
ನಿಸರ್ಗದ ಜೊತೆಗೆ ಅವಿನಾಭಾವ ಸಂಬಂಧ ಇಟ್ಟುಕೊಂಡರೆ ಸದಾ ಒಳ್ಳೆಯದು ಎನ್ನುವ ಮಾತಿದೆ. ಮನುಷ್ಯನ ಜೀವನದ ಎಲ್ಲಾ ಹಂತಗಳೂ ನೈಸರ್ಗಿಕವಾಗಿ ಜರುಗಿದರೆ ಅದಕ್ಕೆ ಹೆಚ್ಚಿನ ಮೌಲ್ಯವಿದೆ. ದೈಹಿಕವಾಗಿ ಆರೋಗ್ಯವಾಗಿ ಮತ್ತು ಶಾಂತಿಯುತವಾಗಿ ಇರಲು ವ್ಯಾಯಾಮ ಅತ್ಯಗತ್ಯ. ಓಡಾಡುವುದು (Walking) ದೇಹಕ್ಕೆ ಲಭ್ಯವಿರುವ ಉತ್ತಮ ವ್ಯಾಯಾಮಗಳ ಪೈಕಿ ಒಂದಾಗಿದೆ. ನಡೆದಾಟ ದೇಹವನ್ನು ಆರೋಗ್ಯವಾಗಿ ಇರಿಸುತ್ತದೆ. ಆದರೆ ಈ ನಡಿಗೆ ಸಾಧ್ಯವಾದಷ್ಟು ಸಕ್ರಿಯವಾಗಿ ಇರಬೇಕು. ವೇಗವಾಗಿ ನಡೆಯುವುದರಿಂದ ಉಸಿರಾಟದ ವೇಗ ಹೆಚ್ಚಿ, ಶ್ವಾಸಕೋಶ ಮತ್ತು ಹೃದಯದ ಕಾರ್ಯವನ್ನು ಸುಧಾರಿಸುತ್ತದೆ. ಆದರೆ ಹೆಚ್ಚಿನವರು ಓಡಾಡುವಾಗ ಅಥವಾ ನಡೆಯುವಾಗ ಚಪ್ಪಲಿ/ಶೂ ಧರಿಸುತ್ತಾರೆ. ಆದರೆ ಬರಿಗಾಲಿನಲ್ಲಿ ನಡೆಯುವುದು ಉತ್ತಮ ಅಭ್ಯಾಸ ಮತ್ತು ಇದು ದೇಹವನ್ನು ಸದಾ ಆರೋಗ್ಯವಾಗಿ ಇಡುತ್ತದೆ.
ಇಂದಿನ ಆಧುನಿಕ ಜೀವನ ಶೈಲಿಯ ಹೆಸರಿನಲ್ಲಿ ಮನೆಯ ಒಳಗೆಲ್ಲಾ ಮತ್ತು ಮಲಗುವ ಕೋಣೆಯಲ್ಲೂ ಕಾಲಿಗೆ ಚಪ್ಪಲಿಯನ್ನು ಹಾಕಿಕೊಂಡೇ ಓಡಾಡುವ ಕಾಲವಿದು. ಪುಣ್ಯಕ್ಕೆ ಮಲಗುವಾಗ ಬೆಡ್ ಮೇಲೆ ಚಪ್ಪಲಿ ಹಾಕಿಕೊಳ್ಳುವುದು ಅಪರೂಪ ಎನ್ನುವುದಷ್ಟೇ ತುಸು ನೆಮ್ಮದಿಯ ವಿಚಾರ. ಮನೆಯಲ್ಲಿ ನುಣುಪಾದ ಮತ್ತು ಪಾಲೀಶ್ ಮಾಡಲಾದ ಬಂಡೆಗಳು (ಗ್ರಾನೈಟ್/ಮಾರ್ಬಲ್), ಇದಕ್ಕಿಂತಲೂ ಹೆಚ್ಚು ನುಣುಪಾದ ಹೆಚ್ಚು ಬೆಲೆಯ ಚಪ್ಪಲಿಗಳು ಪಾದಗಳಿಗೆ ಸ್ವಲ್ಪವೂ ತಗುಲದಂತೆ ವಿಶೇಷ ವಿನ್ಯಾಸ ಬೇರೆ.
ಈ ರೀತಿಯ ಜೀವನ ಶೈಲಿಯು ಮನುಷ್ಯನ ಆರೋಗ್ಯಕ್ಕೆ ಒಳ್ಳೆಯದಂತೂ ಖಂಡಿತಾ ಅಲ್ಲ ಎನ್ನುವುದು ಬಹುತೇಕರಿಗೆ ಬಹುಷಃ ತಿಳಿದಿಲ್ಲ. ಒಟ್ಟಾರೆ ಆಧುನಿಕ ಜೀವನ ಶೈಲಿಯ ಅನುಕರಣೆ ಅಷ್ಟೇ ಆಗುತ್ತಿದೆ. ನಮ್ಮ ಹಿರಿಯರು ಜಮೀನು, ಹೊಲದ ಬದುಗಳಲ್ಲಿ ಮತ್ತು ಕಲ್ಲು ಮಣ್ಣಿನಿಂದ ಕೂಡಿದ ರಸ್ತೆಗಳಲ್ಲಿ ಚಪ್ಪಲಿಯಿಲ್ಲದೇ ನಡೆದಾಡುತ್ತಿದ್ದುದರ ಪರಿಣಾಮವಾಗಿ ಅವರು ಬದುಕಿದ್ದಷ್ಟು ದಿನವೂ ಅತ್ಯಂತ ಕ್ರಿಯಾಶೀಲರಾಗಿ ಇರುತ್ತಿದ್ದರು. ಆದರೆ ಇಂದಿನ ದಿನದ ಜೀವನ ಶೈಲಿ ಆ ರೀತಿ ಇಲ್ಲ. ಶೋಕಿ ಅಥವಾ ಆಧುನೀಕತೆಯ ಸೋಗಿನಲ್ಲಿ ಮನೆ ತುಂಬಾ, ಸ್ನಾನದ ಮನೆ ಮತ್ತು ಮಲಗುವ ಕೋಣೆಯಲ್ಲೂ ಚಪ್ಪಲಿಗಳ ಬಳಕೆಯು ಸಾಮಾನ್ಯವಾಗಿದೆ. ಬೆಳಗ್ಗೆ ಹಾಸಿಗೆಯಿಂದ ಕಾಲುಗಳನ್ನು ಕೆಳಕ್ಕೆ ಇಡುವುದರಿಂದ ಪ್ರಾರಂಭವಾಗಿ ರಾತ್ರಿ ಬೆಡ್ ಹತ್ತುವವರೆಗೂ ಕಾಲುಗಳನ್ನು ಮಾತ್ರ ಖಾಲಿಯಾಗಿ ಬಿಡುವಂತಹ ಪರಿಸ್ಥಿತಿಯಲ್ಲಿ ಇಂದಿನ ಯಾರೊಬ್ಬರೂ ಇಲ್ಲ ಎನ್ನಬಹುದು. ಅಂದರೆ ಮನುಷ್ಯ ತನ್ನ ಪಾದಗಳನ್ನು ಖಾಲಿಯಾಗಿ ಬಿಡುತ್ತಿಲ್ಲ. ಈ ರೀತಿ ಮಾಡುವುದರಿಂದ ಮತ್ತು ಇಂತಹ ಜೀವನ ಶೈಲಿಯಿಂದ ನಮ್ಮ ದೇಹ ಮತ್ತು ಆರೋಗ್ಯಕ್ಕೆ ನಾವೇ ಸ್ವತಃ ಶಿಕ್ಷೆಯನ್ನು ವಿಧಿಸಿಕೊಳ್ಖುತ್ತಿದ್ದೇವೆ ಎಂದರೆ ತಪ್ಪಾಗದು. ಇನ್ನು ಮುಂದಕ್ಕಾದರೂ ಪ್ರತಿಯೊಬ್ಬರೂ ಕನಿಷ್ಠ ವಾರಕ್ಕೆ ಒಂದು ಬಾರಿಯಾದರೂ ಕಾಲುಗಳಲ್ಲಿ ಚಪ್ಪಲಿಗಳು ಇಲ್ಲದಂತೆ (ಚಪ್ಪಲಿಗಳನ್ನು ಧರಿಸದೇ) ನಡೆಯುವ ಪ್ರಯತ್ನ ಮಾಡಬೇಕು. ಇಲ್ಲವಾದಲ್ಲಿ ನಮ್ಮ ಆರೋಗ್ಯ ಅಪಾಯದ ಅಂಚಿಗೆ ದೂಡಲ್ಪಡುತ್ತದೆ ಎಂದು ದಿನವೂ ಎಚ್ಚರಿಕೆಯನ್ನು ವೈದ್ಯರು ನೀಡುತ್ತಿದ್ದಾರೆ. ಆದ್ದರಿಂದ ವಾರಕ್ಕೆ ಒಮ್ಮೆಯಾದರೂ ಕನಿಷ್ಠ ಒಂದು ಕಿ.ಮೀ ದೂರವನ್ನಾದರೂ ಚಪ್ಪಲಿಗಳನ್ನು ಕಾಲುಗಳಿಗೆ ಧರಿಸದೇ ನಡೆಯಬೇಕು.
ಬರಿಗಾಲಲ್ಲಿ ನಡೆದರೆ ಆರೋಗ್ಯಕ್ಕೆ ಆಗುವ ಉಪಯೋಗ: ಅಧ್ಯಯನ ಮತ್ತು ವೈದ್ಯಕೀಯ ಶಾಸ್ತçವು ಮನುಷ್ಯನಿಗೆ ಹೆಚ್ಚು ಕ್ರಿಯಾಶೀಲ ಜೀವನ ಶೈಲಿಯನ್ನು ಸಲಹೆ ನೀಡುತ್ತದೆ. ಹೆಚ್ಚಿನ ವ್ಯಾಯಾಮ, ನಡೆದಾಡುವಿಕೆ ಇತ್ಯಾದಿ ನಿರಂತರವಾಗಿ ಮಾಡುತ್ತಿದ್ದರೆ ದೇಹವು ಸುಲಭವಾಗಿ ರೋಗಗ್ರಸ್ತ ಆಗುವುದಿಲ್ಲ. ಕೇವಲ ನಡೆದಾಡಿದರೆ ಆಗುವ ಲಾಭಕ್ಕಿಂತ ಬರಿಗಾಲಿನಲ್ಲಿ ನಡೆದಾಡಿದಾಗ ಮನುಷ್ಯನ ದೇಹಕ್ಕೆ ಆಗುವ ಲಾಭವು ದುಪ್ಪಟ್ಟು. ಹಾಗಾದರೆ ಬರಿ ಕಾಲಿನಲ್ಲಿ ನಡೆದಾಡಿದಾಗ ಆಗುವ ಲಾಭಗಳು ಏನೆಂದು ನೋಡೋಣ.
೧. ಬರಿ ಕಾಲಲ್ಲಿ ನಡೆಯುವುದರಿಂದ ದೇಹದ ಭಂಗಿಯು ಸರಿಯಾಗಿ ಸ್ನಾಯುಗಳು ಸ್ಥಿರವಾಗಿ ಇರುತ್ತದೆ.
೨. ಬರಿಗಾಲಿನಿಂದ ನಡೆದಾಗ ಹೊಟ್ಟೆಯ ಮೇಲೆ ಹೆಚ್ಚಿನ ಒತ್ತಡವುಂಟಾಗಿ, ಜೀರ್ಣಕ್ರಿಯೆಯು ಉತ್ತಮಗೊಳ್ಳುತ್ತದೆ.
೩. ಕಾಲುಗಳಿಗೆ ಚಪ್ಪಲಿಯನ್ನು ಧರಿಸದೇ ನಡೆದಾಗ ಮಣ್ಣಿನಲ್ಲಿ ಇರುವ ಮರಳು, ಸಣ್ಣ ಗಾತ್ರದ ಕಲ್ಲುಗಳು ಕಾಲುಗಳಿಗೆ ಹಿತ/ಮೃದುವಾಗಿ ಚುಚ್ಚಿಕೊಳ್ಳುವುದರಿಂದ, ಮನುಷ್ಯನ ದೇಹದಲ್ಲಿ ರಕ್ತದ ಒತ್ತಡವು ನಿಯಂತ್ರಣದಲ್ಲಿ ಇರುತ್ತದೆ.
೪. ಬರಿಗಾಲಿನಿಂದ ನಡೆದಾಡಿದಾಗ ಕಾಲುಗಳು ಮತ್ತು ಪಾದಗಳು ಪ್ರತಿ ಕ್ಷಣವೂ ಹೊಸ ರೀತಿಯ ಸ್ಪರ್ಶಾನುಭವವನ್ನು ಪಡೆಯುವುದರಿಂದ ಮನುಷ್ಯನ ಮನಸ್ಸು ಶಾಂತವಾಗಿ ಸಮತೋಲಿತ ಸ್ಥಿತಿಯಲ್ಲಿ ಇರುತ್ತದೆ.
೫. ಬರಿಗಾಲಲ್ಲಿ ನಡೆದಾಡಿದಾಗ ಮನುಷ್ಯನ ದೇಹದ ನರವ್ಯೂಹದಲ್ಲಿ ರಕ್ತ ಪರಿಚಲನೆ ವ್ಯವಸ್ಥೆಯು ಸುಧಾರಿಸಿ ಆಕ್ಯುಪ್ರೆಶರ್ ಸಾಧ್ಯವಾಗುತ್ತದೆ.
೬. ಚಪ್ಪಲಿಯಿಲ್ಲದೇ ಬರಿಗಾಲಲ್ಲಿ ನಡೆದಾಟ ಮಾಡುವುದರಿಂದ ಮನಸ್ಸಿನ ಸಹನೆ ಮತ್ತು ಸೈರಣೆಯ ಶಕ್ತಿಯು ಹೆಚ್ಚುತ್ತದೆ.
ಮನುಷ್ಯನ ಪಾದಗಳಲ್ಲಿ ೭೨ ಸಾವಿರ ನರಗಳ ತುದಿಗಳು ಸಂಯೋಜನೆಗೊAಡಿವೆ:
ಅತ್ತಿಂದಿತ್ತ ನಡೆದಾಡುವಾಗ ಕಾಲುಗಳಿಗೆ ಹೆಚ್ಚಿನ ಅವಧಿ ಚಪ್ಪಲಿಗಳನ್ನು ಧರಿಸುವುದರಿಂದ ನಮ್ಮ ದೇಹದ ನರವ್ಯೂಹ ವ್ಯವಸ್ಥೆಯು ಸೂಕ್ಷö್ಮವಾದ ಸಂವೇದನೆಯ ಶಕ್ತಿಯನ್ನು ಕಳ್ಳೆದುಕೊಳ್ಳುತ್ತವೆ. ಚಪ್ಪಲಿ ಇಲ್ಲದೇ ನಡೆಯುವುದರಿಂದ ಇಂತಹ ನರಗಳು ಹೆಚ್ಚು ಕ್ರಿಯಾಶೀಲವಾಗಿ ಇರುತ್ತವೆ. ಆದ್ದರಿಂದ ನಿತ್ಯವೂ ಪಾರ್ಕ್ಗಳಲ್ಲಿ, ಕಚೇರಿಗಳಲ್ಲಿ, ಮತ್ತು ಮನೆಯ ಒಳಗಡೆ ಚಪ್ಪಲಿಗಳನ್ನು ಧರಿಸದೇ ನಡೆದಾಡುವ ಅಭ್ಯಾಸವನ್ನು ಅಳವಡಿಸಿಕೊಂಡಲ್ಲಿ ನಾವು ದೀರ್ಘಾವಧಿಗೆ ಆರೋಗ್ಯವಂತರಾಗಿ ಬಾಳಬಹುದು.
ಯಾರು ಎಷ್ಟು ದೂರ ನಡೆಯಬೇಕು?: ಮನುಷ್ಯನ ವಯೊಮಿತಿಗೆ ಅನುಸಾರವಾಗಿ ನಿರ್ಧಿಷ್ಟ ದೂರಗಳನ್ನು ಪ್ರತಿದಿನವೂ ನಡೆಯಬೇಕು. ಅವುಗಳೆಂದರೆ,
೧. ೪೦ ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನವರು ಪ್ರತಿನಿತ್ಯ ಕನಿಷ್ಠ ೩.೭೫ ಕಿ.ಮೀ ಆದರೂ ಬರಿಗಾಲಲ್ಲಿ ನಡೆಯಬೇಕು.
೨. ೪೦ ರಿಂದ ೪೫ ವರ್ಷ ವಯಸ್ಸಿನವರು ಪ್ರತಿ ದಿನ ಕನಿಷ್ಠ ೩.೫ ಕಿ.ಮೀ ಆದರೂ ಬರಿಗಾಲಲ್ಲಿ ನಡೆಯಬೇಕು.
೩. ೪೫ ರಿಂದ ೫೦ ವರ್ಷ ವಯಸ್ಸಿನವರು ಪ್ರತಿ ದಿನ ಕನಿಷ್ಠ ೩.೩ ಕಿ.ಮೀ ಆದರೂ ಬರಿಗಾಲಲ್ಲಿ ನಡೆಯಬೇಕು.
೪. ೫೦ ರಿಂದ ೫೫ ವರ್ಷ ವಯಸ್ಸಿನವರು ಪ್ರತಿ ದಿನ ಕನಿಷ್ಠ ೩.೧ ಕಿ.ಮೀ ಆದರೂ ಬರಿಗಾಲಲ್ಲಿ ನಡೆದರೆ ಉತ್ತಮ.
೫. ೫೫ ರಿಂದ ೬೦ ವರ್ಷ ವಯಸ್ಸಿನವರು ಪ್ರತಿ ದಿನ ಕನಿಷ್ಠ ೨.೮ ಕಿ.ಮೀ ಆದರೂ ಬರಿಗಾಲಲ್ಲಿ ನಡೆಯಬೇಕು.
೬. ೬೦ ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನವರು ಪ್ರತಿ ದಿನ ಕನಿಷ್ಠ ೨.೫ ಆದರೂ ಕಿ.ಮೀ ಬರಿಗಾಲಲ್ಲಿ ನಡೆಯಬೇಕು.
ಆರೋಗ್ಯದ ಕುರಿತ ಅಧ್ಯಯನಗಳ ಪ್ರಕಾರ ಯಾವ ವ್ಯಕ್ತಿಯು ಪ್ರತಿ ವಾರವೂ ಕನಿಷ್ಠ ೨ ಗಂಟೆ ಅಥವಾ ಅದಕ್ಕಿಂತ ಹೆಚ್ಚು ಅವಧಿಗೆ ನಡೆದಾಡುತ್ತಾರೋ ಅವರು ಉಳಿದವರಿಗಿಂತ ಆರೋಗ್ಯವಾಗಿ ಮತ್ತು ಕಾಯಿಲೆ ರಹಿತವಾಗಿ ಜೀನವ ಮಾಡುತ್ತಾರೆ. ನಿತ್ಯ ಬರಿಗಾಲಲ್ಲಿ ನಡೆಯುವುದರಿಂದ ಮನುಷ್ಯನ ದೇಹದ ಕೊಬ್ಬು ಗಣನೀಯ ಪ್ರಮಾಣದಲ್ಲಿ ಕರಗಿ, ರಕ್ತದ ಒತ್ತಡವೂ ನಿಯಂತ್ರಣದಲ್ಲಿ ಇರುತ್ತದೆ. ನಿತ್ಯ ಬರಿಗಾಲಲ್ಲಿ ನಡೆಯುವುದರಿಂದ ಮಧುಮೇಹವೂ ನಿಯಂತ್ರಣದಲ್ಲಿ ಇರುತ್ತದೆ. ವಾಕಿಂಗ್ ಮತ್ತು ವ್ಯಾಯಾಮ ಮಾಡಿದರೆ ಹೃದಯ ಸಂಬಂಧಿತ ರೋಗಗಳು, ಹೃದಯ ಸ್ತಂಭನ (ಹಾರ್ಟ್ ಅಟ್ಯಾಕ್) ಮೊದಲಾದ ಕಾಯಿಲೆಗಳು ಅಷ್ಟಾಗಿ ನಮ್ಮ ಸಮೀಪವೂ ಸುಳಿಯುವುದಿಲ್ಲ,
ಸ್ನಾಯುಗಳು ಹೆಚ್ಚು ದೃಢ ಮತ್ತು ಬಲಶಾಲಿ ಆಗಬೇಕಾದರೆ ಬರಿಗಾಲಿನಲ್ಲಿ ನಡೆಯುವುದು ಸೂಕ್ತ. ಇದರಿಂದ ಕಾಲುಗಳಲ್ಲಿ ಇರುವ ಸ್ನಾಯುಗಳು ಬಲಗೊಳ್ಳುತ್ತವೆ. ಕಾಲಿಗೆ ಸದಾ ಶೂ ಅಥವಾ ಇನ್ನಿತರ ಚಪ್ಪಲಿ ಬಳಸುವುದು ಒಳಿತಲ್ಲ. ಉದಾಹರಣೆಗೆ ಮಳೆ ಸುರಿಯುತ್ತಿರುವಾಗ ಅಂಗಳದಲ್ಲಿ ನಡೆಯುವಾಗ ಬರಿಗಾಲಲ್ಲಿ ನಡೆದರೆ ಮಣ್ಣು ಕಾಲಿಗೆ ತಾಗಿದಾಗ ಸ್ನಾಯುಗಳು ಹೆಚ್ಚು ಬಲಗೊಳ್ಳುತ್ತದೆ. ಹಾಗಾಗಿ ಪ್ರತಿದಿನವೂ ನಡೆಯಿರಿ.. ನಡೆಯಿರಿ ಅಲ್ಲಲ್ಲ ಕೇವಲ ಬರಿಗಾಲ್ಲೇ ನಡೆಯಿರಿ.
–ಸಂತೋಷ್ ರಾವ್ ಪೆರ್ಮುಡ