ಮಾತುಗಳ ಮೂಲಕ ಭಾವನೆಗಳನ್ನು ಹೊರ ಹಾಕುವ ಸಾಮರ್ಥ್ಯ ಮಾನವನಿಗೆ ಮಾತ್ರ ಇದೆ. ಇದು ಪ್ರಕೃತಿ ಮಾನವನಿಗೆ ಕೊಟ್ಟಿರುವ ವರ! ಭಾಷೆಯ ಸೃಷ್ಟಿ ಮಾನವನ ಸೃಜನೆಗಳಲ್ಲಿ ಅಧ್ಬುತವಾದುದು. ಕೊಡಲು ಕೊಳ್ಳಲು, ಸಂವಹನ ಮಾಡಲು, ಭಾವನೆಗಳನ್ನು ಅಭಿವ್ಯಕ್ತಿಸಲು, ವ್ಯವಹರಿಸಲು ಭಾಷೆ ಅತಿ ಅವಶ್ಯಕ. ಹುಟ್ಟಿದ ಮನೆಯಲ್ಲಿ ನಡೆಯಂತೆ ನುಡಿಯನ್ನೂ ಕಲಿತಿರುತ್ತೇವೆ ಅದೇ ಆಗುವುದು ಮಾತೃಭಾಷೆ. ಎಲ್ಲರ ಮಾತೃಭಾಷೆಯಲ್ಲಿ ಎಲ್ಲಿ ಜ್ಞಾನ ಇರುವುದಿಲ್ಲ. ಹಾಗೆ ಅಲ್ಲಿ ಇಲ್ಲದ ಜ್ಞಾನವನ್ನು ಅನ್ಯ ಭಾಷೆಯಲ್ಲಿ ಕಲಿಯಬೇಕಾಗುತ್ತದೆ. ವಿಜ್ಞಾನ, ತಂತ್ರಜ್ಞಾನ, ಜೀವವಿಜ್ಞಾನ, ವೈದ್ಯವಿಜ್ಞಾನ ಮುಂತಾದವು ನಮ್ಮ ಮಾತೃಭಾಷೆಯಲ್ಲಿ ಇಲ್ಲದಿರುವುದರಿಂದ ಅನ್ಯ ಭಾಷೆಯಲ್ಲಿ ಕಲಿಯುತ್ತಿದ್ದೇವೆ. ಆದರೆ ಬೇರೆ ಭಾಷೆಗಳಿಗಿಂತ ಮಾತೃ ಭಾಷೆಯಲ್ಲಿ ಏನನ್ನಾದರೂ ಕಲಿಯುವುದು ಸುಲಭ !
ಯಾರು ಮಾತೃ ಭಾಷೆಯನ್ನು ಪ್ರೀತಿಸುತ್ತಾರೋ, ಅದರ ಬೆಳವಣಿಗೆಗೆ ಹೋರಾಡುತ್ತಾರೋ ಅವರಿಗೆ ಅವರ ಮಾತೃ ಭಾಷೆ ಸರ್ವಸ್ವವನ್ನು ಕೊಟ್ಟಿದೆ ಅಂತ ಅರ್ಥ ! ಸರ್ವಸ್ವವನ್ನು ಕೊಡದಿದ್ದರೂ ಬದುಕುವ ಅವಕಾಶವಾದರೂ ಕೊಟ್ಟಿರುತ್ತದೆ. ಕೊನೇ ಪಕ್ಷ ಅನ್ನ ಕೊಡುವ ಭಾಷೆಯಾದರೂ ಆಗಿರುತ್ತದೆ. ಅದಕ್ಕೆ ಅವರು ಋಣಿಯಾಗಿರುತ್ತಾರೆ, ಅದನ್ನು ಆರಾಧಿಸುತ್ತಾರೆ! ಅದನ್ನು ಬೆಳೆಸಲು ಹೋರಾಡಿ ಋಣ ತೀರಿಸುತ್ತಾರೆ! ಯಾರು ಅವರ ಮಾತೃ ಬಾಷೆಯ ಉಳಿವಿಗಾಗಿ ಹೋರಾಡುತ್ತಿಲ್ಲವೋ ಅವರಿಗೆ ಬದುಕುವುದೇ ಕಷ್ಟವಾಗಿ, ಆ ಭಾಷೆ ಅವರಿಗೆ ಬದುಕು ಕಟ್ಟಿಕೊಡಲು ವಿಫಲವಾಗಿದೆ ಎಂದು ಭಾವಿಸಬೇಕಾಗಬಹುದು! ಬದುಕುವುದೇ ಕಷ್ಟವಾದಾಗ ಭಾಷೆ ಉಳಿವಿಗೆ ಹೋರಾಡುವುದು ಕಷ್ಟ! ಆದ್ದರಿಂದ ಅವರು ಭಾಷೆ ಉಳಿವಿಗೆ ಹೋರಾಡದೇ ಇರಬಹುದು! ಅವರಿಗೆ ಯಾವುದಾದರೂ ಭಾಷೆ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟರೆ ಅವರು ಆ ಭಾಷೆಗೆ ಋಣಿಯಾಗಿರುವುದು, ಆ ಭಾಷೆಯ ಆರಾಧಿಸುವುದು ತಪ್ಪೇನು ಅಲ್ಲ! ಹಾಗೆ ಯಾವ ಭಾಷೆ ಬದುಕನ್ನು ಸುಂದರಗೊಳಿಸುವ ಭರವಸೆ ಮೂಡಿಸುತ್ತದೋ ಅದನ್ನು ಅವಲಂಬಿಸುವುದು, ಆರಾಧಿಸುವುದು ತಪ್ಪಲ್ಲವಲ್ಲವೆ? ನಮ್ಮ ಕನ್ನಡ ನಮ್ಮ ಅಗತ್ಯತೆಗಳನ್ನು ಈಡೇರಿಸಿದಾಗ ಬೆಳೆಯುವುದು.
ಹಿಂದಿಗಿಂತ ಇಂದು ಕನ್ನಡಾಭಿಮಾನ, ಕನ್ನಡ ಭಾಷೆಯ ಬಳಕೆ ಹೆಚ್ಚಿದೆ. ಇಂದಿನ ಅನೇಕ ಯುವಕರು, ಅದರಲ್ಲೂ ಇಂಗ್ಲಿಷ್ ಭಾಷೆಯಲ್ಲಿ ಶಿಕ್ಷಣ ಮುಗಿಸಿದ ಯುವಕರೂ ಸಹ ಕನ್ನಡ ಭಾಷೆಯನ್ನು ತುಂಬಾ ಪ್ರೀತಿಸುತ್ತಿದ್ದಾರೆ. ಕನ್ನಡ ಆಡಳಿತ ಭಾಷೆಯಾಗಿ ಯಶಸ್ವಿಯಾದಾಗಿನಿಂದ ಬೆಂಗಳೂರು ಬಿಟ್ಟು ಉಳಿದೆಡೆ ಕನ್ನಡ ಭಾಷೆಗೆ ಹೆಚ್ಚಾಗಿ ಪ್ರಾಧಾನ್ಯತೆ ದೊರೆತಿದೆ.
ಕನ್ನಡದ ನೋವು : ಕನ್ನಡ ಭಾಷೆ ಇನ್ನೂ ಚೆನ್ನಾಗಿ ಬೆಳೆಯಲು ಕೆಲವು ತೊಡಕುಗಳಿವೆ. ಅವೇ ನೋವು!
- ರಾಜ್ಯದ ರಾಜಧಾನಿಯಲ್ಲೇ ಕನ್ನಡ ವಿರೂಪವಾಗಿ ನೆಲೆ ಕಳೆದುಕೊಳ್ಳುತ್ತಿರುವುದು.
- ಕನ್ನಡದ ನೆಲ, ಜಲ ಸವಿಯುವ ಅನ್ಯ ಭಾಷಿಗರು ಕನ್ನಡ ಭಾಷೆಯ ಕಲಿಯದೇ ಅವರ ಭಾಷೆಯ ಪಾರಮ್ಯ ಮೆರೆಯಲು ಹೊರಟಿರುವುದು.
- ವಿದ್ಯಾರ್ಥಿಗಳಿಲ್ಲದೆ ಕನ್ನಡ ಮಾಧ್ಯಮದ ಸರಕಾರಿ ಶಾಲೆಗಳು ಮುಚ್ಚುತ್ತಿರುವುದು, ಇಂಗ್ಲಿಷ್ ಮಾಧ್ಯಮದ ಶಾಲೆಗಳು ಹೆಚ್ಚುತ್ತಿರುವುದು ಅದರಲ್ಲೂ ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳು ತುಂಬಾ ಹೆಚ್ಚು ಬೇಡಿಕೆಯಲ್ಲಿರುವಂತೆ ಮಾಡಿರುವುದು! - ಇಂಗ್ಲಿಷ್ ಭಾಷೆ ಪ್ರಭಾವ : ಇಂಗ್ಲಿಷ್ ಭಾಷೆ ಪ್ರಭಾವದಿಂದಾಗಿ ಕನ್ನಡ ಇಂಗ್ಲೀಷ್ ಪದಗಳ ನಡುವಿನ ವ್ಯತ್ಯಾಸ ತಿಳಿಯದಾಗಿ ಎಷ್ಟೋ ಇಂಗ್ಲೀಷ್ ಪದಗಳನ್ನು ಕನ್ನಡದ ಪದಗಳೆಂದು ಬಳಸುತ್ತಿರುವುದು!
- ಕೆಲವು ಕನ್ನಡದ ಪದಗಳು ಇಂಗ್ಲಿಷ್ ಭಾಷೆಯ ಪದಗಳ ಮೇಲಿನ ವ್ಯಾಮೋಹದಿಂದ ಮೂಲೆ ಗುಂಪಾಗುತ್ತಿರುವುದು. ‘ ಔಷಧಿ ಅಂಗಡಿ ‘ ಎಂಬ ಪ್ರಸಿದ್ದ ಪದ ಕಾಣೆಯಾಗಿ, ಮೆಡಿಕಲ್ಸ್, ಮೆಡಿಪ್ಲಸ್, ಮೆಡಿಹೌಸ್, ಫಾರ್ಮಸಿಸ್ ಎಂಬ ಅಪರಿಚಿತ ಪದಗಳು ಜನಪ್ರಿಯ ಆಗುವಂತೆ ಮಾಡಿರುವುದು.
- ಕಾಲೇಜುಗಳಲ್ಲಿ ಸಹ ಇಂಗ್ಲಿಷ್ ಪದಗಳು ವ್ಯಾಮೋಹ : ಅಂತಿಮ ಪದವಿ ಮುಗಿಸಿದವರ ಬೇಳ್ಕೊಡುಗೆಯಕತಹ ಕಾರ್ಯಕ್ರಮ ಮಾಡುತ್ತಿದ್ದರು ಇಂದು ಸ್ವಾಗತ ಸಮಾರಂಭದ ಬದಲು welcome party ಅನ್ನೋದು ಹೋಗಿ ಪ್ರೆಶರ್ಸ್ ಪಾರ್ಟಿ ಅಂತ, ಹಾಗೆ ಬೇಳ್ಕೊಡುಗೆ ಎಂಬುದು, ಸೆಂಡಾಪರ್ಟಿ ಆಗಿ ಈಗ ಫೇರ್ ವೆಲ್ ಪಾರ್ಟಿ ಅಂತ ಆಗಿ ಆ ಕನ್ನಡ ಪದಗಳ ಅವನತಿಗೆ ಕಾರಣವಾಗುತ್ತಿರುವುದು!
- ಬಹಳಷ್ಟು ಕಡೆ ಇಂಗ್ಲೀಷ್ ಪದಗಳ ಬದಲಿಗೆ ಕನ್ನಡ ಪದಗಳನ್ನು ಬಳಸಲು ಇಲ್ಲದ ಪ್ರಯುಕ್ತ ಇಂಗ್ಲಿಷ್ ಪದಗಳನ್ನೇ ಅನಿವಾರ್ಯವಾಗಿ ಬಳಸಲಾಗುತ್ತಿರುವುದು.
- ಕನ್ನಡ ಪದಗಳಿಗಿಂತ ಇಂಗ್ಲಿಷ್ ಪದಗಳು ಸುಲಭವಾಗುತ್ತಿರುವುದು. : ಅರಕ್ಷಕ ಠಾಣೆಗಿಂತ ಪೋಲೀಸ್ ಸ್ಟೇಷನ್ ಸುಲಭ ಚಿರಪರಿಚಿತ. ಸಂಚಾರಿ ದೂರವಾಣೆ ಎಂದರೆ ಏನೆಂದು ಯಾರಿಗೂ ಗೊತ್ತಿಲ್ಲ! ಆದರೆ ಮೊಬೈಲ್ ಎಂದರೆ ಏನೆಂದು ಎಲ್ಲರಿಗೂ ಗೊತ್ತಾಗುವಂತಾಗಿರುವುದು! - ಇಂಜಿನಿಯರಿಂಗ್, ವೈದ್ಯಕೀಯ, ವೆಟರ್ನರಿ ಮುಂತಾದ ವಿಜ್ಞಾನ ತಂತ್ರಜ್ಞಾನ ಉನ್ನತ ಶಿಕ್ಷಣವನ್ನು ಕನ್ನಡದಲ್ಲಿ ಕೊಡದಿರುವುದು!
- ಕನ್ನಡಿಗರು ಮಾತನಾಡುವ ಪ್ರತಿ ವಾಕ್ಯದಲ್ಲಿ ಇಂಗ್ಲಿಷ್ ಪದಗಳು ತುಂಬಿರುವುದು.
- ಸೆಲಬ್ರಿಟಿಗಳು, ಜನಸಾಮಾನ್ಯರು its nice! Bueatyful! .. wonderful! Sorry, thanks… ಪದಗಳನ್ನು ಉಸಿರಾಗಿಸಿಕೊಂಡಿರುವುದು!
- ಸರಿಗಮಪ ಲಿಟಲ್ ಚಾಂಪ್ಸ್, ಡ್ರಾಮಾ ಜ್ಯೂನಿಯರ್ಸ್… ಮುಂತಾದ ಕಾರ್ಯಕ್ರಮಗಳ ಶೀರ್ಷೀಕೆ ಇಂಗ್ಲಿಷ್ ಮಯ ಆಗಿರುವುದು!
- ವಾಕ್ಯದ ತುಂಬಾ ಇಂಗ್ಲಿಷ್ ಪದಗಳೇ ಇರುವುದು. ವಾಕ್ಯ ರಚನಾ ರೀತಿ ಕನ್ನಡವಾದರೂ ಪದಗಳೆಲ್ಲಾ ಇಂಗ್ಲಿಷ್ ಮಯ ಆಗಿರುವುದು.
- ಆಮ್ಲಜನಕ, ಜಲಜನಕ, ಸಸಾರಜನಕ … ಮುಂತಾದವುಗಳ ಕನ್ನಡದ ತಜ್ಞರು ಕಷ್ಟಪಟ್ಟು ಸೃಜಿಸಿದ ಪದಗಳು ಪಠ್ಯದಿಂದ ದೂರವಾಗಿ ಅವುಗಳ ಬದಲು ಆಕ್ಸೀಜನ್ … ಇಂಗ್ಲಿಷ್ ಪದಗಳೇ ಕನ್ನಡ ಅಕ್ಷರಗಳಲ್ಲಿ ಮುದ್ರಿಸಿರುವುದು.
- ಕನ್ನಡ ಬರದಿರುವವರು ಕರ್ನಾಟಕದಲ್ಲಿ ಬದುಕಲಾಗುವುದಿಲ್ಲ, ಯಾವುದೇ ಉದ್ಯೋಗ ಮಾಡಲಾಗುವುದಿಲ್ಲ ಎಂಬ ಪರಿಸ್ಥಿತಿ ಉಂಟಾಗದ ಹೊರತು ಇಲ್ಲಿ ವಾಸಿಸುವ ಅನ್ಯ ಭಾಷಿಗರು ಕನ್ನಡ ಕಲಿಯರು! ಕನ್ನಡಿಗರು ಇನ್ನೂ ಹೆಚ್ಚಿನ ಕನ್ನಡಭಿಮಾನ ತೋರಬೇಕು.
ಕನ್ನಡದ ನಲಿವು : ಕನ್ನಡ ಬೆಳೆಯಲು ಮೂಡಿದ ಹೊಸ ಭರವಸೆಗಳು :
- ಕನ್ನಡಿಗರಿಗೆ ಉದ್ಯೋಗಾವಕಾಶ ಈಗೀಗ ಹೆಚ್ಚುತ್ತಿರುವುದು. ಕೆಂದ್ರದಲ್ಲೂ ಹೆಚ್ಚಬೇಕು.
- ಕನ್ನಡ ಭಾಷೆ ಆಡಳಿತ ಭಾಷೆಯಾದ ಪ್ರಯುಕ್ತ ಕನ್ನಡದಲ್ಲಿ ಆಡಳಿತ ನಡೆಯುತ್ತಿರುವುದು. ಕಛೇರಿಗಳಲ್ಲಿ ಕನ್ನಡದಲ್ಲಿ ಸಂವಹನ ನಡೆಯುತ್ತಿರುವುದು.
- ಕೋರ್ಟುಗಳಲ್ಲಿ ತೀರ್ಪುಗಳು ಈಗೀಗ ಕನ್ನಡದಲ್ಲಿ ಬರುತ್ತಿರುವುದು. ಕನ್ನಡದಲ್ಲಿ ತೀರ್ಪು ಕೊಡುವವರಿಗೆ ಪ್ರಶಸ್ತಿ, ಪ್ರೋತ್ಸಾಹ ಸಹ ಕೊಡುತ್ತಿರುವುದು.
- ಯುವ ಇಂಜಿನಿಯರುಗಳು ಅನೇಕಾರರು ಕನ್ನಡ ಆಪ್ ಗಳನ್ನು ಸೃಜಿಸಿರುವುದು. ಕನ್ನಡಾಭಿಮಾನ ಮೆರೆಯುತ್ತಿರುವುದು.
- ಈಗ ತಾಂತ್ರಿಕ ಶಿಕ್ಷಣವನ್ನು ಕನ್ನಡದಲ್ಲಿ ನೀಡಲು ಹೊರಟಿರುವುದು. ಪಠ್ಯ ಸಿದ್ದಪಡಿಸಿ ವಿಶ್ವವಿದ್ಯಲಯಗಳಿಗೆ ಸರಬರಾಜು ಮಾಡಿರುವುದು. ಮುಖ್ಯವಾಗಿ ವಿಟಿ ಗೆ ಕೊಟ್ಟಿರುವುದು.
- ಯುವ ಬರಹಗಾರು ಕನ್ನಡದಲ್ಲಿ ವಿಜ್ಞಾನದ ಬಗ್ಗೆ ಲೇಖನಗಳನ್ನು ಬರೆಯುತ್ತಿರುವುದು. ಇಂತಹ ಯುವಕರು ಹೆಚ್ಚುತ್ತಿರುವುದು.
- ಡಾ!! ಬಿ ಟಿ ರುದ್ರೇಶ್ ಮುಂತಾದ ರಾಷ್ಟ್ರ ಪ್ರಸಿದ್ಧ ಕರುನಾಡ ವೈದ್ಯರು ಕನ್ನಡದಲ್ಲಿ ತಮ್ಮ ಅನುಭವಗಳ ಬರೆಯುತ್ತಿರುವುದು. ಆರೋಗ್ಯ ಸಲಹೆ ಕೊಡುತ್ತಿರುವುದು. ಅನುಭವಗಳ ಪುಸ್ತಕ ರೂಪದಿ ಕನ್ನಡ ಭಾಷೆಯಲ್ಲಿ ಹೊರತರುತ್ತಿರುವುದು.
- ಚಲನಚಿತ್ರ ನಟರು ಕನ್ನಡವನ್ನು ಪ್ರೀತಿಸುತಿಸುತ್ತಾ ಕನ್ನಡ ಪ್ರೇಮ ಮೆರೆಯುತ್ತಿರುವುದು.
- ಕನ್ನಡದ ಚಲನಚಿತ್ರಗಳು ಫ್ಯಾನ್ ಇಂಡಿಯಾ ಚಿತ್ರಗಳಾಗಿ ಪ್ರಶಸ್ತಿಗಳ ಬಾಚುತ್ತಿರುವುದು.
- ಕರ್ನಾಟಕದ ಕಿರುತೆರೆಗಳು ಕನ್ನಡಮಯವಾಗಿರುವುದು.
- ಕಿರಿ ಹಿರಿ ತೆರೆಯ ಕಾರ್ಯಕ್ರಮಗಳು ಸೊಗಸಾಗಿ ಕನ್ನಡದಲ್ಲಿ ನಿರೂಪಿತವಾಗುತ್ತಿರುವಂತಹದ್ದು. ಅನುಶ್ರೀ ಯವರಂತಹ ನಿರೂಪಕಿಯರು ಹೆಚ್ಚುತ್ತಿರುವುದು.
- ಕಿರಿ ತೆರೆಯಲ್ಲಿ ಸರಿಗಮಪ ಲಿಟಲ್ ಚಾಂಪ್ಸ್, ಡ್ರಾಮಾ ಜ್ಯೂನಿಯರ್ಸ್ , ಕೋಟ್ಸಾಧಿಪತಿ ಹಾಸ್ಯ … ಮುಂತಾದ ಕಾರ್ಯಕ್ರಮಗಳು ಸೊಗಸಾದ ಕನ್ನಡದಲ್ಲಿ ಸುಂದರವಾಗಿ ಮೂಡಿಬರುತ್ತಿರುವುದು.
- ಕತೆ, ಕಾದಂಬರಿ ಮೊಬೈಲಿನಲಿ ಕನ್ನಡದಲ್ಲಿ ಕೇಳಿಸಿಕೊಳ್ಳುವಂತಾಗಿರುವುದು.
- ಕನ್ನಡ ಸಾಹಿತ್ಯ ಸಂಧಿ ಕಾಲದಲ್ಲಿದ್ದರೂ ಹುಲುಸಾಗಿ ಬೆಳೆಯುತ್ತಿದೆ!
- ಅಂತರ್ಜಾಲದಲ್ಲಿ ಕನ್ನಡ ಬೇರೆ ಬೇರೆ ರೂಪದಲ್ಲಿ ಪ್ರಕಟವಾಗುತ್ತಿರುವುದು.
- ಕ್ರಿಕೆಟ್ ಮತ್ತು ಇತರೆ ಕೆಲವು ಆಟಗಳ ವೀಕ್ಷಕವಿವರಣೆ ಕನ್ನಡದಲ್ಲಿ ಕೊಡುತ್ತಿರುವುದು.
- ಕನ್ನಡಪರ ಸಂಘಟನೆಗಳು ಹೆಚ್ಚಿ, ಕನ್ನಡಾಭಿಮಾನ, ಕ್ರೀಯಾಶೀಲ ಹೋರಾಟ ಪ್ರಖರವಾಗುತ್ತಿರುವುದು : ಕನ್ನಡ ಪರ ಹೋರಾಟಗಾರ ರಾಜಣ್ಣ ಕನ್ನಡಿಗರಿಗೆ ಅವಮಾನ ಮಾಡಿದವರನ್ನು ಅವರು ಕೆಲಸ ಮಾಡುವ ಕಂಪನಿಯಿಂದ ಕಿತ್ತೆಸೆಯುವಂತಹ ಹೋರಾಟ ಮಾಡಿದುದು. ಇವೆಲ್ಲಾ ಕನ್ನಡ ನುಡಿಯನ್ನು ಶ್ರೀಮಂತಗೊಳಿಸಲು ಪೂರಕವಾದವಾಗಿವೆ.
- ಬೇರೆ ಕಡೆಯಿಂದ ಬಂದ ಬೇರೆ ಭಾಷಿಗರು ಇಲ್ಲಿ ಇರಬೇಕೆಂದರೆ, ಇಲ್ಲಿ ಕೆಲಸ ಮಾಡಬೇಕೆಂದರೆ ಅವರು ನಿರ್ದಿಷ್ಟ ಗಡುವಿನೊಳಗೆ ಕನ್ನಡ ಕಲಿಯುವಂತಾಗಬೇಕು. ಇಲ್ಲಿನ ನೆಲ, ಜಲ, ಗಾಳಿ, ಉದ್ಯೋಗ ಅವರ ಬದುಕು ಅರಳಲು ಕಾರಣವಾಗಿರುವುದರಿಂದ ಅವರು ಇಲ್ಲಿನ ಭಾಷೆ ಕಲಿತು ಈ ಮಣ್ಣಿನ ಋಣ ತೀರಿಸಿ ಈ ನಾಡು ನುಡಿಯ ಗೌರವಿಸಿ, ನಾಡಿಗೆ ಕೃತಜ್ಞರಾಗಿರಬೇಕು. ಸರಕಾರಗಳು ಕನ್ನಡವನ್ನು ಕನ್ನಡಿಗರಿಗೆಲ್ಲಾ ಅನ್ನ ಕೊಡುವ ಭಾಷೆಯಾಗಿಸುವ ಪ್ರಯತ್ನ ಮಾಡಬೇಕು. ಸುಂದರ ಲಿಪಿಯ, ಸುಮಧುರ, ಆಂಡಯ್ಯನ, ರತ್ನನ ಕನ್ನಡ ಬೆಳೆಯಬೇಕು, ಕನ್ನಡ ಬೆಳೆಯಲಿ, ಹೊಳೆಯಲಿ!
-ಕೆ ಟಿ ಸೋಮಶೇಖರ್ ಹೊಳಲ್ಕೆರೆ