ನವೆಂಬರ್ ಮಕ್ಕಳ ಮಾಸ !!!!!!!!!: ನಾಗಸಿಂಹ ಜಿ ರಾವ್

‘ಕನ್ನಡ ಮಾತೆಗೆ ಜೈ , ಜೈ ಭುವನೇಶ್ವರಿ ” ಈ ಘೋಷಣೆಗಳು ನವೆಂಬರ್ ತಿಂಗಳ ಪ್ರತಿದಿನ ಕೇಳುತ್ತಿರುತ್ತವೆ . ಕನ್ನಡ ಭಾಷೆ ಕುರಿತಾಗಿ ಯಾವುದಾದರೂ ಒಂದು ಕಾರ್ಯಕ್ರಮ ನಡೆಯುತ್ತಲೇ ಇರುತ್ತದೆ . ನಮ್ಮ ರಾಜ್ಯಗಳು ಭಾಷೆಯನ್ನು ಆಧರಿಸಿ ವಿಂಗಡಣೆಯಾದರೂ ಕರ್ನಾಟಕ ಎಂದು ಹೆಮ್ಮೆ ಪಡುವನಾಡು ಇಷ್ಟು ವರುಷದಲ್ಲಿ ಎಷ್ಟು ಪ್ರಗತಿ ಸಾಧಿಸಿದೆ ? ಮಾನವ ಹಕ್ಕುಗಳು , ಮಕ್ಕಳ ಹಕ್ಕುಗಳು , ಮಹಿಳೆಯರ ಹಕ್ಕುಗಳು ಹೇಗೆ ಜಾರಿಯಾಗಿದೆ ಹಾಗೂ ರಕ್ಷಿಸಲ್ ಪಡುತ್ತಿವೆ ಎಂಬ ವಿಚಾರಡಾ ಬಗ್ಗೆ ವರುಷಕ್ಕೆ ಒಂದು ದಿನವಾದರೂ ಅವಲೋಕನ ಮಾಡಬಹುದಲ್ಲವೇ ? ಅಭಿವೃದ್ಧಿ ಎಂದರೆ ಕೇವಲ ರಸ್ತೆ , ಕಾರ್ಖಾನೆ , ಜಲಾಶಯ , ವಿಮಾನನಿಲ್ದಾಣ ನಿರ್ಮಾಣ ಮಾಡುವ ಬೌತಿಕ ಅಭಿವೃದ್ಧಿ ಮಾತ್ರವೇ ಅಲ್ಲ , ಮಾನವ ಅಭಿವೃದ್ಧಿ ಮಾಪಕಗಳನ್ನೂ ಸಹ ನಾವು ಗಮನಿಸುವುದು ಅನಿವಾರ್ಯವಲ್ಲವೇ ?

ಮಕ್ಕಳ ಹಕ್ಕುಗಳಿಗೆ , ಮಕ್ಕಳ ರಕ್ಷಣೆಗೆ ಕಾರ್ಯನಿರ್ವಹಿಸುತ್ತಿರುವವರಿಗೆ ನವೆಂಬರ್ ಮಕ್ಕಳ ಮಾಸ.. ಈ ತಿಂಗಳು ಪ್ರತಿದಿನ ಮಕ್ಕಳ ವಿಶೇಷದಿನದ ಆಚರಣೆ , ಅವಲೋಕನ ಇದ್ದೆ ಇದೆ . ಈ ನವೆಂಬರ್ ತಿಂಗಳನ್ನು ಮಕ್ಕಳ ಮಾಸ ಎಂದು ಕರೆಯಲು ಬಹಳ ಮುಖ್ಯ ಕಾರಣ ಈ ತಿಂಗಳು ಮಕ್ಕಳ ದಿನಾಚರಣೆ ಇದೆ ಹಾಗೆಯೇ ವಿಶ್ವಸಂಸ್ಥೆಯ ಮಕ್ಕಳಹಕ್ಕುಗಳ ಅಂತಾರಾಷ್ಟ್ರೀಯ ದಿನವಿದೆ. ಹಾಗೂ ನವೆಂಬರ್ 14 -20 ಮಕ್ಕಳ ಹಕ್ಕುಗಳ ವಾರ ಎಂದು ಪರಿಗಣಿಸಿ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಗುತ್ತಿರುತ್ತದೆ .

ಹೆಣ್ಣುಮಕ್ಕಳ ಬದುಕನ್ನು ಛಿದ್ರಗೊಳಿಸಿ ಅವರ ಪ್ರತಿಯೊಂದು ಹಕ್ಕುಗಳನ್ನು ಉಲ್ಲಂಘನೆ ಮಾಡುವ ಬಾಲ್ಯವಿವಾಹದ ವೀರೋಧಿ ದಿನ ನವೆಂಬರ್ 1, ಒಂದುಕಡೆ ಕನ್ನಡ ರಾಜ್ಯೋತ್ಸವದ ಉತ್ಸಾಹ ಇದ್ದೆರೆ ಮತ್ತೊಂದೆಡೆ ಬಾಲ್ಯವಿವಾಹಕ್ಕೆ ತುತ್ತಾದ ಬಾಲಕಿಯರ ಪರಿಸ್ಥಿತಿ ಅವಲೋಕನ , ಬಾಲ್ಯವಿವಾಹವನ್ನು ತಡೆಯಲು ಸಿದ್ದತೆಗಳು ನಡೆಯುತ್ತಿರುತ್ತವೆ . ರಾಷ್ಟ್ರದಲ್ಲಿ ಜಾರಿಯಲ್ಲಿರುವ ಬಾಲ್ಯವಿವಾಹ ನಿಷೇದ ಕಾಯ್ದೆ 2006 ನಮ್ಮ ದೇಶದಲ್ಲಿ ಜಾರಿಯಾದ ದಿನ ನವೆಂಬರ್ 1. ನಮ್ಮ ರಾಜ್ಯದಲ್ಲಿ ಇಂದಿಗೂ ಬಾಲ್ಯವಿವಾಹಗಳು ನಡೆಯುತ್ತಲೇ ಇವೆ . ಸರ್ಕಾರದ ಅಂಕಿಅಂಶಗಳ ಪ್ರಕಾರ 100 ಮದುವೆಗಳಾದರೆ ನಮ್ಮ ರಾಜ್ಯದಲ್ಲಿ 28 ಬಾಲ್ಯವಿವಾಹಗಳು ಆಗುತ್ತವೆ . ಬಾಲ್ಯವಿವಾಹಗಳನ್ನು ತಡೆಯುವುದು ಸರಕಾರದ ಕೆಲಸ ಮಾತ್ರವಲ್ಲ ಪ್ರತಿಯೊಬ್ಬ ನಾಗರಿಕನೂ ಬಾಲ್ಯ ವಿವಾಹವನ್ನು ತಡೆಯುವ ಪ್ರಯತ್ನ ಮಾಡಲೇ ಬೇಕು , ಬಾಲ್ಯವಿವಾಹ ಮುಕ್ತ ರಾಜ್ಯವನ್ನಾಗಿ ನಮ್ಮ ರಾಜ್ಯವನ್ನು ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ ,

ನವೆಂಬರ್ ನಲ್ಲಿ ನಮ್ಮ ರಾಜ್ಯದ ಎಲ್ಲಾ ಗ್ರಾಮಪಂಚಾಯತಿಗಳಲ್ಲಿ ನಡೆಯುವ ಪ್ರಮುಖ ಕಾರ್ಯಕ್ರಮ ” ಮಕ್ಕಳ ಹಕ್ಕುಗಳ ಗ್ರಾಮಸಭೆ ” . ಗ್ರಾಮಸಭೆಯ ವ್ಯಾಪ್ತಿಯ ಮಕ್ಕಳು ಗ್ರಾಮಸಭೆಗೆ ಆಗಮಿಸಿ ತಮ್ಮ ಸಮಸ್ಯೆಗಳನ್ನು ಪಂಚಾಯತಿ ಸದಸ್ಯರು , ಅಧ್ಯಕ್ಷರ ಮುಂದೆ ಮಂಡಿಸಿ ಪರಿಹಾರಪಡೆದುಕೊಳ್ಳುವ ಕೆಲಸ ಮಾಡುತ್ತಾರೆ . ಮಕ್ಕಳ ಭಾಗವಹಿಸುವಿಕೆಯ ಹಕ್ಕನ್ನು ಎತ್ತಿಹಿಡಿಯುವ ಈ ಕಾರ್ಯಕ್ರಮವನ್ನು 2006 ರಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಾರಂಭಿಸಿತು . ನಮ್ಮ ರಾಜ್ಯದಲ್ಲಿನ ಅನೇಕ ಹಳ್ಳಿಗಳಲ್ಲಿನ ಮಕ್ಕಳ ಸಮಸ್ಯೆಗಳು ಬಹಳ ಬೇಗೆ ಪರಿಹಾರ ಪಡೆದುಕೊಂಡ ಉದಾಹರಣೆ ಇದೆ . ಮಕ್ಕಳ ಹಕ್ಕುಗಳ ಗ್ರಾಮಸಭೆಗಳಲ್ಲಿ ವರುಷ ದಿಂದ ವರುಷಕ್ಕೆ ಮಕ್ಕಳ ಭಾಗವಹಿಸುವಿಕೆ ಹೆಚ್ಚುತ್ತಿದೆ . ಆರಂಭದ ದಿನಗಳಲ್ಲಿ ಮಕ್ಕಳ ಗ್ರಾಮಸಭೆಯಲ್ಲಿ ಭಾಗವಹಿಸಿದ ಮಕ್ಕಳು ಈಗ ಗ್ರಾಮಪಂಚಾಯತಿ ಸದಸ್ಯರಾಗಿದ್ದಾರೆ . ಮಕ್ಕಳ ಸಮಸ್ಯೆಗಳನ್ನು ಅರಿತವರಾಗಿದ್ದಾರೆ . ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ಪ್ರತಿಯೊಂದು ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ತಮ್ಮ ಇಲಾಖೆ ಮಕ್ಕಳ ಅಭಿವೃದ್ಧಿಗೆ , ರಕ್ಶಣೆಗೆ ಕೈ ಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು ಮತ್ತು ತಮ್ಮ ಇಲಾಖೆಗೆ ಸಂಬಂದಿಸಿದ ಮಕ್ಕಳ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಿಯಾಯೋಜನೆ ರೂಪಿಸಿಕೊಳ್ಳಬೇಕು . ಗ್ರಾಮೀಣ ಮಕ್ಕಳಿಗೆ ವರವಾಗಿರುವ ಮಕ್ಕಳ ಹಕ್ಕುಗಳ ಗ್ರಾಮಸಭೆಯಂತೆಯೇ ನಗರ ಪ್ರದೇಶಗಳಲ್ಲೂ ಮಕ್ಕಳ ಹಕ್ಕುಗಳ ವಾರ್ಡ್ ಸಭೆ ನಡೆಸಲು ಸರಕಾರದ ಮೇಲೆ ಒತ್ತಡ ತರುವ ಪ್ರಯತ್ನಗಳು ನಡೆಯುತ್ತಿವೆ .

”ಚಿಲ್ಡ್ರನ್ ಟೇಕ್ ಓವರ್ ” ಮಕ್ಕಳು ಹಿರಿಯರ ಕೆಲಸವನ್ನು ನಿರ್ವಹಿಸುವ ಒಂದು ಬಹು ಮುಖ್ಯ ಕಾರ್ಯಕ್ರಮ ಮಕ್ಕಳ ಮಾಸದ ಪ್ರಮುಖ ಅಂಗ . ನಿಗದಿ ಪಡಿಸಿದ ಒಂದು ದಿನ ಮಕ್ಕಳು ಅದಿಕಾರಿಗಳಾಗುತ್ತಾರೆ , ಶಾಸಕರಾಗುತ್ತಾರೆ , ಪೊಲೀಸ್ ಆಗುತ್ತಾರೆ , ಪತ್ರಕರ್ತ ರಾಗುತ್ತಾರೆ , ಹಿರಿಯರ ಪಾತ್ರಗಳನ್ನು ಮಕ್ಕಳು ವಹಿಸಿಕೊಂಡು ಜವಾಬದ್ದಾರಿಯಿಂದ ಕೆಲಸ ನಿರ್ವಹಿಸುತ್ತಾರೆ . ಮಕ್ಕಳು ಮಡಿದ ಸಂದರ್ಶನ , ಸಿದ್ದಪಡಿಸಿದ ವರದಿಗಳನ್ನು ಪತ್ರಿಕೆಗಳು ಪ್ರಕಟಿಸುತ್ತವೆ , ಕೆಲವು ವಾಹಿನಿಗಳು ಮಕ್ಕಳಿಗೆ ಸುದ್ದಿ ಓದುವಲು ಅವಕಾಶವನ್ನು ನೀಡುತ್ತವೆ . ಈ ದಿನದ ಎಲ್ಲಾ ಚಟುವಕೆಗಳ ವಿವರವನ್ನು ಯುನೆಸಿಫ್ ಜಾಲತಾಣಗಳಲ್ಲಿ ಪ್ರಕಟಿಸಲಾಗುತ್ತದೆ. ಈ ಕಾರ್ಯಕ್ರಮದ ಪ್ರಯುಕ್ತ 2018ರಲ್ಲಿ ಮಕ್ಕಳಿಂದ ದೆಹಲಿಯ ಪಾರ್ಲಿಮೆಂಟ್ ನಲ್ಲಿ ಮಕ್ಕಳ ಭಾಷಣ ಆಯೋಜನೆ ಮಾಡಲಾಗಿತ್ತು . (ಈ ವರುಷ 2024 ನವೆಂಬರ್ 16 ನೇ ತಾರೀಕು ”ಚಿಲ್ಡ್ರನ್ ಟೇಕ್ ಓವರ್ ” ಕಾರ್ಯಕ್ರಮ ಕರ್ನಾಟಕದಲ್ಲಿ ನಡೆಯುತ್ತಿದೆ . ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಸಹಕಾರದಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ಮಕ್ಕಳು ಪತ್ರಕರ್ತರಾಗಿ , ಶಿಕ್ಷಕರಾಗಿ ಹಾಗೂ ನಿರೂಪಕರಾಗಿ ಕೆಲಸ ನಿರ್ವಹಿಸಲಿದ್ದಾರೆ) .

ನಮ್ಮ ದೇಶದ ಮೊದಲ ಪ್ರಧಾನಿ ನೆಹರುರವರ ನೆನಪಿನಲ್ಲಿ ನವೆಂಬರ್ 14 ಮಕ್ಕಳ ದಿನಾಚರಣೆಯನ್ನು ದೇಶದಾದ್ಯಾಂತ ಆಚರಿಸಲಾಗುತ್ತದೆ , ಆ ದಿನ ಮಕ್ಕಳ ಹಕ್ಕುಗಳ ಮಾಸದ ಉದ್ಘಾಟನೆ ಸಹ ಆಗುತ್ತದೆ . ಅನೇಕ ಸ್ವಯಂ ಸೇವಾ ಸಂಸ್ಥೆಗಳು ನವೆಂಬರ್ ತಿಂಗಳ ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಆಂದೋಲನಗಳನ್ನು ಹಮ್ಮಿಕೊಳ್ಳುತ್ತಾರೆ . ಮಕ್ಕಳಿಂದ ಮಕ್ಕಳಿಗಾಗಿ , ಮಕ್ಕಳಿಂದ ಹಿರಿಯರಿಗಾಗಿ , ಹಿರಿಯರಿಂದ ಮಕ್ಕಳಿಗಾಗಿ ಕಾರ್ಯಕ್ರಮ ಹಾಗೂ ಅರಿವು ಮೂಡಿಸುವ ಚಟುವಟಿಕೆಗಳು ಜರಗುತ್ತವೆ .

‘ಇಂದಿನ ಮಕ್ಕಳು ಇಂದಿನದೇ ಪ್ರಜೆಗಳು ‘ ಎಂಬ ಘೋಷಣೆ ನಮ್ಮ ರಾಜ್ಯದ ವಿಧಾನ ಸೌಧದಲ್ಲಿ ಕೇಳಲು ಪ್ರಾರಂಭವಾಗಿದ್ದು 2008ರ ನವೆಂಬರ್ ನಿಂದ , ಆ ವರುಷವೇ ನಮ್ಮ ರಾಜ್ಯದಲ್ಲಿ ಪ್ರಾರಂಭವಾದದ್ದು ” ಮಕ್ಕಳ ಹಕ್ಕುಗಳ ಸಂಸತ್ತು ” ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ತಿನಲ್ಲಿ ಮಕ್ಕಳಿಂದಲೇ ಆಯ್ಕೆಯಾದ ಮಕ್ಕಳ ಇಬ್ಬರು ಪ್ರತಿನಿಧಿಗಳು ಬೆಂಗಳೂರಿಗೇ ಆಗಮಿಸಿ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಜೊತೆಗೆ ತಮ್ಮ ಜಿಲ್ಲೆಯ ಮಕ್ಕಳ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತಾರೆ . ಈ ಮಕ್ಕಳ ಹಕ್ಕುಗಳ ಸಂಸತ್ತಿನಲ್ಲಿ ಮಂತ್ರಿಗಳು , ಶಾಸಕರು ,ಪ್ರತಿ ಇಲಾಖೆಯ ಅಧಿಕಾರಿಗಳು ಭಾಗವಹಿಸುತ್ತಾರೆ . ಮಕ್ಕಳ ಭಾಗವಿಸುವಿಕೆಗೆ ವೇದಿಕೆಯಾಗಿರುವ ಮಕ್ಕಳ ಹಕ್ಕುಗಳ ಸಂಸತ್ ಅನೇಕ ಮಕ್ಕಳಲ್ಲಿ ನಾಯಕತ್ವದ ಗುಣ , ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯ ಹಾಗೂ ಸಂವಹನದ ನೈಪುಣ್ಯತೆಗಳನ್ನು ಬೆಳೆಸಿಕೊಳ್ಳವು ಸಹಾಯಕವಾಗಿದೆ . ಅಂಗವಿಕಲ ಮಕ್ಕಳು , ಹೆಚ್ ಐ ವಿ ಬಾಧಿತ ಮಕ್ಕಳು ಮಕ್ಕಳ ಹಕ್ಕುಗಳ ಸಂಸತ್ತಿನಲ್ಲಿ ಎತ್ತಿದ ಪ್ರಶ್ನೆಗಳು ಶಾಸಕರ ಕಣ್ಣುತೆರೆಯುವಂತೆ ಮಾಡಿತ್ತು . ಮಕ್ಕಳು ಕೇವಲ ಶಾಲೆಯ ಸಮಸ್ಯೆಗಳ ಬಗ್ಗೆ ಚರ್ಚಿಸದೆ ಬಾಲಕಾರ್ಮಿಕ ಪದ್ಧತಿ , ಬಾಲ್ಯವಿವಾಹ , ಮಕ್ಕಳ ಮಾರಾಟ , ಮಕ್ಕಳ ಮೇಲಾಗುವ ಲೈ೦ಗಿಕ ಕಿರುಕುಳ.. ಇನ್ನು ಮುಂತಾದ ಮಕ್ಕಳ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುತ್ತಾರೆ . ಮಕ್ಕಳ ಭಾಗವಹಿಸುವ ಹಕ್ಕಿನ ವೇದಿಕೆಗಳಾದ ಮಕ್ಕಳ ಹಕ್ಕುಗಳ ಸಂಘಗಳು , ಮಕ್ಕಳ ಹಕ್ಕುಗಳ ಗ್ರಾಮಸಭೆ , ಮಕ್ಕಳ ಹಕ್ಕುಗಳ ಸಂಸತ್ ಈ ಮೂರೂ ನಮ್ಮ ರಾಜ್ಯದಲ್ಲಿ ಮಾತ್ರ ಇರುವುದೇ ನಮ್ಮ ರಾಜ್ಯದ ಶ್ರೇಷ್ಠತೆ .

ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ಇಡೀ ವಿಶ್ವದಲ್ಲಿ ಜಾರಿಯಾಗಿದ್ದು ನವೆಂಬರ್ 20 1989 ರಲ್ಲಿ ಮಕ್ಕಳ ಬದುಕು ,ರಕ್ಷಣೆ , ಅಭಿವೃದ್ಧಿ ಹಾಗೂ ಭಾಗವಹಿಸುವ ಹಕ್ಕುಗಳನ್ನು ಹೊಂದಿರುವ ಈ ಒಡಂಬಡಿಕೆ ವಿಶ್ವದ ಪ್ರತಿ ದೇಶಗಳಿಂದಲೂ ಮಾನ್ಯತೆ ಪಡೆದಿದೆ , ಭಾರತ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಮಾಡಿ ಮಕ್ಕಳ ಹಕ್ಕುಗಳಿಗೆ ಬದ್ಧವಾಗಿದೆ . ವಿಶ್ವ ಸಂಸ್ಥೆ ಘೋಷಣೆಯಂತೆ ಪ್ರತಿ ವರ್ಷ ನವೆಂಬರ್ 20ರ ದಿನವನ್ನು ಅಂತಾರಾಷ್ಟ್ರೀಯ ಮಕ್ಕಳ ಹಕ್ಕುಗಳ ದಿನವೆಂದು ಇಡೀ ವಿಶ್ವದಲ್ಲಿ ಆಚರಿಸಲಾಗುತ್ತದೆ . ಈ ವರ್ಷ ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯು ತನ್ನ 35 ವರುಷವನ್ನು ಪೂರೈಸುತ್ತಿದೆ , ಹಾಗಾಗಿ ವಿಶೇಷ ಕಾರ್ಯಕ್ರಮಗಳು ಪ್ರತಿಯೊಂದು ದೇಶದ್ಲಲೂ ಜರಾಗುತ್ತಿದೆ .

ನವೆಂಬರ್ 11 ರಾಷ್ಟ್ರೀಯ ಶಿಕ್ಷಣ ದಿನ , ನವೆಂಬರ್17 ವಿಶ್ವ ವಿದ್ಯಾರ್ಥಿಗಳ ದಿನ , ನವೆಂಬರ್18 ಲೈ೦ಗಿಕ ಶೋಷಣೆ ಇಂದ ಮಕ್ಕಳ ರಕ್ಷಣೆ ದಿನ ಇಷ್ಟೆಲ್ಲಾ ಮಕ್ಕಳಿಗೆ ಸಂಬಂದಿಸಿದ ದಿನಗಳು ನವೆಂಬರ್ ನಲ್ಲಿ ಇರುವುದರಿಂದ ನವೆಂಬರ್ ಮಕ್ಕಳ ಮಾಸವಾಗಿದೆ , ‘ಕನ್ನಡ ಮಾತೆಗೆ ಜೈ , ಜೈ ಭುವನೇಶ್ವರಿ ” ಘೋಷಣೆಗಳೊಂದಿಗೆ ”ಇಂದಿನ ಮಕ್ಕಳು ಇಂದಿನದೇ ಪ್ರಜೆಗಳು ”’ ಎಂಬುದನ್ನೂ ಈ ತಿಂಗಳು ಸೇರಿಕೊಂಡರೆ ಕನ್ನಡ ಬೆಳೆಸುವುದರೊಂದಿಗೆ ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿದಂತೆ ಆಗುತ್ತದೆ ಅಲ್ಲವೇ ??

ನಾಗಸಿಂಹ ಜಿ ರಾವ್


ಕನ್ನಡದ ಬರಹಗಳನ್ನು ಹಂಚಿ ಹರಡಿ
5 1 vote
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
NAGARAJA
NAGARAJA
3 months ago

ತುಂಬಾ ವಿಸ್ತೃತ ಲೇಖನ.. ಚನ್ನಾಗಿ ಇದೇ.
ಅಲ್ಲಲ್ಲಿ spelling mistakes and spacing mistakes ide ಸರಿ ಪಡಿಸಿಕೊಳ್ಳಿ

Koushik
Koushik
3 months ago

ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ

2
0
Would love your thoughts, please comment.x
()
x