ಕತ್ತಲು ಸರಿದು ಬೆಳಕು ಹರಿಯುತ್ತಿದ್ದಂತೆ ಪರ್ವತಪೂರ ಜನ ಎದ್ದು ತಮ್ಮ ತಮ್ಮ ಕೆಲಸ ಕಾರ್ಯದಲ್ಲಿ ನಿರತರಾಗಿದ್ದರು. ಎಲ್ಲರಂತೆ ಅಗಸಿ ಮನಿ ಶಿವನಾಗನೂ ಎದ್ದು ಪಕ್ಕದಲ್ಲಿ ಮಲಗಿದ್ದ ತನ್ನ ಹೆಂಡತಿ ಶಿವಗಂಗವ್ವಳಿಗೂ ಎಬ್ಬಿಸುತ್ತಾ ಇನ್ನೂ ಎಷ್ಟೋತನಕ ಮಲಗತಿ ಕೆಲಸಾ ಮಾಡೇಳು ದಿನಾ ನಾನು ಎಬ್ಬಿಸೋ ತನಕ ಏಳೋದೇ ಇಲ್ಲ ನನಗಿಂತ ನೀನೇ ಜಲ್ದಿ ಏಳಬೇಕಿಲ್ಲ ಎಂದಾಗ ಅವಳು ಎಚ್ಚರಗೊಂಡು ಕಣ್ಣು ತಿಕ್ಕಿಕೊಳ್ಳುತ್ತಾ ಹಾಸಿಗೆ ಮೇಲೆ ಸ್ವಲ್ಪ ಹೊತ್ತು ಕುಳಿತು ನಂತರ ಕೌದಿ ಮಡಚಿ ಅವು ಒಂದರ ಮೇಲೆಂದು ವಯ್ನಾಗಿಟ್ಟು ಕಸ ಮುಸುರೆ ಅಂತ ಒಳಮನೆ ಕೆಲಸ ಕಾರ್ಯ ಮಾಡಲು ಹೊರಟು ಹೋದಳು.
ನಾನೂ ಇವತ್ತು ಜಲ್ದಿ ಹೊಲದ ಕಡಿ ಹೋಗಬೇಕು ನಿನ್ನೆ ಗಳ್ಯಾ ಹೊಡಿಯೋದು ಮುಗೀಬೇಕಿತ್ತು ಕತ್ತಲಾದರು ಆಗಲಿಲ್ಲ ಇವತ್ತು ಇಷ್ಟೊತ್ತಾದ್ರು ಮುಗಿಸೇ ಮುಗಸ್ತೀನಿ ಮನುಷ್ಯಾಗ ಮೀರಿದ್ದು ಯಾವುದಿದೆ? ಮನಸ್ಸಿದ್ದರೆ ಮಾರ್ಗ ಅಂತ ಅಂದುಕೊಂಡು ಶಿವನಾಗ ಅವಸರದಿಂದ ಅಂಗಳದ ಕಡೆ ಬಂದ, ಮಗಾ ಇನ್ನೂ ನಿದ್ದೆಯಿಂದ ಏಳದೆ ಕೌದಿ ಮುಸುಕು
ಹಾಕಿ ಗೊರ್ ಗೊರ್ ಅಂತ ಗೊರಕೆ ಹೊಡೀಯೋ ಶಬ್ದ ಕೇಳಿಬಂತು, ಮಗ ಮಲಗಿದ ಕೋಣೆಯ ಬಾಗಿಲು ಸಂದಿನಲ್ಲಿ ಇಣುಕಿ ಮುಖ ಕೆಂಪಗೆ ಮಾಡಿದ, ಆ ಸಮಯ ಕೋಪ ತಾಪ ಹೊರ ಹಾಕದೆ ಹಾಗೇ ಅದುಮಿಟ್ಟುಕೊಂಡು ಗೂಟಕ್ಕೆ ಸಿಗಿಸಿದ ಹಸಿರು ಬಣ್ಣದ ಪಟ್ಟಿ ಟವಲ್ಲು ತಲೆಗೆ ಸುತ್ತಿ ಧೋತರ ಕಚ್ಚೆ ಸಡಿಲಿಸಿಕೊಂಡು ಗಂಡುಗಚ್ಚಿ ಹಾಕಿ ಮನೆಯ ಸುತ್ತಲೂ ಒಮ್ಮೆ ಕಣ್ಣು ಗುಡ್ಡಿ ಹೊರಳಿಸಿ ಓ ಅಲ್ಲಿದೆ ಕಸಬಾರಿಗೆ ಅಂತ ಅದನ್ನ ಕೈಗೆ ತೊಗೊಂಡು ಎತ್ತಿನ ಕೊಟ್ಟಗಿ, ಮನೆಯಂಗಳ,ಮನೆ ಮುಂದಿನ ರಸ್ತೆ ಎಲ್ಲವೂ ಬಿಟ್ಟೂ ಬಿಡದೆ ಬರ್ ಬರ್ ಅಂತ ಕಸಾ ಹೊಡೆದು ಸ್ವಚ್ಛಗೊಳಿಸಿ ಪಕ್ಕದ ಸೇದು ಬಾವಿಯಿಂದ ಒಂದೆರಡು ಬಕೇಟ ನೀರು ತಂದು ಧೂಳು ಏಳದಂತೆ ನೀರು ಸಿಂಪಡಿಸಿ, ಎತ್ತು ದನ ಕರುಗಳಿಗೂ ಒಂದಿಷ್ಟು ಮೇವು ಹಾಕಿ ನೀರು ಕುಡಿಸಿ, ತಾನೂ ಕೈಕಾಲು ಮುಖ ತೊಳದು ಈಗ ಮುಗೀತು ಮುಂಜಾನೆ ಕೆಲಸಾ ಅಂತ ನಿಟ್ಟುಸಿರುಬಿಟ್ಟು ನಿಂತಾಗ ಪೂರ್ತಿ ಒಂದು ತಾಸೇ ಕಳೆದು ಹೋಗಿತ್ತು. ಮೂಡಣ ದಿಕ್ಕಿನ ಸೂರ್ಯ ಆಗಲೇ ತನ್ನ ಬಂಗಾರ ಬಣ್ಣ ಬದಲಿಸಿ ಬೆಳ್ಳಿ ಬಣ್ಣಕ್ಕೆ ತಿರುಗಿ ಕಡಕ್ ಬಿಸಿಲು ಹೊರ ಸೂಸಿ ಕಣ್ಣುಕುಕ್ಕಿಸತೊಡಗಿದ್ದ. ಈ ಬಿಸಿಲು ಹೊತ್ತೇರಿದಂತೆ ಉಸ್ ಅನ್ನುವಂತೆ ಮಾಡ್ತಾದೆ ಏನು ಮಾಡೋದು ನಾವೆಲ್ಲ ಬಿಸಿಲು ನಾಡ ಜನ ನಾವು ತಾಳದೆ ಯಾರು ತಾಳಬೇಕು ನಮಗಂತೂ ಇದೇನು ಹೊಸದಲ್ಲ ಎಲ್ಲವೂ ರೂಢಿಯಾಗಿಬಿಟ್ಟಿದೆ ಅಂತ ಒಳಬಂದ. ಆಗಲೂ ಮಗ ಕುಂಬಕರ್ಣನ ನಿದ್ದೆಯಿಂದ ಹೊರ ಬರದೇ ಇರುವದು ನೋಡಿ ಅದುಮಿಟ್ಟುಕೊಂಡ ಇವನ ಕೋಪ ದುಪ್ಪಟ್ಟಾಗಿ
ಸ್ಫೋಟಗೊಳ್ಳಲು ಶುರುವಾಯಿತು.
ಸೋಮಾರಿ ನನ್ಮಗನೇ ನಿನಗೆ ಕೂಳ ಆದ್ರು ಹ್ಯಾಂಗ ಸೇರತಾದೆ? ಈ ೠಣಗೂಳ ಮೈಗಿ ಹತ್ತೋದಿಲ್ಲ ಮೈಮುರಿದು ದುಡಿದು ತಿನ್ನೋರಿಗೇ ಈಗಿನ ಜಮಾನಾದಾಗ ಮೈಗಿ ಹತ್ತೋದಿಲ್ಲ ಅಂದ್ಮಾಲ ನಿನಗ ಹ್ಯಾಂಗ ಹತ್ತೀತು? ಹರೆಗೆಟ್ಟವರಾದ ನಾವು ಬೆಳಗಿನ ಚುಕ್ಕಿ ಮೂಡುವ ಮೊದಲೇ ಎದ್ದು ದುಡಿಮೆ ಚಾಲೂ ಮಾಡ್ತೀವಿ ನೀನು ನೋಡಿದರ ಪುಗಸೆಟ್ಟೆ ಕೂಳ ತಿಂದು ಹೊತ್ತು ನೆತ್ತಿಗೇರೋ ತನಕ ಹಂಗೇ ಬಿದ್ದಿರತಿ ಎದ್ದಕೂಡಲೇ ಅವಡಾಸವಡಾ ಮುಖ ತೊಳದು ನಾಲೈದು ರೊಟ್ಟಿ ಹದಮಾಡಿ ಕತ್ತರಸಿ ಡೇಕರಕಿ ಹೊಡೆದು ಗೂಳಿಯಂಗ ಹೊರಗ ಹೋಗತಿ. ಥೂ ನಿನ್ನ ಜನ್ಮಕ್ಕೆ ಎಷ್ಟು ಉಗಳಿದರು ಅಷ್ಟೇ ನಾಚಿಕಿ ಶರ್ಮ ಅನ್ನೋದು ತಲೀಗಿ ಸುತ್ತೀದಿ ಹಿಂಗೇ ಆದರ ಮನೀಗಿ ಮಗಾನೂ ಆಗೋದಿಲ್ಲ ಮಸಟಿಗಿ ಹೆಣಾನೂ ಆಗೋದಿಲ್ಲ, ಮೊದಲೇ ನನ್ನದು ಕರಿನಾಲಿಗಿ ನುಡಿದದ್ದು ಹುಸಿ ಹೋಗೋದಿಲ್ಲ, ತಿಳಕೊಂಡರ ಉಳಕೋತಿ ಇಲ್ಲ ಅಂದ್ರ ಸರ್ವನಾಶ ಆಗತಿ ನನ್ನ ಶಾಪ ನಿನಗ ತಟ್ಟದೇ ಬಿಡೋದಿಲ್ಲ ಅಂತ ಒಂದೇ ಸವನೆ ಬೈಯತೊಡಗಿದ.
ಇವನ ಧನಿ ದೂರ ದೂರದವರೆಗೂ ಕೇಳಿಸತೊಡಗಿತು. ಬೆಳಗಿನ ಕೆಲಸ ಕಾರ್ಯದಲ್ಲಿ ನಿರತರಾದ ಗಂಡಸರು, ಹೆಂಗಸರು ಕ್ಷಣ ಕಾಲ ಗಾಬರಿಯಾದರು. ಪಕ್ಕದ ಮನೆ ಭೀಮಣ್ಣ ಅವನ ಹೆಂಡತಿ ರಾಮವ್ವ, ದುಕಾನ ಸಿದ್ದಪ್ಪ. ಪ್ಯಾಟೀ ಬಸಪ್ಪ, ಬಳಗಾರ ಗುಂಡಪ್ಪ, ತೋಟದ ಮಲ್ಲಪ್ಪ ,
ಹೋಟಲ್ ನಾಗಪ್ಪ ಎಲ್ಲರಿಗೂ ಶಿವನಾಗನ ಬೈಗಳು ಕಿವಿಗೆ ಬಿದ್ದಾಗ ಆಶ್ಚರ್ಯದ ಜೊತೆ ಗಾಬರಿಯು ಆಯಿತು. ಆದರೂ ಅವರ್ಯಾರೂ ಆತನ ಮನೆ ಕಡೆ ಹೋಗದೆ, ತುಟಿ ಪಿಟಕ್ ಅನ್ನದೆ ನಿಂತುಕೊಂಡರು. ಆತನ ಬೈಗಳು ಬರೀ ಕೇರೀಗಲ್ಲದೆ ಇಡೀ ಊರಿಗೇ ಕೇಳಿಸುತ್ತಿತ್ತು ದೂರದಲ್ಲಿದ್ದವರು ಕೂಡ ತಮ್ಮ ಕಣ್ಣು ಕಿವಿ ಅಗಲಿಸಿ ನಡುವಿನ ಕೇರಿಯಲ್ಲಿ ಯಾರೋ ಯಾರಿಗೋ ಬೈತಿದ್ದಾರೆ, ಬಹುಶಃ ಯಾರೋ ಜಗಳಾ ಆಡ್ತಿರಬೇಕು ಅಂತ ಪರಸ್ಪರ ಮಾತಾಡಿ ಒಬ್ಬರ ಮುಖ ಒಬ್ಬರು ಪ್ರಶ್ನಾರ್ಥಕವಾಗಿ ನೋಡತೊಡಗಿದರು.
” ಅದು ಅಗಸಿ ಮನಿ ಶಿವನಾಗನ ಧನಿ ಆತ ಯಾರಿಗೂ ಬೈತಿಲ್ಲ ಯಾರ ಜೊತೆನೂ ಜಗಳಾ ಆಡ್ತಿಲ್ಲ ತನ್ನ ಮಗನಿಗೇ ಬೈಯ್ತಿದ್ದಾನೆ” ಅಂತ ನಡುವಿನ ಕೇರಿ ಹೋಟಲಿಗೆ ಹಾಲು ಹಾಕಿ ಬಂದ ಶಾಂತಾಬಾಯಿ ವಾಸ್ತವದ ಸುದ್ದಿ ತಂದಳು.
“ಓ ಅವರದಾ! ತಂದಿ ಮಗಂದು ದಿನಾ ಇದ್ದದ್ದೇ ಸೂರ್ಯ ಚಂದ್ರ ಬರೋದು ತಪ್ಪಬಹುದು ಆದರೆ ಶಿವನಾಗ ತನ್ನ ಮಗನಿಗೆ ಬೈಯೋದು ತಪ್ಪೋದಿಲ್ಲ ” ಅಂತ ತಮ್ಮ ತಮ್ಮಲ್ಲೇ ಮಾತಾಡಿಕೊಂಡರು. ಶಿವನಾಗ ಮಗನಿಗೆ ಬೈಯೋದ್ರಲ್ಲಿ ತಪ್ಪೇನಿದೆ ಮಕ್ಕಳು ಮಾತು ಕೇಳದಿದ್ದರೆ ಬುದ್ದಿ ಹೇಳೋದು ತಂದೆಯ ಕರ್ತವ್ಯ , ಬೈಯದೇ ಏನು ಮುದ್ದು ಮಾಡಬೇಕಾ? ಅಂತ ಕೆಲವರು ಶಿವನಾಗನ ಪರ ವಹಿಸಿ ಮಾತನಾಡಿದರು.
ಗಂಡನ ಬೈಗಳು ಕೇಳಿ ಕೇಳಿ ಸಾಕಾಗಿ ಶಿವಗಂಗವ್ವಳಿಗೆ ತಡೆಯಲಾಗಲಿಲ್ಲ ಸುಟ್ಟು ಕರಕಲಾದ ಅಡುಗೆ ಪಾತ್ರೆ
ತಿಕ್ಕೋದು ಅಲ್ಲೇ ಬಿಟ್ಟು ಗಂಡನ ಮ್ಯಾಲಿನ ಸಿಟ್ಟು ಪಾತ್ರೆ ಮ್ಯಾಲ ತೋರಿಸಿ ಧಡಲ್ ಅಂತ ಅಲ್ಲೇ ಒಗೆದು ಟೊಂಕಿಗೆ ಸೆರಗು ಸುತ್ತಿ ಹೊರ ಬಂದವಳೆ “ನಿಂದು ದಿನಾ ಇದೇ ಆಯಿತು ಹಾಡಿದ್ದೇ ಹಾಡೋ ಕಿಸಬಾಯಿ ದಾಸ ಅನ್ನುವಂಗ ಯಾವಾಗಲು ಮಗನಿಗೆ ಬೈತಾನೇ ಇರ್ತಿ ಒಬ್ಬನೇ ಮಗಾ ಅನ್ನುವ ಕಾಳಜಿ ಕಕ್ಕಲಾತಿ ಎಳ್ಳ ಕಾಳಷ್ಟೂ ಇಲ್ಲ ಮಗ ದೊಡ್ಡಾಂವ ಆಗ್ಯಾನ ಅನ್ನೋ ಖಬರಿಲ್ಲ, ಒಂದಿನಾನೂ ಮಗನಿಗಿ ತಾರೀಫ ಮಾಡಲಿಲ್ಲ ನಿನ್ನಂಥವನಿಗೆ ಮಕ್ಕಳೇ ಹುಟ್ಟಬಾರದಿತ್ತು ಆ ದೇವರು ಯಾಕಾದ್ರು ಕೊಟ್ಟನೋ ಏನೋ ಗೊತ್ತಿಲ್ಲ, ಯಾರಿಗೋ ಕೊಡಾಕ ಹೋಗಿ ತಪ್ಪಿ ನಿನಗ ಕೊಟ್ಟಿರಬೇಕು, ಎಷ್ಟೋ ಮಂದಿ ಮಕ್ಕಳಿಲ್ಲದವರು ಹಗಲು ರಾತ್ರಿ ನಮಗ ಮಕ್ಕಳಿಲ್ಲ ಅಂತ ಕೊರಗತಾರೆ ನೀನು ನೋಡಿದ್ರ ಉಲ್ಟಾ ಇದ್ದಿ ಅಂತ ಒಂದೇ ಸವನೆ ವಟಗುಟ್ಟಿದಳು.
“ನಿನ್ನ ಮಗಾ ಏನು ಘನಂದಾರಿ ಕೆಲಸಾ ಮಾಡ್ತಾನಂತ ತಾರೀಫ ಮಾಡಲಿ , ಊರ ಉದ್ದ ಬೆಳೆದ್ರು ಬುದ್ದೀನೇ ಇಲ್ಲ ಉಣ್ಣೋದು ಮಲಗೋದು ಎರಡು ಬಿಟ್ಟರ ಬೇರೇನೂ ಗೊತ್ತಿಲ್ಲ, ಕೆಲಸಕ್ಕ ಕರೀಬ್ಯಾಡ್ರಿ ಊಟಕ್ಕ ಮರೀಬ್ಯಾಡ್ರಿ ಅನ್ನೋನು , ಮಂದಿ ಮಕ್ಕಳೇನು ಇವನಂಗೇ ಇದ್ದಾರಾ? ಅವರಿಗಾದ್ರು ನೋಡಿ ಕಲೀಬಾರದಾ? ಅವರೆಲ್ಲ ತಮ್ಮ ತಂದೆ ತಾಯಿಗೆ ಕೆಲಸಾ ಬಿಡಸಿ ಆಸ್ರಾ ಆಗ್ಯಾರ ಇಂವಾ ನೋಡಿದ್ರ ಹುಟ್ಟಿದಾಗ ಹ್ಯಾಂಗ ಇದ್ದನೊ ಗಡ್ಡ ಮೀಸೆ ಬಂದ್ರೂ ಹಂಗೇ ಇದ್ದಾನೆ, ಒಂದೇ ಒಂದು ಕಡ್ಡಿ ಆ ಕಡೆಯಿಂದ ಈ ಕಡೆ ಎತ್ತಿ ಹಾಕೋದಿಲ್ಲ ಸೋಮಾರಿಗಿ ಸೋಮಾರಿ ಅನ್ನದೆ
ಮತ್ತೇನನಬೇಕು? ಅಂತ ಮಗನ ಜನ್ಮ ಜಾಲಾಡಿದ.
“ನಮ್ಮ ಮಗಾ ಹ್ಯಾಂಗೇ ಇರಲಿ ಅವರಿವರ ಜೊತಿ ಹೋಲಿಕಿ ಮಾಡೋದು ಬ್ಯಾಡ ಒಬ್ಬರಂಗ ಒಬ್ಬರು ಇರೋದಿಲ್ಲ ಮಂದಿ ಮಕ್ಕಳು ಹ್ಯಾಂಗ ಇದ್ದಾರೋ ಹ್ಯಾಂಗ ಇಲ್ಲೋ ಅವರವರ ಹೊಟ್ಯಾಗಿನ ಗುಣ ಯಾರಿಗಿ ಗೊತ್ತು ? ಎಷ್ಟೋ ಮಕ್ಕಳು ಕದ್ದು ಮುಚ್ಚಿ ಚಟ ಮಾಡೋರೂ ಇದ್ದಾರೆ ಆದ್ರ ನಿನ್ನಂಗ ಯಾವ ತಂದೆಯೂ ಬೀದ್ಯಾಗ ನಿಂತು ಬೈಯೋದಿಲ್ಲ ತಮ್ಮ ಮಕ್ಕಳು ಏನೇ ಮಾಡ್ಲಿ ಬಿಡ್ಲಿ ನಮ್ಮ ಮಕ್ಕಳೇ ಛೊಲೋ ಅಂತ ಎಲ್ಲರ ಮುಂದ ತಾರೀಫ ಮಾಡಿ ತಮ್ಮ ಬೆನ್ನ ತಾವೇ ತಟ್ಕೊತಾರ ನೀನು ನೋಡಿದರ ನನ್ಮಗ ಹಾಂಗ್ ನನ್ಮಗ ಹಿಂಗ್ ಅಂತ ಇಡೀ ಊರಿಗೆ ಕೇಳುವಂಗ ಡಂಗೂರ ಭಾರಿಸ್ತಿ ನಿನ್ನಿಂದಲೇ ಅವನ ಹೆಸರು ಅರ್ಧ ಖರಾಬ ಆಗಿದೆ ಊರು ಅಂದ್ಮಾಲ ಸೇರುವವರು ಇರ್ತಾರೆ ಸೇರದವರೂ ಇರ್ತಾರೆ, ಸೇರದವರ ಮುಂದ ಜಾರಿ ಬೀಳದಂಗ ಎಚ್ಚರ ವಹಿಸಬೇಕು, ಹಿಂಗೇ ಎಲ್ಲರ ಮುಂದ ಪುಂಗಿ ಊದಕೊಂತ ಹೋದರ ಹರೇದ ಮಗನಿಗೆ ಹೆಣ್ಣ ಯಾರು ಕೊಡ್ತಾರೆ? ಕೊಡೋರೂ ಕೊಡದೆ ಹಂಗೇ ಹೊಳ್ಳಿ ಹೋಗ್ತಾರೆ, ಅವನು ಹ್ಯಾಂಗೇ ಇರ್ಲಿ ಏನೇ ಇರ್ಲಿ ಎಲ್ಲಾ ಹೊಟ್ಯಾಗ ಹಾಕೋಬೇಕು ನಾವು ಹೊಟ್ಯಾಗ ಹಾಕೊಳ್ಳದೆ ಮತ್ಯಾರು ಹಾಕೋಬೇಕು ಅಂತ ಸಮಜಾಯಿಸಿ ನೀಡಲು ಮುಂದಾದಳು.
“ಬಂಗಾರ ಸೂಜಿ ಅಂತ ಕಣ್ಣಾಗ ಚುಚ್ಕೋದಾಗ್ತಾದಾ? ಮಗ ರಿಕಾಮಿ ಸೋಮಾರಿ ಆದ್ರು ಎಲ್ಲಾ ಹೊಟ್ಯಾಗ
ಹಾಕೋಬೇಕಾ? ಒಬ್ಬನೇ ಮಗಾ ಅಂತ ನೀನು ಲಾಡಕಿ ಮಾಡೇ ತಲೀಮ್ಯಾಲ ಕೂಡಿಸಿಕೊಂಡೀದಿ ಈಗ ನಮ್ಮ ತಲೀಮ್ಯಾಲೇ ಮೆಣಸ ಅರೀತಿದ್ದಾನೆ ಎಲ್ಲರ ಕಡೆಯಿಂದ ತಾನೂ ಉಗುಳಿಸಿಕೊಂಡು ನಮಗೂ ಉಗಳಿಸ್ತಿದ್ದಾನೆ ಅಂತ ತನ್ನ ವಾದವೇ ಮುಂದುವರೆಸಿದ.
“ಏನೋ ಹುಡಗಾಟಕಿ ಬುದ್ದಿ , ಇದೇ ಬುದ್ದಿ ಮುಂದ ಇರೋದಿಲ್ಲ ಸಮಯ ಬಂದಾಗ ಖಂಡಿತ ಬದಲಾಗ್ತಾನೆ ಅಲ್ಲಿತನಕ ನೀನು ಬಾಯಿ ಹೊಲ್ಕೊಂಡು ಸುಮ್ಮನಿದ್ದರ ಸಾಕು, ಅವನಿಗೊಂದು ಹೆಣ್ಣ ಹುಡುಕಿ ಈ ವರ್ಷ ಮದಿ ಮಾಡೋಣ ಹೆಂಡತಿ ಮಕ್ಕಳು ಸಂಸಾರ ಅಂತ ಕೊಳ್ಳಿಗಿ ಬಿದ್ದರ ತಂತಾನೇ ಜವಾಬ್ದಾರಿ ಬರ್ತಾದೆ ಎಂದಳು.
ಆವನಿಗಿ ಮದಿನಾ? ಮದಿ ಅಂದ್ರ ಮಕ್ಕಳಾಟಾ ಅಂತ ತಿಳದೀದೇನು? ಅವಂದು ದುಡ್ಡಿನ ಗಳಕಿ ಇಲ್ಲ ಇಂಥೋನಿಗಿ ಮದಿ ಮಾಡಿದರ ಮುಗೀತು ಉಡ್ಯಾಗ ಕಲ್ಲು ಕಟ್ಕೊಂಡು ಬಾವೀಗಿ ಹಾರದಂಗೇ, ಇವನ ಜೊತಿ ಇವನ ಹೆಂಡತಿ ಮಕ್ಕಳಿಗೂ ನಾವೇ ತಂದು ಹಾಕಬೇಕಾಗ್ತದೆ ಅಂತ ಎಚ್ಚರಿಸಿದ.
ಇಬ್ಬರ ಮಧ್ಯೆ ವಾಗ್ವಾದ ಮುಂದುವರೆದು ಸುಮಾರು ಎರಡು ತಾಸು ಕಳೆದು ಹೋಯಿತು. ಮಾತಿಗೆ ವಿರಾಮವೇ ಬೀಳಲಿಲ್ಲ. ಹೊಲ ನೆಲ ಕೂಲಿ ನಾಲಿ ಅಂತ ಹೋಗಲು ಜನ ಅವಸರದಲ್ಲಿದ್ದರು. ಕೆಲವರು ಎತ್ತು ಎಮ್ಮೆ ದನ ಕರು ಮೇಯಿಸಲು ಹೊಲದ ಕಡೆ ಹೊರಟು ನಿಂತರು ದಿನಾ
ಬರುವ ಬಸ್ಸು ಅದೇ ಸಮಯ ಬಂದು ಅಗಸಿ ಮುಂದ ನಿಂತು ಹಾರ್ನ ಹಾಕಿತು. ಬಂದವರು ಬಸ್ಸಿಳಿದು ಮನೆ ಕಡೆ ಹೆಜ್ಜೆಹಾಕಿದರೆ ಊರಿಗೆ ಹೋಗುವವರು ಬಸ್ ಹತ್ತಿ ಕುಳಿತರು.
ಊರ ಶಾಲೆಯ ಘಂಟೆ ಕೂಡ ಎಂದಿನಂತೆ ಸಮಯಕ್ಕೆ ಸರಿಯಾಗಿ ಢಣ ಢಣ ಅಂತ ಭಾರಿಸಿತು. ಬಸ್ ಇಳಿದ ಚನ್ನಣ್ಣ ಮಾಸ್ತರು ಹೆಗಲಿಗೆ ಬ್ಯಾಗ ಹಾಕಿಕೊಂಡು ಕೈಯಲ್ಲಿನ ಗಡಿಯಾರ ಪದೇ ಪದೇ ನೋಡಿಕೊಳ್ಳುತ್ತಾ ಅವಸರವಾಗಿ ಊರ ಮುಖ್ಯ ರಸ್ತೆಯಿಂದ ಹೆಜ್ಜೆ ಹಾಕುತ್ತಿದ್ದರು. ಶಿವನಾಗನ ಮನೆ ಮುಂದೆ ಬಂದಾಗ ಆತ ಬೈಯುವ ಧನಿ ಅವರ ಕಿವಿಗೂ ಬಿದ್ದು ಗಕ್ಕನೆ ಅಲ್ಲೇ ನಿಂತು ಯಾಕೋ ಶಿವನಾಗ ಮಗನಿಗೆ ಬೈತಿದ್ದಾನೆ, ಸೋಮ ನನ್ನ ಕೈಯಾಗೇ ಕಲಿತ ಹುಡುಗ ಓದು ಪೂರ್ತಿ ಮಾಡದೇ ಶಾಲೆ ಅರ್ಧಕ್ಕೆ ಬಿಟ್ಟು ಬಿಟ್ಟ ಅವನ ಜೊತಿ ಓದಿದವರೆಲ್ಲ ಇವತ್ತು ನೌಕರಿನೋ ವ್ಯಾಪಾರ ಉದ್ಯೋಗನೋ ಹೊಲದ ಕೆಲಸಾನೋ ಮಾಡ್ತಿದ್ದಾರೆ ಆದರೆ ಇವನೊಬ್ಬನೇ ಯಾವದೂ ಮಾಡದೇ ಊರಾಗ ಅಲ್ಲಿ ಇಲ್ಲಿ ಕುಂತು ಹೊತ್ತುಗಳೀತಾನೆ ಅಂತ ಯೋಚಿಸಿದರು.
ಅಪ್ಪನ ಕಡೆಯಿಂದ ಬೈಸಿಕೊಂಡ ಸೋಮ ಮುಖಕ್ಕೆ ಗಂಟು ಹಾಕಿಕೊಂಡು ಹನುಮಂದೇವರ ಗುಡಿ ಕಟ್ಟೆ ಕಡೆ ಬಂದು ಪಕ್ಕದ ಆಲದ ಗಿಡದ ಬುಡಕ್ಕ ಬೆನ್ನು ಹಚ್ಚಿ ಕುಳಿತುಕೊಂಡ.
ಅಂಗೈ ಅಗಲದ ಮೋಬೈಲಿನಲ್ಲಿ ಬೆರಳಾಡಿಸುತ್ತಾ ಅದರಲ್ಲಿ
ಏನೇನೋ ನೋಡುತ್ತಾ ಕುಳಿತ. ಅಪ್ಪನಿಗೆ ಕೇಳಿದರೆ ಮೋಬೈಲ ಕೊಡಿಸೋದಿಲ್ಲ ಆತ ಬಿಡಿಗಾಸೂ ಕೊಡೋದಿಲ್ಲ ಅಂತ ತಿಳಿದು ಅಮ್ಮನಿಗೆ ಕಾಡಿಸಿ ಪೀಡಿಸಿ ಅವಳಲ್ಲಿದ್ದ ಚೂರು ಪಾರು ಬಂಗಾರು ಮಾರಿಸಿ ಅದರಿಂದ ಬಂದ ಹಣದಿಂದ ಮೊನ್ನೆ ತಾನೆ ಒಂದು ಹೊಸ ಮೋಬೈಲ ಖರೀದಿಸಿಕೊಂಡು ತಂದಿದ್ದ.
ಮಗ ಮೋಬೈಲ ತಂದ ವಿಷಯ ಗೊತ್ತಾಗಿ ಶಿವನಾಗನಿಗೆ ಕೆಂಡದಂತಾ ಕೋಪ ಬಂದು ಒಂದಿನ ಹಿಗ್ಗಾ ಮುಗ್ಗಾ ಬೈದಿದ್ದ ಇವನಿಗ್ಯಾಕೆ ಬೇಕು ಈ ಕಿಮ್ಮತ್ತಿನ ಮೋಬೈಲು ಮಂಗನ ಕೈದಾಗ ಮಾಣಿಕ್ಯ ಕೊಟ್ಟಂಗಾಗ್ತದೆ, ಅಂವ ಹೇಳಿದಂಗ ಕುಣಿದರ ಆಯಿತು ನಮಗೊಂದು ಗತಿ ಕಾಣಸ್ತಾನೆ ಅಂತ ಹೆಂಡತಿ ಮೇಲೂ ಕೋಪ ತಾಪ ಹೊರ ಹಾಕಿ ರೇಗಾಡಿದ್ದ .
ಸೋಮ ಹೊಸ ಮೋಬೈಲ ತಂದಾಗ ಸಮವಯಸ್ಸಿನ ಹುಡುಗರು ಆತನಿಗ ಸುತ್ತುವರೆ ಮೋಬೈಲ ನೋಡಲು ಸಕ್ಕರೆಗೆ ಇರುವೆ ಮುಕುರಿದಂತೆ ಮುಕುರಿ ಒಬ್ಬರ ಕೈಯಿಂದ ಒಬ್ಬರು ಕಸಿದುಕೊಂಡು ನೋಡಿದ್ದರು.
ಅಪ್ಪ ಏನೇ ಬೈದರೂ ಸೋಮ ಮನಸ್ಸಿಗೆ ಹಚ್ಚಿಕೊಳ್ಳದೆ ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಟ್ಟು ಬಿಡುತ್ತಿದ್ದ ಇವನ ಮನಸ್ಸಿನ ಮೇಲೆ ಯಾವುದೇ ಪರಿಣಾಮ ಬೀರುತ್ತಿರಲಿಲ್ಲ.
ಸೋಮ ಮೊದಲು ಹ್ಯಾಂಗ ಇದ್ದನೋ ಈಗಲೂ ಹಂಗೇ
ಇದ್ದಾನೆ ಅದೇ ಮೊಂಡುತನ ದೊಡ್ಡವನಾದ್ರು ಬುದ್ದಿ ಬಂದಿಲ್ಲ ಸಾಲೀ ಕಲಿಯುವಾಗ್ಲು ಹಂಗೇ ಮಾಡ್ತಿದ್ದ ಈಗಲೂ ಹಂಗೇ ಮಾಡ್ತಿದ್ದಾನೆ ಆಗ ನನ್ನ ಕಡೆಯಿಂದ ದಿನಾಲೂ ಛಡಿ ಏಟು ತಿಂತಿದ್ದ ಎಷ್ಟು ಹೊಡೆದ್ರು ಬದಲಾಗಲಿಲ್ಲ ಗುಂಡುಕಲ್ಲಿನ ಮ್ಯಾಲ ಮಳೆ ಸುರಿದಂಗಾಗ್ತಿತ್ತು ಓದು ಬರಹದ ಕಡೆ ಆಸಕ್ತಿಯೇ ತೋರತ್ತಿರಲಿಲ್ಲ ಇನ್ನೂ ಒಂದು ವರ್ಷ ಓದಿದ್ದರೆ ಮ್ಯಾಟ್ರಿಕಾದರು ಪಾಸಾಗಿ ಯಾವದಾದ್ರು ಸಣ್ಣ ನೌಕರಿಯೊ ಇಲ್ಲವೇ ವ್ಯಾಪಾರ ಉದ್ಯೋಗವೋ ಮಾಡಬಹುದಿತ್ತು ಸಾಲಿ ಬಿಟ್ಟು ಸುಮ್ಮನೆ ಕೆಟ್ಟ ಹೋದ ಅಂತ ಚನ್ನಣ್ಣ ಮಾಸ್ತರ ಆ ಹಿಂದಿನ ದಿನ ನೆನಪಿಸಿಕೊಂಡರು.
ಸೋಮ ಅರ್ಧಕ್ಕೆ ಶಾಲೆ ಬಿಟ್ಟಿದ್ದು ಮಾಸ್ತರಿಗೂ ಬೇಸರ ಮೂಡಿಸಿತ್ತು. ಆತನ ಜೊತೆ ಮಾತಾಡಲು ಮನಸ್ಸಾಗದೆ ಎಲ್ಲೇ ಕಂಡರೂ ನೋಡಿಯೂ ನೋಡದಂತೆ ಹೋಗುತ್ತಿದ್ದರು. ಇವರು ಬಹಳ ವರ್ಷಗಳಿಂದ ಇದೇ ಊರಲ್ಲಿ ಮಾಸ್ತರಕಿ ಮಾಡತಿರೋದ್ರಿಂದ ಊರ ಹಕೀಕತೇ ಗೊತ್ತಿತ್ತು. ಇವರು ಮೊದಲಿಂದಲೂ ಶಿಸ್ತು ಸಮಯ ಪಾಲನೆ ರೂಢಿಸಿಕೊಂಡು ಬಂದವರಾಗಿದ್ದರು. ಊರ ಜನರ ಪ್ರೀತಿ ವಿಶ್ವಾಸವೂ ಗಳಿಸಿಕೊಂಡಿದ್ದರು. ದಾರಿಯಲ್ಲ ಹೊರಟರೆ ಸಾಕು ಎದುರಿಗೆ ಸಿಕ್ಕವರು ತಮ್ಮ ಎರಡೂ ಕೈ ಮುಗಿದು ದೇವರಿಗೆ ನಮಸ್ಕಾರ ಮಾಡಿದಂತೆ ಮಾಡಿ ಗೌರವ ಕೊಡುತ್ತಿದ್ದರು. “ನೀವು ದಿನಾ ಹೋಗಿ ಬಂದು ಹೈರಾಣ ಯಾಕಾಗ್ತಿರಿ ಸರ್ ಇನ್ನೂ ಸ್ವಲ್ಪ ದಿನಾ ಮಾಸ್ತರ ಕೆಲಸಾ ಉಳಿದಿವೆ ನಮ್ಮ ಊರಲ್ಲೇ ಮನೆ ಮಾಡಿ ಇದ್ದುಬಿಡ್ರಿ ನಿಮಗ ಏನು ಬೇಕೋ ಎಲ್ಲ ವ್ಯವಸ್ಥಾ
ನಾವು ಮಾಡ್ತೀವಿ ಅಂತ ಅನೇಕರು ಹೇಳುತ್ತಿದ್ದರು. ಅವರ ಮಾತಿಗೆ ಮಾಸ್ತರ ನಯವಾಗಿ ನಿರಾಕರಿಸುತಿದ್ದರು.
ಜನರ ಪ್ರೀತಿ ಕಾಳಜಿ ನೋಡಿ ಖುಷಿಯಾಗುತಿತ್ತು.
ಊರಲ್ಲಿ ಮದುವೆ ಮುಂಜಿ ನಿಶ್ಚಿತಾರ್ಥ ಧಾರ್ಮಿಕ ಸಾಮಾಜಿಕ ಊರ ಜಾತ್ರಿ ಖೇತ್ರಿ ಯಾವುದೇ ಇದ್ದರು ಇವರಿಗೆ ಮುದ್ದಾಮ ಕರೆದುಕೊಂಡ ಹೋಗಿ ಊಟ ಮಾಡಿಸಿ ಕಳಿಸುತ್ತಿದ್ದರು. ನಾನು ಮಾಸ್ತರ ಆಗಿದ್ದಕ್ಕೂ ಸಾರ್ಥಕವಾಯಿತು ಅಂತ ಚನ್ನಣ್ಣ ಮಾಸ್ತರ ಖುಷಿಪಡುತ್ತಿದ್ದರು. ಇವರಿಗೂ ಆಗಾಗ ಸೋಮನ ಯೋಚನೆಯೇ ಕಾಡತೊಡಗಿತು ನಾನು ಸುಮಾರು ವರ್ಷ ಮಾಸ್ತರಕಿ ಮಾಡಿಕೊಂಡು ನಿವೃತ್ತಿ ಅಂಚಿಗೆ ಬಂದಿದ್ದೇನೆ ನನ್ನ ಕೈಯಲ್ಲಿ ಕಲಿತವರೆಲ್ಲ ಒಂದ ಹಂತ ತಲುಪಿದ್ದಾರೆ ಆದರೆ ಇವನೊಬ್ಬನೇ ಖಾಲಿ ಕೂತಿದ್ದಾನೆ, ನೀವು ಕಲಿಸಿದ ವಿದ್ಯೆಯಿಂದಲೇ ನಮ್ಮ ಮಕ್ಕಳು ಒಂದು ಹಂತಕ್ಕೆ ಬಂದಿದ್ದಾರೆ ಅಂತ ಅನೇಕ ಜನ ಹೇಳ್ತಾರೆ ಆದರೆ ಸೋಮ ಯಾಕೆ ಹಿಂಗಾದ? ಅಂತ ತಮಗೆ ತಾವೇ ಪ್ರಶ್ನಿಸಿಕೊಂಡರು,
ಸೋಮ ಅಂತಹ ಕೆಟ್ಟ ಹುಡುಗನೇನೂ ಅಲ್ಲ ಆತನಲ್ಲಿ ಮುಗ್ಧತೆಯೂ ಇದೆ ಯಾರ ಜೊತೆಗು ಜಗಳಾ ಗಿಗಳಾ ಮಾಡುವವನಲ್ಲ ಮೋಸ ವಂಚನೆ ಯಾವದೂ ಗೊತ್ತಿಲ್ಲ ಅಂತ ಮತ್ತೊಂದು ಕಡೆಗೂ ಯೋಚಿಸಿ ಅನುಕಂಪಹೊರ ಹಾಕಿದರು.
ಯಾರ ಜೊತೆ ದೋಸ್ತಿ ಮಾಡಿದ್ರು ಆ ಸೋಮನ ದೋಸ್ತಿ
ಮಾಡಬ್ಯಾಡ್ರಿ ಆತನ ಜೊತಿ ಮೋಬೈಲ ನೋಡಕೊಂತ, ಹುಡುಕಾಟಕಿ ಮಾಡಿ ಹರಟೆ ಹೊಡಕೊಂತ ಕುಂತರ ಹೊಟ್ಟೆ ತುಂಬೋದಿಲ್ಲ ಅಪ್ಪ ತಂದು ಹಾಕ್ತಾನೆ ಅವ್ವ ಬಿಸಿ ಬಿಸಿ ಅಡುಗಿ ಮಾಡಿ ಹಾಕ್ತಾಳೆ ಅಂವಾ ಉಂಡು ಉಡಾಳನಂಗ ತಿರುಗತಾನೆ ಕೋತಿ ತಾನೂ ಕೆಟ್ಟು ವನಾನೂ ಕೆಡಿಸ್ತು ಅನ್ನುವಂಗ ಆತನ ಚಾಳಿಯೇ ನಿಮಗೊ ಬೀಳ್ತಾದೆ ಆತನ ನೆರಳ ಕೂಡ ನಿಮ್ಮ ಮ್ಯಾಲ ಬೀಳಬಾರದು ಆ ದರಿದ್ರದವನ ಸಂಗ ಮಾಡಿದೋರು ಯಾರೂ ಉದ್ಧಾರ ಆಗಿಲ್ಲ ಮುಂದೇನೂ ಆಗೋದಿಲ್ಲ ಅಂತ ತಮ್ಮ ಮಕ್ಕಳಿಗೆ ಅನೇಕರು ಬುದ್ದಿ ಹೇಳುತ್ತಿದ್ದರು. ಊರಲ್ಲಿ ಕೇರಿಯಲ್ಲಿ ಸೋಮನ ಬಗ್ಗೆ ಕೆಟ್ಟ ಅಭಿಪ್ರಾಯಗಳೇ ಕೇಳಿ ಬರತಿದ್ದವು. ಹೋಟಲ್ ಕಿರಾಣಿ ಅಂಗಡಿ ಮತ್ತಿತರ ಕಡೆ ದೇಶಾವರಿ ಮಾತಾಡುವವರ ಬಾಯಿಗೂ ಸೋಮನೇ ಆಹಾರವಾಗತೊಡಗಿದ.
ಹೋಗುವಾಗ ಬರುವಾಗ ಜನರ ಮಾತು ಕೇಳಿ ಚನ್ನಣ್ಣ ಮಾಸ್ತರಿಗು ಬೇಸರ ತರಿಸುತ್ತಿತ್ತು ಮಕ್ಕಳು ಕೆಟ್ಟರೆ ಜನ ಆಡಿಕೊಳ್ಳೋದು ತಂದೆ ತಾಯಿ ಮತ್ತು ಕಲಿಸಿದ ಮಾಸ್ತರಿಗೆ ಹೊರತು ಬೇರೆ ಯಾರಿಗೂ ಅಲ್ಲ ಛೊಲೋ ಆದರೆ ಎಲ್ಲರೂ ತಾರೀಫ ಮಾಡ್ತಾರೆ ಅಂತ ಯೋಚಿಸುತ್ತಿದ್ದರು.
ಜನರಾಡುವ ಮಾತು ಶಿವನಾಗನ ಕಿವಿಗೂ ಬಿದ್ದಾಗ ಆತನ ಮನಸ್ಸಿಗೆ ಕಸಿವಿಸಿಯಾಗುತ್ತಿತ್ತು ಮಗನಿಂದ ನಾವು ಎಲ್ಲರ ಕಡೆಯಿಂದ ಮಾತಾಡಿಸಿಕೊಳ್ಳುವಂತಾಯಿತು. ಆ ದೇವರು ಎಲ್ಲರಂಗ ನನಗೂ ಒಬ್ಬ ಮಗಾ ಕೊಟ್ಟ ಆದ್ರೆ ಮಾನ
ಮರ್ಯಾದೆ ಹರಾಜ ಹಾಕ್ತಿದ್ದಾನೆ ಇಂವಾ ಹುಟ್ಟದೇ ಇದ್ದರ ಛೊಲೋ ಆಗ್ತಿತ್ತು ಮಕ್ಕಳೇ ಇಲ್ಲ ಅಂತ ಸ್ವಲ್ಪ ದಿನ ಸಂಕಟಪಟ್ಟು ಸುಮ್ಮನಾಗುತಿದ್ದೆ, ಮನಸ್ಸಿಗೆ ನೆಮ್ಮದಿಯಾದರು ಸಿಗುತ್ತಿತ್ತು ಅಂತ ಮುಖ ಸಪ್ಪಗ ಮಾಡಿ ಸಂಕಟ ಹೊರ ಹಾಕುತ್ತಿದ್ದ.
ಅವತ್ತು ಮುಂಜಾನೆ ಶಿವನಾಗ ಚಹಾ ಕುಡಿಯಲು ಹೋಟಲ ಕಡೆ ಬಂದಾಗ ಗೆಳೆಯ ರಾಜೇಂದ್ರ ಹತ್ತಿರ ಕರೆದು ಎಷ್ಟ ದಿನಾ ಅಂತ ನೀನೊಬ್ಬನೇ ದುಡಿದು ಹೈರಾಣಾಗ್ತಿ ಮಾರಾಯ ನಿನ್ನ ವಯಸ್ಸೇನು ಬರಬರುತ್ತಾ ಹೆಚ್ಚಾಗ್ತಾದಾ ? ಕಡಿಮೆ ಆಗ್ತಾದಾ? ಹರೇದ ಮಗನಿದ್ದರು ಪ್ರಯೋಜನವಿಲ್ಲದಂತಾಗಿದೆ ಈ ವಯಸ್ಸಿನ್ಯಾಗೂ ದುಡೀತೆಲ್ಲ ? ಮಗ ನೋಡಿದ್ರ ಕುಂತು ಉಣ್ತಾನೆ ಮೊದಲೇ ನೀನು ಹರೆಗೆಟ್ಟಾಂವ ಇದು ದುಡಿಯೋ ವಯಸ್ಸಲ್ಲ ? ಕುಂತು ಉಣ್ಣೋ ವಯಸ್ಸು ನಿನಗ ನೋಡಿದ್ರ ಅಯ್ಯೋ ಅನಿಸ್ತಿದೆ ಕಾಲ ಉಲ್ಟಾ ಬಂದಂಗ ಕಾಣಸ್ತಿದೆ ಅಂತ ಕನಿಕರ ಹೊರ ಹಾಕಿ ಚಿಂತೆ ಹೆಚ್ಚುವಂತೆ ಮಾಡಿದ.
ಊರ ಮುಖಂಡ ನೆನಪಿಸಿಕೊಂಡ ಹನುಮಂತಪ್ಪ ಕೂಡ ಶಿವನಾಗನ ಮೇಲೆ ಕನಿಕರ ತೋರಿಸುತ್ತಾ ಮೂವತ್ತು ವರ್ಷದ ಹಿಂದೆ ನಿನ್ನ ಹತ್ರ ಉಟ್ಟ ಬಟ್ಟೆ ಬಿಟ್ಟು ಬೇರೇನೂ ಇರಲಿಲ್ಲ ಆದರೂ ಛಲ ಬಿಡದೆ ಹಗಲು ರಾತ್ರಿ ದುಡಿದು ದುಡ್ಡಿಗೆ ದುಡ್ಡು ಜಮಾಯಾಸಿ ಅಂಗೈಯಷ್ಟು ಭೂಮಿಯಾದರು ಇರಬೇಕು ಅದು ಮುಂದೆ ಮಗನಿಗೆ ಆಸರಾ ಆಗ್ತಾದೆ ಅಂತ ನಾಲ್ಕು ಎಕರೆ ಹೊಲಾ ತೊಗೊಂಡೆ
ಆಗ ನಿಮ್ಮ ಅಪ್ಪ ಅವ್ವಗ ಬಹಳ ಖುಷಿಯಾಗಿ ನನ್ನ ಮಗ ಬೆವರು ಸುರಿಸಿ ಹೊಲ ಅಂತ ಹೆಮ್ಮೆ ಪಟ್ಟು ಊರ ತುಂಬಾ ತಿರುಗಾಡಿ ಹೇಳಿದ್ದರು . ಆದರೆ ನಿನ್ನ ಮಗಾ ಈ ಹೊಲ ಕಾಯ್ಕೊಂಡು ಹೋಗ್ತಾನಂತ ಯಾವ ಭರವಸೆ ಇಲ್ಲ ಅಂತ ಆತಂಕ ಹೊರ ಹಾಕಿ ಹೇಳಿದ. ಆತನ ಮಾತು ಶಿವನಾಗನ ಎದೆ ಧಸಕ್ ಎನ್ನುವಂತೆ ಮಾಡಿತು ಅಂದು ರಾತ್ರಿ ನಿದ್ದೆಯೂ ಹತ್ತದೆ ತಲ್ಯಾಗ ಅದೇ ವಿಷಯ ಒಂದೇ ಸವನೆ ಕೊರೆಯತೊಡಗಿತು. ನಾನು ಜೀವಂತ ಇರುವಾಗಲೇ ನನ್ನ ಮಗ ಈ ಹೊಲಾ ಮಾರಿ ಬಿಟ್ಟರೆ ಏನ್ಮಾಡೋದು ? ಹೇಗಾದ್ರು ಮಾಡಿ ಇವನಿಗೆ ಸರಿ ದಾರಿಗೆ ತರಬೇಕು ಇಲ್ಲದಿದ್ದರೆ ಎಲ್ಲವೂ ಹೊಳ್ಯಾಗ ಹುಣಚಿ ಹಣ್ಣ ತೊಳೆದಂಗಾಗ್ತದೆ ಅಂತ ಯೋಚಿಸಿದ ಆದರೆ ಯಾವ ಪರಿಹಾರವೂ ಕಾಣಲಿಲ್ಲ. ಮರುದಿನ ಕೂಡ ಅದೇ ಚಿಂತೆ ಚಿಗುರೊಡೆದು ಕಾಡಲಾರಂಭಿಸಿತು .
ಚನ್ನಣ್ಣ ಮಾಸ್ತರ ಶ್ಯಾಣ್ಯಾ ಇದ್ದಾರೆ , ಊರಾಗ ಏನಾದರು ಯಾರಿಗಾದರು ಸಮಸ್ಯೆ ಬಂದಾಗ ಅವರೇ ಪರಿಹರಿಸ್ತಾರೆ ಈ ವಿಷಯ ಅವರ ಗಮನಕ್ಕೆ ತರಬೇಕು ಅವರೇನಾದ್ರು ಪರಿಹಾರ ತೋರಿಸಬಹುದು ಸೋಮನೂ ಅವರ ಕೈಯಾಗೆ ಓದಿದವನು ಅಂತ ಯೋಚನೆ ಮೂಡಿ ಅವತ್ತು ಶಿವನಾಗ ಲಗುಬಗೆಯಿಂದ ಶಾಲೆ ಕಡೆ ಬಂದ. ಶಿವನಾಗ ಬಂದಿದ್ದು ಚನ್ನಣ್ಣ ಮಾಸ್ತರಿಗೂ ಗಾಬರಿಯಾಗಿ ಆತನ ಮುಖ ಪ್ರಶ್ನಾರ್ಥಕವಾಗಿ ನೋಡುತ್ತಾ ಬಾ ಶಿವನಾಗ ಏನು ವಿಷಯ ಮಗಾ ಕಲಿಯುವ ತನಕ ಈ ಕಡೆ ಬರುತ್ತಿದ್ದೆ ಆತನ ಓದು
ಬರಹದ ಬಗ್ಗೆ ವಿಚಾರಿಸುತ್ತಿದ್ದೆ ಆದರೆ ಇತ್ತೀಚೆಗೆ ಬರೋದೇ ಬಿಟ್ಟಿರುವೆ ಏನು ವಿಷಯ ಅಂತ ಕುತೂಹಲದಿಂದ ಪ್ರಶ್ನಿಸಿದರು.
ಏನಿಲ್ಲ ಗುರುಗಳೇ ಈಗಲೂ ಮಗನ ಸಲುವಾಗೇ ಬಂದಿದ್ದೇನೆ ಇಲ್ಲದಿದ್ದರೆ ನಾನೆಲ್ಲಿ ಬರ್ತಿದ್ದೆ ನನ್ನ ಕೆಲಸಾನೇ ನನಗೆ ಹಾಸಿ ಹೊದ್ದುಕೊಳ್ಳುವಷ್ಟಿವೆ ಮುಂಜಾನೆಯಿಂದ ಸಂಜೀತನಕ ಕೆಲಸದಾಗ ಪುರುಸೊತ್ತೇ ಸಿಗೋದಿಲ್ಲ ನೀವಾದ್ರು ಸೋಮನಿಗೆ ಸ್ವಲ್ಪ ಬುದ್ದಿ ಹೇಳ್ರಿ ನನಗಂತೂ ಹೇಳಿ ಹೇಳಿ ಸಾಕಾಗಿದೆ ಏನೋ ಒಬ್ಬನೇ ಮಗಾ ಛೊಲೋ ಓದಿಸಿ ಶ್ಯಾಣ್ಯಾ ಮಾಡ್ಬೇಕು ನನ್ನಂಗ ಮಳೆ ಬಿಸಿಲು ಗಾಳ್ಯಾಗ ದುಡಿದು ಹೈರಾಣ ಆಗ್ಬಾರದು ಅಂತ ಏನೆಲ್ಲ ಮಾಡಿದೆ ಆದರೆ ಇವನು ಅರ್ಧಮರ್ಧ ಸಾಲೀ ಕಲಿತು ಮುಂದ ಓದಲಾರದೆ ಅಂತರ ಪಿಶಾಚಿಯಾಗಿ ನನ್ನಾಸೆಗೆ ತಣ್ಣೀರೆರೆಚಿ ಬಿಟ್ಟ ಹೋಗಲಿ ಸಣ್ಣ ಪುಟ್ಟ ಕೆಲಸಾದ್ರು ಮಾಡ್ಬೇಕಿಲ್ಲ ಅದೂ ಮಾಡ್ತಿಲ್ಲ ಮೂರು ಹೊತ್ತು ಕೂಳ ತಿಂದು ಹೊತ್ತಗಳೀತಾನೆ, ಹಿಂಗ ಆದ್ರ ಯಾವ ತಂದೆಗೆ ಸಹಿಸಿಕೊಳ್ಳೋಕಾಗ್ತದೆ ನೀವೇ ಹೇಳಿ ಅಂತ ಕಣ್ತುಂಬ ನೀರು ತಂದು ಸಂಕಟ ಹೊರ ಹಾಕಿದ. ನನಗೂ ಆತನ ಬಗ್ಗೆ ಗೊತ್ತಾಗಿದೆ ಜನರ ಮಾತೂ ಕಿವಿಗೆ ಬಿದ್ದಿವೆ ಹೊಡೆದು ಬಡಿದು ಬುದ್ದಿ ಹೇಳೋ ವಯಸ್ಸು ಆತನದಲ್ಲ ಸಮಯ ಸಂದರ್ಭ ಬಂದಾಗ ಆತ ತಾನೇ ಸರಿ ದಾರೀಗಿ ಬರ್ತಾನೆ ನೀನೇನೂ ಚಿಂತೆ ಮಾಡಬ್ಯಾಡ ನಾನೂ ಕರೆದು ಬುದ್ದಿ ಹೇಳ್ತೀನಿ ಅಂತ ಸಮಾಧಾನ ಹೇಳಿ ಕಳಿಸಿದರು.
ಅವತ್ತು ಜನ ಎಂದಿನಂತೆ ಎತ್ತು ಎಮ್ಮೆ ಆಕಳು ಕರು ಕುರಿ ಮರಿ ಹೊಡೆದುಕೊಂಡು ಹೊಲ ನೆಲ ಕೆಲಸ ಕಾರ್ಯ ಅಂತ ಹೊರಟರು ಹೋದರು. ಜನಾನೇ ಇಲ್ಲ ಅಂದ್ಮೇಲೆ ನಮ್ಮ ಗಿರಾಕಿನೂ ಆಗೋದಿಲ್ಲ ಅಂತ ಹೋಟಲು, ಕಿರಾಣಿ ಮತ್ತಿತರ ಸಣ್ಣ ಪುಟ್ಟ ಡಬ್ಬ ಅಂಗಡಿ ವ್ಯಾಪಾರದವರು ತಮ್ಮ ಅಂಗಡಿಗಳಿಗೆ ಹೊರಗೀಲಿ ಹಾಕಿಕೊಂಡ ತೆರಳಿದರು ಯಾರೂ ಇಲ್ಲದೇ ರಸ್ತೆಗಳು ಕೂಡ ಬಿಕೋ ಅನ್ನುತ್ತಿದ್ದವು ಮದ್ಯಾಹ್ನ ಸಮಯವಂತೂ ನರಪಿಳ್ಳೆ ಕಾಣದೆ ಊರು ಹಾಳು ಬಿದ್ದಂತೆ ಕಾಣಿಸುತ್ತಿತ್ತು. ಯಾರೇ ಹೋದರೂ ಸೋಮ ಎಲ್ಲಿಗೂ ಹೋಗೋನಲ್ಲ ಮುಂಜಾನೆಯೇ ಹೊಟ್ಟೆ ತುಂಬಾ ಊಟಾ ಮಾಡಿ ಅಮ್ಮನ ಕಡೆಯಿಂದ ಹತ್ತಿಪ್ಪತ್ತು ರುಪಾಯಿ ಖರ್ಚಿಗೆ ಪಡೆದು ದಿನಾ ಕೂಡೋ ಕಟ್ಟೆಗೆ ಮೋಬೈಲಿನಲ್ಲಿ ಕೈಯಾಡಿಸುತ್ತಾ ಕೂತಿದ್ದ. ಆತನಿಗ ನೋಡಿ ಕೆಲಸಾ ಕಾರ್ಯಕ್ಕೆ ಹೋಗುವವರು ಓರೆಗಣ್ಣಿಂದ ನೋಡಿ ಹೋಗುತ್ತಿದ್ದರು. ಕೆಲವರು ಇವನ ಕಡೆ ವಿಶೇಷ ಗಮನ ಹರಿಸಿ ಸೋಮಾರಿಗೆ ಸುಮ್ಮನ ಕೂಡೋದೇ ಕೆಲಸ ಮನಿ ಅನ್ನ ಉಂಡು ಪುಗಸೆಟ್ಟೆ ಊರು ಕಾಯ್ತಾನೆ ರಿಕಾಮಿ ಸೋಮ, ಉಳಿಟ್ಟ ಖಂಡ ಉರಿ ಛಳಿ ಪಾಲಾಗ್ತಾದೆ ಅನ್ನೋದು ಗೊತ್ತೇ ಇಲ್ಲ ಅಂತ ಗೇಲಿ ಮಾಡಿದರು. ಅವರ ಮಾತು ಕಿವಿಗೆ ಬಿದ್ದಾಗ ಸೋಮನ ಮನಸ್ಸಿಗೆ ಬೇಜಾರಾಗಿ ಮುಖ ಸಪ್ಪಗೆ ಮಾಡಿ ಶೂನ್ಯ ದಿಟ್ಟಿಸಿದ. ಅವರು ಹೇಳಿದ್ರಲ್ಲಿ ತಪ್ಪೇನಿದೆ ಇದ್ದದ್ದೇ ಹೇಳಿದ್ದಾರೆ ಅಪ್ಪನೇ ನನಗೆ ಸೋಮಾರಿ ಅಂತ ಕರೆದ ಮೇಲೆ ಅವರೇನು? ಜನರ ಮಾತಿಗೇಕೆ ತಲೆಕೆಡಿಸಿಕೊಳ್ಳೋದು ? ಗಾಳಿ ಮಾತು ಗಾಳೀಗಿ ಹೋಗ್ತಾವೆ ಅಂತ ತನಗೆ ತಾನೇ
ಸಮಾಧಾನ ತಂದುಕೊಂಡು ಮೋಬೈಲಿನಲ್ಲಿ ಕೈಯಾಡಿಸತೊಡಗಿದ.
ಹೊತ್ತು ಏರಿದಂತೆ ಮಧ್ಯಾಹ್ನದ ಬಿಸಿಲು ಒಂದೇ ಸವನೆ ರಣಗೊಡತೊಡಗಿತು ಸೂರ್ಯನ ಪ್ರಖರ ಕಿರಣದಿಂದ ನೆಲ ಕಾದ ಹಂಚಿನಂತಾಗಿ ಬರಿಗಾಲಲ್ಲಿ ನಡೆದರೆ ಪಾದಗಳಿಗೆ ಗುಳ್ಳೆಗಳೇ ಬರುತ್ತಿದ್ದವು ಬಿಸಿಲಿನ ಝಳ ಬೆವರಿನ ಸ್ನಾನ ಮಾಡಿಸುವಂತಿತ್ತು. ಸಣ್ಣ ಊರನಲ್ಲಿನ ಇಕ್ಕಟ್ಟಾದ ಮನೆಗಳು ಗಾಳಿಯಾಡಲು ಹೆಚ್ಚಿನ ಜಾಗವೂ ಇರಲಿಲ್ಲ ಅಂಥದರಲ್ಲೇ ಜನ ತಮ್ಮ ಮನೆಯ ಅಕ್ಕ ಪಕ್ಕ ವರ್ಷಕ್ಕಾಗುವ ಉರುವಲು ಕುಳ್ಳು ಕಟ್ಟಿಗೆ ಗುಡ್ಡೆ ಹಾಕಿದ್ದಲ್ಲದೇ ಜಾನುವಾರಗಳಿಗಾಗಿ ಮನೆಯ ಛಾವಣಿಯ ಮೇಲೆ ಒಣ ಮೇವು ಕಣಿಕೆ ಕೂಡ ಸಂಗ್ರಹಿಸಿ ಪೇರಿಸಿಟ್ಟಿದ್ದರು. ಮಟ ಮಟ ಮದ್ಯಾಹ್ನ ಅಕಸ್ಮಾತ ಹೊತ್ತಿದ ಬೆಂಕಿಯ ಕಿಡಿ ನೋಡನೋಡುತ್ತಿದ್ದಂತೆ ಬುಗ್ಗನೆ ಹೊತ್ತಿ ಒಂದು ಮನೆಯಿಂದ ಇನ್ನೊಂದು ಮನೆಗೆ ಕೆನ್ನಾಲಿಗೆ ಚಾಚುತ್ತಾ ಅದರಿಂದ ದಟ್ಟವಾದ ಕಪ್ಪು ಹೊಗೆ ಸುರುಳಿಯಾಗಿ ಹರಡಿ ಕಾರ್ಮೋಡ ಆವರಿಸಿದಂತಾಯಿತು. ಮುದುಕರು ತದಕರು ಅಶಕ್ತರು ಅನಾರೋಗ್ಯ ಪೀಡಿತರು ಮಾತ್ರ ಮನೆಯಲ್ಲಿದ್ದರು ಬೆಂಕಿ ನೋಡಿ ಅವರ ಚೀರಾಟ ಕೂಗಾಟ ಖಾಲಿ ಊರಲ್ಲಿ ಅರಣ್ಯರೋಧನದಂತಾಯಿತು.
ಇನ್ನೇನು ಊರೇ ಸುಟ್ಟು ಹೋಗುತ್ತದೆನ್ನುವಷ್ಟರಲ್ಲೇ ದೇವರು ಬಂದಂತೆ ಬೆಂಕಿ ನಂದಿಸುವ ವಾಹನ ಸೈರನ್ ಹೊಡೆಯುತ್ತಾ ಹತ್ತಾರು ಜನ ರಕ್ಷಣಾ ಸಿಬ್ಬಂದಿಯೊಂದಿಗೆ ಹಾಜರಾಯಿತು.
ಅವರೆಲ್ಲ ಸೇರಿ ಯುದ್ದೋಪಾದಿಯಲ್ಲಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾದರು. ಹೊಲದ ಕೆಲಸಕ್ಕ ಹೋದ ಜನರಿಗೂ ಬೆಂಕಿ ಬಿದ್ದ ವಿಷಯ ಗೊತ್ತಾದ ಕೂಡಲೇ ಅವರೆಲ್ಲ ಗಾಬರಿಗೊಂಡು ಊರ ಕಡೆ ಧಾವಿಸಿದರು. ಶಿವನಾಗನೂ ಗಡಬಡಿಸಿ ಹೆಂಡತಿ ಜೊತೆ ಮನೆಗೆ ಬಂದಾಗ ಅಘಾತವಾಗಿತ್ತು ಕೊಟ್ಟಿಗೆಯಲ್ಲಿನ ಶೇಖರಿಸಿಟ್ಟ ಕಣಿಕೆ ಒಣಮೇವು ಆಗಲೇ ಬೆಂಕಗಾಹುತಿಯಾಗಿದ್ದು ನೋಡಿ ಚಿಂತೆಗೀಡುಮಾಡಿತು ತಲೆ ಮೇಲೆ ಕೈಹೊತ್ತು ಮುಖ ಸಪ್ಪಗ ಮಾಡಿ ಕುಳಿತ. ಶಿವಗಂಗವ್ವ ಕೂಡ ಶಕ್ತಿ ಹೀನಳಾಗಿ ಗಂಡನ ಹತ್ತಿರ ಬಂದು ಕುಳಿತುಕೊಂಡಳು. ನಮ್ಮ ಮಗ ಇದ್ದರೂ ಇಲ್ಲದಂಗ ವರ್ಷಕ್ಕಾಗುವ ಎತ್ತಿನ ಮೇವು ಸುಟ್ಟು ಕರಕಲಾಗಿ ಹೋಯಿತು ಬೆಂಕಿ ಬಿದ್ದಾಗಲಾದ್ರು ಬಂದು ಉಳಿಸಿಕೊಳ್ಳಬಾರದಾ? ಸೋಮಾರಿ ನನ್ಮಗ ಅಂತ ಸಂಕಟ ಹೊರ ಹಾಕಿದ. ಗಂಡನ ಮಾತಿಗೆ ಏನು ಹೇಳಬೇಕೆಂತ ತಿಳಿಯದೆ ಶಿವಗಂಗವ್ವ ಮೌನವಾಗಿ ತಲೆತಗ್ಗಿಸಿದಳು. ಯಾಕೆ ಮಾತಾಡ್ತಿಲ್ಲ ಪ್ರತಿ ಸಲ ಮಗನ ವಹಿಸಿಕೊಂಡು ಬರ್ತಿದ್ದೆ ಈಗಲಾದರು ಗೊತ್ತಾಯಿತಾ? ಮಗನ ಅಸಲಿಯತ್ತು ಅಂತ ಪ್ರಶ್ನಿಸಿದ. ಅವಳ ಕಣ್ಣಿಂದ ಒಂದೆರಡು ಹನಿ ನೀರುದುರಿ ಸೀರೆ ಸೆರಗಿನಿಂದ ಒರೆಸಿಕೊಳ್ಳುತ್ತಾ ತಲೆ ಕೆಳಗೆ ಹಾಕಿದಳು.
ನಡು ಊರ ಕಡೆಯಿಂದ ಸಣ್ಣಮನಿ ಸಿದ್ರಾಮ ಓಡೋಡಿ ಬಂದು ಊರಿಗೆ ಬೆಂಕಿ ಹಚ್ಚಿದ್ದು ಸೋಮನೇ ಅಂತ ಜನ ಆತನ ಮೇಲೆ ಕೋಪಗೊಂಡು ನಡು ಊರ ಕಟ್ಟೆಗೆ ಬಾಯಿಗೆ ಬಂದಂತೆ ಬೈತಿದ್ದಾರೆ ಅನೇಕರು ಆತನ ಮ್ಯಾಲ ಕೈಮಾಡಲು
ಹೋಗಿದ್ದರು ಕೆಲವರು ತಡೆದರು ಅಂತ ವಾಸ್ತವ ಹೇಳಿದ. ಶಿವನಾಗ ಸ್ವಲ್ಪವೂ ವಿಚಲಿತಗೊಳ್ಳದೆ ಮಗನ ಮೇಲೆ ಯಾವುದೇ ಕನಿಕರ ತೋರದೆ ಹಾಗೇ ಕುಳಿತ. ಆದರೆ ಸಿದ್ರಾಮನ ಮಾತು ಶಿವಗಂಗವ್ವಳ ಕರುಳಿಗೆ ಕಿಚ್ಚು ಹಚ್ಚಿದಂತಾಯಿತು ತಕ್ಷಣ ಎದ್ದು ನಿಂತು ನನ್ನ ಮಗನಿಗೆ ಯಾರು ಕೈ ಹಚ್ಚತಾರೆ ನಾನೂ ನೋಡ್ತೀನಿ ನನ್ಮಗ ಸೋಮಾರಿ ಇರಬಹುದು ಆದರೆ ಊರಿಗೆ ಬೆಂಕಿ ಹಚ್ಚೋ ಕೆಲಸಾ ಮಾಡೋನಲ್ಲ ನನಗ ಅವನ ಮ್ಯಾಲ ಭರೋಸಾ ಇದೆ ಅವನೇ ಬೆಂಕಿ ಹಚ್ಚಿದ್ದು ಅಂತ ಹ್ಯಾಂಗ ಹೇಳ್ತಾರೆ ಸಾಕ್ಷೀ ಸಬೂತ ಇದೆಯಾ? ಯಾರಾದ್ರು ನೋಡಿದ್ದಾರಾ? ಅಂತ ಒಂದೇ ಸವನೆ ಕೋಪ ತಾಪ ಹೊರ ಹಾಕಿ ನಡು ಊರ ಕಡೆ ಧಾವಿಸಿದಳು.
ಇದಕ್ಯಾಕ ಸಾಕ್ಷೀ ಬೇಕು ಊರಾಗ ಅವನಿಗಿ ಬಿಟ್ಟು ಯಾರಿದ್ದಾರೆ? ಅವನ ಮ್ಯಾಲ ಸಹಜವಾಗಿ ಎಲ್ಲರಿಗೂ ಅನುಮಾನ ಬರ್ತಾದೆ ಅವನಿಗೆ ಮೊದಲು ಶಿಕ್ಷೆಯಾಗಲಿ ಬಿಡು ಯಾಕೆ ತಡೀತಿ ಅಂತ ಹೆಂಡತಿಯ ಹಿಂದೆ ಹಿಂದೆ ಶಿವನಾಗನೂ ಓಡಿ ಬಂದ. ಸೋಮನ ಸುತ್ತಲೂ ಜನ ಜಾತ್ರೆಯಲ್ಲಿ ಸೇರಿದಂತೆ ಸೇರಿ ಒಬ್ಬೊಬ್ಬರು ಒಂದೊಂದು ರೀತಿ ಮನಸ್ಸಿಗೆ ಬಂದಂತೆ ಮಾತಾಡಿ ಪೋಲೀಸ ಕಂಪ್ಲೇಂಟ ಕೊಡಬೇಕು ಅಂದಾಗಲೆ ಬುದ್ಧಿ ಬರೋದು ಅನ್ನುವ ವಾದವೂ ಮಾಡಿದರು. ಸೋಮ ತನ್ನ ತಾನು ಸಮರ್ಥಿಸಿಕೊಳ್ಳಲಾಗದೆ ಕಕ್ಕಾಬಿಕ್ಕಿಯಾದ. ತಡೀರಿ ನೀವು ಕಂಪ್ಲೇಂಟ ಕೊಡೋ ಬದಲು ನಾನೇ ಕೊಡತೀನಿ ನನಗೂ ಇವನಿಂದ ಸಾಕಾಗಿ ಹೋಗಿದೆ ಮನಿ ಕೂಳ ತಿಂದು ಸೊಕ್ಕಿದ್ದಾನೆ ಜೈಲೂಟ
ತಿಂದಾಗಲೇ ದಾರೀಗಿ ಬರ್ತಾನೆ ಅಂತ ಶಿವನಾಗ ಮಾತಿನ ಮಧ್ಯ ಕೋಪದಿಂದ ಹೇಳಿದಾಗ ಜನ ಆಶ್ಚರ್ಯದ ಜೊತೆ ಗಾಬರಿಯಿಂದ ಎಲ್ಲರೂ ಆತನ ಕಡೆ ನೋಡತೊಡಗಿದರು. ಅದೇ ಸಮಯ ಕರಿಕಲ್ಲ ಮನೆ ರಾಮವ್ವಳಿಗೆ ವಿಷಯ ಗೊತ್ತಾಗಿ ಜನರ ಗುಂಪು ಸರಿಸುತ್ತಾ ಕಟ್ಟೆ ಹತ್ತಿರ ಬಂದವಳೇ ಸೋಮನಿಗ್ಯಾಕ ಜೈಲಿಗಿ ಕಳಸ್ತೀರಿ ಅವನು ಊರಿಗಿ ಉಪಕಾರ ಮಾಡಿದ್ದಕ್ಕಾಗಿ ಈ ಶಿಕ್ಷಾ ಕೊಡ್ತೀರೇನು? ಅವನಿರೋದ್ರಿಂಲೇ ಇವತ್ತು ನಮ್ಮೂರ ಊರಾಗಿ ಉಳೀತು ಇಲ್ಲದಿದ್ರೆ ಗುರುತು ಇಲ್ಲದಂಗ ಸುಟ್ಟು ಕರಕಲಾಗಿ ಹೋಗ್ತಿತ್ತು ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷಾ ಕೊಟ್ಟರ ಆ ಶಿವಾ ಮೆಚ್ಚತಾನಾ ? ಅಂತ ಪ್ರಶ್ನಿಸಿದಳು. ಅವಳ ಮಾತು ಎಲ್ಲರಿಗೂ ಆಶ್ಚರ್ಯ ಮೂಡಿಸಿ ಪರಸ್ಪರ ಒಬ್ಬರ ಮುಖ ಒಬ್ಬರು ಪ್ರಶ್ನಾರ್ಥಕವಾಗಿ ನೋಡತೊಡಗಿದರು.
ಮುಂಜಾನೆ ಯಾರೋ ಕೆಲಸದ ಅವಸರದಾಗ ಒಲ್ಯಾಗಿದ ಬೂದಿ ತಂದು ತಿಪ್ಪಿ ಗುಂಡೀಗಿ ಸುರುವಿ ಹೋದರು ಆ ಬೂದಿಯೊಳಗ ಕೆಂಡ ಮುಚ್ಚಿದ್ದು ಗೊತ್ತೇ ಆಗಲಿಲ್ಲ ಅದು ಹೊತ್ತೇರಿದಂಗ ಅರಳಿ ಬುಗ್ಗನೆ ಹೊತ್ತಿ ಇಷ್ಟೆಲ್ಲ ಅನಾಹುತ ಮಾಡಿತು. ಮೊದಲು ನನಗೇ ಗೊತ್ತಾಯಿತು ಆಗ ನಾನು ಊರ ತುಂಬಾ ತಿರುಗಾಡಿ ಕಿರುಚಾಡಿದೆ, ಎಲ್ಲಾ ಮನೆಗಳು ಹೊರಗೀಲಿ ಬಿದ್ದಿದ್ದವು ಎಲ್ಲರೂ ಕೆಲಸಕ್ಕೆ ಹೋಗಿದ್ದರು ಯಾರೂ ಬರಲಿಲ್ಲ ನಡೂರ ಕಟ್ಟೆಗೆ ಕುಂತ ಸೋಮ ನನ್ನ ಕೂಗು ಕೇಳಿ ಓಡೋಡಿ ಬಂದ ತಕ್ಷಣ ಫೋನ ಮಾಡಿ ಯಾರಿಗೋ ವಿಷಯ ತಿಳಿಸಿದ. ಒಂದು ಘಳಿಗ್ಯಾಗೇ ಬೆಂಕಿ
ಆರಿಸೋರು ಮೋಟಾರ ಸಮೇತ ಬಂದು ಆರಿಸೋ ಕೆಲಸಕ್ಕಿಳಿದರು ಅವರ ಜೊತೆ ಇವನೂ ಕೈಜೋಡಿಸಿದ ಇಲ್ಲದಿದ್ದರೆ ದೊಡ್ಡ ದುರಂತ ನಡೆದು ಹೋಗ್ತಿತ್ತು ಊರ ಜೊತೆ ಇವತ್ತು ನಾನೂ ಭಸ್ಮ ಆಗಿ ಹೋಗ್ತಿದ್ದೆ. ಆ ದೇವರು ಸೋಮನಿಗೆ ತಣ್ಣಗಿಟ್ಟಿರಲಿ ಅಂತ ಪ್ರಾರ್ಥಿಸಿ ಹಕೀಕತ ಬಿಚ್ಚಿಟ್ಟಳು.
ಸೋಮನ ಮೇಲೆ ಮುಗಿ ಬಿದ್ದು ಬೆಂಕಿ ಉಗುಳುತಿದ್ದ ಜನ ಏಕಾಏಕಿ ತಣ್ಣಗಾಗಿ ಆತನ ಮುಖ ನೋಡತೊಡಗಿದರು. ಮಗ ಮಾಡಿದ ಕೆಲಸಾ ನೋಡಿ ನನ್ನ ಮಗ ಇವತ್ತು ಜನ ಮೆಚ್ಚುವ ಕೆಲಸಾ ಮಾಡಿದ ಅನ್ನುವ ಖುಷಿ ಶಿವನಾಗನಿಗೆ ಒಳಗೊಳಗೆ ಪುಟಿದೇಳುವಂತೆ ಮಾಡಿತು. ಹೆಂಡತಿಯ ಕಡೆ ನೋಡಿದ ಅವಳೂ ಖುಷಿಯಾಗಿ ಕಣ್ಣಿಂದ ಆನಂದಬಾಷ್ಪ ಸುರಿಸುತ್ತಿದ್ದಳು. ಸೋಮನಿಗೆ ಬೈದೋರೆಲ್ಲ ಹೊಗಳಿ ಮಾತಾಡತೊಡಗಿದರು .
ಸೋಮನಿಗೆ ಚನ್ನಣ್ಣ ಮಾಸ್ತರ ನೆನಪು ಬಂದಿತು ಅವರಿಂದ ಕಲಿತ ನಾಲ್ಕಕ್ಷರವೇ ನನಗಿವತ್ತು ದಾರೀ ತೋರಿಸಿತು ಬೆಂಕಿ ಬಿದ್ದಾಗ ಯಾರೀಗಿ ಫೋನ ಮಾಡಬೇಕು ಪ್ರವಾಹ ಬಂದಾಗ ಯಾರೀಗಿ ಫೋನ ಮಾಡಬೇಕು ಜಗಳಾ ದೊಂಬಿ ಆದಾಗ ಯಾರೀಗಿ ಫೋನ ಮಾಡಬೇಕು ಅಂತ ಅವರೇ ತಿಳಿಸಿ ಹೇಳಿದ್ದರು ಅವರ ಮಾರ್ಗದರ್ಶನದಂತೆ ನಾನಿವತ್ತು ಅಗ್ನಿಶಾಮಕ ದಳದವರಿಗೆ ಫೋನ ಮಾಡಿದೆ ಇಲ್ಲದಿದ್ದರೆ ನನಗ್ಯಾವದೂ ತಿಳಿತಿರಲಿಲ್ಲ. ಎಲ್ಲರ ಕಡೆಯಿಂದ ಬೈಸಿಕೊಂಡ ಹೊಡೆಸಿಕೊಂಡು ಅಪರಾಧಿಯಾಗಿ ಜೈಲು ಪಾಲಾಗ್ತಿದ್ದೆ ನಾನು ತಪ್ಪು ಮಾಡದಿದ್ದರೂ ನನ್ಮೇಲೆ ಎಲ್ಲರಿಗೂ ಸಂಶಯ
ಮೂಡತಿತ್ತು ಯಾಕೆಂದ್ರ ನನಗೊಬ್ಬನಿಗೆ ಬಿಟ್ಟು ಊರಲ್ಲಿ ಯಾರೂ ಇರಲಿಲ್ಲ ನನಗೆ ಸಮರ್ಥಿಸಲು ಯಾರೂ ಬರುತ್ತಿರಲಿಲ್ಲ. ಇನ್ಮುಂದಾದರು ನಾನು ಎಲ್ಲರಂತೆ ಕೆಲಸಾ ಮಾಡಿ ಭೇಷ ಅನಿಸಿಕೊಳ್ಳಬೇಕು ಅಂತ ಮನಪರಿವರ್ತನೆ ಮಾಡಿಕೊಂಡು ನಿರ್ಧರಕ್ಕೆ ಬಂದ , ಮರುದಿನ ಎಲ್ಲರಿಗಿಂತ ಬೇಗ ಎದ್ದು ಅಪ್ಪ ಮಾಡುವ ಎಲ್ಲಾ ಕೆಲಸಾ ಮುಗಿಸಿ ರೊಟ್ಟಿ ಬುತ್ತಿ ತೊಗೊಂಡು ಬಾರಕೋಲು ಹೆಗಲಿಗೇರಿಸಿ ಎತ್ತಿನ ಕೊರಳಗೆಜ್ಜೆ ನಾದಕ್ಕೆ ಹೆಜ್ಜೆಹಾಕುತ್ತಾ ಹೊಲದ ಕಡೆ ಹೊರಟ ದಾರಿಯಲ್ಲಿ ಚನ್ನಣ್ಣ ಮಾಸ್ತರ ಎದುರಾದರು. ಅವರಿಗೆ ನೋಡಿ ಸೋಮನಿಗೆ ಹೆದರಿಕೆಯಾಗಲಿಲ್ಲ ಈಗ ನಾನು ಸೋಮಾರಿಯಲ್ಲ ತಲೆತಗ್ಗಿಸುವ ಅವಶ್ಯಕತೆಯೂ ಇಲ್ಲ ಅಂತ ತನ್ನ ಎರಡೂ ಕೈ ಜೋಡಿಸಿ ಅವರಿಗೆ ನಮಸ್ಕರಿಸಿದ.
ಸೋಮನಲ್ಲಾದ ಬದಲಾವಣೆ ಮಾಸ್ತರಿಗೂ ಆಶ್ಚರ್ಯ ತರಿಸಿತು ,ಭೇಷ ಸೋಮ ಅಂತ ಮನದುಂಬಿ ಹರಿಸಿದಾಗ ಸೋಮನಿಗೆ ಖುಷಿಯಾಯಿತು ಚನ್ನಣ್ಣ ಮಾಸ್ತರ ಮುಗುಳ್ನಗು ಬೀರುತ್ತಾ ಶಾಲೆ ಕಡೆ ಹೆಜ್ಜೆಹಾಕಿದರೆ ಸೋಮ ಹೊಲದ ಕಡೆ ಹೆಜ್ಜೆಹಾಕಿದ!
–ಶರಣಗೌಡ ಬಿ.ಪಾಟೀಲ ತಿಳಗೂಳ ಕಲ್ಬುರ್ಗಿ