ಸಮಸ್ಯೆ ಸಣ್ಣದೇ.. ಆದ್ರೂ …… !!!!!!: ನಾಗಸಿಂಹ ಜಿ ರಾವ್

ಸಮಸ್ಯೆ ಸಣ್ಣದೇ. . ಆದ್ರೂ. . . . . . !!!!!!

(ಮಕ್ಕಳ ಹಿತದೃಷ್ಟಿ ಇಂದ ಹೆಸರು, ಸ್ಥಳಗಳನ್ನು ಬದಲಿಸಲಾಗಿದೆ )

” ಕ್ರಿಕೆಟ್ ನೋಡಿದ್ದು ಸಾಕು. . ರಿಮೋಟ್ ಕೊಡು, ಅಂತ ರೇಗಿದೆ ಸಾರ್. ರಿಮೋಟನ್ನ ಬಿಸಾಕಿ ಮನೆಯಿಂದ ಆಚೆ ಹೋದೋನು ಒಂದುವರುಷ ಆದ್ರೂ ಮನೆಗೆ ಬಂದಿಲ್ಲ, ಪೊಲೀಸ್ ಕಂಪ್ಲೇಂಟ್ ಕೊಟ್ವಿ ಏನೂ ಉಪಯೋಗ ಆಗಿಲ್ಲ ಸಾರ್. . ” ಮಗನನ್ನ ಕಳೆದುಕೊಂಡ ದಂಪತಿಗಳು ನನ್ನ ಎದುರಿಗೆ ಕುಳಿತ್ತಿದ್ದರು, ಅವರಿಗೆ ಸಮಾಧಾನ ಮಾಡೋಕೆ ನನ್ನಲ್ಲಿ ಪದಗಳು ಇರಲಿಲ್ಲ. . ಮಕ್ಕಳು ಯಾಕೆ ಮನೆ ಬಿಟ್ಟು ಹೋಗುತ್ತಾರೆ ? ಪೋಷಕರ ಸಮಸ್ಯೆಯೇ ? ಮಕ್ಕಳ ಯೋಚನೆಯ ತೊಂದರೆಯೇ ? ಹಲವು ಪ್ರಕರಣಗಳಲ್ಲಿ ಸಮಸ್ಯೆ ಬಹಳ ಸಣ್ಣದಾಗಿ ಕಂಡು ಬರುತ್ತದೆ, ಅದನ್ನು ವಿಶ್ಲೇಷಿಸಿದಾಗ ಸಂವಹನದ ಕೊರತೆ, ಅರಿವಿನ ಕೊರತೆಗಳೇ ಕಂಡು ಬರುತ್ತದೆ.

ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ 10 ರ ಪ್ರಕಾರ ಮನೆಬಿಟ್ಟು ಹೋದ, ತಪ್ಪಿಸಿಕೊಂಡ, ಮಕ್ಕಳನ್ನು ಪೋಷಕರೊಂದಿಗೆ ಪುನರ್ಮಿಲನ ಮಾಡುವುದು ಮಕ್ಕಳ ಹಕ್ಕು ಎಂದು ತಿಳಿಸಿದೆ. ನಮ್ಮ ದೇಶದಲ್ಲಿ ಕನ್ಯಾಕುಮಾರಿಯ ಬಾಲಕಿ / ಬಾಲಕ ತಪ್ಪಿಸಿಕೊಂಡು ಕಾಶ್ಮೀರ ತಲುಪಿದ್ದರೆ ಅಂತಹ ಮಕ್ಕಳನ್ನು ಹುಡುಕಿ ರಕ್ಷಿಸಿ ಪೋಷಕರೊಂದಿಗೆ ಪುನರ್ಮಿಲನ ಮಾಡಲು ಮಕ್ಕಳ ನ್ಯಾಯ (ರಕ್ಷಣೆ – ಪೋಷಣೆ ) ಕಾಯ್ದೆ 2015 ಜಾರಿಯಲ್ಲಿದೆ. ಮಕ್ಕಳನ್ನು ಪುನಃ ಮನೆ ಸೇರಿಸಲು ನಮ್ಮ ಮಕ್ಕಳ ಕಲ್ಯಾಣ ಸಮಿತಿಗಳು ಮತ್ತು ಪೊಲೀಸ್ ಇಲಾಖೆ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿವೆ .

ಮನೆಬಿಟ್ಟು ಓಡಿ ಬಂದ ಮಕ್ಕಳು, ತಪ್ಪಿಸಿಕೊಂಡ ಮಕ್ಕಳನ್ನು ರಕ್ಷಿಸಿ ಅವರನ್ನು ಪೋಷಕರೊಂದಿಗೆ ಪುನರ್ಮಿಲನ ಗೊಳಿಸಲು ಅನೇಕ ಸ್ವಯಂ ಸೇವಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಒಂದು ಅಧ್ಯಯನದ ಪ್ರಕಾರ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಪ್ರತಿದಿನ ದೇಶದ ಹಲವು ರಾಜ್ಯಗಳಿಂದ, ನಮ್ಮ ರಾಜ್ಯದ ಹಲವು ಜಿಲ್ಲೆಗಳಿಂದ ಸುಮಾರು 20 ರಿಂದ 30 ಮಕ್ಕಳು ಬರುತ್ತಾರೆ. ಆ ಮಕ್ಕಳನ್ನು ರಕ್ಷಿಸಿ ಅವರಿಗೆ ಆಪ್ತ ಸಮಾಲೋಚನೆ ಮಾಡಿ ಮತ್ತೆ ಅವರನ್ನು ಮನೆಗೆ ಕಳುಹಿಸಲು ಸಾಥಿ ಹಾಗೂ ಡಾನ್ ಬಾಸ್ಕೊ ಶ್ರಮಿಸುತ್ತಿವೆ. ಸಾಥಿ ಸಂಸ್ಥೆ ಪ್ರತಿ ಮೂರೂ ತಿಂಗಳಿಗೊಮ್ಮೆ ಪುನರ್ಮಿಲನ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳುತ್ತಿತ್ತು, ರಕ್ಷಿಸಿದ ಮಕ್ಕಳಿಗೆ ಆಪ್ತ ಸಮಾಲೋಚನೆ, ಪೋಷಕರಿಗೆ ಆಪ್ತ ಸಮಾಲೋಚನೆ ನಡೆಸಿ ”ಪುನರ್ಮಿಲನ ”ಕಾರ್ಯಕ್ರಮ ಹಮ್ಮಿಕೊಂಡು ಪ್ರಖ್ಯಾತ ವ್ಯಕ್ತಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರ ಸಮ್ಮುಖದಲ್ಲಿ ಮಕ್ಕಳನ್ನು ಪೋಷಕರಿಗೆ ಒಪ್ಪಿಸಲಾಗುತಿತ್ತು.

ಸಾಥಿ ಸಂಸ್ಥೆಯು ಮನೆಬಿಟ್ಟು ಓಡಿ ಬಂದಿರುವ ಕೆಲವು ಮಕ್ಕಳಿಗೆ ಆಪ್ತಸಮಾಲೋಚನೆ ಮಾಡಲು ಒಂದು ವರುಷ ನನ್ನನ್ನು ಆಹ್ವಾನಿಸಿದ್ದರು. ಬಹಳ ಸಂತೋಷದಿಂದಲೇ ಒಪ್ಪಿಕೊಂಡೆ. ಮಕ್ಕಳಿಗೆ ಆಪ್ತ ಸಮಾಲೋಚಿಜನೇ ಮಾಡುವುದು ದೊಡ್ಡ ಸವಾಲು, ಹಿರಿಯರಿಗೆ ಅನೇಕ ಕಲಿಕೆಗಳು ಆಗುತ್ತವೆ. ಮೊದಲ ದಿನವೇ ನನಗೆ ಸಿಕ್ಕಿದ್ದು ಕಬ್ಬಿಣದ ಕಡಲೆ !!!

”ಸಾರ್ ಈ ಹುಡುಗ ಬಂದು ಎರಡು ದಿನ ಆಯಿತು ಏನೂ ಮಾತಾಡಿಲ್ಲ, ಸರಿಯಾದ ಹೆಸರನ್ನೂ ಹೇಳಿಲ್ಲ, ಊಟ ತಿಂಡಿ ಸರಿಯಾಗಿ ಮಾಡಲ್ಲ ಮೊದಲು ಇವನನ್ನು ಮಾತಾಡಿಸಿ ಸಾರ್ ” ಎಂದರು ಸಾಥಿ ಸಂಸ್ಥೆಯ ರಂಗಸ್ವಾಮಿ, ಹುಡುಗ ಸುಮಾರು ಹನ್ನೆರಡು ಅಥವಾ ಹದಿಮೂರು ವರುಷದವನು, ಸ್ಕೂಲ್ ಯುನಿಫಾರ್ಮ್ ನಲ್ಲೆ ಇದ್ದ, ಅವನ ಮುಖದಲ್ಲಿ ಆತಂಕ ಇತ್ತು. ನಾನು ಅವನ ಕಡೆ ನೋಡಿ ಮುಗುಳುನಗೆ ನಕ್ಕೆ, ಯಾವುದೇ ಪ್ರತಿಕ್ರಿಯೆ ಬರಲಿಲ್ಲ ನನ್ನ ಕಡೆ ನೋಡದೆ ಮುಖವನ್ನ ಬೇರೆಕಡೆ ತಿರಿಗಿಸಿಕೊಂಡ. ಇದು ಮಾಮೂಲು ಬೇರೆಯವರೊಂದಿಗೆ ಮಾತಾಡಲು ಇಷ್ಟ ಇಲ್ಲದ ಮಕ್ಕಳು ಮಾಡುವ ಸಹಜ ಕ್ರಿಯೆ. ಪಾಪ ಅಪರಿಚಿತರ ನಡುವೆ ಇದ್ದಾನೆ, ವಾತಾವರಣ ಹೊಸದು ಅವನಿನ್ನೂ ಹೊಂದಿಕೊಂಡಿಲ್ಲ. ಆದರೆ ಅವನು ವಾತಾವರಣಕ್ಕೆ ಹೊಂದಿಕೊಂಡು ಸಹಜ ಸ್ಥಿತಿಗೆ ಬಂದು ಅವನ ಸಮಸ್ಯೆ ಹೇಳಲು ಕಾಲಾವಕಾಶ ಬೇಕು ಆದರೆ ನಮಗೆ ಸಮಯ ಇಲ್ಲ, ಆತನ ವಿವರ ಮಾಹಿತಿ ಪಡೆದು ಆತನ ಪೋಷಕರನ್ನು ಪತ್ತೆ ಮಾಡಿ ಪುನಃ ಮನೆಗೆ ಕಳುಹಿಸ ಬೇಕು.

ಬೇರೆ ಬೇರೆ ಊರಿಂದ ಓಡಿಬಂದಿದ್ದ ಸುಮಾರು ಹದಿನೈದು ಮಕ್ಕಳಿದ್ದರು. ಅವರನ್ನೆಲ್ಲಾ ಕರೆದು ಗುಂಪು ಮಾಡಿ ವೃತ್ತದಲ್ಲಿ ಬಾಟಲ್ ಪಾಸ್ ಮಾಡುವ ಆಟ ಆಡಿಸಿದೆ. ಗೆದ್ದ ಮಕ್ಕಳು ಕಿರುಚಿದರು, ಸೋತವರು ಪುನಃ ಆಡಿಸಿ ಎಂದು ಕೂಗಿದರು, ವಾತಾವರಣ ಹಾಸ್ಯಮಯವಾಗಿತ್ತು. ಆದರೂ ಆ ಬಾಲಕ ನಗಲಿಲ್ಲ ಆಟ ಆಡಲು ಮುಂದೆ ಬರಲಿಲ್ಲ. ಮತ್ತೊಂದು ಆಟ ಚಂಡು ಎಸೆಯುವ ಆಟ ಮಕ್ಕಳು ಖುಷಿಯಿಂದ ಆಡತೊಡಗಿದರು, ನಾನು ಬೇಕೆಂದೇ ಆ ಬಾಲಕನತ್ತ ಚಂಡು ಎಸೆದೆ, ಚಂಡು ಅವನ ಕಾಲಿಗೆ ತಾಗಿದರೂ ಸುಮ್ಮನೆ ಇದ್ದ. . ಮತ್ತೆ ಮತ್ತೆ ಅವನ ಕಡೇಗೆ ಬೇಕೆಂದೇ ಚಂಡು ಎಸೆದರೂ ಆತ ನಿರ್ಲಿಪ್ತ, ಅವನದೇ ಪ್ರಪಂಚದಲ್ಲಿ ಇದ್ದ. ಮುಂದಿನ ಚಟುವಟಿಕೆ ಗುಂಪಿನಲ್ಲಿ ಕುಳಿತು ಮಕ್ಕಳು ಅವರ ಹೆಸರು ಮತ್ತು ಅವರ ಕನಸು ಹೇಳಲು ತಿಳಿಸಿದೆ, ಮಕ್ಕಳು ಆ ಬಾಲಕನನ್ನು ಕರೆದುಕೊಂಡು ಗುಂಪಿನಲ್ಲಿ ಕುಳಿಸಿಕೊಂಡರು, ಹೆಸರು ಕನಸು ಚಟುವಟಿಕೆ ಪ್ರಾರಂಭವಾಯಿತು ನನ್ನ ಹೆಸರು ಸಾದಿಕ್, ಫಿಲಂ ಆಕ್ಟರ್ ಆಗಬೇಕು, ನಾನು ಸಿದ್ದರಾಜು ದೊಡ್ಡವನಾದ ಮೇಲೆ ನಾನು ಪೊಲೀಸ್ ಆಗುತೀನಿ. . ನಾನು ಸಾಲೊಮನ್ ಕ್ರಿಕೆಟ್ ಅಡಿ ದೇಶಕ್ಕೆ ಕಪ್ ತರಬೇಕು ನಾನು. . . ಹೀಗೆಯೇ ಹಲವು ಹೆಸರು ಹಲವು ಕನಸು. . . ಆ ಬಾಲಕನ ಸರತಿ ಬಂದಾಗ ಆತ ನನ್ನನ್ನು ನುಗುವಂತೆ ನೋಡಿದ ಹೊರತು ಮಾತಾಡಲಿಲ್ಲ. . ಯಾವಾಗ ಮಕ್ಕಳು ಹಿರಿಯರ ಕಡೆ ಕೋಪದಲ್ಲಿ ನೋಡುತ್ತಾರೋ ಅವರು ಏನೂ ಹೇಳಲು ಸಿದ್ದರಾಗಿದ್ದಾರೆ ಅಂತ ಅರ್ಥ. . ಕೋಪ ಆಪ್ತಸಮಾಲೋಚನೆಯಲ್ಲಿ ಅಭಿವ್ಯಕ್ತಿಯ ಮೊದಲ ಹಂತ. ಮಕ್ಕಳ ಹೆಸರು ಕನಸು ಕೇಳಿದ ನಂತರ ಚಪ್ಪಾಳೆ ಹೊಡೆದು ಈಗ ಹಾಲು ಕುಡಿಯುವ ಸಮಯ. . ಬನ್ನಿ ಎಂದು ಹೇಳಿ ಎಲ್ಲಾ ಮಕ್ಕಳನ್ನು ಡೈನಿಂಗ್ ಹಾಲ್ ಕಡೆ ಹೊರಡಿಸಿದೆ. ಎಲ್ಲಾ ಮಕ್ಕಳು ಹೋಗಲು ಶುರು ಮಾಡಿದರು ಆದರೆ ಆ ಬಾಲಕ ಕೂತಲ್ಲೇ ಕೂತ್ತಿದ್ದ. . ಬಾರೋ ಅಣ್ಣಾ ಹಾಲು ಕುಡಿದು ಬರೋಣ ಬಾ. . ಆಮೇಲೆ ನನ್ನ ಮೇಲೆ ಕೋಪ ಮಾಡಿಕೋ ” ಅಂದೇ ನಿದಾನವಾಗಿ ಎದ್ದವನು ನನ್ನ ಹಿಂದೆ ಬರತೊಡಗಿದ. ಡೈನಿಂಗ್ ಹಾಲ್ ನಲ್ಲಿ ಮಕ್ಕಳು ಹಾಲು ಕುಡಿಯುವಾಗ ಜೋಕುಗಳನ್ನು ಹೇಳಿ ಮಕ್ಕಳನ್ನು ನಗಿಸಲು ಶುರು ಮಾಡಿದೆ. . ಮಕ್ಕಳು ಬಿದ್ದು ಬಿದ್ದು ನಕ್ಕರು. ಆ ಬಾಲಕ ಸುಮ್ಮನಿದ್ದ ನಗಲೇ ಇಲ್ಲ. . ಮಕ್ಕಳೊಂದಿಗೆ ಉತ್ತಮ ಸಂಬಂಧ ಬೆಳೆದಿತ್ತು. . ನನ್ನ ಮಾತು ಕೇಳಲು ಮಕ್ಕಳು ಸಿದ್ಧರಿದ್ದಾರೆ ಅನಿಸಿತು. ಮಕ್ಕಳು ಹಾಲು ಕುಡಿದು ಮುಗಿಸಿದರು ಮತ್ತೆ ತರಬೇತಿ ಕೊಠಡಿಗೆ ನಡೀರಿ ಅಂದೇ. . ಎಲ್ಲಾ ಮಕ್ಕಳು ನಗುತ್ತಾ ಹೊರಟರೆ ಆ ಬಾಲಕ ಸುಮ್ಮನಿದ್ದ. . ಅವನೇ ಬರಲಿ ಎಂದು ನಾನು ಮಾತನಾಡದೆ ಹೊರಟೆ. . ಹಿಂದಿನಿಂದ ನನ್ನ ಶರ್ಟು ಎಳೆದ ಹಾಗಾಯಿತು ತಿರುಗಿ ನೋಡಿದರೆ ಆ ಬಾಲಕ ನನ್ನ ಹಿಂದೆ ನಿಂತಿದ್ದ. . ಅವನ ಕಡೆ ತಿರುಗಿ ಮುಗಳು ನಗೆ ನಕ್ಕೆ. . ಅವನು ನನ್ನ ಹೆಸರು ಮಂಜುನಾಥ ಅಂದ. . . . ನನಗಾದ ಸಂತೋಷವನ್ನು ವ್ಯಕ್ತ ಪಡಿಸಲಿಲ್ಲ. ಸರಿ ಬಾ ಎಂದು ತರಬೇತಿ ಕೊಠಡಿಗೆ ಬಂದೆವು.

ಮತ್ತೆ ಕೆಲವು ಮನೋವೈಜ್ಞಾನಿಕ ಆಟಗಳನ್ನು ಮಕ್ಕಳಿಗೆ ಆಡಿಸಿ. . ನಾಲ್ಕು ಮಕ್ಕಳಿಗೆ ಪಕ್ಕದ ಕೊನೆಯಲ್ಲಿ ಮಾತನಾಡಿಸಿದೆ. ಮಕ್ಕಳು ಅವರ ಸಮಸ್ಯೆ ಹಂಚಿಕೊಂಡರು ಅದಕ್ಕೆ ಸಮಾಧಾನ ಹೇಳಿ ಮನೆಗೆ ಹಿಂದಿರುಗಲು ಮಕ್ಕಳಿಗೆ ಸಲಹೆ ನೀಡಿದೆ, ಮಕ್ಕಳು ಒಪ್ಪಿಕೊಂಡರು. ಊಟದ ನಂತರ ಮಂಜುನಾಥನನ್ನ ಕರೆದೆ. ಪಾಪ ಮಾತನಾಡಲು ಕಾಯುತಿದ್ದ, ತನ್ನ ಮನದನೊವನ್ನು ಅವನು ಹೊರ ಹಾಕಬೇಕಿತ್ತು. ಮಂಜುನಾಥನ ಸಮಸ್ಯೆ ಏನಿರಬಹುದು ? ಯಾರಾದರೂ ಹೊಡದಿರಬಹುದೇ ? ಕಿರುಕುಳ ದೌರ್ಜನ್ಯ ಆಗಿದೆಯೇ ಅಥವಾ ಏನಾದರೂ ಕದ್ದು ಓಡಿ ಬಂದಿರುವನೇ ? ಊಹಿಸಲು ಪ್ರಯತ್ನಿಸಿದೆ. .

ಎದುರಿಗೆ ಕುಳಿತ ಮಂಜುನಾಥನಿಗೆ ಮೊದಲು ಚಾಕಲೇಟ್ ಕೊಟ್ಟೆ, ಅದು ನನ್ನ ಅಭ್ಯಾಸ ಆಪ್ತಸಮಾಲೋಚನೆಗೆ ಮುಂಚೆ ಚಾಕಲೇಟ್. ಆತ ಅದನ್ನು ತಿನ್ನಲಿಲ್ಲ, ಜೇಬಿಗೆ ಹಾಕಿಕೊಂಡ. ಮಾತಾಡಲು ಶುರುಮಾಡಿದ, ತುಮಕೂರು ನಗರದ ಪುಟ್ಟ ಹಳ್ಳಿಯ ಸರ್ಕಾರೀ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿರುವ ಮಂಜುನಾಥನ ತಂದೆ ರಾಜಣ್ಣ, ತಾಯಿ ಲಕ್ಷ್ಮಿ. ಅವರ ಮನೆಯಲ್ಲಿ ಇರೋ ನಾಯಿ ಹೆಸರು ಬೀಮಾ ಅಂತೆ. ಭೀಮನ ಬಗ್ಗೆ ಬಹಳ ವಿವರಿಸಿದ, ಭೀಮನ ಬಣ್ಣ, ಓಡೋದು, ಬೊಗಳೋದು. . ಭೀಮಾ ಮಂಜುನಾಥನ ಬೆಸ್ಟ್ ಫ್ರೆಂಡ್. ಅಪ್ಪ ರಾಜಣ್ಣ ನ ಆಫೀಸ್ ಕೆಲಸ ಹಸು ಗಳನ್ನ ಎಮ್ಮೆಗಳನ್ನು ನೋಡಿಕೊಳ್ಳೋದು ಅಂದ್ರೆ ಪಶುಸಂಗೋಪನಾ ಇಲಾಖೆಯಲ್ಲಿ ಸಹಾಯಕನ ಕೆಲಸ. . ತನ್ನ ಶಾಲೆ, ಸಂಸಾರ ಎಲ್ಲವನ್ನೂ ವಿವರಿಸಿದ ಮಂಜುನಾಥನಿಗೆ

” ಮಂಜಣ್ಣ ಎಲ್ಲಾ ಸರಿ. . ಇಷ್ಟು ಚನ್ನಾಗಿರೋ ಮನೆ, ಸ್ಕೂಲ್, ಭೀಮಾ ಇದನೆಲ್ಲಾ ಬಿಟ್ಟು ಯಾಕೆ ಈ ಬೆಂಗಳೂರಿಗೆ ಬಂದೆ ” ಎಂದು ಪ್ರಶ್ನೆ ಕೇಳಿದೆ.

ಕೆಲವು ನಿಮಿಷ ಮೌನವಾಗಿದ್ದ ಮಂಜುನಾಥ ”ಅಂಕಲ್ ನಮ್ಮ ಅಪ್ಪನಿಗೆ ಬೆಂಗಳೂರಿಗೆ ವರ್ಗ ಮಾಡಿಸಿಕೊ ಬೇಕು ಅಂತ ಇಷ್ಟ ಅದಕ್ಕೆ. . ಅದಕ್ಕೆ. . .

”ಹೇಳು ಮಂಜಣ್ಣ. . ಏನು, , ಅದಕ್ಕೆ. . ”

”ಅದಕ್ಕೆ. . ಬೆಂಗಳೂರಿಗೆ ವರ್ಗ ಆದರೆ ಧರ್ಮಸ್ಥಳದ ಮಂಜುನಾಥನಿಗೆ ನನ್ನ ಮಗ ಮಂಜುನಾಥನ ಮುಡಿ ಕೊಡಿಸುತ್ತೀನಿ ಅಂತ ಹರಕೆ ಮಾಡಿಕೊಂಡಿದ್ದಾರೆ, ನನ್ನ ಮುಡಿಕೊಟ್ಟು ತಲೆ ಬೋಳಿಸಿದರೆ ನನ್ನ ಸ್ಕೂಲ್ ನಲ್ಲಿ ಎಲ್ಲಾ ಬೋಳ. . ಬೋಳ. . ಅಂತ ಹಾಸ್ಯ ಮಾಡೋದಿಲ್ವ. . ಅದಕ್ಕೆ ತುಂಬಾ ಯೋಚನೆ ಮಾಡಿ ಮನೆ ಬಿಟ್ಟು ರೈಲು ಹತ್ತಿ ಬಿಟ್ಟೆ. . . ಈಗ ಭೀಮಾ, ಅಪ್ಪ, ಅಮ್ಮ ಬೇಕು ಅಂಕಲ್ ”

ಅಯ್ಯೋ. . ಒಂದು ಕ್ಷಣ ನಂಗೇನೂ ಹೊಳಿಲೇ ಇಲ್ಲ. . ಏನೇನೋ ಸಮಸ್ಯೆ ಅಂತ ಯೋಚನೆ ಮಾಡಿದ್ದೆ, ಇದು ಸಮಸ್ಯೆಯೇ ಅಲ್ಲ ನಮಗೆ ಸಮಸ್ಯೆ ಸಣ್ಣದೇ. . ಆದ್ರೂ. . . . . . !!!!!!

ಒಂದು ಹರಕೆ, ತಲೆ ಯಾರದ್ದು, ಕೂದಲು ಯಾರದ್ದು, ನಿರ್ಧಾರ ಯಾರದ್ದು ? ಅಬ್ಬಾ ಮಕ್ಕಳ ಮನಸ್ಸು ಎಷ್ಟು ಸೂಕ್ಶ್ಮ ! ಅಪ್ಪ ಮಂಜುನಾಥನನ್ನೇ ಕೂರಿಸಿಕೊಂಡು ಹರಕೆ ನಿರ್ಧಾರ ಮಾಡಿದ್ದರೆ ಈ ಸಮಸ್ಯೆ ಬರುತ್ತಲೇ ಇರಲಿಲ್ಲ. ಮಕ್ಕಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ಮಕ್ಕಳ ಅಭಿಪ್ರಾಯವನ್ನು ತೆಗೆದುಕೊಳ್ಳ ಬೇಕು ಅದ್ದನ್ನು ಅಳವಡಿಸಿ ಕೊಳ್ಳಬೇಕು, ಮಂಜುನಾಥನಿಗೆ ಸಮಾಧಾನ ಮಾಡಿ, ಮತ್ತೆ ಮನೆಗೆ ಯಾವುದೇ ತೊಂದರೆ ಇಲ್ಲದೆ ಕಳುಹಿಸಿ ಕೊಡುವ ಭರವಸೆ ನೀಡಿದೆ. ಅಪ್ಪನ ಮೊಬೈಲ್ ನಂಬರ್ ಕೊಟ್ಟ ಮಂಜುನಾಥ, ಸಾಥಿ ಸಂಸ್ಥೆಯವರು ರಾಜಣ್ಣನಿಗೆ ಕರೆ ಮಾಡಿ ಅವರ ಮಗನ ಬಗ್ಗೆ ತಿಳಿಸಿದರು ಹಾಗೂ ನಿಗದಿ ಪಡಿಸಿದ ದಿನ ಬರುವಂತೆ ಮಾಹಿತಿ ನೀಡಿದರು.

ಮೂರು ದಿನಗಳ ನಂತರ ಪುನರ್ಮಿಲನ ಕಾರ್ಯಕ್ರಮ ಇತ್ತು ಖ್ಯಾತ ಚಿತ್ರನಟ ರಮೇಶ್ ಅರವಿಂದ್ ಆಹ್ವಾನಿತರು ಕಾರ್ಯಕ್ರಮ ಶಾಸಕರ ಭವನದಲ್ಲಿ. ಕಾರ್ಯಕ್ರಮ ದಿನದ ಬೆಳಗ್ಗೆ ಮಂಜುನಾಥನ ಪೋಷಕರನ್ನು ಭೇಟಿಯಾದೆ, ಅವರಿಗೆ ಈಗಾಗಲೇ ಮಗ ಯಾಕೆ ಮನೆಬಿಟ್ಟ ಅನ್ನೋ ವಿಷಯ ತಿಳಿದಿತ್ತು, ನೋಡಿ ಸಾರ್ ಎಷ್ಟು ತೊಂದರೆ ಮಾಡಿಬಿಟ್ಟ, ನಾನು ಹರಕೆ ಮಾಡಿಕೊಂಡಿದ್ದರಲ್ಲಿ ಏನು ತಪ್ಪು ಇತ್ತು ಸಾರ್ ? ಸಂಸಾರಕ್ಕೆ ಒಳ್ಳೇದೇ ತಾನೇ ? ಬೆಂಗಳೂರಿಗೆ ಬಂದ್ರೆ ಅವನಿಗೆ ಅನುಕೂಲ, ಇಲ್ಲಿ ಒಳ್ಳೆ ಸ್ಕೂಲ್ ಇದೆ, ಬಸ್ ಇದೆ, ಇದೆಲ್ಲಾ ಅರ್ಥನೇ ಮಾಡಿಕೊಳ್ಳಲ್ಲ. ತನ್ನ ಕೂದಲ ಬಗ್ಗೆ ಯೋಚನೆ ಇವನಿಗೆ. . . ” ಅಂದ್ರು ರಾಜಣ್ಣ.

ಕೇವಲ ಕೂದಲ ಸಮಸ್ಯೆಯೇ ?ಖಂಡಿತಾ ಇಲ್ಲ, ಇದು ಮಕ್ಕಳ ಹಕ್ಕುಗಳ ಉಲ್ಲಂಘನೆ, ಹಿರಿಯರು ಕಿರಿಯರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ಕಿರಿಯರ ಅಭಿಪ್ರಾಯವನ್ನು ತೆಗೆದು ಕೊಳ್ಳ ಬೇಕು ಮತ್ತು ಅಳವಡಿಸಿ ಕೊಳ್ಳ ಬೇಕು ‘ ಅದು ಮಕ್ಕಳ ಭಾಗವಹಿಸುವ ಹಕ್ಕು. ಮಕ್ಕಳ ಹಕ್ಕುಗಳು ಪ್ರಾರಂಭವಾಗುವುದು ಮನೆಯಲ್ಲೇ, ಹಾಗಾಗಿ ಪ್ರತಿ ಪೋಷಕರು ಮಕ್ಕಳ ಹಕ್ಕುಗಳನ್ನು ಅರಿತುಕೊಳ್ಳಲೇ ಬೇಕು. ನಮ್ಮ ಮಕ್ಕಳು, ನಮ್ಮ ಅಸ್ತಿ ಏನುಬೇಕಾದರೂ ಮಾಡಿಕೊಳ್ಳ ಬಹುದು ಅಂದುಕೊಂಡಿದ್ದರೆ ಮಕ್ಕಳು ಮಂಜುನಾಥನಂತೆ ಮನೆಬಿಟ್ಟು ಹೋಗುತ್ತಿರುತ್ತಾರೆ. ನಮಗೆ ಸಮಸ್ಯೆ ಸಣ್ಣದೇ. . ಆದ್ರೂ. . . . . . !!!!!!

ನಾಗಸಿಂಹ ಜಿ ರಾವ್



ಕನ್ನಡದ ಬರಹಗಳನ್ನು ಹಂಚಿ ಹರಡಿ
5 1 vote
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x