ಒಂದು ಪ್ರೇಮ ಕತೆ: ಜೆ.ವಿ.ಕಾರ್ಲೊ

ಮೂಲ ಕತೆ: The Lady with the dog

ಲೇಖಕರು: ಆಂಟೊನ್ ಚೆಕೊವ್

ಅನುವಾದ: ಜೆ.ವಿ.ಕಾರ್ಲೊ

ಅಪರಿಚಿತ ಹೆಣ್ಣುಮಗಳೊಬ್ಬಳು ಒಂದು ಪುಟ್ಟ ನಾಯಿಯೊಂದಿಗೆ ಕಡಲತೀರದ ಮೇಲೆ ಅಡ್ಡಾಡುತ್ತಿರುವ ಬಗ್ಗೆ ಜನರು ಮಾತನಾಡತೊಡಗಿದರು. ಕಳೆದ ಹದಿನೈದು ದಿನಗಳಿಂದ ಯಾಲ್ಟಾದಲ್ಲಿ ತಂಗಿದ್ದ ಡಿಮಿಟ್ರಿ ಡಿಮಿಟ್ರಿಚ್ ಗುರೊವ್‌ನಿಗೆ ಹೊಸದಾಗಿ ಕಡಲ ತೀರಕ್ಕೆ ಬಂದಿರುವ ಈ ಹೆಣ್ಣುಮಗಳ ಬಗ್ಗೆ ಆಸಕ್ತಿ ಕೆರಳಿತು. ಕಡಲ ತೀರಕ್ಕೆ ಎದುರಾಗಿ ವೆರ್ನಿ ಹೋಟಲಿನ ಎತ್ತರದ ಮಂಟಪದ ಮೇಳೆ ಕುಳಿತಿದ್ದ ಅವನಿಗೆ ತಲೆಗೆ ಟೋಪಿ ಧರಿಸಿದ್ದ, ಮಧ್ಯಮ ಎತ್ತರದ ಕೆಂಗೂದಲಿನ ಹರೆಯದ ಹೆಣ್ಣುಮಗಳು ಕಾಣಸಿಕ್ಕಿದಳು. ಅವಳನ್ನು ಹಿಂಬಾಲಿಸಿಕೊಂಡು ಒಂದು ಪುಟ್ಟ ಪೊಮೇರಿಯನ್ ನಾಯಿ ಓಡಿ ಬರುತ್ತಿತ್ತು.

ನಂತರ, ಎಲ್ಲರೂ ಆಕೆಯನ್ನು ‘ನಾಯಿಯ ಒಡತಿ’ ಎಂದೇ ಕರೆಯುತ್ತಿದ್ದರು.

“ಅವಳು ಇಲ್ಲಿ ತನ್ನ ಗಂಡ ಮತ್ತು ಸ್ನೇಹಿತರೊಂದಿಗೆ ಇಲ್ಲದಿದ್ದಲ್ಲಿ ಅವಳ ಸಖ್ಯ ಬೆಳೆಸುವುದು ತಪ್ಪಾಗಲಾರದು.” ಡಿಮಿಟ್ರಿಚ್ಯೋಚಿಸಿದ. ಅವನಿಗೆ ಆಸುಪಾಸು ನಲ್ವತ್ತು ವರ್ಷ ವಯಸ್ಸಾಗಿತ್ತು. ಹನ್ನೆರಡು ವರ್ಷದ ಮಗಳಿದ್ದಳು. ಇಬ್ಬರು ಶಾಲೆ ಕಲಿಯುವ ಹುಡುಗರಿದ್ದರು. ಅವನಿಗೆ ವಿದ್ಯಾರ್ಥಿದೆಸೆಯಲ್ಲೇ ಮದುವೆಯಾಗಿತ್ತು. ಅವನ ಹೆಂಡತಿಗೆ ಅವನ ಅರ್ಧದಷ್ಟು ವಯಸ್ಸಾಗಿತ್ತು.

ಅವಳು ದೈಹಿಕವಾಗಿ ಎತ್ತರವಾಗಿದ್ದು, ನೇರ ದಿಟ್ಟ ನಡೆಯವಳಾಗಿದ್ದಳು. ದಟ್ಟವಾದ ಕಪ್ಪು ಹುಬ್ಬುಗಳು. ಗಂಭೀರ ಮುಖಭಾವ ಮತ್ತು ಅವಳೇ ಹೇಳುವಂತೆ ಬುದ್ಧಿಜೀವಿಯಾಗಿದ್ದಳು. ಅವಳು ತುಂಬಾ ಓದುತ್ತಿದ್ದಳು. ಯಾವುದೇ ಶಬ್ದವನ್ನು ಅದರ ಶಬ್ದಮೂಲವನ್ನು ತಿಳಿದುಕೊಂಡು ಅದರಂತೆ ಉಚ್ಚರಿಸುತ್ತಿದ್ದಳು. ಅವನು ಒಳಗೊಳಗೇ ಅವಳಿಗೆ ಹೆದರುತ್ತಿದ್ದ. ಅವಳು ಶತದಡ್ಡಿ, ಸಂಸ್ಕೃತಿ ಇಲ್ಲದವಳೆಂದು ತೀರ್ಮಾನಿಸಿದ್ದ. ಅವನು, ಅವಳು ಮನೆಯಲ್ಲಿದ್ದಾಗ ಇರಲು ಇಷ್ಟಪಡುತ್ತಿರಲಿಲ್ಲ. ಅವನು ಯಾವತ್ತೂ ಅವಳಿಗೆ ನಿಷ್ಠನಾಗಿರಲಿಲ್ಲ. ತನ್ನ ಹೆಂಡತಿಯಂತಲೇ ಅಲ್ಲ, ಹೆಣ್ಣುಮಕ್ಕಳ ಕುರಿತು ಮಾತನಾಡುವಾಗ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದ. ನೀಚಕುಲವೆನ್ನುತ್ತಿದ್ದ. ಹೆಣ್ಣುಮಕ್ಕಳಿಂದ ತನಗಾದ ಕಹಿ ಅನುಭವಗಳ ನಂತರ, ಅವರನ್ನು ಬೇರೆ ರೀತಿ ಕರೆಯಲು ಸಾಧ್ಯವೇ ಇಲ್ಲವೆನ್ನುತ್ತಿದ್ದ. ಆದರೂ, ಹೆಣ್ಣುಮಕ್ಕಳ ಸಹವಾಸವಿಲ್ಲದೆ ಅವನಿಂದ ಎರಡು ದಿನವೂ ಸಾಗುತ್ತಿರಲಿಲ್ಲ. ಗಂಡಸರ ಜೊತೆ ಅವನಿಗೆ ಹೆಚ್ಚು ಕಾಲ ತನ್ನಂತೆ ಇರಲು ಸಾಧ್ಯವಾಗುತ್ತಿರಲಿಲ್ಲ. ಅವನು ಮಾನಸಿಕವಾಗಿ ತಣ್ಣಗಾಗಿ ಬಿಡುತ್ತಿದ್ದ. ಬಾಯಿಂದ ಮಾತುಗಳೇ ಹೊರಡುತ್ತಿರಲಿಲ್ಲ. ಅವನ ವ್ಯಕ್ತಿತ್ವದಲ್ಲಿ ಅದಾವ ನಮೂನೆಯ ಆಯಸ್ಕಾಂತೀಯ ಸೆಳೆತವಿತ್ತೋ! ದೀಪದ ಬೆಳಕಿಗೆ ಮುತ್ತುವ ಚಿಟ್ಟೆಗಳಂತೆ ಹೆಣ್ಣುಮಕ್ಕಳು ಅವನ ಆಕರ್ಷಣೆಗೆ ಒಳಗಾಗುತ್ತಿದ್ದರು. ಹೆಣ್ಣುಮಕ್ಕಳ ಸಖ್ಯದಲ್ಲಂತೂ ಅವನು ದಾರ ಕಿತ್ತ ಗಾಳಿಪಟದಂತಾಗುತ್ತಿದ್ದ. ಅವರೊಡನೆ ಏನು ಮಾತನಾಡಬೇಕು, ಹೇಗೆ ಮಾತನಾಡಬೇಕು, ಹೇಗೆ ನಡೆದುಕೊಳ್ಳಬೇಕೆಂದು ಅವನಿಗೆ ಯಾಂತ್ರಿಕವಾಗಿ ಅಭ್ಯಾಸವಾಗಿಬಿಟ್ಟಿತ್ತು. ಹೆಣ್ಣುಮಕ್ಕಳ ಸೆಳೆತದ ಬಗ್ಗೆ ಅವನಿಗೂ ಅರಿವಾಗಿತ್ತು. ಅನುಭವಗಳು, ಪದೇ ಪದೇ ಪುನರಾವರ್ತನೆಗೊಳ್ಳುತ್ತಿರುವ ಕಹಿ ಘಟನೆಗಳು ಅವನಿಗೆ ಬಹಳಷ್ಟು ಕಲಿಸಿದ್ದವು. ಮಾಸ್ಕೊ ನಗರದಂತ ಸಭ್ಯ ಜನರೊಡನೆ ಮೊದ ಮೊದಲು ಶುರುವಾಗುವ ಸಂಬಂಧಗಳು ಮೇಲ್ನೋಟಕ್ಕೆ ತಮಾಷಿ ಎನಿಸಿದರೂ ನಂತರ ಜಟಿಲ ಸಮಸ್ಯೆಗಳಾಗಿ ಪರಿವರ್ತನೆಗೊಂಡು ಹೊರಬರುವುದೇ ದೊಡ್ಡ ಸಮಸ್ಯೆಯಾಗಿಬಿಡುತ್ತಿತ್ತು…

ಆದರೆ, ಮತ್ತೊಂದು ಆಸಕ್ತಿ ಕುದುರಿಸುವ ಹೆಣ್ಣು ದೃಷ್ಟಿಗೆ ಬಿದ್ದಾಗ ಅವನಿಗೆ ಹಳೆಯ ಅನುಭವಗಳು ಮರೆತು ಹೋಗಿಬಿಡುತ್ತಿದ್ದವು. ಅವನು ಮತ್ತೊಂದು ಸುತ್ತು ಅನುಭವಕ್ಕೆ ತಯಾರಾಗುತ್ತಿದ್ದ.

ಅವನೊಂದು ದಿನ ಪಾರ್ಕಿನಲ್ಲಿ ಕುಳಿತುಕೊಂಡು ಊಟ ಮಾಡುತ್ತಿದ್ದ. ಅಷ್ಟರಲ್ಲಿ ಅಲ್ಲಿಗೆ ನಾಯಿಯೊಡತಿ, ಟೊಪ್ಪಿಗೆಯ ಹೆಣ್ಣುಮಗಳ ಆಗಮನವಾಯಿತು. ಅವಳು ಖಾಲಿ ಬಿದ್ದಿದ್ದ ಅವನ ಸನಿಹದ ಮೇಜಿನ ಮೇಲೆ ಕುಳಿತುಕೊಂಡಳು. ಅವಳನ್ನು, ಅವಳ ಮೇಕಪ್, ಡ್ರೆಸ್, ನಡಿಗೆ ಇತ್ಯಾದಿ ಗಮನಿಸಿದ ಅವನಿಗೆ ಅವಳು ಒಳ್ಳೆಯ ಮನೆತನದ ಗೌರವಾನ್ವಿತ ವಿವಾಹಿತ ಹೆಣ್ಣುಮಗಳಂತೆ ಕಂಡಳು. ಅಷ್ಟೇ ಅಲ್ಲದೆ, ಅವಳು ಯಾಲ್ಟಾಗೆ ಮೊಟ್ಟ ಮೊದಲ ಭಾರಿ ಬಂದಿದ್ದಾಳೆ ಮತ್ತು ಆಕೆ ಅಷ್ಟೊಂದು ಖುಷಿಯಾಗಿಲ್ಲವೆನ್ನುವುದು ಅವನಿಗೆ ಗೊತ್ತಾಯಿತು.

ಯಾಲ್ಟಾದಂತ ಊರುಗಳ ನೈತಿಕ ಸ್ವೇಚ್ಚಾಚಾರ ಕುರಿತು ಬಹಳಷ್ಟು ಕತೆಗಳು ಪ್ರಚಲಿತದಲ್ಲಿದ್ದವು. ಆದರೆ, ಅವು ಎಲ್ಲವೂ ನಂಬಲನರ್ಹವೆಂದು ಅವನು ಭಾವಿಸಿದ್ದ ಮತ್ತು ಆ ಕುರಿತು ಅವನು ಅಸಹ್ಯ ಪಟ್ಟಿದ್ದ. ಇಂತಹ ಕತೆಗಳನ್ನು ಬಹಶಃ ಈ ಸ್ವೇಚ್ಛಾಚಾರದಲ್ಲಿ ಭಾಗಿಯಾಗಲು ಇಷ್ಟಪಡುವವರು ಹುಟ್ಟಿಸಿದ್ದು ಎಂದು ಅವನು ನಂಬಿದ್ದ. ಆದರೆ, ಆ ಹೆಣ್ಣುಮಗಳು ಅವನ ಸನಿಹದ ಮೇಜಿನ ಮೇಲೆ ಕುಳಿತುಕೊಂಡಾಗ ಅವನ ಮನಸ್ಸಿನಲ್ಲಿ ಮಾತ್ರ ಸುಲಭಕ್ಕೆ ಕೈಗೆ ಸಿಗುವ, ಬೆಟ್ಟ ಗುಡ್ಡಗಳಲ್ಲಿ ಜೊತೆ ಓಡಾಟ, ಹೆಸರು, ಗುರುತು ಪರಿಚಯವಿಲ್ಲದ ಹೆಣ್ಣುಮಗಳೊಂದಿಗೆ ಕ್ಷಣಿಕ ರೋಮ್ಯಾನ್ಸ್ ಆಸೆ ಅವನನ್ನು ಆವರಿಸಿಕೊಂಡುಬಿಟ್ಟಿತ್ತು. ಅವನು ಆ ಹೆಣ್ಣುಮಗಳ ಪೊಮೇರಿಯನ್ ನಾಯಿಯನ್ನು ಹತ್ತಿರಕ್ಕೆ ಕರೆದ. ಅದು ಬಂದಾಗ ತನ್ನ ಬೆರಳನ್ನು ಅದರ ಮುಂದೆ ಅಲ್ಲಾಡಿಸಿದ. ಅದು ಬೊಗಳ ತೊಡಗಿತು. ಗುರೊವ್ ಮತ್ತೊಮ್ಮೆ ತನ್ನ ಬೆರಳನ್ನು ಅದರ ಮುಂದೆ ಅಲ್ಲಾಡಿಸಿದ. ಆ ಹೆಣ್ಣುಮಗಳು ಇವನ ಕಡೆಗೊಮ್ಮೆ ನೋಡಿ ತಕ್ಷಣ ದೃಷ್ಟಿ ಬದಲಾಯಿಸಿದಳು.

“ಅವನು ಕಚ್ಚುವುದಿಲ್ಲ.” ಇಷ್ಟು ಹೇಳಬೇಕಾದರೆ, ಅವಳ ಮುಖ ಕೆಂಪೇರಿತು.

“ನಾನು ಅವನಿಗೊಂದು ಮೂಳೆ ಕೊಡಬಹುದೇ?” ಅವನು ಕೇಳಿದ.

ಅವಳು ಆಗಬಹುದೆನ್ನುವಂತೆ ತಲೆ ಅಲ್ಲಾಡಿಸಿದಾಗ ಅವನು ಸೌಜನ್ಯದಿಂದ, “ನೀವು ಯಾಲ್ಟಾದಲ್ಲಿ ಎಷ್ಟು ದಿನಗಳಿಂದ ಇದ್ದೀರಿ?” ಎಂದ.

“ಐದು ದಿನಗಳು.”

“ಒಹ್! ನಾನು ಹದಿನೈದು ದಿನಗಳಿಂದ ಇಲ್ಲಿ ಹಗಲು ರಾತ್ರಿ ನೂಕುತ್ತಿದ್ದೇನೆ.”

ಅವರ ಮಧ್ಯೆ ಕ್ಷಣಿಕ ಹೊತ್ತು ಮೌನ ನೆಲೆಸಿತು.

“ಇಲ್ಲಿ ವೇಳೆ ಸರಿಯುವುದೇ ಗೊತ್ತಾಗುವುದಿಲ್ಲ. ಆದರೂ, ಇದೊಂದು ನೀರಸ ಊರು ಎನ್ನಬಹುದು.” ಅವನ ಕಡೆ ನೋಡದೆಯೇ ಅವಳು ಹೇಳಿದಳು.

“ನೀರಸ ಅಂತ ಹೇಳುವುದು ಒಂದು ನಮೂನೆಯ ಪ್ಯಾಶನ್ ಆಗಿಬಿಟ್ಟಿದೆ. ಬೆಲ್ಯೊವ್ ಅಥವಾ ಝಿದ್ರಾದಂತ ಸಣ್ಣ ಊರುಗಳಿಂದ ಇಲ್ಲಿಗೆ ಬಂದವರು ತಮ್ಮ ಊರೇ ಚೆನ್ನ, ಯಾಲ್ಟಾದಲ್ಲಿ ಬರೀ ಧೂಳು, ನೀರಸವೆಂದು ಮೂಗು ಮುರಿಯುತ್ತಾರೆ! ಇದನ್ನು ಕೇಳಿಸಿಕೊಂಡವರು ಅವರು ಬಹುಶಃ ಗ್ರೆನಡಾದಿಂದ ಬಂದವರೆಂದು ಭಾವಿಸಬೇಕು!”

ಅವಳು ನಗಾಡಿದಳು.

ಮುಂದೆ ಅವರ ಮಧ್ಯೆ ಮಾತು ನಡೆಯಲಿಲ್ಲ. ಇಬ್ಬರೂ, ಅಪರಿಚಿತರಂತೆ ಮೌನವಾಗಿ ಊಟಮಾಡತೊಡಗಿದರು. ಊಟದ ನಂತರ ಇಬ್ಬರೂ ಜೊತೆಜೊತೆಯಾಗಿಯೇ ನಡೆಯತೊಡಗಿದರು. ಅವರ ಮಧ್ಯೆ, ಎಲ್ಲಿಗೆ ಹೋಗಬೇಕು ಎಂಬ ಯಾವುದೇ ಒತ್ತಡವಿಲ್ಲದ ಮುಕ್ತವಾದ ಸಂಭಾಷಣೆ ನಡೆಯತೊಡಗಿತು. ಅವರು ಹಾಗೆಯೇ ಮಾತನಾಡುತ್ತಾ, ಮಾತನಾಡುತ್ತಾ ಮುಂದೆ ನಡೆದರು. ಸಮುದ್ರದ ಮೇಲೆ ಒಂದು ವಿಚಿತ್ರ ಬೆಳಕನ್ನು ಕಂಡು ಆಶ್ಚರ್ಯಪಟ್ಟರು. ಇನ್ನೂ ಕೂಡ ಹಗಲಿನಂತೆಯೇ ಸೆಖೆ ಇದೆಯಲ್ಲ ಎಂದು ಆಶ್ಚರ್ಯಪಟ್ಟರು.

ಗುರೊವ್ ತನ್ನ ಬಗ್ಗೆ ಮಾತನಾಡತೊಗಿದ… ಅವನು ಹುಟ್ಟಿದ್ದು ಮಾಸ್ಕೊದಲ್ಲಿ. ಕಲಾ ಪದವೀಧರನಾಗಿದ್ದರೂ ಬ್ಯಾಂಕ್ ನೌಕರಿ ಮಾಡುತ್ತಿದ್ದ. ಒಪೆರಾ ಗಾಯಕನಾಗಿ ಟ್ರೇನಿಂಗ್ ಪಡೆದುಕೊಂಡಿದ್ದರೂ ಅದನ್ನು ಮುಂದುವರಿಸಲಿಲ್ಲ. ಅವನಿಗೆ ಮಾಸ್ಕೊದಲ್ಲಿ ಎರಡು ಮನೆಗಳಿದ್ದವು… ಆಕೆಯ ಬಗ್ಗೆ ಅವನು ತಿಳಿದುಕೊಂಡಿದ್ದು ಏನೆಂದರೆ, ಅವಳು ಬೆಳೆದಿದ್ದು ಪೀಟರ್ಸ್‌‍ಬರ್ಗಿನಲ್ಲಿ. ಆದರೆ, ಎರಡು ವರ್ಷಗಳ ನಂತರ ಮದುವೆಯಾದ ಮೇಲೆ ಅವಳು ಗಂಡನೊಂದಿಗೆ, …….. ಊರಿನಲ್ಲಿ ವಾಸಿಸುತ್ತಿದ್ದಳು. ಅವರು ಒಂದು ತಿಂಗಳು ಯಾಲ್ಟಾದಲ್ಲಿ ನೆಲೆಸಲು ತೀರ್ಮಾನಿಸಿದ್ದು, ಅವಳ ಗಂಡ ಕೂಡ ರಜೆಯನ್ನು ಪಡೆಯಲು ಹಾತೊರೆಯುತ್ತಿದ್ದು, ಯಾವ ಗಳಿಗೆಯಲ್ಲೂ ಇಲ್ಲಿಗೆ ಬರಬಹುದು ಎಂದು ಹೇಳಿದಳು. ಅವಳಿಗೆ ತನ್ನ ಗಂಡ ಕೆಲಸ ಮಾಡುತ್ತಿರುವುದು ಕೇಂದ್ರ ಆಡಳಿತಕಚೇರಿಯಲ್ಲೋ ಇಲ್ಲ ಪ್ರಾಂತೀಯ ಆಡಳಿತ ಕಚೇರಿಯಲ್ಲೋ ಎಂದು ಗೊತ್ತಿಲ್ಲವೆಂದು ಹೇಳಿ ತನ್ನ ಅಜ್ಞಾನಕ್ಕೆ ತಾನೇ ನಕ್ಕಳು. ಅವಳ ಹೆಸರು ಆನ್ನಾ ಸರ್ಗೆಯೆವ್ನಾ ಎಂದು ಗುರೊವಾನಿಗೆ ಗೊತ್ತಾಯಿತು. ತನ್ನ ಹೋಟೆಲ್ ರೂಮು ತಲುಪುತ್ತಲೇ ಗುರೊವ್ ಅವಳ ಬಗ್ಗೆ ಯೋಚಿಸತೊಡಗಿದ. ನಾಳೆ ಕೂಡ ಆಕೆ ತನಗೆ ಭೆಟ್ಟಿಯಾಗುತ್ತಾಳೆಂದು ಅವನಿಗೆ ಮನವರಿಕೆಯಾಯಿತು. ಅದು ಆಗಲೇ ಬೇಕಿತ್ತು.

ಅವನಿಗೆ ತನ್ನ ಮಗಳ ಜ್ಞಾಪಕ ಬಂದಿತು. ಕೆಲವು ವರ್ಷಗಳ ಹಿಂದೆ ಇವಳೂ ಕೂಡ ಅವಳಂತೆಯೇ ವಿದ್ಯಾಭ್ಯಾಸದಲ್ಲಿ ತೊಡಗಿರುತ್ತಿದ್ದಳು. ಅದೇ, ಅಪರಿಚಿತರೊಂದಿಗೆ ಮಾತನಾಡುವಾಗ ಎದ್ದು ಕಾಣುವ ಆತ್ಮವಿಶ್ವಾಸದ ಕೊರತೆಯ ನಗು. ಜೀವನದಲ್ಲಿ ಇದೇ ಮೊಟ್ಟ ಮೊದಲ ಭಾರಿ ಎನಿಸುತ್ತದೆ ಅವಳು ಇಂತಾ ಒಂದು ಪರಿಸರದಲ್ಲಿ ಒಂಟಿಯಾಗಿ ತಿರುಗಾಡುತ್ತಿರುವುದು! ಅಪರಿಚಿತನೊಬ್ಬ ಒಳ ಉದ್ದೇಶವನ್ನಿಟ್ಟುಕೊಂಡು ಅವಳನ್ನು ಹಿಂಬಾಲಿಸುವುದು, ಗಮನಿಸುತ್ತಿರುವುದು, ಮಾತನಾಡಿಸುತ್ತಿರುವ ಉದ್ದೇಶ ಅರ್ಥವಾಗದಷ್ಟು ಆಕೆ ಖಂಡಿತವಾಗಿಯೂ ಅಮಾಯಿಕೆಯಾಗಿರಲಾರಳು.

ಅವನು ಮನಸ್ಸಿನಲ್ಲೇ ಅವಳನ್ನು ಕಲ್ಪಿಸಿಕೊಳ್ಳತೊಡಗಿದ. ಅವಳ ಸಪೂರ ನಾಜೂಕು ಕುತ್ತಿಗೆ, ಬೂದುಬಣ್ಣದ ಸುಂದರ ಕಣ್ಣುಗಳು… ಅವಳೊಳಗೆ ಏನೋ ದಯನೀಯ ನೋವು ಅಡಗಿರುವಂತೆ ಭಾಸವಾಗುತ್ತಿದೆ… ಎನ್ನುತ್ತಾ ಅವನು ನಿದ್ದೆ ಹೋದ.

***

ಅವರು ಭೆಟ್ಟಿಯಾಗಿ ಒಂದು ವಾರ ಕಳೆದಿತ್ತು. ಅದೊಂದು ರಜಾ ದಿನ. ಒಳಗೆ ಧಗೆಯಾಗುತ್ತಲಿತ್ತು. ಹೊರಗೆ ಬೀದಿಗಳಲ್ಲಿ ಗಾಳಿ ಗಿರಕಿ ಹೊಡೆಯುತ್ತಾ ಜನರ ಟೊಪ್ಪಿಗೆಗಳನ್ನು ಹಾರಿಸುತ್ತಾ ಕೇಕೆ ಹಾಕುತ್ತಿತ್ತು. ತುಂಬಾ ಬಾಯಾರಿಕೆಯಾಗುತ್ತಿತ್ತು. ಅವನು ಆನ್ನಾಳ ಹೋಟೆಲ್ ಬಳಿಗೆ ಹೋಗಿ ತಂಪು ಪಾನಿಯ ಕುಡಿಯೋಣವೆಂದು ಕರೆದುಕೊಂಡು ಬಂದ.

ಸಂಜೆ, ಗಾಳಿಯ ಆರ್ಭಟ ಕಡಿಮೆಯಾದ ಮೇಲೆ ಅವರು ಸಮುದ್ರ ತಟಕ್ಕೆ ತಿರುಗಾಡಲು ಹೊರಟರು. ಆಗಷ್ಟೇ ಒಂದು ಉಗಿಹಡಗು ಒಳಬರುತ್ತಿತ್ತು. ಅಲ್ಲಿ ಬಹಳಷ್ಟು ಜನರು ನೆರೆದಿದ್ದರು. ಅವರು ಯಾರನ್ನೋ ಸ್ವಾಗತಿಸಲು ಕೈಯಲ್ಲಿ ಬೊಕೆಗಳನ್ನು ಹಿಡಿದು ಅಲ್ಲಿ ಇಲ್ಲಿ ಓಡಾಡುತ್ತಿದ್ದರು. ಸಮುದ್ರ ಅಂದು ಬಹಳ ಒರಟಾಗಿದ್ದರಿಂದ ಹಡಗು ಕಟ್ಟೆಗೆ ಬರಲು ತಡವಾಗಿತ್ತು. ಸೂರ್ಯ ಅಷ್ಟರಲ್ಲಿ ಮುಳುಗಿದ್ದ. ಆನ್ನಾ ಕೈಯಲ್ಲಿಡಿದು ನೋಡುವ ಕನ್ನಡಕದಿಂದ ಯಾರನ್ನೋ ನಿರೀಕ್ಷಿಸುತ್ತಿರುವಂತೆ ಹಡಗನ್ನು ನೋಡತೊಡಗಿದಳು. ಅವಳು ಗುರೊವ್ ಕಡೆಗೆ ತಿರುಗಿದಾಗ ಅವಳ ಕಣ್ಣುಗಳು ಹೊಳೆಯುತ್ತಿದ್ದವು. ನಂತರ ಅವಳು, ಒಂದಕ್ಕೊಂದು ಸಂಬಂಧವಿಲ್ಲದಂತೆ ಏನೆಲ್ಲಾ ಮಾತನಾಡತೊಡಗಿದಳು. ಮಾತನಾಡುತ್ತಾ ಆ ಗುಂಪಿನಲ್ಲಿ ತನ್ನ ಕೈ ಕನ್ನಡಕವನ್ನು ಕಳೆದುಕೊಂಡಳು.

ಗುಂಪು ಸೇರಿದ್ದ ಜನ ಚದುರಿದರು. ಒಬ್ಬರ ಮುಖ ಒಬ್ಬರು ನೋಡಲಾಗದಷ್ಟು ಕತ್ತಲಾಗಿತ್ತು. ಗಾಳಿ ಸಂಪೂರ್ಣವಾಗಿ ನಿಂತಿತ್ತು. ಗುರೊವ್ ಮತ್ತು ಆನ್ನಾ ಇಬ್ಬರೂ ಇನ್ನೂ ಅಲ್ಲೇ, ಹಡಗಿನಿಂದಯಾರೋಬರುವವರಿದ್ದಾರೆಂಬಂತೆ ಅಲ್ಲೇ ನಿಂತಿದ್ದರು. ಆನ್ನಾ ಸರ್ಗೆಯೆವ್ನಾ ಈಗ ಮೌನವಾಗಿದ್ದಳು.

“ಇವತ್ತಿನ ಸಂಜೆ ಹವಾಮಾನ ಚೆನ್ನಾಗಿದೆ. ಇವತ್ತು ಎಲ್ಲಿಗಾದರೂ ಹೋಗೋಣವೇ?” ಗುರೊವ್ ಕೇಳಿದ.

ಅವಳು ಮಾತನಾಡಲಿಲ್ಲ. ಅವನು ಕೆಲಸಮಯ ಅವಳನ್ನೇ ಎವೆಯಿಕ್ಕದೆ ನೋಡುತ್ತಾ ಒಂದು ಕೈಯಿಂದ ಅವಳನ್ನು ಬಳಸಿ ಅವಳ ತುಟಿಗಳನ್ನು ಚುಂಬಿಸಿ, ತಕ್ಷಣ ತನ್ನ ಸುತ್ತ, ಯಾರಾದರೂ ನೋಡಿದರೇ ಎನ್ನುವ ಗಾಬರಿಯಲ್ಲಿ ನೋಡಿದ.

“ನಾವು ನಿನ್ನ ಹೋಟೆಲಿಗೆ ಹೋಗೋಣ?” ಅವನು ಮೆದುವಾಗಿ ಹೇಳಿದ.

ಇಬ್ಬರೂ, ತ್ವರಿತ ಹೆಜ್ಜೆಗಳನ್ನು ಹಾಕುತ್ತಾ ನಡೆದರು.

ಅವಳ ಹೋಟೆಲ್ ಹತ್ತಿರದಲ್ಲೇ ಇತ್ತು. ಅವಳ ರೂಮು ಅವಳುಕೊಂಡಿದ್ದ ಜಪಾನೀ ಸುಗಂಧದ ಪರಿಮಳ ಬೀರುತ್ತಿತ್ತು.ಗುರೊವ್ ಅವಳನ್ನು ನೋಡುತ್ತಾ ಮನಸ್ಸಿನಲ್ಲೇ ಅಂದುಕೊಂಡ: “ಈ ಜಗತ್ತಿನಲ್ಲಿ ಎಂತೆಂಥಾ ಜನರನ್ನು ಕಾಣುತ್ತೇವೆ!” ಅವನೊಳಗೆ ಹಿಂದಿನ ನೆನಪುಗಳು ನುಗ್ಗಿ ಬಂದವು: ಪ್ರೀತಿ, ಪ್ರೇಮವೆಂಬ ಯಾವುದೇ ಕಟ್ಟು ಪಾಡು, ಬಂಧನದಿಂದ ಮುಕ್ತರಾಗಿ ಅವನನ್ನು ಪ್ರೀತಿಸಿ, ಆ ಗಳಿಗೆಯ ಸುಖ ಉಣಿಸಿದ್ದಕ್ಕಾಗಿ ಋಣಿಯಾದ ಅದೆಷ್ಟೋ ಹೆಣ್ಣುಗಳು! ಅವನ ಹೆಂಡತಿಯಂತೆ, ಯಾವುದೇ ಭಾವನೆಗಳು ಇಲ್ಲದೆ! ಅದು ಭಾವನೆಗಳಿಗೂ ಮೀರಿದ್ದು. ಎರಡು ಮೂವರು ಸುಂದರ ಹೆಣ್ಣುಮಕ್ಕಳ ಕಣ್ಣುಗಳಲ್ಲಂತೂ, ಬದುಕು ಕೊಡುವುದಕ್ಕಿನ್ನ ಹೆಚ್ಚಿನದನ್ನು ಬಾಚಿಕೊಳ್ಳಬೇಕೆನ್ನುವ ಉತ್ಕಟ ದುರಾಸೆ ಕಂಡು ಅವನು ಅವಕ್ಕಾಗಿದ್ದ. ಅವರ ಕಡೆಗಿನ ತುಡಿತ ಇಳಿದಾಗ ಗುರೊವ್‌ನಿಗೆ ಅವರ ಸೌಂದರ್ಯ ದ್ವೇಷದಲ್ಲಿ ಬದಲಾಗುತ್ತಿತ್ತು. ಅವರು ಧರಿಸಿದ್ದ ಪೋಷಾಕಿನ ಮೇಲಿನ ವಿವಿಧ ಕಸೂತಿಯ ಚಿತ್ತಾರ ಅವನಿಗೆ ಹಾವಿನ ಪೊರೆಯಂತೆ ಕಾಣಿಸುತ್ತಿತ್ತು. ಆದರೆ,ಆನ್ನಾ ಸರ್ಗೆಯೆವ್ನಾಳನ್ನು ಯಾವ ರೀತಿ ಅರ್ಥ ಮಾಡಿಕೊಳ್ಳುವುದೆಂದು ಅವನಿಗೆ ತಿಳಿಯಲಿಲ್ಲ. ಅನನುಭವದ ಅಧೀರತೆ ಸೂಸುತ್ತಿರುವ ಅವಳ ಯೌವನ, ಮುಖದ ಮೇಲೆ, ಯಾರೋ ಅನೀರಿಕ್ಷಿತವಾಗಿ ಬಾಗಿಲು ತಟ್ಟುತ್ತಿರುವಾಗ ಉಂಟಾಗುವ ದಿಗ್ಭ್ರಮೆಯ ಮುಖಭಾವ ಅವನು ಗಮನಿಸದಿರಲಿಲ್ಲ. ಅವಳ ಮನೋಭಾವ ಗೊಂದಲಮಯವಾಗಿ ಕಾಣಿಸುತ್ತಿತ್ತು. ಅವಳ ಮುಖ ಇಳಿಬಿದ್ದು ಬಿಳುಚಿಕೊಂಡಿತ್ತು. ಅವಳ ಕೇಶರಾಶಿ ಕೂಡ, ಎರಡೂ ಬದಿಯಲ್ಲಿ, ಶೋಕದಲ್ಲಿರುವಂತೆ ಇಳಿಬಿದ್ದಿತ್ತು. ಅವಳು ಹಳೆಯ ಕಾಲದ ಅಡ್ಡ ದಾರಿ ಹಿಡಿದು ಪಶ್ಚಾತ್ತಾಪ ಪಡುತ್ತಿರುವ ದುಃಖತಪ್ತ ಹೆಣ್ಣಿನ ಚಿತ್ರದಂತೆ ಕಾಣಿಸುತ್ತಿದ್ದಳು.

“ಇದು ಸರಿಯಲ್ಲ.” ಅವಳು ಹೇಳಿದಳು, “ನಂತರ ನನ್ನನ್ನು ತುಚ್ಛವಾಗಿ ನೋಡುವವರಲ್ಲಿ ನೀನೇ ಮೊದಲಿಗನಾಗಿರುತ್ತಿ.”

ಮೇಜಿನ ಮೇಲೊಂದು ಕಲ್ಲಂಗಡಿ ಹಣ್ಣು ಇತ್ತು. ಗುರೊವ್ ಒಂದು ತುಂಡನ್ನು ಕತ್ತರಿಸಿ ಯಾವುದೇ ಅವಸರವಿಲ್ಲದೆ ತಿನ್ನತೊಡಗಿದ. ಮುಂದಿನ ಅರ್ಧ ತಾಸು ಅವರ ಮಧ್ಯೆ ಮೌನ ಕವಿಯಿತು. ಆನ್ನಾ ನಿಜಕ್ಕೂ, ಈಗಷ್ಟೇ ಜೀವನವೆಂದರೇನೆಂದು ಕಂಡುಕೊಳ್ಳುತ್ತಿದ್ದ ಮುಗ್ಧ, ಸರಳ ಹೆಣ್ಣುಮಗಳಾಗಿದ್ದಳು. ಮೇಜಿನ ಮೇಲೆ ಉರಿಯುತ್ತಿದ್ದ ಒಂಟಿ ಮೇಣದ ಬತ್ತಿ ಅವಳ ಮುಖದ ಮೇಲೆ ಅಸ್ಪಷ್ಟ ಬೆಳಕನ್ನು ಚೆಲ್ಲಿತ್ತು. ಆ ಮುಖದ ಮೇಲೆ ಸಂತೋಷ ಕಾಣಿಸುತ್ತಿರಲಿಲ್ಲ.

“ನಾನು ನಿನ್ನನ್ನು ಹೇಗೆ ತುಚ್ಛವಾಗಿ ಕಾಣಲಿ?” ಗುರೊವ್ ಕೇಳಿದ. “ನೀನು ಏನು ಮಾತನಾಡುತ್ತಿರುವಿ ಎಂದು ನಿನಗೇ ಗೊತ್ತಿಲ್ಲ.”

“ದೇವರೇ, ನನ್ನನ್ನು ಕ್ಷಮಿಸು.” ಅವಳ ಕಣ್ಣಾಲಿಗಳು ತುಂಬಿದವು. “ನಿಜಕ್ಕೂ ಇದು ಕೆಟ್ಟದು.”

“ನೀನು ಕ್ಷಮೆ ಕೇಳುತ್ತಿದ್ದೀಯ!”

“ಕ್ಷಮೆ? ಇಲ್ಲ. ನಾನು ನೀತಿಗೆಟ್ಟವಳು. ಕುಲಟೆ. ನಾನು ನನ್ನನ್ನೇ ದ್ವೇಷಿಸುತ್ತಿದ್ದೇನೆ. ಯಾವುದೇ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿಲ್ಲ. ನಾನು ನನ್ನ ಗಂಡನನ್ನು ಮೋಸಗೊಳಿಸುತ್ತಿಲ್ಲ. ನನ್ನನ್ನೇ ಮೋಸಗೊಳಿಸುತ್ತಿದ್ದೇನೆ. ಈಗಷ್ಟೇ ಅಲ್ಲ. ನಾನು ಯಾವತ್ತಿಂದಲೋ ನನಗೇ ಮೋಸ ಮಾಡುತ್ತಿದ್ದೇನೆ. ನನ್ನ ಗಂಡ ಒಳ್ಳೆಯನಾಗಿರಬಹುದು, ಪ್ರಾಮಾಣಿಕನಾಗಿರಬಹುದು. ಆದರೆ,ಏನಕ್ಕೂ ಪ್ರಯೋಜನವಿಲ್ಲದವನು. ಅವನು ಏನು ಕೆಲಸ ಮಾಡುತ್ತಿದ್ದಾನೆಂದು ನನಗೆ ಗೊತ್ತಿಲ್ಲ. ಆದರೂ, ಅವನು ಪ್ರಯೋಜನವಿಲ್ಲದವನು. ಅವನೊಂದಿಗೆ ಮದುವೆಯಾದಾಗ ನನಗೆ ಇಪ್ಪತ್ತು ವರ್ಷ ವಯಸ್ಸು. ಅವನು ಏನು ಮಾಡುತ್ತಿದ್ದಾನೆಂಬ ಕುತೂಹಲದಿಂದ ನಾನು ಸಾಯುತ್ತಿದ್ದೇನೆ. ಯಾಕೋ ನನಗೆ ನನ್ನ ಜೀವನದ ಬಗ್ಗೆ ತೃಪ್ತಿ ಇಲ್ಲ. ‘ಜೀವನ ಬೇರೆ ರೀತಿಯಲ್ಲೂ ಇರಬಹುದೇನೋ ಎಂಬ ಕಾತರದಿಂದ ನಾನು ಕಾಯುತ್ತಿದ್ದೇನೆ. ನಾನು ಬದುಕಬೇಕು, ಬದುಕಬೇಕು, ಬದುಕಬೇಕು. ನಾನು ಕುತೂಹಲದಿಂದ ದಹದಹಿಸುತ್ತಿದ್ದೇನೆ ಅದು ನಿನಗೆ ಅರ್ಥವಾಗುವುದಿಲ್ಲ… ನಾನು ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ, ನನಗೇ ನನ್ನನ್ನು ಸಂಭಾಳಿಸಿಲಾಗುತ್ತಿಲ್ಲ. ನನಗೆ ಏನೋ ಆಗಿದೆ. ನನಗೆ ತಡೆಯುವದಕ್ಕಾಗುತ್ತಿಲ್ಲ.’ ನಾನು ನನ್ನ ಗಂಡನಿಗೆ ಮೈ ಹುಷಾರಿಲ್ಲವೆಂದು ಹೇಳಿ ಇಲ್ಲಿಗೆ ಬಂದೆ… ಮತಿಗೆಟ್ಟವಳಂತೆ ಇಲ್ಲಿಯ ಬೀದಿಗಳನ್ನು ಸುತ್ತಾಡುತ್ತಿದ್ದೇನೆ… ಈಗಂತೂ ನಾನು ನೈತಿಕವಾಗಿ ಎಷ್ಟೊಂದು ಹೊಲಸಾಗಿದ್ದೇನೆಂದರೆ ಯಾರೂ ನನ್ನನ್ನು ಒಳ್ಳೆಯವಳೆನ್ನುವುದಿಲ್ಲ…” ಅವಳನ್ನು ಕೇಳುತ್ತಾ, ಕೇಳುತ್ತಾ ಗೊರೊವಾನ ತಲೆ ಬಿಸಿಯಾಗತೊಡಗಿತು. ಅವಳ ಹಠಾತ್ ವಾಕ್ ಪ್ರವಾಹ ಅವನಿಗೆ ಕಿರಿಕಿರಿ ಎನಿಸತೊಡಗಿತು. ಅವಳ ಕಣ್ಣಾಲಿಗಳು ತುಂಬಿರದಿದ್ದರೆ ಅವಳು ನಾಟಕವೋ ತಮಾಷೆಯೋ ಮಾಡುತ್ತಿದ್ದಾಳೆ ಎನ್ನಬಹುದಿತ್ತು.

“ನಿನಗೆ ನಿಜಕ್ಕೂ ಏನು ಬೇಕಾಗಿದೆ? ನನಗೆ ಒಂದೂ ಅರ್ಥವಾಗುತ್ತಿಲ್ಲ!” ಅವನು ಬಹಳ ಮೆದುವಾಗಿ ಕೇಳಿದ.

ಅವಳು ತನ್ನ ಮುಖವನ್ನು ಅವನ ಎದೆಯಲ್ಲಿ ಹುದುಗಿಸಿದಳು.

“ದಯವಿಟ್ಟು ನನ್ನನ್ನು ನಂಬಿ. ನಿಮ್ಮ ಬಳಿ ಕೇಳಿಕೊಳ್ಳುವುದೇನೆಂದರೆ ನಾನು ಅಪ್ಪಟ ಪ್ರಾಮಾಣಿಕ ಬದುಕನ್ನು ಬಯಸುತ್ತೇನೆ. ಪಾಪವನ್ನು ದ್ವೇಷಿಸುತ್ತೇನೆ. ನಾನು ಏನು ಮಾಡುತ್ತಿದ್ದೇನೆಂದು ನನಗೇ ಅರ್ಥವಾಗುತ್ತಿಲ್ಲ. ಜನ ಸಾಮಾನ್ಯರು, ನಾನು ಸೈತಾನ ಜಾಲಕ್ಕೆ ಸಿಕ್ಕು ಬಿದ್ದಿದ್ದೇನೆಂದು ಹೇಳುತ್ತಾರೆ. ನನಗೂ ಹಾಗೇ ಅನಿಸುತ್ತಿದೆ.”

“ಶ್ಶ್…ಶ್ಶ್…” ಗೊರೊವ್ ಅವಳನು ಸುಮ್ಮನಾಗಿಸಿದ. ಅವಳ ಭೀತಿ ತುಂಬಿದ ಕಣ್ಣುಗಳನ್ನು ಮೃದುವಾಗಿ, ವಾತ್ಸಲ್ಯದಿಂದ ಚುಂಬಿಸಿದ. ಕ್ರಮೇಣ ಅವಳು ಹಂತ ಹಂತವಾಗಿ ಮೊದಲಿನಂತಾದಳು. ಈಗ ಇಬ್ಬರೂ ಮುಕ್ತವಾಗಿ ನಗತೊಡಗಿದರು. ನಂತರ ಅವರು ಸಮುದ್ರ ತೀರಕ್ಕೆ ನಡೆದರು. ಅಲ್ಲಿ ಒಂದು ನರ ಪಿಳ್ಳೆಯೂ ಅವರಿಗೆ ಕಾಣಿಸಲಿಲ್ಲ. ನಗರದ ತುಂಬಾ ಹರಡಿದ್ದ ಸೈಪ್ರಸ್ ಮರಗಳ ಮಧ್ಯೆಯೂ ಗಾಳಿ ಸತ್ತಂತಿತ್ತು. ಅಲೆಗಳು ಗರ್ಜಿಸುತ್ತಾ ದಂಡೆಗೆ ಅಪ್ಪಳಿಸುತ್ತಿದ್ದವು. ಒಂದು ಒಂಟಿ ನಾವೆ ಸಮುದ್ರದ ಮೇಲೆ ಓಲಾಡುತ್ತಿತ್ತು. ಅದರೊಳಗಿನ ಲಾಂದ್ರವೊಂದು ಮಿಣುಕು ಬೆಳಕನ್ನು ಚೆಲ್ಲುವ ವೃಥಾ ಪ್ರಯಾಸಡುತ್ತಿತ್ತು.

ಅವರೊಂದು ಬಾಡಿಗೆ ಗಾಡಿ ಹಿಡಿದು ಓರಿಯಾಂಡಕ್ಕೆ ಹೋದರು. “ನಿನ್ನ ಹೋಟೆಲಿನ ರೂಮಿನ ಫಲಕದ ಮೇಲೆ ನಿಮ್ಮ ಸರ್‌ನೇಮ್ – ವೊನ್ ಡಿಡೆರಿಟ್ಸ್ ಎಂದಿತ್ತು,” ಗುರೊವ್ ಹೇಳಿದ. “ನಿನ್ನ ಗಂಡ ಜರ್ಮನನೇ?”

“ಇಲ್ಲ, ಅವನ ಅಜ್ಜ ಜರ್ಮನ್ ಮೂಲದವನಿರಬೇಕು. ನನ್ನ ಗಂಡ ರಶ್ಯಿಯನ್ನೇ.”

ಓರಿಯಾಂಡದಲ್ಲಿ ಅವರು ಒಂದು ಎತ್ತರದಲ್ಲಿದ್ದ ಚರ್ಚಿನ ಸನಿಹದಲ್ಲೇ ಕುಳಿತುಕೊಂಡು ಮೌನವಾಗಿ ಸಮುದ್ರವನ್ನು ನೋಡತೊಡಗಿದರು. ಮುಂಜಾನೆಯ ಮಂಜಿನಲ್ಲಿ ಯಾಲ್ಟಾ ಅವರಿಗೆ ಅಲ್ಲಿಂದ ಕಾಣಿಸುತ್ತಿರಲಿಲ್ಲ. ಪರ್ವತಾಗ್ರಗಳಲ್ಲಿ ಬೆಳ್ಳನೆಯ ಮೋಡಗಳು ನಿಶ್ಚಲವಾಗಿ ನಿಂತಿರುವಂತೆ ಕಾಣಿಸುತ್ತಿದ್ದವು. ಮರಗಳ ಮೇಲಿನ ಎಲೆಗಳು ನಿಶ್ಚಲವಾಗಿದ್ದವು, ಹುಲ್ಲು ಮಿಡತೆಗಳಕಲರವ ವಾತಾವರಣದಲ್ಲಿ ತುಂಬಿತ್ತು. ಕೆಳಗೆ, ಸಮುದ್ರದ ಏಕತಾನದ, ತಲೆ ಚಿಟ್ಟು ಹಿಡಿಸುವಂತ ಸದ್ದು ನಾವು ಭೂಮಿಯ ಮೇಲೆ ಇರಲಿ ಬಿಡಲಿ, ಯಾಲ್ಟಾ, ಓರಿಯಾಂಡ ಇರಲಿ ಬಿಡಲಿ ನಿರಂತರವಾಗಿರುತ್ತಿತ್ತು. ಸಾವು ಬದುಕಿನ ಹೊರತಾಗಿಯೂ ಈ ನಿರಂತತೆಯಲ್ಲಿ ನಮ್ಮ ವಿಮೋಚನೆ ಅಡಗಿರುವಂತೆ ಕಾಣಿಸುತ್ತದೆ. ಮುಂಜಾನೆಯ ಈ ಹೊತ್ತಿನಲ್ಲಿ, ಸುತ್ತಲಿನ ಸಮುದ್ರ, ಪರ್ವತಗಳು, ಮೋಡಗಳು, ತೆರೆದ ಆಕಾಶದೊಳಗೆ ಪರವಶಳಾಗಿರುವ ಒಂದು ಸುಂದರ ಹೆಣ್ಣುಮಗಳೊಂದಿಗೆ ಕುಳಿತುಕೊಂಡು, ಸುಮ್ಮನೆ ಯೋಚಿಸಿದಾಗ, ವಾಸ್ತವದಲ್ಲಿ ಈ ಪ್ರಪಂಚದಲ್ಲಿ ಎಲ್ಲವೂ ಎಷ್ಟೊಂದು ಸುಂದರ ಅನಿಸುತ್ತದೆ. ಆದರೆ, ನಾವು ಮಾನವರಾಗಿ ನಮ್ಮ ಘನತೆಯನ್ನು ಮರೆತಾಗ, ನಮ್ಮ ಜೀವನದ ಮಹತ್ತರ ಉದ್ದೇಶವನ್ನು ಮರೆತಾಗ ಇವೆಲ್ಲಾ ನಿಷ್ಪ್ರಯೋಜಕವಾಗುತ್ತವೆ.

ಯಾರೋ ಒಬ್ಬ ಅಪರಿಚಿತ ಅವರ ಕಡೆಗೆ ನಡೆದು ಬಂದ (ಬಹುಶಃ ಅಲ್ಲಿಯ ಕಾವಲುಗಾರನಿರಬೇಕು). ಅವರನ್ನು ಸ್ವಲ್ಪ ಹೊತ್ತು ತೀಕ್ಷ್ಣವಾಗಿ ನೋಡುತ್ತಾ ಅವನು ಏನೂ ಮಾತನಾಡದೆ ಮುಂದೆ ನಡೆದ. ಈ ಘಟನೆ ಕೂಡ ಗುರೊವಾನಿಗೆ ಒಂದು ಬಗೆಯ ನಿಗೂಢ ಹಾಗೂ ಸುಂದರವೆನಿಸಿತು.

ಅವರಿಗೆ ಅನತಿ ದೂರದಲ್ಲಿ ಥಿಯೋಡೋಸಿಯಾದಿಂದ ಒಂದು ಹಡಗು ಬರುತ್ತಿರುವುದು ಕಾಣಿಸಿತು. ಅದರ ದೀಪಗಳು ಅದರ ಸುತ್ತ ಬೆಳಕನ್ನು ಚೆಲ್ಲಿದ್ದವು.

ಬಹಳ ಹೊತ್ತಿನ ಮೌನದ ನಂತರ, “ಹುಲ್ಲಿನ ಮೇಲೆ ತುಂಬಾ ಮಂಜು ಬಿದ್ದಿದೆ!” ಎಂದು ಆನ್ನಾ ಸರ್ಗೆಯೆವ್ನಾ ಹೇಳಿದಳು.

“ಹೌದು ನಾವು ವಾಪಸ್ಸು ಹೋಗುವುದು ಒಳ್ಳೆಯದು,” ಗುರೊವ್ ಹೇಳಿದ.

ಅವರು ಪೇಟೆಗೆ ಹಿಂದಿರುಗಿದರು. ಪ್ರತಿದಿನ ಮಧ್ಯಾಹ್ನ ಹನ್ನೆರಡರ ಹೊತ್ತಿಗೆ ಅವರು ಸಮುದ್ರ ದಂಡೆಯ ಮೇಲೆ ಭೇಟಿಯಾಗುತ್ತಿದ್ದರು. ಮಧ್ಯಾಹ್ನದ ಊಟ, ರಾತ್ರಿಯ ಊಟ ಮುಗಿಸಿ, ಸಮುದ್ರವನ್ನು ಮೆಚ್ಚುತ್ತಾ ಬಹಳ ಹೊತ್ತು ತಿರುಗಾಡುತ್ತಿದ್ದರು. ಆನ್ನಾ, ದಿನಾಲೂ ತಾನು ರಾತ್ರಿ ಸರಿಯಾಗಿ ನಿದ್ದೆ ಮಾಡಲಿಲ್ಲವೆಂದು ಗೊಣಗುತ್ತಿದ್ದಳು. ಅವಳ ಎದೆ ಡವಗುಟುತ್ತಿತ್ತು; ಕೇಳಿದ ಪ್ರಶ್ನೆಗಳನ್ನೇ ಮತ್ತೆ ಮತ್ತೆ ಕೇಳುತ್ತಿದ್ದಳು. ಕೆಲವೊಮ್ಮೆ ಈರ್ಷೆಯಿಂದ, ಮತ್ತೊಮ್ಮೆ ಗಾಬರಿಯಿಂದ ಅವನು ತನಗೆ ಸರಿಯಾಗಿ ಗೌರವ ಕೊಡುತ್ತಿಲ್ಲವೆಂದು ದೂರುತ್ತಿದ್ದಳು. ಬಹಳಷ್ಟು ಭಾರಿ, ಪಾರ್ಕಿನಲ್ಲೋ, ಸಮುದ್ರ ತೀರದಲ್ಲೋ ತಮ್ಮನ್ನು ಯಾರೂ ಗಮನಿಸುತ್ತಿಲ್ಲವೆಂಬುದನ್ನು ಖಾತ್ರಿ ಪಡಿಸಿ ಗುರೊವ್ ಅವಳನ್ನು ಬರಸೆಳೆದು ಮುತ್ತಿಕ್ಕುತ್ತಿದ್ದನು.

ಏನೂ ಕೆಲಸವಿಲ್ಲದ ಆಲಸ್ಯ, ಹಾಡು ಹಗಲೇ ಯಾರಾದರೂ ನೋಡಿಯಾರು ಎಂದು ಕದ್ದು ನೀಡಿದ ಮುತ್ತುಗಳು, ಸೆಖೆ, ಕಡಲಿನ ಪರಿಮಳ, ಹಿಂದೆ ಮುಂದೆ ನಡೆಯುತ್ತಿರುವ ಜನ ಜಂಗುಳಿ ಅವನನ್ನು ಹೊಸ ಮನುಷ್ಯನನ್ನಾಗಿಸಿತ್ತು. ಅವನು ಆನ್ನಾಳಿಗೆ, “ನೀನು ತುಂಬಾ ಸುಂದರವಾಗಿ ಕಾಣಿಸುತ್ತೀಯ,” ಎಂದು ಪದೇ ಪದೇ ಹೇಳುತ್ತಿದ್ದ. ಅವನೋ, ಅವಳಿಗಿಂತ ಒಂದು ಹೆಜ್ಜೆಯನ್ನೂ ಮುಂದಡಿಯಿಡುತ್ತಿರಲಿಲ್ಲ. ಆದರೆ, ಅವಳು ಮಾತ್ರ ತುಂಬಾ ಚಿಂತಾಕ್ರಾಂತಳಾಗಿರುತ್ತಿದ್ದಳು. ಅವನಿಗೆ ಪದೇ, ಪದೇ,“ನಾನು ನಿನಗೆ ಕಿಂಚಿತ್ತೂ ಗೌರವ ಕೊಡುವುದಿಲ್ಲ, ಪ್ರೀತಿಸುತ್ತಲೂ ಇಲ್ಲ, ನೀನೊಬ್ಬಳು ಸಾಮಾನ್ಯ ಹೆಣ್ಣು…” ಎಂದು ಹೇಳುವಂತೆ ದುಂಬಾಲು ಬೀಳುತ್ತಿದ್ದಳು. ಅವರು ತಡವಾಗಿ ಓರಿಯಾಂಡಿಗೋ, ಅಥವಾ ಜಲಪಾತಕ್ಕೋ ಕುದುರೆ ಗಾಡಿಯಲ್ಲಿ ಹೊರಡುತ್ತಿದ್ದರು. ಆ ತಿರುಗಾಟ ಅವರಿಗೆ ತುಂಬಾ ಹಿಡಿಸುತ್ತಿತ್ತು.

ಅವರು ಆನ್ನಾಳ ಗಂಡ ಬರುವುದನ್ನು ಎದುರುನೋಡುತ್ತಿದ್ದರು. ಆದರೆ, ಅವನ ಬದಲಿಗೆ ಅವನ ಪತ್ರ ಬಂದಿತು. ತನ್ನ ಕಣ್ಣುಗಳಿಗೆ ಏನೋ ಆಗಿದೆ ಎಂದೂ, ಅವಳೇ ಕೂಡಲೆ ಹೊರಟು ಬರಬೇಕು ಎಂದು ಅವನು ತಿಳಿಸಿದ್ದ. ಆನ್ನಾ ಸರ್ಗೆಯೆವ್ನಾ ತಕ್ಷಣ ಹೊರಟುನಿಂತಳು.

“ನಾನು ವಾಪಸು ಹೋಗುತ್ತಿರುವುದು ಒಂದು ವಿಧದಲ್ಲಿ ಒಳ್ಳೆಯದೇ ಆಯಿತು,” ಅವಳು ಗುರೊವಾನಿಗೆ ಹೇಳಿದಳು,“ಇದು ವಿಧಿಲಿಖಿತ.”

ಅವಳು ಸಾರ್ವಜನಿಕ ಗಾಡಿ ಹತ್ತಿ ರೈಲು ನಿಲ್ದಾಣಕ್ಕೆ ಹೊರಟಳು. ಗುರೊವ್ ಅವಳನ್ನು ಬೀಳ್ಕೊಡಲು ಹೊರಟ. ಅವರು ದಿನಪೂರ್ತಿ ಪ್ರಯಾಣಿಸಿದರು.

ಅವಳಿಗೆಎಕ್ಸ್‌ಪ್ರೆಸ್ ಗಾಡಿಯ ಕಂಪಾರ್ಟ್ಮಿಂಟಿನಲ್ಲಿ ಜಾಗ ಸಿಕ್ಕಿತು. ಎರಡನೆಯ ಗಂಟೆ ಹೊಡೆಯುತ್ತಿದ್ದಂತೆ,“ನಿನ್ನನ್ನ ಮತ್ತೊಮ್ಮೆ ಸರಿಯಾಗಿ ನೋಡುತ್ತೇನೆ..” ಅವಳೆಂದಳು.

ಅವಳು ಕಣ್ಣೀರು ಹಾಕಲಿಲ್ಲವಾದರೂ ಅವಳ ಮುಖ ಸಂಪೂರ್ಣವಾಗಿ ಕಳೆಗುಂದಿತ್ತು. ಅವಳ ತುಟಿಗಳು ಕಂಪಿಸುತ್ತಿದ್ದವು.

“ನಾನು ನಿನ್ನನ್ನು ಖಂಡಿತ ಮರೆಯುವುದಿಲ್ಲ…” ಅವಳು ಹೇಳಿದಳು. “ಸಂತೋಷವಾಗಿರು. ದೇವರು ನಿನ್ನೊಂದಿಗಿರಲಿ. ನನ್ನ ಬಗ್ಗೆ ಕೆಟ್ಟದಾಗಿ ಯೋಚಿಸಬೇಡ. ನಾವು ಮುಂದೆಂದೂ ಭೆಟ್ಟಿಯಾಗುವುದಿಲ್ಲ… ನಾವು ಭೆಟ್ಟಿಯಾಗಲೇಬಾರದಿತ್ತು..” ರೈಲು ಹೊರಟಿತು. ಸ್ವಲ್ಪ ಹೊತ್ತಿಲ್ಲೇ ಅದರ ದೀಪಗಳು ಕತ್ತಲೆಯಲ್ಲಿ ಕರಗಿಹೋದವು. ಮತ್ತೆ ಮೌನ. ಗುರೊವ್, ಆಗಷ್ಟೇ ಎದ್ದವನಂತೆ, ಒಬ್ಬನೇ ರೈಲು ಹೋದ ದಿಕ್ಕಿನತ್ತ ನೋಡುತ್ತಲೇ ಇದ್ದ. ಸುತ್ತ ಹುಲ್ಲು ಮಿಡತೆಗಳ ಸದ್ದು, ಟೆಲಿಗ್ರಾಫ್ ವೈರುಗಳ ಸದ್ದು ಕತ್ತಲನ್ನಾವರಿಸಿತು.

ಗುರೊವನಿಗೆ ತನ್ನ ಬದುಕಿನಲ್ಲಿ ಮತ್ತೊಂದು ಸಾಹಸಕ್ಕೆ ಕೈ ಹಾಕಿ, ಅಲ್ಲೂ ಕೂಡ ಏನೂ ಗಿಟ್ಟದೆ, ಬರೇ ನೆನಪು ಮಾತ್ರ ಉಳಿದುಕೊಂಡಂತೆ ಭಾಸವಾಯಿತು.

ಅವನ ಮನಸ್ಸು ಕಹಿ ಭಾವನೆಗಳಿಂದ ಕದಡಿ ಹೋಯಿತು. ಈ ಸುಂದರವಾದ ಮುಗ್ಧ ಹೆಣ್ಣು ಅವನ ಸಹವಾಸದಲ್ಲಿ ಸುಖಿಯಾಗಿರಲಿಲ್ಲ. ಅವಳನ್ನು ಇನ್ನೆಂದಿಗೂ ಕಾಣಲು ಸಾಧ್ಯವಿರಲಿಲ್ಲ. ಅವನು ನಿಜವಾಗಲೂ ಅವಳೆಡೆಗೆ ಆಕರ್ಷಿತನಾಗಿದ್ದ. ಅವನಿಗೆ ಅವಳಿಗಿಂತ ಎರಡರಷ್ಟು ವಯಸ್ಸಾಗಿದ್ದರೂ ಅವನ ಭಾವನೆಗಳು ಪೊಳ್ಳಾಗಿರಲಿಲ್ಲ.

ಅವನು ಅವಳನ್ನೂ ಮೋಸಮಾಡಿದ್ದ ಎನ್ನುವುದಕ್ಕೆ, ಆಕೆ, ಅವನನ್ನು ಕರುಣಾಳು, ವಿಶಿಷ್ಠ, ಉದಾತ್ತ ಸ್ವಭಾವದವನೆಂದು ನಂಬಿದ್ದು, ಹೇಳುತ್ತಿದ್ದಳೂ ಕೂಡ! ಅವನ ನಿಜ ಸ್ವರೂಪವನ್ನು ಅವನು ಅವಳಿಂದ ಮರೆಮಾಚಲು ಯಶಸ್ವಿಯಾಗಿದ್ದ. ಅಪ್ರಜ್ಞಾಪೂರ್ವಕವಾಗಿಯಾದರೂ ಅವನು ಅವಳನ್ನು ಮೋಸ ಮಾಡಿದ್ದ…! ರೈಲ್ವೇ ಸ್ಟೇಷನ್ನಿನಲ್ಲಿ ಅದಾಗಾಲೇ ವಸಂತದ ಕಂಪು ಹರಡಿತ್ತು; ವಾತಾವರಣದಲ್ಲಿ ಥಂಡಿ ಇತ್ತು.

ಫ್ಲಾಟ್ ಫಾರ್ಮಿನಿಂದ ಕಾಲ್ತೆಗೆಯುತ್ತಾ ಗುರೊವ್, ಇದು ಉತ್ತರದ ಕಡೆಗೆ ಹೋಗಲು ಸಕಾಲ ಎಂದುಕೊಂಡ.

***

ಮಾಸ್ಕೊದಲ್ಲಿ ಯಥಾಪ್ರಕಾರ ಚಳಿಗಾಲದ ವರಸೆಗಳು ಪ್ರಾರಂಭವಾಗಿದ್ದವು. ಬೆಂಕಿಯ ಗೂಡು ಉರಿಯಲಾರಂಭಸಿತ್ತು. ಮಕ್ಕಳು ಶಾಲೆಗೆ ಹೊರಡಲು ಅಣಿಯಾಗುತ್ತಿದ್ದರೂ ಹೊರಗೆ ಇನ್ನೂ ಬೆಳಕು ಹರಡಿರಲಿಲ್ಲ. ಕೆಲ ಹೊತ್ತಿಗೆ ಎಂದು ಮನೆಕೆಲಸದವಳು ದೀಪ ಉರಿಸಿದ್ದಳು. ಮಂಜಿನ ತುಣುಕುಗಳು ಉದುರಲಾರಂಭಿಸಿದ್ದವು.ಹೊರಗೆ ಮೊಟ್ಟ ಮೊದಲ ಮಂಜು ಸುರಿಯಲಾರಂಭಿಸಿದಾಗ ಮೊಟ್ಟ ಮೊದಲ ಭಾರಿ ಹಿಮಗಾಡಿಯನ್ನು ಓಡಿಸುವುದೇ ಒಂದು ಖುಷಿ. ಎಲ್ಲೆಡೆ ಬಿಳುಪೋ ಬಿಳುಪು. ಚಾವಣಿಗಳು, ನೆಲ ಎಲ್ಲವೂ ಬಿಳಿ! ಉಸಿರನ್ನು ಎಳೆದು ಆವಿಯನ್ನು ಹೊರಗೆ ಚೆಲ್ಲುವಾಗ ಬಾಲ್ಯದ ನೆನಪು ಬಾರದಿರುತ್ತಿರಲಿಲ್ಲ. ಈ ಹೊತ್ತಿನಲ್ಲಿ ಯಾರಿಗೂ ಸಮುದ್ರ, ಪರ್ವತಗಳ ನೆನಪು ಕಾಡುತ್ತಿರಲಿಲ್ಲ.

ಗುರೊವ್ ಮಾಸ್ಕೊದಲ್ಲಿ ಜನಿಸಿದ್ದ. ಮಂಜು ಬೀಳುತ್ತಿದ್ದ ಹೊತ್ತಿನಲ್ಲಿ ಅವನು ಮಾಸ್ಕೊಗೆ ಬಂದಿಳಿದ. ತುಪ್ಪಳದ ಕೋಟನ್ನು ಧರಿಸಿ ಕೈಗಳಿಗೆ ಬಿಸಿ ಬಿಸಿ ಕೈಗವಸುಗಳನ್ನು ಸಿಕ್ಕಿಸಿ ಅವನು ನಡೆಯತೊಡಗಿದ. ಶನಿವಾರದಷ್ಟೊತ್ತಿಗೆ ಅವನು ತನ್ನ ಯಾಲ್ಟಾದ ರಜೆಯನ್ನು ಮರೆತುಬಿಟ್ಟಿದ್ದ. ಕ್ರಮೇಣ ಅವನು ಮಾಸ್ಕೊ ಜೀವನಕ್ಕೆ ಹೊಂದಿಕೊಂಡುಬಿಟ್ಟ. ಆದಷ್ಟು ಬೇಗ ಅವನು ರೆಸ್ಟೋರಂಟ್‌ಗಳಿಗೆ, ಕ್ಲಬ್ಬುಗಳಿಗೆ, ಭೋಜನ ಕೂಟಗಳಿಗೆ, ವಾರ್ಷಿಕ ಸಮಾರಂಭಗಳಿಗೆ ಹೋಗಲು ಹಾತೊರೆಯತೊಡಗಿದ. ವೃತ್ತಿಪರರಾದ ದೊಡ್ಡ ದೊಡ್ಡ ವಕೀಲರು, ಡಾಕ್ಟರುಗಳು, ಪ್ರೊಫೆಸರ್‌ಗಳು, ಕಲಾವಿದರ ಪಾರ್ಟಿಗಳಲ್ಲಿ ಭಾಗವಹಿಸಲು, ಅವರಿಗೆ ಪಾರ್ಟಿ ಕೊಡಲು, ಅವರೊಂದಿಗೆ ಕ್ಲಬ್ಬುಗಳಲ್ಲಿ ಇಸ್ಟೀಟು ಆಡಲು ತವಕಿಸುತ್ತಿದ್ದ.

ಆನ್ನಾ ಸರ್ಗೆಯೆವ್ನಾಳ ನೆನಪು ಅವನನ್ನು ಆಗಾಗ್ಗೆ ಕಾಡುತ್ತಿದ್ದರೂ ಇನ್ನೊಂದು ತಿಂಗಳಿನಲ್ಲಿ ಅದೂ ಕೂಡ ನಿಂತು, ಅಪರೂಪ ಎಲ್ಲಾದರೂ, ಉಳಿದ ಕೆಲವು ಹೆಣ್ಣುಗಳಂತೆ, ಕನಸಿನಲ್ಲಿ ಅವಳ ಮುಗ್ಧ ಮುಗುಳ್ನಗೆ ಗೋಚರಿಸಬಹುದೇನೋ ಎಂದುಕೊಂಡ. ಒಂದು ತಿಂಗಳು ಮುಗಿದೇ ಹೋಯಿತು. ಚಳಿ ಮತ್ತಷ್ಟು ತೀವ್ರವಾಗಿತ್ತು. ಆದರೂ, ಆನ್ನಾಳ ನೆನಪು ಮಾತ್ರ, ಅವಳನ್ನು ನಿನ್ನೆಯೇ ಬೀಳ್ಕೊಟ್ಟಂತೆ ಮತ್ತೆ ಮತ್ತೆ ಅವನನ್ನು ಕಾಡುತ್ತಿತ್ತು. ಸಂಜೆಯ ಹೊತ್ತಿನಲ್ಲಿ, ಎಲ್ಲವೂ ಮೌನ ಹೊತ್ತಂತಿರುವಾಗ, ಮಕ್ಕಳು ತಮ್ಮ ಕೋಣೆಗಳಲ್ಲಿ ಓದುವ ಸದ್ದು, ಎಲ್ಲೋ ಒಂದು ಹಾಡು ಕೇಳುತ್ತಿರುವಾಗ ಅವನಿಗೆ ಹಠಾತ್ತನೆ ಯಾಲ್ಟಾದ ಸಮುದ್ರ ತೀರದಲ್ಲಿ ಅವಳೊಡನೆ ಸುತ್ತಾಡಿದ್ದು, ಬಂದರಿನಲ್ಲಿ ಹಡಗು ಬಂದು ನಿಂತಾಗ ಮಕ್ಕಳಂತೆ ನೋಡುತ್ತಾ ನಿಂತಿದ್ದು, ಥಿಯೋಡೋಸಿಯಾದಲ್ಲಿ ಬೆಳಗಿನ ಜಾವದವರೆಗೆ ಕುಳಿತುಕೊಂಡು ಸಮುದ್ರ ಮತ್ತು ಹಡಗನ್ನು ನೋಡುತ್ತಾ ಕುಳಿತಿದ್ದು, ಬಿಸಿ ಬಿಸಿ ಮುತ್ತುಗಳ ನೆನಪು ನುಗ್ಗಿ ಬರುತ್ತಿತ್ತು. ಇದು ಬಹಳ ಹೊತ್ತಿನವರೆಗೆ ಅವನ ನೆನಪಿನೊಳೊಗೆ ಉಳಿದು ಅವನ ತುಟಿಗಳ ಮೇಲೆ ಅಪ್ರಜ್ಞಾಪೂರ್ವಕವಾಗಿ ತುಂಟ ನಗು ಮೂಡಿರುತ್ತಿತ್ತು. ಈ ನೆನಪುಗಳು ಅವನ ಸುಪ್ತಪ್ರಜ್ಞೆಯೊಳಗಿಳಿದು ಕನಸುಗಳಾಗಿ, ಭವಿಷ್ಯದ ಕನಸುಗಳಾಗಲು ಹಾತೊರೆಯುತ್ತಿದ್ದವು.

ಆನ್ನಾ ಸರ್ಗೆಯೆವ್ನಾ ಅವನನ್ನು ಕನಸಾಗಿ ಕಾಡುತ್ತಿದ್ದುದ್ದಷ್ಟೇ ಅಲ್ಲದೆ, ಎಲ್ಲೆಡೆಯೂ ಅವನ ನೆರಳಿನಂತೆ ಹಿಂಬಾಲಿಸಿ ಕಾಡುತ್ತಿದ್ದಳು. ಅವನು ಕಣ್ಣು ಮುಚ್ಚಿದಾಗಲೆಲ್ಲಾ ಅವಳು ಎದುರು ನಿಂತಂತೇ ಭಾಸವಾಗುತ್ತಿತ್ತು. ಅವಳು ವಾಸ್ತವದಲ್ಲಿ ಇರುವುದಕ್ಕಿಂತ ಸುಂದರವಾಗಿ, ಕಡಿಮೆ ವಯಸ್ಸಾದವಳಂತೆ, ಒಟ್ಟಿನಲ್ಲಿ ಮುದ್ದಾಗಿ ಕಾಣಿಸುತ್ತಿದ್ದಳು. ಅವನೂ ಕೂಡ ಯಾಲ್ಟಾದಲ್ಲಿ ಇದ್ದುದ್ದಕ್ಕಿಂತ ಹರೆಯದವನಾಗಿ ಇದ್ದಂತೆ ಭಾವಿಸಿದ್ದ.

ಸಂಜೆಯ ಹೊತ್ತಿನಲ್ಲಿ ಅವಳು ಇವನನ್ನು ಪುಸ್ತಕಗಳ ಕಪಾಟಿನ ಸಂದಿನಿಂದ, ಬೆಂಕಿ ಗೂಡಿನ ಮರೆಯಿಂದ, ಮೂಲೆಗಳಿಂದ ಕದ್ದು ನೋಡುತ್ತಿರುವಂತೆ ಭಾಸವಾಗುತ್ತಿತ್ತು. ಅವಳು ಉಸಿರಾಡುವ, ಅವಳ ಉಡುಪಿನ ಮರ್ಮರ ಸದ್ದು ಕೂಡ ಕೇಳಿಸಿದಂತೆ ಭಾಸವಾಗುತ್ತಿತ್ತು. ರಸ್ತೆಯಲ್ಲಿ ನಡೆಯುತ್ತಿರುವಾಗಲೂ ಅವನು ಅವಳಂತೆ ಯಾರಾದರೂ ಕಾಣಿಸುತ್ತಿದ್ದಾರಾ ಎಂದು ಪ್ರತಿಯೊಬ್ಬ ಹೆಣ್ಣುಮಕ್ಕಳನ್ನು ಗಮನಿಸುತ್ತಿದ್ದ. ಅವನ ನೆನಪುಗಳನ್ನು, ಪ್ರೇಮವನ್ನು ಯಾರ ಜೊತೆಯಾದರೂ ಹಂಚಿಕೊಳ್ಳಬೇಕೆಂಬ ಉತ್ಕಟ ಆಸೆ ಅವನನ್ನು ಕಾಡುತ್ತಿತ್ತು. ಮನೆಯಲ್ಲಂತೂ ಅದು ಸಾಧ್ಯವಿರಲಿಲ್ಲ. ಮನೆಯ ಹೊರಗೆ ಕೂಡ, ಬ್ಯಾಂಕಿನಲ್ಲಾಗಲೀ, ನೆರೆಹೊರೆಯವರ ಜತೆಗಾಗಲಿ ಕೂಡ ಸಾಧ್ಯವಿರಲಿಲ್ಲ. ಮಾತನಾಡುವುದಾದರೂ ಏನನ್ನು ಕುರಿತು? ಹಾಗಾದರೆ ತಾನು ಆನ್ನಾಳನ್ನು ಪ್ರೀತಿಸುತ್ತಿದ್ದೇನೆಯೇ? ಅವಳ ಜೊತೆಗಿನ ತನ್ನ ಸಂಬಂಧದಲ್ಲಿ ಮತ್ತಿನ್ನೇನಾದರೂ ಇದೆಯೇ? ಮನೆಯಲ್ಲೂ ಕೂಡ ಅವನಿಗೆ ಅಸ್ಪಷ್ಟವಾಗಿ ಪ್ರೀತಿ, ಹೆಣ್ಣು ಬಿಟ್ಟರೆ ಬೇರೆ ಏನೂ ಮಾತನಾಡುವ ವಿಷಯ ಸಿಕ್ಕಿರಲಿಲ್ಲ. ಅವನು ಏನು ಮಾತನಾಡುತ್ತಿದ್ದಾನೆಂದು ಯಾರಿಗೂ ಅರ್ಥವಾಗುತ್ತಿರಲಿಲ್ಲ. ಅವನ ಹೆಂಡತಿ ಅಷ್ಟೇ ವ್ಯಂಗ್ಯವಾಗಿ ಹೇಳಿದಳು: “ಒಂದು ಹೆಣ್ಣನ್ನು ಒಲಿಸಿಕೊಳ್ಳುವ ಪಾತ್ರ ನಿನಗೆ ಖಂಡಿತ ಸರಿ ಬರುತ್ತಿಲ್ಲ ಡಿಮಿಟ್ರಿ!”

ಒಮ್ಮೆ ಕ್ಲಬ್ಬಿನಿಂದ ಹೊರಬರುವಾಗ ಅವನಿಗೆ ತನ್ನ ಸಹಪಾಠಿಯೊಡನೆ ಬಡಾಯಿ ಕೊಚ್ಚಿಕೊಳ್ಳದೆ ಇರಲು ಸಾಧ್ಯವೇ ಆಗಲಿಲ್ಲ. “ನನಗೆ ಯಾಲ್ಟಾದಲ್ಲಿ ಎಂಥಾ ಒಂದು ಸುಂದರ ಹೆಣ್ಣಿನೊಡನೆ ಸಂಬಂಧ ಬೆಳೆಯಿತು ಗೊತ್ತೇನೂ?” ಎಂದ. ಅವನ ಸಹಪಾಠಿ ಏನೂ ಮಾತನಾಡಲಿಲ್ಲ. ತನ್ನ ಬಂಡಿ ಹತ್ತುತ್ತಿರುವಾಗ ಹೇಳಿದ, “ಡಿಮಿಟ್ರಿ, ಕ್ಲಬ್ಬಿನಲ್ಲಿ ಇವತ್ತು ಬಡಿಸಿದ್ದ ಸ್ಟುರ್ಜನ್ ಮೀನು ತುಂಬಾ ಚೆನ್ನಾಗಿತ್ತು. ನೀನು ಮಾತ್ರ ಕುಡಿದಿದ್ದು ಸ್ವಲ್ಪ ಜಾಸ್ತಿನೇ ಆಯಿತೇನೋ!”

ಈ ಮಾತುಗಳಿಂದ ಗುರೊವ್‌ಗೆ ಅಪಮಾನವಾದಂತೆನಿಸಿತು. ಎಂತಾ ಅಸಭ್ಯ ಜನ. ಹೇಗೆ ನಡೆದುಕೊಳ್ಳಬೇಕೆಂದೇ ಗೊತ್ತಿಲ್ಲ!

ಗುರೊವಾನಿಗೆ ಅಂದು ರಾತ್ರಿ ನಿದ್ದೆಯೇ ಹತ್ತಿರಕ್ಕೆ ಸುಳಿಯಲಿಲ್ಲ. ಮರುದಿನ ರಾತ್ರಿಯೂ ಅದೇ ರೀತಿ ಆಯಿತು. ಅವನು ಬಹಳ ಹೊತ್ತು ಹಾಸಿಗೆಯ ಮೇಲೆ ಕುಳಿತುಕೊಂಡಿದ್ದ. ಬೇಜಾರಾಗಿ ಎದ್ದು ಅಲ್ಲೇ ನಡೆಯತೊಡಗಿದ. ಅವನಿಗೆ ತನ್ನ ಮಕ್ಕಳ ಮೇಲೆ, ತನ್ನ ಬ್ಯಾಂಕ್ ನೌಕರಿಯ ಬಗ್ಗೆ ಅಸಡ್ಡೆ ಮೂಡತೊಡಗಿತು. ಅವನಿಗೆ ಎಲ್ಲಾದರೂ ಹೋಗಬೇಕು, ಏನಾದರೂ ಮಾತನಾಡಬೇಕೆಂದು ಅನಿಸಲೇ ಇಲ್ಲ.

ಡಿಸೆಂಬರ್ ರಜಾ ದಿನಗಳಲ್ಲಿ ತನ್ನ ಸ್ನೇಹಿತನನ್ನು ಕಾಣಲು ಸೇಂಟ್ ಪೀಟರ್ಸ್‌‍ಬರ್ಗ್ಹೋಗುತ್ತಿದ್ದೇನೆ ಎಂದು ತನ್ನ ಹೆಂಡತಿಗೆ ತಿಳಿಸಿ ಹೊರಟೇ ಬಿಟ್ಟ.

***

ಅವನಿಗೆ ಆನ್ನಾ ಸರ್ಗೆಯೆವ್ನಾಳನ್ನು ಕಂಡು ಮಾತನಾಡಿಸಬೇಕೆಂದೆನಿಸಿತ್ತು. ಬೆಳಿಗ್ಗೆಯ ಹೊತ್ತಿನಲ್ಲಿ ಅವನು ಸೇಂಟ್ ಪೀಟರ್ಸ್‌‍ಬರ್ಗ್ ತಲುಪಿ ಒಂದು ಒಳ್ಳೆಯ ಹೋಟೆಲಿನಲ್ಲಿ ಇಳಿದುಕೊಂಡ. ಹೋಟೆಲಿನ ಕೂಲಿಯಾಳಿನಿಂದ ಅವನಿಗೆ ವೊನ್ ಡಿಡೆರಿಟ್ಸ್ನ ವಿಳಾಸ ಸಿಕ್ಕಿತು.

ಅದು ಅವನು ಉಳಿದುಕೊಂಡಿದ್ದ ಹೋಟೆಲಿನ ಹತ್ತಿರವೇ ಇತ್ತು. ವೊನ್ ಡಿಡೆರಿಟ್ಸ್ ಶ್ರೀಮಂತನಾಗಿದ್ದು ವಿಲಾಸಿ ಜೀವನ ನಡೆಸುತ್ತಿದ್ದ. ಅವನದೇ ಕುದುರೆಗಳಿದ್ದು ಪೀಟರ್ಸ್‌‍ಬರ್ಗಿನಲ್ಲಿ ಅವನ ಬಗ್ಗೆ ಗೊತ್ತಿಲ್ಲದಿದ್ದವರು ಇರಲೇ ಇಲ್ಲ ಎನ್ನಬಹುದು. ಕೂಲಿಯಾಳು ಅವನನ್ನು ‘ಡ್ರಿಡಿರಿಟ್ಸ್’ ಅಂತ ಸಂಭೋಧಿಸುತ್ತಿದ್ದ.

ಗುರೊವಾನಿಗೆ ಡಿಡೆರಿಟ್ಸ್ ನ ಮನೆಯನ್ನು ಹುಡುಕುವುದು ಕಷ್ಟವಾಗಲಿಲ್ಲ. ಮನೆಯ ಎದುರು ಉದ್ದನೆಯ ದೊಡ್ಡ, ಮೊಳೆಗಳಿರುವ ಬೇಲಿ ಇತ್ತು. “ಈ ಬೇಲಿಯನ್ನು ದಾಟಿ ಒಳಗೆ ಹೋಗುವುದು ಅಸಾಧ್ಯವೇ ಸರಿ!” ಅಂದುಕೊಂಡ ಗುರೊವ್. ‘ಇವತ್ತು ರಜಾ ದಿನ. ಡಿಡೆರಿಟ್ಸ್ ಖಂಡಿತ ಮನೆಯಲ್ಲೇ ಇರುತ್ತಾನೆ.’ ಗುರೊವ್ ಅಂದುಕೊಂಡ. ಅಲ್ಲದೆ ಮನೆಯೊಳಗೆ ಹೋಗಿ ಆನ್ನಾಳನ್ನು ಕಂಡು ಅವಳನ್ನು ಒಮ್ಮೆಲೇ ಗಲಿಬಿಲಿಗೊಳಿಸುವುದು ಸರಿಯಾಗಲಾರದು. ಅವಳಿಗೆ ಒಂದು ವೇಳೆ ಸಂದೇಶ ಕಳುಹಿಸಿ, ಆಕಸ್ಮಾತ್ತಾಗಿ ಅದು ಅವಳ ಗಂಡನ ಕೈಗೆ ಸಿಕ್ಕಿದರೆ ದೊಡ್ಡ ರಂಪಾಟವಾದೀತು. ಒಂದು ಒಳ್ಳೆಯ ಸಂದರ್ಭಕ್ಕೆ ಕಾಯುವುದೇ ಸರಿ. ಒಬ್ಬ ಭಿಕ್ಷುಕ ಗೇಟಿನೊಳಗೆ ಹೋಗಿದ್ದನ್ನು ಅವನು ನೋಡಿದ. ತಕ್ಷಣವೇ ನಾಯಿಗಳ ಹಿಂಡೊಂದು ಅವನನ್ನು ಅಟ್ಟಿಸಿಕೊಂಡು ಬಂದಿತು. ಒಂದು ಗಂಟೆಯ ನಂತರ ಅವನಿಗೆ ಒಳಗಿನಿಂದ ಪಿಯಾನೊ ನುಡಿಸುತ್ತಿರುವ ಸದ್ದು ಅಲೆಅಲೆಯಾಗಿ ಕೇಳತೊಡಗಿತು ಬಹುಶಃ ಆನ್ನಾಳೇ ಪಿಯಾನೊ ನುಡಿಸುತ್ತಿರಬೇಕು, ಅವನು ಅಂದುಕೊಂಡ. ತಕ್ಷಣವೇ ಬಂಗಲೆಯ ಮುಂಬಾಗಿಲು ತೆರೆದುಕೊಂಡಿತು. ವಯಸ್ಸಾದ ಮಹಿಳೆಯೊಬ್ಬರು ಹೊರಗೆ ಬಂದರು. ಅವರನ್ನು ಹಿಂಬಾಲಿಸಿಕೊಂಡು ಬಿಳಿ ಪೊಮೇರಿಯನ್ ನಾಯಿಯೂ ಬಂದಿತು. ಗುರೊವಾನ ಎದೆ ಬಡಿದುಕೊಳ್ಳಲಾರಂಭಿಸಿತು. ನಾಯಿಯನ್ನು ಕರೆಯಬೇಕೆಂದು ಅವನು ಬಾಯ್ದೆರೆದ. ಆದರೆ, ಭಾವೋದ್ವೇಗದಿಂದ ಅವನಿಗೆ ನಾಯಿಯ ಹೆಸರು ಮರೆತೇ ಹೋಗಿತ್ತು. ಅವನು ಆ ರಸ್ತೆಯಲ್ಲಿ ಮೇಲಕ್ಕೂ ಕೆಳಕ್ಕೂ ನಡೆದಾಡತೊಡಗಿದ. ಆ ಮೊಳೆಗಳ ಬೇಲಿಯ ಬಗ್ಗೆ ಅವನಿಗೆ ಹೇವರಿಕೆ ಬಂದಿತ್ತು. ಬಹುಶಃ ಆನ್ನಾ ತನ್ನನ್ನು ಈಗಾಗಲೇ ಮರೆತಿರಬೇಕು. ಆನ್ನಾಳಂತ ಹರೆಯದ ಹೆಣ್ಣು ತನ್ನ ಬಗ್ಗೆ ಧ್ಯಾನಿಸುತ್ತಾ ಇಡೀ ದಿನ ಆ ಐಶಾರಾಮಿ ಸೆರೆಮನೆಯಲ್ಲಿ ಕುಳಿತಿರುವುದು ನಿಜಕ್ಕೂ ಹಾಸ್ಯಾಸ್ಪದ. ಅವಳ ಮನಸ್ಸನ್ನು ಈಗ ಯಾವ ತರುಣ ಆಕ್ರಮಿಸಿಕೊಂಡಿದ್ದಾನೋ!

ಅವನು ಬೇಜಾರಾಗಿ ತನ್ನ ಹೋಟೆಲ್ ರೂಮಿಗೆ ಹಿಂದಿರುಗಿದ. ಸೋಫಾದ ಮೇಲೆ ಬಹಳ ಹೊತ್ತು ಹಾಗೆಯೇ ಕುಳಿತುಕೊಂಡಿದ್ದ. ನಂತರ, ಬೇರೆ ಏನು ಮಾಡಬಹುದೆಂದು ತೋಚದೆ ಮಲಗಿದ.

ಅವನು ಎಚ್ಚರಗೊಂಡಾಗ ಆಗಾಗಲೇ ಸಂಜೆಯಾಗಿತ್ತು.

“ಸಂಜೆಯವರೆಗೆ ನಿದ್ದೆ ಏನೋ ಪೊಗದಸ್ತಾಗಿ ಮಾಡಿದೆ. ಈಗ ರಾತ್ರಿಯನ್ನು ಹೇಗೆ ಕಳೆಯಲಿ?” ಅವನು ಹಾಸಿಗೆಯ ಮೇಲೆ ಕುಳಿತುಕೊಂಡು ಯೋಚಿಸತೊಡಗಿದ.

ಅಂದು ಬೆಳಿಗ್ಗೆ ಅವನಿಗೆ ರೈಲ್ವೇ ಸ್ಟೇಷನ್ನಿನ ಬಳಿ ಅವನಿಗೆ ದೊಡ್ಡ ಅಕ್ಷರಗಳಲ್ಲಿ ಬರೆದಿದ್ದ ಒಂದು ಪೋಸ್ಟರ್ ಕಾಣಿಸಿತ್ತು: “ನಗರದಲ್ಲಿ ಮೊಟ್ಟ ಮೊದಲ ಭಾರಿ ನೋಡಿರಿ ‘ಗೀಷಾ’ (ಜಪಾನಿನ ಹೆಣ್ಣು ಕಲಾಕಾರಳು ಪ್ರಸ್ತುತಪಡಿಸುವ ಮನೋರಂಜನೆ).” ಗುರೊವ್ ಅದನ್ನು ನೋಡಲು ಥಿಯೇಟರಿಗೆ ಹೋಗುವುದೆಂದು ನಿರ್ಧರಿಸಿದ. ಆನ್ನಾ ಸರ್ಗೆಯೆವ್ನಾ ಕೂಡ ಥಿಯೇಟರಿಗೆ ಬರಬಹುದೆಂದು ಅವನು ಯೋಚಿಸಿದ.

ಥಿಯೇಟರ್ ಭರ್ತಿಯಾಗಿತ್ತು. ಎಲ್ಲಾ ಸಣ್ಣ ಸಣ್ಣ ಊರುಗಳ ಥಿಯೇಟರುಗಳಂತೆ ಇದು ಕೂಡ ಜನರ ಗದ್ದಲದಿಂದ ತುಂಬಿ ಹೋಗಿತ್ತು. ದೀಪಗಳ ಮೇಲೆ ದಟ್ಟವಾಗಿ ಹೊಗೆ ಆವೃತವಾಗಿತ್ತು. ಮುಂದಿನ ಸೀಟುಗಳಲ್ಲಿ ಸ್ಥಳೀಯ ಪೋಲಿ ಹುಡುಗರೇ ತುಂಬಿಕೊಂಡಿದ್ದರು. ಗವರ್ನರನಿಗೆ ಮೀಸಲಿಟ್ಟ ವಿಶೇಷ ಬಾಕ್ಸಿನಲ್ಲಿ ಕುತ್ತಿಗೆಗೆ ಸ್ಕಾರ್ಫ್ ತೊಟ್ಟ ಅವರ ಮಗಳು ಕುಳಿತ್ತಿದ್ದರೆ, ಅವಳ ಹಿಂಭಾಗದಲ್ಲಿದ್ದ ಗವರ್ನರರ ಕೈಗಳು ಮಾತ್ರ ಕಾಣಿಸುತ್ತಿದ್ದವು. ರಂಗಮಂಚದ ಮೇಲಿನ ಪರದೆ ಗಾಳಿಗೆ ಅಲ್ಲಾಡುತ್ತಿತ್ತು. ಜನರಿನ್ನೂ ಬರುತ್ತಲೇ ಇದ್ದರು. ಗುರೊವಾನ ಕಣ್ಣು ಅವರತ್ತಲೇ ಇತ್ತು. ಆನ್ನಾ ಸರ್ಗೆಯೆವ್ನಾ ಕೂಡ ಬಂದಳು. ಆನ್ನಾ, ಮೂರನೆ ಸಾಲಿನ ಸೀಟಿನಲ್ಲಿ ಕುಳಿತುಕೊಂಡಳು. ಅವಳನ್ನು ನೋಡುತ್ತಿದ್ದಂತೆ ಗುರೊವಾನ ಹೃದಯ ಬಡಿದುಕೊಳ್ಳಲಾರಂಭಿಸಿತು. ಆನ್ನಾಳನ್ನು ನೋಡುತ್ತಿದ್ದಂತೆಯೇ ಗುರೊವಾನಿಗೆ ಈ ಪ್ರಪಂಚದಲ್ಲಿ ತನಗೆ ಅವಳಿಗಿಂತ ಹೆಚ್ಚು ಅಮೂಲ್ಯವಾದ, ಮುಖ್ಯವಾದ ಜೀವಿಯೊಂದನ್ನು ಬಿಟ್ಟರೆ ಬೇರೆ ಯಾವುದೇ ಇಲ್ಲವೆಂದು ಮನದಟ್ಟಾಯಿತು. ನೋಡಲು, ಆ ಜನಜಂಗುಳಿಯಲ್ಲಿ ಅಷ್ಟೇನೂ ಎದ್ದು ಕಾಣದ ರೂಪದ, ಸಾಧಾರಣ ವ್ಯಕ್ತಿತ್ವದ ಆ ಹೆಣ್ಣುಮಗಳು ಅವನ ಮನಸ್ಸನ್ನು ಪೂರ್ಣವಾಗಿ ಆಕ್ರಮಿಸಿಕೊಂಡಿದ್ದಳು. ಅವನಿಗೆ, ಅವಳ ಅಪೂರ್ವ ಸೌಂದರ್ಯದ ಮುಂದೆ ಅಲ್ಲಿಯ ಆರ್ಕೆಸ್ಟ್ರಾ, ಸಂಗೀತ ಎಲ್ಲವನ್ನೂ ನಿವಾಳಿಸಿ ಎಸೆಯಬೇಕೆನಿಸಿತು.

ಅವನು ಕುಳಿತು ಕನಸು ಕಾಣುತ್ತಲೇ ಇದ್ದ. ಒಬ್ಬ ನೀಳಕಾಯದ ಯುವಕನೊಬ್ಬ ಬಂದು ಆನ್ನಾಳ ಆಸನದ ಪಕ್ಕದ ಆಸನದಲ್ಲಿ ಕುಳಿತುಕೊಂಡ. ಅವನು ತಲೆಯನ್ನು ಬಗ್ಗಿಸಿ ಅವಳೊಡನೆ ಮಾತನಾಡುತ್ತಲೇ ಇದ್ದ. ಬಹುಶಃ ಇವನೇ ಇರಬೇಕು, ಆನ್ನಾ, ಯಾಲ್ಟಾದಲ್ಲಿ ಹೇಳಿದ್ದ ಅವಳ ಯಾತಕ್ಕೂ ಪ್ರಯೋಜನವಿಲ್ಲದ ಗಂಡ! ಗುರೊವಾನಿಗೂ ಅವನು ಹಾಗೆಯೇ ಕಾಣಿಸಿದ್ದರಲ್ಲಿ ಯಾವುದೇ ಆಶ್ಚರ್ಯವಿರಲಿಲ್ಲ. ಅವನು ಗುರೊವಾನಿಗೆ ಹೋಟೆಲಿನ ಮಾಣಿಯ ತರ ಕಾಣಿಸುತ್ತಿದ್ದ. ಮೊದಲನೇ ಮಧ್ಯಂತರದಲ್ಲಿ ಆನ್ನಾಳ ಗಂಡ ಧೂಮಪಾನ ಮಾಡಲು ಎದ್ದು ಹೊರಗೆ ಹೊರಟು ಹೋದ. ಅವಳೊಬ್ಬಳೇ ಒಳಗೆ ಉಳಿದುಕೊಂಡಳು. ಗುರೊವ್ ಅವಳ ಆಸನದಿಂದ ಹೆಚ್ಚೇನೂ ದೂರವಿರಲಿಲ್ಲವಾದ್ದರಿಂದ ಅವಳ ಕಡೆಗೆ ಎದ್ದು ಹೋಗಿ, ಕಂಪಿಸುವ ದನಿಯಲ್ಲಿ, “ಗುಡ್ ಈವ್ನಿಂಗ್” ಎಂದ. ಅವನನ್ನು ನೋಡುತ್ತಿದ್ದಂತೆ ಅವಳು ಒಮ್ಮೆಲೇ ಬಿಳುಚಿಕೊಂಡಳು. ನಂತರ ಗಾಬರಿಗೊಂಡು ತನ್ನ ಕೈಯಲ್ಲಿದ್ದ ಬೀಸಣಿಗೆಯನ್ನು ಗಟ್ಟಿಯಾಗಿ ಹಿಡಿದುಕೊಂಡಳು. ಅವಳ ಕಣ್ಣುಗಳು ಅವನ ಅನೀರಿಕ್ಷಿತ ಭೇಟಿಯಿಂದ ಗಲಿಬಿಲಿಗೊಂಡಿದ್ದವು. ಅವಳು ತನ್ನನ್ನು ಬಹಳ ಕಷ್ಟಪಟ್ಟು ಸಂಭಾಳಿಸಿಕೊಳ್ಳಲು ಪ್ರಯತ್ನಪಡುತ್ತಿದ್ದಳು. ಇಬ್ಬರೂ ಏನೂ ಮಾತನಾಡಲಿಲ್ಲ. ಅವನು ನಿಂತೇ ಇದ್ದ. ಅವಳ ಗಾಬರಿಗೊಂಡ ಮುಖಭಾವ ನೋಡಿ ಅವನು ಅವಳ ಪಕ್ಕದಲ್ಲಿ ಕುಳಿತುಕೊಳ್ಳುವ ಧೈರ್ಯ ಮಾಡಲಿಲ್ಲ.

ಆರ್ಕೆಸ್ಟ್ರಾದ ವಯಲಿನ್‌ಗಳು ಸದ್ದು ಮಾಡಲಾರಂಭಿಸಿದವು. ಹಠಾತ್ತನೆ ಅವನಿಗೂ ಗಾಬರಿಯಾಯಿತು. ಬಾಕ್ಸುಗಳಲ್ಲಿ ಕುಳಿತ್ತಿದ್ದ ಜನರೆಲ್ಲಾ ತನ್ನನ್ನೇ ದುರುಗುಟ್ಟಿ ನೋಡುತ್ತಿರುವಂತೆ ಅವನಿಗೆ ಭಾಸವಾಯಿತು. ಅವಳು ತಕ್ಷಣ ಎದ್ದು ಬಾಗಿಲ ಕಡೆಗೆ ನಡೆದಳು. ಅವನೂ ಅವಳನ್ನು ಹಿಂಬಾಲಿಸಿದ. ಇಬ್ಬರೂ ಗೊತ್ತುಗುರಿಯಿಲ್ಲದೆ ನಡೆಯತೊಡಗಿದರು. ಆನ್ನಾಳನ್ನು ಯಾಲ್ಟಾದಿಂದ ರೈಲಿನಲ್ಲಿ ಕಳುಹಿಸುವಾಗ, “…ಎಲ್ಲಾ ಮುಗಿಯಿತು. ತಾವಿನ್ನು ಒಬ್ಬರಿಗೊಬ್ಬರು ಎಂದಿಗೂ ಭೇಟಿಯಾಗುವುದಿಲ್ಲ.” ಎಂದು ಅಂದುಕೊಂಡಿದ್ದು ನೆನಪಿಗೆ ಬಂದಿತು. ಅವರು ಈಗ, ಥಿಯೇಟರಿನ ಒಂದು ಕಿರಿದಾದ, ಮಂದ ಬೆಳಕಿನ ಮೆಟ್ಟಿಲುಗಳನ್ನು ಇಳಿಯುತ್ತಿದ್ದರು. ಅಲ್ಲೊಂದು ಕಡೆ ‘ಬಯಲು ರಂಗಮಂದಿರ’ವೆಂಬ ಫಲಕವನ್ನು ಹಾಕಿದ್ದರು. ಆನ್ನಾ ಅಲ್ಲಿ ನಿಂತಳು.

“ನೀನು ನನಗೆ ಎಷ್ಟೊಂದು ಗಾಬರಿಗೊಳಿಸಿದೆ!” ಅವಳು ಏದುಸಿರು ಬಿಡುತ್ತಾ ಹೇಳಿದಳು. ಅವಳು ಇನ್ನೂ ಬಿಳುಚಿಕೊಂಡಿದ್ದಳು. “ನಾನು ಅರ್ಧ ಸತ್ತೇ ಹೋಗಿದ್ದೇನೆ. ನೀನು ಇಲ್ಲಿಗೇಕೆ ಬಂದೆ?”

“ನನ್ನ ಅರ್ಥ ಮಾಡಿಕೋ ಆನ್ನಾ, ಅರ್ಥ ಮಾಡಿಕೋ…” ಅವನು ಮೆಲು ದನಿಯಲ್ಲಿ ಹೇಳಿದ.

“ನಾನು ಪ್ರಯತ್ನಪಡುತ್ತಿದ್ದೇನೆ…” ಅವಳು ಭಯದಿಂದ ಅವನ ಕಡೆಗೆ ನೋಡಿದಳು. ಅವಳ ಕಣ್ಣುಗಳಲ್ಲಿ ಪ್ರೀತಿ ಇತ್ತು. ಅವನ ಮುಖದ ಪಡಿಯಚ್ಚು ತನ್ನೊಳಗೆ ಸೆರೆಯಾಗುವಂತೆ ಅವಳು ಅವನನ್ನೇ ದೀರ್ಘವಾಗಿ ನೆಟ್ಟ ನೋಟದಿಂದ ನೋಡಿದಳು.

“ನಾನು ಎಷ್ಟೊಂದು ಅಸಂತುಷ್ಟಳಾಗಿದ್ದೇನೆಂದರೆ, ನಿನ್ನನ್ನಲ್ಲದೆ ನಾನು ಬೇರೆ ಏನನ್ನೂ ಯೋಚಿಸುತ್ತಿಲ್ಲ. ನಾನು ನಿನ್ನ ನೆನಪಿನಲ್ಲೇ ಬದುಕುತ್ತಿದ್ದೇನೆ. ನಿನ್ನನ್ನು ಮರೆತುಬಿಡಬೇಕು ಎಂದುಕೊಂಡಿದ್ದೆ ಗುರೊವ್. ನೀನು ಮತ್ತೆ ಏಕೆ ಇಲ್ಲಿಗೆ ಬಂದೆ?”

ಅವರು ನಿಂತಿದ್ದ ಮೆಟ್ಟಿಲಿನ ಮೇಲ್ಭಾಗದ ಲ್ಯಾಂಡಿಗಿನಲ್ಲಿ ಇಬ್ಬರು ಶಾಲಾ ಬಾಲಕರು ಧೂಮಪಾನ ಮಾಡುತ್ತಾ ಇವರನ್ನೇ ನೋಡುತ್ತಿದ್ದರು. ಆ ಬಗ್ಗೆ ಗುರೊವ್ ತಲೆ ಕಿಡಿಸಿಕೊಳ್ಳಲಿಲ್ಲ. ಅವನು ಆನ್ನಾಳನ್ನು ಬರಸೆಳೆದು ಅವಳ ಮೇಲೆ ಮುತ್ತುಗಳ ಮಳೆಗರೆದ.

“ನೀನು ಏನು ಮಾಡುತ್ತಿದ್ದೀಯಾ ಗುರೊವ್? ಏನು ಮಾಡುತ್ತಿದ್ದೀಯ?” ಅವಳು ಹೌಹಾರಿ ಅವನನ್ನು ದೂರಕ್ಕೆ ತಳ್ಳಿದಳು. “ದಯವಿಟ್ಟು ನೀನು ಇಲ್ಲಿಂದ ಹೊರಟುಹೋಗು. ಜನರು ಈ ಕಡೆಗೆ ಬರುತ್ತಿದ್ದಾರೆ!” ಯಾರೋ ಮೆಟ್ಟಿಲುಗಳನ್ನು ಹತ್ತಿ ಬರುತ್ತಿರುವ ಸದ್ದಾಯಿತು. “ಗುರೊವ್ ನೀನು ಇಲ್ಲಿಂದ ಹೋಗಲೇಬೇಕು… ನಿನಗೆ ಕೇಳಿಸುತ್ತಿದೆಯೇ…? ನಾನೇ ಮಾಸ್ಕೊಗೆ ಬಂದು ನಿನ್ನನ್ನು ಕಾಣುತ್ತೇನೆ. ಆದರೆ, ಈಗ ದಯವಿಟ್ಟು ಬೇರ್ಪಡೋಣ. ನಾನು ಯಾವತ್ತೂ ಸುಖಿಯಾಗಿರಲಿಲ್ಲ. ಈಗಂತೂ ಮತ್ತಷ್ಟು ದುಃಖಿತಳಾಗಿದ್ದೇನೆ. ನಾನು ಯಾವತ್ತೂ ಸುಖಿಯಾಗಲಾರೆ, ಯಾವತ್ತೂ! ನನ್ನನ್ನು ಮತ್ತಷ್ಟು ದುಃಖಿತಳನ್ನಾಗಿ ಮಾಡಬೇಡ. ನಾನೇ ಮಾಸ್ಕೊಗೆ ಬರುತ್ತೇನೆಂದು ಆಣೆ ಮಾಡಿ ಹೇಳುತ್ತೇನೆ. ಈಗ ನಾವು ಬೇರೆ ಬೇರೆಯಾಗಲೇಬೇಕು,” ಎನ್ನುತ್ತಾ ಅವಳು ಸರಸರನೆ ಮೆಟ್ಟಿಲಿಳಿದು ಕೆಳಗೆ ಹೋದಳು. ಅವಳ ಕಣ್ಣುಗಳು ಅವಳು ನಿಜವಾಗಿಯೂ ಅಸಂತುಷ್ಟಳಾಗಿದ್ದಾಳೆಂದು ಹೇಳುತ್ತಿದ್ದವು.

ಗುರೊವ್ ಸ್ವಲ್ಪ ಹೊತ್ತು ಅಲ್ಲೇ ನಿಂತಿದ್ದು, ಎಲ್ಲಾ ಕಡೆಯಿಂದ ಸದ್ದಡಗಿದ ನಂತರ ತನ್ನ ಕೋಟನ್ನು ಧರಿಸಿ ಥಿಯೆಟರಿನಿಂದ ಹೊರಬಿದ್ದ.

***

ಆನ್ನಾ ಸರ್ಗೆಯೆವ್ನಾ ಅವನನ್ನು ಕಾಣಲು ಮಾಸ್ಕೊಗೆ ಬರತೊಡಗಿದಳು. ಎರಡು ತಿಂಗಳಿಗೋ, ಮೂರು ತಿಂಗಳಿಗೊಮ್ಮೆಯೋ ಅವಳು ತನ್ನ ಯಾವುದೋ ಕಾಯಿಲೆಗೆ ವೈದ್ಯರನ್ನು ಕಾಣಲು ಮಾಸ್ಕೊಗೆ ಹೋಗುತ್ತಿದ್ದೇನೆಂದು ಗಂಡನಿಗೆ ಹೇಳಿ ಹೊರಟುಬರುತ್ತಿದ್ದಳು. ಅವಳ ಗಂಡ ನಂಬುತ್ತಿದ್ದನೋ ಇಲ್ಲವೋ! ಮಾಸ್ಕೊದಲ್ಲಿ ಅವಳು ಸ್ಲಾವಿಯನ್‌ಸ್ಕಿ ಬಝಾರ್ ಹೋಟೆಲಿನಲ್ಲಿ ಉಳಿದುಕೊಂಡು ಕೆಂಪು ಟೋಪಿ ಧರಿಸಿದ್ದ ಒಬ್ಬ ಕೆಲಸದವನನ್ನು ಗುರೊವಾನ ಬಳಿಗೆ ಕಳುಹಿಸುತ್ತಿದ್ದಳು. ಗುರೊವ್ ಅವಳನ್ನು ಕಾಣಲು ಹೋಗುತ್ತಿದ್ದ. ಈ ವಿಚಾರ ಮಾಸ್ಕೊದಲ್ಲಿ ಯಾರಿಗೂ ತಿಳಿದಿರಲಿಲ್ಲ. ಒಂದು ಚಳಿಗಾಲದ ಮುಂಜಾನೆ ಗುರೊವ್ ಆನ್ನಾಳನ್ನು ಕಾಣಲು ಹೊರಟಿದ್ದ. ಆನ್ನಾ ಹಿಂದಿನ ಸಂಜೆಯೇ ಬಂದು ಅವನಿಗೆ ಹೇಳಿ ಕಳಿಸಿದ್ದಳು. ಆದರೆ, ಅಂದು ಅವನು ಮನೆಯಲ್ಲಿರಲಿಲ್ಲವಾದ್ದರಿಂದ ಹೋಗಲಾಗಿರಲಿಲ್ಲ. ಇಂದು ಅವನೊಟ್ಟಿಗೆ ಅವನ ಮಗಳೂ ಇದ್ದಳು. ಅವಳನ್ನು, ಅದೇ ದಾರಿಯಲ್ಲಿದ್ದ ಅವಳ ಶಾಲೆಗೆ ಬಿಡಬೇಕಿತ್ತು. ಮೇಲಿಂದ ಅಗಲವಾದ ಮಂಜಿನ ಚಕ್ಕೆಗಳು ಬೀಳುತ್ತಲೇ ಇದ್ದವು. ಹವಾಮಾನ ಶೂನ್ಯ ಡಿಗ್ರಿಗಿಂತ ಮೂರು ಡಿಗ್ರಿ ಮೇಲಿದ್ದರೂ ಹಿಮಪಾತವಾಗುತ್ತಿದೆಯಲ್ಲಾ!” ಗುರೊವ್ ಮಗಳಿಗೆ ಹೇಳಿದ.

“ಭೂಮಿಯ ಮೇಲ್ಮೈಯಲ್ಲಿ ಹಾಗೆನಿಸುತ್ತದೆ. ಆದರೆ, ಎತ್ತರಕ್ಕೆ ಹೋದಂತೆ ಅಲ್ಲಿಯ ಹವಾಮಾನವೇ ಭಿನ್ನವಾಗಿರುತ್ತದೆ.”

“ಚಳಿಗಾಲದಲ್ಲಿ ಹಿಮ ಮಾರುತಗಳು ಏಕಿರುವುದಿಲ್ಲ ಅಪ್ಪ?”

ಅವನು ಆ ಕುರಿತೂ ವಿವರಿಸಿದ. ಆದರೆ, ತಾನು ಅವಳನ್ನು ಕಾಣಲು ಹೋಗುತ್ತಿದ್ದೇನೆ ಮತ್ತು ಈ ಕುರಿತು ಯಾರಿಗೂ ಗೊತ್ತಿಲ್ಲಮತ್ತು ಗೊತ್ತೂ ಆಗುವುದಿಲ್ಲವೆಂದು ಯೋಚಿಸುತ್ತಿದ್ದ. ಅವನು ಎರಡು ಬದುಕುಗಳನ್ನು ಜೀವಿಸುತ್ತಿದ್ದ. ಎಲ್ಲರಂತೆ ತೆರೆದ, ನೋಡುತ್ತಿರುವ, ಗೊತ್ತಿರುವ, ತನ್ನೆಲ್ಲಾ ಸ್ನೇಹಿತ, ಪರಿಚಯದವರಂತೆ ಬೂಟಾಟಿಕೆಯ ಬದುಕು. ಮತ್ತೊಂದು ಗೋಪ್ಯವಾದ ಬದುಕು. ಯಾವುದೋ ವಿಚಿತ್ರ ಸಂದರ್ಭಗಳಿಗನುಗುಣವಾಗಿ ಅವನಿಗೆ ನಿಜವಾಗಲೂ ಇಷ್ಟವಾದುದು, ಮೌಲ್ಯವುಳ್ಳದ್ದು, ತನಗೆ ತಾನೇ ಮೋಸ ಮಾಡದೆ ಇರುವಂತದ್ದು, ಅವನ ಜೀವನದಲ್ಲಿ ಮೌಲಿಕವುಳ್ಳದ್ದು ಬೇರೆಯವರಿಂದ ಮುಚ್ಚಲ್ಪಟ್ಟಿತ್ತು. ಅವನ ಬ್ಯಾಂಕಿನ ಕೆಲಸ, ಕ್ಲಬ್‌ಗಳ ಸದಸ್ಯತ್ವ ಇತ್ಯಾದಿಗಳು ಅವನ ಅಸಲಿ ಮನೋಧರ್ಮವನ್ನು ಮುಚ್ಚಿಡುವ ಪೊಳ್ಳು ಮುಖವಾಡಗಳು.

ಅವನು ಎಲ್ಲರನ್ನೂ ಅವನ ಮನೋಧರ್ಮಕ್ಕನುಗುಣದಂತೆ ತೀರ್ಪು ತಳೆಯುತ್ತಿದ್ದ. ಕಣ್ಣುಗಳಲ್ಲಿ ಪರಾಂಬರಿಸಿದ್ದನ್ನು ನಂಬುತ್ತಿರಲಿಲ್ಲ. ಪ್ರತಿಯೊಬ್ಬ ಗಂಡಸಿನ ನಿಜವಾದ ಬದುಕು, ಮುಖವಾಡದ ಹಿಂದೆ, ಗೋಪ್ಯತೆ,ಕತ್ತಲಲ್ಲಿ ನಡೆಯುತ್ತಿರುತ್ತದೆ ಎಂದು ಅವನು ಭಾವಿಸಿದ್ದ.

ಗಂಡಸರ ಬದುಕು ಗೋಪ್ಯತೆಯಲ್ಲಿ ಅಡಗಿದೆ. ಒಬ್ಬ ನಾಗರಿಕ ಗಂಡಸು ತನ್ನ ವಯುಕ್ತಿಕ ಗೋಪ್ಯತೆಯನ್ನು ಗೌರವಿಸಬೇಕೆನ್ನುವುದಕ್ಕೆ ಇದೂ ಒಂದು ಕಾರಣವಾಗಿರಬಹುದು. ಮಗಳನ್ನು ಶಾಲೆಗೆ ಬಿಟ್ಟು ಗುರೊವ್ ಸ್ಲಾವಿಯನ್‌ಸ್ಕಿ ಬಝಾರಿನ ಕಡೆಗೆ ಹೊರಟ. ತನ್ನ ತುಪ್ಪುಳದ ಕೋಟನ್ನು ಕಳಚಿ, ಮೇಲಕ್ಕೆ ಹೋಗಿ ಮೆಲ್ಲನೇ ಬಾಗಿಲನ್ನು ತಟ್ಟಿದ. ಹಿಂದಿನ ಸಂಜೆಯೇ ಬಂದಿದ್ದ ಆನ್ನಾ ಸರ್ಗೆಯೆವ್ನಾ ಪ್ರಯಾಣದ ದಣಿವಿನಿಂದ ಮತ್ತು ಅವನನ್ನು ಕಾಣದೆ ವಿಹ್ವಲಳಾಗಿದ್ದಳು. ಬಾಗಿಲು ತಟ್ಟುತ್ತಿದ್ದಂತೆ ತಕ್ಷಣ ತೆರೆದಳು. ಅವಳು ಅವನ ನೆಚ್ಚಿನ ಬೂದು ಬಣ್ಣದ ಉಡುಪನ್ನು ಧರಿಸಿ ಅವನ ದಾರಿಯನ್ನು ಕಾಯುತ್ತಿದ್ದಳು. ಅವಳು ಮುಗುಳ್ನಗಲಿಲ್ಲ. ಪೇಲವವಾಗಿ ಕಾಣಿಸುತ್ತಿದ್ದಳು. ಅವನು ಒಳಗೆ ಬರುತ್ತಿದ್ದಂತೆ ಅವನ ಎದೆಗೆ ಒರಗಿದಳು. ಇಬ್ಬರೂ, ಎರಡು ವರ್ಷಗಳಿಂದ ಒಬ್ಬರನ್ನೊಬ್ಬರು ನೋಡಿರಲೇ ಇಲ್ಲವೆನ್ನುವಂತೆ ದೀರ್ಘವಾಗಿ ಚುಂಬಿಸಿದರು.

“ಹೇಗಿದ್ದೀಯಾ ಆನ್ನಾ?” ಅವರು ಬೇರ್ಪಟ್ಟ ನಂತರ ಗುರೊವ್ ಕೇಳಿದ. “ಏನು ಸಮಾಚಾರ?”

“ಸ್ವಲ್ಪ ನಿಧಾನಿಸು. ನನಗೆ ಮಾತನಾಡಲು ಆಗುತ್ತಿಲ್ಲ…” ಅವಳು ಅಳುತ್ತಿದ್ದಳು. ಅವಳು ಬದಿಗೆ ತಿರುಗಿ ತನ್ನ ಕಣ್ಣುಗಳನ್ನು ಕರವಸ್ತ್ರದಿಂದ ಒರೆಸಿದಳು.

ಅವಳು ಅಳು ಮುಗಿಸಲಿ, ನಾನು ಅಲ್ಲಿಯವರೆಗೆ ಕುಳಿತಿರುತ್ತೇನೆ ಎಂದು ಗುರೊವ್ ಅಂದುಕೊಂಡು ಅಲ್ಲಿದ್ದ ಕುರ್ಚಿಯ ಮೇಲೆ ಕುಳಿತುಕೊಂಡ. ಅವನು ಗಂಟೆಯನ್ನು ಬಾರಿಸಿ, ಟೀಯನ್ನು ತರಿಸಿಕೊಂಡ. ಅವನು ಟೀ ಕುಡಿಯುವವರೆಗೆ ಅವಳು ಕಿಟಕಿಯ ಬಳಿಗೆ ಹೋಗಿ, ಅವನಿಗೆ ಬೆನ್ನು ಮಾಡಿ ಹೊರಗೆ ನೋಡತೊಡಗಿದಳು. ಅವಳು, ಜನರಿಂದ ಕದ್ದುಮುಚ್ಚಿ ಕಳ್ಳರಂತೆ ಬದುಕ ಬೇಕಿದೆಯಲ್ಲ ಎಂದು ನೆನೆದು ಭಾವೋದ್ವೇಗದಿಂದ ಅಳುತ್ತಿದ್ದಳು. ಇದೆಂತಾ ಬದುಕು!?

“ಆನ್ನಾ, ಸಾಕು ನಿಲ್ಲಿಸು. ಬಾ ಇಲ್ಲಿಗೆ.” ಗುರೊವ್ ಕೇಳಿಕೊಂಡ. ತಮ್ಮ ಈ ಪ್ರೇಮ ಪಯಣ ಬೇಗ ಮುಗಿಯುವಂತದಲ್ಲವೆಂದು ಅವನಿಗೆ ಅರ್ಥವಾಗಿತ್ತು. ಹೇಗೆ ನೋಡಿದರೂ ಅದರ ಅಂತ್ಯ ಅವನಿಗೆ ಕಾಣಿಸುತ್ತಿರಲಿಲ್ಲ. ಅವಳು ಅವನಿಗೆ ಹೆಚ್ಚೆಚ್ಚು ಹತ್ತಿರವಾಗುತ್ತಿದ್ದಳು. ಅವಳು ಹೆಚ್ಚು ಕಮ್ಮಿ ಅವನನ್ನು ಆರಾಧಿಸುವ ಮಟ್ಟಕ್ಕೆ ಬಂದಿದ್ದಳು. ಯಾವತ್ತಾದರೂ ಒಂದು ದಿನ ಇದು ಅಂತ್ಯವಾಗಬಹುದೆಂದು ಅವಳಿಗೆ ಹೊಳೆಯಲು ಸಾಧ್ಯವೇ ಇರಲಿಲ್ಲ. ಹೇಳಿದರೂ ಕೂಡ ಅವಳು ನಂಬುವ ಸ್ಥಿತಿಯಲ್ಲಿರಲಿಲ್ಲ. ಅವನೇ ಎದ್ದು ಅವಳ ಬಳಿಗೆ ಹೋದ. ಅವಳ ಭುಜಗಳನ್ನು ತಡವಿ ಅವಳಿಗೆ ಏನಾದರೂ ಸಮಾಧಾನಕರವಾದ, ಅವಳನ್ನು ಖುಷಿಗೊಳಿಸುವ ಮಾತುಗಳನ್ನು ಆಡಿ ಅವಳನ್ನು ಸಂಪ್ರೀತಗೊಳಿಸಬೇಕಿತ್ತು. ಹೋಗುತ್ತಿರುವಾಗ ಗೋಡೆಯ ಮೇಲಿದ್ದ ನಿಲುವುಗನ್ನಡಿಯಲ್ಲಿ ಅವನ ಮುಖ ಕಾಣಿಸಿತು. ಅವನ ತಲೆಯ ಕೂದಲು ಆಗಾಗಲೇ ನೆರೆಯಲಾರಂಭಿಸಿತ್ತು. ಕೆಲವು ವರ್ಷಗಳಿಂದೀಚೆಗೆ ಅವನಿಗೆ ತನಗೆ ವಯಸ್ಸಾಗುತ್ತಿದ್ದೆ ಎಂದು ಅನಿಸುತ್ತಿತ್ತು. ಅವನ ಕೈ ಕೆಳಗಿದ್ದಅವಳ ಭುಜಗಳು ಬಿಸಿಯಾಗಿದ್ದವಷ್ಟೇ ಅಲ್ಲದೆ ಮೆಲ್ಲಗೆ ಕಂಪಿಸುತ್ತಿದ್ದವು. ಅವನು, ತನ್ನಂತೆಯೇ ಸುಕ್ಕುಗಟ್ಟಲಿರುವ ಆ ಸುಂದರ ಜೀವಕ್ಕಾಗಿ ಚಡಪಡಿಸಿದ. ಅವಳು ಅದೇಕೆ ಅವನನ್ನು ಅಷ್ಟೊಂದು ಪ್ರೀತಿಸುತ್ತಿದ್ದಾಳೆ? ಹೆಣ್ಣುಮಕ್ಕಳು, ಅವನು ಸಹಜವಾಗಿ ಇರುವುದಕ್ಕಿಂತ ಬೇರೆಯೇ ರೀತಿಯಲ್ಲಿ, ತಮ್ಮದೇ ಕಲ್ಪನೆಯ ಮೂಸೆಯಲ್ಲಿ ಅವನನ್ನು ಕಾಣುತ್ತಿದ್ದರು. ಅವರೆಲ್ಲಾ ಜೀವನವಿಡೀ ಅವನನ್ನೇ ಹುಡುಕುತ್ತಿದ್ದವರಂತೆ ಕಾಣಿಸುತ್ತಿದ್ದರು! ಕೊನೆಗೆ, ತಮ್ಮ ತಪ್ಪು ಅರಿವಾದ ಮೇಲೂ ಅವರು ಅವನನ್ನು ದ್ವೇಷಿಸುತ್ತಿರಲಿಲ್ಲ. ಅಷ್ಟೇ ಪ್ರೀತಿಸುತ್ತಿದ್ದರು. ಆದರೆ, ಅವರಲ್ಲೊಬ್ಬರೂ ಅವನ ಜೊತೆ ಸಂತೋಷವಾಗಿರಲಿಲ್ಲ. ವೇಳೆ ಸರಿದಿರುತಿತ್ತು. ಅವನು ಅವರ ಒಡನಾಟದಲ್ಲಿದ್ದ. ಆದರೆ, ಅವನು ಒಬ್ಬರನ್ನೂ ಪ್ರೀತಿಸಿರಲಿಲ್ಲ. ನೀವು ಅದನ್ನು ಏನು ಬೇಕೆಂದಾದರೂ ಕರೆಯಿರಿ. ಆದರೆ, ಅದು ಪ್ರೀತಿಯಂತೂ ಆಗಿರಲಿಲ್ಲ.

ಆದರೆ, ಈಗತಲೆ ಕೂದಲು ಹಣ್ಣಾಗುತ್ತಿರುವ ಹೊತ್ತಿನಲ್ಲಿ, ಜೀವನದಲ್ಲಿ ಮೊದಲ ಭಾರಿಗೆ ಅವನು ನಿಜವಾಗಿಯೂ ಪ್ರೇಮವೆಂಬ ಉರುಳಿಗೆ ಸಿಕ್ಕಿಕೊಂಡಿದ್ದ. ಇಬ್ಬರೂ ಒಬ್ಬರನ್ನೊಬ್ಬರು ಗಂಡ-ಹೆಂಡತಿಯರಿಗಿಂತ ಮಿಗಿಲಾಗಿ ಪ್ರೀತಿಸುತ್ತಿದ್ದರು. ತನಗೇಕೆ ಒಬ್ಬ ಮಡದಿ, ತನಗೇಕೆ ಒಬ್ಬ ಗಂಡನಿದ್ದಾನೆಂದು ಅವರಿಬ್ಬರಿಗೂ ಅರ್ಥವಾಗಿರಲಿಲ್ಲ! ಬಹುಶಃ ತಾವು ಒಂದೇ ಗೂಡಿನ ಹಕ್ಕಿಗಳು. ವಿಧಿ ತಮ್ಮನ್ನು ಬೇರೆ ಬೇರೆ ಗೂಡಿನಲ್ಲಿ ನೆಲೆಸುವಂತೆ ಮಾಡಿರಬೇಕು ಎಂದು ಅವರು ಭಾವಿಸಿದ್ದರು. ಅವರ ಹಿಂದಿನ ಬದುಕಿನಲ್ಲಿ ಜರುಗಿದ್ದ ಲಜ್ಜಾಸ್ಪದ ಘಟನೆಗಳನ್ನು ಕುರಿತು ಅವರು ಒಬ್ಬರನ್ನೊಬ್ಬರ ಕ್ಷಮೆ ಯಾಚಿಸಿದರು. ವರ್ತಮಾನದ ಅಹಿತಕರ ಘಟನೆಗಳನ್ನೂ ಕ್ಷಮಿಸಿದರು. ಹೊಸದಾದ ಈ ಪ್ರೀತಿ ತಮ್ಮಿಬ್ಬರನ್ನೂ ಬದಲಾಯಿಸಿದೆ ಎಂದು ಅವರು ಭಾವಿಸಿದ್ದರು. ಹಿಂದೆ, ಅವನನ್ನು ಖಿನ್ನತೆ ಆವರಿಸಿಕೊಂಡಾಗ ತನಗೆ ತೋಚಿದ ರೀತಿಯಲ್ಲಿ ವಾದ ಮಾಡಿ ತನ್ನನ್ನು ತಾನೇ ಸಂತೈಸುತ್ತಿದ್ದ. ಈಗ ಅವನು ವಾದಗಳಿಂದ ದೂರ ಸರಿದಿದ್ದ. ಅವನಲ್ಲೀಗ ಗಾಢವಾದ ಸಹಾನುಭೂತಿ ತುಂಬಿಕೊಂಡಿತ್ತು. ಅವನು ನಿಷ್ಠಾವಂತನಾಗಿರಲು ಬಯಸಿದ್ದ.

“ಅಳಬೇಡ ಡಾರ್ಲಿಂಗ್… ನೀನು ಅತ್ತಿದ್ದು ಬೇಕಾದಷ್ಟಾಯಿತು, ನಿಲ್ಲಿಸು. ನಾವು ಮಾತನಾಡೋಣ, ಮುಂದೇನು ಮಾಡುವುದೆಂದು ಯೋಚಿಸೋಣ.”

ಅವರು ಬಹಳ ಹೊತ್ತು ಹೀಗೆ ಕದ್ದು ಮುಚ್ಚಿ ಭೇಟಿಯಾಗುವ ಸಂದರ್ಭಗಳನ್ನು ಹೇಗೆ ತಪ್ಪಿಸಿಕೊಳ್ಳುವುದು, ಮುಖವಾಡಗಳನ್ನು ತೊಟ್ಟು ಓಡಾಡುವುದು, ಬೇರೆ ಬೇರೆ ಊರುಗಳಲ್ಲಿ ನೆಲೆಸಿ ಯಾವಾಗಲಾದರೊಮ್ಮೆ ಭೇಟಿಯಾಗುವ ಕಿರಿಕಿರಿಯಿಂದ ಪಾರಾಗುವುದು, ಈಗಿರುವ ಬಂಧನಗಳಿಂದ ಹೇಗೆ ಕಳಚಿಕೊಳ್ಳುವುದು ಎಂಬುದರ ಕುರಿತು ಮಾತನಾಡತೊಡಗಿದರು.

“ಹೇಗೆ, ಹೇಗೆ?!” ಅವನು ತಲೆಯನ್ನು ಎರಡೂ ಕೈಗಳಿಂದ ಗಟ್ಟಿಯಾಗಿ ಹಿಡಿದುಕೊಂಡ.

ಕೆಲ ಹೊತ್ತಿನ ಹಿಂದೆ ಈ ಪ್ರಶ್ನೆಗೆ ಉತ್ತರ ಸಿಕ್ಕಿ ಅವರ ಹೊಸ ಸುಂದರ ಬದುಕು ಶುರುವಾಗುವುದೆಂದು ಅನಿಸಿತ್ತು. ಆದರೆ, ಈಗ ನೋಡುವಾಗ, ಈಗಷ್ಟೇ ಪ್ರಾರಂಭವಾಗಿರುವ ಅವರ ಮುಂದಿನ ಹಾದಿಯು ಬಹಳ ಕಠಿಣವಾಗಿದೆ ಎಂದು ಇಬ್ಬರಿಗೂ ಮನದಟ್ಟಾಗತೊಡಗಿತು…

***

(The Lady with the Dog)


.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
flavia albuquerque
flavia albuquerque
4 months ago

ಉತ್ತಮವಾದ ಕಥೆ ಸರ್

1
0
Would love your thoughts, please comment.x
()
x