ಬದಲಾದ ಕಾಲಘಟ್ಟದಲ್ಲಿ ಪತ್ರಿಕಾ ಮಾಧ್ಯಮ: ವಿಜಯ್ ಕುಮಾರ್ ಕೆ.ಎಂ.

ಭಾರತ ದೇಶಕ್ಕೆ ಸ್ವಾತಂತ್ರ್ಯ ಬರುವ ಪೂರ್ವದಿಂದಲೂ ಮಾಧ್ಯಮ ಎಂದರೆ ಪತ್ರಿಕೆ, ಪತ್ರಿಕೆಯಿಂದಲೇ ಹತ್ತಾರು ಕ್ರಾಂತಿಕಾರಿ ಬದಲಾವಣೆಗಳು, ಪತ್ರಿಕೆಯಿಂದಲೇ ಜ್ಞಾನ, ಪತ್ರಿಕೆಯೇ ಮಾಧ್ಯಮ ಎಂಬ ಸ್ಥಿತಿ ನಿರ್ಮಾಣವಾಗಿ ಶತಮಾನಗಳೇ ಉರುಳಿದರೂ ಅಳಿಯದೇ ಉಳಿದಿರುವ ಒಂದು ಶಕ್ತಿಯುತ ಮಾಧ್ಯಮ ಎಂದರೆ ಅದು ಪತ್ರಿಕೆ(ಮುದ್ರಣ) ಮಾಧ್ಯಮ. ಕ್ರಿ.ಪೂ 1956 ರಲ್ಲಿ ರೋಮನ್ನರು ಪ್ರಾರಂಭಿಸಿದ ಪತ್ರಿಕೆ ಹಂಚಿಕೆಯ ವಿಧಾನ ಮುಂದೊಂದು ದಿನ ದಿನಪತ್ರಿಕೆಯಾಗಿ ಬದಲಾಗಿ 1605 ರಲ್ಲಿ ಜಾನ್ ಕಾರ್ಲೋಸ್ ನ ಮೂಲಕ ಜಗತ್ತನ್ನು ಪ್ರವೇಶಿಸಿತು. ತದನಂತರ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಜೇಮ್ಸ್ ಅಗಸ್ಟಸ್ ಹಿಕ್ಕಿ 1780 ರಲ್ಲಿ ಬೆಂಗಾಳಿ ಗೆಜೆಟ್ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ನಂತರ ಕರ್ನಾಟಕದಲ್ಲಿ ಮಂಗಳೂರು ಸಮಾಚಾರ ಎಂಬ ಪತ್ರಿಕೆಯು 1980 ರಲ್ಲಿ ಹರ್ಮನ್ ಮೊಗ್ಲಿಂಗ್ ಅವರು ಪ್ರಾರಂಭಿಸಿದರು. ಅಂದಿನಿಂದ ಪ್ರಾರಂಭಗೊಂಡ ಈ ದಿನಪತ್ರಿಕೆಗಳು ಪತ್ರಿಕಾ ಮಾಧ್ಯಮವಾಗಿ ಬಹು ಎತ್ತರಕ್ಕೆ ಬೆಳೆದು ಇಂದು ಪ್ರಪಂಚದಾದ್ಯಂತ ಹೆಸರು ಮಾಡಿ ತಮ್ಮದೇ ಆದ ಸಂಚಲನ ಸೃಷ್ಠಿಸಿವೆ.

ಆದರೆ ಅಂದು ಪತ್ರಿಕಾ ಮಾಧ್ಯಮ ಎಷ್ಟರ ಮಟ್ಟಿಗೆ ಮಾನವರ ಹೃದಯ ತಲುಪಿತೋ ಅಷ್ಟರ ಮಟ್ಟಿಗೆ ಇಂದು ತಲುಪಲು ಸಾಧ್ಯವಾಗುತ್ತಿಲ್ಲವೇನೋ ಎಂಬ ಭಾವನೆ ಮೂಡುವುದಂತೂ ನಿಜ ಸಂಗತಿ. ಇದಕ್ಕೆ ಹತ್ತಾರು ಕಾರಣಗಳು ನಮ್ಮ ಕಣ್ಮುಂದೆ ಬರುತ್ತವೆ. ಅದೊಂದು ಕಾಲವಿತ್ತು ಇಂದಿನ ದೇಶ ವಿದೇಶ ಸ್ಥಿತಿಗತಿಗಳನ್ನು ಅರಿಯಲು ಮುಂಜಾನೆ ಪತ್ರಿಕೆ ಮತ್ತು ದೂರದರ್ಶನ ಮಾತ್ರ ಸಹಕಾರಿಯಾಗಿದ್ದವು. ಮುಂಜಾನೆ ಎದ್ದು ಒಂದು ಲೋಟ ಕಾಫಿ/ಟೀ ಹಿಡಿದು ಪತ್ರಿಕೆ ಓದಲು ಕುಳಿತವರು ಸರಿ ಸುಮಾರು ಮೂವತ್ತು ನಿಮಿಷವಾದರೂ ಸಮಯ ಕಳೆದು ಪತ್ರಿಕೆಯೊಂದಿಗೆ ಬೆರೆತು ನೂರಾರು ವಿಷಯಗಳ ಬಗ್ಗೆ ಅರಿತು ಅದನ್ನು ಹವ್ಯಾಸವಾಗಿಸಿಕೊಂಡಿದ್ದರು. ಅದರಿಂದ ಕೇವಲ ಸಮಯ ಕಳೆಯುವುದಷ್ಟೇ ಅಲ್ಲ ಅದರಿಂದ ತಿಳಿಯುತ್ತಿದ್ದ ಉಪಯುಕ್ತ ಮಾಹಿತಿ ಎಷ್ಟೋ ಜನರ ಭವಿಷ್ಯ ಬದಲಿಸಿದೆ ಅಷ್ಟರ ಮಟ್ಟಕ್ಕೆ ಪತ್ರಿಕಾ ಮಾಧ್ಯಮ ತಲುಪಿತ್ತು. ಇತಿಹಾಸದ ಪುಟ ತೆರೆದು ನೋಡಿದರೆ ಭಗತ್ ಸಿಂಗ್ ರಂತಹ ತೀವ್ರಗಾಮಿಗಳು, ಮಹಾತ್ಮ ಗಾಂಧೀಜಿಯವರಂತಹ ಮಂದಗಾಮಿಗಳು ಅಂದಿನ ಸ್ವತಂತ್ರ ಹೋರಾಟಕ್ಕೆ ಬಳಸಿದ್ದು ಇದೇ ದಿನ ಪತ್ರಿಕೆಗಳು,ಮಾಸ ಪತ್ರಿಕೆಗಳು ಇದರಿಂದಾಗಿ ಎಷ್ಟೋ ಭಾರತದ ಪ್ರಜೆಗಳ ಪ್ರೇರೇಪಿತರಾಗಿ ಸ್ವಾತಂತ ಸಂಗ್ರಾಮಕ್ಕೆ ದುಮುಕಿ ಭಾರತವು ಬ್ರಿಟಿಷರ ಕಪಿಮುಷ್ಠಿ ಯಿಂದ ಹೊರಬರಲು ಕಾರಣವಾಯಿತು ಎಂಬುದು ತಿಳಿದ ವಿಚಾರ. ಇದಲ್ಲದೆ ಬಾಬಾ ಸಾಹೇಬ್ ಅಂಬೇಡ್ಕರ್, ನೇತಾಜಿ, ಶಾಸ್ತ್ರಿ, ನೆಹರೂ, ಪಟೇಲ್ ರಂತಹ ಅನೇಕ ಮಹನೀಯರು ಅಂದಿನ ಕಾಲದಲ್ಲಿ ತಮದೇ ಆದ ಬರಹಗಳ ಪತ್ರಿಕೆ ಸೃಷ್ಠಿಸಿದ್ದು ಜಗತ್ತನು ಪರಿವರ್ತಿಸಲು ಮತ್ತು ಭಾರತದಂತಹ ಬಹುದೊಡ್ಡ ದೇಶದ ಜನರನ್ನು ತಲುಪಲು ಇದೇ ಪತ್ರಿಕೆ ಮಾಧ್ಯಮವೇ ಕಾರಣವಾಗಿತ್ತು.

ವಿಲ್ ರೋಗರ್ಸ್ ಹೇಳುವಂತೆ ” ಇಂದು ನಾನು ಏನು ತಿಳಿದಿದ್ದೇನೆ ಇದೆಲ್ಲವೂ ನಾನು ಓದಿದ ದಿನಪತ್ರಿಕೆಯಿಂದಲೇ” ಎಂಬ ಉಕ್ತಿ ನಿಜಕ್ಕೂ ಒಬ್ಬ ವ್ಯಕ್ತಿ ಅಷ್ಟು ಜ್ಞಾನಿ ಆಗಲು ತನ್ನನ್ನು ತಾನು ಸಾಧನೆಯ ಹಾದಿಗೆ ಸಾಗಲು ದಿನಪತ್ರಿಕೆಗಳು ಅಷ್ಟು ಪರಿಣಾಮ ಬೀರಿದವೇ? ಎಂದೆನಿಸದೆ ಇರದು. ಇದರಿಂದಾಗಿಯೇ ಹಲವು ಮಹನೀಯರು, ಸಾಧಕರು ತಮ್ಮ ಸಾಧನೆಯನ್ನು ಪತ್ರಿಕೆಯಿಂದ ಪ್ರೇರೇಪಿತರಗಿ ಅದೇ ಪತ್ರಿಕೆಯಲ್ಲಿ ಮುದ್ರಣಗೊಂಡು ಸಂಭ್ರಮಿಸಿದ ಹತ್ತಾರು
ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಹೌದು ಅಂದಿನ ದಿನಗಳ ದಿನಪತ್ರಿಕೆ ಮಹತ್ವ ಅಷ್ಟೇ ವಿಶೇಷ ಮತ್ತು ವಿನೂತನವಾದದ್ದು ಅದರ ಹತ್ತಾರು ಮಜಲುಗಳನ್ನು ಅನುಭವಿಸಿದ ನಮ್ಮ ಹಿರಿಯರ ಅನುಭವಗಳು ನಮಗೆ ಅದರ ಮಹತ್ವ ತಿಳಿಸಿಕೊಡುತ್ತವೆ. ಈ ಹಿಂದೆ ನಮ್ಮ ತಾತ ಮುತ್ತಾತರ ಕಾಲದಲ್ಲಿ ಒಂದು ಪರೀಕ್ಷೆಯ ಫಲಿತಾಂಶ ಕೂಡ ಪತ್ರಿಕೆಯಲ್ಲಿ ಮುದ್ರಣಗೊಂಡ ಹೊರಬೀಳುತ್ತಿತ್ತು ಅದರ ಮೂಲಕವೇ ಅವರು ಅವರ ಫಲಿತಾಂಶ ಪಡೆದು ಸಂಭ್ರಮಿಸುತ್ತಿದ್ದರಂತೆ. ಅದೇ ರೀತಿಯಲ್ಲಿ ಒಂದು ವಿಶೇಷ ವಿಷಯವಾಗಲಿ, ಆಚರಣೆಯಾಗಲಿ, ಆದೇಶವಾಗಲಿ, ಸೂಚನೆಯಾಗಲಿ, ಶುಭ ವಿಚಾರವೇ ಆಗಲಿ ಅದನ್ನು ಪತ್ರಿಕಾ ಮಾಧ್ಯಮದ ಮೂಲಕ ಮುದ್ರಣ ಮಾಡಿ ಜನರನ್ನು ಪತ್ರಿಕೆ ಕಡೆಗೆ ಸೆಳೆದಿಡುವ ಶಕ್ತಿ ಈ ಮಾಧ್ಯಮ ರೂಢಿಸಿಕೊಂಡಿತ್ತು.

ಇಷ್ಟೆಲ್ಲಾ ಆಯಾಮಗಳ ನಡುವೆ ಸಾಗಿ ಬಂದ ಪತ್ರಿಕಾ ಮಾಧ್ಯಮ ಇಂದು ಯಾವ ದಿಕ್ಕಿನೆಡೆಗೆ ಸಾಗುತ್ತಿದೆ ಎಂಬುದನ್ನು ಅವಲೋಕಿಸುವ ಸಮಯ ಇದಾಗಿದೆ. ದಿನಪತ್ರಿಕೆಗೆ ನಗರ ಪ್ರದೇಶಕ್ಕೆ ತೆರಳಿ ತರಬೇಕಾದ ಪರಿಸ್ಥಿತಿಯಿಂದ ಕೈ ಬೆರಳ ತುದಿಯಲ್ಲಿ ದಿನಪತ್ರಿಕೆ ನೋಡುವ ಸ್ಥಿತಿ ಆಧುನಿಕ ಜಗತ್ತಿಗೆ ತಕ್ಕಂತೆ ಇದೆ. ಆದರೆ ಅದರ ಆಗುಹೋಗುಗಳು ಮಾತ್ರ ಕ್ಷಿಪ್ರಗತಿಯ ಬದಲಾವಣೆ ಕಂಡು ಪತ್ರಿಕಾ ಮಾಧ್ಯಮದ ದಿಕ್ಕನ್ನೇ ಬದಲಾಯಿಸಲೊರಟಿದೆ. ಅಂದಿನ ಕಾಲಕ್ಕೆ ಬೆರಳೆಣಿಕೆಯಷ್ಟೇ ಚಾಲ್ತಿಯಲ್ಲಿದ್ದ ಪತ್ರಿಕೆಗಳು ಇಂದು ಕಂಡು ಕೇಳರಿಯದಷ್ಟು ಪ್ರಮಾಣದಲ್ಲಿ ವಿವಿಧ ಹೆಸರುಗಳಲ್ಲಿ ಬಿಡುಗಡೆಗೊಂಡು ನಾ ಮುಂದು ತಾ ಮುಂದು ಎನುವಂತೆ ಜಿದ್ದಾಜಿದ್ದಿಯ ಪೈಪೋಟಿ ನಡೆಸುತ್ತಿವೆ. “ಅತಿಯಾದರೆ ಅಮೃತವೂ ವಿಷವಿದ್ದಂತೆ” ಎನ್ನುವ ಹಿರಿಯರ ಮಾತು ಪ್ರಸ್ತುತ ದಿನಪತ್ರಿಕೆ ಲೋಕಕ್ಕೂ ಹೊಂದುಕೊಳ್ಳುವಂತೆಯೇ ಇದೆ. ಸಾಲದಕ್ಕೆ ಪ್ರಾಂತ್ಯಕ್ಕನುಗುಣವಾಗಿ, ಜಿಲ್ಲೆಗಳಿಗೆ ಅನುಗುಣವಾಗಿ, ತಾಲ್ಲೂಕು ಹೋಬಳಿಗಳಿಗೆ ಅನುಗುಣವಾಗಿ ಅಲ್ಲಿನ ಸ್ಥಳೀಯ ಪತ್ರಿಕೆಗಳು ತಮ್ಮ ಪಾರುಪತ್ಯ ಮೆರೆಯುತ್ತಿರುವುದು ನಿಜಕ್ಕೂ ದಿನಪತ್ರಿಕೆ ಮಾಧ್ಯಮದ ಕ್ಷೇತ್ರಕ್ಕೆ ದೊರೆತ ಸವಾಲಗಳಂತೆ ಕಾಣುತ್ತವೆ.

ಅಂದಿನ ದಿನಪತ್ರಿಕೆಗಳನ್ನು ಓದುವುದೇ ಒಂದು ಆನಂದದಾಯಕ. ಪತ್ರಿಕೆಯಲ್ಲಿನ ವಿಚಾರಗಳು ಜ್ಞಾನದ ಕಣಜವಾಗಿರುತ್ತಿದ್ದವೇ ಹೊರತು ಇಂದಿನಂತೆ ಬೇಡದ ಸಂಗತಿಗಳ ಸಂಗ್ರಹದಂತಿರಲಿಲ್ಲ. ಒಂದೊಂದು ಪುಟವು ಹತ್ತು ಹಲವು ವಿಚಾರಗಳು, ದೇಶ ವಿದೇಶದ ಸಮಗ್ರ ಮಾಹಿತಿ, ಸಿನಿಮಾ,ಸಾಹಿತ್ಯದಂತಹ ಕಲಾತ್ಮಕ ವಿಚಾರಗಳು, ಕ್ರೀಡೆ, ಆರ್ಥಿಕತೆಯ ಆಯಾಮಗಳು ಹೀಗಿ ವಿವಿಧ ರಂಗಗಳ ಮಾಹಿತಿ ಕಲೆ ಹಾಕಿ ಮುದ್ರಿಸುತ್ತಿದ್ದ ಕಾಲವದು. ಇಂದು ಸಹ ಈ ರಂಗಗಳ ಮಾಹಿತಿಯನ್ನು ಮುದ್ರಿಸುತ್ತಿವೆ ಆದರೆ ಅದರ ಸತ್ವ ಮಾತ್ರ ಅಂದಿನಂತೆ ಗಟ್ಟಿಯಾಗಿಲ್ಲದಿರುವುದು ಇಂದಿನ ಪತ್ರಿಕಾ ಮಾಧ್ಯಮಗಳ ಬದಲಾವಣೆಯನ್ನು ತೋರಿಸುತ್ತವೆ. ಈ ಬಗೆಗಿನ ಅಧ್ಯಯನ ನಡೆಸಿದ ಹತ್ತಾರು ಜ್ಞಾನಿಗಳು ಸಹ ಒಮ್ಮೊಮ್ಮೆ ಬೇಸರ ವ್ಯಕ್ತ ಪಡಿಸುತ್ತಿರುವುದನ್ನು ನಾವು ಗಮನಿಸಿದ್ದೇವೆ.

ವಿಷಯ ವಿಚಾರಾತ್ಮಕವಾಗಿದ್ದರೆ ಓದುಗರಿಗೂ ಓದುವ ಹಂಬಲ ಮೂಡಿಸುತ್ತದೆ ಆದರೆ ಪ್ರಸ್ತುತ ದೃಶ್ಯ ಮಾಧ್ಯಮಗಳಂತೆ ಪತ್ರಿಕಾ ಮಾಧ್ಯಮಗಳು ಸಮಾಜಮುಖಿ ವಿಷಯಗಳನ್ನು ಹೆಚ್ಚು ಮುದ್ರಿಸದೆ ಸಮಾಜಕ್ಕೆ ಕಂಟಕವಾಗುವ ವಿಚಾರಗಳನ್ನು ಮುದ್ರಿಸುತ್ತಿರುವುದು ಪತ್ರಿಕಾ ಮಾಧ್ಯಮದಲ್ಲಿ ಆಗಿರುವ ಬದಲಾವಣೆಯಾಗಿದೆ. ಇತ್ತೀಚಿಗೆ ಪತ್ರಿಕೆಯ ಪುಟಗಳು ಹೆಚ್ಚು ವಿಚಾರಗಳಿಗಿಂತಲೂ ಜಾಹೀರಾತಿಗೆ ಹೆಚ್ಚು ಪ್ರಾಶಸ್ತ್ಯ ನೀಡುವಂತೆ ಕಾಣುತ್ತವೆ. ಅಂದು ಪತ್ರಿಕೆಯ ಮುಖಪುಟ ಮುಖ್ಯಾಂಶಗಳಿಂದ ಕಂಗೊಳಿಸುತ್ತಿತ್ತು ಆದರೆ ಇಂದಿನ ಮುಖಪುಟ ಬೃಹದಾಕಾರದ ಜಾಹೀರಾತುಗಳಿಂದ ಪ್ರಾರಂಭಗೊಂಡು ಅಂತ್ಯದ ಪುಟವು ಜಾಹೀರಾತಿನಿಂದಲೇ ಸಮಾಪ್ತಿಗೊಳ್ಳುತ್ತಿವೆ. ಇದರ ನಡುವೆ ಕಾಣುವ ವಿಚಾರಗಳು ಕೂಡ ರಾಜಕೀಯ, ಧರ್ಮ, ಸಂಘರ್ಷ, ಪ್ರಚಾರಕ್ಕೊಳಪಟ್ಟ ವಿಚಾರಗಳೇ ಅತಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಇದರಿಂದಾಗಿ ಪತ್ರಿಕೆ ಎಂದರೆ ಪ್ರೀತಿಪೂರ್ವಕವಾಗಿ ಕಾಣುವ ಮನಸುಗಳಿಗೆ ಪುಟ ತಿರುಗಿಸುವಷ್ಟರಲ್ಲಿ ಪ್ರಯಾಸ ಎನಿಸುತ್ತದೆ.
ಈ ಎಲ್ಲಾ ವಿಚಾರಗಳು ಎಲ್ಲಾ ಪತ್ರಿಕೆಗಳಿಗೂ ಅನ್ವಯಿಸುತ್ತದೆ ಎಂಬಂತೇನಿಲ್ಲ ಆದರೆ ಬಹುತೇಕ ಪತ್ರಿಕೆಗಳು ತಮ್ಮ ವೃತ್ತಿ ಮರೆತು ತಮ್ಮದೇ ಹಾದಿ ಹಿಡಿದಿರುವಾಗ ಪತ್ರಿಕಾ ಮಾಧ್ಯಮ ಎತ್ತ ಸಾಗುತ್ತಿದೆ ಎಂಬ ಆತಂಕ ಮೂಡದೆ ಇರದು. ಜೊತೆಗೆ ಕೆಲ ಪತ್ರಕರ್ತರು ಭ್ರಷ್ಟಾಚಾರದ ಹಾದಿ ಹಿಡಿದು ಬಿತ್ತರಿಸಬೇಕಾದ ವಿಚಾರಗಳನ್ನು ಬಿಟ್ಟು ನಿಮ್ಮ ವಿಚಾರಗಳನ್ನು ಬಹಿರಂಗ ಪಡಿಸುತ್ತೇವೆ ಎಂಬ ಬೆದರಿಕೆಯನ್ನು ಒಡ್ಡಿ ಹಣದ ಆಮಿಷಕ್ಕೆ ಒಳಗಾಗಿ ಪತ್ರಿಕೋದ್ಯಮದ ದಿಕ್ಕನ್ನೇ ಬದಲಾಯಿಸಿದ್ದಾರೆ. ಇದರಿಂದ ಮನನೊಂದ ಎಷ್ಟೋ ಜನ ಪತ್ರಿಕೋದ್ಯಮ, ಪತ್ರಕರ್ತರು ಎಂದರೆ ಹೆದರುವ ಅಥವಾ ಮನದೊಳಗೆ ನಿಂದಿಸುವ ಮನಸ್ಥಿತಿ ತಲುಪಿದ್ದಾರೆ. ಇದಕ್ಕೆ ಕಾರಣ ಪತ್ರಿಕೋದ್ಯಮದಲ್ಲಿ ಉಂಟಾದ ಬದಲಾವಣೆ, ಪತ್ರಕರ್ತರು ಮೂಡಿಸಿದ ಅಪನಂಬಿಕೆಯ ವಿಚಾರ ಮುದ್ರಣ.

ಈ ಎಲ್ಲಾ ವಿಚಾರಗಳಿಂದ ಇಂದಿನ ಪತ್ರಿಕಾ ಮಾಧ್ಯಮ ಕೊಂಚ ಯೋಚಿಸಿ ಮುಂಬರುವ ದಿನಗಳಲ್ಲಾದರೂ ತಮ್ಮ ದಿಕ್ಕು ಬದಲಿಸಿ ಸಮಾಜದ ಏಳಿಗೆಗೆ ಪೂರಕವಾಗಿ, ಮುಂದಿನ ಭವಿಷ್ಯದ ಸುಸಂಸ್ಕೃತ ಜಗತ್ತು ನಿರ್ಮಾಣಕ್ಕಾಗಿ ಶ್ರಮಿಸಿದರೆ ಪತ್ರಿಕಾ ಮಾಧ್ಯಮಕ್ಕೆ ಇದ್ದ ಬೆಲೆ, ಘನತೆ ಮತ್ತಷ್ಟು ವೃದ್ಧಿಯಾಗಿ ಈ ಹಿಂದಿನ ಪತ್ರಿಕೋದ್ಯಮದಂತೆ ಸಾಗಲಿ ಎಂಬ ಹಾರೈಕೆಯಷ್ಟೇ.

ವಿಜಯ್ ಕುಮಾರ್ ಕೆ.ಎಂ.

ಕನ್ನಡದ ಬರಹಗಳನ್ನು ಹಂಚಿ ಹರಡಿ
3 1 vote
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x