,
ನಮಸ್ಕಾರ ಮಕ್ಕಳೇ, ನೀವು ಈ ಕಥೆ ಓದೋದಕ್ಕೆ ಶುರು ಮಾಡಿದ್ದೀರಾ ಅಂದ್ರೆ ಮಕ್ಕಳ ಹಕ್ಕುಗಳ ಲೋಕವನ್ನ ಪ್ರವೇಶ ಮಾಡೋಕೆ ಸಿದ್ಧರಾಗಿದೀರಾ ಅಂತ ಅರ್ಥ. ಈ ಕಥೆ ಓದಿದ ಮೇಲೆ ನಿಮ್ಮ ಗೆಳಯರಿಗೆ ಈ ಕಥೆ ಬಗ್ಗೆ ಹೇಳಬೇಕು, ಸರಿನಾ?
ಒಂದು ಊರಲ್ಲಿ ಒಂದು ಮಕ್ಕಳ ಸಂರಕ್ಷಣಾ ಗೃಹ ಇತ್ತು. ಏನಪ್ಪಾ ಇದು ಅಂದುಕೊಂಡ್ರಾ? ಮೊದಲು ಅನಾಥಾಲಯ ಅಂತ ಕರೀತಿದ್ವಲ್ಲ ಅದರ ಬದಲಾಗಿ ಮಕ್ಕಳ ಸಂರಕ್ಷಣಾ ಗೃಹ ಅಂತ ಕರಿಬೇಕು, ಅನಾಥ ಮಕ್ಕಳು ಅನ್ನುವ ಬದಲಾಗಿ ರಕ್ಷಣೆ ಪೋಷಣೆ ಅಗತ್ಯ ಇರೋ ಮಕ್ಕಳು ಅಂತ ಕರಿಬೇಕು ಆಯ್ತಾ, ಸರಿ ಈಗ ಈ ನಮ್ಮ ಕತೆಗೆ ಬರೋಣ.
ಮಕ್ಕಳ ಸಂರಕ್ಷಣಾ ಗೃಹದಲ್ಲಿ ಸುಮಾರು ಮೂವತ್ತು ಮಕ್ಕಳು ಇದ್ದರು, ಪೋಷಕರಿಲ್ಲದ ಮಕ್ಕಳು, ಮನೆ ಬಿಟ್ಟು ಬಂದ ಮಕ್ಕಳು, ವಲಸೆ ಬಂದ ಮಕ್ಕಳು, ಬಾಲಕಾರ್ಮಿಕರಾಗಿ ಕೆಲಸ ಮಾಡಿದ್ದ ಮಕ್ಕಳು ಹೀಗೆ ಹಲವಾರು ಹಿನ್ನೆಲೆಯ ಮಕ್ಕಳು ಇದ್ದರು. ಈ ಮಕ್ಕಳಿಗೆ ಸಂರಕ್ಷಣಾ ಗೃಹದೋರು ರಕ್ಷಣೆ ನೀಡಿ, ಉಳಿದು ಕೊಳ್ಳೋಕೆ ಜಾಗ, ಪ್ರತಿದಿನ ಊಟ ತಿಂಡಿ ಕೊಟ್ಟು ಶಾಲೆಗೂ ಸಹ ಕಳಿಸುತ್ತಿದ್ದರು. ಒಟ್ಟಿನಲ್ಲಿ ಮನೆಯಿಲ್ಲದ ಮಕ್ಕಳಿಗೆ ಮನೆ, ಅಮ್ಮ ಅಪ್ಪ ಇಲ್ಲದ ಮಕ್ಕಳಿಗೆ ಪ್ರೀತಿ ಕೊಟ್ಟು ಮಕ್ಕಳನ್ನ ಚನ್ನಾಗಿ ನೋಡಿಕೊಳ್ಳುತ್ತಿದ್ದರು.
ಅಲ್ಲಿ ಅಶೋಕ ಅನ್ನೋ ಹನ್ನೆರಡು ವರುಷದ ಹುಡುಗ ಇದ್ದ, ಬುದ್ದಿವಂತ, ಯಾವುದಕ್ಕೂ ಅಳುತ್ತಿರಲಿಲ್ಲ, ಬೇರೆ ಹುಡುಗರಿಗೆ ಧೈರ್ಯ ಹೇಳೋನು.. ಎಲ್ಲರಿಗೂ ಅವನೆಂದ್ರೆ ಇಷ್ಟ. ಅಶೋಕ ಮನೆ ಬಿಟ್ಟು ಓಡಿ ಬಂದು ಬಿಟ್ಟಿದ್ದ, ಅಪ್ಪ ಅಮ್ಮನ ಜಗಳ ನೋಡಿ ನೋಡಿ ಬೇಸರವಾಗಿ ಮನೆ ಬಿಟ್ಟಿದ್ದ. ಚೈಲ್ಡ್ ಲೈನ್ ೧೦೯೮ ಸದಸ್ಯರು ಅಶೋಕನನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಕರೆಕೊಂಡು ಹೋದಾಗ ಅಶೋಕ ಅಪ್ಪ ಅಮ್ಮನ ಬಗ್ಗೆ ಬಾಯಿ ಬಿಡಲಿಲ್ಲ, ಎಲ್ಲಿದ್ದಾರೆ ಅಂತಲೂ ಹೇಳಲಿಲ್ಲ. ಮಕ್ಕಳ ಕಲ್ಯಾಣ ಸಮಿತಿಯವರು ಅಶೋಕ ಸ್ವಲ್ಪ ದಿನ ಮಕ್ಕಳ ಸಂರಕ್ಷಣಾ ಗೃಹದಲ್ಲಿ ಇರಲಿ ಎಂದು ಕಳಿಸಿದ್ದರು.
ಒಂದು ವರುಷವಾದರೂ ಅಶೋಕ ಅಪ್ಪ ಅಮ್ಮನ ಬಗ್ಗೆ ಹೇಳದೆ ಸುಮ್ಮನಿದ್ದ. ಸಂರಕ್ಷಣಾ ಗೃಹದೋರು ಸೇರಿಸಿದ ಶಾಲೆಗೆ ಸೇರಿ ಚೆÀನ್ನಾಗಿ ಓದುತಿದ್ದ.
ಒಂದು ದಿನ ಅಶೋಕನಿಗೆ ಒಂದು ಪತ್ರ ಬಂದಿತು. ಸಂರಕ್ಷಣಾ ಗೃಹದ ಪ್ರಮುಖರಾದ ಗೋಪಾಲ ಮೂರ್ತಿ ಪತ್ರವನ್ನು ಅಶೋಕನಿಗೆ ಕೊಟ್ಟರು. ಬೇರೆ ಮಕ್ಕಳಿಗೆಲ್ಲಾ ಕುತೂಹಲ ಅಶೋಕನಿಗೆ ಕಾಗದ ಬಂದಿದೆ.. ಯಾರು ಬರೆದಿರೋರು? ರಾಜ, ಸಲೀಮ್, ಜಾನ್, ಖಲೀಫಾ, ರಂಗ , ಪಟೇಲ್ ಎಲ್ಲರೂ ಅಶೋಕನನ್ನ ಪತ್ರದ ಬಗ್ಗೆ ಕೇಳಿದ್ರು.
“ರಾತ್ರಿ ಊಟ ಆದಮೇಲೆ ಓದುತ್ತೀನಿ ಬನ್ನಿ” ಅಂತ ಅಶೋಕ ಗೆಳೆಯರಿಗೆ ಹೇಳಿದ.
ಗೆಳೆಯರು ರಾತ್ರಿ ಆಗೋದನ್ನೇ ಕಾಯ್ತಿದ್ರು.. ಬೇಗ ಬೇಗ ಊಟ ಮಾಡಿ ಅಶೋಕ ಹತ್ರ ಓಡಿ ಬಂದ್ರು. ಅಶೋಕ ಮದ್ಯದಲ್ಲಿ ಕುಳಿತ ಅವನ ಸುತ್ತಲೂ ಗೆಳೆಯರು ಕುಳಿತರು. ಅಶೋಕ ಪತ್ರ ಓದಲು ಶುರು ಮಾಡಿದ..
ಪ್ರೀತಿಯ ಮಗನೆ ಅಶೋಕ, ನೀನು ಬೆಂಗಳೂರಿನ ಸಂರಕ್ಷಣಾ ಗೃಹದಲ್ಲಿ ಇರುವುದು ನಮಗೆ ತಿಳಿಯಿತು, ಫೋನ್ ಮಾಡುವ ಬದಲು ಪತ್ರ ಬರೆಯಲು ನಾನು ನಿಮ್ಮ ಅಪ್ಪ ತೀರ್ಮಾನ ಮಾಡಿದೆವು. ಸಂಸಾರದಲ್ಲಿ ಕೆಲವು ಸಮಯ ನಾವು ತಾಳ್ಮೆ ಕಳೆದುಕೊಂಡು ಬಿಡುತ್ತೇವೆ, ಜಗಳ ಆಡಿಬಿಡುತ್ತೇವೆ, ಇವು ಮಕ್ಕಳ ಮುಗ್ದ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಗಮನಿಸುವುದೇ ಇಲ್ಲ. ನಮ್ಮನ್ನು ಕ್ಷಮಿಸಿ ಬಿಡು. ಮತ್ತೆ ಇಂದಿಗೂ ನಾವಿಬ್ಬರು ಜಗಳ ಮಾಡುವುದಿಲ್ಲ, ಮುಂದಿನ ತಿಂಗಳು ಬೆಂಗಳೂರಿಗೆ ಬಂದು ನಿನ್ನನ್ನು ಮನೆಗೆ ಕರೆದುಕೊಂಡು ಬರುತ್ತವೆ. ಕೋಪ ಮರೆತು ನಮ್ಮ ಜೊತೆ ಬಂದು ಬಿಡು, ನಿನಗಾಗಿ ನಾವು ಕಾಯುತ್ತಿದ್ದೇವೆ, ಬದಲಾಗಿದ್ದೇವೆ.
ನಿನ್ನ ಅಮ್ಮ
ಶಾರದ
ಪತ್ರ ಓದಿದ ಅಶೋಕನ ಕಣ್ಣಿನಿಂದ ನೀರು ಹರಿಯುತಿತ್ತು. ಗೆಳೆಯರ ಕಣ್ಣಲ್ಲೂ ನೀರು ಒಂದು ರೀತಿಯ ಮೌನ, ನಿಶಬ್ದ.. ಗೆಳಯರು ಒಬ್ಬೊಬ್ಬರಾಗಿ ಎದ್ದು ಹೋದರು. ಅಶೋಕ ಹಾಸಿಗೆ ಮೇಲೆ ಬಹಳ ಹೊತ್ತು ಕುಳಿತೇ ಇದ್ದ.
ಮರುದಿನ ಉಪಹಾರದ ಸಮಯದಲ್ಲಿ ಎಲ್ಲಾ ಮಕ್ಕಳು ಅಶೋಕನಿಗೆ ಬಂದಿರುವ ಪತ್ರದ ಬಗ್ಗೆಯೇ ಮಾತನಾಡುತ್ತಿದ್ದರು. “ಅಶೋಕ ಅದೃಷ್ಟವಂತ, ಮತ್ತೆ ಅಪ್ಪ ಅಮ್ಮನ ಹತ್ರ ಹೋಗ್ತಾನೆ” ಅನ್ನುವ ಮಾತುಗಳು. ಆದ್ರೆ ಸಲೀಮ್ ದುಃಖದಿಂದ ಅಳ್ತಾಯಿದ್ದ, ನಮ್ಮ ಅಮ್ಮನೂ ಇದಾಳೆ.. ಕಾಗದ ಬರೆಯೋಕೆ ಬರಲ್ಲ.. ಫೋನ್ ಮಾಡಲ್ಲ, ನನ್ನ ನೋಡೋಕು ಬರಲ್ಲ ಅಂತ ಸಂಕಟ ಪಡ್ತಿದ್ದ. ಇದು ಅಶೋಕನಿಗೆ ಗೊತ್ತಾಯಿತು ಸಲೀಮನಿಗೆ ಸಮಾಧಾನ ಮಾಡಿದ.
ಮುಂದಿನ ವಾರದಲ್ಲಿ ಮಕ್ಕಳಿಗೆ ಪರೀಕ್ಷೆ ಇತ್ತು, ಎಲ್ಲರು ಬ್ಯುಸಿ ಆಗಿದ್ದರು, ಸುಮಾರು ಮೂರು ವಾರ ಆಗಿತ್ತು ಮಕ್ಕಳಿಗೆ ಆಶ್ಚರ್ಯ ಕಾದಿತ್ತು. ಸಲೀಮನ ತಾಯಿಯಿಂದ ಪತ್ರ ಬಂದಿತ್ತು. ಸಲೀಮ್ ಬಾಲಕಾರ್ಮಿಕನಾಗಿ ಕೆಲಸ ಮಾಡ್ತಿದ್ದ ಅವನ ರಕ್ಷಣೆಯ ನಂತರ ಶಾಲೆಗೆ ಹೋಗ್ತಿದ್ದರಿಂದ ಸರಿಯಾಗಿ ಕನ್ನಡ ಓದಲು ಬರುತ್ತಿರಲಿಲ್ಲ. ಅಶೋಕನ ಬಳಿ ಬಂದ ಸಲೀಮ ಪತ್ರ ಓದಲು ಕೇಳಿಕೊಂಡ, ಬೇರೆ ಗೆಳೆಯರೆಲ್ಲಾ ಸುತ್ತ ಕುಳಿತರು.
ಬೇಟಾ ಸಲೀಮ್ ಹೇಗಿದೀಯಾ?
ಇಸ್ಕೂಲಿಗೆ ಹೋಗ್ತಿಯಂತೆ, ಚನ್ನಾಗಿ ಓದು, ಆಫೀಸರ್ ಆಗು ಬೇಟಾ. ನಂಗೆ ಬರಿಯೋಕೆ ಬರಲ್ಲ. ಅಲ್ಲಿಗೆ ಬಂದಾಗ ಮಾತಾಡೋಣ. ದೇವರನ್ನ ನಂಬು ಬೇಟಾ.
ಅಮ್ಮ ಖಾಲಿಜಾ
ಸಲೀಮನಿಗೆ ತುಂಬಾ ಖುಷಿ ಆಯಿತು. ಎಲ್ಲಾ ಮಕ್ಕಳೂ ಸಂತೋಷ ಪಟ್ಟರು. ಅಮ್ಮನ ಮಮತೆ, ವಾತ್ಸಲ್ಯ ಇದರ ಬಗ್ಗೆ ಕನಸು ಕಂಡರು. ಮುಂದಿನ ವಾರ ಜಾನ್ ಗೆ, ಅದರ ಮುಂದಿನ ವಾರ ರಂಗನಿಗೆ ಪತ್ರಗಳು ಬಂದವು. ಎಲ್ಲಾ ಪತ್ರಗಳನ್ನು ಅಶೋಕನೇ ಓದಿ ಹೇಳಿದ. ಮಕ್ಕಳೆಲ್ಲಾ ಪ್ರೀತಿ ವಾತ್ಸಲ್ಯಗಳ ಹೊಳೆಯಲ್ಲಿ ಮುಳುಗಿ ಹೋದರು.
ಎರಡು ತಿಂಗಳ ನಂತರ ಅಶೋಕನ ತಾಯಿ, ತಂದೆ ಕಾನೂನು ಕ್ರಮಗಳನ್ನು ಅನುಸರಿಸಿ ಅಶೋಕನನ್ನು ಮನೆಗೆ ಕರೆದುಕೊಂಡು ಹೋಗಲು ಬಂದರು. ಅಶೋಕ ಹೊರಟು ಹೋಗುತ್ತಾನೆ ಅನ್ನುವ ಸಂಕಟ ಒಂದು ಕಡೆ ಆದರೆ ಅಶೋಕ ಅಪ್ಪ ಅಮ್ಮನ ಮಡಿಲು ಸೇರಿದ ಅನ್ನೂ ಸಂತೋಷ ಒಂದು ಕಡೆ. ಅಶೋಕ ಎಲ್ಲರಿಗೂ ವಂದನೆ ತಿಳಿಸಿ ಹೊರಟು ಹೋದ.
ಅಶೋಕ ಸಂರಕ್ಷಣಾ ಗೃಹದಿಂದ ಹೋಗಿ ಒಂದು ತಿಂಗಳಾಯಿತು, ಯಾವುದೇ ಮಕ್ಕಳಿಗೆ ಅವರ ಅಪ್ಪ ಅಮ್ಮನಿಂದ ಪತ್ರ ಬರಲಿಲ್ಲ. ಯಾಕೆ ಪತ್ರ ಬರ್ತಿಲ್ಲ ಅನ್ನೂ ಪ್ರಶ್ನೆ ಎಲ್ಲಾ ಮಕ್ಕಳನ್ನೂ ಕಾಡುತಿತ್ತು. ರಂಗ ಎಲ್ಲರ ಪತ್ರವನ್ನು ತೆಗೆದುಕೊಂಡು ನೋಡಿದ, ಅವನ ಮುಖದಲ್ಲಿ ಕಿರು ನಗೆ ಮೂಡಿತು.
“ಲೋ ನೋಡ್ರೋ ನಮ್ಮ ಅಮ್ಮ, ಜಾನ್ ಅಮ್ಮ, ಸಲೀಮ ಅಮ್ಮ ಎಲ್ಲರ ಹ್ಯಾಂಡ್ ರೈಟಿಂಗ್ ಒಂದೇ..” ಎಂದು ರಂಗ ಕೂಗಿದ.
ಎಲ್ಲಾ ಮಕ್ಕಳಿಗೆ ಪತ್ರಗಳ ಹಿಂದಿನ ರಹಸ್ಯ ತಿಳಿದು ಹೋಯಿತು, ವಾವ್.. ಅಶೋಕ! ಎಂದು ಎಲ್ಲರ ಮನದಲ್ಲೂ ಅಶೋಕನ ಬಗ್ಗೆ ಅಭಿಮಾನ ಮೂಡಿತು.
ಈಗ ಹೇಳಿ ಮಕ್ಕಳೇ ಪತ್ರದ ರಹಸ್ಯ ಏನು?
—ನಾಗಸಿಂಹ ಜಿ. ರಾವ್,
ಚೈಲ್ಡ್ ರೈಟ್ಸ್ ಟ್ರಸ್ಟ್, ಬೆಂಗಳೂರು.
ಆಪ್ತವಾಗಿದೆ.