ಆಲಾಪ: ಡಾ. ವಿಶ್ವನಾಥ ಎನ್ ನೇರಳಕಟ್ಟೆ

“ಇನ್ನೂ ಇಪ್ಪತ್ತು ನಿಮಿಷ ಆಗಬಹುದಂತೆ ಅವರು ಬರುವಾಗ” ಎಂದು ಮಣಿವಣ್ಣನ್ ಹೇಳಿದಾಗ ಸನಾತನಿ ಆಗಬಹುದು ಕಾಯುತ್ತೇನೆ ಎಂಬ ಂತೆ ತಲೆಯಾಡಿಸಿದಳು. ಹಾಗೆ ತಲೆಯಾಡಿಸದೆ ಬೇರೆ ದಾರಿ ಅವಳಿಗಿರಲಿಲ್ಲ. ನಿಜವಾಗಿಯೂ ಸಲ್ಲಾಪ್ನ ಈ ಸ್ಟುಡಿಯೋಗೆ ಬರುವ ಇಚ್ಛೆ ಅವಳಿಗಿರಲಿಲ್ಲ. ಆದರೆ ಸಂಪಾದಕರು “ಒಂದೆರಡು ಸಲ ಅವನ ಸಂದರ್ಶನ ಮಾಡಿದ್ದೀಯಲ್ಲ. ನೀನೇ ಹೋಗು. ನಿನ್ನ ಜೊತೆ ಈಗಾಗಲೇ ಮಾತನಾಡಿದ್ದಾನೆ. ಏನಾದರೂ ಮುಕ್ತವಾಗಿ ಮಾತನಾಡಿದರೆ ನಾಳೆಯ ದಿನ ನಮ್ಮ ಪತ್ರಿಕೆಗೆ ಅದುವೇ ಮುಖ್ಯ ಕಂಟೆ ಂಟ್ ಆಗುತ್ತದೆ” ಎಂದಿದ್ದರು. ಅವರ ಮಾತನ್ನು ತೆಗೆದುಹಾಕುವುದಕ್ಕಾಗದ ಅನಿವಾರ್ಯತೆಯಲ್ಲಿ ಸನಾತನಿ ಇಷ್ಟವಿರದೆಡೆಗೆ ಬಂದು ಕುಳಿತಿದ್ದಳು.

“ನನ್ನ ಹೆಸರು ಅವರಿಗೆ ಹೇಳಿದ್ದೀರಿ ತಾನೇ?” ಎಂದು ಮಣಿವಣ್ಣನ್ನಲ್ಲಿ ಕೇಳಿದಳು. “ಹೇಳಿದ್ದೇನೆ ಮೇಡಂ. ನೀವೇ ಆಗ ನನ್ನಲ್ಲಿ ಹೇಳಿದ್ದೀರಲ್ಲ, ಹೆಸರು ಹೇಳಬೇಕು ಅಂತ. ಸನಾತನಿ ಅನ್ನುವವರು ಬಂದಿದ್ದಾರೆ ಅಂತಲೇ ಹೇಳಿದ್ದೇನೆ. ಸ್ವಲ್ಪ ಬ್ಯುಸಿ ಇದ್ದಾರೆ. ಆ ಕಾರಣಕ್ಕೆ ಇಪ್ಪತ್ತು ನಿಮಿಷ ಕಾಯಲು ಹೇಳಿದ್ದು” ಎಂದ ಅವನು.

ತಾನು ಬಂದದ್ದೆ ಂದು ಗೊತ್ತಾದ ಮೇಲೂ ಹೀಗೆ ಹೇಳಿದ್ದಾನೆ ಅಂದರೆ ಒಂದೋ ಕೆಲಸದ ಒತ್ತಡದಲ್ಲಿರಬೇಕು. ಇಲ್ಲವೇ ವಿಪರೀತ ಚಿಂತೆಯಲ್ಲಿರಬೇಕು ಎಂದುಕೊ ಂಡಳು ಸನಾತನಿ.
“ಕಾಫಿ ಏನಾದರೂ ಕುಡಿಯುತ್ತೀರಾ ಮೇಡಂ?” ಎಂದು ಮಣಿವಣ್ಣನ್ ಕೇಳಿದ. “ಇಲ್ಲ, ಅದೇನೂ ಅಗತ್ಯ ಇಲ್ಲ” ಎಂದ ಅವಳು ಮೆಲುವಾಗಿ ಕೇಳಿಬರುತ್ತಿದ್ದ ಹಾಡಿನ ಕಡೆಗೆ ಕಿವಿಗೊಟ್ಟಳು. ಮರಾಠಿ ಭಾಷೆಯ ಹಾಡು. ಸನಾತನಿಗೆ ಹಾಡಿನ ಸಾಲುಗಳು ಅರ್ಥವಾಗಲಿಲ್ಲ. ಅವಳಿಗೆ ಮರಾಠಿ ಬರುತ್ತಿರಲಿಲ್ಲ. ಆದರೆ ಹಾಡಿನ ಧಾಟಿಯಲ್ಲಿ ಅದೇನೋ ವಿಶೇಷತೆ ಇದೆ ಎಂದು ತೋರಿತು. ಹಾಗೆಯೇ ಹಾಡು ಕೇಳಿಕೊಂಡು ಸ್ವಲ್ಪ ಸಮಯ ಕುಳಿತಳು.

ಅವಳಿಗೆ ಅಭಿಮುಖವಾಗಿ ಮರದ ಫಲಕವೊಂದಿತ್ತು. ಕುಳಿತಲ್ಲಿಂದ ಎದ್ದವಳು ಅದರೆದುರು ಹೋಗಿನಿಂತಳು. ಫೋಟೋಗಳನ್ನು ತೀರಾ ಅಚ್ಚುಕಟ್ಟಾಗಿ ಚುಚ್ಚಿಡಲಾಗಿತ್ತು. ಎಲ್ಲವೂ ಸಲ್ಲಾಪ್ನ ಫೋಟೋಗಳು. ಒಂದು ಫೋಟೋದಲ್ಲಿ ಅವನು ವೇದಿಕೆಯ ಮೇಲೆ ಹಾಡುತ್ತಿದ್ದ. ಇನ್ನೊಂದರಲ್ಲಿ ಅವನದೇ ಸ್ಟುಡಿಯೋದ ಒಳಗಿದ್ದ. ಮತ್ತೊಂದರಲ್ಲಿ ಪ್ರಸಿದ್ಧ ಸಂಗೀತ ನಿರ್ದೇಶಕರ ಜೊತೆ ವಿನೀತ ಭಾವದಿಂದ ನಿಂತಿದ್ದ. ಇಂಥದ್ದೇ ಹತ್ತು ಹಲವು ಫೋಟೋಗಳು ಅವನ ಸಾಧನೆಯನ್ನು ಸಾರಿಹೇಳುತ್ತಾ, ಹಣೆಗೆ ಗುಂಡುಪಿನ್ನು ಚುಚ್ಚಿಸಿಕೊಂಡು ನಿಂತಿದ್ದವು.

ಹೀಗೆ ಬಗೆಬಗೆಯ ಭಾವಚಿತ್ರಗಳನ್ನು ಎದೆಮೇಲೆ ಹೊತ್ತು ತೋರುತ್ತಿದ್ದ ಮೂರು ಫಲಕಗಳು ಅಲ್ಲಿದ್ದವು. ಹಾಗೆಯೇ ಅವುಗಳನ್ನೆಲ್ಲಾ ನೋಡುತ್ತಾ ಹೋದ ಸನಾತನಿಗೆ ಮೂರನೆಯ ಫಲಕದಲ್ಲಿದ್ದ ಒಂದು ಭಾವಚಿತ್ರ ಹೆಚ್ಚು ಆಪ್ಯಾಯಮಾನ ಎನಿಸಿಕೊಂಡಿತು. ಅದರಲ್ಲಿ ಸನಾತನಿ ಸಲ್ಲಾಪ್ನ ಮುಂದೆ ಕುಳಿತಿದ್ದಳು. ಇವಳು ಕೇಳಿದ್ದ ಯಾವುದೋ ಪ್ರಶ್ನೆಗೆ ಉತ್ತರಿಸುವ ರೀತಿಯಲ್ಲಿ ಅವನ ಕೈಕರಣವಿತ್ತು. ಬಾಯಿ ಅರೆದೆರೆದಿತ್ತು. ಆ ಫೋಟೋವನ್ನೇ ನೋಡುತ್ತಾ ಕೆಲಹೊತ್ತು ಹಾಗೆಯೇ ನಿಂತುಕೊ ಂಡಳು ಸನಾತನಿ.


ಆಗತಾನೇ ಸನಾತನಿ ‘ಕಾಲವಾಣಿ’ ಹೆಸರಿನ ಜನಪ್ರಿಯ ಪತ್ರಿಕೆಗೆ ಸೇರಿಕೊಂಡಿದ್ದಳು. ಅದಕ್ಕೂ ಮೊದಲು ಬೇರೆ ಒಂದೆರಡು ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ ಅವಳಿಗಿತ್ತು. ಇಂಥ ಸಮಯದಲ್ಲಿಯೇ ಸಲ್ಲಾಪ್ ಹೆಸರಿನ ಯುವ ಗಾಯಕ ‘ಹೊಸದು ಈ ಹಾಡು’ ಎನ್ನುವ ರಿಯಾಲಿಟಿ ಶೋಗೆ ಬಂದು, ಹಾಡಿ, ಜನರ ಮನಸ್ಸನ್ನು ಸೆಳೆದಿದ್ದ. ಮೊದಲ ಸ್ಥಾನ ಅವನಿಗೇನೂ ದಕ್ಕಲಿಲ್ಲ. ಮೂರನೆಯವನೆಂದೆನಿಸಿಕೊ ಂಡೇ ತೃಪ್ತಿ ಪಡೆಯಬೇಕಾಯಿತು. ಆದರೆ ಲಕ್ಷಗಟ್ಟಲೆ ಜನರ ಹೃದಯದೊಳಗೆ ಅವನಿಗೊಂದು ಸ್ಥಾನ ದೊರಕಿತ್ತು.

ಅವನ ಸಂದರ್ಶನ ಮಾಡಿ ಭಾನುವಾರದ ಪುರವಣಿಯಲ್ಲಿ ಅದನ್ನು ಪ್ರಕಟಿಸಿದರಾದೀತು ಎಂಬ ಯೋಚನೆ ಸನಾತನಿಯಲ್ಲಿ ಬಂದದ್ದು ಆಗಲೇ. ಸಲ್ಲಾಪ್ನಿಗೆ ಕರೆಮಾಡಿ ಸಂದರ್ಶನಕ್ಕೆ ಬರುವುದಾಗಿ ಹೇಳಿದ್ದಳು. ಮೊದಲು ಮುಜುಗರದಿಂದ “ಅಯ್ಯೋ ನಾನೇನೂ ದೊಡ್ಡ ಸಾಧನೆ ಮಾಡಿಲ್ಲ. ನನ್ನ ಸಂದರ್ಶನ ಯಾಕೆ?” ಎಂದವನು ಆಮೇಲೆ ಇವಳು ಮತ್ತೆ ಮತ್ತೆ ಹೊಗಳಿದ ಮೇಲೆ ಸಂತಸದಿ ಂದಲೇ ಒಪ್ಪಿಕೊಂಡಿದ್ದ.
ತರಹೇವಾರಿ ಪ್ರಶ್ನೆಗಳನ್ನು ತಲೆಯ ಮೇಲೆ ಹೊತ್ತುಕೊಂಡು, ಛಾಯಾಚಿತ್ರಗ್ರಾಹಕರನ್ನೂ ಜೊತೆಗೆ ಕರೆದುಕೊಂಡು ಅವನ ಮನೆಗೆ ಹೋಗಿದ್ದಳು ಸನಾತನಿ. ಅದಮ್ಯ ಉತ್ಸಾಹವಿತ್ತು ಅವಳಲ್ಲಿ.
ವಿನಯದಿಂದ ಇವಳಿಗೆ ಎರಡೂ ಕೈಮುಗಿದು ನಮಸ್ಕರಿಸುತ್ತಲೇ ಬಂದ ಸಲ್ಲಾಪ್ “ಏನು ಕುಡಿಯುತ್ತೀರಿ?” ಎಂದು ಇವಳಲ್ಲೂ ಆ ಛಾಯಾಗ್ರಾಹಕರಲ್ಲೂ ಕೇಳಿ, ಇಬ್ಬರೂ ಬಯಸಿದ ಕಾಫಿಯನ್ನು ತಾನೇ ಮನೆಯೊಳಗಿನಿಂದ ತಂದುಕೊಟ್ಟ. ಸಂದರ್ಶನದಲ್ಲ ಂತೂ ಅವನದ್ದು ಅತ್ಯುತ್ಸಾಹ. ತುಸು ಜನಪ್ರಿಯತೆ ಬಂದವರು ತೋರುವ ಬಿಂಕ ಬಿನ್ನಾಣದ ಅರಿವಿತ್ತು ಸನಾತನಿಗೆ. ಒಂದು ಹಾಡು ಹೇಳಿ ಎಂದರೆ ಭಾರೀ ತಿಳಿದವರ ಹಾಗೆ ತಮ್ಮದೇ ಧಾಟಿಯಲ್ಲಿ ಹೇಗೆ ಹೇಗೋ ಅರೆಬರೆ ಹಾಡು ಹೇಳುವುದು, ತಮ್ಮ ಸಾಧನೆಗೆ ಮೆಟ್ಟಿಲಾದವರನ್ನೆಲ್ಲಾ ಮೂಲೆಗೆ ತಳ್ಳಿ ತಮ್ಮದೇ ಪೂರ್ಣ ಪರಿಶ್ರಮ ಎಂಬ ಕಥೆ ಕಟ್ಟಿ ಅನುಕಂಪವನ್ನೂ ಮೆಚ್ಚುಗೆಯನ್ನೂ ಒಂದೇ ಸಮಯಕ್ಕೆ ದಕ್ಕಿಸಿಕೊಳ್ಳುವುದು ಇಂಥ ವರ್ತನೆಯ ತಿಳುವಳಿಕೆ ಅವಳಿಗಿತ್ತು. ಆದರೆ ಸಲ್ಲಾಪ್ನಲ್ಲಿ ಇದಾವುದೂ ಇರಲಿಲ್ಲ.

“ಒಂದೆರಡು ಸಾಲನ್ನು ಹಾಡಬಹುದಾ? ನಮ್ಮದು ಪತ್ರಿಕೆ. ನಿಮ್ಮ ಹಾಡೇನೂ ಜನರಿಗೆ ರೀಚ್ ಆಗುವುದಿಲ್ಲ, ಗೊತ್ತಿದೆ. ಆದರೆ ನನಗೆ ನಿಮ್ಮ ಹಾಡಿನ ರೀತಿ ಇಷ್ಟ. ಅಭಿಮಾನಿಯಾಗಿ ಕೇಳಿದೆ ಅಷ್ಟೇ” ಎಂದು ಸನಾತನಿ ಹೇಳಿದ ತಕ್ಷಣವೇ ತನ್ನಿಷ್ಟದ ಹಾಡನ್ನು ಬಲುಇಷ್ಟದಿಂದ ಹಾಡಿ ತೋರಿಸಿದ್ದ. ಅದೇ ಹಾಡಿನ ಧಾಟಿಯಲ್ಲಿ ಬಂದಿರುವ ಹಿಂದಿ ಭಾಷೆಯ ಹಾಡೊಂದನ್ನೂ ಗುನುಗುನಿಸಿದ್ದ. ಅವನಿಗೆ ಅವನ ಬಗ್ಗೆ ಹೇಳಿಕೊಳ್ಳುವುದಕ್ಕಿಂತಲೂ ಬೇರೆ ಹಾಡುಗಾರರ ಬಗೆಗೆ, ಸಂಗೀತ ನಿರ್ದೇಶಕರ ಬಗೆಗೆ ಹೇಳುವುದಕ್ಕೆ ಹೆಚ್ಚು ತುಡಿತ ಇದ್ದಂತಿತ್ತು.

“ಸಂಗೀತ ಕ್ಷೇತ್ರದಲ್ಲಿ ಸಾಧಿಸಬೇಕು ಎಂದುಕೊ ಂಡಿರುವವರಿಗೆ ನೀವು ನೀಡುವ ಸಲಹೆಯೇನು?” ಎಂದು ಇವಳು ಕೇಳಿದ ಕೊನೆಯ ಪ್ರಶ್ನೆಗಂತೂ “ಅಯ್ಯೋ! ನಾನೇ ಇನ್ನೂ ಯಾವ ಸಾಧನೆಯನ್ನೂ ಮಾಡಿಲ್ಲ. ನಾನು ಸಲಹೆ ಹೇಗೆ ಕೊಡಲಿ ಮೇಡಂ?” ಎಂದು ಅಸಹಾಯಕನಂತೆ ಪ್ರಶ್ನಿಸಿದ್ದ. ಮತ್ತೂ ಇವಳು ಒತ್ತಾಯಿಸಿದ್ದಕ್ಕೆ “ಪರಿಶ್ರಮ ಪಟ್ಟರೆ ಖಂಡಿತವಾಗಿಯೂ ಸಾಧಿಸಲು ಸಾಧ್ಯ ಇದೆ. ಇದುವೇ ನಾನು ಕೊಡುವ ಸಲಹೆ” ಎಂದಷ್ಟೇ ಹೇಳಿ ಒಮ್ಮೆ ನಕ್ಕು ಸುಮ್ಮನಾಗಿದ್ದ.

ಕೊನೆಯಲ್ಲಿ ಇವಳ ಜೊತೆಗೊಂದು ಭಾವಚಿತ್ರ ತೆಗೆಸಿಕೊಳ್ಳುವಾಗಲೂ ಅಷ್ಟೇ, ಜೀವನದಲ್ಲಿ ಏನೇನೂ ಮಾಡಿಲ್ಲ ಎನ್ನುವ ಹಾಗೆ ವಿನಯಶೀಲತೆಯಿಂದ ನಿಂತುಕೊ ಂಡಿದ್ದ. ಅವನ ಜೊತೆಗಿನ ಅಷ್ಟೂ ಹೊತ್ತಿನ ಒಡನಾಟ ಸನಾತನಿಗೆ ಸಂತಸ ಕೊಟ್ಟಿತ್ತು. ತುಂಬು ಮನಸ್ಸಿನಿಂದ ಅವನಿಗೆ ಹಾರೈಸಿ ವಾಪಸ್ಸಾಗಿದ್ದಳು.


“ಈಗ ರಾಜ್ಯದಲ್ಲಿಡೀ ಗುರುತಿಸಿಕೊಂಡಿದ್ದೀರಿ. ಒಳ್ಳೆಯ ಹೆಸರು ಮಾಡಿದ್ದೀರಿ. ಮುಂದೆ ನೀವು ರಾಷ್ಟ್ರಮಟ್ಟದಲ್ಲಿ ಮಿಂಚುವ ಹಾಗಾಗಲಿ” ಎಂದು ತಾನು ಹಾರೈಸಿಬಂದದ್ದು ಇಷ್ಟು ಬೇಗ ಫಲ ಕೊಡುವಂತಾಯಿತೇ! ಎಂದು ಸನಾತನಿ ಅಚ್ಚರಿಪಡುವಂತಾದದ್ದು ಸಲ್ಲಾಪ್ ಬಗೆಗಿನ ಹೊಸ ಸುದ್ದಿಯೊಂದು ಕಿವಿಗೆ ಬಿದ್ದಾಗ. ಹಿಂದಿ ಟಿ.ವಿ. ಚಾನಲ್ ಒಂದರ ರಿಯಾಲಿಟಿ ಶೋನಲ್ಲಿ ಹಾಡಿ, ಎಲ್ಲರ ಮೆಚ್ಚುಗೆ ಪಡೆದವನು ಕೊನೆಯಲ್ಲಿ ಆ ಸ್ಪರ್ಧೆಯ ವಿಜೇತ ಎನಿಸಿಕೊಂಡಿದ್ದ.
“ನೀವು ಸಂದರ್ಶನ ಮಾಡಿದ್ದ ಸಲ್ಲಾಪ್ ಇದ್ದಾನಲ್ಲಾ, ಹಿಂದಿ ರಿಯಾಲಿಟಿ ಶೋ ವಿನ್ ಆಗಿದ್ದಾನೆ ನೋಡಿ” ಎಂದು ಪತ್ರಿಕೆಯಲ್ಲಿ ಇವಳ ಜೊತೆಗೇ ಕೆಲಸ ಮಾಡುವ ರಂಜಿತಾ ಹೇಳಿದ್ದಳು.
ಸನಾತನಿಗೆ ಸಂತಸವಾಗಿತ್ತು. ಅವನ ಯೋಗ್ಯತೆಗೆ ತಕ್ಕುದಾದದ್ದೇ ಸಿಕ್ಕಿದೆ ಎಂದು ಖುಷಿಪಟ್ಟಿದ್ದಳು. ಹೇಗೂ ಸಂಗೀತ ದಿನ ಹತ್ತಿರದಲ್ಲಿಯೇ ಇದೆ. ಅದಕ್ಕೊಂದು ವಿಶೇಷ ಸಂಚಿಕೆ ತರುವ ಯೋಜನೆ ಹಾಕಿಕೊಂಡಿದ್ದೇವೆ. ಅದಕ್ಕೆ ಸಲ್ಲಾಪ್ನ ಸಂದರ್ಶನವನ್ನೇ ಮಾಡಿದರಾದೀತಲ್ಲಾ ಎನಿಸಿತ್ತು ಅವಳಿಗೆ ಆ ಕ್ಷಣದಲ್ಲಿ.

ತಕ್ಷಣವೇ ಸಲ್ಲಾಪ್ನಿಗೆ ಕರೆಮಾಡಿದ್ದಳು. ಖುಷಿಖುಷಿಯಿಂದ ಮಾತನಾಡಿದ್ದಳು. ಸಂದರ್ಶನ ಮಾಡುವುದಕ್ಕೆ ಒಂದಷ್ಟು ಸಮಯ ಕೊಡಬೇಕು ಎಂದು ಕೇಳಿಕೊಂಡಿದ್ದಳು. “ಈಗ ಸ್ವಲ್ಪ ಬ್ಯುಸಿ ಇದ್ದೇನೆ. ಸದ್ಯಕ್ಕೆ ಆಗುವುದಿಲ್ಲ” ಎಂದು ಅವನು ಹೇಳಿದ್ದು ಇವಳಿಗೇನೂ ಅಸಹಜವಾಗಿ ತೋರಿರಲಿಲ್ಲ. ವಿಜೇತ ಎನಿಸಿಕೊಂಡ ಬೆನ್ನಿಗೇ ಅವನಿಗೆ ಪುರುಸೊತ್ತೇ ಇಲ್ಲದ ಹಾಗೆ ಒಂದರ ಹಿಂದೊ ಂದು ಕಾರ್ಯಕ್ರಮಗಳು ಬಂದು ಮುತ್ತಿಕೊಂಡಿರುವ ವಿಚಾರ ಇವಳಿಗೆ ಗೊತ್ತಿತ್ತು. “ತೊಂದರೆ ಇಲ್ಲ ಸಲ್ಲಾಪ್. ನೀವು ಪುರುಸೊತ್ತಿದ್ದಾಗಲೇ ನಾನು ಬರುತ್ತೇನೆ ಸಂದರ್ಶನ ಮಾಡುವುದಕ್ಕೆ” ಎಂದು ಹೇಳಿ ಫೋನಿಟ್ಟಿದ್ದಳು.
ಎರಡು ವಾರ ಬಿಟ್ಟು ಕರೆ ಮಾಡಿದಾಗಲೂ ಅದೇ ತರಹದ ಉತ್ತರ ಅವನ ಕಡೆಯಿಂದ. “ಸರಿ ನೀವು ಯಾವಾಗ ಫ್ರೀ ಆಗುತ್ತೀರಿ ಹೇಳಿ. ಅದೇ ದಿನ ನಾನು ಸಂದರ್ಶನಕ್ಕೆ ಬರುತ್ತೇನೆ” ಎಂದು ಆತ್ಮೀಯತೆಯಿಂದ ಇವಳು ಹೇಳಿದ್ದಕ್ಕೆ ಅವನು “ಸದ್ಯಕ್ಕಂತೂ ಇಲ್ಲ. ಮುಂದೆ ಯಾವತ್ತಾದರೂ ನೋಡೋಣ” ಎಂದಿದ್ದ. ಎಲ್ಲೋ ಸರಿದೋರುತ್ತಿಲ್ಲ ಎಂದೆನಿಸಿತ್ತು ಸನಾತನಿಗೆ. ಸಲ್ಲಾಪ್ನಂಥ ಸಲ್ಲಾಪ್ನನ್ನೇ ಅಹಂಕಾರ ಬಂದು ಅಪ್ಪಿಕೊಂಡಿತೇ ಎಂದುಕೊ ಂಡಳು. ಮೊದಲೇ ತುಸು ಮುಜುಗರದ ಮನುಷ್ಯ. ಸಂದರ್ಶನ ಕೊಡುವುದಕ್ಕೆ ಸಂಕೋಚಪಟ್ಟನೋ ಏನೋ ಎಂಬ ಯೋಚನೆ ಮರುಕ್ಷಣವೇ ಮೂಡಿಬಂದು ಹಿಂದಿನ ಯೋಚನೆಯನ್ನು ನುಂಗಿಹಾಕಿತ್ತು.

ಏನೆಂದರೂ ಅವನನ್ನು ಸಂದರ್ಶಿಸದೇ ಬಿಡಲಾರೆ ಎಂಬ ಂತೆ ನಾಲ್ಕು ತಿಂಗಳ ನಂತರ ಅವನಿಗೆ ಕರೆಮಾಡಿ ಮಾತನಾಡಿದ್ದಳು. ಸಂದರ್ಶನಕ್ಕೆ ಬರುವುದಕ್ಕೆ ಹೇಳಿದ್ದ. “ಹ್ಞಾ! ಕಳೆದ ಸಲ ಬಂದಿದ್ದೀರಲ್ಲ ನನ್ನ ಮನೆ, ಅಲ್ಲಿಗೆ ಬರುವುದು ಬೇಡ. ಈಗ ನನ್ನದೇ ಒಂದು ಸ್ಟುಡಿಯೋ ಇದೆ. ಲೊಕೇಶನ್ ಕಳಿಸುತ್ತೇನೆ. ಅಲ್ಲಿಗೆ ಬನ್ನಿ” ಎಂದಿದ್ದ. ಅವನ ವಿನಯಶೀಲತೆ ಅದೆಲ್ಲೋ ಕಳೆದುಹೋಗಿದೆ ಎನ್ನುವುದು ಈ ಸಲ ಅವನ ಮಾತಿನ ರೀತಿಯನ್ನು ಕೇಳಿಸಿಕೊಂಡ ಮೇಲೆ ಸನಾತನಿಗೆ ಸ್ಪಷ್ಟವಾಗಿತ್ತು. ಕೇಳಿದ್ದು ಸುಳ್ಳಾಗಬಹುದು. ಒಮ್ಮೆ ನೋಡಿಯೇ ತೀರ್ಮಾನಿಸುತ್ತೇನೆ ಎಂಬ ಂತೆ ಸಂದರ್ಶನಕ್ಕೆ ಹೋಗಿದ್ದಳು.
ಇವಳಲ್ಲಿಗೆ ತಲುಪಿದಾಗ ಬೇರೆ ಯಾರ ಜೊತೆಗೋ ಮಾತನಾಡುತ್ತಿದ್ದ. ಇವಳನ್ನು ಕಂಡ ಕೂಡಲೇ ಹಾಗೇ ಒಮ್ಮೆ ನಕ್ಕಂತೆ ಮಾಡಿದ್ದ. ಇವಳೇ ವಿಶ್ ಮಾಡಿದ್ದಳು. ಅದಕ್ಕೂ ಅಷ್ಟೇನೂ ಪ್ರತಿಕ್ರಿಯೆ ಇರಲಿಲ್ಲ. ಇದ್ದವರು ಹೋದಮೇಲೆ ಇವಳ ಜೊತೆ ಮಾತನಾಡುವುದಕ್ಕೆ ಕುಳಿತಿದ್ದ. ಮಾತಿನಲ್ಲಿ ಸ್ಪಷ್ಟತೆ ಕಳೆದುಹೋಗಿತ್ತು. ಏನೋ ಒತ್ತಡದಲ್ಲಿ ಇದ್ದವನಂತೆ, ಭಯಕ್ಕೆ ಒಳಗಾದವನಂತೆ ಮಾತನಾಡುತ್ತಿದ್ದ.
“ಈಗಿನ ಸಂಗೀತ ಕ್ಷೇತ್ರ ಸರಿಯಿಲ್ಲ. ರಾಜಕೀಯ ತುಂಬಿಕೊ ಂಡಿದೆ. ನಿಜವಾದ ಪ್ರತಿಭಾವಂತರಿಗೆ ಎಲ್ಲಿ ಬೆಲೆಯಿದೆ” ಎಂದವನು ಮರುಕ್ಷಣವೇ “ಆದರೂ ಸಾಧಿಸಬೇಕು. ಸಾಧನೆಯಿಂದ ಹಿಂದೆ ಹೋಗಬಾರದು” ಎಂದು ತನಗೆ ತಾನೇ ಹೇಳಿಕೊಳ್ಳುವಂತೆ ನುಡಿದಿದ್ದ. ನಡುನಡುವೆ ಬೇಕುಬೇಕಂತಲೇ ಇಂಗ್ಲೀಷ್ ಮಾತುಗಳನ್ನು ಆಡುತ್ತಿದ್ದ. ಏನನ್ನೋ ತೋರಿಸಿಕೊಳ್ಳುವ, ತನಗೆಲ್ಲವೂ ತಿಳಿದಿದೆ ಎನುವುದನ್ನು ಪ್ರೂವ್ ಮಾಡುವ ಒತ್ತಡ ಅವನಲ್ಲಿ ಕಾಣುತ್ತಿತ್ತು.

“ಕಳೆದ ಸಲ ನೀವು ನನಗೋಸ್ಕರ ಒಂದು ಹಾಡು ಹಾಡಿದ್ದೀರಿ. ಈ ಸಲವೂ ಅಂಥದ್ದೇ ಒಂದು ಹಾಡು ಹಾಡಬಹುದಾ?” ಎಂದು ಇವಳು ಕೇಳಿದ ತಕ್ಷಣವೇ ಒಂದೆರಡು ಸಾಲು ಹಾಡಿದವನು “ಸಾರಿ. ಇವತ್ತು ಗಂಟಲು ಸರಿಯಿಲ್ಲ. ಧ್ವನಿ ಹೊರಟುಹೋಗಿದೆ” ಎಂದು ಹಾಡನ್ನು ನಿಲ್ಲಿಸಿದ್ದ. ಇಡೀ ಹಾಡನ್ನು ಹಾಡುವಷ್ಟು ಗಂಟಲಿನ ತ್ರಾಣ ಅವನಲ್ಲಿತ್ತು. ಅದು ಸನಾತನಿಗೆ ಗೊತ್ತಾಗಿತ್ತು. ಅವನು ಸುಮ್ಮಸುಮ್ಮನೆ ಹಾಗೆ ಹೇಳುತ್ತಿದ್ದಾನೆ ಎನ್ನುವುದರ ಸುಳಿವು ಅವಳಿಗೆ ಸಿಕ್ಕಿತ್ತು.
ಇವಳು ಹೊರಟುನಿಂತಾಗ ಅವನು “ಹ್ಞಾ! ಆಗ ನಾನು ಸಂಗೀತ ಕ್ಷೇತ್ರದ ಬಗ್ಗೆ ಚೂರು ನೆಗೆಟಿವ್ ಆಗಿ ಮಾತನಾಡಿದೆನಲ್ಲಾ, ಅದನ್ನು ಸಂದರ್ಶನದಲ್ಲಿ ಹಾಕಬೇಡಿ” ಎಂದಿದ್ದ. ಅವನ ಮುಖವನ್ನೇ ನೋಡಿದ ಸನಾತನಿಗೆ ಕಾಣಿಸಿದ್ದು, ಎಲ್ಲಿ ಅದೆಲ್ಲಾ ಆಗುವುದಿಲ್ಲ ಎಂದು ಇವಳು ಹೇಳಿಬಿಡುತ್ತಾಳೋ ಎಂದು ಅವನೊಳಗಿದ್ದ ಭಯ. “ಸರಿ. ಅದನ್ನು ಪ್ರಕಟಿಸುವುದಿಲ್ಲ” ಎಂದವಳು ಅಲ್ಲಿಂದ ಹೊರಟುಬಂದಿದ್ದಳು. ಇವನು ಮೊದಲಿನಂತಿಲ್ಲ. ಇನ್ನುಮುಂದೆ ಇವನನ್ನು ಸಂದರ್ಶಿಸುವುದಕ್ಕೆ ಬರಬಾರದು ಎನಿಸಿತ್ತು ಅವಳಿಗೆ.


ಫೋಟೋಗಳನ್ನೆಲ್ಲಾ ನೋಡುತ್ತಾ ನೋಡುತ್ತಾ ಸನಾತನಿಗೆ ಇದಂತೂ ಸಲ್ಲಾಪ್ನ ವ್ಯಕ್ತಿತ್ವಕ್ಕೆ ಹೊಂದಿಕೊಳ್ಳುವ ಂಥದ್ದಲ್ಲ ಎನಿಸಿತು. ಮೊದಲ ಸಂದರ್ಶನದಲ್ಲಿ ಇವಳ ಜೊತೆ ಅವನು “ಮಾಡಿರುವ ಸಾಧನೆಗಳನ್ನೆಲ್ಲಾ ನಾನು ಮಾಡಿದ್ದೇನೆ ನಾನು ಮಾಡಿದ್ದೇನೆ ಅಂತ ಹೇಳಿಕೊಳ್ಳುವುದು, ದೊಡ್ಡ ದೊಡ್ಡದಾಗಿ ಆ ಸಾಧನೆಗಳ ಫೋಟೋ ಹಾಕಿಕೊಳ್ಳುವುದು ಇದರಲ್ಲೆಲ್ಲಾ ನನಗೆ ಆಸಕ್ತಿ ಇಲ್ಲ ಮೇಡಂ. ಮೌನವಾಗಿ ಸಾಧನೆ ಮಾಡುತ್ತಿರಬೇಕು. ಅದನ್ನು ಉಳಿದವರು ಗುರುತಿಸಿದರೆ ಅದುವೇ ಚಂದ. ಅಲ್ಲವಾ?” ಎಂದಿದ್ದ. ಅಂಥವನು ಈ ರೀತಿಯಲ್ಲಿ ಮೂರು ಮೂರು ಫಲಕಗಳಲ್ಲಿ ಫೋಟೋ ಹಾಕಿಸಿಕೊಂಡಿರುವುದು ಸನಾತನಿಗೆ ಅಚ್ಚರಿ ತಂದಿತ್ತು.

ಮತ್ತೆ ಮೊದಲಿನಂತೆಯೇ ಹೋಗಿ ಕುರ್ಚಿ ಮೇಲೆ ಕುಳಿತುಕೊಂಡವಳು ಪ್ರಶ್ನೆ ಆರಂಭಿಸುವುದೆಲ್ಲಿ ಂದ ಎಂದು ಲೆಕ್ಕಾಚಾರ ಹಾಕತೊಡಗಿದಳು. ಹೊಳೆದ ಪ್ರಶ್ನೆಗಳೆಲ್ಲವೂ ಅವಳಲ್ಲಿ ಅತೃಪ್ತಿಯನ್ನು ಮೂಡಿಸಿದವು. ಸಂಗೀತ ನಿರ್ದೇಶಕರ ಜೊತೆಗಾದ ಮನಸ್ತಾಪದ ಬಗೆಗೆ ಕೇಳಿದರೆ ಅವನೇನು ಹೇಳಿಯಾನು? ಮೊನ್ನೆ ಮೊನ್ನೆ ತಾನೇ ಸದ್ದುಮಾಡಿದ ಡ್ರಗ್ಸ್ ಪ್ರಕರಣದಲ್ಲಿ ಇವನ ಹೆಸರು ಕೇಳಿಬಂದಿದೆ. ತನ್ನದೇನೂ ತಪ್ಪಿಲ್ಲ ಎಂದು ಎರಡು ಮೂರು ಟಿ.ವಿ. ಚಾನಲ್ಗಳ ಮುಂದೆ ಹೇಳಿಕೊಂಡಿದ್ದಾನೆ. ಅದರ ಬಗೆಗೆ ಕೇಳುವುದಕ್ಕೆ ತನಗೆ ಬಾಯಿ ಬಂದೀತಾ ಎಂದುಕೊ ಂಡಳು ಸನಾತನಿ. ತನ್ನ ಪತ್ರಿಕೆಯ ಸಂಪಾದಕರು ಗಟ್ಟಿ ಗುಂಡಿಗೆಯವರು. ಒಂದುವೇಳೆ ಅವರನ್ನು ಎದುರುಹಾಕಿಕೊಂಡರೆ ಉಳಿಗಾಲ ಇಲ್ಲ ಎನ್ನುವ ಕಾರಣಕ್ಕೆ ಸಲ್ಲಾಪ್ ಇಂದು ತನ್ನೆದುರು ಬಂದು ಕುಳಿತು ಉತ್ತರ ಕೊಡುವುದಕ್ಕೆ ಒಪ್ಪಿಕೊಂಡಿರಬಹುದು ಎಂಬ ಯೋಚನೆ ಅವಳಲ್ಲಿ ಮೂಡಿತು.
ಅಷ್ಟರಲ್ಲಿ ಅವಳ ಬಳಿಯಿದ್ದ ಬಾಗಿಲು ತೆರೆಯಿತು. ಸಲ್ಲಾಪ್ ಜೊತೆಗೆ ಅವನ ತಾಯಿಯೂ ಇದ್ದರು. ಅವನ ಮುಖ ತೀರಾ ಬಾಡಿಕೊಂಡ ಂತಿತ್ತು.

ಸನಾತನಿಯ ಕಣ್ಣನೋಟವನ್ನು ಅಳೆದ ಅವನ ತಾಯಿ “ಇವತ್ತು ಅವನಿಗೆ ಸ್ವಲ್ಪ ತಲೆನೋವಿದೆ” ಎಂದರು. ಅವರು ಸುಳ್ಳು ಹೇಳುತ್ತಿದ್ದಾರೆ ಎನ್ನುವುದು ಸನಾತನಿಗೆ ಗೊತ್ತಾಗುವಂತಿತ್ತು.
ಸಲ್ಲಾಪ್ ತೀರಾ ಕಂಗಾಲಾಗಿಹೋದ ಂತಿದ್ದ. ಸನಾತನಿಯನ್ನು ಕಂಡವನು ಆತ್ಮೀಯತೆಯ ನಗು ಬೀರಿದ. ಅವನ ನಗು ಅಷ್ಟೇನೂ ಆಕರ್ಷಕವಾಗಿರಲಿಲ್ಲ. ಆದರೆ ಅದರಲ್ಲೊಂದು ಸಹಜತೆಯಿತ್ತು.
“ನೀವು ಪ್ರಶ್ನೆ ಕೇಳುವ ಮೊದಲು ನಾನೊಂದು ಹಾಡು ಹೇಳುತ್ತೇನೆ. ಆಗಬಹುದಲ್ಲಾ?” ಎಂದವನು ಇವಳ ಒಪ್ಪಿಗೆಗೂ ಕಾಯದೆ ರಾಗವೊಂದರ ಆಲಾಪವನ್ನು ಶುರುವಿಟ್ಟುಕೊಂಡ. ಮೊದಮೊದಲು ಸುಮ್ಮನೆ ಎಂಬ ಂತೆ ಸಾಗುತ್ತಿದ್ದ ಆಲಾಪ ಅದಾವುದೋ ಗಳಿಗೆಯಲ್ಲಿ ಅಲೌಕಿಕ ಭಾವವೊಂದನ್ನು ಅಪ್ಪಿಕೊಂಡಿತು. ಹಿಂದೆ ಯಾವತ್ತೂ ಅವನಿಂದ ಅಂಥದ್ದೊ ಂದು ಆಲಾಪವನ್ನು ಆಲಿಸದೇ ಇದ್ದ ಸನಾತನಿ ಹಾಗೆಯೇ ಅದನ್ನು ಮನಸಾರೆ ಅನುಭವಿಸತೊಡಗಿದಳು.

ಎಲ್ಲವನ್ನೂ ಮರೆತು ಕಣ್ಣುಮುಚ್ಚಿ ಆಲಾಪ ನಡೆಸುತ್ತಿದ್ದ ಅವನ ಕಣ್ಣಂಚಿನಲ್ಲಿ ಹನಿಯೊಂದು ಕಾಣಿಸಿಕೊಂಡಿತು. ತಾನು ಕೇಳಬೇಕಿರುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇನ್ನೇನು ಬೀಳಲಿರುವ ಆ ಹನಿಯಲ್ಲಿದೆ ಎಂದು ತೋರಿತು ಸನಾತನಿಗೆ.

-ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
0
Would love your thoughts, please comment.x
()
x