ಮೈಗ್ರೇನ್ ಮಾತು !: ಡಾ. ಹೆಚ್ ಎನ್ ಮಂಜುರಾಜ್

‘ಏನೇನೋ ಕುರಿತು ಬರೆಯುತ್ತೀರಿ? ನಿಮ್ಮ ತಲೆನೋವನ್ನು ಕುರಿತು ಬರೆಯಿರಿ!’ ಎಂದರು ನನ್ನ ಸಹೋದ್ಯೋಗಿಯೊಬ್ಬರು. ಸ್ವಲ್ಪ ಹೊತ್ತು ಸುಮ್ಮನಿದ್ದು ಆಮೇಲೆ ಹೇಳಿದೆ: ‘ಏಳೆಂಟು ಅಧ್ಯಾಯಗಳಿರುವ ಇನ್ನೂರು ಪುಟಗಳ ಪುಸ್ತಕವನ್ನೇ ಬರೆದೆ. ಆಮೇಲೆ ನೋವನ್ನು ಹಂಚುವುದು ಸಾಹಿತ್ಯದ ಕೆಲಸವಾಗಬಾರದು ಎಂದು ಹರಿದೆಸೆದೆ!’ ಎಂದೆ. ‘ಹೌದೇ!?’ ಎಂದಚ್ಚರಿಪಟ್ಟರು. ಆಗ ಕವಿ ಬೇಂದ್ರೆ ನೆನಪಾದರು: ‘ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ; ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹನಿಸು ನನಗೆ’ ಎಂದವರು. ‘ಬೆಂದರೆ ಬೇಂದ್ರೆ ಆದಾರು, ಯಾರು ಬೇಕಾದರೂ’ ಅಂತ ಅಂದ ಧೀಮಂತರಾತ; ಕಾವ್ಯಾಂಗನೆಯನೊಲಿಸಿಕೊಂಡ ಸಿರಿವಂತರಾತ. ಹಾಗಾಗಿ ಒಂದು ಸಂದೇಶ, ಒಂದು ವಿವೇಕೋದಯ, ಒಂದು ಎಚ್ಚರ, ಒಂದು ನೇವರಿಕೆ, ಒಂದು ಚಿಂತನೆಯ ಸೆಳಕು, ಒಂದು ಆತ್ಮದ ಬೆಳಕು, ಒಂದಾದರೂ ಒಳನೋಟದ ಸರಕು ಇಲ್ಲದಿರೆ ಅದೆಂಥ ಬರೆಹ? ಜೀವಾತ್ಮವನು ಅರಳಿಸುವುದು ಸಾಹಿತ್ಯದ ಕೆಲಸ; ನರಳಿಸುವುದಲ್ಲ!
ಹೀಗಾಗಿ ನಾನು ಆ ಬರೆಹವನ್ನು ಪುಸ್ತಕವನ್ನಾಗಿಸಿ ಪ್ರಕಟಿಸಲೇ ಇಲ್ಲ. ಇಲ್ಲೀಗ ಒಂಚೂರಷ್ಟೇ, ಒಂದಂಶವನ್ನಷ್ಟೇ ಹೇಳುವ ಪುಟ್ಟ ಲೇಖನವಾಗಿಸಿರುವೆ. ಸಾಮಾನ್ಯವಾಗಿ ರೋಗದ ಬಗ್ಗೆ ವೈದ್ಯರು ಮಾತಾಡಬೇಕು ಮತ್ತು ಬರೆಯಬೇಕು. ನಮ್ಮ ದೇಶದಲ್ಲಿ ರೋಗಿ ಮಾತಾಡುವುದಾಗಲೀ ಬರೆಯುವುದಾಗಲೀ ನಿಷಿದ್ಧ. ಇದನ್ನು ಸ್ವತಃ ವೈದ್ಯರೂ ಇಷ್ಟಪಡುವುದಿಲ್ಲ. ಆದರೆ ‘ಹೊಸ ವೈದ್ಯನಿಗಿಂತ ಹಳೆ ರೋಗಿ ಮೇಲು’ ಎಂಬ ಗಾದೆಯೂ ನಮ್ಮಲ್ಲಿದೆ. ಏಕೆಂದರೆ ಹೊಸ ವೈದ್ಯನದು ತಿಳಿವಳಿಕೆ; ಹಳೆರೋಗಿಯದು ಸ್ವಾನುಭವ! ಅದರಲ್ಲೂ ನೋವು ತಿಂದವರ ಮಾತು ಅಧಿಕೃತ ಮತ್ತು ಸಂಗತ. ನಮ್ಮ ಕನ್ನಡದಲ್ಲಿ ವೈದ್ಯರಲ್ಲದವರು ತಮ್ಮ ಖಾಯಿಲೆಯನ್ನು ಕುರಿತು ಬರೆದವರಲ್ಲಿ ಏಳೆಂಟು ಮಂದಿಯಿದ್ದಾರೆ. ಅದರಲ್ಲಿ ತರಂಗದ ಸಂಪಾದಕರಾಗಿದ್ದ ಸಂತೋಷಕುಮಾರ ಗುಲ್ವಾಡಿಯವರು ‘ನಾನೂ ಬೈಪಾಸ್ ಮಾಡಿಸಿಕೊಂಡೆ’ ಎಂಬ ಪುಸ್ತಕವನ್ನು ಬರೆದು ಪ್ರಕಟಿಸಿದ್ದಾರೆ. ಲೇಖಕಿಯೋರ್ವರು ತಾವು ಕ್ಯಾನ್ಸರನ್ನು ಗೆದ್ದ ಬಂದ ಬಗೆಯನ್ನು ತಿಳಿಸಿದ್ದಾರೆ. ಅಪರೂಪದ ಪಾಂಡುರೋಗ ಗುಣವಾದದ್ದರ ಬಗ್ಗೆ ಮತ್ತೊಬ್ಬರು ಹಂಚಿಕೊಂಡಿದ್ದಾರೆ. ಪೆರಾಲಿಸಿಸ್, ಗ್ಲುಕೋಮ, ಖಿನ್ನತೆಯನ್ನು ಕಳೆದುಕೊಂಡಿದ್ದು, ಕಿವಿನೋವು, ದಂತಚಿಕಿತ್ಸೆ, ತಲೆಗೂದಲು ಕಸಿ, ಲಿವರ್ ರೀಪ್ಲೇಸ್‌ಮೆಂಟ್ ಹೀಗೆ ತಮ್ಮ ಖಾಯಿಲೆಯ ಖಾತೆಯನ್ನು ತೆರೆದು ತೋರಿದವರುಂಟು.

ಬಂಡಾಯ ಸಾಹಿತ್ಯದ ವಿಮರ್ಶಕರೆಂದೇ ಹೆಸರು ಮಾಡಿದ್ದ ಶ್ರೀ ಶಿವರಾಮು ಕಾಡನಕುಪ್ಪೆಯವರು ‘ಆಸ್ಪತ್ರೆಯಲ್ಲಿ ಐವತ್ನಾಲ್ಕು ದಿನಗಳು’ ಎಂಬ ಕೃತಿಯನ್ನು ರಚಿಸಿದ್ದಾರೆ. ಇನ್ನು ಕೋವಿಡ್ ಅವಧಿಯಲ್ಲಿ ಕೊರೊನಾದಿಂದ ನರಳಿ, ಹೊರಳಿ, ಕೊನೆಗೆ ಸಾವನ್ನು ಗೆದ್ದು ಬಂದ ಬಗೆಯನ್ನು ಸಹ ಹಲವು ಲೇಖಕ, ಲೇಖಕಿಯರು ತಮ್ಮ ಪ್ರಬಂಧ, ಲೇಖನಗಳಲ್ಲಿ ಹಂಚಿಕೊಂಡಿದ್ದಾರೆ. ಡಯಾಬಿಟೀಸು ಮತ್ತು ಅದರೊಂದಿಗೆ ಸಹಜೀವನ ನಡೆಸುವುದರ ಬಗೆಗೂ ರೋಗಿಗಳು ಬರೆದಿರುವುದುಂಟು. ಆದರೆ ಮೈಗ್ರೇನ್ ಪೀಡಿತರು ಬರೆದಿರುವುದರ ಬಗ್ಗೆ ನನಗೆ ಖಚಿತ ಮಾಹಿತಿ ಇಲ್ಲ. ಗುಲ್ವಾಡಿಯವರ ಪುಸ್ತಕವನ್ನು ಓದಿದ ಮೇಲೆ ನನ್ನ ತಲೆನೋವಿನ ಚರಿತ್ರೆ, ಹಿನ್ನೆಲೆ, ಚಿಕಿತ್ಸೆಗಳ ಸ್ವರೂಪ, ಅದರ ಪರಿಣಾಮ ಮತ್ತು ಅಡ್ಡಪರಿಣಾಮ, ಭೇಟಿಯಾದ ವೈದ್ಯರು, ಅವರು ನೀಡಿದ ಔಷಧಿಗಳು, ನಾ ಪಟ್ಟ ಹಿಂಸೆ, ಯಾತನೆ, ಭಾದೆಗಳು ಎಲ್ಲವನೂ ಅಧ್ಯಾಯಗಳನ್ನಾಗಿಸಿ ಅಚ್ಚುಕಟ್ಟಾಗಿ ಬರೆದಿದ್ದೆ. ಪ್ರಕಟಿಸುವ ಧೈರ್ಯ ಬರಲಿಲ್ಲ. ಆಮೇಲೆ ಅನಿಸಿದ್ದು: ‘ನನ್ನ ನೋವನ್ನೇಕೆ ಲೋಕಕ್ಕೆ ಹಂಚಬೇಕು? ನನ್ನ ನೋವೇ ದೊಡ್ಡದೇ? ಬೇಡ’ ವೆಂದು ಸುಮ್ಮನಾಗಿದ್ದೆ.
‘ತಲೆ ಇದ್ದವರಿಗಷ್ಟೇ ತಲೆನೋವು’ ಎಂಬ ಮಾತಿದೆ. ಅಂದರೆ ‘ನಿನಗೆ ತಲೆ ಇದೆ ಎಂದು ಇವತ್ತು ಗ್ಯಾರಂಟಿಯಾಯಿತು’ ಎಂಬ ವಿಡಂಬನೆಯಿದು. ‘ಅದೇನು? ತಲೆನೋವು ಅಂತ ದಿನಾ ಒದ್ದಾಡ್ತೀರಾ? ಒಂದು ತಲೆನೋವಿಗೆ ಇಷ್ಟೊಂದು ಪರದಾಡುತ್ತಾರೆಯೇ? ಹತ್ತು ನಿಮಿಷ ಮಲಗಿ ಎದ್ದು, ಕಾಫಿ ಕುಡಿದರೆ ಸರಿ ಹೋಗುತ್ತದೆ’ ಎನ್ನುತ್ತಿದ್ದರು ನಮ್ಮ ತಂದೆಯವರು. ಅವರೆಂದೂ ತಲೆನೋವೆಂದು ಮಲಗಿದವರೇ ಅಲ್ಲ.

ಎಂಥ ವಿಪರ್ಯಾಸವೆಂದರೆ ಜೀವನಪೂರ್ತ ಅರೆತಲೆನೋವಿನಿಂದ ಒದ್ದಾಡಿದ್ದು ನಮ್ಮ ತಾಯಿಯವರು. ಅವರ ತವರುಮನೆಯ ಅವರದೇ ಉಡುಗೊರೆ ನನಗೆ ಲಭ್ಯವಾಯಿತು. ಆದರೆ ಮಿದುಳಿನ ರಕ್ತಸ್ರಾವವಾಗಿ ತಲೆಗೆ ಶಸ್ತ್ರಚಿಕಿತ್ಸೆಯಾದದ್ದು ನಮ್ಮ ತಂದೆಯವರಿಗೆ! ಬದುಕು ನನಗೆ ಸದ್ದಿಲ್ಲದೇ ಕಲಿಸಿದ ಪಾಠವಿದು. ಇಂಥ ವಿಧಿ ವಿಪರೀತಗಳನ್ನು ತುಂಬಾ ನೋಡಿದ್ದೇನೆ, ನನ್ನದೇ ಆದೊಂದು ತತ್ತ್ವಜ್ಞಾನ ಕಟ್ಟಿಕೊಳ್ಳಲು ಇವನ್ನು ಬಳಸಿಕೊಂಡಿದ್ದೇನೆ. ವಿಪರೀತ ಆಚಾರ, ಮಡಿ-ಮೈಲಿಗೆಗಳಿಂದ ಬದುಕಿದ ನನ್ನ ಅಜ್ಜಿಗೆ ಕ್ಯಾನ್ಸರ್ ಆಗಿ, ಯಾರನ್ನು ಜೀವನಪೂರ್ತ ದ್ವೇಷಿಸುತ್ತಿದ್ದರೋ ಅಂಥ ಜನ ಸಮುದಾಯದವರೇ ಆದವರೊಬ್ಬರು ರಕ್ತ ಕೊಟ್ಟಿದ್ದು, ನನ್ನ ಇನ್ನೋರ್ವ ಅಜ್ಜಿಯು ತಮ್ಮ ಅಗಾಧ ಮೌಢ್ಯದಿಂದ ಅಗ್ನಿ ಆಕಸ್ಮಿಕಕ್ಕೆ ಸಿಕ್ಕಿಕೊಂಡು, ಧಗಧಗ ಉರಿದು ಬೂದಿಯಾದದ್ದು, ಇನ್ನೊಬ್ಬ ಸಂಬಂಧಿಕರು ಮಾನಸಿಕ ಅಸ್ವಸ್ಥತೆಯಿಂದ ಮೈಮೇಲೇ ಪರಿಜ್ಞಾನವಿಲ್ಲದೇ ಸತ್ತದ್ದು, ಮತ್ತೊಬ್ಬರದಂತೂ ಇನ್ನೊಂದು ರೀತಿ: ಮೂವರು ಮಕ್ಕಳಿದ್ದರೂ ಕೊನೆಗೆ ವೃದ್ಧಾಶ್ರಮದಲ್ಲಿ ಜೀವ ಬಿಟ್ಟಿದ್ದು, ನನ್ನ ದೊಡ್ಡಮ್ಮನಿಗೆ ಸ್ತನ ಕ್ಯಾನ್ಸರಾಗಿ, ಆಪರೇಷನ್ ಆಗಿ, ರೇಡಿಯಷನ್ನಿಗಾಗಿ ಕೆ ಆರ್ ಆಸ್ಪತ್ರೆಗೆ ಅಲೆದಾಡಿದ್ದು, ಇವೆಲ್ಲವನ್ನೂ ಕಣ್ಣಾರೆ ಕಂಡಿದ್ದೇನೆ. ಸಕಲ ರೋಗ ಪರಂಪರೆಯನ್ನೇ ಹೆಮ್ಮೆಯಿಂದ ಆಳ್ವಿಕೆ ಮಾಡಿಕೊಂಡು ಬಂದ ಮನೆತನದವ ನಾನು. ಇದಕ್ಕೆ ನಗಬೇಕೋ? ಅಳಬೇಕೋ? ತಿಳಿಯದು. ನನ್ನ ತಂದೆಯವರ ಒಡಹುಟ್ಟಿದವರಲ್ಲಿ ಒಬ್ಬ ಅಣ್ಣ, ಒಬ್ಬ ತಮ್ಮ ಮತ್ತು ಒಬ್ಬ ತಂಗಿ- ಮೂವರೂ ಜನ್ಮತಃ ಮೂಗರು ಮತ್ತು ಕಿವುಡರು. ನಾನು ತಲೆನೋವಿನಿಂದ ನರಳುವಾಗ ಮೌನವ್ರತ ಆಚರಿಸುತ್ತೇನೆ. ಆವಾಗ ನನ್ನ ಮಡದಿಯು ‘ಎಷ್ಟಾದರೂ ನಿಮ್ಮದು ಮೂಗರ ವಂಶ’ ಎಂದು ದೊಡ್ಡಪ್ಪ, ಚಿಕ್ಕಪ್ಪ, ಚಿಕ್ಕಮ್ಮನನ್ನು ನೆನಪಿಸುತ್ತಿರುತ್ತಾಳೆ. ನಾನಾಗ ‘ಮೂಗರ ವಂಶವೂ ಹೌದು; ತಲೆನೋವಿಗರ ವಂಶವೂ ಹೌದೆಂದು’ ಒಪ್ಪಿಕೊಳ್ಳುತ್ತಿರುತ್ತೇನೆ!
ಬಹಳ ಮುಖ್ಯವಾಗಿ ನಮ್ಮದು ತಲೆನೋವು ವಂಶ. (ಒಂದು ರೀತಿಯಲ್ಲಿ ತಲೆ ಕೆಟ್ಟವರ ವಂಶವೆಂದೇ ಹೇಳಬಹುದು!) ನಮ್ಮ ತಾಯಿ ಮತ್ತು ತಂದೆ ಎರಡೂ ಕಡೆಯ ಬಂಧುಗಳಲ್ಲೂ ತಲೆನೋವಿಗರು ಅದರಲ್ಲೂ ಅರೆತಲೆನೋವಿಗರು ಇದ್ದರು ಮತ್ತು ಇದ್ದಾರೆ. ನಮ್ಮ ತಾಯಿಯ ಇಬ್ಬರು ಅಣ್ಣಂದಿರಿಗೂ ಮೈಗ್ರೇನು. ಅವರ ಹಿರಿಯಣ್ಣನಂತೂ ರಕ್ತನಾಳಸಿಡಿತ (ಬ್ರೈನ್‌ ಹೆಮರೇಜ್)ದಿಂದ ಸಾವನ್ನಪ್ಪಿದರು. ನಮ್ಮ ತಾಯಿಯ ತಂದೆಗೂ ಇತ್ತಂತೆ. ನಮ್ಮ ತಾಯಿಯ ಅಕ್ಕಂದಿರೆಲ್ಲರೂ ತಲೆನೋವಿನಿಂದ ಒದ್ದಾಡುತ್ತಿದುದನ್ನು ಕಂಡಿದ್ದೇನೆ. ನಮ್ಮ ತಾಯಿಗೆ ವಿಪರೀತ. ಅವರಿಗೆ ಅದು ಮೈಗ್ರೇನು ಅಂತಲೂ ಗೊತ್ತಿರಲಿಲ್ಲ. ಸಾರಿಡಾನು, ಅನಾಸಿನ್ನುಗಳಲ್ಲೇ ಜೀವನ ಮುಗಿಸಿದ್ದವರು.

ನಾನು ಎಂಟನೇ ತರಗತಿಯಲ್ಲಿದ್ದಾಗ ನಿಮ್ಹಾನ್ಸ್ಗೆ ಕರೆದುಕೊಂಡು ಹೋದಾಗಲೇ ಅದು ವಂಶಪಾರಂಪರ್ಯವಾಗಿ ಬಂದಿರುವ ಮೈಗ್ರೇನು ಅಂತ ಗೊತ್ತಾಯಿತು. ಮೈಗ್ರೇನಿನ ಬಗ್ಗೆಯೂ ಆಗ ಗೊತ್ತಾಯಿತು. ನಮ್ಮ ತಾಯಿಯ ಮನೆಯವರೆಲ್ಲಾ ವಿಚಿತ್ರವಾದೊಂದು ನಂಬಿಕೆಯ ಅಮಲಲ್ಲಿ ತೇಲಾಡುತಿದ್ದರು. ನಮ್ಮ ತಾತ ಅಂದರೆ ತಾಯಿಯ ತಂದೆಯವರು ನಂಜನಗೂಡು ಮೂಲದವರು. ಹಾವು ಹಿಡಿದು, ಹಲ್ಲು ಕಿತ್ತು, ಕಾಡಿಗೆ ಬಿಡುವುದು ಅವರಿಗೆ ಪ್ರೀತಿಯ ಹವ್ಯಾಸ ಮತ್ತು ಸಮಾಜ ಸೇವೆ. ಸಾವಿರಕ್ಕೂ ಹೆಚ್ಚು ಹಾವುಗಳನ್ನು ಹಿಡಿದು, ಅವರು ಆ ಕಾಲಕ್ಕಾಗಲೇ ದಾಖಲೆ ಮಾಡಿದ್ದರಂತೆ; ಯಾರದೋ ದಾಖಲೆ ಮುರಿದಿದ್ದರಂತೆ! ಅವರು ಹಾವುಗಳನ್ನು ಹಿಡಿಯುತ್ತಿದ್ದರಿಂದ ಅವುಗಳು ಒದ್ದಾಡುವಾಗ ನಾಗಲೋಕವು ಶಾಪ ಕೊಟ್ಟಿತಂತೆ. ಏನಂತ! ‘ಇವರ ವಂಶದವರೆಲ್ಲರೂ ತಲೆನೋವಿನಿಂದ ಒದ್ದಾಡಲಿ’ ಅಂತ!! ನನಗೆ ತಲೆನೋವು ಕಾಣಿಸಿಕೊಂಡ ಮೊದಲ ದಿನಗಳಲ್ಲಿ ಈ ನಾಗಲೋಕದ ಶಾಪವನ್ನು ನೆನಪಿಸಿಕೊಂಡು, ‘ನಿಜ ಆಗ್ತಿದೆ!’ ಎಂದು ನಿಟ್ಟುಸಿರು ಬಿಟ್ಟರು; ಕನಿಕರಿಸಲಿಲ್ಲ! ಇನ್ನು ನಮ್ಮ ತಂದೆಯ ಕೊನೆಯ ತಮ್ಮನಿಗೂ ಮೈಗ್ರೇನು. ಜೊತೆಗೆ ನಮ್ಮ ತಂದೆಯ ಅತ್ತಿಗೆ (ನನಗೆ ದೊಡ್ಡಮ್ಮ) ಯ ಸೋದರ ಹಂಪಾಪುರದ ಗೋಪಾಲರಾಯರು ಚಿಕ್ಕ ವಯಸ್ಸಿನಲ್ಲೇ ಮೈಗ್ರೇನಿನಿಂದ ಮೃತರಾದರು.
ಮೈಗ್ರೇನಿಗೆ ಔಷಧಿಯಿಲ್ಲ; ಅದು ಗುಣವಾಗದ ಖಾಯಿಲೆ. ಖಾಯಿಲೆ ಎಂಬುದಕಿಂತ ಅದೊಂದು ನರರೋಗಲಕ್ಷಣ. ಇದನ್ನು ಡಿಸೀಸ್ ಎನ್ನುವುದಿಲ್ಲ; ಡಿಸಾರ್ಡರ್ ಎನ್ನುತ್ತಾರೆ. ಇದುವರೆಗೂ ಮೈಗ್ರೇನ್ ತಲೆನೋವಿಗೆ ನಿಖರವಾದ ಮದ್ದು ಸಿಕ್ಕಿಲ್ಲ. ತೀವ್ರತರ ನೋವನ್ನು ಹತೋಟಿಗೆ ತರಲು ನೋವುನಿವಾರಕಗಳು ಇವೆ; ಅವುಗಳಿಂದ ಅಂಗವೈಫಲ್ಯಗಳಾಗಬಹುದಾದ ಅಡ್ಡಪರಿಣಾಮಗಳೂ ಇವೆ. ಮೈಗ್ರೇನ್ ರೋಗಿಯು ತನ್ನ ಜೀವನಶೈಲಿಯನ್ನು ಬದಲಿಸಿಕೊಂಡು, ಮೆಡಿಟೇಷನ್ನು ಮತ್ತು ಮೆಡಿಕೇಷನ್ನು- ಇವೆರಡರಿಂದ ಸಮಾಧಾನ ಪಟ್ಟುಕೊಳ್ಳಬೇಕು. ದುರಂತವೆಂದರೆ ಈ ನೋವುನಿವಾರಕಗಳಿಂದಾಗಿ ದೇಹದ ಅಂಗೋಪಾಂಗಗಳು ಡ್ಯಾಮೇಜ್ ಆಗುತ್ತವೆ. ನಾನೀಗ ಆ ಹಂತದ ದುಃಸ್ಥಿತಿಯಲ್ಲಿದ್ದೇನೆ. ಕಾಲುಗಳ ಶಕ್ತಿಹೀನತೆ, ಮಂಡಿ-ಕೀಲುಗಳಲ್ಲಿ ನೋವು, ಕಣ್ಣಿನ ದೃಷ್ಟಿ ಕುಂಠಿತ, ಮೂಗು ಕಟ್ಟಿಕೊಳ್ಳುವ ಸಮಸ್ಯೆ, ಸೈನಸ್, ಎಲ್ಲ ಬಗೆಯ ಅಲರ್ಜಿ, ಚರ್ಮದ ಕಳಾಹೀನತೆ, ಜಠರ, ಕರುಳು ಮತ್ತು ಯಕೃತ್ತು (ಲಿವರ್)ಗಳ ಕಾರ್ಯಕ್ಷಮತೆ ಕುಂಠಿತ, ಗ್ಯಾಸ್ಟ್ರಿಕ್ ಸಮಸ್ಯೆ ಇವೇ ಮುಂತಾದ ಹಿಂಸೆಗಳಿಂದ ಬಾಧಿತನಾಗಿದ್ದೇನೆ.

ಮೈಗ್ರೇನ್ ಎಂಬುದು ಬಹಳ ಪ್ರಾಚೀನವಾದ ರೋಗಲಕ್ಷಣ. ಈಜಿಪ್ಟ್ನಲ್ಲಿ ಒಂಬತ್ತು ಸಾವಿರ ವರುಷಗಳ ಹಿಂದಿನ ತಲೆಬುರುಡೆಗಳು ಸಿಕ್ಕಿದ್ದು, ಅವನ್ನು ಮಾನವಶಾಸ್ತ್ರಜ್ಞರೂ ವೈದ್ಯಕೀಯ ಸಂಶೋಧಕರೂ ಪ್ರಯೋಗಕ್ಕೆ ಒಳಪಡಿಸಿ ‘ಇದೇಕೆ ಹೀಗೆ ತಲೆಬುರುಡೆಗಳಿಗೆ ಆಳವಾದ ರಂಧ್ರ ಕೊರೆಯಲಾಗಿದೆ?’ ಎಂದು ಹುಡುಕಿದಾಗ ಗೊತ್ತಾಗಿದ್ದು: ಆಗಿನ ಕಾಲದಲ್ಲಿ ತಲೆಯೊಳಗೆ ಯಾವುದೋ ಭೂತ ಹೊಕ್ಕಿದ್ದರಿಂದ ಇಂಥ ಶೂಲೆ ಕಾಣಿಸಿಕೊಂಡಿದೆ; ರಂಧ್ರ ಕೊರೆದು ಹೊರಗೆ ಓಡಿಸಬೇಕು ಎಂದು ಭ್ರಮಿಸಿದ್ದರಂತೆ! ಶಕಪೂರ್ವ 1200 ರ ಕಾಲದ್ದೆಂದು ಗುರುತಿಸಿದ ಈಜಿಪ್ಟಿನ ವೈದ್ಯಗ್ರಂಥದಲ್ಲೂ ಮೈಗ್ರೇನು ಪ್ರಸ್ತಾಪವಾಗಿದೆ. ಇದನ್ನು ಅವರು ನರಶೂಲೆ ಎಂದು ಕರೆಯುತ್ತಿದ್ದರಂತೆ. ಮೈಗ್ರೇನ್ ಎಂಬ ಪದವು ಹೆಮಿಕ್ರೇನಿಯ ಎಂಬ ಗ್ರೀಕ್ ಪದದಿಂದ ಬಂದಿದೆ. ಇದರಲ್ಲಿ ಹೆಮಿ (Half) ಎಂದರೆ ಅರೆ / ಅರ್ಧ ಎಂದೂ ಕ್ರೇನಿಯ (Skull) ಎಂದರೆ ತಲೆಬುರುಡೆ ಎಂದೂ ಅರ್ಥ. ಆಮೇಲೆ ಈ ಹೆಮಿಕ್ರೇನಿಯ ಎಂಬ ಪದವು ಲ್ಯಾಟಿನ್ ಭಾಷೆಗೆ ಬಂತು. ಅಲ್ಲಿಂದ ಫ್ರೆಂಚಿಗೆ ಬಂದು, ಮೈಗ್ರೇನ್ ಆಯಿತು. ತಲೆಯ ಒಂದು ಬದಿಯ ನೋವು ಎಂದಿದರ ವಿವರಣೆ. ವೈದ್ಯ ಜಗತ್ತು ಇದನ್ನು ಕ್ರಾನಿಕ್ ಪೇನ್ ಎಂದು ವರ್ಗಿಕರಿಸುತ್ತದೆ.
ನನಗೆ ಹದಿನಾರು ವರುಷವಾಗಿದ್ದಾಗ ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆ ಬರೆದು ಮುಗಿಸಿ ಬಂದು, ಒಂದು ವಾರಗಳ ಕಾಲ ತಲೆನೋವಿನಿಂದ ನರಳಿದೆ. ಇದು ನನ್ನ ತಲೆನೋವಿನ ಮೊದಲನೆಯ ಅನುಭವ. ಅಲ್ಲಿಂದ ಇಲ್ಲಿಯವರೆಗೂ ಅಂದರೆ ಕಳೆದ ನಲವತ್ತು ವರುಷಗಳಿಂದಲೂ ನನಗೆ ತಲೆನೋವು ಬಿಟ್ಟೇ ಇಲ್ಲ! ಒಮ್ಮೆ ಎಡಗಡೆ, ಇನ್ನೊಮ್ಮೆ ಬಲಗಡೆ. ಸಣ್ಣಗೆ ಒಂದು ಕಡೆಯ ನರ ಹೊಡೆದುಕೊಳ್ಳುತ್ತಲೇ ಇರುತ್ತದೆ. ಸೂರ್ಯ ಮುಳುಗಿದ ಮೇಲೆ ಬಿಡುತ್ತಾ ಹೋಗುತ್ತದೆ. ಮತ್ತೆ ಮಾರನೆಯ ಬೆಳಗ್ಗೆ (ಬೆಳಗಿನ ಜಾವವೇ) ಇನ್ನೊಂದು ಬದಿಗೆ ಹೊರಳುತ್ತದೆ. ಮಾತ್ರೆ ನುಂಗಿದರೆ ಕಡಮೆ ಇರುತ್ತದೆ. ನುಂಗದಿದ್ದರೆ ಜಾಸ್ತಿಯಾಗಿ ಅತಿರೇಕ ಮುಟ್ಟುತ್ತದೆ. ಕೂರಲಾಗದು; ನಿಲ್ಲಲಾಗದು; ಯಾವ ಕೆಲಸವನ್ನೂ ಮಾಡಲಾಗದು. ತಿನ್ನಲಾಗದು; ತಿನ್ನದೇ ಇರಲಾಗದು. ವಾಂತಿ, ಲೂಸ್ ಮೋಷನ್, ಆ ನೋವಿನಿಂದ ಕಣ್ಣು ಬಿಡಲಾಗದು. ಶಬ್ದ, ಬೆಳಕು, ವಾಸನೆ ಅಲರ್ಜಿ. ಪ್ರಯಾಣ ಬೇಡ, ಜನ ಬೇಡ, ಫಂಕ್ಷನ್ನು ಬೇಡ, ಸುಮ್ಮನೆ ತಲೆಗೆ ಬಟ್ಟೆ ಕಟ್ಟಿಕೊಂಡು, ಮಲಗಬೇಕು, ನರಳಬೇಕು, ಅಮ್ಮಾ, ಅಪ್ಪಾ, ದೇವರೇ, ತಂದೆ, ಗುರುವೇ ಎಂದು ಒರಲಬೇಕು. ನೋವು ತಿನ್ನುತ್ತಾ ಹಾಗೇ ಸವೆದೂ ಸವೆದೂ ಸತ್ತು ಹೋಗಬೇಕು ಎನಿಸುತ್ತದೆ. ‘ನಿಮಗೇನು? ಚೆನ್ನಾಗಿದ್ದೀರಲ್ಲಾ!’ ಎಂದು ಅಚ್ಚರಿ ಪಡುತ್ತಾರೆ; ನಾನು ತಿನ್ನುತ್ತಿರುವ ನೋವನ್ನೂ ಆ ನೋವಿನ ನರಳಿಕೆಯನ್ನೂ ಕಣ್ಣಲ್ಲಿ ನೋಡುವತನಕ. ಒಂದೇ ಒಂದು ಲಾಭವೆಂದರೆ, ಮೈಗ್ರೇನ್ ರೋಗಿಗಳು ಸತ್ತ ಮೇಲೆ ನೇರ ಸ್ವರ್ಗಕ್ಕೆ ಹೋಗುತ್ತಾರೆ; ಏಕೆಂದರೆ ಇಲ್ಲೇ ಈ ಭೂಲೋಕದಲ್ಲೇ ನರಕದ ಎಲ್ಲ ಶಿಕ್ಷೆಗಳೂ ಮುಗಿದು ಹೋಗಿರುತ್ತವೆ!

ಹತ್ತು ವರುಷಗಳ ಕಾಲ ಯಾವುದೇ ಮಾತ್ರೆಗಳನ್ನೂ ಸೇವಿಸದೇ ಅನುಭವಿಸಿದೆ. ನಾನು ಮೊದಲಿಗೆ ಇಂಗ್ಲಿಷ್ ಮೆಡಿಸನ್ ವಿರೋಧಿಯಾಗಿದ್ದೆ. ಅವು ಮಾತ್ರೆಗಳಲ್ಲ; ವಿಷದ ಗುಳಿಗೆಗಳು ಎಂದು ಭಾವಿಸಿ, ಪ್ರತಿಪಾದಿಸುತ್ತಿದ್ದೆ, ಈಗಿನ ಹಲವರಂತೆ. ವಿಪರ್ಯಾಸವೆಂದರೆ ಕಳೆದ ಮೂವತ್ತು ವರುಷಗಳಿಂದ ಪ್ರತಿದಿನವೂ (ಎಂಟು ಗಂಟೆಗೆ ಒಂದು ಸಲ) ನೋವು ನಿವಾರಕಗಳನ್ನು ನುಂಗುತ್ತಿದ್ದೇನೆ. ಮೈಗ್ರಾನಿಲ್ ಈಸಿ – ಒಂದು ಮಾತ್ರೆಗೆ ಎಂಟು ರೂಪಾಯಿ. ಹೆಡ್‌ಸೆಟ್ ಮಾತ್ರೆಯೊಂದಕ್ಕೆ ಎಪ್ಪತ್ತು ರೂಪಾಯಿ. ಇದಲ್ಲದೇ ಬೀಪಿಗೆ ಮೆಟೊಸರ್ಟಾನ್. ಮೂಗು ಕಟ್ಟಿಕೊಳ್ಳುವುದರಿಂದ ರಿಲೀಫಾಗಲು ಆಟ್ರಿವಿನ್ ಎಂಬ ನಾಸಲ್ ಡ್ರಾಪ್, ಲಿವರ್ ಡ್ಯಾಮೇಜ್ ಸರಿಪಡಿಸಿಕೊಳ್ಳಲು ಲಿವ್-೫೨ ಮಾತ್ರೆ, ಎಲಿಮೆಂಟ್ಸ್ ಅವರ ಲಿವ್-ಎ-ಗೈನ್ ಸಿರಪ್ಪು, ಹಿಮಾಲಯ ಔಷಧ ಕಂಪೆನಿಯವರ ಸೆಪ್ಟಿಲಿನ್ ಎಂಬ ಇಮ್ಯೂನಿಟಿ ಬೂಸ್ಟರ್ ಮಾತ್ರೆ, ಹೀಗೆ ನನಗೆ ಒಂದು ದಿನಕ್ಕೆ ನೂರಾರು ರೂಪಾಯಿಗಳ ಮೆಡಿಸನ್ ಬೇಕು. ಎಲ್ಲೆಡೆಯೂ ಇವು ಸಿಗುವುದಿಲ್ಲವಾದ್ದರಿಂದ ಇವನ್ನು ತರಿಸಿ ಕೊಡುವಂಥ ಮನೆಗೆ ಸಮೀಪ ಇರುವಂಥ ಮೆಡಿಕಲ್ ಸ್ಟೋರಿನವರೇ ‘ಇದೇನು ಸರ್, ದಿನಸಿ ತೆಗೆದುಕೊಂಡು ಹೋಗುವಂತೆ, ಒಂದೊಂದು ಸಾರಿ ಬಂದಾಗಲೂ ಮೈಗ್ರಾನಿಲ್ ಮತ್ತು ಹೆಡ್‌ಸೆಟ್- ತಲಾ ನೂರು ಮಾತ್ರೆಗಳನ್ನು ಕೊಳ್ಳುತ್ತೀರಿ!’ ಎಂದು ಚಕಿತಗೊಳ್ಳುತ್ತಾರೆ. ‘ಪೂರ್ವಜನ್ಮದ ಕರ್ಮ ಕಣಪ್ಪಾ’ ಎಂದು ನಾನು ನಗುತ್ತಾ ಉತ್ತರಿಸುತ್ತೇನೆ. ಎಂಟು ಗಂಟೆಗೊಮ್ಮೆ ಮೈಗ್ರಾನಿಲ್ ಅರ್ಧ ಭಾಗ, ಹೆಡ್‌ಸೆಟ್ ಅರ್ಧ ಭಾಗ- ಇವೆರಡೂ ನನಗೆ ಅಮೃತ. ಇವಿಲ್ಲದಿದ್ದರೆ ನನಗೆ ಜೀವನವಿಲ್ಲ. ಹಾಗಾಗಿ ಒಂದು ಸಲಕ್ಕೆ ಐವತ್ತು ರೂಗಳೆಂದರೆ ಒಂದು ದಿನಕ್ಕೆ ಮೂರು ಬಾರಿ ಅಂದರೆ ನೂರೈವತ್ತು ರೂಗಳಾಯಿತು. ಇನ್ನು ಮೂಗಿನ ಡ್ರಾಪು, ಬೀಪಿ ಮಾತ್ರೆ, ಇಮ್ಯುನಿಟಿ ಬೂಸ್ಟರು ಹೀಗೆ…….! ಲೆಕ್ಕ ಹಾಕಿದರೆ ಕಣ್ಣಲ್ಲಿ ನೀರಲ್ಲ; ರಕ್ತ ಬರುತ್ತದೆ.

ಅಲೋಪತಿ, ಹೋಮಿಯೋಪತಿ, ಆಯುರ್ವೇದ, ಯುನಾನಿ, ಟಿಬೆಟಿಯನ್ ಚಿಕಿತ್ಸೆ, ಪ್ರಕೃತಿ ಚಿಕಿತ್ಸೆ, ನಾಟೀ ಔಷಧ, ಕಿವಿ-ಮೂಗಿಗೆ ಔಷಧಿ ಬಿಟ್ಟುಕೊಳ್ಳುವುದು- ಹೀಗೆ ಬಹುಶಃ ಎಲ್ಲ ರೀತಿಯ ವೈದ್ಯಕೀಯ ಪದ್ಧತಿಗಳಿಗೂ ಒಳಗಾಗಿದ್ದೇನೆ. ಚಿಕ್ಕಂದಿನಲ್ಲಿ ನಾನು ಹುಣಸೂರಿನಲ್ಲಿದ್ದಾಗ ಯೋಗಾಭ್ಯಾಸ ಕಲಿತು ಪ್ರದರ್ಶನ ಸಹ ನೀಡುತಿದ್ದೆ. ಆದರೆ ತಲೆನೋವಿನ ಕಾರಣವಾಗಿ ಯೋಗಾಭ್ಯಾಸ ಕೈ ಬಿಟ್ಟೆ. ಜಸ್ಟ್ ವಾರ್ಮ್ ಅಪ್ ಮಾಡಿಕೊಳ್ಳುತ್ತೇನಷ್ಟೇ. ಬೆಳಗಿನ ಜಾವವೇ ತಲೆ ಹಿಡಿದಿದ್ದರೆ ಹೇಗೆ ಆಸನಗಳನ್ನು ಮಾಡುವುದು? ಪ್ರಾಣಾಯಾಮ ಮತ್ತು ಧ್ಯಾನಗಳನ್ನೂ ಮಾಡಲಾಗುವುದಿಲ್ಲ; ತಲೆ ಸಿಡಿಯುತಿದ್ದರೆ ಏಕಾಗ್ರತೆ ಬರುವುದಿಲ್ಲ! ಮೈಗ್ರೇನಿನ ಅನುಭವ ಇಲ್ಲದ ವೈದ್ಯರುಗಳು ಸಹ ಒಂದೇ ಮಾತಿನಲ್ಲಿ ‘ಮೆಡಿಟೇಷನ್ ಮಾಡಿ’ ಎಂದು ಉಡಾಫೆಯಿಂದ ಹೇಳುತ್ತಾರೆ. ಇನ್ನು ಸಾಮಾನ್ಯ ಜನರಂತೂ ‘ಯೋಗ ಮಾಡಿ, ಧ್ಯಾನ ಮಾಡಿ’ ಎಂದು ಬಿಟ್ಟಿ ಉಪದೇಶ ಕೊಟ್ಟು, ಮುಖ ತಿರುವುತ್ತಾರೆ. ‘ನೊಂದ ನೋವ ನೋಯದವರೆತ್ತ ಬಲ್ಲರು, ಚೆನ್ನಮಲ್ಲಿಕಾರ್ಜುನಾ’ ಎಂದು ಮಹದೇವಿಯಕ್ಕ ಹೇಳಿದ್ದನ್ನು ನೆನಪಿಸಿಕೊಂಡು ಸುಮ್ಮನಾಗುತ್ತೇನೆ. ‘ಒಂದು ತಲೆನೋವಿಗೆ ಹೇಗಾಡುತ್ತಾರೆ?’ ಎಂದು ಮೈಗ್ರೇನಿನ ಬಗ್ಗೆ ಗೊತ್ತಿಲ್ಲದವರು ನಗಾಡುತ್ತಾರೆ. ಇದು ನಗಾಡುವ ವಿಚಾರವಲ್ಲ ಎಂಬುದು ಆ ಅಜ್ಞಾನಿಗಳಿಗೆ ಗೊತ್ತಿಲ್ಲ, ಪಾಪ.

ತಲೆನೋವು ಎಂಬುದು ವೈದ್ಯಕೀಯ ಜಗತ್ತಿನಲ್ಲಿ ಅತ್ಯಂತ ವಿಸ್ತೃತ ಅಧ್ಯಯನಕ್ಕೆ ಒಳಗಾದ ನರವ್ಯೂಹ ವಿಭಾಗದ ಚಾಲೆಂಜಿಗ್ ಟಾಸ್ಕು. ಮಿದುಳು ಮತ್ತದರ ಕಾರ್ಯವೈಖರಿಯು ನಮಗಿನ್ನೂ ಅಂಬೆಗಾಲಿನ ಸಂಶೋಧನೆ. ಮನುಷ್ಯನ ಮಿದುಳು ವೈದ್ಯಕೀಯ ವಿಜ್ಞಾನಿಗಳಿಗೆ ಪೂರ್ಣ ಪ್ರಮಾಣದಲ್ಲಿ ದಕ್ಕಿಲ್ಲ; ದಕ್ಕುವುದೂ ಇಲ್ಲ! ಬೇರೆ ಬೇರೆ ಕಾರಣಗಳಿಗಾಗಿ ಬರುವ ತಲೆನೋವಿದೆ. ತಲೆನೋವು ಎಂಬುದು ಒಂದು ಲಕ್ಷಣ. ಇನ್ನೆಲ್ಲೋ ಏನೋ ವ್ಯತ್ಯಯಗೊಂಡಾಗಲೂ ತಲೆಯು ನೋಯುತ್ತದೆ. ಸುಮಾರು ಇಪ್ಪತ್ತು ಥರದ ತಲೆನೋವುಗಳಿವೆ. ಆದರೆ ಮೈಗ್ರೇನು ಎಂಬುದು ತಲೆನೋವುಗಳ ರಾಜ ಮತ್ತು ರಾಣಿ. ಜೂಲಿಯಸ್ ಸೀಸರ್, ಸಿಗ್ಮಂಡ್ ಫ್ರಾಯ್ಡ್ ಮುಂತಾದ ಮಹನೀಯರಿಗೂ ಇದಿತ್ತು. ಇನ್ನು ನಮ್ಮದೇನು ಅಂತಂದುಕೊಂಡು ಬದುಕಬೇಕು.

ಮೈಗ್ರೇನ್ ಎಂದರೆ ತಲೆಯ ಪಾರ್ಶ್ವಭಾಗದ ಸಿಡಿತ. ಇದು ತಲೆನೋವಲ್ಲ; ತ್ರೋಬಿಂಗ್. ತಲೆಛಳಕು ಎನ್ನುವುದು ಸರಿಪದ. ಕಬ್ಬಿಣದ ಸರಳುಗಳನ್ನು ತುಂಡರಿಸುವಾಗ ಚೂಪಾದ ಚಾಣವನ್ನು ಇಕ್ಕಳದಲ್ಲಿ ಹಿಡಿದ ವ್ಯಕ್ತಿಯು ತನ್ನ ಹಿಡಿತ ಸಡಿಲಬಿಟ್ಟರೆ ಸುತ್ತಿಗೆಯ ಏಟಿನ ಕಂಪನ ಹಸ್ತಕ್ಕಿಳಿದು, ಆತನಿಗೆ ಆಗುವಂಥ ನೋವಿನನುಭವ! ನೋವು ಮತ್ತು ಛಳಕುಗಳನ್ನು ವಿವರಿಸಲು ಆಗುವುದಿಲ್ಲ; ಅನುಭವಿಸಿಯೇ ತೀರಬೇಕು. ಈ ದೈಹಿಕ ನೋವು ಕ್ರಮೇಣ ಮಾನಸಿಕ ಯಾತನೆಯಾಗಿ ಪರಿಣಮಿಸುತ್ತದೆ. ವೃತ್ತಿಬದುಕಿನಲ್ಲಿ ಅಪಾರ ಪ್ರಮಾಣದ ಡ್ಯಾಮೇಜ್ ಮಾಡುತ್ತದೆ. ಕ್ರಿಯಾಶೀಲತೆಯನ್ನು ಕಳೆಯುತ್ತದೆ. ಜೀವನದ ಬಹುಭಾಗವಂತೂ ನೋವು ತಿನ್ನುವುದರಲ್ಲಿ ಕಳೆದು ಹೋಗುತ್ತದೆ. ಕಳೆದ ನಲವತ್ತು ವರುಷಗಳಿಂದಲೂ ನಾನು ಈ ದೈಹಿಕ ಊನದಿಂದಾಗಿ ಸಾವಿರ ಲಕ್ಷ ಗಂಟೆಗಳನ್ನು ನರಳುವುದರಲ್ಲಿ ಕಳೆದಿದ್ದೇನೆ; ಯಾವ ಶತ್ರುವಿಗೂ ಇದು ಬೇಡವೆಂದು ಪ್ರಾರ್ಥಿಸಿದ್ದೇನೆ. ನನ್ನ ಕನಸು, ಮಹತ್ವಾಕಾಂಕ್ಷೆ, ಓದು, ಅಧ್ಯಯನ, ಅಧ್ಯಾಪನ, ಬರೆಹ, ಖುಷಿ, ಜೀವನೋಲ್ಲಾಸ, ಸಮಾಜ ಸೇವೆ, ಆಟೋಟಗಳು ಎಲ್ಲವನ್ನೂ ಕಳೆದುಕೊಂಡಿದ್ದೇನೆ. ನನ್ನೊಳಗೆ ಅತ್ಯುತ್ತಮ ಯೋಗಪಟು ಮತ್ತು ಫುಟ್‌ಬಾಲ್ ಆಟಗಾರನಿದ್ದ. ಅದ್ಭುತ ಮೆಮೊರಿ ಇತ್ತು. ಎಲ್ಲವನ್ನೂ ಈ ತಲೆನೋವಿನಿಂದ ಕಳೆದುಕೊಂಡೆ. ಸಾಹಿತ್ಯದ ಸಹವಾಸ ಇಲ್ಲದೇ ಹೋಗಿದ್ದರೆ ಬಹುಶಃ ಎಂದೋ ಜೀವ ಕಳೆದುಕೊಂಡು ಬಿಡುತ್ತಿದ್ದೆ.
ಎಲ್ಲ ಥಿಯರಿಗಳನ್ನೂ ಅಳವಡಿಸಿಕೊಂಡು, ವೈದ್ಯಕೀಯ ಸಲಹೆ, ಔಷಧೋಪಚಾರಗಳನ್ನೂ ಮಾಡಿದ್ದೇನೆ. ಏನಿಲ್ಲವೆಂದರೂ ಇಪ್ಪತ್ತು ತಜ್ಞವೈದ್ಯರ ಬಳಿ ತೋರಿಸಿಕೊಂಡಿದ್ದೇನೆ. ಲೇಸರ್ ಟ್ರೀಟ್‌ಮೆಂಟ್ ಒಂದನ್ನು ಹೊರತುಪಡಿಸಿ ಇನ್ನೆಲ್ಲ ಪ್ರಯೋಗಗಳೂ ಆಗಿವೆ. ಈ ಚಿಕಿತ್ಸೆ ಕೂಡ ಇನ್ನೂ ಅಂಬೆಗಾಲಿನಲ್ಲಿ ತೆವಳುತ್ತಿದೆ. ಈ ಚಿಕಿತ್ಸೆಯಿಂದ ವಾಸಿಯಾಗುತ್ತದೆಂಬ ಗ್ಯಾರಂಟಿ ಕೊಡುವುದಕಿಂತ ಮಿದುಳಿಗೆ ಅಡ್ಡ ಪರಿಣಾಮಗಳಾಗುವುದಿಲ್ಲ ಎಂದು ಖಚಿತವಾಗಿ ಹೇಳಲಾಗದ ಸ್ಥಿತಿಯಲ್ಲಿ ವೈದ್ಯಕೀಯ ಲೋಕವಿದೆ. ಕೊನೆಗೆ ಕರ್ಮಸಿದ್ಧಾಂತವನ್ನು ಜ್ಞಾಪಿಸಿಕೊಂಡು, ‘ಯಾವ ಜನ್ಮದಲ್ಲಿ ಯಾರ ತಲೆ ಒಡೆದಿದ್ದೆನೋ? ಗೊತ್ತಿಲ್ಲ, ಈ ಜನ್ಮದಲ್ಲಿ ನಾನೀಗ ಅದಕ್ಕೆ ಶಿಕ್ಷೆ ಅನುಭವಿಸುತ್ತಿದ್ದೇನೆ’ ಎಂದು ನಿರ್ಧರಿಸಿ, ಸಮಾಧಾನ ಪಟ್ಟುಕೊಂಡು ಅವನಿಟ್ಟಂತೆ ಇದ್ದೇನೆ.

ಮೊದಲಿಗೆ ಕಣ್ಣು ಪರೀಕ್ಷೆ, ಆಮೇಲೆ ಕಿವಿ ಮೂಗು ಗಂಟಲು ಪರೀಕ್ಷೆ, ತದನಂತರ ಹೃದಯ. ಇವೆಲ್ಲ ಆದ ಮೇಲೆ ತಲೆಗೆ ಸ್ಕ್ಯಾನಿಂಗು: ಸಿಟಿ ಬ್ರೈನ್ ಮತ್ತು ಎಂಆರ್‌ಐ. ಇವೆಲ್ಲದರಲ್ಲೂ ಏನೂ ದೋಷವಿಲ್ಲ ಎಂದಾಗಲಷ್ಟೇ ವೈದ್ಯರು ಇಂಥ ತಲೆನೋವಿಗೆ ಮೈಗ್ರೇನು ಎನ್ನುತ್ತಾರೆ. ಮೈಗ್ರೇನಿನಲ್ಲೂ ವಿಧಗಳಿವೆ. ಇದು ಬಹಳ ಮಂದಿಗೆ ಗೊತ್ತಿಲ್ಲ. ಎಲ್ಲ ತಲೆನೋವುಗಳೂ ಮೈಗ್ರೇನ್ ಅಲ್ಲ; ಹಾಗೆಯೇ ನನಗಿರುವುದು ಕ್ಲಾಸಿಕಲ್ ಮೈಗ್ರೇನ್. ಇದು ಮೈಗ್ರೇನಿನ ರಾಜ. ಇದೇನೂ ಗೊತ್ತಿಲ್ಲದೆಯೇ ನನ್ನನ್ನು ನಮ್ಮ ತಾಯ್ತಂದೆಯರು ನನ್ನನ್ನು ರಾಜ ಎಂದು ಕರೆಯುತ್ತಿದ್ದರು; ನನ್ನ ತಂಗಿಯೂ ರಾಜ ಎಂದೇ ಕರೆಯುತ್ತಾಳೆ! ಅವಳಿಗೂ ಮೈಗ್ರೇನ್ ಬಳುವಳಿಯಾಗಿ ಬಂದಿದೆ. ಇದು ಹೆರಿಡಿಟಿ. ತವರುಮನೆಯ ತಾಕತ್ತು!

ನಿಮ್ಹಾನ್ಸ್‌ನಲ್ಲಿ ಎಲೆಕ್ಟ್ರೋ ಎನ್‌ಸೆಫೆಲೋಗ್ರಾಂ (ಇಇಜಿ) ಮೂಲಕ ಬಹಳ ಹಿಂದೆಯೇ ಪರೀಕ್ಷೆ ಮಾಡಿದರು. ಎರಡು ರೀತಿಯ ಮಾತ್ರೆಗಳನ್ನು ಬರೆದುಕೊಟ್ಟರು. ಒಂದು, ಪ್ರತಿದಿವಸವೂ ತೆಗೆದುಕೊಳ್ಳುವಂಥದು. ಇನ್ನೊಂದು ತಲೆನೋವು ತಡೆಯಲಾರೆ ಎನ್ನುವಾಗ ತೆಗೆದುಕೊಳ್ಳುವಂಥದು. ಮಿದುಳಿನ ರಕ್ತನಾಳಗಳಲ್ಲಿ ಎರ್‌ಗೊಟಮೈನ್ ಕಂಟೆಂಟ್ ಅನ್ನು ಹೊರಗಿನಿಂದ ಊಡಿಸುವಂಥ ಗುಳಿಗೆಗಳಿವು. ಅವರೇ ಬರೆದುಕೊಟ್ಟ ನೋವು ನಿವಾರಕ ‘ಮೈಗ್ರಾನಿಲ್ ಇಸಿ’ ಯನ್ನು ಇಂದಿಗೂ ಮುಂದುವರಿಸುತ್ತಿದ್ದೇನೆ. ನಾನು ಭೇಟಿ ಮಾಡಿದ ಮೊದಲ ಡಾಕ್ಟರು ನಾಡಿನ ಪ್ರಖ್ಯಾತ ಮನೋವೈದ್ಯಲೇಖಕರಾದ ಡಾ. ಸಿ ಆರ್ ಚಂದ್ರಶೇಖರ್ ಅವರನ್ನು. ವೈದ್ಯರ ಭೇಟಿಗಾಗಿ ಮೈಸೂರು, ಬೆಂಗಳೂರು, ಧಾರವಾಡ, ಕೋಲಾರದ ಕೆಜಿಎಫ್ ಹೀಗೆ ಊರೂರು ಹುಡುಕಿಕೊಂಡು ಅಲೆದಿರುವೆ. ಕೊನೆಯಲ್ಲಿ ಭೇಟಿ ಮಾಡಿದ್ದು ಜಾಗತಿಕ ಮನ್ನಣೆ ಪಡೆದ ನಾಡಿನ ಹೆಸರಾಂತ ಸೈಕಿಯಾಟ್ರಿಸ್ಟ್ ಡಾ. ಬಿ ಎನ್ ರವೀಶ್ ಅವರನ್ನು. ಇವರು ಬರೆದು ಕೊಟ್ಟ ‘ತ್ರೋಬ್‌ಎಕ್ಸಿಟ್’ ಗುಳಿಗೆಯು ನಿಂತು ಹೋಗಿ, ಇದೀಗ ಅದಕ್ಕೆ ಸಮಾಂತರವಾದ ಇನ್ನೊಂದು ‘ಹೆಡ್‌ಸೆಟ್’ ಎಂಬ ಮಾತ್ರೆಯು ಮೈಗ್ರಾನಿಲ್‌ನೊಂದಿಗೆ ಮಿಳಿತಗೊಂಡು ನನ್ನ ನೋವಿನ ಭಾರವನ್ನು ಕಡಮೆಗೊಳಿಸುತ್ತಿದೆ. ಪ್ರತಿ ಎಂಟು ಗಂಟೆಗೊಮ್ಮೆ ಇವೆರಡು ಗುಳಿಗೆಗಳ ಅರ್ಧರ್ಧ ಭಾಗ ನನ್ನ ಉದರವನ್ನು ಸೇರದಿದ್ದರೆ ನಾನು ಮನುಷ್ಯನೇ ಅಲ್ಲ; ಮನುಷ್ಯನಾಗಿರುವುದಿಲ್ಲ!

ಮಾಮೂಲೀ ಫಿಸಿಷಿಯನ್ ವೈದ್ಯರನ್ನೂ ಪ್ರಸಿದ್ಧ ನರರೋಗತಜ್ಞರನ್ನೂ ಸರ್ಜನ್‌ಗಳನ್ನೂ ಭೇಟಿ ಮಾಡಿರುವೆ. ಕೋಲಾರದ ಚಿನ್ನದ ಗಣಿ ಕಾರ್ಮಿಕರ ತಲೆನೋವನ್ನು ಕಡಮೆ ಮಾಡಿದ್ದಾರೆಂಬ ಮಾಹಿತಿ ಲಭಿಸಿ, ಡಾ. ರಾಜೇಂದ್ರಕುಮಾರ್ ಎಂಬ ವೈದ್ಯರನ್ನು ಕಂಡೆ. ಬೆಂಗಳೂರು ನಿಮ್ಹಾನ್ಸ್ನ ಇನ್ನಿಬ್ಬರು ವೈದ್ಯರು ಡಾ. ಕಿಶೋರ್ ಕುಮಾರ್ ಮತ್ತು ಡಾ. ಶ್ರೀನಿವಾಸಮೂರ್ತಿ, ಮೈಸೂರಿನ ಡಾ. ಎಂ ಎಸ್ ಭಾಸ್ಕರ್, ಡಾ. ಜನಾರ್ಧನ್‌, ಧಾರವಾಡದ ಡಾ. ಪಾಂಡುರಂಗಿ, ಕೆ ಆರ್ ನಗರದ ಡಾ. ಕ್ಯಾಪ್ಟನ್ ಶ್ರೀನಿವಾಸನ್, ಚೈತ್ರ ಆಸ್ಪತ್ರೆಯ ಡಾ. ಅಮರನಾಥ್, ಡಾ. ಟಿ ಶಿವನಂಜಪ್ಪ, ಅಪೊಲೊ ಆಸ್ಪತ್ರೆಯ ನರರೋಗತಜ್ಞರಾದ ಡಾ. ಸೋಮನಾಥ ವಾಸುದೇವ್, ಡಾ. ಗಿರೀಶ್ ಮೆನನ್, ಡಾ. ಅಮೀರ್ ಮೊಯಿನ್ ಅವರುಗಳು, ಖ್ಯಾತ ಹೃದಯತಜ್ಞರಾದ ಡಾ. ಅರುಣ್ ಶ್ರೀನಿವಾಸ್, ಆಯುರ್ವೇದ ತಜ್ಞರಾದ ಡಾ. ರಾಜೇಂದ್ರ, ಹೊಮಿಯೋಪತಿ ತಜ್ಞರಾದ ಬೆಂಗಳೂರಿನ ಡಾ. ಶ್ರೀನಿವಾಸ್ ಮತ್ತು ಚಂದನ್……. ಒಬ್ಬರಲ್ಲಾ, ಇಬ್ಬರಲ್ಲಾ ನನ್ನ ಮೈಗ್ರೇನ್ ಮೆಡಿಕಲ್ ಹಿಸ್ಟರಿಯ ಎಲ್ಲ ಪ್ರಿಸ್ಕ್ರಿಪ್‌ಷನ್‌ಗಳೂ ಸ್ಕ್ಯಾನಿಂಗ್ ರಿಪೋರ್ಟುಗಳೂ ಮಾತ್ರೆಗಳ ಹೆಸರುಗಳು, ‘ಡೂಸ್ ಮತ್ತು ಡೋಂಟ್ಸ್’ (ಮಾಡಬೇಕಾದವು ಮತ್ತು ಮಾಡಬಾರದವು)ಗಳು ಫೈಲೊಂದರಲ್ಲಿ ಭರ್ತಿ ಕೂತಿವೆ. ತೀರಾ ವಿಷಮ ಸ್ಥಿತಿಗೆ ತಲಪಿ, ಮೈಸೂರಿನ ಅಪೊಲೊ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿದ್ದ ಕಡತಗಳೂ ಇವೆ. ಇವಿದ್ದಷ್ಟೂ ತಲೆನೋವು! ಹರಿದು ಹಾಕಿ ಬಿಡೋಣ ಎಂದುಕೊಂಡಿದ್ದೇನೆ.

ನನ್ನ ವಿದ್ಯಾರ್ಥಿಯಾಗಿದ್ದವರೊಬ್ಬರು ಜರ್ಮನಿಯಲ್ಲಿ ಜೀವತಂತ್ರಜ್ಞಾನ ವಿಷಯದಲ್ಲಿ ಪಿಹೆಚ್‌ಡಿ ಮಾಡಲು ಹೋಗಿದ್ದವರು ನನ್ನ ದುರವಸ್ಥೆ ಕಂಡು, ಇಂಟರ್‌ನ್ಯಾಷನಲ್ ಮೈಗ್ರೇನ್ ರೋಗಿಗಳ ಸಂಘ (ಮ್ಯಾಗ್ನಮ್ ಮತ್ತು ಜಾಮಾ) ಗಳಿಗೆ ಮೆಂಬರಾಗಿಸಿದರು. ಮಾತ್ರವಲ್ಲದೇ ಅಲ್ಲಿಂದ ಬರುವಾಗ ಒಂದು ಬಗೆಯ ಪುಡಿಯನ್ನು ತಂದುಕೊಟ್ಟರು. ಅದನ್ನು ನೀರಿಗೆ ಹಾಕಿಕೊಂಡು ಕುಡಿಯಬೇಕಿತ್ತು. ಅದು ನನ್ನನ್ನು ನಿದ್ರೆಗೆ ಎಳೆದು ನೋವನ್ನು ಕಡಮೆ ಮಾಡಿಸುತ್ತಿತ್ತು. ಎಲ್ಲವೂ ನಿವಾರಕಗಳೇ. ಒಂದೊಂದೂ ಒಂದೊಂದು ರೂಪದಲ್ಲಿವೆ ಅಷ್ಟೇ. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಚರಕ ಮತ್ತು ಸುಶ್ರುತರ ಗ್ರಂಥಗಳಲ್ಲೂ ಅರೆತಲೆಶೂಲೆಯು ಉಲ್ಲೇಖವಾಗಿದೆ. ಸೂರ್ಯೋದಯ ಮತ್ತು ಸೂರ್ಯಾಸ್ತಗಳ ನಡುವಿನ ಅವಧಿಯಲ್ಲಿ ಸೂರ್ಯ ಪರಮಾತ್ಮನು ಮೇಲೇರಿದಂತೆಲ್ಲಾ ಅರೆತಲೆಶೂಲೆಯು ಏರುತ್ತಾ ಹೋಗುವುದೆಂದು ಉಲ್ಲೇಖಿಸಲಾಗಿದೆ. ‘ಶಿರಶೂಲಾದಿ ವಜ್ರರಸ’ ಎಂಬ ಗುಳಿಗೆಯನ್ನು ತಯಾರಿಸುವ ವಿಧಾನವನ್ನೂ ಹೆಸರಿಸಲಾಗಿದೆ. ಬಿಸಿಲಿಗೆ ತಲೆ ಕೊಡದಿರುವುದೂ ತಲೆಗೆ ಬಿಸಿನೀರು ಹಾಕಿಕೊಳ್ಳದಿರುವುದೂ ಮತ್ತು ಆಹಾರಪಥ್ಯಗಳನ್ನು ತಿಳಿಸಲಾಗಿದೆ. ಅಂದರೆ ಇದಕ್ಕೆ ಮದ್ದಿಲ್ಲ; ನಿಯಂತ್ರಿಸಿ, ನಿರ್ವಹಿಸುವುದಷ್ಟೇ. ಇದು ಒಳಗಿನ ನರವ್ಯೂಹ ವ್ಯವಸ್ಥೆಯ ದೋಷ. ಹಾಗಾಗಿ ಹೊರಗಿನಿಂದ ಮಾಡುವ ಯಾವ ಚಿಕಿತ್ಸೆಯೂ ಫಲಕಾರಿಯಲ್ಲ. ವಿಕ್ಸು, ಅಮೃತಾಂಜನ್, ಮೈಗ್ರೇನ್ ಗೋ ಎಂಬ ಸ್ಪ್ರೇಗಳು ನಿಷ್ಪ್ರಯೋಜಕ.
ಜನ್ಮೇಪಿ ನಾನು ಕೆಲವೊಂದು ಆಸನಗಳನ್ನು ಮಾಡುವಂತಿಲ್ಲ. ಇಲ್ಲಿ ನಾನು ಎಂದರೆ ಮೈಗ್ರೇನ್ ಪೀಡಿತರು ಎಂದರ್ಥ. ಶೀರ್ಷಾಸನ, ಸರ್ವಾಂಗಾಸನ, ಅರ್ಧಬದ್ಧಪಶ್ಚಿಮೋತ್ಥಾನಾಸನ ಇತ್ಯಾದಿ. ಅಂದರೆ ತಲೆ ಬಗ್ಗಿಸುವ, ಕೆಳಗಿಡುವ ಆಸನಗಳು ನಿಷಿದ್ಧ. ಕಾರಣವೆಂದರೆ ಮಿದುಳಿಗೆ ರಕ್ತಪ್ರವಾಹವು ಹೆಚ್ಚಾಗುವ ಯಾವುದನ್ನೇ ಆಗಲಿ ಮಾಡಬಾರದು. ಏಕೆಂದರೆ ಈಗಾಗಲೇ ಮಿದುಳಿಗೆ ರಕ್ತಪ್ರವಾಹವು ಹೆಚ್ಚಾಗಿ, ಅದರಿಂದಾಗಿ ತಲೆಛಳುಕಿನ ಯಾತನೆ ಸಾಂಗವಾಗಿ ಉತ್ಸವೋಪಾದಿಯಲ್ಲಿ ಕುಣಿಯುತ್ತಿರುತ್ತದಲ್ಲ ಅದಕ್ಕೆ. ಮಾತೆತ್ತಿದರೆ ಕೆಲವರು ‘ಯೋಗ ಮಾಡಿ; ಪ್ರಾಣಾಯಾಮ ಮಾಡಿ’ ಎಂದೆಲ್ಲಾ ಸಲಹೆ ನೀಡಿ ಹಿಂಸೆ ಕೊಡುತ್ತಿರುತ್ತಾರೆ. ಪಾಪ! ಅವರಿಗೆ ಇಷ್ಟೆಲ್ಲಾ ವಿವರಗಳು ಗೊತ್ತಿರುವುದಿಲ್ಲ. ‘ಎಲ್ಲಕೂ ಯೋಗ ಮದ್ದು ಎಂಬುದು ಆಧುನಿಕರ ರೋಗ!’ ತಲೆನೋವಿನ ಬಾಧೆ ಕಡಮೆ ಇದ್ದಾಗ ನಾನೇ ಎಷ್ಟೋ ದಿನ ಬೆಳಗ್ಗೆಯೇ ವ್ಯಾಯಾಮ ರೂಪದ ಯೋಗಾಸನ ಮಾಡುತ್ತೇನೆ. ಕೆಲವೊಮ್ಮೆ ಸ್ನಾನ ಮಾಡಿಯೂ ಯೋಗಾಸನ ಮಾಡುತ್ತೇನೆ. ಸ್ನಾನ ಮಾಡಿದ ಮೇಲೆ ನಮ್ಮ ಅಂಗಾಂಗಗಳು ಯೋಗಕ್ಕೂ ವ್ಯಾಯಾಮಕ್ಕೂ ಬೇಗನೆ ಬೆಂಡಾಗುತ್ತವೆ. ಆದರೆ ನಿಯಮಿತವಾಗಿ ಇವನ್ನು ಆಚರಿಸಲು ಆಗದು. ನಿದ್ರೆ ಕಡಮೆಯಾದರೂ ತಲೆ ಹಿಡಿದುಕೊಳ್ಳುವುದು; ನಿದ್ರೆ ಹೆಚ್ಚಾದರೂ ಹಿಡಿದುಕೊಳ್ಳುವುದು. ನಿದ್ರೆ ಬಂದಾಗ ಮಾಡಿ ಬಿಡಬೇಕು; ಮುಂದಕ್ಕೆ ಹಾಕಬಾರದು. ಹಾಗೆಯೇ ನಿದ್ರೆ ಬರದೇ ಇದ್ದಾಗ ಹೊರಳಾಡಬಾರದು. ಎದ್ದು ಬಿಡಬೇಕು.
ಮೈಗ್ರೇನ್ ರೋಗಿಗಳು ವಿಪರೀತ ಸೂಕ್ಷ್ಮಮತಿಗಳು; ಭಾವನಾಜೀವಿಗಳು. ಇಂಗ್ಲಿಷಿನಲ್ಲಿ ಹೈಪರ್ ಸೆನ್ಸಿಟೀವ್ ಎಂಬ ಪದವಿದೆ. ಅಂದರೆ ಸುಸೂಕ್ಷ್ಮ ಎಂದಿದನ್ನು ಕರೆಯಬಹುದು. ಅವರ ಪಂಚೇಂದ್ರಿಯಗಳು ಉಳಿದವರಿಗಿಂತ ತೀಕ್ಷ್ಣ. ಹಾಗಾಗಿಯೇ ಅವರು ಬಹು ಬೇಗ ಭಾವುಕರಾಗುತ್ತಾರೆ. ಅಂತರ್ಮುಖಿಗಳಾಗುತ್ತಾರೆ. ಒಂಟಿತನ ಬಯಸುತ್ತಾರೆ. ವಾಸಿಯಾಗದ ಖಾಯಿಲೆ ನನ್ನನ್ನು ಬಾಧಿಸುತ್ತಿದೆಯೆಂಬುದೇ ಮೈಗ್ರೇನಿಗರ ಕೊರಗು. ಇನ್ನೊಂದು ವಿಚಿತ್ರವೆಂದರೆ ಬಾಧೆಯು ಹೊರಗಿನವರಿಗೆ ಗೊತ್ತಾಗುವುದಿಲ್ಲ! ಒಳಗೇ ನೋವು ತಿನ್ನುವಾಗ ಎಂಥವರಿಗೂ ಬಾಹ್ಯ ಪ್ರಪಂಚದ ಮೇಲೆ ಒಂದು ಬಗೆಯ ಆಕ್ರೋಶ ಬೆರೆತ ಅಸಹನೆ ಆವರಿಸಿ, ಹತಾಶರಾಗುತ್ತಾರೆ. ನಿರಾಶೆ ಮತ್ತು ಹತಾಶೆಗಳು ಮೈಗ್ರೇನ್ ರೋಗಿಗಳ ದೈನಂದಿನ ಸ್ವಭಾವ. ಬಹುಬೇಗ ಎಲ್ಲದರಲ್ಲೂ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ; ಕೊರಗುತ್ತಾ ಕೂರುತ್ತಾರೆ. ಅವರ ಕುಟುಂಬವರ್ಗದವರಿಗೂ ಸುತ್ತಮುತ್ತಲಿನ ಜನರಿಗೂ ಅವರ ಬಗ್ಗೆ ಒಂದು ಬಗೆಯ ಅಸಡ್ಡೆ (ಅಶ್ರದ್ಧೆ ಎಂಬುದರ ತದ್ಭವ) ಏರ್ಪಟ್ಟು, ‘ಇವರದು ಯಾವಾಗಲೂ ಇದ್ದದ್ದೇ; ದಿನಾ ಸಾಯುವವರಿಗೆ ಅಳುವವರು ಯಾರು?’ ಎಂಬಂಥ ಉಪೇಕ್ಷಾ ಧೋರಣೆ ಮೂಡಿ ಬಿಡುತ್ತದೆ. ನೋಡಲು ಮಾಮೂಲಿಯಂತಿರುತ್ತಾರೆ; ಆದರೆ ತಲೆನೋವೆಂದು ಒದ್ದಾಡುತ್ತಾರೆ. ಇವರದು ಸ್ವಕಪೋಲಕಲ್ಪನೆ. ಇಷ್ಟಿದ್ದರೆ ಅಷ್ಟೂ ಅನ್ನುತ್ತಾರೆ. ನರಳುವುದೇ ಇವರಿಗೆ ಹಿತ! ಎಂದೆಲ್ಲಾ ಇದರ ಗಂಧಗಾಳಿ ಗೊತ್ತಿಲ್ಲದವರು ಆಡಿಕೊಳ್ಳುತ್ತಾರೆ. ನಾನಂತೂ ಈಗ ಯಾರಲ್ಲಿಯೂ ಹೇಳಿಕೊಳ್ಳುವುದಿಲ್ಲ. ಹೇಳಿಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ. ಜೊತೆಗೆ ಇನ್ನಾವುದೋ ವೈದ್ಯರನ್ನು ಸಜೆಸ್ಟಿಸಿ, ಉತ್ಪ್ರೇಕ್ಷಿತ ದನಿಯಲ್ಲಿ ಅವರನ್ನು ಕೊಂಡಾಡಿ, ‘ಅವರು ವಾಸಿಯಾದರು; ಇವರು ಸರಿ ಹೋದರು’ ಎಂಬಂಥ ಮಾತುಗಳಿಂದ ರಂಜಿಸಿ, ನಮ್ಮನ್ನು ಪುಸಲಾಯಿಸುತ್ತಾರೆ. ಹೋಗಿ ನೋಡಿದರೆ, ಅವರು ನಾವು ತೆಗೆದುಕೊಳ್ಳುತ್ತಿರುವ ಮಾತ್ರೆಗಳ ಪರ್ಯಾಯವನ್ನು ಅಂದರೆ ಇತರೆ ಕಂಪೆನಿಯ ಅದೇ ಕಾಂಪೊಸಿಷನ್‌ಅನ್ನು ಬರೆದು ಕೊಡುತ್ತಾರೆ ಮತ್ತು ‘ನೋವು ನಿವಾರಕಗಳನ್ನು ಜಾಸ್ತಿ ತೆಗೆದುಕೊಳ್ಳಬೇಡಿ’ ಎಂಬ ಉಪದೇಶ ಬೇರೆ. ‘ಮೂವತ್ತು ವರ್ಷಗಳಿಂದ ತೆಗೆದುಕೊಳ್ಳುತ್ತಿದ್ದೇನೆ; ಅದಿಲ್ಲದೇ ಬದುಕಿಲ್ಲ’ ಎಂದರೆ ಹೌಹಾರುತ್ತಾರೆ. ಏಕೆಂದರೆ ತಪ್ಪು ಅವರದಲ್ಲ; ವೈದ್ಯಕೀಯ ಸಂಶೋಧನೆ ಅಲ್ಲಿಗೆ ನಿಂತು ಹೋಗಿದೆ ಅಷ್ಟೇ. ಫ್ಲುನಾರಿನ್, ಸೈಬೀಲಿಯಂ ಎಂಬಂಥ ಮಾತ್ರೆಗಳನ್ನು ಕೆಲವು ವೈದ್ಯರು ಶಿಫಾರಸು ಮಾಡಿದ್ದರು. ಆ ಮಾತ್ರೆಗಳು ನನ್ನ ವೃತ್ತಿ ಬದುಕಿನ ಮೇಲೆ ಘೋರ ಪರಿಣಾಮವನ್ನು ಮಾಡಿದವು. ಅವು ನನ್ನ ನಾಲಗೆಯ ಸಲೈವಾ (ಜೊಲ್ಲುರಸ)ವನ್ನು ಸಂಪೂರ್ಣ ಆವಿಯಾಗಿಸಿ, ನಾಲಗೆಯು ಹೊರಳಲಾರದೇ ಮಾತೇ ಬಾಯಿಂದ ಬರದಂತೆ ಮಾಡಿ ಬಿಡುತ್ತವೆ. ಯಾವುದೋ ಮಾದಕ ದ್ರವ್ಯ ತೆಗೆದುಕೊಂಡವರಂತೆ ತೂರಾಡುತ್ತೇವೆ. ಅರೆಜ್ಞಾನಿಗರಾಗಿ ಹೀನಾವಸ್ಥೆ ಪಡುತ್ತೇವೆ. ಒಂದು ಕಡೆ ನೋವು; ಇನ್ನೊಂದು ಕಡೆ ಇಂಥ ಬಾವು! ಹಾಗಾಗಿ ಅವನ್ನು ಕೈ ಬಿಟ್ಟೆ. ಕೆಲವೊಮ್ಮೆ ಪಾಠ ಮಾಡುತ್ತಿದ್ದಂತೆಯೇ ತಲೆನೋವು ಹೆಚ್ಚಾಗಿ, ಅರ್ಧಕ್ಕೆ ತರಗತಿ ಬಿಟ್ಟು ಬಂದಿರುವುದೂ ಉಂಟು. ಇನ್ನು ಕೆಲವೊಮ್ಮೆ ನನಗೇ ಗೊತ್ತಿಲ್ಲದಂತೆ, ತರಗತಿಯಲ್ಲಿ ಪಾಠ ಮಾಡುವಾಗಲೇ ಪ್ರಜ್ಞೆ ಹೋಗಿ, ಸಹೋದ್ಯೋಗಿಗಳು ಆಸ್ಪತ್ರೆಗೆ ದಾಖಲು ಮಾಡಿದ್ದುಂಟು. ನನ್ನ ಸ್ಥಿತಿ ಯಾರಿಗೂ ಬರಬಾರದು.

ಈಗಂತೂ ಗೊತ್ತಿರುವವರು ಯಾರಾದರೂ ಕೇಳಿದರೆ ‘ಈಗ ಇಲ್ಲ; ಹೊರಟು ಹೋಯಿತು’ ಎಂದು ಹೇಳಿ ಅವರಿಂದ ಪಾರಾಗುತ್ತೇನೆ. ಏಕೆಂದರೆ ಅವರ ಹೊಸ ಉಪದೇಶವನ್ನು ತಪ್ಪಿಸಿಕೊಳ್ಳಲು ನನಗೆ ಇರುವ ಮಾರ್ಗವಿದು. ಇದಕ್ಕೆ ಮದ್ದಿಲ್ಲ ಎಂದರೆ ಯಾರೂ ನಂಬುವುದಿಲ್ಲ. ‘ನೀವು ಹಾಗೆ ಅಂದುಕೊಂಡು ಬಿಟ್ಟಿದ್ದೀರಿ. ನೀವೇ ಎಲ್ಲ ತಿಳಿದುಕೊಂಡವರಂತೆ ಮಾತಾಡುತ್ತೀರಿ. ಒಂದು ಸಲ ಹೋಗಿ ನೋಡಿ, ಅಡ್ರೆಸ್ಸನ್ನು ವಾಟ್ಸಾಪ್ ಮಾಡುತ್ತೇನೆ’ ಎನ್ನುತ್ತಾರೆ. ಅವರದು ನಿಜವಾದ ಕಾಳಜಿ ಮತ್ತು ಕಳಕಳಿಯೇ. ಆದರೆ ನನಗದು ಉಪಯೋಗಕ್ಕೆ ಬರುವುದಿಲ್ಲ. ‘ನಿಮಗೆ ಶ್ರಮ; ನಮಗೆ ದುರ್ಭೋಜನ’ ಎಂಬೊಂದು ಗಾದೆಯಿದೆ. ಪಾಪ, ಅವರು ಪರಿಶ್ರಮಪಟ್ಟು ಅಡುಗೆ ಮಾಡುತ್ತಾರೆ; ಪ್ರೀತಿಯಿಂದಲೂ ಬಡಿಸುತ್ತಾರೆ. ಆದರೇನು? ಕೆಟ್ಟಡಿಗೆ ನಮ್ಮ ಪಾಲಿಗೆ! ಇದು ಈ ಗಾದೆಯ ಅಂತರಾಳ. ಇನ್ನು ಕೆಲವರಂತೂ ನನ್ನನ್ನು ಆ ಕಾಲದಿಂದಲೂ ಬಲ್ಲವರು. ಅವರಿಗೂ ಇದರ ತೀವ್ರತೆ ಗೊತ್ತಿಲ್ಲ. ಒಬ್ಬರಂತೂ ಸೋ ಸೀನಿಯರ್ ಗೆಳೆಯರು ನನ್ನನ್ನು ‘ತಲೆನೋವು ಮೇಷ್ಟ್ರು’ ಎಂದೇ ಕರೆಯುತ್ತಾರೆ. ‘ಅಯ್ಯೋ ನೀವೋ; ನಿಮ್ಮ ತಲೆನೋವೋ!’ ಎಂದು ಅಣಕಿಸುತ್ತಾರೆ. ಎಲ್ಲಕೂ ನಾನು ನಕ್ಕು ಸುಮ್ಮನಾಗುತ್ತೇನೆ. ನಾನೇ ಅಂಗಡಿಗೆ ಹೋಗಿ ತಲೆನೋವನ್ನು ಕೊಂಡುಕೊಂಡು ಬಂದು ಅದನ್ನು ಜೇಬಿನಲ್ಲಿಟ್ಟುಕೊಂಡು ತಿನ್ನುತ್ತಾ ಯಾತನೆ ಪಡುತ್ತಿದ್ದೇನೆಂಬ ಭಾವ ಅವರದು. ಎಷ್ಟೋ ವರುಷಗಳ ಮೇಲೆ ಸಿಕ್ಕ ಕೆಲವರು ನನ್ನ ತಲೆನೋವನ್ನು ನೆನಪಿಸಿಕೊಂಡು ‘ಈಗ ಹೇಗಿದೆ?’ ಎನ್ನುತ್ತಾರೆ. ‘ಈಗ ತಾನೇ ಮಾತ್ರೆ ತೆಗೆದುಕೊಂಡೆನಲ್ಲ’ ಎಂದರೆ, ‘ಇನ್ನೂ ಹೋಗೇ ಇಲ್ವಾ? ನನಗೂ ಇತ್ತು; ಹೊರಟು ಹೋಯಿತು’ ಎಂದು ಬೊಗಳೆ ಬಿಡುತ್ತಾರೆ. ಅವರಿಗೇನೂ ಮೈಗ್ರೇನು ಇರುವುದಿಲ್ಲ; ತಲೆನೋವಿದ್ದರೂ ಅದು ಕ್ಲಸ್ಟರ್ ಹೆಡ್ಡೇಕೋ ಟೆನ್ಷನ್ ಹೆಡ್ಡೇಕೋ ಆಗಿರುತ್ತದೆ. ನಾನು ಆಗಲೂ ನಕ್ಕು ಸುಮ್ಮನಾಗುತ್ತೇನೆ. ಏಕೆಂದರೆ ಮೈಗ್ರೇನು ಹೋಗುವಂಥದ್ದಲ್ಲ; ಹಾಗೇನಾದರೂ ಹೋದರೆ ಅದು ಮೈಗ್ರೇನಲ್ಲ!

ಮೈಗ್ರೇನ್‌ನಿಂದ ನರಳುವವರು ತಮ್ಮ ತಲೆನೋವಿನ ಅರ್ಧ ಭಾಗವನ್ನು ತಾವಾಗಿಯೇ ಹೆಚ್ಚು ಮಾಡಿಕೊಳ್ಳುತ್ತಾರೆ. ಸ್ವಭಾವ, ವರ್ತನೆ ಮತ್ತು ಜೀವನಶೈಲಿಯನ್ನು ಬದಲಾಯಿಸಿಕೊಳ್ಳದೇ ಎಲ್ಲವೂ ಮಾತ್ರೆ, ಇಂಜೆಕ್ಷನ್ನುಗಳಿಂದಲೇ ವಾಸಿಯಾಗಬೇಕೆಂದು ಹಟ ಹಿಡಿಯುತ್ತಾರೆ. ಇದು ತಪ್ಪು. ನಾನು ಬದಲಾಗದೇ ತಲೆನೋವಿನ ಯಾತನೆ ಕಡಮೆಯಾಗುವುದಿಲ್ಲ ಎಂಬುದವರಿಗೆ ಹೊಳೆಯುವುದೇ ಇಲ್ಲ. ನಾನೀಗ ವಾಸ ಮಾಡುತ್ತಿರುವ ಹೊಳೆನರಸೀಪುರದಲ್ಲಿ ಒಬ್ಬರು ಮೈಗ್ರೇನ್ ರೋಗಿ ಇದ್ದಾರೆ. ಅವರನ್ನು ಸಮೀಪದಿಂದ ಬಲ್ಲೆ: ಅವರಿಗಿರುವ ತಲೆನೋವಿನ ಮುಕ್ಕಾಲು ಭಾಗಕ್ಕೆ ಅವರೇ ನೇರ ಹೊಣೆಗಾರರು. ನಮ್ಮಂಥವರು ಹಸಿವೆಯಿಂದ ಇರಬಾರದು; ಶಾಂತಿ ಮತ್ತು ನೆಮ್ಮದಿಗಳ ಜೀವನ ಮಾಡಬೇಕು; ಪ್ರಯಾಣ ಮಾಡಬಾರದು; ಸಣ್ಣಪುಟ್ಟದ್ದಕ್ಕೆಲ್ಲಾ ಸಂಯಮ ಕಳೆದುಕೊಂಡು ಕೂಗಾಡಬಾರದು; ಇನ್ನೊಬ್ಬರನ್ನು ಕಂಡು ಅಸೂಯೆ ಪಡುವುದೂ ಕೀಳರಿಮೆ ಅನುಭವಿಸುವುದೂ ಕೂಡದು! ತಲೆನೋವು ಕಾಣಿಸಿಕೊಳ್ಳುತ್ತಿದೆ ಎಂಬ ಗಳಿಗೆಯಲ್ಲೇ ನೋವು ನಿವಾರಕ ಮಾತ್ರೆಗಳನ್ನು ನುಂಗಬೇಕು. ಎಂದೋ ಕಿಡ್ನಿ ಕೈ ಕೊಡುತ್ತದೆಂದು ಇಂದು ಮಾತ್ರೆ ನುಂಗದೇ ಹೋದರೆ, ಇಂದಿನ ದಿನವೂ ನರಳುತ್ತೇವೆ; ಮುಂದೆಯೂ ನರಳುತ್ತೇವೆ! ಕಿಡ್ನಿ ಕೈ ಕೊಡುವ ಮುಂಚೆಯೇ ಮಿದುಳಿನಲ್ಲಿ ರಕ್ತಸ್ರಾವವಾಗಿ ಪ್ರಾಣ ಹೋಗಬಹುದಲ್ಲಾ! ಮೈಗ್ರೇನ್ ತಲೆನೋವು ಮಾರಣಾಂತಿಕವಾಗುವುದು ರಕ್ತನಾಳದ ವಿಚಾರದಲ್ಲೇ! ಪೆರಾಲಿಸೀಸ್ ಆಗಬಹುದು; ಹೆಮಟೋಮಾ ಆಗಬಹುದು; ನರದೌರ್ಬಲ್ಯ ಉಂಟಾಗಬಹುದು; ಯಾತನೆ ಅತಿಯಾಗಿ ನೆಗಟೀವ್ ಆಲೋಚನೆಗಳೇ ಮುಂದಾಗಿ ಡಿಪ್ರೆಶನ್ನು, ಖಿನ್ನತೆ ಮೊದಲಾದ ಮಾನಸಿಕ ಏರುಪೇರು ತಲೆದೋರಬಹುದು. ‘ಇದ್ದೇನು ಪ್ರಯೋಜನ?’ ಎಂದುಕೊಂಡು ಆತ್ಮಹತ್ಯೆಯಂಥ ಪ್ರಯತ್ನಕ್ಕೂ ಕೈ ಹಾಕಬಹುದು. ನಾನೇ ನರಳುವಾಗ ‘ಸಾಕು ಮಾಡು ಭಗವಂತ; ನಾನೀ ಯಾತನೆ ಸಹಿಸಲಾರೆ; ಕರೆದುಕೊಂಡು ಬಿಡು’ ಎಂದು ದೇವರನ್ನು ಅಂಗಲಾಚಿದ್ದೇನೆ. ಏಕೆಂದರೆ ತಲೆನೋವು ಎಂಬುದು ವಿಚಿತ್ರ; ದೇಹದ ಬೇರೆ ಅಂಗಾಂಗಗಳ ನೋವನ್ನೂ ಅದು ಅನುಭವಿಸಬೇಕು. ತನ್ನ ನೋವನ್ನೂ ತಾನೇ ಅನುಭವಿಸಬೇಕು! ಇನ್ನು ಅರೆತಲೆಶೂಲೆಯಂತೂ ಇನ್ನೂ ವಿಚಿತ್ರ; ಪೇಷಂಟು ವಿಕ್ಷಿಪ್ತ. ಇದು ನೋವಲ್ಲ; ಛಳುಕು. ಇದನ್ನು ಸ್ವತಃ ಪರಮಾತ್ಮನೂ ಅನುಭವಿಸಲಾರ! ಮಲಗುವಂತಿಲ್ಲ; ಕೂರುವಂತಿಲ್ಲ. ತಲೆ ಮುಟ್ಟಿಕೊಳ್ಳುವಂತಿಲ್ಲ, ತಲೆಯನ್ನು ಒತ್ತಿಸಿಕೊಳ್ಳುವಂತಿಲ್ಲ, ಬೆಳಕು ಅತಿಯಾಗುವಂತಿಲ್ಲ; ಕತ್ತಲು ಬೇಕು. ಆಹಾರ ಸೇವಿಸಲು ಮನಸಿರುವುದಿಲ್ಲ; ಆದರೆ ಆಹಾರ ಸೇವಿಸದಿದ್ದರೆ ಪೇನ್ ಕಿಲ್ಲರ್‌ಗಳು ಕೆಲಸ ಮಾಡುವುದಿಲ್ಲ. ವಾಂತಿಯಾಗುವಂತಾಗುತ್ತದೆ; ಆದರೆ ಹೊಟ್ಟೆಯಲ್ಲಿ ಆಹಾರವಿಲ್ಲದಿದ್ದರೆ ಹೊಟ್ಟೆ ತೊಳಸಾಗುತ್ತದೆ. ಕಣ್ಣು ತೆರೆಯುವಂತಿಲ್ಲ; ಅಳುವಂತಿಲ್ಲ. ಏಕೆಂದರೆ ನೋವು ಹೆಚ್ಚಾಗುತ್ತದೆ. ವಿಲಿವಿಲಿ ಒದ್ದಾಟ; ಪ್ರಾಣಸಂಕಟ. ಜೊತೆಯಲ್ಲಿರುವವರಿಗೂ ಮನೆಯವರಿಗೂ ಭಾವನಾತ್ಮಕ ನಂಟಿನ ತಳಮಳ, ತೊಂದರೆ ಮತ್ತು ಗಾಬರಿ. ಅವರು ಖುಷಿಯಾಗಿ ಇರುವಂತಿಲ್ಲ; ಇರಲಾಗದು. ನೋವು ಅತಿಯಾಗಿ, ಪ್ರಜ್ಞೆ ಹೋಗಿ, ಅನಾಹುತವಾದೀತು ಎಂಬ ಕಾರಣಕ್ಕಾಗಿ ನನಗೆ ವೈದ್ಯರು ಸೆಡೆಟೀವ್, ಸ್ಟಿರಾಯಿಡ್‌ಗಳನ್ನೂ ಕೊಟ್ಟಿದ್ದುಂಟು. ಇದು ಅನಿವಾರ್ಯ. ವೈದ್ಯರ ಸಲಹೆಯ ಮೇರೆಗೇ ನಾನು ಬಹಳಷ್ಟು ವರ್ಷಗಳ ಕಾಲ ‘ರೆಸ್ಟಿಲ್’ ಎಂಬ ನಿದ್ರಾಮಾತ್ರೆಯನ್ನು ನುಂಗುತ್ತಿದ್ದೆ. ಇಲ್ಲದಿದ್ದರೆ ಯಾತನೆಯನ್ನು ತಡೆದುಕೊಳ್ಳಲು ಆಗುತ್ತಿರಲಿಲ್ಲ. ಕ್ರಮೇಣ ತಲೆನೋವಿನ ಗುಳಿಗೆಯಂತೆಯೇ ಇದಕೂ ಅಡಿಕ್ಟ್ ಆಗಿಬಿಟ್ಟೆ! ಅದೂ ಕೆಲಸ ಮಾಡುವುದನ್ನು ಬಿಟ್ಟ ಮೇಲೆ ವೈದ್ಯರ ಸಲಹೆಯಂತೆ, ಪ್ರಮಾಣ ಜಾಸ್ತಿ ಮಾಡಿಕೊಂಡೆ. ಆದರೂ ಏಕೋ ತಳಮಳ. ತಲೆನೋವು ಇನ್ನೇನು ಸಹಿಸಿಕೊಳ್ಳುವ ಪ್ರಮಾಣಕಿಂತ ಹೆಚ್ಚಾಗುತಿದೆ ಎಂದೆನಿಸಿದ ಕೂಡಲೇ ನನ್ನ ಮಾಮೂಲೀ ಕಾಂಬಿನೇಷನ್ ಅನ್ನು ನುಂಗಿ ನೀರು ಕುಡಿದು, ಛಳಕು ಜಾಸ್ತಿಯಾಗದಂತೆ ನೋಡಿಕೊಳ್ಳತೊಡಗಿದೆ. ಇದರಿಂದಾಗಿ ನಿಧಾನವಾಗಿ ರೆಸ್ಟಿಲ್ ಬೇಡವೆನಿಸತೊಡಗಿತು. ಯಾರು ತಾನೇ ಇಷ್ಟಪಟ್ಟು ವಿಷ ಸೇವನೆ ಮಾಡುತ್ತಾರೆ? ‘ಮಾತ್ರೆ ನುಂಗುವುದು ನಿಮಗೆ ಇಷ್ಟ; ಅದಕಾಗಿ ಇದೆಲ್ಲಾ ನೆಪ, ನಾಟಕ’ ಎಂದು ಓರ್ವ ಆತ್ಮೀಯರೇ ಬಯ್ದಿದ್ದರು. ತಲೆನೋವಿನ ವಿಚಾರವಾಗಿ ಯಾರು ಏನೇ ಅಂದರೂ ನನ್ನದು ‘ಸಹನೆ ವಜ್ರದ ಕವಚ!’ ನನ್ನನ್ನಲ್ಲ; ಅವರನ್ನು ಕನಿಕರಿಸುತ್ತೇನೆ! ಇದು ನನಗೀಗ ಅಭ್ಯಾಸವಾಗಿ ಹೋಗಿದೆ. ಸ್ವಮರುಕ ಇಲ್ಲವೇ ಸಹಾನುಭೂತಿ ಎಂಬ ತತ್ತ್ವವೊಂದುಂಟು. ಇದನ್ನು ನಾನೇ ಸಂಯೋಜಿಸಿದ್ದು. ಆತ್ಮಮರುಕವು ಪರಾನುಭೂತಿಗಿಂತ ಕೆಟ್ಟದ್ದು. ಇದು ಇನ್ನೊಂದು ಮಾನಸಿಕ ಬೇನೆಯಾಗುವುದು. ಹಾಗಾಗಿ ನನ್ನ ಪರಿಸ್ಥಿತಿ, ನನ್ನ ಮನಸ್ಥಿತಿ, ನನ್ನ ನೋವು, ನನ್ನ ಹಣೆಯಬರೆಹ ನನಗಷ್ಟೇ ಗೊತ್ತು; ಪಾಪ! ಅವರಿಗೇನು ಗೊತ್ತು? ಇಷ್ಟಕೂ ಬಯ್ಯುವವರ ಮನೋಧರ್ಮದ ಹಿಂದಿನ ಕನ್ಸರ್ನು ಮುಖ್ಯ; ಬೈಗುಳವಲ್ಲ!! ಒಂದು ಬಗೆಯ ಕನ್ಸರ್ನು ಇಲ್ಲದಿದ್ದರೆ ಅವರೇಕೆ ಬಯ್ಯುತಾರೆ? ಪ್ರೀತಿಯಿಲ್ಲದೇ ದ್ವೇಷಿಸಲು ಸಾಧ್ಯವೇ? ಹೀಗಾಗಿ ನಿದ್ರಾಮಾತ್ರೆಯಿಂದ ನಾನು ಬಿಡುಗಡೆಗೊಂಡು ಹತ್ತು ವರುಷವೇ ಆಯಿತು.

ಒಂದು ಕಾಲದಲ್ಲಿ ಮಾತ್ರೆಗಳ ವಿರೋಧಿಯಾಗಿದ್ದ ನಾನೀಗ ಗುಳಿಗೆಗೆ ದಾಸನಾಗಿರುವೆ. ಕತೆಗಾರಮಿತ್ರರೊಬ್ಬರು ನನ್ನನ್ನು ‘ಗುಳಗನಾಥ’ ಎಂದೇ ಕರೆಯುತ್ತಾರೆ! (ಗಳಗನಾಥರೆಂಬ ಕನ್ನಡದ ಸಾಹಿತಿಯೊಬ್ಬರಿದ್ದಾರೆ) ಜ್ವರ ಬಂದರೂ ನಾನು ವೈದ್ಯರ ಬಳಿ ಹೋಗುತ್ತಿರಲಿಲ್ಲ. ನಮ್ಮ ತಾಯಿಯವರು ನುಂಗುತ್ತಿದ್ದ ಮಾತ್ರೆ ಮತ್ತು ತಿಂಗಳಿಗೆ ಮೂರ್ನಾಲ್ಕು ಬಾರಿಯಂತೂ ಫ್ಯಾಮಿಲಿ ಡಾಕ್ಟರರ ಬಳಿ ಏನಾದರೊಂದು ಕಾರಣಕೆ ಹೋಗುತಿದ್ದ ವಿಧಾನದಿಂದಾಗಿಯೇ ನನಗೆ ಆ ವೈರಾಗ್ಯ ಬಂದಿತ್ತು. ಅಂತಹುದರಲ್ಲಿ ನಾನೀಗ ಮಾತ್ರೆಗಳಿಗೆ ಗುಲಾಮನಾಗಿರುವೆ. ಇದನ್ನೇ ವಿಧಿವಿಪರೀತ ಎನ್ನುವುದು. ಇದು ಕೇವಲ ಮಾನಸಿಕ ಏರುಪೇರು ಎಂದು ಬಲವಾಗಿ ನಂಬಿದ್ದ ಮೈಸೂರಿನ ಸೈಕೋಥೆರಪಿಸ್ಟ್ ಡಾ. ಮೀನಗುಂಡಿ ಸುಬ್ರಮಣ್ಯ ಅವರನ್ನೂ ಈ ವಿಚಾರವಾಗಿ ಭೇಟಿ ಮಾಡಿದ್ದೆ. ವೀಣೆ ಶೇಷಣ್ಣ ರಸ್ತೆಯ ಅವರ ಮಧುರಾ ಕ್ಲಿನಿಕ್‌ನಲ್ಲಿ ನಮ್ಮ ಸಂವಾದ ನಡೆದಿತ್ತು. ನನ್ನ ಕತೆಯನ್ನು ಕೇಳಿದ ಮೇಲೆ, ನನ್ನೊಡನೆ ಮಾತಾಡಿದ ಮೇಲೆ ಅವರು ತಮ್ಮ ಅನಿಸಿಕೆಯನ್ನು ಬದಲಿಸಿಕೊಳ್ಳಲು ಮನಸು ಮಾಡಿದರು. ಅವರ ‘ಮನಸು ಇಲ್ಲದ ಮಾರ್ಗ’ವನ್ನು ಓದಿದ ಮೇಲೆ ನನ್ನ ವರ್ತನೆಗಳಲ್ಲಿ ಇದ್ದ ದೋಷವನ್ನು ಪರಿಹರಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡತೊಡಗಿದೆ. ಅವರ ಮಾತಿನಂತೆ, ವೇದನೆಯನ್ನು ಸಂವೇದನೆಯನ್ನಾಗಿಸಿಕೊಳ್ಳಲು ವೈವಿಧ್ಯಮಯ ಪ್ರಯೋಗಗಳನ್ನು ಮಾಡಿದೆ. ‘ನಿನ್ನ ಮೈಗ್ರೇನನ್ನು ಶತ್ರುವಿನಂತೆ ಭಾವಿಸಬೇಡ; ಮಿತ್ರನಂತೆ ನೋಡು. ಏಕೆಂದರೆ ಅದು ನಿನ್ನೊಂದಿಗೆ ಇರಲು ಬಂದಿದೆ! ಹೋಗುವುದಕ್ಕಲ್ಲ’ ಎಂದರು ಮೀನಗುಂಡಿ. ‘ನನಗೆ ತಲೆನೋವು ಬಂದಿದೆ’ ಎನ್ನಬೇಡ. ಇದು ಪಲಾಯನವಾದ. ‘ತಲೆನೋವು ಬರಲು ಅದಕ್ಕೆ ಕೈ ಕಾಲಿಲ್ಲ. ನಾನು ತಲೆನೋವಿನಿಂದ ನರಳುತ್ತಿದ್ದೇನೆ ಎಂಬ ಅರಿವು ಬೆಳೆಸಿಕೋ. ಅದರ ಹೊಣೆ ಹೊತ್ತುಕೋ’ ಎಂದೂ ಅಂದರು. ಅಂದಿನಿಂದ ನನ್ನ ತಲೆನೋವು ನನಗೆ ಗೆಳೆಯನಾಯಿತು. ನನ್ನ ಜೀವವಿರುವವರೆಗೂ ಇದರೊಂದಿಗೆ ವಾಸ ಮಾಡಬೇಕು ಅಥವಾ ಅದು ನನ್ನೊಂದಿಗೆ ವಾಸ ಮಾಡುವುದು ಗ್ಯಾರಂಟಿ ಎಂಬ ಕಟುಸತ್ಯವನ್ನು ಅರಿತೆ. ಅಂದ ಮೇಲೆ ಅದರೊಂದಿಗೆ ಹೋರಾಡಿ ಫಲವೇನು? ‘ದ ಬೆಸ್ಟ್ ಫೈಟರ್ ಈಸ್ ನೆವರ್ ಆ್ಯಂಗ್ರಿ’ ಎನ್ನುತ್ತಾರೆ ಲಾವೋತ್ಸೆ. ಪ್ರತಿಭಟಿಸಿದಷ್ಟೂ ನೋವೂ ಕಾವೂ ಹೆಚ್ಚಾಗುವುದೆಂದು ಅರಿತೆ. ಮೈಗ್ರೇನೇ ನನ್ನ ಮೊದಲನೆಯ ಮಿತ್ರ! ಎಂಬುದನ್ನು ತಡವಾಗಿಯಾದರೂ ಸರಿಯಾಗಿ ತಿಳಿದೆ!

ಲೋಕದ ಎಲ್ಲರಿಗೂ ಒಂದಲ್ಲಾ ಒಂದು ನೋವು, ಕೊರತೆ, ಯಾತನೆ, ದುಗುಡ ಇದ್ದೇ ಇರುತ್ತದೆ. ನನಗೆ? ಇದೊಂದೇ! ತಲೆನೋವಿಲ್ಲದಿದ್ದರೆ ನಾನು ಪರಿಪೂರ್ಣ ಮನುಷ್ಯನಾಗುತ್ತಿದ್ದೆ. ಲೋಕದಲ್ಲಿ ಯಾರೂ ಪರಿಪೂರ್ಣರಲ್ಲ ಎಂಬ ಸಿದ್ಧಾಂತ ದೇವರ ರಾಜ್ಯದ್ದು. ಹಾಗಾಗಿ ನಾನು ಪರಿಪೂರ್ಣನಾಗದೇ ಇರಲು ಭಗವಂತನೇ ಮಾಡಿರುವ ಚಿತಾವಣೆ ಇದೆಂಬ ವಿವೇಕೋದಯವಾಯಿತು. ನನಗೆ ತಲೆನೋವು ಬಿಟ್ಟರೆ ಇನ್ನೇನೂ ಸಮಸ್ಯೆಯೇ ಇಲ್ಲ. ಇನ್ನು ಏನಾದರೂ ಸಮಸ್ಯೆಯಿದ್ದರೆ ಅದು ತಲೆನೋವಿನಿಂದಾದ ಇತರ ಅಡ್ಡಪರಿಣಾಮಗಳಷ್ಟೇ! ಆದರೆ ಜಗತ್ತಿನ ಉಳಿದವರಿಗೆ? ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆ! ದೈಹಿಕವಾದದ್ದೊ ಅಥವಾ ಮಾನಸಿಕವಾದದ್ದೊ. ಒಟ್ಟಿನಲ್ಲಿ ಎಲ್ಲರೂ ಒಂದಲ್ಲಾ ಒಂದು ಗೋಳನ್ನು ಪಡುತ್ತಿರುವವರೇ. ಬೇರೆಯವರ ಮತ್ತು ಬೇರೆಯ ಗೋಳುಗಳಿಗೆ ಹೋಲಿಸಿದರೆ ನನ್ನ ಗೋಳು ಏನೇನೂ ಅಲ್ಲ! ಕುಟುಂಬ, ದಾಂಪತ್ಯ, ವೃತ್ತಿ, ಪ್ರವೃತ್ತಿ, ಆತ್ಮೀಯ ವಲಯ- ಎಲ್ಲದರಲ್ಲೂ ನಾನು ಅದೃಷ್ಟವಂತ; ಆರೋಗ್ಯದಲ್ಲಿ ದುರದೃಷ್ಟವಂತ. ಹಲವರಲ್ಲಿ ಇನ್ನೂ ಏನೇನೋ ಸಮಸ್ಯೆಗಳು ಇರುತ್ತವೆ. ಮಕ್ಕಳು ಸರಿದಾರಿಯಲ್ಲಿರುವುದಿಲ್ಲ. ಬುದ್ಧಿವಂತರೂ ವಿದ್ಯಾವಂತರೂ ಆಗದೇ ಮನೆಗೆ ಮಾರಿಯಾಗಿರುತ್ತಾರೆ. ಬುದ್ಧಿಮಾಂದ್ಯರೋ, ಅತಿಬುದ್ಧಿವಂತರೋ ಆಗಿ ತೊಡಕಾಗಿರುತ್ತಾರೆ. ಮಡದಿಯೇ ಸರಿಯಿಲ್ಲವೆಂದು ಗೋಳಾಡುತ್ತಾರೆ. ಸಂಸಾರದಲ್ಲಿ ಸರಿಗಮ ಇಲ್ಲದೇ ಅಪಸ್ವರವೇ ಎಲ್ಲೆಲ್ಲೂ. ಇನ್ನು ಸಂಬಂಧಿಕರ ಕಾಟ. ಹೊಲ-ಮನೆ-ಜಮೀನು-ಪಿತ್ರಾರ್ಜಿತ ಆಸ್ತಿಯಲ್ಲಿ ತೊಡಕು, ಕೋರ್ಟು-ಕಾನೂನು-ಪೊಲೀಸು ಎಂಬ ಅಲೆದಾಟ, ಏನೇನೋ ಹಣಕಾಸಿನ ಗೋಜು ಗದ್ದಲಗಳು, ತಲೆಗೆಳೆದರೆ ಕಾಲಿಗಿಲ್ಲ; ಕಾಲಿಗೆಳೆದರೆ ತಲೆಗಿಲ್ಲವೆಂಬ ಆಯವ್ಯಯ, ಸಾಲಶೂಲ, ನೆರೆಹೊರೆಯವರ ಕದನಕುತೂಹಲ, ಹಲವು ದುರಭ್ಯಾಸ-ದುಶ್ಚಟಗಳ ಗುಲಾಮಗಿರಿ, ಹೆಸರು-ಕೀರ್ತಿ-ಪ್ರಶಸ್ತಿ-ಪುರಸ್ಕಾರಗಳೆಂಬ ಐಡೆಂಟಿಟಿ ಹಪಾಹಪಿ, ಆಸ್ತಿ-ಚಿನ್ನ-ಸೈಟು ಎಂಬ ಹಾಹಾಕಾರ – ಇವಾವುವೂ ನನ್ನಲ್ಲಿಲ್ಲ; ನನ್ನ ಮಡದಿಯಲ್ಲಿ ಮೊದಲೇ ಇಲ್ಲ! ಇನ್ನು ನನ್ನ ಮಗನಂತೂ ಅಪರೂಪದಲ್ಲಿ ನಿಜರೂಪ. ಈ ದೇಶದ ಕೀರ್ತಿಯನ್ನು ವಿದೇಶದಲ್ಲಿ ಹರಡುತ್ತಿದ್ದಾನೆ. ಅಲ್ಲಿನ ಹೆಮ್ಮೆಯ ಭಾರತೀಯ ಕಂಪೆನಿಯಲ್ಲಿ ಎಲ್ಲರ ಅಚ್ಚುಮೆಚ್ಚಾಗಿ ವಿದ್ಯಾವಂತ ಸೃಜನಶೀಲ ಪ್ರತಿಭಾವಂತನಾಗಿ ಸ್ವಾವಲಂಬಿಯಾಗಿ ಶಾಂತಿ-ನೆಮ್ಮದಿ-ಸಂತಸೋಲ್ಲಾಸಗಳ ಬದುಕನ್ನು ಕಟ್ಟಿಕೊಂಡು ವಿರಾಜಮಾನನಾಗಿದ್ದಾನೆ; ಕಂಡ ಕನಸುಗಳನ್ನು ನನಸು ಮಾಡಿಕೊಳ್ಳುವತ್ತ ಧಾಪುಗಾಲಿಡುತ್ತಿದ್ದಾನೆ. ಹೀಗಿರುವಾಗ ಬಹುಶಃ ಆ ದೇವರಿಗೂ ಅಸೂಯೆ ಬಂದಿರಬೇಕು! ಹಾಗಾಗಿ ನನ್ನನ್ನು ‘ಮಗನೇ! ಅನುಭವಿಸು, ಇದೊಂದು ನೋವನ್ನಾದರೂ!’ ಎಂದು ಶಾಪಿಸಿರಬೇಕು. ಹಾಗಾಗಿ ಇದನ್ನು ಮನಃಪೂರ್ವಕ ಅನುಭವಿಸುತ್ತಿದ್ದೇನೆ.
ಮೈಗ್ರೇನ್ ಪ್ರಚೋದಕಗಳಲ್ಲಿ ಎರಡು ವಿಧ: ಒಂದು ಬಾಹ್ಯ, ಇದರದೇ ಪ್ರಮುಖ ಪಾತ್ರ. ಇನ್ನೊಂದು ಆಂತರಿಕ, ಇದರದು ಅಷ್ಟಿಲ್ಲ, ನಿಯಂತ್ರಿತ. ಗಾಢ ಸುವಾಸನೆ, ಕಣ್ಣಿಗೆ ಶ್ರಮ, ದುಃಖಿಸುವುದು, ತೀವ್ರತರ ಬೆಳಕು, ಬಿಸಿಲು, ಕಿವಿಗಡಚಿಕ್ಕುವ ಶಬ್ದ, ಗಿಜಿಗಿಜಿ ಜನರ ಗುಂಪು, ಸಂತೆ, ಜಾತ್ರೆ, ಗುಂಪುಗದ್ದಲ, ಪ್ರಯಾಣ, ಉಪವಾಸ ಇರುವುದು, ತಮಗೆ ಒಗ್ಗದಿರುವ ಆಹಾರಪದಾರ್ಥಗಳು ಇತ್ಯಾದಿ. ಮೈಗ್ರೇನ್ ರೋಗಿಗಳಿಗೆ ಯಾವುದೇ ಸುಗಂಧ ಆಗುವುದಿಲ್ಲ. ಹೂವಿನ ಪರಿಮಳ, ಗಂಧದಕಡ್ಡಿಯ ಹೊಗೆ ಮತ್ತದರ ಸುಗಂಧ, ಅತ್ತರು (ಪರ್‌ಫ್ಯೂಮ್) ಇವೆಲ್ಲಾ ಆಗಿ ಬರುವುದಿಲ್ಲ. ಹಾಗೆಯೇ ಕಣ್ಣಿಗೆ ಶ್ರಮವಾಗುವಂತೆ ನೋಡುವ ಚಲನಚಿತ್ರ, ಟೀವಿ ವೀಕ್ಷಣೆ, ನಿರಂತರ ಮೊಬೈಲ್ ಮತ್ತು ಕಂಪ್ಯೂಟರ್ ಬಳಕೆ ಇದಾವುದೂ ಆಗಿ ಬರುವುದಿಲ್ಲ. ಪ್ರಖರವಾದ ಶಬ್ದ ಮತ್ತು ಬೆಳಕು ಎರಡರಿಂದಲೂ ಅವರು ದೂರವಿರಬೇಕು. ಬಿಸಿಲಂತೂ ಅವರಿಗೆ ಕಡುಹಿಂಸೆ. ಸೂರ್ಯ ಅವರ ಶತ್ರು. ಚಂದ್ರ ಅವರಿಗೆ ಮಿತ್ರ. ಬಹಳ ಮುಖ್ಯವಾದುದು ಅವರ ಆಹಾರ ಸೇವನೆ. ಹಸಿವಿನಿಂದ ಇರುವುದು ಅವರಿಗೆ ಆಗದ ಮಾತು. ಹೊಟ್ಟೆಯನ್ನು ಖಾಲಿಬಿಟ್ಟರೆ ಮೈಗ್ರೇನ್ ಖಚಿತ. ಹಾಗೆಂದು ಅವರು ಹೊಟ್ಟೆ ತುಂಬ ತಿಂದೂ ಇರಲಾರರು. ತಿನ್ನದೆಯೂ ಇರಲಾರರು! ತಡವಾಗಿ ಉಪಾಹಾರ ಸೇವನೆ ಸಲ್ಲದು; ಹಾಗೆಯೇ ತಡರಾತ್ರಿ ಊಟ ಕೂಡದು. ಬೇಗನೇ ಎದ್ದು ನಿತ್ಯಕರ್ಮಗಳನ್ನು ಮುಗಿಸಿಕೊಂಡು, ಉಪಾಹಾರ ಸೇವನೆ ಮಾಡಬೇಕು. ಮಧ್ಯಾಹ್ನವೂ ಅಷ್ಟೇ. ಬೇಗನೇ ಊಟ, ಹಾಗೆಯೇ ರಾತ್ರಿಯ ವೇಳೆ ಬೇಗನೇ ಭೋಜನ ಮುಗಿಸಬೇಕು. ಭೋಜನಕ್ಕೂ ರಾತ್ರಿ ಮಲಗುವುದಕ್ಕೂ ನಡುವೆ ನಾಲ್ಕು ಗಂಟೆಗಳ ಅಂತರ ಇರಬೇಕು. ಮೈಗ್ರೇನಿಗರಿಗೆ ನಿಡಿದಾದ ದೀರ್ಘ ನಿದ್ರೆ ಹತ್ತುವುದು ಅಪರೂಪ. ಸತತ ನಾಲ್ಕೈದು ಗಂಟೆಗಳ ನಿದ್ರೆಯಾದ ಕೂಡಲೇ ಅವರಿಗೆ ಎಚ್ಚರವಾಗಿ ಬಿಡುತ್ತದೆ. ಬಲವಂತದಲ್ಲಿ ಮತ್ತೆ ಮಲಗಲು ಹೊರಳಾಡಿದರೆ ತಲೆಶೂಲೆ ಅಟ್ಯಾಕಾಗುವುದು ಖಂಡಿತ. ತಕ್ಷಣ ಎದ್ದು ಧ್ಯಾನ, ಪ್ರಾಣಾಯಾಮ, ಸಂಗೀತ, ಬರೆವಣಿಗೆ, ಓದು ಮೊದಲಾದ ಪ್ರೀತಿಯ ಹವ್ಯಾಸಗಳನ್ನು ಕೈಗೊಳ್ಳಬೇಕು. ಆಮೇಲೆ ಬೆಳಗಿನ ಜಾವ ಮತ್ತೆ ಮಲಗಿ ಇನ್ನೊಂದೆರಡು ಗಂಟೆಗಳ ಕಾಲ ನಿದ್ರೆ ಮಾಡಿ, ಏಳಬೇಕು.
ತಮಗೆ ಒಗ್ಗದಿರುವ ಆಹಾರವನ್ನು ತಾವೇ ಕಂಡುಕೊಳ್ಳಬೇಕು. ಇದು ಬಹಳ ಮುಖ್ಯವಾದ ಅಂಶ. ಅದಕಾಗಿ ದಿನಚರಿ ಬರೆದಿಟ್ಟರೆ ಅದರಿಂದ ‘ಯಾವ ಆಹಾರವು ತಲೆನೋವಿಗೆ ಟ್ರಿಗರ್ ಆಯಿತು?’ ಎಂದು ಗೊತ್ತಾಗುತ್ತದೆ. ಅಂಥ ಮಸಾಲೆಯನ್ನೂ ತರಕಾರಿಯನ್ನೂ ಬಿಡುವುದು ಸೂಕ್ತ.

ಮೈಗ್ರೇನಿಗರು ದಾಕ್ಷಿಣ್ಯಕ್ಕೆ ವಶವಾಗಬಾರದು. ನನಗೆ ಆಗುವುದಿಲ್ಲ, ನಾನು ಇದನ್ನು ತಿನ್ನುವುದಿಲ್ಲ, ನನಗೆ ಬೇಡ ಎಂಬುದನ್ನು ಕಲಿತರೆ ಅರ್ಧ ಭಾಗ ಬಾಹ್ಯದ ಪ್ರಚೋದಕಗಳನ್ನು ನಿವಾರಿಸಿಕೊಳ್ಳಬಹುದು. ನನಗೆ ಹಲಸಿನಹಣ್ಣು ಬಹಳ ಇಷ್ಟ. ಆದರೆ ನನಗದು ಟ್ರಿಗರ್ ಅಂಶ. ತಿನ್ನುವುದನ್ನು ಬಿಟ್ಟು ಮೂವತ್ತು ವರುಷಗಳಾಗಿವೆ. ಆಲೂಗೆಡ್ಡೆ, ಮಸಾಲೆ ಪದಾರ್ಥಗಳು, ಬಟಾಣಿ, ಕಡಲೇಬೀಜ ಆಗಿ ಬರುವುದಿಲ್ಲ. ಯಾವುದೇ ರೀತಿಯ ಚಾಟ್ಸ್ಅನ್ನು ನಾನು ಮುಟ್ಟುವುದಿಲ್ಲ. ಮೈಗ್ರೇನಿಗರು ಹಾಲಿನ ಉತ್ಪನ್ನಗಳನ್ನೂ ಚಾಕೊಲೆಟ್, ಐಸ್‌ಕ್ರೀಂಗಳನ್ನು ಸೇವಿಸಬಾರದು. ಆದರೇನು ಮಾಡುವುದು? ಮಾತ್ರೆಗಳ ಉಷ್ಣಾಂಶವು ದೇಹವನ್ನು ಹದಗೆಡಿಸುವುದರಿಂದ ಮೊಸರು, ತುಪ್ಪ-ಇವನ್ನು ನಾನು ಬಳಸಲೇಬೇಕಾಗಿದೆ. ಪುಣ್ಯಕ್ಕೆ ನನಗಿದು ಟ್ರಿಗರ್ ಅಂಶವಾಗಿಲ್ಲ. ಇನ್ನುಳಿದಂತೆ, ಚಾಕೊಲೆಟ್, ಐಸ್‌ಕ್ರೀಂಗಳನ್ನು ತ್ಯಜಿಸಿದ್ದೇನೆ. ಒಬ್ಬರಿಗೆ ಇರುವ ಒಗ್ಗದಿರುವಿಕೆಯು ಅಂದರೆ ಟ್ರಿಗರ್ ಅಂಶವು ಇನ್ನೊಬ್ಬ ಮೈಗ್ರೇನ್ ರೋಗಿಗೆ ಒಗ್ಗುವಿಕೆಯಾಗಬಹುದು. ಹಾಗಾಗಿ, ಇದನ್ನು ನಾವೇ ಜಾಣತನದಿಂದಲೂ ಅನುಭವದಿಂದಲೂ ಕಂಡುಕೊಳ್ಳಬೇಕು. ಅದಕಾಗಿ ವೈದ್ಯರು ದಿನಚರಿ ಬರೆಯಿರಿ ಎಂದು ಒತ್ತಿ ಹೇಳುವರು.
ಇನ್ನು ಆಂತರಿಕ ಪ್ರಚೋದಕಗಳಲ್ಲಿ ಮುಖ್ಯವಾದುದು ರಕ್ತನಾಳಗಳ ಪೆಡಸುತನ. ಮೈಗ್ರೇನ್ ರೋಗವನ್ನು ಅಧ್ಯಯನ ಮಾಡಿದ ವೈದ್ಯಕೀಯ ಸಂಶೋಧನೆಗಳು ಹಲವು ಸಿದ್ಧಾಂತಗಳನ್ನು ಮುಂದಿಟ್ಟಿದೆ. ವಿಧ್ರುವೀಕರಣ ಸಿದ್ಧಾಂತ, ನಾಳೀಯ ಒತ್ತಡ ಸಿದ್ಧಾಂತ, ಸಿರೊಟೋನಿನ್ ಸಿದ್ಧಾಂತ, ನರವ್ಯೂಹಜಾಲ ಸಿದ್ಧಾಂತ, ಪೇರೆಂಟಲ್ ಹಿನ್ನೆಲೆ ಸಿದ್ಧಾಂತ ಇತ್ಯಾದಿ. ಈ ಎಲ್ಲ ಅಧ್ಯಯನಗಳೂ ಕೊನೆಗೆ ವಿರಮಿಸುವುದು ಎಲ್ಲೆಂದರೆ ಮಿದುಳಿನಲ್ಲಿ ಉಂಟಾಗುವ ರಕ್ತನಾಳಗಳ ಅಸಹಜ ವರ್ತನೆಯಲ್ಲಿ. ವಂಶವಾಹಿಗಳ ಪ್ರಚೋದನೆಯಿಂದ ಹೆಚ್ಚಿನ ಪ್ರಮಾಣದ ರಕ್ತವು ನಾಳಗಳಲ್ಲಿ ಹರಿಯುವುದರಿಂದ ನರಕೋಶಗಳು ಉಬ್ಬುತ್ತವೆ. ಹೊರಗಿನ ಮತ್ತು ಒಳಗಿನ ಒತ್ತಡವೇ ಇದಕ್ಕೆ ಮೂಲಮಾನ. ಸಹಜವಾಗಿ ಹೃದಯದಿಂದ ಮಿದುಳಿನ ಭಾಗಕ್ಕೆ ರಕ್ತ ಹರಿಯುವ ಪ್ರಮಾಣವು ಮೈಗ್ರೇನ್ ರೋಗಿಗಳಲ್ಲಿ ಹೆಚ್ಚು. ನಿರ್ದಿಷ್ಟ ನಾಳಗಳು ಉಬ್ಬುವುದರಿಂದ ಅವು ತಮ್ಮ ಪಕ್ಕದ ನಾಳಗಳನ್ನು ಸಹ ಪ್ರಚೋದಿಸಿ, ಡಿಸ್ಟರ್ಬ್ ಮಾಡುತ್ತವೆ. ಬೆರಳಿಗೆ ಗಾಯವಾಗಿ ಊದಿಕೊಂಡಾಗ ನಮ್ಮ ಹಸ್ತವು ಸ್ವಲ್ಪ ಭಾರವೆನಿಸುವ ಹಾಗೆ, ಅಲ್ಲಿನ ರಕ್ತನಾಳಗಳು ಒದ್ದಾಡುತ್ತವೆ. ಇವು ಕ್ರಮೇಣ ಔಷಧೋಪಚಾರದಿಂದಲೋ ನಿದ್ರೆಯಿಂದಲೋ ನಿಧಾನವಾಗಿ ಏಳೆಂಟು ಗಂಟೆಗಳ ಅವಧಿಯಲ್ಲಿ ಸಹಜ ಸ್ಥಿತಿಗೆ ಬರುವ ತನಕ ಅರೆತಲೆಶೂಲೆ ಕಾಡುತ್ತದೆ. ಓರ್ವ ವೈದ್ಯರು ನನಗೆ ತಮ್ಮ ಕಿರುಬೆರಳನ್ನು ತೋರಿಸಿ, ‘ರಕ್ತನಾಳಗಳು ಆ ಸಮಯದಲ್ಲಿ ತೋರುಬೆರಳು ಗಾತ್ರದಷ್ಟು ದಪ್ಪವಾದರೆ ಮಿದುಳಿನಲ್ಲಿ ಜಾಗವೆಲ್ಲಿದೆ? ಅದು ಮತ್ತೆ ಕಿರುಬೆರಳು ಗಾತ್ರಕ್ಕೆ ಮರಳುವ ತನಕ ನಿನಗೆ ತಲೆನೋವು!’ ಎಂದು ವಿವರಿಸಿದ್ದರು. ಅಷ್ಟೇ ಅಲ್ಲ, ಮಿದುಳಿನ ರಕ್ತನಾಳ ಉರಿಯೂತವಿದು. ತಾನಾಗಿಯೇ ಆ ರಕ್ತದೊತ್ತಡ ಕಡಮೆಯಾಗಬೇಕು. ಇಲ್ಲದಿದ್ದರೆ ರಕ್ತನಾಳ ಸಿಡಿಯಬಹುದು ಎಂದು ಹೇಳಿ, ಉದಾಹರಣೆ ಕೊಟ್ಟಿದ್ದರು. ಪ್ರವಾಸಕ್ಕೆ ಹೋಗುವಾಗ ಸೂಟ್‌ಕೇಸ್‌ಗೆ ಬಟ್ಟೆ ತುಂಬುತ್ತೇವೆ. ಆದರೆ, ಮಿತಿಮೀರಿ ತುಂಬಿ, ಅದನ್ನು ಮುಚ್ಚಲಾಗದೇ ಪರದಾಡುತ್ತೇವೆ. ಆಗ ಅಲ್ಲೇ ಓಡಾಡುತಿದ್ದ ಪುಟ್ಟ ಮಗುವನ್ನು ಕರೆದು ಅದರ ಮೇಲೆ ನಿಲ್ಲಿಸಿ, ಸೂಟ್‌ಕೇಸ್ ಮುಚ್ಚಿ ಲಾಕ್ ಮಾಡುತ್ತೇವೆ. ಅದರ ಒಳಗಿನ ಒತ್ತಡ ಅಲ್ಲಿಯೇ ಹೆಪ್ಪುಗಟ್ಟಿರುತ್ತದೆ. ಸೂಟ್‌ಕೇಸ್ ಓಪನ್ ಮಾಡಿದ ತಕ್ಷಣ ‘ಬಡ್’ ಎಂಬ ಶಬ್ದದೊಂದಿಗೆ ಓಪನಾಗಿ ಒಳಗಿದ್ದ ವಸ್ತುಗಳು ಚೆಲ್ಲಾಡುತ್ತವೆ! ಹೀಗೆಯೇ ನಮ್ಮ ಮಿದುಳಿನಲ್ಲೂ! ಎಂದು ಅಭಿನಯಪೂರ್ವಕವಾಗಿ ವಿವರಿಸಿದ್ದರು.
ಅಂದರೆ ಮೈಗ್ರೇನ್ ಮಾರಣಾಂತಿಕವೇ? ಎಂಬ ಪ್ರಶ್ನೆಗೆ ನೇರ ಉತ್ತರವಿಲ್ಲ. ಏಕೆಂದರೆ ಇದೊಂಥರ ಬ್ರೈನ್‌ ಬೀಪಿ! ನಿರ್ಲಕ್ಷಿಸಿ, ಚಿಕಿತ್ಸೆ ಪಡೆಯದೇ, ನಮ್ಮ ಜೀವನಶೈಲಿ ಬದಲಿಸಿಕೊಳ್ಳದೇ ಇದ್ದರೆ ಅಪಾಯ ಸಮೀಪದಲ್ಲೇ ಇದೆ ಎಂದೇ ಅರ್ಥ. ಮೈಗ್ರೇನಿಗೆ ದೊಡ್ಡ ತಜ್ಞವೈದ್ಯರೇ ಬೇಕೆಂದೇನಿಲ್ಲ. ಕುಟುಂಬ ವೈದ್ಯರೇ ಸಾಕು. ಆದರೆ ಅವರನ್ನು ನಿಯಮಿತವಾಗಿ ಭೇಟಿ ಮಾಡುತ್ತಿರಬೇಕು. ಮಿದುಳಿನ ಈ ಡಿಸ್‌ಆರ್ಡರ್‌ನಿಂದಾಗಿ ಹೃದಯದ ರಕ್ತದೊತ್ತಡವೂ ಕಾಣಿಸಿಕೊಳ್ಳುತ್ತದೆ.

ಹಾಗಾಗಿ ಮೈಗ್ರೇನ್ ರೋಗಿಗಳು ಕಾರ್ಡಿಯಾಲಜಿಸ್ಟ್ ಅವರ ಸಲಹೆಯನ್ನೂ ಪಡೆದುಕೊಳ್ಳಬೇಕು. ಹೃದಯತಜ್ಞರೂ ಈ ರೋಗಿಗಳಿಗೆ ಆವಶ್ಯಕ. ಬಿಪಿ ಮಾತ್ರೆಯನ್ನೂ ಅವರ ಸಲಹೆಯಂತೆ ನುಂಗಬೇಕಾಗುತ್ತದೆ. ಮಿದುಳಿನ ರಕ್ತನಾಳದೊತ್ತಡವು ಕ್ರಮೇಣವಾಗಿ ಹೃದಯದ ರಕ್ತನಾಳದ ಒತ್ತಡಕೂ ಕಾರಣವಾಗುವುದು. ನಾನು ಅಂಥ ಪೇಷೆಂಟು. ಹೃದಯದಿಂದ ಮಿದುಳಿಗೆ ರಕ್ತಪೂರೈಕೆಯಾಗುವ ನಾಳಗಳಿಗೆ ಈ ಔಷಧಿಯು ಶಕ್ತಿ ಕೊಡುವುದಲ್ಲದೇ ಒತ್ತಡವನ್ನು ಕಡಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಪುಣ್ಯಕ್ಕೆ ನನಗೆ ಬರೆದುಕೊಟ್ಟ ‘ಮೆಟೋಸರ್ಟಾನ್’ ಎಂಬ ಇಂಥ ಔಷಧಿಯು ಜೆನೆರಿಕ್ ಆಗಿದ್ದು, ಜನೌಷಧಿ ಅಂಗಡಿಗಳಲ್ಲಿ ಕಡಮೆ ಬೆಲೆಗೆ ದೊರಕುತ್ತಿದೆ.
ಈ ನೋವು ಅಂದರೆ ತಲೆಚಳಕು ಅನುಭವಿಸಿ, ಮೈಗ್ರೇನ್ ರೋಗಿಗಳಲ್ಲಿ ಒಂದು ರೀತಿಯ ಹತಾಶೆ ಮತ್ತು ಅಸಹಾಯಕತೆ ಹೆಚ್ಚಾಗಿ, ಅದು ಅವರ ದೈನಂದಿನ ವರ್ತನೆಗಳ ಮೇಲೆ ದುಷ್ಪರಿಣಾಮ ಬೀರುವುದು. ಅಸಹನೆ, ರೇಗುವಂತಾಗುವುದು, ನಕಾರಾತ್ಮಕ ಆಲೋಚನೆಗಳು, ಸ್ನೇಹ ಸಂಬಂಧಗಳಲ್ಲಿ ಅಸ್ಥಿರತೆ, ಯಾವುದರಲ್ಲೂ ನಿರಂತರವಾದ ಆಸೆ, ಆಸಕ್ತಿ ಹೊಂದದೇ, ಅರ್ಧದಲ್ಲೇ ಕೈ ಬಿಡುವುದು, ಏಕಾಗ್ರತೆ ಮತ್ತು ನಿರಂತರತೆಗಳ ಕೊರತೆ, ನಿದ್ರಾಹೀನತೆ, ಕಣ್ಣಿನ ನೋವು, ಬಹಳ ಮುಖ್ಯವಾಗಿ ನಿಶ್ಶಕ್ತಿ ಮತ್ತು ಖಿನ್ನತೆ ಕಾಡುವುವು. ಹಾಗಾಗಿ ಮೈಗ್ರೇನ್ ರೋಗಿಗಳು ಯಾವುದಾದರು ಸದಭಿರುಚಿಯ ಸದಭ್ಯಾಸವನ್ನು ರೂಢಿಸಿಕೊಳ್ಳಬೇಕು. ಪುರುಷರಲ್ಲಿ ಬಹಳ ಮಂದಿ, ಮಾನಿನಿ ಮತ್ತು ಮದಿರೆಯ ದಾಸರಾಗುವರು. ಅಂದರೆ ನೋವಿನ ಉಪಶಮನಕ್ಕಾಗಿ ಇನ್ನೊಂದು ಹೊಸ ನೋವನ್ನು ಅಂಟಿಸಿಕೊಳ್ಳುವ ಜಾಡ್ಯವಲ್ಲದೇ ಬೇರೇನಲ್ಲ. ಸ್ಮೋಕಿಂಗ್ ಮತ್ತು ಆಲ್ಕೋಹಾಲ್ ಸೇವನೆಗಳು ಮೈಗ್ರೇನಿಗೆ ಟ್ರಿಗರಿಂಗ್ ಫ್ಯಾಕ್ಟರ್ಸ್‌. ಎಂಥ ವಿಚಿತ್ರವೆಂದರೆ ಆಲ್ಕೋಹಾಲ್ ಸೇವನೆಯ ನಂತರ ಅದರ ಮಾರನೆಯ ಇಡೀ ದಿವಸ ಅನುಭವಿಸುವಂಥದೇ ಹ್ಯಾಂಗೋವರ್ ಅನ್ನು ಮೈಗ್ರೇನ್ ರೋಗಿಗಳು ನೋವು ನಿವಾರಕ ಗುಳಿಗೆಗಳನ್ನು ನುಂಗಿದ ನಂತರ ಅನುಭವಿಸುತ್ತಾರೆ! ಜಡತೆ, ನಿರಾಸಕ್ತಿ ಮತ್ತು ಅಪರಾಧೀ ಭಾವಗಳನ್ನು ಇಬ್ಬರೂ ಫೀಲ್ ಮಾಡುತ್ತಾರೆ. ಇದು ಕೀಳರಿಮೆಗೆ ಕಾರಣವಾಗಿ ಮತ್ತೂ ಮಾನಸಿಕವಾಗಿ ನೋಯುತ್ತಾರೆ. ಹೀಗಾಗಿಯೇ ಮೈಗ್ರೇನ್ ಪೀಡಿತರು ಸೃಜನಾತ್ಮಕ ಹವ್ಯಾಸಗಳಲ್ಲಿ ತೊಡಗಿಸಿಕೊಂಡರೆ ಆ ಮಟ್ಟಿಗೆ ರಿಲ್ಯಾಕ್ಸಾಗುತ್ತದೆ; ಜೀವನವನ್ನು ಧನಾತ್ಮಕವಾಗಿ ನೋಡುವಂತಾಗುತ್ತದೆ. ಯಾರೋ ಬಲವಂತ ಮಾಡಿದರೆಂದು ಮದ್ಯವ್ಯಸನಿಗಳಾದರೆ ಬಾಣಲೆಯಿಂದ ಬೆಂಕಿಗೆ ಹಾರಿದಂತೆ. ‘ನೀವು ತೆಗೆದುಕೊಳ್ಳುವ ಔಷಧಿ, ಇಂಜೆಕ್ಷನ್ನುಗಳಲ್ಲಿ ಆಲ್ಕೋಹಾಲ್ ಇರುತ್ತದೆ; ಹಾಗಾಗಿ ನೀವು ನೇರವಾಗಿ ಸೇವಿಸಿದರೆ ಏನೂ ಬಾಧಕವಿಲ್ಲ’ ಎಂದು ನನ್ನನ್ನು ಬಹಳ ಮಂದಿ ಪುಸಲಾಯಿಸಿರುವುದುಂಟು. ನಾನು ನಕ್ಕು, ‘ಅಂಥ ಕೃತಕ ಅಮಲುಗಳಿಗೆ ನಾನು ವಶನಾಗಲಾರೆ; ಈಗಾಗಲೇ ನಾನು ಮಾತ್ರೆಗಳನ್ನು ನುಂಗಿಕೊಂಡು ಅಂಥದೇ ನಶೆಯಲ್ಲಿ ತೇಲಾಡುತ್ತಿರುತ್ತೇನೆ. ಇದರ ಅಗತ್ಯವಿಲ್ಲ’ ಎಂದಿದ್ದೇನೆ. ನಿಜ, ಮೈಗ್ರೇನ್ ಪೀಡಿತರು ತೆಗೆದುಕೊಳ್ಳುವ ಗುಳಿಗೆಗಳು ನಮ್ಮ ಚಟುವಟಿಕೆಗಳನ್ನು ನಿಯಂತ್ರಿಸಿ, ಸಪ್ರೆಸ್ ಮಾಡುವುದರಿಂದ ನಾವು ‘ಮಂಕು ಮಾದೇವ’ರೇ ಆಗಿರುತ್ತೇವೆ. ನೇರವಾಗಿ ಹೇಳಬೇಕೆಂದರೆ ಅಂತರಮುಖಿಗಳಾಗಿರುತ್ತೇವೆ. ಬಹಿರ್ಮುಖದ ಜಗತ್ತಿನತ್ತ ಅನಾಸಕ್ತರಾಗಿರುತ್ತೇವೆ. ಹೀಗಾಗಿಯೇ ಏನೋ ನಾನು ಬಹಳ ಹಿಂದೆಯೇ ನನ್ನೊಳಗೇ ಒಂದು ಅಂತರ್ಯಾತ್ರೆ ಕೈಗೊಂಡಿದ್ದು. ನನ್ನದೇ ಆದ ಒಂದು ಪುಟ್ಟ ಮತ್ತು ಸಹ್ಯ ಜಗತ್ತಿನಲ್ಲಿ ಸೇಫ್ ಜ಼ೋನಿನಲ್ಲಿ ಹಾಯಾಗಿರಲು ಇಷ್ಟಪಡುತ್ತೇನೆ. ನನಗೆ ಸಂಬಂಧವಿಲ್ಲದ್ದನ್ನು ಮತ್ತು ಅಗತ್ಯವಿಲ್ಲದ್ದನ್ನು ತಿಳಿದುಕೊಳ್ಳುವ ಯಾವ ಉಮೇದೂ ನನಗಿಲ್ಲ. ‘ನನ್ನ ಪಾಡಿಗೆ ನಾನು; ಮಳೆ ಸುರಿಸುವ ಬಾನು’ ಆಗಿರಲು ಹೆಣಗಾಡುತ್ತೇನೆ. ಈಗಂತೂ ಯಾರೂ ಹೊಸಬರು ಬೇಡ; ಯಾವ ಹೊಸದೂ ಬೇಡ; ಇನ್ನಾವ ಹೊಸ ಸ್ಥಳ, ವ್ಯಕ್ತಿ, ವಿಚಾರ, ಆಹಾರ, ವಿಹಾರ ಕೂಡ ಬೇಡ ಎಂಬ ‘ಸಾಕು’ ತತ್ತ್ವವನ್ನು ಅಳವಡಿಸಿಕೊಂಡಿದ್ದೇನೆ. ಬಹುಶಃ ನನಗಿರುವ ಖಾಯಿಲೆಯೇ ನನ್ನ ಸ್ವಭಾವವನ್ನು ರೂಪಿಸಿದೆ. ಇದನ್ನು ಅರಿಯದ ಬಹಳ ಮಂದಿ ಒಂಥರಾ ವಿಚಿತ್ರ ಮನುಷ್ಯ; ಅಹಂಭಾವಿ; ತಿಕ್ಕಲು ಎಂದು ತೀರ್ಮಾನಿಸಿರುವುದೂ ಉಂಟು. ಅವರು ‘ಸರಿಯಾಗಿ’ಯೇ ತೀರ್ಮಾನಿಸಿದ್ದಾರೆ ಎಂದು ನಾನು ನಕ್ಕು ಸುಮ್ಮನಿರುತ್ತೇನೆ. ಅವರೊಂದಿಗೆ ನಾನೂ ದನಿಗೂಡಿಸಿ, ‘ನೀವು ಹೇಳುವುದು ಕರೆಕ್ಟು; ನನ್ನ ತಲೆ ಸರಿಯಿಲ್ಲ, ನೋಡಿ!’ ಎಂದು ಷರಾ ಬರೆಯುತ್ತೇನೆ. ಹಾಸ್ಯದಲ್ಲಿ ಅಮಾವಾಸ್ಯವನ್ನು ಅಡಗಿಸಿಡುತ್ತೇನೆ.

ನನಗಿರುವ ದೈಹಿಕ ಯಾತನೆಯನ್ನು ‘ಮಾನಸಿಕ’ ಮಾಡಿಕೊಳ್ಳದೇ ಹುಶಾರಾಗಿ ಇರಲು ಒದ್ದಾಡುವುದೇ ದಿನನಿತ್ಯದ ದಿನಚರಿಯಾಗಿ ಹೋಗಿದೆ. ಆದರೇನು? ದೇಹವೆಂಬುದು ಮನಸಿನ ಸ್ಥೂಲರೂಪ; ಮನಸೆಂಬುದು ದೇಹದ ಸೂಕ್ಷ್ಮರೂಪ. ಪರಸ್ಪರ ಚೋದಿತ ಮತ್ತು ಅವಲಂಬಿತ. ಹೀಗಾಗಿಯೇ ಮೈಗ್ರೇನಿಗರು ನಿಧಾನವಾಗಿ ನೋವು ತಿನ್ನುವ ಶಕ್ತಿಯನ್ನು ಕಳೆದುಕೊಳ್ಳುತ್ತಾ ಹೋಗುತ್ತಾರೆ. ನೋವೆಂದರೆ ಕನಸಿನಲ್ಲೂ ಭಯಗ್ರಸ್ಥರಾಗುತ್ತಾರೆ. ಇನ್ನೊಬ್ಬರಿಗೆ ನೋವಾದಾಗಲೂ ಇವರು ನೋವು ತಿನ್ನುತ್ತಾರೆ. ಕಲ್ಪನೆ ಮತ್ತು ಪರಿಕಲ್ಪನೆಗಳಲ್ಲಿ ಇವರು ಎತ್ತಿದಕೈ ಆಗಿರುವುದರಿಂದ ನೋವನ್ನು ಕಲ್ಪಿಸಿಯೇ ಕಂಗಾಲಾಗುತ್ತಾರೆ. ಈ ಅರಿವನ್ನು ಬೆಳೆಸಿಕೊಂಡು ಇಂಥ ಭ್ರಮೆಗಳನ್ನು ಹೋಗಲಾಡಿಸಿಕೊಳ್ಳಲು ಪ್ರಯತ್ನ ಪಡಬೇಕು. ಇದನ್ನೆಲ್ಲಾ ನಾನು ಬರೆಯುತ್ತಿದ್ದರೂ ನನಗಿವು ಗೊತ್ತಿದ್ದರೂ ನಾನು ಇಂಥ ಅರಿವನ್ನು ಬೆಳೆಸಿಕೊಂಡಿರುವೆನಾ? ನಿಮ್ಮನ್ನಲ್ಲ; ನನ್ನನ್ನು ನಾನೇ ಕೇಳಿಕೊಳ್ಳಬೇಕು.
ಸಾಹಿತ್ಯ, ಓದು, ಬರೆವಣಿಗೆ, ಕಂಪ್ಯೂಟರು, ಇಂಟರನೆಟ್ಟು, ಮೊಬೈಲು ಫೋನು, ಸಂಗೀತ, ಅಧ್ಯಾತ್ಮ, ಮುಖ್ಯವಾಗಿ ರಮಣರು, ಓಶೋ, ಜಿದ್ದು, ಸದ್ಗುರು ವಾಸುದೇವ್- ಇವರೆಲ್ಲ ನನ್ನ ದುಗುಡವನ್ನು ಕಡಮೆ ಮಾಡುತ್ತಾರೆ; ಜೀವನವನ್ನು ಸಹ್ಯ ಮಾಡುತ್ತಾರೆ.

ಮುಖ್ಯವಾಗಿ ಸೃಜನಾತ್ಮಕ ಅಭಿವ್ಯಕ್ತಿ ನನ್ನ ಪ್ರಧಾನ ಆಸಕ್ತಿ. ಬದುಕನ್ನು ಚಿತ್ರವಿಚಿತ್ರವಾಗಿ ನೋಡುವ ಮತ್ತು ದಾಖಲಿಸುವ ಕೆಲಸ ನನ್ನ ಪ್ರಿಯವಾದ ಹವ್ಯಾಸ. ವಿಚಿತ್ರ ಮನುಷ್ಯನಿಂದ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ? ನನ್ನ ಕೌಟುಂಬಿಕ ನೆಮ್ಮದಿ ಇದರೆಲ್ಲ ಕೇಂದ್ರ. ‘ನೋವು ನಿಶ್ಚಿತ; ಸಫರಿಸುವುದು ನಿನ್ನಾಯ್ಕೆ ಉಚಿತ’ ಎಂದರು ಸಂಬುದ್ಧರು. ಆದರೆ ಒಂದಂತೂ ಸತ್ಯ: ಯಾತನಿಸುವಾಗ ಮತ್ತು ದುಃಖಿಸುವಾಗ ಎಲ್ಲರೂ ಒಂಟಿಯೇ! ಯಾರ ನೋವನ್ನು ಯಾರೂ ಕಡ ಪಡೆಯಲು ಸಾಧ್ಯವಿಲ್ಲ. ನಾವು ಹೊತ್ತು ಬಂದದ್ದನ್ನೇ ಹೊರಬೇಕು; ಬೇರೊಬ್ಬರಿಗೆ ವರ್ಗಾಯಿಸಲು ಇದೇನು ಲಗೇಜಲ್ಲ! ಮೈಗ್ರೇನ್ ಪೀಡಿತರು ಹೇಗೆ ಕೀಳರಿಮೆಯಿಂದ ನರಳದಂತೆ ನೋಡಿಕೊಳ್ಳಬೇಕೋ ಹಾಗೆಯೇ ಅದಕಿಂತ ಹೆಚ್ಚಾಗಿ, ಆತ್ಮಮರುಕದಿಂದ ತಮ್ಮನ್ನು ತಾವೇ ಹೇವರಿಕೆ ಮಾಡಿಕೊಳ್ಳಬಾರದು. ಇವರದು ವಿಪರೀತ ಸೂಕ್ಷ್ಮ ಸ್ವಭಾವ ಆಗಿರುವುದರಿಂದ ‘ಒರಟರು’ ಆಗಿಲ್ಲದೇ ಇರುವುದರಿಂದ ಬಹು ಬೇಗ ನೋಯುತ್ತಾರೆ, ಚಿಕ್ಕಪುಟ್ಟದ್ದಕ್ಕೆಲ್ಲಾ ಸಿಡುಕುತ್ತಾರೆ. ಹಾಗಾಗಿ ಅವರನ್ನು ಕರುಣೆಯಿಂದ ನೋಡಬೇಕು. ಸ್ವತಃ ಮೈಗ್ರೇನ್ ಪೀಡಿತರು ಎಜುಕೇಟ್ ಆಗಬೇಕು ಅಂದರೆ, ರೋಗದ ಬಗ್ಗೆ ಎಜುಕೇಟ್ ಆಗಬೇಕು. ತಮ್ಮನ್ನು ತಾವೇ ಗಮನಿಸಿಕೊಳ್ಳಬೇಕು. ತಿದ್ದಿಕೊಳ್ಳುತ್ತಿರಬೇಕು. ಆದಷ್ಟೂ ಮೌನವಾಗಿರಬೇಕು. ಏಕೆಂದರೆ ನೋವು ತಿಂದ ಮತ್ತು ತಿನ್ನುವ ಮನಸ್ಸು ವ್ಯಗ್ರವಾಗಿರುತ್ತದೆ; ಎಗರಾಡಲು ಹೊಂಚುತ್ತಿರುತ್ತದೆ. ಅದಕಾಗಿ ನಾವು ‘ಮೌನವೇ ಮಹಾಕಾವ್ಯ’ ಎಂಬಂತಿರಬೇಕು. ಇದರಿಂದಲೋ ಏನೋ ನಾನು ಮಾತು ಕಡಮೆ ಮಾಡಿದ್ದೇನೆ. ಅದಕೆ ಪರ್ಯಾಯವಾಗಿ ಬರೆಹವನ್ನು ಆಶ್ರಯಿಸಿದ್ದೇನೆ. ‘ಬರೆಹದಲಿ ಮಾತಾಡು; ಬಾಯಲಲ್ಲ! ಕರುಳಿಂದ ಬರೆದುಬಿಡು; ಬೆರಳಲಲ್ಲ!!’ ಎಂಬುದು ನನ್ನ ಒನ್‌ಲೈನ್ ಅಜೆಂಡಾ ಆಗಿದೆ. ಕ್ರಿಯೆಗೆ ಪ್ರತಿ-ಕ್ರಿಯೆ ಆಗದೇ ಸುಮ್ಮನಿರುವ ಸುಮ್ಮಾನವ ಹೊಂದಲೋಸುಗ ಯಾರು ಏನಂದರೂ ಯಾರು ಹೇಗಿದ್ದರೂ ಲೋಕದೊಳೇನೇ ನಡೆಯುತಿದ್ದರೂ ನನ್ನ ಪಾಡಿಗೆ ನನ್ನ ನೋವಿಗೆ ನನ್ನೆದೆ ಶ್ರುತಿಯಾಗಿ ಮಿಡಿಯುತ್ತಾ ಹಾಡನಾಗಿಸುವತ್ತ ಆಸಕ್ತ; ಉಳಿದದ್ದಕ್ಕೆ ಪರಿತ್ಯಕ್ತ.

ರಮಣರ ಒಂದು ಮಾತು ಮೈಗ್ರೇನಿಗರಿಗೆ ಬಹು ಚೆನ್ನಾಗಿ ಒಪ್ಪುತ್ತದೆ: Do not engage the mind much in the affairs of the world! ‘ಇರು; ಇಲ್ಲದಂತೆಯೂ ಇರು; ಸುಮ್ಮನಿರು; ಅವನಿಟ್ಟಂತಿರು; ಅವನಿಯಿಟ್ಟಂತಿರು’ ಎಂದು ನಾನಿದನ್ನು ಸೃಜನ ಭಾವಾನುವಾದ ಮಾಡಿಕೊಂಡು ಅದನ್ನು ಪಾಲಿಸಲು ಪರಿಶ್ರಮ ಪಡುತ್ತಿದ್ದೇನೆ.

ಕೊನೆಗೊಂದು ಮಾತು: ಇದು ನನ್ನ ಸಂಕ್ಷಿಪ್ತ ಅನುಭವಕಥನ, ಅದೂ ಮೈಗ್ರೇನಿನ ಬಗ್ಗೆ. ನಾನು ಅನುಭವಸ್ಥ ರೋಗಿಯೇ ವಿನಾ ಅಧಿಕೃತ ವೈದ್ಯನಲ್ಲ. ಹಾಗಾಗಿ ತಮ್ಮಲ್ಲಿ ಯಾರಿಗಾದರೂ ಅರೆತಲೆನೋವಿದ್ದರೆ ದಯಮಾಡಿ ನರರೋಗವೈದ್ಯರನ್ನು ಭೇಟಿ ಮಾಡಿ. ನನ್ನ ಬರೆಹದ ಮಾತನ್ನು ನಂಬಿ ಕೂರಬೇಡಿ. ನಾನೇನೋ ಬರೆದುಕೊಂಡಿದ್ದೇನೆ, ನೋವಿನ ಕಥನ. ಓದಿ ಮರೆತು ಬಿಡಿ. ಎಲ್ಲರಿಗೂ ಒಂದಲ್ಲಾ ಒಂದು ನೋವು ಇದ್ದೇ ಇರುತ್ತದೆ. ನನಗೆ ಈ ನೋವು ಅಷ್ಟೇ! ನಿಮಗೆ ವಾಸಿಯಾಗಲಿ ಮತ್ತು ಶುಭವಾಗಲಿ.
-ಡಾ. ಹೆಚ್ ಎನ್ ಮಂಜುರಾಜ್


ಕನ್ನಡದ ಬರಹಗಳನ್ನು ಹಂಚಿ ಹರಡಿ
5 1 vote
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Manjuraj H N
Manjuraj H N
16 days ago

ನನ್ನ ದೈಹಿಕ ಬೇನೆಯ ಸಂಕ್ಷಿಪ್ತ ಅನುಭವಕಥನವನ್ನು ಪ್ರಕಟಿಸಿದ ಪಂಜುವಿಗೆ
ಅನಂತಾನಂತ ಧನ್ಯವಾದಗಳು. ಓದು ಮತ್ತು ಬರೆಹಗಳಿಂದ ನನ್ನ ನೋವನ್ನು
ಮರೆಯುವ ಪ್ರಯತ್ನದ ಹಾದಿಗೆ ಪರೋಕ್ಷವಾಗಿ ಸಹಕರಿಸುತ್ತಿರುವ ಪತ್ರಿಕೆಗೆ
ನಾನು ಆಭಾರಿ.

Nagaraj Ningegowda
Nagaraj Ningegowda
14 days ago

ನಿಮ್ಮ ಮೈಗ್ರೇನ್ ಬಗ್ಗೆ ವಿಚಾರಿಸಬೇಕು ಎಂದು ಹಲವು ಸಲ ಅಂದುಕೊಂಡಿದ್ದೆ. ಇಷ್ಟೊಂದು ಸಾಹಿತ್ಯ ಕೃಷಿಯ ನಡುವೆ ಅದು ಮರೆಯಾಗಿರಬಹುದೆಂದು ಎಂದುಕೊಂಡಿದ್ದೆ. ಅಲ್ಲದೆ ಆಗಾಗ್ಗೆ ಉಲ್ಲಾಸಭರಿತವಾಗಿರುವ ತಮ್ಮ ಸಮೂಹ ಹಾಗೂ ವಯುಕ್ತಿಕ ಭಾವ ಚಿತ್ರಗಳನ್ನು ನೋಡಿ ಸಂತಸಗೊಂಡಿದ್ದೆ. ಆದರೆ ಇಂತಹ ಯಮ ಯಾತನೆಯ ನಡುವೆ ಬದುಕನ್ನು ಹಸನಾಗಿಸಿಕೊಂಡು ಬದುಕುತ್ತಿರುವುದನ್ಧು ನೋಡಿ ಮನಸ್ಸು ರೋಧಿಸುತ್ತಿದೆ.
ನಿಮ್ಮ ನಿತ್ಯ ಸೇವನೆಯ ಔಷಧಿ ಮಾತ್ರೆಗಳು ತಮ್ಮ ಅಡ್ಡ ಪರಿಣಾಮಗಳನ್ನು ಮಿತಗೊಳಿಸಲಿ ಎಂದು ಹಾರೈಸುವೆ.

Roopa Manjunath
Roopa Manjunath
13 days ago

ನಿಮ್ಮ ಬರಹಕ್ಕೆ ದೊಡ್ಡ ನಮಸ್ಕಾರ ಸರ್🙏🙏🙏ಅಂಥಾ ಯಾತನಾಮಯ ಮೈಗ್ರೇನ್ ಕುರಿತಾಗಿ ಎಷ್ಟು ಹಗುರವಾಗಿ ಬರೆದಿದ್ದೀರಿ. ನಿಮಗಿರುವ ಈ ವಿಪರೀತ ಶೂಲೆಯ ತೀವ್ರತೆಯಲ್ಲೂ ಇಷ್ಟು ಸಾಧನೆ ಮಾಡಿದ್ದೀರಿ. ಅದಕ್ಕಾಗಿ ನನ್ನ ಗೌರವಪೂರ್ಣ ಪ್ರಣಾಮಗಳು.ನಿಮ್ಮ ಎಲ್ಲ ತೊಂದರೆಗಳಿಗೂ ಮುಲಾಮಿನಂತೆ, ಮದ್ದಂತೆ ನಿಂತಿರುವ ನಿಮ್ಮ ಮುದ್ದಿನ ಸಹಧರ್ಮಿಣಿ ಕೋಮಲಾರಿಗೂ ಶರಣು ಶರಣೆಂದೆ.

3
0
Would love your thoughts, please comment.x
()
x