‘ನಮ್ಮ ಶಾಲೆಯಲ್ಲಿ ನೀವು ಶಿಕ್ಷಕರು ಸ್ಪೆಷಲ್ ಕ್ಲಾಸ್ ಮಾಡುತ್ತಿದ್ದೀರಿ , ನಾಲಕ್ಕು ಗಂಟೆ ನಂತರ ನಮಗೆ ಹಸಿವಾಗುತ್ತದೆ , ಏನಾದರೂ ತಿಂಡಿ ವ್ಯವಸ್ಥೆ ಮಾಡಿಸಿ ‘ ಶಾಲಾ ಸಲಹಾ ಪೆಟ್ಟಿಗೆಯಲ್ಲಿದ್ದ ಮಕ್ಕಳ ಈ ಬೇಡಿಕೆ ಸಲಹೆ ಮುಖ್ಯಶಿಕ್ಷಕರನ್ನು ತಲುಪಿತು ಶಿಕ್ಷಕರಿಗೆ ಮಕ್ಕಳ ಪರಿಸ್ಥಿತಿ ಅರ್ಥವಾಗಿ ಕರುಳು ಚುರ್ ಎಂದಿತು . ತಕ್ಶಣ ಅಂದಿನ ದಿನದಿಂದಲೇ ಮಕ್ಕಳಿಗೆ ಸ್ಪೆಷಲ್ ಕ್ಲಾಸ್ ಇದ್ದ ಸಮಯದಲ್ಲಿ ಸಮೋಸ , ಬನ್ , ಉಪ್ಪಿಟ್ಟು ,ಕೆಲವು ದಿನ ಮಸಾಲೆದೋಸೆ ಸಹ ಸಿಗಲು ಪ್ರಾರಂಭವಾಯಿತು . ಮಕ್ಕಳ ಸಲಹೆಗೆ , ಬೇಡಿಕೆಗೆ ಮನ್ನಣೆ ದೊರಕಿತ್ತು ..
ಇನ್ನೊಂದು ಶಾಲೆಯಲ್ಲಿ ಸಲಹಾ ಪೆಟ್ಟಿಗೆಯಲ್ಲಿ ಮಕ್ಕಳು ಬರೆದಿದ್ದರು ‘’ ಸವಿತಾ ಟೀಚರ್ ನೀವು ನಮಗೆ ಪಾಠ ಮಾಡುವಾಗ ಇಂಗ್ಲಿಷ್ ಪದಗಳನ್ನು ಹೇಳಿಕೊಡಿ .. ನಾವು ಎಲ್ಲಾ ಇಂಗ್ಲಿಷ್ ಮಾತೋಡೋದನ್ನ ಕಲಿಯಬೇಕು … ‘’ ಸವಿತಾ ಟೀಚರ್ ಮಾತ್ರವಲ್ಲ ಎಲ್ಲಾ ಶಿಕ್ಷಕರು ಮಕ್ಕಳಿಗೆ ಇಂಗ್ಲಿಷ್ ಪದಗಳನ್ನು ಹೇಳಿಕೊಡ ತೊಡಗಿದರು .. ಮಕ್ಕಳ ಆನಂದಕ್ಕೆ ಎಣೆಯೇ ಇಲ್ಲವಾಯಿತು ..
ಇನ್ನೊಂದು ಶಾಲೆಯಲ್ಲಿ ‘ನಮಗೆ ಕಂಪ್ಯೂಟರ್ ಕಳಿಸಿ ‘ ಸಲಹಾಪೆಟ್ಟಿಗೆಯಲ್ಲಿ ಇದ್ದ ಸಲಹೆ ಬೇಡಿಕೆ ಇಷ್ಟೇ ..ಶಾಲೆಯ ಮುಖ್ಯೋಪಾದ್ಯಾಯರು ಮಕ್ಕಳ ಬೇಡಿಕೆಯನ್ನು ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ರಕ್ಷಣೆಗೆ ಶ್ರಮಿಸುತ್ತಿರುವ ಬೆಂಗಳೂರಿನ ಸ್ಪರ್ಶ ಸಂಸ್ಥೆಗೆ ತಲುಪಿಸಿದರು .. ವಾರ ಕಳೆಯುವಷ್ಟರಲ್ಲಿ ಮಕ್ಕಳಿಗೆ ಕಂಪ್ಯೂಟರ್ ದೊರಕಿತು …
ಮೇಲಿನ ಪ್ರಕರಣಗಳು ಮಕ್ಕಳ ಭಾಗವಹಿಸುವ ಹಕ್ಕನ್ನು ಎತ್ತಿ ಹಿಡಿಯುವ ಘಟನೆಗಳಾಗಿವೆ . ಮೇಲು ನೋಟಕ್ಕೆ ಅಯ್ಯೋ ಇದು ಮಾಮೂಲಿ ಘಟನೆಗಳು ಎಂದು ಅನಿಸಿದರೂ ಇದು ಮಕ್ಕಳಲ್ಲಿ ಆಗಿರುವ ಬಹುದೊಡ್ಡ ಬದಲಾವಣೆಗೆ ಹಿಡಿದ ಕನ್ನಡಿಯಾಗಿದೆ . ೧೯೮೯ ರ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪ್ರಕಾರ ಮಕ್ಕಳಿಗೆ ಬದುಕುವ ಹಕ್ಕು , ರಕ್ಷಣೆಯ ಹಕ್ಕು , ಅಭಿರುದ್ದಿಯ ಹಕ್ಕು ಹಾಗೂ ಭಾಗವಹಿಸುವ ಹಕ್ಕುಗಳಿವೆ. ಭಾಗವಹಿಸುವ ಹಕ್ಕು ಮಕ್ಕಳ ವ್ಯಕ್ತಿತ್ವವನ್ನು ರೂಪಿಸಲು ಅವಕಾಶ ಮಾಡಿಕೊಡುತ್ತದೆ . ಹಿರಿಯರು ಕಿರಿಯರ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳ ಬೇಕಾದರೆ ಕಿರಿಯರ ಅಭಿಪ್ರಾಯವನ್ನು ತೆಗೆದುಕೊಳ್ಳಬೇಕು ಮತ್ತು ಅಳವಡಿಸಿ ಕೊಳ್ಳಬೇಕು ‘ ಮಕ್ಕಳಿಗೆ ಮಾತನಾಡಲು ಅಭಿಪ್ರಾಯ ಹೇಳಲು ಅವಕಾಶ ನೀಡಬೇಕು , ಇದರಿಂದಾಗಿ ಮಕ್ಕಳಲ್ಲಿ ನಿರ್ಧಾರತೆಗೆದುಕೊಳ್ಳುವ ಗುಣ , ನಾಯಕತ್ವದ ಗುಣಗಳು ಹಾಗೂ ಉತ್ತಮ ಸಂವಹನದ ಕೌಶಲ್ಯಗಳು ವೃದ್ಧಿಯಾಗುತ್ತವೆ .
ಮೇಲಿನ ಮೂರೂ ಘಟನೆಗಳನ್ನು ಗಮನಿಸಿ ಮಕ್ಕಳು ಎರಡು ಮೂರೂ ವಾಕ್ಯಗಳ ಸಲಹೆಗಳನ್ನು , ಬೇಡಿಕೆಗಳನ್ನು ಬರೆಯುವಾಗ ಎಷ್ಟು ಯೋಚನೆ ಮಾಡಿರುತ್ತಾರೆ .. ಗೆಳೆಯರೊಡನೆ ಎಷ್ಟು ಚರ್ಚೆಗಳು ಆಗಿರುತ್ತವೆ , ಎಷ್ಟು ಸಾರಿ ಬರೆದು ಹರಿದು ಹಾಕಿರುತ್ತಾರೆ , ಅಂತಿಮವಾಗಿ ಸಲಹಾಪೆಟ್ಟಿಗೆಗೆ ಸಲಹೆಯನ್ನು ಹಾಕಿ ಫಲಿತಾಂಶಕ್ಕೆ ಕಾಯುವಾಗ ಎಷ್ಟು ಆತಂಕ ಎದುರಿಸಿರುತ್ತಾರೆ .. ಫಲಿತಾಂಶ ಧನಾತ್ಮಕವಾಗಿ ಬಂದಾಗ ಆಗುವ ಖುಷಿಗೆ ಬೆಲೆಕಟ್ಟಲಾಗುತ್ತದೆಯೇ ? ಇದು ನನ್ನಿಂದ ಆಗಿದ್ದು ಎನ್ನುವ ಹೆಮ್ಮೆ ಮಕ್ಕಳ ಆತ್ಮವಿಶ್ವಾಸವನ್ನು ಮುಗಿಲಿಗೇರಿಸಿರುತ್ತದೆ . ಒಂದು ಮಗುವಿನ ಸಫಲತೆಯನ್ನು ಕಂಡು ಮತ್ತೊಂದು ಮಗು ತಾನು ಸಲಹೆ ಬರೆಯಲು ಸಮಸ್ಯೆಯನ್ನು ಹುಡುಕಲಾರಂಭಿಸುತ್ತದೆ . ಮಕ್ಕಳು ಸಮಸ್ಯೆಗಳನ್ನು ಹುಡುಕತೊಡಗಿದರೆ ಅವರ ಹಕ್ಕುಗಳು ಉಲ್ಲಂಘನೆಯಾಗುವುದನ್ನು ಅವರೇ ಪ್ರಯತ್ನಿಸುತ್ತಾರೆ . ಇದು ಅಭಿವೃದ್ಧಿಯ ಬದಲಾವಣೆಯ ಚಕ್ರ .
ಬೆಂಗಳೂರಿನ ಸ್ಪರ್ಶ ಸಂಸ್ಥೆಯ ಸಾಮೂಹಿಕ ಶಕ್ತಿ ಯೋಜನೆಯಡಿಯಲ್ಲಿ ‘’ಸಲಹಾ ಪೆಟ್ಟಿಗೆ’’ಗಳನ್ನು ಬೆಂಗಳೂರಿನ ಸುಮಾರು ೩೩ ಶಾಲೆಗಳಲ್ಲಿ ಇಡಲಾಗಿದೆ . ಪ್ರತಿ ತಿಂಗಳೂ ಒಂದು ಸಲಹಾಪೆಟ್ಟಿಗೆಯಲ್ಲಿ ಸುಮಾರು ೨೦ ಸಲಹೆಗಳು ಬಂದಿರುತ್ತವೆ . ಆ ಸಲಹೆಗಳಲ್ಲಿ ಯಾವುದು ಅಗತ್ಯವಿದೆ , ಯಾವುದು ಮುಖ್ಯ ಎಂಬುದನ್ನು ಶಿಕ್ಷಕರು ನಿರ್ಧರಿಸಿ ಮಕ್ಕಳ ಹಿತದೃಷ್ಟಿ ಇಂದ ತೀರ್ಮಾನ ತೆಗೆದುಕೊಳ್ಳುತ್ತಾರೆ . ಸಲಹಾಪೆಟ್ಟಿಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಸೇತುವೆಯಾಗಿದೆ .
ಕೆಲವು ವರುಷಗಳ ಹಿಂದೆ ಪ್ರತಿಶಾಲೆಯಲ್ಲಿ ‘’ದೂರು ಪೆಟ್ಟಿಗೆ ‘’ ಇರಬೇಕು ಎಂಬ ನಿಯಮವಿತ್ತು . ‘’ದೂರು’’ ಈ ಪದ ಮಕ್ಕಳಲ್ಲಿ ಹೆದರಿಕೆ ಉಂಟುಮಾಡುತಿತ್ತು . ಹಾಗಾಗಿ ಮಕ್ಕಳು’ ದೂರು ‘ ಬರೆಯುವುದರಿಂದ ದೂರ ಇದ್ದರು . ಸಮಸ್ಯೆಗಳಿಂದ ಬಳಲುತ್ತಿದ್ದರು . ಆದರೆ ಸ್ಪರ್ಶ ಸಂಸ್ಥೆ ದೂರು ಬದಲಾಗಿ ಸಲಹೆ ಎಂದು ಬಲಾಯಿಸಿರುವುದರಿಂದ ಮಕ್ಕಳಲ್ಲಿ ಭಯ ಇಲ್ಲವಾಗಿದೆ . ದೂರುಗಳು ಸಹ ಸಲಹೆಯಂತೆ ಬರತೊಡಗಿವೆ .
ಸಲಹಾಪೆಟ್ಟಿಗೆಯ ಉಪಯೋಗದ ಬಗ್ಗೆ ಸರ್ಕಾರಿಶಾಲೆಯ ಅಧ್ಯಾಪಕರಾದ ಶ್ರೀಮತಿ ಉಷಾರವರನ್ನು ಮಾತಾಡಿಸಿದೆ ‘ ಈ ಸಲಹಾಪೆಟ್ಟಿಗೆ ನಮ್ಮ ಶಾಲೆಗೆ ಬಂದ ನಂತರ ಮಕ್ಕಳ ಹಲವಾರು ಸಮಸ್ಯೆಗಳು ಬೆಳಕಿಗೆ ಬರತೊಡಗಿವೆ , ಮಕ್ಕಳು ಹಲವಾರು ಹಿನ್ನಲೆಯಿಂದ ಬಂದಿರುತ್ತಾರೆ ,ಕೆಲವು ಮಕ್ಕಳು ತಮ್ಮ ಸಮಸ್ಯೆಗಳನ್ನು ಹೇಳುವುದೇ ಇಲ್ಲ , ಆದರೆ ಈ ಸಲಹಾಪೆಟ್ಟಿಗೆ ಬಂದಿರುವುದರಿಂದ ಮಕ್ಕಳು ತಮ್ಮ ಸಲಹೆ ಸಮಸ್ಯೆ ಬರೆಯುವುದರಿಂದ ಅದನ್ನು ಪರಿಹಾರ ಮಾಡಿ ಮಕ್ಕಳು ಶಾಲೆಗೆ ಬರುವುದಕ್ಕೆ ಸಹಕಾರ ನೀಡಲು ಸಹಾಯವಾಗಿದೆ . ಮಕ್ಕಳು ಸಂತೋಷವಾಗಿ ಶಾಲೆಗೆ ಬರಬೇಕು , ಕಲಿಯಬೇಕು ‘.. ಎಂದರು .
‘’ಸಲಹಾಪೆಟ್ಟಿಗೆಗೆ ಸಲಹೆ ಬರೆದು ಹಾಕುವಾಗ ನಮ್ಮ ಸಮಸ್ಯೆ ಪರಿಹಾರ ಆಗುತ್ತದೋ ಇಲ್ಲವೋ ಎಂಬ ಭಯ ಇತ್ತು , ಸಲಹೆ ಕೊಟ್ಟ ಎರಡು ತಿಂಗಳಲ್ಲೀಯೇ ನಮ್ಮ ಶಾಲೆಗೆ ಕಂಪ್ಯೂಟರ್ ಬಂದಿದ್ದು ತುಂಬಾ ಸಂತೋಷವಾಯಿತು , ಬೇರೆ ಸಮಸ್ಯೆ ಬರೆಯಲು ಸ್ಪೂರ್ತಿ ಬಂತು ‘’ ಇದು ವಿದ್ಯಾರ್ಥಿನಿ ನಿಸರ್ಗ ಹೇಳಿದ್ದು .
ಮಕ್ಕಳ ಎಲ್ಲಾ ಸಮಸ್ಯೆ ಶಾಲೆಯಲ್ಲಿ ಪರಿಹಾರವಾದರೆ ಶಾಲೆ ಮಕ್ಕಳ ಸ್ನೇಹಿಯಾಗುತ್ತದೆ . ಪ್ರತಿಯೊಂದು ಶಾಲೆಗೆ ಹೋಗಿ ಮಕ್ಕಳಿಗೆ ಸಲಹಾಪೆಟ್ಟಿಗೆಯ ಬಗ್ಗೆ ಮಾಹಿತಿನೀಡಿ , ಶಿಕ್ಷಕರ ಮನವೊಲಿಸಿ ಮಕ್ಕಳ ಸಮಸ್ಯಗಳ ಪರಿಹಾರಕ್ಕೆ ಶ್ರಮಿಸುತ್ತಿರುವ ಸಾಮೂಹಿಕ ಶಕ್ತಿ ಯೋಜನೆಯ ಸದಸ್ಯರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಹೇಳಲೇ ಬೇಕು .
ಸಮಸ್ಯೆಗಳನ್ನು ಕೇಳುವುದು ಸುಲಭ .. ಪರಿಹರಿಸುವುದು ????
–ನಾಗಸಿಂಹ ಜಿ ರಾವ್
