ಬೆಳಗಿನ ಜಾವ ೪ ಗಂಟೆ ಇರಬಹುದು ಮೊಬೈಲ್ ಸದ್ದಾಯಿತು .. ಎದ್ದು ನೋಡಿದ್ರೆ ಸುಬ್ಬು ಫೋನ್ ಮಾಡಿದ್ದ, ಚೈಲ್ಡ್ ಹೆಲ್ಪ್ ಲೈನ್ ೧೦೯೮ನಲ್ಲಿ ಕೆಲಸ ಮಾಡ್ತಿದ್ದ.
“ಹೇಳಣ್ಣ ಸುಬ್ಬು” ಅಂದೆ
ನಗರದ ಪ್ರತಿಷ್ಟಿತ ಏರಿಯಾದ ಒಂದು ಶ್ರೀಮಂತರ ಮನೆಯಲ್ಲಿ ಸಂಜೆ ಎಂಟು ವರುಷದ ಬಾಲಕಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ಪೊಲೀಸ್ ದೂರು ಕೊಟ್ಟಾಗಿದೆ, ಆದರೆ ಪ್ರಕರಣ ಏನೋ ಗೊಂದಲಮಯವಾಗಿದೆ ಅದಕ್ಕೆ ಬೆಳಗ್ಗೆ ೮ ಗಂಟೆಯೊಳಗೆ ಬನ್ನಿ ಅಂತ ಸುದ್ದಿ ಹೇಳಿದ ಸುಬ್ಬು. ಸುದ್ದಿ ಕೇಳಿ ಬಹಳ ಬೇಸರವಾಯಿತು, ಎಂಟು ವರುಷದ ಹುಡುಗಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಏನು ಕಾರಣ ಇರಬಹುದು? ಅಂತ ಕಠೋರ ನಿರ್ಧಾರ ಆ ಪುಟ್ಟ ಬಾಲಕಿ ತೆಗೆದುಕೊಂಡಳು ಎಂದರೆ ಆಕೆ ಎಂಥ ಕಷ್ಟ ಅನುಭವಿಸಿರಬೇಕು?
ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನದ (ಅಂಅಐ ) ಬೆಂಗಳೂರು ಘಟಕದ ಸಂಚಾಲಕ ಹಾಗೂ ಚೈಲ್ಡ್ ಲೈನ್ ನೋಡಲ್ ಸೂಪರ್‌ವೈಸರ್ ಆಗಿದ್ದ ನನಗೆ ಇಂತಹ ಘಟನೆ ನಡೆದಾಗ ಇತರ ಸದಸ್ಯರಿಗೆ ವಿಷಯ ತಲುಪಿಸಿ ಎಲ್ಲರನ್ನೂ ಮಕ್ಕಳ ರಕ್ಷಣೆಗೆ ಸಿದ್ದ ಮಾಡುವ ಹೊಣೆÀ್ನನಗೆ ಇತ್ತು, ಹಾಗಾಗಿ ನೆಟ್‌ವರ್ಕ್ ಸದಸ್ಯರಿಗೆ ೯ ಗಂಟೆ ವೇಳೆಗೆ ಘಟನೆ ನಡೆದಿರುವ ಸ್ಥಳಕ್ಕೆ ಬನ್ನಿ ಎಂದು ಮೆಸೇಜ್ ಕಳುಹಿಸಿದೆ.
ಬೇಸರದಲ್ಲಿಯೇ ಬೆಳಗಿನ ಕಾರ್ಯಗಳನ್ನು ಮುಗಿಸಿ ಆರುಗಂಟೆ ಬಸ್ಸಿಗೆ ಹೊರಟೆ. ಬಸ್ ಕಂಡಕ್ಟರ್ ರಹೀಮಣ್ಣ ನನ್ನ ಆಶ್ಚರ್ಯದಿಂದ ನೋಡಿ ‘ಏನ್ ಸಾರ್ ಇಷ್ಟು ಬೇಗ?’ ಅಂದ. ಆತನಿಗೆ ನಾನು ಮಕ್ಕಳ ರಕ್ಷಣೆ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಪ್ರಚಾರ ಕೆಲಸದಲ್ಲಿ ಇದ್ದೀನಿ ಅಂತ ಚೆÀನ್ನಾಗಿ ತಿಳಿದಿತ್ತು. “ಪಾಪ ಹುಡುಗಿಯೊಂದು ಆತ್ಮಹತ್ಯೆ ಮಾಡಿಕೊಂಡಿದೆ, ಅದರ ಕೇಸ್, ಅದಕ್ಕೆ ಬೇಗ” ಅಂದೆ. ನನ್ನ ಬಗ್ಗೆ ನಾಲ್ಕು ಕನಿಕರದ ಮಾತು ಇಂದಿನ ಮಕ್ಕಳ ಆತುರದ ಬುದ್ದಿ ಬಗ್ಗೆ ನಾಕು ಮಾತನಾಡಿ ರಹೀಮಣ್ಣ ತನ್ನ ಕೆಲಸ ಮುಂದುವರೆಸಿದ.
ನಾನು ಪ್ರಕರಣ ನಡೆದ ಸ್ಥಳದ ತಲುಪಿದಾಗ ೮.೩೦ ಆಗಿತ್ತು, ನೆಟ್‌ವರ್ಕ್ ಸದಸ್ಯರು ಕೆಲವರು ಈಗಾಗಲೇ ಬಂದು ಮಾಹಿತಿ ಸಂಗ್ರಹ ಮಾಡಿದ್ದರು, ಇಬ್ಬರು ಪೊಲೀಸರೂ ಸಹ ಇದ್ದರು.
ಆ ಇಬ್ಬರೂ ಪೊಲೀಸ್‌ನವರು ಅನೇಕ ಮಕ್ಕಳ ಅನೇಕ ಪ್ರಕರಣಗಳಲ್ಲಿ ನಮ್ಮೊಂದಿಗೆ ಇದ್ದವರು, ನನ್ನ ನೋಡಿ ನಮಸ್ಕಾರ ಹೇಳಿದರು, ನಾನೂ ನಮಸ್ಕಾರ ಹೇಳಿದೆ. “ನೋಡಿ ಸಾರ್ ಇದೆಂತಹಾ ಪ್ರಕರಣ ಮನೇಲಿ ಮಟನ್ ತರೋಕೆ ಅಂತ ಅಪ್ಪ ಅಮ್ಮ ಐವತ್ತು ರೂಪಾಯಿ ಕೊಟ್ಟಿದಾರೆ ಈ ಹುಡುಗಿಗೆ, ರಸ್ತೆಲಿ ಬರುವಾಗ ದುಡ್ಡು ಕಳೆದುಕೊಂಡು ಬಿಟ್ಟಿದ್ದಾಳೆ ಹುಡುಗಿ, ಮತ್ತೆ ಮಟನ್ ಇಲ್ಲದೆ, ದುಡ್ಡಿಲ್ಲದೇ ಮನೆಗೆ ಹೋದ್ರೆ ಅಪ್ಪಾಮ್ಮ ಬೈತಾರೆ ಅಂತ ಈ ಹುಡುಗಿ ಪಾಪ ಇವರ ಮನೆಯೊಳಗೇ ನುಗ್ಗಿ ಬಚ್ಚಲು ಮನೇಲಿಟ್ಟ ಸೀಮೆಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದಾಳೆ. ಏನು ಕಾಲ ಬಂತೋ .. ಪಾಪ ಈಗ ನೋಡಿ ಈ ಮನೆಯವರಿಗೆ ಸುಮ್ಮನೆ ತೊಂದರೆ”
ಪೊಲೀಸರು ಈ ಪ್ರಕರಣಕ್ಕೆ ಆಗಲೇ ನಿರ್ಧಾರ ತೆಗೆದುಕೊಂಡು ಬಿಟ್ಟಿದ್ದರು, ಬಾಲಕಿ ಆತ್ಮಹತ್ಯೆ ಅಂತ ವರದಿಯನ್ನೂ ದಾಖಲಿಸಿ ಬಿಟ್ಟಿದ್ದರು.
ನನ್ನ ಗೆಳೆÀಯರು ಸಂಗ್ರಹಿಸಿದ್ದ ಮಾಹಿತಿ ಪ್ರಕಾರ ಸತ್ತಿರುವ ಬಾಲಕಿಯ ಹೆಸರು ಮೇರಿ, ಆಕೆಯ ಅಪ್ಪ ಅಂತೋಣಿ ಹಾಗೂ ತಾಯಿ ಸ್ಟೆಲ್ಲಾ ತಮಿಳುನಾಡಿನಿಂದ ವಲಸೆ ಬಂದು ನಗರದಲ್ಲಿ ವಾಸವಿರುವ ವಲಸಿಗರು, ಅವರಿಗೆ ಮೂವರು ಹೆಣ್ಣು ಮಕ್ಕಳು, ಯಾರೂ ಶಾಲೆಗೆ ಹೋಗುತ್ತಿಲ್ಲ, ಅಂತೋಣಿ ಗಾರೆ ಕೆಲಸ ಮಾಡಿ ಸಂಸಾರ ನಡೆಸುತ್ತಿರುವ ವ್ಯಕ್ತಿ. ಕೊನೆಯ ಮಗಳು ಮೇರಿ ಆಟವಾಡಿ ಸಂಜೆ ಮನೆಗೇ ಬಂದಿಲ್ಲ, ರಾತ್ರಿ ೯.೩೦ರ ವೇಳೆಗೆ ಮೇರಿ ಸತ್ತಿರುವ ವಿಚಾರ ಪೋಷಕರಿಗೆ ತಿಳಿಯಿತು. ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗಿ ಅಲ್ಲ, ಆತ್ಮಹತ್ಯೆ ಮಾಡಿಕೊಂಡರೂ ಯಾರದೋ ತಿಳಿಯದ ಶ್ರೀಮಂತರ ಮನೆಗೆ ಹೋಗಿ ಬಚ್ಚಲು ಮನೆ ಪ್ರವೇಶ ಮಾಡಿ ಅಲ್ಲಿ ಸೀಮೆಣ್ಣೆ ಬಾಟಲಿ ತೆಗೆದುಕೊಂಡು ಮೈಮೇಲೆ ಸುರಿದುಕೊಂಡು ಬೆಂಕಿ ಕಡ್ಡಿ ಗೀರಿ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ? ಅಪರಿಚಿತ ಹುಡುಗಿ ಮನೆಯೊಳಗೇ ಬಂದಾಗ ಆ ಮನೆಯವರು ಯಾರು? ಯಾಕೆ? ಎಂದು ಕೇಳಲಿಲ್ಲವೇ? ಉತ್ತರವಿಲ್ಲದ ಹಲವಾರು ಪ್ರಶ್ನೆಗಳು.
ಶ್ರೀಮಂತರ ಮನೆಯವರದು ಯಾವುದೇ ತಪ್ಪು ಇಲ್ಲ ಎನ್ನುವ ಪೊಲೀಸರು ತನಿಖೆ ಮುಗಿಸಿಬಿಟ್ಟಿದ್ದರು. ಬಾಲಕಿಯದು ಆತ್ಮಹತ್ಯೆ ಎಂಬುದೇ ಅವರ ತೀರ್ಮಾನ, ನನ್ನ ಗೆಳೆÀಯರು ಅಕ್ಕಪಕ್ಕದ ಮನೆಗಳಲ್ಲಿ ಕೆದಕಿ ಹುಡುಕಿ ಹೆಚ್ಚಿನ ವಿಷಯ ಸಂಗ್ರಹ ಮಾಡಿದ್ದರು, ಆಟವಾಡುತ್ತಿದ್ದ ಬಾಲಕಿಯನ್ನು ಶ್ರೀಮಂತರ ಮಗ ಮನೆಗೆ ಕರೆದು ಲೈಂಗಿಕ ಕಿರುಕುಳ ಮಾಡಿದ್ದ. ಈ ವಿಚಾರ ಹೊರಗೆ ತಿಳಿದರೆ ತೊಂದರೆ ಆಗಬಹುದು ಎಂದು ಹುಡುಗಿಯನ್ನು ಹತ್ಯೆ ಮಾಡಿ ಸೀಮೆಣ್ಣೆ ಸುರಿದು ಸುಟ್ಟುಹಾಕಿದ್ದ.
ಈ ವಿಚಾರವನ್ನು ಪೊಲೀಸರು ಮತ್ತಷ್ಟು ತನಿಖೆ ಮಾಡಿ ಪೋಷಕರಿಗೆ ಮತ್ತು ಬಾಲಕಿಗೆ ನ್ಯಾಯ ನೀಡಬೇಕು ಎಂದು ಒತ್ತಾಯಿಸಲು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಾಳೆ ಬೆಳಗ್ಗೆ ೧೧ ಗಂಟೆಗೆ ಪ್ರತಿಭಟನೆ ಮಾಡೋಣ ಎಂದು ನಿರ್ಧಾರ ಮಾಡಿ ನೆಟವರ್ಕ್ ಸದಸ್ಯರಿಗೆ ತಿಳಿಸಿ ಆ ಸ್ಥಳದಿಂದ ಹೊರಟಾಗ ಸಂಜೆ ಆಗಿತ್ತು.
ಮರುದಿನ ಪ್ರತಿಭಟನೆ ಸುಮಾರು ೫೦ ಜನ ಸೇರಿದ್ದರು, ಬಾಲಕಿಯ ಪೋಷಕರು ಮಗಳಿಗೆ ನ್ಯಾಯ ಕೊಡಿಸಿ ಎಂದು ಎಲ್ಲರನ್ನೂ ಬೇಡಿಕೊಂಡರು. ಪ್ರಕರಣವನ್ನು ವಿವರವಾಗಿ ಕೇಳಿದ ಜಿಲ್ಲಾಧಿಕಾರಿಗಳು ಮರುದಿನ ಪೊಲೀಸ್ ಕಮಿಷನರ್ ಅವರೊಂದಿಗೆ ಸಭೆ ನಿಗದಿ ಮಾಡಿದರು. ಹುಡುಗಿಯ ಪೋಷಕರು, ನಾನು, ನೆಟ್‌ವರ್ಕ್ನ ಕೆಲವು ಸದಸ್ಯರು ಪೊಲೀಸ್ ಕಮಿಷನರ್ ಕಚೇರಿಗೆ ಹೋಗಬೇಕೆಂದು ನಿರ್ಧಾರವಾಯಿತು. ಪ್ರಕರಣದ ವಿವರ, ಅರ್ಜಿ ಬರೆದುಕೊಂಡು ನಾನು ಸಿದ್ದನಾದೆ.
ಸಮಯ ೧೨ ಆದರೂ ಪೋಷಕರು ಪೊಲೀಸ್ ಕಮಿಷನರ್ ಕಚೇರಿಗೆ ಬರಲಿಲ್ಲ, ಯಾಕೆ ಬರಲಿಲ್ಲ ಎಂದರೂ ಸರಿಯಾದ ಉತ್ತರ ಸಿಗಲಿಲ್ಲ ಸಭೆ ನಡೆಯಲಿಲ್ಲ. ತಿಳಿದು ಬಂದ ಮಾಹಿತಿಯ ಪ್ರಕಾರ ಮೇರಿ ಪೋಷಕರು ಪ್ರಭಾವಿ ಶ್ರೀಮಂತರಿAದ ಒಂದು ಲಕ್ಷ ರೂಪಾಯಿ ಪಡೆದು ಪ್ರಕರಣದಲ್ಲಿ ಮುಂದುವರೆಯುವುದಿಲ್ಲ ಎಂದು ಮಾತು ಕೊಟ್ಟಿದ್ದರು. ಇದು ಹೃದಯ ಹಿಂಡುವ ಘಟನೆ, ಮಕ್ಕಳ ಪ್ರಾಣಕ್ಕೆ ಬೆಲೆ ಇಲ್ಲವೇ?
ಪೋಷಕರು ಈ ರೀತಿ ವರ್ತಿಸಬಹುದೇ? ಎಷ್ಟು ಹೋರಾಟ ಮಾಡುವುದು? ಮಕ್ಕಳ ಪರ ಹೋರಾಟಕ್ಕೆ ವ್ಯವಸ್ಥೆಯೇ ವಿರುದ್ದವಾಗಿರುವಾಗ ಹೋರಾಟದಲ್ಲಿ ಅರ್ಥ ಇದೆಯೇ?
ಸಮುದಾಯ, ಪೋಷಕರು ಇನ್ನೂ ಮಕ್ಕಳನ್ನು ತಮ್ಮ ಆಸ್ತಿ ಎಂದು ಭಾವಿಸುತ್ತಾರೆ. ಈ ಮನೋಭಾವ ಹೋಗುವ ತನಕ ಹಕ್ಕುಗಳಿಗೆ ಅರ್ಥ ಇಲ್ಲ, ಈ ಕೆಲಸ ಬಿಟ್ಟು ಬೇರೆ ಕೆಲಸ ಮಾಡುವುದು ಒಳ್ಳೆಯದು ಎಂಬೆಲ್ಲಾ ಪ್ರಶ್ನೆಗಳು ನನ್ನ ತಲೆಯಲ್ಲಿ ಹಾರಾಡ ತೊಡಗಿದ್ದವು, ಒಂದು ರೀತಿಯ ಖಿನ್ನತೆ ನನ್ನನ್ನು ಆವರಿಸಿತ್ತು.
ಈ ಘಟನೆ ನಡೆದು ಎರಡು ದಿನ ಕಳಿದಿತ್ತು, ನನಗೆ ಯಾವುದರಲ್ಲೂ ಆಸಕ್ತಿ ಇರಲಿಲ್ಲ. ಕಚೇರಿಯಿಂದ ಬಸ್ ಹತ್ತಿ ಮನೆ ಕಡೆ ಹೊರಟಿದ್ದೆ, ಮಾಮೂಲಿ ಬಸ್ ರಶ್ ಹಿಂದಿನ ಸೀಟಿನ ಕಿಟಕಿ ಪಕ್ಕ ಕುಳಿತು ಹೊರಗಡೆ ನೋಡುತಿದ್ದೆ. ನಮ್ಮ ರಹೀಮಣ್ಣನೇ ಕಂಡೆಕ್ಟರ್. ಬಸ್ಸಿನ ಅಲುಗಾಟಕ್ಕೆ ನಿದ್ದೆ ಬಂದಿತ್ತು, ಮುಂದೆ ಏನೋ ಗಲಾಟೆ ನಡೆಯೋ ಸದ್ದು ಕೇಳಿ ಎಚ್ಚರವಾಯಿತು, ಯಾರೋ ಅಳುತ್ತಿದ್ದರು.. ರಹೀಮಣ್ಣ ಸಮಾಧಾನ ಮಾಡಿ “ಹಿಂದಿನ ಸೀಟಲ್ಲಿ ಕೂತಿದಾರೆ.. ನಮ್ಮ ಸಾರ್.. ಅವರತ್ರ ಮಾತಾಡು, ಸಹಾಯ ಮಾಡ್ತಾರೆ” ಅಂತ ಹೇಳಿದ್ದು ಕೇಳಿಸಿತು.
ಸುಮಾರು ನಲವತ್ತು ವರುಷದ ಮಹಿಳೆಯೊಬ್ಬರು ಜನರ ಮದ್ಯೆ ಜಾಗ ಮಾಡಿಕೊಂಡು ಹಿಂದಿನ ಸೀಟ್ ಬಳಿ ನಿಂತು ನನ್ನ ಕಡೆ ನೋಡಿದರು, “ನೀವು ಮಕ್ಕಳಿಗೆ ಸಹಾಯ ಮಾಡ್ತೀರಾ ಸಾರ್”. ಹೌದು ಅನ್ನೋ ಹಾಗೆ ತಲೆ ಆಡಿಸಿದೆ. ತಕ್ಷಣ ಅಳೋಕೆ ಶುರು ಮಾಡಿದ ಆ ಮಹಿಳೆ “ನೋಡಿ ಸಾರ್ ನನ್ನ ಮಗಳು ಮೋನಿ ಇನ್ನೂ ಹತ್ತು ವರುಷ, ಮೊನ್ನೆ ಸಂಜೆ ಕಾಣೆ ಆದೋಳು ಇನ್ನೂ ಸಿಕ್ಕಿಲ್ಲ, ಪೊಲೀಸರಿಗೂ ದೂರು ಕೊಟ್ಟಿದ್ದೇವೆ, ಇನ್ನೂ ಸಿಕ್ಕಿಲ್ಲ”. ಆ ಮಹಿಳೆ ಆಕೆಯ ಮಗಳ ವಿವರ ಹಾಗೂ ಫೋಟೋ ಇದ್ದ ಸಣ್ಣ ಪೋಸ್ಟರ್ ಕೂಡಾ ಮಾಡಿಸಿದ್ದರು, ಅದನ್ನು ಬಸ್ಸಿನಲ್ಲಿ ಎಲ್ಲರಿಗೂ ಹಂಚಿದ್ದರು.
ಮೂರು ದಿನ ದಿನದಿಂದ ಮಗಳು ಕಾಣುತಿಲ್ಲ.. ತಕ್ಷಣ ಏನೂ ಹೊಳೆದಂತಾಗಿ ಚೈಲ್ಡ್ ಲೈನ್ ೧೦೯೮ ಸುಬ್ಬುಗೆ ಕರೆ ಮಾಡಿ ಮಗುವಿನ ವಿವರ ಕೊಟ್ಟು ಈ ಬಾಲಕಿಯನ್ನ ರಕ್ಷಣೆ ಮಾಡಿದಿರಾ ಎಂದು ಕೇಳಿದೆ. ಆತ ಮತ್ತೆ ಕರೆ ಮಾಡುವುದಾಗಿ ಹೇಳಿದ. ಮಹಿಳೆಯೊಂದಿಗೆ ಇಡೀ ಬಸ್ ಜನರು ನನ್ನ ಕಡೆ ನೋಡುತಿದ್ದರು, ಎರಡು ನಿಮಿಷದಲ್ಲಿ ಸುಬ್ಬು ಕರೆ ಬಂತು, ‘ಹೌದು ಸಾರ್, ಆ ಹುಡುಗಿಯನ್ನು ಶಿವಾಜಿನಗರದ ಹತ್ತಿರದಿಂದ ರಕ್ಷಣೆ ಮಾಡಲಾಗಿದೆ, ಆಕೆ ಬಾಲಕಿಯರ ಬಾಲಭವನದಲ್ಲಿ ಇದ್ದಾಳೆ’. ಅಬ್ಬಾ ನನಗೆ ಸ್ವಲ್ಪ ಚೈತನ್ಯ ಬಂತು. ತಕ್ಷಣ ಬಾಲಕಿಯರ ಬಾಲಭವನದ ನನಗೆ ಚಿರಪರಿಚಿತರಾದ ಸೂಪರಿಡೆಂಟ್ ಕಮಲಮ್ಮನವರಿಗೆ ಕರೆ ಮಾಡಿ “ನಮಸ್ಕಾರ ಮೇಡಂ ಅಲ್ಲಿ ಮೋನಿ ಅನ್ನೂ ಹುಡುಗಿ ಬಂದಿದಾಳಲ್ಲ ಅವಳ ತಾಯಿ ಮಾತಾಡಬೇಕಂತೆ ಕರೀತೀರಾ ಅಂದೇ ‘ಓ ಅದಕ್ಕೇನು ಸಾರ್, ಎರಡು ನಿಮಿಷ ಇರಿ’ ಅಂದ್ರು. ಮೋನಿಯ ತಾಯಿ ನನ್ನ ಕಡೆ ಏನೋ ಚಮತ್ಕಾರ ಆಗ್ತಿರೋ ತರ ನೋಡುತಿದ್ದರು.
ಆ ಕಡೆಯಿಂದÀ “ಮಾ” ಅನ್ನೋ ಶಬ್ದ ಕೇಳಿದ ತಕ್ಷಣ ಆ ತಾಯಿಗೆ ಫೋನ್ ಕೊಟ್ಟೆ.. ಮುಂದಿನ ಸಂತೋಷದ ಘಟನೆ ವಿವರಿಸೋಕೆ ನನ್ನಲ್ಲಿ ಪದಗಳಿಲ್ಲ. ತಾಯಿ ಕಣ್ಣಲ್ಲಿ ನೀರು ಹರಿಯುತಿತ್ತು. ಕೆಲವು ಪ್ರಯಾಣಿಕರೂ ಸಹ ಸಂತೋಷದಲ್ಲಿ ಅಳುತ್ತಿದ್ರು, ಕೆಲವರು ಚಪ್ಪಾಳೆ ಹೊಡಿತಿದ್ರು.. ತಾಯಿ ಮಗಳನ್ನು ಸೇರಿಸಿದ ಅದ್ಬುತ ವ್ಯಕ್ತಿ ನಾನಾಗಿಬಿಟ್ಟಿದ್ದೆ. ನಮ್ಮ ರಹೀಮಣ್ಣನಿಗೆ ತಾನೇ ಬಾಲಕಿಯನ್ನು ಹುಡುಕಿದ ಅನುಭವ, ಬಸ್ ನಿಲ್ಲಿಸಿ ಆ ಮಹಿಳೆಯನ್ನು ಕೆಳಗಿಳಿಸಿ ಬೇಗ ಮಗಳನ್ನು ಕರೆದುಕೊಂಡು ಹೋಗಿ ಎಂದು ಮಹಿಳೆಯನ್ನು ಬೀಳ್ಕೊಟ್ಟ.
ಸರಿಯಾದ ಸಮಯ, ಸರಿಯಾದ ಸ್ಥಳ ಗೊತ್ತಿದ್ದ ನನಗೆ ಮಹಿಳೆಗೆ ಸಹಾಯ ಮಾಡಲು ಸಹಾಯಕವಾಯಿತು. ಇದೆ ರೀತಿ ಅನೇಕ ಜನರಿಗೆ ಮಾಹಿತಿ ಅಗತ್ಯವಿದೆ, ಮಾಹಿತಿ ನೀಡಿ ಮಕ್ಕಳ ರಕ್ಷಣೆ ಮಾಡಬಹುದಲ್ಲ.. ಅದಕ್ಕೆ ಅನ್ನಿಸೋದು ಬಿಟ್ಟು ಹೋಗೋಣಾ ಅಂದ್ರು ಬಿಡಲ್ಲ…
–ನಾಗಸಿಂಹ ಜಿ ರಾವ್
ಚೈಲ್ಡ್ ರೈಟ್ಸ್ ಟ್ರಸ್ಟ್
ಬಿಟ್ಟರು ಬಿಡದ ಈ ಉತ್ತಮ ಕಾರ್ಯ ಒಮ್ಮೆ ನೋವು ಮತ್ತೊಮ್ಮೆ ಸಮಾಧಾನ…
ಸೂಪರ್ … 👌 👌
ಮಕ್ಕಳ ಹಿತೈಷಿಗಳಾದ ನೀವು ಸದಾ ಅವರ ಬಂದುವಾಗಿರಬೇಕು, ಸಮಪರ್ಕ ಜಾಲವಾಗಿ ಉಳಿಯಬೇಕು
ಹೀಗೆ ನಿಮ್ಮ ಸಮೃದ್ಧ ಅನುಭವವನ್ನು ಹಂಚಿಕೊಳ್ಲುತ್ಥಿರಿ