” ಕ್ರಿಕೆಟ್ ನೋಡಿದ್ದು ಸಾಕು . ಪಾಠ ಓದು ಹೋಗು , ಅಂತ ಹೇಳಿ ಅವನ ಕೈ ಯಲ್ಲಿದ್ದ ಟಿವಿ ರಿಮೋಟ್ ಕಿತ್ತುಕೊಂಡೆ ಸಾರ್ .. ಕೋಪ ಮಾಡಿಕೊಂಡು ರೂಮ್ ಒಳಗೆ ಹೋಗಿ ಬಾಗಿಲು ಹಾಕಿಕೊಂಡೋನು ಮತ್ತೆ ಈಚೆ ಬರಲೇ ಇಲ್ಲ ಸಾರ್ .. ಅಪ್ಪ ಅಮ್ಮ ಆಗಿ ನಮಗೆ ಅಷ್ಟು ಅಧಿಕಾರ ಇಲ್ವಾ ಸಾರ್ ? ಆತ್ಮಹತ್ಯೆ ಮಾಡಿಕೊಳ್ಳೋ ಪರಿಸ್ಥಿತಿ ಏನಿತ್ತು ನೀವೇ ಹೇಳಿ ಸಾರ್ ? ಮಕ್ಕಳನ್ನ ಹೇಗೆ ಅರ್ಥ ಮಾಡಿಕೊಳ್ಳೋದು ? ?”
ಆಪ್ತಸಮಾಲೋಚನೆಗೆ ಬಂದಿದ್ದ ಪೋಷಕರ ಪ್ರಶ್ನೆಗೆ ಉತ್ತರ ಹೇಳೋದು ಕಷ್ಟ ಎನಿಸಿತ್ತು , ನಮ್ಮ ಮಕ್ಕಳು ಯಾಕೆ ಹೀಗೆ ಮಾಡ್ತಿದಾರೆ ? ಮೊಬೈಲ್ ಕೊಡಲಿಲ್ಲ ಅಂದದಕ್ಕ್ ಬಾವಿಗೆ ಬಿದ್ದ ಬಾಲಕಿ, ಶಾಲೆಯಲ್ಲಿ ಬೈದರು ಅಂತ ಕೈ ಕುಯಿದು ಕೊಂಡು ಜೀವ ಬಿಟ್ಟ ಬಾಲಕ, ಫೇಲ್ ಆಗಿಬಿಡ್ತೀನಿ ಅಂತ ಶಾಲೆಯ ಆರನೇ ಮಹಡಿಯಿಂದ ಹಾರಿದ ಬಾಲಕ, ಪಟ್ಟಿ ಹೀಗೆ ಬೆಳೆಯುತ್ತಾ ಹೋಗುತ್ತದೆ, ಮಕ್ಕಳಲ್ಲಿ ಆತ್ಮಸ್ಥೈರ್ಯ ಬೆಳೆಸುವ ಶಿಕ್ಷಣ ನಮ್ಮಲ್ಲಿ ಇಲ್ಲವೇ ? ಮಕ್ಕಳನ್ನು ಸೂಕ್ಶ್ಮ ಮಾಡಿಬಿಡುತ್ತಿದ್ದೇವೆಯೇ ? ಹೀಗೇ ಉತ್ತರ ಸಿಗದ ಪ್ರಶ್ನೆಗಳು ಮೇಲಿಂದ ಮೇಲೆ ಕಾಡುತ್ತದೆ.
ಮಕ್ಕಳಲ್ಲಿನ ಆತ್ಮಹತ್ಯೆ ಮನೋಭಾವವನ್ನು ತಡೆದು ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಸಲುವಾಗಿ ನಮ್ಮ ಸಂಸ್ಥೆ ಚೈಲ್ಡ್ ರೈಟ್ಸ್ ಟ್ರಸ್ಟ್ ಮೂಲಕ 2012 ರಲ್ಲಿ ‘ಪುನರ್ವಸತಿ ಮತ್ತು ಆತ್ಮಹತ್ಯಾ ವಿರೋಧಿ ವೇದಿಕೆ (RASF)’ ಪ್ರಾಂಭಿಸಿದೆವು, ಗೆಳತಿಯೊಬ್ಬಳ ಸಾವು ನಮ್ಮನ್ನು ಈ ಕಾರ್ಯಕ್ಕೆ ಪ್ರೇರೇಪಿಸಿತ್ತು. ಪತ್ರಿಕೆಯ ಸುದ್ದಿಗಳು, ಶಾಲೆಗಳಿಂದ ಪಡೆದ ಮಾಹಿತಿಯ ಪ್ರಕಾರ ಆಗಲೇ ಅಂದರೆ 2012- 13 ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ಸುಮಾರು 92 ಮಕ್ಕಳು ಆತ್ಮಹತ್ಯೆಗೆ ಪ್ರಯತ್ನಿಸಿದ್ದು ತಿಳಿದು ಬಂತು, ಅದಲ್ಲದೆ ಒಂಬತ್ತು ಮಕ್ಕಳು ಅಸುನೀಗಿದ್ದರು. ಮಕ್ಕಳು ಯಾಕೆ ಆತ್ಮಹತ್ಯೆ ಪ್ರಯತ್ನಿಸುತ್ತಿದ್ದಾರೆ ಎಂದು ಮಾಹಿತಿ ಕಲೆಹಾಕಲು ಪ್ರಾರಂಭಿಸಿದಾಗ ಕಂಡು ಬಂದ ಕಾರಣಗಳು ವಿಭಿನ್ನವಾಗಿದ್ದವು ಶಾಲೆಯಲ್ಲಿ ದೈಹಿಕ ಶಿಕ್ಷೆ, ಸರಿ ಇರದ ಪೋಷಕತ್ವ, ಪರೀಕ್ಷಾ ಭಯ, ಪ್ರೇಮ ವೈಫಲ್ಯ ಹೀಗೆ ಹಲವು…
ಮಕ್ಕಳ ಆತ್ಮಹತ್ಯೆ ಕುರಿತು ನಾವೆಲ್ಲರೂ ಒಟ್ಟಾಗಿ ಕಾಳಜಿ ವಹಿಸಬೇಕಿದೆ ಮತ್ತು ಈ ಸಮಸ್ಯೆಯನ್ನು ಸಾಮೂಹಿಕವಾಗಿ ಪರಿಹರಿಸುವುದು ಅತ್ಯಗತ್ಯ. ಪೋಷಕರು, ಸಮುದಾಯದ ಸದಸ್ಯರು, ಸರ್ಕಾರ ಮತ್ತು ಶಾಲೆಗಳು ಯುವಜನರ ಮಾನಸಿಕ ಸ್ವಾಸ್ಥ್ಯವನ್ನು ಬೆಳೆಸುವ ಪೂರಕ ವಾತಾವರಣವನ್ನು ಸೃಷ್ಟಿಸಲು ಒಟ್ಟಾಗಿ ಕೆಲಸ ಮಾಡಬೇಕು.
ಶಾಲೆಯ ಪಠ್ಯದಲ್ಲಿ ಮಕ್ಕಳಿಗೆ ಆತ್ಮಸ್ಥೈರ್ಯ ಹೆಚ್ಚಿಸುವ ವಿಚಾರಗಳನ್ನು ಸೇರಿಸುವುದು ಅತ್ಯಗತ್ಯ. ಮಕ್ಕಳ ಜೀವನ ಕೌಶಲ್ಯಗಳನ್ನು ಹೆಚ್ಚಿಸುವ ಚಟುವಟಿಕೆಗಳು ಶಾಲೆಗಳಲ್ಲಿ ನಡೆಯುವುದು ವಿರಳವಾಗಿದೆ. ಮಕ್ಕಳಲ್ಲಿ ನಾಯಕತ್ವದ ಗುಣಗಳನ್ನು ಹೆಚ್ಚಿಸ ಬೇಕಿದೆ, ನಿರ್ಧಾರ ತೆಗೆದು ಕೊಳ್ಳುವ ಗುಣವನ್ನು ತುಂಬಬೇಕಿದೆ, ವಿಫಲತೆಗಳನ್ನು ಎದುರಿಸುವ ಮನೋಭಾವವನ್ನು ಬೆಳೆಸ ಬೇಕಿದೆ. ಶಾಲೆಯ ಶಿಕ್ಷಣ ದಿಂದ ಮಾತ್ರ ಇದು ಸಾಧ್ಯವೇ ? ಇಲ್ಲಾ ಇಲ್ಲಿ ಪೋಷಕರ ಹೊಣೆ ಹಾಗೂ ಸಮುದಾಯದ ಜವಾಬ್ದಾರಿ ಸಹ ಇದೆ
ಮಕ್ಕಳು ನಮ್ಮ ಅಸ್ತಿ, ನಾವು ಹೇಳಿದಂತೆ ಅವರು ಕೇಳಬೇಕು ಎನ್ನುವ ಮನೋಭಾವವನ್ನು ಪೋಷಕರು ಬದಲಿಸಿಕೊಳ್ಳಬೇಕು. 2013ರ ರಾಷ್ಟ್ರೀಯ ಮಕ್ಕಳ ನೀತಿ ತಿಳಿಸುವಂತೆ ಮಕ್ಕಳು ದೇಶದ ಸಂಪನ್ಮೂಲ, ನಮ್ಮ ಮಗಳು ಅಥವಾ ಮಗ ಉತ್ತಮವಾಗಿ, ಸ್ನೇಹಮಯಿ ವಾತಾವರಣದಲ್ಲಿ ಬೆಳೆದರೆ ದೇಶದ ಪ್ರಗತಿಯಾಗುತ್ತದೆ. ಮಕ್ಕಳಿಗೆ ಮುಕ್ತವಾತಾವರಣ ಹಾಗೂ ಮಾರ್ಗದರ್ಶನದ ಅಗತ್ಯ ಇದೆ.
ಪೋಷಕರ ಜವಾಬ್ದಾರಿಗಳು:
- ಭಾವನಾತ್ಮಕ ಬೆಂಬಲ ಮತ್ತು ಮುಕ್ತ ವಾತಾವರಣ ಮನೆಯಲ್ಲಿ ನಿರ್ಮಿಸ ಬೇಕು.
- ಮಕ್ಕಳಲ್ಲಿ ಧನಾತ್ಮಕ ಚಿಂತನೆ ಬೆಳೆಯಲು ಸಹಕರಿಸಬೇಕು.
- ಅತಿಯಾದ ಒತ್ತಡವನ್ನು ಮಾಡದೇ ಮಕ್ಕಳ ಮಾತು ಕೇಳಬೇಕು
- ಮಕ್ಕಳಲ್ಲಿ ಆಗುವ ಬದಲಾವಣೆಗಳನ್ನು, ವರ್ತನೆಗಳನ್ನು ಗಮನಿಸುತ್ತಿರಬೇಕು
ಸಮುದಾಯ ಹೊಣೆ:
- ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸ ಬೇಕು
- ಮಕ್ಕಳಿಗೆ ಬೆಂಬಲ ಮತ್ತು ಬೆಳವಣಿಗೆಗೆ ಪೂರಕ ಸಂಪನ್ಮೂಲಗಳನ್ನು ನೀಡಬೇಕು
- ಮಾನಸಿಕ ಅಸ್ವಸ್ಥತೆಯ ಬಗ್ಗೆ ಹಾಸ್ಯ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸ ಬೇಕು.
- ಸಮುದಾಯ ಆಧಾರಿತ ಕಾರ್ಯಕ್ರಮ ಹೆಚ್ಚಿಸ ಬೇಕು.
ಸರ್ಕಾರದ ಪಾತ್ರ:
- ಪರಿಣಾಮಕಾರಿ ಮಾನಸಿಕ ಆರೋಗ್ಯ ನಿಯಮಗಳನ್ನು ಅಭಿವೃದ್ಧಿಪಡಿಸಿ ಮತ್ತು ಜಾರಿ ಮಾಡಬೇಕು.
- ಮಕ್ಕಳ ಮಾನಸಿಕ ಆರೋಗ್ಯ ಸೇವೆಗಳಿಗೆ ಆಯವ್ಯಯದಲ್ಲಿ ಹಣ ಹೆಚ್ಚಿಸ ಬೇಕು
- ಮಕ್ಕಳ ವರ್ತನೆ ಗಮನಿಸಲು ಶಿಕ್ಷಕರು ತರಬೇತಿ ನೀಡಬೇಕು / ಶಾಲೆಗಳಿಗೆ ಆಪ್ತಸಮಾಲೋಚಕರನ್ನು ನಿಯಮಿಸ ಬೇಕು.
- ಸಮಾಲೋಚನೆ ಮತ್ತು ಸಹಾಯವಾಣಿಗಳ ಬಗ್ಗೆ ಮೇಲ್ವಿಚಾರಣೆ ಮಾಡುವುದನ್ನು ಕಡ್ಡಾಯ ಗೊಳಿಸಬೇಕು.
ಶಾಲೆಗಳ ಕರ್ತವ್ಯ:
- ಸುರಕ್ಷಿತ, ಮುಕ್ತ ವಾತಾವರಣವನ್ನು ಶಾಲೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು.
- ಮಾನಸಿಕ ಆರೋಗ್ಯ ವಿಚಾರವನ್ನು ಪಠ್ಯಕ್ರಮದಲ್ಲಿ ಸೇರಿಸಿಕೊಳ್ಳ ಬೇಕು
- ವಿದ್ಯಾರ್ಥಿಗಳ ಅಗತ್ಯಗಳನ್ನು ಗುರುತಿಸಲು ಮತ್ತು ಪ್ರತಿಕ್ರಿಯಿಸಲು ಸಿಬ್ಬಂದಿಗೆ ತರಬೇತಿ ನೀಡಬೇಕು.
- ಧನಾತ್ಮಕತೆಯನ್ನು ಪ್ರೋತ್ಸಾಹಿಸುವ ವಿದ್ಯಾರ್ಥಿ-ನೇತೃತ್ವದ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು.
ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಮಾರ್ಗಸೂಚಿ
- ಪರಿಚ್ಛೇದ 6: ಮಕ್ಕಳ ಜೀವಿಸುವ ಹಕ್ಕು ಮತ್ತು ಅಭಿವೃದ್ಧಿ ಹಕ್ಕನ್ನು ಖಚಿತಪಡಿಸಿ ಕೊಳ್ಳಬೇಕು
- ಪರಿಚ್ಛೇದ24: ಮಾನಸಿಕ ಆರೋಗ್ಯ ಸೇರಿದಂತೆ ಆರೋಗ್ಯ ರಕ್ಷಣೆಗೆ ಸೂಕ್ತ ಅವಕಾಶ ಒದಗಿಸಿ
- ಪರಿಚ್ಛೇದ 28: ಮಕ್ಕಳನ್ನು ದೈಹಿಕ ಮತ್ತು ಮಾನಸಿಕ ಹಿಂಸೆಯಿಂದ ರಕ್ಷಿಸಿ
- ಪರಿಚ್ಛೇದ31: ಆಟ, ವಿಶ್ರಾಂತಿ ಮತ್ತು ವಿರಾಮದ ಮಕ್ಕಳ ಹಕ್ಕುಗಳನ್ನು ಗೌರವಿಸಿ
ಮೇಲಿನ ವಿಚಾರಗಳನ್ನು ಅರ್ಥ ಮಾಡಿಕೊಂಡು ಮಕ್ಕಳ ಸ್ನೇಹಿ ವಾತಾವರಣ ನಿರ್ಮಿಸಿ ಮಕ್ಕಳ ಆತ್ಮಹತ್ಯೆ ತಡೆಯಲು ಸಣ್ಣ ಪ್ರಯತ್ವನ್ನು ನಾವು ಮಾಡ ಬಹುದು.
ಸೆಪ್ಟೆಂಬರ್ 10 ಅಂತರಾಷ್ಟ್ರೀಯ ಆತ್ಮಹತ್ಯೆ ತಡೆ ದಿನ, ಈ ದಿನ ನಾವೆಲ್ಲರೂ ತೆಗೆದು ಕೊಳ್ಳಬೇಕಾದ ನಿರ್ಧಾರವೆಂದರೆ ನಾನು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ , ನನ್ನ ಸುತ್ತಲಿರುವವರನ್ನು ಆತ್ಮಹತ್ಯೆ ಮಾಡಿಕೊಳ್ಳಲು ಬಿಡುವುದಿಲ್ಲ ‘ ಸೆಪ್ಟೆಂಬರ್ 10ರಂದು ರಾತ್ರಿ 8 ಗಂಟೆಗೆ ಸರಿಯಾಗಿ ಮನೆಯ ಕಿಟಕಿಯಲ್ಲಿ ಕ್ಯಾಂಡೆಲ್ ಹಚ್ಚಿಡುವ ಮೂಲಕ ನಾವು ಆತ್ಮಹತ್ಯೆ ತಡೆ ಆಂದೋಲನದ ಭಾಗವಾಗಿ ನಮ್ಮನ್ನು ನಾವು ಗುರುತಿಸಿಕೊಳ್ಳಬಹುದು.
–ನಾಗಸಿಂಹ ಜಿ ರಾವ್
ನಿರ್ದೇಶಕ
ಚೈಲ್ಡ್ ರೈಟ್ಸ್ ಟ್ರಸ್ಟ್
Fantastic and awesome article, more and more like you have to write article to reach more more parents and children as well!