ಜೀರಂಗಿ ಜಗತ್ತು: ವೀರಯ್ಯ ಕೋಗಳಿಮಠ್

“ಕಾಲುತೊಳಿ ಮುಖತೊಳಿ, ಜೀಯೆನ್ನಲೇ”, ಅಂತ ಪದೇಪದೇ ರಾಗವಾಗಿ ಹಾಡುತ್ತಾ ಅದರ ಕಾಲು ಚಿವುಟಿ ನೆಲದಿಂದ ಮೇಲಕ್ಕೆ ಹಾರುವವರೆಗೆ ಬಿಡದೆ ಚಿತ್ರಹಿಂಸೆ ನೀಡಿ ಆಟ ಆಡಿಸುತ್ತಿದ್ದುದು ನಮ್ಮ ಬಾಲ್ಯದಲ್ಲಿ ನೆಚ್ಚಿನ ಜೀರಂಗಿ (Jewel Beetle/ Sternocera ruficornis) ಮತ್ತು ಹೆದ್ದುಮ್ಮಿಗಳಿಗೆ. ಹಲವು ಕಡೆ ಅವುಗಳಿಗೆ ಜಿಲಗಂಬಿ, ಜೀರ್ಜಿಂಬೆ, ಕಂಚುಗಾರ ಅಂತಾನೂ ಕರೀತಾರೆ. ಕೈಗೆ ಸಿಕ್ಕ ಜೀರಂಗಿಗಳನ್ನ ನಡೆಸಿಕೊಳ್ಳುವ ಪರಿಯನ್ನ ಹೇಳುವಂತಿಲ್ಲ. ಮನೇಲಿರೋ ಬೆಂಕಿಪೊಟ್ಣದ ಕಡ್ಡಿಗಳನ್ನೆಲ್ಲ ಚೆಲ್ಲಿ ಅದನ್ನೇ ಜೀರಂಗಿ ಗೂಡನ್ನಾಗಿ ಮಾಡಿ ಜೀಕುಜಾಲಿ ಅಥವಾ ತುಗಲಿ ಮರದ ತೊಪ್ಪಲು ತಿನ್ನಿಸುತ್ತಿದ್ದೆವು. ಅವು ಅರ್ಧರ್ಧ ಎಲೆಗಳನ್ನು ತಮ್ಮ ಮೆತ್ತನೆಯ ಬಾಯಿಂದ ಮೆದ್ದು ತಿಂದು ಖಾಲಿಮಾಡುವಾಗ ನೋಡಲೇನೋ ಒಂಥರಾ ಆನಂದ. ಅವು ಊರ್ದ್ವಮುಖಿಯಾಗಿ ನಡೆಯುವುದು, ಉಲ್ಟಾ ಬೀಳಿಸಿದಾಗ ಕೈಕಾಲಾಡಿಸುತ್ತಾ ಮೂತಿಯನ್ನು ಮೇಲೆ ಮಾಡುವುದು, ಸುಮ್ಮನಿದ್ದಾಗ ಕಾಲುಗಳಿಂದ ಮೂತಿ ತೊಳೆಯೋದನ್ನ ನೋಡಲೇ ಒಂದು ಖುಷಿ. ಕೆಲವೊಮ್ಮೆ ಮೂತಿಯನ್ನು ತೀಡುತ್ತಾ ತೊಳೆಯುವಾಗ ಹಾರಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ನಮ್ಮ ಪರಿವೆಗೆ ಬರುತ್ತಿರಲಿಲ್ಲ. ಜೀಯೆಂದು ಹಾರಿದ ಮೇಲೆ ನಿರಾಸೆಯಿಂದ ಆಕಾಶದತ್ತ ನೋಡುತ್ತಾ ಯಾವ ಮರದ ಕೊಂಬೆ ಮೇಲೆ ಕೂತುಕೋಬಹುದು ಎಂದು ಲೆಕ್ಕಚಾರ ಹಾಕುತ್ತಾ ಕಾಯುತ್ತಿದ್ದೆವು.

ಜೀರಂಗಿ /ಹೆದ್ದುಮ್ಮಿಗಳನ್ನ ಹಿಡಕೊಂಡು ಬಂದು, ಪೊಟ್ಟಣದಲ್ಲಿ ಕೂಡಿಟ್ಟು, ಆರೈಕೆಮಾಡಿ, ಸಾಕುವುದೆಂದರೆ ಬಣ್ಣಿಸಲಾಗದಷ್ಟು ಸಡಗರ, ಸಂಭ್ರಮ, ಹೆಮ್ಮೆ. ಮತ್ತೆ ಅವೇನಾದರೂ ಹೆಣ್ಣಾಗಿದ್ದರೆ ತತ್ತಿ ಇಡುವವರೆಗೆ ಬಿಡುತ್ತಿರಲಿಲ್ಲವೆನ್ನಿ (ಗಂಡೋ ಹೆಣ್ಣೋ ಎನ್ನುವ ವ್ಯತ್ಯಾಸ ಸುಲಭವಾಗಿ ಗೊತ್ತಾಗುತ್ತಿತ್ತು). ಆಗಸ್ಟ್ ತಿಂಗಳಿನಿಂದ ದಸರಾ ಹಬ್ಬದವರೆಗೆ ಅಧಿಕವಾಗಿ ತುಗಲಿ, ಬನ್ನಿ ಮತ್ತು ಈಚಲು ಮರಗಳೇ ಜೀರಂಗಿಗಳ ಆವಾಸಸ್ಥಾನ. ಅವುಗಳ ಮೇಲ್ಮೈ ಹಚ್ಚಹಸಿರಿನಿಂದ (ಹೆದ್ದುಮ್ಮಿಯಾದರೆ ಕೆಮ್ಮಣ್ಣು ಕೆಂಪು) ಮಿರಮಿರ ಮಿಂಚುತ್ತಿದ್ದವಾದ್ದರಿಂದ, ಎಷ್ಟು ಎತ್ತರದ ಮರದ ಮೇಲಿದ್ದರೂ ದೂರದಿಂದಲೇ ನಾವು ಗುರುತಿಸುತ್ತಿದ್ದೆವು. ಅವು ಕೈಗೆಟುಕದಿದ್ದರೆ ಮರವನ್ನೇರಿ ಅಥವಾ ಕೋಲು, ಕಲ್ಲಿನಿಂದ ಬೀಸಿ ಹೊಡೆದು ಬೀಳಿಸುತ್ತಿದ್ದುದುಂಟು. ಕೆಳಗೆ ಬಿದ್ದ ಕೂಡಲೇ ಮುದುಡಿ ಸತ್ತಂತೆ ಬೀಳುತ್ತಿದ್ದವು. ಹಾರುವ ರೆಕ್ಕೆಗಳು ಹುಣಸೆಹಣ್ಣಿನ ಸಿಪ್ಪೆಯಂತಿದ್ದರಿಂದ ಯಾವುದೇ ನೋವಾಗುತ್ತಿರಲಿಲ್ಲ. ಅವೇನಾದರೂ ಹೆದ್ದುಮ್ಮಿಯಾಗಿದ್ದಾರೆ (ಕೆಂಪುರೆಕ್ಕೆಯ ಜೀರಂಗಿಯಾಗಿದ್ದರೆ ಹೆದ್ದುಮ್ಮಿ, ಕೆಮ್ಮಣ್ಣು ಜೀರಂಗಿ ಮತ್ತು ದೊಡ್ಡವಾಗಿದ್ದರೆ ಕಲ್ಲೆದ್ದುಮ್ಮಿ ಅನ್ನುತ್ತಿದ್ದೆವು) ನಮ್ಮ ಉತ್ಸಾಹಕ್ಕೆ ಪಾರವೇ ಇರುತ್ತಿರಲಿಲ್ಲ. ಅದನ್ನು ಯಾವುದೇ ಬಲಪ್ರಯೋಗದಿಂದಲಾದರೂ ಸರಿ ಮರದಿಂದ ಬೀಳಿಸಿ ಕೈಗೆ ಸಿಗುವವರಿಗೆ ಹಪಹಪಿಸುತ್ತಿದ್ದೆವು. ಕೈಗೆ ದೊರೆತ ಮೇಲೆ ಸ್ವರ್ಗಕ್ಕೆ ಮೂರೇಗೇಣು! ಕೆಲವೊಮ್ಮೆ ನಾವು ಹತ್ತಿರ ಓಡುತ್ತಿದ್ದಂತೆ ಕೈಗೆ ಸಿಗದೆ ಹಾರಿಹೋಗಿಬಿಡುತ್ತಿದ್ದವು. ಆಗಂತೂ ಹುಳಿದ್ರಾಕ್ಷಿ ಸಿಗದಿದ್ದಾಗ ಆದಂತೆ ಬೈದುಕೊಂಡಂತೆ ಶಪಿಸುತ್ತಿದ್ದೆವು. ನಮ್ಮ ಹತ್ತಿರ ಅದೆಷ್ಟು ಗಾತ್ರದ ಹೆದ್ದುಮ್ಮಿ ಇರುತ್ತಿತ್ತೋ ಅಷ್ಟು ಹಮ್ಮುಬಿಮ್ಮು ತೋರಿಸಿ ಅದು ಹೆಂಗೆ ಸಿಕ್ತು ಗೊತ್ತಾ ಅಂತ ವರ್ಣಿಸಿ ಕೊಚ್ಚಿಕೊಳ್ಳುತ್ತಿದ್ದೆವು. ಅವನ್ನು ಪೊಟ್ಟಣದಲ್ಲಿ ಆಡೋದಿಕ್ಕೆ ಶಾಲೆಗೆ, ಮನೆಪಾಠಕ್ಕೆ ಚೀಲದಲ್ಲಿ ಇಟ್ಕೊಂಡು ತಪ್ಪದೆ ಹೋಗುತ್ತಿದ್ದೆವು.

ಬಿಡುವಿನ ವೇಳೆಯಲ್ಲಿ ಹೊರತೆಗೆದು ಸ್ನೇಹಿತರಿಗೆ, “ನೋಡಲೇ” ಅಂತ ತೋರಿಸಿ ಅವರಿಗೆ ಹೊಟ್ಟೆ ಉರಿಯುವಂತೆ ಮಾಡುತ್ತಿದ್ದೆವು (ಅವರ ಬಳಿ ಕಲ್ಲೆದ್ದುಮ್ಮಿಯಿದ್ದರೆ ನಾವು ಬಾಲಮುದುರಿಕೊಳ್ಳಬೇಕಾಗುತಿತ್ತು, ಅದು ಬೇರೆ ಮಾತು!). ಒಂದಕ್ಕಿಂತ ಜಾಸ್ತಿಯಿದ್ದರೆ ಐದತ್ತು ಪೈಸೆಗೆ ಕೊಟ್ಟುಬಿಡುತ್ತಿದ್ದೆವು. ಕೆಲವೊಮ್ಮೆ ತಿನ್ನೋದಕ್ಕೆ ಸಿಗುವ ರೊಟ್ಟಿ, ಹುಣಸೆಕಾಯಿ, ಬಾರೆಹಣ್ಣು, ಪೆರೆಳೆಹಣ್ಣು, ಬಿಕ್ಕೆಹಣ್ಣು, ಕವಳೆ ಹಣ್ಣು, ನೇರಳೆ ಹಣ್ಣು, ಇತ್ಯಾದಿಗೆ ವಿನಿಮಯ ಮಾಡಿಕೊಳ್ಳುತ್ತಿದ್ದೆವು (ಆಗ ಬಡತನದ ಕಾರಣದಿಂದಾಗಿ ಅವೇ ಸರ್ವೇಸಾಮಾನ್ಯ). ಬಹಳಷ್ಟು ಸಲ ಅವು ನಮ್ಮ ಕೈಯಲ್ಲಿ ಹಾರಾಡುತ್ತಿದ್ದಕ್ಕಿಂತ ಸತ್ತದ್ದೇ ಜಾಸ್ತಿ. ಏನೇ ಆದರೂ ಜೀರಂಗಿಗಳನ್ನ ಹಿಡಿಯುವುದು, ಕತ್ತಿಗೆ ದಾರಕಟ್ಟಿ ಜೀಯ್ ಎನ್ನುವಂತೆ ಹಾರಾಡಿಸುವುದು, ತತ್ತಿ ಇಡುವವರೆಗೆ ಹಿಂಸಿಸುವುದು, ಈಗಲೋ ಆಗಲೋ ಸಾಯುತ್ತವೆ ಎನ್ನುವಂತಾದಾಗ ರಣಬಿಸಿಲಿನಲ್ಲಿ ಕಾಲು ಚಿವುಟಿ ಉತ್ತೇಜಿಸಿ ಹಾರಿಸುವುದು ನಿರಂತರವಾಗಿ ಸಾಗುತ್ತಲಿತ್ತು. ಒಮ್ಮೊಮ್ಮೆ ರಾತ್ರಿ ತನ್ನ ಗೂಡಿನಿಂದ ಹೇಗೋ ತಪ್ಪಿಸಿಕೊಂಡು ಎಲ್ಲೆಲ್ಲಿಗೋ ಹೋಗಿಬಿಡೋವು. ಬೆಳಗ್ಗೆ ಮನೆಯನ್ನೆಲ್ಲ ತಡಕಾಡಿ ಹುಡುಕಿ ಗೂಡುಸೇರಿಸೋದು ನಮ್ಮ ಕಸುಬಾಗಿರುತ್ತಿತ್ತು.

ಕೆಲವು ಭೂಪರು ರೆಕ್ಕೆಯನ್ನು ಮೇಲೆತ್ತಿ ಹಿಸುಕಾಡಿ ಒಳಗೆ ತತ್ತಿಯಿರುವುದು ಗೊತ್ತಾದರೆ ಹಿಸುಕಿ ಹೊರಬರುವಂತೆ ಮಾಡುತ್ತಿದ್ದರು (ಈಗ ನಮಗೆ ಕ್ರೌರ್ಯವೆನಿಸುತ್ತೆ ನಿಜ). ಪಾಪ ಆಗ ಸತ್ತೇಹೋಗುತ್ತಿದ್ದವು. ಅದೇನೋ ತುಂಬಾ ಹುಡುಗರು ಆ ತತ್ತಿಗಳಿಂದ ಜೀರಂಗಿ ಹೊರಬರುತ್ತವೆಂಬ ಬಲವಾದ ನಂಬಿಕೆ. ಹಾಗೆಂದು ತತ್ತಿಗಳಿಗೆ ಕೊಬ್ಬರಿಎಣ್ಣೆ ಹಚ್ಚಿ ಬಿಸಿಲಿನಲ್ಲಿ ಬಂಡೆಗಲ್ಲಿನ ಮೇಲಿಟ್ಟು ಕಾಯಿಸುತ್ತಿದ್ದರು. ಅದರ ಮುಂದೆ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದರು. ನಮ್ಮೆಲ್ಲರಿಗೂ ಕುತೂಹಲ ಜೀರಂಗಿಮರಿ ಹೇಗಿರುತ್ತದೆಂದು. ಅದು ಕೆಲವೊಮ್ಮೆ ವಿಪರೀತಕ್ಕೆ ಹೋಗಿ ಯಾರು ಇಲ್ಲದಾಗ ಮನೆಯಲ್ಲಿನ ಹೆಂಚಿನ ಮೇಲಿಟ್ಟು ಬಿಸಿಯಾದ ಮೇಲೆ ಜೀರಂಗಿಯೇ ಹೊರಬರುತ್ತದೇನೋ ಎನ್ನುವಂತೆ ಕಾಯುತ್ತಿದ್ದೆವು. ಹಂಚಿನ ಮೇಲೆ ಸುಟ್ಟವಾಸನೆಯೆದ್ದು ಒಡೆದು ಮರಿ ಆಮ್ಲೆಟ್ ಆಗುತಿತ್ತೇ ವಿನಃ, ಯಾವತ್ತೂ ಜೀರಂಗಿಮರಿ ಹೊರಬಂದದ್ದಿಲ್ಲ. ನಮಗೆ ಆಗುತ್ತಿದ್ದ ಇನ್ನೊಂದು ಆಶ್ಚರ್ಯವೆಂದರೆ, ಜೀರಂಗಿಗಳು ಯಾವಾಗ ಮೊಟ್ಟೆಹಾಕಿ, ಮರಿಯಾಗಿ, ಜೀರಂಗಿಯಾಗುತ್ತವೆ ಎನ್ನುವುದು. ಹಾರಾಡುವ ಚಿಟ್ಟೆಗಳಂತೆ ತತ್ತಿ-ತೆವಳುವ ಹುಳ- ಕೋಶಾವಸ್ಥೆ – ಆಮೇಲೆ ಜೀರಂಗಿಯಾಗಿ ಜೀಯ್ ಎನ್ನುವ ಅದರ ಜೀವನಚಕ್ರವೆಂದು ಅರ್ಥೈಸಿಕೊಳ್ಳುವ ವಯಸ್ಸು ನಮ್ಮದಾಗಿರಲಿಲ್ಲ.

ನಾನು ಚಿಕ್ಕವನಾಗಿದ್ದಾಗ ಜೀರಂಗಿಯೆಂದರೆ ಜೀವ ಬಿಡುತ್ತಿದ್ದೆ. ಅಷ್ಟು ಹುಚ್ಚು! ನನಗೆ ನಮ್ಮಕ್ಕ ಕೊಟ್ರಮ್ಮ (ಪುಷ್ಪವತಿ) ಅಂದರೆ ಅಚ್ಚುಮೆಚ್ಚು (ನನಗೆ ಅಪರಿಮಿತ ಜಾನಪದ ಕಥೆ ಹೇಳುತ್ತಿದ್ದಳು). ಅವಳು ದಿನವೂ ಹೊಲಕ್ಕೆ ದನಮೇಯಿಸಿಕೊಂಡು ಗೋಧೂಳಿ ಸಮಯಕ್ಕೆ ಹುಲ್ಲಿನ ಹೊರೆ ಹೊತ್ತುಕೊಂಡು ಬರುತ್ತಿದ್ದಳು. ಬೆಳಗ್ಗೆ ಅವಳು ಹೊರಡುವಾಗ ನಾನು ಕಾಡಿಬೇಡಿ ಜೀರಂಗಿ ತಂದುಕೊಡಲೇಬೇಕೆಂದು ಒತ್ತಾಯಿಸಿ ಸಂಜೆ ಮನೆಗೆ ಬರುವ ಹಾದಿಯನ್ನೇ ಕಾಯುತ್ತಿದ್ದೆ. ಅಷ್ಟು ದೂರದಿಂದ ದನಗಳೊಟ್ಟಿಗೆ ಬರೋದನ್ನ ನೋಡಿದ್ದೇ ತಡ ಬಿಟ್ಟಬಾಣದಂತೆ ಕಿರ್ದಬಲದಲ್ಲಿ ಓಡಿ ‘ಎಲ್ಲಿ ಜೀರಂಗಿ’ ಅಂತ ಜೋತು ಬೀಳುತ್ತಿದ್ದೆ. ನಮ್ಮಕ್ಕ ‘ಸಿಕ್ಲಿಲ್ಲಪ್ಪ ಈರೇಶ’ ಅಂತ ಸಪ್ಪೆ ಮುಖಮಾಡಿ ಹೇಳಿದೊಡನೆ ಜಗಳಕ್ಕಿಳಿದು ಜೋರಾಗಿ ರಂಪ ಮಾಡುತ್ತಿದ್ದೆ. ಆಗ ಅವಳು ಸೀರೆಯ ಸೆರಗಿನ ತುದಿಯಿಂದ ಗಂಟನ್ನು ಬಿಡಿಸಿ ಜೀರಂಗಿಯನ್ನ ನನ್ನ ಅಂಗೈ ಮೇಲಿಡುತ್ತಿದ್ದಳು. ಆಗ ನನ್ನ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ. ಕೈಗೆ ಅಪರೂಪದ ಆಟಿಕೆ ಸಾಮಾನು ಸಿಕ್ಕಿದಂತಾಗುತ್ತಿತ್ತು. ಮನೆಯೊಳಗೆ ಒಲೆಯ ಹತ್ತಿರ ಓಡಿ ಅದಕ್ಕೊಂದು ಬೆಂಕಿಪೊಟ್ಟಣ ಹುಡುಕಿ ಗೂಡಿಗೆ ಸೇರಿಸುವವರೆಗೆ ಸಮಾಧಾನವಾಗುತ್ತಿರಲಿಲ್ಲ. ಆಮೇಲೆ ಅದಕ್ಕೆ ಮೇವು ತಿನ್ನಿಸೋದು. ಹೀಗೆ…

ಈ ಹುಚ್ಚು ಹೆಚ್ಚು-ಕಡಿಮೆ ನಾನು ಒಂಬತ್ತನೇ ತರಗತಿಗೆಯವರೆಗೆ ಸಾಗಿತ್ತು. ಒಮ್ಮೆಯಂತೂ ಈ ಹುಚ್ಚಿನ ಅಂಚು ಎಲ್ಲಿಗೆ ಮುಟ್ಟಿತ್ತೆಂದರೆ, ಒಂದು ಪ್ಲಾಸ್ಟಿಕ್ ಟಿನ್ (ಡಬ್ಬ) ಹಿಡಿದು ಸಾಸಲವಾಡಕ್ಕೆ ಹೊಂಟಿತ್ತು ನನ್ನ ಸವಾರಿ ಜೀರಂಗಿ ಹಿಡಿಯಲು. (ನಮ್ಮೂರು ಕೂಡ್ಲಿಗಿಯಿಂದ ಮೂರ್ನಾಲ್ಕು ಕಿಲೋಮೀಟರ್ ದೂರದಲ್ಲಿತ್ತು). ಆಗ ದಸರಾ ರಜಾ ಸಮಯ. ಕೊಂಚ ಬಿಸಿಲೂ ಕೂಡಾ ಇತ್ತು. ಹೊಟ್ಟೆಗೆ ಏನೂ ತಿನ್ನದೇ ಬೆಳಗ್ಗೆ ಏಳು ಗಂಟೆಗೆ ಹೊರಟಿದ್ದೆ. ಯಾರೋ ಒಬ್ಬ ಸ್ನೇಹಿತ ಹೇಳಿದ್ದ ಅಲ್ಲಿ ಜೀರಂಗಿ ಮನಾರೆ (ಮನೋಹರ, ಮನಾರೆ, ಬಹಳ) ಸಿಗುತ್ತವೆ ಅಂತ. ನಾನು ಅದರ ಜಾಡನ್ನು ಹಿಡಿದು ಹೋಗಿದ್ದೆ. ಅಲ್ಲಿ ಇನ್ನೂ ಊರು ಮುಟ್ಟುವುದಕ್ಕಿಂತ ಮುಂಚೆಯೇ ಸಾಲುಸಾಲಾಗಿ ಈಚಲು ಗಿಡಗಳು (ಮರಗಳಲ್ಲ). ದೂರದಿಂದಲೇ ಗಿಡಗಳ ಉದ್ದನೆ ಗರಿಗಳ ನಡುವಿನಿಂದ ಏನೋ ಮಿರಮಿರ ಮಿಂಚಿದಂತೆ. ಹತ್ತಿರಕ್ಕೆ ಹೋಗಿ ನೋಡಿ ದಂಗಾಗಿ ಹೋದೆ. ಅರೆ ಅದೆಷ್ಟು ಜೀರಂಗಿಗಳು ಗಿಡಗಳ ತುಂಬೆಲ್ಲಾ. ಕನಸಲ್ಲಿ ಕಂಡ ನಿಧಿ ಕಣ್ಣೆದುರೇ ಸಿಕ್ಕಿದಂತೆ. ಕುಣಿದು ಕುಪ್ಪಳಿಸುವಂತಹ ಉತ್ಕಟ ಸ್ಥಿತಿ ನನ್ನದು. ನನ್ನ ಹಸಿವೆಯೆಲ್ಲ ಮರೆತು ನೀಗಿಹೋಗಿತ್ತು. ಅವನ್ನು ಹಿಡಿಯುವುದು ಕೂಡಾ ನೀರು ಕುಡಿದಷ್ಟೇ ಸುಲಭ. ಸುಮ್ಮನೆ ಗಿಡದ ಹತ್ತಿರಕ್ಕೆ ಹೋಗಿ ಬಲಗೈಯಿಂದ ಒಂದೊಂದನ್ನೇ ಮುಟ್ಟಿದರೆ ಸಾಕು ಅವು ಮುದುಡಿ ಸೀದಾ ಚಾಚಿದ ಎಡಹಸ್ತದ ಮೇಲೆ ಕಣಗಿಲೆ ಹೂವಿನಂತೆ ಬೀಳುತ್ತಿದ್ದವು. ಒಂದೊಂದನ್ನೇ ಬಲಗೈಯಿಂದ ಮುಟ್ಟೋದು ಎಡಗೈಯಿಂದ ಬಿದ್ದವನ್ನು ಆರಿಸಿಕೊಳ್ಳುವುದೇ ನನ್ನ ಕೆಲಸವಾಯಿತು. ಅವೆಷ್ಟು ಹಿಡಿದಿದ್ದೆನೋ. ಸೇಂಗಾ ಬೀಜದಷ್ಟು ಸಣ್ಣವು ಜಂಬೂ ನೇರಳೆಯಷ್ಟು ದೊಡ್ಡವು. ನೂರೋ ಇನ್ನೂರೋ ಸರಿಯಾಗಿ ನೆನಪಿಲ್ಲ. ಅವೆಲ್ಲವನ್ನು ಆ ಡಬ್ಬಿಯಲ್ಲಿ ತುಂಬಿಟ್ಟುಕೊಂಡು ಬರೋದರಲ್ಲಿ ಸಾಕುಸಾಕಾಯಿತು. ಎಲ್ಲವೂ ಒಂದಕ್ಕೊಂದು ಆಯಾಸಕಾಂತದಂತೆ ಅಂಟಿಕೊಂಡು ಡಬ್ಬಿಯಿಂದ ಹೊರಬರಲು ಯತ್ನಿಸುತ್ತಿದ್ದವು.

ಅಬ್ಬಾ ನೋಡಲೆರಡು ಕಣ್ಣು ಸಾಲವು (ಆ ಸಂಭ್ರಮ ಈಗಿನ ಮೊಬೈಲ್ ಯುಗದ ಹುಡುಗರಿಗೆ ಅರ್ಥವಾಗೋದಿಲ್ಲ ಬಿಡಿ!).
ಮನೆಗೆ ಹಿಡಿದು ತಂದು ಓಣಿಯ ಹುಡುಗರಿಗೆ (ಚಂದ್ರವ್ವನ ಮಕ್ಕಳು ಕೊಟ್ರ, ಕರಿಬಸವ, ಮರುಳುಸಿದ್ಧ, ಡಾ. ವೀರಯ್ಯನ ಮಗ ಕೊಟ್ರೇಶ, ಮೂಲಿರವ್ವನ ಮಕ್ಕಳಾದ ವೀರೇಶಿ ಮತ್ತು ರುದ್ರಿ, ಹಂಚಕ್ಕನ ಮಗ ವೀರೇಶಿ, ಟೈಪು ವಾಗೀಶಯ್ಯನವರ ಮಗ ವೀರೇಶಿ, ಹಮಾಲಿ ಬಸಪ್ಪನವರ ಮಗ ಏಡಿ ರಾಜ. ಮತ್ತಿತರರು) ತೋರಿಸುವಾಗ ಸಡಗರ ಮಾತಿನಲ್ಲಿ ಬಣ್ಣಿಸುವಂತಿರಲಿಲ್ಲ. ಎಲ್ಲರೂ ಅದೆಲ್ಲಿಂದ ಹಿಡ್ಕೊಂಡು ಬಂದ್ಯೋ ಮಾರಾಯ ಇಷ್ಟೊಂದು, ಅಂತಿದ್ರು. ಎಲ್ಲವು ಆ ಡಬ್ಬಿಯೊಳಗೆ ಮಿಣಮಿಣ ಹೊಳೆಯುತ್ತಾ ಗಿಜಿಗಿಜಿ ಅನ್ನುತ್ತಿದ್ದವು. ಮನೆಗೇನೋ ತಂದೆ ಆದರೆ ಅವೆಲ್ಲವನ್ನು ಎಲ್ಲಿ ಮುಚ್ಚಿಡೋದು? ಸಾಕೋದು? ಮನೇಲಿ ನಮ್ಮಣ್ಣನಿಗೆ ನಾನು ಜೀರಂಗಿ ಹಿಡಿಯೋಕೆ ಸಾಸಲವಾಡದವರೆಗೆ ಹೋಗಿಬಂದೆ ಅಂತ ಗೊತ್ತಾದ್ರೆ ಮೈಮೂಳೆ ಮುರಿಯುವಂತೆ ಒದೆಗಳು ಬೀಳುತ್ತಿದ್ದವು. ಮಧ್ಯಾಹ್ನ ಅಡುಗೆಮನೆಯಲ್ಲಿ ನಮ್ಮವ್ವನೆದುರು ಕುಳಿತು ಊಟ ಮಾಡುವಾಗ ಅಂಗಿಯೊಳಗಿಂದ ಪಕ್ಕೆಯ ಹತ್ತಿರ ಅದೇನೋ ಬುಳುಬುಳು. ಒಳಗೆ ಕೈಹಾಕಿ ಹಿಡಿದು ನೋಡಿದರೆ ಅಲ್ಲೊಂದು ಜೀರಂಗಿ ಯಾವುದೊ ಮರೆಯಲ್ಲಿ ಹೋಗಿ ಸೇರಿಕೊಂಡಿತ್ತು. ಜೀರಂಗಿ, ಕಪ್ಪೆ, ಗುಬ್ಬಿ, ಇತರೆ ಪ್ರಾಣಿ ಪಕ್ಷಿಗಳನ್ನು ಮುಟ್ಟಲು ಹಿಡಿಯಲು ನಮಗೇನು ಮುಜುಗರ ಅನ್ನಿಸುತ್ತಿರಲಿಲ್ಲ. ಈಗಿನ ಹುಡುಗರಾಗಿದ್ದರೆ ಹೌಹಾರಿಬಿಡುತ್ತಿದ್ದರೇನೋ ಹಾಗೆ ಒಳಸೇರಿಕೊಂಡಿದ್ದರೆ. ನಮಗೆ ಅವುಗಳನ್ನು ಶೇಂಗಾ, ಮೆಣಸಿನಕಾಯಿ, ಹುಣಸೆಹಣ್ಣನ್ನು ಕೈಯಲ್ಲಿ ಹಿಡ್ಕೊಂಡಷ್ಟೇ ಸ್ವಾಭಾವಿಕ. ನಮ್ಮವ್ವ ಅಷ್ಟೊಂದು ಜೀರಂಗಿಗಳನ್ನ ನೋಡಿ, “ಈರೇಶ ಅವಿಷ್ಟೂ ಜೀರಂಗಿ ಇಟ್ಕೊಂಡು ಏನು ಮಾಡ್ತಿಯಾ? ಕೊಡಿಲ್ಲಿ ಚಟ್ನಿ ಮಾಡಿಕೊಡ್ತೀನಿ ರೊಟ್ಟಿ ಜೊತೆ ತಿನ್ನುವಿಯಂತೆ,” ಅಂತ ತಮಾಷೆ ಮಾಡಿದಳು. ಆಮೇಲೆ ಅವೆಲ್ಲವೂ ಏನಾದವೆಂದು ಚೆನ್ನಾಗಿ ನೆನಪಿಲ್ಲ. ಇನ್ನು ಕೆಲವು ಮನೆಗಳಲ್ಲಿ ತೊಟ್ಟಿಲ ಮಕ್ಕಳು ಹಠಹಿಡಿದು ಕೈಯಲ್ಲಿ ಜೀರಂಗಿ ಕೊಡದೆ ತುತ್ತನ್ನೇ ಬಾಯಲ್ಲಿಡುತ್ತಿರಲಿಲ್ಲ.
ಈಗ ಆ ಜೀರಂಗಿ ಜೊತೆಯಾಟದ ದಿನಗಳ ನೆನಪಾದರೆ ಮತ್ತೆ ಅವು ತಿನ್ನುತ್ತಿದ್ದ ಸೊಪ್ಪಿನ ಸೊಗಡು ಮೂಗಿಗೆ ಅಡರಿದಂತಾಗುತ್ತದೆ. ಎಂಥಾ ಬಂಗಾರದ ಬಾಲ್ಯವನ್ನು ಅನುಭವಿಸಿದೆವು ಅನ್ನಿಸುತ್ತದೆ. ಆಮೇಲೆಯೂ ಅದೆಷ್ಟೋ ಸಲ ಯಾವುದೇ ತುಗಲಿ ಮರ, ಈಚಲ ಗಿಡ, ಬನ್ನಿಮರ ನೋಡಿದರೂ ಜೀರಂಗಿಗಳು ಕಾಣುತ್ತವೇನೋ ಎಂದು ಕಣ್ಣುಗಳು ಹುಡುಕುತ್ತಿದ್ದವು. ಕಾಣದೆ ನಿರಾಸೆಯಿಂದ ದೃಷ್ಟಿಯನ್ನು ಇನ್ನೆತ್ತಲೋ ಹಾಯಿಸುತ್ತಿದ್ದೆನು. ಎಷ್ಟೋ ಸಲ ದಸರಾ ಹಬ್ಬಕ್ಕೆ ಬನ್ನಿಪತ್ರೆಯನ್ನು ಬಿಡಿಸಲು ಮರ ಹತ್ತಿದಾಗ (ಮರವೆಲ್ಲ ಮುಳ್ಳುಗಳು) ಅಪರೂಪಕ್ಕೆ ಜೀರಂಗಿಗಳು ಸಿಗುತ್ತಿದ್ದುದುಂಟು. ಅದೇನೋ ಪವಾಡವೆನ್ನುವಂತೆ, ವಿಶಾತಿ ಮಳೆಯಾದಮೇಲೆ (ದಸರೆಯ ನಂತರ) ಒಂದು ಜೀರಂಗಿಯೂ ಎಲ್ಲಿಯೂ ಕಾಣಸಿಗುತ್ತಿರಲಿಲ್ಲ. ಎಲ್ಲಿಯೂ ಬಿದ್ದು ಸತ್ತಿರುವ ಕುರುಹೂ ಇರುತ್ತಿರಲಿಲ್ಲ.ಒಂದು ರೀತಿಯಲ್ಲಿ ಪಕ್ಷಿಗಳಂತೆ, ಅವು ಎಲ್ಲಿಂದ ಬರ್ತಿದ್ದವು, ಎಲ್ಲಿಗೆ ಮಾಯವಾಗುತ್ತಿದ್ದವು ಎಂಬುದೇ ನಮಗೆ ಕಂಡುಹಿಡಿಯಲು ಆಗಿರಲಿಲ್ಲ.

ತೀರಾ ಇತ್ತೀಚಿಗೆ, ಮತ್ತದೇ ಬಾಲ್ಯದ ನೆನಪು ಮರುಕಳಿಸುವಂತಹ ಘಟನೆ ನಡೆಯಿತು. ನಾನು, ನನ್ನ ಮಗ (ಅವನಿಗೆ ಜೀರಂಗಿಯನ್ನ ಕಂಡರೆ ಹತ್ತಿರವೇ ಸೇರಿಸುತ್ತಿರಲಿಲ್ಲ, ಮಾರು ದೂರ ಓಡಿಹೋಗುತ್ತಾನೆ, ಇನ್ನು ಮುಟ್ಟಿ ಹಿಡಿದು ಆಡಿಸುವುದೆಲ್ಲಿಂದ ಬಂತು!), ನಮ್ಮಣ್ಣ (ಕೊಟ್ರೇಶ), ಆತನ ಮಗಳು ರೋಹಿಣಿ, ಅತ್ತಿಗೆ ಜ್ಯೋತಿ ಎಲ್ಲರೂ ನಮ್ಮ ದೊಡ್ಡಣ್ಣನ ಹುಣಸೆಕಟ್ಟೆ (ಕೊಟ್ಟೂರಿನಿಂದ 8-9 ಕಿಮೀ) ತೋಟಕ್ಕೆ ದಸರಾ ದಿನದಂದು ಬನ್ನಿ ಮುಡಿಯಲು ವಾಡಿಕೆಯಂತೆ ಹೋದೆವು. ಅಣ್ಣನ ಮನೆ ತೋಟದಲ್ಲಿಯೇ ಇತ್ತು. ಈಗ ನಮ್ಮ ದೊಡ್ಡ ಅತ್ತಿಗೆ ಮಾತ್ರ ಅಲ್ಲಿರುತ್ತಿದ್ದರು. ಆವತ್ತು ನಮ್ಮಣ್ಣನ ಮಗಳು ದೀಪಾಶ್ರೀ, ಅವಳ ಮಕ್ಕಳು (ಮಾನ್ವಿತಾ, ಆರ್ಯನ್), ತಂಗಿ ಸುವರ್ಣ ಮತ್ತವಳ ಮಗಳು ನಯನ, ಹೀಗೆ ಅಂದು ಒಂದು ವಾನರಸೇನೆಯೇ ಸೇರಿತ್ತು. ಆ ಮಕ್ಕಳ ಹತ್ತಿರ ಆಗಲೇ ಹತ್ತಾರು ಜೀರಂಗಿಗಳಿದ್ದವು. ಆದರೂ ಅದೇಕೋ ಮತ್ತೆ ಹಿಡಿಯಲು ಹೋಗೋಣವೆಂದಾಗ ಯಾವುದೋ ಪಿಕ್ನಿಕ್ ಹೋಗುವಂತಹ ನಮ್ಮೆಲ್ಲರ ಸಡಗರ ಹೇಳತೀರದು. ಸಂಜೆಯಾಗಿದ್ದರೂ ಇನ್ನೂ ಬನ್ನಿ ಮುಡಿಯುವುದಕ್ಕೆ ಸಮಯವಿದ್ದುದರಿಂದ ಎಲ್ಲರೂ ಈಗಾಗಲೇ ಇದ್ದ ಜೀರಂಗಿಗಳನ್ನು ಒಂದು ಕಂಪಾಸ್ ಡಬ್ಬಿಯಲ್ಲಿ ಹಾಕಿಕೊಂಡು ವಾನರಸೇನೆಗೆ ನಾನು ನಮ್ಮಣ್ಣ ನಾಯಕರಾಗಿ ಹೊರಟೆವು. ದೊಡ್ಡಣ್ಣನ ತೋಟದ ಹಿಂದೆ ಇನ್ನೊಂದು ಹಾಳುಬಿದ್ದ ಹೊಲ. ಅದರಲ್ಲಿ ಅದೆಷ್ಟೋ ಬನ್ನಿಯ, ತುಗಲಿಯ ಮರಗಳು. ಅಲ್ಲಿಗೆ ಹೋಗುವ ದಾರಿ ಮೆಕ್ಕೆಜೋಳದ ಹೊಲ. ಅದರಲ್ಲೆ ಮೈಕೈಯೆಲ್ಲಾ ತರಚಿಸಿಕೊಂಡು ಬಹು ಉತ್ಸಾಹದಿಂದ ಆಗಾಗ ಮೊಬೈಲಿನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ ಸಾಗಿದೆವು.
ಅಲ್ಲಿಗೆ ಮುಟ್ಟಿದ ಮೇಲೆ ಜೀರಂಗಿಗಳನ್ನ ಹುಡುಕಲಾರಂಭಿಸಿದೆವು. ಹಾಗೆ ಹೀಗೆ ಅನ್ವೇಷಿಸುತ್ತಾ ಹೋದಾಗ ಒಂದು ಬನ್ನಿಯ ಗಿಡದಲ್ಲಿ ಹದಿನೈದು ಇಪ್ಪತ್ತು ಜೀರಂಗಿಗಳು ಕಂಡವು. ತುಂಬಾ ಕೆಳಗೆ ಕೈಗೆಟುಕುವಂತಿದ್ದವು. ಅವುಗಳ ರೆಕ್ಕೆಗಳಿಗೆ ತೆಳುಲೇಪನವಾಗಿದ್ದ ಗಿಡದ ಧೂಳು. ಅವು ಕೋರ ಜೀರಂಗಿಗಳೆಂಬ (ಹೊಚ್ಚಹೊಸವು) ಭಾವ ನಮಗೆ. ಆಗ ನಮ್ಮ ನಮ್ಮಲ್ಲಿ ಒಂದು ಕಿತ್ತಾಟ, ಭಿನ್ನಾಭಿಪ್ರಾಯ ಶುರುವಾಯ್ತು. ಅದು ನಮ್ಮಣ್ಣ ನಮ್ಮಲ್ಲಾಗಲೇ ಇದ್ದ ಹಳೆಜೀರಂಗಿಗಳನ್ನು ಅಲ್ಲಿ ಬಿಟ್ಟು ಹೊಸವನ್ನು ಹಿಡಿಯೋಣ ಅಂತ ಹೇಳಿದ. ಅದಕ್ಕೆ ಕೆಲ ವಾನರರು ವಿರೋಧ ವ್ಯಕ್ತಪಡಿಸಿದರು.

ಕೊನೆಗೆ ಅನ್ಯಮಾರ್ಗವಿಲ್ಲದೆ ಒಪ್ಪಿಕೊಂಡು ಹಳೆಯವನ್ನು ಆ ಗಿಡದಲ್ಲಿ ಬಿಟ್ಟು ಅಲ್ಲಿರುವ ಹೊಸವನ್ನೆಲ್ಲ ಹೂವಿನಂತೆ ಬಿಡಿಸಿಕೊಂಡು ಡಬ್ಬಿಯಲ್ಲಿ ಹಾಕಿಕೊಂಡು ನಮ್ಮ ಜೀರಂಗಿ ಬೇಟೆಯನ್ನು ಮುಂದುವರಿಸಿದೆವು.
ಹಾಗೆಯೇ ಪ್ರತೀ ತುಗಲೀ ಮರವನ್ನು ಪರಿಶೀಲಿಸುತ್ತಾ ಮುಂದೆ ನಡೆದೆವು. ಕೊನೆಗೆ ನನ್ನ ಮಗ ಚಿರಂತನ ಒಂದು ಮರದ ಎತ್ತರದಲ್ಲಿ ಎರಡು ಹೆದ್ದುಮ್ಮಿಗಳನ್ನು ಗುರುತಿಸಿದನು. ಆಗ ನೋಡಬೇಕು ನಮ್ಮೆಲ್ಲರ ಉತ್ಸಾಹವನ್ನು. ನಾನು ಕೂಡಲೇ ಒಂದು ದೊಡ್ಡಗಿಡಕ್ಕೆ ಕೈಹಾಕಿ ಒಂದು ದೊಣ್ಣೆಯಂತಹ ಉದ್ದನೆಯ ಕೋಲನ್ನು “ಫಟ್” ಅಂತ ಮುರಿದೆ. ಅದನ್ನು ನೋಡಿ ಆರ್ಯನ್ ನನ್ನಮಗನಿಗೆ ಹೇಳುತ್ತಿದ್ದ “ನಿಮ್ಮಪ್ಪ ಭಾರಿ ಪವರ್ಫುಲ್ ಅಲ್ವಾ?” ಅಂತ. ನಾನು ಆ ದೊಣ್ಣೆಯನ್ನು ಮರದ ಮೇಲಕ್ಕೆ ಆ ಹೆದ್ದುಮ್ಮಿಗಳಿಗೆ ಎರಡು ಮೂರು ಸಲ ಬೀಸಿದ ಮೇಲೆ ಒಂದು “ತಪ್” ಅಂತ ಕೆಳಗೆ ಬಿತ್ತು. ಎಲ್ಲಾರೂ ಗಡಿಬಿಡಿಯಲ್ಲಿ ಹುಡುಕಿದ್ದೇ ಹುಡುಕಿದ್ದು. ಇಬ್ಬರು ಮೂವರು ಅದು ನಂಗೆ ಬೇಕು ಅಂತ ಸಿಗೋದಕ್ಕೆ ಮುಂಚೆಯೇ ತಕರಾರು ಹಚ್ಚಿಕೊಂಡರು. ಕೊನೆಗೂ ಹೆದ್ದುಮ್ಮಿ ಸಿಕ್ತು. ಆಯ್ದು ತಕ್ಷಣ ಎತ್ತಿ ಡಬ್ಬದಲ್ಲಿ ಸೇರಿಸಿದೆವು. ಮತ್ತಿನ್ನೊಂದನ್ನು ಬೀಳಿಸಲು ಹೋದಾಗ ಅದಕ್ಕೆ ಸುಳಿವು ಸಿಕ್ಕು ಹಾರಿ ಹೋಯ್ತು. ನಿರಾಸೆಯಿಂದ ಬೈದುಕೊಳ್ಳುತ್ತಾ ಮತ್ತದೇ ಹಾದಿಯಲ್ಲಿ ಮೆಕ್ಕೆಜೋಳದ ಹೊಲದೊಳಗಿನಿಂದ ಪರಚಿಸಿಕೊಳ್ಳುತ್ತಾ ವಾಪಸು ಬಂದೆವು. ಸಿಕ್ಕ ಜೀರಂಗಿಗಳನ್ನ ಯಾರು ಯಾರು ಎಷ್ಟೆಷ್ಟು ಹಂಚಿಕೊಂಡರೋ ಗೊತ್ತಿಲ್ಲ. ನನ್ನ ಮಗನಿಗಂತೂ ಇದೆಲ್ಲ ಬಲು ವಿಚಿತ್ರವಾಗಿ ಕಂಡಿರಬೇಕು. ಆದರೆ ನನಗಂತೂ ತುಂಬಾ ಖುಷಿಯಾಗಿತ್ತು. ನನಗೆ ಸುಮಾರು ಮೂವತ್ತೈದು ವರ್ಷ ಹಿಂದಕ್ಕೆ ಟೈಮ್ ಟ್ರಾವೆಲ್ ಮಾಡಿ ಬಂದಂತಾಗಿತ್ತು.
ಈ ರೀತಿಯ ಬಾಲ್ಯದ ಅನುಭವಗಳು ಬಹುಶಃ ಎಲ್ಲರಿಗೂ ಆಗಿರುತ್ತವೆ. ಈಗ ಅದೇ ಎಷ್ಟು ಚೆನ್ನ ಅನ್ನಿಸುತ್ತಲೇ ಇರುತ್ತದೆ. ಆ ನೆನಪುಗಳಷ್ಟೇ ಮಧುರ, ಮತ್ತೆ ಮತ್ತೆ ಹೊಲದಲ್ಲಿ ಕಬ್ಬಿನ ಗಿಣ್ಣು ಮುರಿದು ಸಿಪ್ಪೆ ತೆಗೆದು ಜಿಗಿದು ಜಗಿದು ರಸಸ್ವಾಧಿಸಿ ಆಹಾ ಎನ್ನುವಂತೆ.

-ವೀರಯ್ಯ ಕೋಗಳಿಮಠ್

ಕನ್ನಡದ ಬರಹಗಳನ್ನು ಹಂಚಿ ಹರಡಿ
5 2 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಕೆ ಎಂ ಕರಿಬಸಯ್ಯ
ಕೆ ಎಂ ಕರಿಬಸಯ್ಯ
6 days ago

ಇವತ್ತಿನ ಆಧುನಿಕ ಜಗತ್ತಿನ ಮಕ್ಕಳನ್ನು ನಗರದಲ್ಲಿ ಬೆಳಸಿ ಪ್ರಕೃತಿಯ ಸಂಪರ್ಕ ಕಡಿಮೆ ಮಾಡಿದ್ದು ಇಂತಹ ಅದ್ಭುತವಾದ ಮಾಹಿತಿ ನೀಡಿದ್ದಾರೆ. ಅಭಿನಂದನೆಗಳು ಸಂಗ್ರಹ ಲೇಖನ

1
0
Would love your thoughts, please comment.x
()
x