ಧಾವಂತ ಬದುಕಿನಲ್ಲಿ ಜೀವಂತ ಶವವಾದ ಮಾನವ
ಇಂದಿನ ಯುಗವನ್ನು ವೇಗದ ಯುಗವೆಂದು ಕರೆಯಲಾಗುತ್ತದೆ. ತಂತ್ರಜ್ಞಾನ, ಸ್ಪರ್ಧೆ, ಆರ್ಥಿಕ ಒತ್ತಡ ಮತ್ತು ಹೆಚ್ಚುತ್ತಿರುವ ನಿರೀಕ್ಷೆಗಳ ನಡುವೆ ಮನುಷ್ಯನು ನಿರಂತರ ಓಟದಲ್ಲಿ ತೊಡಗಿದ್ದಾನೆ. ಬೆಳಿಗ್ಗೆಯಿಂದ ರಾತ್ರಿ ತನಕ ಸಮಯದ ಹಿಂದೆ ಓಡುವ ಈ ಬದುಕಿನಲ್ಲಿ ಆತ ತನ್ನನ್ನು ತಾನೇ ಮರೆತುಬಿಡುವ ಮಟ್ಟಕ್ಕೆ ತಲುಪಿದ್ದಾನೆ. ಜೀವನವನ್ನು ಸುಖಮಯವಾಗಿಸಲು ರೂಪುಗೊಂಡ ಸಾಧನಗಳು ಮತ್ತು ಸೌಲಭ್ಯಗಳು ಹೆಚ್ಚಾದರೂ ಮನಸ್ಸಿಗೆ ನೆಮ್ಮದಿ, ಹೃದಯಕ್ಕೆ ಸಂತೋಷ ಮತ್ತು ಬದುಕಿಗೆ ಅರ್ಥ ನೀಡುವ ಮೌಲ್ಯಗಳು ಕ್ರಮೇಣ ಕ್ಷೀಣಿಸುತ್ತಿವೆ.ಈ ಸಂಗತಿಯು ಕೇವಲ ನಗರದಲ್ಲಿ ವಾಸ ಮಾಡುವ ಜನರಿಗೆ ಸೀಮಿತವಾಗದೆ ಹಳ್ಳಿಯಲ್ಲೂ ಸದರಿ ಪರಿಸ್ಥಿತಿ ಜೀವಂತವಾಗಿರುವುದು ಹಳ್ಳಿ ತಾಜಾತನದ ಹತ್ಯೆಯಾದ ಬದುಕಿನ ರೂಪಕ. ಈ ಬಗೆಯ ಧಾವಂತದ ಜೀವಂತಿಕೆಯನ್ನುಈ ಕೆಳಗೆ ಸೂಚಿಸಿರುವ ಅಂಶಗಳು ನಮಗೆ ಮನವರಿಕೆ ಮಾಡಿಕೊಡುತ್ತವೆ.
ಆಘಾತವೋ, ಅಪಘಾತವೋ, ಆಕಸ್ಮಿಕವೋ, ಅನಿವಾರ್ಯವೋ ಯಾರಿಗೆ ಗೊತ್ತು. ಓಡು ಓಡು ಓಡು ಎಲ್ಲಿಯು ನಿಲ್ಲದಿರು, ಅವರಿವರ ತಳ್ಳಿ ಮುನ್ನುಗ್ಗು ಹೀರು ಪೆಪ್ಸಿ, ಕೊಕೊ ಕೋಲ, ತಿಂದರೆ ತಿನ್ನು ಪಿಜ಼, ಬರ್ಗರ್, ಗೋಬಿ, ಮಸಾಲೆ ಪುರಿ, ಸೇವಿಸು ಅಶುದ್ಧ ಗಾಳಿ, ಜನನ ಆಸ್ಪತ್ರೆಯಲ್ಲಿ, ಬೆಳವಣಿಗೆ ನಲಿವಿಲ್ಲದ ನೆಲದಲ್ಲಿ, ಆಗಸ ಕಾಣದ ಮೇಲ್ಚಾವಣಿಯ ಕೆಳಗೆ ಕೃತಕವಾದ ಆಟ, ಅಂಕಗಳಿಗಾಗಿ ಒಂದಷ್ಟು ಪಾಠ, ಧಾವಂತ ಬದುಕಲ್ಲಿ ಜೀವಂತ ಶವಗಳ ಓಟ, ಎಲ್ಲಿಯು ನಿಲ್ಲದಿರು ಮನೆಯನೆಂದು ಕಟ್ಟದಿರು ಎಂಬ ಕುವೆಂಪು ಅವರ ಕವಿತೆಯಂತೆ ಮನೆಗಳಿದ್ದರೂ ಪರಿಶುದ್ಧ ಮನವಿಲ್ಲದ ಕೊಳಕು ಆಲಯದಲ್ಲಿ ಬದುಕುತ್ತಿದ್ದಾನೆ. ದುಡಿಯುವುದು ಆರೋಗ್ಯ ಕೆಡಿಸಿಕೊಂಡು ಸುರಿಯುವುದು ದುಡ್ಡನ್ನು ಔಷಧಿಗೆಂದು. ಮಲೀನತೆಯ ಗೂಢಾಗಿರುವ ನಗರಗಳು, ಹೊಗೆಯಲ್ಲಿ ಮುಳುಗಿರುವ ರಸ್ತೆಗಳು, ಹಾರುತ್ತಿವೆ ಹಕ್ಕಿಯಂತೆ ವಾಹನಗಳು, ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ, ಮಧ್ಯಮ ವರ್ಗದ ಬದುಕು ಮದ್ಯ ಕುಡಿದಿರುವ ಬೆಳಕಿನಂತೆ ತೂರಾಡುವ ಮನಸ್ಸು, ಓಲಾಡುವ ಕನಸು, ಅರೆಬರೆ ಮುನಿಸು, ಬದುಕೇ ಫಾಸ್ಟ್ಫುಡಿನಂತಾಗುತ್ತಿದೆ. ಎಲ್ಲೆಂದರಲ್ಲಿ ಕ್ಯೂ ನಿಲ್ಲುವ ಮನೋಭಾವದಿಂದ ಸಾವಿಗೂ ಸಾಲು ನಿಲ್ಲುವ ಜನರ ನಡುವೆ ಬದುಕು ನಲುಗುತ್ತಿದೆ. ಸಂಯಮ, ತಾಳ್ಮೆ, ಸಮಾಧಾನ, ನಿಧಾನವಾಗಿ ಸಾಗುವ ಮನಸ್ಸು ಇಲ್ಲವಾಗುತ್ತಿದೆ.
ಅವಸರವೇ ಅಪಘಾತಕ್ಕೆ ಕಾರಣ, ವೇಗದ ತಾಕತ್ತು ಜೀವಕ್ಕೆ ಆಪತ್ತು, ಬದುಕಿನ ರಸ್ತೆ ಹಾಳಾಗಿದೆ ‘ನಿಧಾನವಾಗಿ ಚಲಿಸಿ’ ಎಂದು ಬೋರ್ಡು ತಗುಲಿ ಹಾಕಿದ್ದರು ಲಂಗು ಲಗಾಮಿಲ್ಲದ ಹಾರುವ ಕುದುರೆಯಂತೆ ಎಲ್ಲರು ಹಾರುತ್ತಿದ್ದಾರೆ. ಪ್ರತಿನಿತ್ಯ ದಿನಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಅಪಘಾತ, ಅವಘಡ, ದುರಂತ ಮರಣಗಳ ವರದಿಯನ್ನು ನೋಡಿದಾಗ ಈಗೇಕೆ ಮನುಷ್ಯ ಒತ್ತಡದಲ್ಲಿ ಬದುಕುತ್ತಿದ್ದಾನೆ ಎನಿಸುತ್ತದೆ. ಮೈಸೂರು ನಗರದ ಆರುಗೇಟು ವೃತ್ತದಲ್ಲಿ ನಿಂತ ಘಳಿಗೆ ಸಾವಿರದ ವಾಹನಗಳು ಜನರ ಸಂದಣಿಗಳ ನಡುವೆಯೇ ಚೆಂಗನೆ ಹಾರುತ್ತಿವೆ. ಚೊಳ್‌ನೆ ಬಂದ ಅವು ಕೆಂಪು ದೀಪ ಬೆಳಗಲು ನಿಂತರೆ ನಿಲ್ಲುತ್ತವೆ. ಮತ್ತೊಂದಷ್ಟು ಹಸಿರು ದೀಪಕ್ಕಾಗಿ ಹತೊರೆಯುತ್ತಿವೆ. ಆ ವಾಹನಗಳಿಗೆ ವೇಗದ ರೋಗ ಬಡಿದಿದೆ. ಅವಸರದ ಶಾಪ ತಟ್ಟಿದೆ, ರ‍್ರನ್ನೇ ಬಂದವು ಪರ‍್ರನ್ನೇ ಹಾರಿದವು ಮನಸ್ಸು ಕೇಳಿತು ಎಲ್ಲಿಗೆ ಓಡುತ್ತಿದ್ದಾರೆ ಇವರೆಲ್ಲ, ಅವರಿಗೂ ತಿಳಿಯದ ಸತ್ಯವೆಂದರೆ ಇದೊಂದೆ ನೋಡಿ ತಮಗರಿವಿಲ್ಲದೆ ಎಲ್ಲರು ಸಾಗುತಲಿದ್ದಾರೆ ಎಲ್ಲಿಗೆ ಎಂದು ಅವರಿಗೂ ತಿಳಿಯದು. ನಗರ ಬದುಕಿನ ರೌರವ ನರಕವೆಂದರೆ ಇದೆ ಎಂದು ಅನಿಸುತ್ತದೆ.
ಮಾನವನಿಂದ ನಿರ್ಮಿತಿಗೊಂಡ ಗಡಿಯಾರವೆಂಬ ಯಂತ್ರ ಕಂಡು ಹಿಡಿದು ತಾನೆ ನಿಗಧಿಪಡಿಸಿಕೊಂಡ ಇಪ್ಪತ್ತನಾಲ್ಕು ಗಂಟೆಯಲ್ಲಿ ಗಂಟೆಗೆ ಇಷ್ಟು ನಿಮಿಷ, ನಿಮಿಷಕ್ಕೆ ಇಷ್ಟು ಸೆಕೆಂಡುಗಳೆಂದು ಮನೆಯ ಗೋಡೆಯಲ್ಲಿ, ಕೈಯಲ್ಲಿ, ಜೇಬಿನಲ್ಲಿ ಇಳಿಬಿಟ್ಟು ಅದರ ಮುಳ್ಳಿನ ಹಿಂದೆ ಓಡುವ. ಉದ್ಯೋಗಕ್ಕೆಂದು ಕಂಪನಿ, ಕಾರ್ಖಾನೆಯನ್ನು ನಿರ್ಮಿಸಿಕೊಂಡು ಬೆಳಗೆ ಇಷ್ಟರಿಂದ ಇಷ್ಟು ಕೆಲಸದ ವೇಳೆ ಎಂದು ನಿಗದಿಪಡಿಸಿಕೊಂಡನು. ಸರಿಯಾದ ಸಮಯಕ್ಕೆ ಬರಬೇಕು ಎಂದು ನಿಯಮವನ್ನು ಮಾಡಿಕೊಂಡ. ಅದನ್ನು ಮೀರಿದರೆ ಕೊಡುವ ಕೂಲಿಯಲ್ಲಿ ಕಡಿತ, ಅದು ಬೇಡವೆಂದು ನಿಗಧಿತ ಸಮಯದಲ್ಲಿ ಬರಬೇಕು ಎಂದು ತಮ್ ಇಂಪ್ರೆಸನ್ ಮಾಡಲು ಮುಂದಾದ. ತಾನು ನಿರ್ಮಿಸಿದ ಕೆಲಸದ ಜಾಗ ಒಂದು ಕಡೆ ತನ್ನ ಮನೆ ಮತ್ತೊಂದು ಕಡೆ, ಕೆಲಸಕ್ಕೆ ತೆರಳಲು ಸೈಕಲ್ಲು, ಬಾಡಿಗೆ ಸೈಕಲ್ಲು, ಆಟೋ, ಸ್ಕೂಟರ್, ಸಿಟಿ ಬಸ್ಸು, ಒಂದಿದ್ದ ರಸ್ತೆ ಎರಡಾಯಿತು ಅದೂ ಸಾಲದಾಗಿ ನಾಲ್ಕಾಯಿತು, ಇನ್ನೂ ಮುಂದುವರೆದು ವಾಹನ ದಟ್ಟಣೆಯನ್ನು ತಪ್ಪಿಸಲು ರಿಂಗ್ ರಸ್ತೆಗಳು, ಅಲ್ಲಲ್ಲಿ ವೃತ್ತಗಳು, ವೃತ್ತಕ್ಕೆ ನಾಲ್ಕು ಕೆಂಪು, ಹಳದಿ, ಹಸಿರಿನಿಂದ ಕೂಡಿದ ದೀಪಗಳು ಅಲ್ಲೊಬ್ಬ ಪೊಲೀಸ್. ವಾಹನದ ಓಟವನ್ನು ತಗ್ಗಿಸಲು ಅಲ್ಲಲ್ಲಿ ಉಬ್ಬುಗಳು ಅಪಾಯದ ವಲಯ ನಿಧಾನವಾಗಿ ಚಲಿಸಿ ಎಂಬ ಬರಹ.
ಸಮಯವಿಲ್ಲ ಎಂಬ ಗೊಣಗು: ಕೂತು ಊಟ ಮಾಡಲು ಸಮಯವಿಲ್ಲದಷ್ಟು ಬಿಸಿಯಾದ ಮಾನವ ದುಡಿಮೆ ದುಡಿಮೆ ಎಂದು ತನ್ನ ಭವ್ಯ ಭವಿಷ್ಯವನ್ನು ಅಧೋಗತಿಗೆ ಇಳಿಸುತ್ತಿದ್ದಾನೆ. ಎಲ್ಲರೂ ನಿಂತೇ ತಿನ್ನುತ್ತಾರೆ. ನಗರದ ಹೊಟೇಲುಗಳಲ್ಲಿ ಕುಳಿತು ನೆಮ್ಮದಿಯಾಗಿ ಊಟ ಮಾಡಲು ಸಮಯಾವಕಾಶವಿಲ್ಲ, ಸ್ಥಳಾವಕಾಶವಿಲ್ಲದೆ ಒಬ್ಬರು ತಿನ್ನವಾಗ ಎದೆ ಮೇಲೆ ನಿಂತಿರುತ್ತಾರೆ ಬೇಗ ತಿಂದು ಜಾಗ ಖಾಲಿ ಮಾಡಲೆಂದು. ತಿಂದ ತಿನಿಸು ಯಾವುದರ ತೃಪ್ತಿ ಅದೂ ಖಂಡಿತ ಗೊತ್ತಿಲ್ಲ. ಕೆಲವರಂತೂ ತಿನ್ನುವುದಕ್ಕಾಗಿಯೇ ಬದುಕಿದ್ದಾರೇನೋ ಎನಿಸಿ ಬಿಡುತ್ತದೆ. ವಿಶ್ವ ಕವಿಯಾದ ರವೀಂದ್ರನಾಥ ಠಾಗೋರರು ಹೆಳುವಂತೆ ಕಬ್ಬಿಣದ ಬೇಡಿಯನ್ನು ಕಂಡು ಹಿಡಿದ ಮನುಷ್ಯ ತಾನೇ ಕೈಹಾಕಿಕೊಂಡ ಹೊರಗೆ ತೆರೆಯಲು ಸಾಧ್ಯವಿಲ್ಲದಂತ ಪರದಾಡುವ ಸ್ಥಿತಿಗೆ ತನ್ನನ್ನು ತಂದುಕೊಂಡು ನೀರಿನಿಂದ ಹೊರ ಬಂದ ಮೀನು ಒದ್ದಾಡುವಂತೆ ಒದ್ದಾಡುತ್ತಿದ್ದಾನೆ. ಅಪಘಾತಕ್ಕೆ ಅವಸರ ಕಾರಣ ಎಂದು ತಿಳಿದಿದ್ದರೂ ವೇಗವಾಗಿ ಚಲಿಸಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುವ ಹೀನ ಸ್ಥಿತಿಗೆ ಬಂದು ತಲುಪಿದ್ದಾನೆ.
ಹಣದ ಅಮಲು : ಹಣವು ಜೀವನಕ್ಕೆ ಅಗತ್ಯ ಆದರೆ ಹಣವೇ ಜೀವನವಲ್ಲ. ಆಧುನಿಕ ಸಮಾಜದ ನಗರ ಸಂಸ್ಕೃತಿಯಲ್ಲಿ ದುಬಾರಿ ಬೆಲೆಯಲ್ಲಿ ಬದುಕು ಮನುಷ್ಯ ತನ್ನ ಜೀವನವನ್ನು ಸಾಗಿಸಲು ಹಣವೇ ಮುಖ್ಯವೆಂದು ಭಾವಿಸಿದ ಆತ ಬಿಡುವಿಲ್ಲದೆ ಕಛೇರಿಯಲ್ಲಿ ದುಡಿಯುವ, ಕಂಪನಿಯಲ್ಲಿ ಕೆಲಸ ಮಾಡುವುದು. ಅನ್ನ ಆಹಾರವನ್ನು ತೊರೆಯುವುದು ಆರೋಗ್ಯ ಹದಗೆಡಿಸಿಕೊಂಡು ಅಶಾಂತಿ, ನೆಮ್ಮದಿ ಇಲ್ಲದೆ ರೋಗ- ರುಜಿನಗಳಿಗೆ ತುತ್ತಾಗುವುದು. ದುಡಿದ ಹಣವನ್ನು ಆಸ್ಪತ್ರೆಗಳಿಗೆ ಸುರಿಯುವುದು. ಬಲು ಬೇಗ ತೀರಿಕೊಂಡರೆ ಉಳಿಸಿದ ಹಣವನ್ನು ಕೂಡಿಟ್ಟು ಪರರಿಗೆ ಉಣಿಸುವುದು ಇದೇನು ಬಾಳಾಟ ರೀತಿ, ಹಣದಿಂದ ಔಷಧಿ ಕೊಳ್ಳಬಹುದು ಆರೋಗ್ಯ ಕೊಳ್ಳಬಹುದೇ?, ಹಣದಿಂದ ಹಾಸಿಗ ಕರೀದಿ ಮಾಡಬಹುದು ಆದರೆ ನಿದ್ರೆ ಖರೀದಿ ಮಾಡಲು ಸಾಧ್ಯವೇ?, ಹಣದಿಂದ ವಸ್ತುಗಳನ್ನು ಕೊಳ್ಳಬಹದು ಆದರೆ ನೆಮ್ಮದಿಯನ್ನು ಸಾಧ್ಯವೇ? ನೀವೇ ಯೋಚಿಸಿ.
ಬದಲಾದ ನೀರೀಕ್ಷೆಗಳು: ಮನೆಯಲ್ಲಿ ಸೈಕಲಿತ್ತು ಮುಂದೆ ಅದು ಬೇಡ ಎನಿಸಿತು ಅದಕ್ಕೆ ಬೈಕ್ ಬಂತು ಅದು ಬೇಡ ಎನಿಸಿತು ಕಾರು ಬಂತು ಜೊತೆಗೊಂದು ಮೊಬೈಲ್ ಬೇರೆ ಬಂತು ಮಾನವ ಅವುಗಳಿಂದ ಎಷ್ಟು ಬೇಕೋ ಅಷ್ಟು ಉಪಯೋಗ ಪಡೆದುಕೊಳ್ಳದೆ ಅವುಗಳ ಮಿತಿ ಮೀರಿದ ಬಳಕೆ ಎತ್ತಲೋ ಕರೆದುಕೊಂಡು ಹೋಗುತ್ತಿದೆ. ಆದರ್ಶ ಬದುಕು ನಡೆಸುತ್ತಿದ್ದ ಮಾನವ ಆಧುನಿಕತೆಯಲ್ಲಿ ಕರುಳು ಬಳ್ಳಿ ಸಂಬಂಧಗಳನ್ನು ಕಡಿದುಕೊಂಡು ಬಾಂಧವ್ಯದ ಕೊಂಡಿ ಮುರಿದು ಸೊರಗುವ ಬಂಧವನ್ನು ನೋಡಲು ಸಾಧ್ಯವಾಗುತ್ತಿಲ್ಲ. ಜೀವ ಕೋಶವಿದ್ದರೂ ಭಾವಕೋಶವಿಲ್ಲದ ಜೀವನ ಜುಗುಪ್ಸೆ ತರಿಸುತ್ತಿದೆ. ಇನ್ನಾದರೂ ಇರಲಿ ಧಾವಂತ ಬದುಕಿನ ಎಳೆದಾಟ, ಗರ್ಭಗೊಳ್ಳಲಿ ಭಾವಕೋಶದ ಉಸಿರಾಟ.
ಧಾವಂತದ ಬದುಕು ಮನುಷ್ಯನಿಗೆ ಸೌಲಭ್ಯ, ಸಂಪತ್ತು ಮತ್ತು ಯಶಸ್ಸನ್ನು ನೀಡಿದರೂ, ಮನಸ್ಸಿನ ನೆಮ್ಮದಿ, ಸಂಬಂಧಗಳ ಸೌಂದರ್ಯ ಮತ್ತು ಜೀವನದ ನೈಜ ಸಂತೋಷವನ್ನು ಕಸಿದುಕೊಳ್ಳಬಾರದು. ಬದುಕು ಕೇವಲ ಓಟವಾಗಬಾರದು; ಅದು ಅನುಭವ, ಆನಂದ ಮತ್ತು ಆತ್ಮತೃಪ್ತಿಯ ಪಯಣವಾಗಬೇಕು. ಇಂದು ಅನೇಕರು ಸಮಯದ ಹಿಂದೆ ಓಡುತ್ತಾ ತಮ್ಮೊಳಗಿನ ಮನುಷ್ಯನನ್ನೇ ಕಳೆದುಕೊಂಡು ಜೀವಂತ ಶವಗಳಂತೆ ಬದುಕುತ್ತಿದ್ದಾರೆ. ಇಂತಹ ಸ್ಥಿತಿಯಿಂದ ಹೊರಬರಲು ಬದುಕಿನ ವೇಗಕ್ಕಿಂತ ಅದರ ಮೌಲ್ಯವನ್ನು ಅರಿಯುವುದು ಅಗತ್ಯವಾಗಿದೆ.
ಜೀವಂತ ಯಂತ್ರ: ಸ್ವಲ್ಪ ಸಮಯವನ್ನು ನಮ್ಮಗಾಗಿ, ಕುಟುಂಬಕ್ಕಾಗಿ, ಸ್ನೇಹಿತರಿಗಾಗಿ ಮತ್ತು ಪ್ರಕೃತಿಯೊಂದಿಗೆ ಕಳೆಯುವ ಮೂಲಕ ಬದುಕಿನ ನಿಜವಾದ ಅರ್ಥವನ್ನು ಕಂಡುಕೊಳ್ಳಬಹುದು. ಯಂತ್ರಗಳ ನಡುವೆ ಬದುಕುತ್ತಿದ್ದರೂ ಯಂತ್ರಗಳಾಗದೆ ಮಾನವೀಯತೆಯನ್ನು ಉಳಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಆದ್ದರಿಂದ ಧಾವಂತದ ಬದುಕಿನ ನಡುವೆ ಕ್ಷಣಕಾಲ ನಿಂತು ನಮ್ಮನ್ನು ನಾವು ಅವಲೋಕಿಸಿಕೊಳ್ಳೋಣ. ಹಣ, ಹುದ್ದೆ ಮತ್ತು ಪ್ರತಿಷ್ಠೆಗಿಂತ ಮಾನಸಿಕ ಶಾಂತಿ, ಆರೋಗ್ಯ ಮತ್ತು ಪ್ರೀತಿಯ ಸಂಬಂಧಗಳೇ ಜೀವನದ ನಿಜವಾದ ಸಂಪತ್ತು ಎಂಬುದನ್ನು ಅರಿತು ಬದುಕಿದಾಗ ಮಾತ್ರ ಜೀವಂತ ಶವಗಳಲ್ಲ, ಜೀವಂತ ಮಾನವರಾಗಿ ಸಾರ್ಥಕ ಜೀವನ ನಡೆಸಲು ಸಾಧ್ಯವಾಗುತ್ತದೆ.
ವಸ್ತುಗಳ ಬೆಲೆ ವ್ಯಕ್ತಿಗಳ ಬೆಲೆ: ಪ್ರಸಂಗ-೧
ಮುಂಜಾನೆಯೇ ಪದವಿ ಪ್ರಶ್ನೆಪತ್ರಿಕೆ ಪಡೆದುಕೊಳ್ಳಲು ಹೋಗ್ತಾ ಇದ್ದೆ ಪರಿಚಿತ ರೂಪವೊಂದು ಕತ್ತಲ ಕೂಪಕ್ಕೆ ದೀಪದಂತೆ ಎದುರಾದರು. ಅವರನ್ನು ಕಂಡಾಗ ಮುಖವು ಅರಳಿತು ಅವರ ಮುಖವು ಕೊಂಚವೇ ಅರಳಿತು “ಏನು ಗುರುಗಳೇ ಇತ್ತೀಚೆಗೆ ಬಹಳ ಅಪರೂಪವಾಗಿ ಬಿಟ್ಟಿರಿ ಎತ್ತ ಪಯಣ” ಎಂದೆ ಅವರು “ನಂಜಿನಗೂಡಿಗೆ” ಎಂದಾಗ ನನ್ನ ಮುಖದ ಛಾಯೆ ಕೊಂಚ ನಂಜಾಯಿತು. ಗುರುಗಳೇ ನಂಜಿನಗೂಡಿಗೆ ಅಲ್ಲ ನಂಜನಗೂಡಿಗೆ ಎಂದು ತಿದ್ದಲು ಪ್ರಯತ್ನಿಸಿ ಬರುತ್ತಿದ್ದ ಮಾತಿಗೆ ತಡೆಗೋಡೆ ಒಡ್ಡಿ “ನಿಮ್ಮ ಮಾತು ಸರಿಯಾಗಿಯೇ ಇದೆ ಬಿಡಿ ಈ ಒತ್ತಡದ ಬದುಕಲ್ಲಿ ಬದುಕೋದೆ ಕಷ್ಟವಾಗಿ ಆರಕ್ಕೆ ಏರದ ಮೂರಕ್ಕೆ ಇಳಿಯದೆ ಎಲ್ಲಕ್ಕೂ ಹಣವೇ ಅಳತೆಗೋಲಾಗಿರುವಾಗ ಜೀವನ ಅಮೃತವಾಗದೆ ನಂಜಾಗುವುದರಲ್ಲಿ ಏನು ಸಂಶಯವಿಲ್ಲ ಆಗಾಗಿ ತಮ್ಮ ನಾಲಿಗೆಯಲ್ಲಿ ಕೂತ ಮಾತು ಔಚಿತ್ಯವಾಗಿಯೇ ಬಂದಿರಬೇಕು. ನಿಮ್ಮ ಮಾತು ನಿಜ ಇವತ್ತಿನಿಂದ ಪೆಟ್ರೋಲ್ ಬೆಲೆ ಇನ್ನೂ ಜಾಸ್ತಿ ಆಗಿದೆ. ಮೊದಲೇ ಸೂರ್ಯ ಇಷ್ಟೊಂದು ಸುಡುತ್ತಿದ್ದಾನೆ ಈಗ ದುಬಾರಿ ಬೆಲೆಯೂ ಸುಡೋ ರೀತಿ ಆಯ್ತು ಈಗೀಗ ವಸ್ತುಗಳ ಬೆಲೆ ತುಂಬಾ ಹೆಚ್ಚಾಗುತ್ತಿದೆ ಆದರೆ ವ್ಯಕ್ತಿಗಳ ಬೆಲೆ ಕಡಿಮೆ ಆಗುತ್ತಿದೆ, ಇದೇ ವಿಪರ್ಯಾಸ. ಯಾಕೆ ಈ ರೀತಿ ಹೇಳ್ತಾ ಇದ್ದೀರ ಎಂದು ಕೇಳಿದಾಗ ಈಗ ಪೆಟ್ರೋಲ್ ಬೆಲೆ ಗಗನದಿಂದ ಆಚೆಗೆ ಏರಿದೆ ಇನ್ಯಾವವ ವಸ್ತುಗಳ ಬೆಲೆ ಹೆಚ್ಚಾಗುತ್ತದೊ ಅರಿಯದಿದ್ದರೂ ಅವ್ಯಕ್ತವಾದ ಭಾವನೆಗಳಲ್ಲಿ ವ್ಯಕ್ತಿಗಳ ಬೆಲೆಯಂತೂ ಕಡಿಮೆಯಾಗುತ್ತಿದೆ ಸಮಯ ಏರುಗತಿಯಲ್ಲಿ ಏರಿ ಬಿಸಿಲು ಬಸಿದು ಸುಡು ವಾಸ್ತವದ ಅಮಲಿಂದ ಎಚ್ಚರಿಸಿತು ಪತ್ರಿಕೆ ಪಡೆದುಕೊಳ್ಳಲು ತಡವಾಗುತ್ತಿದ್ದರಿಂದ ಪರಸ್ಪರ ಬೀಳ್ಕೊಂಡೆವು.
ಮಾರಾಟವಾದ ಮಾನಸಿಕ ನೆಮ್ಮದಿ: ಧಾವಂತದ ಬದುಕಿನಲ್ಲಿ ಮನುಷ್ಯನು ದೈಹಿಕವಾಗಿ ಬದುಕಿದ್ದರೂ ಮಾನಸಿಕವಾಗಿ ದಣಿದಿದ್ದಾನೆ. ಕುಟುಂಬ, ಸ್ನೇಹ, ಪ್ರಕೃತಿ ಮತ್ತು ಆತ್ಮಸಂತೋಷದಿಂದ ದೂರವಾಗುತ್ತಿರುವ ಆತ ಯಾಂತ್ರಿಕ ಜೀವನದ ಕೈದಿಯಾಗಿದ್ದಾನೆ. ಮುಖದಲ್ಲಿ ನಗು ಇದ್ದರೂ ಮನಸ್ಸಿನಲ್ಲಿ ಆತಂಕ, ಸಾಧನೆಗಳಿದ್ದರೂ ತೃಪ್ತಿಯ ಕೊರತೆ, ಜನರ ನಡುವೆ ಇದ್ದರೂ ಏಕಾಂತದ ನೋವು ಅವನನ್ನು ಕಾಡುತ್ತಿದೆ. ಬದುಕಿನ ನಿಜವಾದ ಸೌಂದರ್ಯವನ್ನು ಅನುಭವಿಸುವ ಬದಲು ಕೇವಲ ಬದುಕು ಸಾಗಿಸುವ ಕಾರ್ಯದಲ್ಲಿ ತೊಡಗಿರುವ ಮನುಷ್ಯನು ಅನೇಕ ಸಂದರ್ಭಗಳಲ್ಲಿ ಜೀವಂತ ಶವದಂತಾಗಿದ್ದಾನೆ. ಆದ್ದರಿಂದ ಧಾವಂತ ಬದುಕಿನ ಪರಿಣಾಮಗಳು, ಅದರ ಹಿಂದೆ ಇರುವ ಕಾರಣಗಳು ಹಾಗೂ ಮಾನವೀಯ ಮೌಲ್ಯಗಳನ್ನು ಪುನಃ ಕಂಡುಕೊಂಡು ಅರ್ಥಪೂರ್ಣ ಬದುಕನ್ನು ಕಟ್ಟಿಕೊಳ್ಳುವ ಅಗತ್ಯವನ್ನು ಅರಿಯುವುದು ಇಂದಿನ ಕಾಲದ ಮಹತ್ವದ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ “ಧಾವಂತ ಬದುಕಿನಲ್ಲಿ ಜೀವಂತ ಶವವಾದ ಮಾನವ” ಎಂಬ ವಿಷಯವು ಸಮಕಾಲೀನ ಸಮಾಜದ ವಾಸ್ತವ ಚಿತ್ರಣವನ್ನು ಪ್ರತಿಬಿಂಬಿಸುವ ಮಹತ್ವದ ಚಿಂತನೆಯಾಗಿದೆ.ಈಗಾಗಿ ಬದುಕು ಬೆಳಕಾಗಿ ಬೆಳಗಬೇಕೆ ವಿನಃ ಕತ್ತಲಿಗೆ ಜೋತು ಬಿದ್ದ ಕನ್ನಡಿಯಾಗಬಾರದು. ಒತ್ತಡ ನೀಗಿದ ಜೀವನ, ಸಾಂತ್ವಾನದ ಬದುಕು ಎಂದಿಗೂ ಬದುಕಿಗೆ ಬೇಕು.
-ಪರಮೇಶ ಕೆ.ಉತ್ತನಹಳ್ಳಿ
