ಪಂಜು ಕಾವ್ಯಧಾರೆ

ಕನಸಿನೊಳಗೊಂದು ಕಣಸು

ನಿನ್ನೆ ತಮ್ಮ ಮತ್ತೆ
ಕನಸಿನ ಮನೆಗೆ ಬಂದಿದ್ದನು
ಹೆಂಡತಿ, ಮಕ್ಕಳನ್ನು ಕರೆದು ತಂದಿದ್ದನು
ಅವ್ವ, ಕಣ್ಣ ತುಂಬಾ ನೀರು ತುಂಬಿಕೊಂಡು ವಯ್ದು ಕೊಟ್ಟಳು

ನಾನು, ಯಾಕೋ ಇಷ್ಟು ದಿನ ಎಲ್ಲಿ ಹೋಗಿದ್ದೆ?
ಏನೇನೋ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದೆ
ಅವನು, ಮುಗಿಲಿಗೆ ಮುಖ ತೋರಿ
ಏನೇನೋ ಉತ್ತರಿಸುತ್ತಿದ್ದ
ಒಂದೂ ಅರ್ಥವಾಗುತ್ತಿರಲಿಲ್ಲ!
ಈ ನಡುವೆ ಅವ್ವ,
ನನ್ನ ಪ್ರಶ್ನೆಗಳ ನಡವನ್ನೇ ತುಂಡರಿಸಲು ಯತ್ನಿಸುತ್ತಿದ್ದಳು
ಇರಲಿ ಬಾ, ಒಳಗೆ
ವಾತ್ಸಲ್ಯ ಗುಡ್ಡವೇ ಕರಗಿ ತಮ್ಮನನ್ನು ಒಳಗೆ
ಆಹ್ವಾನಿಸುತ್ತಿದ್ದಳು

ತಮ್ಮನ ಕಿರಿ ಮಗನನ್ನು ಎತ್ತಿಕೊಂಡೆ
ನನ್ನ ನೋಡಿ ಒಂದೇ ಸಮನೆ ಆಳುತ್ತಿದ್ದನು
ಎಲ್ಲೋ ಬಿದ್ದು ಹಣೆ ಒಡೆದುಕೊಂಡಿದ್ದನು
ಹಿರಿಯ ಮಗನನ್ನು ತೊಡೆಯ ಮೇಲೆ ಕರೆದುಕೊಂಡೆ
ಮೇಣದಿಂದ ಮಾಡಿದಂತಿದ್ದ
ತಲೆ ನೇವರಿಸಿ ಕೇಳಿದೆ
ಶಾಲೆಗೆ ಹೋಗುತ್ತಿರುವೆಯಾ?
ಇಲ್ಲ!
ಯಾಕೆ?
ಸುಮ್ಮ! ನಕ್ಕ!
ಮತ್ತೆ ನಕ್ಕ!!
ನೀನು ಇಲ್ಲಿಯೇ ಇರು
ಶಾಲೆ ಕಲಿಸುತ್ತೇನೆ
ಹೂಂಗುಟ್ಟಿದ ….

ಎಚ್ಚರವಾಯಿತು!

-ಡಾ. ಸದಾಶಿವ ದೊಡಮನಿ

ಸಾರ್ಥಕತೆ

ದಾರಿಯ ತೋರುವುದು ಬೆಳಕು
ಬದುಕನ್ನ ಬೆಳಗುವುದು ಬೆಳಕು
ಕತ್ತಲನ್ನು ನೀಗುವುದು ಬೆಳಕು
ಜೀವನವನ್ನು ಅರಳಿಸುವುದು ಬೆಳಕು

ಮಿಂಚುಹುಳು ಮಿಂಚಂತೆ ಮಿಂಚುವುದು
ಸುತ್ತ ಮುತ್ತಲೂ ಬೆಳಕನ್ನ ಬೀರುವುದು
ಕತ್ತಲೆಯ ರಾತ್ರಿಯನ್ನು ಬೆಳಗುವುದು
ಕ್ಷಣಕಾಲ ಮಿಂಚಿ ಮರೆಯಾಗಿ ಹೋಗುವುದು

ಕ್ಷಣಿಕ ಬದುಕಲ್ಲಿ ಜಗವನ್ನ ಬೆಳಗುವುದು
ತನ್ನ ಇರುವಿಕೆಯ ಎಲ್ಲೆಡೆಯು ತೋರುವುದು
ಬೆಳಕನ್ನು ಬೀರುತ್ತ ತನ್ನತ್ತ ಸೆಳೆಯುವುದು
ಅಲ್ಪ ಕಾಲದ ಜೀವನವನ್ನು ಸಾರ್ಥಕ ಗೊಳಿಸಿಕೊಳ್ಳುವುದು

ನೀರ ಮೇಲಿನ ಗುಳ್ಳೆಯಂತೆ ನಮ್ಮ ಬದುಕು
ಇರುವಷ್ಟು ಕಾಲ ಮಾಡಬೇಕು ಒಳ್ಳೆಯ ಬದುಕು
ಒಳಿತನ್ನೇ ಮಾಡಿ ಜಗದಲ್ಲಿ ಒಳಿತನ್ನೇ ಹುಡುಕು
ಮಾಡಬೇಡ ಜೀವನದಿ ಯಾರಿಗೂ ಕೆಡುಕು

ನಾಗರಾಜ ಜಿ. ಎನ್. ಬಾಡ



ಆಕೆ.

ಕೋಲ್ಮಿಂಚಿನಂತ ಕಣ್ನೋಟದಾಕೆ
ಕೆಂದಾವರೆಯಂದದ ಗಲ್ಲದಾಕೆ
ಕಾರ್ಮುಗಿಲಂಗ ಕುಡಿಯುಬ್ಬಿನಾಕೆ
ಕಾಮನಬಿಲ್ಲಿನಂಗ ಕೆನ್ನೆಯಾಕೆ.

ಮಂದಾರ ಹೂವಿನಂಗ ವದನದಾಕೆ
ಮಾಮರ ಕೋಗಿಲೆಯಂಗ ಕಂಠದಾಕೆ
ನೇಸರನಂಗ ಸುಡುವ ಕೋಪದಾಕೆ
ಚಂದಿರನಂಗ ಕಾಡುವ ರೂಪದಾಕೆ.

ಅರಗಿಳಿಯಂಗ ನೀಳ ನಾಸಿಕದಾಕೆ
ಕರಾವಳಿಯಂಗ ಆಳ ಮನದಾಕೆ
ಮಕರಂದ ಸಿಹಿಯ ತುಟಿಯುಳ್ಳವಳಾಕೆ
ಮಂಕು ಹಿಡಿಸೋ ಗನಿಘಟಿಯುಳ್ಳವಳಾಕೆ.

ಅಂದಕ್ಕೊಪ್ಪುವ ಅಭರಣಗಳ ಮೆರುಗಿನಾಕೆ
ಚೆಂದಕ್ಕೊಪ್ಪುವ ಕೈಬಳೆಗಳ ಸೊಬಗಿನಾಕೆ
ಕನಸಲ್ಲು ಘಲ್ಲಘಲ್ಲನೆನ್ನೋ ಗೆಜ್ಜೆಯಾಕೆ
ಮನಸೆಲ್ಲ ಝೆಲ್ಲಝೆಲ್ಲನೆನ್ನೋ ಲಜ್ಜೆಯಾಕೆ.

ಜೀವದ ಗೆಳೆತಿಯಾದವಳಾಕೆ
ಜೀವನದ ಸಂಗಾತಿಯಾದವಳಾಕೆ
ಜೀವನಕ್ಕೆ ಜ್ಯೋತಿಯಾದವಳಾಕೆ
ಶಿವನ ಬಾಳಿನ ಉಸಿರಾದವಳಾಕೆ.

ಶಿವಮೂರ್ತಿ.ಹೆಚ್

ಗುಲ್ ಮೊಹರೆ

ಯಾರು ತೊಡಿಸಿಡರು ನಿನಗೆ ಸಿಂಗಾರ ಸಿರಿಯಾಭರಣ
ಮುತ್ತಿನ ಓಲೆ ಜುಮ್ಮುಕಿಯ ರನ್ನಪದಕ ಭೂಷಣ

ಯಾರು ಉಡಿಸಿದರು ನಿನಗೆ ರಂಗುರಂಗಿನ ಸೀರೆ
ಮರದ ಗೊಂಚಲು ತಂಗುವ ಹೂವುಗಳ ಗುಲ್ ಮೊಹರೆ

ಯಾರು ಎಸೆದರು ಇಳಿಗೆ ಪಟ್ಟಣಗಟ್ಟಿ ಮಿಂಚು
ಸಿಡಿಲು ಸಿಡಿದು ಮಿನುಗಿ ಗುಡುಗಿ ಮಳೆಯ ಸಂಚು

ಯಾರು ಕೊಟ್ಟರು ನಿನಗೆ ಬಂಗಾರದ ಮೆಡಲು
ಬಾನಂಚಿಗೆ ನಭವ ತಬ್ಬಿ ಊದಿದ ಕೊಳಲು

ಯಾರು ಇಟ್ಟರು ನಿನಗೆ ಹೆಸರು ಪ್ರಕೃತಿ
ಒಂದೊಂದು ಋತುಋತುಗಳು ಪ್ರತಿಭೆಯ ಮತಿ

ಯಾರು ಕಲಿಸಿದರು ನಿನಗೆ ನೃತ್ಯ ಭಂಗಿಯ ಸೊಡರು
ಇಂದ್ರನೊಡ್ಡೊಲಗ ಬಾಜಿಸಿದ ಮೈದುನನ ಪೊಗರು

ಯಾರು ಬಿಟ್ಟರು ನಿನಗೆ ಚೆಲುವಿನ ಕದಿರು
ರಮಣೀಯಾದ್ಭುತ ಝೆಂಕಾರದ ಇಳೆಯ ಅದಿರು.

ಸಂತೋಷ್ ಟಿ

ಸಿಂಧು ಸಾಗರ

ಬಿಂದು ಬಿಂದುವು ಮುಗಿಲಿಗೇರಲು
ಸಿಂಧುವಾಗಿದೆ ಸಾಗರ.
ಒಂದೊಂದಾಗಿ ಪೇರಿಸಿ ಇಡಲು
ಅಪಾರವು ಜಲಧಿಯ ಆಗರ.

ನದ ನದಿಗಳನು ಒಡಲಿಗೆ ಸೆಳೆದಿದೆ
ವಿಸ್ತಾಂರಾಂಬುಧಿ ಕಡಲು.
ಸುಪ್ತ ಜೀವಗಳು ಲುಪ್ತವಾಗದಂತೆ
ಸಲಹಿದೆ ಜಲಧಿಯ ಮಡಿಲು.

ಎಲ್ಲೋ ಸುರಿದ ಒಲವಿನ ಹನಿಗಳು
ಕಾದಿವೆ ನಿನ್ನೊಡಲ ಸೇರಲು.
ಇಲ್ಲೇ ಇರುವ ಅಲೆವ ಅಲೆಗಳು
ಮೊರೆದಿವೆ ತೀರವ ಕಾಣಲು.

ಗಂಭೀರ ಶರಧಿ ಗಮಿಸುವ ದಿಕ್ಕನ್ನು
ಬಲ್ಲವರಿರುವರೇ ಇಲ್ಲಿ?
ಬಾನ ನೀಲಿಯನು ಕದ್ದು ಹೊದ್ದಿದೆ
ಗೆಲ್ಲುವ ನಗುವನು ಚೆಲ್ಲಿ!

ಸರೋಜ ಪ್ರಶಾಂತಸ್ವಾಮಿ

ಗೃಹಿಣಿಯರು ಬಿಜಿಯಾಗಿದ್ದಾರೆ

ಮದುವೆಯಾದ ಮೇಲೆ ಮಹಿಳೆಯರು ಮೊಬೈಲ್ ಮುಟ್ಟುವುದಿಲ್ಲ
ಹೆತ್ತ ತಾಯಿಗೆ ಕರೆಯು ಕೂಡ ಮಾಡಲಾಗದಷ್ಟು ಬ್ಯುಸಿಯಾಗಿದ್ದಾರೆ
ಅಪ್ಪನ ಊಟದ ಬಗ್ಗೆ ಔಷಧಿ ಬಗ್ಗೆ ಯೋಚಿಸದಷ್ಟು ಮೌನವಾಗಿದ್ದಾರೆ
ತಂಗಿಯ ಬಾಳುವೆಯ ಬಗ್ಗೆ ಒಂದಿಷ್ಟು ಕನಿಕರ ಪಡೆದಷ್ಟು ಭಾವನೆಗಳನ್ನು ಬಿಗಿಯಾಗಿಸಿದ್ದಾರೆ
ಅಕ್ಕನ ನೋವನ್ನು ಕೇಳದಷ್ಟು ಯೋಚಿಸದಷ್ಟು ಬಂಧಿಸಲ್ಪಟ್ಟಿದ್ದಾರೆ

ಅಮ್ಮನ ನೆನಪು ಎದೆಗೆ ವಕ್ಕರಿಸಿದರು ಪಕ್ಕಕ್ಕೆ ಸರಿಸಿಬಿಡುತ್ತಾರೆ
ಅಪ್ಪನ ಕಾಳಜಿ ಮಮತೆ ನೆನಪಾಗಿ ಅಳದಷ್ಟು ಮೌನವಾಗಿದ್ದಾರೆ
ಮನೆ, ಮನಸುಗಳೆಲ್ಲ ಕಲ್ಲಾಗಿಸಿದ್ದಾರೆ
ಅವರಿಗೆ ಕರೆ ಮಾಡದಷ್ಟು, ಕರೆ ಮಾಡಿದರೂ ಎತ್ತದಷ್ಟು,
ಎತ್ತಿದರು ಮಾತನಾಡಲಾಗದಷ್ಟು ಬ್ಯುಸಿಯಾಗಿದ್ದಾರೆ

ಅತ್ತೆಯ ಕಾಟವು ಮಾವನ ಮಾತು
ಗಂಡನ ಬೈಗಳವು, ಮೈದುನನ ಕೊಂಕು ಮಾತು
ಅವರಿವರ ಹುಚ್ಚು ಮಾತು
ನಡುನಡುವೆ ವಕ್ಕರಿಸುವ ವೈನಿಯ ಚುಚ್ಚು ಮಾತು
ಇವೆಲ್ಲವನ್ನು ಸಹಿಸಿ, ತನ್ನ ಸಿದ್ದಗೊಳಿಸಿ
ಅಡುಗೆ ಮಾಡಿ ಬಡಿಸುವಸ್ಟುವರೊಳಗಾಗಿ ಆಕೆ ಹೈರಾಣಗಿದ್ದಾಳೆ

ತನ್ನ ಭಾವನೆಗಳನ್ನು ಆಸೆಗಳನ್ನು ಬದಿಗಿರಿಸಿದ್ದಾಳೆ
ಒತ್ತಡದ, ಜಂಜಡದ, ಬದುಕಿಗೆ ಗುಜ್ಜಾಗಿದ್ದಾಳೆ
ಒಂದೆಟಿನ ಮಾತುಗಳು ಬಂದು ಎರಗುವಾಗ
ಬೆಂದು ಹೋಗಿ, ಸೋತು ಹೋಗಿ ಕಲ್ಲಾಗಿದ್ದಾಳೆ,
ತನ್ನ ನೋವನ್ನು ತಾನೇ ಮರೆಯುವಷ್ಟು
ಕಟುಕಳಾಗಿದ್ದಾಳೆ
ಹೆಣ್ಣು ತನ್ನ ಜೀವನವ ಮುಡುಪಾಗಿರುವಷ್ಟು ನೀರ್ಗತಿಗಳಾಗಿದ್ದಾಳೆ
ತನ್ನ ಆಸೆಗಳನ್ನು ಗುಡಿಸಿ ರಸ್ತೆಗೆ ಎರಚಿ ಸಂಸಾರಕ್ಕೆ ಬ್ಯುಸಿಯಾಗಿದ್ದಾಳೆ

-ಡಾ. ಶಕುಂತಲಾ. ಬರಗಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x