುತ್ತಿಲ್ಲ. ಶಾಲೆಗಳಲ್ಲೂ ಸಹ ಪಠ್ಯೇತರ ಓದಿಗೆ ಅವಕಾಶವೇ ಇಲ್ಲ ಪಾಠದ ಪುಸ್ತ್ತಕವನ್ನೇ ಓದಬೇಕು ಜೊತೆಗೆ ಹೋಮ್ ವರ್ಕ್ ಮಾಡಬೇಕು. ನಾವು ಶಾಲೆಯಲ್ಲಿಯೇ ಕದ್ದು ಕಾದಂಬರಿ ಓದುತ್ತಿದ್ದೆವು. ಇಂದಿನ ಮಕ್ಕಳು ಶಾಲೆಯಲ್ಲಿ ಕದ್ದು ಮೊಬೈಲ್ ಬಳಸುತ್ತಾರೆ.
ಪುಸ್ತಕ ಓದುವ ಹವ್ಯಾಸ ಗೀಳಾಗಿ ಬೆಳೆದು ಚಟವಾಗಬೇಕು, ಬದುಕಿನ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಪುಸ್ತಕ ಓದು ಸಹಕರಿಸುತ್ತದೆ ಎಂಬುದು ಪುಸ್ತಕ ಪ್ರಿಯರೆಲ್ಲರ ಅನುಭವವೂ ಹೌದು. ಪಠ್ಯಪುಸ್ತಕ ಬಿಟ್ಟು ಬೇರೆ ಪುಸ್ತಕ ಓದುವುದರಿಂದ ಮಕ್ಕಳ ಮೇಲಾಗುವ ಧನಾತ್ಮಕ ಪರಿಣಾಮಗಳು ಬಹಳ ಇವೆ, ಇವುಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲಾಗಿದೆ.
೧. ಪಠ್ಯೇತರ ವಾಚನ ಮಕ್ಕಳಲ್ಲಿ ಭಾಷಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುತ್ತದೆ: ಶಬ್ದಕೋಶ, ಗ್ರಹಿಕೆ ಮತ್ತು ಸಂವಹನವನ್ನು ಹೆಚ್ಚಿಸುತ್ತದೆ.
೨. ಮಕ್ಕಳಲ್ಲಿ ಅರಿವಿನ ಸಾಮರ್ಥ್ಯಗಳನ್ನು ಸುಧಾರಿಸುತ್ತದೆ: ವಿಮರ್ಶಾತ್ಮಕ ಚಿಂತನೆ, ಸಮಸ್ಯೆ-ಪರಿಹರಿಸುವುದು ಮತ್ತು ವಿಶ್ಲೇಷಣಾತ್ಮಕ ಕೌಶಲ್ಯಗಳನ್ನು ಹೆಚ್ಚಿಸುತ್ತದೆ.
೩. ಪರಾನುಭೂತಿ ಮತ್ತು ತಿಳುವಳಿಕೆಯನ್ನು ಬೆಳೆಸುತ್ತದೆ: ಮಕ್ಕಳನ್ನು ವೈವಿಧ್ಯಮಯ ದೃಷ್ಟಿಕೋನಗಳು, ಸಂಸ್ಕೃತಿಗಳು ಮತ್ತು ಅನುಭವಗಳಿಗೆ ತೆರೆದುಕೊಳ್ಳುವಂತೆ ಮಾಡುತ್ತದೆ.
೪. ಮಕ್ಕಳಲ್ಲಿ ಕಲ್ಪನೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ.
೫. ಶೈಕ್ಷಣಿಕ ಯಶಸ್ಸಿಗೆ ಸಹ ಸಹಕಾರ ನೀಡುತ್ತದೆ. ಪುಸ್ತಕ ಓದುವುದು ಸಾಧನೆ ಮತ್ತು ಜೀವಮಾನದ ಕಲಿಕೆಯೊಂದಿಗೆ ಪರಸ್ಪರ ಸಂಬಂಧ ಹೊಂದಿದೆ.
೬. ಗಮನಿಸುವ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಮಕ್ಕಳ ಗಮನವನ್ನು ತನ್ನೆಡೆಗೆ ಸೆಳೆಯುತ್ತದೆ. ಪುಸ್ತಕ ಮಾನಸಿಕ ಗೊಂದಲವನ್ನು ಕಡಿಮೆ ಮಾಡುತ್ತದೆ.
ಮೇಲಿನ ಅಂಶಗಳು ಅನುಭವವಾಗ ಬೇಕಿದ್ದರೆ ಪುಸ್ತಕ ಓದಲೇಬೇಕು. ಪುಸ್ತಕ ಓದಿದರೆ ಮಾತ್ರ ಮೇಲಿನ ನಿಪುಣತೆ ನಮ್ಮಲ್ಲಿ ಬರುತ್ತದೆ ಎಂದು ನಾನು ಹೇಳುವುದಿಲ್ಲ, ಆದರೆ ಸದ್ಯದ ಮಕ್ಕಳಿಗೆ ಕೋಶಾ ಓದಲು ಇಷ್ಟವಿಲ್ಲ, ದೇಶ ಸುತ್ತಲು ಸಮಯವೇ ಇಲ್ಲ. ಬೇರೆ ಪುಸ್ತಕ, ಲೇಖನಗಳನ್ನು ಓದದೇ ಬೆಳೆಯುವ ಮಕ್ಕಳಲ್ಲಿ ಕಂಡು ಬರುವ ನ್ಯೂನತೆಗಳ ಬಗ್ಗೆ ನಾವು ಅರಿತುಕೊಳ್ಳಲೇಬೇಕು.
೧. ಸೀಮಿತ ಶಬ್ದಕೋಶ ಮತ್ತು ಸಂವಹನ ಕೌಶಲ್ಯಗಳು ಕಡಿಮೆ, ಏಕೆಂದರೆ ಬೇರೆ ಬೇರೆ ಪದಗಳ ಪರಿಚಯ ಈ ಮಕ್ಕಳಿಗೆ ಆಗಿರುವುದೇ ಇಲ್ಲ, ಕೇವಲ ಪಠ್ಯದಲ್ಲಿರುವ ಸೀಮಿತ ಪದ ಜ್ಞಾನ ಮಕ್ಕಳಲ್ಲಿ ಇರುವುದರಿಂದ ಮಕ್ಕಳು ಮಾತಾಡುವಾಗ ಬರೆಯುವಾಗ ಗುಣಮಟ್ಟದ ವಾಕ್ಯಗಳು ರಚನೆಯಾಗುವುದಿಲ್ಲ. ಆಲೋಚನೆಗಳು ಮತ್ತು ಭಾವನೆಗಳನ್ನು ವ್ಯಕ್ತಪಡಿಸಲು ಈ ಮಕ್ಕಳು ತೊಳಲುತ್ತಾರೆ.
೨. ಕಡಿಮೆಯಾಗುವ ವಿಮರ್ಶಾತ್ಮಕ ಚಿಂತನೆ ಮತ್ತು ಸಮಸ್ಯೆ-ಪರಿಹರಿಸುವ ನಿಪುಣತೆ ಎದ್ದು ಕಾಣುತ್ತದೆ. ಹೋಲಿಕೆ ಮಾಡಲು, ಉಪಮಾನ ಉಪಮೇಯ ಬಳಸಲು ಕಷ್ಟವಾಗುತ್ತದೆ, ವಿವಿಧ ಸಂಘರ್ಷಗಳ ಬಗ್ಗೆ ಅರಿವಿಲ್ಲದಿರುವುದರಿಂದ ಸಂಘರ್ಷ ಎದುರಿಸಲು ಆತ್ಮಬಲದ ಕೊರತೆ ಕಾಣುತ್ತದೆ.
೩. ಹಲವಾರು ಕಥೆ ಕಾದಂಬರಿಗಳಲ್ಲಿ ಇರುವ ಮೌಲ್ಯ, ಆದರ್ಶಗಳ ಬಗ್ಗೆ ಪರಿಚಯವಿಲ್ಲದೆ ಸಂಕುಚಿತ ದೃಷ್ಟಿಕೋನ ಮಕ್ಕಳಲ್ಲಿ ಮೂಡಬಹುದು ಮತ್ತು ಪರಾನುಭೂತಿ ಪರರ ನೋವನ್ನು ಗುರುತಿಸಿ, ಸ್ಪಂದಿಸುವ ಗುಣ ಬೆಳೆಯದೆ ಹೋಗಬಹುದು.
೪. ಕಡಿಮೆಯಾಗುವ ಕಲ್ಪನೆ ಮತ್ತು ಸೃಜನಶೀಲತೆ, ಕೆಲವು ಕಥೆಗಳು, ಕಥೆಯಲ್ಲಿನ ಪಾತ್ರಗಳು ಬದುಕನ್ನೇ ಬದಲಿಸುತ್ತವೆ, ಮುಂದಿನ ಜೀವನಕ್ಕೆ ಸ್ಫೂರ್ತಿಯಾಗಿ ನವೀನ ಚಿಂತನೆಯ ಅಭಿವೃದ್ಧಿಯಾಗುತ್ತದೆ ಆದರೆ ಓದದೇ ಇದ್ದರೆ ಕಲ್ಪನೆಗೆ ರೆಕ್ಕೆಗಳೇ ಇರುವುದಿಲ್ಲ.
೫. ಕಳಪೆ ಶೈಕ್ಷಣಿಕ ಪ್ರದರ್ಶನ, ಉರು ಹೊಡೆದು ಶಾಲೆಯಲ್ಲಿ ಫಸ್ಟ್ ಬರಬಹುದು ಆದರೆ ಜ್ಞಾನಕ್ಕೆ ನಿಯಮಿತ ಪರಿಧಿ ಸೃಷ್ಟಿಯಾಗಿ ಬಿಟ್ಟಿರುತ್ತದೆ.
೬. ಒಂಟಿತನ, ಹಾಗೂ ಬೇರೆ ಮಾಧ್ಯಮಗಳ ಮೇಲೆ ಅವಲಂಬಿತನ ಉಂಟಾಗಿ ಮಾನಸಿಕ ಗೊಂದಲಗಳು ಉಂಟಾಗಬಹುದು.
ಮಕ್ಕಳು ಬೇರೆ ಪುಸ್ತಕ ಓದುತ್ತಿಲ್ಲ ಎಂಬುದು ನಾವು ಗಮನಿಸುತ್ತೇವೆ, ಆದರೆ ದೇಶದಲ್ಲಿ ಎಷ್ಟು ಮಕ್ಕಳು ಬೇರೆ ಪುಸ್ತಕ ಓದುತ್ತಿಲ್ಲ, ಅವರ ಇಷ್ಟ ಏನು ಎಂಬುದನ್ನು ಪುಸ್ತಕ ಪ್ರಕಾಶಕರು ಅಧ್ಯಯನ ನಡೆಸಿ ಅಂಕಿಅಂಶಗಳನ್ನು ಪ್ರಕಟಿಸಿದ್ದಾರೆ.
೧. ಭಾರತದಲ್ಲಿ ೭೧% ಮಕ್ಕಳು ವಾರಕ್ಕೊಮ್ಮೆ ಬೇರೆ ಪುಸ್ತಕ ಓದುತ್ತಾರೆ, ಅಲ್ಲದೆ ೬೨% ಭಾರತೀಯ ಮಕ್ಕಳು ಓದುವುದಕ್ಕಿಂತ ಟಿವಿ ಅಥವಾ ವೀಡಿಯೊಗಳನ್ನು ವೀಕ್ಷಿಸಲು ಬಯಸುತ್ತಾರೆ (ನ್ಯಾಷನಲ್ ಬುಕ್ ಟ್ರಸ್ಟ್, ೨೦೧೯).
೨. ಭಾರತದಲ್ಲಿ ಕೇವಲ ೨೨% ಮಕ್ಕಳು ಮಾತ್ರ ನಿಯಮಿತವಾಗಿ ಪುಸ್ತಕಗಳನ್ನು ಓದುತ್ತಾರೆ (ಪಠ್ಯಪುಸ್ತಕಗಳನ್ನು ಹೊರತುಪಡಿಸಿ) (ಸ್ಕಾಲಸ್ಟಿಕ್ ಇಂಡಿಯಾ, ೨೦೧೮).
೩. ೬-೧೭ ವರ್ಷ ವಯಸ್ಸಿನ ೮೩% ಭಾರತೀಯ ಮಕ್ಕಳು ಟಿವಿ ಹಾಗೂ ಮೊಬೈಲ್ ಪ್ರಭಾವಿತರಾಗಿ ಓದುವ ಅಭ್ಯಾಸವನ್ನು ಕಡಿಮೆ ಮಾಡಿದ್ದಾರೆ (ಪ್ಯೂ ಸಂಶೋಧನೆ, ೨೦೧೯).
೪. ೬೫% ಭಾರತೀಯ ಪೋಷಕರು ತಮ್ಮ ಮಗು ಟಿವಿ ನೋಡುವ ಮೊಬೈಲ್ ವೀಕ್ಷಣೆ ಅವರ ಓದುವ ಅಭ್ಯಾಸದ ಮೇಲೆ ಪರಿಣಾಮ ಬೀರಿದೆ ಎಂದು ಒಪ್ಪಿಕೊಳ್ಳುತ್ತಾರೆ (ಟಾಟಾ ಟ್ರಸ್ಟ್ಗಳು, ೨೦೨೦).
ಕೆಳಗಿನ ಕುತೂಹಲಕಾರಿ ಮಾಹಿತಿಯನ್ನು ಗಮನಿಸಿ:
೧. ಮಕ್ಕಳ ಪುಸ್ತಕಗಳ ಕೊರತೆ (೪೩%), ಮಕ್ಕಳಲ್ಲಿ ಆಸಕ್ತಿಯ ಕೊರತೆ (೩೫%), ಮತ್ತು ಪೋಷಕರ ಪ್ರಭಾವ (೨೭%) (ಟಾಟಾ ಟ್ರಸ್ಟ್ಗಳು, ೨೦೨೦).
೨. ೬೧% ಭಾರತೀಯ ಶಾಲೆಗಳು ಗ್ರಂಥಾಲಯಗಳ ಕೊರತೆ ಅಥವಾ ಅಸಮರ್ಪಕ ಗ್ರಂಥಾಲಯಗಳನ್ನು ಹೊಂದಿವೆ (ಂSಇಖ, ೨೦೧೯).
ಇತ್ತೀಚಿಗೆ ಕೆಲವು ವರುಷಗಳ ಜೆ.ಕೆ. ರೌಲಿಂಗ್ ಬರೆದ ಹ್ಯಾರಿ ಪಾಟರ್ ಸರಣಿ ಪುಸ್ತಕಗಳನ್ನು ವಿಶ್ವದ ಅನೇಕ ರಾಷ್ಟ್ರಗಳ ಮಕ್ಕಳು ಮುಗಿ ಬಿದ್ದು ಖರೀದಿಸಿ ಓದಿದರು, ಮುಂದಿನ ಪುಸ್ತಕ ಯಾವಾಗ ಬರುತ್ತದೆ ಎಂದು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದರು, ನಮ್ಮ ದೇಶದಲ್ಲೂ ಸಹ ಮಕ್ಕಳು ಹ್ಯಾರಿ ಪಾಟರ್ ಪುಸ್ತಕಗಳನ್ನು ಓದಿದರೂ ಆ ಪುಸ್ತಕ ಸಿನಿಮಾ ಬಂದರೂ ಸಹ ಆ ಪುಸ್ತಕಗಳ ಬಗ್ಗೆ ಮಕ್ಕಳಿಗೆ ಪ್ರೀತಿ ಕಮ್ಮಿಯಾಗಲಿಲ್ಲ, ಕೆಲ ಮಕ್ಕಳು ಸಿನಿಮಾಗಿಂತ ಪುಸ್ತಕಗಳೇ ಚೆನ್ನಾಗಿತ್ತು ಎಂದರು. ಹಾಗಾದರೆ ಮಕ್ಕಳನ್ನು ಪುಸ್ತಕ ಪ್ರಪಂಚಕ್ಕೆ ಸೆಳೆದ ಹ್ಯಾರಿ ಪಾಟರ್ ನಲ್ಲಿ ಯಾವ ಶಕ್ತಿ ಇತ್ತು?
ಟಿ.ಕೆ. ರಾಮರಾವ್ ರವರ ದಿಬ್ಬದ ಬಂಗಲೆ, ಬಿ.ಎಲ್. ವೇಣುರವರ ಗುಹೆ ಸೇರಿದವರು ಕಾದಂಬರಿಗಳು ಹ್ಯಾರಿ ಪಾಟರ್‌ನ ಸಾಹಸಗಳಿಗೆ ಸಮವಾಗಿವೆ. ಆದರೆ ಈ ಪುಸ್ತಕಗಳಿಗೆ ಪ್ರಚಾರವೇ ಇಲ್ಲವಲ್ಲ?
ಕಡೆ ಪಕ್ಷ ನಮ್ಮ ಈಗಿನ ಮಕ್ಕಳು ಕಡ್ಡಾಯವಾಗಿ ರಾಮಾಯಣ, ಮಹಾಭಾರತ, ಜಾತಕ ಕತೆಗಳು, ಪಂಚತAತ್ರ ಕಥೆಗಳು ಹಾಗೂ ನಮ್ಮ ದೇಶದ ಸ್ವಾತಂತ್ರ ಸಂಗ್ರಾಮದ ಕಥೆಗಳನ್ನು ಓದಲೇಬೇಕೆಂದು ಸರ್ಕಾರ ಆದೇಶ ಮಾಡಿದರೆ ಒಳಿತಲ್ಲವೇ ?????
-ನಾಗಸಿಂಹ ಜಿ ರಾವ್
ಚೈಲ್ಡ್ ರೈಟ್ಸ್ ಟ್ರಸ್ಟ್
ಅಂಕಿ ಅಂಶಗಳ ಮೂಲಗಳು:
೧. ನ್ಯಾಷನಲ್ ಬುಕ್ ಟ್ರಸ್ಟ್ (೨೦೧೯) – “ಭಾರತದಲ್ಲಿ ಮಕ್ಕಳ ಓದುವ ಅಭ್ಯಾಸಗಳು”
೨. ಸ್ಕೊಲಾಸ್ಟಿಕ್ ಇಂಡಿಯಾ (೨೦೧೮) – “ಮಕ್ಕಳು ಮತ್ತು ಕುಟುಂಬ ಓದುವ ವರದಿ”
೩. ಪ್ಯೂ ಸಂಶೋಧನೆ (೨೦೧೯) – “ಹದಿಹರೆಯದವರು ತಂತ್ರಜ್ಞಾನವನ್ನು ಹೇಗೆ ಬಳಸುತ್ತಾರೆ”
೪. ಟಾಟಾ ಟ್ರಸ್ಟ್ಸ್ (೨೦೨೦) – “ಭಾರತದ ಓದುವ ಬಿಕ್ಕಟ್ಟು”
೫. ASER (೨೦೧೯) – “ವಾರ್ಷಿಕ ಶಿಕ್ಷಣದ ಸ್ಥಿತಿ ವರದಿ”
೬. KPMG (೨೦೧೯) – “ಭಾರತದ ಡಿಜಿಟಲ್ ಭವಿಷ್ಯ”
ಹೌದು ಸರ್ ನೀವು ಬರೆದಿರುವ ವಿಚಾರಗಳು ಖಂಡಿತ ಸತ್ಯ.
ಇತ್ತೀಚಿನ ದಿನಗಳಲ್ಲಿ ಮಕ್ಕಳಷ್ಟೇ ಅಲ್ಲ ದೊಡ್ಡವರು ಕಾಲೇಜಿನ ವಿದ್ಯಾರ್ಥಿಗಳು ಸಹ ಓದುವ ಹವ್ಯಾಸವನ್ನು ಮರೆತಿದ್ದಾರೆ ಬಹುಶಃ ಇದು ಬಹಳ ದುಃಖದ ಸಂಗತಿ ಮಾಹಿತಿ ಎಂದರೆ ಕೇವಲ ಮೊಬೈಲ್ ಆಗಿದೆ ಮನರಂಜನೆ ಎಂದರೆ ಕೇವಲ ಮೊಬೈಲ್ ಆಗಿದೆ ಇದರ ಗೀಳು ಎಂದು ತಪ್ಪುವುದು ಅಂದು ಮಕ್ಕಳು ಓದುವ ಹವ್ಯಾಸವನ್ನು ಮತ್ತೆ ಪಡೆದುಕೊಳ್ಳುತ್ತಾರೆ ಅನಿಸುತ್ತಿದೆ.
ಲೇಖನ ತುಂಬಾ ಚೆನ್ನಾಗಿದೆ.
ಧನ್ಯವಾದಗಳು
ನಿಜ ಸರ್, ಪಠ್ಯೇತರ ಪುಸ್ತಕಗಳ ಓದು ಅಗತ್ಯವಿದೆ.
ಅರ್ಥಪೂರ್ಣ ಮಾಹಿತಿಯುಕ್ತ ಲೇಖನ.