“ನಾಳೆಯಿಂದ ಕುಡಿಯುವುದಿಲ್ಲ. ನಾಳೆಯಿಂದ ಸುಳ್ಳು ಹೇಳುವುದಿಲ್ಲ. ನಾಳೆಯಿಂದ ಯಾರೆದುರು ಹಲ್ಲುಗಿಂಜಿ ನಿಲ್ಲುವುದಿಲ್ಲ. ಅಷ್ಟೇ ಏಕೆ, ಬೂಟಾಟಿಕೆ, ನಾಟಕ, ಲಂಪಟತನ ಮಾಡುವುದಿಲ್ಲ. ನಾಳೆಯಿಂದ ಕಂಪ್ಲೀಟ್ ಚೇಂಜ್. ಕಂಪ್ಲೀಟ್ ಡಿಸೆಂಟ್ ಬಾಯ್. ಸಂಪೂರ್ಣ ಹೊಸ ಮನುಷ್ಯ. ಎಲ್ಲರಿಗೂ ಬೇಕಾಗುವ ಎಲ್ಲರೂ ಇಷ್ಟಪಡುವ ಅಚ್ಚುಮೆಚ್ಚಿನ ಹುಡುಗ. ಸಾಧ್ಯವಾದರೆ ನಾಲ್ಕು ಜನರು ಮೆಚ್ಚುವ ಹಾಗೆ ಏನೋ ಒಂದು ಮಾಡ್ಬೇಕು. ಒಂದು ನಿರ್ದಿಷ್ಟ ಗುರಿ ಆದರ್ಶ ಅಂತ ಬದುಕಬೇಕು.”
ಹಾಗಂತ ಸೀರಿಯಸ್ ಆಗಿ ಅಂದುಕೊಳ್ಳುತ್ತೀರಿ. ಅಷ್ಟರಲ್ಲಾಗಲೇ ಫ್ರೆಂಡಿಂದ ಫೋನ್. “ಲೋ ಮಗಾ, ಎಲ್ಲಿದ್ದಿಯೋ..? ನನ್ ಹುಡುಗಿ ಯಾಕೋ ಫೋನೇ ಪಿಕ್ ಮಾಡ್ತಿಲ್ಲ ಕಣೋ, ಯಾಕೋ ಸಿಕ್ಕಾಪಟ್ಟೆ ಸತಾಯಿಸ್ತಾವಳೋ… ಏನೂ ಅಂತ ಗೊತ್ತಾಗ್ತಿಲ್ಲ ಕಣೋ.. ಪುಲ್ ತಲೆಕೆಟ್ಟೊಗ್ಬಿಟ್ಟಿದೆ.. ಇವತ್ತು ಅದೇನೆ ಆಗಲಿ.. ಪುಲ್ ಟೈಟ್ ಆಗಲೇ ಬೇಕು ಮಗಾ… ಎಲ್ಲಿದೀಯ.. ಬೇಗ ಬಂದ್ಬಿಡೋ… ನಿನ್ನ ಹತ್ರಾ ಬೇಜಾನ್ ಮಾತಾಡೋದಿದೆ.”
“ಥೋ… ಈಗಷ್ಟೇ ಕುಡಿಯಲ್ಲ ಅಂದುಕೊಂಡನಲ್ಲ… ಅಷ್ಟರಲ್ಲಾಗಲೇ ಇವನು… ಥತ್…” ಅಂತ ಅಂದುಕೊಳ್ಳುತ್ತೀರಿ…ಏನೇ ಆಗಲಿ ನಿರ್ಧಾರ ಮಾಡಿದ ಮೇಲೆ ಮುಗೀತು. ಮತ್ತೆ ಅದರ ಬಗ್ಗೆ ಯೋಚನೆ ಮಾಡಬಾರದು. ಬಿಲ್ ಕುಲ್ ಒಪ್ಪಬಾರದು. ಹಾಗಂತ ತೀರ್ಮಾನಿಸಿಯೇ ಬಿಡುತ್ತೀರಿ. ಆದರೆ ನಾನಲ್ಲಿಗೆ ಹೋದ್ರೆ ಕಷ್ಟ… ಅಂದ್ಮೇಲೆ ಏನೋ ಒಂದ್ ಹೇಳಿ ಎಸ್ಕೇಪ್ ಆಗ್ಬೇಕು. ಏನೋ ಒಂದು ಯಾಕೆ ಹೇಳ್ಬೇಕು..? ನಿಜಾನೇ ಹೇಳೋಣ..”
“ಇಲ್ಲಾ ಕಣಾ, ಅದು…ಅದು… ನಾನು ಕುಡಿಯೋದನ್ನ ಬಿಟ್ಟುಬಿಟ್ಟಿದೀನಿ.. ಯಾಕೋ ಸರಿಬರ್ತಿಲ್ಲ ಅಂತ.. ದಯವಿಟ್ಟು ಬೇರೆ ತಿಳಿಬೇಡ.”
“ಏನು..? ಕುಡಿಯೋದನ್ನ ಬಿಟ್ಟುಬಿಟ್ಟಿದೀಯಾ… ಯಾರ ಹತ್ರಾ ಡವ್ ಮಾಡ್ತಿದೀಯಪ..? ಸಾಕುಮಾಡಲೇ ನಿನ್ನ ಡ್ರಾಮಾನಾ… ಏನ್ ಬರ್ತಿಯಾ ಇಲ್ವಾ…?”
“ಇಲ್ಲಾ ಕಣಾ, ನಿಜವಾಗಲೂ ಕುಡಿಯೋದನ್ನ ಬಿಡಬೇಕು ಅಂದುಕೊಂಡಿದೀನಿ. ಅದು ಬೇರೆ ನನಗೀಗ ಕೆಲ್ಸ ಇದೆ. ಅಲ್ಲಿಗೆ ಹೋಗ್ಬೇಕು. ಬೇಜಾರ್ ಮಾಡ್ಕೋಬೇಡ ಮಗಾ..”
“ಅಲೆಲೇ…ಅದೆನೋ ನಂಗ್ ಗೊತ್ತಿಲ್ಲದರೋ ಕೆಲ್ಸ..! ಯಾರೋ ಪಕ್ಕದಲ್ಲಿ ನನ್ ತರಾ ಪುಣ್ಯಾತ್ಮ ಸಿಕ್ಕಿರಬೇಕು. ಅವರ ಕಿವಿಗೆ ಯಾವ್ ಹೂ ಇಡಲಿ ಅಂತ ಯೋಚಿಸ್ತಿರ್ತಿಯಾ… ನೀನ್ ಕೆಲಸ ಗೊತ್ತಿಲ್ವೆವೆನೋ.. ಅಲಾ.. ಮೂರು ಹೊತ್ತು ನನ್ನ ಹಿಂದೆನೆ ಇರೋನು… ಇರಲಿ ಬಿಡು, ನಿನ್ ಬುದ್ದಿ ಗೊತ್ತಾಯಿತು..” ಹಾಗಂತ ಹೇಳಿ ಕಾಲ್ ಕಟ್ ಮಾಡ್ತಾನೆ.
“ಹಲೋ..ಹಲೋ…ಥೋ… ಏನಪಾ ಇವನು… ನಾನೇಳಿದ್ದರೂ ನಂಬತಾನೆ ಇಲ್ವಲಪ್ಪ .. ಇವನಿಗೆ ಹ್ಯಾಗೆ ನಂಬಿಸೋದು..? ಏನ್ಮಾಡೋದು ಇವಾಗ…?”
ಹೌದು. ಅವನು ನಂಬೋದಿಲ್ಲ. ನೀವೇನೇ ಹೇಳಿದರೂ ನಿಮ್ಮ ಸ್ನೇಹಿತ ನಂಬಲ್ಲ. ನಿಮ್ಮ ಸ್ನೇಹಿತ ಯಾಕೆ ನಿಮ್ಮ ಸುತ್ತಲಿನ ಜಗತ್ತೇ ನಂಬಲ್ಲ. ಏಕೆಂದರೆ ಅದು ನಿಮ್ಮ ಇಲ್ಲಿಯವರೆಗಿನ ಕ್ಯಾರೆಕ್ಟರ್. ನಿಮ್ಮ ಇಲ್ಲಿಯವರೆಗಿನ ಇಮೇಜ್. ನೀವೇನೋ ಈ ಕ್ಷಣಕ್ಕೆ ನಾಳೆಯಿಂದ ಒಳ್ಳೆಯವನಾಗಿ ಬದುಕಬೇಕು ಎಂದು ನಿರ್ಧಾರ ಮಾಡಿರಬಹುದು. ಆದರೆ ಅದು ನಿಮ್ಮ ಜೊತೆಯಲಿದ್ದವರಿಗೆ ಅಷ್ಟು ಸುಲಭದಲ್ಲಿ ತಿಳಿಯುವುದಿಲ್ಲ. ತಿಳಿದರೂ ಅದನ್ನವರು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅಷ್ಟು ಸುಲಭದಲ್ಲಿ ಅವರು ನಿಮ್ಮನ್ನು ನಂಬಲಾರರು.
ಜಸ್ಟ್ ನೀವು ಕುಡಿಬಾರದು ಅಂದುಕೊಂಡು ಎರಡು ನಿಮಿಷ ಕೂಡ ಆಗಿಲ್ಲ. ಆಗಲೇ ನಿಮಗೆ ಫೋನ್ ಕಾಲ್, ಎಲ್ಲಿದ್ದಿಯ ಬಾ ಅಂತ.. ಸಮಸ್ಯೆ ಅವನದು. ಆದರೂ ಅವನಿಗೆ ಕುಡಿಯೋದಕ್ಕೆ ನೀವು ಕಂಪನಿ ಕೊಡಬೇಕು. ಏಕೆಂದರೆ ಇಷ್ಟು ದಿನ ನೀವು ಮಾಡಿದ್ದು ಅದನ್ನೆ ಅಲ್ಲವೇ…? ನಿಮಗೆ ಬೇಕೋ ಬೇಡವೋ ಅವನೆದುರು ಕುಂತಿರಿ. ಏನೋ ಕಷ್ಟ ಆದಾಗ ಆಗಿಬರ್ತಾನೆ ಅಂತ ನಿಮ್ಮ ಎಣಿಕೆ. ಆತನಿಗೂ ಅಷ್ಟೇ, ಏನೇ ಸಮಸ್ಯೆ ಬಂದರೂ ಹೇಳಿಕೋಳ್ಳಲಿಕ್ಕೆ ಕಂಪನಿಗೆ ನೀವಿದೀರಿ ಅಂತ. ಆದರೆ ನಿಮಗೀಗ ನೀವಿರುವ ರೀತಿ ಸಾಕಾಗಿ ಹೋಗಿದೆ. ನಾನು ಬದಲಾಗಬೇಕು, ಹಾಗೆ ಬದಲಾದರಷ್ಟೇ ಸಮಾಜದಲ್ಲಿ ಮರ್ಯಾದೆ ಅಂತ ಅನಿಸಿಬಿಟ್ಟಿದೆ. ಅದಕ್ಕಾಗಿ ಕುಡಿಯೋದನ್ನು ಬಿಡಬೇಕು ಒಳ್ಳೆಯ ಮನುಷ್ಯನಾಗಿ ಬಾಳಬೇಕು ಅಂತ ನಿರ್ಧಾರ ಮಾಡಿದ್ದೀರಿ. ಅದನ್ನೇ ಸ್ನೇಹಿತನಿಗೂ ಹೇಳಿದ್ದೀರಿ. ಆದರೆ ಆತ ನಂಬುವುದಿಲ್ಲ. ನೀವು ಸುಳ್ಳು ಹೇಳ್ತಿದ್ದೀರಿ, ನಾಟಕ ಮಾಡ್ತಿದ್ದೀರಿ ಎಂದೇ ಭಾವಿಸುತ್ತಾನೆ. ಈ ಕ್ಷಣಕ್ಕೆ ಯಾರೇದುರೋ ಹಲ್ಲುಗಿಂಜಿ ನಿಂತಿರಬೇಕು ಅಂತಲೇ ಯೋಚಿಸುತ್ತಾನೆ. ಅದಕ್ಕೊಸ್ಕರ ತನ್ನನ್ನು ಅವೈಡ್ ಮಾಡ್ತಿದಾನೆ ಎಂದೇ ತಿಳಿಯುತ್ತಾನೆ. ಮೊದಲು ಸತ್ಯವನ್ನೆ ನುಡಿದವರು ಅನಂತರ ತಪ್ಪಿಸಿಕೊಳ್ಳಲು ನನಗೆ ಬೇರೆ ಕೆಲಸವಿದೆ ಅಂತ ಸುಳ್ಳು ಕೂಡ ಹೇಳಿಬಿಟ್ರಿ. ಕೊನೆಯಲ್ಲೂ ಏನೇನೋ ಅನ್ನಿಸಿಕೊಂಡಿದ್ದೆ ಬಂತು. ಇಲ್ಲೇ ನೀವು ಎಚ್ಚರ ವಹಿಸಬೇಕಾಗಿದ್ದು..!
ಈ ಪ್ರಪಂಚವೇ ಹಾಗೆ. ನೀವು ಒಂದು ಸಾರಿ ಹೀಗಿಗಂತ ಇದ್ದ ಮೇಲೆ ಅದು ಹಾಗೆನೇ ನೋಡುತ್ತಿರುತ್ತದೆ. ನೀವೇನೇ ಬದಲಾಗಬೇಕೆಂದರೂ ಅದು ಅಷ್ಟು ಸುಲಭವಾಗಿ ನಿಮ್ಮನ್ನು ಪರಿಗಣಿಸಲಾರದು. ಏಕೆಂದರೆ ಅದು ನಿಮ್ಮ ಕ್ಯಾರೆಕ್ಟರ್ ನ ಮೇಲೆ ಒತ್ತಲ್ಪಟ್ಟಿರುವ ಸೀಲ್.
ನೆನಪಿಡಿ, ಇದೆಲ್ಲ ಒಂದಷ್ಟು ದಿನ ಮಾತ್ರ. ಇದೆಲ್ಲ ಒಂದಷ್ಟು ದಿನವಷ್ಟೇ ಅಂತ ಕ್ಲೀಯರ್ ಆಗಿ ಅರ್ಥಮಾಡಿಕೊಂಡು ಯಾರೇನೆ ಅಂದ್ರು ಐ ಡೊಂಟ್ ಕೇರ್ ಕಾಲವೇ ಇದಕ್ಕೆಲ್ಲ ಉತ್ತರಿಸಲಿ ಅಂತ ನಿರ್ಧಾರಕ್ಕೆ ಬಂದರೆ ಫೈನ್. ಅದನ್ನು ಬಿಟ್ಟು ವಿಶ್ವಾಸ ಹೋಗ್ತದೆ, ಸುಮ್ಮನೆ ನಿಷ್ಠುರ ಆಗ್ತದೆ, ಸಂಬಂಧ ಹಾಳಾಗ್ತದೆ ಅಂದುಕೊಂಡು ಅವರು ಟ್ರೀಟ್ ಮಾಡಿದ ರೀತಿಯಲ್ಲಿಯೇ ಮೊದಲಿನ ಹಾಗೆ ನಡೆದುಕೊಂಡರೆ ನಿಮ್ಮ ಪ್ರತಿಜ್ಞೆ ಆ ಕ್ಷಣಕ್ಕೆನೆ ಟೂಸ್. ಹೌದು, ಬಹಳಷ್ಟು ಬಾರಿ ನಾಳೆಯಿಂದ ನಾವು ಹಾಗಿರಬೇಕು ಹೀಗಿರಬೇಕು ಅಂದುಕೊಂಡು ಯಾಕೆ ಹಾಗೆ ಇರಲಿಕ್ಕಾಗದೆ ಒದ್ದಾಡುವುತ್ತಿವೆಂದರೆ ಕಾರಣ ಇದೇ. ನಮ್ಮ ಸುತ್ತಲಿನ ಪರಿಸರ. ನಾವು ಅಲ್ಲಿಯವರೆಗೂ ಅದರೆದುರು ನಡೆದುಕೊಂಡ ರೀತಿ. ಜನ ನಿಮ್ಮನ್ನು ನೋಡುವ ಮತ್ತದೇ ರೀತಿ…
ಹಾಗಿದ್ದರೆ ಇದಕ್ಕೇನು ಮಾಡಬೇಕು…? ಒಂದು ವಿಷಯ ನೆನಪಲ್ಲಿ ಇಡಬೇಕು. ಯಾವುದೇ ಬದಲಾವಣೆ ನೀವೊಂದುಕೊಂಡಂತೆ ತಕ್ಷಣಕ್ಕೆ ಜರಗುವುದಿಲ್ಲ. ನೀವು ಆ ಕ್ಷಣಕ್ಕೆ ಗಟ್ಟಿಯಾಗಿ ನಿರ್ಧರಿಸಿದ ಮಾತ್ರಕ್ಕೆ ಎಲ್ಲವೂ ಬದಲಾಗುವುದಿಲ್ಲ. ಅದಕ್ಕೊಂದಿಷ್ಟು ಸಮಯ ಬೇಕೇ ಬೇಕು. ಇಷ್ಟಕ್ಕೂ ಬದಲಾವಣೆ ಅನ್ನೊದು ನಿರಂತರ ಕೃಷಿ. ಒಂದು ಸಾರಿ ನಿರ್ಧರಿಸಿದಾಕ್ಷಣ ಆಯಿತು ಅಂತ ಇಲ್ಲವೇ ಇಲ್ಲ. ಬೀಜ ಬಿತ್ತಿದಾಕ್ಷಣ ಬೆಳೆ ಆಗುವುದಿಲ್ಲ. ಹೇಗೆ ಬೀಜ ಬಿತ್ತಿದಾಕ್ಷಣ ಬೆಳೆ ಬರುವುದಿಲ್ಲವೋ ಹಾಗೆ, ಬೀಜ ಬಿತ್ತುವುದಕ್ಕೂ ಮೊದಲು ಊಳುವುದನ್ನು ಕೂಡ ಮರೀಬಾರದು. ಆಗಲೇ ಬೀಜ ಬಿತ್ತಿದ್ದು ಸಾರ್ಥಕವಾಗೋದು. ಅಂತೆಯೇ ಮನಸ್ಸು ಕೂಡ. ನಾಳೆಯಿಂದ ಬದಲಾಗಬೇಕು ಅಂತ ಖಡಕ್ಕಾಗಿ ತೀರ್ಮಾನಿಸಿದರೆ ಅದರ ತಯಾರಿಯನ್ನು ನೀವು ಬಹಳಷ್ಟು ದಿನಗಳ ಮುಂಚೆನೇ ಮಾಡಿರಬೇಕು. ಅಂದರೆ ಮನಸ್ಸನ್ನು ಪ್ರತಿನಿತ್ಯವೂ ಅದಕ್ಕೆ ಅಣಿಗೊಳಿಸರಬೇಕು. ಬದಲಾವಣೆಗೆ ಮನಸ್ಸನ್ನು ಪಕ್ಕಾಗಿಸಬೇಕು. ಹೌದು, ನಿಮ್ಮ ಮನಸ್ಸು ಇಲ್ಲಿಯವರೆಗೂ ಒಂದು ರೀತಿಯ ಬರಡು ಭೂಮಿ ಆದಂತಿತ್ತು. ಅದು ಫಲವತ್ತಾಗಬೇಕು ಅಂದರೆ ಮೊದಲು ಅದನ್ನು ಊಳಬೇಕು. ನಂತರ ಅದು ಹದನಾಗಿಸಬೇಕು. ಆಮೇಲೆನೆ ನೀವು ಬಿತ್ತಿದ ಬೀಜ ಚಿಗುರೋಕೆ ಸಾಧ್ಯವಾಗುವುದು. ನೀವೇನು ತಯಾರಿಗೊಳಿಸದೆ ಬೀಜ ಬಿತ್ತಿದರೆ ಅದು ಕೆಲಸ ಮಾಡದು. ಅಲ್ಲಿಗೂ ಎಲ್ಲಾ ಮುಗಿದಂತಾಗುವುದಿಲ್ಲ. ಚಿಗುರುತ್ತಿದ್ದಂತೆ ಸಮಯಕ್ಕೆ ಸರಿಯಾಗಿ ಗೊಬ್ಬರ ನೀರು ಎರೆಯುತ್ತಾ ಅದರ ಪೋಷಣೆ ಬಗ್ಗೆ ಕಾಳಜಿ ತೋರುವುದು ಹಾಗೂ ಅದು ಬೆಳೆಯುವ ಸಂದರ್ಭದಲ್ಲಿ ಅದರ ಅಕ್ಕ ಪಕ್ಕ ಎದ್ದೇಳುವ ಕಳೆಗಳನ್ನು ಕೀಳುವುದು ಕೂಡ ಪ್ರಮುಖ ಕೆಲಸ.
ಕಳೆಗಳೆಂದರೆ ಇಷ್ಟೇ. ಮೈ ಕಡಿಯುತ್ತಾ ಇರುತ್ತೆ, ಕೆರಕೋಬೇಕು ಅನ್ನಿಸುತ್ತಿರುತ್ತೆ. ಕೆರಕೊತಿರಿ. ಎಲ್ಲವೂ ಚೆನ್ನಾಗಿರುತ್ತೆ. ಆದರೆ ಯಾಕೋ…ಕೆರಕೋಳ್ಳೊದೆಲ್ಲಾ ಚೆನ್ನಾಗಿರಲ್ಲ, ಇನ್ಮುಂದೆ ಕೆರಕೋಬಾರದು ಅಂದುಕೊತಿರಿ. ಆದ್ರೆ ಅದು ತಕ್ಷಣಕ್ಕೆ ಸಾಧ್ಯವಾಗೋಲ್ಲ. ಅಭ್ಯಾಸ ಬಲ. ಆಗಾಗ ಕೆರಕೊಳ್ಳೊಕೆ ಕೈ ಹೋಗೆ ಹೋಗುತ್ತೆ. ನೀವು ಬುದ್ದಿವಂತರಾದರೆ ಆಗಾಗ ಉಗುರನ್ನು ಕಟ್ಟ್ ಮಾಡಿಕೊಳ್ಳಬೇಕು. ನಿಮ್ಮ ಉಗುರು ನಿಮ್ಮ ದೇಹಕ್ಕೆ ತಾಕದಂತೆ ನೋಡಿಕೊಳ್ಳುತ್ತಿರಬೇಕು. ಅದಕ್ಕೆನೆ ಆಗಾಗ ಕಳೆ ಕೀಳುತ್ತಿರಬೇಕು ಅಂದಿದ್ದು. ಇಲ್ಲಿ ಉಗುರು, ಕಳೆ ಅಂದರೆ ಅಹಂಕಾರ. ಅದು ನೀವೇನು ಮಾಡದಿದ್ದರೂ ಬೆಳೆಯುತ್ತಲೇ ಇರುತ್ತೆ. ಅದು ನಿಮ್ಮ ಬದಲಾವಣೆಗೆ ಬೆಳವಣಿಗೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕಷ್ಟೆ. ಅಂದರೆ ಅದು ಬೆಳೆದಾಗಲೆಲ್ಲ ಕಟ್ ಮಾಡುವುದಷ್ಟೇ ಮಾರ್ಗ. ಅದಕ್ಕಾಗಿಯೇ ಬದಲಾವಣೆಗೆ ತೆರೆದುಕೊಳ್ಳುವುದೆಂದರೆ ಕೃಷಿ ಮಾಡಿದಂತೆಯೇ ಅಂದಿದ್ದು. ಇಲ್ಲಿ ಪ್ರತಿಯೊಂದು ಕೆಲಸವೂ ಮುಖ್ಯವೇ. ಪ್ರತಿಯೊಂದು ಕೂಡ ಕೃಷಿಯ ಭಾಗವೇ. ಹಾಗಾಗಿನೆ ಬದಲಾವಣೆ ಅನ್ನೊದು ನಿರಂತರ ಕೃಷಿ. ಇದ್ಯಾವುದೂ ಆಗದೆ ಮನಸಿಗೆ ಬಂದ ತಕ್ಷಣ ಎಲ್ಲರೂ ಬದಲಾದ ದೃಷ್ಟಕೋನದಿಂದಲೇ ನಮ್ಮನ್ನು ನೋಡಬೇಕು ಅಂದರೆ ಆಗದು.
ಹೊಸ ವರುಷಕ್ಕೆ ನಾನು ಹೊಸ ಮನುಷ್ಯನಾಗಿ ಬಾಳಬೇಕು ಅಂತ ಸಂಕಲ್ಪ ತೊಟ್ಟರೆ ಅದರ ತಯಾರಿಯನ್ನು ಬಹಳ ದಿನಗಳ ಹಿಂದೆನೆ ಶುರುಮಾಡಿರಬೇಕು. ಮನಸ್ಸು ಆ ಮಟ್ಟಿಗೆ ಪಕ್ಕಾದ ಮೇಲೆನೆ ನಿಮ್ಮ ಯೋಜನೆ ಸಂಕಲ್ಪಗಳನ್ನು ಚಾಲ್ತಿಗೆ ತರಬೇಕು. ಆಗ ಮಾತ್ರ ಒಂದಷ್ಟು ಬದಲಾವಣೆಗಳನ್ನು ನಿರೀಕ್ಷಿಸಬಹುದು. ಸೇಮ್ ಮ್ಯಾಚ್ ಆಡುವ ಮುಂಚೆ ನೆಟ್ ಪ್ರಾಕ್ಟೀಸ್ ಮಾಡಿದಂತೆಯೇ.
ಇನ್ನು ಒಂದು. ಎಲ್ಲಾ ಬದಲಾವಣೆಯ ಯೋಜನೆಗಳನ್ನು ಒಮ್ಮೆಲೆ ಎದುರಿಗೆ ಹರಡಿಕೊಳ್ಳಬಾರದು. ಒಂದು ವಿಷಯದಲ್ಲಿ ಕಂಪ್ಲೀಟ್ ಆಗಿ ಯಶಸ್ಸು ಕಂಡ ಮೇಲೆನೆ ಮತ್ತೊಂದಕ್ಕೆ ಪ್ರಯೋಗ… ಆಗಲೇ ನಿಮಗೆ ಸುಲಭ ಸಾಧ್ಯವಾಗೋದು. ಎಲ್ಲವೂ ಒಮ್ಮೆಲೆ ಎದುರಿಗೆ ಹರಡಿಕೊಂಡು ಎಲ್ಲವೂ ಬದಲಾಗಬೇಕೆಂದರೆ ಸಾಧ್ಯವಾಗದು. ಏಕೆಂದರೆ ಪ್ರತಿಯೊಂದನ್ನು ಬದಲಾವಣೆಗೆ ಅಣಿಗೊಳಿಸುವ ತಯಾರಿ ಬೇರೆಯದ್ದೆ ಆಗಿರುತ್ತೆ. ಆದರೆ ಜೀವನದಲ್ಲಿ ಒಂದು ವಿಚಾರದಲ್ಲಿ ಬದಲಾವಣೆಯ ಯಶಸ್ಸು ಸಾಧ್ಯವಾದರೆ ಬಹುತೇಕ ಸಂಗತಿಗಳು ಆ ದಾರಿಯಲ್ಲಿ ಬರಲು ಸಾಧ್ಯವಾಗುತ್ತದೆ ಅನ್ನೊದಂತು ಸತ್ಯ.
ಅಂತದ್ದೊಂದು ಫಲವತ್ತಾದ ಮನಸ್ಥಿತಿ ನಿಮ್ಮದಾಗಲಿ. ಅದರಂತೆಯೇ ಬದಲಾವಣೆಯ ಸಂಕಲ್ಪ ಮಾಡಿಕೊಳ್ಳಿ. ಬದಲಾವಣೆಗೆ ಅಣಿಯಾಗಿ. ಬದಲಾಗಿ…..
–ಮಧುಕರ್ ಬಳ್ಕೂರು
