ಕೃಷಿ ಅನುಭವಗಳ ಹೂರಣ “ಗ್ರಾಮ ಡ್ರಾಮಾಯಣ”: ಡಾ. ನಟರಾಜು ಎಸ್ ಎಂ

ಗುರುಪ್ರಸಾದ್ ಕುರ್ತಕೋಟಿಯವರು ನನಗೆ ಅನೇಕ ವರ್ಷಗಳಿಂದ ಎಫ್ ಬಿ ಯಲ್ಲಿ ಪರಿಚಿತರು. ನಮ್ಮ ಇಷ್ಟು ವರ್ಷಗಳ ಪರಿಚಯದಲ್ಲಿ ಅವರ ಅನೇಕ ಚಟುವಟಿಕೆಗಳನ್ನು ಗಮನಿಸುತ್ತಾ ಬಂದಿದ್ದೇನೆ. ಹೊಸದರಲ್ಲಿ ಗುರು ಅವರು ಹಾಸ್ಯ ಬರಹಗಾರರಾಗಿ ಪರಿಚಿತರಾದರು. ಪರಿಚಯದ ನಂತರ ನಮ್ಮ ಪಂಜು ಅಂತರ್ಜಾಲ ಪತ್ರಿಕೆಯಲ್ಲಿ “ಪಂಚ್ ಕಜ್ಜಾಯ” ಎಂಬ ಹಾಸ್ಯ ಲೇಖನಗಳ ಅಂಕಣ ಶುರು ಮಾಡಿದರು. ಅದಾದ ನಂತರ ಬರಹದ ಜೊತೆ ಬೇರೆ ಏನನ್ನಾದರು ಮಾಡಬೇಕೆನ್ನುವ ಅವರ ತುಡಿತ ಅವರನ್ನು ರಂಗಭೂಮಿ ಕಡೆಗೆ ಕರೆದೊಯ್ದಿತು. ಬೆಂಗಳೂರಿನಲ್ಲಿ ಕೆಲ ಕಾಲ ರಂಗಕರ್ಮಿಯಾಗಿದ್ದರು, ಆಮೇಲೆ ಕಿರು ಚಿತ್ರಗಳನ್ನು ಸಹ ಮಾಡಿದರು. ಆಮೇಲೆ ಕೆಲ ವರ್ಷಗಳ ಕಾಲ ಅಮೇರಿಕಾದಲ್ಲಿ ನೆಲೆಸಿ ಅಲ್ಲಿ ತಮ್ಮ ಸಾಫ್ಟ್‌ವೇರ್ ಕೆಲಸದ ಜೊತೆ ಜೊತೆಗೆ ಅಲ್ಲಿನವರಿಗೆ ಕನ್ನಡ ಕಲಿಸುವ ಕಾರ್ಯದಲ್ಲಿ ತೊಡಗಿದ್ದರು. ಅಮೇರಿಕಾದಿಂದ ಬೆಂಗಳೂರಿಗೆ ವಾಪಸ್ಸಾದ ಮೇಲೆ ತಮ್ಮ ಸಾಫ್ಟ್ ವೇರ್ ಕೆಲಸ ತೊರೆದು ನೀರಿನಲ್ಲಿ ಗಿಡ ಬೆಳೆಯುತ್ತೇನೆಂದು ಹೈಡ್ರೋಪೋನಿಕ್ಸ್ ಎಂಬ ಮಣ್ಣುರಹಿತ ಕೃಷಿ ಶುರು ಮಾಡಿದರು‌. ಅದನ್ನೇ ಇನ್ನೂ ಒಂದು ಹೆಜ್ಜೆ ಮುಂದೆ ತೆಗೆದುಕೊಂಡು ಹೋಗಿ “ಬೆಳೆಸಿರಿ” ಎಂಬ ಕಂಪನಿ ಕಟ್ಟಿದರು. ಈ ಕಂಪನಿಯಿಂದ ನೀರಿನಲ್ಲಿ ತರಕಾರಿ ಬೆಳೆಯುವ ಅಭಿಯಾನವನ್ನು ಶುರು ಮಾಡಿ ಜನಗಳಿಗೆ ಹೈಡ್ರೋಪೋನಿಕ್ಸ್ ಕೃಷಿ ಕುರಿತು ತರಬೇತಿ ನೀಡತೊಡಗಿದರು. ಕೋವಿಡ್ ಸಮಯದಲ್ಲಿಯೂ ಸಹ ಆನ್ ಲೈನ್ ನಲ್ಲಿ ಹೈಡ್ರೋಪೋನಿಕ್ಸ್ ಕುರಿತ ತರಗತಿ ನಡೆಸಿ ಬೆಳೆಸಿರಿಯನ್ನು ಉಳಿಸಿಕೊಂಡರು.

ತಮ್ಮ ತಂದೆ ತಾಯಿಯನ್ನು ಅತೀವವಾಗಿ ಪ್ರೀತಿಸುವ ಇವರು ತಂದೆ ತಾಯಿಯ ಮಹತ್ವವನ್ನು ಸಾರುವ ಲೇಖನಗಳನ್ನು ಅನೇಕರಿಂದ ಬರೆಸಿ ಪುಸ್ತಕಗಳನ್ನು ಪ್ರಕಟಿಸಿ ಪ್ರಕಾಶನ ಲೋಕದಲ್ಲಿಯೂ ಕೊಂಚ ಕಾಲ ಅಡ್ಡಾಡಿದರು. ಇವರ ಈ ಎಲ್ಲಾ ಚಟುವಟಿಕೆಗಳನ್ನು ದೂರದಿಂದಲೇ ಗಮನಿಸುತ್ತಾ ಬಂದ ನಾನು ಗುರು ಅವರ ಕೃಷಿ ಕಾರ್ಯಗಳನ್ನು ಸಹ ಆಗಾಗ ಫೇಸ್ ಬುಕ್ ನಲ್ಲಿ ನೋಡುತ್ತಿದ್ದೆ. ಭತ್ತ ತೂರುತ್ತಿರುವ ಇವರ ಚಿತ್ರ ಈಗಲೂ ಕಣ್ಣ ಮುಂದೆಯೇ ಇದೆ. ಕೃಷಿ ಮಾಡುತ್ತಾ, ಬೆಳೆಸಿರಿ ಕಂಪನಿ ನಡೆಸುತ್ತಾ, ಈಗ ಬೆಳೆಸಿರಿ ರೈತ ಬಳಗ ಎಂಬ ಮತ್ತೊಂದು ಗುಂಪು ಮಾಡಿದ್ದಾರೆ. ಜೊತೆಗೆ ವಿಶೇಷವಾಗಿ ಹೈಡ್ರೋಪೋನಿಕ್ಸ್ ಗಾಗಿ ಬೆಳೆಸಿರಿ ಯೂಟ್ಯೂಬ್ ಚಾನೆಲ್ ಮಾಡಿದ್ದು ಆ ಚಾನಲ್ ನಲ್ಲಿ ಆ ಕೃಷಿಗೆ ಸಂಬಂಧಿಸಿದ ಅನೇಕ ವಿಡಿಯೋಗಳನ್ನು ಹಾಕಿದ್ದಾರೆ. ತಮ್ಮ ಬೆಳೆಸಿರಿ ರೈತ ಬಳಗಕ್ಕೂ ಯೂ ಟ್ಯೂಬ್ ಚಾನೆಲ್ ಮಾಡಿದ್ದು ಆ ಚಾನೆಲ್ ನಲ್ಲೂ ಹಲವು ಕೃಷಿಕರ ಸಂದರ್ಶನ ಮಾಡುವ ಉದ್ದೇಶ ಹೊಂದಿದ್ದಾರೆ. ಹಾಗೆಯೇ ತಮ್ಮ ನೆಚ್ಚಿನ ಹಾಸ್ಯ ಕ್ಷೇತ್ರವನ್ನು ಉಳಿಸಿಕೊಂಡಿದ್ದು ತಮ್ಮ ಮಗಳ ಜೊತೆ ಸೇರಿ ನಗೆಸಿರಿ ಎಂಬ ಶೀರ್ಷಿಕೆಯಲ್ಲಿ ನಗೆ ವಿಡಿಯೋ ಅಥವಾ ರೀಲ್ಸ್ ಮಾಡುತ್ತಾ ಅದಕ್ಕೂ ಸಹ ನಗೆಸಿರಿ ಎಂಬ ಯೂ ಟ್ಯೂಬ್ ಚಾನೆಲ್ ಮಾಡಿದ್ದಾರೆ. ಹೀಗೆ ಗುರು ಅವರ ಅನುಭವದ ಕ್ಷೇತ್ರ ದೊಡ್ಡದು.

ಬಹುಶಃ ನಲವತ್ತು ದಾಟಿದ ಮೇಲೆ ಬದುಕನ್ನು ಇನ್ನಷ್ಟು ಉತ್ಕಟವಾಗಿ ಬದುಕಬೇಕು ಅಂತ ಕೆಲವರಿಗೆ ಅನಿಸಿಬಿಡುತ್ತದೇನೋ! ಅಂತಹವರು ಬದುಕನು ಬದುಕುವ ರೀತಿ ಉಳಿದವರಿಗಿಂತ ಭಿನ್ನವಾಗಿರುತ್ತದೆ ವರ್ಣಮಯವಾಗಿರುತ್ತದೆ. ಆ ತರಹದ ಉತ್ಕಟವಾದ ಜೀವನಪ್ರೀತಿ ಉಳ್ಳ ವರ್ಣಮಯ ವ್ಯಕ್ತಿತ್ವದ ಗುರುಪ್ರಸಾದ್ ಅವರು ತಮ್ಮ ಕೃಷಿ ಅನುಭವಗಳನ್ನು ಒಟ್ಟುಗೂಡಿಸಿ “ಗ್ರಾಮ ಡ್ರಾಮಾಯಣ” ಎಂಬ ಪುಸ್ತಕವನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಈ ಪುಸ್ತಕದಲ್ಲಿರುವ ಅಷ್ಟೂ ಲೇಖನಗಳು ಕೆಂಡಸಂಪಿಗೆ ಅಂತರ್ಜಾಲ ತಾಣದಲ್ಲಿ ಈಗಾಗಲೆ ಪ್ರಕಟವಾಗಿ ಓದುಗರಿಂದ ಪ್ರಶಂಸೆಗೆ ಒಳಗಾಗಿವೆ. ಕೆಂಡಸಂಪಿಗೆಯ ಉಪ ಸಂಪಾದಕಿ ಹಾಗು ಕನ್ನಡದ ಒಬ್ಬ ಪ್ರತಿಭಾವಂತ ಕಲೆಗಾರ್ತಿ ರೂಪಶ್ರೀ ಕಲ್ಲಿಗನೂರು ಈ ಪುಸ್ತಕಕ್ಕೆ ಒಳ್ಳೆಯ ರಕ್ಷಾಪುಟ ಮಾಡಿದ್ದಾರೆ‌. ಅವರ ಸಹೋದರಿ ಶಿಲ್ಪಶ್ರೀ ಕಲ್ಲಿಗನೂರು ಈ ಪುಸ್ತಕದ ಒಳಪುಟ ವಿನ್ಯಾಸ ಮಾಡಿದ್ದಾರೆ. ತಮ್ಮ ಪರಿಶ ಮಾಧ್ಯಮದ ಮೂಲಕ ಈ ಪುಸ್ತಕ ಪ್ರಕಟಿಸಿರುವ ಗುರು ಅವರು ಬೆಂಗಳೂರಿನ ವೆಂಕಿ ಬುಕ್ ಪ್ರಿಂಟರ್ಸ್ ನಲ್ಲಿ ಈ ಪುಸ್ತಕವನ್ನು ಮುದ್ರಿಸಿದ್ದಾರೆ.

ಗ್ರಾಮ ಡ್ರಾಮಾಯಣ ನೂರಾನಲವತ್ತು ಪುಟಗಳ ಪುಸ್ತಕವಾಗಿದ್ದು ಮೂವತ್ತಮೂರು ಲೇಖನಗಳು ಈ ಪುಸ್ತಕದಲ್ಲಿವೆ. ಬೆಂಗಳೂರಿನಲ್ಲಿರುವ ಒಬ್ಬ ಟೆಕಿ ಸಿರಸಿ ಬಳಿಯ ಒಂದು ಹಳ್ಳಿಯಲ್ಲಿ ಭೂಮಿಯನ್ನು ಕೊಂಡು ಜಪಾನಿನ ಪುಕವೋಕ, ಚಿಕ್ಕಬಳ್ಳಾಪುರದ ಡಾ. ಎಲ್. ನಾರಾಯಣರೆಡ್ಡಿ, ಕನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹಾಗು ಮಹಾರಾಷ್ಟ್ರದ ಸುಭಾಸ್ ಪಾಲೇಕರ್ ಅವರಿಂದ ಸ್ಫೂರ್ತಿ ಪಡೆದು ಕೃಷಿಯಲ್ಲಿ ನಿರತರಾಗಿ ಅವರ ಕೃಷಿಯ ಮೊದಲ ಅನುಭವಗಳನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಸಾಮಾನ್ಯವಾಗಿ ನೈಸರ್ಗಿಕ ಕೃಷಿ, ಸಾವಯವ ಕೃಷಿ ಎನ್ನುವ ಕನ್ನಡದ ಕೆಲವು ಪುಸ್ತಕಗಳನ್ನು ಕೈಗೆತ್ತಿಕೊಂಡರೆ ಸಿಕ್ಕಾಪಟ್ಟೆ ಥಿಯರಿಗಳಿರುತ್ತವೆ. ಪ್ರಾಕ್ಟಿಕಲ್ ವಿಷಯಗಳು ತುಂಬ ಕಡಿಮೆ ಇರುತ್ತವೆ. ಹಾಗೆಯೇ ಆ ಪುಸ್ತಕಗಳು ಹೆಚ್ಚಾಗಿ ತೋಟದ ಬೆಳೆಗಳಿಗೆ ಸೀಮಿತವಾಗಿರುತ್ತವೆ. ತೋಟಗಾರಿಕೆ ಬೆಳೆಗಳಲ್ಲದೆ ದವಸ ಧಾನ್ಯಗಳನ್ನು ಬೆಳೆಯುವ ಕೃಷಿಕರಿಗೆ ಕೈಪಿಡಿಯಾಗಬೇಕಾದ ಪುಸ್ತಕಗಳು ಬಹಳ ಅಪರೂಪವಾಗಿವೆ. ಅಂತಹ ಅಪರೂಪದ ಗುಂಪಿಗೆ ಸೇರಿಸಬಹುದಾದ ಪುಸ್ತಕ ಗುರು ಅವರ ಗ್ರಾಮ ಡ್ರಾಮಾಯಣ.

ಈ ಪುಸ್ತಕದಲ್ಲಿ ಗುರು ಅವರು ತುಂಬಾ ಸಾಮಾನ್ಯ ಎನಿಸುವ ವಿಷಯಗಳನ್ನು ದಾಖಲಿಸುತ್ತಾ ಹೋದರೂ ಹೊಸದಾಗಿ ಕೃಷಿ ಮಾಡುವವರಿಗೆ ಈ ಪುಸ್ತಕ ಅನೇಕ ಹೊಳಹುಗಳನ್ನು ನೀಡಬಲ್ಲದು. ಆ ಹೊಳಹುಗಳು ಪುಸ್ತಕದಲ್ಲಿ ಬಿಡಿ ಲೇಖನಗಳ ರೀತಿ ಕಂಡರೂ ಒಟ್ಟಾಗಿ ನೋಡಿದಾಗ ಕೃಷಿ ಸಂಬಂಧಿತ ಅನೇಕ ಥೀಮ್ ಗಳನ್ನು ನಾವು ಇಲ್ಲಿ ಗಮನಿಸಬಹುದು.

ಕೃಷಿ‌ ಮತ್ತು ಸ್ಟಾರ್ಟ್ ಅಪ್

ನನ್ನ ಪ್ರಕಾರ ಗುರು ಅವರ ಕೃಷಿ ಒಂದು ಸ್ಟಾರ್ಟ್ ಅಪ್ ಮಾಡೆಲ್ ಇದ್ದ ಹಾಗೆ ಅನ್ನಬಹುದು. ಮೊದಲಿಗೆ ಒಂದಷ್ಟು ಐಡಿಯಾವನ್ನು ಕನಸು ಕಂಡು ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನ ಮಾಡುತ್ತಾರೆ. ಅದಕ್ಕೆ ಕಾರ್ಯಕ್ಷೇತ್ರವನ್ನಾಗಿ ಸಿರಸಿಯ ಬಳಿಯ ಬೆಳ್ಳನ ಕೇರಿಯ ಬಳಿ ಜಮೀನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಆ ಕಾರ್ಯಕ್ಷೇತ್ರದಲ್ಲಿ ನೈಸರ್ಗಿಕ ಕೃಷಿ (natural farming) ಮಾಡಬೇಕೆನ್ನುವುದು ಲೇಖಕರ ಆಸೆ. ಆ ಆಸೆಗೆ ನೀರೆರೆಯಲು ಒಂದು ಪೂರಕವಾದ ವ್ಯವಸ್ಥೆಯನ್ನು ಕಟ್ಟಿಕೊಂಡು ಅದಕ್ಕೆ ಹೊಂದುವ ವ್ತಕ್ತಿಗಳನ್ನು ಜೊತೆ ಕರೆದುಕೊಳ್ಳುತ್ತಾರೆ. ಅದಕ್ಕೆ ತಕ್ಕನಾದ ಪರಿಸರ ವ್ಯವಸ್ಥೆ (ecosystem) ತನ್ನಿಂದ ತಾನೆ ರೂಪುಗೊಳ್ಳುತ್ತಾ ಹೋಗುತ್ತದೆ. ಗುರು ಅವರ ಈ ಪರಿಸರ ವ್ಯವಸ್ಥೆಯಲ್ಲಿ ಸಿರಸಿ ಅಕ್ಕಪಕ್ಕದ ಊರುಗಳಾದ ಬಿಸಿಲಕೊಪ್ಪ, ಬೆಳ್ಳನ ಕೇರಿ ಹೊಸಕೊಪ್ಪ. ದಾಸನಕೊಪ್ಪಗಳು ಮುಖ್ಯವಾಗಿ ಸೇರಿವೆ.

ಕೃಷಿ ಮತ್ತು ಸಹಕಾರ

ಕೃಷಿಗೆ ಇಳಿಯುವುದೇ ಒಂದು ದೊಡ್ಡ ಸಾಹಸದ ಕೆಲಸವಾದ ಕಾರಣ ಕೃಷಿಯಲ್ಲಿ ತೊಡಗಲು ಅನೇಕರ ಸಹಕಾರ ಅಗತ್ಯವಾಗುತ್ತದೆ. ಗುರು ಅವರಿಗೆ ಆ ರೀತಿ ಬೆನ್ನೆಲುಬಾಗಿ ನಿಂತು ಸಹಕಾರ ನೀಡುವ ನೀಡುತ್ತಿರುವ ಒಂದು ದೊಡ್ಡ ಬಳಗವೇ ಇದೆ. ಮುಖ್ಯವಾಗಿ ಅವರ ಮಡದಿ ಆಶಾ, ಅವರ ಶಿಷ್ಯಂದಿರು, ಸಿರಸಿಯಲ್ಲಿ ಪರಿಚಯವಾಗುವ ಅನೇಕರು, ಹಾಗು ಅಲ್ಲಿನ ಕೆಲಸದವರು ಹೀಗೆ ಯಾರೇ ಗುರು ಅವರ ಕೃಷಿ ಕಾರ್ಯದಲ್ಲಿ ಜೊತೆ ನಿಂತಿದ್ದರೂ ಈ ಪುಸ್ತಕದಲ್ಲಿ ಅವರ ಪ್ರಾಮುಖ್ಯತೆಯನ್ನು ದಾಖಲಿಸುತ್ತಾ ಹೋಗುವುದಲ್ಲದೆ ಅವರಿಗೆ ಅಭಾರಿಯಾಗಿರುತ್ತಾರೆ. ಆ ದಾಖಲಿಸುವ ಪ್ರಕ್ರಿಯೆಯಲ್ಲಿ ತಮ್ಮ ಕಾರ್ಯಸ್ಥಾನದ ಊರು, ಅಲ್ಲಿನ ಪರಿಸರ, ಅಲ್ಲಿನ ಕೃಷಿ, ಅಲ್ಲಿನ ಜನಜೀವನ ಹೀಗೆ ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಾರೆ. ಕೃಷಿಗೆ ಬರೀ ಜನಗಳೇ ಅಲ್ಲ, ಪ್ರಕೃತಿ, ಹವಾಮಾನ, ಭೂಮಿ, ಮಳೆ, ಸರಕಾರ ಹೀಗೆ ಎಲ್ಲದರ ಸಹಕಾರದ ಅಗತ್ಯತೆಗಳನ್ನು ಇವರ ಲೇಖನಗಳು ಒತ್ತಿ ಹೇಳುತ್ತವೆ.

ಕೃಷಿ ಮತ್ತು ಅಡಚಣೆಗಳು

ಕೃಷಿಗೆ ಇಳಿದ ಮೇಲೆ ಎದುರಾಗುವ ಅಡಚಣೆಗಳು ಒಂದೆರಡಾಗಿರುವುದಿಲ್ಲ. ಪಕ್ಕದ ಜಮೀನಿನವರ ಕಿರಿಕಿರಿಯಿಂದ ಹಿಡಿದು ಪ್ರಕೃತಿಯ ಮುನಿಸಿನವರೆಗೂ ಅಡಚಣೆಗಳ ಸರಮಾಲೆಗಳೇ ಎದುರಾಗಿಬಿಡುತ್ತದೆ. ಅವೆಲ್ಲವುಗಳಿಂದಲೂ ಹೇಗೆ ಯುಕ್ತಿಯಿಂದ ಪಾರಾಗಬಹುದು‌ ಎನ್ನುವುದನ್ನು ತುಂಬಾ ಅಚ್ಚುಕಟ್ಟಾಗಿ ಬಿಡಿ ಬಿಡಿ‌ ಲೇಖನಗಳಲ್ಲಿ ಇವರು ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯುವುದು, ಸರಕಾರದ ಸ್ಕೀಮ್ ಗಳನ್ನು ರೈತರು ಪಡೆಯಬಹುದಾದ ಸಾಧ್ಯತೆಗಳನ್ನು ಸಹ ಗುರು ಅವರು ತಮ್ಮ ಪುಸ್ತಕದಲ್ಲಿ ತಿಳಿಸಿಕೊಟ್ಟಿದ್ದಾರೆ.

ಕೃಷಿ‌ ಮತ್ತು ಖುಷಿ

ಕೃಷಿ ಒಂದು ನಿಧಾನಗತಿಯಲ್ಲಿ ಸಾಗುವ ಜೀವನ ಕ್ರಮ‌. ಅನೇಕರು ಕೃಷಿ ಜಮೀನು ಕೊಂಡು ಅದೇ ಜಮೀನನ್ನು ಬೇರೆಯವರಿಗೆ ಮಾರಿ ಲಾಭ ಮಾಡಿಕೊಂಡರೆ ಅದೇ ಖುಷಿ ಎಂದು ನಂಬಿದ್ದಾರೆ. ಕೃಷಿ ಎಂದರೆ ಉಳುಮೆ, ಬಿತ್ತನೆ, ಬೆಳೆಗಳ ನಿರ್ವಹಣೆ, ಕಟಾವು, ಸಂಗ್ರಹಣೆ ಹೀಗೆ ಅನೇಕ ಹಂತಗಳನ್ನು ಒಳಗೊಂಡ ಪ್ರಕ್ರಿಯೆ‌. ಆ ಪ್ರಕ್ರಿಯೆಯಲ್ಲಿ ವಿಷಮುಕ್ತ ರಾಸಾಯನಿಕಮುಕ್ತ ಬೆಳೆಗಳನ್ನು ಬೆಳೆಯುವುದು ಇಂದಿನ ದಿನಗಳ ಬಹಳ ಅಗತ್ಯವಾದ ಕೃಷಿ ಕ್ರಮವಾಗಿದೆ. ಅದನ್ನು ಕೆಲವೇ ಜನರು ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸುತ್ತಿದ್ದಾರೆ. ಜೊತೆಗೆ ಆ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ದವಸಧಾನ್ಯಗಳ ರೂಪದಲ್ಲಿ ಖುಷಿಯ ರೂಪದಲ್ಲಿ, ಅನುಭವಗಳ ರೂಪದಲ್ಲಿ ಪಡೆಯುತ್ತಿದ್ದಾರೆ. ಅಂತಹವರಲ್ಲಿ ಗುರುಪ್ರಸಾದ್ ಅವರೂ ಕೂಡ ಒಬ್ಬರು ಎನ್ನಬಹುದು.

ಕೃಷಿ ಮತ್ತು ಉತ್ಪನ್ನಗಳ ಮಾರಾಟ

ಮೊದಲೇ ಹೇಳಿದ ಹಾಗೆ ಗುರು ಅವರದು ಸ್ಟಾರ್ಟ್ ಅಪ್ ಆಗಿರಲೂಬಹುದಾದುರಿಂದ ಬೆಳೆಯ ಉತ್ಪನ್ನಗಳಿಗೆ ಹೇಗೆ ಮಾರುಕಟ್ಟೆಯನ್ನು ಕಂಡುಕೊಳ್ಳಬಹುದು ಎನ್ನುವುದನ್ನು ಸಾಮಾಜಿಕ ಜಾಣತಾಣದ ಸಣ್ಣ ಉದಾಹರಣೆ ಹೇಳಿ ಈ ಪುಸ್ತಕದಲ್ಲಿ ಒಂದು ಪುಟ್ಟ ಐಡಿಯಾ ನೀಡಿದ್ದಾರೆ. ಜೊತೆಗೆ ಹೇಗೆ ಪಾಲುದಾರಿಕೆಯ ರೂಪದಲ್ಲಿ ಕೃಷಿಯನ್ನು ಮಾಡಬಹುದು ಎನ್ನುವುದನ್ನು ತಮ್ಮ ಶಿಷ್ಯ ನಾಗಣ್ಣ ಅವರನ್ನೇ ಒಂದು ದೊಡ್ಡ ಉದಾಹರಣೆ ನೀಡಿ ಇಡೀ ಪುಸ್ತಕದುದ್ದಕ್ಕೂ ಆ ವ್ಯಕ್ತಿಯನ್ನೇ ಒಂದು ಪಾತ್ರವನ್ನಾಗಿಸಿದ್ದಾರೆ. ಜೊತೆಗೆ ಅನೇಕ ಮಾರ್ಗದರ್ಶಕರು, ಸಹಾಯಹಸ್ತ ನೀಡುವವರು ಸಹ ಈ ಪುಸ್ತಕದಲ್ಲಿ ನಮಗೆ ನೋಡಲು ಸಿಗುತ್ತಾರೆ. ಪುಸ್ತಕವನ್ನು ಓದುತ್ತಾ ಹೋದಂತೆ ಕೃಷಿಯ ಅನೇಕ ತಂತ್ರಗಾರಿಕೆಗಳು ನಮಗೆ ಗೋಚರಿಸುತ್ತಾ ಹೋಗುತ್ತವೆ.

ಒಟ್ಟಿನಲ್ಲಿ ಸಾಫ್ಟ್ ವೇರ್ ಕಂಪನಿಯಲ್ಲಿ ತಂತ್ರಾಂಶಗಳ ನಿರ್ವಹಿಸುತ್ತಿದ್ದ ಒಬ್ಬ ಟೆಕಿ ಗ್ರಾಮ ಡ್ರಾಮಾಯಣದ ಮೂಲಕ ತಮ್ಮ ಕೃಷಿ ಪಯಣದ ಮೊದಲ ದಿನಗಳನ್ನು ಹೀಗೆ ಪುಸ್ತಕ ರೂಪದಲ್ಲಿ ಪ್ರಕಟಿಸಿರುವುದು ಒಂದು ಸ್ವಾಗತಾರ್ಹ ಬೆಳವಣಿಗೆ. ಯಾರಿಗೆ ಗೊತ್ತು ಮುಂದೊಂದು ದಿನ ಈ ಪುಸ್ತಕದ ಲೇಖನಗಳೋ ಇಲ್ಲ ಇಡೀ ಪುಸ್ತಕವೇ ವಿದ್ಯಾರ್ಥಿಗಳ ಪಠ್ಯಪುಸ್ತಕದಲ್ಲಿ ಸ್ಥಾನ ಪಡೆದರೂ ಪಡೆಯಬಹುದು. ಅಷ್ಟೊಂದು ಸರಳ ಸುಲಲಿತ ನಿರೂಪಣಾ ಶೈಲಿ ಗುರು ಅವರದು. ಕೃಷಿಯನ್ನು ಶುರು ಮಾಡುವ ಅನೇಕರಿಗೆ ಈ ಪುಸ್ತಕ ಒಂದು ಉಪಯುಕ್ತ ಪುಸ್ತಕ ಆಗುತ್ತದೆ ಎನ್ನಬಹುದು. ಈ ಪುಸ್ತಕಕ್ಕೆ ಯಾರದಾದರೂ ಮುನ್ನುಡಿ ಬೆನ್ನುಡಿ ಇದ್ದಿದ್ದರೆ ಇನ್ನೂ ಚೆನ್ನಾಗಿ ಇರುತ್ತಿತ್ತು. ಇರಲಿ. ಕೃಷಿ ಮಾಡಿ ಲಕ್ಷ ಲಕ್ಷ ಸಂಪಾದನೆ ಮಾಡಿ ಅನ್ನೋ ಯಾವ ಪೊಳ್ಳು ಮಾತುಗಳಿಲ್ಲದ ಸರಳ ಕೃಷಿಯ ಈ ಪುಸ್ತಕವನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದಕ್ಕಾಗಿ ಗುರು ಅವರಿಗೆ ಅಭಿನಂದನೆಗಳು. ಕೃಷಿ ಅನ್ನೋದು ಒಂದು ಯೋಗ. ಸ್ವಾಭಾವಿಕ ಕೃಷಿ ಅನ್ನೋದು ಒಂದು ಹಠಯೋಗ. ಎಲ್ಲರಿಗೂ ಕೃಷಿ ಮತ್ತು ಸ್ವಾಭಾವಿಕ ಕೃಷಿ ಎರಡೂ ಒಲಿಯುವುದಿಲ್ಲ. ಒಲಿಸಿಕೊಂಡವರಿಗೆ ಎಲ್ಲವೂ ಗೆಲುವೇ. ಗುರು ಅವರು ಆ ಗೆಲುವಿನ ಹಾದಿಯಲ್ಲಿ ಹೆಜ್ಜೆ ಇಟ್ಟಿದ್ದಾರೆ. ಅವರ ಗೆಲುವು ಇತರರಿಗೆ ಸ್ಫೂರ್ತಿಯಾಗಲಿ…

-ಡಾ ನಟರಾಜು ಎಸ್ ಎಂ


.

ಕೃತಿ: ಗ್ರಾಮ ಡ್ರಾಮಾಯಣ
ಪ್ರಕಾರ: ಅನುಭವ ಕಥನ
ಬೆಲೆ: ರೂ.180/-
ಪ್ರಕಾಶಕರು: ಪರಿಶ ಮಾಧ್ಯಮ, ಬೆಂಗಳೂರು
ಪ್ರತಿಗಳಿಗಾಗಿ ಸಂಪರ್ಕಿಸಿ: 9980562045


ಕನ್ನಡದ ಬರಹಗಳನ್ನು ಹಂಚಿ ಹರಡಿ
3.7 3 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಸುರೇಶ್ ಮಹರ್ಷಿ
ಸುರೇಶ್ ಮಹರ್ಷಿ
16 days ago

ನಿಜವಾಗಿಯೂ ತಿಳಿದು ಬರೆದಿರುವ ಪರಿಚಯ. ನಮಗೆಲ್ಲರಿಗೂ ಇಷ್ಟು ಗೊತ್ತಿರಲಿಲ್ಲ.ಈ ಪುಸ್ತಕ ಮಾತ್ರ ಚೆನ್ನಾಗಿದೆ.ಮತ್ತು ಸತ್ಯವಾಗಿದೆ.

ಗುರುಪ್ರಸಾದ ಕುರ್ತಕೋಟಿ

ತುಂಬಾ ಧನ್ಯವಾದಗಳು ಸುರೇಶ ಮಹರ್ಷಿ ಸರ್! ಇಷ್ಟೊಂದು ಪ್ರೀತಿ ಅಭಿಮಾನದಿಂದ ಬರೆದ ಗೆಳೆಯ ಡಾ.ನಟರಾಜು ಅವರಿಗೆ ನಾನು ಋಣಿ! 🙂🙏🏻

2
0
Would love your thoughts, please comment.x
()
x