ಪಂಜು ಕಾವ್ಯಧಾರೆ

ಧರಣಿ
ಆಕಾಶ ನೋಡಿ ಮಳೆಯಾಗಲ್ಲಿಲ್ಲ
ಎಂದು ಮುನಿಸಿಕೊಂಡರೇನು
ಪ್ರಯೋಜನ, ಮರ ಕಡಿದವನು
ನೀನಲ್ಲವೇ

ಬತ್ತಿ ಹೋದ ಕೆರೆಯ ನೋಡಿ
ಕಣ್ಣೀರು ಹಾಕಿದರೇನು
ಪ್ರಯೋಜನ, ಎರಡು ಹನಿಯಿಂದ
ಬೊಗಸೆಯೂ ತುಂಬುವುದಿಲ್ಲ

ಬಿರುಕು ಬಿಟ್ಟಿದೆ ಎಂದು
ಬೊಬ್ಬೆಹೊಡೆದರೇನು
ಪ್ರಯೋಜನ, ಬೆಂದ ಭೂಮಿಯು
ಎಷ್ಟು ನೊಂದಿರಬೇಕು

ನೀರು, ಗಾಳಿಯನ್ನೆಲ್ಲಾ
ಕಲುಷಿತ ಮಾಡಿಯಾಗಿದೆ,
ಹಾಳು ಮಾಡಲು ಇನ್ನೇನು
ಉಳಿದಿದೆ

ಮುಗಿಲು ಮುಟ್ಟುತ್ತಿದ್ದ ಬೆಟ್ಟಗಳನ್ನು
ಕೆಡವಿದ್ದಾಗಿದೆ, ದೊಡ್ಡ ಕಟ್ಟಡಗಳು
ಈಗಾಗಲೇ ಅವುಗಳನ್ನು
ಮುತ್ತಿಡುತ್ತಿದೆ.

ಗುಬ್ಬಿಗಳ ಚಿಲಿಪಿಲಿಯ
ರಿಂಗಣ ನಿಂತುಹೋಗಿದೆ
ಆಧುನಿಕ ಜಂಗಮವಾಣಿಯ
ತರಂಗಗಳಿಗೆ

ಜಗವೇ ತ್ಯಾಜ್ಯ ಬಂಡಿಯಂತೆ
ಗೋಚರಿಸುತ್ತಿದೆ,
ಪ್ರಕೃತಿಯ ವಿಕೋಪ
ಶುದ್ದಿಗೊಳಿಸಿ ಕಾಯುತ್ತಿದೆ.

ತಾಯಿ ಧರಣಿಯ ಧಗೆ
ಮಗುವಿಗೆ ನಷ್ಟ
ಹೊರತು ತಾಯಿಗಲ್ಲ
ಶುದ್ದಿಯಾಗಬೇಕಿದೆ
ಮನುಷ್ಯನ ಅಂತರಂಗ.

ಅಜಿತ್ ಕೌಂಡಿನ್ಯ

ನೆನಪುಗಳು

ಈಗೀಗ
ನೀರವ
ರಾತ್ರಿಗಳು
ಬಿಕ್ಕುತ್ತಿವೆ,
ನಿನ್ನ
ನೆನಪುಗಳಂತೆ.
ಕಣ್ಣೀರು
ಸಹ.

ಎದೆಯ
ಹೊಲಿದ
ಹೊಲಿಗೆಗಳೂ,
ನೀನೆಂಬ
ನೆನಪುಗಳ
ಗಾಯವ
ಮಾಗಲು
ಬಿಡುತ್ತಿಲ್ಲ.

ನಿನ್ನ
ನೆನಪುಗಳೆಂಬ
ಮಾರ್ಜಾಲ
ಕಾಡಿ
ಕೊಲ್ಲುತ್ತಿರಲು,
ನಿನದೆಲ್ಲೊ
ಖಿಲ್ಲನೆ
ನಗುತಿರುವೆಯಲ್ಲ.

ನನ್ನ
ಕಣ್ಣ ಹಣತೆ
ನಿನ್ನ ನೆನಪುಗಳೆಂಬ
ತೈಲದಿ
ಇನ್ನೆಷ್ಟು ದಿನ
ಬೆಳಗೀತು?
ಎಲ್ಲದಕ್ಕೂ
ಅಂತ್ಯವಿದೆ
ಅಲ್ಲವೇ?

ನೆನಪುಗಳ
ಮೂಟೆ
ಧಾನ ಕೊಟ್ಟ
ನಿನಗೆ
ಇನ್ನೇನು
ಕೇಳಲೇ?
ಏಳೇಳು
ಜನ್ಮಕ್ಕೂ
ತೀರದ
ಋಣವಿದೆಯಲ್ಲ.

ಜ್ಯೋತಿ ಕುಮಾರ್.ಎಂ(ಜೆ.ಕೆ.).

ಒಲವು

ಎದೆ ಕಾಗದದ ಶೈತ್ಯಾಗಾರದಿ
ಹಾಳಾಗದೆ ಉಳಿದ;
ಯಾರೋ ಗೀಚಿದ ಷಾಯಿ!
ಯೌವ್ವನದ ರೊಟ್ಟಿ ತುಣುಕಿಗೆ
ಬೆನ್ನತ್ತಿ ತೆರೆಯುವದು ಬಾಯಿ


ಏನು ಅರಿಯದ ಕೂಸು
ಕೊಡುವುದು
ಕಡು ವೈರಿಗಿಂತ ತ್ರಾಸು!
ಒಲಿದರೆ ಲೇಸು
ಮುನಿದರೆ ಮುಳ್ಳಿನ ಹಾಸು!

ಎಲ್ಲರ ಎದೆ ತಟ್ಟಿ ಕೆನೆಗಟ್ಟಿ;
ಕೊನೆಗೆ
ವಿರಹದ ಕೋಣೆಗೆ ಅಟ್ಟುವದು
ಅನುಮಾನದ
ಬೋನಿಗೆ ಸಿಕ್ಕವರ;
ಪ್ಯಾನಿಗೆ ನೇತು ಹಾಕುವದು!

ಎಲ್ಲರಲಿ ಹುಟ್ಟುವದು
ಹಾಗಂತ;
ಎಲ್ಲರೊಳು
ಜೀರ್ಣ ಆಗದ ಚೂರ್ಣ
ಎಲ್ಲ ಸಂದರ್ಭದಿ ರುಚಿಸದ ಹೂರ್ಣ!

ಒಮ್ಮೆ ಕಹಿ ಒಮ್ಮೆ ಸಿಹಿ
ಒಂದೊಮ್ಮೆ ಹುಳಿ!
ಮಗದೊಮ್ಮೆ
ಹೊಳಿಯಾಗಿ ತಳ್ಳುವದು ಹಳಹಳಿಯ ಹಳ್ಳಕೆ!
ನರನಾಡಿಯಲಿ ನಳನಳಿಸಿ ಹಳಸಿ
ದೂಡುವದು ನರಕಕೆ!

ಒಮ್ಮೆ ಥಂಬಳಿ
ಮಗದೊಮ್ಮೆ ಹೊದ್ದರೆ ಚುಚ್ಚೊ ಕಂಬಳಿ
ಒಮ್ಮೆ ಕಿಂಕರ
ಇನ್ನೊಮ್ಮೆ ಭಯಂಕರ
ಒಮ್ಮೊಮ್ಮೆ ತಾಂಬೂಲ ತುಂಬಿದ ಮಂಕರಿ
ಮರುಕ್ಷಣ
ತಾಳಲಾಗದ ಕಿರಿಕಿರಿ!

ಇಲ್ಲಿ ಓಡಿದಂತೆಲ್ಲ ಮೆತ್ತುವದು
ಕಂಬಳದ ರಾಡಿ
ಇದು ತಲೆ ಹತ್ತಿದ ಅಮಲಿಗೆ
ಕಿಡಿ ಹತ್ತಿಸೊ ಕಿಡಿಗೇಡಿ
ಅದೆಷ್ಟು ತಿಳಿ ಹೇಳಿದರು
ತಿಳಿಯಾಗದ ತಿಳಿಗೇಡಿ!

ಮೋಹಕ ಹಣ್ಣು
ಜನರ
ಕಥಕ್ಕಳಿ ಕೂಚುಪ್ಪುಡಿ ಆಡಿಸಿ
ಜಾಡಿಸುವದು ಚಾದರ
ಸಮಾಜಕೆ
ತಿಳಿಯದೇನಿದೆ ಇದರ ಹಾದರ?
ಸರಿಯೇ ಸದರ
ಇದು ನಿರಾಕಾರ!

ಇದು ಇದ್ದಲ್ಲಿ ಇದ್ದದ್ದೆ ಹಗೆ
ಇದು
ಸಮುದಾಯಕೆ
ಬೇಡವಾದ ಬೀಡಿ ಸಿಗರೇಟಿನ ಹೊಗೆ
ಆಚೆ ಹೋಗಿ
ನೆಲೆಗೊಳ್ಳಲು ಸದಾ ಹಂಬಲಿಸೊ ಅಲೆ
ಯೋಚಿಸಿ ಯೋಚಿಸಿ ಸವೆದ
ತಲೆ ಸೌದೆಯ;
ಎಳೆದೆಳೆದು ಸುಟ್ಟು ಮಾಡುವದು ಕೊಲೆ!

ಅಯ್ಯಪ್ಪ ಬ ಕಂಬಾರ

ತಿತಿಕ್ಷೆ

ವಿಜೇತನಿಗೆ ಹೊನ್ನ ಮಣ್ಣ ನೀಡುವ ಸಮರ
ಅಮರತೆಯ ಅಮಲ ತುಂಬುವ ಕದನ
ನಿರರ್ಥಕ ಎನ್ನಿಸಲು ಅನುಭವ ಅನುವರ
ವಿವೇಕ ಕಳೆವ ಯುದ್ಧ
ನೀಡುವುದು ಹೆಚ್ಚಿನ ಉನ್ಮಾದ

ಸೇಡೆಂಬುದು ಬೆಂಬಿಡದ ಕಟ್ಟು
ಕ್ಷಮಿಸಿ ಹೊಸೆ ಪ್ರೀತಿಯ ಕಟ್ಟು
ಸಮಯ ಶಕ್ತಿಯ ವ್ಯಯ ಮಿಗಿತಾಯ
ಇದ್ದಷ್ಟು ಸಾಮಾನು ಸರಂಜಾಮು
-ತುಸು ಆರೋಹಣ ಆರಾಮು

ಕಳೆ ಎಲ್ಲವ ಬೆಳೆ
ಅರವತ್ತನಾಲ್ಕು ಕಲೆ
ಪಡೆ ಪಾಂಡಿತ್ಯ
ಪಡೆದ ಮಾತ್ರಕ್ಕೆ ಬಳಸಬೇಕಿಲ್ಲ
ಮುಖ್ಯ ಔಚಿತ್ಯ

ಹೊರ ಕದನ ವಿರಾಮ
ಘೋಷಣೆಯಾದ ಬಳಿಕ ಶ್ರೀಕಾರ
ಆಂತರಿಕ ಸಂಘರ್ಷ
ಒಳತೋಟಿ ತಹಬಂದಿಗೆ ತಂದರೆ
ಅಶ್ವಮೇಧ ಯಾಗದ ಪುಣ್ಯ

ಹನಿ ಪ್ರೋಕ್ಷಣೆಗೆ ಅರಳಿದ ವಿವೇಚನೆ
ಎದೆ ತುಂಬ ಹೂಬನ
ಅಹಂಕಾರಕೆ ತಾಗಿ ಗುಲಾಬಿ ಮುಳ್ಳ ಮೊನೆ
ಹಿಡಿತಕ್ಕೆ ಸಿಕ್ಕ ಉಸಿರಮನೆ
ಬೀಜಮಂತ್ರ ನಿರ್ವಂಚನೆ
ನಿರ್ಗುಣ ನಿರಾಕಾರಗೆ
ನಿರಾಡಂಬರ ಪ್ರಾರ್ಥನೆ

  • ಅಜಿತ್ ಹರೀಶಿ

ಪ್ರೇಮಿಗಳ ಸ್ವಗತ

ಎಷ್ಟೋ ದಿನಗಳು ತಿಂಗಳುಗಳ ನಂತರ
ನಾವು ಸಂಧಿಸಿದ್ದೇವೆ
ಭಾವೋದ್ವೇಗಕ್ಕೆ ಒಳಗಾಗಿಯೂ ಇದ್ದೇವೆ
ಮಾತು ಮೌನ ತಾಳಿದೆ
ತುಟಿಗಳು ಬಿರಿದಿವೆ
ಎದೆ ಬಡಿತ ಇಬ್ಬರಲ್ಲೂ ಜೋರಾಗಿದೆ
ಕಣ್ಣು ಎವೆಯಿಕ್ಕದೆ
ಒಂದನ್ನೊಂದು ನೋಡುತ್ತಿವೆ
ಮುಂದೆ??

ಮನಸು ಎಚ್ಚರಿಸುತ್ತದೆ
ಮತ್ತದೇ ಅಗಲಿಕೆ ಇದ್ದಿದ್ದೇ
ಇಲ್ಲಿ ಮೌನವೇ ವಾಸಿ
ವಿರಹದುರಿ ಅನುಭವಿಸಿ
ಸಂಕಟಪಟ್ಟು ಪಟ್ಟೂ ಒಂದು ಹಂತಕ್ಕೆ
ಯಾವತ್ತೋ ಬಂದಾಗಿದೆ
ಮತ್ತೆ ಕೆದಕಿ ಕರಡಿ ರಾಡಿಗೊಳಿಸಿ
ಅಂಬರವೇರುವ ದುರಾಸೆ ಬೇಡಾ
ಎಂತಿದ್ದರೂ ಸರಿದ ಕಾಲದ ಬುತ್ತಿ
ನಿಮ್ಮ ಕಾಲಡಿಯಲ್ಲೇ ಹೂತಿರುವಾಗ
ಒಂದಾಗುತ್ತೀರಿ ಎಂಬುದು ಕನಸಿನ ಮಾತು.

ಎದ್ದು ಸಾಗಿ ಮುಂದಕ್ಕೆ
ಹಿಂತಿರುಗಿ ನೋಡಲೇ ಬೇಡಿ
ಕಾಲ ಯಾವತ್ತೂ ನಿಲ್ಲುವುದಿಲ್ಲ
ತನ್ನ ಪಾಡಿಗೆ ತಾನು ನಡೆವಂತೆ
ಅದರ ಹಿಂದೆ ಅನುಯಾಯಿಯಂತೆ ಹೆಜ್ಜೆ ಹಾಕಿ
ಇಲ್ಲಸಲ್ಲದ ನೆಪವೊಡ್ಡಿ
ಹತ್ತಿರವಾಗುವ ಹುನ್ನಾರವೇಕೆ
ಮನಸ್ಸು ಜಡವಾಗಿರುವಾಗ
ಕಡ್ಡಿ ತುಂಡು ಮಾಡಿದಂತೆ
ಮಾತು ನಡೆ ಇರಲಿ
ಬುದ್ಧಿಯೂ ಎಚ್ಚರಿಸುತ್ತದೆ.

ಇದೇ ಸರಿ ಎಂದಂದುಕೊಂಡ ಜೀವಗಳು
ಮೌನದ ಮೊರೆ ಹೊಕ್ಕು
ಒಳಗೊಳಗೇ ಮಾತಿಗಿಳಿದಾಗ
ಜೀವ ಸರ್ವ ಸ್ವತಂತ್ರ
ವೇದನೆಯ ಜಂಜಾಟವಿಲ್ಲ
ಒಂಟಿತನದಲ್ಲೂ ಮನಸ್ಸು ನಿರಾಳ
ಬಹುಶಃ ಬಂಧನದ ಬಿಡುಗಡೆ
ಅಂದರೆ ಇದೇನಾ?

ಈಗ ಅವರಿಬ್ಬರೂ
ದ್ವೇಷಿಸುತ್ತಲೂ ಇಲ್ಲ
ಪ್ರೀತಿಸುತ್ತಲೂ ಇಲ್ಲ
ಹತ್ತರಲ್ಲಿ ಹನ್ನೊಂದಾಗಿ
ಇರಲು ಬಯಸದ
ಅವರವರ ದಾರಿಯಲ್ಲಿ ನಡೆಯುವ
ನಿರಾಳ ಮನಸ್ಥಿತಿಯವರು
ಅಪ್ಪಟ ಹಿತೈಷಿಗಳು
ಮೌನದ ಮೊರೆ ಹೊಕ್ಕ ಸ್ನೇಹಿತರು
ಆದರೆ ಪ್ರೇಮಿಗಳಲ್ಲ!

ಗೀತಾ ಜಿ ಹೆಗಡೆ ಕಲ್ಮನೆ

ತರಹಿ ಗಜಲ್ : ಮಿಸ್ರಾ ಶಾಂತರಸ

ಬತ್ತಲಾಯಿತು ಬದುಕು ಸತ್ಯವನು ಹುಡುಕುತ್ತ ಹುಡುಕುತ್ತ
ಸುಳಿಗೆ ಸಿಕ್ಕಿ ಪ್ರಾಮಾಣಿಕತೆಯನು ಹುಡುಕುತ್ತ ಹುಡುಕುತ್ತ

ಹೆಸರಿಗೆ ಮಾತ್ರ ಬಂಧು ಬಳಗವೆಲ್ಲ ಕಷ್ಟದಲಿ ಏಕಾಂಗಿಗಳು
ನಿಷ್ಠುರವಾದೆ ಮಾನವೀಯತೆಯನು ಹುಡುಕುತ್ತ ಹುಡುಕುತ್ತ

ಮೂಢನಂಬಿಕೆಗಳ ಸಮಾಜದಲಿ ಬರೀ ಬೂಟಾಟಿಕೆ ಸದ್ದು
ಬಲಿಯಾದೆನು ವೈಚಾರಿಕತೆಯನು ಹುಡುಕುತ್ತ ಹುಡುಕುತ್ತ

ಸ್ವಾರ್ಥ ಜನರ ಮಧ್ಯೆ ಎಲ್ಲವೂ ವ್ಯವಹಾರಮಯವಾಗಿದೆ
ಕಳೆದು ಹೋಗಿರುವೆ ನಮ್ಮವರನು ಹುಡುಕುತ್ತ ಹುಡುಕುತ್ತ

ಪ್ರತಿನಿತ್ಯವೂ ಸಂಘರ್ಷ ನಮ್ಮ ಅಸ್ಮಿತೆಗಾಗಿ ‘ಬೆಂಗಾಲಿ’
ಮುಳುಗಿರುವನು ಜೀವನವನು ಹುಡುಕುತ್ತ ಹುಡುಕುತ್ತ

ಈರಣ್ಣ ಬೆಂಗಾಲಿ

ಮನದಿ ಮನೆಯೊಂದು ಕಟ್ಟಿದೆ ನೋಡಿ

ಮನದಿ ಮನೆಯೊಂದು ಕಟ್ಟಿದೆ ನೋಡಿ,
ಇಷ್ಟವಾದರೊಮ್ಮೆ ಬನ್ನಿ ತಪ್ಪಿಸಬೇಡಿ

ಮೋಡಗಳ ನಾಡಿನಾಚೆಗೆ ಒಂದು
ಮನೆಯ ಕಟ್ಟಿಸುತಿರುವೆ ||
ಗೋಡೆಗಳಿಗೆಲ್ಲಾ ಭಾವನೆಗಳ
ಬಣ್ಣ ಬಳಿಯುತಿರುವೆ ||

ಕಾಮನ ಬಿಲ್ಲಿನ ಏಣಿಯನು
ಮನೆಗೆ ಇಟ್ಟಿರುವೆ,
ಬಣ್ಣಗಳ ಮೆಟ್ಟಿಲನೇರಿ ಬರುವ
ನಿಮಗೆ ಕಾದಿರುವೆ || 1 ||

ಸಂಜೆಯಾಯಿತೆಂದರೆ ಬರುವ
ನಿಶ್ಚಿತವಾಗಿಯೂ ಚಂದ್ರ
ಬೆಳಕಾಗಿ ನನ್ನ ಮನೆಗೆ
ಹಚ್ಚಿಟ್ಟಂತೆ ದೊಡ್ಡ ಲಾಂದ್ರ || 2 ||

ಮನೆಯ ಮುಂದಿರುವ ತೋಟದಲಿ,
ಹೂ ಗಿಡಗಳು ಅಷ್ಟೆತ್ರ,
ಬೆಳೆದು ತೂಗುತ ತುಂಬಿವೆ ಅದರಲಿ
ಅರಳಿರುವ ಹೂ ನಕ್ಷತ್ರ || 3 ||

ಆಗಾಗ ಹಗುರಾಗಿ ತಂಪನೀಯಲು
ಸುಳಿದಾಡುವವು ಕರಿಮೋಡ,
ನೀಗಿ ಒಡಲ ಬೇಗೆಯನು ಸವಿಯಲು
ಬಳಿಯೆ ನಲಿವ ನವಿಲ ನೋಡ || 4 ||

ದೂರದ ಊರೆಂದು ದೂರಮಾಡದೇ
ನನ್ನ ಮಾತನು ತುಸು ಕೇಳಿ,
ಹಾರುವ ವಾಹನ ಕಳಿಸುವೆ ಸ್ವಾಗತದೆ,
ನಿಮಗೆ ಅದುವೆ ತುಸು ತಾಳಿ || 5 ||

ಡಾ. ವೃಂದಾ ಸಂಗಮ್

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
1
0
Would love your thoughts, please comment.x
()
x