ಕನ್ನಡವೆಂದರೆ ಬರಿನುಡಿಯಲ್ಲ: ಸಂತೋಷ್‌ ಟಿ.

ಕನ್ನಡವೆಂದರೆ ಬರಿನುಡಿಯಲ್ಲ ಹಿರಿದಿದೆ ಅದರರ್ಥ ಎಂದು ನಲ್ಮೆಯ ಕವಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಆದ ಪ್ರೊ. ಕೆ.ಎಸ್. ನಿಸಾರ್ ಅಹಮ್ಮದ್ ಅವರ ನವೋಲ್ಲಾಸ ಕೃತಿಯ ಒಂದು ಕವಿತೆಯ ಉವಾಚ. ಕನ್ನಡವೆಂದರೆ ಬರಿ ನುಡಿಯಲ್ಲ ಅದರ ಅರ್ಥ ಬಹಳ ಹಿರಿದು ಎಂಬ ಕವಿಯ ಪರಿಕಲ್ಪನೆ ಮಹೋನ್ನತವಾದ ಧ್ಯೇಯ ಮತ್ತು ಅಧ್ಯಯನದಿಂದ ಕೂಡಿದೆ. ಕನ್ನಡ ಅಥವಾ ಕರ್ನಾಟಕವೆಂದರೆ ಭಾರತದಲ್ಲಿ ಮಹತ್ವದ ಸ್ಥಾನವಾಗಿದೆ. ಭೌಗೋಳಿಕ, ಭಾಷಿಕ, ಸಾಹಿತ್ಯಿಕ, ಸಾಂಸ್ಕೃತಿಕ ರಾಜಕೀಯ ಎಲ್ಲಾ ರೀತಿಯಿಂದಲೂ ಅದು ಉನ್ನತವಾದ ಚರಿತ್ರೆಯನ್ನು ತನ್ನ ಇತಿಹಾಸದ ಪುಟಗಳ ತುಂಬಾ ತುಂಬಿ ಕೊಂಡಿದೆ. ಎತ್ತರದ ನಾಡು ಗಿರಿಶೃಂಗಗಳ ಬೀಡು ಕನ್ನಡನಾಡು. ಕಪ್ಪು ಮಣ್ಣಿನ ಕರುನಾಡು. ಆದಿ ದ್ರಾವಿಡ ದಕ್ಷಿಣ ವಿಕಸಿತ ಎರಡನೇ ಭಾಷೆ ಕನ್ನಡ. ವ್ಯಾಸರ ಮಹಾಭಾರತದಲ್ಲಿ ಕರ್ಣಾಟ ಹೆಸರು ಉಲ್ಲೇಖವಿದೆ. ತಮಿಳು ಕಾವ್ಯ ಶಿಲಪ್ಪದಿಗಾರಮ್ ನಲ್ಲಿ ಕರುನಾಡರ್ ಎಂಬ ಉಲ್ಲೇಖವಿದೆ. ಕರ್ನಾಟಕವೆಂದರೆ ಕುಂತಲ ದೇಶ, ಪುನ್ನಾಡು, ಎರುಮೈ ಊರವರು, ಮಹಿಷಮಂಡಲ, ಕಡಲ್ ಕಳ್ಳರ್, ವಡುಗರ್ ಹೆಸರುಗಳು ಸಹ ಸಂಗಂ ಸಾಹಿತ್ಯ ಕಾಲಕ್ಕೆ ಇದ್ದ ಹೆಸರುಗಳು. ಕ್ರಿ.ಪೂ ಕಾಲದಿಂದಲೂ ದ್ರಾವಿಡ ವಿಭಾಗದ ಕನ್ನಡ ಜನವಸತಿ ಇತ್ತು ಎಂಬುದಕ್ಕೆ ನದಿ ಬಯಲು ಪ್ರದೇಶಗಳು ದಕ್ಷಿಣ ಪ್ರಸ್ಥಭೂಮಿ ಭೂಶೋಧನೆಗಳ ಸಾಕ್ಷಿಯಾಗಿದೆ. ರಾಮಾಯಣ ಕಾಲದ ಕಿಷ್ಕಿಂದೆ ಇಂದಿನ ವಿಜಯನಗರದ ಹಂಪೆ. ಪ್ರಾಚೀನ ಆದಿಮಾನವರು ತುಮಕೂರಿನ ಕಿಬ್ಬನಹಳ್ಳಿ, ಚಿತ್ರದುರ್ಗದ ಬ್ರಹ್ಮಗಿರಿ, ಮೈಸೂರಿನ ಹೆಮ್ಮಿಗೆ, ಬಳ್ಳಾರಿಯ ತೆಕ್ಕಲಕೋಟೆ ಬಿಜಾಪುರದ ಖ್ಯಾಡ, ಕಲ್ಬುರ್ಗಿಯ ಹುಣಸಗಿ ಮೊದಲಾದ ಕಡೆ ನೆಲೆಸಿ ಬದುಕು ನಡೆಸಿದ ಬಗ್ಗೆ ದಾಖಲೆಗಳಿವೆ.ಕ್ರಿ.ಸ ಪೂರ್ವ ೩ನೇ ಶತಮಾನದ ಮೌರ್ಯರ ಅಶೋಕ ಚಕ್ರವರ್ತಿಯ ಕಾಲದಲ್ಲಿ ದೊರೆತಿರುವ ಬೌದ್ದ ಶಾಸನಗಳು ಮತ್ತು ಬ್ರಹ್ಮಗಿರಿ ಶಾಸನದ ಇಸಿಲ ಪದ ಬಳಕೆ ಸ್ಥಳ ನಾಮ ತೇದಿಯಿರುವ ಕನ್ನಡದ ಮೊದಲ ಪದ ಎಂದು ಹೇಳಬಹುದು. ೨ ನೇ ಶತಮಾನದಲ್ಲೆ ಗ್ರೀಕ್ ಭೂಗೋಳ ತಜ್ಞ ಟಾಲೆಮಿ ಬಾದಾಮಿ (ಬದಿಯಮೈ), ಮುದಗಲ್( ಮದೌಗೌಲ), ಬನವಾಸಿ ( ಬನವೊಸಯ್) , ಹೂವಿನ ಹಿಪ್ಪರಗಿ ( ಹಿಪ್ಪಕೂರ), ಪುನ್ನಾಟ, ಮಲ್ಪೆ ( ಮಲಿಪ್ಪಲ) ಇಂತಹ ಚಾರಿತ್ರಿಕ ಹೆಸರುಗಳ ಉಲ್ಲೇಖ ಮಾಡಿರುವುದು ತಿಳಿದಿದೆ.

ಕಂಡಲ್ಲಿ ಗುಣಕೆ ಕೈ ಮುಗಿದು ಕೊಂಡಾಡಿ ಕರೆವ,
ಎತ್ತಿ ಮಡಿಲಲಿ ತೂಗಿ ಜಗಕೆಲ್ಲ ತೋರಿ ತಣಿವ,
ಹಾಲ್ ಬೆಣ್ಣೆ ಹೆಜ್ಜೇನು ಕೆನೆ ಮೊಸರನೂಡಿ
ಒಳ್ಪನುಪಚರಿಸಿ ಉಪಚರಿಸಿ ಮಣಿವ…
ಧನ್ಯ ದಾನದ ನೆಲೆಯು ನಮ್ಮ ಹೊನ್ನಾಡು

ಎಂಬ ಭವ್ಯ ಕಲ್ಪನೆ ನಿಸಾರ್ ಅಹಮದ್ ಅವರ ಕವಿತೆ.

ಕ್ರಿ.ಶ ೩೨೫ ರಿಂದ ಕನ್ನಡನಾಡು ಮತ್ತು ನುಡಿಯ ಹಿರಿಮೆಯನ್ನು ಹೆಚ್ಚಿಸಿ ಸ್ವತಂತ್ರವಾಗಿ ಆಡಳಿತ ಮಾಡಿದ ಬನವಾಸಿ ಕದಂಬರು ಮೂಲತಃ ಕನ್ನಡಿಗರು. ಇವರ ಮೂಲ ಕೇಂದ್ರ ಬನವಾಸಿ. ಇವರ ಕಾಲದಲ್ಲಿ ಕಾಕುಸ್ಥವರ್ಮ ಹಾಕಿಸಿದ ಪೂರ್ವದ ಹಳಗನ್ನಡದ ಕ್ರಿ.ಶ ೪೫೦ರ ಹಲ್ಮಿಡಿ ಶಾಸನ ಮೊದಲ ಕನ್ನಡ ಶಾಸನವಾಗಿದೆ. ಇಗೀಗಣ ದಾಖಲೆ ಗಂಗರ ಶಾಸನಗಳು ಅದಕ್ಕು ಪ್ರಾಚೀನ ಎಂದು ತಿಳಿದು ಬರುತ್ತದೆ. ಪ್ರಾಚೀನ ಗಂಗರು ಕೋಲಾರ, ಮಣ್ಣೆ ಮಾಕುಂದ,ತಲಕಾಡುಗಳನ್ನು ರಾಜಧಾನಿ ಮಾಡಿಕೊಂಡು ಆಳಿದ ಕನ್ನಡಿಗರು ಬಹಳ ದೀರ್ಘ ಕಾಲದ ವರೆಗೆ ಆಡಳಿತವನ್ನು ನಡೆಸಿದರು. ಇವರು ಮೂಲತಃ ಒಕ್ಕಲಿಗ ಜನಾಂಗದವರು ಎಂದು ತಿಳಿದು ಬರುತ್ತದೆ. ಇವರಲ್ಲಿ ಮಂತ್ರಿ, ಸೈನ್ಯಾಧಿಪತಿ, ವಿದ್ವಾಂಸ , ಕವಿ ಚಾವುಂಡರಾಯ ನಿರ್ಮಿಸಿದ ಶ್ರವಣ ಬೆಳಗೊಳದ ೫೮ ಅಡಿ ಉದ್ದದ ಏಕಶಿಲಾ ಬೃಹತ್ ಗೋಮ್ಮಟೇಶ್ವರ ಕನ್ನಡಿಗರ ಹಿರಿಮೆಯಾಗಿದೆ.

ಕ್ರಿ.ಶ ೭ನೇ ಶತಮಾನದ ಬಾದಾಮಿ ಶಾಸನ ಅಪ್ಪಟ ದೇಸಿ ಛಂದಸ್ಸಿನ ಜನಪದದ ಮೊದಲ ತ್ರಿಪದಿ ತಟ್ಟುಕೋಟೆ ಕಪ್ಪೆ ಅರಭಟ್ಟನ ಶಾಸನದಲ್ಲಿ ವೀರನ ವರ್ಣನೆ ಸಿಕ್ಕಿದೆ.

ಸಾಧುಗೆ ಸಾಧು, ಮಾಧುರ್ಯಂಗೆ ಮಾಧುರ್ಯಂ
ಬಾದಿಪ್ಪ ಕಲಿಗೆ ಕಲಿಯುಗವಿಪರೀತನ್
ಮಾಧವನೀತನ್ ಪೆರನಲ್ಲ

ಒಳ್ಳಿತ್ತ ಕೆಯ್ವಾರಾರ್ ಪೊಲ್ಲದುಮದದರಂತೆ
ಬಲ್ಲಿತ್ತು ಕಲಿಗೆ ವಿಪರೀತಾ ಪುರಾಕೃತ-
ಮಿಲ್ಲಿ ಸಂಧಿಕ್ಕುಮದು ಬಂದು

ಕಟ್ಟಿದ ಸಿಂಘಮನ್ ಕಟ್ಟೋದೇನೆಮಗೆಂದು
ಬಿಟ್ಟವೋಲ್ ಕಲಿಗೆ ವಿಪರೀತಂಗಹಿತರ್ಕ್ಕಳ್
ಕೆಟ್ಟರ್ ಮೇಣ್ ಸತ್ತರವಿಚಾರಂ

ಎನ್ನುವುದು ಅದರ ವಿಶೇಷವಾಗಿದೆ. ಕನ್ನಡದ ಮೊದಲ ಕೃತಿ ಮಾನ್ಯಖೇಟದ ರಾಷ್ಟ್ಲಕೂಟರ ಕಾಲದ ಅಮೋಘವರ್ಷ ನೃಪತುಂಗನ ಕಾಲದಲ್ಲಿ ಶ್ರೀವಿಜಯನಿಂದ ರಚಿತವಾದ ಕವಿರಾಜಮಾರ್ಗವಾಗಿದೆ. ಇಲ್ಲಿ ಕನ್ನಡ ನಾಡಿನ ಭೌಗೋಳಿಕ ಎಲ್ಲೆ ಗಡಿಗಳನ್ನು ಜನರ ವಿಶಿಷ್ಟ ಗುಣವನ್ನು ಹೇಳಲಾಗಿದೆ.

ಕಾವೇರಿಯಿಂದಮಾ ಗೋ
ದಾವರಿವರಮಿರ್ದ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಾಸು
ಧಾವಲಯವೀಲಿನವಿಶದ ವಿಷಯ ವಿಶೇಷಂ

ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್

ಸುಭಟರ್ಕಳ್ ಕವಿಗಳ್ ಸು
ಪ್ರಭುಗಳ್ ಚೆಲ್ವರ್ಕಳ್ ಅಭಿಜನರ್ಕಳ್ ಗುಣಿಗಳ್
ಅಭಿಮಾನಿಗಳ್ ಅತ್ಯುಗ್ರರ್
ಗಭೀರಚಿತ್ತರ್ ವಿವೇಕಿಗಳ್ ನಾಡವರ್ಗಳ್
ಎಂದು ಬಹಳ ವಿಶೆಷವಾಗಿ ಕನ್ನಡಿಗರ ಗುಣವಿಶೇಷಗಳನ್ನು ಹೇಳಿರುವನು. ಕ್ರಿ.ಶ ೯ನೇ ಶತಮಾನದ ಕನ್ನಡದ ಆದಿಕವಿ ಪಂಪನ ಬನವಾಸಿಯ ವರ್ಣನೆಯಂತೂ ಭಾಮಾನುಭೂತಿಯಿಂದ ಕೂಡಿದೆ.

ಸೊಗಯಿಸಿ ಬಂದ ಮಾಮರನೆ ತಳ್ತೆವಳ್ಳಿಯ ಪೂತ ಜಾತಿ ಸಂ
ಪಗೆಯ ಕುಕಿಲ್ವ ಕೋಗಿಲೆಯ ಪಾಡುವ ತುಂಬಿಯೆ ನಲ್ಲರೊಳ್ಮೂಗಂ
ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋಳ್ಪಾಡುವ ಬೆ
ಟ್ಟುಗಳೊಳಮಾವ ನಂದನವನಂಗಳೊಳಂ ಬನವಾಸಿ ದೇಶದೊಳ್

ಚಾಗದಭೋಗದಕ್ಕರದ ಗೇಯದ ಗೊಟ್ಟಿಯಲಿಂಪಿನಿಂಪುಗ
ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ
ನಾಗಿಯುಮೇನೊ ತೀರ್ದಪುದೆ ತೀರದೊಡಂ ಮರಿದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್

ತೆಂಕಣ ಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕಡಂ ಮಧುಮಹೋತ್ಸವಮಾದೋಡಮೇನನೆಂಬೆನಾ
ರಂಕುಸಮಿಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ

ಎಂಬ ಕಲ್ಪನೆ ವೆಂಗಿಮಂಡಲದ ಚಾಲುಕ್ಯ ಅರಿಕೇಸರಿ ಸಂಸ್ಥಾನದಲ್ಲಿದ್ದರು, ಕನ್ನಡ ನಾಡಿನ ಬಾಲ್ಯದ ನೆನಪುಗಳನ್ನು ಸ್ಮರಿಸುವ ಕವಿ ತನ್ನ ತಾಯಿ ತವರು ಧಾರವಾಡದ ಅಣ್ಣಿಗೆರೆಯನ್ನು ನೆನೆದಿರುವ ಬಗೆಯನ್ನು ತಿಳಿಯಬಹುದು. ಮಾನ್ಯಖೇಟದ ರಾಷ್ಟ್ರಕೂಟರು,ಬಾದಾಮಿ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು ದೋರಸಮುದ್ರದ ಹೊಯ್ಸಳರು, ದೇವಗಿರಿಯ ಯಾದವರು, ವಿಜಯನಗರದ ಅರಸರು, ಬಹುಮನಿ ಸುಲ್ತಾನರು, ಕೆಳದಿ ಇಕ್ಕೇರಿ ಸಂಸ್ಥಾನಗಳು, ಪಾಳೇಪಟ್ಟುಗಳು, ಮೈಸೂರು ಅರಸರು , ಹೈದರ್ ಅಲಿ ಟಿಪ್ಪು ಸುಲ್ತಾನ್, ಕಮೀಷನರುಗಳು, ದಿವಾನರು, ಆಧುನಿಕ ಮೈಸೂರು, ವಿಶಾಲ ಮೈಸೂರು ರಾಜ್ಯ, ಕರ್ನಾಟಕ ಏಕೀಕರಣ, ಹೀಗೆ ಹಲವು ದಶಕಗಳ ಚಾರಿತ್ರಿಕ ಪಡಿನೋಟವುಳ್ಳ ಕನ್ನಡ ನಾಡು ನುಡಿ ನೆಲ ಜಲ ಬದುಕು ಹಲವು ವೈವಿಧ್ಯಮಯ ಸಂಸ್ಕೃತಿ ಒಳನೋಟಗಳನ್ನು ಎಲ್ಲಾ ರೀತಿಯಲ್ಲೂ ದಾಖಲಾಗಿರುವುದು ಕಾಣಬಹುದು.

ಇಂತಹ ಕಲ್ಪನೆ ನಮ್ಮ ಕವಿಗೆ ಇದ್ದಿರಬಹುದು. ಭೂಗರ್ಭ ಶಾಸ್ತ್ರದ ವಿದ್ಯಾರ್ಥಿಯಾಗಿ ಅಧ್ಯಾಪಕರು ಪ್ರಾಧ್ಯಾಪಕರು ಆಗಿದ್ದ ಪ್ರೊ.ಕೆಎಸ್. ನಿಸಾರ್ ಅಹಮದ್ ಅವರು ಕನ್ನಡ ಕವಿಯಾಗಿ ಬೆಳೆಯಲು ಅವರಿಗಿದ್ದ ಇಂತಹ ಅರಿವು ಪ್ರಭಾವಶಾಲಿ ಎಂಬುದು ಅವರ ಕೆಲವು ಕವಿತೆಗಳಲ್ಲಿ ದೃಢವಾಗಿದೆ.

ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ
ನಿತ್ಯ ಹರಿದ್ವರ್ಣವನದ ತೇಗಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯಿ, ನಿತ್ಯೋತ್ಸವ ನಿನಗೆ…..

ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ
ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ
ಓಲೆಗರಿಯ ಸಿರಿಗಳಲ್ಲಿ ದೇಗುಲಗಳ ಭಿತ್ತಿಗಳಲಿ
ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ…..

ಹಲವೆನ್ನದ ಹಿರಿಮೆಯೆ ಕುಲವೆನ್ನದ ಗರಿಮೆಯೆ
ಸದ್ವಿಕಾಸಶೀಲ ನುಡಿಯೆ ಲೋಕಾವೃತ ಸೀಮೆಯೆ
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ
ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ

ಎಂಬ ಗೀತೆಯ ರಚನೆಯ ಹಿಂದಿನ ರಸನಿಮಿಷದ ಹೊಳಹುಗಳು ಕವಿಗೆ ಹೀಗೆ ಒದಗಿ ಬಂದಿರಬಹುದು.

ಇದು ಸಿಡಿಲಿನ ನುಡಿ; ಇದು ಮಡಿಯದ ನುಡಿ, ಎಂದೆಂದಿಗು ಇದು ಮೊಳಗುವುದು.
ನೂರು ನಿಯಮಗಳ ಕಾರ್ಮುಗಿಲೋಳಿ
ಮುಸುಕಿದರೂ ತೊಳತೊಳಗುವುದು.

ನಗೆ ಮೊಗ ತಾಳಿದ ಹಗೆ ಮಾಡುವ ಬಗೆ –
ಮಾಡೋಕೆ ಮರುಳಾಗದು ಎಂದೂ;
ಕಪಟ ಮೋಸಗಳ ದರ್ಪಕ್ಕೆ, ಆಜ್ಞೆಗೆ
ತಲೆ ಬಾಗದು ಇದು ಎಂದೆಂದೂ

ಎಂಬ ಆತ್ಮ ಪ್ರಜ್ಞೆಯ ಸ್ವಾಭಿಮಾನ ಕನ್ನಡಿಗರದು ಎಂಬುದು ಅವರ ನಿಲುವು. ಕನ್ನಡಿಗರ ಅಪೂರ್ವ ಉಜ್ವಲ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಸಿಗಬಹುದಾದ ಭವ್ಯ ಕಲ್ಪನೆಗಳನ್ನು ಸೃಜನಶೀಲ ರಚನೆಗಳ, ನಿರ್ಮಾಣ ಶಿಲ್ಪಗಳ, ಅಲಂಕಾರ ರೂಪಕಗಳ, ಗುಣ ವಿಶೇಷಗಳ ತುಲನಾತ್ಮಕವಾದ ಅಭ್ಯಾಸ ಟಿಪ್ಪಟಿಗಳನ್ನು ಬರೆದು ಕೊಳ್ಳಬಹುದು. ಇವತ್ತಿನ ಸಾಹಿತ್ಯದ ಶಿಸ್ತು ಮುಖ್ಯವಾಗಿ ತೌಲನಿಕ ಅಧ್ಯಯನಗಳೇ ಎಂಬ ಟ್ರೆಂಡ್ ತನ್ನ ವ್ಯಾಪ್ತಿಯನ್ನು ಕ್ರಿಯೆ ಮತ್ತು ಚಟುವಟಿಕೆಯ ಪ್ಲೋಕ್ ಡೈಲಾಗ್ ಆಗಿ ರೂಪುಗೊಂಡಿದೆ ಎಂದರೆ ಪಠ್ಯ ವಿಷಯದ ಕಾಲ ದೇಶ ಅಂತರಗಳಿಂದ ತಾಳಿದ ನಿಲುವುಗಳು ಅದರ ಪ್ರಸ್ತುತತೆ ಮತ್ತು ವಿಕಸಿತ ರೂಪವನ್ನು ಕಲೆ ಸಾಹಿತ್ಯ ಇತರ ಎಲ್ಲಾ ಶಿಸ್ತುಗಳಲ್ಲಿ ಕಾಣಬಹುದು. ಕನ್ನಡ ಅಥವಾ ಕರ್ನಾಟಕವನ್ನು ನವೆಂಬರ್ ತಿಂಗಳಲ್ಲಿ ಮಾತ್ರ ಗ್ರಹಿಸುವ ನಾವು ಅದನ್ನು ಇನ್ನು ಯಾವ ಯಾವ ದೃಷ್ಟಿಕೋನದಿಂದ ಅಭ್ಯಾಸಿಸಬಹುದು ಮತ್ತು ಅವುಗಳ ಹಿನ್ನೆಲೆ ಮುನ್ನೆಲೆಯನ್ನು ಅರಿಯುವ ಕೆಲಸವೆ ಕನ್ನಡ ನಾಡು ನುಡಿಯ ಸೇವೆ.

ಹಿಂದಣ ಅನಂತವನು ಮುಂದಣ ಅನಂತವನು
ಒಂದು ದಿನ ಒಳಕೊಂಡಿತ್ತು ನೋಡಾ
ಒಂದು ದಿನವನೊಳಕೊಂಡು ಮಾತಾಡುವ ಮಹಾಂತನ
ಕಂಡು ಬಲ್ಲವರಾರಯ್ಯ
ಆದ್ಯರು ವೇದ್ಯರು ಅನಂತ ಹಿರಿಯರು ಕಾಲದಂತುವನರಿಯದೆ
ಅಂತೆ ಹೋದರು ಕಾಣಾ ಗುಹೇಶ್ವರ

ಎಂಬ ಅಲ್ಲಮಪ್ರಭುವಿನ ಮಾತು ಸಾಗರದಷ್ಟು ಬೆಟ್ಟದಷ್ಟು ಅನಂತವಾದ ಅನನ್ಯವಾದ ಸತ್ಯ. ಇಲ್ಲಿ ಪರಂಪರೆಯ ಔನತ್ಯವಿದೆ. ಭೂತ ವರ್ತಮಾನ ಭವಿಷ್ಯತ್ ಕಾಲದ ತಾರ್ಕಿಕ ನಿಲುವಿದೆ. ಒಂದು ಭಾಷೆಯ ಜಾಯಮಾನ ಅರಿಯಲು ಇಂತಹ ಜ್ಞಾನ ಪರಂಪರೆಗಳ ಶೋಧ ಅಗತ್ಯವಾಗಿದೆ.

ಸಂತೋಷ್ ಟಿ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x