ಸರಿ ಸುಮಾರು ಎರಡೂವರೆ ಸಾವಿರ ವರ್ಷಗಳ ಸಾಂಸ್ಕೃತಿಕ ಇತಿಹಾಸ ಹೊಂದಿರುವ ಈ ಕನ್ನಡ ನಾಡು ಸಾಹಿತ್ಯ-ಸಂಸ್ಕೃತಿ-ಸಂಗೀತ- ವೇಷಭೂಷಣ-ಭೌಗೋಳಿಕ ಹಿನ್ನೆಲೆ ಮುಂತಾದ ವಿಶೇಷಗಳಿಂದ ಕೂಡಿವೆ. ಶಾತವಾಹನ, ಗಂಗ, ಕದಂಬ, ಚಾಲುಕ್ಯ, ಹೊಯ್ಸಳ ಮೊದಲಾದ ರಾಜವಂಶದವರು ಸಮರ್ಥವಾಗಿ ಆಳಿದ್ದಲ್ಲದೆ ತಮ್ಮ ಕೀರ್ತಿಪತಾಕೆಯನ್ನು ಸುವರ್ಣಾಕ್ಷರಗಳಿಂದ ದಾಖಲಿಸಿದ್ದಾರೆ.
ಪಂಪ, ರನ್ನ, ಹರಿಹರ, ರಾಘವಾಂಕ, ಕುಮಾರವ್ಯಾಸ ಮೊದಲಾದವರು ಕನ್ನಡ ನಾಡಿನಲ್ಲಿ ಅಕ್ಷರಕ್ರಾಂತಿಯನ್ನು ಹರಡಿದವರು. ಬೇಲೂರು, ಹಳೇಬೀಡು, ಪಟ್ಟದಕಲ್ಲು, ಹಂಪಿ, ಬಾದಾಮಿ, ಐಹೊಳೆ ಮುಂತಾದ ಶಿಲ್ಪಕಲೆಗಳು ಇಂದಿಗೂ ತಮ್ಮ ಗತವೈಭವಕ್ಕೆ ಸಾಕ್ಷಿಗಳಾಗಿವೆ. ಇವೆಲ್ಲಕ್ಕಿಂತಲೂ ನಮ್ಮ ಪ್ರಾಚೀನ ಋಷಿಪರಂಪರೆ ಸನಾತನ ಸಂಸ್ಕೃತಿಯ ಪ್ರತೀಕವಾಗಿದೆ. “ ಸರ್ವಧರ್ಮಗಳ ಧೇನು” ಎನ್ನುವ ಕವಿವಾಣಿಯಂತೆ ಹಿಂದೂ-ಜೈನ-ಮುಸಲ್ಮಾನ, ಪಾರಸಿಕ ಕ್ರೈಸ್ತ ಮತೀಯರ ಬೀಡಾಗಿದೆ. ಕಾವೇರಿಯಿಂದ ಗೋದಾವರಿವರೆಗೂ ಹಬ್ಬಿದ್ದ ಈ ವಿಶಾಲವಾದ ಕನ್ನಡ ನಾಡು ವಸಾಹತುಶಾಲಿಗಳ ಕೈಯಲ್ಲಿ ಹರಿದು ಹಂಚಿ ಹೋಗಿತ್ತು. ಚೆನ್ನಬಸಪ್ಪನವರು, ಆಲೂರು ವೆಂಕಟರಾಯರು ಮೊದಲಾದ ಕನ್ನಡಾಭಿಮಾನಿಗಳ ಸತತ ಹೋರಾಟದ ಫಲವಾಗಿ ಕರ್ನಾಟಕದ ಏಕೀಕರಣ, ಚೆಲುವ ಕನ್ನಡ ನಾಡಿನ ಉದಯವಾಯಿತು. ಕನ್ನಡದ “ ನೆಲ” ಗಟ್ಟಿಯಾಯಿತು. ಆದ್ದರಿಂದಲೇ ಕನ್ನಡಿಗರೆಲ್ಲರ ಕನಸು 1956 ನವೆಂಬರ್ ತಿಂಗಳು ಕನ್ನಡ ನಾಡು ಒಂದಾಗಿ ನನಸಾಯಿತು .
ಸುಲಲಿತವಾದ ನಮ್ಮ ಕನ್ನಡ ಭಾಷೆ ಒಟ್ಟು ಮೂವತ್ತುಮೂರು ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಇದರ ಲಿಪಿ ಕೂಡ ಸುಮಾರು 1500- 1600 ವರ್ಷಗಳಿಗಿಂತಲೂ ಹಳೆಯದಾಗಿರುವುದು ಅಭಿಮಾನ ಪಡುವ ಸಂಗತಿ. ನಮ್ಮ ಕನ್ನಡ ನಾಡಿವ ವಿವಿಧ ವಿಷಯಗಳು- ವಿಶೇಷಗಳ ಬಗ್ಗೆ ಅನೇಕ ಕವಿಗಳು ಮನತುಂಬಿ ಹಾಡಿ ಜನಮನ ತಲುಪಿದ್ದಾರೆ. ಇಂಥ ಹಾಡುಗಳಲ್ಲಿ “ ಕನ್ನಡ ನಾಡಗೀತೆ” ಪ್ರತಿಯೊಬ್ಬ ಕನ್ನಡಿಗರನ್ನು ಮೈಮರೆಸುತ್ತದೆ. “ ಕಾಯೌ ಶ್ರೀಗೌರಿ ಕರುಣಾಲಹರಿ” , “ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ” ಅತ್ಯಂತ ಜನಪ್ರಿಯ ಮತ್ತು ಜನಾದರಣೀಯವಾಗಿವೆ. ಈ ನಾಡಗೀತೆಗಳ ಹುಟ್ಟು-ವ್ಯಾಪ್ತಿ-ಪ್ರಭಾವ-ಅಭಿಮಾನಗಳನ್ನು ಪ್ರಚುರಪಡಿಸುವುದೇ ಈ ಬರಹದ ಉದ್ದೇಶ.
ನಮ್ಮ ಕನ್ನಡ ನಾಡಿನ ಬಗ್ಗೆ ಆದಿ ಕವಿಗಳು- ಆಧುನಿಕ ಕವಿಗಳು ಮನದುಂಬಿ ಹಾಡಿದ್ದಾರೆ. ಇವೆಲ್ಲಕ್ಕಿಂತಲೂ ಕನ್ನಡ ನಾಡಗೀತೆ ಕನ್ನಡಿಗರ ಮೈಮರೆಸುವಂತಿರುವುದಲ್ಲದೆ ಕನ್ನಡಿಗರ ಹೃದಯದಲ್ಲಿ ಕನ್ನಡಾಭಿಮಾನವನ್ನು ಬಡಿದೆಬ್ಬಿಸುವಂತಿದೆ. ಪ್ರಸ್ತುತ ಲೇಖನದಲ್ಲಿ ನಮ್ಮ ನಾಡಗಿತೆಯ ಹುಟ್ಟು-ಬೆಳವಣಿಗೆ ಘನತೆ- ಆದರಾಭಿಮಾನವನ್ನು ವಿವರಿಸಲಾಗಿದೆ.
ಕಾಯೌ ಶ್ರೀಗೌರಿ ಕರುಣಾಲಹರಿ ತೋಯಜಾಕ್ಷಿ ಶಂಕರೀಶ್ವರಿ.
ಇದು ಮೈಸುರು ಸಂಸ್ಥಾನದ ಕವಿ ಬಸವಪ್ಪಶಾಸ್ತ್ರಿಯರ ಅಧಿಕೃತ ನಾಡಗಿತೆ. ಮೈಸೂರು ಸಂಸ್ಥಾನದ ಕುಲದೇವತೆ ಚಾಮುಂಡಿಬೆಟ್ಟದ ಮೇಲೆ ನೆಲಸಿರುವ ಚಾಮುಂಡೇಶ್ವರಿ ಕುರಿತ ಗೀತೆಯಾಗಿದೆ. ಈ ಗೀತೆಯ ಮುಖ್ಯ ಉದ್ದೇಶ ರಾಜ್ಯವನ್ನು ರಕ್ಷಿಸಲು ಮತ್ತು ಆಶೀರ್ವದಿಸಲು ದೇವಿಯಲ್ಲಿ ಪ್ರಾರ್ಥಿಸುವುದು.
1868-1894ರ ನಡುವೆ ರಾಜ್ಯವಾಳಿದ ಮಹಾರಾಜ ಚಾಮರಾಜೇಂದ್ರ ಒಡೆಯರ್ ಅವರು 1831ರಲ್ಲಿ ಪ್ರಸ್ತುತಪಡಿಸಲಾಗಿದೆ. ಇದನ್ನು ಅಂದು ಆಸ್ಥಾನ ಕವಿಯಾಗಿದ್ದ ಬಸವಪ್ಪ ಶಾಸ್ತ್ರಿಗಳು ರಚಿಸಿದ್ದಾರೆ. ಇದು ಕರ್ನಾಟಕ ಸಂಗೀತ ರಾಗ ಕಲ್ಯಾಣಿ- ಹಿಂದೂಸ್ಥಾನ ಯಮನ್ ಹಾಗೂ ಪಾಶ್ಚಾತ್ಯ ಸಂಗೀತ ಆಯೋನಿಯನ್ ಸಿಮೇಜ್ ಲಿನಲ್ಲಿ ಅಂದು ಅಪಾರ ಜನಪ್ರಿಯತೆಯನ್ನು ಗಳಿಸಿತ್ತು.
ಕ್ರಿಸ್ತ ಶಕ 1881 ರಲ್ಲಿ ಬ್ರಿಟಿಷರಿಂದ ಒಡೆಯರ್ ಕುಟುಂಬಕ್ಕೆ ಮೈಸೂರಿನ ಪ್ರಭುತ್ವ ಹಸ್ತಾಂತರಗೊಂಡನಂತರ ೊಡೆಯರ್ ಕುಟುಂಬದ ಹತ್ತನೇ ಚಾಮರಾಜೇಂದ್ರ ಅವರು ಆಗಿನ ಕಾಲದ ಅಪಾರ ವಿದ್ವಾಂಸರೂ, ಆಸ್ಥಾನ ಕವಿಗಳೂ ಆಗಿದ್ದ ಬಸವಪ್ಪ ಶಾಸ್ತ್ರಗಳು ಒಡೆಯರ ಕುರಿತು ಬರೆದ ಲೇಖನದಲ್ಲಿ “ ಕಾಯೌ ಶ್ರೀಗೌರಿ” ಕುರಿತು ಸವಿವರವಾಗಿ ಬರೆದಿದ್ದಾರೆ. ರವೀಂದ್ರನಾಥ ಟಾಗೂರರು 1914 ರಲ್ಲಿ ಕಾಡುಗಳ ಸಂದೇಶ ಕುರಿತು ಭಾಷಣ ಮಾಡಲು ಬೆಂಗಳೂರಿಗೆ ಭೇಟಿ ನೀಡಿದ್ದರು. ಆಗ ಈ ಗೀತೆಯನ್ನು ನುಡಿಸಲಾಯಿತು. ಇದರ ಶೃತಿ, ಭಾವನೆ, ಭಕ್ತಿಗೆ ಮನಸೋತ ರವೀಂದ್ರರು ತಮ್ಮ “ ಆನಂದ ಲೋಕೇ ಮಂಗಲ ಲೋಕೇ” ಎಂಬ ಗೀತೆಯ ರಚನೆ ಮತ್ತು ರಾಗಕ್ಕೆ “ ಕಾಯೌ ಶ್ರೀಗೌರಿ” ಯೇ ಪ್ರೇರಣೆ ಎಂದು ಮನದುಂಬಿ ಮೆಚ್ಚಿದ್ದರು. ಅಲ್ಲದೆ ಈ ‘ ಕಾಯೌ ಶ್ರೀಗೌರಿ’ ಭಾರತೀಯ ಮತ್ತು ಪಾಶ್ಚಾತ್ಯ ಸಂಗೀತದ ಸಮ್ಮಿಳನದಿಂದ ರೂಪುಗೊಂಡ ವಿಚಾರಕ್ಕೆ ರವೀಂದ್ರರು ಯಾವಾಗಲೂ ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಅಂದಮೇಲೆ “ ಕಾಯೌ ಶ್ರೀಗೌರಿ” ನಾಡಗೀತೆಗಿರುವ ಗೌರವಾದರ- ಮನ್ನಣೆ ಬಗ್ಗೆ ಕನ್ನಡಿಗರೆಲ್ಲರೂ ಹೆಮ್ಮೆ ಪಡಬೇಕು. ದಸರಾ ಉತ್ಸವದಲ್ಲಿ ಇಂದೂ ಕುಡ ಮೈಸೂರಿನ ಅರಮನೆಯಲ್ಲಿ ಈ ನಾಡಗೀತೆಯನ್ನು ನುಡಿಸುತ್ತಾರೆ. ಅದಕ್ಕೆ ಕೊಡುವ ಗೌರವ ಕುಂದಿಲ್ಲ- ಜೀವಂತವಾಗಿಯೇ ಇದೆ.
ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ
ಈ ನಾಡಗೀತೆ ರಸಋಷಿ ಕುವೆಂಪು ಅವರು ತಮ್ಮ ಹದಿಹರೆಯದಲ್ಲಿ ಬರದ ಗೀತೆ. ಕುವೆಂಪು ಅವರು ಭಾರತವನ್ನು ತಾಯಿಯಂತೆ, ಕರ್ನಾಟಕವನ್ನು ಮಗಳಂತೆ ಕಲ್ಪಿಸಿಕೊಂಡು ಏಕಕಾಲದಲ್ಲಿ ಭಾರತಮಾತೆಯ ಹಿರಿಮೆ ಮತ್ತು ಕರ್ನಾಟಕ ಮಾತೆಯ ಗರಿಮೆ ಇವುಗಳನ್ನು ಒಟ್ಟಾಗಿ ಕಂಡುಕೊಳ್ಳುವ ವಿಶೇಷತೆ ಇಲ್ಲಿದೆ. ಇದರಲ್ಲಿ ಕಲೆ, ಸಾಹಿತ್ಯ, ಶಿಲ್ಪಕಲೆ, ರಾಜರ ಆಳ್ವಿಕೆ, ಭೌಗೋಲಿಕ ಕಲ್ಷಣ, ಜನಜೀವನ ಮುಂತಾದವುಗಳನ್ನು ವಿಸ್ತೃತವಾಗಿ ರಚಿಸಿದ್ದಾರೆ.
ಕುವೆಂಪು ಅವರ ಶತಮಾನೋತ್ಸವದ ಸಂದರ್ಭದಲ್ಲಿ, ಅಂದರೆ ಜನವರಿ ಆರು, 2004 ರಂದು ಕರ್ನಾಟಕ ರಾಜ್ಯ ಸರ್ಕಾರ “ ನಾಡಗೀತೆ” ಎಂದು ಅಧಿಕೃತವಾಗಿ ಘೋಷಿಸಿತು. ಕೆಲವು ಮಾರ್ಪಾಡುಗಳೊಂದಿಗೆ ಇಂದು ಈ ಕವನ ನಾಡಗೀತೆಯಾಗಿ ಹಾಡಲ್ಪಡುತ್ತಿದೆ. ನಾಡಗೀತೆಗೆ ಕೊಡುವ ಗೌರವ:-
ಈ ಹಾಡಿನ ಪ್ರಾರಂಭದಿಂದ ಗೀತೆಯು ಮುಗಿಯುವತನಕ ಅಂದಿನ ಸಭೆಯಲ್ಲಿ ಇದ್ದವರೆಲ್ಲರೂ ಎದ್ದು ನಿಂತು ಗೌರವವನ್ನು ಸಲ್ಲಿಸುವುದು. ಎಲ್ಲಾ ಶಾಲೆಗಳಲ್ಲಿ, ಸಂಘ ಸಂಸ್ಥೆ- ಸಮಾರಂಭಗಳಲ್ಲಿ ಆಯಾ ಕಾರ್ಯಕ್ರಮಗಳು ನಡೆಯವುವ ಮುನ್ನ ಈ ನಾಡಗೀತೆಯನ್ನು ಹಾಡಲಾಗುತ್ತಿದೆ. ಅಂತೆಯೇ ಎಲ್ಲಾ ಸಾಂಸ್ಕೃತಿಕ ಸಾಹಿತ್ಯದ ಅಧಿಕೃತ ಕಾರ್ಯಕ್ರಮಗಳಲ್ಲಿ ಕೂಡ ಹಾಡಲಾಗುತ್ತಿದೆ.
ನಾಡಗೀತೆ ಹಾಡುವವರು- ಕೇಳುವವರಿಗೆ ಅವುಗಳ ಹಿನ್ನೆಲೆ, ಸಂದರ್ಭ, ಅರ್ಥ ಗೊತ್ತಿಲ್ಲದಿದ್ದರೆ ಕನ್ನಡಿಗ ಎಂದು ಹೇಳಿಕೊಳ್ಳಲು ಅನರ್ಹ.
ಮತ್ತೆ ನವೆಂಬರ್ ಒಂದು ಕನ್ನಡ ರಾಜ್ಯೋತ್ಸವ ಬಂದಿದೆ. ನಾವೆಲ್ಲ ಒಂದಾಗಿ –ಕನ್ನಡಾಭಿಮಾನಿಗಳಾಗಿ ಹೆಮ್ಮೆಯಿಂದ ನಮ್ಮ ನಾಡಗಿತೆಗಳನ್ನು ಸ್ಮರಿಸೋಣ, ಕನ್ನಡಕ್ಕಾಗಿ ಕೈ ಎತ್ತೋಣ, ಸಿರಿಗನ್ನಡಂ ಗೆಲ್ಗೆ, ಬಾಳ್ಗೆ!.
–ಎಸ್. ರೋಹಿಣಿ ಶರ್ಮಾ,