ಬೆಸ್ಟ್ ಮೇಷ್ಟ್ರು ಮೊಗಳ್ಳಿ ಸರ್: ಡಾ. ಅಭಿಲಾಷ ಎಚ್ ಕೆ

ಮೊಗಳ್ಳಿ ಸರ್ ಅವರ ಹುಟ್ಟಿದ ದಿನವಿಂದು.
ಮೊಗಳ್ಳಿ ಗಣೇಶ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಂತೇಮೊಗೇನಹಳ್ಳಿಯಲ್ಲಿ ೧೯೬೨ ಜುಲೈ ೧ ರಂದು ಚಿಕ್ಕಣ್ಣ ಮತ್ತು ಈರಮ್ಮ ಅವರ ಮಗನಾಗಿ ಜನಿಸಿದರು. ಚಿಕ್ಕವಯಸ್ಸಿಗೆ ತಂದೆಯ ಕ್ರೌರ್ಯದಿಂದ ತಾಯಿಯನ್ನು ಕಳೆದುಕೊಂಡು, ತನ್ನ ತಾತನ ಮಮತೆಯ ನೆರಳಿನಲ್ಲಿ ಹಾಗೂ ತಮ್ಮ ಕೇರಿಯ ಎಲ್ಲಾ ತಾಯಂದಿರ ವಿಶೇಷವಾಗಿ ಅತ್ತೆಯರ ವಾತ್ಸಲ್ಯದಲ್ಲಿ ಬೆಳೆದವರು. ಎಂ ಎ ಅರ್ಥಶಾಸ್ತç(೧೯೮೮), ಎಂ ಎ ಜಾನಪದ(೧೯೯೦) ಮೈಸೂರು ವಿಶ್ವವಿದ್ಯಾಲಯದಲ್ಲಿ ಮುಗಿಸಿ, ಕನ್ನಡ ವಿಶ್ವವಿದ್ಯಾಲಯದಿಂದ ‘ಕರ್ನಾಟಕ ಗ್ರಾಮ ದೈವಗಳ ಸಂಸ್ಕೃತಿ ವಿಕಾಸ’ ಎಂಬ ವಿಷಯದಲ್ಲಿ ಪಿಎಚ್ ಡಿ(೨೦೦೨) ಪದವಿಯನ್ನು ಪಡೆದರು. ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಹಾಗೂ ದಲಿತ ಅಧ್ಯಯನ ಪೀಠದ ಅಧ್ಯಕ್ಷರಾಗಿ ಇಪ್ಪತ್ತೇಳು ವರ್ಷಗಳಕಾಲ ಸೇವೆ ಸಲ್ಲಿಸಿ ೨೦೨೪ ರಲ್ಲಿ ನಿವೃತ್ತಿ ಹೊಂದಿದರು. ನಂತರ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಸಿಂಡಿಕೇಟ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. (೨೦೨೪-೨೦೨೫) ಅಕ್ಟೋಬರ್ ೫. ೨೦೨೫ರಂದು ಹೊಸಪೇಟೆಯ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು. ಅವರ ಕೊನೆಯ ಆಸೆಯಂತೆ ಅಕ್ಕನ ಊರು ಮಾದನಾಯಕನಹಳ್ಳಿಯಲ್ಲಿ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು. ಅವರ ಮಡದಿ ಶೋಭಾ ಮೊಗಳ್ಳಿ. ಅವರಿಗೆ ಚಂದನ ಮೊಗಳ್ಳಿ, ವಂದನಾ ಮೊಗಳ್ಳಿ ಹಾಗೂ ಸಿರಿ ಮೊಗಳ್ಳಿಯೆಂಬ ಮೂರು ಜನ ಮುದ್ದು ಹೆಣ್ಣು ಮಕ್ಕಳಿದ್ದಾರೆ.

ಡಾ.ಮೊಗಳ್ಳಿ ಗಣೇಶ್ ಅವರು ನಾಡು ಕಂಡ ಅಪ್ರತಿಮ ಸೃಜನಶೀಲ ಬರಹಗಾರರು ಮತ್ತು ಸಂಸ್ಕೃತಿ ಚಿಂತಕರು. ಕಥೆ, ಕಾದಂಬರಿ, ವಿಮರ್ಶೆ, ಕವಿತೆ, ಬೀದಿ ನಾಟಕ, ಆತ್ಮಕಥನ, ದಲಿತ ಪ್ರಜ್ಞೆಯ ವೈಚಾರಿಕ ಸಾಹಿತ್ಯ, ಗಾಂಧೀ-ಅಂಬೇಡ್ಕರ್ ಚಿಂತನೆ ಹಾಗೂ ದೇಸಿ ನೆಲೆಯ ಜಾನಪದ ಸಂಶೋಧನೆ ಮೊದಲಾದ ಕ್ಷೇತ್ರಗಳಲ್ಲಿ ೪೮ ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ. ನೇರ, ನಿಷ್ಠುರ, ಪಾರದರ್ಶಕ, ಪ್ರತಿಭಾನ್ವಿತ, ಹೋರಾಟಗಾರ ಹಾಗೂ ಸೂಕ್ಷö್ಮ ಸಂವೇದನೆಯುಳ್ಳ ಇವರ ಕೊಡುಗೆಗೆ ೧೫ಕ್ಕೂ ಹೆಚ್ಚು ಪ್ರಶಸ್ತಿಗಳು ಸಂದಿವೆ. ೨೦೦೬ನೇ ಸಾಲಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ವತಿಯಿಂದ ಅತಿಥಿ ಲೇಖಕನಾಗಿ ಜರ್ಮನಿ ದೇಶದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಇವರ ಕಥೆಗಳು ಭಾರತೀಯ ಭಾಷೆಗಳೂ ಸೇರಿದಂತೆ ಸ್ವೀಡಿಷ್, ಜರ್ಮನ್ ಹಾಗೂ ಪೋಲಿಶ್ ಭಾಷೆಗಳಿಗೆ ಅನುವಾದಗೊಂಡಿವೆ.

ಪ್ರಭಾವಿ ಪ್ರಾಧ್ಯಾಪಕರು: ನಾನು ಮೈಸೂರು ವಿಶ್ವವಿದ್ಯಾಲಯದಲ್ಲಿ ದ್ವಿತೀಯ ವರ್ಷದ ಜಾನಪದ ಎಂ.ಎ ಓದುತ್ತಿದ್ದಾಗ ಒಮ್ಮೆ ಕನ್ನಡ ವಿಶ್ವವಿದ್ಯಾಲಯದಿಂದ ಪ್ರೊ. ಮೊಗಳ್ಳಿ ಗಣೇಶ್ ಸರ್ ಅವರು ವಿಶೇಷ ಉಪನ್ಯಾಸಕ್ಕೆಂದು ಬಂದಿದ್ದರು. ನಾನು ಕೇಳಿದ ಅವರ ಮೊದಲ ಉಪನ್ಯಾಸವದು. ಅವರ ದೇಶಿ-ಮಾರ್ಗದ ಕುರಿತಾದ ವ್ಯಕ್ತಿ ವೈಶಿಷ್ಟ್ಯತೆಯಿಂದ ಕೂಡಿದ ವಿದ್ವತ್ತು ನನ್ನನ್ನು ಸೆಳೆದಿತ್ತು. ಅವರ ತರಗತಿಯ ಪಾಠಗಳಿಗೆ ಸಮಯದ ಮಿತಿಯಿರುತ್ತಿರಲಿಲ್ಲ. ದಣಿವರಿಯದ ಉಪನ್ಯಾಸ ಅವರದು. ಅಲ್ಲಿಯವರೆಗೂ ನಾ ಕಂಡಿರದ ವಿದ್ವತ್ತು. ನನ್ನನ್ನು ಹೆಚ್ಚು ಪ್ರಭಾವಿಸಿದ ನನ್ನಿಡೀ ಜೀವಿತದ ದಿ ಬೆಸ್ಟ್ ಮೇಷ್ಟುç. ಶಾರ್ಪ್ ಶೂಟರ್ ನಂತಹ ಭಾಷಣಕಾರ. ಗಾಂಭೀರ್ಯದ ವ್ಯಕ್ತಿತ್ವ, ಶಿಸ್ತಿನ ನಡೆ ನುಡಿ, ಹೆಂಗರುಳು, ಹಿಡಿತ ಸಾಧಿಸಿದ ಆಳವಾದ ಜ್ಞಾನ, ತಮ್ಮನ್ನೇ ತಾವು ಹಿಂಡಿ ಹಿಪ್ಪೆ ಮಾಡಿಕೊಳ್ಳುವ ಅತೀವವಾದ ನಿಯಮಿತ ಬರೆಹ ಈ ವಿಷಯಗಳಲ್ಲಿ ಇದ್ದರೆ ಅವರಂತಿರಬೇಕು ಅನಿಸಿದ ಮೇಷ್ಟುç ನಮ್ಮ ಮೊಗಳ್ಳಿ ಸರ್ ಅವರು ಮಾತ್ರ. ನಿರಂತರ ಕಲಿಕೆಗೆ ಒಗ್ಗದ ಸೋಮಾರಿಗಳೆಂದರೆ ಮೊಗಳ್ಳಿ ಸರ್ ಅವರಿಗೆ ಸಿಟ್ಟು. ಒಂದೆರಡು ಬಾರಿ ಈ ಕೋಪವನ್ನು ನಾನೂ ಎದುರುಗೊಂಡಿದ್ದೇನೆ. ನಾನು ಅವರ ಮಾರ್ಗದರ್ಶನದಲ್ಲಿ ‘ಬುದ್ಧತ್ವದ ದೇಶೀಯ ಶೋಧ’ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದುಕೊಂಡೆ. ನನ್ನ ಈ ಪ್ರಬಂಧದಲ್ಲಿ ಬುದ್ಧತ್ವವನ್ನು ತಳಸಮಾಜಗಳ ಅವೈದಿಕ ಧಾರೆಯಾಗಿ, ಜನಪದರ ಸುಪ್ತಪ್ರಜ್ಞೆಯಾಗಿ ಹಾಗೂ ಜಾನಪದ ಮತ್ತು ಬುದ್ಧತ್ವದ ಸಮಾನ ಸಂಗತಿಗಳ ತೌಲನಿಕ ನಿಲುವುಗಳನ್ನು ಶೋಧಿಸುವ ಹೊಸ ಬಗೆಯ ಪ್ರಯತ್ನವು ಅದಾಗಿತ್ತು. ಈ ಕುರಿತು ಅವರ ಒಹುಗಳು ನನ್ನನ್ನು ನಿಬ್ಬೆರಗಾಗಿಸಿದ್ದುಂಟು.
ದೇಸೀ ಜಾನಪದ ತಜ್ಞ: ಜಾನಪದ ಎಂದ ಕೂಡಲೇ ತಟ್ಟನೆ ನನ್ನೊಳಗೆ ಮೊಗಳ್ಳಿ ಸರ್ ಅವರ ಹೆಸರು ಮತ್ತು ಅವರ ಸಂಶೋಧನಾ ದಾರಿಗಳು ಜಾಗೃತಗೊಳ್ಳುವಷ್ಟರ ಮಟ್ಟಿಗೆ ಅವರು ವಿದ್ಯಾರ್ಥಿಯಾದ ನನ್ನನ್ನು ಪ್ರಭಾವಿಸಿದ್ದಾರೆ. ಅವರು ಕೇವಲ ಜಾನಪದದ ಪ್ರಾಧ್ಯಾಪಕರಾಗಿ ಸಿದ್ಧ ಪಠ್ಯಕ್ರಮಗಳನ್ನು ಬೋಧಿಸಿ ಕೈತೊಳೆದುಕೊಂಡವರಲ್ಲ. ಇಡೀ ಜಾನಪದ ಕ್ಷೇತ್ರವೇ ನಿಬ್ಬೆರಗಾಗಿಸುವಂತಹ ಆಲೋಚನಾ ಕ್ರಮವನ್ನು ರೂಪಿಸಿದವರು. ಜಾನಪದದ ಎಲ್ಲಾ ಪಾಶ್ಚಾತ್ಯ ಸಿದ್ಧಾಂತಗಳನ್ನು ಅಮೂಲಾಗ್ರವಾಗಿ ಓದಿಕೊಂಡು ಅದರ ಮಿತಿಗಳನ್ನು ಅಧ್ಯಯನಕ್ಕೊಳಪಡಿಸಿ ದೇಸೀ ಸಿದ್ಧಾಂತವನ್ನು ಪ್ರತಿಪಾದಿಸಿದ ಪ್ರಕರ ವಿದ್ವಾಂಸ. ಅವರ ಮೌಖಿಕ ಕಥನ, ದೇಶಿ, ಆದಿಮಾ, ಆದಿಮಾ ಜಾನಪದ, ಅವ್ಯಕ್ತ ಚರಿತ್ರೆ ಹಾಗೂ ಇತ್ತೀಚಿಗೆ ಪ್ರಕಟಗೊಂಡ ತಮ್ಮ ಇಪ್ಪತ್ತೆರಡು ವರ್ಷದ ಜಾನಪದದ ಒಳಹುಗಳು ‘ದಲಿತ ಜಾನಪದ’ ಕೃತಿಗಳಲ್ಲಿ ಅವರ ಜಾನಪದದ ಸೈದ್ಧಾಂತಿಕತೆ ಸ್ಪಷ್ಟವಾಗಿದೆ. ಮನುಷ್ಯನ ಅರಿವಿನ ಮೊದಲ ಕಾಲಘಟ್ಟವಾದ ಆದಿಮಾ ಪ್ರಜ್ಞೆಯ ಎಳೆಯು ಆಧುನಿಕ ಮಾನವನಲ್ಲೂ ಸುಪ್ತವಾಗಿದ್ದು ಇಂದಿಗೂ ಭಿನ್ನ ಬಗೆಯ ಪ್ರಕಾರಗಳಲ್ಲಿ ಅದು ವ್ಯಕ್ತವಾಗುತ್ತಿದೆ. ತಳಸಮಾಜಗಳು ಉಳಿಸಿಕೊಂಡು ಬಂದಿರುವ ದೇಸೀ ಪ್ರಜ್ಞೆಯು ಇಂದಿಗೂ ಜಾನಪದದ ಮೂಲಕ ತಮ್ಮ ತಮ್ಮ ಆತ್ಮಕಥನವನ್ನು ಹೇಳಿಕೊಳ್ಳುತ್ತಿರುವ ಪರಿಯನ್ನು ಮೊಗಳ್ಳಿ ಅವರ ಮೂಲಕ ಕೇಳುವುದೇ ಒಂದು ಸೋಜಿಗ. ಹಿಂದೆAದೂ ಕಾಣದ ವಿಚಿತ್ರ ಜಡತೆ ಆವರಿಸಿರುವ ಈ ಕಾಲಮಾನದಲ್ಲಿ ಕ್ರಿಯಾಶೀಲಗೊಳಿಸಬಹುದಾದ ಸಂಗತಿಗಳನ್ನು ಅವರ ಜೊತೆಗಿದ್ದ ಎಲ್ಲಾ ಸಂದರ್ಭಗಳಲ್ಲಿಯೂ ನಮಗೆ ಮುಟ್ಟಿಸುತ್ತಲೇ ಇದ್ದರು. ಅವರ ವೈಯಕ್ತಿಕ ಜೀವನದಲ್ಲಾಗಲೀ, ವೃತ್ತಿ ಬದುಕಿನಲ್ಲಾಗಲೀ ಹಾಗೂ ಬರಹದ ಹಾದಿಯಲ್ಲಾಗಲೀ ಈ ಕಾಲಘಟ್ಟದ ಯುವಕರಿಗೂ ಇರದಷ್ಟು ಚೈತನ್ಯಶೀಲ ಅಭಿರುಚಿ, ಅಭಿವ್ಯಕ್ತಿ, ಆಲೋಚನಾ ಲಹರಿ ಬೆರಗುಗೊಳಿಸುತ್ತಿತ್ತು.

ಓದುವ ಹುಚ್ಚು ಹೆಚ್ಚಿಸಿದ ಮೇಷ್ಟುç: ‘ಒಬ್ಬ ಬಡ ಓದುಗನಾಗಿದ್ದ ನನ್ನನ್ನು ರೂಪಿಸಿದ್ದು ಮೈಸೂರು ವಿವಿಯ ಆವರಣ ಹಾಗೂ ಅಲ್ಲಿನ ಗ್ರಂಥಾಲಯ. ಕನ್ನಡ ವಿಶ್ವವಿದ್ಯಾಲಯಕ್ಕೂ ಹಾಗೂ ನಿಮ್ಮ ಅಧ್ಯಯನಶೀಲತೆಗೂ ಆ ಶಕ್ತಿ ಇದೆ, ಓದಿ ಎಂದು ಗ್ರಂಥಾಲಯಕ್ಕೆ ಕರೆದೊಯ್ದು ಪ್ರತಿ ವಿಭಾಗಗಳನ್ನು ಪರಿಚಯಿಸಿ, ಪುಸ್ತಕಗಳ ಆಯ್ಕೆ, ಓದುವ ಪರಿಯನ್ನು ತಿಳಿಸಿ ಅಲ್ಲಿ ನಾವೆಲ್ಲ ಸಕ್ರಿಯಗೊಳ್ಳಲು ಮೊಗಳ್ಳಿ ಸರ್ ಸದಾ ಪ್ರೇರೇಪಿಸುತ್ತಿದ್ದರು. ನಾನು ಅಲ್ಲಿಯವರೆಗೂ ಹೆಸರನ್ನೂ ಕೇಳಿರದ ಪಾಶ್ಚಿಮಾತ್ಯ ಲೇಖಕರಲ್ಲಿ ಬೋದಿಲೇರನ ಪಾಪದ ಹೂಗಳು, ಕಾಫ್ಕಾನ ರೂಪಾಂತರ, ಮ್ಯಾಕ್ಸಿ ಗಾರ್ಕಿಯ ತಾಯಿ ಎಂಬ ಅನುವಾದಿತ ಕೃತಿಗಳನ್ನು, ಕನ್ನಡದ ಅನೇಕ ಮೇರು ಕೃತಿಗಳನ್ನು ಹಾಗೂ ಕನ್ನಡದ, ಅಂತರರಾಷ್ಟಿçÃಯ ಜಾನಪದ ವಿದ್ವಾಂಸರ ಪುಸ್ತಕಗಳನ್ನು ಓದಿ, ಚರ್ಚಿಸಿ ಮೆಚ್ಚುಗೆ ಪಡೆದುಕಂಡೆ. ಪ್ರಾರಂಭದಿAದ ಕೊನೆಯ ಭೇಟಿಯವರೆಗೂ ‘ಬರೆಯಿರಿ ಆ ಮೂಲಕ ವಿಮೋಚನೆಗೊಳ್ಳಿರಿ’ ಎಂಬ ಪ್ರೇರಕವಾದ ಮಾತುಗಳನ್ನು ಹೇಳುತ್ತಾ ಒಂದಷ್ಟನ್ನು ಪ್ರಯೋಗಾತ್ಮಕವಾಗಿ ಬರೆಸಿದ್ದೂ ಇದೆ. ಅದರ ಫಲವಾಗಿ ನಾನು ಡಾ ದ.ರಾ ಬೇಂದ್ರೆ ಸ್ಮರಣಾ ಅಂತರಕಾಲೇಜು ಕವನ ಸ್ಫರ್ದೆಯಲ್ಲಿ ಎರಡು ಬಾರಿ(೨೦೨೦ & ೨೦೨೩-೨೪) ಬಹುಮಾನ ಪಡೆಯಲು ಸಾಧ್ಯವಾಯಿತು. ಇದೆಲ್ಲದರ ನಡುವೆ ಶಿಕ್ಷಕ ವಿದ್ಯಾರ್ಥಿಗಳ ನಡುವಿನ ತಾಯ್ತನದ ಬಂಧವನ್ನು ಉತ್ಕೃಷ್ಟವಾಗಿ ನಮ್ಮೆದೆಯಾಳದಲ್ಲಿ ಬಿತ್ತಿರುವುದು ಉಸಿರಾಟದೊಂದಿಗೆ ಬೆರೆತುಹೋಗಿದೆ.

ಸ್ವಾಭಿಮಾನದಿ ಬದುಕಿದ ಹಾಗೂ ಕಲಿಸಿದ ಮೇಷ್ಟ್ರು: ಜೀವಿತದುದ್ದಕ್ಕೂ ಎದೆಂತದ್ದೋ ದುಃಖದೊಂದಿಗೆ ಜೀವಿಸಿದ ಮೊಗಳ್ಳಿ ಸರ್ ಬುದ್ಧನ ದುಃಖತತ್ವದಿಂದ ಪ್ರಭಾವಿತರಾದವರು. ಅವರ ಭಾಷೆ, ಭಾವನೆ, ಸಂವೇಧನೆ ಹಾಗೂ ಅಭಿವ್ಯಕ್ತಿಗಳೆಲ್ಲ ಹದವಾಗಿ ಲೌಕಿಕದ ಅನುಭಾವದಿಂದ ಸೃಜನಗೊಂವುಗಳಾಗಿದ್ದವು. ಅವರ ಸುಪ್ತಪ್ರಜ್ಞೆಯ ಕಥನಾ ಕಲೆಗೂ ದುಃಖಕ್ಕೂ ನಂಟಿತ್ತು. ಅನಂತತೆಯೊAದಿಗೆ ಧ್ಯಾನಕ್ಕಿಳಿದು ಬರೆಯುತ್ತಿದ್ದ ಹಾಗೂ ಜಗತ್ತಿನ ಯಾವುದೇ ಜ್ಞಾನಶಿಸ್ತನ್ನು ಕುರಿತು ಪರಿಪಕ್ವವಾದ ಹಿಡಿತದಿಂದ ವಿಶ್ಲೇಷಿಸಬಲ್ಲ ಮೊಗಳ್ಳಿಯಂತಹ ಲೇಖಕರು ಹಾಗೂ ಪ್ರೊಫೇಸರ್ ಅವರ ವಿದ್ಯಾರ್ಥಿಗಳು ಎನ್ನುವ ಮಾತ್ರಕ್ಕೆ ಹೋದಲೆಲ್ಲ ನಮಗೊಂದು ಮೌಲ್ಯ ದಕ್ಕಿದೆ. ಮೊಗಳ್ಳಿ ಸರ್ ಯಾವುದೋ ಸಂದರ್ಭದಲ್ಲಿ ಹೇಳಿದ ಮಾತಿದು ‘ನನ್ನ ಹೆಸರು ನಿಮಗೆ ಅವಕಾಶಗಳನ್ನು ಕೊಡಬಹುದು ಹಾಗೂ ಸಿಕ್ಕ ಅವಕಾಶವನ್ನು ಕಿತ್ತುಕೊಳ್ಳಲೂಬಹುದು’. ಈ ಮಾತು ಒಂದರ್ಥದಲ್ಲಿ ಅನುಭವಕ್ಕೆ ಬರುತ್ತಲೇ ಇದೆ. ಗುಂಪುಗಾರಿಕೆ, ಗುಲಾಮಗಿರಿ, ಯಾವುದೇ ಲಾಭಿಗೆ ಮಾರು ಹೋಗದಂತೆ, ಡಾ.ಬಿ.ಆರ್ ಅಂಬೇಡ್ಕರ್ ಅವರ ಜ್ಞಾನ, ಸ್ವಾಭಿಮಾನದ ನೆಲೆಯಲ್ಲಿ ಬದುಕುವ, ಜೀವವಿರೋಧಿ ವ್ಯವಸ್ಥೆಯನ್ನು ಪ್ರಶ್ನಿಸುವ ಬದುಕನ್ನು ತಾವೂ ಬದುಕಿ ವಿದ್ಯಾರ್ಥಿಗಳಾದ ನಮಗೂ ಕಲಿಸಿ ಹೋಗಿದ್ದಾರೆ. ಅವರು ತನ್ನ ಅಂತ್ಯದವರೆಗೂ ಅಂತಃಕರಣದ ಬದ್ದತೆಗಾಗಿಯೇ ಬದುಕಿದವರು ಹಾಗೂ ಬರೆದವರು.
ಕನ್ನಡದ ಅನನ್ಯ ಕಥೆಗಾರ: ಮೊಗಳ್ಳಿ ಸರ್ ಅವರು ಆ ಕಾಲದ ಪ್ರತಿಷ್ಠಿತ ‘ದೀಪಾವಳಿ ಕಥಾ ಸ್ಫರ್ಧೆ’ಯಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಸತತ ಮೂರು ಬಾರಿ ಪ್ರಥಮ ಬಹುಮಾನ ಗಳಿಸಿದವರು. ಅವರಿಗೆ ಬಗುರಿ ಕಥೆಯು ಕನ್ನಡ ಸಾಹಿತ್ಯ ಲೋಕಕ್ಕೆ ಭವ್ಯವಾದ ಪ್ರವೇಶಿಕೆಗೆ ಅನುವು ಮಾಡಿಕೊಟ್ಟಿತು. ‘ಬುಗುರಿ’ ಇವರ ಮೊದಲ ಕಥಾ ಸಂಕಲನ(೧೯೯೨). ಭಾರತದ ಜಾತಿ ಪೊರೆವ ಮನಸ್ಥಿತಿಯನ್ನು ಬುಗುರಿ ಕಥೆಯಲ್ಲಿ ಕಕ್ಕಸು ಗುಂಡಿಗೆ ಹೋಲಿಸಿದ ಪರಿ ಕ್ರಾಂತಿಕಾರಕವಾಗಿತ್ತು. ಅತ್ತೆ (೧೯೯೮) ಭೂಮಿ (೨೦೦೨) ಮಣ್ಣು (೨೦೦೪) ಕನ್ನೆಮಳೆ (೨೦೧೦) ಮೊಗಳ್ಳಿ ಕಥೆಗಳು (೨೦೧೦) ದೇವರ ದಾರಿ (೨೦೧೭) ಕಥನ (ಪ್ರಬಂಧ : ೧೯೯೮) ಹೂ ಬಂಡೆ (ಪ್ರಬಂಧ:೨೦೧೪) ಇವು ಇವರ ಕನ್ನಡ ಕಥನಾ ಪರಂಪರೆಯ ಅನನ್ಯ ಕಥಾಸಂಕಲನಗಳಾಗಿವೆ. ಮೊಗಳ್ಳಿಯವರ ಕಥೆಗಳು ದಲಿತ ಕೇರಿಯಿಂದ ಪ್ರಾರಂಭವಾಗಿ ಅನಂತತೆಯ ಕಡೆಗೆ ಸಾಗಿ, ನೇರವಾಗಿ ಅಂತಃಕರಣದೊAದಿಗೆ ಸಂವಾದಕ್ಕಿಳಿಯುತ್ತವೆ.
ಸಂಯಮದ ಸೃಜನೆ: ಕನ್ನಡದ ಗದ್ಯ ಪ್ರಕಾರದಲ್ಲೂ ಕಾವ್ಯಾತ್ಮಕತೆಯನ್ನು, ವಿಸ್ಮಯಗೊಳಿಸುವ ರೂಪಕಗಳನ್ನು ಸೃಷ್ಟಿಸಬಲ್ಲ ಸಂಯಮದ ಸೃಜನೆ ಮೊಗಳ್ಳಿಯವರದ್ದು. “ಕೇವಲ ಜಾಣರಾಗಿ ಬರೆಯುವ ಕಳಪೆ ಬರಹಗಾರರ ಪಡೆಯೇ ವಿಜೃಂಬಿಸುತ್ತಿರುವ ಈ ಕಾಲದಲ್ಲಿ ಮೊಗಳ್ಳಿಯ ಹಾಗೆ ತನ್ನನ್ನು ತಾನೇ ಇರಿದುಕೊಂಡು ಬರೆಯುವುದು ಮಹಾ ಸೃಜನಶೀಲತೆ ಎಂದು ನನಗಂತೂ ಅನಿಸುತ್ತದೆ.” ಎಂದು ಮೊಗಳ್ಳಿಯವರ ಆತ್ಮಕಥೆಯ ಸಂದರ್ಭದಲ್ಲಿ ಅಬ್ದಲ್ ರಶೀದ್ ಅವರು ಹೇಳುತ್ತಾರೆ.
ಕಥೆಗಳಷ್ಟೇ ಅಲ್ಲದೇ ಕಾದಂಬರಿಗಳಲ್ಲೂ ಅವರ ನಿರೂಪಣಾ ಲಹರಿಗೆ ಮನಸೋಲುತ್ತದೆ. ತೊಟ್ಟಿಲು(೨೦೦೬) ಕಿರೀಟ(೨೦೦೭) ಅನಾದಿ(೨೦೦೮) ಹೊಕ್ಕುಳು(೨೦೨೪) ಅಲ್ಲಿ ಯಾರೂ ಇಲ್ಲ(ಕಾವ್ಯ ಕಾದಂಬರಿ; ೨೦೨೪) ಬಿಟ್ಟುಹೋದ ಮನುಷ್ಯ(೨೦೨೪). ಇವು ಅವರ ಕಾದಂಬರಿಗಳು.

ಮೊಗಳ್ಳಿ ಸರ್ ಅವರು ಕಥೆಗಳಿಗಿಂತಲೂ ತಾನು ಮೊದಲು ಸೃಜಿಸಿದ್ದು ಕಾವ್ಯವನ್ನು ಎಂದು ಹೇಳುತ್ತಿದ್ದರು. ಸೂರ್ಯನ ಬಚ್ಚಿಡಬಹುದೆ(೨೦೦೨) ಹಾಗೂ ದೇವಸ್ಮಶಾನ(೨೦೦೮) ಅವರ ಕವನಸಂಕಲನಗಳಾಗಿವೆ.
ತಕರಾರಿಗೆ ಹೆಸರುವಾಸಿ: ತಕರಾರು(೨೦೦೮) ಜಾತಿ ಮೀಮಾಂಸೆ(೨೦೧೨) ಮೊಗಳ್ಳಿ ವಿಮರ್ಶೆ(೨೦೧೭) ಕನ್ನಡದ ವಿಮರ್ಶೆಯಲ್ಲಿ ಭಿನ್ನ ಹಾಗೂ ಗಟ್ಟಿಯಾಗಿ ನೆಲೆನಿಂತ ಕೃತಿಗಳಾಗಿವೆ. ತಕರಾರು ಲಂಕೇಶ್ ಅವರ ಪತ್ರಿಕೆಯಲ್ಲಿ ಬರೆದ ಅಂಕಣ ಬರಹಗಳ ಸಂಕಲನವಾಗಿತ್ತು. ಲಂಕೇಶ್ ಒಬ್ಬ ವ್ಯಕ್ತಿಯಲ್ಲ. ನನ್ನಪಾಲಿಗೆ ಅವರೊಂದು ಯುನಿವರ್ಸಿಟಿ. ಆ ಲಂಕೇಶ್ ಉನಿವರ್ಸಿಟಿಯ ಪ್ರಾಡೆಕ್ಟ್ ನಾನು ಎಂದು ಹೇಳಿಕೊಳ್ಳುತ್ತಿದ್ದರು.
ಗಾಂಧೀಜಿ ಹಾಗೂ ಅಂಬೇಡ್ಕರ್ ಅವರನ್ನು ಈ ದೇಶದ ಎರಡು ಕಣ್ಣುಗಳು ಎಂದು ಸಾಭೀತು ಮಾಡುವ ನಿರೂಪಣೆ ‘ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ’(೨೦೧೭) ಕೃತಿಯಲ್ಲಿದೆ. ‘ದಲಿತರು ಮತ್ತು ಜಾಗತೀಕರಣ’ ಕೃತಿಯಂತೂ ಪರ ವಿರೋಧದ ನೆಲೆಯ ಸಂಚಲನ ಮೂಡಿಸಿತ್ತು. ನಾಲ್ಕು ಬೀದಿ ನಾಟಕಗಳನ್ನು ರಚಿಸಿದ್ದಾರೆ. ನಾನೆಂಬುದು ಕಿಂಚಿತ್ತು (೨೦೨೪) ಕನ್ನಡದ ಆತ್ಮಕಥನಾ ನಿರೂಪಣೆಯಲ್ಲಿ ಹೊಸ ಆಯಾಮವನ್ನೇ ಸೃಜಿಸಿದ ಕೃತಿ ಇದಾಗಿದೆ. ಹೀಗೆ ಬರೆದ ಮುಂದೆ ಬರೆಯುತ್ತಿದ್ದ ಹಲವು ಕೃತಿಗಳು ಮೊಗಳ್ಳಿಯವರ ಬರೆಹದ ಧ್ಯಾನ ಹಾಗೂ ದಾವಂತಕ್ಕೆ ನಿದರ್ಶನವಾಗಿವೆ.
ಕೊನೆಯ ಭೇಟಿ: ೨೦೨೫ ಸೆಪ್ಟೆಂಬರ್ ೨೭ರ ಸಂಜೆ ಮೊಗಳ್ಳಿ ಸರ್ ಅವರೊಂದಿಗೆ ಸುಮಾರು ಒಂದೂವರೆ ಗಂಟೆಗಳ ಕಾಲ ಅವರ ಅಭಿನಂದನಾ ಗ್ರಂಥದ ಬೆಳವಣಿಗೆ ಹಾಗೂ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಅವರ ಮನೆಯಲ್ಲೇ ಚರ್ಚಿಸಿದೆವು. ಅಷ್ಟರಲ್ಲಾಗಲೇ ಮೊಗಳ್ಳಿ ಸರ್ ಅವರ ದೇಹ ವಿಶ್ರಾಂತಿಗಾಗಿ ಹಪಹಪಿಸುತ್ತಿತ್ತು. ‘ನಾನು ಸ್ವಲ್ಪ ರೆಸ್ಟ್ ಮಾಡುತ್ತೇನೆ. ಹೋಗಿ ಬನ್ನಿ’ ಎಂದು ಕುಳಿತಲ್ಲೇ ನಮ್ಮನ್ನು ಆಶೀರ್ವದಿಸಿದರು. ಯಾವಾಗಲೂ ಹೊರಗೆ ಬಂದು ಬೀಳ್ಕೊಟ್ಟು ನಾವು ಮರೆಯಾಗುವವರೆಗೂ ನಿಂತು ನೋಡುತ್ತಿದ್ದ ನಮ್ಮ ಸರ್ ಕುಳಿತಲ್ಲೇ ಕಳುಹಿಸಿಕೊಟ್ಟದ್ದು ಅವತ್ತೇ ಮೊದಲು ಹಾಗೂ ಕೊನೆ. ಇದಾಗಿ ಕೇವಲ ಒಂಭತ್ತು ದಿನಗಳಲ್ಲಿ ಅಕ್ಟೋಬರ್ ೫. ೨೦೨೫ರಂದು ಮೊಗಳ್ಳಿ ಸರ್ ಕೊನೆಯುಸಿರೆಳೆದರು.

ಸಾವು ಸತ್ಯವಾದದ್ದು ಒಪ್ಪಿಕೊಳ್ಳಲೇ ಬೇಕು ಹೌದು. ಆದರೆ ಕೆಲವು ಸಾವುಗಳು ಹೇಳುತ್ತಿದ್ದ ಸತ್ಯದ ನಿಲುಗಡೆಗೆ ಕಾರಣವಾಗಿಬಿಡುತ್ತವೆ. ಆಗ ಆ ಸಾವು ಹೆಚ್ಚು ಕಾಡುತ್ತದೆ. ಜೊತೆಗಿದ್ದ ಆ ಕಾಲದ ಹುಟ್ಟಿದ ದಿನದ ಸಂಭ್ರಮಾಚರಣೆಗಳ ನೆನೆಯುತ್ತಾ ಅವರಿಲ್ಲದ ಈ ಹೊತ್ತಲ್ಲೂ ಈ ಮೂಲಕ ಗೌರವವನ್ನು ಸಲ್ಲಿಸುತ್ತೇನೆ.

ಡಾ.ಅಭಿಲಾಷ ಎಚ್ ಕೆ


ಕನ್ನಡದ ಬರಹಗಳನ್ನು ಹಂಚಿ ಹರಡಿ
2 1 vote
Article Rating
Subscribe
Notify of
guest

0 Comments
Oldest
Newest Most Voted
0
Would love your thoughts, please comment.x
()
x