
ಸಣ್ಣ ಭರವಸೆಗಳು ಸಾಕಲ್ಲವೇ ಬದುಕಿಗೆ…
..1..
ಕೆಟ್ಟ ಆಲೋಚನೆಗಳೆಲ್ಲ ಜರ್ರನೆವಿಷದಂತೆ
ದೇಹವೇರಿ ಕುಸಿದು ಬೀಳುವ ಮುನ್ನ..
ಸಣ್ಣ ದೊಂದು ಪ್ರೀತಿಯ ಮಾತಿನ ಚಿಕಿತ್ಸೆ ದೊರೆತರೆ ಸಾಕಲ್ಲವೇ.?
ಮರುಹುಟ್ಟಿಗೆ !!
2..
ಚಂಡಮಾರುತ ಬಿರುಗಾಳಿಯೆದ್ದು
ಹಡುಗು ಮುಳುಗಿಯೇ ಬಿಟ್ಟಿತು ಎನ್ನುವಾಗ.
ಸಣ್ಣದೊಂದು ತುಂಡಿನ ಆಸರೆ ಸಾಕಲ್ಲವೇ.?
ಮರುಜನ್ಮಕ್ಕೆ..!!
3..
ಜರಿವ ಮಾತುಗಳ ಇರಿವ ಕಣ್ಣೋಟಗಳ ಧಾಳಿಗೆ ಸೋತ ಅಬಲೆಯೊಂದು ಕರುಳುಬಳ್ಳಿಗಳ ಸಮೇತ ಕೆರೆಯ
ಬದಿಗೆ ಬಂದು ನಿಂತಾಗ.!
ಸಣ್ಣ ಭರವಸೆಯ ಮನಸೊಂದು
ಸಿಕ್ಕರೆ ಸಾಕಲ್ಲವೇ..?
ಮರುಬದುಕಿಗೆ.!!
4..
ಸಣ್ಣ ಸಣ್ಣ ಭರವಸೆಗಳೇ ಸಾಕು
ಬಿಡಿ ಬದುಕ ನಗಿಸಲು.
ಬದುಕಿನಖಾಡದಲ್ಲಿ ಸೋತ ಜಗಜಟ್ಟಿಗೂ
ಸಣ್ಣ ಗೆಲುವೊಂದು ಸಾಕು
ಮತ್ತೆ ಮೀಸೆ ತಿರುವಲು.!!
5..
ಹೀಗೆ ಸಣ್ಣ ಪ್ರೀತಿ, ಆಸರೆ ಭರವಸೆಗಳೆ ತರುತ್ತವೆ
ಜೀವನದಲ್ಲಿ ಹೊಸ ಕಳೆ.!
ಕಾಡ್ಗಿಚ್ಚಿಗೆ ಬೆಂದ ಬೆಟ್ಟವನೂ ಚಿಗುರಿಸಿದಂತೆ
ಸಣ್ಣದೊಂದು ಹೂಮಳೆ.!!
6..
ಚಿಕ್ಕ ಚೊಕ್ಕ ಕವನಗಳೆಲ್ಲ ಸೇರಿ ಆಗುವುದು ಬೃಹತ್ ಕವನ ಸಂಕಲನ.!
ಸಣ್ಣ ಸಣ್ಣ ಭಾವ ಭರವಸೆಗಳ ಮೇಲೆ ನಿಂತು ನಗುಸುತಿದೆ ಜೀವನ.!!
*
ಚರಿತ್ರೆಯಲ್ಲಿ ಕಾಣದ ನನ್ನವರು..
ಉತ್ತವರು,ಬಿತ್ತಿದವರು ಬಿಸಿಲು ಮಳೆಗಳಲ್ಲಿ ಬೆಂದು
ಬೆಳೆದದ್ದೆಲ್ಲಾ ನಿಮಗರ್ಪಿಸಿ ಬರಿ ಮೈಲಿ ನಡುಬಗ್ಗಿಸಿ,
ನೀವು ಕೊಟ್ಟ ಪ್ರಸಾದ, ಭಿಕ್ಷೆಗಳಲ್ಲಿ ಬದುಕಿದವರು..
ನಿಮ್ಮ ನೆರಳಿಗೆ ಕೊಡೆಯಾಗಿ ನಿಮ್ಮ ಪಾದಕೆ ಕೆರವಾಗಿ ತಮ್ಮ ಗುರಿ ದಾರಿಗಳ ಮರೆತವರು..
ಎತ್ತುಗಳಾಗಿ ನಿಮ್ಮ ವೈಭವದ ತೇರ ನಾಡೆಲ್ಲಾ ಹೊತ್ತು ತಿರುಗಿದವರು..
ತಿಂದುಂಡು ತೇಗಿ ನೀವುಗುಳಿದ ತಾಂಬೂಲದ ಹಿಕ್ಕೆಗೆ ಬೊಗಸೆಯೊಡ್ಡಿದವರು..
ಕತ್ತಲ ರಾತ್ರಿಯಲ್ಲಿ ನಿಮ್ಮೆಲ್ಲ ಜೂಜು ಮೋಜುಗಳಿಗೆ ಪಂಜಿಡಿದು ಬೆಳಕಾದವರು..
ನೀವು ಚರಿತ್ರೆ ಎಂದೇಳುವ ಯುದ್ಧ ಜಿಹ್ವೆಗೆ ತಮ್ಮದೇ ಬಿಸಿರಕ್ತ ಉಣಿಸಿ ತಣಿಸಿದವರು..
ನಿಮ್ಮ ಅಮಾನವೀಯ ಮೃಗದೊಡೆತಳಿಗೆ ದೈರ್ಯದಿ ಮೈಯೊಡ್ಡಿ ಕಪ್ಪು ಮಾಡಿಕೊಂಡವರು..
ನೀವು ಕಟ್ಟಿಸಿದ ನಿಮ್ಮಪರಂಪರೆಯ ಸಮಾಧಿಗಳ ಮೇಲೆ ಸಂಪಿಗೆಯಾಗಿ, ಆಲವಾಗಿ, ತೆಂಗಾಗಿ,ಹೊಂಗೆಯಾಗಿ ಬಯಲ ಗಾಳಿಯಲ್ಲಿ ಬಯಲಾದವರು…
ಆದರೆ ನೀವು ಬರೆದ ಯಾವ ಶಾಸನ, ಚರಿತ್ರೆಯಲ್ಲೂ ಕಾಣಿಸುವುದಿಲ್ಲ ನನ್ನವರ ಹೆಸರು…!!!
*
ನಾಯಿ..
ರಸ್ತೆಯ ಅಂಚಿನಲ್ಲಿ ಸತ್ತು ಬಿದ್ದಿದೆ
ಒಂದು ಮರಿನಾಯಿ.
ಛಿದ್ರ ವಾಗಿದೆ ದೇಹ ಹೊಡೆದಂತೆ
ಈಡುಗಾಯಿ.
ಕುಡಿದು ಗುದ್ದಿರಬೇಕು
ಯಾವುದೋ ಬಸ್ಸೋ,ಕಾರೋ ಲಾರಿಯೋ.!
ಇಲ್ಲ ಕರಿ ನಾಲಿಗೆ ಚಾಚಿ ರಕ್ತಕ್ಕಾಗಿ ಎಳೆದಿರಬೇಕು ರಸ್ತೆಎಂಬ ಮಾರಿಯೋ!!
ಅಳುವರಿಲ್ಲ, ರಕ್ತ ಸಂಬಂಧಿಕರ ಸಂತಾಪಗಳಿಲ್ಲ,
ಇಲ್ಲಿ ಸತ್ತಿರುವುದು ಬೀದಿ ನಾಯಿ.!
ಬೀದಿ ರಂಪವಾಗುತಿತ್ತು ಠಾಣೆಯ ಮೆಟ್ಟಿಲೇರುತ್ತಿತ್ತು ಸತ್ತಿದ್ದರೆ ಸಾಕುನಾಯಿ.!!
ಅತ್ತಿಂದಿತ್ತ ಸುಳಿಯುತ್ತಿದೆ ಕುಯ್ ಗುಡುತ್ತಿದೆ ಮತ್ತೊಂದು ನಾಯಿ.!
ಬಹುಷಃ ಅದೇ ಇರಬೇಕು ನಿರ್ಭಾಗ್ಯ ತಾಯಿ.!!
ಬರುತ್ತದೆ ಮೂಸುತ್ತದೆ ಓಡುತ್ತದೆ ವಾಹನಗಳ ಟ್ರಾಫಿಕ್ಕಿನ ಮದ್ಯೆ.!
ಮತ್ತೇನನ್ನು ಮಾಡಲು ಸಾಧ್ಯ ಅದು ಕಲಿತಿಲ್ಲ ನಾಗರೀಕ ವಿದ್ಯೆ.!!
ಕೊರಗುತ್ತಿದೆ,ಮರುಗುತ್ತಿದೆ ಜೀವ
ಅವು ಮನುಷ್ಯರಾಗಿದ್ದರೆ..?
ದೀಪದ ವಾಹನದಲಿಟ್ಟು ಹೆತ್ತೊಯ್ದು ಜೀವ ನೀಡುತ್ತಿದ್ದರೇನೋ!?ಅಗಲಿಕೆಯ ನೋವನ್ನೊರಸಿ ತಾಯಿ ಮನಸ್ಸಿಗೆ ನೆಮ್ಮದಿಯ ಮಳೆ ಸುರಿಸುತ್ತಿದ್ದರೇನೋ?!!
-ಇಂದು ಶ್ರೀನಿವಾಸ್..