ಸಸ್ಯಶಾಸ್ತ್ರದ ಲೋಕದಲ್ಲಿ ಒಂದು ಪ್ರವಾಸ – (ಭಾಗ 4)
ನಾವು ಪ್ರತಿದಿನ ಅಡುಗೆಮನೆಯಲ್ಲಿ ಹೆಸರುಕಾಳು, ಕಡಲೆ, ಅವರೆ, ತೊಗರಿ ಮುಂತಾದ ಕಾಳುಗಳನ್ನು ನೋಡುತ್ತೇವೆ. ಕೆಲವೊಮ್ಮೆ ಅವುಗಳನ್ನು ನೆನೆಸುತ್ತೇವೆ, ಬೇಯಿಸುತ್ತೇವೆ ಮತ್ತು ಆಹಾರವಾಗಿ ಸೇವಿಸುತ್ತೇವೆ. ಆದರೆ, ಆ ಪುಟ್ಟ ಕಾಳಿನೊಳಗೆ ಒಂದು ಹೊಸ ಸಸ್ಯವೇ ಅಡಗಿದೆ ಎಂಬುದನ್ನು ನಾವು ಎಂದಾದರೂ ಯೋಚಿಸಿದ್ದೇವೆಯೇ? ಒಂದು ಸಣ್ಣ ಬೀಜವು ಮೊಳಕೆಯೊಡೆದು, ಬೇರುಗಳನ್ನು ಬಿಟ್ಟು, ಎಲೆಗಳನ್ನು ಮೂಡಿಸಿ, ಮುಂದೆ ದೊಡ್ಡ ಸಸ್ಯವಾಗಿ ಬೆಳೆಯುತ್ತದೆ. ಅದೇ ಸಸ್ಯವು ಹೂವುಗಳನ್ನು ಬಿಟ್ಟು, ಕಾಯಿಗಳನ್ನು ನೀಡಿ ಮತ್ತೆ ನೂರಾರು ಬೀಜಗಳನ್ನು ಉತ್ಪಾದಿಸಬಹುದು. ಹೀಗೆ ಒಂದು ಸಣ್ಣ ಬೀಜದಿಂದ ಮತ್ತೊಂದು ಪೀಳಿಗೆಯ ಸಸ್ಯಗಳು ಹುಟ್ಟುತ್ತವೆ. ಪ್ರಕೃತಿಯ ಈ ಅದ್ಭುತವನ್ನು ತಿಳಿದುಕೊಳ್ಳಲು ಈ ಬಾರಿ ನಾವು ಒಂದು ಪುಟ್ಟ ಬೀಜದೊಳಗಿನ ಲೋಕಕ್ಕೆ ಪ್ರವಾಸ ಮಾಡೋಣ.
ಒಂದು ಬೀಜದೊಳಗೆ ಏನಿರುತ್ತದೆ?
ಹೊರಗಿನಿಂದ ನೋಡಿದಾಗ ಬೀಜವು ಗಟ್ಟಿಯಾದ ಚಿಕ್ಕ ಕಾಳಿನಂತೆ ಕಾಣುತ್ತದೆ. ಆದರೆ ಅದರೊಳಗೆ ಹೊಸ ಸಸ್ಯವಾಗಿ ಬೆಳೆಯಲು ಬೇಕಾದ ಆರಂಭಿಕ ಭಾಗಗಳಿರುತ್ತವೆ. ಬೀಜದ ಹೊರಭಾಗದಲ್ಲಿ ಒಂದು ಕವಚವಿರುತ್ತದೆ. ನಾವು ಹೆಸರುಕಾಳು ಅಥವಾ ಅವರೆ ಬೀಜವನ್ನು ಕೈಯಲ್ಲಿ ಹಿಡಿದು ನೋಡಿದಾಗ ಕಾಣುವ ಹೊರಗಿನ ಪದರವೇ ಈ ಕವಚ. ಇದು ಒಳಗಿರುವ ಭಾಗಗಳಿಗೆ ರಕ್ಷಣೆಯನ್ನು ನೀಡುತ್ತದೆ. ಬೀಜವು ಮಣ್ಣಿನಲ್ಲಿ ಬಿದ್ದಾಗಲೂ ಅದರೊಳಗಿನ ಜೀವಕ್ಕೆ ಹಾನಿಯಾಗದಂತೆ ಕಾಪಾಡಲು ಈ ಕವಚ ಸಹಾಯ ಮಾಡುತ್ತದೆ. ಬೀಜದ ಹೊರಭಾಗವನ್ನು ಸ್ವಲ್ಪ ಗಮನಿಸಿದರೆ ಅದರ ಮೇಲೆ ಸಣ್ಣ ಗುರುತೊಂದು ಕಾಣಿಸಬಹುದು. ಬೀಜವು ಮೊದಲು ಸಸ್ಯಕ್ಕೆ ಜೋಡಿಸಿಕೊಂಡಿದ್ದ ಸ್ಥಳದ ಗುರುತನ್ನು ‘ಹೈಲಮ್’ ಎಂದು ಕರೆಯುತ್ತಾರೆ. ಕೆಲವು ಬೀಜಗಳಲ್ಲಿ ಸಣ್ಣ ರಂಧ್ರವೂ ಇರುತ್ತದೆ. ಅದನ್ನು ‘ಮೈಕ್ರೊಪೈಲ್’ ಎಂದು ಕರೆಯುತ್ತಾರೆ. ಕೆಲವು ಬೀಜಗಳಲ್ಲಿ ಈ ರಂಧ್ರದ ಮೂಲಕ ನೀರು ಒಳಹೋಗಲು ಸಹಾಯವಾಗುತ್ತದೆ. ಹಾಗಾದರೆ, ಬೀಜದ ಒಳಗೆ ಏನಿದೆ? ಅದರೊಳಗೆ ಮುಂದೆ ಬೇರು, ಕಾಂಡ ಮತ್ತು ಎಲೆಗಳನ್ನು ಹೊಂದಿರುವ ಸಸ್ಯವಾಗಿ ಬೆಳೆಯುವ ಒಂದು ಪುಟ್ಟ ಆರಂಭಿಕ ರೂಪವಿರುತ್ತದೆ. ಇದನ್ನೇ ‘ಭ್ರೂಣ’ ಎಂದು ಕರೆಯುತ್ತಾರೆ. ಭ್ರೂಣವು ಬೆಳೆಯಲು ಬೇಕಾದ ಆಹಾರವೂ ಬೀಜದಲ್ಲಿ ಸಂಗ್ರಹವಾಗಿರುತ್ತದೆ. ಹೀಗಾಗಿ, ಬೀಜವು ಕೇವಲ ಒಂದು ಕಾಳಲ್ಲ; ಹೊಸ ಸಸ್ಯದ ಬೆಳವಣಿಗೆಗೆ ಬೇಕಾದ ಆರಂಭಿಕ ವ್ಯವಸ್ಥೆಯನ್ನು ಹೊಂದಿರುವ ಪ್ರಕೃತಿಯ ಅದ್ಭುತವಾಗಿದೆ.
ಬೀಜದೊಳಗಿನ ಪುಟ್ಟ ಸಸ್ಯ
ನಾವು ಒಂದು ಅವರೆ ಬೀಜವನ್ನು ನೀರಿನಲ್ಲಿ ನೆನೆಸಿ, ಅದರ ಹೊರಕವಚವನ್ನು ಎಚ್ಚರಿಕೆಯಿಂದ ತೆಗೆದರೆ ಒಳಗೆ ಎರಡು ದಪ್ಪವಾದ ಭಾಗಗಳು ಕಾಣಿಸುತ್ತವೆ. ಇವುಗಳನ್ನು ಬೀಜದಳಗಳು ಎಂದು ಕರೆಯುತ್ತಾರೆ. ಈ ಎರಡು ಭಾಗಗಳ ನಡುವೆ ಹೊಸ ಸಸ್ಯವಾಗಿ ಬೆಳೆಯುವ ಪುಟ್ಟ ಭ್ರೂಣವಿರುತ್ತದೆ. ಬೀಜದಳಗಳಲ್ಲಿ ಆಹಾರ ಸಂಗ್ರಹವಾಗಿರುತ್ತದೆ. ಬೀಜವು ಮೊಳಕೆಯೊಡೆಯುವ ಆರಂಭಿಕ ದಿನಗಳಲ್ಲಿ ಈ ಆಹಾರವು ಹೊಸ ಸಸ್ಯದ ಬೆಳವಣಿಗೆಗೆ ನೆರವಾಗುತ್ತದೆ. ಎಲ್ಲ ಬೀಜಗಳೂ ಇದೇ ರೀತಿ ಇರುವುದಿಲ್ಲ. ಹೆಸರುಕಾಳು, ಕಡಲೆ ಮತ್ತು ಅವರೆ ಮುಂತಾದವುಗಳಲ್ಲಿ ಎರಡು ಬೀಜದಳಗಳಿರುತ್ತವೆ. ಆದರೆ ಭತ್ತ, ಗೋಧಿ ಮತ್ತು ಮೆಕ್ಕೆಜೋಳದಂತಹ ಸಸ್ಯಗಳ ಬೀಜಗಳಲ್ಲಿ ಒಂದು ಬೀಜದಳವಿರುತ್ತದೆ. ಕೆಲವು ಬೀಜಗಳಲ್ಲಿ ಆಹಾರವು ಬೀಜದಳಗಳಲ್ಲಿ ಸಂಗ್ರಹವಾಗಿದ್ದರೆ, ಇನ್ನು ಕೆಲವು ಬೀಜಗಳಲ್ಲಿ ಅದು ಬೇರೆ ಭಾಗದಲ್ಲಿ ಸಂಗ್ರಹವಾಗಿರುತ್ತದೆ. ಈಗ ಒಂದು ಕುತೂಹಲಕಾರಿ ವಿಷಯವನ್ನು ಗಮನಿಸಿ. ನಾವು ನೆಲದಲ್ಲಿ ಒಂದು ಅವರೆ ಬೀಜವನ್ನು ಬಿತ್ತಿದಾಗ, ಅದರಿಂದ ಹೊರಬರುವ ಬೇರು ಮತ್ತು ಚಿಗುರು ಎಲ್ಲಿಂದ ಬರುತ್ತವೆ? ಅವು ಹೊರಗಿನಿಂದ ಬರುವುದಿಲ್ಲ. ಬೀಜದೊಳಗೆ ಮೊದಲಿನಿಂದಲೂ ಇರುವ ಆ ಪುಟ್ಟ ಭ್ರೂಣವೇ ಬೆಳೆಯುತ್ತಾ ಬೇರು, ಕಾಂಡ ಮತ್ತು ಎಲೆಗಳನ್ನು ರೂಪಿಸುತ್ತದೆ. ಅಂದರೆ, ದೊಡ್ಡ ಸಸ್ಯವಾಗಿ ಬೆಳೆಯುವ ಆರಂಭಿಕ ರೂಪವು ಆ ಚಿಕ್ಕ ಬೀಜದೊಳಗೇ ಅಡಗಿರುತ್ತದೆ.
ಮೊದಲು ಬೇರು, ನಂತರ ಚಿಗುರು
ಮಳೆ ಬಂದ ನಂತರ ಖಾಲಿ ಜಾಗದಲ್ಲಿ ಅಥವಾ ತೋಟದ ಮಣ್ಣಿನಲ್ಲಿ ಸಣ್ಣ ಸಣ್ಣ ಮೊಳಕೆಗಳು ಕಾಣಿಸಿಕೊಳ್ಳುವುದನ್ನು ನೀವು ಗಮನಿಸಿರಬಹುದು. ಆ ಮೊಳಕೆಗಳು ಹೇಗೆ ಹುಟ್ಟುತ್ತವೆ? ಒಂದು ಬೀಜಕ್ಕೆ ನೀರು ದೊರೆತಾಗ ಅದು ನೀರನ್ನು ಹೀರಿಕೊಂಡು ಉಬ್ಬುತ್ತದೆ. ಅದರೊಳಗಿನ ಬೆಳವಣಿಗೆಯ ಚಟುವಟಿಕೆಗಳು ಆರಂಭವಾಗುತ್ತವೆ. ಸೂಕ್ತವಾದ ಉಷ್ಣತೆ ಮತ್ತು ಗಾಳಿಯಲ್ಲಿರುವ ಆಮ್ಲಜನಕವೂ ದೊರೆತರೆ ಬೀಜವು ಮೊಳಕೆಯೊಡೆಯಲು ಆರಂಭಿಸುತ್ತದೆ. ಸಾಮಾನ್ಯವಾಗಿ ಬೀಜದಿಂದ ಮೊದಲು ಹೊರಬರುವ ಭಾಗವೇ ಬೇರು. ಬೀಜದೊಳಗಿನ ಈ ಭಾಗವನ್ನು ‘ಮೂಲಾಂಕುರ’ ಎಂದು ಕರೆಯುತ್ತಾರೆ. ಇದು ಕೆಳಮುಖವಾಗಿ ಬೆಳೆಯುತ್ತಾ ಮಣ್ಣಿನೊಳಗೆ ಪ್ರವೇಶಿಸುತ್ತದೆ. ಮುಂದೆ ಬೇರು ಬೆಳೆದು ಸಸ್ಯವನ್ನು ಮಣ್ಣಿನಲ್ಲಿ ಗಟ್ಟಿಯಾಗಿ ಹಿಡಿದಿಡುತ್ತದೆ. ಮಣ್ಣಿನಿಂದ ನೀರು ಮತ್ತು ಸಸ್ಯಕ್ಕೆ ಬೇಕಾದ ಖನಿಜಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ನಂತರ ಬೀಜದೊಳಗಿನ ಮತ್ತೊಂದು ಭಾಗ ಬೆಳೆಯಲು ಆರಂಭಿಸುತ್ತದೆ. ಅದರಿಂದ ಕಾಂಡ ಮತ್ತು ಚಿಗುರು ಬೆಳೆಯುತ್ತವೆ. ಈ ಭಾಗವನ್ನು ‘ಕಾಂಡಾಂಕುರ’ ಎಂದು ಕರೆಯುತ್ತಾರೆ. ನಿಧಾನವಾಗಿ ಸಣ್ಣ ಎಲೆಗಳು ಕಾಣಿಸಿಕೊಳ್ಳುತ್ತವೆ. ಆರಂಭದಲ್ಲಿ ಹೊಸ ಸಸ್ಯವು ಬೀಜದಲ್ಲಿರುವ ಆಹಾರವನ್ನು ಬಳಸಿಕೊಳ್ಳುತ್ತದೆ. ಎಲೆಗಳು ಬೆಳೆಯಲು ಪ್ರಾರಂಭಿಸಿದ ನಂತರ ಸೂರ್ಯನ ಬೆಳಕಿನ ಸಹಾಯದಿಂದ ತನ್ನ ಆಹಾರವನ್ನು ತಯಾರಿಸಿಕೊಳ್ಳುತ್ತದೆ. ಹೀಗೆ, ಮೊದಲು ಬೇರು, ನಂತರ ಚಿಗುರು, ಆಮೇಲೆ ಎಲೆಗಳು—ಇವೆಲ್ಲವೂ ಕ್ರಮೇಣ ಬೆಳೆಯುತ್ತವೆ. ಒಂದು ಪುಟ್ಟ ಬೀಜವು ಹೊಸ ಸಸ್ಯವಾಗಿ ರೂಪುಗೊಳ್ಳುವ ಈ ಪ್ರಕ್ರಿಯೆಯನ್ನೇ ‘ಮೊಳಕೆಯೊಡೆಯುವಿಕೆ’ ಎಂದು ಕರೆಯುತ್ತಾರೆ.
ಮನೆಯಲ್ಲಿಯೇ ಮಾಡಬಹುದಾದ ಒಂದು ಸರಳ ಪ್ರಯೋಗ
ಬೀಜದ ಈ ಅದ್ಭುತವನ್ನು ತಿಳಿಯಲು ಪ್ರಯೋಗಾಲಯವೇ ಬೇಕಿಲ್ಲ. ಮನೆಯಲ್ಲಿಯೇ ಒಂದು ಸಣ್ಣ ಪ್ರಯೋಗ ಮಾಡಬಹುದು. ಕೆಲವು ಹೆಸರುಕಾಳುಗಳನ್ನು ತೆಗೆದುಕೊಂಡು ರಾತ್ರಿ ನೀರಿನಲ್ಲಿ ನೆನೆಸಿಡಿ. ಮರುದಿನ ಅವುಗಳನ್ನು ತೆಗೆದು ತೇವವಾದ ಹತ್ತಿಯ ಮೇಲೆ ಅಥವಾ ತೇವಾಂಶವಿರುವ ಪಾತ್ರೆಯಲ್ಲಿ ಇಡಿ. ಹತ್ತಿ ತೇವವಾಗಿರುವಂತೆ ನೋಡಿಕೊಳ್ಳಿ. ಆದರೆ ಕಾಳುಗಳು ನೀರಿನಲ್ಲಿ ಸಂಪೂರ್ಣ ಮುಳುಗಿರುವಂತೆ ಇಡಬೇಡಿ. ಪ್ರತಿದಿನ ಅವುಗಳನ್ನು ಗಮನಿಸಿ. ಕೆಲವು ದಿನಗಳಲ್ಲಿ ಬೀಜಗಳು ಉಬ್ಬಿರುವುದನ್ನು ಕಾಣಬಹುದು. ನಂತರ ಅವುಗಳ ಹೊರಕವಚ ಬಿಚ್ಚಿ, ಬಿಳಿಯ ಬಣ್ಣದ ಸಣ್ಣ ಬೇರು ಹೊರಬರುತ್ತದೆ. ಆಮೇಲೆ ಚಿಗುರು ಬೆಳೆಯಲು ಆರಂಭಿಸುತ್ತದೆ. ಇನ್ನೂ ಕೆಲವು ದಿನಗಳ ನಂತರ ಎಲೆಗಳೂ ಕಾಣಿಸಿಕೊಳ್ಳುತ್ತವೆ. ಈ ಸರಳ ಪ್ರಯೋಗವು ನಮಗೆ ಒಂದು ದೊಡ್ಡ ಸತ್ಯವನ್ನು ತಿಳಿಸುತ್ತದೆ. ಜೀವದ ಬೆಳವಣಿಗೆಯು ಒಂದೇ ದಿನದಲ್ಲಿ ನಡೆಯುವುದಿಲ್ಲ. ಪ್ರತಿಯೊಂದು ಹಂತವೂ ತನ್ನದೇ ಆದ ಸಮಯವನ್ನು ತೆಗೆದುಕೊಳ್ಳುತ್ತದೆ. ಬೀಜಕ್ಕೆ ಸರಿಯಾದ ಪರಿಸ್ಥಿತಿಗಳು ದೊರೆತಾಗ ಅದರೊಳಗಿನ ಬೆಳವಣಿಗೆ ನಿಧಾನವಾಗಿ ಆರಂಭವಾಗುತ್ತದೆ. ಕೆಲವು ದಿನಗಳಲ್ಲಿ ನಮ್ಮ ಕಣ್ಣೆದುರೇ ಒಂದು ಹೊಸ ಸಸ್ಯ ರೂಪುಗೊಳ್ಳುತ್ತದೆ.
ಪ್ರತಿಯೊಂದು ಬೀಜವೂ ಒಂದು ಹೊಸ ಭರವಸೆ
ಪ್ರಕೃತಿಯಲ್ಲಿ ಬೀಜಗಳ ಆಕಾರ, ಗಾತ್ರ ಮತ್ತು ಬಣ್ಣಗಳು ವಿಭಿನ್ನವಾಗಿರುತ್ತವೆ. ಕೆಲವು ಬೀಜಗಳು ಗಾಳಿಯ ಸಹಾಯದಿಂದ ದೂರದ ಪ್ರದೇಶಗಳಿಗೆ ಹರಡುತ್ತವೆ. ಕೆಲವು ನೀರಿನ ಮೂಲಕ ಸಾಗುತ್ತವೆ. ಇನ್ನು ಕೆಲವು ಬೀಜಗಳು ಪ್ರಾಣಿಗಳ ಮೂಲಕ ಬೇರೆ ಸ್ಥಳಗಳಿಗೆ ತಲುಪುತ್ತವೆ. ಅನುಕೂಲಕರ ಪರಿಸ್ಥಿತಿಗಳು ದೊರೆತಾಗ ಅವು ಮೊಳಕೆಯೊಡೆದು ಹೊಸ ಸಸ್ಯಗಳಾಗಿ ಬೆಳೆಯುತ್ತವೆ. ಈ ರೀತಿಯಾಗಿ ಸಸ್ಯಗಳು ತಮ್ಮ ಸಂತತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುತ್ತವೆ. ಒಂದು ಬೀಜವು ಬೆಳೆಯಲು ನೀರು, ಗಾಳಿ ಮತ್ತು ಸೂಕ್ತವಾದ ಉಷ್ಣತೆ ಅಗತ್ಯ. ಅದಕ್ಕೆ ಬೆಳೆಯಲು ಸಮಯವೂ ಬೇಕು. ಅದೇ ರೀತಿ ಮನುಷ್ಯನ ಜೀವನದಲ್ಲಿಯೂ ಯಶಸ್ಸು ತಕ್ಷಣವೇ ದೊರೆಯುವುದಿಲ್ಲ. ನಮ್ಮಲ್ಲಿರುವ ಪ್ರತಿಭೆ ಬೆಳೆಯಲು ಅವಕಾಶ, ಪರಿಶ್ರಮ, ತಾಳ್ಮೆ ಮತ್ತು ಸರಿಯಾದ ಮಾರ್ಗದರ್ಶನ ಅಗತ್ಯ. ಬೀಜವು ನಿಧಾನವಾಗಿ ಬೆಳೆದು ದೊಡ್ಡ ಸಸ್ಯವಾಗುವಂತೆ, ನಮ್ಮ ಸಣ್ಣ ಪ್ರಯತ್ನಗಳೂ ಕಾಲಕ್ರಮೇಣ ದೊಡ್ಡ ಸಾಧನೆಗಳಾಗಿ ರೂಪುಗೊಳ್ಳಬಹುದು. ಇಂದು ನಾವು ಮಣ್ಣಿನಲ್ಲಿ ಬಿತ್ತುವ ಒಂದು ಪುಟ್ಟ ಬೀಜ ನಾಳೆ ಹೂವುಗಳನ್ನು ಅರಳಿಸಬಹುದು, ಹಣ್ಣುಗಳನ್ನು ನೀಡಬಹುದು ಅಥವಾ ದೊಡ್ಡ ಮರವಾಗಿ ಬೆಳೆದು ಅನೇಕರಿಗೆ ನೆರಳು ನೀಡಬಹುದು. ಆ ಮರವು ಪಕ್ಷಿಗಳಿಗೆ ಆಶ್ರಯವಾಗಬಹುದು ಮತ್ತು ಪರಿಸರದ ಸೌಂದರ್ಯವನ್ನು ಹೆಚ್ಚಿಸಬಹುದು. ಆದ್ದರಿಂದ ಒಂದು ಬೀಜವನ್ನು ನೆಡುವುದು ಎಂದರೆ ಕೇವಲ ಸಸ್ಯವನ್ನು ಬೆಳೆಸುವುದಲ್ಲ; ಅದು ಭವಿಷ್ಯಕ್ಕಾಗಿ ಹಸಿರನ್ನು ಬೆಳೆಸುವುದಾಗಿದೆ.
ಒಂದು ಪುಟ್ಟ ಬೀಜದೊಳಗೆ ಅಡಗಿರುವುದು ಕೇವಲ ಒಂದು ಸಸ್ಯವಲ್ಲ; ಅದು ಹೊಸ ಬದುಕಿನ ಆರಂಭ. ಇಂದು ನಾವು ನೆಡುವ ಒಂದು ಬೀಜ ನಾಳೆ ಅನೇಕ ಜೀವಿಗಳಿಗೆ ಆಶ್ರಯ ನೀಡುವ ಮರವಾಗಬಹುದು. ಪ್ರಕೃತಿಯ ಈ ಅದ್ಭುತವನ್ನು ಅರಿತು, ಪ್ರತಿಯೊಬ್ಬರೂ ಕನಿಷ್ಠ ಒಂದು ಸಸ್ಯವನ್ನಾದರೂ ಬೆಳೆಸೋಣ
-ರೋಹಿತ್ ವಿಜಯ್ ಜಿರೋಬೆ.



