ನಂದಾದೀಪ ಅವರ “ಕಾವ್ಯದರ್ಶಿನಿ”ಯ ಭಾವನಾತ್ಮಕ ದರ್ಶನ: ದೇವೇಂದ್ರ ಕಟ್ಟಿಮನಿ

ಆಕಾಶಕ್ಕೆ ಅಣಕಿಸುವಷ್ಟು ಅನುಭವ ನನಗಿಲ್ಲ.
ನಕ್ಷತ್ರಗಳ ತಪ್ಪು ಎಣಿಕೆಯ ತೊದಲು ಪ್ರಯತ್ನ ನಿಂತಿಲ್ಲ.
ಇಂದಲ್ಲ ನಾಳೆ, ನಿನ್ನದೆಲ್ಲ ನನ್ನದು ನನ್ನದೆಲ್ಲ ನಿನ್ನದು,
ಆಳವಿಲ್ಲದ ಬಾವಿಯಂತೆ ಬರಿ ಮಾತು ನನ್ನದು.
ಓದುಗರ ಮಡಿಲಲ್ಲಿ ಓದಿಗಾಗಿ ಮಿಡಿಯುತ್ತಿರುವ ಕವಿಯಿತ್ರಿ ನಂದಾದೀಪ ಅವರ “ಕಾವ್ಯದರ್ಶಿನಿ” ಇದೊಂದು ಬದುಕಿನ ಪ್ರತಿಕ್ಷಣವೂ ಕಾವ್ಯದ ಕಣ್ಣಿನಿಂದ ದಿಟ್ಟಿಸಿ ಸೆರೆಹಿಡಿದ ಭಾವಗಳ ಸಂಗಮವಾಗಿದೆ. ಶ್ರೀ ಯಲ್ಲಪ್ಪ. ಎಂ. ಮರ್ಚೇಡ್ ಇವರ ಸಾರಥ್ಯದ ಶ್ರೀ ಗೌರಿ ಪ್ರಕಾಶನ ರಾಯಚೂರು ಇವರು ಪ್ರಕಟಿಸಿದ ಈ ಕೃತಿ ಸಾಹಿತ್ಯದ ಹಸಿವಿದ್ದವರಿಗೆ ಕಾವ್ಯಗಳ ರಸದೂಟ, ಮೈ ಮನಗಳಿಗೆ ಹೊಸ ಭಾವ ಚಿಗುರಿಸುವ ವಸಂತದಂತಿದೆ. ಮುಂಗಾರಿನ ಮೊದಲ ಹನಿಯಂತಿದೆ.

“ಒಂದೇ ಸೂರಿನಡಿ ಇದ್ದರೂ,ನೋಟ ಬೆಸೆಯುತ್ತಿಲ್ಲ
ಅಂಗಳದ ಮಲ್ಲಿಗೆ ಅರಳಿ ನಿಂತರೂ,ತುಟಿಗಳು ಬಿರಿಯುತ್ತಿಲ್ಲ
ಒಣಗಿದ ಮಾತುಗಳ ನಡುವೆ, ಘಾಸಿಗೊಂಡ ಮೌನ ಕೂಡ ಮೊದಲಿನಂತಿಲ್ಲ”
ಎನ್ನುವ ಸಾಲು ಈ ಸಂಕಲನದ ಮೊದಲ ಕವಿತೆ. ಇದರಲ್ಲಿ ಪ್ರಸ್ತುತ ಸಮಾಜದಲ್ಲಿನ ಮನಸ್ಸುಗಳ ಮಧ್ಯೆ ಇರುವ ಬಿರುಕುಗಳು, ನೋವು, ಹತಾಶೆ, ಮೋಸ ಇವು ಮನಗಳಿಗೆ ಘಾಸಿಗೊಳಿಸುತ್ತಿವೆ. ಒಬ್ಬರನ್ನೊಬ್ಬರು ಅರಿತುಕೊಳ್ಳುವ ಕಾಲ ಯಾಕೋ ಮೌನವಾಗಿದೆ. ಸಂಬಂಧಗಳ ಕೊಂಡಿ ಕಳಚುತ್ತಿವೆ. ಇದಕ್ಕೆ ನಾವೆಲ್ಲರೂ ಕಾರಣರೂ ಎಂದು ಕಾವ್ಯದ ಮೂಲಕ ಮಾನಸಿಕ ಪಿಡುಗುಗಳ ಕುರಿತು ಕವಿಯತ್ರಿ ನಂದಾದೀಪ ಹೇಳಿದ್ದಾರೆ.

ಜಾಗತಿಕವಾಗಿ ಮುಂದುವರೆದಿದ್ದರೂ ಸಹ, ಹೆಣ್ಣಿನ ಶೋಷಣೆ ನಿಲ್ಲುತ್ತಿಲ್ಲ. ಪ್ರತಿದಿನ ಒಂದಿಲ್ಲ ಒಂದು ರೀತಿಯ ಅತ್ಯಾಚಾರಗಳು ಹೆಣ್ಣಿನ ಮೇಲೆ ನಡೆಯುತ್ತಲೇ ಇವೆ. ಇಂತಹ ಪ್ರಮಾದಗಳಿಂದ ವಿಚಲಿತವಾದ ಹೆಣ್ಣು-ಹೆಣ್ಣೆಂದು ಹೇಳಿಕೊಳ್ಳಲಾಗದೆ, ಬಗೆ-ಬಗೆಯ ಮುಖವಾಡಗಳು ಧರಿಸಿಕೊಂಡು ಬದುಕುವಂತಾಗಿದೆ. ತನ್ನ ಕನಸುಗಳ ಸಮಾಧಿ ಮಾಡಿ, ಪಾಚಿ ಕಟ್ಟಿದ ಬದುಕು ತೊಳೆಯಲು ನಿತ್ಯ ನಿರತಳಾಗಿದ್ದಾಳೆ. ಇವಳ ಆಕ್ರಂದನ ಕೇಳುವವರು ಯಾರು? ಎಂಬುದು ಕವಯತ್ರಿಯ ಪ್ರಶ್ನೆ. ಹೌದು! ಮುಖವಾಡ ಧರಿಸಿಯೇ ಬದುಕುತ್ತಾಳೆ ಅವಳು, ಅವಳನ್ನು ಅವಳಾಗಿ ಬದುಕಲು ಬಿಟ್ಟರಲ್ಲವೇ..? ಎಂದು ನಯವಾಗಿ ತಿವಿದಿದ್ದಾರೆ.

ಮುಂದುವರಿದ ಬುದ್ದಿವಂತರು ಪಡೆಯುತ್ತಿರುವ ವರದಕ್ಷಣೆಯ ಪಿಡುಗುನಿಂದ, ಅದೆಷ್ಟೋ ಬಡತನದ ಹೆಣ್ಣು ಮಕ್ಕಳು ಮದುವೆಯಾಗದೆ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇನ್ನು ಅನೇಕರು ಮದುವೆ ಆದರೂ ಅನೇಕ ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಾನು ಯಾರಿಗೂ ಹೊರೆಯಾಗಬಾರದು ಎಂಬ ತ್ಯಾಗದ ಭಾವದಿಂದ ಕಳ್ಳನೋ, ಮಳ್ಳನೋ, ಕುಡುಕನೋ, ಕಟುಕನೋ, ಇನ್ಯಾರನ್ನೋ ಗಂಟು ಹಾಕಿಕೊಂಡು ಮನೆಯಿಂದ ಹೊರ ಬಿದ್ದಾಗಲೇ ಎಲ್ಲರಿಗೂ ಒಂದು ನೆಮ್ಮದಿ ಎಂದು ಹೆಣ್ಣಿನ ಮನದಾಳದ ನೈಜ್ಯ ಭಾವನೆಗಳನ್ನು ಅವಿವಾಹಿತೆಯ ಸ್ವಗತ ಎಂಬ ಕವಿತೆಯ ಮೂಲಕ ಹೊರಹಾಕಿದ್ದಾರೆ.

ಖಾಲಿ ಶೀಷೆಯ ಜೊತೆಗೆ ಕವಿತೆಯಲ್ಲಿ, ಒಡೆದ ಕನ್ನಡಿ ಚೂರುಗಳ ಅಂಟಿಸುವ ಕಾರ್ಯದಲ್ಲಿ ನಿರತ, ಮುಕ್ಕಾದ ಮನವನ್ನು ಸರಿದೂಗಿಸಬಹುದೇ? ಎಂಬ ಸಾಲು ತುಂಬ ಸೊಗಸಾಗಿ ಮೂಡಿಬಂದಿದ್ದು, ಓದುಗರ ಮನವನ್ನು ಕಲಕುತ್ತದೆ.

ಪುರಾಣದ ಸೀತೆಯಲ್ಲ ಎಂಬ ಕವಿತೆಯಲ್ಲಿ-
ತನ್ನೆಲ್ಲ ಬಯಕೆಗಳು ಸಾಯಿಸುತ್ತಾಳೆ,
ಒಂದ್ಹಿಡಿ ಪ್ರೇಮಕ್ಕಾಗಿ ಕಾಯುತ್ತಾಳೆ,
ತನ್ನವರಿಗಾಗಿ ಸಹಿಸುತ್ತಾಳೆ
ಬದುಕಿಗಾಗಿ ಅಂಗಲಾಚುತ್ತಾಳೆ,
ಹಾಗೆಯೇ ,
ಬೇಕಿದ್ದರೊಮ್ಮೆ ಅತ್ತುಬಿಡು ಕವಿತೆಯಲ್ಲಿ,
ಬೇಕಿದ್ದರೊಮ್ಮೆ ಜೋರಾಗಿ ಅತ್ತುಬಿಡು,
ಒಳಗೊಳಗೆ ಮಮ್ಮಲ ಮರುಗುವುದೇಕೆ ? ಸಿಗಲಾರದಕ್ಕೆ ಕೈ ಚಾಚುವ ಹುಂಬತನವೇಕೆ ? -ಎಂಬ ಸಾಲುಗಳು ಗಜಲ್ ಹೋಲಿಕೆಯಂತೆ ರಚಿಸಿದ್ದಾರೆ. ಕಾಲ್ಪನಿಕ ಕಥೆಗಳನ್ನು ನಂಬಿ ವಾಸ್ತವದ ಬದುಕನ್ನು ನರಳಿಸುವುದೇಕೆ? ಹೆಣ್ಣು ಸ್ವಾಭಿಮಾನಿ, ಸಬಲೆಯಾಗಿ ಬದುಕು ಕಟ್ಟಿಕೊಳ್ಳಬೇಕು. ಎಂಬ ಎಚ್ಚರಿಕೆ ಕೊಟ್ಟಿರುವುದನ್ನು ಸ್ತ್ರಿಕುಲ ಸ್ವಾಗತಿಸಬೇಕಿದೆ.
ನಮ್ಮೊಳಗೆ ಅನ್ಯಾಯವನ್ನು ಸಹಿಸಿಕೊಂಡು ನಮಗೆ ನಾವೇ ದ್ರೋಹ ಮಾಡಿಕೊಳ್ಳಬಾರದು ಎಂಬುದನ್ನು ಬರಹದ ರೂಪದಲ್ಲಿ, ಕವಯತ್ರಿ ಸರಳವಾಗಿ ಓದುಗರ ಮನತಟ್ಟುವಂತೆ ಹೇಳಿದ್ದಾರೆ.

ಮನಸುಗಳ ಮಧ್ಯೆ ಬ್ಯಾರಿಕೆಡ್ ಹಾಕಿಕೊಂಡು ಬದುಕುತ್ತಿರುವ ಈ ಕಾಲದಲ್ಲಿ, ಸಂಬಂಧಗಳ ಬೆಳೆಸುವುದಕ್ಕಿಂತ, ಸಂಬಂಧಗಳ ಹಾಳು ಮಾಡುವುದೇ ಮಾನವನ ಭಾವನಾತ್ಮಕ ಬಂಧಗಳು ತೋರುತ್ತವೆ. ಅದರಿಂದ ದೂರವಿರಿ ಎನ್ನುವ “ವಾಟ್ಸಾಪ್ನ ನೀಲಿ ಟಿಕ್ಕುಗಳು” ಕವಿತೆ ಆಧುನಿಕತೆಯ ಕಪಟ ಸಂಬಂಧಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ.
ಕವಿತೆಯ ಕುರಿತಾದ ವಿಶೇಷ ಕವಿತೆ ಭಾವನೆಯ ಮಗಳು ಭಾವಪೂರ್ಣ ಮತ್ತು ಮಾರ್ಮಿಕವಾಗಿದೆ.
ಕವಿತೆ ನೀ ಹೀಗೇಕೆ ? ಎಂಬ ಪ್ರಶ್ನೆಗೆ
ನಾ ಎಷ್ಟಾದರೂ ಭಾವನೆಯ ಮಗಳಲ್ಲವೇ !! ಎಂಬ ಸಂವಾದದ ಸಾಲು ಓದುಗರ ಹೃದಯಗಳಿಗೆ ಮುದ ನೀಡುತ್ತದೆ.
ಆಧುನಿಕ ಯುಗದ ಹೆಬ್ಬಾಗಿಲಿನಲ್ಲಿ ಹುಬ್ಬೇರಿಸಿ ತಿರುಗುವ ನಾವೆಲ್ಲ, ಮಹಿಳಾ ಸಂವೇದನಾಶಿಲತೆಯ ವಿಷಯಗಳಿಗೆ ನಾವಿನ್ನು ಮೌಢ್ಯತೆಗಳ ಅಂಟಿಸಿ, ಅವಳ ಸ್ವಾಭಿಮಾನವನ್ನು ಸುಡುತ್ತಿದ್ದೇವೆ. “ಮುಟ್ಟು ಮಲಿನವಲ್ಲ, ಮುಟ್ಟಿನೊಳಗೆ ಹುಟ್ಟಿರುವ ನಾವುಗಳು ಅದು ಸೃಷ್ಟಿಯ ಮೂಲ” ಎಂದು ತಿಳಿದುಕೊಂಡರೆ ಸಾರ್ಥಕ! ಎಂಬ ಭಾವನಾತ್ಮಕ ಕವಿತೆ ಮಹಿಳೆಯಿಂದಲ್ಲದೆ ಇನ್ನಾರಿಂದಲು ಬರೆಯಲು ಸಾಧ್ಯವಿಲ್ಲ.

ಒಟ್ಟಾರೆ ಈ ಕವನ ಸಂಕಲನದಲ್ಲಿ “ಯಾವುದು ಮೊದಲಿನಂತಿಲ್ಲ” ಎಂಬ ಪ್ರಾರಂಭಿಕ ಕವಿತೆಯಿಂದ ಹಿಡಿದು “ಮನದ ಮಾತಿನ ಕಾವ್ಯ ಬಿಂಬ” ಕೊನೆಯ ಕವಿತೆಯವರೆಗೆ ಸುಂದರ ಪದಗಳ ಜೋಡಣೆಗಳ ಪ್ರಯತ್ನವಿದೆ. ಅನೇಕರ ಅನಿಸಿಕೆಗಳು ಕವಯಿತ್ರಿಯ ಕಾವ್ಯಕ್ಕೆ ಸಿಕ್ಕ ಬಲವಾಗಿದೆ. ಹಾಗೂ ಪ್ರಕಾಶಕರಿಗೆ ನೀಡಿದ ಬೆಂಬಲ ಆತ್ಮವಿಶ್ವಾಸದಂತಿದೆ. ಕವಿತೆಯ ಹುಟ್ಟು ಮಗುವಿನ ಜನನದಂತೆ ಒಂಬತ್ತು ತಿಂಗಳು ಹೊತ್ತು ಹೊರ ಜಗತ್ತಿಗೆ, ಬದುಕಿನ ಪರೀಕ್ಷೆಗೆ ಬಿಟ್ಟಂತೆ! ಕವಿ ಮನದ ಭಾವದಲ್ಲಿ ರೂಪುಗೊಂಡು ಕವಿತೆ ಓದುಗರ ಪಾಲನೆ ಪೋಷಣೆಯಲ್ಲಿ ಬೆಳೆಯುತ್ತದೆ. ಬೆಳೆಸುವ ಭಾವ ನಮ್ಮದಾಗಲಿ. ಹಾಗೆಯೇ ಕಾವ್ಯದರ್ಶಿನಿ ಕೂಡ ನಮ್ಮದು!

-ದೇವೇಂದ್ರ ಕಟ್ಟಿಮನಿ

ಕೃತಿ: ಕಾವ್ಯ‌ ದರ್ಶಿನಿ

ಪ್ರಕಾರ: ಕಾವ್ಯ

ಬೆಲೆ: ರೂ. 100/-

ಪ್ರಕಾಶಕರು: ಶ್ರೀ ಗೌರಿ ಪ್ರಕಾಶನ

ಪ್ರತಿಗಳಿಗಾಗಿ: 9972767961


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x