“ಈ ಕಾಲದ ಸೂಕ್ಷ್ಮ ಅರ್ಥ ಆಗೋಲ್ಲ ಗುರು. ಇವರೆಲ್ಲ ಇನ್ನೂ ಹಳೆಯ ಕಾಲದ ಗಾಂಧಿವಾದಿಗಳು. ಪೂರ್ತಿ ಗಾಂಧಿವಾದ ಮೇಲೆ ಈಗ ರಾಜಕೀಯ ಮಾಡಲು ಆಗೋಲ್ಲ. ಇವರೆಲ್ಲ ಯಾವಾಗ ಬದಲಾಗ್ತಾರೋ?”
(ಅಧ್ಯಾಯ -1, ಪು.35)
ಈ ಕಾದಂಬರಿಯಲ್ಲಿ ಮುಖ್ಯಮಂತ್ರಿ ನಂಬುಗೆಯ “ಅನಿಕೇತನ” ಎನ್ನುವ ಪಾತ್ರದ ಧ್ವನಿ ಇದು. ಈ ಧ್ವನಿಯ ಒಳಾರ್ಥ, ಕಾದಂಬರಿ ಮತ್ತು ಕಾದಂಬರಿಕಾರರ ಒಂದಿಡೀ ಧ್ವನಿ ಇದ್ದಂತಿದೆ!
ಪ್ರಚಲಿತ ರಾಜಕೀಯ ವಿದ್ಯಮಾನ ಆಧಾರಿತ “ಸುಳಿ” – ಹಿಂದಿನ ಮೂರು ದಶಕಗಳ ಘಟನಾವಳಿ ಮತ್ತು ಇವತ್ತಿನ ರಾಜಕೀಯ ನೆಲೆಯಿಂದ ಮುಂದಕ್ಕೆ ಸಾಗಿ ದಶಕದ ನಂತರದಲ್ಲಿ ಜರುಗಬಹುದಾದ ರಾಜಕೀಯ ಸ್ವರೂಪದ ಚಿತ್ರಣವನ್ನು ಕಟ್ಟಿಕೊಡುವ ಗಂಭೀರವಾದ ಹೆಣಿಗೆ. ಹಾಗೂ ಕುತೂಹಲಕಾರಿಯಾಗಿ ನಿರೂಪಿತಗೊಂಡಿರುವ ಜನಪ್ರಿಯ ಶೈಲಿಯ ಒಂದು ಕಾಲ್ಪನಿಕ ಕಾದಂಬರಿ.
ಈ ಕಾದಂಬರಿಯ ಸೊಗಸು, ದೇಶ ಮತ್ತು ರಾಜ್ಯ ರಾಜಕೀಯದ ಬಗ್ಗೆ ತೀವ್ರ ಆಸಕ್ತಿ ಇರುವವರಿಗೆಲ್ಲರಿಗೂ ಇಷ್ಟವಾಗುವ ಗುಣವಿದೆ. ಇಂಥ ಲಕ್ಷಣದ ‘ಸುಳಿ”ಯ ಕೇಂದ್ರದಲ್ಲಿ ‘ಪ್ರೀತಿ’ ಇದೆ. ಅದು ದೀರ್ಘಕಾಲೀನ ವಿಕೃತಿಯ ರೂಪ ಪಡೆದಿದೆ. ಈ ವಿಕೃತಿ ಅಧಿಕಾರ ಹಸ್ತಾಂತರದ ಹೊಸ್ತಿಲಲ್ಲಿ ಪ್ರದರ್ಶನಗೊಳ್ಳುತ್ತದೆ. ಭೂತ, ವರ್ತಮಾನ, ಭವಿಷ್ಯದ ರಾಜಕೀಯ ಚಿತ್ರಣವನ್ನು ತೆರೆದಿಡುವ ಈ ಕಾದಂಬರಿ, ಇಸವಿ 2038 ರ ಕಾಲಘಟ್ಟದಲ್ಲಿ ನಿಂತು ಮಾತಾಡುತ್ತದೆ. ಹಾಗೂ ಬುದ್ಧ ಪ್ರಜ್ಞೆಯ ಮುಖವಾಡ ಧರಿಸಿ ಮಾತಾಡುವ ಈ ಕಾದಂಬರಿ ಗಾಂಧಿಯ ತತ್ವ, ಚಿಂತನೆ, ಚಳುವಳಿ, ಹೋರಾಟ ಅವರ ನೈತಿಕ ರಾಜಕೀಯ ಸಿದ್ಧಾಂತದ ಪ್ರಸ್ತುತತೆಯನ್ನೇ ಪ್ರಶ್ನಿಸುತ್ತದೆ. ಉದ್ದೇಶ, ರಾಜಕೀಯವಾಗಿ ತಂತ್ರ, ಒಳತಂತ್ರದ ವ್ಯೂಹವೊಂದು ಜರುಗುತ್ತದೆ.
“ಸುಳಿ” ಗೆ ರಾಜಕೀಯ ಅಲ್ಲದೆ, ಪ್ರೇಮದ ಸ್ಪರ್ಶವಿದೆ. ಈ ಪ್ರೇಮ, ಭೋಗ ವೈಭೋಗದ ಅಳತೆಗೋಲಿಗೆ ಸಿಲುಕುತ್ತದೆ. ಕಳೆದು ಹೋದ ಸೋದರನ ಸಾಂಗತ್ಯದ ನೆನೆಕೆಯಲ್ಲಿ ಬದುಕು ಭಾರವಾಗಿ ನಲುಗುತ್ತದೆ. ಧರ್ಮ, ಜಾತಿಯನ್ನು ಮೀರಿದ ಸ್ನೇಹ ಬಾಂಧವ್ಯವಿದೆ. ಕ್ರೀಡೆಯ ನಂಟಿದೆ. ಬಿಸಿರಕ್ತದ ವಯೋಸಹಜ ತೀಟೆ ಇದೆ. ತಂಟೆ, ತಕರಾರಿದೆ. ಹುಡುಗಾಟಿಕೆ ಇದೆ. ಆಕಸ್ಮಿಕವೂ ಅನಿವಾರ್ಯವೂ ಆದ ಲೋಪವಿದೆ. ಈ ಲೋಪ ಕೋಮು ಸಾಮರಸ್ಯದ ಮೇಲೆ ಪರಿಣಾಮ ಬೀರಿ ಒಂದಿಡೀ ಊರು, ಪ್ರದೇಶ ಪ್ರಕ್ಷುಬ್ಧತೆಯೊಳಗೆ ಮುಳುಗುತ್ತದೆ. ಅದು ಮೂರು ದಶಕಗಳ ನಂತರದಲ್ಲಿ ಬಲಿಷ್ಠ ಬಹುಮತದ ಒಂದು ಸರ್ಕಾರವನ್ನೆ ಅಲುಗಾಡಿಸುವ ಹಂತ ತಲುಪುತ್ತದೆ. ಇದರ ಜೊತೆಗೇನೆ ಕಾದಂಬರಿಯುದ್ದಕ್ಕು ಕರ್ನಾಟಕದ ವರ್ಣರಂಜಿತ ರಾಜಕಾರಣಿ ರಾಮಕೃಷ್ಣ ಹೆಗಡೆಯವರ ವ್ಯಕ್ತಿತ್ವ, ಅವರ ರಾಜಕೀಯ ತತ್ವ, ಸಿದ್ಧಾಂತ ಮತ್ತವರ ಲೋಕಶಕ್ತಿಯ ಬಗ್ಗೆ ಅಪಾರ ಒಲವಿನ ಸೆಳೆತವನ್ನು ಕಾದಂಬರಿಕಾರರು ಸಮ್ಮೋಹಕವಾಗಿ ನಿರೂಪಿಸಿದ್ದಾರೆ.
“ಸುಳಿ” ಯ ಮೂಲ ಕೆದಕುತ್ತ ಬಿಡಿಸುತ್ತ ಹೋಗುವ ಕಾದಂಬರಿಕಾರರು, ಕಾದಂಬರಿಯನ್ನು ಮೂರು ಭಾಗಗಳಾಗಿ ವಿಂಗಡಿಸಿದ್ದಾರೆ. ಮೊದಲ ‘ಮೂರು ಅಧ್ಯಾಯ’ಗಳು ಘಟಿಸಿದ ಬಿಡಿ ಬಿಡಿ ಘಟನೆಗಳ ಮೆಲುಕು – ಪ್ರಸ್ತಾವನೆ ರೂಪದಲ್ಲಿಯೂ, ಕೊನೆಯ ಮೂರು ‘ಅಂತ್ಯ’ಗಳು – ಎಲ್ಲಾ ಘಟನಾವಳಿಗಳನ್ನು ತಾರ್ಕಿಕವಾಗಿ ಒಟ್ಟುಗೂಡಿಸಿದ ಉಪಸಂಹಾರದ ರೂಪದಲ್ಲಿಯೂ, ನಡುವಿನ ‘ಇಪ್ಪತ್ತನಾಲ್ಕು ಆಧ್ಯಾಯಗಳು’ ಚಂದ್ರಹಾಸನ ವೈಯಕ್ತಿಕ ಬದುಕು ಬವಣೆ, ತದ ನಂತರದ ರಾಜಕೀಯ ಹೋರಾಟದ ಎಲ್ಲ ಮಜಲುಗಳನ್ನು ವಿಸ್ತೃತ ರೂಪದಲ್ಲಿಯೂ ಕಾದಂಬರಿಗೆ ಒಂದು ತಾಂತ್ರಿಕವಾದ ಕಥಾ ಚೌಕಟ್ಟು ಕಟ್ಟಿದ್ದಾರೆ.
ಸತೀಶ್ ಶೆಟ್ಟಿ ವಕ್ವಾಡಿ ಅವರು ‘ಅಜ್ಜ ನೆಟ್ಟ ಹಲಸಿನ ಮರ’, ‘ಕೊನೆಯ ಎರಡು ಎಸೆತಗಳು’ ಕೃತಿಗಳಲ್ಲಿ ಬಳಸಿರುವ ಭಾಷೆ, ಸ್ಥಳೀಯತೆಯ ಸೊಗಡು ಗಮನಿಸಿರುವ ನನಗೆ ‘ಸುಳಿ’ ಯಲ್ಲಿ ಕುಂದಾಪುರದ ಭಾಷಾ ಸೊಗಡು ಇಲ್ಲದಿರುವುದು. ಆದರೆ ಕಾದಂಬರಿ ಚಂದ್ರಹಾಸನ ಬದುಕು, ಬವಣೆ ಮತ್ತವನ ವ್ಯಾಪಾರ, ವ್ಯವಹಾರ, ರಾಜಕೀಯ ಹೋರಾಟದ ಬದುಕಿನ ಯಶಸ್ಸಿನ ಶ್ರೇಯವನ್ನು ಚಂದ್ರಹಾಸನ ಜೊತೆಗೆ ಅನಿಕೇತನ ಪಾತ್ರದ ನೆಪದಲ್ಲಿ, ವಕ್ವಾಡಿ ತಾವು ಹುಟ್ಟಿ ಆಡಿ ಬೆಳೆದ ಕುಂದಾಪುರದ ನೆಲವನ್ನು ಔನ್ನತ್ಯಕ್ಕೆ ಕೊಂಡೊಯ್ದಿದ್ದಾರೆ.
ಮುಖ್ಯಮಂತ್ರಿಯೊಬ್ಬ ತಾನು ಎಂದೊ ಮಾಡಿದ ತಪ್ಪಿಗೆ ತಪ್ಪೊಪ್ಪಿಕೊಳುವ ಆತ್ಮಾವಲೋಕನ ಮಾಡಿಕೊಳ್ಳುವ ಅಪರೂಪದ ಪ್ರಸಂಗವಿದೆ. ಇದೇ ಹೊತ್ತಲ್ಲಿ ಪರ್ಯಾಯ ಪ್ರಾದೇಶಿಕ ಪಕ್ಷವೊಂದರ ಅವಶ್ಯಕತೆಯನ್ನು ಕಾದಂಬರಿ ಒತ್ತಿ ಹೇಳುತ್ತದೆಯಾದರು ಅದು ಯಾವ ಸ್ವರೂಪದ್ದು ಎಂಬುದು ಕಾದಂಬರಿ ಓದುತ್ತಾ ಮೇಲ್ಕಾಣಿಸಿದ ಅನಿಕೇತನನ ಮಾತು ಕಾಡುತ್ತಾ ಹೋಗುತ್ತದೆ.
ಅನಿಕೇತನನ ಗಾಂಧೀ ವಿರೋಧಿಭಾವದ ಒಳ ಧ್ವನಿ, ಕಾದಂಬರಿಯುದ್ದಕ್ಕು ಸದಾ ಜಾತ್ಯಾತೀತ, ಮಾನವೀಯ ಮೌಲ್ಯ ಪ್ರತಿಪಾದಿಸುವಂತೆ ಭಾಸವಾಗುವ ಚಂದ್ರಹಾಸನಿಗೆ ಗೊತ್ತಿತ್ತೇ.. ಅಥವಾ ಇಲ್ಲವೇ… ಎಂಬುದು ಕಾದಂಬರಿ, ಪ್ರಜ್ಞಾಪೂರ್ವಕವಾಗಿ ಎಲ್ಲೂ ತನ್ನ ಗುಟ್ಟು ಬಿಟ್ಟು ಕೊಡದೆ ತನ್ನ ನಂತರ ವಾರಸುದಾರನೊಬ್ಬನನ್ನು ಪ್ರತಿಷ್ಠಾಪಿಸುವ ರಾಜಕೀಯ ತಂತ್ರಗಾರಿಕೆ ಮೆರೆಯುತ್ತದೆ. ಹಾಗೂ ಚಂದ್ರಹಾಸ “ತಾನು ಕೋಮುದ್ವೇಷಿಯಲ್ಲ. ಏಡ್ಸ್ ಸೂಜಿ ಪ್ರಕರಣ ವೈಯಕ್ತಿಕ ಮನಸ್ಥಿತಿಯದು” ಎಂಬುದನ್ನು ಒತ್ತಿ ಹೇಳುವಲ್ಲಿ ತನ್ನೊಳಗಿನ ಮತಾಂಧ ಮನಸ್ಥಿತಿಯನ್ನು ವ್ಯಕ್ತಪಡಿಸುವ ವಿಧಾನದಲ್ಲೆ ಇಡೀ ರಾಜಕೀಯ ನಾಟಕ ಅಡಗಿದೆ. ಇದನ್ನು ಕಾದಂಬರಿಕಾರರು ಸೂಕ್ಷ್ಮತಿಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ಈ ತರದ ಕಥನ ತಾಂತ್ರಿಕಾಂಶ ಎಸ್.ಎಲ್ಭೈರಪ್ಪನವರ ಕಾದಂಬರಿಗಳ ನಿರೂಪಣೆಯಲ್ಲಿ ಕಾಣಬಹುದು. ಹಾಗಾಗಿ ಕಾದಂಬರಿಕಾರ ಸತೀಶ್ ಶೆಟ್ಟಿ ವಕ್ವಾಡಿ ತಮ್ಮ ಹಿಂದಿನೆರಡು ಕೃತಿಗಳಲ್ಲಿ ಬಳಸದ ಕಥನ ತಂತ್ರಗಾರಿಕೆಯನ್ನು “ಸುಳಿ” ಯಲ್ಲಿ ಅತ್ಯಂತ ಜಾಣ್ಮೆಯಿಂದ ಸೂಕ್ಷ್ಮವಾಗಿ ಬಳಸಿದ್ದಾರೆ.
ಅವರ ಕಥನ ತಂತ್ರದ ಬಳಕೆಯನ್ನು ಉಲ್ಲೇಖಿಸುವುದಾದರೆ, ಶಾಸಕಾಂಗ ಸಭೆಗು ಮುನ್ನ ಚಂದ್ರಹಾಸ ನಡೆಸುವ ಪ್ರತ್ಯೇಕ ಸಭೆಯ ಅಂತಿಮದಲ್ಲಿ “ಪಕ್ಷಕ್ಕಾಗಿ ಅನಿಕೇತನನ ಶ್ರಮ ದೊಡ್ಡದಿದೆ. ಇವತ್ತಿನ ಕಾಲಮಾನಕ್ಕೆ ತಕ್ಕಂತೆ ರಾಜಕೀಯ ತಂತ್ರಗಾರಿಕೆಯನ್ನು ಅವನಷ್ಟು ಪರಿಣಾಮಕಾರಿಯಾಗಿ ಮಾಡುವ ಶಕ್ತಿ ನಮಗಿಲ್ಲ”
(ಅಂತ್ಯ -1 ಪುಟ, 149)
ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ, ಅನಿಕೇತನನ “ಪೂರ್ತಿ ಗಾಂಧಿವಾದದ ಮೇಲೆ ಈಗ ರಾಜಕೀಯ ಮಾಡಲು ಆಗೋಲ್ಲ” ಅನ್ನುವ ಮಾತಿಗು ಚಂದ್ರಹಾಸನ “ಇವತ್ತಿನ ಕಾಲಮಾನಕ್ಕೆ ತಕ್ಕಂತೆ ರಾಜಕೀಯ ತಂತ್ರಗಾರಿಕೆ” ಮಾತಿಗು ಸಾಮ್ಯತೆ ಇದೆಯಲ್ಲದೆ ಗಾಂಧಿವಾದ/ ಗಾಂಧಿಮಾರ್ಗವನ್ನೇ ಕಿತ್ತು ಗಾಂಧಿಯೇತರ ರಾಜಕೀಯ ಸ್ವರೂಪದ ಬಗ್ಗೆ ಎರಡೂ ಪಾತ್ರಗಳು ಪ್ರತಿಪಾದಿಸುತ್ತವೆ. ಈ ಮೂಲಕ ಕಾದಂಬರಿಯ ಧ್ವನಿ, ಮುಂದಿನ ಸಾಮಾಜಿಕ ಹೋರಾಟ, ಚಳುವಳಿ ರಾಜಕೀಯ ತರಹದ ಎಲ್ಲಾ ರಂಗಗಳಲ್ಲು ಗಾಂಧಿಯನ್ನು ಅಪ್ರಸ್ತುತಗೊಳಿಸುವ ವ್ಯವಸ್ಥಿತ ಮನಸ್ಥಿತಿ “ಸುಳಿ”ಯ ಮೂಲ ಪ್ರಸ್ತುತಪಡಿಸುತ್ತದೆ. ಇದನ್ನು ಮುಖಪುಟದ ಮೈಂಡ್ ಸೆಟ್ ಚಿತ್ರವೂ ಪೂರಕವಾಗಿ ಇದನ್ನೇ ಹೇಳುತ್ತದೆ.
ಕೊನೆಗೆ, ರಫಿ, ನಟರಾಜ್ ಪಾತ್ರಗಳಿಗೆ ವೈಯಕ್ತಿಕ ಪೆಟ್ಟಿನ ಮೂಲದ ಭಾಗಶಃ ಸತ್ಯದ ಅರಿವಿದ್ದೂ ಪ್ರಶ್ನಿಸಲಾಗದ ಸ್ಥಿತಿಯು ವ್ಯವಸ್ಥೆಯ ಕ್ರೌರ್ಯಕ್ಕೆ ಹಿಡಿದ ಕನ್ನಡಿಯಾದರೆ, ಆಕಸ್ಮಿಕ ಮುಖಾಮುಖಿಯಲ್ಲಿ ವೆಂಕಟೇಶ, ಸ್ಪೂರ್ತಿಯಲ್ಲಾಗುವ ಬದಲಾವಣೆ ಅಥವಾ ಮಾನಸಿಕ ಪರಿವರ್ತನೆ ಪಾಪಪ್ರಜ್ಞೆಯಿಂದ ಎಚ್ಚೆತ್ತು ಮಾನವೀಯ ನೆಲೆಗೆ ಹೊರಳುವ ಕ್ರಿಯೆ ಒಂದು ಕಡೆಯಾದರೆ, ಈ ನಾಲ್ಕೂ ಪಾತ್ರಗಳು ಚಂದ್ರಹಾಸ ಮತ್ತು ಅನಿಕೇತನನ ವೈಯಕ್ತಿಕ ತೃಷೆಯಿಂದ ಶೋಷಿಸಲ್ಪಡುತ್ತಲೆ ಇಲ್ಲಿನ ಪಾತ್ರಗಳು, ಸನ್ನಿವೇಶಗಳು, ಘಟನಾವಳಿಗಳು ಮತ್ತು ಕಥೆಯ ಒಟ್ಟಂದ ಹಿಂದಕ್ಕು ಮುಂದಕ್ಕು ಎಡತಾಕುತ್ತ ಆಯಾ ಕಾಲಘಟ್ಟಗಳ ಪರಿಧಿಯಲ್ಲಿ ಹಲವು ಪ್ರಶ್ನೆಗಳನ್ನು ಎತ್ತುತ್ತ ತಾರ್ಕಿಕವಾಗಿ ‘ಸುಳಿ’ ತನ್ನ ಅಂತರಂಗದ ಸತ್ಯವನ್ನು ತೆರೆದಿಡುತ್ತದೆ.
-ಎಂ.ಜವರಾಜ್

