ಮೂರು ಕವಿತೆಗಳು: ದೊಡ್ಡಬಸಪ್ಪ ನಾ ಚಳಗೇರಿ

ಅಂಬರದ ಬಯಲೊಳಗೆ

ಅಂಬರದ ಬಯಲೊಳಗೆ ಅರಳಿದ್ದ ಮಲ್ಲಿಗೆಯ
ಸತಿ ಮುಡಿಗೆ ನಾನೊಮ್ಮೆ ಮುಡಿಸಲೆಂದು
ಇರುಳೇಣಿ ಏರೇರಿ ಇರುಳೂರು ನಾ ಸುತ್ತಿ
ತಾರೆಗಳ ಮಲ್ಲಿಗೆಯ ಬನ ಸೇರಿದೆ

ಇಳಿಬಿದ್ದ ಮಲ್ಲಿಗೆಯ ಹೂಬಳ್ಳಿ ತುಂಬಿತ್ತು
ದುಂಡು ಆ ದುಂಡಗಿನ ಮೊಗ್ಗರಳಿಸಿ
ಹಾಲ್ಬಣ್ಣ ಹೂಮಾಲೆ ಇನಿಯಳಿಗೆ ಕಟ್ಟಿಸಲು
ಚುಕ್ಕಿಗಾಗಿರುಳಲ್ಲಿ ಕೈ ಚಾಚಿದೆ

ಶಶಿ ಬೆಳ್ಳಿ ಬುಟ್ಟಿಯಲಿ ಹರಿದಾಕಿ ಹೊತ್ತಂದು
ಹೂಗಾರ ಮನೆಯೊಳಗ ನಾನಿಳಿಸಿದೆ
ನಗೆಮೊಗದ ಮುತ್ತೈದೆಯ ಮದರಂಗಿ ಕೈಯೊಳಗ
ಸೊಗಸಾಗಿ ಹೆಣೆಸಿದ್ದೆ ಒಂದಾರದಿ

ಮುಂಜಾವು ನೀ ಹೆಣೆದು ಇಳಿಬಿಟ್ಟ ಜಡೆಮೇಲೆ
ಮುಡಿ ಮಾಡಿ ಹೋಗೆಂದೆ ರವಿಕಿರಣಕೆ
ಇನಿದಾದ ಮಾತೊಳಗ ಬಳಿ ಬಂದು ಮಾಡೋದ
ಮುಡಿಯೊಳಗ ಮುಡಿಸಿದ್ದೆ ಹೂ ಮಾಲೆಯ

ಘಂ ಎಂದು ಸೂಸುವುದು ನೀನೋದ ಕಡೆಗೆಲ್ಲ
ನಾ ಹೇಗೆ ಅಗಲುವದೆ ನಿನ್ನ ಬಿಟ್ಟು
ಒಲವಿಂದ ಮೂಸಿದೆನು ನಾಸಿಕದ ಹೊರಳಿಂದ
ಇರುಳಿಂದ ನಾನೆದ್ದು ಕಣ್ಬಿಟ್ಟು

*

ಗುರು ಬಸವ

ನಿತ್ಯ ಎನಗೆ ದೀನಬಂದು ಗುರು ಬಸವನು
ಪ್ರೇಮದಿಂದ ಕರುಣಿಸಿಯೂ ಸಾಕಿ ಸಲುವನು

ತಿಳಿಯದಂತ ಕೆಲಸದೊಳೂ ಸೋತೆನಾದರೆ
ನೋವಿನಂತ ದುಃಖದಲ್ಲಿ ದೇವರಾಗ್ವರು

ಸತ್ಯ ನುಡಿಯ ನುಡಿಸಿ ನೀನೇ ಕರ್ಮ ಕಳೆಸಿದೆ
ಹಿಂಸೆಯಿರದೆ ಬಾಳಿದವನ ಬಾಳು ಮೆಚ್ಚಿದೆ

ಇಷ್ಟಲಿಂಗ ಧರಿಸಿ ನೀನು ಅಹಂ ಬಿಟ್ಟರೆ
ಜಗವು ನಿನ್ನ ಪಾದದಡಿಯ ಮೆಟ್ಟಿಲಾದಿತೆ

ಶಾಸ್ತ್ರನೆಲ್ಲ ತೂರಿ ನೀನು ಜಾತಿ ತೊರೆದರೆ
ಧರ್ಮಿ ಮನೆಯ ಕಾಯಲೆಂದೆ ಬಸವ ಬರುವನು

ಸ್ವರ್ಗದಂತ ಲೋಕಕ್ಕೇ ನನ್ನ ಕರೆವರು
ಜನನ ಮರಣದಿಂದ ಅಲ್ಲಿ ಮುಕ್ತಿ ಮಾಡ್ವರು

*

ಮನದ ನೋವು

ಜಾರಿ ಹೋದ ಮಧುರ ಬಯಕೆ
ಹೃದಯ ನೆನೆದು ಹಾಡಿದೆ
ನಿನ್ನ ಮನದ ನೋವನರಿತ
ಕನಸಿಗಿಂದು ನೆನಪಿದೆ

ಮನದ ಭಾವ ಮಿಲನದೊಳಗೆ
ಕಳೆದ ಗಳಿಗೆ ನೋವಿದೆ
ನನ್ನೊಲವೇ ಪ್ರೇಮ ಸುರಿದು
ನೂರು ತೊರೆಯು ಮೂಡಿದೆ

ಪ್ರೀತಿ ಮಿಡಿತ ಹೃದಯ ಬಡಿತ
ನಾನರಿತೇ ಕ್ಷಣದಲಿ
ಅರಿಯದವಳ ಒಲವಿಗಾಯ್ತೆ
ಬದುಕು ಆಹುತಿ ಜಗದಲಿ

ಪೆದ್ದು ಗೆಳತಿ ಮುಗ್ಧ ಮನದ
ಸಲುಗೆಯೆಂಬ ಬಳ್ಳಿಯು
ಒಡಲ ಜಲವ ಹೀರಿ ಬೆಳೆದು
ಒಲವು ಬಳುಕಿ ಚಿಗುರಲಿ

ಒಲವಿನಾಸೆ ನೆಪವನೂಡಿ
ಬಯಸಿ ಬಂದೆ ನನ್ನಲಿ
ಏನು ಅರಿಯದ ಹೃದಯ ಗೂಡು
ಹೇಗೆ ನಂಬಿ ತೂಗಲಿ ?

ದೊಡ್ಡಬಸಪ್ಪ ನಾ ಚಳಗೇರಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x